ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಮಾಜಿ ಪ್ರದಾನಿಯವರ ಅನುವಾದಿತ ಕಥೆ

ಅನುವಾದಿತ ಕಥೆ ಗೊಲ್ಲರ ರಾಮವ್ವ (ಭಾಗ- ಎರಡು) ಮಾಜೀ ಪ್ರಧಾನ ಮಂತ್ರಿ ಶ್ರೀ ಪಿ.ವಿ. ನರಸಿಂಹರಾವ್ ಅವರ ಕಥೆಯ ಕನ್ನಡಾನುವಾದ                                                                 ಭಾಗ – ೨ “ಅದೆಲ್ಲ ಬಿಡವ್ವಾ ! ಅದೊಂದು ಕಥೆ. ಸ್ವಲ್ಪ ಹೊತ್ತು ನನ್ನನ್ನ ಇಲ್ಲಿ ಅಡಗಿಸಿಡು. ಮತ್ತೆ ನಾನು ಹೊರಟುಹೋಗ್ತೀನಿ” ಅಂತ ಅತಿ ಕಷ್ಟದಲ್ಲಿ ನುಡಿದನಾತ. “ಆ! ಹೋಗ್ತಾನಂತೆ ಹೋಗ್ತಾನೆ.. ! ಒಂದೇ ಸಲ ಸ್ವರ್ಗಕ್ಕೆ ಹೋಗ್ತೀಯಾ …! ಒಳ್ಳೆ ಬುದ್ಧಿವಂತನೇ ನೀನು… ಹೋಗು..! ಹು ! ಹೋಗ್ತಾನಂತೆ ಎಲ್ಲಿಗೋ !” ಹೊಸಬ ಮಾತಾಡಲಿಲ್ಲ. ಮುದುಕಮ್ಮ ತಕ್ಷಣ ಮೊಮ್ಮಗಳನ್ನ ಕರೆದಳು. ” ಮಲ್ಲೀ ! ಮಲ್ಲಿಮುಂಡೇ ! ದೀಪ ಹಚ್ಚು ಬೇಗ ! ಏನು ಆಗ್ಲೇ ನಿದ್ರೇನಾ ಹುಡುಗೀ” ದೀಪದ ಮಾತು ಕೇಳಿದ ತಕ್ಷಣ ಹೊಸಬ ಬೆಚ್ಚಿಬಿದ್ದು ಅಂದ. “ಬೇಡ ಬೇಡವ್ವಾ ! ದೀಪ ಹಚ್ಚಬೇಡ ನಿನ್ ಪುಣ್ಯ. ಪೋಲೀಸರು ನನ್ಹಿಂದಿದ್ದಾರೆ. ಹಿಡಿದು ಬಿಡ್ತಾರೆ “ “ಸಾಕು ಸುಮ್ನಿರು ! ಪೋಲೀಸರಿಗಿಂತ ಮುಂಚೆ ಸಾವಿನ ದೇವತೆ ನಿನ್ನ ಹಿಡಿದಾಳೆ ಅಂತ ಕಾಣ್ತದೆ” ಅಂತ ಗದರಿಸಿದಳು. ಮಲ್ಲಮ್ಮ ದೀಪ ಹಚ್ಚಿದಳು. ಮುದುಕಮ್ಮ ಒಂದು ಕಂಬಳಿ ಹಾಸಿದಳು. ದೀಪದ ಬೆಳದಿನಲ್ಲಿ ಬಂದವನನ್ನು ಪರೀಕ್ಷೆಯಾಗಿ ನೋಡಿದಳು. ಬಡಕಲು ಮೈಯ ಯುವಕ… ಹದಿನೆಂಟು ವರ್ಷಕ್ಕಿಂತ ಜಾಸ್ತಿ ಇರಲಿಕ್ಕಿಲ್ಲ… ಎಳೇ ಮೀಸೆ… ಗಂಭೀರತೆ ಸೂಚಿಸುವ ಕಣ್ಣು….ಸುಕುಮಾರವಾದರೂ ಸುನಾಯಾಸವಾಗಿ ಬಗ್ಗಬಲ್ಲ ದೇಹ…. ಸೌಮ್ಯ ಸೌಜನ್ಯದ ಮುಖಮಂಡಲ.. ಇದೆಲ್ಲ ನೋಡಿದ ಮುದುಕಮ್ಮನ ಮೊಗದಲ್ಲಿ ಸೋಜಿಗ ಕಂಡಿತು. “ಒಳ್ಳೆ ರಾಜಕುಮಾರನ ತರ ಐದೀಯಲ್ಲ ಮಗಾ ! ನಿನಗ್ಯಾಕ್ ಬಂತೋ ಈ ಕಷ್ಟ ? ಮಲಗು.. ಮಲಗು… ಈ ಕಂಬಳಿ ಮೇಲೆ ಮಲಗು… ಭಯ ಬೀಳ್ತೀಯಾ ಯಾಕೆ ? ಮಲಗು.. ! ಆ! ಹಾಗೇ.. ಮಲ್ಲಿ ಹುಡುಗೀ ! ಒಲೆಮೇಲೆ ಒಂದು ಗಡಿಗೆಯಲ್ಲಿ ನೀರಿಕ್ಕು. ಏ ಇದೇನೇ ಅಷ್ಟು ಮೆಲ್ಲಗೆ ಕದುಲ್ತಾ ಇದೀಯಾ ? ಇಲ್ಲಿ ಹುಡುಗನ ಜೀವ ಹೋಗ್ತಿದ್ರೆ ಇವಳಿಗಿನ್ನೂ ನಿದ್ರೆ ಮಬ್ಬೇ ಹೋಗ್ಲಿಲ್ಲ. ಊ ! ಇಕ್ಕೀದೀಯಾ ಗಡಿಗೆ ? ಆ ! ಇಲ್ಲಿ ಬಾ… ದೀಪ ಹುಡುಗನ ಹತ್ತಿರ ತಕ್ಕಂಬಾ.. ದೀಪಕ್ಕೂ ನನಗೂ ನಡುವೆ ಆ ದೊಡ್ಡ ಕಟ್ಟಿಗೆ ನಿಲ್ಲಿಸು. ಅದಕ್ಕೆ ಕಂಬಳಿ ಹೊದಿಸು. ಹೊದಿಸಿದೆಯಾ ? ಆ ! ಈಗ ಸ್ವಲ್ಪ ಹುಶಾರಾಗಿದಿಯಾ ಹುಡುಗಿ ! ಗಂಡ ಒಂದು ನಾಲ್ಕು ಸಲ ಮೈ ಮುರಿಯುವಹಾಗೆ ಮಾಡಿದರೇ ಇನ್ನೂ ಚುರುಕಾಗ್ತೀಯಾ ! ಸ್ವಲ್ಪ ಸಂದು ಬಿಟ್ಟು ಒಂದು ಮುಚ್ಚಳ ಕವುಚಿ ಹಾಕು ದೀಪದ ಮೇಲೆ. ಈ ಹುಡುಗನ ಮೇಲೆ ಬೆಳಕು ಇರಬೇಕು. ಮತ್ತೆಲ್ಲಾ ಕತ್ತಲು. ಅದು ಉಪಾಯ ! ಆ ! ಹಾಗೇ ! ಐತೆ ನಿನ್ಹತ್ರ ಜಾಣತನ ! ಗಂಡನ ಹತ್ರ ಒಳ್ಳೆ ಸಂಸಾರ ಮಾಡ್ತಿ ಬಿಡು.. ! ಆಯ್ತಾ ! ಈಗ ಅವನ ಹತ್ರ ಕುತ್ಕೋ ! ಅವನ ಮೈಮೇಲಿನ ಮುಳ್ಳೆಲ್ಲಾ ಮೆಲ್ಲಕ್ಕೆ ತೆಗಿ… ಅದೇನೇ ನಾಚಿಕೆ ನಿಂದು ಅವನ್ನ ಮುಟ್ಲಿಕ್ಕೆ.  ಭಾರೀ ಮಾನವತಿ ಬಿಡು ನೀನು. ನಿನ್ ನಾಚಿಕೆಗಿಷ್ಟ್ ಬೆಂಕಿಹಾಕ್ತು ! ನಿನ್ ನಾಚಿಕೆಯಿಂದ ಅವನ ಜೀವ ತೆಗಿತಿಯೋ ಹೆಂಗೆ ? ನಾಚ್ಕೆ ಅಂತೆ ನಾಚ್ಕೆ ! ಊ ! ಹೇಳಿದ ಕೆಲಸ ಮಾಡೇ ! ಪಾಪ ! ಹೆಣದ ತರ ಬಿದ್ದಿದಾನೆ ! ಅವನ್ನ ನೋಡಿದ್ರೆ ಅಯ್ಯೋ ಪಾಪ ಅನಿಸಲ್ಲಾ ನಿಂಗೆ ಕಳ್ಳಮುಂಡೆ ? ಆ ! ಹಾಗೇ! ನೋವು ಮಾಡ್ಬೇಡ ಅವನಿಗೆ ….!” ಮುದುಕಮ್ಮನ ಗೊಣಗಾಟ ಮಹಾ ಪ್ರವಾಹದ ತರ ಸಾಗಿ ಹೋಗುತ್ತಿತ್ತು. ಅದರಲ್ಲೇ ಬೈಗುಳ. ಅದರಲ್ಲೇ ಹಾಸ್ಯ. ಅದರಲ್ಲೇ ಆಜ್ಞೆ.. ಅವಳ ಆಜ್ಞೆಗಳೆಲ್ಲಾ ಚಕಚಕ ಅಮಲಾಗುತ್ತಿದ್ದವು. ಆ ಯುವಕನು ನಿಜವಾಗಿ ಅರ್ಧ ಪ್ರಾಣನಾಗಿ ಬಿದ್ದಿದ್ದಾನೆ. ಅವನ ಮೈಮೇಲಿನ ಮುಳ್ಳುಗಳನ್ನು ಒಂದೊಂದಾಗಿ ಮಲ್ಲಮ್ಮ ತೆಗೀತಿದ್ದಾಳೆ. ಅವನಿಗೆ ಯಾವುದೋ ಹೊಸ ಲೋಕಕ್ಕೆ ಬಂದು ಬಿದ್ದಂತಿದೆ. ಮತ್ತೆ ಮುದುಕಮ್ಮ ವರಾತ ಹಚ್ಚಿದಳು. ” ಎಲ್ಲಾ ಮುಳ್ಳೂ ಬಂದ್ವಾ? ಭಾರೀ ಕಷ್ಟ ಪಟ್ಟೀಯಾ ಬಿಡು ! ಪುಣ್ಯ ಬಂತು ಬಿಡು ! ನಿನ್ಗೆ ಮುಂದಿನ ವರ್ಷ ಒಂದು ಗಂಡು ಕೂಸು ಹುಟ್ಟುತ್ತೆ ಬಿಡು. ಸರಿ ! ಇಲ್ಲಿ ಹಿಡಿ ! ನೀರು ಬಿಸಿಯಾಗಿದೆ. ಈ ಬಟ್ಟೆ ತೊಗೊಂಡು ಅವನ ಗಾಯ ಎಲ್ಲ ಕಾಸು. ರಕ್ತದ ಕಲೆ, ಮಣ್ಣು ಹೇಂಟೆ ಎಲ್ಲ ತೆಗೆದು ಹಾಕು. ಸ್ನಾನ ಮಾಡಿದ ಹಾಗೆ ಇರಬೇಕು ನೋಡು… ಪಾಪ ! ಎಂಥಾ ಸುಕುಮಾರ ಶರೀರನೇ ಇವಂದು?  ಮುಟ್ಟಿದರೇ ಒಳ್ಳೆ ಅರಳೆ ತರ ತಗುಲ್ತಾ ಐತೆ. ಎಂಥವನಿಗೆ ಎಂಥ ಗತಿ ಬಂತೋ ಪಾಪ !” ನೋಡ್ತಾ ನೋಡ್ತಾ ಮಲ್ಲಮ್ಮನ ಆರೈಕೆಯಿಂದ ಯುವಕ ಚೇತರಿಸಿಕೊಂಡ. ಅವನ ಗಾಯಗಳ ನೋವು ಕಡಿಮೆಯಾಯಿತು. ಮೈಯೆಲ್ಲಾ ಸ್ವಚ್ಛವಾಯಿತು. ಇಷ್ಟರಲ್ಲಿ ಮುದುಕಮ್ಮ ಏನೋ ತಂದಳು. ಯುವಕನ ತಲೆ ದೆಸೆಯಲ್ಲಿ ಕೂತು ಅವನ ತಲೆ ಸವರುತ್ತಾ ಮತ್ತೆ ಗೊಣಗಾಟ ಹಚ್ಚಿದಳು. “ಇನ್ನ ಏಳು ಮಗಾ ! ಕೊಂಚ ಗಂಜಿ ತಣ್ಣನ ಮಜ್ಜಿಗೆಯಲ್ಲಿ ಹಿಸುಕಿ ತಂದೀನಿ…. ಹೊಟ್ಟೆಗೆ ಹಾಕ್ಕೋ…. ಯಾವಾಗಾದ್ರೂ ಕುಡಿದಿದೆಯಾ ಗಂಜಿ? ನೀವೆಲ್ಲ ಅಕ್ಕಿ ತಿನ್ನುವ ಜನ ಅಂತ ಕಾಣತ್ತೆ ! ಆದರೇ ಗೊಲ್ಲರ ರಾಮಿ ಗಂಜಿ ಅಂದ್ರೆ ಏನಂತ ತಿಳಿದೀ? ಹೋಗೋ ಪ್ರಾಣ ಮರಳಿ ಬರ್ತೈತೆ. ನೋಡು ಮತ್ತೆ ! ಜಾತಿ ಕೆಟ್ಹೋಗ್ತದೆ ಅಂತ ಭಯಾನಾ ? ನೀನು ಬ್ರಾಹ್ಮಣನಾದ್ರೂ, ಜಂಗಮನಾದ್ರೂ ಯಾವ ಜಾತಿಯವನಾದ್ರೂ ಸರಿ… ಮುಂಚೆ ಪ್ರಾಣ ಉಳಿಸಿಕೋ… ಅಷ್ಟು ಬೇಕಾದ್ರೇ ಅದೇನೋ ನಾಲಿಗೆ ಮೇಲೆ ಬಂಗಾರದ ಕಡ್ಡಿಯಿಂದ ಸುಡಿಸಿಕೊಂಡ್ರೆ ಮತ್ತೆ ಜಾತಿ ಬರುತ್ತಂತಲ್ಲ.. ಆ ! ಇನ್ನ ಕುಡಿದ್ಬಿಡು ಗಟಗಟ….” ಯುವಕ ಎದ್ದು ಕೂತ. ಮುದುಕಮ್ಮನ ಮಾತುಗಳಿಗೆ ಅವನಿಗೆ ನಗೆ ಬಂತೆನ್ನುವುದಕ್ಕೆ ಅವನ ಮುಖದ ಮೇಲೆ ಕಿರುನಗೆ ಕಾಣಿಸಿಕೊಂಡಿತು. ಅವಳನ್ನ ನೋಡ್ತಾ ಪಾತ್ರೆ ತೊಗೊಂಡ. ಅದರಲ್ಲಿ ನವಜೀವನ ಸಾರವಿರುವ ಹಾಗೆ ಗಟಗಟ ಕುಡಿದ. ಮುದುಕಮ್ಮನ ಮಾತು ಅಕ್ಷರಶಃ ಸತ್ಯವಾಯಿತು…. ಅವನಿಗೆ ಅರ್ಧಪ್ರಾಣ ಬಂದ ಹಾಗಾಯಿತು. ಅವನ ಮುಖ ಅರಳತೊಡಗಿತು. ಕಣ್ಣಲ್ಲಿ ಜೋವನ ಜ್ಯೋತಿ ಬೆಳಗತೊಡಗಿತು. ಮುದುಕಮ್ಮನಿಗೂ ಪೂರ್ತಿ ಸಮಾಧಾನವಾಯಿತು.  