ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ನಾದಾನುಸಂಧಾನ (ಅಂಕಣ ಬರಹಗಳ ಸಂಗ್ರಹ) ಪುಸ್ತಕದ ಹೆಸರು: ನಾದಾನುಸಂಧಾನ (ಅಂಕಣ ಬರಹಗಳ ಸಂಗ್ರಹ)ಲೇಖಕರು: ಆಶಾಜಗದೀಶ್ಪುಟಗಳು: 200ಬೆಲೆ: 220/-ಪ್ರಕಾಶನ: ಸಾಹಿತ್ಯ ಲೋಕ ಪ್ರಕಾಶನ, ಬೆಂಗಳೂರುಪ್ರಕಾಶಕರ ಹೆಸರು ಮತ್ತು ದೂರವಾಣಿ: ರಘುವೀರ್, 9945939436 ಕವಯಿತ್ರಿ, ಅಂಕಣಕಾರ್ತಿ ದೀಪಾ ಹಿರೇಗುತ್ತಿ ಯವರು ಹೀಗೆ ಬರೆಯುತ್ತಾರೆ: ಆಶಾ ನಮ್ಮ ನಡುವಿನ ಪ್ರತಿಭಾವಂತ ಲೇಖಕಿ. ಕಥೆ, ಕವನ, ಅಂಕಣ ಈ ಮೂರೂ ಪ್ರಕಾರಗಳಲ್ಲಿ ಯಶಸ್ವಿಯಾಗಿ ಬರೆಯುತ್ತಿದ್ದಾರೆ. ತಮ್ಮ ಶಾಲೆ ಮತ್ತು ಕೌಟುಂಬಿಕ ಜವಾಬ್ದಾರಿಗಳ ನಡುವೆ ನಿರಂತರವಾಗಿ ಬರೆಯುತ್ತಿರುವ ಆಶಾ ಅಚ್ಚರಿ ಹುಟ್ಟಿಸುತ್ತಾರೆ. “ನಾದಾನುಸಂಧಾನ” ಎಂಬ ಈ ಬರಹಗಳ ಗುಚ್ಛದ ವಿಷಯ ವೈವೀಧ್ಯತೆ ಅವರ ಓದಿನ ವಿಸ್ತಾರಕ್ಕೆ ಸಾಕ್ಷಿ. ಹಿರಿಯ, ಸಮಕಾಲೀನ ಬರಹಗಾರರ ಲೇಖನ, ಕಥೆ, ಕಾದಂಬರಿ, ಕವಿತೆಗಳನ್ನು ಓದಿ ವಿಶ್ಲೇಷಿಸಿ ಅವುಗಳ ಬಗ್ಗೆ ಬಹು ಆಪ್ತವಾಗಿ ಬರೆಯುತ್ತಾರೆ. ಜೊತೆಗೆ ತಮ್ಮ ಅನುಭವಗಳನ್ನು ದಾಖಲಿಸುತ್ತಾ ಒಂದು ವಿಶಿಷ್ಟ ಎನ್ನಬಹುದಾದ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಆಶಾ ಓರ್ವ ಸ್ನೇಹಮಯಿ ಸಹೃದಯಿ ಕವಯಿತ್ರಿ ಎಂಬುದನ್ನು ಸಾಬೀತುಪಡಿಸುವ ಗದ್ಯ ಅವರದ್ದು…. *************************************

ಪುಸ್ತಕ ಪರಿಚಯ Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು

ಚರ್ಚೆ ಕಸಾಪಗೆ ಮಹಿಳಾ ಅಧ್ಯಕ್ಷರು ಒಂದು ಚರ್ಚೆ ಮೆಲ್ಕಂಡವಿಷಯವಾಗಿ ಸಂಗಾತಿ ಪತ್ರಿಕೆ ಕನ್ನಡದ ಬರಹಗಾರರಿಗೆ ಕೆಲವು ಪ್ರಶ್ನೆಗಳನ್ನು ಹಾಕಿತ್ತು ಅದಕ್ಕೆ ಬಂದ ಉತ್ತರಗಳನ್ನು ಇಲ್ಲಿ ಒಂದೊಂದಾಗಿಪ್ರಕಟಿಸಲಾಗುತ್ತಿದೆ. ಸಂಗಾತಿ ಕೇಳಿದ ಪ್ರಶ್ನೆಗಳು ಪ್ರಶ್ನೆ ಒಂದು,ಇದಕ್ಕಿರುವ ಕಾರಣಗಳೇನು?ಇದನ್ನು ಹೇಗೆ ವಿಶ್ಲೇಷಿಸುತ್ತೀರಿ? ಪ್ರಶ್ನೆ ಎರಡು,ಸಮಾನತೆಯ ಈ ಯುಗದಲ್ಲಿ ಮಹಿಳೆಯೊಬ್ಬರು ಅಧ್ಯಕ್ಷರಾಗುವುದು ಸಾದ್ಯವೆಂದು ನಂಬುವಿರಾ?ಸಾದ್ಯವೆಂದಾದರೆ ಹೇಗೆ? ಪ್ರಶ್ನೆ ಮೂರು,ಮಹಿಳೆಯೊಬ್ಬರು ಅಧ್ಯಕ್ಷರಾಗದಂತೆ ತಡೆಯುವ ಶಕ್ತಿಗಳನ್ನು ಹೇaaಗೆ ಎದುರಿಸಬಹುದು? ಪ್ರಶ್ನೆ ನಾಲ್ಕು, ಮಹಿಳೆಗೆ ಈ ಅಧ್ಯಕ್ಷಸ್ಥಾನ ಮೀಸಲಾತಿ ರೂಪದಲ್ಲಿ ಸಿಗಬೇಕೆಂದು ಬಯಸುವಿರಾ ಇಲ್ಲ ಚುನಾವಣೆಯ ಮೂಲಕವೇ ದೊರೆಯಬೇಕೆಂದು ಬಯಸುವಿರಾ? ಪ್ರಶ್ನೆ ಐದು, ಈ ನಿಟ್ಟಿನಲ್ಲಿ ಮಹಿಳಾ ಅಧ್ಯಕ್ಷರ ಪರ ಒಲವಿರುವ ಪುರುಷ ಮತ್ತು ಮಹಿಳೆಯರು ಯಾವ ರೀತಿಯ ಹೆಜ್ಜೆಗಳನ್ನು ಇಡಬೇಕು ವಿನುತಾ ಹಂಚಿನಮನಿ ಸ್ಥಾಪನೆಯಾಗಿ ಶತಮಾನಗಳಾದರು ರಾಜ್ಯ ಕಸಾಪಗೆ ಮಹಿಳೆಯೊಬ್ಬರು ಇದುವರೆಗು ಅದ್ಯಕ್ಷರಾಗಿಲ್ಲ‌. ಪ್ರಶ್ನೆ ಒಂದು,ಇದಕ್ಕಿರುವ ಕಾರಣಗಳೇನು?ಇದನ್ನು ಹೇಗೆ ವಿಶ್ಲೇಷಿಸುತ್ತೀರಿ? ಮಹಿಳೆಯರ ಅನಾಸಕ್ತಿ, ಹಿಂಜರಿತ ಮೊದಲನೆಯದಾದರೆ, ಪುರುಷರ ಅಧಿಕಾರಿಶಾಹಿ ಪ್ರವೃತ್ತಿ ಎರಡನೆಯದು. ಮಹಿಳೆ ಯಾವತ್ತೂ ಹೋರಾಟ ಮಾಡಿಯೇ ಹಕ್ಕುಗಳನ್ನು ಪಡೆದಿರು ಇತಿಹಾಸವಿರುವಾಗ ಈಗ ಈ ಕ್ಷೇತ್ರದಲ್ಲಿ ಅಂತಹ ಕಾಲ ಬಂದಿದೆ. ಮನೆ ಮಕ್ಕಳು ಅಂತ ತನ್ನ ಚಿಪ್ಪಿನಲ್ಲಿ ಜವಾಬ್ದಾರಿಯನ್ನು ನಿರ್ವಹಿಸುವವಳು ಹೊರಗಿನ ಲೋಕದಲ್ಲಿಯೂ ಸಮಾನತೆಯನ್ನು ಕೇಳುತ್ತಿರುವುದು ಒಳ್ಳೆಯ ಬೆಳವಣಿಗೆ. ಪ್ರಶ್ನೆ ಎರಡು,ಸಮಾನತೆಯ ಈ ಯುಗದಲ್ಲಿ ಮಹಿಳೆಯೊಬ್ಬರು ಅದ್ಯಕ್ಷರಾಗುವುದು ಸಾದ್ಯವೆಂದು ನಂಬುವಿರಾ?ಸಾದ್ಯವೆಂದಾದರೆ ಹೇಗೆ? ಸಮಾನತೆಯ ಈ ಯುಗದಲ್ಲಿ ಮಹಿಳೆ ಅಧ್ಯಕ್ಷೆಯಾಗುವುದು ಹೆಚ್ಚು ಸೂಕ್ತ. ಸಾಹಿತ್ಯದಂತಹ ಸೃಜನಶೀಲ ಕ್ಷೇತ್ರದಲ್ಲಿ ಮಹಿಳೆಯ ಭಾವನಾತ್ಮಕ ವ್ಯಕ್ತಿತ್ವ ಹೆಚ್ಚು ಕ್ರಿಯಾಶೀಲತೆಯನ್ನು ಪಡೆಯಬಹುದು. ಅವಳ ಹೋರಾಟದ ಮನೋಭಾವ, ಪ್ರಾಮಾಣಿಕತೆ ಕನ್ನಡ ಸಾಹಿತ್ಯ ಲೋಕದ ಸ್ತ್ರೀಯರಿಗೆ ನ್ಯಾಯ ಒದಗಿಸಬಹುದು. ಪ್ರಶ್ನೆ ಮೂರು,ಮಹಿಳೆಯೊಬ್ಬರು ಅದ್ಯಕ್ಷರಾಗದಂತೆ ತಡೆಯುವ ಶಕ್ತಿಗಳನ್ನು ಹೇಗೆ ಎದುರಿಸಬಹುದು? ಮಹಿಳೆ ಅಧ್ಯಕ್ಷೆಯಾಗದಂತೆ ತಡೆಯುವ ಸ್ವಾರ್ಥಶಕ್ತಿಗಳಿಗೆ ಮಹಿಳೆಯರ ಕೃತ್ತುತ್ವ ಶಕ್ತಿಯನ್ನು ಮನವರಿಕೆ ಮಾಡಿಕೊಡಬೇಕು. ಅವಳ ಸಾಹಿತ್ಯದ ಜ್ಞಾನ, ಸಂಘಟನಾ ಶಕ್ತಿ, ನ್ಯಾಯಪರತೆಗಳನ್ನು ಸಾಕ್ಷ್ಯಸಹಿತ ತೋರಿಸಿಕೊಡಬೇಕು. ಅದಕ್ಕಾಗಿ ಮಹಿಳೆ ತನ್ನ ಸಮಯ ಮೀಸಲಾಗಿಡಬೇಕು. ಪ್ರಶ್ನೆ ನಾಲ್ಕು, ಮಹಿಳೆಗೆ ಈ ಅದ್ಯಕ್ಷಸ್ಥಾನ ಮೀಸಲಾತಿ ರೂಪದಲ್ಲಿ ಸಿಗಬೇಕೆಂದು ಬಯಸುವಿರಾ ಇಲ್ಲ ಚುನಾವಣೆಯ ಮೂಲಕವೇ ದೊರೆಯಬೇಕೆಂದು ಬಯಸುವಿರಾ? ಮಹಿಳೆಗೆ ಅಧ್ಯಕ್ಷ ಸ್ಥಾನ ಚುನಾವಣೆಯ ಮೂಲಕ ದೊರೆಯಬೇಕು. ಮಹಿಳೆ ಸಮಾನತೆಗಾಗಿ ಕೇಳುತ್ತಿರುವಾಗ ಮೀಸಲಾತಿಯ ಭಿಕ್ಷೆ ಅವಮಾನಕರ. ನಮ್ಮ ಪ್ರತಿಭೆ ನಮ್ಮ ಗುರುತಾಗಿರುವಾಗ ಮೀಸಲಾತಿಯಂತಹ ದಯಾಭಿಕ್ಷೆ ಯಾಕೆ ಬೇಕು? ಪ್ರಶ್ನೆ ಐದು, ಈ ನಿಟ್ಟಿನಲ್ಲಿ ಮಹಿಳಾ ಅದ್ಯಕ್ಷರ ಪರ ಒಲವಿರುವ ಪುರುಷ ಮತ್ತು ಮಹಿಳೆಯರು ಯಾವ ರೀತಿಯ ಹೆಜ್ಜೆಗಳನ್ನು ಇಡಬೇಕು ಸರಿಯಾದ ವ್ಯಕ್ತಿಯನ್ನು ಹುಡುಕಿ ಪ್ರೇರಪಿಸಬೇಕು. ಅವರ ಸಾಧನೆಯ ದಾರಿಗೆ ದೀಪವಾಗಬೇಕು, ಕಣ್ಣಾಗಬೇಕು.ಸ್ವಲ್ಪ ಮಟ್ಟಿಗೆ ತ್ಯಾಗ ಹೊಂದಾಣಿಕೆಯನ್ನು ಮನೆಯವರೊಂದಿಗೆ ಮಾಡಿಕೊಳ್ಳಬೇಕು. ಸಮಾಜದಲ್ಲಿ ಜನ ಮನದ ಧ್ವನಿಯಾಗಿ ಆಗು ಹೋಗುಗಳ ಮೇಲೆ ಬೆಳಕು ತೂರಿ ಸಾಹಿತ್ಯಲೋಕದಲ್ಲಿ ನಡೆಯುತ್ತಿರುವ ಪಕ್ಷಪಾತದಂತ ಅನ್ಯಾಯಗಳ ವಿರುದ್ಧ ಸೆಣಸಾಡುವ ಶಕ್ತಿಯನ್ನು ಗುಂಪುಗಳ ಅಂದರೆ ಸಂಘ ಸಂಸ್ಥೆಗಳ ಮೂಲಕ ಸಂಬಂಧ ಪಟ್ಟವರ ಗಮನಕ್ಕೆ ತರಬೇಕು. ಸಮಾಜಸೇವೆಯಲ್ಲಿ ತೊಡಗಿರುವ ಸಾಹಿತಿ, ಲೇಖಕಿ ಅಥವಾ ನ್ಯಾಯಾಂಗದಲ್ಲಿ ಇಲ್ಲವೆ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಜಪರ ಕೆಲಸಗಳಲ್ಲಿ ತೊಡಗಿರುವ ಮಹಿಳೆ ಇದಕ್ಕೆ ನ್ಯಾಯ ಒದಗಿಸಬಲ್ಲರು. ಈ ಕ್ಷೇತ್ರದ ಜನ ಅವಳನ್ನು ಅವಳ ಚಟುವಟಿಕೆ, ಬರವಣಿಗೆಗಳ ಮೂಲಕ ಗುರುತಿಸುವಂತಿರಬೇಕು. *****************************************************

