ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಥೆ

ಕೊಲ್ವ ಕೈಯೊಂದಾದರೆ ಕಾಯ್ವವು ನೂರು  ( ಕಥೆ )

ಎಂ. ಆರ್. ಅನಸೂಯ

Abstract Woman Face With Indian Pattern Stock Illustration - Illustration  of painting, fantasy: 19351479

ಕಮಲಮ್ಮನವರು ಒಬ್ರೆ ಅವರೆಕಾಯಿ ಸುಲಿಯುತ್ತಿದ್ದರು ಎಳೆಯಾದ ಅವರೆಕಾಳನ್ನೇ ಒಂದು ಕಡೆ, ಬಲಿತ ಕಾಳನ್ನೆ

ಒಂದು ಕಡೆ ಹಾಕುತ್ತಿದ್ದರು‌. ಅಲ್ಲಿಗೆ ಬಂದ  ಮೆಹರುನ್ನೀಸ  ಸಹ ಅವರೆಕಾಯಿ ಸುಲಿಯಲು ಕೈ ಹಾಕಿದಳು.”ಅವರೇ ಸೊಗಡು ಬಹಳ ಚೆನ್ನಾಗೈತೆ. ಈ ಅವರೆಕಾಯಿ ಸೀಸನ್ ಮುಗಿಯತನ ತನಕ ಬೇರೆ ಯಾವ ತರಕಾರಿನೂ ಬೇಕು

ಅನ್ನಿಸಲ್ಲ ಅಲ್ವೆ ಕಮಲಮ್ಮ”ಎಂದಾಗ ಕಮಲಮ್ಮ ಹೌದು

ಎನ್ನುತ್ತ ತಲೆಯಾಡಿಸಿದರು. ಆಗ ಇಬ್ಬರಿಗೂ ಕಾಫಿ ತಂದ

ಸಹನ “ನಿಮ್ಮಿಬ್ಬರಿಗೂ ಅವರೆಕಾಯಿಯದೇ ಒಂದು ಸಿರಿ

ಜೋಡಿ ಸರಿಯಾಗೈತೆ” ಎನ್ನುತ್ತ ತಾನೂ ಕೂತು ಕೈ ಹಾಕಿ

ಸುಲಿಯತೊಡಗಿದಳು. ಕಮಲಮ್ಮ ಮತ್ತು ಎದುರುಮನೆ

ಮೆಹರುನ್ನೀಸಳ  ಸ್ನೇಹ ಇಂದು ನಿನ್ನೆಯದಲ್ಲ. ಇಪ್ಪತ್ತೈದು 

ವರ್ಷಗಳ ಹಿಂದಿನದು. ರಸ್ತೆಯ ಪಕ್ಕದಲ್ಲಿ ಊರಿನಂಚಿನ 

ತೋಟದಲ್ಲಿಯೆ ಇಬ್ಬರು ಮನೆಗಳಿದ್ದವು. ರಸ್ತೆಯ ಬದಿಗೆ

ತೋಟದ ಮುಂಭಾಗದಲ್ಲಿ ಮನೆ ಕಟ್ಟಿದ  ದಿನಗಳಿಂದಲು 

ಬೆಳೆದು ಬಂದ ಸ್ನೇಹ. ಮೆಹರುನ್ನೀಸಳ  ಗಂಡ  ಬಷೀರ್

ಸಾಬ್ ತೋಟವನ್ನು ನೋಡಿಕೊಳ್ಳುತ್ತ ಎರಡು ಟ್ರಾಕ್ಟರ್

ಬಾಡಿಗೆಗೆ ಬಿಡುತ್ತಿದ್ದರು. ಹಿರಿಯ ಮಗ ಶಫೀಕ್ ಅಹ್ಮದ್ ಉಪನ್ಯಾಸಕ ಹುದ್ದೆಯಲ್ಲಿದ್ದರೆ, ಎರಡನೆ ಮಗ  ಅಕ್ರಮ್ಭ ಬಾಷಾ ಎಲಕ್ಟ್ರಿಕಲ್ ಕಂಟ್ರಾಕ್ಟ್ ಮಾಡುತ್ತಿದ್ದನು. ಇನ್ನು ಕಮಲಮ್ಮನ ಗಂಡ ವೆಂಕಟೇಶ್ ಅವರು ಸಹಾ ದೊಡ್ಡ  ಕಿರಾಣಿ ಅಂಗಡಿ ನಡೆಸುತ್ತಿದ್ದರು. ಒಬ್ಬನೆ ಮಗ ಚೇತನ್ ಡಿಗ್ರಿ ಮುಗಿಸಿ ತಂದೆಯ ಜೊತೆಗೆ ಅಂಗಡಿ ನಡೆಸುತ್ತಿದ್ದ. ದೊಡ್ಡ ಮಗಳು ಸುಮನ ಮದುವೆ ಆಗಿ ಗಂಡನ ಮನೆ ಸೇರಿದ್ದರೆ ಎರಡನೆಯವಳು ಸಹನ B.SC. ಓದುತ್ತಿದ್ದಳು ಮೂವರು ಮಾತಾಡುತ್ತ  ಅವರೆ ಕಾಯಿ ಸುಲಿಯುವಾಗ ಸಂಜೆ ಆರೂವರೆ ಸಮಯ.ಇದ್ದಕ್ಕಿದ್ದಂತೆಯೇ ಹದಿನೇಳು   ಹದಿನೆಂಟರ ಹುಡುಗಿಯು ಓಡಿ ಬಂದು ಮನೆಯೊಳಗೆ ಬಂದೇ ಬಿಟ್ಟಳು. ಅವರೆಲ್ಲರು ನೋಡ ನೋಡುತ್ತಿರುವ ಹಾಗೆ ಅಡುಗೆ ಮನೆಗೆ ಹೋಗಿ  ಕಣ್ಣೀರು ಹಾಕುತ್ತಲೆ ಕೈಮುಗಿದು “ಸ್ವಲ್ಪ ಹೊತ್ತು ಇಲ್ಲಿರುತ್ತೀನಮ್ಮ. ದಯವಿಟ್ಟುಬೇಡ ಅನ್ಬೇಡ್ರಿ. ಯಾರಾದರೂ ಕೇಳಿಕೊಂಡು ಬಂದರೆ ಇಲ್ಲ ಅನ್ನಿರಿ”ಎಂದು ಒಂದೇ ಉಸಿರಿನಲ್ಲಿ ಹೇಳುತ್ತ ಸನ್ನೇ

