ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಥಾ ಗುಚ್ಚ

ತೇಜೋಮಯಿ ಮಾಯಿ

ಅನಸೂಯ ಜಹಗೀರದಾರ

“ಅತ್ತೆ ಹೋದ್ರಂತೆ ಅವರು ಫೋನ್ ಮಾಡಿದ್ರು” ಆಕೆ ಹೇಳಿದಳು ಗಂಡನನ್ನೇ ನೋಡುತ್ತ.ಆತನ ಮುಖಭಾವ ಬದಲಾಗಬಹುದೇನೋ ಏನೇನಾಗಬಹುದು ಎಂದು ಯೋಚಿಸುತ್ತ ದುಗುಡದಿಂದಲೇ ಹೇಳಿದಳು.ಆತ ಹುಂ ಗುಟ್ಟಿದವನೇ ಶೆರ್ಟ ಧರಿಸತೊಡಗಿದ. “ನೀನು ಬರುತ್ತೀಯಾ” ಅಂತೇನು ಕೇಳಲಿಲ್ಲ.ಆಕೆ ನೋಡುತ್ತಿದ್ದಂತೆ ಚಪ್ಪಲಿ ಮೆಟ್ಟಿ ಮನೆಯ ಹೊರಗೆ ನಡೆದ.ಕಾರಿನ ಬಾಗಿಲು ತೆಗೆದು ಡ್ರೈವಿಂಗ್ ಗೆ ಸಜ್ಜಾಗಿ ಸ್ನೇಹಿತನಿಗೆ ಫೋನಾಯಿಸಿದ.ಅರ್ಧ ಕಿ ಮೀ ಹತ್ತಿರ ಸ್ನೇಹಿತನ ಮನೆ.ನಿರೀಕ್ಷಿಸಿದಂತೆ ಆತ ಬರುವೆನೆಂದ.

ಕಣ್ಣೊರೆಸಿಕೊಳ್ಳುತ್ತ ಕಾರು ಚಲಾಯಿಸತೊಡಗಿದ.ಹತ್ತು ಕಿ.ಮೀ.ದೂರ ಇರುವ ವೃದ್ಧಾಶ್ರಮದ ಕಡೆಗೆ.ವಿದೇಶದಲ್ಲಿದ್ದ ಮಕ್ಕಳು ಬರಲಾರರು.ಕರೆದು ಪ್ರಯೋಜನವಿಲ್ಲ.ಇದ್ದಾಗಲೇ ಅಲಕ್ಷಿಸಿದ ಹೆಂಡತಿಯನ್ನು ಕರೆದು ಏನು ಪ್ರಯೋಜನ..! ಸಾಧ್ವಿ ಅಮ್ಮ ಬದುಕಿರುವತನಕ ವೃದ್ಧಾಶ್ರಮದ ಮೆನೇಜರ್ ಆಗಿ ಕಾರ್ಯ ನಿರ್ವಹಿಸಿ ಕೊನೆ ಉಸಿರೆಳೆದಿದ್ದಾಳೆ.ಅಲ್ಲಿನ ಎಲ್ಲ ಜನ ಅವಳನ್ನು ಪ್ರೀತಿಸುತ್ತಾರೆ.ಅಪಾರ ಬಳಗವೇ ಇದೆ ಅಲ್ಲಿ.ಇನ್ನೇಕೆ ತಡ.ವಿಧಿ ವಿಧಾನ ಪೂರೈಸಲು ಪುರೋಹಿತರಿಗೂ ಅಲ್ಲಿನ ಸೆಕ್ರೆಟರಿ ಹೇಳಿದ್ದಾಳೆ.”ಬೇಗ ಬನ್ನಿ” ಎಂದಷ್ಟೇ ಅವರೆಲ್ಲ ಹೇಳಿದ್ದು.ಅವರ ಮಾನಸ ಪುತ್ರಿಯರು ಅಲ್ಲಿ ಈಗಾಗಲೇ ತಯಾರಿ ಮಾಡಿಕೊಂಡು ಕುಳಿತಿದ್ದಾರೆ.

ಆತ ಕಣ್ಣೊರೆಸಿಕೊಳ್ಳುತ್ತ ಚೆಕ್ ಬುಕ್ ತೆಗೆದು ವೃದ್ಧಾಶ್ರಮದ ಆರೋಗ್ಯ ಖರ್ಚಿಗಾಗಿ ನಿಧಿ ಸ್ಥಾಪಿಸಲು ಮೊದಲ ದೇಣಿಗೆದಾರನಾಗಿ ಹಣ ಬರೆಯತೊಡಗಿದ.ಅವರದೇ ಜಾಗ. ಅಮ್ಮನ ಹೆಸರಲ್ಲೇ ಕಟ್ಟಿದ ಆಶ್ರಮ.ಮೆಡಿಟೇಶನ್, ಕಲೆ, ಧಾರ್ಮಿಕ ಕಾರ್ಯಕ್ರಮ, ಚಿಂತನೆ, ಆಟೋಟ, ಗ್ರಂಥಾಲಯ ಹೀಗೆ ಅಲ್ಲಿ ಮನಸ್ಸು ರಿಲ್ಯಾಕ್ಸಗೊಳೊಸಲು ಹಲವು ಹತ್ತು ಕಾರ್ಯಕ್ರಮಗಳು.ಅಮ್ಮನ ಉಸ್ತುವಾರಿಯೇ ಎಲ್ಲದ್ದಕ್ಕೂ..! ದಣಿದ ದೇಹ ವಿಶ್ರಾಂತಿ ಪಡೆದಿದೆ.ಒಂದು ಕುಟುಂಬದ ಅಲಕ್ಷ್ಯದಿಂದ ನೊಂದುಕೊಳ್ಳದ ಅಮ್ಮ ಸಾವಿರಾರು ಕುಟುಂಬಗಳನ್ನು ನಿಭಾಯಿಸಿ ಲಕ್ಷ್ಯವಹಿಸಿ ಸಮರ್ಥವಾಗಿ ನಿರ್ವಹಿಸಿದರು.

