ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪಾದಗಳು

ವಿಶಾಲ್ ಮ್ಯಾಸರ್

ಈ ಪಾದಗಳು ಎಸ್ಟೊಂದು ಬೆಳದಿವೆ ಹುಡುಗಿ
ಅಂಬೆಗಾಲಿಡುತ್ತ ಹೆಜ್ಜೆ ತಪ್ಪಿದಾಗಿಂದ ಹಿಡಿದು
ಎಲ್ಲವನ್ನೂ ಮೆಟ್ಟಿ ಆಕಾಶ ಊನವಾಗಿ ನೋಡುತ್ತಾ ನಿರುಮ್ಮಳವಾಗಿ ಮಲಗುವವರೆಗು.

ಹುಡುಗಿ ಈ ಪಾದಗಳು ದೊಡ್ಡವಾಗುತ್ತಿದಂತೆ ಜಗತ್ತು ವಿಸ್ತಾರ ಗೊಳ್ಳಿತ್ತಿದೆ
ನಡೆದಷ್ಟೂ ನಾಡು ಅಲ್ಲವೇನು?
ಮರಗಿಡಗಳು ಹುಟ್ಟಿದವು, ಹೂವು ಹಣ್ಣು ಅರಳಿದವು.
ಕಲ್ಲಿಗೆ ಕಲ್ಲು ತಾಕಿಸಿ ಬೆಂಕಿ ಹೊತ್ತಿಸಿ ಅನ್ನ ಮಾಡಿ ಉಂಡವು ಒಟ್ಟಿಗೆ.
ಅವೇ ಕಲ್ಲುಗಳನ್ನು ದೇವರು ಮಾಡಿ ಜಡವಾಗಿಸಿ ಬಿಟ್ಟವು

ಈ ಪಾದಗಳು ಎಸ್ಟೊಂದು ಕಲಿತವು ಹುಡುಗಿ
ಜೊತೆ ಜೊತೆಯಲ್ಲಿ ಮಲಗುತ್ತಿದ್ದವು ಮೊದಲು ಈಗೀಗ ಎರೆಡು ದೋಣಿಯ ಮೇಲೆ ಒಂದೊಂದು ಕಾಲು ಪಕ್ಕದವರ ಹುಟ್ಟು ಕದ್ದು.
ಎಲ್ಲೆಂದರಲ್ಲಿ ಹೇಗೆಂದರೆ ಹಾಗಿ ಅಲೆದಾಡುತ್ತಿದ್ದವು ಗಡಿಗಳ ಅರಿವೇ ಇಲ್ಲದೆ.
ಇದೇ ಪಾದಗಳು ಅಲ್ಲವೇನು ಗೀಟು ಹೊಡೆದದ್ದು ದೇಶಮಾತಾಡಿದ್ದು?
ಮೆಲ್ಲ ಮೆಲ್ಲನೆ ಪಾದಗಳು ಬುದ್ಧಿ ಕಲಿತವು ,
ಎದೆಯ ಮಾತಿಗೆ ಕಿವುಡಾದವು.
ಅಂಗಾಗಗಳಿಗೆ ಕೆರವ ತೊಟ್ಟು ನಡೆಯಲಾರಂಭಿಸಿದವು.

ಪಾದಗಳು ಬಲಿತುಬಿಟ್ಟಿವೆ ಹುಡುಗಿ,
ತಮ್ಮ ಹಿಮ್ಮಡಿಯ ಬಿರುಕು ಮುಚ್ಚಲು ಬೂಟುಗಳನ್ನು ತೊಟ್ಟವು
ಯಾರಾದರೂ ಮೇಲೆತ್ತುತಾರೆಂದು ಹೈ ಹೀಲ್ಡ್ ಹಾಕಿದವು ಥೇಟ್ ಪುಟ್ಟ ಮಕ್ಕಳು ಅಂಗುಷ್ಟ ಊರಿ ತೋಳು ಮೇಲೆ ಮಾಡಿ ಯಾರಾದರೂ ಎತ್ತಿಕೊಳ್ಳಿತಾರೋ ಎಂಬ ನಿರೀಕ್ಷೆಯಲ್ಲಿ.

