ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಥೆ

ಮುಸ್ಸಂಜೆ

ಸುಮಾ ಆನಂದರಾವ್

sea during golden hour

ಗೊಂಡಾರಣ್ಯದ ಮಧ್ಯದಲ್ಲಿ ಹಾವಿನಂತೆ ಮಲಗಿದ್ದ ರಸ್ತೆಯನ್ನು ಸೀಳಿಕೊಂಡು ಹೊರಟಿತ್ತು ನಾ ಕುಳಿತು ಕೊಂಡಿದ್ದಾ ಬಸ್ಸು. ಒಂದೇ ಸಮನೇ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಊರಿಗೆ ತಲುಪಿದಾಗ ಮುಸ್ಸಂಜೆ. ಎರಡು ದಿನ ಮುಂಚೆಯಷ್ಟೇ ಮುಂಗಾರು ಪ್ರಾರಂಭವಾಗಿತ್ತು. ಜಿಟಿಜಿಟಿ ಮಳೆಯಿಂದ ನೆನೆಯುತ್ತಾ ಊರೊಳಗೆ ಹೆಜ್ಜೆ ಹಾಕುವಾಗ ಏಕೋ ಏನೋ ಏನೂ ತೋಚದಂತಾಯಿತು. ಎಲ್ಲಿಗೆ ಹೋಗುವುದು? ಯಾರ ಮನೆ ಇದೆ? ಎಂಬೆಲ್ಲ ಪ್ರಶ್ನೆಗಳು ಒಮ್ಮೆಲೆ    ಉದ್ಭವವಾದವು. ಸುತ್ತೆಲ್ಲಾ ಒಮ್ಮೆ ಕಣ್ಣಾಡಿಸಿದೆ. ಕ್ರಮವಾಗಿ ಅಲ್ಲದಿದ್ದರೂ ಒಟ್ಟಾಗಿಯೇ ನಿಂತ ಹೆಂಚಿನ ಮನೆಗಳು ನೋಡಲು ಒಂದೇ ತರಹ ಇವೆ. ಊರ ಮಧ್ಯದಲ್ಲೊಂದು ಸರ್ಕಾರ ದಯಪಾಲಿಸಿದ ಶಾಲೆ ಇರಬೇಕು, ಶಾಲೆಯ ಮೇಷ್ಟ್ರು ಪಾಠ ಮಾಡುತ್ತಿದ್ದಾರೆ. ಶಾಲೆಯ ಪಕ್ಕದಲ್ಲಿಯೇ ಒಂದು ಚಿಕ್ಕ ಹೆಂಚಿನ ಮನೆ, ಬಹುಶಃ ಮೇಷ್ಟ್ರುರವರದೇ ಇರಬೇಕು. ಊರ ಕಟ್ಟಕಡೆಗೆ ‘ಮುಕುಂದ’ ನ ದೇವಾಲಯ, ಅದೂ ಹೆಂಚಿನದ್ದೇ. ಅದಕ್ಕೆ ಹೊಂದಿಕೊಂಡಂತೇ ಅರ್ಚಕರ ಮನೆ, ಹಾಗೆ ಹೆಜ್ಜೆ ಹಾಕುತ್ತಾ ನನಗರಿವಿಲ್ಲದೆ ಅಣೆಕಟ್ಟಿನ ಅಂಚಿನೆಡೆಗೆ ಬಂದು ನಿಂತಿದ್ದೆ.ಸುತ್ತಲೂ ಕಣ್ಣಾಡಿಸಿದೆ ಎಂತಹ ರಮ್ಯವಾದ  ನೋಟ! ಎಲ್ಲೆಲ್ಲಿ ನೋಡಿದರೂ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿವೆ.  ಭೂರಮೆ ಹಸಿರು ಸೀರೆ ತೊಟ್ಟಂತೆ ಕಂಗೊಳಿಸುತ್ತಿದ್ದಾಳೆ. ದೂರದಲ್ಲಿ ಬೆಟ್ಟಗಳ ಸಾಲು. ‘ಸುಯ್’ ಎಂಬ ಗಾಳಿಯ ಸದ್ದಿಗೆ ತೇಲಿ ಬರುವ ಜುಳು ಜುಳು ಸಂಗೀತಾ. ಆಗಸದಿ ಹಕ್ಕಿಗಳ ಸಾಲು ಸಾಲು,ಅವು ಮರಳಿಗೂಡಿಗೆ ಹೊರಟಂತಿವೆ. ನನ್ನ ಪರಿಸ್ಥಿತಿಯೂ ಅದೇ ಆಗಿದೆ. ಗಾಳಿಗೆ  ಹಾರುತ್ತಿದ್ದ ಬೆಳ್ಳಿ ಕೂದಲನ್ನು ಹಿಂದಕ್ಕೆ ನೂಕಿದಂತೆಲ್ಲ  ನನ್ನ ಹಳೆಯ ನೆನಪುಗಳಂತೆ ಮುನ್ನುಗ್ಗಿ ಬರುತ್ತಿವೆ.