ಕಸಾಪಗೆ ಮಹಿಳಾ ಅಧ್ಯಕ್ಷರು Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಸೆರೆಹಕ್ಕಿ ಹಾಡುವುದು ಏಕೆಂದು ಬಲ್ಲೆ ಇಂಗ್ಲಿಷ್ ಮೂಲ : ಮಾಯಾ ಏಂಜೆಲೋ ಕನ್ನಡಕ್ಕೆ : ಎಂ.ಆರ್.ಕಮಲ‘ಐ ನೋ ವೈ ದ ಕೇಜ್ಡ್ ಬರ್ಡ್ ಸಿಂಗ್ಸ್’ ಎಂಬ ಮೂಲ ಶೀರ್ಷಿಕೆಯನ್ನು ‘ಸೆರೆಹಕ್ಕಿ ಹಾಡುವುದು ಏಕೆಂದು ಬಲ್ಲೆ’ ಎಂಬ ಸುಂದರ ಶೀರ್ಷಿಕೆಯೊಂದಿಗೆ ಅನುವಾದಿಸಿದ್ದಾರೆ.ಇದು ಜಗತ್ಪ್ರಸಿದ್ಧ ಕಪ್ಪು ಲೇಖಕಿ ಮಾಯಾ ಎಂಜೆಲೋ ಅವರ ಆರು ಆತ್ಮಕತೆಗಳಲ್ಲಿ ಮೊದಲನೆಯದು. ಆಕೆ ತನ್ನ ಮೂರನೆಯ ವಯಸ್ಸಿನಿಂದ ಹದಿನೇಳು ವರ್ಷ ವಯಸ್ಸಿನ ವಳಾಗುವ ತನಕ ತನ್ನ ಅಣ್ಣ ಮತ್ತು ತಂದೆಯ ತಾಯಿ ಅಜ್ಜಿಯ ಜತೆಗೆ ವಾಸಿಸಿದಳು.ತಾನು ಅನುಭವಿಸಿದ್ದ ಕಷ್ಟ- ನಿಷ್ಠುರಗಳನ್ನೂ ನೋವು-ಸಂಕಟಗಳನ್ನೂ ಆಕೆ ಇಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಕಪ್ಪು ಜನಾಂಗಕ್ಕೆ ಸೇರಿದ ಮಾಯಾ ಎಂಜೆಲೋ ದಕ್ಷಿಣ ಮತ್ತು ಉತ್ತರ ಅಮೆರಿಕಾಗಳಲ್ಲಿ ಬಿಳಿಯರ ವರ್ಣದ್ವೇಷ ಮತ್ತು ಅಮಾನುಷ ವರ್ತನೆಗಳನ್ನು ಮತ್ತು ಅವರಿಂದ ಶೋಷನೆಗೊಳಗಾದ ಕರಿಯರು ತಮ್ಮ ಸ್ವಾಭಿಮಾನ ಹಾಗೂ ಸ್ವಪ್ರಯತ್ನಗಳಿಂದ ಮೇಲೆ ಬರಲು ಪ್ರಯತ್ನಿಸಿದ್ದ ರ ಬಗ್ಗೆ ಬರೆಯುತ್ತಾರೆ.ಮೂರು ವರ್ಷದ ಹುಡುಗಿಯಾಗಿ ದ್ದಾಗಲೇ ತನ್ನ ನಾಲ್ಕು ವರ್ಷ ವಯಸ್ಸಿನ ಅಣ್ಣ ಬೈಲಿಯ ಜತೆಗೆ ತಾಯಿ-ತಂದೆಯರಿಂದ ಬೇರ್ಪಟ್ಟು ಆಕೆ ಅಜ್ಜಿಯ ಮನೆಯಲ್ಲಿಯೇ ಬೆಳೆಯುತ್ತಾರೆ.ಅಜ್ಜಿಯ ಧೈರ್ಯ- ಸ್ಥೈ ರ್ಯ, ಶಿಸ್ತು-ಸ್ವಾಭಿಮಾನಗಳನ್ನು ತಾನೂ ರೂಢಿಸಿಕೊಳ್ಳು ತ್ತಾಳೆ.ಇಡೀ ಹಳ್ಳಿಯಲ್ಲಿ ತನ್ನ ಸ್ವತಂತ್ರ ಮನೋಭಾವಕ್ಕೆ ಹೆಸರಾದ ಅಜ್ಜಿಯ ಬಗ್ಗೆ ಅವಳಿಗೆ ಅಪಾರ ಮೆಚ್ಚುಗೆಯಿ ದೆ.ಆದರೆ ಆಕೆಯ ಎಂಟನೇ ವಯಸ್ಸಿನಲ್ಲಿ ಒಮ್ಮೆ ಆಕೆಯ ಅಮ್ಮ ಆಕೆಯನ್ನು ತಾನು ವಾಸವಾಗಿರುವವ ಸಾನ್ ಫ್ರಾನ್ಸಿಸ್ಕೋ ನಗರಕ್ಕೆ ಕರೆತಂದು ಇಟ್ಟುಕೊಳ್ಳುತ್ತಾಳೆ. ಆದರೆ ಅಮ್ಮನ ಗೆಳೆಯನೊಬ್ಬ ಆಕೆಯ ಮೇಲೆ ಲೈಂಗಿಕ ಅತ್ಯಾಚಾರ ಮಾಡಿದಾಗ ಅವಳ ಮಾವಂದಿರು ಅವನನ್ನು ಕೊಲೆ ಮಾಡುತ್ತಾರೆ. ಈ ಎಲ್ಲ ದುರ್ಘಟನೆಗಳಿಂದ ಆಕೆ ಯ ಮನಸ್ಸಿಗೆ ಆದ ಘೋರ ಆಘಾತವು ಆಕೆಯನ್ನು ಅಕ್ಷ ರಶಃ ಮೂಕಿಯನ್ನಾಗಿಸುತ್ತದೆ. ಮುಂದಿನ ಐದು ವರ್ಷಗಳ ತನಕ ಮೂಕಿಯಾಗಿಯೇ ಇದ್ದ ಆಕೆಗೆ ಮಿಸೆಸ್. ಫ್ಲವರ್ ಎಂಬ ಸ್ನೇಹಮಯಿ ಮಹಿಳೆ ಯ ಪ್ರೋತ್ಸಾಹದಿಂದ ಮಾತು ಬರುತ್ತದೆ. ಆ ಮಹಿಳೆಯ ಮೂಲಕವೇ ಮಾಯಾ ನೃತ್ಯ-ನಾಟಕ, ಶಿಕ್ಷಣ ಮೊದಲಾದ ವಿಷಯಗಳನ್ನು ಕಲಿತು ಬದುಕಿನಲ್ಲಿ ಯಶಸ್ಸು ಸಾಧಿಸು ತ್ತಾಳೆ. ಮಾತ್ರವಲ್ಲದೆ ಕಾವ್ಯಪ್ರಿಯತೆಯನ್ನೂ ರೂಢಿಸಿಕೊಂ ಡು ಕಾವ್ಯರಚನೆ ಮಾಡುತ್ತಾಳೆ.ಮಾಯಾ ಜನಾಂಗ ದ್ವೇಷ ವನ್ನು ವಿರೋಧಿಸಿ ಅನೇಕ ಕವನಗಳನ್ನು ಬರೆಯುತ್ತಾಳೆ. ತಾನು ತೀವ್ರವಾದ ಹಲ್ಲು ನೋವಿನಿಂದ ಬಳಲುತ್ತಿರುವಾ ಗಲೂ ಚಿಕಿತ್ಸೆ ಮಾಡಲೊಪ್ಪದ ಒಬ್ಬ ಬಿಳಿಯ ದಂತವೈದ್ಯ ನ ಕ್ರೌರ್ಯ ಮತ್ತು ಕೃತಘ್ನತೆಯನ್ನು ಆಕೆ ತನ್ನ ಆತ್ಮಕಥೆ ಯಲ್ಲಿ ದಾಖಲಿಸುತ್ತಾಳೆ. ಈ ಕೃತಿಯಲ್ಲಿ ಇದೇ ಧ್ವನಿಯನ್ನು ಹೊಂದಿದ ಅನೇಕ ಕವನಗಳೂ ಇವೆ. ಅಲ್ಲದೆ ಮಾಯಾ ಅವರ ವೈಯಕ್ತಿಕ ನಿಲುವುಗಳನ್ನು ಬಿಂಬಿಸುವ ನಾಲ್ಕು ಅರ್ಥಪೂರ್ಣ ಸಂದರ್ಶನಗಳೂ ಇವೆ. ಸಂದರ್ಶನಗಳಲ್ಲಿ ಜನಾಂಗದ್ವೇಷ ರಹಿತವಾದ ಒಂದು ಹೊಸ ಸಮಾಜದ ನಿರ್ಮಾಣಕ್ಕಾಗಿ ಕರೆಯಿದೆ. ಮೂಲತಃ ಕವಿಯಾದ ಎಂ.ಆರ್.ಕಮಲ ಅವರ ಅನುವಾದದ ಭಾಷೆ ಕಾವ್ಯಾತ್ಮಕವಾಗಿದ್ದು ಬಹಳ ಪರಿಣಾಮಕಾರಿಯಾಗಿದೆ. ******************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಇತರೆ, ಪ್ರಬಂಧ