ಮಾಡಿ ಕುಡಿಯಲು ನೀರು ಕೇಳಿದಳು. ತಕ್ಷಣವೇ ಸಹನ

ಹೋಗಿ ನೀರು ಕೊಟ್ಟಳು. ಮೆಹರುನ್ನೀಸ ಕೂಡಲೇ ಎದ್ದು

ಹೊರಗಡೆ ಬಾಗಿಲನ್ನು ಮುಚ್ಚಿ ಚಿಲಕ ಹಾಕಿ ಭದ್ರಪಡಿಸಿ

ಅಡುಗೆ ಮನೆಗೆ ಬಂದಳು.ಆ ಹುಡುಗಿ ಬಾಗಿಲಿನ ಹಿಂದೆ

ಕೂತಿದ್ದಳು. ಆಗ ಕಮಲಮ್ಮ “ಮೆಹರುನ್ನೀಸ ನಂಗ್ಯಾಕೊ

ಭಯ ಆಗುತ್ತೆ. ಇವರು, ಚೇತನ್  ಇಬ್ರೂ ಊರಲ್ಲಿಲ್ಲ”

ಎಂದರು ಗಾಬರಿಯಿಂದ. “ಕಮಲಮ್ಮ ಸುಮ್ಮನಿರಮ್ಮ

ನಾವೆಲ್ಲ ಇಲ್ವಾ” ಎಂದು ಧೈರ್ಯ ಹೇಳಿದಳು. ನಂತರ ಆ

ಹುಡುಗಿಯತ್ತ ತಿರುಗಿ “ಯಾಕಮ್ಮ ಹಿಂಗೆ ಓಡಿ  ಬಂದು 

ಬಚ್ಚಿಟ್ಟುಕೊಂಡಿದೀಯ. ನಿಜ ಹೇಳು. ಸುಳ್ಳು ಹೇಳಿದರೆ

ನಡೆಯಾಕಿಲ್ಲ” ತುಸು ಜೋರಾಗಿಯೇ ಕೇಳಿದಳು.ಆಗ ಆ ಹುಡುಗಿ  ಅಳುತ್ತಾ “ಆಂಟಿ, ನಿಜವಾಗ್ಲೂ ನಾನು ಸುಳ್ಳು ಹೇಳ್ತಿಲ್ಲ ನಂಗೆ ಸ್ವಲ್ಪ ಹೊತ್ತು ಇಲ್ಲಿರಕ್ಕೆ ಅವಕಾಶ ಕೊಡ್ರಿ

.ನಿಮಗೆ ಇಷ್ಟವಿಲ್ಲ ಅಂದ್ರೆ ಆ ಮೇಲೆ ನಾನು ಹೋಗ್ತೀನಿ” ಎನ್ನುತ್ತಾ ಕೈ ಮುಗಿದು ಬೇಡಿ ಕೊಂಡಳು “ಯಾಕ್ ಓಡಿ ಬಂದಿದ್ದು ಹೇಳು. ಬಚ್ಚಿಟ್ಟು ಕೊಂಡು ಇರೋದ್ಯಾಕೆ? ನಿನ್ನ 

ಊರು ಯಾವುದು? ನಿನ್ನ ಹಿಂದೆ ಬಿದ್ದಿರ ಜನಗಳ್ಯಾರು ? ಆ ಹುಡುಗಿ ಕಣ್ಣೀರು ಒರೆಸಿಕೊಳ್ಳುತ್ತಲೇ “ನಮ್ಮಚಿಕ್ಕಮ್ಮ ನನ್ನನ್ನು ಅವರಣ್ಣನಿಗೆ ಮದುವೆ ಮಾಡಿ ಬಿಡ್ತಳೆ ಅದಿಕ್ಕೆ ಮನೆ ಬಿಟ್ಟು ಬಂದೆ.” “ಚಿಕ್ಕಮ್ಮ ಅಂದ್ರೆ ಯಾರು” ಎಂಬ   ಕಮಲಮ್ಮನ  ಪ್ರಶ್ನೆಗೆ “ನಮ್ಮಪ್ಪನ ಎರಡನೆ ಹೆಂಡ್ತಿ ನಮ್ಮ

ಅಪ್ಪ ತೀರ್ಕೊಂಡು ವರ್ಷ ಆಗ್ತಾ ಬಂತು ನಂ ಚಿಕ್ಕಮ್ಮನ

ಅಣ್ಣನಿಗೆ ಹೆಂಡ್ತಿ ಇಲ್ಲ ಸತ್ತೋಗಿದಾಳೆ ಅವನಿಗೆ ವಯಸ್ಸು

ಜಾಸ್ತಿ ಆಗೈತೆ.ಜೊತೆಗೆ ಕೆಟ್ಟ ಅಭ್ಯಾಸಗಳಿದಾವೆ. ನನಗಿಷ್ಟ

ಇಲ್ಲ”ಎಂದಳು.”ಸರಿ,ಈಗ ಎಲ್ಲಿಗೆ ಹೋಗ್ತಿದೀಯ ಹೇಳು

ಇಷ್ಟೊತ್ನಲ್ಲಿ” ಮೆಹರುನ್ನೀಸ ಕೇಳಿದಳು.” ತುಮಕೂರಿಗೆ

ಹೋಗ್ತೀನಿ.ಅಲ್ಲಿ ನಮ್ಮ ದೊಡ್ಡಮ್ಮ ಇದಾರೆ” ಎಂದಳು. “ಈಗ್ಯಾರು ನಿನ್ನ ಹಿಂದೆ ಬಿದ್ದಿರೋರು”ಎಂದಾಗ “ಅವನೇ

ಇನ್ಯಾರು ನಮ್ಮಚಿಕ್ಕಮ್ಮನ ಅಣ್ಣ, ಅವರ ಕಡೆಯೋರು.