          ಸುಮಾರು ೪೦ ವರ್ಷಗಳ ಹಿಂದಿನ ಮಾತು.ನಮ್ಮೂರ ಪಕ್ಕದಲ್ಲಿರುವ ಅಣೆಕಟ್ಟು ನಿರ್ಮಾಣವಾಗುವುದಕ್ಕೆ ಮುಂಚೆ  ನದಿಯ ಎಡದಂಡೆಯ ಮೇಲಿದ್ದ ಊರಿನ ಮಧ್ಯೆ, ವಿಶಾಲವಾಗಿ ಹರಡಿದ್ದ ಬಯಲಿನಲ್ಲಿ  ‘ಮುಕುಂದ’ನ ದೇವಾಲಯವಿತ್ತು. ಅದರ ಮಹಾದ್ವಾರದ ಎರಡೂ ಬದಿಯಲ್ಲಿದ್ದ ವಿಶಾಲವಾದ ಮೊಗಸಾಲೆಗಳು, ಯಾಗಶಾಲೆಗಳೂ, ದೇವಸ್ಥಾನದ ಎದಿರು ಗರುಡಗಂಭ, ಹಿಂಭಾಗಕ್ಕೆ ಬಂದರೆ ಒಂದು ದೊಡ್ಡ ಅರಳಿಮರ‌ವಿತ್ತು. ಅಬಾಲವೃದ್ಧರೆಲ್ಲ ಅದರ ಪ್ರದಕ್ಷಿಣೆ ಮಾಡಿ ಭಕ್ತಿಯಿಂದ ನಮಿಸುತ್ತಿದ್ದರು.ಇರುಳು ಭಜನೆ ಇತ್ಯಾದಿಗಳನ್ನು ಮಾಡಿ ದೈವ ಧ್ಯಾನ ಮಾಡುತ್ತಿದ್ದರು. ದೇವಸ್ಥಾನದ ಒಳಗಡೆ ಮೂರಡಿ ಎತ್ತರದ ಬಾಲಕೃಷ್ಣ (ಮುಕುಂದ)ನ ಮೂರ್ತಿ ಮುದ್ದಾಗಿತ್ತು. ಅಲ್ಲಿ ಯಾವಾಗಲೂ ಪೂಜೆ,ಹೋಮ ನಡೆಯುತ್ತಿದ್ದವು. ದೇವಸ್ಥಾನದ ಪಕ್ಕದ ಕಲ್ಯಾಣಿಯಲ್ಲಿ  ತಾವರೆ ಹೂಗಳು ಅರಳಿರುತ್ತಿದ್ದವು. ಹತ್ತಿರದಲ್ಲೇ ಹರಿವ ನದಿ. ದೇಗುಲದ ಪೂರ್ವಕ್ಕೆ ನಮ್ಮ ಮನೆ. ಹಳೆಯ ಕಾಲದ ಕಂಬಗಳ ಮನೆ! ಅಪ್ಪ , ಅಮ್ಮ ,ಅಜ್ಜ ,ಅಜ್ಜಿ , ಆಳುಕಾಳುಗಳಿಂದ ತುಂಬಿತ್ತು. ನಾನು ನನ್ನ ಗೆಳತಿಯರು ಬಟ್ಟೆಒಗೆಯಲು ದೇವರ ಪಾತ್ರೆಗಳನ್ನು ತೊಳೆಯಲು ನದಿಯ ಬಳಿಗೆ ಬರಬೇಕಿತ್ತು.

