ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಮಹಿಳಾದಿನದ ವಿಶೇಷ

ನಮ್ಮೊಳಗಿನ ಬೆಳಕು ಬಿದಲೋಟಿರಂಗನಾಥ್ ಹೆಣ್ಣೆಂದರೇ ನಮ್ಮೊಳಗಿನ ಬೆಳಕು ಹೆಣ್ಣೆಂದರೆ ಭೂಮಿ ತೂಕ.ಆಕೆಯು ಸಕಲವನ್ನು ಹೊತ್ತು ಸಾಗುತ ಬದುಕನ್ನು ನೀಸಿದವಳು.ಮನೆಯೆಂದರೆ ಅವಳು ತೊಲೆ ಕಂಬ.ಅದಿಲ್ಲದೆ ಛಾವಣಿ ಎಲ್ಲಿ ನಿಂತಿತು.ಹೆಣ್ಣು ಕುಟುಂಬದ ಕಣ್ಣು.ಎಲ್ಲರನ್ನು ನೋಡುತ್ತಾ ಪೊರೆಯುತ್ತಾ,ಅವರ ಸೇವೆಗಳನ್ನು ಮಾಡುತ್ತಾ ಬದುಕನ್ನು ಏಗಿದವಳು ಎಂದರೆ ತಪ್ಪಾಗಲಾರದು.ಒಂದು ಹೆಣ್ಣು ಮಗಳಾಗಿ ,ಹೆಂಡತಿಯಾಗಿ ಅತ್ತೆಯಾಗಿ ಸೊಸೆಯಾಗಿ ಸಕಲ ಪಾತ್ರಗಳನ್ನು ನಿರ್ವಹಿಸುತ್ತಾ ಸೈ ಎನಿಸಿಕೊಂಡವಳು.ಅವಳಿಲ್ಲದೆ ಬದುಕೇ ಶೂನ್ಯ.ಅವಳನ್ನು ಸಮಾಜ ನೋಡುವ ದೃಷ್ಠಿ ಬದಲಾಗಬೇಕು.ಗಾಂಧೀಜಿಯ ಆಸೆಯಂತೆ ಒಂದು ಹೆಣ್ಣು ನಡುರಾತ್ರಿಯಲ್ಲಿ ನಿರ್ಭಿಡೆಯಾಗಿ ಓಡಾಡುವಂತಹ ಸಮಾಜ ನಿರ್ಮಾಣ ಆಗಬೇಕು. ಆಗ ನಮ್ಮ ದೇಶಕ್ಕೆ ಸ್ವತಂತ್ರ ಸಿಕ್ಕಾಂತಾಗುತ್ತದೆ.ಹೆಣ್ಣು ಕೇವಲ ಕಾಮದ ವಸ್ತುವಲ್ಲ.ಅವಳನ್ನು ಕಂಡರೆ ಪೂಜ್ಯಭಾವನೆ ಬರುವಂತಾಗಬೇಕು. ಕಾಲ ಬದಲಾಗಿದೆ ಇವತ್ತು ಹೆಣ್ಣು ಮಕ್ಕಳು ಎಲ್ಲಾ ರಂಗದಲ್ಲೂ ಇದ್ದಾರೆ.ಪೈಲೆಟ್ ,ಪೊಲೀಸ್,ಡ್ರೈವರ್ ಕಂಡಕ್ಟರ್ ,ನ್ಯಾಯವಾದಿ,ನ್ಯಾಯಾಧೀಶರು ಎಲ್ಲಾ ಹುದ್ದೆಗಳನ್ನು ಅಲಂಕರಿಸಿದ್ದಾರೆ.ಗಂಡಿಗೆ ಸಮಾನವಾಗಿ ಸ್ಪರ್ಧೆಗಿಳಿದಿದ್ದಾಳೆ.ಎಂಬುದು ಸಂತೋಷದಾಯಕ ವಿಷಯ. ಒಂದು ವಿಷಯ ಪ್ರಸ್ಥಾಪಿಸಲು ಇಷ್ಟಪಡುತ್ತೇನೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತನ್ನ ಹೆಂಡತಿಯರನ್ನು ನಿಲ್ಲಿಸುವ ಮೂಲಕ ಹುದ್ದೆಯ ಸಕಲ ಜವಬ್ಧಾರಿಯನ್ನು ಪುರುಷಮಾಡುತ್ತಿರುವುದು ನೋವಿನ ಸಂಗತಿ.ಅದರಲ್ಲು ಗ್ರಹಚಾರ ತಪ್ಪಿ ಪಂಚಾಯಿತಿ ಅಧ್ಯಕ್ಷೆಯಾದರೇ ಮುಗಿದೇ ಹೋಯಿತು.ಆ ಚೇರಿನ ಮೇಲೆ ಗಂಡನ ದರ್ಬಾರು.ಯಾಕೆ ಅವಳ ಕೆಲಸ ಅವಳಿಗೆ ಮಾಡಲು ಬಿಡಲ್ಲ ಎಂಬುದು ವರ್ತಮಾನದ ದುಸ್ತಿತಿ ಎಂದು ನಾನದರೂ ಭಾವಿಸುತ್ತೇನೆ. ತನ್ನ ಅಧಿಕಾರದ ಹಕ್ಕನ್ನು ಸುಖವನ್ನು ಅವಳೂ ಅನುಭವಿಸಲಿ ಬಿಡಿ.ಅಲ್ಲ ಒಂದು ಚೆಕ್ ಗೆ ಸಹಿ ಹಾಕಲು ತನ್ನ ಗಂಡನ ಅನುಮತಿಬೇಕು ಎಂದ ಮೇಲೆ.ಅಧಿಕಾರ ಯಾತಕ್ಕೆ ಅವಳಿಗೆ ಎಂಬ ಪ್ರಶೆ ಮೂಡುತ್ತದೆ.ಈ ತರಹ ತನ್ನ ಕೈ ಗೊಂಬೆಯಾಗಿ ಮಾಡಿಕೊಳ್ಳುವ ಮನಸ್ತಿತಿಗಳು ಬದಲಾಗಬೇಕು.ಸಮಾನತೆಯಿಂದ ಕಾಣುವ ಮುಖೇನ ನವ ಸಮಾಜ ನಿರ್ಮಾಣದತ್ತ ಸಮಾಜ ಸಾಗಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಇನ್ನು ಮಕ್ಕಳು ವಿಷಯಕ್ಕೆ ಬಂದರೆ ಗಂಡಾದರೇನು ಹೆಣ್ಣಾದರೇನು?ಎರಡೂ ಒಂದೇ ಅಲ್ಲವೆ.?ಹೆಣ್ಣಿಲ್ಲದೆ ಗಂಡು ಮಗುವಿನ ಜನನ ಸಾಧ್ಯವೆ ? ನೋಡುವ ದೃಷ್ಠಿಕೋನ ಬದಲಾಗಬೇಕು.ಆಗಂತ ಹೆಣ್ಣುಮಕ್ಕಳು ಅರ್ಥಮಾಡಿಕೊಳ್ಳಬೇಕು ಕೊಟ್ಟ ಅಧಿಕಾರವನ್ನು ಸ್ವತಂತ್ರವನ್ನು ಸುಮ್ನೆ ದೂರುವ ಮೂಲಕ ಹಾಳು ಮಾಡಿಕೊಳ್ಳಬಾರದುಮಕ್ಕಳಿಗೆಶಿಕ್ಷಣ ಕೊಡಿಸುವಾಗಲು ಅಷ್ಟೆ ,ಈಗಲೂ ಹಳ್ಳಿಗಳಲ್ಲಿ “ಗಂಡು ಮಕ್ಕಳಲ್ಲವೆ ಓದಿಸು ಎಷ್ಟಾದರೂ ಓದಲಿ”ಎನ್ನುತ್ತ .ಹೆಣ್ಣೋ ಬಿಡಿಸಿ ಮದುವೆ ಮಾಡುವ ದುರಂತಗಳು ನಮ್ಕಾಮ ಕಣ್ಣುಮುಂದೆ ಇವೆ. ಮಡ್ಲಲ್ಲಿ ಬೆಂಕಿಕಟ್ಕಂಡು ಎಷ್ಟಂತ ತಿರುಗುತ್ತಿ” .ಎಂಬ ಉಡಾಫೆಯ ಮನೋಭಾವ ಬದಲಾಗುವ ಮೂಲಕ ಅವಳಿಗೆ ಗೌರವ ಕೊಡಬೇಕು ಆಗ ಭೂಮಿ ಮೇಲೆ ಹುಟ್ಟಿದ್ದಕ್ಕೂ ಸಾರ್ಥಕ್ಯ. ಹೆಣ್ಣಿಗೂ ಮನಸ್ಸಿದೆ ಅಂತಃಕರಣವಿದೆ ಅವಳೂ ಮನುಷ್ಯಳು ಎಂಬ ಮನೋಭಾವ ಬಂದಾಗ ಮಾತ್ರ ಬದುಕು ಹಸನಾಗುವುದು. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಹಪಾ ಹಪಿ ಬದಲಾಗಬೇಕು.ಹೆಣ್ಣಿಲ್ಲದ ಮನೆ ,ಬದುಕಿನಲ್ಲಿ ಬೆಳಕು ಕಂಡಿದ್ದು ಇಲ್ಲವೇ ಇಲ್ಲ.ಅವಳನ್ನು ಗೌರವಿಸುವ ಮೂಲಕ ಮಹಿಳಾ ದಿನಾಚಾರಣೆಗೆ ಇಂಬು ನಿಡೋಣ. ************************************

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಹೆಣ್ಣಿನ ಸ್ವಗತ ಪ್ರೊ.ಕವಿತಾ ಸಾರಂಗಮಠ ಹೆಣ್ಣಿನ ಸ್ವಗತ ಹೆತ್ತವರಿಗೆ ಸಾಲವಾದೀತೆಂದು ಓದು ತ್ಯಜಿಸಿ ಸದಾ ನಗು ಬೀರುವಳು..! ವರದಕ್ಷಿಣೆ ಭಾರವಾದೀತೆಂದು ಮನ ಹಿಡಿಸದ ಮದುವೆಗೊಪ್ಪಿ ಸದಾ ನಗು ಬೀರುವಳು..! ಗೌರವ ಹಾಳಾದೀತೆಂದು ಕುಡುಕ ಪತಿಯೊಂದಿಗೆ ರಾಜಿಯಾಗಿ ಸದಾ ನಗು ಬೀರುವಳು..! ಇಲ್ಲ ಸಲ್ಲದ ಅಪವಾದಗಳೆಂದು ಒಡನಾಡಿಗಳೊಂದಿಗೆ ಹೊಂದಿಕೊಂಡು ಸದಾ ನಗು ಬೀರುವಳು..! ಸಮಾಜದಿ ಗಾಳವಾಗಬಾರದೆಂದು ಶೀಲಾಪಹರಣಗೊಂಡು ಆತ್ಮಹತ್ಯೆಗೆ ಶರಣಾದರೂ ನಗು ಬೀರುವಳು..! ಊರ್ಮಿಳೆ,ಅಹಲ್ಯೆ, ಸೀತೆಯರಿಗೆ ಅಪವಾದ ತಪ್ಪಲಿಲ್ಲ ,ನಾನಾವ ಲೆಕ್ಕವೆಂದು ಸದಾ ನಗು ಬೀರುವಳು..! ಅಸಹಜ ನಗುವ ಕಂಡು ದೇವರೂ ನಕ್ಕಾನೆಂದು ಸದಾ ನಗು ಬೀರುವಳು..! ನೀನೆಷ್ಟೇ ಕಷ್ಟ ಕೊಟ್ಟರೂ ನಾ ಅಳಲೇ ಇಲ್ಲೆಂದು ಅಣುಕಿಸುವಂತೆ ಸಾವಲ್ಲೂ ನಗು ಬೀರುವಳು..! ********