ಅವನಕಡೆ ನೋಡ್ತಾ ನೆರಿಗೆ ಬಿದ್ದ ಮೊಗದಿಂದ ನಗ್ತಿದ್ರೆ ನೆರಿಗೆ ಯೆಲ್ಲಾ ಮಾಯವಾದ ಹಾಗೆ ಅನಿಸಿತು. ಕೆಲ ನಿಮಿಷ ಹಾಗೇ ಇದ್ದರು ಆ ಮುವ್ವರೂ….. ಹೊಸಬನ ದೇಹವನ್ನು ಪ್ರೀತಿಯಿಂದ ತಡವುತ್ತಿದ್ದ ಮುದುಕಮ್ಮನ ಕೈ ಆತನ ಚಡ್ಡಿಯ ಕಿಸೆಯ ಹತ್ತಿರ ಹಠಾತ್ತಾಗಿ ನಿಂತುಹೋಯಿತು.  ತಕ್ಷಣ “ಇದೇನೋ ಇದು” ಎನ್ನುತ್ತ ಅವನ ಕಿಸೆಗೆ ಕೈಹಾಕಿ ಒಂದು ಉಕ್ಕಿನ ವಸ್ತು ಹೊರತೆಗೆದಳು. ” ಅದು ರಿವಲ್ವಾರ್ ಅವ್ವಾ ! ಗುಂಡಿನ ತುಪಾಕಿ…” ಅಂದ ಆ ಯುವಕ. ” ಯಾಕ್ಮಗಾ ಈ ತುಪಾಕಿ ? ನಮ್ಮನ್ನ ಕೊಲ್ತೀಯ ಏನು? ” ಅಂದಳು ಮುದುಕಮ್ಮ. ” ಇಲ್ಲವ್ವಾ ! ನಿಮ್ಮನ್ನ ಕೊಲ್ಲೋರ್ನ ಕೊಲ್ಲೋದಕ್ಕೆ ಅದು. ಈ ರಾತ್ರಿ ಇಬ್ಬರು ಪೋಲೀಸರನ್ನ ಕೊಂದೀನಿ. ಮೊನ್ನೆ ನಿಮ್ಮ ಊರಿನಲ್ಲಿ ನಾಲಕ್ಕು ಮಂದಿ ನಿರ್ದೋಷಿಗಳನ್ನ ಕೊಂದಿದ್ದು ಈ ಪೋಲೀಸಿನೋರೇ !” ಮುದುಕಮ್ಮನ ಮುಖಚರ್ಯೆ ವರ್ಣನಾತೀತವಾಗಿ ಬದಲಾದವು. ಮುಂಚೆ ಸ್ವಲ್ಪ ಹೆದರಿಕೆ… ಮತ್ತೆ ಸ್ವಲ್ಪ ಧೈರ್ಯ… ನಂತರ ಉತ್ಸಾಹ… ಅದರ ಬೆನ್ನಿಗೆ ವಿಜಯೋತ್ಸಾಹ.. ಸಾಲಾಗಿ ಕಂಡುಬಂದವು. ಯುವಕ ಮುದುಕಮ್ಮನ ಮುಖವನ್ನ ಸೂಕ್ಷ್ಮವಾಗಿ ನೋಡುತ್ತಿದ್ದ. ಭಾವ ಪರಿವರ್ತನೆ ಆದ ಹಾಗೆಲ್ಲಾ ಅವನ ಮನಸು ಪರಿಪರಿಯಾಗಿ ತರ್ಕಿಸುತ್ತಿತ್ತು. ಈ ವಿಷಯ ಯಾಕಾದ್ರೂ ಹೇಳಿದ್ನಾ? ಎನ್ನುವ ಪಶ್ಚಾತ್ತಾಪ ರೇಖೆ ಸಹ ಅವನ ಮನಸನ್ನು ಒಮ್ಮೆ ಸ್ಪರ್ಶಿಸಿ ಹೋಯಿತು. ಏನನ್ನುತ್ತಾಳೋ ಈ ಮುದುಕಮ್ಮ ? ಶತಾಬ್ದಗಳ ಕಾಲ ದಾಸ್ಯವನುಭವಿಸಿದ ಈ ಗ್ರಾಮೀಣ ದಲಿತರಲ್ಲಿ ತೇಜವೆಲ್ಲಿ ಉಳಿದಿದೆ ? ಇನ್ನು ಈ ಗುಡಿಸಲಿನ ಆಶ್ರಮದಿಂದ ತನಗೆ ಉದ್ವಾಸನೆ ತಪ್ಪಿದ್ದಲ್ಲ ಎಂದು ಅವನಿಗೆ ಅನಿಸಿತು. ಇಬ್ಬರು ಪೋಲೀಸರನ್ನ ಕೊಂದ ಕೊಲೆಗಾರನನ್ನು ಯಾರು ಇಟ್ಟುಕೊಳ್ಳುತ್ತಾರೆ? ಎಷ್ಟು ಜನ ತನ ಜೊತೆಗಾರ ಕಾರ್ಯಕರ್ತರು ಈ ಗ್ರಾಮಸ್ತರ ಪುಕ್ಕಲುತನದಿಂದಾಗಿ ಸಿಕ್ಕಿ ಹಾಕಿಕೊಳ್ಳಲಿಲ್ಲ ? ಯುವಕನ ಮನಸು ಪರಿಪರಿವಿಧವಾದ ವಿತರ್ಕಕ್ಕೆ ಒಳಗಾಗುತ್ತಿತ್ತು. ಸ್ವಲ್ಪ ಹೊತ್ತು ಯೋಚಿಸಿದ ಯುವಕನ ಮನಸು ಧಸಕ್ಕೆಂದಿತು. ” ಇಬ್ಬರ್ನಾ ಕೊಂದಿದ್ದು ? ಮತ್ತೆ ಇನ್ನಿಬ್ಬರು ಉಳಿದರಲ್ಲ ಮಗಾ ! ಅರ್ಧ ಕೆಲಸನೇ ಮಾಡಿದಿ…” ಯುವಕ ಆಶ್ಚರ್ಯಪಟ್ಟ.  ಆತನ ಸುಸಂಪನ್ನ ಮನಸು ಗರ್ವದಿಂದ ಕಲ್ಪನಾಕಾಶದಲ್ಲಿ ಭ್ರಮಣ ಮಾಡಹತ್ತಿತು. ಅವನ ತಾರುಣ್ಯದ ಭಾವುಕತೆ ಆತನನ್ನ ಮೈಮರೆಸಿತು. ಶ್ರೀರಾಮನ ಸ್ಮರಣೆಯಿಂದ ಉಕ್ಕಿ ಏರುವ ಆಂಜನೇಯನ ಮೈ ತರಹ ತನ್ನ ದೇಹ ಸಹ ಏರಿದಂತೆನಿಸಿತು. ರಿವಾಲ್ವಾರ್ ಗಾಗಿ ಕೈ ಚಾಚುತ್ತಾ ..” ಉಳಿದವರ ಕತೆ ಸಹ ಮುಗಿಸ್ತೀನಿ ಕೊಡವ್ವ ” ಅಂದುಬಿಟ್ಟ. ಮುದುಕಮ್ಮ ರಿವಾಲ್ವಾರ್ ತನ್ನ ಹತ್ತಿರ ಇಟ್ಟುಕೊಂಡು ಮಾತು ಪ್ರಾರಂಭಿಸಿದಳು. “ಸಾಕು ಬಿಡು ಇಲ್ಲಿಯವರೆಗೆ ! ಭಾರೀ ಬಹದೂರ್ ನೀನು ! ತಿಂದುಂಡು ಇರಲಿಕ್ಕೆ ಮನಸಾಗದೆ ಪೋಲೀಸರ ಜೊತೆಗೆ ವೈರ ಇಟ್ಕೊಂಡಿದಾನೆ ನೋಡು ತುಂಟ ಹುಡುಗ ! ಯಾಕೆ ನಿಂಗೆ ಈ ಪೋಲೀಸ್ ನೋರ ಜತೆ ಕಾದಾಟ ?” ಯುವಕನೆಂದ ” ನಾನು ಕಾಂಗ್ರೆಸ್ ವಾಲಂಟೀರ್ ಅವ್ವಾ!  ನೈಜಾಮ್ ರಾಜನ ಜೊತೆ ಕಾಂಗ್ರೆಸ್ ನವರು ಹೋರಾಡ್ತಾ ಇದಾರೆ. ಜನತೆ ಎಲ್ಲಾ ಹೋರಾಡ್ತಾ ಇದೆ. “ ಯುವಕನು ಯಾವುದೋ ರಾಜಕೀಯ ಸಿದ್ಧಾಂತದ ಬೋಧನೆ ಶುರುಮಾಡುವ ತರಾ ಇತ್ತು. ಮುದುಕಮ್ಮ ನಡುವಿನಲ್ಲೇ ಬಾಯಿ ಹಾಕಿ ” ಎಲ್ಲಿದೆ ನಿನ್ನ ಹೋರಾಟ ? ಇಲ್ಲಿ ದೊಡ್ಡೋರೆಲ್ಲಾ ಆ ಪೋಲೀಸರನ್ನ ತಮ್ಮ ಮನೆಗಳಲ್ಲೇ ಮಲಗಿಸಿಕೊಳ್ತಾರೆ . ಬಡವರು ಹೋರಾಡಿದ್ರೆ ಏನಾಗ್ತದೋ ?” ” ಬಡವರಿಂದಲೇ ಸಾಗ್ತಾ ಇದೆ ಅವ್ವಾ ಕಾಂಗ್ರೆಸಿನ ಹೋರಾಟ ” ಅಂದ ಯುವಕ. ” ಸರಿ ಹಾಗಾದ್ರೇ ನಿಮ್ಮ ಅದೇನು ಕಾಂಗಿರಿಜೋ ಗೀಂಗಿರಿಜೋ ಅದರಲ್ಲಿ ಯಾರೂ ವಯಸಾದವರೇ ಇಲ್ಲಾ? ಗಡ್ಡ ಮೀಸೆ ನೆರೆತೋರೆಲ್ಲಾ ಎಲ್ಲಿ ಹಾಳಾಗಿದಾರೆ?” “ಅವರೆಲ್ಲಾ ಶಹರಿನಲ್ಲಿರ್ತಾರೆ. ರಾಜನ ಹತ್ತಿರ ಮಾತಾಡ್ತಾರೆ. ಪ್ರಜೆಗಳ ಕಡೆಯಿಂದ ವಾದ ಮಾಡ್ತಾರೆ.. ಅಧಿಕಾರ ಕೊಡುಸ್ತಾರೆ.. ನಾಯಕತ್ವ ಮಾಡ್ತಾರೆ.” ಮುದುಕಮ್ಮ ಬೇಸರದಿಂದ ನಡುವಲ್ಲೇ ” ಏಹೇ ! ಇದೆಲ್ಲ ನನ್ಗೆ ಹಿಡಿಸ್ತಾ ಇಲ್ಲ. ಅಲ್ಲ. ದೊಡ್ಡ ದೊಡ್ಡವರೆಲ್ಲ ಬರೀ ಮಾತಾಡ್ತಾ ಕೂತ್ಕೋತಾರಾ! ಹಸು ಕೂಸುಗಳ್ನ ಪೋಲೀಸರ ಮೇಲಕ್ಕೆ ಕಳುಸ್ತಾರಾ ! ನಿಮ್ಮಂಥವರೇನೋ ನೀವು ಮದುವೆಮಾಡಿಕೊಂಡ ಹೆಂಡಂದರ್ನ ಮುಂಡಾಮೋಚಿಸಲಿಕ್ಕೆ ತುಪಾಕಿ ಹೆಗಲಿಗೆ ಹಾಕಿಕೊಂಡು ತಿರುಗ್ತೀರಾ ? ಎಷ್ಟು ಅನ್ಯಾಯದ ದಿನ ಬಂತು !  ಹಾಳಾಗ್ಹೋಗ್ಲಿ !” ಹಾಗೇ ಸ್ವಲ್ಪ ಹೊತ್ತು ಗೊಣಗಿ ಕೊಂಡು ಶಾಸಿಸಿದಳು. ” ಇಲ್ನೋಡು ! ಇನ್ನು ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಮಲಗು. ಇನ್ನು ಒಂದು ಸರಿಹೊತ್ತು ಇದೆ. ಸ್ವಲ್ಪ ನಿದ್ರೆ ಮಾಡಿದ್ರೆ ಬದುಕ್ತಿಯ. ಏನೇ ಮಲ್ಲೀ ! ನೋಡು. ನಾನು ನೀನು ಈ ರಾತ್ರಿಎಲ್ಲಾ ಕಾವಲಾಗಿರಬೇಕು. ನೀನು ಆ ಕೊನೆಗೆ. ನಾನು ಈ ಕೊನೆಗೆ. ತೂಕಡಿಕೆ ಬಂದರೇ ಜೋಕೆ. ಒಂದು ಕೊಟ್ಟೆ ಅಂದರೇ ದೆವ್ವ ಬಿಡತ್ತೆ. ಆ !”                                                                                                                                                                                                      (ಮುಂದುವರೆಯುತ್ತದೆ)