            ಏಕೋ ಏನೋ ನನ್ನ ಮಾಧವನ ನೆನಪಾಯಿತು. ನಾವಿಬ್ಬರೂ ಒಂದೇ ಶಾಲೆಯಲ್ಲಿ ಓದಿದವರು.ಹೆಣ್ಣು ಮಕ್ಕಳಿಗೆ ಹೆಚ್ಚಿನ ಓದು ಬೇಡ ಎಂದಿದಕ್ಕೆ ನನ್ನ ಓದು ಅರ್ಧಕ್ಕೆ ನಿಂತಿತು. ಮಾಧವ ಹತ್ತಿರದ ಪಟ್ಟಣದ ಕಾಲೇಜಿನಲ್ಲಿ ಓದುತ್ತಿದ್ದ. ದಸರ ಮತ್ತು ಬೇಸಿಗೆ ರಜೆಯಲ್ಲಿ ಊರಿಗೆ ಮರಳುತ್ತಿದ್ದ. ಆಗ ನಾವಿಬ್ಬರೂ ಹಾಗೇ  ಮಾತನಾಡುತ್ತಾ ನದಿಯ ದಂಡೆಗೆ ಬರುತ್ತಿದ್ದೆವು. ನೀರಲ್ಲಿ ಅರ್ಧ ಮುಳುಗಿರುವ ಬಂಡೆ ಮೇಲೆ ಕುಳಿತು ಕಾಲುಗಳನ್ನು ಇಳಿ ಬಿಟ್ಟು ನೀರನ್ನು ಚಿಮ್ಮುತ್ತ ಕಲ್ಪನಾ  ಲೋಕದಲ್ಲಿ ವಿಹರಿಸುತ್ತಿದ್ದೆವು. ತೋಟದ ಬದುಗಳ ಮೇಲೆ ಕೈ  ಹಿಡಿದು ನಡೆಯುತ್ತಾ ಜೀವನವೆಲ್ಲ ಹೀಗೆಯೇ ಹೆಜ್ಜೆ ಹಾಕುತ್ತೇವೇನೋ ಎಂಬ ಭ್ರಮೆಯಲ್ಲಿ ತೇಲುತ್ತಿದ್ದೆವು. ನಮ್ಮ ಕಣ್ಣುಗಳು ಮಾತಾಡಿ ಕೊಂಡವೇ ಹೊರತು ನಾವು ಆ ವಿಷಯದ ಬಗ್ಗೆ ಎಂದೂ ಮಾತಾಡಲಿಲ್ಲ. ಆದರೂ ನಮ್ಮ ಪ್ರೇಮ ಪವಿತ್ರವಾಗಿತ್ತು .

        ಅಣೆಕಟ್ಟು ನಿರ್ಮಾಣ ಮಾಡುವುದಕ್ಕೆ ಮುಂಚೆ ಎಡದಂಡೆಯ ಮೇಲಿದ್ದ ಜನರಿಗೆ ಸುಮಾರು ನಾಲ್ಕು ಮೈಲಿ ದೂರದಲ್ಲಿರುವ  ಜಮೀನುಕೊಟ್ಟು  ಮನೆಕಟ್ಟಿಸಿ ,ಪರಿಹಾರ ನೀಡಿ ಸ್ಥಳಾಂತರಿಸಲಾಯಿತು. ಅಪ್ಪ ತನ್ನ ಜಮೀನೆಲ್ಲವನ್ನು ನೀರಿನಲ್ಲಿ ಮುಳುಗಿಸಿ ಸರ್ಕಾರ ಕೊಟ್ಟ ಜಮೀನನ್ನು ತನ್ನದೆಂದು ಒಪ್ಪಿಕೊಳ್ಳಲು ಸಿದ್ದನಿರದಿದ್ದರೂ ವಿಧಿಯಿಲ್ಲದೆ ಒಪ್ಪಿಕೊಳ್ಳಲೇಬೇಕಿತ್ತು. ಹಾಗಾಗಿ ಪರಿಹಾರದ ಹಣವನ್ನು ತೆಗೆದು ಕೊಂಡು ಅಣ್ಣನ ಓದಿಗೆ ಖರ್ಚು ಮಾಡಿದರು. ಮುಂದೆ ನಾವು ಅಣ್ಣನ ನೌಕರಿಯ ಹಣದಿಂದ ಬದುಕಬೇಕಾಗಿ ಬಂತು. ಆದರೂ ದೂರದ ಪೇಟೆಯಲ್ಲಿದ್ದರೂ  ಅಪ್ಪ ಊರನ್ನು ಮರೆಯಲಿಲ್ಲ. ಪ್ರತಿದಿನ ದೇವಸ್ಥಾನ ಹಾಗೂ ಮುಕುಂದನ ಜಪ ಮಾಡುತ್ತಿದ್ದರು. ಅಪ್ಪಿ ತಪ್ಪಿ ನಾವು ಊರಿನ ಹೆಸರೆತ್ತಿದರೆ ಸಾಕು ಅಪ್ಪ ಭಾವುಕರಾಗುತ್ತಿದ್ದರು.   ‘ಸರ್ಕಾರ ಊರನ್ನು ಮುಳುಗಿಸಿ ಪರಿಹಾರ ಕೊಟ್ಟ ಮಾತ್ರಕ್ಕೆ  ಊರಿನ ನೆನಪುಗಳನ್ನು ಮುಳುಗಿಸಲಾದೀತೆ’ ಎಂದ ಅಪ್ಪನ ಮಾತುಗಳು ಇಂದಿಗೂ ಸಂಕಟವನ್ನು ಹೊತ್ತು ತರುತ್ತವೆ.

