ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ದಿಢೀರ್ ಮೆಟ್ಟಿಲಿಳಿವುದು…!

ಅರಕಲಗೂಡು ನೀಲಕಂಠ ಮೂರ್ತಿ

ದಡಬಡಿಸಿ ಎಂಥ ಮೆಟ್ಟಿಲಿಳಿವುದು
ಸುಲಭ ಕ್ರಿಯೆಯಲ್ಲ
ಲಿಫ್ಟಿನ ಸರಪಳಿ ತುಂಡಾಗಿ
ಧೊಪ್ಪನೆ ನೆಲಕ್ಕೆ ಬೀಳುವ ಹಾಗೆ!

ಆತ
ರೈಲಿಗಾಗಿ ಪ್ಲಾಟ್ಫಾರಮ್ಮಿನ
ಮೆಟ್ಟಲಿಳಿವ ಸಮಯ
ದಿಢೀರನೆ
ಎದೆಯ ಒಲೆ ಧಗಧಗ ಹೊತ್ತಿ
ತದೇಕ ಊದಿದ ಹಿಂಸೆ ಕಿಚ್ಚು
ಮೈ ತಾನೆ ಮಳೆ ಉಗ್ಗಿದ ಹಾಗೆ
ಬೆವರು ಧಾರಾಕಾರ
ಹೇಗೋ ಏನೋ
ಬೆಂಚಿಗೊರಗಿದ್ದಾಯ್ತು
ಅಷ್ಟೆ!

ಹೃದಯದಂತರಂಗದಾಳದಲಿ ತದೇಕ
ಉರಿದಿದ್ದ
ಜ್ವಾಲಾಮುಖಿ
ದಢಕ್ಕನೆ ಸಿಡಿಯಿತು
ತಡೆಯಲಾರದ
ಅದುಮಿಡಲಾರದ
ಬಹಳ ಕಾಲದ ಹಳೆಯ ಕುಲುಮೆ!

ಸಂಕಷ್ಟಗಳ ಹೃದಯ
ಯಾರಿಗೂ ಹೇಳಲೂ ಆಗದೆ
ಒಳಗೆಲ್ಲ ಖೋಲಿಗಳೂ ತುಂಬಿ
ತುಳುಕಿ ತಾವಿರದೆ
ಛಿದ್ರ ಚೂರಾಗಿದೆ!

ಬೆಂಚಿನ ಮೇಲೆ ಕೂತ ಹಾಗೆ
ಒರಗಿದ್ದ
ಆತ ನಿದ್ರೆಯಲಿದ್ದಾನೋ
ಬದುಕಿದ್ದಾನೋ
ಸತ್ತಿದ್ದಾನೋ
ಸುತ್ತಮುತ್ತಲ ಅವಸರದ ಜಂಗುಳಿಗೆ
ಅವರವರ ತಕ್ಷಣದ ಜರೂರನ್ನುಳಿದು
ಇನ್ನಾವುದರ ಗೊಡವೆ ಇಲ್ಲ…

ಜೇಬಿನ ಮೊಬೈಲ್ ಸದ್ದು
ಕೂಗಿ ಕೂಗಿ ಕೂಗಿ
ಒಬ್ಬ ತುರ್ತಿಲ್ಲದ ಆಗಂತುಕನ
ಆ ಸ್ಥಿತಿಗೆಚ್ಚರಿಸಿ
ಆತನ ಸ್ಪರ್ಶದಿಂದ
ಕುಳಿತಿದ್ದವನು ದಢಕ್ಕನುರುಳಿ
ಸಾವಿನ ಸತ್ಯ ಜಾಹೀರು!

ಸಾವು
ಅನಂತ ಕ್ರೂರ ಮುಖಗಳ
ದರ್ಶನ ಮೆರೆದಿತ್ತು
ಹೀಗೂ ಒಂದು!

ಹೆತ್ತು ಪ್ರೀತಿ ಇತ್ತವರು
ಎಂದೋ ಮಣ್ಣಾಗಿದ್ದರು
ಸದ್ಯ ಮಡದಿ ಮಕ್ಕಳು
ಮಿತ್ರರು ಪರಿಚಯದವರು
ಎಲ್ಲ ಎಲ್ಲೆಲ್ಲೊ ಬೇರೆ ಬೇರೆ
ದಿಕ್ಕುಗಳು…
ಇಲ್ಲಿ ಆತ ಹೆಸರಿಲ್ಲದ
ಹೆಣ…!

(ನನ್ನ ಮಿತ್ರನೊಬ್ಬ ಅಂತ್ಯ ಕಂಡಿದ್ದು ಹೀಗೆ)


ಅರಕಲಗೂಡು ನೀಲಕಂಠ ಮೂರ್ತಿ

About The Author

2 thoughts on “ಅರಕಲಗೂಡು ನೀಲಕಂಠ ಮೂರ್ತಿ ಕವಿತ/ದಿಢೀರ್ ಮೆಟ್ಟಿಲಿಳಿವುದು…!”

  1. D N Venkatesha Rao

    ಹೌದು. ಸಾವು, ಬದುಕಿನ ತರಹ. ಲಿಫ್ಟಿನ ಸರಪಳಿ ತುಂಡಾದಂತೆ ಜಂಜಾಟಕ್ಕೆ ಮುಕ್ತಿ.ಈ ಮೊದಲ ಚರಣ ಕವಿತೆಯ ಗಾಂಭೀರ್ಯ ಮನಗಾಣಿಸುತ್ತೆ well done Murthy

Leave a Reply

You cannot copy content of this page

Scroll to Top