ಮಾಜಿ ಪ್ರದಾನಿಯವರ ಅನುವಾದಿತ ಕಥೆ Read Post »

ಪುಸ್ತಕ ಸಂಗಾತಿ

ಆಕಾಶಕ್ಕೆ ಹಲವು ಬಣ್ಣಗಳು

ಪುಸ್ತಕ ಸಂಗಾತಿ ಆಕಾಶಕ್ಕೆ ಹಲವು ಬಣ್ಣಗಳು ಗಜಲ್ ಪ್ರೇಮಿಗಳ ಭಾವಬಾಂದಳದಿ ಮಾಸದ ಬಣ್ಣಗಳ ಮೂಡಿಸಿದ ಕೃತಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಹೆಸರು ಮಾಡಿರುವ ಶಹಾಪುರದ ಹಿರಿಯ ಲೇಖಕರಾದ  ಶ್ರೀ. ಸಿದ್ಧರಾಮ ಹೊನ್ಕಲ್ ಅವರು ಮೈಸೂರಿಗರಿಗೆ ಪರಿಚಿತರೇನೂ ಅಲ್ಲ. ಮೈಸೂರಿನಲ್ಲೇ ಹುಟ್ಟಿ, ಬೆಳೆದು ಕಳೆದ ಹದಿನೇಳು ವರ್ಷಗಳಿಂದ ಸಂಘಟನೆ ಹಾಗೂ ಕವನ ರಚನೆಯಲ್ಲಿ ತೊಡಗಿಸಿಕೊಂಡಿದ್ದ ನನಗೆ ಹೊನ್ಕಲ್ ಅವರ ಪರಿಚಯವಾದುದು ಗಜಲ್ ಗಳಿಗೆಂದೇ ಮೀಸಲಾದ  ಗುಂಪೊಂದರಲ್ಲಿ. ಕಳೆದ ಒಂದೂವರೆ ವರ್ಷಗಳಿಂದ ಗಜಲ್ ಗುರುಗಳಾದ ಡಾ. ಗೋವಿಂದ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಗಜಲ್ ರಚನೆಯನ್ನು ಕಲಿಯುತ್ತಿರುವ ನಾನು ಕೆಲವು ತಿಂಗಳುಗಳ ಹಿಂದೆ  ‘ಗಜಲ್ ತೊರೆ ‘  ಗುಂಪಿಗೆ ಸೇರ್ಪಡೆಗೊಂಡ ನಂತರ ಮತ್ತೆ ಕಲಿಕಾರ್ಥಿಯಾಗಿ ಇತರ ಸದಸ್ಯರೊಡನೆ ಕಲಿಯುವ ಪ್ರಕ್ರಿಯೆ ಆರಂಭವಾಯಿತು. ಈ ಗುಂಪಿನಲ್ಲಿನ ಇತರೆಲ್ಲರ ಗಜಲ್ ಗಳನ್ನು ಓದಿ ಖುಷಿಪಡುವುದರ ಜೊತೆಗೆ ಪ್ರತಿದಿನವೂ ಗಜಲ್ ನ ವಿವಿಧ ರೀತಿಯ ರಚನೆಗಳ ಬಗ್ಗೆ ತಿಳಿಯುವ ಅವಕಾಶ ದೊರಕಿತು. ಕಾಲ ಕಳೆದಂತೆ ನನ್ನ  ರಚನೆಗಳೂ ಸೇರಿದಂತೆ ಇತರರ ಗಜಲ್ ಗಳನ್ನೂ ಪರಿಷ್ಕರಿಸುವ ಕೆಲಸದಲ್ಲಿ ನಿತ್ಯ  ತೊಡಗಿಸಿಕೊಳ್ಳಲು ಆರಂಭಿಸಿದೆ.ಈ ನನ್ನ ಕಾಯಕ ಗುಂಪಿನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇಂಥಹ  ಸಂದರ್ಭದಲ್ಲೇ ನನಗೆ ಹೊನ್ಕಲ್ ಅವರ ಪರಿಚಯವಾದದ್ದು…..ಅದೂ ವಿಚಿತ್ರ ಸನ್ನಿವೇಶವೊಂದರಲ್ಲಿ! ಆಗ ತಾನೇ ಗಜಲ್ ರಚನೆಯಲ್ಲಿ  ತೊಡಗಿದ್ದ ಹೊನ್ಕಲ್ ಅವರ ಗಜಲ್ ಒಂದರಲ್ಲಿ ಕಾಫಿಯಾಗಳ ಜೋಡಣೆ ತಪ್ಪಾಗಿದ್ದುದು ನನ್ನ ಗಮನಕ್ಕೆ ಬಂತು.’ ಹೇಳಲೋ ಬೇಡವೋ ‘ ಎಂಬ ದ್ವಂದ್ವದಲ್ಲಿ ಇದ್ದ ನಾನು ಕೊನೆಗೆ ಅವರ ತಪ್ಪು ಜೋಡಣೆಯ ಬಗ್ಗೆ ಗುಂಪಿನಲ್ಲಿ ತಿಳಿಸಿದೆ. ತಕ್ಷಣವೇ ಹೊನ್ಕಲ್ ಅವರಿಂದ ಬಂದ ಖಾರವಾದ  ಉತ್ತರ ” ಎಲ್ಲಾ ಸರಿಯಿದೆ. ಐ ನೋ ಬೆಟರ್ ದ್ಯಾನ್ ಯೂ….!”.  ಹೆದರಿದ ನಾನು ನನ್ನ ವಿಶ್ಲೇಷಣೆ ಸರಿಯಿದ್ದರೂ   ” ನನಗೆ ತಿಳಿದದ್ದನ್ನು ತಿಳಿಸಿದ್ದೇನೆ ಸರ್. ತಪ್ಪೆಂದೆನಿಸಿದರೆ ಕ್ಷಮಿಸಿ ” ಎಂದು ನೊಂದುಕೊಂಡೇ ಸಂದೇಶ ಕಳಿಸಿದೆ. ಆದರೆ ಗುಂಪಿನಲ್ಲಿ ನಮ್ಮೆಲ್ಲರಿಗೂ ಮಾತೃ ಸಮಾನರಾದ ಖ್ಯಾತ , ಹಿರಿಯ ಗಜಲ್ ಕಾರ್ತಿ ಶ್ರೀಮತಿ. ಪ್ರಭಾವತಿ ದೇಸಾಯಿ ಮೇಡಂ ಅವರು ನನ್ನ ನಿಲುವನ್ನು ಸಮರ್ಥಿಸಿ ಹೊನ್ಕಲ್ ಅವರಿಗೆ ಅವರ ರಚನೆಯ ತಪ್ಪುಗಳ ಬಗ್ಗೆ ಅರಿವು ಮೂಡಿಸಿದರು. ತಕ್ಷಣವೇ ಸೂಕ್ತ ತಿದ್ದುಪಡಿಗಳನ್ನು ಮಾಡಿದ ಹೊನ್ಕಲ್ ಅವರು ” ನೀವೇನೂ ಕ್ಷಮೆ ಕೇಳಬೇಕಿರಲಿಲ್ಲ ” ಎಂದು ಹೇಳಿ ನನ್ನ ಮನಸ್ಸಿನ ಉದ್ವೇಗವನ್ನು ಶಮನಗೊಳಿಸಿದರು. ಅಂದು ”ತಾನೇ ಸರಿಯೆಂ’ದು ದುಡುಕಿ ಗದರಿದವರೇ ಮುಂದೆ ಸಹೋದರ ಸಮಾನರಾದುದು ವಿಪರ್ಯಾಸ ! ಈ ಘಟನೆಯನ್ನು ಈಗಲೂ ಒಮ್ಮೊಮ್ಮೆ ನಾನು ನೆನೆದಾಗ ಮೊಗದಲ್ಲಿ ನಗು ಸುಳಿಯದೇ ಇರದು. ಇಲ್ಲಿಯವರೆಗೆ ಪ್ರವಾಸ ಕಥನಗಳು, ಕವನ ಸಂಕಲನಗಳೂ ಸೇರಿದಂತೆ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಸಿದ್ಧರಾಮ ಹೊನ್ಕಲ್ ಅವರ ಮೊದಲ ಗಜಲ್ ಸಂಕಲನ ” ಆಕಾಶಕ್ಕೆ ಹಲವು ಬಣ್ಣಗಳು” . ಆಕರ್ಷಕ ಮುಖಪುಟವನ್ನು ಹೊತ್ತಿರುವ ಈ ಸಂಕಲನದಲ್ಲಿ ಒಟ್ಟು ಐವತ್ತು ಗಜಲ್ ಗಳಿವೆ. ಪ್ರತೀ ಗಜಲ್ ನ ಆಶಯಕ್ಕೆ ಪೂರಕವಾದ ಚಿತ್ರವಿದೆ. ಅಚ್ಚುಕಟ್ಟಾದ ಮುದ್ರಣದಿಂದ ಇದು ಸಂಗ್ರಹಯೋಗ್ಯ ಕೃತಿಯಾಗಿದೆ. ಪ್ರೀತಿ ,ಪ್ರೇಮ , ವಿರಹ , ನೋವು …ಈ ಎಲ್ಲ  ಅಂಶಗಳನ್ನೊಳಗೊಂಡ ಗಜಲ್ ಗಳಷ್ಟೇ ಅಲ್ಲದೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲವು ಗಜಲ್ ಗಳೂ ಇದರಲ್ಲಿವೆ. ಉದಾಹರಣೆಗೆ : ಜಂಜಡದ ಬದುಕಿನಲಿ ಯಾರೂ ಕೈ ಹಿಡಿಯದಿರಬಹುದು ಸೋತೆನೆಂದು ಎಂದೆಂದಿಗೂ ನೀ ಹಿಂಜರಿಯಬೇಡ ಗೆಳೆಯ ಮತ್ತೊಂದು ಗಜಲ್ : ಮನಸ್ಸಿದ್ದಲ್ಲಿ ಮಾರ್ಗವಿರುತ್ತದಂತೆ ಮೊದಲು ಮನಸ್ಸಿಡುವುದು ನೀ ಕಲಿ ಗೆಳೆಯಾ ಭಾವನೆಗಳಿದ್ದಲ್ಲಿ ಮಾತ್ರ ಪ್ರೀತಿ ಹುಟ್ಟುವುದಂತೆ ಪ್ರೀತಿಸುವುದು ನೀ ಕಲಿ ಗೆಳೆಯಾ ಬಲಿತ ಪ್ರೀತಿ ಫಲಿಸದಿದ್ದರೂ, ಒಡನಾಟ ವ್ಯರ್ಥವಾದರೂ ಮತ್ತು ಅಗಲುವಿಕೆಯ ಸಂಕಟವಿದ್ದರೂ ಬಾಳಿನಲ್ಲಿ ಮುನ್ನಡೆಯಲೇಬೇಕೆಂಬ ಆಶಾಭಾವವಿರುವ ಗಜಲ್ ಓದುಗರ ಮನಗಳನ್ನು ತೇವಗೊಳಿಸುತ್ತದೆ. ಅದರ ಸಾಲುಗಳು ಇಂತಿವೆ : ಕೂಡುವ ಮಾತಿಗಿಂತ ಅಗಲುವ ಮಾತುಗಳೇ ಪದೇ ಪದೇ ಆಡುತ್ತಿಯೆಂದರೆ ನಿನಗೆ ಸಾಕೆನಿಸಿರಬಹುದು ಇನ್ನು ಮುಂದುವರಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಕಾರ್ಯಕಾರಣವಿಲ್ಲ ನೀ ನಡೆದುಬಿಡು ಇಷ್ಟು ದಿನ ನೀ ಕೊಟ್ಟ ಪ್ರೀತಿ ಪ್ರೇಮವ ಹಂಚಿಕೊಂಡ ಮಧುರ ಭಾವಗಳನೆಂದೂ ಮರೆಯಲಾರ ‘ಹೊನ್ನಸಿರಿಯು ಋಣ ಮುಗಿಯಿತೆಂದು ಮಸಣದಲ್ಲೇನೂ ಕೂಡುವುದಿಲ್ಲ ನೀ ಕಣ್ಮರೆಯಾಗಿಬಿಡು ಈ ಗಜಲ್ ನಲ್ಲಿ ‘ ಅವನ ‘ ಎಂಬುದರ ಬದಲು ‘ ನನ್ನ’ ಎಂದಿದ್ದರೆ ಸೂಕ್ತವಾಗಿತ್ತೆಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ಕಾರಣ, ‘ ನಮ್ಮೀ ಬಾಂಧವ್ಯದಲಿ ‘ , ‘ ಮೈತ್ರಿಯಲಿ ಒಂದಾದೆವು’ ….ಎಂಬ ಪದಗಳ ಬಳಕೆ ಕೆಲವು ಸಾಲುಗಳಲ್ಲಿ ಇದೆ. ಈ ಭೂಮಿಯಲ್ಲಿ ಗೀತೆ ಕುರಾನ್ ಬೈಬಲ್ ಗುರುವಾಣಿ ಹೀಗೆ ಏನೆಲ್ಲಾ ಒಳ್ಳೆಯದು ಬಿತ್ತಿಹರು ‘ಹೊನ್ನಸಿರಿ ‘ ಈ ಸಾಮರಸ್ಯ ಸಮಾನತೆಯ ಹೊಸ ಹೂವು ಏಕೆ ಮತ್ತೆ ಮತ್ತೆ ಅರಳುತ್ತಿಲ್ಲ ಸಾಕಿ ಜಾತಿ ವೈಷಮ್ಯವನ್ನು ಸಾಧಿಸುತ ‘ ತಾನೇ ಮೇಲೆಂ’ದು ಬೀಗುವ ಮನುಜರ ಮನದ ತೋಟದಲ್ಲಿ ಎಂದು ಸಮಾನತೆಯ ಹೂವು ಅರಳುತ್ತದೆಂಬ ಪ್ರಶ್ನೆ ಓದುಗರನ್ನು ಕಾಡುವುದು ಮಾತ್ರ ಸುಳ್ಳಲ್ಲ. ವಾಸ್ತವದ ಕಟುಸತ್ಯಕ್ಕೆ ಕನ್ನಡಿ ಹಿಡಿದ ಗಜಲ್ ಇದಾಗಿದೆ. ಹತ್ತಿರವಿದ್ದೂ ಅಪರಿಚಿತರಂತೆ ದೂರವಾದವರ ಬಗ್ಗೆ ಕೇಳಿದ್ದೆ ದೂರವಿದ್ದೂ ಹತ್ತಿರವಾಗಿ ನಿನ್ನ ಸೇರುವಷ್ಟರಲಿ ನೀ ಕನಸಾದೆ ಈ ಪ್ರೀತಿ ಪ್ರೇಮ ವಿರಹ ಕಾಮದ ಬಗ್ಗೆ ಅನೇಕ ಕಥೆಗಳು ಗೊತ್ತು  ‘ಹೊನ್ನಸಿರಿ’ಯ ಈ ಅಲೌಕಿಕ ಪ್ರೀತಿ ಅರಿವಾಗುವಷ್ಟರಲಿ ನೀ ನಕ್ಷತ್ರವಾದೆ ಪ್ರೀತಿಸಿದ ಜೀವ ದೂರವಾದಾಗ, ಮರೆಯಾದಾಗ, ಕಾಣದಾದಾಗ, ಮಾಯವಾದಾಗ, ಕನಸಾದಾಗ, ಕೊನೆಗೆ ನಕ್ಷತ್ರವಾದಾಗ ಅಸಹಾಯಕತೆಯಲಿ ಬಳಲುವ ನೊಂದ ಮನದ ಭಾವಗಳು ಸ್ವಗತದಂತೆ ಈ ಗಜಲ್ ನಲ್ಲಿ ಮೂಡಿವೆ. ಸಹೋದರ ಸಿದ್ಧರಾಮ ಹೊನ್ಕಲ್ ಅವರ ‘ ಆಕಾಶಕ್ಕೆ ಹಲವು ಬಣ್ಣಗಳು ‘ ಗಜಲ್ ಸಂಕಲನವನ್ನು ಇಡಿಯಾಗಿ ಓದಿ ಮುಗಿಸುತ್ತಿದ್ದಂತೆ  ಕೆಲವು ಗಜಲ್ ಗಳ ರಚನೆಗೆ ಶರಣರ ವಚನಗಳ ಪ್ರಭಾವವಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಗಜಲ್ ಗಳು ಅಷ್ಟೇ ಪರಿಣಾಮಕಾರಿಯಾಗಿ ಓದುಗರ ಮೇಲೆ ಪ್ರಭಾವ ಬೀರಿ ಅವರನ್ನು ಚಿಂತನೆಗೆ ಹಚ್ಚಲು ಕಾರಣವಾಗುತ್ತವೆ. ಮುಂಬರುವ ದಿನಗಳಲ್ಲಿ ಅವರ ಲೇಖನಿಯಿಂದ ಇನ್ನಷ್ಟು ಸತ್ವಯುತ ಹಾಗೂ ಮೌಲ್ಯಯುತ ಗಜಲ್ ಗಳು ಮೂಡಿ ಬರಲಿ. ಸರ್ವಶಕ್ತನಾದ ಆ ಭಗವಂತನ ಆಶೀರ್ವಾದದಿಂದ ಅವರೆಲ್ಲಾ ಆಶೋತ್ತರಗಳು ಈಡೇರಲಿ ಎಂದು ಪ್ರಾರ್ಥಿಸುತ್ತೇನೆ. *********                          ಎ . ಹೇಮಗಂಗಾ

ಆಕಾಶಕ್ಕೆ ಹಲವು ಬಣ್ಣಗಳು Read Post »

ಕಾವ್ಯಯಾನ

ಹೊಸ ಬಾಳಿಗೆ

ಕವಿತೆ ಹೊಸ ಬಾಳಿಗೆ ಶ್ವೇತಾ ಎಂ.ಯು.ಮಂಡ್ಯ ಹಳತು ಕಳೆದುಹೊಸ ವರ್ಷ ಮರಳಿಎಲ್ಲಿಂದಲೋ ಬಂದುಮತ್ತೆಲಿಗೋ ಸಾಗೋಈ ಬದುಕ ಹಾದಿಯಲಿಹೊಸ ಭರವಸೆಯ ಚಿಗುರಿಸಲಿ ರಾಗಯೋಗ ಪ್ರೇಮಸೌಂದರ್ಯಮೇಳೈಸಿ ಭೂರಮೆಯ ಸಿಂಗಾರಗೊಳಿಸಿರೆಂಬೆಕೊಂಬೆಗಳು ತೂಗಿ ಬಾಗಿನರುಗಂಪು ತಣ್ಣನೆಯ ಗಾಳಿ ಸೂಸಿಆನಂದವನೆ ಹಂಚಿವೆ ಈ ಹರುಷವು ಹೀಗೆ ಉಳಿಯಲಿಖಂಡ ಖಂಡಗಳ ದಾಟಿಅರೆಗೋಡೆ ಮಹಾಗೋಡೆಅರೆತಡಿಕೆ ಮಹಾಮನೆಗಳೊಳಗಿನರೋಗಗ್ರಸ್ತ ಮನಸುಗಳಲಿಸೊರಗದ ಸಂಜೀವಿನಿಯಾಗಲಿ ಮೈಮುದುಡಿ ಚಳಿಯೊಳಗೆಬಿಟ್ಟುಬಿಡದೆ ಕಾಡುವ ಶಾಪಗ್ರಸ್ತ ದಾರಿದ್ರಕ್ಕೆ ಬಲಿಯಾದ ಜೀವಗಳಿಗೆಬೇಡುವ ಕೈಗಳಿಗೆ ನೀಡುವಶಕ್ತಿಯ ನೀ ಇಂದಾದರುಹೊತ್ತು ತಾ ಹೊಸ ವರುಷವೇ ಬದುಕನ್ನೇ ಹಿಂಡಿದ ಕಾಣದ ಮುಖವುಕಾಣದೆ ಹೋಗಲಿ ಹಾಗೆಯೇಈ ಲೋಕದೊಳಗಿಂದ ಆಚೆಗೆಹೊಸ ಮುನ್ನುಡಿಹೊಸ ಕನ್ನಡಿಹೊಸ‌ಬಾಳಿನ ನಾಳೆಗೆ **************************

ಹೊಸ ಬಾಳಿಗೆ Read Post »

