ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಶೇಷ ಬರಹ

ಭಾರತಿ ಅಶೋಕ್

ರೇಷ್ಮೇ ಹಣ್ಣೋ- ರೇಷ್ಮೆಯಷ್ಟೇ ಮೃಧು

[9:17 pm, 29/03/2023] Bharathi ASHOK: ಈ ಹಣ್ಣಿಗೆ ಹಿಪ್ಪು ನೇರಳೆ ಅಥವಾ ರೇಷ್ಮೆ ಹಣ್ಣು ಅಂತ ಹೆಸರು. ಇದು ತಿನ್ನಲು ಅದ್ಬುತವಾದ ರುಚಿಯನ್ನು ಹೊಂದಿದ್ದು, ಹುಳಿ ಮತ್ತು ಸಿಹಿಯಿಂದ ಕೂಡಿರುತ್ತದೆ. ತಿಂದರೆ ದೇಹದ ನರ ನಾಡಿಗಳನ್ನು ಚೇತನಗೊಳಿಸುತ್ತದೆ.ಮತ್ತೆ‌
ಮತ್ತೆ ತಿನ್ನಬೇಕೆನ್ನುಸುತ್ತದೆ.

ಚಿಕ್ಕಂದಿನಲ್ಲಿ ತಂದೆಯವರು ರೇಷ್ಮೇ ಕೃಷಿ ಮಾಡುವಾಗ ಹಿಪ್ಪು ನೇರಳೆಯನ್ನು ಬೆಳೆಯನ್ನು ತೋಟದಲ್ಲಿ ಬೆಳೆಯುತ್ತಿದ್ದರು. ರೇಷ್ಮೆ ಹುಳುಗಳ ಆಹಾರ ಈ ಹಿಪ್ಪು ನೇರಳೆ ಸೊಪ್ಪು ಅಥವಾ ಎಲೆ. ಇದನ್ನು ಹುಳುಗಳ ಜ್ವರಕ್ಕೆ(ಅಪ್ಪ ಹಾಗೆ ಹೇಳ್ತಾ ಇದ್ರು) ಅನುಗುಣವಾಗಿ ಅಂದರೆ ಹುಳುಗಳ ವಯಸ್ಸು/ಬೆಳವಣಿಗೆಯನ್ನು ಅನುಸರಿಸಿ ಎಲೆಗಳನ್ನು ಲೆಕ್ಕಾಚಾರದ ಪ್ರಕಾರ ಗಿಡದ ಮೇಲಿಂದ ಒಂದು ಎರಡು ಮೂರು ಹೀಗೆ ಹುಳಗಳ ಜ್ವರಕ್ಕನುಗುಣವಾಗಿ ಎಲೆಯನ್ನು ಬಿಡುಸಿ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಚಂದ್ರಿಕೆಯಲ್ಲಿರುವ ಹುಳುಗಳಿಗೆ ಹಾಕುತ್ತಿದ್ದರು. ಚಂದ್ರಿಕೆ ಅಂದರೆ ಹುಳುಗಳನ್ನು ಸಾಕಲು ಬಳಸುವ ಬಿದರಿನ ತಟ್ಟೆ, ಅದು ನೋಡಲು ತುಂಬಾ ಸುಂದರವಾಗಿ ಎಣೆದಿರುತ್ತಾರೆ, ಆ ತಟ್ಟೆಗಳನ್ನು ಗೋಡೆಗೆ ನಿಲ್ಲಿಸಿದರೂ ಹುಳ ಬೀಳದ ಹಾಗೆ ತಟ್ಟೆಯಲ್ಲಿ ಪುಟ್ಟ ಪುಟ್ಟ ಗೂಡುಗಳಂತೆ ಕಾಣುವ ಗೋಲಾಕಾರದ ನೇಯ್ಗೆ.ಇದು ಕೂಡಾ ರೇಷ್ಮೆ ಹುಳು ತನ್ನ ಒಡಲಿನ ಎಳೆಯನ್ನು ತನ್ನ ಕೌಶಲ್ಯದಿಂದ ಗೂಡು ಕಟ್ಟಿದಷ್ಟೆ ಸೂಕ್ಷ್ಮ. ಅದರೆ; ಅಕ್ಕನ ವಚನದ ಸಾಲಿನಂತೆ ತೆರಣಿಯ ಹುಳು ತನ್ನ ಸುತ್ತ ತಾನೇ ಬಲೆ ಹೆಣೆದುಕೊಂಡು ತಾನು ಬಲಿಯಾಗುವಂತೆ, ತನ್ನ ಬಲಿದಾನ ಮಾನವನ ನಾಗರಿಕತೆಯ ಆಹಮಿನ ಪ್ರದರ್ಶನಕೆ ಎನ್ನುವ ಸೂಕ್ಷ್ಮವನ್ನು ಅರಿಯದು