ಮಹಿಳಾದಿನದ ವಿಶೇಷ Read Post »

ಇತರೆ

ಮಹಿಳಾದಿನದ ವಿಶೇಷ

ಮಹಿಳಾ ಸಾಹಿತ್ಯ ಅಂದು ಇಂದು ಸುಜಾತಾ ರವೀಶ್ ಮಹಿಳಾ ಸಾಹಿತ್ಯ ಅಂದು ಇಂದು ಕವಿ ಮಹಾಲಿಂಗರು ಹೇಳುತ್ತಾರೆ “ಸುಲಿದ ಬಾಳೆಯ ಹಣ್ಣಿನಂದದ ಕಳೆದ ಸಿಗುರಿನ ಕಬ್ಬಿನಂದದ ಅಳಿದ ಉಷ್ಣದ ಹಾಲಿನಂದದ ಕನ್ನಡ ಸಾಹಿತ್ಯ”ಎಂದು. ನಿಜ ಮಧುರಕ್ಕೆ ಮಧುರವೂ ಸವಿಗೆ ಸವಿಯೂ ಆದ ನಮ್ಮ ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಕಡೆಗಣಿಸುವಂತಹದ್ದಲ್ಲ. ಪ್ರಚಲಿತವಿದ್ದ ಸ್ತ್ರೀಯರ ಸ್ಥಾನಮಾನ ನೆಲೆ ಬೆಲೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದಾಗ ಈ ಪಾಲು ಕಡಿಮೆಯೇ. ಮಹಿಳಾ ಸಾಹಿತ್ಯವನ್ನು ಕಾಲಘಟ್ಟದ ಮಾಪನದಲ್ಲಿಟ್ಟು ಅಳೆದು ನೋಡುವಾಗ ಈ ರೀತಿ ವಿಂಗಡಿಸಬಹುದು ೧. ವೇದಕಾಲದಲ್ಲಿ ಮಹಿಳಾ ಸಾಹಿತ್ಯ ೨. ಜಾನಪದ ಸಾಹಿತ್ಯ ೩. ರಾಜಾಸ್ಥಾನಗಳಲ್ಲಿ ಕನ್ನಡ ಕವಿಯತ್ರಿಯರು ೪. ಜೈನ ಸಾಹಿತ್ಯ ೫. ವಚನ ಸಾಹಿತ್ಯ ೬. ದಾಸ ಸಾಹಿತ್ಯ ೭. ಹತ್ತೊಂಬತ್ತನೇ ಶತಮಾನದ ಸ್ತ್ರೀ ಸಾಹಿತ್ಯ ೮. ದಲಿತ ಬಂಡಾಯ ಸಾಹಿತ್ಯ ೯. ಇಪ್ಪತ್ತನೇ ಶತಮಾನದ ಮಹಿಳಾ ಸಾಹಿತ್ಯ ೧೦. ಪ್ರಸಕ್ತ ಅಂತರ್ಜಾಲ ಸಾಹಿತ್ಯ ವೇದ ಕಾಲದಲ್ಲಿ ಮಹಿಳಾ ಸಾಹಿತ್ಯ ಮಹಿಳೆಯರಿಗೆ ಉಪನಯನದ ಅರ್ಹತೆಯೂ ಇದ್ದಂತಹ ವೇದ ಕಾಲದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಅವಕಾಶಗಳಿದ್ದವೆಂದು ತಿಳಿದುಬರುತ್ತದೆ. ಗಾರ್ಗಿ ಮೈತ್ರೇಯಿಯರಂತಹ ಪ್ರಕಾಂಡ ಪಂಡಿತರು ಸ್ವತಃ ಯಾಜ್ಞವಲ್ಕರಂತಹ ಜ್ಞಾನಿಗಳ ಮೆಚ್ಚುಗೆ ಗಳಿಸಿದ್ದರು. ಕನ್ನಡ ಸಾಹಿತ್ಯಕ್ಕೆ ನೇರ ಸಂಬಂಧವಿರದಿದ್ದರೂ ಈ ಸಂಸ್ಕೃತ ಮಹಿಳಾ ವಾಗ್ಮಿಗಳೇ ಇಂದಿನ ಸ್ತ್ರೀಯರಿಗೆ ಮೊದಲ ಪಂಕ್ತಿ ಹಾಕಿ ಕೊಟ್ಟವರೆಂದು ನೆನಪಿನಲ್ಲಿಡ ತಕ್ಕಂತಹ ಅಂಶ. ಜಾನಪದ ಸಾಹಿತ್ಯ ಕನ್ನಡ ಜಾನಪದ ಸಾಹಿತ್ಯವಂತೂ ಸ್ತ್ರೀಯರದ್ದೇ ಏಕಸ್ವಾಮ್ಯತೆ ಅನ್ನಬಹುದು. ಬೀಸುವ ಕಲ್ಲಿನ ಪದಗಳು, ಸಂಪ್ರದಾಯದ ಹಾಡುಗಳು, ಲಾಲಿ ಜೋಗುಳದ ಹಾಡುಗಳು ,ಆರತಿ ಹಾಡುಗಳು, ವ್ರತಗಳ ಹಾಡುಗಳು ಒಂದೇ ಎರಡೇ? ಈ ವಿಫುಲ ಜನಪದ ಸಾಹಿತ್ಯ ಮೌಖಿಕವಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಂತಹವು ಸಂಗ್ರಹಿತವಾಗದೆ ಅಚ್ಚಾಗದೆ ಕಾಲನ ದಾಳಿಯಲ್ಲಿ ಎಷ್ಟೋ ನಾಶವಾಗಿದೆ .ಲೇಖಕಿಯರ ಹೆಸರಿರದ ಸಮೃದ್ಧ ಜಾನಪದ ಸಂಪತ್ತು ನಮ್ಮದು. ಯಶೋದಾ ಬಾಯಿ ಅವರ ಸೀತಾ ಪರಿತ್ಯಾಗ ರುಕ್ಮಿಣಿ ಕಲ್ಯಾಣ ಚಂದ್ರಾವಳಿ ,ಭಾಗೀರಥಮ್ಮ ಅವರ ಜನಪದ ಛಂದಸ್ಸಿನ ಕೀರ್ತನ ರಾಮಾಯಣ ಇದೇ ಮುಂತಾದವು ಸದ್ಯಕ್ಕೆ ಲಭ್ಯ ಸಂಗ್ರಹಿತ ಕೃತಿಗಳಲ್ಲಿ ಮುಖ್ಯವಾದವು. ಜಾನಪದ ಕಾವ್ಯದಲ್ಲಿ ಗಂಡಿನ ದಬ್ಬಾಳಿಕೆಯನ್ನು ಬರೀ ಸಹಿಸಿಕೊಳ್ಳದೆ ಅದರ ವಿರುದ್ಧ ದನಿ ಎತ್ತಿರುವುದು ಸ್ತ್ರೀ ಜನಮಾನಸದಲ್ಲಿ ವ್ಯವಸ್ಥೆಯ ಅಸಮಾನತೆಯ ವಿರುದ್ಧದ ಆಕ್ರೋಶ ಸಣ್ಣಗೆ ಹೊಗೆಯಾಡುವುದು ಗಮನಿಸಬಹುದು. ರಾಜಾ ಆಸ್ಥಾನಗಳಲ್ಲಿ ಕನ್ನಡ ಕವಿಯತ್ರಿಯರು ಶಾತವಾಹನರ ಕಾಲದಲ್ಲಿ ಇಮ್ಮಡಿ ಪುಲಿಕೇಶಿಯ ರಾಣಿ ವಿಜಯ ಮಹಾದೇವಿ (ವಿಜ್ಜಿಕೆ) ಕೌಮುದಿ ಮಹೋತ್ಸವ ಎಂಬ ಕಾವ್ಯವನ್ನು ರಚಿಸಿದ್ದಳು .ವಿಜಯನಗರದ ಸುವರ್ಣ ಯುಗದಲ್ಲಿ ಕೃಷ್ಣದೇವರಾಯರ ಪಟ್ಟದರಸಿ ತಿರುಮಲಾಂಬ ತನ್ನ ಪತಿಯ ಎರಡನೆಯ ಮದುವೆಯ ವಿಷಯವನ್ನು ಆಧರಿಸಿ ವರದಾಂಬಿಕಾ ಪರಿಣಯ ಎಂಬ ಕೃತಿಯನ್ನು ರಚಿಸಿದ್ದು ಗಂಗಾದೇವಿ ಎಂಬ ಕವಿಯತ್ರಿಯಿಂದ ವೀರ ಕಂಪಣರಾಯ ಚರಿತ ಎಂಬ ಗ್ರಂಥ ರಚಿಸಲ್ಪಟ್ಟಿತು. ಮೈಸೂರು ಅರಸರ ಕಾಲದಲ್ಲಿ ದೊಡ್ಡ ಕೃಷ್ಣರಾಜ ಒಡೆಯರ ರಾಣಿ ಚೆಲುವಾಂಬಯವರು ನಂದಿ ಕಲ್ಯಾಣ ಎಂಬ ಗ್ರಂಥವನ್ನು, ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಸಂಚಿಯ ಹೊನ್ನಮ್ಮ ಹದಿಬದೆಯ ಧರ್ಮ ,ಶೃಂಗಾರಮ್ಮ ಪದ್ಮಿನಿ ಕಲ್ಯಾಣವನ್ನು ರಚಿಸಿದರು. ಈ ಕಾಲದ ರಾಜಾಶ್ರಯದ ವನಿತೆಯರು ಧಾರ್ಮಿಕ ಆಧ್ಯಾತ್ಮದ ಬಗ್ಗೆ ಬರೆದರೆ ಹೊರತು ವ್ಯವಸ್ಥೆಗೆ ವಿರೋಧವಾಗಿಲ್ಲ. ಪುರುಷನ ಜೊತೆ ಸಮಾನತೆಗೆ ಧ್ವನಿ ಗೂಡಿಸಿಲ್ಲ. ಏನಿದ್ದರೂ ಅವರದ್ದು ತಣ್ಣಗಿನ ಮೆಲುದನಿಯ ಪ್ರತಿರೋಧ . ಜೈನ ಸಾಹಿತ್ಯ ಜೈನ ಸಾಮಾಜಿಕ ವ್ಯವಸ್ಥೆಯಲ್ಲಿದ್ದ ಸ್ತ್ರೀ ಸಮಾನತೆ ಹಾಗೂ ಪ್ರಾಮುಖ್ಯತೆ ಎತ್ತಿ ಕಾಣುವ ಅಂಶವಾದರೂ ಜೈನ ಕವಿಯತ್ರಿಯರು ಬೆರಳೆಣಿಕೆಯಷ್ಟು ಮಾತ್ರ. ಅತ್ತಿಮಬ್ಬೆ ಕಾವ್ಯ ರಚನೆಗೆ ಸಹಕಾರ ಕೊಟ್ಟು ದಾನ ಚಿಂತಾಮಣಿ ಎನಿಸಿದಳು. ಅದೇ ಕಾಲದ ಕಂತಿ ಕನ್ನಡದ ಪ್ರಥಮ ಕವಿಯತ್ರಿ ಅಭಿನವ ವಾಗ್ದೇವಿ ಆದಿಕವೀಶ್ವರಿ ಎಂದೆಲ್ಲ ಬಿರುದಾಂಕಿತಳಾಗಿ ಕಂತಿ ಹಂಪನ ಸಮಸ್ಯೆಗಳು ಎಂಬ ಕೃತಿ ರಚಿಸಿದ್ದಾಳೆ. ಈ ಕಾಲದ ಕವಿಯತ್ರಿಯರು ಅಷ್ಟೇ ವ್ಯವಸ್ಥೆಗೆ ಹೊಂದಿ ನಡೆದರೆ ವಿನಃ ವಿರುದ್ಧ ಧ್ವನಿ ಎತ್ತಲಿಲ್ಲ ಎನ್ನುವುದು ಪರಿಗಣಿಸಬೇಕಾದ ಅಂಶ. ವಚನ ಸಾಹಿತ್ಯ (೧೨ ನೇ ಶತಮಾನ) ವಚನ ಸಾಹಿತ್ಯದ ಯುಗವನ್ನು ಕನ್ನಡ ಮಹಿಳಾ ಸಾಹಿತ್ಯದ ಸುವರ್ಣಯುಗ ಎನ್ನಬಹುದು. ಸಾಮಾಜಿಕ ಅನಿಷ್ಟ ವ್ಯವಸ್ಥೆಗಳ ವಿರುದ್ಧ ಸ್ತ್ರೀ ಬಂಡಾಯದ ಕಿಡಿ ಕೆದರಿದ್ದು ಆಗಲೇ .ಅಕ್ಕಮಹಾದೇವಿ ಅಕ್ಕಮ್ಮ ರೆಮ್ಮವ್ವೆ ಗಂಗಮ್ಮ ಲಕ್ಷಮ್ಮ ಇವುಗಳನ್ನು ಸ್ತ್ರೀ ಸಮಾನತೆಯ ಕೂಗಿನ ಪ್ರವಾದಿಗಳೆಂದರೆ ತಪ್ಪಾಗಲಾರದು .ಇನ್ನು ದಲಿತ ಕವಿಯತ್ರಿಯರು ಬಂಡಾಯದ ಕಹಳೆ ಊದಿದವರಲ್ಲಿ ಪ್ರಮುಖರೆಂದರೆ ಸೂಳೆ ಸಂಕವ್ವೆ ಹೊಲತಿ ಗುಡ್ಡವ್ವೆ, ಉರಿಲಿಂಗಪೆದ್ದಿಯ ಪತ್ನಿ ಕಾಳವ್ವೆ ,ಕುಂಬಾರ ಕೇತಲಾದೇವಿ ಲಕ್ಕವ್ವ ಇವರುಗಳು ಮುಖ್ಯರು . ವಚನ ಸಾಹಿತ್ಯ ಕಾಲ ಸ್ತ್ರೀ ಶೋಷಣೆಯತ್ತ ಬರಿ ಬರವಣಿಗೆಯಲ್ಲಿ ಮಾತ್ರವಲ್ಲದೆ ಆಚರಣೆಯಲ್ಲೂ ಧ್ವನಿ ಎತ್ತಿ ಬದಲಾವಣೆಗೆ ನಾಂದಿ ಹಾಡಿತ್ತು . ಒಂದು ಸಾಮಾಜಿಕ ಕ್ರಾಂತಿಯತ್ತ ನಡೆದಿದ್ದ ವಚನ ಸಾಹಿತ್ಯದ ಹರಿವು ಕಲ್ಯಾಣ ಕ್ರಾಂತಿಯ ದಮನದೊಂದಿಗೆ ಅವಸಾನ ಹೊಂದಿ ಸ್ತ್ರೀವಾದ ಮತ್ತೆ ಮಾಯವಾದದ್ದು ಒಂದು ಸಾಮಾಜಿಕ ದುರಂತವಷ್ಟೇ ಅಲ್ಲದೇ ಮಹಿಳಾ ಸಾಹಿತ್ಯಕ್ಕೆ ತುಂಬಲಾರದ ನಷ್ಟವೆಂದರೆ ಅತಿಶಯೋಕ್ತಿಯಾಗಲಾರದು. ದಾಸ ಸಾಹಿತ್ಯ ದಾಸ ಸಾಹಿತ್ಯವೆಂದರೆ ಸಾಮಾನ್ಯ ಪುರುಷರಿಂದ ರಚನೆಯಾದ್ದದು ಎಂದುಕೊಳ್ಳುತ್ತೇವೆ ಆದರೆ ಸ್ತ್ರೀಯರ ಕೊಡುಗೆಯೂ ದಾಸ ಸಾಹಿತ್ಯಕ್ಕೆ ಸಂದಿದೆ. ಇಲ್ಲಿಯೂ ಸಹ ಸಂಗ್ರಹಿತವಾಗದೆ ಹೋದದ್ದು ಬಹಳಷ್ಟಿರಬಹುದು.. ಇವರಲ್ಲಿ ಪ್ರಮುಖರೆಂದರೆ ಚಿತ್ರದುರ್ಗದ ಅಂಬಾಬಾಯಿ ಗೋಪಾಲಕೃಷ್ಣ ವಿಠಲ ಅಂಕಿತ ನಾಮದಲ್ಲಿ ದ್ವಿಪದಿ ಛಂದಸ್ಸಿನಲ್ಲಿ ರಾಮಾಯಣ ರಚಿಸಿದ್ದಾರೆ. ಗಂಗಲಿಯ ಅವ್ವ , ಹರಪನಹಳ್ಳಿ ಭೀಮವ್ವ ನಾಡಿಗರ ಶಾಂತಾಬಾಯಿ ತುಳಸಾಬಾಯಿ ಹೆಳವನಕಟ್ಟೆ ಗಿರಿಯಮ್ಮ (ಇವರ ರಚನೆಗಳು ಚಂದ್ರಹಾಸ ಕತೆ ಸೀತಾ ಕಲ್ಯಾಣ ಉದ್ದಾಲಕ ಕಥೆ ಬ್ರಹ್ಮ ಕೊರವಂಜಿ ಮುಂತಾದ ಹಾಡು ಹಬ್ಬಗಳು) ವಿಧವೆಯರೇ ಹೆಚ್ಚಾಗಿ ಈ ದಾಸ ಸಾಹಿತ್ಯ ರಚನೆಗೆ ಮುಂದಾಗಿದ್ದು ಬರೀ ಆಧ್ಯಾತ್ಮಿಕದ ಕಡೆಗೆ ಒಲವು ಹೆಚ್ಚಾಗಿ ಕಂಡು ಬರುತ್ತದೆ. ೧೯ನೇ ಶತಮಾನದ ಸ್ತ್ರೀ ಸಾಹಿತ್ಯ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಸ್ವಾತಂತ್ರ್ಯಾನಂತರದ ಕಾಲಮಾನ ಘಟ್ಟದಲ್ಲಿ ಸ್ತ್ರೀ ಸ್ವಾತಂತ್ರ್ಯದ ಹೊಸ ರೂಪು ರೇಷೆಗಳು ಮೂಡಿ ಸಾಮಾಜಿಕವಾಗಿ ಸಾಹಿತ್ಯ ರಚನೆಯು ಆರಂಭವಾಯಿತು. ಪತ್ರಿಕೆಗಳಲ್ಲಿ ಸ್ತ್ರೀಯರಿಂದ ಲೇಖನ ಪ್ರಬಂಧ ಕಥೆಗಳು ಪ್ರಕಟವಾಗಿರುವುದು ಮುಖ್ಯ ಅಂಶ. ಶಾಂತಾಬಾಯಿ ನೀಲಗಾರ ಅವರ ಉತ್ತಮ ಗೃಹಿಣಿ ಕನ್ನಡದ ಮೊದಲ ಮಹಿಳಾ ಕಾದಂಬರಿ ಎಂದು ಗುರುತಿಸಲಾಗಿದೆ. ತಿರುಮಲೆ ರಾಜಮ್ಮ ತಿರುಮಲಾಂಬಾ ಬೆಳಗೆರೆ ಜಾನಕಮ್ಮ ಕೊಡಗಿನ ಗೌರಮ್ಮ ಆರ್ ಕಲ್ಯಾಣಮ್ಮ ಜಯದೇವಿ ತಾಯಿ ಲಿಗಾಡೆ ಮುಂತಾದವರು ಈ ಅವಧಿಯ ಪ್ರಮುಖ ಲೇಖಕಿಯರು. ಪ್ರಚಲಿತ ಸ್ತ್ರೀ ಸಮಸ್ಯೆಗಳು ಸಾಮಾಜಿಕ ಸಮಸ್ಯೆಗಳು ಮುಂತಾದವುಗಳ ವಿರುದ್ಧ ದನಿ ಎತ್ತಿರುವುದು ಈ ಕಾಲದ ಲೇಖಕಿಯರ ವೈಶಿಷ್ಟ್ಯ . ದಲಿತ ಬಂಡಾಯ ಸಾಹಿತ್ಯ ನಂತರದ ದಿನಗಳಲ್ಲಿ ಅಸ್ತಿತ್ವ ಕಂಡುಕೊಂಡ ದಲಿತ ಹಾಗೂ ಬಂಡಾಯ ಸಾಹಿತ್ಯದಲ್ಲಿ ಪುರುಷರಂತೆ ಸ್ತ್ರೀಯರ ಕೊಡುಗೆಯೂ ಅಪಾರ ಗೀತಾ ನಾಗಭೂಷಣ, ಬಿಟಿ ಲಲಿತಾ ನಾಯಕ್, ವೈದೇಹಿ ,ಅನುಪಮ ನಿರಂಜನ್ ಸಾರಾ ಅಬೂಬಕ್ಕರ್ ಇನ್ನೂ ಮುಂತಾದ ಅನೇಕ ಲೇಖಕಿಯರು ಈ ಮುಂಚೂಣಿಯಲ್ಲಿ ಗುರುತಿಸಲ್ಪಡುವ ಕೆಲವರು . ಅಸ್ಪೃಶ್ಯತೆ ಸ್ತ್ರೀ ಶೋಷಣೆ ಬೆತ್ತಲೆ ಸೇವೆ ಮೊದಲಾದ ಸ್ತ್ರೀ ಸಂಬಂಧಿ ಹಾಗೂ ದಲಿತ ಸಂಬಂಧಿ ಸಮಸ್ಯೆಗಳಂತ ಜ್ವಲಂತ ಸಮಸ್ಯೆಗಳ ವಿರುದ್ಧ ಮಾತನಾಡಿ ಸುಧಾರಣೆಗೆ ಮುಂದಾದದ್ದು ವಿಶೇಷ . ೨೦ನೇ ಶತಮಾನದ ಮಹಿಳಾ ಸಾಹಿತ್ಯ ಇದು ಸಹ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೇರು ಕಾಲವೆನ್ನಬಹುದು .