ಕಾವ್ಯಯಾನ

ಸಹಜ ಪ್ರೇಮ

ಕವಿತೆ ಸಹಜ ಪ್ರೇಮ ದೇವರಾಜ್ ಹುಣಸಿಕಟ್ಟಿ. ಅವಳದು ನನ್ನದು ಅಮರಪ್ರೇಮ ಅಲ್ಲವೇ ಅಲ್ಲ..ಕಾರಣ ಅವಳಿಗಾಗಿ ನಾನುಗೋರಿ ಕಟ್ಟಲಿಲ್ಲ..ವಿಷ ಉಣಿಸಲಿಲ್ಲ ಉಣ್ಣಲಿಲ್ಲ..ಇನ್ನು ಗೋಡೆ ಕಟ್ಟುವಬಾದಶಾಗಳು ಇರಲೇ ಇಲ್ಲಾ… ತಿಂಗಳಿಗೊಮ್ಮೆ ಅವಳಹೆಜ್ಜೆಗಳು ಭಾರವಾಗುತ್ತವೆ..ಆಗೆಲ್ಲ ಮನೆಯ ತುಂಬಾನನ್ನದೇ ಕಾರುಬಾರು..ಉಪ್ಪು ಹುಳಿ ಹೆಚ್ಚು ಕಡಿಮೆಆಗಿರುವ ಅನ್ನ ಸಾಂಬಾರು…ನನ್ನಂತಲ್ಲ ಅವಳು ಉಂಡು ಬಿಡುತ್ತಾಳೆತುಟಿಪಿಟಕ್ ಅನ್ನದೇ ಬಿಡದೇ ಚೂರು… ಮುನಿಸು ಬರುತ್ತೆ ಆಗಾಗ ಸಂತೆಯಲ್ಲಿಜೊತೆಯಾದ ಅಪರಿಚಿತ ಗೆಳೆಯನಂತೆಕಾರಣ ತುಸು ಹೊತ್ತಾಗಿ ರಾತ್ರಿ ಬಾರಿಂದ ಮರಳಿದ್ದು..ತುಸು ನಶೆ ಹೆಚ್ಚಾಗಿ ಪೆಚ್ಚುಪೆಚ್ಚಾಗಿ ಮಾತನಾಡಿದ್ದು..ತುಸು ಸಿಗರೇಟಿನ ಹೋಗೆಹೆಚ್ಚಾಗಿ ಉಸಿರಿದ್ದು….ಇದು ಹೆಚ್ಚೊತ್ತು ಇರದುಮತ್ತೆ ಅಪರಿಚಿತ ಗೆಳೆಯನಂತೆಯೇ ಕಾಣೆಯಾಗಿ ಬಿಡುತ್ತೆ ಸದ್ದಿಲ್ಲದಂತೆ… ಇರುಳು ಕಳೆದು ಹಗಲು ಹೊರಳುವಮುನ್ನ ಕರಗಿ ಮಂಜಿನಹನಿಯಂತೆ..ಮುಡಿಗೆ ಏರಿದ ಹಿಡಿ ಮಲ್ಲಿಗೆ…ಇಲ್ಲಾ ಒಂದ್ ಸಣ್ಣ ಬಿಗಿ ಅಪ್ಪುಗೆಸಾಕಿಷ್ಟೇ ಕಾರಣ ಅದಕೆ…ಅವಳು ಹೂವಾಗುತ್ತಾಳೆ ನಾನುದುಂಬಿ ಹೆಚ್ಚೇನು ಹೇಳಲಿ…ನಮ್ಮದು ಅಮರ ಪ್ರೇಮವಲ್ಲ..ಪ್ರೀತಿಯನೇ ಉಸಿರಾಡುವಂತೆಮಾಡಿದ್ದೇವೆ ಅಷ್ಟೇ…ಇಂಚಿಂಚು ತುಂಬಿದ್ದೇವೆ ಒಳಗೂ ಹೊರಗೂ ನಿಷ್ಠೆಯಿಂದ ಇಷ್ಟಿಷ್ಟೇ…ಹೊರಗೆ ಹೋಗಿ ಬರುವಾಗಲೆಲ್ಲ ಅವಳ ಕಂಗಳಲ್ಲಿಯ ಕಾಂತಿಯನ್ನೆ ಕನ್ನಡಿಯಾಗಿಸಿಕೊಂಡವ ನಾನುನನ್ನ ಮುಖಾರವಿಂದವನ್ನೇ ಮನೆಯ ಹೊಸ್ತಿಲ ಬೆಳೆದಿಂಗಳಾಗಿಸಿಕೊಂಡವಳು ಅವಳು..ಜೀವನದ ಸಂತೆಯಲಿ..ದಿನಗಳು ಸರಿದಿವೆ ಸದ್ದಿಲ್ಲದೆ ಮಗ್ಗುಲಲಿ…ಮತ್ತೆ ಹೇಳುತ್ತೇನೆ ನಮ್ಮದು ಅಮರ ಪ್ರೇಮವಲ್ಲ ಬಿಡಿ…ಒಂದಿಷ್ಟು ಪ್ರೀತಿ ಉಸಿರಿದ್ದೇವೆ ಹಗಲಿರುಳಿಡಿ… ನೆನಪಿದೆ ನನಗೆ ಮೊನ್ನೆ-ಮೊನ್ನೆ ಎನ್ನುವಹಾಗೆಆಗಸದ ಚಂದಿರನ ತಂದು ತೊಟ್ಟಿಲಲಿ ಇಟ್ಟಿದ್ದಾಳೆ…ನಕ್ಷತ್ರತಾರೆಗಳ ತೋರಿಸಿ ಉಣಿಸಿದ್ದಾಳೆ…ವಿಶ್ವ ವಿದ್ಯಾಲಯಗಳ ಮೀರಿದತಂದೆ ಎಂಬ ಪದವಿ ತಂದುನಿರಾಯಾಸವಾಗಿ ಮುಡಿಗೆರಿಸಿದ್ದಾಳೆ..ಅದಕ್ಕೆ ಅವಳು ವಿಶ್ವ ವಿದ್ಯಾಲಯನಾನು ನಿಷ್ಠೆಯ ವಿದ್ಯಾರ್ಥಿ…ಈಗಲೂ ಹೇಳುತ್ತೇನೆ ನಮ್ಮದುಅಮರ ಪ್ರೇಮ ಅಲ್ಲವೇ ಅಲ್ಲ….ಸಹಜ ಪ್ರೇಮ ಅಷ್ಟೇ..ನಾನು ಅವಳು ಬೆರೆತಿದ್ದೇವೆಎಷ್ಟೆಂದು ಗೊತ್ತೇ?ಹೆಚ್ಚೇನು ಅಲ್ಲ ಬರೀ ಒಂದಿಷ್ಟುಇಳಿ ಸಂಜೆಯಲಿಹಗಲು- ಇರುಳು ಬೆರೆತಂತೆ.. !!!ಕಣ್ಣು ರೆಪ್ಪೆಯನಗಲಿ ಇರದಂತೆ… !!!ಅಷ್ಟೇ ನಮ್ಮದು ಅಮರ ಪ್ರೇಮ ಅಲ್ಲವೇ ಅಲ್ಲ…ಪ್ರೀತಿಯನೆ ಉಸಿರಾಡಿದ್ದೇವೆ ಇಷ್ಟಿಷ್ಟೇ… ***************************

ಸಹಜ ಪ್ರೇಮ Read Post »

ಕಾವ್ಯಯಾನ

ಅಪ್ಪಣ್ಣನಿಗೊಂದು ಮನವಿ

ಕವಿತೆ ಅಪ್ಪಣ್ಣನಿಗೊಂದು ಮನವಿ ಎ.ಎಸ್.ಮಕಾನದಾರ ಅಪ್ಪಣ್ಣಎಷ್ಟೊಂದು ಕತ್ತಿಗಳುಸೇರಿಕೊಂಡಿವೆ ನಿನ್ನ ಹಸಬಿಯೊಳುಆ ಕತ್ತಿಗಳೇ ಮಾಡಿದ ಕ್ಷೌರಹೇಗೆ ಸೂಚಿಸಿ ಬಿಡುತ್ತವೆ. ಆ ಚಾಂದ ದಾಡಿ ಮುಸ್ಲಿಮನದೆಂದುಆ ಜುಟ್ಟು ಬ್ರಾಹ್ಮಣನನದೆಂದುಆ ಕೆಳದಾಡಿ ಸಿಖ್ಖನದೆಂದುಆ ಫ್ರೆಂಚ್ ದಾಡಿ ಕ್ರಿಶ್ಚಿಯನನದೆಂದು ಮೀಸೆ ಬಿಟ್ಟರೊಂದು ಜಾತಿಕೇಶ ಬಿಟ್ಟರೊಂದು ಜಾತಿಮುಡಿ ಕಟ್ಟಿ ದಾಡಿ ಬಿಟ್ಟರೊಂದು ಜಾತಿಎಲ್ಲವನು ಬೋಳಿಸಿಟ್ಟುಹೊಸದೊಂದು ವ್ಯವಸ್ಥೆನಿರ್ಮಿಸಬಾರದಿತ್ತೇ ಅಪ್ಪಣ್ಣ ನೀನುಅಣ್ಣ ಅಕ್ಕ ಅಲ್ಲಮರೊಂದಿಗೆಅನುಭವ ಮಂಟಪದ ಚುಕ್ಕಾಣಿಯಾಗಿದ್ದಿ ಯಾಕಣ್ಣ ಈ ವ್ಯವಸ್ಥೆಗೆಕಡಿವಾಣ ಹಾಕದೆ ಸುಮ್ಮನಾದೆಗಂಡಲ್ಲದೆ-ಹೆಣ್ಣಲ್ಲದೆ ಒಳಗಿರುವಆತ್ಮಕ್ಕೆ ಅನುಭವ ಮಂಟಪದಲಿಅಂತರಂಗ ಶುದ್ಧಿ ಮಾಡಿದ ನೀನೇಬಹಿರಂಗ ಶುದ್ಧಿಗಾಗಿಮಾಡಿದ ಈ ಕ್ಷೌರದಿಂದಅದ್ಹೇಗೆ ಅಶಾಂತಿ ತಾಂಡವವಾಡುತ್ತಿದೆ ? ಅಪ್ಪಣ್ಣನಿನಗೆ ನೆನಪಾಗಲಿಲ್ಲವೇಶೂನ್ಯನಾದ ಅಣ್ಣ ಬೆತ್ತಲಾದ ಅಕ್ಕ ಜಗದ ಕೊಳೆ ತೊಳೆಯುವ ಮಾಚಿದೇವ ತನ್ನ ಚರ್ಮವನೇ ಕತ್ತರಿಸಿ ಚಡಾವುಮಾಡಿದ ಹರಳಯ್ಯ ಕಲ್ಯಾಣಮ್ಮ ಯುದ್ಧಕ್ಕೆ ವಿದಾಯವಿತ್ತ ಅಶೋಕ ಬುದ್ಧನಾದ ಸಿದ್ಧ ಅಂತೆಯೇಎಸೆದು ಬಿಡಲು ಹೇಳುಎಲ್ಲ ಸಹೋದರರಿಗೆಈ ಜಾತಿ ಸೂಚಕ ಕತ್ತಿಗಳನು…….. **********************************

ಅಪ್ಪಣ್ಣನಿಗೊಂದು ಮನವಿ Read Post »