ಇನ್ನು ಹುಳಗಳ ಗಾತ್ರ ಚಿಕ್ಕದಾದ್ದರಿಂದ ತುಂಬಾ ಸೂಕ್ಷ್ಮವಾಗಿ ನೋಡಿಕೊಳ್ಳಬೇಕು ಬಲಿತ ಎಲೆಗಳನ್ನು ಹಾಕುವಂತಿಲ್ಲ ಅದೆಲ್ಲಾ ಕೃಷಿಕರಿಗೆ ಇರುವ ಜ್ಞಾನ.

ಹೀಗೆ ಎಲೆಗಳನ್ನು ಬಿಡಿಸಲು ಹೋಗುತ್ತಿದ್ದಾಗ ಕ್ರಮೇಣ ಆ ಗಿಡಗಳಲ್ಲಿ ಅಚ್ಚ ಹಸಿರಿನ ಕಾಯಿ ನೋಡಿ ತುಂಬಾ ಸಂತಸಗೊಂಡಿದ್ದೆ ಹಾಗೆ ಹಣ್ಣಾಗಿ ರಸ ತುಂಬಿ ನೆರಳೆ ಬಣ್ಣಕ್ಕೆ ತಿರುಗಿದಾಗ ಬಾಯಲ್ಲಿ ನೀರು ಕಾರಂಜಿಯಂತೆ ಚಿಮ್ಮುತ್ತಿತ್ತು ಆದರೆ ತಿನ್ನಲು ಭಯ ಏಕೆಂದೆರೆ ಅದರ ಎಲೆಗಳನ್ನು ರೇಷ್ಮೆ ಹುಳುಗಳಿಗೆ ಆಹಾರವಾಗಿ ಕೊಡುತ್ತಿದ್ದರಿಂದ ನನ್ನಲ್ಲಿ ಆ ಭಯವಿತ್ತು. ಆದರೆ ಹಣ್ಣನ್ನು ನೋಡಿದರೆ ತಿನ್ನದೇ ಇರಲು ಸಾಧ್ಯವೇ ಆಗುತ್ತಿರಲಿಲ್ಲ.ನೋಡಿಯೇ ಬಿಡುವ ಏನಾದರೂ ಆಗಲಿ ಎಂದು ಪೂರ್ತಿ ನೇರಳೆ ಬಣ್ಣಕ್ಕೆ ತಿರುಗಿದ ಹಣ್ಣುಗಳನ್ನು ಕಿತ್ತು ಬಾಯಲ್ಲಿ ಹಾಕಿಕೊಂಡೆ ಅಬ್ಬಾ!! ಅದೆಂಥ ಸ್ವಾದ…ಹಾಗೆ ತಿನ್ನಲೂ ಪ್ರಾರಂಭಿಸಿದ ನಾನು ದೊಡ್ಡವಳಾದಂತೆ ಅದನ್ನು ತಿನ್ನೋದಿರಲಿ ಕಣ್ಣಿಂದ ನೋಡಲು ಸಿಕ್ಕಿರಲಿಲ್ಲ.

ದೆಹಲಿಯಲ್ಲಿ ITO ಪಕ್ಕದ ರೇಲ್ವೇ ಕಾಲೋನಿ (ಇದು ಪ್ರಗತಿ ಮೈದಾನ ಮತ್ತು ಚಿಡಿಯಾ ಘರ್ ಕಾಂಪೌಂಡಿನ ಮತ್ತು ತಿಲಕ್ ಬ್ರಿಜ್ ಮಧ್ಯದಲ್ಲಿರುವುದು)ಯಲ್ಲಿ ವಾಸವಾಗಿದ್ದ ದಿನಗಳವು.ಪ್ರತಿ ದಿನ ಆಚೀಚೆ ಕಾಲ್ನಡಿಗೆಯಲ್ಲೇ ಓಡಾಡುತ್ತಿದ್ದೆ, ಕಾರಣ ಯಾವುದೆ ವಾಹನಗಳಿಗೆ ಒಳಗಡೆ ಪ್ರವೇಶ ಇರಲಿಲ್ಲ ಅದು ನನಗೆ ವರದಾನವು ಸಹ. ಏಕೆಂದರೆ ನನಗೆ ನಡೆದುಕೊಂಡು ತಿರುಗಾಡುವುದೇ ನನಗಿಷ್ಟ. ಹಾಗೆ ತಿರುಗಾಡುತ್ತಲೇ ಅಕ್ಕ ಪಕ್ಕದಲ್ಲಿರುವ ಪ್ರತಿಯೊಂದರ ಮೇಲೆ ಕಣ್ಣಾಡಿಸಬಹುದೆಂದು. ಅಷ್ಟೇ ಅಲ್ಲ ಎಲ್ಲಿ ಏನಿದೆ ಎನ್ನುವ ಜ್ಞಾನಕ್ಕೂ.