           ಇತ್ತ ನಗರ ಸೇರಿದ ನಾನು ಓದು ಮುಂದುವರಿಸಿದೆ. ಮುಂದೆ ಮುಂಬಯಿ ನಲ್ಲಿದ್ದ ಅಣ್ಣನ ಗೆಳೆಯರ ಸಹಾಯದಿಂದ ಅಲ್ಲಿ ಅನಾಥಾ ಶ್ರಮದಲ್ಲಿನ ಶಾಲೆಗೆ ಶಿಕ್ಷಕಿಯಾಗಿ ನೇಮಕಗೊಂಡೆ. ತದನಂತರ ಅಣ್ಣ ನನ್ನ ಮದುವೆ ಪ್ರಸ್ತಾಪ ಮಾಡಿದರೂ ನಾನು ಒಪ್ಪಿಕೊಳ್ಳಲಿಲ್ಲ. ಅನಾಥಾಶ್ರಮದಲ್ಲಿದ್ದ ನಾನು ಬದಲಾಗಿದ್ದೆ. ‘ಯಾರೋ ಮಾಡಿದ ತಪ್ಪಿಗೆ ಈ ಹಸುಳೆಗಳಿಗೇಕೆ ಶಿಕ್ಷೆ?’ ಎಂದೆಲ್ಲಾ ಚಿಂತಿಸಿ ನೊಂದೆ.  ಮದುವೆ ಕಡೆ ನನ್ನ ಮನಸ್ಸು ಹರಿಯಲೇ ಇಲ್ಲ. ಅನಾಥ ಮಕ್ಕಳೊಂದಿಗೆ ಆತ್ಮೀಯತೆ ಬೆಳೆಸಿಕೊಂಡೆ. ನಾನು ಅಲ್ಲಿಯೇ ೩೫ ವರ್ಷ ಸೇವೆ ಪೂರ್ಣಗೊಳಿಸಿದೆ. ಆದಾಗ್ಯೂ ಮಾಧವನ ನೆನಪು ಆಗೊಮ್ಮೆ ಈಗೊಮ್ಮೆ ಸುಳಿಯದಿರುತ್ತಿರಲಿಲ್ಲ!

            ಒಂದು ವಾರದ ಹಿಂದೆ ದಿನಪತ್ರಿಕೆಯಲ್ಲಿ “ನಮ್ಮೂರಿನ ಅಣೆ ಕಟ್ಟಿಯು ನೀರಿನ ಅಭಾವದಿಂದ ತಳ ಕಂಡಿದೆ”ಎಂಬ ಸುದ್ದಿ ಓದುತ್ತಿದ್ದಂತೆಯೇ ನನ್ನ ಮನಸ್ಸು ಒಮ್ಮೆಲೇ  ೪೦ ವರ್ಷದ ಹಿಂದಕ್ಕೆ ಓಡಿತು. ನನ್ನ ನಿವೃತ್ತಿಯ ಜೀವನ ಅಲ್ಲೇ ಕಳೆಯಲು ನಿರ್ಧರಿಸಿ ನಮ್ಮೂರಿನ ಬಸ್‌ ಹತ್ತಿದೆ.