ಅವರು ಇಲ್ಲೆ ಐಮಂಗಲದತ್ರನೇ ಒಂದು ಹಳ್ಳೀಲಿದಾರೆ”  ಎಂದಳು. ಸರಿ ಇಲ್ಲೆ ಕೂತಿರು ಎಂದ ಕಮಲಮ್ಮನೊಡನೆ

ಮಹರುನ್ನೀಸ ಸಹ ಅಡುಗೆ ಮನೆಯಿಂದ ಹೊರ ಬಂದು ಸಹನಳ ಮೊಬೈಲ್ ನಲ್ಲಿ ತನ್ನ ಗಂಡ ಬಷೀರ್ ಗೆ ಫೋನ್

ಮಾಡಿದಳು. ಮನೆಯಲ್ಲೇ ಇದ್ದ ಬಷೀರ್ ತಕ್ಷಣ ಬಂದು

ಪರಿಸ್ಥಿತಿಯನ್ನರಿತು ಕಮಲಮ್ಮನ ಮನೆ ವರಾಂಡದಲ್ಲೇ ಹೆಂಡತಿಯೊಡನೆ ಕೂತರು. ಕಮಲಮ್ಮನವರು ಅಡುಗೆ ಮನೆಯಲ್ಲೇ ಉಳಿದರು.ಅದೇ ರಸ್ತೆಯಲ್ಲಿ ನಾಲ್ಕೈದು

ಜನ ಗಂಡಸರು ಎರಡು ಮೂರು ಬಾರಿ ಓಡಾಡಿದರು.

ಆ ರಸ್ತೆಗೆ ಆ ಹುಡುಗಿ ಬಂದಿರುವುದನ್ನು ನೋಡಿದ್ದಾರೆ

ಎಂಬುದು ಖಚಿತವಾಯಿತು. ಆದರೆ ಯಾರ ಮನೆಗೂ

ಹೋಗಿ ವಿಚಾರಿಸಲಿಲ್ಲ. “ವೆಂಕಟೇಶಣ್ಣ ಬೇರೆ ಮನೇಲಿ

ಇಲ್ಲ. ಹೆಣ್ಣುಮಕ್ಕಳು ಮಾತ್ರ ಇರೋದು. ಕಮಲಕ್ಕನೂ ಹೆದರಿಕೊಂಡೈತೆ. ಆ ಹುಡುಗಿ ಇವತ್ತು ರಾತ್ರಿ ನಮ್ಮ ಮನೆ

ಯಾಗೆ ಇರಲಿ. ಆ ಮೇಲೆ ಮುಂದೆ ಏನು ಮಾಡಬ‌ಹುದು ಅಂತ  ಯೋಚ್ನೆ  ಮಾಡಿದರಾಯಿತು”ಎಂದು ಬಷೀರ್

ಮೆಹರುನ್ನೀಸಾಗೆ ಹೇಳಿದರು.” ಆ ಹುಡುಗೀನ ನೋಡಿದ್ರೆ 

ಅಯ್ಯೋ ಅನ್ಸುತ್ತೆ. ಅವರ ದೊಡ್ಡಮ್ಮನ ಮನೆ ತಲುಪಿಸಿ

ಬಿಟ್ರೆ ನಮ್ಮ ಜವಾಬ್ದಾರಿ ಮುಗೀತು. ಮುಂದಿನದೆಲ್ಲಾ ಆ ಅಲ್ಲಾನ ಇಚ್ಛೆ ಹೆಂಗೈತೊ ಹಂಗಾಗುತ್ತೆ”  ಮಹರುನ್ನೀಸಾ

ಹೇಳಿದಳು. ಆಗ ಬಷೀರ್ ಅಂಗಡಿಯಲ್ಲಿದ್ದ ತನ್ನ ಇಬ್ಬರು

ಮಕ್ಕಳಿಗೆ ಫೋನ್ ಮಾಡಿ ದೊಡ್ಡ ಮಗನನ್ನು ತಕ್ಷಣವೇ

ಮನೆಗೆ ಬರುವಂತೆ ಹೇಳಿ, ಎರಡನೆ ಮಗನನ್ನು ತಮ್ಮದೇ

ಮನೆಯ ಬೀದಿಯ ಕೊನೆಯಲ್ಲಿ ನಿಂತು ಪರಿಸ್ಥಿತಿಯನ್ನು

ಗಮನಿಸಿ ತಮಗೆ ಫೋನ್ ಮಾಡುತ್ತಿರ ಬೇಕೆಂದು ತಿಳಿಸಿ

ವಿಷಯವನ್ನು ಗೋಪ್ಯವಾಗಿಡ ಬೇಕೆಂದು ಸೂಚಿಸಿದರು.

ಮೆಹರುನ್ನೀಸಳಿಗೆ ಬಾಗಿಲು ಹಾಕಿಕೊಳ್ಳಲು ಹೇಳಿ ಅಲ್ಲೇ

ಹತ್ತಿರವಿದ್ದ ಟೀ ಅಂಗಡಿಗೆ ಹೋಗಿಬರುವೆನೆಂದು ಹೇಳಿ ಅಪರಿಚಿತರನ್ನು ಗಮನಿಸಲು ಹೊರಟರು. ಒಳಗೆ ಬಂದ ಮೆಹರುನ್ನೀಸ ಅಡುಗೆ ಮನೆಯಲ್ಲಿ ನೋಡಲು ಸಹನಾ ಆ ಹುಡುಗಿಗೆ ಊಟಕ್ಕೆ ಬಡಿಸುತ್ತಿದ್ದಳು.ಆ ಹುಡುಗಿಯು ಗೋಧಿ ಬಣ್ಣದವಳಾಗಿದ್ದು ನೋಡಲು ಲಕ್ಷಣವಾಗಿದ್ದಳು ಆಗ ಸನ್ನೆ ಮಾಡಿ ಕಮಲಮ್ಮನನ್ನು ಕರೆದ ಮೆಹರುನ್ನೀಸ  ಹುಡುಗಿಯನ್ನು ತಮ್ಮ ಮನೆಗೆ ಕರ್ಕೊಂಡು ಹೋಗುವ ವಿಷಯವನ್ನು ತಿಳಿಸಿದಳು.ಈ ರಾತ್ರಿ ಕಮಲಮ್ಮನ ಮನೆ ವರಾಂಡದಲ್ಲಿ ತಮ್ಮ ದೂರದ ಸಂಬಂಧಿಯಾದ ಟ್ರಾಕ್ಟರ್ ಡ್ರೈವರ್ ನನ್ನು ಮಲಗಲು ಕಳಿಸುತ್ತೇನೆಂದು,ಭಯಬೀಳ ಬಾರದೆಂದು ಕಮಲಮ್ಮನಲ್ಲಿ ಧೈರ್ಯವನ್ನು ತುಂಬಿದಳು  ಸಹನಳ ಬಲವಂತಕ್ಕೆ ಅಲ್ಲೇ ಊಟ ಮಾಡಿ ಗಂಡ ಹಾಗು