ಕಾವ್ಯಯಾನ

ಗಾಂಧಾರಿ ಸಂತಾನ

ಕವಿತೆ ಗಾಂಧಾರಿ ಸಂತಾನ ಕಾತ್ಯಾಯಿನಿ ಕುಂಜಿಬೆಟ್ಟು ಆ ಸೂಯ೯ ಹೆರುತ್ತಾನೆನೀಲಿ ನೀಲಿ ಮೋಡ ಪರದೆಗಳಹೆರಿಗೆ ಮನೆಯಲ್ಲಿನೀಳ ನೀಳ ಬೆಳಕು ಶಿಶುಗಳಕಣ್ಣುಗಳಿಗೆ ಕತ್ತಲ ಪಟ್ಟಿ ಕಟ್ಟಿಕೊಂಡುಈ ಗಾಂಧಾರಿಯ ಹಾಗೆ!ಹೊತ್ತದ್ದು ಹೆತ್ತು ವೀರಶತಜನನಿಹೆತ್ತದ್ದು ಸತ್ತು ದುಃಖಶತಜನನಿ!ಬಸಿರ ಹೊಸೆಹೊಸೆದು ಅತ್ತರೂಈಗ ವೇದವ್ಯಾಸನಿಲ್ಲ ಮಡಕೆಯಿಲ್ಲಮಹಾಭಾರತ ಮುಗಿದು ಹೋಗಿದೆಕುರುಕ್ಷೇತ್ರದಲ್ಲಿ ಸಾಲು ಗಭಾ೯ಪಾತ! ಆ ಸೂಯ೯ನದ್ದೋ ಅಕ್ಷಯ ಗಭ೯ !ಪ್ರಸವಬೇನೆಯೇ ಇಲ್ಲದೆ ಹೆರುತ್ತಾನೆತನ್ನ ಬೇನೆಯನ್ನೆಲ್ಲ ಭೂಮಿಯಹೆಂಗಸರ ಗಭ೯ಗಳಿಗೆ ಹಂಚಿಬಿಟ್ಟಿದ್ದಾನೆಹೆರುಹೆರುತ್ತಲೇ ಕಳೆದುಕೊಳ್ಳುತ್ತ ಬಿಕ್ಕಿಬಿಕ್ಕಿ ಕಿರಣಗಳನ್ನು ಹೆತ್ತು ಒಂದು ನಿರಾಳ ಸೊನ್ನೆಯಾಗಿಮುಳುಗುತ್ತಾನೆಇರುಳಿಡೀ ಕಡಲಿಗೆ ಪ್ರಸವ ಬೇನೆಅದರ ಕೊನೆಯ ಬಿಕ್ಕೊಂದು ಚಂದ್ರನಾಗುತ್ತದೆಹೆತ್ತು ಕೊಡುತ್ತದೆ ಸೂಯ೯ನನ್ನು ಆಗಸಕ್ಕೆಭೋಗ೯ರೆಯುತ್ತಿರುತ್ತದೆ ದಿನವಿಡೀಬಾರೋ ಬಾರೋ…. ಎಂದುಅವ ಮತ್ತೆ ಮುಳುಗುತ್ತಾನೆನಾಳೆ ಕಡಲ ಗಭ೯ದಿಂದ ಮುತ್ತಂತೆ ಎದ್ದುಕಿರಣಗಳನ್ನು ಹೆತ್ತು ಭೂಮಿಗೆ ಕೊಡಲುಭೂಮಿ ಪಡೆಯುತ್ತಾಳೆ ಹಡೆದುಕಳೆದುಕೊಳ್ಳಲು ಅವ ಹೆತ್ತ ಕಿರಣಗಳುಗಂಡು ಹೆಣ್ಣು ಜೀವ ಸಂಕುಲಗಳಗಭ೯ಗಳಲ್ಲಿ ಉರಿಯುವ ಅಂಡಾಣು ವೀರ್ಯಾಣುಗಳಾಗುತ್ತವೆಭ್ರೂಣಗಳ ಎದೆಗಳಲ್ಲಿ ಜೀವ ದೀಪಗಳಾಗಿ ಬೆಳಗುತ್ತವೆಕುಡಿದೀಪಗಳ ಆರದಂತೆ ಪೊರೆಯುತ್ತವೆ ತಾಯಿ ಹಣತೆಗಭ೯ ಕೊಳಗಳಲ್ಲಿ ತೇಲುತ್ತವೆ ಭ್ರೂಣಗಳು ಕಂಗಳಲ್ಲಿ ಕಿರಣಗಳ ಚಿಮ್ಮಿಸುತ್ತ ಬೆಳಕಿನ ಕಿರಣಗಳನ್ನುಬಲದ ಕೈಯಲ್ಲಿ ಕೊಡುತ್ತಲೇಎಡದ ಕೈಯಲ್ಲಿ ಎಳೆದು ನುಂಗುತ್ತಲೇ ಇರುತ್ತಾನೆ ಅವ ಜೀವ ದೀಪಗಳನ್ನುಪ್ರಾಣಿ ಪಕ್ಷಿ ಕ್ರಿಮಿ ಕೀಟ ಮನು ಸಂಕುಲಈ ಗಾಂಧಾರಿಯದ್ದೇ ಸಂತಾನಹೊತ್ತದ್ದನ್ನು ಹೆತ್ತು ಭೂಮಿಗೆ ತೆತ್ತು ಕಾಡ್ಗಿಚ್ಚಲ್ಲಿ ಸುಟ್ಟು ಹೋಗುತ್ತಲೇ ಇರುತ್ತವೆಆ ಸೂಯ೯ನ ಬೆಳಕಿನ ಕಿರಣವೊಂದುಬೆಂಕಿಕೊಳ್ಳಿಯಾಗಿ ಎದೆಹೊಕ್ಕಮಸಣದ ಕ್ಷಣದಲ್ಲಿ ****************************

ಗಾಂಧಾರಿ ಸಂತಾನ Read Post »

ಪುಸ್ತಕ ಸಂಗಾತಿ

“ಮಧ್ಯಘಟ್ಟವೆಂಬ ಒಂದು ಮೈಲಿಗಲ್ಲು”