ಸಣ್ಣಕಥೆ ಕಾದಂಬರಿಗಳ ಹೊಳೆಯೇ ಹರಿದು ಹೊಸ ಓದುಗರನ್ನು ಓದಿನ ಅಲೆಯನ್ನು ಸೃಷ್ಟಿಸಿತ್ತು. ತ್ರಿವೇಣಿ, ಉಷಾ ನವರತ್ನರಾಂ, ಎಂಕೆ ಇಂದಿರಾ, ಸಾಯಿಸುತೆ ,ಎಚ್ ಜಿ ರಾಧಾದೇವಿ ಅವರ ಕಾದಂಬರಿಗಳು ಹೊಸ ಸಂಚಲನವನ್ನೇ ಸೃಷ್ಟಿಸಿ ಕನ್ನಡ ಪ್ರೀತಿಗೆ ಕಾರಣವಾದವು .ಪ್ರತಿಭಾ ನಂದಕುಮಾರ್ ಹೇಮಾ ಪಟ್ಟಣಶೆಟ್ಟಿ ಮಾಲತಿ ಸವಿತಾ ನಾಗಭೂಷಣ ಮುಕ್ತಾಯಕ್ಕ ಸುನಂದಮ್ಮ ಮುಂತಾದವರು ಈ ಕಾಲದ ಹೆಸರಿಸಬೇಕಾದ ಲೇಖಕಿಯರ ಪಟ್ಟಿಗೆ ಸೇರುತ್ತಾರೆ . ಸಾಮಾಜಿಕವಾಗಿ ಆಗುತ್ತಿದ್ದ ಬದಲಾವಣೆಗಳು ಹಾಗೂ ಶೋಷಣೆಯು ಇನ್ನೊಂದು ರೂಪದಲ್ಲಿ ಮುಂದುವರಿದ ದ್ದನ್ನು ಎತ್ತಿ ಹೇಳುವ ಪ್ರಯತ್ನ ಈ ಕಾಲದಲ್ಲಾಯಿತು. ಪ್ರಸಕ್ತ ಅಂತರ್ಜಾಲ ಸಾಹಿತ್ಯ ಇಂದಿನ ಯುಗದ ಮುಖ್ಯ ಆಕರ್ಷಣೆ ಸಾಮಾಜಿಕ ಜಾಲ ತಾಣಗಳು. ಇವು ಬರಹಗಾರರ ಒಂದು ದೊಡ್ಡ ಪಡೆಯನ್ನೆ ಕಟ್ಟಿದೆ ಬೆಳೆಸುತ್ತಿದೆ .ಒಂದು ಸೀಮಿತ ಓದುಗರ ವರ್ಗವೇ ಹುಟ್ಟಿದೆ .ವಾಟ್ಸಾಪ್ ಫೇಸ್ ಬುಕ್ ನಲ್ಲಿನ ಸಾಹಿತ್ಯಿಕ ಗುಂಪುಗಳು ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ರೀತಿಯ ಸೇವೆಯನ್ನು ಸಲ್ಲಿಸುತ್ತಿದೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಓದುಗರ ಜೊತೆ ಸಂಭವಿಸಬಹುದಾದಂಥ ಚಿನ್ನದಂತಹ ಅವಕಾಶ ಕೊಡುವ ಈ ಸಾಹಿತ್ಯ ಪ್ರವರ್ಗ ಪ್ರಸಕ್ತ ಜನಪ್ರಿಯವಾಗಿರುವ ಮಾಧ್ಯಮ ಅದರದೇ ಆದಂತಹ ಕೆಲವು ಅಡೆತಡೆ ಇತಿಮಿತಿಗಳಿದ್ದರೂ ವೃತ್ತಿ ಗೃಹಕೃತ್ಯಗಳ ನಡುವೆ ಕಿಂಚಿತ್ತಾದರೂ ಬರೆಯುವ ಓದುವ ಹವ್ಯಾಸಕ್ಕೆ ನೀರೆರೆಯುತ್ತಿವೆ ಎಂದರೆ ತಪ್ಪಲ್ಲ . ೧೯೬೯ರಲ್ಲಿ ಸ್ಥಾಪಿತವಾದ ಶ್ರೀಮತಿ ಸರೋಜಿನಿ ಮಹಿಷಿ ಯವರನ್ನು ಪ್ರಥಮ ಅಧ್ಯಕ್ಷರನ್ನಾಗಿ ಮಾಡಿ ಸಮ್ಮೇಳನ ನಡೆಸಿದ ಕರ್ನಾಟಕ ಲೇಖಕಿಯರ ಸಂಘದ ಕಾಣಿಕೆಯೂ ಈ ನಿಟ್ಟಿನಲ್ಲಿ ಸ್ಮರಣಾರ್ಹ. ಶ್ರೀಮತಿ ಚಿ .ನಾ ಮಂಗಳ ಅವರ ಕಾಲೇಜಿನಲ್ಲಿ ೧೯೮೬ ರಿಂದ ಮಹಿಳಾ ಅಧ್ಯಯನ ಎಂಬ ಕೋರ್ಸ್ ಪ್ರಾರಂಭ ಮಾಡಿದ್ದು ಮಹಿಳಾ ಸಾಹಿತ್ಯದಲ್ಲಿನ ಮೈಲಿಗಲ್ಲು. ಮಹಿಳೆಯರ ಬದುಕಿನ ವಿವಿಧ ಬರಹ ಕುರಿತು ಮಹಿಳೆಯರೇ ರಚಿಸಿರುವ ಇಪ್ಪತ್ತ್ಮೂರು ಕೃತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ೧೯೭೫ರಲ್ಲಿ ಪ್ರಕಟವಾದವು. ಇದು ಸಹ ಮಹಿಳೆಯರಲ್ಲಿ ಬರೆಯುವ ಆಸಕ್ತಿಗೆ ನೀರೆರೆದವು . ಇಷ್ಟೆಲ್ಲಾ ಆದರೂ ಕನ್ನಡ ಮಹಿಳಾ ಸಾಹಿತ್ಯದಲ್ಲಿ ಸ್ತ್ರೀ ತನ್ನ ಅಸ್ತಿತ್ವದ ಛಾಪನ್ನು ಮೂಡಿಸಿ ಅಸ್ಮಿತೆಯನ್ನು ಉಳಿಸಿಕೊಂಡಿದ್ದಾಳೆಯೇ ಎಂದರೆ ಇಲ್ಲ ಎಂದು ವಿಷಾದದಿಂದಲೇ ಹೇಳಬೇಕಾಗುತ್ತದೆ .ಗಟ್ಟಿ ಅಧ್ಯಯನ ನಡೆಸಿ ಮೇರು ಕೃತಿಗಳನ್ನು ರಚಿಸುವಲ್ಲಿ ಮಹಿಳೆಯರು ಮುಂದಾಗಿಲ್ಲ. ಅದಕ್ಕೆ ಅವರದೇ ಆದ ಇತಿಮಿತಿಗಳ ರಬಹುದು .ಇರಲಿ ಅದು ಬೇರೆಯ ವಿಚಾರ. ಇಂದಿನ ಕಾಲದಲ್ಲಿ ಸ್ತ್ರೀ ಪುರುಷರಿಗೆ ಸಮಾನ ಅವಕಾಶವಿರುವ ಸಂದರ್ಭದಲ್ಲಿ ಸಮಾನತೆಗೆ ಹೊಡೆದಾಡುವ ಬೇಡುವ ಸಂದರ್ಭಗಳಿಲ್ಲ ಆದರೂ ಅಭೀಷ್ಟ ರೀತಿಯಲ್ಲಿ ಮಹಿಳಾ ಸಾಹಿತಿಗಳು ಮುಂದೆ ಬಂದಿಲ್ಲ ಬೇರೆಲ್ಲ ರಂಗದಲ್ಲೂ ಬೆಳವಣಿಗೆ ಹೊಂದಿರುವ ಸ್ತ್ರೀ ತನ್ನ ಅನುಭವ ಸಾರವನ್ನು ಬರವಣಿಗೆಯಲ್ಲಿ ಹಿಡಿದಿಡುವ ಸಮರ್ಥ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ ಅಲ್ಲೊಂದು ಇಲ್ಲೊಂದು ಸುಧಾ ಮೂರ್ತಿ ಅವರಂತಹ ಉದಾಹರಣೆ ಹೊರತುಪಡಿಸಿ. ಒಟ್ಟಿನಲ್ಲಿ ಹೇಳಬೇಕೆಂದರೆ ಮಹಿಳಾ ಸಾಹಿತ್ಯ ಪ್ರಗತಿಯತ್ತ ಸಾಗುತ್ತಿದ್ದರೂ ಸಂಖ್ಯಾತ್ಮಕವಾಗಿ ವೃದ್ಧಿ ಹೊಂದಿದ್ದರೂ ಗುಣಾತ್ಮಕ ಹಾಗೂ ವಿಶೇಷ ಹರಿವುಗಳ ಅಭಿವ್ಯಕ್ತಿಗಳ ಬಗ್ಗೆ ಗಮನ ಹರಿಸಬೇಕಿದೆ .ಭಿಡೆ ಬಿಟ್ಟು ಬರೆಯುವ ಮನೋಭಾವ ಹೆಚ್ಚಿಸಿಕೊಳ್ಳಬೇಕಾಗಿದೆ. ಸಾಮಾಜಿಕವಾಗಿ ಹೊಂದಿದಂತಹ ಸಮಾನತೆ ಗೆಲುವು ಅವಕಾಶಗಳನ್ನು ಸಾಹಿತ್ಯಿಕವಾಗಿಯೂ ಪ್ರಾತಿನಿಧಿ ಸಬೇಕಾಗಿದೆ. ಕನ್ನಡಕ್ಕೆ ಬಂದ ಎಂಟೂ ಜ್ಞಾನಪೀಠ ಪ್ರಶಸ್ತಿಗಳೂ ಮಹನೀಯರಿಗೇ. ಮುಂದಾದರೂ ಕನ್ನಡ ಮಹಿಳಾ ಸಾಹಿತಿಗಳಿಗೆ ಜ್ಞಾನಪೀಠ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಎಲ್ಲಾ ಬರಲಿ ಎಂದು ಆಶಿಸೋಣ ಅಲ್ಲವೇ ? *******

