ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರಮೋದ.ದಿ.ನಾಯ್ಕ ಎರಡು ಕವಿತೆಗಳು

ಶ್ರಾವಣ

ಹಗುರವಾಯಿತು ಮಳೆಯ ನೋಡ
ಎದೆಭಾರವ ಇಳಿಸಿದ ಮೋಡ
ಒಂದೇ ಒಂದು ಮಾಸಕ್ಕಿಲ್ಲಿ
ನಗುತಿದೆ ಶ್ರಾವಣ ಮೊಳಕೆಯಲ್ಲಿ

ಹಚ್ಚಹಸಿರಿನ ಎಳೆಗಳಡಿಯಿಂದ
ಬೆಳ್ಳಿ-ಹಾಲಿನ ಮೋಡವ ಕಂಡೆ
ಸುಂದರ ಶಶಿಯು ಮಂದದಿ ಮಲಗಿ
ಮಿಂಚುಹುಳು ಆ ಅಂದವ ಬೇಳಗಿ

ಎಳೆಬಿಸಿಲಿನ ಮಳೆಯೇ ಚೆಂದ
ಕಾಮನಬಿಲ್ಲಲ್ಲಿ ಸಪ್ತರಂಗದ ಅಂದ
ಉರಲ್ಲೆಲ್ಲ ಮಾವುತೋರಣ
ಬೇವುಸ್ನಾನದ ನಂತರ ಶ್ರಾವಣ

ಪರಿಸರಕ್ಕುಡಿಸಿ ಕಂಕಣ ತೊಡಿಸಿ
ಎಲ್ಲೇಡೇ ಸಾಲು ಪಂಜಿಯ ಹೊತ್ತಿಸಿ
ಗಂಟೆ ಜಾಗಟೆ ಭಜಿಸಿ ಪೂಜಿಸಿ
ಸಂಕಲ್ಪಕೆ ಕರವ ಜೋಡಿಸಿ

ಒಕ್ಕಲಮನೆಯ ಔತಣವ ಮುಗಿಸಿ
ಉಳುವವರನು ಮನದಿ ಹರಸಿ
ಮುತ್ತೈದೆಯರ ಉಡಿಯ ತುಂಬಿಸಿ
ಮತ್ತೆ ಬರುವೆನೆಂದಿತು ಶ್ರಾವಣ
…………..

ಮಳೆ

ಮಲೆನಾಡ ಮಳೆಯ ಮಣ್ಣಿನ ವಾಸನೆ
ಕರಿಮುಗಿಲಲಿ ಮಿಂಚಿನ ಗುಡುಗು
ಮಳೆಗರಳುವ ಕೊಡೆಗಳ ಹಂದರ
ಅಲ್ಲಲ್ಲಿ ತಂಪಾದ ಆಣೆಕಲ್ಲು

ಸುಂದರ ನವಿಲು ನರ್ತನಕ್ಕೆ
ತಲೆ ತೂಗಿವೆ ಹಸಿರುಗಳೆಲ್ಲ
ಎಲೆಗಳ ಮೇಲೆ ಮುತ್ತಿನ ಹನಿಯ
ಸಂಗೀತಕ್ಕೆ ಇಂಬಳಗಳ ಕುಣಿತ

ಹಕ್ಕಿಮರಿಗಳ ಚೊಚ್ಚಲ ಹಾರಾಟ
ಮಡಚಿದ ಬಯಲುದಾರಿಯ ನೀರಿಗೆ
ಕಾಗದದ ದೋಣಿಯ ಓಟ
ಹರಿದು ಜಲಪಾತ ಧುಮುಕಿದೆ

ಮುದದಿ ಹೊಳೆಯಾಗಿ ಹೊರಗೆ
ಬೆಚ್ಚಗಿಡುವ ಬಿಸಿ ಗುಟುಕಿಗೆ
ಮುಸುಕಿನ ಜೋಳ ಹಲಸಿನ ಬೀಜ
ಕರಿದ ಸಂಡಿಗೆ ಮಂಡಕ್ಕಿ ಭಜಿ

ಹೇರಳ ನೇರಳೆ ಮೀನು ಹೈನು
ಬಿದಿರುಕಳ್ಳಿ ಅಣಬೆಯುಂಡು
ಮಳೆಗೆ ತೂಕಡಿಸಿದ ಮಕ್ಕಳು
ಶಾಲೆ ಮುಗಿಸಿ ಕೆಸರಲ್ಲಿ ಜಿಗಿತ

ಹೆಂಗಳೆಯರ ನಾಗರ ಪಂಚಮಿ
ಸಹೋದರಿಯರ ರಾಖಿ ಹುಣ್ಣಿಮೆ
ತವರಿನ ಉಡುಗೊರೆ ಸಿಹಿ ಪಾತೋಳಿ
ದೇಶಕ್ಕೂ ಸ್ವಾತಂತ್ರ್ಯದ ಹಬ್ಬ

ಕಪ್ಪೆಯ ವಟವಟಕ್ಕೆರಿದ ಮಳೆ
ಸಂತಸದ ಉಸಿರೆಳೆದ ರೈತ
ಮನಸಿಗೆ ತಂಪೆರೆದ ಹಳ್ಳಕೊಳ್ಳ
ಚಿಗುರಿದ ಹಸಿರೆಲ್ಲೆಡೆ ಹೊಲದ ಪೈರು

ಒಲೆಯಲ್ಲಿ ಉರಿವ ಕಟ್ಟಿಗೆಯ
ಕೆಂಡದಲಿ ಸುಡುವ ರೊಟ್ಟಿಯ ಘಮ
ಬೆಚ್ಚಗಿಡುವ ದಪ್ಪ ಕಂಬಳಿಯಲಿ
ಮರೆತು ಮಲಗಿರೆ ಮಳೆಯೇ ಸ್ವರ್ಗ..
……………………………………………………………

ಪ್ರಮೋದ. ದಿ. ನಾಯ್ಕ.

About The Author

11 thoughts on “ಪ್ರಮೋದ.ದಿ.ನಾಯ್ಕ ಎರಡು ಕವಿತೆಗಳು”

Leave a Reply

You cannot copy content of this page

Scroll to Top