ಫ್ಲೈಟ್ ತಪ್ಪಿಸಿದ ಮೆಹೆಂದಿ

ಪ್ರಬಂಧ    ಫ್ಲೈಟ್ ತಪ್ಪಿಸಿದ  ಮೆಹೆಂದಿ ಸುಮಾ ವೀಣಾ                                         ಫ್ಲೈಟ್  ರಾತ್ರಿ ಹತ್ತು ಗಂಟೆಗೆ ಅಂದುಕೊಂಡು ಬೆಳಗ್ಗೆ 6 ಗಂಟೆಗೆಎದ್ದು  ವಿದೇಶೀ ಲಲನೆಯರಿಗಿಂತ ನಾವೇನು ಕಡಿಮೆ ನಾವೂ ಹೇರ್ ಕಲರ್ ಮಾಡಿಕೊಳ್ಳೋಣ  ಎನ್ನುತ್ತಲೇ ನಾನು ನನ್ನ ತಮ್ಮನ ಹೆಂಡತಿ ಶಾಲಿನಿ ಇಬ್ಬರೂ ಮೆಹೆಂದಿ ಕಲೆಸಿ ತಲೆಗೆ ಮೆತ್ತಿಕೊಂಡೆವು.  ಫಿಲ್ಟರ್ ಕಾಫಿ ಹೀರುತ್ತಾ   ಹರಟುತ್ತಿರಬೇಕಾದರೆ ನಮ್ಮ ಮೊಬೈಲಿಗೆ ಮೆಸೇಜ್  ಮಹಾಶಯ ಬಂದು “ನನ್ನನ್ನು ಒಮ್ಮೆ ನೋಡುವಿರಾ! ನೋಡುವಿರಾ!” ಎಂದು ವಿನಂತಿಸಿಕೊಳ್ಳಲಾರಂಭಿಸಿದ. ಹಾಗೆ  ತಲೆಯನ್ನೊಮ್ಮೆ ನೇವರಿಸಿಕೊಂಡರೆ ಮೆಹೆಂದಿ ಕೈಗೆಲ್ಲಾ ತಾಗಿ ಇರಿಸು ಮುರಿಸಾಯಿತು.  ಆದರೂ ಬಿಡದೆ ಮೊಬೈಲನ್ನೊಮ್ಮೆ ತೀಡಿದೆವು. ಆ ಮೆಸೇಜ್  ಮಹಾಶಯ ನಮ್ಮನ್ನೇ ಗುರಾಯಿಸುವಂತಿದ್ದ. ಅವನನ್ನು ಓದಿದರೆ ಅವನು ನಮ್ಮ ಫಾರಿನ್ ಟೂರ್ ಕುರಿತೇ ಎಚ್ಚರ  ನೀಡಿದಂತೆ ಇತ್ತು. ಫ್ಲೈಟ್  ಬೆಳಗ್ಗೆ ಹತ್ತು ಗಂಟೆಗೇ ಎಂದಿತ್ತು.   ನಾನು ಶಾಲಿನಿ ಇಬ್ಬರೂ ತಡಬಡಾಯಿಸಿಕೊಂಡು ಕಾಫಿಮಗ್ ಅನ್ನು ಕೆಳಕ್ಕೆ  ಕುಕ್ಕರಿಸಿ  “ಇನ್ನು ಹೊರಡಲು ಹೆಚ್ಚಿಗೆ ಸಮಯವೇನು ಉಳಿದಿಲ್ಲ! ಹೊರಡೋಣ! ಹೊರಡೋಣ!” ಎಂದು ಕೈ ಸನ್ನೆ ಮಾಡಿಕೊಂಡೆವು. ಮಾತನಾಡುವುದಕ್ಕೆ ಸಮಯವಿರಲಿಲ್ಲ ರಾತ್ರಿಯೇ ಲಗೇಜ್ ಪ್ಯಾಕ್  ಮಾಡಿಕೊಂಡಿದ್ದರೆ ಬಹುಶಃ ಗಾಬರಿಯಾಗುತ್ತಿರಲಿಲ್ಲವೇನೋ…..?? “ರಾತ್ರಿ ಹತ್ತು ಗಂಟೆಗಲ್ಲವ ಫ್ಲೈಟ್” ಎಂದು ಹರಟುತ್ತಿದ್ದೆವು. ಮೆಸೇಜ್ ಮಹಾಶಯ ಎಚ್ಚರಿಸದೇ ಇರದಿದ್ದರೆ ನಾವು ಇನ್ನೂ ಹಾಗೆ ಇರುತ್ತಿದ್ದವೋ ಏನೋ??  ಏರ್ಪೋರ್ಟಿಗೆ ಟ್ಯಾಕ್ಸಿಯಲ್ಲೇ ಹೋಗೋಣ  ಎಂದು ಟ್ಯಾಕ್ಸಿಯನ್ನೂ ಬುಕ್ ಮಾಡಿ ಕರೆಸಿಕೊಂಡೆವು. ಸೂಟ್ಕೇಸ್ನಲ್ಲಿ ಬಟ್ಟೆಗಳನ್ನು , ಟ್ರಾವಲಿಂಗ್  ಬ್ಯಾಗ್ನಲ್ಲಿ ತಿಂಡಿತೀರ್ಥಗಳನ್ನು ತುರುಕಿಕೊಂಡು ಟ್ಯಾಕ್ಸಿ ಹತ್ತಿ ಹೊರಟೆವು. ಟ್ಯಾಕ್ಸಿ  ಏರ್ಪೋರ್ಟ್ ಪ್ರವೇಶಿಸಿದೊಡನೆ ದಢಕ್ಕನೆ ನಿಂತಿತು. ಸಧ್ಯ! ವಾರಕ್ಕೆ ಮೊದಲೇ ಟಿಕೇಟ್ ಪ್ರಿಂಟ್ ಅವ್ಟು, ಪಾಸ್ಪೋರ್ಟ, ವೀಸಗಳನ್ನು ಬೇರೊಂದು ಬ್ಯಾಗಿಗೆ ತುರುಕಿ ಇಟ್ಟಿದ್ದೆವು.  ಅದನ್ನೇ ಕ್ಯೂನಲ್ಲಿ ನಿಂತು ಬೀಗುತ್ತಾ ತೋರಿಸಿ “ನಮಗೆ ವಿಂಡೋ ಸೈಡ್ ಸಿಕ್ಕರೆ ಸಾಕು ವಿಂಗ್ ಹತ್ತಿರ ಬೇಡ” ಎಂದುಕೊಂಡೆವು. ಅಲ್ಲೇ ಏಕೋ ಕಸಿವಿಸಿಯಾಗಲು ಪ್ರಾರಂಭವಾಯಿತು.  ಅದಕ್ಕೆ ಕಾರಣ ಅಲ್ಲಿದ್ದವರು ಸೆಲಿಬ್ರಿಟಿಗಳನ್ನಲ್ಲ ಅಪರಾಧಿಗಳನ್ನು ಗಮನಿಸುವಂತೆ, ನೋಡುವಂತೆ, ಧಿಕ್ಕರಿಸುವಂತೆ ರೆಪ್ಪೆ ಬಡಿಯದೆ ನಮ್ಮನ್ನೇ ನೋಡುತ್ತಿದ್ದರು. ನಾನು ಶಾಲಿನಿ “ ನಾವು ಈಗಷ್ಟೆ  ಫಾರಿನ್  ಟೂರ್ ಹೊರಟಿರುವುದು.  ಇನ್ನು ಫಾರಿನ್ನವರಾಗಿಲ್ಲವಲ್ಲ “ಏಕೆ ಹೀಗೆ ನೋಡುತ್ತಾರೆ” ಅಂದುಕೊಂಡೆವು.      ಹಾಗೆ ಎರಡು ಹೆಜ್ಜೆ ಮುಂದೆ ಇಡುವಷ್ಟರಲ್ಲಿ ಯುವತಿಯೊಬ್ಬಳ ಭಾರೀ ಕನ್ನಡಕದಿಂದ  ಪ್ರೇರಿತರಾದ ನಾವು ತಂಪು ಕನ್ನಡಕವನ್ನು ಹುಡುಕಿ ಹಾಕಿಕೊಂಡವು. ತಲೆಯನ್ನೊಮ್ಮೆ ನೇವರಿಸಿಕೊಳ್ಳಬೇಕೆಂದಾಗಲೇ ನಮಗೆ ಹೊಳೆದದ್ದು ನಮ್ಮ  ತಲೆಯ ಮೆಹೆಂದಿಗೆ ಜಲಭಾಗ್ಯ ಕರುಣಿಸಿಲ್ಲವೆಂದು.  ಅಷ್ಟರಲ್ಲಾಗಲೇ ನಮ್ಮ ಕೈಗೆ ಬೋರ್ಡಿಂಗ್ ಪಾಸ್ ದೊರೆಯಿತು,. ಯಾವ ಲೌಂಜಿನಲ್ಲಿ ಕುಳಿತುಕೊಳ್ಳಬೇಕೆಂಬ ವಿವರ ಪಡೆದುಕೊಂಡೆವು. ಹಾಗೆ ಅತ್ತಿಗೆ ನಾದಿನಿಯರಿಬ್ಬರೂ  ಒಬ್ಬರ ಮುಖವನ್ನೊಮ್ಮೆ ನೋಡಿಕೊಂಡೆವು ನಗು ಬರಲಿಲ್ಲ. ನಮ್ಮ ಅವಾಂತರಕ್ಕೆ  ನಮ್ಮಿಬ್ಬರಿಗೂ ಸಿಟ್ಟು ಬರುತ್ತಿತ್ತು .ಲೌಂಜಿನಲ್ಲೊಮ್ಮೆ ನಮ್ಮ ಲಗೇಜನ್ನು ಕುಕ್ಕರಿಸಿ ವಾಶ್ ರೂಮಿಗೆ ದೌಡಿಟ್ಟೆವು  ಮೆಹೆಂದಿ ವಾಶ್ ಮಾಡಲೆಂದು.  ಎಲ್ಲರ ಕಣ್ಣು ನಮ್ಮ ಮೇಲೆಯೇ.  ಮನೆ ಅಲ್ಲವಲ್ಲ ಬೇಕಾದ ಹಾಗೆ ತಲೆತೊಳೆದುಕೊಳ್ಳಲು, ಇನ್ನು ಜನ್ಮಾಪಿ ಮೆಹೆಂದಿ ಸಹವಾಸ ಮಾಡುವುದಿಲ್ಲ ಎಂದು ಶಪಥ ಮಾಡಿ ಒಬ್ಬರ ತಲೆಯನ್ನು ಒಬ್ಬರು ಪರಸ್ಪರ ತೊಳೆದುಕೊಂಡು ತಕ್ಷಣ ಲೌಂಜಿನ ಕಡೆಗೆ ಓಡಿಬಂದೆವು . ನಮ್ಮ ಸಹಪ್ರಾಯಣಿಕರೆಲ್ಲಾ ಫ್ಲೈಟ್ ಹತ್ತಿದ್ದರು. ಸಮಯ ಹತ್ತಾಗುವ ಹಾಗಿತ್ತು  ನಮಗೆ ಮತ್ತೆ ಪ್ರಯಾಣಕ್ಕೆ ಅವಕಾಶವಿರಲಿಲ್ಲ. ಕೈಕೈ ಹಿಡಿದುಕೊಂಡು ಲಗೇಜ್ ಕಡೆ ಗಮನ  ಹರಿಸಿದೆವು ಅದೂ ಅಲ್ಲಿರಲ್ಲಿಲ್ಲ . ಫಾರಿನ್ ಪ್ರಯಣಕ್ಕೆ ವಿಘ್ನ ಬಂತು ! ಅಲ್ಲಿರುವವರೆಲ್ಲರೂ ನಮ್ಮನ್ನೇ ನೋಡುತ್ತಿದ್ದರು.  ನಮ್ಮ ಕೋಪ ನೆತ್ತಿಗೇರಿತ್ತು.  ಎಲ್ಲರನ್ನು ಸುಟ್ಟುರಿಯುವಂತೆ ನೋಡುವ ಹಾಗಾಯಿತು ಏರ್ಪೋರ್ಟ್ ಸಿಬ್ಬಂದಿಯ ಮೇಲೂ ರೇಗಾಡಲೂ ಪ್ರಾರಂಭಿಸಿದೆವು. ನೀರಿಗಿಳಿದ ಮೇಲೆ ಚಳಿಯೇನು? ಎಂಬಂತೆ ಕೈಗಳನ್ನು ಜೋರಾಗಿಯೇ ಬೀಸಿಕೊಂಡು ಕಿರುಚಾಡಲು ಪ್ರಾರಂಭಿಸಿದೆವು. ಆದರೆ ನನಗೆ ಗಂಟಲಲ್ಲಿ ಏನೋ ಹಿಡಿದ ಅನುಭವ ಆಗುತ್ತಿತ್ತು.  “ಮಮ್ಮಿ! ಮಮ್ಮಿ!  ನಾನು ಎದ್ದು ಹೊರಗೆ ಹೋಗ್ತೀನಿ ನೀವೇ ಲೈಟ್ ಆಫ್ ಮಾಡಿಕೊಳ್ಳಿ” ಎಂದು ಅಲ್ಲೇ ಇದ್ದ ಚಿನ್ನು ಎರಡೆರಡು ಬಾರಿ ಕಿರುಚಿದಾಗ ನನಗೆ ದೂರದಲ್ಲಿ ಯಾರೋ ಕರೆದಂತಾಯಿತು. ಮೂರನೆಯ ಬಾರಿ ಕಿರುಚಿದಾಗ ಎದ್ದು ಕುಳಿತೆ “ ಅಯ್ಯೋ ಫ್ಲೈಟ್ ಮಿಸ್ ಆಗಲಿಲ್ವ”, “ಫ್ಲೈಟ್ ಹೋಯ್ತು”, ಲಗೇಜ್” , ಮೆಹಂದಿ,  ಶಾಲಿನಿ…. ಮತ್ತೆ ಆ ಜಗಳ ಇತ್ಯಾದಿ ಇತ್ಯಾದಿ ನೆನಪು ಮಾಡಿಕೊಂಡು ಲೈಟ್ ನೋಡಿದ ಬಳಿಕ ನನಗೆ ಅರಿವಾಯ್ತು “ಅಯ್ಯೋ! ನಾನು ಕನಸು ಕಂಡಿದ್ದು! “ಎಂದು ಮತ್ತೆ ಮತ್ತೆ ಕನಸನ್ನು ನೆನಪು ಮಾಡಿಕೊಂಡು  ಹಾಗೆ ಮಲಗಿದ್ದೆ. ಮತ್ತೆ ಚಿನ್ನು “ವ್ಯಾನ್ ಬೇಗ ಬರುತ್ತೆ” ಎಂದು ಎಚ್ಚರಿಸಿದಳು.  ಮನಸ್ಸಿಲ್ಲದೆ ಎದ್ದು  ಕನಸಿನಲ್ಲಿ ಮಿಸ್ ಮಾಡಿಕೊಂಡ ಫ್ಲೈಟನ್ನು ನೆನಪಿಸಿಕೊಂಡು ಸ್ನಾನ ,ಪೂಜೆ ಮುಗಿಸಿ  ದೋಸೆ ಹಾಕಿ ತಿರುವಿ ಮತ್ತೆ ಬೇಯಿಸುತ್ತಾ ಹಾಟ್ ಬಾಕ್ಸ್ನೊಳಗೆ ಹಾಕುವಾಗಲೆ ಇನ್ನೂ ಹಳೆಯ ನೆನಪುಗಳು ,ಮರುಕಳಿಸುತ್ತಾ ಹೋದವು.  ಹೊಟ್ಟೆ ಹುಣ್ಣಾಗುವಂತೆ ನಗಲಾರಂಭಿಸಿದೆ. “ಯಾಕೆ? ಮಮ್ಮಿ ಒಬ್ಬರೇ ನಗುವುದು” ಎಂದು ಚಿನ್ನು ಕೇಳಿದಳು. “ಏನೋ ನೆನಪಾಯಿತು” ಅಂದೆ. “ಅದೇ ನಮ್ಮ ಸೋದರ ಮಾವ ಶ್ರೀನಿವಾಸ ತಾತ ಇದ್ರಲ್ಲ ಅವರು ನೆನಪಾದರು” ಎಂದು ಘಟನೆಯನ್ನು ಚುಟುಕಾಗಿ ಹೇಳಿದೆ.  “ನಯನನ ಮದುವೆ ಇನ್ನೆರಡು  ವಾರವಿತ್ತು ಮನೆಯಲ್ಲಿ ಎಲ್ಲರೂ ಮದುವೆ ಸಾಮಾಗ್ರಿ ಖರೀದಿಗೆಂದು ಹೋಗಿದ್ದರು, ಕಾಲಿಂಗ್ ಬೆಲ್ ಸದ್ದಾಯಿತು. ಸರಿ ಬಾಗಿಲು ತೆಗೆದರೆ ಶ್ರೀನಿವಾಸ ತಾತ ಅಲ್ಲಿದ್ದರು “ಬನ್ನಿ ಬನ್ನಿ” ಎಂದು ಅವರನ್ನು ಕೂರಿಸಿ ತಿಂಡಿಕಾಫಿ ಕೊಟ್ಟೆ ಆದರೆ ಅವರು  ತೆಗೆದುಕೊಳ್ಳುವ ಸ್ಥಿತಿಯಲ್ಲಿ  ಇರಲಿಲ್ಲ ಅವರ  ಮುಖದಲ್ಲಿ ಗಾಬರಿಯಿತ್ತು “ಮದುವೆಮುಂದಕ್ಕೆ ಹೋಯ್ತ’?   ಎಂದರು “ಇಲ್ಲ ಎಂದೆ ಮದುವೆ ನಿಂತು ಹೋಯ್ತ?”  ಎಂದರು “ಇಲ್ಲ!” ಎಂದೆ ಅಷ್ಟರಲ್ಲಿ  ಅಲ್ಲೇ ಟೇಬಲ್ ಮೇಲೆ ಇದ್ದ  ನಯನಳ ಮದುವೆ ಆಮಂತ್ರಣ ಪತ್ರಿಕೆ ನೋಡಿ ತಂತಾನೆ ನಗಲಾರಂಭಿಸಿದರು. ನನಗೆ ಗಾಬರಿ ಇದೇಕೆ ಹೀಗೆ” ಹುಷಾರಾಗೇ  ಇದ್ರಲ್ಲ ಅಂದುಕೊಂಡೆ ಸರಿ ! ನಾನು ಹೊರಡುವೆ  ಎಂದು ಎದ್ದು ನಿಂತು ಮನೆಯವರನ್ನೆಲ್ಲಾ ನಾನು ಕೇಳಿರುವುದಾಗಿ ತಿಳಿಸು ನಾನು ಇವತ್ತೆ ವರಪೂಜೆ ಅಂದುಕೊಂಡು ಬಂದೆ ಸರಿಯಾಗಿ ದಿನಾಂಕ ನೋಡಿರಲಿಲ್ಲ ಎಂದು ನಗುತ್ತಲೇ ಅವರಿಗಾದ ಮದುವೆ ದಿನಾಂಕ ಕುರಿತ ಗೊಂದಲವನ್ನು  ವಿವರಿಸಿದರು. ಪರವಾಗಿಲ್ಲ ಬಿಡಿ ಬರುವ ವಾರ  ಅತ್ತೆಯನ್ನೂ ಕರೆದುಕೊಂಡು ಬನ್ನಿ       ಎಂದೆ. ಇಲ್ಲ!  ಇಲ್ಲ! ನಾನು ಹೇಗೂ ಬಂದಿದ್ದೇನಲ್ಲಾ ಅವಳೇ ಮದುವೆಗೆ ಬರುತ್ತಾಳೆ   ಮದುವೆಗೆ ಎನ್ನುತ್ತಾ ನಗುತ್ತಲೇ ಹೊರಟರು” ಎಂದು ಹೇಳಿ ಮುಗಿಸಿಲ್ಲ. ಚಿನ್ನು ಮತ್ತೆ ಜೋರಾಗಿ ನಗಲಾರಂಭಿಸಿದಳು ಅರೆ…..!! ಅವರ್ಬಿಟ್ ಇವರ್ಬಿಟ್ ಅವರ್ಯಾರು ಅನ್ನೋಹಂಗೆ ನಿನಗೇನಾಯ್ತು? ಎಂದೆ.” ನಾನು ಮಧು ಬರ್ತಡೆ ಆದ ಮೇಲೆ ಅವರ ಮನೆಗೆ ಗಿಫ್ಟ್ ತೆಗೆದುಕೊಂಡು ಹೋಗಿದ್ದೆ ಅಲ್ವ” ಎಂದಳು. ಗಿಫ್ಟ್ ಹಿಡಿದುಕೊಂಡು ಅವರ ಮನೆ ಬಾಗಿಲು ಬಡಿದರೆ “ನಿನ್ನೆ ಕರೆದರೆ ಇವತ್ತು ಬಂದಿದ್ದೀಯ ಬಾ” ಎಂದು ಕರೆದು ಕೂರಿಸಿ ಸ್ವೀಟ್, ಕೇಕ್  ತಂದು ನನ್ನ ಮುಂದೆ  ಹಿಡಿದ. ತನ್ನ ತಪ್ಪನ್ನ ಇನ್ನೊಮ್ಮೆ ಹೇಳಲಾರದೆ ,ಮುರುಕು ಡಿಲೇಟೆಡ್ ವಿಶಸ್   ಹೇಳಿ  ಮನೆಗೆ ಬಂದೆ “  ಹೇಗ್ ಮಿಸ್ ಮಾಡಿಕೊಳ್ತಿವಿ ಅಲ್ವ? ಪರೀಕ್ಷೆ  ಟೈಮಲ್ಲಿ ಹೀಗಾದರೆ …..! ಎಂದು ಉದ್ಗಾರ  ಎಳೆದಳು.  “ ಅನುಭವವೇ ಗುರು ಅಂತ ಅದಕ್ಕೆ ಹೇಳೋದು” ಎಂದು ನಾನು ಹೇಳಿದೆ. ಇನ್ನು  ಮುಂದೆ ಯಾವುದೇ ಪರೀಕ್ಷೆ, ಪೂಜೆ, ವೃತ ಫಂಕ್ಷನ್ಗಳೇ ಇರಲಿ ಪಂಕ್ಚುವಲ್ ಆಗಿ ಹೋಗಬೇಕು, ಮೊಬೈಲ್ನಲ್ಲಿ  ಅಲರಾಂ ಸೆಟ್ ಮಾಡಿ ಆದರೂ ಸರಿ,  ಕ್ಯಾಲೆಂಡರ್ ನಲ್ಲಿ  ಗುರುತು ಮಾಡಿಯಾರೂ ಸರಿ, ವಾರ್ಡ್ರೋಬ್ಗಳ ಮೇಲೆ ಚೀಟಿ ಅಂಟಿಸದರೂ ಸರಿ” ಎಂದೆ  ಅದಕ್ಕೆ ಅವಳು” ಕ್ಯಾಲೆಂಡರಿನಲ್ಲೂ ಸರಿಯಾಗಿ ಬರೆಯಬೇಕು ಸೆಪ್ಟೆಂಬರ್ನಲ್ಲಿ ಹೋಗಬೇಕಾದ ಕಾರ್ಯಕ್ರಮದ  ವಿವರವನ್ನು ಅಕ್ಟೋಬರ್ನಲ್ಲಿ ಬರೆಯಬಾರದಷ್ಟೇ” ಎಂದಳು. ಇಬ್ಬರೂ ನಕ್ಕೆವು ಗಡಿಯಾರ ನೋಡಿದರೆ ಸ್ವಲ್ಪ ಹೆಚ್ಚೇ ಮುಂದೇ ಓಡಿದಂತಿತ್ತು. ನೆನಪಿನ ಮಡಿಕೆಗಳನ್ನು  ತೆರೆಯಲು ಈಗ ಸಮಯವಿಲ್ಲ ಎಂದು ಹೇಳುತ್ತಾ ನೆನಪಿನ ಬುತ್ತಿಯನ್ನು, ಚಿನ್ನುವಿಗೆ ಮದ್ಯಾಹ್ನಕ್ಕೆ ಬೇಕಾದ  ಬುತ್ತಿಯನ್ನು ಮುಚ್ಚಿ ಯಥಾಪ್ರಕಾರ ನಿತ್ಯದ ಕೆಲಸಗಳಲ್ಲಿ ನಿರತಳಾದೆ. ಆದರೆ ಕಂಡ ಕನಸು, ಫಾರಿನ್  ಹೋಗುವ ಆತುರದ ಕನಸು ಮತ್ತೆ ಮತ್ತೆ ನನ್ನನ್ನು ಪ್ರಶ್ನಿಸುತ್ತದೆ.  ಯಾವಾಗ   ಇನ್ನೊಮ್ಮೆ ಫ್ಲೈಟ್ ಹತ್ತುವುದು ಎಂದು? **************************************   

ಫ್ಲೈಟ್ ತಪ್ಪಿಸಿದ ಮೆಹೆಂದಿ Read Post »