ಮಹಿಳಾದಿನದ ವಿಶೇಷ Read Post »

ಇತರೆ

ಮಹಿಳಾದಿನದ ವಿಶೇಷ

ವ್ಯಾಖ್ಯಾನ ಬೇಕೇ? ಪದ್ಮಜಾ ಜೋಯಿಸ್ ಯತ್ರ ನಾರ್ಯಾಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಹೆಣ್ಣಿಗೊಂದು ವ್ಯಾಖ್ಯಾನ ಬೇಕಾಗಿಲ್ಲ, ಹೆಣ್ಣೆಂದರೆ ಹೆಣ್ಣಷ್ಟೇ.. ಕೋಪ, ಅಸೂಯೆ, ಜಗಳ ಎಲ್ಲದರ ಹಿಂದೆಯೂ ಆಕೆಗಿರುವುದು ತನ್ನವರಿಗಾಗಿ ತಾನೆರೆವ ಮತ್ತು ತನಗಾಗಿ ತಾನು ಬಯಸುವ ನೈಜ ಪ್ರೀತಿ ಅಷ್ಟೇ… ಹೆಣ್ಣಾಗಿ ಹುಟ್ಟಿದ್ದೇ ನಮ್ಮ ಹಿರಿಮೆ ಇದೇ ನಮ್ಮ ಹೆಮ್ಮೆ… ವಿಶ್ವ ಮಹಿಳಾ ದಿನಾಚರಣೆಯ ಶುಭಕಾಮನೆಗಳು.. ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನ .. ಒಂದಿಷ್ಟು ಅಂತರಂಗದ ಆತ್ಮಾವಲೋಕನ… ಇನ್ನೊಬ್ಬರನ್ನು ಮುಕ್ತರಾಗಿಸಲು ಹಂಬಲಿಸುವ ನಾವೆಷ್ಟು ಮುಕ್ತರು ??? ಹೆಜ್ಜೆಜ್ಜೆಗೂ ಇದಿರಾಗುವ ಹಿತಶತೃಗಳು .. ಪ್ರತಿಷ್ಠೆಗಾಗಿ ಹೆಂಗಸರ ಸ್ವಂತಿಕೆ, ನೈತಿಕ ಸ್ಥೈರ್ಯ, ಆತ್ಮಾಭಿಮಾನ , ಪುಡಿರೌಡಿಗಳಿಗೆ ಬಲಿಯಿಟ್ಟು ದರ್ಪ ದೌರ್ಜನ್ಯ ಮೆರೆಯುವವರ ನಡುವಲ್ಲಿ ಈ ವ್ಯವಸ್ಥೆಯ ಚೌಕಟ್ಟಿನಲ್ಲಿ ಬದುಕುವ ನಾವೆಷ್ಟು ಸ್ವತಂತ್ರರು ??? ಹೆಣ್ಣಿಗೆ ಹೆಣ್ಣೇ ಶತೃ ಇದೂ ಬಹುಭಾಗ ಯಾಕೆ ನಿಜವಾಗತ್ತೆ… ಇವರುಗಳಿಗಿಂತ ಪ್ರಾಣಿಗಳು ಮೇಲಲ್ಲವೇ ?? “ಶ್ರೀಲಕ್ಷ್ಮೀ ಅವತಾರ ಎಂದೇ ಕರೆಸಿಕೊಳ್ಳುವ ತನ್ನ ಜನ್ಮ ರಹಸ್ಯವೇ ಯಾರರರಿವಿಗೂ ಬಾರದ಼ಂತೆ ಕಾಪಿಟ್ಟುಕೊಂಡು ಬೆಳೆದ ಮನೆಯಲ್ಲೂ ಪರಕೀಯಳಾಗಿ ಕಟ್ಟಿಕೊಂಡವನಿಂದ ಸದಾ ಒಂದಲ್ಲೊಂದು ಕಾರಣಕ್ಕೆ ದೂರವಾಗಿಯೇ ಕಾಲ ಹಾಕುವ ಸೀತಾಮಾತೆ , ಬೀದಿ ಬಸವನೊಬ್ಬನ ಅಯೋಗ್ಯ ಮಾತುಗಳಿಗೆ ಬಲಿಯಾಗಿ ಸ್ವಪ್ರತಿಷ್ಠೆಗಾಗಿ ವ಼ಂಶದ ಕುಡಿ ಹೊತ್ತ ತುಂಬು ಗರ್ಭಿಣಿ ಧರ್ಮಪತ್ನಿಯ ಹೇಳದೇ ಕೇಳದೇ ಗಡಿಪಾರು ಮಾಡಿ ಕಾಡುಪಾಲು ಮಾಡುವ ರಾಮಚಂದ್ರನ ಆದರ್ಶವಾಗಿ ಮಾಡುವ ಈ ಸಮಾಜ ಈ ಸಂಬಂಧಗಳಿಂದ ಏನನ್ನ ತಾನೆ ನಿರೀಕ್ಷಿಸಬಹುದು ??? ಬೇಲಿಯೇ ಎದ್ದು ಹೊಲ ಮೇಯ್ದಂತಲ್ಲವಾ ?? ಇಂದಿಗೂ ಈ ಪರಿಪಾಠ ಬದಲಾಗೋಲ್ಲ ಎಲ್ಲ ಸಂಬಂಧಗಳಲ್ಲೂ.. ಹಚ್ಚಿಹಾಕೋ ಮನೆಹಾಳರಿದ್ದಷ್ಟು ಕಾಲ ಹೊರಹಾಕೋ ಮನೆಮ಼಼ಂದಿಯಿರ್ತಾರೆ, “ಪದೇ ಪದೇ ಅವಮಾನಿಸಿ ಹೊರಹಾಕುವ ಮತ್ತೆ ಕರೆಯುವ ಶ್ರೀರಾಮನ ನಡೆಯಿಂದ ಬೇಸತ್ತು ತಾಯ ಒಡಲಿಗೆ ಮರಳುವ ಸೀತೆಯೇ ನಮಗೆ ಆದರ್ಶವಾದರೇ…. ಮೊನ್ನೆ ಯಾರೋ ಕೇಳಿದ್ರು ಅದೇನು ಆಶ್ರಮ ?? ಅಬಲಾಶ್ರಮ ಮಾಡ್ತೀರಾ ?? ಯಾವುದೋ ಕಾಲದಲ್ಲಿ ಇದ್ದಿರಬಹುದು ಅಬಲೆ ಎಂಬ ಅನ್ವರ್ಥನಾಮದ ಹೆಣ್ಣು.. ಕಾಲಮಾನಕ್ಕೆ ತಕ್ಕಂತೆ ಪರಿಸ್ಥಿತಿಗನುಗುಣವಾಗಿ ಇಂದು ಹೆಣ್ಣು ತನ್ನ ದುಡಿಮೆ ತನ್ನ ಬದುಕು ತಾನೇ ನೋಡ್ಕೊಂಡು. ಬೇರೊಬ್ಬರ ಬದುಕಿಗೂ ಊರುಗೋಲಾಗಿದ್ದಾಳೆ.. ತಾನೂ ದುಡಿದು ನಾಲ್ವರ ದುಡಿಮೆಗೆ ದಾರಿಯಾಗೋ ಲಕ್ಷಾಂತರ ಮ಼ಂದಿ ಹೆಣ್ಮಕ್ಕಳು ನಮ್ಮ ನಡುವಿದ್ದಾರೆ… ಇಂಥವರು ಕಟ್ಟುವ ಸಂಸ್ಥೆಯಾಗಲೀ ಅದು ನೀಡುವ ನೆಲೆಯಾಗಲೀ ಅಬಲಾಶ್ರಮವಲ್ಲ ಸಬಲಾಶ್ರಮ ಅಲ್ಲವೆ ?? ನಂಗೆ ಕೆಲವರು ಯಾವಾಗಲೂ ಹೇಳ್ತಿದ್ರು ನೀನು ಧಿಕ್ಕರಿಸಿ ನಿಂತಂದು ನಿನ್ನ ಬದುಕು ನಿನ್ನದು… ಹೌದು ಬದುಕಿನಲ್ಲಿ ಇದುವರೆಗೂ ಮಾಡಬಾರದೆಂದುಕೊಂಡ ಒ಼ಂದು ಕೆಲಸ .. ಅದೇ ಕಾರಣಕ್ಕೆ ಪದೇ ಪದೇ ಶೋಷಣೆ ಅವಮಾನಕ್ಕೊಳಗಾಗುವ ಹಿಂಸೆ …. ನೋವು ನುಂಗಿ ನಗುವ ಯತ್ನ …. ಇಂದು ಮಗ ಹದಿನೆಂಟರ ಹೊಸ್ತಿಲಲ್ಲಿ ನಿಂತಿದ್ದಾನೆ.. ಬದುಕಿನುದ್ದಕ್ಕೂ ಉರಿದ ಹೆತ್ತ ತಾಯಿಯ ನೋವಿಗೆ ಅವಮಾನಕ್ಕೆ ಪ್ರತಿರೋಧಿಸುವ ಹಂತ ತಲುಪಿದ್ದಾನೆ… ಇದನ್ನು ಸರಿಯೆನ್ನಲಾ ತಪ್ಪೆನ್ನಲಾ ?? ಒಂದು ವೇಳೆ ಅಲ್ಲಗೆಳೆದರೇ ಶೋಷಣೆಯ ಒಪ್ಪಿಕೊಂಡಂತಾಗುವುದಿಲ್ಲವೆ ?? ಸ್ವಾವಲಂಬನೆಯ ಸ್ವಂತಿಕೆಯ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲೆತ್ನಿಸುವ ಸಾವಿರಾರು ತಾಯಂದಿರಿಗೆ ಇದು ಅವಮಾನವಲ್ಲವೆ ?? ಈ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಈ ಮಾನಸಿಕ ನೋವಿನಿಂದ ಮುಕ್ತಳಾಗಲು ಏಕಾಂತದ ಬದುಕನ್ನಾಯ್ದುಕೊಂಡು ನಂಗೂ ತನ್ನ ನಡವಳಿಕೆಯಿಂದ ನಿನ್ನ ಪಾಡಿಗೆ ನೀ ಬದುಕು ಎಂದು ತೋರಿಸಿದ , ತನ್ನ ಗಂಡನ ಆಸ್ತಿಯಲ್ಲಿ ತನಗೆ ಬಂದದ್ದರಲ್ಲಿ ನನಗೂ ಹಂಚಿ ನನ್ನ ಸ್ವಂತಿಕೆ ಸ್ವಾಭಿಮಾನದ ಬದುಕಿಗೆ ಊರುಗೋಲಾದ ನನ್ನ ಹೆತ್ತಮ್ಮ ಸ್ವರ್ಣರಿಗೆ ಮೊತ್ತ ಮೊದಲ ಮಹಿಳಾ ದಿನಾಚರಣೆಯ ಹಾರ್ಧಿಕ ಶುಭಾಶಯಗಳು… ಇಂದಿಗೆ ಈ ಹಿತಶತೃವಿನಂಥ ಸಾಮಾಜಿಕ ವ್ಯವಸ್ಥೆಯಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ನನ್ನಮ್ಮನ ಭಿಕ್ಷೆ.. ಅಲ್ಲದೇ ಬೇರೇನೂ ಅಲ್ಲ… ಪ್ರತೀ ಹಂತದಲ್ಲೂ ನನ್ನನ್ನು ಇದರಿಂದ ವಿಮುಖಳಾಗಿಸುವ ಸಂಚು ನಡೀತಾನೇ ಇದೆ.. ಸಾಮಾಜಿಕವಾಗಿ ಅವಮಾನಿಸುವ ಕಂಗೆಡಿಸುವ ತುಳಿಯುವ ಕಾರಣಗಳಿಗಾಗಿ ಕಾದಿರುವ ಕೆಲವರು ಹೋದಲ್ಲಿ ಬಂದಲ್ಲಿ ನಿರಂತರ ಕಿರುಕುಳ ನೀಡುತ್ತಿದ್ದಾರೆ… ನಾನು ಬೇಸತ್ತು ಬೆನ್ನು ಹಾಕಲೀ ಎಂಬುದೇ ಅವರ ಉದ್ದೇಶ , ಇದು ತಾವೇನನ್ನೂ ಮಾಡಲು ಯೋಗ್ಯತೆಯಿಲ್ಲದ ಹೆಂಗಸರ ಜಾತಿಗೆ ಅಪವಾದವಾದವರು ಇಂಥವರನ್ನು ಚಮಚಾಗಳಾಗಿಸಿಕೊಂಡು ವ್ಯವಸ್ಥಿತ ಬಲೆ ಹಣೆಯಲು ಪ್ರೇರೇಪಿಸುತ್ತಿದ್ದಾರೆ.. ರೋಸಿ ದೂರ ಹೋಗುತ್ತೇನೋ ಧಿಕ್ಕರಿಸಿ ಬದುಕುತ್ತೇನೋ ಭಗವಂತನಿಗೇ ಗೊತ್ತು.. ಆದರೇ ., ಇದು ಅಂತ್ಯವಲ್ಲ ಆರಂಭ ನಾನಲ್ಲದಿದ್ದರೂ ಇನ್ನೊಬ್ಬ ಮಹಿಳೆ ತಲೆ ಎತ್ತುತ್ತಾಳೆ .. ಸಾವಿರಾರು ಹೆಂಗಸರು ಜೊತೆಯಾಗುತ್ತಾರೆ ಪ್ರಬಲ ರಾಜಕಾರಣದ ಬೆಂಬಲದ ತಗೊಂಡು ಮೆರೆಯುವವರನ್ನೂ ಮಣ್ಣುಮುಕ್ಕಿಸುತ್ತಾರೆ… ಅಪ್ಪನನ್ನ ಕಳಕೊಂಡಾಗಲೇ ಅನಾಥತೆಯ ತೀವ್ರ ಅನುಭವ ಕಂಡುಂಡ ಜೀವಕ್ಕೀಗ ಬೀದಿಗೆ ಬೀಳುವ ತಿರುಪೆ ಎತ್ತುವ ಭಯವಿಲ್ಲ , ಯಾಕಂದರೇ ದುಡ್ಡಿಲ್ಲದೇ ಯಾರದೇ ಕೃಪಾಶ್ರಯವಿಲ್ಲದೇ ಸ್ವಂತ ಶ್ರಮದಿಂದ ಬದುಕುವ ಕಲೆ ಕರಗತವಾಗಿದೆ.. ಹೆತ್ತಮ್ಮನ ಕೃಪಾಶೀರ್ವಾದವಿದೆ…. ದಣಿವಾದರೇ ಒರಗಲು ಹೆತ್ತ ಮಗನ ಹೆಗಲಿದೆ… ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ ಎಂದು ಹೇಳುವ ಎಡೆಯಲ್ಲಿಯೇ ನಿರ಼ಂತರ ಕಣ್ಣೀರಿಟ್ಟ ಕಂಗಳೀಗ ಕಂಬನಿಯಿಲ್ಲದೇ ಬರಡಾಗಿದೆ… ಸಂಸ್ಕಾರದ ಹೆಸರಲ್ಲಿ ಸದಾ ಅವಮಾನ ಶೋಷಣೆಯ ದಬ್ಬಾಳಿಕೆಗೊಳಗಾದ ಮನವೀಗ ಹೊಸ ಹಾದಿಯತ್ತ ಹೆಜ್ಜೆಯೆತ್ತಿದೆ , ಸಹಿಸಿದಷ್ಟೂ ತುಳಿಯುವ… ಸುಮ್ಮನಿದ್ದಷ್ಟೂ ಶೋಷಿಸುವ ಪರಿಧಿಯಾಚೆಗೆ ಬದುಕಿದೆ… ಇದು ಬಹುಶಃ ಸಾವಿರಾರು ಮಹಿಳೆಯರ ಮಾತಾಗಲಾರದ ಧ್ವನಿ ಇರಬಹುದು…. ಬನ್ನಿ ನಮ್ಮ ಬದುಕ ಸ್ವಾಭಿಮಾನದಿಂದ ಬದುಕೋಣ ಸ್ವಾವಲಂಬಿಯಾಗೋಣ… ಕೊಲ್ಲುವವನೊಬ್ಬನಿದ್ದರೇ ಕಾಯೋನೊಬ್ಬನಿರುತ್ತಾನೆ.. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ಧಿಕ ಶುಭಾಶಯಗಳು.ನಿಷ್ಕಲ್ಮಷತೆಯಿಂದ ಏನನ್ನಾದರೂ ಒಳ್ಳೇದ ಬಯಸೋ ಹೆಣ್ಮನಗಳಿಗೆ ವರ್ಷಪೂರ್ತಿ ಮಹಿಳಾ ದಿನಾಚರಣೆ.. ನನ್ನಬದುಕು #ನನ್ನಆದರ್ಶ #ನನ್ನಅಮ್ಮ ಅಂತರ ರಾಷ್ಟೀಯ ಮಹಿಳಾ ದಿನಾಚರಣೆಯ ಹಾರ್ಧಿಕ ಶುಭಾಶಯಗಳು, ******************************