“ತೇಜೋಮಯಿ ಮಾತಾ..ಚಿರಶಾಂತಿಯಲ್ಲಿರಲಿ”

ಅಲ್ಲಿಯ ದನಿ ಒಕ್ಕೊರಲಿನಿಂದ ಕೇಳುತ್ತಿತ್ತು ಆತನಿಗೆ ..! ಆಶ್ರಮದ ಸಮೀಪ ಬರುತ್ತಿದ್ದಾಗ ಮತ್ತೂ ದನಿ ಜೋರಾಗಿ ಕೇಳುತ್ತಿತ್ತು.

ಅಮ್ಮನ ಪಾರ್ಥಿವ ಶರೀರಕ್ಕೆ ನಮಿಸುತ್ತ “ನನ್ನ ಕ್ಷಮಿಸು” ಎಂದು ಕೇಳಿಕೊಂಡ.

“ಬೀಳ್ಕೊಡು ಕಂದ”ಅಶರೀರವಾಣಿ ಕೇಳಿದಂತಾಯಿತು.ದನಿಗೆ ಪ್ರತಿಕ್ರಯಿಸಿದ ಮಾರ್ದನಿ ಮಧುರವಾಗಿತ್ತು.ಅಮ್ಮ ಪಂಚಭೂತಗಳಲ್ಲಿ ಲೀನವಾದಳು. ತೇಜೋಮಯಿ ಮಾಯಿ “ನಿನ್ನ ಬಲ ನನಗೂ ಸಿದ್ಧಿಸಲೆಂದು ಹರಸು”.ಕಣ್ತುಂಬಿ ಮನದುಂಬಿ ಗದ್ಘದ ಕಂಠದಿಂದ ಆತ ಮೆಲ್ಲನುಸುರಿದ. “ಕಂದಾ” ತಲೆ ನೇವರಿಸಿದಂತಾಯಿತು.ಮತ್ತೊಬ್ಬ ವೃದ್ಧ ತಾಯಿ ಅಲ್ಲಿದ್ದಳು.” ಮಾಯಿ” ಮಡಿಲಲ್ಲಿ ತಲೆಯಿಟ್ಟು ಬಿಕ್ಕಿದ.ಕಣ್ಮುಚ್ಚಿದ ಆತ..! ತಲೆ ನೇವರಿಸುತ್ತಲೇ ಇತ್ತು ಆ ವಾತ್ಸಲ್ಯದ ಕರಗಳು.


About The Author

12 thoughts on “ತೇಜೋಮಯಿ ಮಾಯಿ,ಅನಸೂಯ ಜಹಗೀರದಾರ ಕಥೆ”

  1. ಅಕ್ಕ,
    ನೀವು ಕತೆಯ ಬರವಣಿಗೆಯಲ್ಲಿ ಮುಂದುವರೆಯರಿ.
    ತುಂಬಾ ಮಹತ್ವದ ಕತೆಯಿದು.ಓದು…ಓದುತ್ತಲೇ…..ಎನಗರಿವಿಲ್ಲದಂತೆ ನನ್ನ ಕಣ್ಣಂಚು ಒದ್ದೆಯಾಯಿತು.ಸಣ್ಣ ಕತೆಯೊಳಗೂ ಓದುಗರನು ಒಂದೆಡೆ ಸ್ತಬ್ಧವಾಗಿಸಿಬಿಡುವ ನೂರಾರು ಕಲ್ಪನೆಗಳು ಸುತ್ತಾಡಿಬಿಡುವಂತ ಕತೆಯನು ಓದಲು ನೀಡಿದಿರಿ.
    ಪ್ರಕಟಿಸಿದ ಸಂಗಾತಿ ಪತ್ರಿಕಾ ಬಳಗದವರಿಗೂ ತಮಗೂ ಧನ್ಯವಾದವುಗಳು.

  2. Raghavendra Mangalore

    ಪುಟ್ಟ ಕಥೆ..ತುಂಬಾ ಹೃದಯಸ್ಪರ್ಶಿಯಾಗಿದೆ. ಅಭಿನಂದನೆಗಳು ಮೇಡಂ..

  3. ಮೇಡಂ ಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ ಇಂತಹ ಕರುಣಾಜನಕ ಕಥೆ ನೀಡಿದ ನಿಮಗೆ ಧನ್ಯವಾದಗಳು

  4. ರಾಜಾಸಾಹೇಬ.ಹೆಚ್.ಬಳಿಗಾರ

    ಕಥೆ ಓದುಗನನ್ನು ಕೂತೂಹಲ ಕೆರಳಿಸಿ ನೂರಾರು ಚಿಂತನೆಗೆ ಮನಸ್ಸು ದೂಡುತ್ತದೆ. ಕಥೆ ಭಿನ್ನವಾಗಿದೆ ಮತ್ತು ಮಾಗಿದ ಬರೆಹ ಅದ್ಭುತವಾಗಿ ಮೂಡಿ ಬಂದಿವೆ ಗುರುಮಾತೆ.

Leave a Reply

You cannot copy content of this page

Scroll to Top