ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಥೆಗಳು ಕಾಯುತ್ತಿವೆ

ಪ್ರೇಮಾ ಟಿ ಎಂ ಆರ್

ಹಳೆ ಬಟ್ಟೆಗಳು ಪೊರಕೆ
ಪಾತ್ರೆಉಜ್ಜುವ ಜುಗ್ಗು ಒಜ್ಜೆಗೊದಗುವ ಸಿಂಬಿ
ಎಲ್ಲವೂ ಒಂದೊಂದು ಕಥೆ ಹಿಡಿದು ಕೂತಿವೆ
ಎಲ್ಲದರ ಮೇಲೂ ನಮ್ಮದೇ ಬೆರಳ ಗಾಡ ಗುರುತುಗಳು

ಮತ್ತೀ ಸವೆದ ನೆಲಬಾವಿ ದಂಡಿಗೆ
ಅದೆಷ್ಟೋ ಕಥೆಗಳ ಹೊತ್ತುಕೊಂಡು ದಣಿದಿವೆ ಒಲೆಕಟ್ಟೆಯ ಬದಿಗೆ ಬಿದ್ದುಕೊಳ್ಳುವ ಮಸಿ ಬಟ್ಟೆಗೂ ನಾವು ಗಡಿಬಿಡಿಯಲ್ಲಿ ಕೆನ್ನೆ ಮೂಗಿಗೆ ಕಪ್ಪು ಬಳಿದುಕೊಂಡ ಕಥೆಹೇಳಿ ಗಹಗಹಿಸುವ ಸೊಕ್ಕು
ಎಲ್ಲವೂ ನಮ್ಮ ಸೋಲಿನ ಕಥೆಗಳೇ
ಸೋತರೇನಂತೆ? ಸೋತದ್ದೆಲ್ಲವೂ ಕಳೆದುಕೊಳ್ಳಕೂಡದೆಂದೇ…

ಕುಟುಕಿದಂತೆಲ್ಲ ಗಿಳಿಗಳಾಗಿ ಉಲಿದಿದ್ದೇವೆ
ಇನ್ನಾಗದು ಎಂದುಕೊಂಡಾಗೆಲ್ಲ ಕಣ್ಣುಮೂಗು ಸರಬರಗುಟ್ಟಿದ್ದೇವೆ ಗುಟ್ಟನ್ನೆಂದೂ ಬಿಚ್ಚಿಡದೇ
ಮತ್ತೆ ರಾಜಿಯಾಗಿದ್ದೇವೆ

ರುಬ್ಬುವ ಗುಂಡುಗಳು ಗುಡುಗುಡಿಸುತ್ತವೆ
ಇಲ್ಲೂ ಇದೆ ಒಂದಷ್ಟು ನಿನ್ನದೇ ಸಿಲ್ಕು ಎಂದು
ಉಂಬಳಿ ಬೇಡಲಿಲ್ಲ
ಸರಿಸಮನೆಂಬ ತೂಕದ ತಕ್ಕಡಿ
ನಮ್ಮ ತಲೆಗೇರಲೇ ಇಲ್ಲ ಬಿಡಿ
ಮೀಸೆಯಡಿಯ ಬಿಗಿದ ತುಟಿಗಳ
ಒಂಚೂರು ಗಿಲ್ಲಿಗೆ
ಒಂದು ಹೂಮಳೆ ಬಿಲ್ಲಗೆ
ಒಂದು ಬೆಳಕಿನ ಹನಿಗೆ
ಒಂದೇ ಒಂದು ಸಿಹಿ ಮಾತಿಗೆ
ಮೌನದ ಅರ್ಜಿ ಗುಜರಾಯಿಸಿ
ಎಷ್ಟೊಂದು ಕಾದಿದ್ದೇವೆ
ಆಕಳಿಸದೇ ಕಣ್ಣು ಜೋಮದೇ

ಒಂದು ಸರಿಗಮದ ಸೊಲ್ಲಿದೆ ಈ ಎದೆಯಲ್ಲೂ
ಒಂದೇ ಒಂದು ಚಣ ಆಲೈಸಿದ್ದರೆ….

ಇದೋ ಈ ನೆಲವ ಉಜ್ಜಿ ಉಜ್ಜಿ ಒರೆಸಕೂಡದು
ಎಷ್ಟೊಂದು ಕಥೆಗಳಿವೆ ಇಲ್ಲಿ
ಒಂದು ಸ್ನೇಹದ ನೇವರಿಕೆಗೆ
ಒಂದು ಆಪ್ತ ತಬ್ಬುಗೆಗೆ
ಒಂದು ಹನಿ ಇಬ್ಬನಿಗೆ
ಒಂದೇ ಒಂದು ಕಣ್ಕೊನೆಯ ಮಿಟುಕಿಗೆ
ವರ್ಷವರ್ಷ ತಪಸ್ಸು ಮಾಡಿದ
ಗುಟ್ಟು ಬಿಟ್ಟುಕೊಡದೇ ಬಚ್ಚಿಟ್ಟುಕೊಂಡ
ಕಥೆಗಳ ಪುಟಗಳು ಇಲ್ಲಿ ಮಗ್ಗುಲಾಗಿವೆ ಒಂದರಮೇಲೊಂದು ಮಡಚಿ ಬಿದ್ದಿವೆ
ಇದೇ ನೆಲದ ಮೇಲೆ

ಇಟ್ಟುಕೊಳ್ಳಬೇಕು ಇವುಗಳ ಜೋಪಾನವಾಗಿ ಸಾಕ್ಷಿಗೆಂದಲ್ಲ ಒಮ್ಮೆಗಾದರೂ ಪುಟ ಮೊಗಚುತ್ತೀರೆಂದು ಮತ್ತೆಂದಾದರೂ ಮರುಭೂಮಿಯ ಮೇಲೂ ಕಟ್ಟಿದ ಮೋಡ ಕರಗಿ ನಾಲ್ಕು ಹನಿ ಉದುರೀತೆಂದು ಮತ್ತೆ ಹಸಿರು ಉಕ್ಕೀತೆಂದು
ಕಥೆಗಳು ಕಾಯುತ್ತಿವೆ ಒಂದು
ಸುಂದರ ಕಥೆಗೆ


ಪ್ರೇಮಾ ಟಿ ಎಂ ಆರ್

About The Author

2 thoughts on “ಮಹಿಳಾ ದಿನದ ವಿಶೇಷ”

Leave a Reply

You cannot copy content of this page

Scroll to Top