ಮಕ್ಕಳಿಂದ ಫೋನ್ ಕರೆಗೆ ಕಾಯುತ್ತಾ ಕುಳಿತಳು. ಅರ್ಧ ಗಂಟೆಯ ನಂತರ ಬಷೀರ್ ಸಾಬ್ ಸಹನಾಳ ಮೊಬೈಲ್ಗೆ ಫೋನ್ ಮಾಡಿ ಅವರ ದೊಡ್ಡ ಮಗ ಮನೆಯಲ್ಲಿದ್ದಾನೆ

ತಕ್ಷ್ಮಣವೇ ಆ ಹುಡುಗಿಯನ್ನು ಮನೆಗೆ ಕರೆದುಕೊಂಡು ಹೋಗಲು ತಿಳಿಸಿದರು ಭಯಭೀತಳಾದ ಆ ಹುಡುಗಿಗೆ ಧೈರ್ಯವನ್ನು ತುಂಬಿದ ಕಮಲಮ್ಮ ಅವರ ಮನೆಯಲ್ಲಿ  ಭpಯ ಪಡಬೇಕಿಲ್ಲ ಎಂದು ಕಳಿಸಿದರು. ಹೋಗುವಾಗ ಅವಳು ಕಮಲಮ್ಮನಿಗೆ ಕೈಮುಗಿಯುತ್ತ ಕೃತಜ್ಞತೆಯನ್ನು ಹೇಳಿದಳು. ಮೆಹರುನ್ನೀಸ ಆ ಹುಡುಗಿಯೊಂದಿಗೆ ತಮ್ಮ ಮನೆಗೆ ಹೋದ ಮೇಲೆ ಬಷೀರ್ ಹಾಗೂ ಮಕ್ಕಳು ಮನೆ ಸೇರಿದರು.ಗಂಡುಮಕ್ಕಳಿಬ್ಬರು ತಮ್ಮ ಕೋಣೆ ಸೇರಿದರು ಮಹರುನ್ನೀಸ ಹಾಗು ಬಷೀರ್  ಹುಡುಗಿಯೊಡನೆ ಒಳ ಕೋಣೆಯನ್ನು ಸೇರಿ”ಭಯ ಪಡದೆ ಎಲ್ಲವನ್ನು ಹೇಳು. ಸುಳ್ಳು ಹೇಳಿದರೆ ನಿನಗೇನೆ ತೊಂದರೆಯಾಗುತ್ತದೆ. ನಿಜ ಹೇಳಿದರೆ ಮಾತ್ರವೇ ನಿಂಗೆ ಸಹಾಯ ಮಾಡಬಹುದು” ಎಂದು ಹೇಳಿ ಧೈರ್ಯತುಂಬಿದರು. ಆ ಹುಡುಗಿ ಹೇಳಲು ಶುರು ಮಾಡಿದಳು ಕುತೂಹಲ ತಡೆಯಲಾರದ ಇಬ್ಬರು ಮಕ್ಕಳು ಸಹ ಆಲ್ಲೇ ಬಂದು ಕೂತರು. ಅವಳ ಹೆಸರು ನಂದಿನಿ.ಚಳ್ಳಕೆರೆ ಹತ್ರ ಇರೋ ಸಾಣೆಕೆರೆ ಅವಳ ಊರು ಅವಳು ಚಿಕ್ಕ ಹುಡುಗಿ ಇರುವಾಗಲೆ ಅವಳ ತಾಯಿಯು ಬಸ್ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡಾಗಿನಿಂದ ತಾಯಿಲ್ಲದ ತಬ್ಬಲಿಯಾದರೆ ಅವಳಪ್ಪ ಎರಡನೆ ಮದ್ವೆ  ಆಗಿ ಮಲತಾಯಿಯನ್ನು ಕರೆತಂದಿದ್ದ. ಮಲತಾಯಿಯ ಮತ್ಸರದ ಪರಿಸರದಲ್ಲೇ ಬೆಳೆದ ನಂದಿನಿಯು ಹತ್ತನೆಯ ತರಗತಿಯನ್ನು ಮುಗಿಸಿದಳು.ಅಷ್ಟರಲ್ಲಿಯೇ ತಂದೆಯು ಹೃದಯಘಾತದಿಂದ ತೀರಿಕೊಂಡು ಏಕಾಂಗಿಯಾದಳು ತಂದೆಯ ಸಾವಿಗೆ ಬಂದ ನಂದಿನಿಯ  ದೊಡ್ಡಮ್ಮ ತನ್ನ ತಂಗಿ ಮಗಳನ್ನು ಕರೆದೊಯ್ಯುತ್ತೇನೆ ಎಂದಾಗ ಅವಳ

ಚಿಕ್ಕಮ್ಮ ಊರಿನ ಜನರು ತನ್ನನ್ನು ಆಡಿಕೊಳ್ಳುತ್ತಾರೆಂಬ ನೆಪ ಹೇಳಿ ಸುಮ್ಮನಿರಿಸಿದ್ದಳು. ಪಕ್ಕದ ಹಳ್ಳಿಯ ಪದವಿ ಪೂರ್ವ ಕಾಲೇಜಿಗೆ ಸೇರಿ ಓದಲು ಒಪ್ಪಿಗೆ ಕೊಟ್ಟಿದ್ದಳು. ಅವಳ ಒಬ್ಬನೇ ಮಗ  ಏಳನೆ ತರಗತಿಯಲ್ಲಿ ಓದುತ್ತಿದ್ದ. ಮೊದಲಿನಂತೆ ನಂದಿನಿಯನ್ನು ಅಸಹನೆಯಿಂದ ಕಾಣದೆ ಪ್ರೀತಿಯಿಂದ ಕಾಣುತ್ತಿದ್ದಳು. ಅದರೆ  ಅದರ ಹಿಂದಿರುವ ಮರ್ಮ ಬಯಲಾಗಲು ಬಹು ಕಾಲ ಬೇಕಾಗಲಿಲ್ಲ. ಮಲ ಮಗಳಾದ ನಂದಿನಿಯನ್ನು  ಹೆಂಡ್ತಿ ತೀರಿಕೊಂಡಿದ್ದ ತನ್ನ ವಯಸ್ಸಾದ ಪೋಲಿ ಅಣ್ಣನಿಗೆ ಕಟ್ಟಬೇಕೆಂಬುದು ಅವಳ ಹುನ್ನಾರವಾಗಿತ್ತು. ತಂದೆ ತೀರಿಕೊಂಡ  ವರ್ಷದೊಳಗೇ

