ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

.ಮಹಾ ಇಳೆ (ಮಹಿಳೆ)

ಮಧು ‌ವಸ್ತ್ರದ್

ಮಹಿಳೆಯ ಮಾತಿನಲಿದೆ ಮಮತೆ ಮನದಲಿ ಪ್ರೇಮದ ಒರತೆ
ಮಲಿನ‌ ಮನಗಳನೂ ಕ್ಷಮಿಸಿ ಸ್ನೇಹ ನೀಡುವ ಉದಾರತೆ..

ಹೊತ್ತು ಹೆತ್ತು ಹರಸಿ ಬದುಕಿಗೆ ಹಚ್ಚ ಹಸಿರನೀವ ದೇವತೆ
ಮನದ ಆಸೆಗಳನುರಿಸುತ ಜಗಕೆ ಬೆಳಕನೀವ ಹಣತೆ..

ಹೆಣ್ಣು ಹುಣ್ಣೆಂದರೂ ಹಿಂಜರಿಯದೆ ಹೋರಾಡುವ ಧೀಮಂತೆ
ಹಂಬಲವ ಹತ್ತಿಕ್ಕುತ ಹತಾಶಳಾಗದೆ ಹದವರಿತು ಬಾಳುವ ಹರ್ಷಿತೆ

ಬಾಳಪಯಣದಿ ಬಂಡಿ ಗಾಲಿಯಂತೆ ನಡೆವ ಸಹಧರ್ಮಿಣಿ
ಹುಟ್ಟಿ ಮೆಟ್ಟಿದೆಡೆ ಹೊಂಬೆಳಕನೀವ ಕುಟುಂಬದ ಕಣ್ಮಣಿ..

ಕರುಳಿನ ಕುಡಿಯಾಗಿ ಅರಳುತಲಿ ಆಗುವಳು ಪುಷ್ಪ ಮಂದಾರ
ಪರಿಮಳ ಸೂಸುತಲಿ ಮಾಡುವಳು ಪಿತನ ಜೀವನೋದ್ಧಾರ..

ಸಖಿ ಸೋದರಿಯಾಗಿ ಸುಖ ಸಿಂಚನ ನೀಡುವ ಸಹನೆಯ ನೆಲೆ
ಸ್ನೇಹ,ಸಂಗೀತ,ಸಾಹಿತ್ಯ ಕಲೆಗಳಿಗೆಲ್ಲ ಇವಳೇ ಸ್ಪೂರ್ತಿ ಸೆಲೆ..

ವೈದ್ಯಳಾಗಿ ನಿಸ್ವಾರ್ಥದಿ ಜನರ ಸೇವೆ ಗೈಯುವ ನಾರಾಯಣಿ
ವಕೀಲೆಯಾಗಿ ಸಂವಾದದಿ ವಿಜಯ ಸಾಧಿಸಬಲ್ಲ ಕಲ್ಯಾಣಿ..

ಗುರುವಾಗಿ ತಮವಳಿಸಿ ಶಮೆ ನೀಡಿ ಬಾಳನೀವ ವೀಣಾಪಾಣಿ
ಜಲ,ನೆಲ,ನಭದೆಲ್ಲೆಡೆಯಲಿ ಕರ್ತವ್ಯ ನಿಭಾಯಿಸುವ ಸಿಂಹಿಣಿ

ಸೌಭಾಗ್ಯ ಸರದ ಸರದಾರನಿಗಾಗಿ ಸೋತು ಗೆಲ್ಲುವ ಸತಿ ಇವಳು
ಸಹನೆ ಸ್ವಾಭಿಮಾನದಿ ಗುರಿ ಸಾಧಿಸಿ ಸವ್ಯಸಾಚಿ ಎನಿಸುವಳು.

ನಾರಿ ಮುನಿದರೆ ಮಾರಿಯಾಗಿ ನಾಡ ಶತ್ರುಗಳ ನಾಶ ಗೈಯುವಳು
ನೋವು ನಲಿವುಗಳ ಬಾಳನೌಕೆಯ ನಾವಿಕಳಾಗಿ ಮುನ್ನಡೆವಳು..

ಬಾಳಂಗಳದಿ ಭಾವಪದ ರಂಗೋಲಿ ಇಡಬಲ್ಲ ಕವಯಿತ್ರಿ
ಪಾಪಿ ಮನ ಕ್ಷಮಿಸುವ ಸ್ನೇಹಮಯಿ ಕ್ಷಮಯಾ ಧರಿತ್ರಿ

ಇವಳಲುಂಟು ಏಕ ಕಾಲದಿ ಅನೇಕ ಕಾರ್ಯವೆಸಗುವ ಕ್ಷಮತೆ
ದಶಭುಜೆಯಾಗಿ ದುಡಿವ ಸರ್ವಗುಣ ಸಂಪನ್ನೆ ಈ ವನಿತೆ..

-[——————–

ಮಧು ‌ವಸ್ತ್ರದ್

About The Author

1 thought on “ಮಹಿಳಾ ದಿನದ ವಿಶೇಷ”

  1. ಗೋಪಾಲ ತ್ರಾಸಿ

    ಕವಿತೆ ಚೆನ್ನಾಗಿದೆ ಮೇಡಮ್, ಅಭಿನಂದನೆಗಳು

Leave a Reply

You cannot copy content of this page

Scroll to Top