ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ತಾಯಿ ಭಾರತಿ

ಅಭಿಜ್ಞಾ ಪಿ.ಎಮ್. ಗೌಡ

ಸೊಗದ ಸಿರಿಯ ನಾಡಲಿ
ಉದಯ ರವಿಯ ಬೀಡಲಿ
ತಾಯಿ ಭಾರತಿ
ನಿನಗೆ ವಿಜಯದಾರತಿ
ಜಗದ ಹೃನ್ಮನವಗೆದ್ದ ಜ್ಯೋತಿ
ನಿನಗಿದೋ ಅರ್ಪಣೆ
ನನ್ನೀ ಬರಹಗಳ ಮುತ್ತಿನಾರತಿ…
ಮೌಲ್ಯಗಳ ತೇರಿನಲಿ
ಸಂಸ್ಕೃತಿ ಸಂಸ್ಕಾರಗಳ ಸಾಲಿನಲಿ
ವಿಜೃಂಭವಿಸೊ ನಮ್ಮೀ ಒಡತಿ…

ಮಿತಿಮೀರಿದ
ದುಷ್ಟರ ದುಷ್ಕೃತ್ಯ
ಲೆಕ್ಕವಿಲ್ಲ ಮಾಡಿದ ಹತ್ಯೆಗಳ ಕೃತ್ಯ
ಕುತಂತ್ರದ ಸೋಗಿಗೆ
ಐಕ್ಯಗಾನದ ಮಂತ್ರ
ಅಲ್ಲಲ್ಲಿ ತೋರಿದರು
ಮುಟ್ಟಿ ನೋಡುವ ಪ್ರತಿತಂತ್ರ ತಥ್ಯ.!!

ಕೆಚ್ಚೆದೆಯ ವೀರರ
ಕೊಡುಗೆಯ ಫಲಶೃತಿ
ನಮ್ಮೀ ಸ್ವಾತಂತ್ರ್ಯ..
ನಾನು ನನ್ನದೆಂಬ
ಅಹಂ ತೊರೆದು
ಸಾಮರಸ್ಯ ಬೀಜ ಬಿತ್ತುತ
ಸೌಜನ್ಯ ಮೆರೆದ
ಪರಕೀಯರ ಕುತಂತ್ರದ ಪಾರತಂತ್ರ್ಯ…

ಹಸಿರು ಸೀರೆಗೆ
ಶ್ವೇತವರ್ಣದ ಕವಚ
ಹರಡಿದೆ ಪರಿಮಳದ ಕೇಸರಿತಿಲಕ..
ಸಾರ್ವಭೌಮತೆಯ ಸಾರ
ಭಾವೈಕ್ಯತೆಯ ಹಾರ
ಉಣಬಡಿಸುತಿದೆ
ಅಮೃತಮಹೋತ್ಸವದ ಸವಿ ಪದಕ..

ಜಯಭಾರತಿ
ಹಸಿರುಸಿರಿನ ದಿವ್ಯ ಪ್ರದಾಯಕಿ
ದಿಟ್ಟ ಹೋರಾಟಗಳ
ತ್ಯಾಗ ಬಲಿದಾನಗಳ ಫಲ
ಗೆಲುವಿತ್ತ ನಮ್ಮ ಚಿತ್ತ.!
ಸರ್ವರನು ಸೆಳೆದು
ಹೊಳೆಯುತಿಹ ವಿಶ್ವಗುರು
ನಮ್ಮ ಭಾರತದತ್ತ..!!

ಬುದ್ಧ ಬಸವರುದಿಸಿದ ನಾಡು
ಶಿವಾಜಿ ರಾಣ ವೀರಯೋಧರಿದ್ದ ಬೀಡು
ವೀರವನಿತೆಯರು
ರಣಚರಿತ್ರೆ ಬರೆದ ದೇಶ..!!
ವಿವೇಕ ಪರಮಹಂಸರು
ಕನಕ ಪುರಂದರರುದಿಸಿದ
ಪುಣ್ಯಭೂಮಿಕೆ
ಸಾಧು ಸಂತರ ವಚನಕಾರರ
ಕಣಜವೀ ಕೋಶ..!!

ಮೊಳಗುತಿದೆ ಎಲ್ಲೆಡೆ
ಸ್ವಾತಂತ್ರ್ಯದ ಉದ್ಘೋಷ
ಗಡಿಯ ಮೀರಿ ಗುಡಿಯ
ಏರಿ ವಿಜೃಂಭಿಸಲಿ
ಅಮೃತಮಹೋತ್ಸವದ ಘೋಷ.!
ಭಾವೈಕ್ಯತೆಯ ವಿಶ್ವಾಸದ
ಸಂಸ್ಕೃತಿಯ ತೊಟ್ಟಿಲಗಾಥೆ
ಜಗವೆಲ್ಲ ಪಸರಿಸಲಿ
೭೫ನೇ ಸ್ವಾತಂತ್ರ್ಯೋತ್ಸವದ ತೋಷ.!

———————–

About The Author

Leave a Reply

You cannot copy content of this page

Scroll to Top