ಮದ್ವೆ ಮಾಡಿದರೆ ಕನ್ಯಾದಾನದ  ಪುಣ್ಯ ತಂದೆಗೆ ಪ್ರಾಪ್ತಿ ಆಗುವ ನೆಪ ಹೇಳಿ ನಡೆದ ಮದುವೆಯ ಮಾತುಕತೆಯು ನಂದಿನಿಯ ಕಿವಿಗೆ ಬಿದ್ದು ಮನೆಯಿಂದ ಓಡಿ ಹೋಗುವ ಸಾಹಸಕ್ಕೆ ಕೈ ಹಾಕಿದ್ದಳು. ಮಾರನೆಯ ದಿನವೆ ಕಾಲೇಜಿಗೆ ಬಂದು ಈ ವಿಷಯವನ್ನು  ತಿಳಿಸಲು ತನ್ನ ದೊಡ್ಡಮ್ಮನಿಗೆ  ಫೋನ್ ಮಾಡಿ  ತನ್ನನ್ನು ಕರೆದುಕೊಂಡು ಹೋಗಲು ಬಾ  ಎಂದು ಕೇಳಿಕೊಂಡಳು. ತಾನು ಅಲ್ಲಿಗೆ ಹೋದರು ಅದು 

ಸಾಧ್ಯವಾಗದ ಕೆಲಸವೆಂದು ಅರಿತ ಅವಳ ದೊಡ್ಡಮ್ಮನು  ಮನೆಬಿಟ್ಟು ಬಂದು ತನ್ನೊಡನಿರಲು ಹೇಳಿದಳು. ಆ ದಿನ

ರಾತ್ರಿಯೇ ತನ್ನ ಚಿಕ್ಕಮ್ಮನಿಗೆ ಗೊತ್ತಾಗದಂತೆ ತನ್ನಎರಡು

ಜತೆ ಬಟ್ಟೆ ಹಾಗು ತಾನು ಕೊಡಿಟ್ಟಿದ್ದ ದುಡ್ಡನ್ನು ಸ್ಕೂಲ್

ಬ್ಯಾಗ್ ನಲ್ಲಿಟ್ಟು ಕೊಂಡು ಎಂದಿನಂತೆ ಕಾಲೇಜಿಗೆ ಬಂದು

ಬಸ್ ಬರುವ ವೇಳೆಗೆ ಸರಿಯಾಗಿ ತನಗೆ ಹೊಟ್ಟೆನೋವು

ಆದ್ದರಿಂದ ಮನೆಗೆ ಹೋಗುತ್ತೇನೆಂದು ತನ್ನಗೆಳತಿಯರಿಗೆ ಹೇಳಿ ಬಸ್ ಹತ್ತಿದ್ದಳು. ಎರಡು ಗಂಟೆಯ ತನಕ ವಿಷಯ  ಗೊತ್ತಾಗಿಲ್ಲದಿದ್ದರೆ  ಇಷ್ಟು ಹೊತ್ತಿಗೆ ಅವಳು ದೊಡ್ಡಮ್ಮನ ಮನೆಯಲ್ಲಿರುತ್ತಿದ್ದಳು. ಆದರೆ ಹೇಗೋ ವಿಷಯ ತಿಳಿದು

ಅವಳ ಚಿಕ್ಕಮ್ಮನ ಅಣ್ಣ ಹಿರಿಯೂರು ಬಸ್ ಸ್ಟಾಂಡ್ನಲ್ಲಿ  ಕಾದಿದ್ದನು. ಬಸ್ ಕಿಟಕಿಯಿಂದಲೇ ಅವನನ್ನು ನೋಡಿದ

ನಂದಿನಿ ಹೆದರಿ ಬಸ್ ನಿಂದ  ಇಳಿಯುವ ಜನಗಳ ಮಧ್ಯೆ

ನುಸುಳಿ ಇಳಿದು ಸರಸರನೆ ಹೋಗುವಾಗ ಅವನ ಕಣ್ಣಿಗೆ ಬಿದ್ದಳು. ” ಏ ನಂದಿನಿ” ಎಂದು ಕೂಗುತ್ತ ಇವಳ ಕಡೆಗೇ

ಬರತೊಡಗಿದಾಗ  ಅವಳು ಅಲ್ಲಿಂದ  ಓಡಿ ಬೇರೆ ಬೀದಿಗೆ ಬಂದು ಅಲ್ಲೇ ಇದ್ದ ನರ್ಸಿಂಗ್ ಹೋಮ್ ಒಳಗೆ ಹೋಗಿ ಕಾದು ಕುಳಿತಿದ್ದ ರೋಗಿಗಳ  ಮಧ್ಯೆ ಕುಳಿತಳು.  ಅವನು ಒಳಗೆ ಬರುತ್ತಿರುವುದನ್ನು ನೋಡಿದ ನಂದಿನಿ ಅಲ್ಲಿ ಕಂಡ ಲೇಡೀಸ್ ಟಾಯ್ಲೆಟ್ ಗೆ ಹೋದಳು. ಸ್ವಲ್ಪ ಹೊತ್ತು ಅಲ್ಲೇ

ಇದ್ದು ಹೊರ ಬಂದಾಗ ಅಲ್ಲಿ ಕೂತಿದ್ದ ಹೆಂಗಸು “ನಿಮ್ಮನ್ನೆ

 ಏನೋ ಯಾರೋ ಒಬ್ಬ ಗಂಡಸು ಕೇಳಿಕೊಂಡು ಬಂದ

ಹಾಗಿತ್ತು” ಎಂದಾಗ ಎದೆಯಲ್ಲಿ ನಡುಕ ಶುರುವಾದರೂ ತೋರಗೊಡದೆ ” ನಮ್ಮ ಚಿಕ್ಕಮ್ಮ ನಿಗೆ ಹುಷಾರಿಲ್ಲ ಇಲ್ಲಿಗೆ ಬರ್ತಿನಿ ಅಂದಿದ್ದಾರೆ  ಅದಕ್ಕೆ ಕಾಯ್ತಾ ಇದೀನಿ” ಎಂದು

ಸುಳ್ಳು ಹೇಳಿ ಅಲ್ಲೆ ಕೂತಳು. ಆ ಹೆಂಗಸು ಎದ್ದು ಹೋದ

ನಂತರ ನರ್ಸಿಂಗ್ ಹೋಂನ ಇನ್ನೊಂದು ಬಾಗಿಲಿನಿಂದ ಹೊರ ಬಂದು ಸ್ವಲ್ಪ ದೂರ ಹುಷಾರಾಗಿ ಬಂದಳು ನಿಮ್ಮ ಮನೆ ಕಡೆ ರಸ್ತೆಗೆ ಬಂದಾಗ ದೂರದಿಂದ ನನ್ನನ್ನು ನೋಡಿ

