ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗುರುತುಗಳು

ಅನಸೂಯ ಜಹಗೀರದಾರ

ರೊಟ್ಟಿ ತಟ್ಟಿ ಹೆಂಚಿಗೆ ಹಾಕುವಾಗ
ಬೇಯಿಸಿ ತೆಗೆಯುವಾಗ
ಹೊರಳಿಸಿ ತಿರುತಿರುವಿ ಹಾಕಿ
ಬೆಂದ ಬಗೆಗೆ ಖಾತ್ರಿಯಾಗಿಸಿ
ಹದನಾಗಿಸಿ
ಬೆರಳ ತುದಿಯ ಒತ್ತಿ
ಉಬ್ಬಿಸಿ ತೆಗೆವಾಗಿನ
ಉಮೇದು..ಉತ್ಸಾಹ ಬತ್ತದು ಅವಳಲಿ

ಉಣಿಸಿ ತಣಿಸುವ ಉಮ್ಮಯಿ
ಅನ್ನಪೂರ್ಣೆ ಪ್ರೇಮಮಯಿ

ಅಡುಗೆಯ ಹದವಾಗಿ ಬೇಯಿಸಿ
ರುಚಿಯಾಗಿಸಿ ಹಂಚಿದಾಗ
ಕೆಲಸದಲಿ ನಿರಾಳ ಮನಸಿನಲಿ ನಿರುಮ್ಮಳ
ಮುಗಿಯದ ಅಮಿತೋತ್ಸಾಹ ಅವಳಲಿ

ಕುಶಲೋಪರಿಯಲಿ ತನ್ಮಯಿ
ತೇಜೋಮಯಿ ವಾತ್ಸಲ್ಯಮಯಿ..,

ಕೆಂಡ ಕಪ್ಪಾದ ಮುದ್ರೆ..!
ಅಂಗೈ,ಮುಂಗೈ,ಮೊಣಕೈ
ತುಂಬಿಕೊಳ್ಳುತ್ತವೆ ಆಗಾಗ
ಅವಳಿಗೋ ಅದರ ಅರಿವೇ ಇಲ್ಲ
ತಣ್ಣೀರ ಸೋಕಿಸಿದರೂ..,
ಚುರುಚುರುಗುಟ್ಟಿದಾಗ
ಓಹ್‌.!! ಇದಾ‌..ನಿನ್ನೆಯದು
ಆಹ್!! ಅದಾ.. ಮೊನ್ನೆಯದು‌.
ಒಂದು ವಾರದ್ದು ತಿಂಗಳದ್ದು
ಹೀಗೆ ನಿರಂತರ…
ವರ್ಷಾನುವರ್ಷದ್ದು…!!
ಅಪರಿಮಿತ ವಿಶ್ವಾಸ ಅವಳಲಿ
ಸ್ಪೂರ್ತಿಯ ಚಿಲುಮೆ ಬದುಕಿನಲಿ

ಈ ಮಧ್ಯ..
ದಾಖಲಾಗುವ ಮುದ್ರೆಗಳು
ಹಳತಾದ ಹೊಸ ಗುರುತುಗಳು..!!
ಒಡಮೂಡುತ್ತವೆ ಮುದ್ರೆಗಳು
ಸಂಕಟದ ಅವಳ ಒಡಲಲ್ಲೂ..!!

ಭಗಿನಿ ಸಕಲವೀವ ದಾತೆ
ಭೋಜ್ಯೇಶು ಮಾತೆ

ಅನ್ನ ಗಿಂಜಿ ಗಿಂಜಿ ನೋಡಿ
ಬೆಂದಿದೆಯೋ ಇಲ್ಲವೋ ಪರುಕಿಸಿ
ಮಲ್ಲಿಗೆಯಂತೆ ಅರಳಿಸಿ ಹಗುರಾಗಿಸಿ
ಮತ್ತೊಮ್ಮೆ ಮಗದೊಮ್ಮೆ ವೀಕ್ಷಿಸಿ
ಸೆರಗಿನಲಿ ಕೈ ಒರೆಸಿ
ಮುಗಿಸಿದಾಗ ನಿರಂತರದ ನಿಟ್ಟುಸಿರು
ಅವಳಲಿ..!

ತ್ಯಾಗಮಯಿ ಕರುಣಾಮಯಿ

ಹಬೆಗೆ ಒಡ್ಡಿದ ಆ ಎಲ್ಲ ಬೆರಳುಗಳಲಿ
ಹದನಾದ ಗುರುತುಗಳು

ಇನಿ ಕಪ್ಪಿಗೆ ವಾಲುತ್ತಿರುವ
ಮಾಗಿ ಮಾಯುವ
ಸುಟ್ಟ ಗಾಯಗಳ ಸಾಂಗತ್ಯದಲಿ
ಅವಳ
ದಿನ ಅಯನ ಸಾಗುತ್ತವ
ಹೀಗೆ…,
ಗುರುತುಗಳ ಉಳಿಸಿ

ಅವಸರ ಅವಘಡಕ್ಕೆ ಕಾರಣ..!
ಕೆಲಸದಲಿ ನಿಧಾನವಿರಲಿ
ಅದೇಕೆ ಬೇಯಿಸಿ ಹಾಕುವ ಆತುರ
ಜಮಾನಾ ಮಾತಿನ ಮುದ್ರೆಗಳು
ಎದೆಯ ಕೆಂಪಾಗಿಸುತ್ತವೆ
ಮನವ ಕಪ್ಪಾಗಿಸುತ್ತವೆ

ಮಾಗಿಯೂ ಮಾಯವಾಗದ
ಚರ್ಮದ ಗುರುತುಗಳು
ಬೂದಿಯೊಳಗಿನ ಕೆಂಡಗಳನು
ನೆನಪಿಸುತ್ತವೆ
ಒಂದು ಚುಂಗು ತಾಕಿದರೂ
ಚುರುಗುಟ್ಟುತ್ತವೆ
ಆಗಾಗ ಅವಳಿಗೆ ಎಗ್ಗಿಲ್ಲದೆ..!!
ಅವಳೂ ನಿರಾಕರಿಸದೆ ಸ್ವೀಕರಿಸಬಲ್ಲಳು
ಹೀಗೆ ಎಲ್ಲವ ಎಗ್ಗಿಲ್ಲದೆ..!!


ಅನಸೂಯ ಜಹಗೀರದಾರ

About The Author

2 thoughts on “ಮಹಿಳಾ ದಿನದ ವಿಶೇಷ”

  1. Sarasijaa Rajan

    ಹೌದು ಬೇಯಿಸಿ ಹೊಟ್ಟೆ ತುಂಬುವ ಊಮೇದಿನಲ್ಲಿ ಎಲ್ಲಾ ನೋವುಗಳೂ ಗೌಣ…ಅದು ಅಮ್ಮ…

  2. Ganesh Panchal

    Absolutely right madam and you deserved all the qualities, we are lucky to work with a wonderful colleague like you.

Leave a Reply

You cannot copy content of this page

Scroll to Top