ಪಾದಗಳು ಕೆಟ್ಟುಬಿಟ್ಟಿವೆ ಹುಡುಗಿ
ಹಾಸಿಗೆ ಇದ್ದಷ್ಟು ಕಾಲು ಚಾಚವುದು ಬಿಟ್ಟು ಒದ್ದಾಡುತ್ತಿವೆ.
ಪಾದಗಳು ಸಣ್ಣವಾಗಿವೆ ತಾವೆ ಕಟ್ಟಿದ ಕಂಥೆಗೆ ಜೋತು ಬಿದ್ದು
ಅಡ್ಡಾಡುವ ಮನುಷ್ಯನನ್ನು ಕದ್ದು.

ಪಾದಗಳು ಎಲ್ಲವೂ ಮರೆತುಬಿಟ್ಟಿವೆ
ನಡೆದು ಬಂದ ಹಾದಿಯನ್ನು
ಜಗತ್ತು ಕಂಡದ್ದನ್ನು
ಕೊನೆಗೆ ಮರೆತೇಬಿಟ್ಟಿವೆ ನಿರ್ಲಿಪ್ತವಾಗಿ ಮಲಗುವುದನ್ನು .
ನೆನಪಿಟ್ಟುಕೊಂಡಿವೆ ಓಡಿಹೋಗುವುದನ್ನು, ಯುದ್ಧ ಮಾಡುವುದನ್ನು, ಬಡಿದು ತಿನ್ನುವುದನ್ನು.


ವಿಶಾಲ್ ಮ್ಯಾಸರ್

ವಿಶಾಲ್ ಮ್ಯಾಸರ್ ಹುಟ್ಟಿದ್ದು (30/12/2002) ಹೊಸಪೇಟೆಯಲ್ಲಿ ಬೆಳೆದದ್ದು ಮತ್ತು ವ್ಯಾಸಂಗದಲ್ಲೂ ಮುಂದುವರೆದಿರುವುದು ಹೊಸಪೇಟೆಯಲ್ಲಿ
ತಮ್ಮ ಪ್ರಾಥಮಿಕ,ಪ್ರೌಢ ಶಾಲಾ ಶಿಕ್ಷಣವನ್ನು ಜೆಸಿಸ್ ಶಾಲೆಯಲ್ಲಿ ಮತ್ತು ಪದವಿಪೂರ್ವ ವ್ಯಾಸಂಗವನ್ನು ಸ್ಮಯೋರ್ ವ್ಯಾಸಪುರಿ ಕಾಲೇಜಿನಲ್ಲಿ ಮುಗಿಸಿದರು
ಪ್ರಸ್ತುತ ವಿಜಯನಗರ ಮಹಾವಿದ್ಯಾಲಯ ಹೊಸಪೇಟೆಯಲ್ಲಿ ಬಿ.ಎಸ್ಸಿ ಪದವಿಯನ್ನ ವ್ಯಾಸಂಗ ಮಾಡುತ್ತಿದ್ದಾರೆ
“ಬಟ್ಟೆಗಂಟಿದ ಬೆಂಕಿ” ಇವರ ಪ್ರಕಟಿತ ಕವಿತಾ ಸಂಕಲನ.ತಳ ಸಮುದಾಯಗಳ ಪರಂಪರೆ , ಮೌಖಿಕ ಪರಂಪರಗಳೊಂದಿಗೆ ಸದಾ ಮಾತು ಕಥೆಗೆ ಇಳಿಯುವ ಇವರು ಅವುಗಳನ್ನು ಕಾವ್ಯವಾಗಿಸುವ ಪ್ರಯತ್ನವನ್ನು ಮಾಡುತ್ತಾರೆ. ಬರವಣಿಗೆ ಬಿಟ್ಟು ಪ್ರವಾಸ ಇವರ ನೆಚ್ಚಿನ ವಿಷಯ.

About The Author

Leave a Reply

You cannot copy content of this page

Scroll to Top