ಹಿಡಿಯಲು ಬೈಕ್ ಹತ್ತಿದ. ಇನ್ನು ರಸ್ತೆಯಲ್ಲಿದ್ದರೆ ಹಿಡಿದೇ

 ಬಿಡ್ತಾರೆ ಅಂತ ಆ  ಮನೆಯೊಳಗೆ ಓಡಿಹೋದೆ. “ಆಂಟಿ, ನಮ್ಮ ದೊಡ್ಡಮ್ಮನಿಗೆ ಫೋನ್ ಮಾಡ್ರಿ”ಎನ್ನುತ್ತ ನಂಬರ

ಕೊಟ್ಟಳು. ಆಗ ಮೆಹರುನ್ನೀಸ ಫೋನ್ ಮಾಡಿ ಅವಳಿಗೆ

 ಕೊಟ್ಟರು. ಅಳುತ್ತಾ ತನ್ನ ಪರಿಸ್ಥಿತಿಯನ್ನು ಹೇಳಿಕೊಂಡು

ಅತ್ತುಬಿಟ್ಟಳು. ನಂತರ ಮೆಹರುನ್ನೀಸಳು  ಸಹಾ ಅವರ  

ಜತೆ  ಮಾತನಾಡಿ”ನಮ್ಮಮನೆಯಲ್ಲಿಯಾವ ತೊಂದ್ರೆನು ಆಗಲ್ಲ.ನೀವೇನೂ ಚಿಂತೆ ಮಾಡಬೇಡ್ರಿ ಎಂದು ಹೇಳುತ್ತ ನೀವೇ ಇಲ್ಲಿಗೆ ಬಂದು ನಿಮ್ಮ ಹುಡುಗೀನ ಕರ್ಕೊಂಡು  ಹೋಗ್ತೀರ.ಯಾವುದಕ್ಕು ನೀವು ಫೋನ್ ಮಾಡಬೇಕು”

ಎಂದು ಹೇಳಿದಳು. ಆಗ ಅವರ ದೊಡ್ಡಮ್ಮ “ದೇವರಂಗೆ ಆ ಹುಡುಗೀನ ಕಾಪಾಡಿದೀರ.ಆ ದೇವ್ರು ನಿಮ್ಮ ಮನೇನ ತಣ್ಣಗಿಟ್ಟಿರಲಿ ತಾಯಿ. ನನ್ನ ತಂಗಿ ಇದ್ದಿದ್ರೆ ಆ ಹುಡುಗಿಗೆ

ಇಂಥ ಕಷ್ಟ ಬರ್ತಿರ್ಲಿಲ್ಲ. ತಂದೆ ತಾಯಿ ಇಲ್ಲದ ಇಂತಹ ತಬ್ಬಲಿ ಮಕ್ಕಳನ್ನು ಆ ದೇವ್ರೆ ಕಾಪಾಡಬೇಕು.ನಾವೇನು

ತಿನ್ನುತ್ತೀವೂ ಅದನ್ನೆ ಅ ಹುಡುಗಿಗೆ ಒಂದು ತುತ್ತು ಹಾಕಿ

ಸಾಕ್ತೀನಿ”ಎನ್ನುತ್ತತಂಗಿ ಮಗಳ ಕಷ್ಟಕ್ಕೆ ಮರುಗಿ ಕಣ್ಣೀರು

ಹಾಕಿದಳು.ಅಲ್ಲಿಯವರೆಗು ಸುಮ್ಮನಿದ್ದ ಶಫೀಕ್ “ಅಮ್ಮ

ಬೆಳಿಗ್ಗೆ ಪೋಲೀಸ್ ಗೆ ಹ್ಯಾಂಡ್ ಒವರ್ ಮಾಡೋಣ”” ಆಗ  ಬಷೀರ್ ” ಪೋಲೀಸ್  ಗಿಲೀಸ್ ಸಹವಾಸ ಬೇಡ

ಮತ್ತೆ ಅಲ್ಲಿ ಅವರ ಚಿಕ್ಕಮ್ಮ ನಾಟಕ ಆಡಿ ಕರ್ಕೋಂಡು

ಹೋಗ್ಬಹುದು. ನನಗೆ ತಿಳಿದಂತೆ ಅವರ  ದೊಡ್ಡಮ್ಮನ

ಹತ್ರ ಬಿಡದು ಒಳ್ಳೇದು. ನಾನೂ, ನಿಮ್ಮಮ್ಮ ಕರ್ಕೊಂಡು

ಹೋಗಿ ತುಮಕೂರಿಗೆ ಬಿಟ್ಟು ಬರ್ತಿನಿ. ಮುಂದಿನದೆಲ್ಲಾ ಅವರಿಗೆ ಬಿಟ್ಟಿದ್ದು” ಎಂದು  ತೀರ್ಮಾನವನ್ನು ಕೊಟ್ಟರು.

ಅದಕ್ಕೆ ಎಲ್ಲರೂ ಒಪ್ಪಿದರು. ಆಗ ನಂದಿನಿ ” ಆಂಟಿ ನಿಮ್ಮ

ಈ ಉಪಕಾರನ  ಈ ಜನ್ಮದಲ್ಲಿ ಯಾವತ್ತೂ ಮರೆಯಲ್ಲ”  

ಎನ್ನುತ್ತಾ ಕೈಮುಗಿದಳು.ಆಗ ಮಹರುನ್ನೀಸ “ನಂದಿನಿ, ನಿಮ್ಮ ದೊಡ್ಡಮ್ಮನ ಗಂಡ ಏನು ಮಾಡ್ತಾರಮ್ಮ” “ನಮ್ಮ 

ದೊಡ್ಡಪ್ಪ ಗೌರ್ಮೆಂಟ್ ಸ್ಕೂಲ್ನ್ ಲ್ಲಿ ಅಟೆಂಡರ್ ಆಗವ್ರೆ.