ಮಹಿಳಾದಿನದ ವಿಶೇಷ Read Post »

ಇತರೆ

ಮಹಿಳಾದಿನದ ವಿಶೇಷ

ಮಹಿಳಾ ದಿನಾಚರಣೆ ಕೆ.ಶಿವುಲಕ್ಕಣ್ಣವರ ಅಂತರಾಷ್ಟ್ರೀಯ ಮಹಿಳೆಯರ ದಿನಾಚರಣೆ– ಪ್ರತಿ ವರ್ಷ ಮಾರ್ಚ್ ೮ ರಂದು ವಿಶ್ವದೆಲ್ಲೆಡೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ… ಈ ಮಹಿಳಾ ದಿನಾಚರಣೆಯ ಇತಿಹಾಸ ಮತ್ತು ಮಹತ್ವ– ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ “ಅಂತರಾಷ್ಟ್ರೀಯ ಮಹಿಳೆಯರ ದಿನ”ವನ್ನು ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ , ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲು ತಮ್ಮದೆ ಆದ ಛಾಪನ್ನು ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನು ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. ೧೯೭೫ರ “ಅಂತರಾಷ್ಟ್ರೀಯ ಮಹಿಳೆಯರ ದಿನ”ದ ಸಮಯದಲ್ಲಿ, ಮಾರ್ಚ್ ೮ ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನು ಆಚರಿಸಲು ಆರಂಭಿಸಿದವು… ಎರಡು ವರ್ಷದ ನಂತರ,೧೯೭೭ರಲ್ಲಿ, “ದಿ ಜನರಲ್ ಅಸ್ಸೆಂಬ್ಲಿ” ಮಹಿಳೆಯರ ಹಕ್ಕು ಮತ್ತು ಶಾಂತಿ ಸ್ಥಾಪನೆಯನ್ನು ಆಯಾ ದೇಶದ ಸದಸ್ಯರು ಗಮನಿಸಿ ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು. ಹೀಗೆ ಕರೆನೀಡುವಾಗ ಮಹಿಳೆಯ ಪಾತ್ರ ಹಾಗೂ ಅವರ ಮೇಲೆ ನಡೆಯುತ್ತಿರುವ ಪಕ್ಷಪಾತವನ್ನು ಗಮನಿಸಿ ಅವರಿಗೆ ಸ್ಪರ್ಧಿಸುವ ಪೂರ್ತಿ ಅವಕಾಶವನ್ನು ನೀಡುವಂತೆ ಘೋಷಿಸಿತು… “ಅಂತರಾಷ್ಟ್ರೀಯ ಮಹಿಳೆಯರ ದಿನ” ಮೊದಲ ಬಾರಿಗೆ ಹೊರಹೊಮ್ಮಿದ್ದು ಕೂಲಿ ಚಳುವಳಿ(ಲೇಬರ್ ಮೊವ್ಮೆಂಟ್ಸ್) ಚಟುವಟಿಕೆ ಉತ್ತರ ಅಮೆರಿಕ ಮತ್ತು ಯೂರೋಪ್ ಪ್ರದೇಶಗಳಲ್ಲಿ ನಡೆದಾಗ. ೧೯೦೯ರಲ್ಲಿ ಸಂಯುಕ್ತ ಸಂಸ್ಥಾನಗಳಲ್ಲಿ ಮೊದಲ “ಅಂತ ರಾಷ್ಟ್ರೀಯ ಮಹಿಳೆಯರ ದಿನ”ಫೆಬ್ರವರಿ ೨೮ ರಂದು ಕಂಡು ಬಂತು… ಅಮೇರಿಕಾದ ಸಮಾಜವಾದಿ ಪಕ್ಷ ಈ ದಿನವನ್ನು ಕೆಲಸದ ಪರಿಸ್ಥಿತಿಯನ್ನು ವಿರೋಧಿಸಿ ನ್ಯುಯಾರ್ಕ್ ನಗರದಲ್ಲಿ ನಡೆದ “ಸರ್ಕಾರಿ ಕಾರ್ಮಿಕರ ಚಳುವಳಿ”ಯಲ್ಲಿ ಪ್ರತಿಭಟಿಸಿದ ಮಹಿಳೆಯರಿಗೆ ಅರ್ಪಿಸಲಾರಿತು. ೧೯೧೦ರಲ್ಲಿ ಅಂತರಾಷ್ಟ್ರೀಯ ಸಮಾಜವಾದಿ ಕೊಪೆಂಹಗೆನ್ ನಲ್ಲಿ ನಡೆದ ಚರ್ಚೆಯಲ್ಲಿ ಅದಿಷ್ಟಿತಗೊಳಿಸಲಾಯಿತು. ಈ ಪ್ರಸ್ಥಾಪವನ್ನು ಅವಿರೋಧವಾಗಿ ೧೦೦ ಮಹಿಳೆಯರು ೧೭ ದೇಶಗಳಿಂದ ಸಹಕರಿಸಿದರು, ಇದು ಫಿನ್ನಿಷ್ ಪಾರ್ಲಿಮೆಂಟ್ ಗೆ ಆಯ್ಕೆಯಾದ ಮೊದಲ ಮೂವರು ಮಹಿಳೆಯರನ್ನೂ ಸಹ ಒಳಗೊಂಡಿತ್ತು… ೧೯೧೧ರಲ್ಲಿ ಕೊಪೆಂಹಗೆನ್ ನ ಮೊದಲ ಹೆಜ್ಜೆಯ ಫಲಿತಾಂಶವಾಗಿ, ಅಂತರಾಷ್ಟ್ರೀಯ ಮಹಿಳೆಯರ ದಿನವನ್ನ ಮೊದಲ ಬಾರಿಗೆ ಮಾರ್ಚ್ ೧೯ ರಂದು ಆಸ್ಟ್ರೇಲಿಯ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಡ್ಜರ್ಲ್ಯಾಂಡ್ ದೇಶಗಳು ಗುರುತಿಸಿದವು… ಅಂದು ಒಂದು ಮಿಲಿಯನ್ ಗಿಂತಲೂ ಹೆಚ್ಹು ಮಹಿಳೆಯರು ಹಾಗೂ ಪುರುಷರು ಈ ಚಳುವಳಿಯಲ್ಲಿ ಭಾಗವಹಿಸಿದರು… ಇದಲ್ಲದೇ ಮತಚಲಾಯಿಸುವ ಹಕ್ಕು, ಸಾರ್ವಜನಿಕ ಕಛೇರಿ, ಮಹಿಳೆಯರಿಗೆ ಕೆಲಸ ಮಾಡುವ ಹಕ್ಕು ಹಾಗೂ ಉದ್ಯೋಗ ತರಬೇತಿಯನ್ನು ಜಾರಿಗೆ ತರಲು ಬೇಡಿಕೆಯಿಟ್ಟಿದ್ದಲ್ಲದೇ ಕೆಲಸದಲ್ಲಿನ ತಾರತಮ್ಯವನ್ನು ವಿರೋಧಿಸಿ ಪ್ರತಿಭಟಿಸಿದರು… ೧೯೧೩-೧೯೧೪ರಲ್ಲಿ ಅಂತರಾಷ್ಟ್ರೀಯ ಮಹಿಳೆಯರ ದಿನದ ಆಚರಣೆ “೧ನೇ ವಿಶ್ವ ಯುದ್ಧ”ವನ್ನು ತಡೆಗಟ್ಟುವ ಯಾಂತ್ರಿಕ ಕೌಶಲ್ಯವಾಗಿ ಮಾರ್ಪಟ್ಟಿತು… ಇದೇ ವೇಳೆಯಲ್ಲಿ ಶಾಂತಿ ಚಳುವಳಿಯ ಅಂಗವಾಗಿ ರಷ್ಯಾದ ಮಹಿಳೆಯರು ಫೆಬ್ರವರಿಯ ಕೊನೆಯವಾರದಲ್ಲಿ ವಿಶ್ವ ಮಹಿಳಾ ದಿನವನ್ನು ಆಚರಿಸಿ ಗಮನಸೆಳೆದರು. ಅತ್ತ ಯುರೋಪಿನಲ್ಲಿ ಅದೇ ಸಾಲಿನ ಮಾರ್ಚಿ ೮ ರಂದು ಮಹಿಳೆಯರು ಯುದ್ಧನೀತಿಯನ್ನು ವಿರೋಧಿಸಿ, ಐಕ್ಯಮತವನ್ನು ಸಹಕರಿಸಿ ಬೃಹತ್ ಚಳುವಳಿ ನಡೆಸಿದರು… ೧೯೧೭ರಲ್ಲಿ ಮತ್ತೆ ಯುದ್ಧ ನೀತಿಯನ್ನು ವಿರೋಧಿಸಿ ರಷ್ಯಾದ ಮಹಿಳೆಯರು ಊಟ ಮತ್ತು ಶಾಂತಿ ಚಳುವಳಿಯನ್ನು ಫೆಬ್ರವರಿ ತಿಂಗಳ ಕೊನೆಯ ಭಾನುವಾರದಲ್ಲಿ. ಇದು ಗ್ರೆಗೊರಿಯನ್ ಕ್ಯಾಲೆಂಡರಿನ ಪ್ರಕಾರ ಮಾರ್ಚಿ ೮) ನಡೆಸಿದರು… ನಾಲ್ಕು ವಾರಗಳ ನಂತರ ರಾಜ ಮನೆತನದ ಆಳ್ವಿಕೆಯನ್ನು ನಿಲ್ಲಿಸಿ ಮತಚಲಾಯಿಸುವ ಅಧಿಕಾರವನ್ನು ಸರ್ಕಾರ ನೀಡಿತು. ಅಂದಿನ ದಿನಗಳಲ್ಲಿ ಮಹಿಳಾ ದಿನಾಚರಣೆ ಮುಂದುವರೆದ ಮತ್ತು ಮುಂದುವರೆಯುತ್ತಿರುವ ದೇಶಗಳಲ್ಲಿ ಹೊಸ ಆಯಾಮವನ್ನು ಪಡೆಯಿತು… ಬೆಳೆಯುತ್ತಿದ್ದ ಅಂತರಾಷ್ಟ್ರೀಯ ಮಹಿಳಾ ಚಳುವಳಿ, ಅವುಗಳ ಸಾಮರ್ಥ್ಯವನ್ನು ಹೆಚ್ಹಿಸಿದ ನಾಲ್ಕು “ಜಾಗತಿಕ ಸಂಯುಕ್ತ ರಾಷ್ಟ್ರೀಯ ಮಹಿಳಾ ಸಮಾಲೋಚನೆ”, ಮಹಿಳಾ ಹಕ್ಕು, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಭಾಗವಹಿಸುವ ಹಕ್ಕನ್ನು ಪಡೆಯಲು ಪೋಷಿಸಿದವು. ದಿನಕಳೆದಂತೆ ಅಂತರಾಷ್ಟ್ರೀಯ ಮಹಿಳೆಯರ ದಿನ ಬೆಳವಣಿಗೆಯ ಪ್ರತಿಬಿಂಬದ ಜೊತೆಗೆ ಸಾಧರಣ ಮಹಿಳೆಯ ಧೀರತನ ಮತ್ತು ಧೃಡತೆ, ದೇಶ ಹಾಗೂ ಸಮುದಾಯದ ಇತಿಹಾಸದಲ್ಲಿ ವಹಿಸಿದ ಅಸಾಧಾರಣ ಪಾತ್ರವನ್ನು ಬಿಂಬಿಸುತ್ತಾ ಬದಲಾವಣೆಯ ಕರೆಯನ್ನು ನೀಡುತ್ತದೆ… ಸಂಯುಕ್ತ ರಾಷ್ರಗಳು ಮತ್ತು ಲಿಂಗ ಸಮಾನತೆಗಾಗಿ– ೧೯೪೫ ರಲ್ಲಿ ಸಹಿ ಮಾಡಿದ ಸಂಯುಕ್ತ ರಾಷ್ಟ್ರಗಳ ಅಂತರಾಷ್ಟ್ರೀಯ “ಲಿಂಗ ಸಮಾನತಾ ತತ್ವ” ಅಂಗೀಕಾರಕ್ಕೆ ಬಂತು. ಅಲ್ಲಿಯ ನಂತರ ವಿಶ್ವವ್ಯಾಪ್ಯ ಒಪ್ಪಂದ ನೀತಿ, ನಿರ್ದಿಷ್ಟಮಾನ, ಮಹಿಳಾಭಿವ್ರುದ್ದಿ ಕಾರ್ಯಕ್ರಮ ಹಾಗೂ ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಕೆಲವರ್ಷಗಳ ನಂತರ ಸಂಯುಕ್ತ ರಾಷ್ರಗಳು ಮತ್ತು ಅದರ ತಾಂತ್ರಿಕ ಏಜೆನ್ಸ್ಸಿಗಳು ಮಾನವ ಹಕ್ಕುಗಳನ್ನು ಅಭಿನಂದಿಸಿ ಮಹಿಳೆಯರು ಭಾಗವಹಿಸುವುದನ್ನು ಪ್ರೋತ್ಸಾಹಿಸಿದವು. ಮಹಿಳೆಯರನ್ನು ಪ್ರಭಲಗೊಳಿಸುವ ಸಂಯುಕ್ತ ರಾಷ್ರಗಳ ಕಾರ್ಯ ವಿಶ್ವದಾದ್ಯಂತ ಇಂದು ಮುಂದುವರೆಯುತ್ತದೆ..! ಇದಿಷ್ಟು ಮಹಿಳಾ ದಿನದ ಇತಿಹಾಸ ಮತ್ತು ಮಹತ್ವ… ‌‌ ***************************