ಪುಸ್ತಕ ಸಂಗಾತಿ “ಮಧ್ಯಘಟ್ಟವೆಂಬ ಒಂದು ಮೈಲಿಗಲ್ಲು” ಊರೂರು ಅಲೆಯುತ್ತಲೆ ಬದುಕು ಕಟ್ಟಿಕೊಳ್ಳುವುದನ್ನು ಕಲಿತ ಮನುಷ್ಯನಿಗೆ ವಲಸೆ ಎನ್ನುವುದು ಅವನ ಬದುಕಿನ ಅವಿಭಾಜ್ಯ ಅಂಗ. ತನ್ನ ಅಸ್ತಿತ್ವದ ಸಲುವಾಗಿ, ಹೊಟ್ಟೆ ಪಾಡಿನ ಸಲುವಾಗಿ ಆತ ಸೂಕ್ತ ಸ್ಥಳವೊಂದರ ಆಯ್ಕೆಗೆ ತೊಡಗುತ್ತಾನೆ. ಇದು ಮನುಷ್ಯ ಸಹಜ ಪ್ರಕ್ರಿಯೆ ಅವನ ಈ ಕ್ರಮದಿಂದಾಗಿಯೇ ರಾಜ್ಯ ಸಾಮ್ರಾಜ್ಯಗಳು ಹುಟ್ಟಿಕೊಳ್ಳುತ್ತವೆ ಅಳಿಸಿಹೋಗುತ್ತವೆ. ಕೆಲವೊಂದು ಚರಿತ್ರೆಯಲ್ಲಿ ದಾಖಲಾಗುತ್ತವೆ ಮತ್ತೆ ಮುಖ್ಯವಲ್ಲದ್ದು ಎಲ್ಲಿಯೋ ಕಣ್ಮರೆಯಾಗಿ ಬಿಡುತ್ತವೆ. ಅಂತಹ ಒಂದು ಕಾಲಘಟ್ಟದ ಎಳೆಯನ್ನು ಹಿಡಿದು ಒಂದು ಶತಮಾನದ ಕತೆಯನ್ನು “ಮಧ್ಯಘಟ್ಟ” ಅನಾವರಣಗೊಳಿಸುತ್ತ ಹೋಗುತ್ತದೆ. ಇಲ್ಲಿ ರಾಜ ಮಹಾರಾಜರ ಕತೆಗಳಿಲ್ಲ. ಹೋರಾಡಿದ ಸೈನಿಕರ ಸಂಪುಟವು ಅಲ್ಲ. ಆದರೆ ಶುದ್ಧ ಮನುಷ್ಯ ಜೀವಿಗಳ ಜೀವನಕ್ರಮ ಅವರು ಬದುಕು ಕಟ್ಟಿಕೊಂಡ ರೀತಿ ಮತ್ತು ಅದರ ಸಲುವಾಗಿ ಅವರು ಪಡುವ ಪರಿಪಾಡಲು ಮತ್ತು ಇದ್ದಲ್ಲಿಯೇ ಬದುಕನ್ನು ಹಸನಾಗಿಸಿಕೊಳ್ಳುವ ಕ್ರಮ ಈ ಕಾದಂಬರಿಯ ಜೀವಾಳ.ಮಗಳನ್ನು ಮಧ್ಯಘಟ್ಟಕ್ಕೆ ಮದುವೆ ಮಾಡಿಕೊಡುವ ಭೂದೇವಿ ಕೇರಳದ ಕುಂಬಳೆಯಿಂದ ಮಧ್ಯಘಟ್ಟಕ್ಕೆ ಬರುವ ಜೊತೆಜೊತೆಗೆ ಕಾದಂಬರಿ ಆರಂಭವಾಗುತ್ತದೆ. ಅವಳ ಬರುವಿಕೆಯ ಜೊತೆಯಲ್ಲಿಯೇ ಮಧ್ಯಘಟ್ಟದ ದುರ್ಗಮ ಕಾಡು, ಮರ, ಅಲ್ಲಿನ ಕಠಿಣ ಜೀವನ ಪದ್ಧತಿ ಇವುಗಳು ತೆರೆದುಕೊಳ್ಳುತ್ತ ಹೋಗುತ್ತದೆ. ಭಾಷೆ ಬಾರದೆ ಪುಟ್ಟ ಮಕ್ಕಳ ಜೊತೆಗಿಟ್ಟುಕೊಂಡು ಒಂಭತ್ತು ನದಿಗಳನ್ನು ಹತ್ತು ದಿನಗಳವರೆಗೆ ಕಾಲ್ನಡಿಗೆಯಲ್ಲಿ ದಾಟಿ ಬರುವ ಆ ಕಾಲದ ಗಟ್ಟಿ ಹೆಣ್ಣುಮಗಳೊಬ್ಬಳನ್ನು ಈ ಕಾದಂಬರಿ ಸಶಕ್ತವಾಗಿ ಕಟ್ಟಿಕೊಡುತ್ತದೆ. ಯಾವ ಪರಿಚಯವು ಇಲ್ಲದೆ ಆಕೆಯ ಸಹಾಯಕ್ಕೆ ನಿಲ್ಲುವ ಅಪರಿಚಿತರು ಆ ಕಾಲಮಾನದ ಮನುಷ್ಯ ಸಂಬಂಧಗಳ ಕುರಿತಾಗಿ ಮಹತ್ವದ ಅಂಶವನ್ನು ಕಟ್ಟಿಕೊಡುತ್ತಾರೆ. ೬೦ ವರ್ಷದ ಹಿರಿಯರೊಬ್ಬರು ೧೮ ವರ್ಷದ ಹೆಣ್ಣುಮಗಳೊಬ್ಬಳನ್ನು ಮದುವೆಯಾಗುವುದು ಸ್ವಲ್ಪ ವಿಚಿತ್ರ ಎನ್ನಿಸಿದರೂ. ಕಾಲಘಟ್ಟದ ಅವಧಿಯಲ್ಲಿ ನೋಡಿದಾಗ, ಅಲ್ಲದೆ ಹೆಣ್ಣುಮಕ್ಕಳನ್ನು ಹೊರೆ ಎಂದು ಭಾವಿಸುವ ಮನಸ್ಥಿತಿ ಈಗಲೂ ಬದಲಾಗದೆ ಇರುವಾಗ ಆಗಿನ ಕಾಲಮಾನದಲ್ಲಿ ಇದು ಸರ್ವೇಸಾಮಾನ್ಯ ವಿಷಯವಾಗಿರಬಹುದು ಎಂದು ಅನ್ನಿಸುತ್ತದೆ. ಅದೇ ರೀತಿ ಯಾವ ಪ್ರಶ್ನೆಗಳು ಇಲ್ಲದೆ ಇದನ್ನು ಒಪ್ಪಿಕೊಳ್ಳುವ ಹೆಣ್ಣುಮಕ್ಕಳು ಕೂಡ ಬದುಕನ್ನು ಗೆದ್ದ ಉದಾಹರಣೆ ಶ್ರೀದೇವಿಯ ಮೂಲಕ ಅರಿಕೆಯಾಗುತ್ತದೆ. ಇದೇ ಕಾಲಘಟ್ಟದಲ್ಲಿ ಬರುವ ಶಕುಂತಲೆ, ಗಿರಿಜಮ್ಮ, ಆ ಕಾಲಮಾನದ ದುರಂತ ನಾಯಕಿಯರ ಪ್ರತಿ ರೂಪದಂತೆ ಕಾಣಿಸುತ್ತಾರೆ. ಬ್ರಾಹ್ಮಣ ವರ್ಗದಲ್ಲಿದ್ದ ವಿಧವಾ ಸಮಸ್ಯೆಯ ಪ್ರತಿಬಿಂಬದ ಹಾಗೆ ಇಬ್ಬರು ಕಾಣಿಸುತ್ತಾರೆ. ತನ್ನ ಹನ್ನೆರಡನೆ ಸಣ್ಣ ವಯಸ್ಸಿಗೆ ಮದುವೆಯಾಗಿ ಗಂಡನನ್ನು ಕಳೆದುಕೊಂಡ ಶಕುಂತಲೆ ಕೇಶಮುಂಡನ ಮಾಡಿಸಿಕೊಂಡು ಮನೆಯಿಂದ ಹೊರದಬ್ಬಿಸಿಕೊಳ್ಳುತ್ತಾಳೆ. ತುತ್ತು ಅನ್ನಕ್ಕೆ ಗತಿ ಇಲ್ಲದೆ ಯರ್ಯಾರದ್ದೋ ಕೈ ಕಾಲು ಹಿಡಿದು ಮಠ ಸೇರುತ್ತಾಳೆ. ಮಠದ ಚಾಕರಿಯಲ್ಲಿದ್ದ ಅರ್ಚಕನೊಬ್ಬನಿಂದ ಬಸಿರಾಗುತ್ತಾಳೆ. ವಿಧವೆ ಬಸಿರಾಗುವುದು ಸಹಿಸಲು ಸಾಧ್ಯವೇ ಇಲ್ಲದಂತಹ ಅಪಚಾರವಾದ್ದರಿಂದ ತಕ್ಷಣ ಪಂಚಾಯ್ತಿ ನಡೆದು ಶಕುಂತಲೆಯನ್ನು ದಾರಿ ತಪ್ಪಿದವಳು ಎಂದು ನಿರ್ಣಯಿಸಿ ಹೊರ ಹಾಕಲಾಗುತ್ತದೆ. ಆದರೆ ಅದಕ್ಕೆ ಸಂಬಂಧಿಸಿದ ಅರ್ಚಕ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೆ ದೇವರಿಗೆ ಆರತಿ ಎತ್ತುವುದರಲ್ಲಿ ತಲ್ಲೀನನಾಗಿರುತ್ತಾನೆ. “ತಪ್ಪು ನಡೆಯುವುದು ಬರಿ ಹೆಂಗಸರಿಂದಲೇ” ಎನ್ನುವ ಸಿದ್ಧ ಮಾದರಿಯ ಮನಸ್ಥಿತಿಯ ಕೈಗನ್ನಡಿಯಂತೆ ಕಾಣಿಸುತ್ತದೆ. ಆದರೆ ಅಸಹಾಯಕ ಹೆಂಗಸರಿರುವ ಹಾಗೆ ಹೃದಯವಂತ ಗಂಡಸರೂ ಇರುತ್ತಾರೆ ಎನ್ನುವುದಕ್ಕೂ ಈ ಘಟನೆಯೆ ಸಾಕ್ಷಿಯಾಗುತ್ತದೆ. ಹೊರದಬ್ಬಿಸಿಕೊಂಡ ಬಸುರಿ ಹೆಂಗಸರನ್ನು ಸಮಾಜದದ ವಿರೋಧದ ನಡುವೆಯು ನಾಗಪ್ಪ ಭಟ್ಟರು ಮದುವೆಯಾಗುತ್ತಾರೆ. ತನ್ನ ಸಂಬಂಧಿಕರ ಜಾತಿಯವರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಕೊನೆಗೆ ಅದು ಅವರ ಬಹಿಷ್ಕಾರದವರೆಗೆ ಬಂದು ನಿಲ್ಲುತ್ತದೆ. ಬಹಿಷ್ಕಾರಕ್ಕೆ ಒಳಗಾಗಿ ಕೊನೆಗೆ ತಮ್ಮ ಆಸ್ತಿಯನ್ನು ಕಳೆದುಕೊಳ್ಳುತ್ತಾರೆ. ಹೆಂಡತಿ ಮಗನ ಸಲುವಾಗಿ ಊರನ್ನೇ ಬಿಟ್ಟು ಬಂದು ತಾವು ನಂಬಿದ ಧ್ಯೇಯಗಳ ಬದುಕಿಸಿಕೊಳ್ಳುತ್ತಾರೆ. ಅಂತೆಯೇ ಜೀವನ ಪರ್ಯಂತ ಬಹಿಷ್ಕಾರಕ್ಕೆ ಒಳಗಾದ ಶಕುಂತಲೆ ಮಗ ಗಣಪತಿ ಭಟ್ಟ ತನ್ನ ಶ್ರಮದಿಂದಾಗಿ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಾನೆ. ಇಲ್ಲಿ ಶಕುಂತಲೆ ಗೆಲ್ಲುತ್ತಾಳೆ. ಆದರೆ ಇದೇ ಪರಿಸ್ಥಿತಿಗೆ ಸಿಲುಕಿಕೊಳ್ಳುವ ಗಿರಿಜಮ್ಮ ಊರ ಮುಖಂಡನೊಬ್ಬನಿಗೆ ಬಸಿರಾಗುತ್ತಾಳೆ. ಆದರೆ ತನ್ನ ಬಸುರಿಗೆ ಕಾಣವಾದವನ ಹೆಸರನ್ನು ಮುಚ್ಚಿಡುವ ಸಲುವಾಗಿ ಅವನ ಆಜ್ಞೆಯಂತೆಯೇ ಊರಿನ ಹಲವರ ಹೆಸರು ಹೇಳಿ ಕೊನೆಗೆ ಗುರುಗಳೊಬ್ಬರ ಹೆಸರನ್ನು ಹೇಳಿ ಅವರ ಉರಿಗಣ್ಣಿಗೆ ಗುರಿಯಾಗಿ ಕೊನೆಗೆ ತನಗಿನ್ನು ಬದುಕು ಇಲ್ಲ ಎನ್ನುವ ನಿರ್ಣಯಕ್ಕೆ ಬಂದು ಹುಚ್ಚಿ ಎನ್ನುವ ಪಟ್ಟ ಕಟ್ಟಿಸಿಕೊಂಡು ಆತ್ಮಹತ್ಯೆಗೆ ಶರಣಾಗುತ್ತಾಳೆ. “ಕಿರೀಟ ತೊಟ್ಟವು ರಾಜರಾದ, ಪತ್ನಿ ಉಪಪತ್ನಿಯರನ್ನು ಸಂಪಾದಿಸಿದ, ಶ್ರೀಮಂತರು ತಾವು ರಾಜರ ಹಾಗೇಯ ಹೇಳಿ ತೋರಿಸಲೆ ತಲೆಮೇಲೆ ಮುಂಡಾಸ ಸುತ್ತಿದ. ಕಂಡವರನ್ನು ಬೇಕಾದ್ಹಂಗೆ ಬಳಸಿದ ಗರ್ಭಿಣಿಯಾಗಿದ್ದು ಗಿರಿಜಮ್ಮನ ತಪ್ಪು ಎಂದು ಎಲ್ಲರೂ ಹೇಳಿದವೇ ಹೊರತೂ ಅಂತ ಹಳಕಟ್ಟು ಕೆಲಸ ಮಾಡಿದ್ದು ಯಾವ ಗಂಡಸು ಹೇಳಿ ಗೊತ್ತಿದ್ದರೂ ಮಾತಾಡಿದ್ದಿಲ್ಲೆ ಪಂಚಾಯ್ತಿ ಸೇರಿಸಿ, ಗುರುಗಳೆದುರು ವಿಷಯ ಇಟ್ಟ ಮುಖ್ಯಸ್ಥನೇ ಈ ಕೆಲಸ ಮಾಡಿದ್ದಾದ್ರೂ ಬಡ ವಿಧವೆ ಗಿರಿಜಮ್ಮಂಗೆ ಸತ್ಯ ಹೇಳಲೇ ಉಸಿರು ಕಟ್ಟಿ ಹೋಯಿತು” ಈ ಸಾಲುಗಳು ಎಲ್ಲ ಕಾಲಕ್ಕು ಸಲ್ಲಬಹುದಾದ ಸಾಲುಗಳ ಹಾಗೆ ಕಾಣಿಸುತ್ತವೆ.ಮದುವೆ ಸಂಪ್ರದಾಯದ ಹೆಸರಿನಲ್ಲಿ ಹೆಣ್ಣನ್ನು ತನ್ನ ಮೂಲಭೂತ ಹಕ್ಕಿನಿಂದ, ಪ್ರಕೃತಿದತ್ತ ಆಸೆ ಆಸಕ್ತಿಗಳಿಂದ ವಂಚಿತಳನ್ನಾಗಿಸುವ ಈ ಹುನ್ನಾರಗಳಿಗೆ ಈ ಇಬ್ಬರು ಸಣ್ಣ ಸಾಕ್ಷಿಯಷ್ಟೆ. ಈ ಇಬ್ಬರ ನೆರಳ ಅಡಿಯಲ್ಲಿ ಕಳೆದುಹೋದವರೆಷ್ಟೊ.ಇನ್ನು ಈ ಇದಕ್ಕಿಂತ ತುಸು ಹೊರತಾಗಿ ಮಂಜಮ್ಮ ನಿಲ್ಲುತ್ತಾಳೆ. ಬಹುಶ: ಅದು ಬದಲಾದ ನಾಗರೀಕತೆಯ ಪರಿಣಾಮ ಮತ್ತು ಇಡೀ ಮಧ್ಯಘಟ್ಟ ನಿಧಾನವಾಗಿ ಹೊರಜಗತ್ತಿಗೆ ತೆರೆದುಕೊಂಡ ಪರಿಣಾಮವೂ ಇರಬಹುದು. ಆ ಹೊತ್ತಿಗೆ ಹೆಂಗಸರ ಯೋಚನಾಕ್ರಮವೂ ತುಸು ಬದಲಾಗುವುದನ್ನು ನಾವು ಕಾಣಬಹುದು. ಗಂಡ ಸತ್ತ ಮೇಲೆ ಮಂಜಿ ಸುಮ್ಮನೆ ಮನೆಯಲ್ಲಿ ಉಳಿಯುವುದಿಲ್ಲ. ಆಕೆಗೆ ಬದುಕಲೇ ಬೇಕಾದ ಅನಿವಾರ್ಯ. ಹೀಗಾಗಿ ಅವಳು ಗಂಡಸಿನ ಬಟ್ಟೆ ಧರಿಸಿ ಪೇಟೆಗೆ ಹೋಗುತ್ತಾಳೆ. ಮನೆಯ ವ್ಯವಹಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾಳೆ. ತನ್ನ ಪೇಟೆ ಅನುಭವವನ್ನು ಊರ ಹೆಂಗಸರಿಗೆಲ್ಲ ಹೇಳುತ್ತಾಳೆ. ಉಳಿಕೆ ಹೆಂಗಸರು ಅದನ್ನು ಸಾಹಸ ಎಂಬಂತೆ ಬಣ್ಣಿಸಿದರು ಪುರುಷ ಸಮಾಜದ ಪ್ರತಿರೂಪದಂತೆ ಕಾಣಿಸುವ ವಾಸುದೇವನಿಗೆ ಮಾತ್ರ ಇರುಸುಮುರುಸಾಗುತ್ತದೆ. “ಹೆಂಗಸ್ರಿಗೆ ಇಷ್ಟು ಧೈರ್ಯ ಇಪ್ಪಲಾಗ” ಎನ್ನುತ್ತಾನೆ. ಆದರೆ ಅವನ ಅಕ್ಕ ಶ್ರೀದೇವಿಗೆ ಸರಿಕಾಣುವುದಿಲ್ಲ. ಹೀಗಾಗಿಯೇ “ಮಂಜಿ ಪ್ಯಾಟಿಗೆ ಹೋಗಿ ವ್ಯವಹಾರ ಮಾಡದಿದ್ದರೆ ಮತ್ಯಾರು ಆ ಮನೆಗೆ ದಿಕ್ಕು ಆಗ್ತಿದ್ದ? ನೀನು ಆ ಮಕ್ಕಳಿಗೆ ಕೂಳು ಹಾಕ್ತಿದ್ಯ? ಎನ್ನುತ್ತ ಪ್ರಶ್ನಿಸುತ್ತಾಳೆ.ಹೀಗೆ ಮಧ್ಯಘಟ್ಟ ಇಡಿಯಾಗಿ ಕೆಲವೊಮ್ಮೆ ಹೆಣ್ಣು ಮಕ್ಕಳ ಬದುಕಿನ ಹಸೆಯ ಹಾಡಂತೆ ಕಾಣಿಸುತ್ತದೆ. ಸಂಸಾರದ ಜವಬ್ದಾರಿಯನ್ನೆ ಬಯಸದೆ ಊರೂರು ಸುತ್ತುತ್ತ ವರ್ಷಕ್ಕೊಂದು ಬಾರಿ ಮರೆಯದೆ ಬಂದು ಮಗುವ ಹುಟ್ಟಿಸಿ ಹೋಗುವ ಉಡಾಳ ಗಂಡನಿಂದಾಗಿ ರೋಸಿಟ್ಟು ಮಗಳ ಮದುವೆಯನ್ನು ಅಣ್ಣ ಕೈಕಾಲು ಹಿಡಿದು ಒಂದು ಹಂತಕ್ಕೆ ತಲುಪಿಸಿ ಇಲ್ಲಿಯೇ ಉಳಿದುಕೊಳ್ಳುವ ಭೂದೇವಿ.ಭಾಷೆಯೇ ಬಾರದ ಅಪರಿಚಿತ ಹಿರಿಯನೊಬ್ಬನ ಕೈ ಹಿಡಿದು ಸುಸೂತ್ರ ಸಂಸಾರ ನಡೆಸುತ್ತ ಹೋಗುವ ಶ್ರೀದೇವಿ. ಮಧ್ಯಘಟ್ಟಕ್ಕೂ ಕೇರಳಕ್ಕೂ ಕೊಂಡಿಯಾಗಿ ನಿಂತು ಬದುಕನ್ನು ಒಪ್ಪಗೊಳಿಸಲು ಯತ್ನಿಸುವ ಪುಡಿಯಮ್ಮ. ಪುರುಷ ಸಮಾಜದ ದಳ್ಳುರಿಗೆ ಬೆಂದು ನಿಡುಸುಯ್ಯುವ ಮತ್ತು ಅಲ್ಲಿಯೇ ಬದುಕು ಕಟ್ಟಿಕೊಳ್ಳುವ ಶಕುಂತಲೆ, ಮಂಜಮ್ಮ, ಕತೆಯಾಗಿ ಉಳಿದುಕೊಳ್ಳುವ ಗಿರಿಜೆ ಹೀಗೆ ಸಾಲು ಸಾಲು ಹೆಣ್ಣು ಮಕ್ಕಳ ಗಾಥೆಯೇ ಸಿಕ್ಕುತ್ತದೆ.ಮೂಲಕತೆ ಗೋಪಯ್ಯ ಶ್ರೀದೇವಿಯವರದ್ದು ಅದಕ್ಕೆ ಪೂರಕವಾದ ಭೂದೇವಿಯರದ್ದು ಎನ್ನಿಸಿದರು. ಇದು ಪೂರ್ತಿ ಮಧ್ಯಘಟ್ಟದ ತಲೆಮಾರುಗಳ ಕತೆ. ದಟ್ಟ ಕಾಡುಗಳ ನಡುವೆ ಬದುಕಿ ಕಟ್ಟಿಕೊಂಡವರ ಕತೆ. ಬಡತನದ ನಡುವೆಯು ಬಾಳೆಕಾಯಿಯನ್ನು ಬೇಯಿಸಿ ತಿಂದು ಬದುಕು ಕಟ್ಟಿಕೊಂಡವರ ಕತೆ. ಉಣ್ಣುವ ಗಂಜಿ ಉರುಳಿ ಹೋಗುತ್ತದೆ ಎನ್ನುವ ಕಾರಣಕ್ಕೆ ಅಡುಗೆ ಮನೆಯಲ್ಲಿ ಕುಳಿ ತೆಗೆದು ಉಂಡವರ ಕತೆ.ಕಾಡಿನ ಕತೆ. ನೆಲದ ಬೇರುಗಳ ಕತೆ. ಬದುಕನ್ನು ಬಂದಂತೆಯೆ ಬದುಕಿ ಹೋದವರ ಕತೆ. ತಮ್ಮ ನೂರು ಛಾಪುಗಳ ಒತ್ತಿ ಮುಂದಿನ ತಲೆಮಾರಿಗೆ ವರ್ಗಾಯಿಸಿದವರ ಕತೆ. ಹೊರಳಿಕೊಳ್ಳುವ ಬದುಕಿಗೆ ಸಾಕ್ಷಿಯಾದವರ ಕತೆ. ಕತೆಯಾಗದವರ ಕತೆ. ಈ ಕಾದಂಬರಿಯ ಅಲ್ಲಲ್ಲಿ ಕಾಣಿಸಿಕೊಳ್ಳುವ ತಮ್ಮ ನೋವುಗಳನ್ನು ಹಾಡಾಗಿಕೊಳ್ಳುವ ಹೆಣ್ಣುಮಕ್ಕಳ ಕತೆ.ಲೇಖಕರ ಅಗಾಧ ಪರಿಸರ ಪ್ರಜ್ಞೆ ಅದನ್ನು ಕತೆಗೆ ಪೂರಕವಾಗಿ ಬಳಸಿಕೊಂಡ ರೀತಿ ಮತ್ತು ಅದನ್ನು ಓದುಗನ ಎದೆಗೆ ಇಳಿಸುವ ಕ್ರಮ. ಈ ಎಲ್ಲವೂ ಈ ಹೊತ್ತಿಗೆಯನ್ನು ಕೈಗೆತ್ತಿಕೊಳ್ಳುವಂತೆ ಮಾಡುತ್ತವೆ.ಇನ್ನು ನವಿರಾದ ಹವ್ಯಕ ಭಾಷೆ. ಮಿಂಚು ಸುಳಿಯಂತೆ ಕಾಡುವ ರೂಪಕಗಳು, ಮಧ್ಯಘಟ್ಟದ ಮೂಲಕ ಒಂದು ಇಡೀ ಕಾಲಮಾನವನ್ನು ಅದರ ಹೊರಳುವಿಕೆಯನ್ನು ಸಶಕ್ತವಾಗಿ ಕಟ್ಟಿಕೊಡುತ್ತವೆ. ************************************** ದೀಪ್ತಿ ಭದ್ರಾವತಿ