ಕಾವ್ಯಯಾನ

ದಿಟ್ಟ ಹೆಜ್ಜೆ

ಕವಿತೆ ದಿಟ್ಟ ಹೆಜ್ಜೆ ಶಿವಲೀಲಾ ಹುಣಸಗಿ ಇನ್ನೇನು ಬೀದಿಗೆ ಬಿದ್ದಂತೆಒಣಹುಲ್ಲಿಗೂ ಆಸರೆಯಿಲ್ಲದೇಕೊನೆಗಳಿಗೆಯ ನಿಟ್ಟುಸಿರಿಗೆನಿತ್ರಾಣದ ನಡುವಿಂದ ನಡುಕಕಣ್ಸನ್ನೆಯಲಿ ನುಡಿದುದೆಲ್ಲ ದಿಟಹೊತ್ತಿಗೆ ಬಾರದ ತುತ್ತ ನೆನೆದುಕತ್ತು ಹೊರಳಿದರೂ ನಿಲ್ಲದ ಆಪತ್ತುತೂಗುಗತ್ತಿಯ ನೆತ್ತಿಯಲಿ ಹೊತ್ತುಸ್ವಪ್ನ ಕಾಣುವ ಭರದಲ್ಲಿಯೇಸೂರಿಲ್ಲದೆ ತಾರೆಗಳಾದರೆಷ್ಟೋಒಣಹುಲ್ಲಿಗೆ ಮಣಲೆಕ್ಕ ಬರೆದುಹೊಟ್ಟೆ ಬಗಿದರೂ ಚಿಮ್ಮದಾ ನೆತ್ತರುಹಸಿವಿನ ಮುಂದೆ ಎಲ್ಲ ಸೋತವರುಶೂನ್ಯದಾಹುತಿಗೆ ಕೊರಳೊಡ್ಡಿಹರುಬೀದಿಗೆ ಬಂದ ಬದುಕಿಗೆಲ್ಲಿದೆ ತ್ರಾಣಇರಳೊಂದು ಮಸಿ ಚಲ್ಲಿದಂತೆಗಾಢಂಧಕಾರದಲಿ ಸುಖವೆಲ್ಲ ವ್ಯರ್ಥಎಲುಬಿನ ಎಣಿಕೆಯೋ ಗೋರ ಅನರ್ಥಬಯಲಿಗೆ ಬೆತ್ತಲಾಗುವ ಭಯವಿಲ್ಲನಮಗೋ ಬಯಲಾಗದೇ ಬದುಕಿಲ್ಲಬೀದಿ ಚಂದ್ರಮನೇ ಮೌನವಾಗಿಹನುಚಿಗುರೊಡೆಯದೆ ಕಮರಿದ ಬಾಳಿಗೆ.ಎದೆಸೆಟಿಸಿ ನಡೆದೆನೆಂದರೂ ನಿರಾಶೆಎದೆಬಗಿದು ಕರುಳ ಹೊಸೆಯುತಲಿನೆತ್ತರ ದೀಪ ಹಚ್ಚಿ ನಗುವವರ ನಡುವೆಬೀದಿ ದೀಪಗಳೇ ಹಿತವನಿಸಿ ಬಿಟ್ಟಿದೆದಿಕ್ಕರಿಸಿದವರ ಹುಟ್ಟಡಗಿಸಿ ನಕ್ಕರೆಬದುಕಿಗೆಲ್ಲಿದೆ ಭದ್ರತೆಯ ಹಸ್ತಸೋತ ಮನಕೆ ಆಗಸದ ಅಭಯನೆಚ್ಚಿಕೆಯ ಹಂಗಿಲ್ಲದಾ ಆರ್ಭಟವುಸ್ವಾಭಿಮಾನದ ಕಿಡಿಯ ಒಳಕಿಚ್ಚಿಗೆಭಸ್ಮವಾಗಿ ಬೀದಿಗೆ ಬಂದಾಗಿದೆಅಳಿವು,ಉಳಿವಿನ ಹೊರಾಟಕೆರಟ್ಟೆಯ ಕಸುವು ಕೊಸರುವ ಮುನ್ನದಿಟ್ಟ ಹೆಜ್ಜೆಯಿಟ್ಟು ಬದುಕಬೇಕಿದೆ.ಇಲ್ಲವಾದರೆ ಬೀದಿ ಹೆಣವಾದಂತೆ… ***********************

ದಿಟ್ಟ ಹೆಜ್ಜೆ Read Post »

ಕಾವ್ಯಯಾನ

ಉಕ್ಕುವ ನೀರಿಗೆ ಲಕ್ಷ್ಮಣ ರೇಖೆ ಇಲ್ಲ

ಕವಿತೆ ಉಕ್ಕುವ ನೀರಿಗೆ ಲಕ್ಷ್ಮಣ ರೇಖೆ ಇಲ್ಲ ಪೂರ್ಣಿಮಾ ಸುರೇಶ್ ನದಿ ಕಡಲ ದಂಡೆಯಲಿ ಮನೆಉಬ್ಬರ, ಇಳಿತ ,ರಮ್ಯ ಹರಿದಾಟಒಂದಿಷ್ಟು ಮೊರೆತ ಮತ್ತಷ್ಟುಆಲಾಪ ರಾಗ ವಿರಾಗಆಗಾಗ ರಾಡಿ ಮತ್ತಷ್ಟು ಸೆಳೆತದ ಮೋಡಿಕಚಕುಳಿ ಇಡುವ ಪುಟ್ಟ ಭಾವಗಳಹರಿವಿನ ಹರಿದಾಟ ಪುಲಕ ಹಸಿರುಮತ್ತೀಗ ಉಪ್ಪು ಜಲ ಕಟ್ಟದಿರಿ ಮನೆನದಿ ಕಡಲ ದಂಡೆಯಲಿ ನೆರೆಯೀಗ ಉಕ್ಕೀತು ‌ಹೊಳೆಯೀಗ ಬಿಕ್ಕೀತುಸಮುದ್ರದ ಒಡಲಲ್ಲೂ ಆರದ ಅಲೆಅಲೆನಿಮಗೆ ತಿಳಿಯದು ಪ್ರವಾಹದ ಉರಿಕಾದ ಕಾಯುವ ವಿಧವಿಧ ಪರಿಹರಿದು ಉಕ್ಕುವ ನೀರಿಗೆ ಲಕ್ಷಣರೇಖೆ ಇಲ್ಲ ಅಂಗಳ, ಪಡಸಾಲೆ ದೇವರಮನೆಪಾಕದ ತಾಣದಲ್ಲೂ ಇದೀಗ ನೆರೆಕೊಚ್ಚಿಕೊಂಡು ಹೋಗುತ್ತಿದೆಅದನ್ನು ಇದನ್ನು ಮತ್ತುನನ್ನ- ನನ್ನೊಳಗನ್ನೂ ***************************

ಉಕ್ಕುವ ನೀರಿಗೆ ಲಕ್ಷ್ಮಣ ರೇಖೆ ಇಲ್ಲ Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು

ಚರ್ಚೆ ಕಸಾಪಗೆ ಮಹಿಳಾ ಅಧ್ಯಕ್ಷರು ಒಂದು ಚರ್ಚೆ ಮೆಲ್ಕಂಡವಿಷಯವಾಗಿ ಸಂಗಾತಿ ಪತ್ರಿಕೆ ಕನ್ನಡದ ಬರಹಗಾರರಿಗೆ ಕೆಲವು ಪ್ರಶ್ನೆಗಳನ್ನು ಹಾಕಿತ್ತು ಅದಕ್ಕೆ ಬಂದ ಉತ್ತರಗಳನ್ನು ಇಲ್ಲಿ ಒಂದೊಂದಾಗಿಪ್ರಕಟಿಸಲಾಗುತ್ತಿದೆ. ಸಂಗಾತಿ ಕೇಳಿದ ಪ್ರಶ್ನೆಗಳು ಪ್ರಶ್ನೆ ಒಂದು,ಇದಕ್ಕಿರುವ ಕಾರಣಗಳೇನು?ಇದನ್ನು ಹೇಗೆ ವಿಶ್ಲೇಷಿಸುತ್ತೀರಿ? ಪ್ರಶ್ನೆ ಎರಡು,ಸಮಾನತೆಯ ಈ ಯುಗದಲ್ಲಿ ಮಹಿಳೆಯೊಬ್ಬರು ಅಧ್ಯಕ್ಷರಾಗುವುದು ಸಾದ್ಯವೆಂದು ನಂಬುವಿರಾ?ಸಾದ್ಯವೆಂದಾದರೆ ಹೇಗೆ? ಪ್ರಶ್ನೆ ಮೂರು,ಮಹಿಳೆಯೊಬ್ಬರು ಅಧ್ಯಕ್ಷರಾಗದಂತೆ ತಡೆಯುವ ಶಕ್ತಿಗಳನ್ನು ಹೇಗೆ ಎದುರಿಸಬಹುದು? ಪ್ರಶ್ನೆ ನಾಲ್ಕು, ಮಹಿಳೆಗೆ ಈ ಅಧ್ಯಕ್ಷಸ್ಥಾನ ಮೀಸಲಾತಿ ರೂಪದಲ್ಲಿ ಸಿಗಬೇಕೆಂದು ಬಯಸುವಿರಾ ಇಲ್ಲ ಚುನಾವಣೆಯ ಮೂಲಕವೇ ದೊರೆಯಬೇಕೆಂದು ಬಯಸುವಿರಾ? ಪ್ರಶ್ನೆ ಐದು, ಈ ನಿಟ್ಟಿನಲ್ಲಿ ಮಹಿಳಾ ಅಧ್ಯಕ್ಷರ ಪರ ಒಲವಿರುವ ಪುರುಷ ಮತ್ತು ಮಹಿಳೆಯರು ಯಾವ ರೀತಿಯ ಹೆಜ್ಜೆಗಳನ್ನು ಇಡಬೇಕು ಡಾ.ಪಾರ್ವತಿ ಜಿ.ಐತಾಳ್ ಮಹಿಳಾ ಅಧ್ಯಕ್ಷರು ಖಂಡಿತಾ ಬೇಕು …………………………………………. ಮಹಿಳೆಯರ ಸ್ಥಿತಿಗತಿಗಳು ಮೊದಲಿನಂತಿಲ್ಲ, ಅವರಿಗೆ ಬೇಕಾದಷ್ಟು ಸ್ವಾತಂತ್ರ್ಯ ಸಿಕ್ಕಿದೆ, ಶಿಕ್ಷಣ-ಉದ್ಯೋಗಾವಕಾಶಗಳು ಸಿಕ್ಕಿವೆ ಅನ್ನುತ್ತಾರೆ. ಸಾವಿರಾರು ವರ್ಷಗಳಿಂದ ಶೋಷಣೆ-ದಬ್ಬಾಳಿಕೆ, ಹಿಂಸೆ-ದೌರ್ಜನ್ಯಗಳಿಂದ ನಲುಗುತ್ತಲೇ ಬಂದಿರುವ ಹಿಂದಿನ ಕಾಲದ ಸ್ತ್ರೀಯರ ದುಸ್ಥಿತಿಗೆ ಹೋಲಿಸಿ ನೋಡಿದರೆ ಈ ಮಾತುಗಳು ನಿಜವೇ ಆದರೂ ಇವೆಲ್ಲವೂ ಹೊರನೋಟಕ್ಕೆ ಕಾಣುವ ಬದಲಾವಣೆಗಳು ಅಷ್ಟೆ. ಸ್ತ್ರೀಯರ ಇಂದಿನ ನಿಜಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿ ನೋಡಿ ತಿಳಿಯ ಬೇಕಾದುದು ಬಹಳಷ್ಟಿದೆ.          ಸದಾ ಸಾಮಾಜಿಕ ಸಮಾನತೆಯ ಬಗ್ಗೆ ಏರುಧ್ವನಿಯಲ್ಲಿ ಭಾಷಣ ಬಿಗಿಯುವ  ಅನೇಕರು ಸ್ತ್ರೀಯರಿಗೆ ಸಮಾನ ಸ್ಥಾನ ಕೊಡುವ ವಿಚಾರದಲ್ಲಿ ತೆರೆಯ ಹಿಂದೆ ಸರಿಯುತ್ತಾರೆ. ಯಾಕೆಂದರೆ ಅವರು ತಮ್ಮ ತಮ್ಮ ಮನೆಗಳಲ್ಲೇ ತಾಯಿ, ಹೆಂಡತಿ, ಮಗಳಂದಿರು ಅಕ್ಕ ತಂಗಿಯರನ್ನು  ಅಡುಗೆ ಕೆಲಸ, ಮನೆಗೆಲಸ ಮತ್ತು ಇನ್ನಿತರ ಹಲವಾರು ವಿಚಾರಗಳಲ್ಲಿ ಅಸಮಾನತೆಯ ನೆಲೆಯಲ್ಲೇ ನಡೆಸಿಕೊಳ್ಳುವವರಾಗಿರುತ್ತಾರೆ. ಇವೆಲ್ಲವೂ ಸಂಪ್ರದಾಯ-ಪದ್ಧತಿಗಳ ಹೆಸರಿನಲ್ಲೇ ನಡೆಯುತ್ತವೆ. ಹೆಂಗಸರು ಮಾಡುವ ಕೆಲಸಗಳನ್ನು ತಾವು ಮಾಡುವುದು ತಮ್ಮ ಘನತೆಗೆ ಕಡಿಮೆ ಎಂದು ತಿಳಿದುಕೊಳ್ಳುವ ಪುರುಷರು ಇಂದಿಗೂ ನಮ್ಮ ಸುತ್ತು ಮುತ್ತ ಇದ್ದಾರೆ. ವೇದಿಕೆಯ ಮೇಲೆ ಸಮಾನತೆಯ ಮಾತುಗಳನ್ನಾಡಿ ಮನೆಗೆ ಹೋದ ಕೂಡಲೇ ಹೆಂಗಸರ ಕೈಯಲ್ಲಿ ಸೇವೆ ಮಾಡಿಸಿಕೊಳ್ಳುವವರಿದ್ದಾರೆ. ಬೆರಳೆಙಿಕೆಯ ಮಂದಿ ಸ್ತ್ರೀಯರ ಬಗ್ಗೆ ಸಹಾನುಭೂತಿ ತೋರಿಸುವವರಿದ್ದರೂ ಅವರು ಸಮಾನ ಜವಾಬ್ದಾರಿಯನ್ನು ಹೊರಲು ಎಂದೂ ಸಿದ್ಧರಾಗುವುದಿಲ್ಲ. ಮನೆಯಲ್ಲೇ ಗಾಣದೆತ್ತಿನಂತೆ ದುಡಿಯುವ ಪೂರ್ಣಕಾಲಿಕ ಗೃಹಿಣಿಯಾದರೂ ಉದ್ಯೋಗದಲ್ಲಿದ್ದು ಇಮ್ಮಡಿ ಜವಾಬ್ದಾರಿಗಳನ್ನು ಹೊರುವ ಸ್ತ್ರಿಯಾದರೂ ಅವರನ್ನು ಪುರುಷರು ನಡೆಸಿಕೊಳ್ಳುವ ರೀತಿಯಲ್ಲಿ ಇನ್ನೂ ಬದಲಾವಣೆಯಾಗಿಲ್ಲ.   ರಾಜಕೀಯದಲ್ಲೂ ಅಷ್ಟೆ. ಸ್ತ್ರೀಯರಿಗೆ ೩೩% ಮೀಸಲಾತಿಯ ಪ್ರಶ್ನೆ ಇನ್ನೂ ಬಗೆಹರಿದಿಲ್ಲ.ಪಂಚಾಯತ್-ನಗರಸಭೆಗಳಲ್ಲಿ ಮಹಿಳೆಯರು ಸ್ಪರ್ಧಿಸಿ ಆಯ್ಕೆಗೊಳ್ಳುತ್ತಾರಾದರೂ ಆಡಳಿತ ಸೂತ್ರವನ್ನು ಪೂರ್ತಿಯಾಗಿ ಕೈಯೊಳಗಿಟ್ಟುಕೊಳ್ಳುವವರು ಬಹಳ ಕಡಿಮೆ. ಎಷ್ಟೋ ಸಲ ಅವರು ಪುರುಷರ ಕೈಗೊಂಬೆಗಳಾಗಿರುತ್ತಾರೆ.ಹೆಣ್ಣಿನ ಸ್ಥಾನಮಾನಗಳ ಸುತ್ತ ಸುತ್ತಿಕೊಂಡಿರುವ ಸಾಂಪ್ರದಾಯಿಕ ಕಟ್ಟುಪಾಡುಗಳೇ ಇದಕ್ಕೆ ಕಾರಣ. ತನ್ನ ದೈನಂದಿನ ಬದುಕಿನ ಜಂಜಾಟಗಳಿಂದ ದಣಿಯುವ ಆಕೆಗೆ    ಯಾವುದರಲ್ಲಿಯೂ ಆಸಕ್ತಿ ಉಳಿಯುವುದಿಲ್ಲ.    ವಿವಾಹ ಮತ್ತು ಕುಟುಂಬ ವ್ಯವಸ್ಥೆಗಳು ಭಾರತೀಯ ಸಂಸ್ಕೃತಿಯ ಜೀವಾಳ. ಅದು ಇವತ್ತಿನ ವರೆಗೆ ಜೀವಂತವಾಗಿದ್ದರೆ  ಮಹಿಳೆಯರ ಸಹನೆ, ತ್ಯಾಗ ಹಾಗೂ ಶರಣಾಗತಿಯ ಮನೋಭಾವಗಳೇ ಕಾರಣ. ಇಂದಿನ ಬದಲಾದ ವಾತಾವರಣದಲ್ಲಿ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸುವಲ್ಲಿ ಹೆಣ್ಣಿನ ಪಾಲಿಗೆ ಅಡ್ಡಿಯಾಗುವುದು ಇವೇ ವಿಷಯಗಳು. ಮನೆಗೆ ಬೇಕಾದ ಹಣ ಸಂಪಾದನೆ ಮಾಡುವವನೆಂದು ಎದೆಯುಬ್ಬಿಸಿ ಹೇಳುವ ಗಂಡಸರಿಗಿಂತ ದುಪ್ಪಟ್ಟು ಕೆಲಸಗಳನ್ನು ಮನೆಯಲ್ಲಿ ಮಾಡುವ ಮಹಿಳೆಯರು ಮನೆ-ಗಂಡ-ಮಕ್ಕಳಿಗಾಗಿ ತಮ್ಮ ಸಮಯ ಮತ್ತು ಶಕ್ತಿಗಳನ್ನು ಪೂರ್ತಿಯಾಗಿ ವ್ಯಯಿಸಬೇಕಾಗುತ್ತದೆ. ಕೌಟುಮಬಿಕ ಬದುಕಿನಿಂದ ದೂರ ಉಳಿಯುವ ಮಹಿಳೆಯರಿಗಷ್ಟೇ ಹೊರಗಿನ ಕೆಲಸಗಳಲ್ಲಿ ಭಾಗವಹಿಸುವುದು ಸುಲಭವಾಗುತ್ತದೆ.   ಸಾಹಿತ್ಯ ಕ್ಷೇತ್ರದಲ್ಲೂ ಅಷ್ಟೆ.ಮಹಿಳೆಯರು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸುಮಾರು ಒಂದು-ಒಂದೂವರೆ ಶತಮಾನಗಳಷ್ಟೇ ಆಗಿವೆ. ಅದರಲ್ಲೂ ಇಂದು ಪುರುಷ ಸಾಹಿತಿಗಳಿಗೆ ಸಮನಾಗಿ ನಿಲ್ಲುವವರು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಇನ್ನು ಸಭೆ-ಸಮ್ಮೇಳನಗಳನ್ನು ನೋಡಿದರೆ ವೇದಿಕೆಯಲ್ಲಿ ಹತ್ತರಲ್ಲಿ ಒಂಬತ್ತು ಮಂದಿಯೂ ಪುರುಷರೇ ಆಗಿರುತ್ತಾರೆ. ವೆದಿಕೆಯ ಒಂದು ಬದಿಯಲ್ಲಿ ನಿಂತು ಪ್ರಾರ್ಥನೆ ಹಾಡುವುದೋ ಸ್ವಾಗತಿಸುವುದೋ ಕಾರ್ಯಕ್ರಮ ನಿರೂಪಿಸುವುದೋ ಮುಂತಾದ ಚಿಲ್ಲರೆ ಕೆಲಸಗಳಿಗೆ ಮಹಿಳೆಯರ ಪಾತ್ರ ಸೀಮಿತವಾಗಿರುತ್ಯದೆ. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ ನೂರು ವರ್ಷಗಳು ಕಳೆದರೂ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟ ಸಿಕ್ಕಿದ ಮಹಿಳೆಯರು ಒಬ್ಬರೋ ಇಬ್ಬರೋ ಮಾತ್ರವೆಂದರೆ ಏನರ್ಥ?  ಸಿಕ್ಕುವ ಎಲ್ಲಾ ಅಧಿಕಾರ-ಅವಕಾಶಗಳನ್ನು ಬಾಚಿಕೊಳ್ಳಲು ಪುರುಷ ವರ್ಗವೇ ಹೊಂಚು ಹಾಕುತ್ತಿರುವಾಗ ಮೊದಲೇ ಬಸವಳಿದು ತನಗೇನೂ ಬೇಡವೆಂದು ದೂರ ನಿಲ್ಲುವ ಮಹಿಳೆಯರಿಗೆ ಸ್ಥಾನಮಾನಗಳು ಸಿಗುವುದಾದರೂ ಹೇಗೆ?   ಹೌದು. ನಮ್ಮಲ್ಲಿ ಪ್ರತಿಭಾವಂತ ಮಹಿಳೆಯರು, ಪ್ರಾಮಾಣಿಕವಾಗಿ ಕೆಲಸ ಮಾಡಬಲ್ಲವರು ಸಾಕಷ್ಟು ಮಂದಿ ಇದ್ದಾರೆ. ಅಂಥವರು ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆಗಳ ಅಧ್ಯಕ್ಷ ಪದವಿಗೆ ಏರಬೇಕು. ಮನೆಯಲ್ಲಿ ತನ್ನ ದುಡಿಮೆಯನ್ನು ಗುರುತಿಸುವವರಿಲ್ಲದಿದ್ದರೂ ನಿಸ್ವಾ ರ್ಥವಾಗಿ ಕರ್ಮಯೋಗಿಯಂತೆ ದುಡಿಯುವ ಮಹಿಳೆ ಒಂದು ಸಾರ್ವಜನಿಕ ಸಂಸ್ಥೆಯಲ್ಲೂ ಹಣದಾಸೆ-ಅಧಿಕಾರದಾಸೆಗೆ ಬಲಿಯಾಗದೆ ಸಮರ್ಪಕವಾಗಿ ಸೇವೆ ಮಾಡಬಲ್ಲಳು. ಬಹುಶಃ  ಮಹಿಳೆಯರ ಸಮಸ್ಯೆಯ ನಿವಾರಣೆಗಾಗಿಯೂ ಆಕೆ ಪ್ರಯತ್ನಿಸಬಲ್ಲಳು. ಅದರೆ ಮಹಿಳೆ ಅಧ್ಯಕ್ಷಳಾಗಬೇಕಿದ್ದರೆ ಚುನಾವಣಾ ಪ್ರಚಾರದಿಂದ ಹಿಡಿದು ಅಧಿಕಾರಾವಧಿಯ ಕೊನೆಯ ತನಕವೂ ಪುರುಷರ ಸಹಕಾರ-ಬೆಂಬಲಗಳು ಆಕೆಗೆ ಅಗತ್ಯವಿದೆ. ಹಾಗೆಂದು ಮೀಸಲಾತಿಯ ಅಗತ್ಯವಿಲ್ಲ.   ಸರಕಾರವೇ ಒಂದು ಬಾರಿ ಕೇವಲ ಪುರುಷರು ಮಾತ್ರ ಚುನಾವಣೆಗೆ ಸ್ಪರ್ಧಿಸುವುದು, ಇನ್ನೊಮ್ಮೆ ಮಹಿಳೆಯರು ಮಾತ್ರ ಸ್ಪರ್ಧಿಸುವುದು ಎಂಬ ನಿಯಮವನ್ನು ಮಾಡುವುದು  ಸೂಕ್ತ. ಇದರಿಂದ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಕ್ಕುವುದು ಖಾತ್ರಿಯಾಗುತ್ತದೆ. ***********************************************

ಕಸಾಪಗೆ ಮಹಿಳಾ ಅಧ್ಯಕ್ಷರು Read Post »

ಇತರೆ

ಏನಿರದಿದ್ದರೂ ಸೂಕ್ಷ್ಮಮನಸ್ಸಿರ ಬೇಕು

ಲೇಖನ ಏನಿರದಿದ್ದರೂ ಸೂಕ್ಷ್ಮಮನಸ್ಸಿರ ಬೇಕು ನೂತನ ದೋಶೆಟ್ಟಿ ಅವಳು ಸ್ವೇಹಿತೆಯರ ಸಹಾಯದಿಂದ ಡಿಗ್ರಿ ಮುಗಿಸಿದಳು. ತರಗತಿಯ ಸಮಯದಲ್ಲಿ ಲಕ್ಷ್ಯ ಕೊಟ್ಟು ಕೇಳುತ್ತಿದ್ದರೂ ಬರೆದುಕೊಳ್ಳಲು ಅವರ ನೆರವು ಬೇಕಾಗುತ್ತಿತ್ತು. ಪರೀಕ್ಷೆಯ ಸಮಯದಲ್ಲಿ ಅವರು ಅವಳಿಗೆ ಇಡಿಯ ಪುಸ್ತಕವನ್ನು, ನೋಟ್ಸುಗಳನ್ನು ಓದಿ ಹೇಳುತ್ತಿದ್ದರು. ತಮ್ಮ ಪರೀಕ್ಷೆಯ ಸಿದ್ಧತೆಯ ಜೊತೆಗೆ ಅವಳ ಪರೀಕ್ಷೆಯ ಸಿದ್ಧತೆಯನ್ನು ಮಾಡುವ/ಮಾಡಿಸುವ ಜವಾಬ್ದಾರಿ ಅವಳ ಸ್ನೇಹಿತೆಯರದು. ಅದನ್ನು ಅವರೆಲ್ಲ ಮನಃಪೂರ್ವಕವಾಗಿ ಮಾಡುತ್ತಿದ್ದರು. ಪರಿಕ್ಷೆ ಮುಗಿದ ಮೇಲೆ ಸ್ನೇಹಿತೆಯರೆಲ್ಲ ಸೇರಿ ಪಿಕ್ಚರ್ ಪ್ರೋಗ್ರ‍್ರಾಂ ಹಾಕುತ್ತಿದ್ದರು. ಅದಕ್ಕೆ ಅವಳು ನಾನು ಹೇಗೆ ನಿಮ್ಮೊಡನೆ ಬರಲಿ? ನೀವೆಲ್ಲ ಹೋಗಿ ನೋಡಿಕೊಂಡು ಬನ್ನಿ ಎಂದರೆ ಅವಳಂತೆ ತಾವೂ ಸಿನಿಮಾವನ್ನು ಕೇಳಿಸಿಕೊಂಡೇ ಸಂತಸ ಪಡುತ್ತಿದ್ದರು. ಅದಕ್ಕಾಗಿ ಅವರು ತಮ್ಮ ಮನೆಯ ಹತ್ತಿರದಲ್ಲಿದ್ದ ಟಾಕೀಸಿನ ಹಿಂಭಾಗದ ವಿಸ್ತಾರವಾದ ಕಟ್ಟೆಯ ಮೇಲೆ ಕುಳಿತು ಮೈಯೆಲ್ಲ ಕಿವಿಯಾಗಿ ಸಿನಿಮಾವನ್ನು ಕೇಳಿಸಿಕೊಂಡು ಆನಂದಿಸುತ್ತಿದ್ದರು. ಇದು ಅವರ ಸ್ನೇಹ. ಅವರು ಅಂಜುಂಗೆ ಗೆಳತಿಯರಷ್ಟೇ ಅಲ್ಲ. ಆಕೆಯ ಕಣ್ಣಾಗಿದ್ದರು. ಆಕೆ ತಮ್ಮಂತೆಯೇ ಕಾಲೇಜಿನ ದಿನಗಳನ್ನು ಆನಂದಿಸಬೇಕೆಂದು ತಾವು ನೋಡುತ್ತಿದ್ದುದನ್ನು ಕೆಲವು ಬಾರಿ ಆಕೆಗೆ ಹೇಳುತ್ತ, ಕೆಲವು ಬಾರಿ ಅವಳಂತೆಯೇ ಕಿವಿಗಳಲ್ಲಿ ಆಸ್ವಾದಿಸುತ್ತ, ಜಾತಿ ಧರ್ಮಗಳ ಗಡಿ ಮೀರಿದ ನಿಸ್ಪೃಹ ಸ್ನೇಹಕ್ಕೆ ಮಾದರಿಯಂತಿದ್ದರು. ಸದಾ ಉತ್ಸಾಹದ ಚಿಲುಮೆಯಾದ ಅಂಜುಂ ಓದು ಮುಗಿದ ಕೂಡಲೇ ಉದ್ಯೋಗದ ಸಂದರ್ಶನಕ್ಕೆ ಸಿದ್ಧಳಾದಳು. ಅದಕ್ಕಾಗಿ ಮಾತಿನ ಮೂಲಕ ಅರಿಯಬಹುದಾದ ಮೊಬೈಲನ್ನು ಬಳಸಿ ಉಳಿದ ಆಪ್‌ಗಳನ್ನು ಅದರಲ್ಲಿ ಅಳವಡಿಸಿಕೊಂಡಳು. ಸಂದರ್ಶನದಲ್ಲಿ ಅವಳಿಗೆ ತನ್ನ ಕಾರ್ಯ ವಿಧಾನವನ್ನು ವಿವರಿಸಲು ಕೇಳಿದಾಗ ಅವಳು ನೀಡಿದ ಪ್ರಾತ್ಯಕ್ಷಿಕೆಗೆ ಉದ್ಯೋಗದಾತರು ದಂಗಾಗಿ ಉದ್ಯೋಗ ಅವಳಿಗೆ ಒಲಿದು ಬಂತು. ಆ ಪ್ರತಿಷ್ಠಿತ ಕಂಪನಿ ಅವಳಿಗೆ ಒಬ್ಬ ಸಹಾಯಕನನ್ನು ನೀಡಿ ಅವಳಿಗೆ ಗೌರವ ಸಲ್ಲಿಸಿತು. ಅಂಜುಂ ಇದನ್ನೆಲ್ಲ ಛಲದಿಂದ, ಸ್ವಾಭಿಮಾನದಿಂದ, ಆತ್ಮಬಲದಿಂದ ಸಾಧಿಸಿದಳು.ಅವಳ ಮುಂದಿನ ಬಾಳಿನ ಬಗ್ಗೆ ಯೋಚಿಸಬೇಕಾದ ಹಿರಿಯರು ಹೆದರಿದರು. ಆಗ ಆಕೆಯ ಬಾಳಿಗೆ ಬೆಳಕು ತಂದವರು ಮಧ್ಯಮ ದೃಷ್ಟಿ ಹೊಂದಿದ್ದ ಚಂದ್ರಶೇಖರ. ಇದನ್ನು ಒಪ್ಪದ ಆಕೆಯ ಹಿರಿಯರು ಆಕೆಯನ್ನು ತಮ್ಮ ಮನೆ, ಮನಗಳಿಂದ ದೂರ ಮಾಡಿದರು. ಒಂದು ರೀತಿಯಲ್ಲಿ ಅದು ಆಕೆಯ ಸುದೈವವೇ. ಈಗ ಒಲಿದು ಬಂದ ಪತಿಯೊಂದಿಗೆ ಸುಖದ ಸಂಸಾರ ನಡೆಸುತ್ತಿದ್ದಾಳೆ ಅಂಜುಂ. ಅವಳಿಗೆ ಎರಡು ಗಂಡು ಮಕ್ಕಳು. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ಅವತ್ತು ರಾತ್ರಿ ಪ್ರಯಾಣದಲ್ಲಿ ಒಂದು ಕಡೆ ಬಸ್ಸು ನಿಂತಾಗ ಇಳಿದ ನಾನು ಉಳಿದ ಹೆಂಗಸರನ್ನು ಸೇರಿಕೊಂಡು ‘ಹೆಂಗಸರಿಗೆ’ ಬೋರ್ಡಿನ ಕಡೆಗೆ ಹೊರಟೆ. ಸರತಿ ಸಾಲಿನಲ್ಲಿ ನನ್ನ ಹಿಂದೆ ಗಂಡ-ಹೆಂಡತಿ ಇಬ್ಬರು ಬರುತ್ತಿದ್ದರು. ನಾನು ಅವರನ್ನು ನಿದ್ದೆಗಣ್ಣಿನಲ್ಲಿ ಸರಿಯಾಗಿ ಗಮನಿಸಿರಲಿಲ್ಲ. ಟಾಯ್ಲೆಟ್ಟಿನ ಮುಂಬಾಗದವರೆಗೂ ಆಕೆಯ ಕೈಹಿಡಿದು ಬಂದ ಆ ಗಂಡ ಅವಳನ್ನು ಬಿಟ್ಟು, ನನ್ನನ್ನು ಉದ್ದೇಶಿಸಿ ‘ಮೇಡಂ, ಇವರನ್ನು ಸ್ವಲ್ಪ ಒಳಗೆ ಕರೆದುಕೊಂಡು ಹೋಗಿ’ ಎಂದರು. ಆಗಲೇ ನಾನು ಅವರಿಬ್ಬರನ್ನು ಸರಿಯಾಗಿ ಗಮನಿಸಿದ್ದು. ತಕ್ಷಣವೇ ಅವರ ಗುರುತು ಹತ್ತಿದ ನಾನು ‘ನೀವು ಚಂದ್ರಶೇಖರ ಅಲ್ವೆ? ‘ ಎಂದೆ. ಹೌದು ಎಂದ ಅವರಿಗೆ ನನ್ನ ಪರಿಚಯವನ್ನು ನಾನು ಹೇಳುತ್ತಿದ್ದಂತೆ ಅವರಿಗಾದ ಆನಂದ ಅಷ್ಟಿಷ್ಟಲ್ಲ. ನಗುನಗುತ್ತಲೇ ಮಾತಾಡುವ ಅಂಜುಂ ಈಗ ಕಿಲಕಿಲ ಎಂದಳು. ಸರಿಸುಮಾರು ಒಂದು ದಶಕದ ನಂತರ ಭೇಟಿಯಾದರೂ ಗುರುತು ಪರಿಚಯವನ್ನು ನಾವಿಬ್ಬರೂ ಮರೆತಿರಲಿಲ್ಲ. ಅವರಿಬ್ಬರನ್ನು ಮರೆಯುವುದಾದರೂ ಹೇಗೆ ಸಾಧ್ಯ? ಹಿಂತಿರುಗಿ ನಾವು ಮೂವರೂ ಬರುವಾಗ ಅವರ ಮಕ್ಕಳನ್ನು ಬೋರ್ಡಿಂಗ್ ಸ್ಕೂಲಿನಲ್ಲಿ ಬಿಟ್ಟಿದ್ದು ಅವರನ್ನು ತಾವು ನೋಡಲು ಹೋಗುತ್ತಿರುವುದಾಗಿ ಹೇಳಿದರು.ನೋಡುವುದೆಂದರೆ ಅವರಿಗೆ ಭಾವಿಸುವುದು, ಊಹಿಸುವುದು, ಸ್ಪರ್ಶಿಸುವುದು. ಇಂದ್ರಿಯಗಳನ್ನು ಮೀರಿದ ಭಾವಬಂಧದಲ್ಲಿ ಎಲ್ಲ ಸುಖವನ್ನೂ ಸೂರೆಗೊಳ್ಳುವ ಈ ಜೋಡಿಯನ್ನು ಕಂಡು ಮನ ತುಂಬಿ ಬಂದಿತು. ಅವರ ಸಂತೋಷಕ್ಕೆ , ತುಂಬು ಜೀವನಕ್ಕೆ ಅವರ ಮುಖದಲ್ಲಿ ಸದಾ ಇರುತ್ತಿದ್ದ ನಗು, ಮಂದಹಾಸ, ಹೊಳಪುಗಳೇ ಸಾಕ್ಷಿಯಾಗಿದ್ದವು. ಜಾತಿವಾದಗಳನ್ನು ಮುಂದಿಟ್ಟುಕೊಂಡಿದ್ದರೆ ಇವರ ಮುಖಗಳಲ್ಲಿ ಇವನ್ನು ಕಾಣುತ್ತಿದ್ದೆವೋ ಇಲ್ಲವೊ. ಅದೆಲ್ಲವನ್ನೂ ಮೀರಿದ ಮಾನವತಾವಾದ, ಮಾನವೀಯತೆಯ ನೆಲೆಯಲ್ಲಿ ಅವರಿಟ್ಟ ಹೆಜ್ಜೆಗಳು, ಅದಕ್ಕೆ ಸಹಾಯ ಮಾಡಿದ ಎಲ್ಲರೂ ಆ ಕ್ಷಣಕ್ಕೆ ನನಗೆ ಮಹಾತ್ಮರೆನಿಸಿದರು.ಒಲವು ನಲಿವುಗಳ ಭಾಷೆಯನ್ನು ಆಡುವ ಅರ್ಹತೆಯನ್ನು ಹೊಂದಿರುವ ಏಕಮಾತ್ರ ಜಾತಿ ಮಾನವಜಾತಿ. ನಮ್ಮ ನಡುವೆ ಇಂತಹ ಜಾತಿಯನ್ನು ಸದ್ದಿಲ್ಲದೇ ಸಲಹುತ್ತಿರುವ ಅಂಜುಂ, ಚಂದ್ರಶೇಖರ್ ರ ಸಂತತಿ ಸಾವಿರವಾಗಲಿ.