ನಮ್ಮ ದೊಡ್ಡಮ್ಮ ಮನೇಲೇ ಬಟ್ಟೆ ಹೊಲೀತಾರೆ. ಅವ್ರಿಗೆ

ಇಬ್ಬರು ಗಂಡು ಮಕ್ಕಳಿದಾರೆ.” ಆಗ ಬಷೀರ್ ” ನಿಮ್ಮಪ್ಪ

ಏನು ಕೆಲಸ ಮಾಡ್ತಿದ್ದರಮ್ಮ” “ನಮ್ಮಪ್ಪ ಪೆಟ್ಟಿಗೆ ಅಂಗಡಿ

ಇಟ್ಕೊಂಡಿದ್ರು. ಈಗ ನಮ್ಮ ಚಿಕ್ಕಮ್ಮನೇ ನಡೆಸ್ತರೆ. ಮನೆ

ಮುಂದೆನೇ ಅಂಗಡಿ  ಇರೋದು”ಎಂದಳು.ಅವಳ ಕೈಗೆ ಫೋನ್ ಕೊಟ್ಟು “ನಾವು ನಾಳೆ ಬರ್ತಿದೀವಿ ಅಂತ ನಿಮ್ಮ

ದೊಡ್ಡಮ್ಮನಿಗೆ ಪೋನ್ ಮಾಡಿ ಹೇಳಮ್ಮ” ಎಂದು ಹೇಳಿ

ಮಲಗಲು ಹೋದರು. ಮೆಹರುನ್ನೀಸ ಅವಳನ್ನು ತಮ್ಮ

ರೂಮಿನಲ್ಲಿಯೇ ಮಲಗಲು ಕರೆದುಕೊಂಡು ಹೋದರು.

ಮಾರನೆ ದಿನ ಬೆಳಿಗ್ಗೆ  ತಿಂಡಿ ತಿಂದ ಮೇಲೆ ತುಮಕೂರಿಗೆ

ಹೊರಟರು .ಮೆಹರುನ್ನೀಸ ತಾನು ಬುರ್ಖಾ ಹಾಕಿದ್ದಲ್ಲದೆ

ನಂದಿನಿಗೂ ಬುರ್ಖಾ ಹಾಕಿದರು. ಆಗ ಅಕ್ರಂ ” ಸಿಸ್ಟರ್  ಈಗ ನಿಮ್ಮ ಹೆಸರು ನಂದಿನಿ ಅಲ್ಲ ನಸೀಮುನ್ನೀಸ ಅಂತ ನೆನಪಿರಲಿ” ಎಂದಾಗ ಎಲ್ಲರೂ ನಕ್ಕರು.ಇದು ಎರಡನೆ

ಮಗ  ಅಕ್ರಂ ಭಾಷನ ಸಲಹೆಯಾಗಿತ್ತು. ಆನಗತ್ಯವಾಗಿ ಯಾವ ಗೊಡವೆಗಳನ್ನು ಮೈ ಮೇಲೆ ಹಾಕಿಕೊಳ್ಳಬಾರದು ಎಂಬುದೇ ಇದರ ಉದ್ದೇಶ .ಬಷೀರ್ ಮಗನ ಮಾತನ್ನು ಮೆಚ್ಚಿದರು  ಹೋಗುವ ಮುಂಚೆ ಇಬ್ಬರು ಕಮಲಮ್ಮನಿಗೆ  ವಿಷಯ ತಿಳಿಸಿ ಬರಲು ಹೋದರು. ಆಗ ನಂದಿನಿಯು ಸಹನಳಿಗೆ ಕೃತಜ್ಞತೆಗಳನ್ನು ತಿಳಿಸಿ ಕಮಲಮ್ಮನ ಪಾದಕ್ಕೆ  ನಮಸ್ಕರಿಸಿ ಆಶಿರ್ವಾದವನ್ನು ಪಡೆದಳು .ಮನೆಯಿಂದ ಆಟೋದಲ್ಲೆ ಬಸ್ ಸ್ಟಾಂಡ್ ನ್ನು ತಲುಪಿ ತುಮಕೂರಿನ ಬಸ್ ಹತ್ತಿದರು. ಉರ್ದು ಬಾರದ ನಂದಿನಿಯೊಂದಿಗೆ ಹೆಚ್ಚು ಮಾತನಾಡ ಬೇಡವೆಂದು ಬಷೀರ್ ಹೇಳಿದ್ದರಿಂದ

ಪಯಣ ಹೆಚ್ಚುಕಡಿಮೆ ಮೌನವಾಗಿಯೆ ಸಾಗಿತು. ಆದರೆ

ನಂದಿನಿ ಕಪ್ಪುಬುರ್ಖಾದೊಳಗೆ ಕಣ್ತೆರೆದುಕೊಂಡೇ ತನ್ನ ಪ್ರೀತಿಯ ದೊಡ್ಡಮ್ಮನ ಮನೆಯಲ್ಲಿ ತಾನು ವಿದ್ಯಾಭ್ಯಾಸ

ಮುಂದುವರಿಸುವ ರಂಗು ರಂಗಿನ ಕನಸು ಕಾಣುತ್ತಿದ್ದಳು

ತುಮಕೂರನ್ನು ತಲುಪಿದ ನಂತರ ಅಲ್ಲಿಂದ ನಂದಿನಿಯ ದೊಡ್ಡಮ್ಮನಿಗೆ ಫೋನ್ ಮಾಡಿ ಮನೆಯ ವಿಳಾಸವನ್ನು ಕೇಳಿ ತಿಳಿದು ಹೊರಟರು ದೊಡ್ಡಮ್ಮನನ್ನು ಕಂಡ ತಕ್ಷಣ ನಂದಿನಿಯು ಓಡಿ ಹೋಗಿ ಅವರನ್ನು ಅಪ್ಪಿಕೊಂಡು ಅಳ

ತೊಡಗಿದಳು.ಅದನ್ನು ನೋಡುತ್ತ ನಿಂತ ಮೆಹರುನ್ನೀಸಳ ಕಣ್ಣಾಲಿಗಳೂ ತುಂಬಿ ಬಂದವು ಒಂದು ಕ್ಷಣದಲ್ಲಿ ಎಚ್ಚೆತ್ತ ಅವಳು”ಎಲ್ಲ ಒಳ್ಳೆದಾಯ್ತು ಬಿಡ್ರಿ ಇನ್ಯಾಕೆ ಸಂಕಟ””ಆಗ ಎಚ್ಚೆತ್ತ ಅವರ ದೊಡ್ಡಮ್ಮ ಮೆಹರುನ್ನೀಸಳ  ಕೈ ಹಿಡಿದು