ಹೀಗೆ ಒಂದಿನ ಚಿಡಿಯಾ ಘರ್ ಕಾಂಪೌಂಡಿನ ಈ ಬದಿ ಯಲ್ಲಿ ಹಿಪ್ಪು ನೇರಳೆ ಗಿಡಗಳು ಕಣ್ಣಿಗೆ ಬಿದ್ದವು ಹೌದಾ…ಎಂದು ಪರೀಕ್ಷಿಸಲು ಹತ್ತಿರ ಹೋಗಲು ಹಿಂಜರಿಕೆ ಕಾರಣ ಅಲ್ಲಿ ಎಲ್ಲರೂ V I P ಗಳು ಹೆಚ್ಚಾಗಿ ನಡೆದಾಡುವುದೂ ಇಲ್ಲ . ಎರಡು, ನಾಲ್ಕು ಚಕ್ರದ ವಾಹನದಲ್ಲೇ ಅವರ ತಿರುಗಾಟ. ನಾನು ಅಲ್ಲಿ ತಿರುಗುತ್ತಿದ್ದಾಗಲೇ ನನ್ನನ್ನು ವಿಚಾರಿಸುತ್ತಿದ್ದವರು ಇನ್ನು ನಾನು ಅಲ್ಲಿರುವ ಗಿಡಗಳ ಹತ್ತಿರ ಹೋಗಿ ನೋಡಿದರೆ ಅನುಮಾನಿಸುವರೋ ಎಂದುಕೊಂಡು ನನ್ನ ಪಾಡಿಗೆ ನಾನಿದ್ದೆ.ಆದರೆ ಕಣ್ಣು ಮಾತ್ರ ಹಣ್ಣುಗಳ ಪರೀಕ್ಷೆ ನಡೆಸಿಯೇ ಇದ್ದವು.

ಒಂದಿನ ಹಣ್ಣಾಗಿ ನಿಂತವು ನೋಡಿ. ಅಷ್ಟೊತ್ತಿಗೆ ನನ್ನ ಮೊದಲ ಮಗ ನನ್ನ ಗರ್ಭದಲ್ಲಿ ಅಂಕುರಿಸಿದ್ದ. ತಿನ್ನುವ ತವಕ ಇನ್ನು ಜಾಸ್ತಿ ಆಯ್ತು. ಬಿಡಲಿಲ್ಲ ಬೇಲಿಯಲ್ಲಿರುವ ಹಣ್ಣನ್ನು ಒಂದೂ ಬಿಡದೇ ಕಿತ್ತು ತಂದೇಬಿಟ್ಟೆ ಯಾರು ನೋಡದೇ. ಇನ್ನು ಗಿಡದಲ್ಲಿರುವ ಕಾಯಿಗಳನ್ನು ಗಮನಿಸಿದ್ದೆ ಮತ್ತೆ ಒಂದಿನ ಕಿತ್ತು ತರುವ ಹೊಂಚು ಹಾಕಿ ಮನೆಗೆ ಬಂದೆ. ಕಿತ್ತು ತಂದಿರುವ ಹಣ್ಣುಗಳನ್ನು ಮೊದಲು ಕಣ್ತುಂಬಿಕೊಂಡೆ ನಂತರ ತಿಂದು ಮುಗಿಸಿದೆ.

ಮತ್ತೊಮ್ಮೆ ರೇಷ್ಮೆ ಹಣ್ಣು ತಿಂದು ಸುಖಿಸಿದ್ದನ್ನು ಮೆಲುಕು ಹಾಕುವಂತೆ ಮಾಡಿದ್ದು ಮತ್ತೆ ಈ ಹಣ್ಣುಗಳನ್ನು ನೋಡಿದಾಗ


ಭಾರತಿ ಅಶೋಕ್.

About The Author

Leave a Reply

You cannot copy content of this page

Scroll to Top