             ಊರಿಗೆ ಹೋದ ಕೂಡಲೇ ಅಣೆಕಟ್ಟೆಯ ಕಡೆಗೆ ಹೆಜ್ಜೆ ಹಾಕಿದೆ‌. ತಂಗಾಳಿ ಮೈಗೆ ಮುತ್ತಿಡುತ್ತಿತ್ತು  ತುಂಟ ಮೋಡಗಳು ಯಾವುದೇ ಗೊತ್ತು ಗುರಿಯಿಲ್ಲದೆ ಸುಮ್ಮನೆ ಓಡುತ್ತಿದ್ದವು! ತೆಳುಗಾಳಿಗೆ ಮರಗಿಡಗಳ ಸಣ್ಣರೆಂಬೆಗಳು ತೂಗಾಡುತ್ತಿದ್ದವು. ಅದಾಗಲೇ ನಾನು ಅಣೆಕಟ್ಟೆಯ ಸಮೀಪಕ್ಕೆ ಬಂದೆ. ತಳದಲ್ಲಿ ಎಲ್ಲೋ ಸ್ವಲ್ಪ ನೀರಿತ್ತು.ಹಾಗೆ ಕಣ್ಣಾಯಿಸಿದಾಗ  ದೂರದಲ್ಲಿ ದೇವಸ್ಥಾನ ಕಾಣಿಸಿ ‘ಪುಣ್ಯಕ್ಕೆ ದೇವಸ್ಥಾನ ನೋಡುವ ಭಾಗ್ಯ ಸಿಕ್ಕಿತೆಂದು’ ಬಿರುಸಾಗಿ ಹೆಜ್ಜೆಹಾಕಿದೆ. ಹತ್ತಿರ ಹೋದಾಗ ಅದರ ಶಿಥಿಲಾವಸ್ಥೆ ನೋಡಿ ಮನವು ಮಮ್ಮಲ ಮರುಗಿತು.ಗರ್ಭಗುಡಿಯಲ್ಲಿದ್ದ ‘ಮುಕುಂದ’ ವಿಗ್ರಹವನ್ನು ಅಂದು ಅಪ್ಪನೇ ಎತ್ತಿಕೊಂಡು ಬಂದು ಊರಿನ ಹುಡುಗರ ಕೈಗೆ ಕೊಟ್ಟಿದ್ದರು. ಅದೇ ಇರಬೇಕು. ಈ ಮುಂಚೆ ನಾನು ನೋಡಿದ ‘ಮುಕುಂದ’ನ ದೇವಸ್ಥಾನ!  ರಾಶಿರಾಶಿಯಾಗಿ ಬಿದ್ದಿರುವ ಕಲ್ಲುಗಳನ್ನು ಅಪ್ಪಿಕೊಂಡು ಅಳಬೇಕೆನಿಸಿತು‌. ಇಂತಹ ಸುಂದರ ದೇವಸ್ಥಾನವನ್ನು ಮುಳುಗಿಸಿದ ಜನ ಅದೆಷ್ಟು ಕಠಿಣ ಹೃದಯಿಗಳು!

             ದೇವಸ್ಥಾನದ ಹಿಂಬದಿಗೆ ಬಂದೆ. ಅಲ್ಲಿ ಈ ಹಿಂದೆ ಇದ್ದ ಅರಳಿಮರದ ಕಟ್ಟೆಯ ಜಾಗದಲ್ಲಿ ಬರೀ ಕಟ್ಟೆ ಮಾತ್ರ ಇತ್ತು.ಮರವಿರಲಿಲ್ಲ.ಆ ಕಟ್ಟೆಯ ಮೇಲೆ ಸ್ವಲ್ಪ ಹೊತ್ತು ಕುಳಿತು ಕೊಂಡಾಗ ಅಂದು  ಕುಟುಂ ಬದ ಸದಸ್ಯರೆಲ್ಲಸೇರಿ ನಡೆಸುತ್ತಿದ್ದ ಭಜನೆ ಎಲ್ಲಾ  ನೆನಪಾಗಿ  ಕಣ್ಣೀರು ಕೋಡಿಯಾಗಿ ಹರಿದು ಅಣೆ ಕಟ್ಟೆಯ ನೀರಿನಲ್ಲಿ ಸಂಗಮವಾದವು. ನೀರಲ್ಲಿ ಅರ್ಧ ಮುಳುಗಿದ್ದ ಬಂಡೆಯ ಮೇಲೆ ಕುಳಿತಾಗ ‘ಮಧು’ ,’ಮಾಧವ’ ಎಂದು ಈ ಹಿಂದೆ ನಾವು ಕಲ್ಲಿನಲ್ಲಿ ಕೆತ್ತಿದ್ದ ಅಕ್ಷರಗಳು ಕಂಡು ಬಂದವು. ಏಕೋ ಏನೋ ಆ ಅಕ್ಷರಗಳ ಮೇಲೆ ಹಾಗೆ ಕೈಯಾಡಿಸಿದೆ. ಮನದಲ್ಲಿ ಎದ್ದ ಭಾವತರಂಗಗಳ ನಿಯಂತ್ರಿಸಲಾಗದೆ  ಆಗಸದತ್ತ ನೋಡಿದೆ. ಆಗಲೇ ಮಸುಕು ಆವರಿಸಿತ್ತು. ಸಣ್ಣಗೆ ಮಳೆಹನಿಗಳು ಉದುರಲು ಆರಂಭಿಸಿದ್ದವು. ಎಲ್ಲೋ ದೂರದಲ್ಲಿ ಬೆಳಕು ಕಂಡಿತು. ಟಾರ್ಚ್ ಹಿಡಿದು ಯಾರೋ ನನ್ನ ತ್ತಲೇಬರುತ್ತಿದ್ದಾರೆ. ಹತ್ತಿರಕ್ಕೆ ಬಂದಾಗ ಎಲ್ಲೋ ನೋಡಿದ ಮುಖ ಇಬ್ಬರಿಗೂ ಪರಸ್ಪರ ಗುರುತು ಹಿಡಿಯಲಾಗದ ಗೊಂದಲ. ನಾನೇ ಮುಂದಾಗಿ ‘ಮಾಧವ’ ಎಂದೆ. ಆ ಕೂಡಲೇ ಆತನು ಕೂಡ ‘ಮಧು’ ಎಂದ. ವಯಸ್ಸಿನಿಂದ ಮುಖ ಸುಕ್ಕಾಗಿದ್ದರೂ ಕಣ್ಣುಗಳಲ್ಲಿ ಅದೇ ತೇಜಸ್ಸು ತುಂಬಿತ್ತು. ಅವನು ನನ್ನ ಹಾಗೆ ಒಂಟಿಯಾಗಿದ್ದ. ಇಬ್ಬರಲ್ಲೂ ಆಶ್ಚರ್ಯ, ಸಂತಸ ಮನೆ ಮಾಡಿತ್ತು. ಇಬ್ಬರ ನೋಟದಲ್ಲಿ ಅಂದಿನ ಆಕರ್ಷಣೆ  ಇರಲಿಲ್ಲ.ಬದಲಿಗೆ ಅಂದಿನಿಂದ ಇಂದಿನವರೆಗೆ ಅಚ್ಚಳಿಯದೆ  ಉಳಿದ  ಗೆಳೆತನವಿತ್ತು. ಮಾಧವ ಚಾಚಿದ ಕೈಯಲ್ಲಿ ನನ್ನ ಕೈಗಳನ್ನಿಟ್ಟು ಮುಗುಳ್ನಕ್ಕೆ.

*****

About The Author

1 thought on “ಮುಸ್ಸಂಜೆ”

  1. ಕಥೆಯಲ್ಲಿ ಅಕ್ಷರಗಳ ಜೋಡಣೆಯೊಂದಿಗೆ ಭಾವಗಳ ಹೊರಸೂಸುವಿಕೆಯ ನೈಪುಣ್ಯತೆ ಅದ್ಭುತ. ಓದಿಸಿಕೊಂಡು ಹೋಗುವ ಶಕ್ತಿಯಿದೆ ಲೇಖಕಇಂದ ಇಂತಹ ಮತ್ತು ಇದಕ್ಕೂ ಮೀರಿದ ಕೃತಿಗಳನ್ನು ನಿರೀಕ್ಷಿಸಬಹುದಾಗಿದೆ.

Leave a Reply

You cannot copy content of this page

Scroll to Top