ಕಣ್ಣಿಗೊತ್ತಿಕೊಂಡು “ನೀವು ಆಶ್ರಯ ಕೊಡದಿದ್ದರೆ ನಮ್ಮ ಹುಡುಗಿ ಗತಿ ಏನಾಗ್ತಿತ್ತೋ ಏನೋ. ಆ ದೇವ್ರೇ ನಿಮ್ಮ ರೂಪದಲ್ಲಿ ಬಂದವನೆ”ಎಂದು ದಂಪತಿಗಳ ಕಾಲಿಗೆರಗಿ ನಮಸ್ಕರಿಸಿದಳು. ಅಷ್ಟರಲ್ಲಿ ನಂದಿನಿಯ ದೊಡ್ಡಪ್ಪನು ಬಂದು ಬಷೀರ್ ಅವರ  ಕೈ ಹಿಡಿದು “ನಿಮ್ಮಂಥವರು ಇನ್ನು ಈ ಪ್ರಪಂಚದಲ್ಲಿ ಇರೋದಕ್ಕೇನೆ ಇನ್ನು ಮಳೆ ಬೆಳೆ ಎಲ್ಲ ಆಗ್ತಿರೋದು. ಎಷ್ಟೊಂದು ರಿಸ್ಕ್ ತಗೊಂಡಿದೀರ. ನಿಮಗೂ ನಿಮ್ಮ ಮಕ್ಕಳಿಗು ಆ ದೇವರು ಸದಾ ಒಳ್ಳೇದು ಮಾಡಲಿ”ಎಂದು ಕೈಮುಗಿದು ಹೇಳಿದಾಗ ಬಷೀರ್ರವರು  ಅವರ ಬೆನ್ನು ತಟ್ಟಿದರು. ರಾತ್ರಿ ನಂದಿನಿಯ ಚಿಕ್ಕಮ್ಮನು

ಅವರಿಗೆ ಫೋನ್ ಮಾಡಿದ ವಿಷಯವನ್ನು ತಿಳಿಸಿದರು ನಂದಿನಿ ಕಾಲೇಜ್ ಬಿಟ್ಮೇಲೆ ಮನೆಗೆ ಬಂದಿಲ್ಲ ಇಲ್ಲಿಗೇ ಬಂದಿದ್ದಾಳಾ ಎಂದು ಕೇಳಲು ನಂದಿನಿಯ  ದೊಡ್ಡಪ್ಪ ಅವಳಿಗೇನಾದರೂ ತೊಂದರೆ  ಆದರೆ ನಿಮ್ಮ ಮೇಲೇನೆ ಪೋಲೀಸ್ ಕಂಪ್ಲೆಂಟ್ ಕೊಡುವೆ ಎಂದಾಗ ಯಾವನೋ ಜೊತೆಗೆ ಓಡಿ ಹೋದರೆ ಅವಳು ನೀನು ನನ್ಮೇಲೆ ಯಾಕೆ ತಲೆಕೆಟ್ಟು ಕಂಪ್ಲೆಂಟ್ ಕೊಡುತೀಯ ಎಂದು ಕೆಟ್ಟಮಾತನ್ನ

ಆಡಿದಳೆಂದು ಹೇಳಿ ಮುಂದೆಂದೂ ನಂದಿನಿಯ ಸುದ್ದಿಗೆ

ಬರದಂತೆ ಲಾಯರ್ ಹತ್ರ ಮಾತಾಡಿ ವ್ಯವಸ್ಥೆ ಮಾಡುವೆ ಎಂದು ತಿಳಿಸಿದರು.” ನಿಮ್ಮ ಹುಡುಗೀನ  ತಂದು ನಿಮ್ಮ ಕೈಗೆ ಒಪ್ಪಿಸಿದೀವಿ.ಇನ್ನು ನಮ್ಮ ಜವಾಬ್ದಾರಿ ಮುಗೀತು  

ಆ ಹುಡುಗಿಗೇ ಏನೂ ತೊಂದರೆ ಆಗದಂತೆ ನೋಡ್ಕೊಳ್ರಿ

ಅವರೇನಾದರು ಹುಡುಗಿಗೆ ತೊಂದರೆ ಕೊಟ್ಟರೆ ಸುಮ್ಮನೆ ಪೋಲೀಸ್ ಕಂಪ್ಲೆಂಟ್ ಕೊಟ್ಟು ಬಿಡ್ರಿ.ಇನ್ನು ನಮ್ಮ ಕೆಲಸ ಆಯ್ತು. ನಾವಿನ್ನು ಹೊರಡುತ್ತೇವೆ”.”ಎಲ್ಲಾದರೂ ಉಂಟೆ

ನೀವು ಊಟ ಮಾಡದೇ ಹೋಗಂಗಿಲ್ಲ”ಎಂದ ದಂಪತಿಗೆ 

” ಇವತ್ತಿನ ಕೆಲಸನೆಲ್ಲಾ ಬಿಟ್ಟು ಬಂದಿದೀವಿ. ನಾವು ಈಗ ಹೋಗ್ಲೆಬೇಕು.ಟೀ ಕೊಟ್ಟರೆ ಸಾಕು ಕುಡಿದು ಹೊರಡ್ತೀವಿ”

ನಂದಿನಿಯ ದೊಡ್ಡಮ್ಮ ಟೀ ಕೊಡುತ್ತ”ನಮಗೆ ಹೆಣ್ಮಕ್ಕಳು

ಇಲ್ಲ.ಇನ್ಮುಂದೆ ಇವಳೇ ನಮ್ಮ ಮಗಳು”ಎಂದಳು. ಟೀ

ಕುಡಿದು ಹೊರಟು ನಿಂತಾಗ ನಂದಿನಿ ಅವರಿಬ್ಬರ ಕಾಲಿಗೆ

ನಮಸ್ಕರಿಸಿದಾಗ ಆ ಅಲ್ಲಾ ನಿನಗೆ ಒಳ್ಳೆಯದು ಮಾಡಲಿ

ಎಂದು ಆಶೀರ್ವದಿಸಿ ಹೊರಟರು.ಅವರನ್ನು ಕಣ್ತುಂಬಿಸಿ 

ಕೊಳ್ಳುವಳೇನೋ ಎಂಬಂತೆ ನಂದಿನಿ ಬಾಗಿಲಲ್ಲಿ ನಿಂತು ಅವರಿಬ್ಬರೂ ಕಣ್ಮರೆಯಾಗುವ ತನಕ ಕೈ ಬೀಸುತ್ತಿದ್ದಳು

***************************************************************

About The Author

1 thought on “ಕೊಲ್ವ ಕೈಯೊಂದಾದರೆ ಕಾಯ್ವವು ನೂರು ( ಕಥೆ )”

Leave a Reply

You cannot copy content of this page

Scroll to Top