ಏನಿರದಿದ್ದರೂ ಸೂಕ್ಷ್ಮಮನಸ್ಸಿರ ಬೇಕು Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಡಿ ವಿ ಪ್ರಹ್ಲಾದರ ಆರ್ತ ಯಾಪನೆ “ದಯಾ ನೀ, ಭವಾ ನೀ” ಡಿ ವಿ ಪ್ರಹ್ಲಾದ ತಮ್ಮ ಹೊಸ ಸಂಕಲನ “ದಯಾ ನೀ, ಭವಾ ನೀ”  ಸಂಕಲನಕ್ಕೆ ನನ್ನನ್ನೆರಡು ಮಾತು ಬರೆಯಲು ಕೇಳಿದಾಗ ನನಗೆ ಆಶ್ಚರ್ಯ. ಏಕೆಂದರೆ ನಮ್ಮಲ್ಲಿ ಬಹುತೇಕರು  ಸ್ವ ಪ್ರತಿಷ್ಠೆ ಮತ್ತು ಒಣ ಸಿದ್ಧಾಂತಗಳನ್ನು ಮೆರೆಸಲು ಈ ನಡುವೆ ಕವಿತೆಯನ್ನೂ ಗುರಾಣಿಯಂತೆ ಬಳಸುತ್ತಿರುವ ಸಂಧಿಗ್ದ ಕಾಲವಿದು. ಈ ಇಂಥ ಕಾಲದಲ್ಲಿ ನಮ್ಮ ಸಂಕಲನಗಳಿಗೆ ಮುನ್ನುಡಿ ಹಿನ್ನುಡಿ ಬೆನ್ನುಡಿಗಳಿಗೆ ನಾವಾಶ್ರಯಿಸುವುದು ಪೀಠಾಧಿಪತಿಗಳ ಬೆನ್ನು ಕೆರೆಯುವ ಸನ್ನಿಧಾನಕ್ಕೆ ಮತ್ತು ಆ ಅಂಥ ಗುರು ಪೀಠ ನಮ್ಮನ್ನು ನಮ್ಮ ಸಂಕಲನವನ್ನು ಎಲ್ಲೆಲ್ಲಿ ಎಷ್ಟೆಷ್ಟು ಸಾಧ್ಯವೋ ಅಲ್ಲಲ್ಲೆಲ್ಲ ತೂರಿಸುವ ಹಿತಾಸಕ್ತಿ ಮತ್ತು ಶಕ್ತಿ ಹೊಂದಿದೆಯೇ ಅಂತ ಪ್ರಕಾಶನದ ಕರಾರಿಗೆ ಸಹಿ ಹಾಕುವ ಮೊದಲು ಖಾತರಿ ಮಾಡಿಕೊಳ್ಳುತ್ತೇವೆ. ಈ ಇಂಥ ಸಂಧಿ (ವಾತದ) ಕಾಲದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಏನೇನೂ ಅಲ್ಲದ ಆದರೆ ಬದುಕಿನ ಬಂಡಿಗೆ ಕವಿತೆಯೊಂದೇ ಮೆಟ್ಟಿಲು ಅಂತ ನಂಬಿ ಅದನ್ನೇ ಆಶ್ರಯವಾಗಿಟ್ಟುಕೊಂಡಿರುವ ನನ್ನಿಂದ ಅವರು ಮುನ್ನುಡಿ ಬರೆಸಿದ್ದು ಏಕೋ ಕಾಣೆ. ಇನ್ನು ಅವರ ಈ ಹೊಸ ಸಂಕಲನದ ಪದ್ಯಗಳನ್ನು ಕುರಿತು ಹೇಳುವ ಮೊದಲು ಅವರೇ ಕಟ್ಟಿ ಬೆಳೆಸಿದ ಸಂಚಯದ ಮೂಲಕ ಅದೆಷ್ಟು ಹೊಸ ಪ್ರತಿಭೆಗಳಿಗೆ ಅವರು ಹಾರುಮಣೆಯಾದರು ಮತ್ತು ಪ್ರಕಾಶನದ ಗಂಧ ಗಾಳಿಯ ಅರಿವೇ ಇಲ್ಲದ ನನ್ನಂಥ ಎಷ್ಟೊಂದು ಅನಾಮಿಕ ಮಿಂಚುಹುಳುಗಳನ್ನು ಮಿನುಗುವ ನಕ್ಷತ್ರಗಳನ್ನಾಗಿಸಿದರು.  ಹಾಗೆ ಮೆರೆಯ ಹೊರಟ ಅದೆಷ್ಟೋ ಮಿಣುಕುಗಳು ಉಲ್ಕೆಗಳಂತೆ ಉರಿದು ಹೋದದ್ದೂ ಈಗ ಇತಿಹಾಸ. ಇರಲಿ, ಗಾಯದ ಕಲೆ ಕಂಡ ಕೂಡಲೇ ಅನುಭವಿಸಿದ ನೋವಿನ ಯಾತನೆ ನೆನಪಾಗುವುದು ಸಹಜ. ಶ್ರೀನಿವಾಸ ರಾಜು ಮೇಶ್ಟ್ರು ಮತ್ತು ಪ್ರಹ್ಲಾದ್ ಪ್ರತಿ ವರ್ಷ ಕಾವ್ಯ ಸ್ಪರ್ಧೆ ನಡೆಸಿ ಕೈ ತುಂಬ ಪುಸ್ತಕಗಳನ್ನು ಕೊಡುತ್ತಿದ್ದರು. ಯಾವ ಪ್ರವೇಶ ಶುಲ್ಕವೂ ಇಲ್ಲದ ಆ ಸ್ಪರ್ಧೆಗೆ ನಾಮುಂದು ತಾಮುಂದೆಂದು ಬರುತ್ತಿದ್ದ ಅದೆಷ್ಟು ಕವಿತೆಗಳಿಗೆ ಸಂಚಯ ಆಶ್ರಯ ಕೊಟ್ಟು ಸಲಹಿತು. ನೆನೆದಾಗಲೆಲ್ಲ ಅವರ ನಿಸ್ಪೃಹ ಸಾಹಿತ್ಯ ಸೇವೆ ಕಣ್ಣ ಮುಂದೆ ಕಟ್ಟುತ್ತದೆ. ಇನ್ನು ಸಾಹಿತ್ಯ ಪತ್ರಿಕೆಗಳ ನಿಯತ ಪ್ರಸಾರವೇ ಇಲ್ಲದ ಕಾಲದಲ್ಲಿ ಸಂಚಯ ನಡೆದಷ್ಟೂ ಕಾಲವೂ ನಿಯಮಿತವಾಗಿ ನಿಯತ ಕಾಲಿಕವಾಗಿ ಬಂದಿತು. ಸಂಯುಕ್ತ ಸಂಚಿಕೆ ಎಂದು ಅಚ್ಚು ಹಾಕಿ ನಾಮ ಹಾಕುವವರ ನಡುವೆ ಅವರದು ಏಕಾಂಗಿ ಹೋರಾಟವಾಗಿತ್ತು. ವಿಶೇಷ ಸಂಚಿಕೆಗಳ ಮೂಲಕ ಸಂಚಯ ಸಾಹಿತ್ಯ ಚರಿತ್ರೆಯಲ್ಲಿ  ಇತಿಹಾಸದ ಪುಟಗಳನ್ನೇ ಬರೆಯಿತು. ಲಂಕೇಶ್, ತೇಜಸ್ವಿ, ಡಾ. ರಾಜ್, ಹಿಂದ್ ಸ್ವರಾಜ್ ಒಂದೇ ಎರಡೇ? ಈಗಲೂ ನನ್ನ ಪುಸ್ತಕದ ಕಪಾಟಲ್ಲಿ ಸಂಚಯದ ಸಂಚಿಕೆಗಳು ಸುಭದ್ರವಾಗಿ ಕೂತಿವೆ, ರೆಫರೆನ್ಸಿಗೆಂದು ತೆಗೆದಾಗಲೆಲ್ಲ ಮತ್ತೇನೋ ಹೊಸ ದಾರಿ ಕಾಣಿಸುವುದೂ ಉಂಟು. “ಡ್ರೀಮರ್” (1995) ಡಿ ವಿ ಪ್ರಹ್ಲಾದ್ ಅವರ ಮೊದಲ ಸಂಕಲನ. ಆಮೇಲೆ ನನ್ನಂಥವರ ಒತ್ತಾಯಕ್ಕೆ ತಂದದ್ದು “ನಾಳೆಯಿಂದ”.(2005) ೯೦ರ ದಶಕದ ಮೊದಲ ಸಂಕಲನದ ೧೧ ವರ್ಷಗಳ ತರುವಾಯ ಬಂದ ‘ನಾಳೆಯಿಂದ’ ಸಂಕಲನ ‘ಡ್ರೀಮರಿನ ಕನಸುಗಳು ಕರಗಿ ಹೋದ ಕುರುಹುಗಳಾಗದೇ ನಾಳೆಯಿಂದಲಾದರೂ ಮತ್ತೆ ಯತ್ನಿಸಿ ಸಫಲನಾಗುವ ಕನಸಿನ ವಿಸ್ತರಣೆಯೇ ಆಗಿತ್ತು. ನವ್ಯದ ಪ್ರಭಾವಳಿಯಲ್ಲೇ ಅರಳಿದ್ದ “ಡ್ರೀಮರ್” ‘ನಾಳೆಯಿಂದ’ ತರುವಾಗಲೇ ಸಾಕಷ್ಟು ಮಾಗಿದ್ದ. ನವ್ಯದ ಸಹಜ ಪ್ರತಿಮೆಗಳಾದ “ಸ್ವ” ಮತ್ತು ಎಲ್ಲವನ್ನೂ ಕಟೆದು ಕಟ್ಟುವ ಕನಸುಗಳಿದ್ದ ಡ್ರೀಮರ್ ನಾಳೆಯಿಂದ ತರುವಾಗ ವಯಸ್ಸಿನಲ್ಲಿ ನಿರ್ಧಾರದಲ್ಲಿ ಮತ್ತು ಅನುಭವ ಜನ್ಯ ಬದುಕ ಶ್ರೀಮಂತಿಕೆಯಿಂದ ಮಾಗಿದ್ದ. ಹಾಗಾಗಿ ಯಾವತ್ತಿಗೂ ಪೋಸ್ಟ್ ಪೋನ್ ಮಾಡುತ್ತಲೇ ಇರುವ ನಮ್ಮ ಕೆಲಸ ಕಾರ್ಯಗಳ ವೈಖರಿಗೆ ಕವಿ ಕೊಟ್ಟ ದಿಟ್ಟ ಉತ್ತರ ಅದಾಗಿತ್ತು. ಸ್ವತಃ ಸಾಹಿತ್ಯ ಪತ್ರಿಕೆಯೊಂದರ ಸಂಪಾದಕನಾಗಿ, ಸಂಕಿರಣ ಶೀರ್ಷಿಕೆಯ ಮೂಲಕ ಅದೆಷ್ಟು ಹೊಸ ಪ್ರತಿಭೆಗಳ ಪುಸ್ತಕಗಳಿಗೆ ಅವರಿವರಿಗೆ ಹೇಳಿ, ಬೇಡಿ ವಿಮರ್ಶೆ ಬರೆಸಿದರು. ದುರಂತ ಅಂದರೆ ಅವರ ಪುಸ್ತಕಗಳ ಬಗ್ಗೆ ಈ ಯಾವ ಮಹನೀಯರೂ ಸೊಲ್ಲೇ ಎತ್ತಲಿಲ್ಲ. ಸದ್ಯ ಇದೀಗ ಸಂಚಯದ ಪ್ರಕಟಣೆ ನಿಂತ ಮೇಲೆ ಪುನಃ ಪದ್ಯದ ಸಂಗಕ್ಕೆ ಪ್ರಹ್ಲಾದ್ ಹೊರಳಿದ್ದಾರೆ. ಯಾವತ್ತೂ ಬರಹಗಾರನಿಗೆ ಕವಿತೆಯೇ ತಂಗುದಾಣ, ನಿಲುದಾಣ ಮತ್ತು ಹಲವೊಮ್ಮೆ ಅಡಗು ತಾಣ. ಯಾಕೆಂದರೆ ನಮ್ಮೊಳಗಿನ ಕನಸು, ಊಹೆ, ಅನಿಸಿಕೆ, ಸಮಾಜದ ಮೇಲಣ ಟಿಪ್ಪಣಿಗಳಿಗೆ ಕವಿತೆಯ ಪೋಷಾಕು ತೊಡಿಸಿ ನಮ್ಮ ಒಳ ಮನಸ್ಸಿನ ಮಾತನ್ನು ಹೇಳುತ್ತೇವೆ. ಅದು ಮುಟ್ಟ ಬೇಕಾದವರಿಗೆ ಮುಟ್ಟಿತೋ ಇಲ್ಲವೋ ನಮ್ಮ ಶಂಖ ನಾವು ಊದುತ್ತಲೇ ಇರುತ್ತೇವೆ. ಎಲ್ಲೋ ಅಪರೂಪಕ್ಕೆ ಕೆಲವರು ಕ್ಲಿಕ್ಕಾಗಿ ಬಹುಮಾನ, ಪ್ರಶಸ್ತಿ, ಪಾರಿತೋಷಕಗಳ ಪಡೆದು ಇದ್ದಲ್ಲೇ ಸುತ್ತ ತೊಡಗುತ್ತಾರೆ. ಆದರೆ ಸಾಂಸ್ಕೃತಿಕ ಲೋಕದ ಸಕಲೆಂಟು ದೇವರ ಸಂಪರ್ಕವಿದ್ದೂ ಪ್ರಹ್ಲಾದ್ ಸಂಕೋಚದಲ್ಲೇ ಉಳಿದು ಬಿಟ್ಟರು. ಆ ಅವರ ಸಂಕೋಚವೇ ಅವರೆಲ್ಲ ಪದ್ಯಗಳ ಆತ್ಮವಾಗಿ ಮತ್ತು ಅವರು ನಡೆಯುತ್ತಿರುವ ಅವರದೇ ದಾರಿಯ ಪ್ರತಿಫಲನವಾಗಿಯೂ ನನಗೆ ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು ಈ “ದಯಾ..ನೀ  ಭವಾ..ನೀ” ಸಂಕಲನದ ಪದ್ಯಗಳನ್ನು ಓದುತ್ತ ಓದುತ್ತ ಟಿಪ್ಪಣಿಸುತ್ತ ಹೋದ ಹಾಗೆ ಇಲ್ಲಿನ ಎಲ್ಲ ಪದ್ಯಗಳೂ ಅವರ  ಮೊದಲೆರಡು ಸಂಕಲನಗಳ ಮುಂದುವರೆದ ತಂತುವಾಗಿಯೇ ನನಗೆ ಕಂಡಿದೆ. ಹಾಗೆ ನೋಡಿದರೆ ಎಲ್ಲ ಕವಿಗಳ ಹಣೆಬರಹವೂ ಇಷ್ಟೇ ಆಗಿದೆ. ಆಗಿರಬೇಕು ಕೂಡ. ತಾನು ಬಯಸಿದ ತಾನು ನಂಬಿದ ಸಿದ್ಧಾಂತದ ಪರ ವಕಾಲತ್ತು ಹಾಕುವ ಕವಿಯೊಬ್ಬ  ಎಷ್ಟೆಲ್ಲ ಸಂಕಲನ ತಂದರೂ ತಾನು ನಂಬಿದ ಸಿದ್ಧಾಂತಕ್ಕೆ ನಿಷ್ಠೆ ಇಟ್ಟುಕೊಂಡಿದ್ದು  ಸಂಕಲನದಿಂದ ಸಂಕಲನಕ್ಕೆ ಮತ್ತಷ್ಟು ವ್ಯಾಪಿಸುತ್ತ ಹೋಗುತ್ತಾನೆ. ಎಲ್ಲೊ ಕೆಲವರು ಶೋಕಿಗೆ ಅಥವ ಲೋಕಪ್ರಿಯತೆಯ ಹಂಬಲಕ್ಕೆ ಬಿದ್ದು ತಮ್ಮ ಸೊಂಟ ತಾವೇ ಮುರಿದುಕೊಂಡು ಅಲ್ಲಿಂದಿಲ್ಲಿಗೆ ಕುಪ್ಪಳಿಸುತ್ತ ಎಲ್ಲಿಯೂ ಸಲ್ಲದವರಾಗುತ್ತಾರೆ ಮತ್ತು ಒಟ್ಟೂ ಕಾಣ್ಕೆಯ ಕಾರಣದಿಂದ ಹೊರಗೇ ಉಳಿಯುತ್ತಾರೆ. “ಡ್ರೀಮರ್” ಪುಸ್ತಕದ ಮುನ್ನುಡಿಯಲ್ಲಿ ಎಕ್ಕುಂಡಿ ಅದೆಷ್ಟು ಚೆನ್ನಾಗಿ ಪ್ರಹ್ಲಾದರ  ಪದ್ಯಗಳನ್ನು ಬಗೆಯುತ್ತಲೇ ಅವನ್ನು ಧ್ಯಾನಿಸುವ ಆಪ್ತ ಶೈಲಿಯನ್ನು ಹೇಳಿಕೊಟ್ಟಿದ್ದಾರೆಂದರೆ ಅವರ ಮಾತಿನ ಮುಂದೆ ನಾನೇನು ಹೇಳಿದರೂ ಅದು ಪೇಲವವೇ ಆಗುತ್ತದೆ. ಇರುವ ಕೇವಲ ೧೮ ಕವಿತೆಗಳಲ್ಲೂ ಅದೇನು ನವ್ಯದ ಪ್ರತಿಮೆಗಳನ್ನು ಇಡಿಕರಿಸಿಟ್ಟಿದ್ದರು ಎಂದರೆ ಈ ಕಾಲದ ಹುಡುಗರು ತಮ್ಮ ನೂರು ಪದ್ಯಗಳಲ್ಲೂ ಅಲ್ಲಿನ ರೂಪಕ ಮತ್ತು ಪ್ರತಿಮೆಗಳನ್ನು ಮತ್ತೆ ಸೃಷ್ಟಿಸಲಾರರು. ರಸ್ತೆ ಬದಿಯಂಗಡಿಯಲ್ಲಿ ಬಿಡಿಸಿಟ್ಟ ಹಣ್ಣು ಮುತ್ತಿರುವ ನೊಣದ ಹಿಂಡಲ್ಲೂ ಅಲ್ಲೊಂದು ಜೇನು    (ಪ್ರತೀಕ್ಷೆ) ಅಂತ ಧೇನಿಸಿದ ಕವಿ ಗಂಡು ಬಿಕ್ಕುವ ಹಾಗಿಲ್ಲ ಹೆಣ್ಣು ನಕ್ಕ ನೆನಪಿಲ್ಲ ಬೆಳುಕು ಬೀರಿದ್ದ ಪ್ರಖರ ಬಲ್ಬುಗಳು ಬರ್ನಾಗಿ ಬಿತ್ತು ಕನಸು, ನೇಯುವ ಗಿರಣಿ ಬೆಂಕಿ ನುಂಗಿತ್ತು(ಬೃಹನ್ನಳೆಯ ಸ್ವಗತ) ಅಂತ ಹೇಳುವಾಗ ಬದುಕಿನ ಎರಡೂ ತುದಿಗಳನ್ನು ಅದೆಷ್ಟು ಸಲೀಸಾಗಿ ದಾಟಿಬಿಡುತ್ತಾರಲ್ಲ ಅದೇ ನನ್ನ ಪಾಲಿನ ಸೋಜಿಗ. ಡ್ರೀಮರಿನ ಎಲ್ಲ ಪದ್ಯಗಳೂ ಗೊತ್ತಿದ್ದೋ ಗೊತ್ತಿಲ್ಲದೆಯೋ ನವ್ಯದ ಭರ್ಜರಿ ಪೋಷಾಕು ತೊಟ್ಟಿವೆ. ಆ ಪೋಷಾಕಿಗೆ ಮುಖ್ಯವಾಗಿ ಅಡಿಗ ಕ್ವಚಿತ್ತಾಗಿ ರಾಮಾನುಜನ್ ಮತ್ತು ಅಪರೂಪಕ್ಕೆ ಎಕ್ಕುಂಡಿ ಬಟ್ಟೆ ಕೊಟ್ಟಿದ್ದಾರೆ. ಗೋತಾ ಹೊಡೆದ ಗಾಳಿಪಟ ಕರೆಂಟು ಕಂಬಿಯ ಮೇಲೆ ತಲೆ ಕೆಳಗು ಮಲಗಿತ್ತು    (ಗಾಳಿಪಟ) ಅನ್ನುವಾಗ ಯಾವ ಯಾವುವೋ ಕಾರಣಕ್ಕೆ ಉತ್ಸಾಹ ಕಳಕೊಂಡ ನಮ್ಮೆಲ್ಲರ ಬದುಕಾಗಿ ಆ ಗಾಳಿಪಟ ಕಾಡುತ್ತದೆ. ಇನ್ನು ಸಂಕಲನದ ಶೀರ್ಷಿಕೆಯೂ ಆಗಿರುವ “ಡ್ರೀಮರ್” ಓದಿದ ಮೇಲೆ ಅಂತರ್ಜಾಲದಲ್ಲಿ ಅದಕ್ಕೆ ಪ್ರೇರಣೆಯಾದ ಜಪಾನೀ ಕತೆಯನ್ನು ಹುಡುಕಿ ಓದಿದೆ. ತಲ್ಲಣಿಸಿದೆ. ಏಕೆಂದರೆ ಎಲ್ಲವನ್ನೂ ಮರೆತು ಭ್ರಮೆಯಲ್ಲಿ ಕೊಂಚಕಾಲ ಮಾತ್ರವೇ ಇರಬಲ್ಲೆವು. ಆಮೇಲೆ ಕಾಡುವುದು ಮತ್ತದೇ ನಮ್ಮ ಸುತ್ತಣದ ನಮ್ಮ ಜೊತೆಗಾರರ ಬದುಕೇ! ವಾಸ್ತವದ ಗಹಗಹಿಕೆಯ ಮುಂದೆ ಕ್ಷಣ ಸುಖದ್ದು ಬರಿಯ ಅಮಲು. ಕಡೆಗೂ ನಾವು ಬಯಸುವುದೇನು?, “ಸಾಬರ ಹುಡುಗ ಮತ್ತು ಹಳೇ ಮರ” ಕವಿತೆಯ ಸಾಲು; ಕೊಡು ಕೊಡು ನನಗೊಂದೇ ಒಂದು ಹೂ ಕೊಡು! ಅಂಗಿಗಿಟ್ಟು ಗುನುಗುವೆ ನನ್ನ ಹಾಡು! ಆದರೆ ಸದ್ಯದ ವರ್ತಮಾನ ಹೂವನ್ನಿರಲಿ ಒಣ ಎಲೆಯನ್ನೂ ಕೊಡದಷ್ಟು ಕಠಿಣವಾಗಿದೆ, ಕ್ರೂರವೂ ಆಗಿದೆ. ಇನ್ನು ಪ್ರಹ್ಲಾದರ ಎರಡನೆಯ ಸಂಕಲನ “ನಾಳೆಯಿಂದ” ದ ಕೆಲವು ಪದ್ಯಗಳ ಸಾಲು ಸ್ಮರಿಸಿ ಮುಂದಕ್ಕೆ ತೆರಳುತ್ತೇನೆ. ಈ ಸಂಕಲನದಲ್ಲಿ ಒಟ್ಟಾಗಿ ಇರುವುದು ಕೇವಲ ೨೫ ಕವಿತೆಗಳು. ತಾನು ಹೇಳ ಹೊರಟದ್ದನ್ನು ಎಲ್ಲಿ ಓದುಗ ದೊರೆ ಗಮನಿಸುವುದಿಲ್ಲವೋ ಎನ್ನುವ ಕಾರಣ ಕೊಟ್ಟು ನೂರು ಪದ್ಯಗಳನ್ನು ಅಡಿಕಿರಿಸಿ ಯಾವುದನ್ನೂ ಓದದಂತೆ ಮಾಡಿಕೊಂಡ ಹಲವು ಕವಿಗಳು ನಮಗೆ ಗೊತ್ತಿದ್ದಾರೆ. ನಾನೀಗಾಗಲೇ ಹೇಳಿದಂತೆ ಸಂಕಲನದಿಂದ ಸಂಕಲನಕ್ಕೆ ಕವಿಯ ಪಯಣದ ಹಾದಿ ಮುಂದುವರೆಯುವುದೇ ವಿನಾ ಅವನು ನಂಬಿದ ದಾರಿಯಲ್ಲ. ಹಾಗಾಗಿ ಕವಿ ಸೃಷ್ಟಿಸಿಕೊಂಡ ದಾರಿ ಇದುವರೆಗೂ ಯಾರೂ ಸವೆಸದ ಮತ್ತು ಆ ಕವಿಯೇ ಕಂಡು-ಕೊಂಡ ಕಚ್ಚಾ ರಸ್ತೆ ಆಗಿರಬೇಕು ಎನ್ನುವುದು ಲಾಕ್ಷಣಿಕರ ಅಭಿಮತ. ಇಲ್ಲಿರುವ ೨೫ ಕವಿತೆಗಳೂ ಡ್ರೀಮರಿನ ಮುಂದುವರೆದ ಕನಸುಗಳೇ. ಎಲ್ಲೋ ನವ್ಯದ ಬಿಸುಪು ಕಡಿಮೆಯಾದಂತೆ ಕಂಡು ಆಡುನುಡಿ ಕಂಡಿದೆ ಅಂದ ಮಾತ್ರಕ್ಕೇ ಇವು ಯಾವುವೂ ನವ್ಯದ ಮೂಸೆಯಲ್ಲಲ್ಲದೆ ಬೇರೆಲ್ಲಿಂದಲೂ ಉದಯಿಸಿಲ್ಲ. ಎಚೆಸ್ವಿ ಮುನ್ನುಡಿ ಇರುವ ಈ ಸಂಕಲನದ ಶೀರ್ಷಿಕೆಯೇ ಬಹುಮುಖ್ಯ ಪದ್ಯ “ನಾಳೆಯಿಂದ”. ನಮ್ಮ ಸೋಲನ್ನು ಒಪ್ಪಿಕೊಳ್ಳದ ಮತ್ತು ಅನಿಸಿದ್ದನ್ನು ಮಾಡಲಾಗದ ನಾವು ಸುಳ್ಳು ಸುಳ್ಳೇ ಮತ್ತೆ ಮತ್ತೆ ಹೇಳಿಕೊಳ್ಳುವ ಮಾತೆಂದರೆ ” ನಾಳೆಯಿಂದ”, ಇಂಗ್ಲಿಶಿನಲ್ಲಿ procrastination ಎಂಬ ಪದಕ್ಕೆ ತೀರ ಸಮೀಪದ್ದು. ಒಂದಲ್ಲ ಒಂದು ಕಾರಣ ಕೊಟ್ಟು ಮಾಡಬೇಕಾದ ಕೆಲಸವನ್ನು ( ಕಳ್ಳಂಗೊಂದು ಪಿಳ್ಳೆ ನೆವ) ಮುಂದಕ್ಕೆ ಹಾಕುವುದಕ್ಕೆ ನಾಳೆಯಿಂದ ಅಂತ ಜಾರಿಕೊಳ್ಳುತ್ತೇವಲ್ಲ ಅದೇ ಆಗಿದೆ. ಪ್ರಾಯಶಃ ಮತ್ತೆ ಪದ್ಯ ಬರೆಯಲು ತೊಡಗುತ್ತೇನೆಂದು ಪ್ರಹ್ಲಾದ್ ಅವತ್ತೇ ನಿರ್ಧರಿಸಿದ್ದಿರೋ ಹೇಗೆ?? ಜಗದ ಮೋಡದ ಮಾಡಿಗೆ ಯಾರು ಹೆಸರಿಟ್ಟವರು ಏರಿದಷ್ಟೂ ಎವರೆಷ್ಟು ಉಳಿಯುತ್ತದೆ ರವಷ್ಟು ( ಮೆಟ್ಟಲಾರದ ಮುಗಿಲು) ಅಂತ ಆರಂಭವಾಗುವ ಪದ್ಯ ಆ ಹಿಮದ ಆಲಯದ ಏರುವೆತ್ತರ ಬಿಟ್ಟು ಮುದುರಿ ನಿಂತ ಕುದುರೆಗೆ ಕೆನೆತವಿಲ್ಲ ಆವತ್ತಿನ ಮೊರೆತವಿಲ್ಲ ಅಂತ ಮುಂದುವರೆದು ಕಡೆಗೆ ನಿಲ್ಲುವುದು ಹೀಗೆ; ಮೆಟ್ಟಿ ಬಾವುಟ ನೆಟ್ಟ ಪ್ರತಿ ಎತ್ತರದ ತುದಿಗೂ ಒಂದೊಂದು ಬಟಾಬಯಲು ಮೆಟ್ಟಲಾರದ ಮುಗಿಲು. ನಮ್ಮೆಲ್ಲರೊಳಗಿನ ದೌರ್ಬಲ್ಯವನ್ನು ಹೀಗೆ ಅನಾಮತ್ತು ಎತ್ತಿ ಆಡುವ ಕವಿ ಹಾಗೇ ತಲೆಗೆ ಮೊಟಕುತ್ತಾನಲ್ಲ,  ಈ ಇಂಥ ಕವಿಯನ್ನು ನವ್ಯದ ಶಾಲೆಯ ತಂಟೆಕೋರ ವಿದ್ಯಾರ್ಥಿ ಅನ್ನದೇ ವಿಧಿಯಿಲ್ಲವಲ್ಲ! ಹತ್ತಿ ಹತ್ತಿ ಎತ್ತರಕ್ಕೆ ಇನ್ನೂ ಎತ್ತರಕ್ಕೆ ಕಾಣಲಾರದು ಯಾವ ಜಗದ ನೋವು ( ಭೀಮಣ್ಣನ ರಾಮಕಲಿ) ಭೀಮಸೇನ ಜೋಷಿಯವರ ‘ರಾಮ್ ಕಲಿ’ ರಾಗ ಕೇಳಿ ಅಂತ ಪದ್ಯದ ತಳದಲ್ಲಿ ಟಿಪ್ಪಣಿ ಇದೆ. ನಿಜವಾದ ರಾಮನನ್ನು (ರಾಮ ಅಂದರೆ ಆನಂದ) ಅನುಸರಿಸಿದರೆ ಹತ್ತಿಯಂತೆ ಹಗುರಾಗಿ ಎಂಥ ಎತ್ತರಕ್ಕೂ ಹತ್ತಿ ನಿಂತು ಜಗದೆಲ್ಲ ನೋವ ಪರಿಹಾರ ಅಂತ ಅರ್ಥೈಸಿಕೊಂಡರೆ ಜೀವ ನಿರುಮ್ಮಳವಾಗುತ್ತದೆ. ಇನ್ನು ‘ಒಂದು ವಿರಳ ಭೇಟಿ’ ಅನ್ನುವ ಸರಳ ಪದ್ಯ ಓದುವಾಗ ಯಾಕೋ ಪ್ರತಿಭಾ ನಂದಕುಮಾರರ “ನಾವು ಹುಡುಗಿಯರೇ ಹೀಗೆ” ನೆನಪಾಯಿತು. ಆ ಪದ್ಯದಲ್ಲಿ ಕವಿ ಗೆಳತಿಯ ಜೊತೆ ಏನೇನನ್ನೋ ಮಾತಾಡುತ್ತ ಮತ್ತೆ ಹಳೆಯ ಸ್ನೇಹವ ನೆನೆದು ಕಡೆಗೆ ಅವನ ಅವಳಲ್ಲೂ ತನ್ನ ಬಿಂಬವನ್ನೇ ಕಾಣುತ್ತಾಳೆ. ಆದರೆ ಈ ಪದ್ಯದ ಸರಾಗ ಓಟ ಆ ಪದ್ಯದ ಹಾಗೇ ಲಯವರಿತ ಹದದಲ್ಲಿ ಓಡುತ್ತೋಡುತ್ತಲೇ ಆಪತ್ತಿಗೆ ಆಗದ ಗೆಳೆಯನನ್ನು ಸ್ಮರಿಸುತ್ತದೆ. ಗೇಲಿ