“ಮಧ್ಯಘಟ್ಟವೆಂಬ ಒಂದು ಮೈಲಿಗಲ್ಲು” Read Post »

ಕಾವ್ಯಯಾನ

ಕ್ರಿಸ್ತನಿಗೆ ಒಂದು ಪ್ರಶ್ನೆ

ಕ್ರಿಸ್ತನಿಗೆ ಒಂದು ಪ್ರಶ್ನೆ ಅಕ್ಷತಾ ರಾಜ್ ನೀನಂದು ನೋಡಿದೆಯೆಂದರು….ಯಾವ ಹೊಸರೂಪವಿತ್ತು ಬಾನಿನಲ್ಲಿ?ಹೊಳೆವ ನಕ್ಷತ್ರವೇ! ಅಥವಾ ಕಾರ್ಮುಗಿಲೇ!ಇದ್ಯಾವುದೂ ಅಲ್ಲವೆಂದರೆ ಉಲ್ಕೆ ಪ್ರವಾಹವೇ?ಯಾವುದೂ ಅರ್ಥವಾಗದಿದ್ದಾಗ ನಿನ್ನ ಹುಟ್ಟೆಂದರುಹೌದೇ ! ನಿನ್ನ ಹುಟ್ಟಷ್ಟು ಅಪರೂಪವೇ ಬಿಸಿಲು ಬೆಳ್ದಿಂಗಳಂತೆ? ನೀನಂದು ಅತ್ತೆಯೆಂದರು….ಯಾವ ತಾಪದ ಹನಿ ತೋಯ್ದಿತ್ತು ನೆಲ ?ಚುಚ್ಚಿದ ಮೊಳೆಯದ್ದೇ ! ಅಥವಾ ಹೊತ್ತ ಶಿಲುಬೆಯದ್ದೇ!ಇದಾವುದೂ ಅಲ್ಲವೆಂದರೆ ಮುಳ್ಳುಕೀರೀಟದ ಭಾರವೇ?ಯಾವುದೂ ಅರ್ಥವಾಗದಿದ್ದಾಗ ತನುವಿನ ನೋವೆಂದರುಹೌದೇ ! ನಿನ್ನ ಕಂಬನಿಯಷ್ಟು ದುರ್ಬಲವೇ ಮಂಜಿನಂತೆ ? ನೀನಂದು ನಕ್ಕೆಯೆಂದರುಮತ್ತೆ ಮೂರು ದಿನದೊಳಗೆ ಎದ್ದು ಬಂದಾಗಯಾವ ಸಂತಸಕ್ಕಾಗಿ ಮುಖ ಅರಳಿತ್ತು?ತೆರೆದ ಪೆಟ್ಟಿಗೆಗಾಗಿ ! ಅಥವಾ ಮಾಸು ಗಾಯಕ್ಕಾಗಿ !ಅಲ್ಲವೆಂದರೆ ಎದುರಿದ್ದವರಿಗಾಗಿ ?ಅರಿವಾಗದೆಯೇ ಮತ್ತೆ ಹುಟ್ಟಿಬಂದ ಸಂತಸವೆಂದರುಹೌದೇ ! ನಿನ್ನ ನಗು ಅಷ್ಟು ಅಪರೂಪವೇ ಕುರುಂಜಿಹೂವಿನಂತೆ ? ತಿಳಿಯಲೇ ಇಲ್ಲ, ನೀನು ಬಂದು ಹೋಗಿರುವುದುಆದರೂ ಚರಿತ್ರೆಯಾಯಿತು ನೀನಿದ್ದ ಆ ಮಧ್ಯಕಾಲಪೂರ್ವಾರ್ಧವೋ ! ಉತ್ತರಾರ್ಧವೋ ! ಶಕೆಯಾಯಿತು ಕಾಲನಾವೂ ಇದ್ದೇವೆ ಅರ್ಥವಾಗದ ಅದೇ ಅರ್ಧದೊಳಗೆ **********************************

ಕ್ರಿಸ್ತನಿಗೆ ಒಂದು ಪ್ರಶ್ನೆ Read Post »

ಕಾವ್ಯಯಾನ

ಮುಗುಳು

ಮುಗುಳು ವೀಣಾ ರಮೇಶ್ ಇರುಳ ಸೆರಗೊಳಗೆತಿಳಿಮೌನ ಸುರಿದುಬಿಗುಮಾನ ಕಳೆದುಬೆರೆತು ಗಂಧದೊಳಗೆಈ ಮನವದು ಬಿರಿದುನಿನ್ನ ಸನಿಹದಲಿಮೌನವದು ಘಾಸಿ ಬಯಲು ಅಲಯದಲಿಹಕ್ಕಿ ಹಾರುತಿದೆನಿನ್ನನೆನಪುಗಳ ರೆಕ್ಕೆಕಟ್ಟಿ, ಪ್ರತಿದಿನವೂ ಸೋತಿದೆಹಾರಿ ಬರಲೇನು ಈಹೃದಯ ತಟ್ಟಿ ಮುಸುಕು ಬೀರಿದ ಮುಗುಳುಲಜ್ಜೆಯೊಳಗೆ ಅದೇ ನೀನುಸಜೆಯಾಗಿದೆ ಪ್ರೀತಿಯಸರಳೊಳಗೆ ನಾನು ಎಳೆದು ಬಿಡು ಮುಸುಕುಬೀರಿ ಮಲಗಿದ,ಮೌನದ ಪರದೆನಿನಗಲ್ಲವದು ಶೋಭೆನಿನ್ನ ಮುಗುಳುನಗುವದು ಹೊತ್ತು ತರದೆಮೌನ ಕೋಟೆಗೆ ಪ್ರಭೆ **************************

ಮುಗುಳು Read Post »

ಕಾವ್ಯಯಾನ

ಹಾಯ್ಕು

ಹಾಯ್ಚಳಿ! ಶಾಲಿನಿ ಆರ್. ೧)ಚಳಿ ಸುಳಿಗೆ    ಶಿಲೆಯಾದಳವಳು    ಕರಗದಂತೆ ೨)ಬೆಚ್ಚಿಸದಿರು    ಬೆಚ್ಚಗಿಡು ನೆನಪಾ    ಕೊನೆ ಚಳಿಗೆ ೩)ಮಂಜಿನ ಹನಿ    ಕರಗಲರಿಯದು    ಬೆಚ್ಚಗಾದರೂ, ೪)ಬಿರಿದ ತುಟಿ    ನೆನಪಿಸುತಿದೆಯೋ,    ವಸಂತ ಋತು, ೫)ಬಿಸಿ ಬಿಸಿ ಚಾ    ಮುಂಜಾನೆಯ ಚಳಿಗೆ    ನೀ ನೆನಪಾದೆ, ೬)ಹಗಲು ಮಾಯ    ಇರುಳ ಹಾಸಿನ ಮೇಲೆ    ಚಳಿ ಗಾಳಿಗೆ ೭)ನಮ್ಮೀ ಪ್ರೀತಿಗೆ    ಮರೆಯಾಯಿತೇನು    ಹಗಲು ನಾಚಿ, ೮)ತೇವಗೊಂಡಿದೆ    ಮತ್ತೆ ಆರುವ ಮುನ್ನ    ಹೇಮಂತ ಋತು, ೯)ಮುಗಿಯದಿದು    ಮಾಗಿ ಮುಗಿವ ಮುನ್ನ    ಮಬ್ಬಿನ್ಹಗಲು ೧೦)ಹಗಲು ನುಂಗಿ       ಬಿಗಿಯಾದವು ಇರುಳು       ಬಿಗುಮಾನದಿ ******************    

ಹಾಯ್ಕು Read Post »

You cannot copy content of this page

Scroll to Top