ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್ ಜುಗಲ್- ಬಂದಿ

ಪ್ರಭಾವತಿ ಎಸ್ ದೇಸಾಯಿ ಮತ್ತ ರತ್ನರಾಯಮಲ್ಲ

ಗಜಲ್

ಜಗವನು ಪ್ರೀತಿಸಲು ಹೊರಟವ ಬದುಕನೆ ಮರೆತು ಬಿಟ್ಟ
ಶಶಿಯ ಹಿಡಿಯಲು ಹೊರಟವ ಮನೆ ಬೆಳಕನೆ ಮರೆತು ಬಿಟ್ಟ

ಸಂತೆಯಲಿ ಕನಸ ಮೂಟೆಗಳ ಖರೀದಿಸುತಾ ಹಿಗ್ಗಿದ
ಒಲಿದ ಕಂಗಳಲಿ ಮೂಡಿದ ಕನಸುಗಳನೆ ಮರೆತು ಬಿಟ್ಟ

ಇರುಳೆಲ್ಲಾ ಪ್ರೇಮ ಗಜಲ್ ಗಳನು ಬರೆಯುತಾ ಕಳೆದ
ಕೊಟ್ಟ ಅನುರಾಗದ ಪತ್ರ ಓದುವುದನೆ ಮರೆತು ಬಿಟ್ಟ

ಸಂಗೀತ ಕಛೇರಿ ನಡೆಸಿ ಜನ ಮನ ರಂಜಿಸಿ ನಲಿಸಿದ
ಪ್ರಥಮ ರಾತ್ರಿ ಮಿಲನ ಗೀತೆ ಹಾಡುವುದನೆ ಮರೆತು ಬಿಟ್ಟ

ಮುಳ್ಳ ಹಾದಿಯಲ್ಲಿ ಸಾಗುತಾ ಮುಂದಿನ ಗುರಿ ತಲುಪಿದ
ಕುಸುಮ ಹಾಸಿದ ದಾರಿಯಲಿ ನಡೆಯುವುದನೆ ಮರೆತು ಬಿಟ್ಟ

ಹೂ ತೋಟದಲಿ ಬಿರಿದ ಮೊಗ್ಗುಗಳ ಜೋಪಾನು ಮಾಡಿದ
ಬಯಸಿದ ಹೃದಯದಲಿ ಸುಮ ಅರಳಿಸುವುದನೆ ಮರೆತು ಬಿಟ್ಟ

ಮಧುಶಾಲೆ ಹುಡುಕುತಾ ಸಾಗಿದ ಎದೆಯ ಉರಿ ಆರಿಸಲು
“ಪ್ರಭೆ”ಯ ಮೋಹ ಕನವರಿಸುತ ಕುಡಿಯುವುದನೆ ಮರೆತು ಬಿಟ್ಟ

**

ಪ್ರಭಾವತಿ ಎಸ್ ದೇಸಾಯಿ

ಗಜಲ್

ಹಣದ ಹಿಂದೆ ಹೋದವ ತಿರುಗಿ ಬರುವುದನೆ ಮರೆತು ಬಿಟ್ಟ
ಕೀರ್ತಿಯನು ಮೋಹಿಸಿದವನು ಮುಗ್ದತೆಯನೆ ಮರೆತು ಬಿಟ್ಟ

ಬಣ್ಣ-ಬಣ್ಣದ ತಳುಕು ಬಳುಕಿನ ಲೋಕಗಳಿವೆ ಜಗದಲಿ
ಕನಸುಗಳ ಬುಟ್ಟಿ ಹೆಣೆಯುತ ವಾಸ್ತವವನೆ ಮರೆತು ಬಿಟ್ಟ

ಪ್ರವಚನ-ಉಪದೇಶ ಕೇಳುತಿವೆ ಎಲುಬಿನ ಹಂದರಗಳು
ಬಾಯಿ-ಕಿವಿಗಳ ಮಿಲನದಲಿ ಚಲಿಸುವುದನೆ ಮರೆತು ಬಿಟ್ಟ

ಹಾಸ್ಯದ ಲಾಸ್ಯವು ಗಡಿಯಾರದ ಮುಳ್ಳುಗಳಲಿ ಸೊರಗಿದೆ
ಪರದೆ ಸರಿಸುವ ಕಾಯಕದಲಿ ನಗುವುದನೆ ಮರೆತು ಬಿಟ್ಟ

ಹೃದಯಗಳು ಕಣ್ಣಾಮುಚ್ಚಾಲೆ ಆಡುತಿವೆ ಬೆಳಕಿನಲಿ
ಮನದ ರಂಗಿನ ಛಾಯೆಯಲಿ ಮಿಡಿಯುವುದನೆ ಮರೆತು ಬಿಟ್ಟ

ಮೈ-ಮನದಲೊಂದು ಮಧುಶಾಲೆ ಇದೆ ಬೀಗ ತೆರೆಯಬೇಕು
ನಶೆಯಲಿ ಬಟ್ಟಲಿಗೆ ಮದಿರೆ ಸುರಿಯುವುದನೆ ಮರೆತು ಬಿಟ್ಟ

ತೋಟದಲಿ ಮುಳ್ಳುಗಳು ಬಾಯ್ದೆರೆದಿವೆ ಮಲ್ಲಿಗೆ ನುಂಗಲು
ಗುಲಾಬಿ ಗುಂಗಿನಲಿ ಬೇಲಿ ನೇಯುವುದನೆ ಮರೆತು ಬಿಟ್

***

ರತ್ನರಾಯಮಲ್ಲ

===================

About The Author

2 thoughts on “”

Leave a Reply

You cannot copy content of this page

Scroll to Top