Read Post »

ಇತರೆ

ನಾ ಮೆಚ್ಚಿದ ನಾಟಕ

ಲೇಖನ ನಾ ಮೆಚ್ಚಿದ ನಾಟಕ ಮಾಲಾ ಮ ಅಕ್ಕಿಶೆಟ್ಟಿ.   ಸುಮಾರು ಒಂದುವರೆ ವರ್ಷದ ಹಿಂದೆ  ಬೆಳಗಾವಿಯಲ್ಲಿ ಕುವೆಂಪು ವಿರಚಿತ “ಶ್ರೀರಾಮಾಯಣ ದರ್ಶನಂ” ನ ನಾಟಕ ರೂಪ, ದೇಹ ಮತ್ತು ಮನಸ್ಸಿಗೆ ಆನಂದ ನೀಡಿತ್ತು. ಅದ್ಭುತವಾದ ನಾಟಕ ಪ್ರದರ್ಶನವನ್ನು ನೋಡಿದ ಕೃತಜ್ಞತಾಭಾವ ಆ ವರ್ಷಕ್ಕೆ ಸಲ್ಲುತ್ತದೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಈ ಕೃತಿ ನಿರ್ಮಾಣಕ್ಕೆ ಸುಮಾರು ಒಂಬತ್ತು ವರ್ಷ ತಗುಲಿದೆ. ಅಂದರೆ ಕುವೆಂಪು ಇದನ್ನು ತಮ್ಮ ಮೂವತ್ತೆರಡನೇ ವಯಸ್ಸಿನಲ್ಲಿ ಪ್ರಾರಂಭಿಸಿ ನಲ್ವತ್ತೋಂದರಲ್ಲಿ ಮುಗಿಸಿದರು. ಈ ಕೃತಿಗೆ ಐವತ್ತು ವರ್ಷಗಳು ತುಂಬಿದ ಸವಿನೆನಪಿಗಾಗಿ ನಾಟಕರೂಪದಲ್ಲಿ ಪ್ರದರ್ಶನ ಮಾಡಲಾಗಿತ್ತು.        ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಈ ನಾಟಕವನ್ನು ಪ್ರದರ್ಶಿಸಲಾಗಿತ್ತು. ಮೂಲ ಕೃತಿ ನಡುಗನ್ನಡದಲ್ಲಿ ಇದ್ದು 5 ಸಂಚಿಕೆಗಳು, 22291 ಸಾಲುಗಳು ಹಾಗೂ 877 ಪುಟಗಳನ್ನು ಹೊಂದಿದೆ. ಇಂಥ ಬೃಹತ್ ಕೃತಿಯನ್ನು ಅದೂ ಮೂಲ ನಡುಗನ್ನಡದಲ್ಲಿ ನಾಟಕ ರೂಪಕ್ಕೆ ಇಳಿಸಿರುವುದು ಹೆಮ್ಮೆಯ ವಿಚಾರ. ನಾಟಕ 5 ಗಂಟೆಗೆ ಸೀಮಿತಗೊಂಡು 50 ಕಲಾವಿದರನ್ನು ಪರಿಚಯಿಸುತ್ತದೆ. ಈ ಮೊದಲು ಕುವೆಂಪುರವರ “ಮಲೆಗಳಲ್ಲಿ ಮದುಮಗಳು” 9 ಗಂಟೆಗಳವರೆಗೆ ನಾಟಕ ರೂಪದಲ್ಲಿ ಪ್ರದರ್ಶಿಸಲಾಗಿತ್ತು.ಆದರೆ ರಾಜ್ಯಾದ್ಯಂತ ಆಗಿರಲಿಲ್ಲ. ಆದರೆ ಇದು ರಾಜ್ಯಾದ್ಯಂತ ಪ್ರದರ್ಶನಗೊಂಡಿತು. ವೈಚಾರಿಕತೆಯ ತಳಹದಿಯನ್ನು ಇಲ್ಲಿ ಕಾಣಬಹುದು.           ನಾಟಕದ ಪ್ರಯೋಗ ಮೂಲ ನಡುಗನ್ನಡದಲ್ಲಾಗುತ್ತೋ ಅಥವಾ ಹೊಸಗನ್ನಡಕ್ಕೆ ರೂಪಾಂತರವಾಗಿರುತ್ತೊ ಎಂಬ ಗೊಂದಲದಲ್ಲಿದ್ದೆವು. ಆದರೆ ಪ್ರದರ್ಶನದ ಮೊದಲ ದೃಶ್ಯದಲ್ಲಿ ಅದು ಮನವರಿಕೆಯಾಯಿತು. ಅದನ್ನು ಮೂಲ ನಡುಗನ್ನಡದಲ್ಲೇ ಇಡಲಾಗಿತ್ತು. ಆದರೆ ಒಂದಂತೂ ನಿಜ ನಾಟಕದ ದೃಶ್ಯ, ನಟನೆ ಹಾಗೂ ಪ್ರದರ್ಶನದ ಶೈಲಿ ಮೂಲ ಕೃತಿಯನ್ನು ಓದದವರಿಗೂ ತಿಳಿಯುವಂತೆ ಪ್ರಸ್ತುತಪಡಿಸಿದರು. ಬಾಲವಿಲ್ಲದ ಹನುಮಾನ, ಬಾಣ ಬಿತ್ತಳೆಗಳಿಲ್ಲದ ರಾಮ ಹಾಗೂ ಇತರರು ಹಾಗೂ ಯುದ್ಧ ಸನ್ನಿವೇಶಗಳು ಅಮೋಘವಾಗಿ ಮೂಡಿಬಂದವು. ಕುಂಭಕರ್ಣನ ಪಾತ್ರವು ಪಾತ್ರಧಾರಿಯಿಲ್ಲದೆ ಯಶಸ್ವಿಯಾಗಿ ಪ್ರೇಕ್ಷಕರಿಗೆ ತಿಳಿಯುವಂತೆ, ಕೇವಲ ಎರಡು ದೊಡ್ಡ ಪಾದಗಳ ಮೂಖಾಂತರ ಮತ್ತು ಸಂಭಾಷಣೆ, ಬೆಳಕಿನ ಟೆಕ್ನಿಕ್ ನ ಸಹಾಯದಿಂದ ಪ್ರಸ್ತುತಪಡಿಸಲಾಗಿತ್ತು.              ಮರಾಠಿ ಭಾಷೆಯ ಪ್ರಭಾವ ಜಾಸ್ತಿನೇ ಇದೆ ಎನ್ನುವ ಬೆಳಗಾವಿಯಲ್ಲಿ ಜೀರಿಗೆ ಹಾಲ್ ತುಂಬಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಕನ್ನಡದ ಉತ್ಕೃಷ್ಟ ಕೃತಿಯ ನಾಟಕದ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದರು. ಸುಮಾರು 5 ಗಂಟೆಗಳಲ್ಲಿ ಸಂಪೂರ್ಣ ಕೃತಿಯನ್ನು ಹಿಡಿದಿಡಲು ಪ್ರಯತ್ನಿಸಲಾಗಿತ್ತು. ಅದೂ ಅಲ್ಲದೆ ಪೂರ್ತಿ 5 ಗಂಟೆಗಳು ಹೇಗೆ ಕಳೆದವು ಎಂದು ಗೊತ್ತಾಗದಷ್ಟು ನಾಟಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಹಿಂದಿನ ಕಾಲದ ಶ್ರೀಲಂಕಾ ಮತ್ತು ಅಯೋಧ್ಯೆಯ ವಸ್ತ್ರಾಲಂಕಾರವನ್ನು ಮರುಸೃಷ್ಟಿಸಲಾಗಿತ್ತು. ವಸ್ತ್ರಾಲಂಕಾರ ವಿಭಿನ್ನವಾಗಿ ಮನಸೂರೆಗೊಂಡು ಜೊತೆಗೆ ಸಂಗೀತದ ರಸಾನುಭವ ತುಂಬಾನೇ ನೂತನವಾದ ಪ್ರಯೋಗವೆನಿಸಿತು.ರಾಮಾಯಣದಲ್ಲಿ ಬರುವ ಆಯಾ ಪ್ರದೇಶಗಳಿಗೆ ಹೋಲುವಂಥ ವಿಶಿಷ್ಟವಾದ ಸಂಗೀತವನ್ನು ಪ್ರಯೋಗಿಸಿದರು. ಅಯೋಧ್ಯೆಯನ್ನು ಯಕ್ಷಗಾನ, ನಗಾರಿ, ಚಂಡೆ ಮಾದರಿಯಲ್ಲಿ, ಲಂಕಾವನ್ನು ನಾಗಾಲ್ಯಾಂಡ್ ಹಾಗೂ ಚಾವು ಮಾದರಿಯಲ್ಲಿ,ಕಿಷ್ಕಿಂದವನ್ನು ಮಿಳಾವ್ ಮತ್ತು ತಮಟೆ ವಾದ್ಯಗಳೊಂದಿಗೆ ವಿಭಿನ್ನವಾಗಿ ಪ್ರಯೋಗಿಸಿದರು.       ನಾಟಕದ ಸಂಭಾಷಣೆ ಎಲ್ಲಿಯೂ ಬೋರ್ ಅನಿಸಲಿಲ್ಲ ಜೊತೆಗೆ ಮಧ್ಯಮಧ್ಯದಲ್ಲಿ ಬರುವ ಸಂಗೀತ ಪ್ರೇಕ್ಷಕರನ್ನು ಮನರಂಜಿಸಿತು. ಅದರಲ್ಲಂತೂ ನಾಗಾಲ್ಯಾಂಡ್ನ ಮಾದರಿಯ ಸಂಗೀತ ಮನಸೂರೆಗೊಂಡಿತು. ಪ್ರತಿ ಹಂತವನ್ನು ಬೆಳಗಾವಿ ಪ್ರೇಕ್ಷಕರು ಆನಂದಿಸಿದರು. ನಾಟಕದ ಕೊನೆಯವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದು ಇಂಥ ನಾಟಕಗಳ ಪ್ರದರ್ಶನ ಹೆಚ್ಚೆಚ್ಚು ನಡೆಯಬೇಕೆಂಬುದನ್ನು ಪರೋಕ್ಷವಾಗಿ ಒತ್ತಾಯಿಸದಂತೆ ಕಂಡು ಬಂತು.              ಸಿನಿಮಾರಂಗವಂತೂ ಅತ್ಯಂತ ಜನಪ್ರಿಯ. ಸಮಾಜಮುಖಿ ವಿಚಾರಗಳನ್ನು ಸಿನಿಮಾದ ಮುಖಾಂತರ ಹೇಳುವುದು ತುಂಬಾನೇ ಸುಲಭ. ಎಲ್ಲ ವರ್ಗದವರು ಹಾಗೂ ಶಿಕ್ಷಣದ ವ್ಯತ್ಯಾಸಗಳಿದ್ದರೂ ಸಿನಿಮಾ ಎಲ್ಲರನ್ನು ರಂಜಿಸಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತದೆ. ಇದಕ್ಕೆ ಹೋಲಿಸಿದರೆ ನಾಟಕ ಪ್ರದರ್ಶನಕ್ಕೆ ಪ್ರೇಕ್ಷಕರ ಸಂಖ್ಯೆ ಕಡಿಮೆಯೇ. ಜೊತೆಗೇ ಓದುವ ಹವ್ಯಾಸವೂ ಜನರಲ್ಲಿ ಕಡಿಮೆ.          ಸಿನಿಮಾದಲ್ಲಿ ನಟಿಸುವ ನಟರ ನಟನೆ ತುಂಬಾನೇ ಸ್ವಾಭಾವಿಕ ಅಥವಾ ನೈಸರ್ಗಿಕ ಎಂದೆನಿಸುತ್ತದೆ. ಆದರೆ ಜನ ನಾಟಕವನ್ನು ನಾಟಕವಾಗಿಯೇ ಸ್ವೀಕರಿಸುತ್ತಾರೆ.ಬಹುಶಃ ಅದು ಸಿನಿಮಾದಂಥ ಸ್ವಾಭಾವಿಕತೆಯನ್ನು ತಂದು ಕೊಡಲ್ಲ. ಹಾಗೆಯೇ ಯೋಚಿಸಿದಾಗ ನಟರ ಅಭಿನಯ ಅಷ್ಟೊಂದು ಪ್ರತಿಭಾನ್ವಿತವಾಗಿರಬಹುದು ಜೊತೆಗೆ ಸಿನಿಮಾದ ಆಧುನಿಕ ತಂತ್ರಜ್ಞಾನ ಇದಕ್ಕೆ ಸಾಥ್ ನೀಡುತ್ತದೆ. ಪಾತ್ರಧಾರಿಗಳ ನಟನೆ ಪ್ರಶಂಸಾ ಅರ್ಹತೆಯನ್ನು ಪಡೆದಾಗೂ ಅದು ಕೇವಲ ನಾಟಕವೆಂದೇ ಪರಿಗಣಿಸಲಾಗುತ್ತದೆ. ಆದರೆ ಒಂದೊಂದು ನಿಜ ಸಿನಿಮಾದಲ್ಲಿರುವ ಹಾಗೆ ಬಹಳ ಟೆಕ್ಸ್ ಗಳಿಗೆ ನಾಟಕದಲ್ಲಿ ಅವಕಾಶವೇ ಇಲ್ಲ. ಎಲ್ಲವೂ ಒಂದೇ ಟೇಕ್ನಲ್ಲಿ ಅತ್ಯದ್ಭುತವಾಗಿ ಮೂಡಿಬರಲು ಪಾತ್ರಧಾರಿಗಳು ಶ್ರಮಪಡಬೇಕು. ವಿಪರ್ಯಾಸವೆಂದರೆ ಈ ಶ್ರಮ ಬಹಳಷ್ಟು ಸಿನಿಮಾ ಪ್ರಿಯರಿಗೆ ಕಂಡು ಬರುವುದೇ ಇಲ್ಲ. “ಶ್ರೀರಾಮಾಯಣ ದರ್ಶನಂ” ನಾಟಕದಲ್ಲಿ ಆಶ್ಚರ್ಯವನ್ನುಂಟು ಮಾಡಿದ್ದು ನಡುಗನ್ನಡ. ಹೈಸ್ಕೂಲ್ ಹಂತದಲ್ಲಿ ಯಾವುದಾದರೂ ಪದ್ಯ ಹಳಗನ್ನಡ ಅಥವಾ ನಡುಗನ್ನಡದಲ್ಲಿದ್ದಾಗ ಬಾಯಿಪಾಠ ಮಾಡುವುದು, ಕಡ್ಡಾಯವಾದಾಗ ಪಟ್ಟ ಕಷ್ಟಗಳು ಮಾಡಿದವರಿಗೇನೇ ಗೊತ್ತು. ಅಂಥದ್ರಲ್ಲಿ ಸಂಪೂರ್ಣ ಐದು ಗಂಟೆಗಳ ಕಾಲ ನಡೆಯುವ ಎಲ್ಲಾ ಸಂಭಾಷಣೆಯೂ ಅಪ್ಪಟ ನಡುಗನ್ನಡದಲ್ಲಿ ಪ್ರಸ್ತುತಪಡಿಸಲಾಗಿದೆ. ಇಷ್ಟೊಂದನ್ನು ನೆನಪಿಟ್ಟುಕೊಂಡು ದೃಶ್ಯಕ್ಕೆ ತಕ್ಕಂತೆ ಪ್ರದರ್ಶಿಸುವುದು ಶ್ಲಾಘನೀಯ. ಕನ್ನಡದ ಮತ್ತಷ್ಟು ಕೃತಿಗಳು ಹೀಗೆಯೇ ನಾಟಕದ ರೂಪ ಪಡೆದರೆ ಅನುಕೂಲ ಜಾಸ್ತಿ.ಜೊತೆಗೆ ಅತ್ಯುತ್ತಮ ಕೃತಿಗಳನ್ನು ಓದದವರು ಇದರ ಮುಖೇನ ಕೃತಿಗಳನ್ನು ಅರ್ಥಮಾಡಿಕೊಳ್ಳಬಹುದು ಹಾಗು ಪರೋಕ್ಷವಾದ ಓದನ್ನು ಆಸ್ವಾದಿಸಬಹುದು. ಇದಕ್ಕೆ “ಶ್ರೀರಾಮಾಯಣ ದರ್ಶನಂ” ಒಂದು ಉತ್ತಮ ಉದಾಹರಣೆಯಾಗಿದೆ.ನಾಟಕ ಬಹಳಷ್ಟು ಪ್ರದರ್ಶನಗಳನ್ನು ರಾಜ್ಯಾದ್ಯಂತ ಕಂಡಿತು. ನಾಟಕವನ್ನು ನೋಡಿ ಆನಂದಿಸಿದ ನನಗೆ ಇಂಥ ಹೆಚ್ಚೆಚ್ಚು ಪ್ರಯೋಗಗಳು ಕನ್ನಡದಲ್ಲಿ ಆಗಬೇಕೆಂದೆನಿಸಿತು.  ***************************************************

ನಾ ಮೆಚ್ಚಿದ ನಾಟಕ Read Post »

You cannot copy content of this page

Scroll to Top