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಕಾವ್ಯಯಾನ

ಮಾಂತ್ರಿಕಳೆಂದು.. ವಿಜಯಶ್ರೀ ಹಾಲಾಡಿ ಮೊದಮೊದಲ ಮಳೆಹನಿಗೆಅವಳು ಕರಗಲಿಲ್ಲಹನಿಯೇ ಕರಗಿತುಮಳೆಧಾರೆಯೇನು …ಕಡಲನ್ನೇ ನುಂಗಿನೊಣೆಯುವ ತಾಕತ್ತಿನವಳು ! ಬೇಡವೆಂದು ದೂಡಿದ್ದಾಳೆಅರಸಿ ಬಂದದ್ದೆಲ್ಲವನ್ನುಕೊನೆಗೆ ಜಗವೆಂಬ ಜಗವನ್ನೂ ..ಕಾವ್ಯವನ್ನು ಮಾತ್ರಹುಡುಕಿ ಹೋಗಿದ್ದಾಳೆಹುಡುಕುತ್ತಲೇ ತಿರುಗಿದ್ದಾಳೆ ಅಲೆಮಾರಿಗೇನು ..ನಿರಾಳ ಬೀದಿಗಳೇಆಲಯಗಳೇತೊರೆಯೇ ಹಳ್ಳಗಳೇ …ಕಡಿದು ಪರ್ವತದಿಣ್ಣೆ ಕೊರಕಲುಗಳನಡುವೆ ಯಾತ್ರೆ ಹೊರಟುಬೇಡವೆಂದು ಕೈಬಿಟ್ಟುಸಂತೆಮಾಳದಲ್ಲಿಸಂಜೆ ಮಾಡಿಕೊಂಡುಇರುಳು ಚಂದ್ರನ ಕೆಳಗೆಕವಿತೆ ಬರೆಯುತ್ತಿದ್ದಳಂತೆಬೆಳಗಿನವರೆಗೂಲಾಂದ್ರ ಹಚ್ಚಿಟ್ಟುಗುಡಾರದಲ್ಲಿ ಗುಡಿ-ಗುಡಿಯ ಸೇದುತ್ತಕೂದಲು ಬಿರಿಹೊಯ್ದುಕನಸು ಚೆಲ್ಲಿತೆಂದುಆಯ್ದು ಕೂತಿದ್ದಳಂತೆ ಊರ ಜನ ಮಾಂತ್ರಿಕ-ಳೆಂದು ಅಡ್ಡಬೀಳಲುಅಂಗಲಾಚಲು ಶುರು-ವಿಟ್ಟುಕೊಂಡಾಗಓ ಅದೇ ಬೆಟ್ಟದಕೆಳಗೆ ನದಿಯ ಗುಂಟನಡೆದುಹೋದಳಂತೆಮತ್ತಿನ್ಯಾರೂಕಾಣಲಿಲ್ಲವಂತೆ ! ****** ಚಿತ್ರಕೃಪೆ:ವಿಜಯಶ್ರೀ ಹಾಲಾಡಿ

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಮೂಲ:ವೇನ್ ಕೌಮೌಲಿ ವೆಸ್ಟ್ ಲೇಕ್(ಹವಾಯಿ ಕವಿ) ಕನ್ನಡಕ್ಕೆ: ಕಮಲಾಕರ ಕಡವೆ ಸಿರಿವಂತ ಮಹಿಳೆ ಬಸ್ಸಿನ ಮೇಲೆಮಾತು ಮಾತು ಮಾತುಕೊನೆಯೇ ಇಲ್ಲ ನಾನೊಂದು ಕಮ್ಯುನಿಸ್ಟ ಸಿಗರೆಟ್ಟು ಹಚ್ಚಿಭಯಾನಕ ಹೊಗೆ ಉಗುಳಿದೆಹಾ ! ನೀರು ಕುಡಿಯಿತು ಒಂದು ಆಕಳುಹಾಲಾಗಿ ಮರುನೀಡಿನೀರು ಕುಡಿಯಿತು ಒಂದು ಹಾವುಹಾಲಾಹಲವ ಮರುನೀಡಿ ಬಿಳಿ ಚಿಟ್ಟೆ ಅಟ್ಟಿ ಓಡುವಬೆಕ್ಕಿಗೆ ಲೆಕ್ಕಕ್ಕಿಲ್ಲಕಾಲಡಿಗಾದ ಹೂಗಳು ಮುಂಜಾನೆ ಮೌನ ಹಿತ ಕೊಡುತ್ತಿತ್ತುಅಷ್ಟರಲ್ಲಿ ಹೊರಗಡೆ ಯಾರೋಕಿರುಚತೊಡಗಿದರುದೇವರೇ ! ದೇವರೇ ! ದೇವರೇ ! ಎಷ್ಟು ವಿಭಿನ್ನ ವಿಚಾರಗಳುನನಗೆ ಮತ್ತು ಬೆಕ್ಕಿಗೆಹಕ್ಕಿಮರಿಯೊಂದ ನೋಡುತ್ತ ಅರಳಿದ್ದ ಗುಲಾಬಿ ನೋಡುತ್ತ ನೋಡುತ್ತನಾನು ಕಾಲಿಟ್ಟೆಸಗಣಿಯ ಮೇಲೆ ಶಾಲೆಯಲ್ಲಿ ಎರಡನೆಯ ದಿನನಾನು ಅಂದು ಕೊಳ್ಳುತ್ತೇನೆ –ಪುಸ್ತಕಗಳನ್ನಲ್ಲಮೋಡಗಳನ್ನು ನೋಡ ಬಯಸುತ್ತೇನೆ ಈ ಅಕ್ಷರ, ಈ ಅಂಕಿ, ನೂರು ನೂರು !!ಆಹಹ, ಎಂಥ ನೆಮ್ಮದಿಒಂದು ಮರವ ನೋಡುವುದು ನನ್ನ ಕವನಗಳು ಅರ್ಥಹೀನವೆಂದುಹೀಯಾಳಿಸಿದರು ಅವರುನಾನು ನಕ್ಕೆನಷ್ಟೆ,ಎಲ್ಲರಿಗೂ ಗೋಚರಿಸುವುದಿಲ್ಲಬಣ್ಣಗಳ ನಡುವೆ ರಕ್ತದ ಗೆರೆಗಳು ಚಳಿ ಕೊರೆಯುವ ಈ ಗುಡ್ಡದನೆತ್ತಿಯಲ್ಲಿಪುಟ್ಟ ಹಕ್ಕಿಯೇ ಏನು ಮಾಡುತ್ತಿರುವೆ ಏಕಾಕಿ ಕವಿಯಾದವ ಕವನ ಖರೀದಿಸಲಾರಹಾಗೆ ಖರೀದಿಸಿದರೆ ಕವಿಯಾದಾನು ಹೇಗೆ? *******

ಅನುವಾದ ಸಂಗಾತಿ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಜಾನಪದ ಗಾರುಡಿಗ ಬೈಲೂರ ಬಸವಲಿಂಗಯ್ಯ ಹಿರೇಮಠ..! ಕೆ.ಶಿವುಲಕ್ಕಣ್ಣವರ ಜಾನಪದ ಗಾರುಡಿಗ ಬೈಲೂರ ಬಸವಲಿಂಗಯ್ಯ ಹಿರೇಮಠ..! ನಾನು ಬೈಲೂರ ಬಸವಲಿಂಗಯ್ಯ ಹಿರೇಮಠ ಅವರ ಪುಸ್ತಕವಾದ ‘ನೂರು ಜಾನಪದ ಹಾಡುಗಳು’ ಬಗೆಗೆ ವಿಮರ್ಶಾತ್ಮಕ ಲೇಖನವನ್ನು ಬರೆದೆನು. ಆಗ ಸಾಕಷ್ಟು ಪ್ರಶಂಸೆಗಳು ಬಂದವು. ಅಲ್ಲದೇ ಸಾಕಷ್ಟು ಜನರು ಅವರ ಆ ಪುಸ್ತಕವನ್ನು ಕೇಳಿದರು. ನಾನು ಅವರ ಅಂದರೆ ಬೈಲೂರ ಬಸವಲಿಂಗಯ್ಯ ಹಿರೇಮಠರ ಫೋನ್ ನಂಬರ್ ಕೊಟ್ಟು ಸುಮ್ಮನಾದೆನು. ಅದರೆ ಬಹಳಷ್ಟು ಜನರು ಬೈಲೂರ ಬಸವಲಿಂಗಯ್ಯ ಹಿರೇಮಠರ ವೈಯಕ್ತಿಕ ಮಾಹಿತಿಯನ್ನು ಕೇಳಿದರು. ನಾನು ಸಾಧ್ಯವಾದಷ್ಟು ಮತ್ತು ನನಗೆ ಗೊತ್ತಿದ್ದಷ್ಟು ಮಾಹಿತಿಯನ್ನೂ ಫೋನ್ ನಲ್ಲಿಯೇ ಹೇಳಿದೆನು. ಕೆಲವರಂತೂ ಅವರ ಕುರಿತಾಗಿ ಒಂದು ವೈಯಕ್ತಿಕ ಬದುಕಿನ ಬಗೆಗೆ ಅಂದರೆ ಅವರ ‘ಜಾನಪದ ಬದುಕಿನ ಮಜಲ’ನ್ನೇ ಒಂದು ಲೇಖನ ಮಾಡಿರೆಂದರು. ಹಾಗಾಗಿ ಆ ಅವರ ವೈಯಕ್ತಿಕ ಬದುಕಿನ ಬಗೆಗೆ ಕೇಳಿದರಿಗಾಗಿ ಏಕೆ ಒಂದು ಲೇಖನ ಬರೆಯಬಾರದೆಂದು ಈ‌ ಬೈಲೂರ ಬಸವಲಿಂಗಯ್ಯ ಹಿರೇಮಠ ಜಾನಪದ ಬದುಕಿನ ಬಗೆಗೆ ಬರೆಯಬೇಕಾಯಿತು… ಅದು ಹೀಗಿದೆ– ಬೈಲೂರ ಬಸವಲಿಂಗಯ್ಯ ಹಿರೇಮಠರು ಅತ್ಯಂತ ಗ್ರಾಮೀಣ ಸೊಗಡಿನ ಜಾನಪದ ಪ್ರತಿಭೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಬೈಲೂರಿನವರು ಇವರು… ಇವರು ಚಿಕ್ಕಂದಿನಿಂದಲೇ ಜಾನಪದ ಸಂಗೀತ ಹಾಗೂ ಬಯಲಾಟಗಳೊಂದಿಗೆ ಹಾಡುತ್ತ, ಆಡುತ್ತ ಬೆಳೆದವರು. ಮುಂದೆ ಇವರು ಜಾನಪದದಲ್ಲಿ ಎಂ.ಎ.ಪದವಿ ಪಡೆವರು. ೧೯೮೩ರಲ್ಲಯೇ ನೀನಾಸಂ ‘ಜನ ಸ್ಪಂದನ’ ಶಿಬಿರದ ಮೂಲಕ ಹವ್ಯಾಸಿ ರಂಗಭೂಮಿಗೆ ಕಾಲಿಟ್ಟವರು. ಇವರು ತಿರುಗಾಟದಲ್ಲಿ ನಟರಾಗಿ, ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ಕೆಲ ಮಾಡಿದವರು. ಬಿ.ವಿ.ಕಾರಂತರೊಂದಿಗೆ ‘ರಂಗ ಸಂಗೀತ’ ಕುರಿತಂತೆ ಅಭ್ಯಾಸ ಮಾಡಿದವರು… ಧಾರವಾಡದಲ್ಲೊಂದು ‘ಜಾನಪದ ಸಂಶೋಧನಾ ಕೇಂದ್ರ’ವನ್ನು ಹುಟ್ಟು ಹಾಕಿ ತನ್ಮೂಲಕ ದಂಪತಿಗಳ ಇಬ್ಬರೂ ೩೦ ವರ್ಷಗಳಿಂದ ಜಾನಪದ ರಂಗಭೂಮಿ, ಗ್ರಾಮೀಣ ವೃತ್ತಿ ರಂಗಭೂಮಿ, ಹಾಗೂ ಆದುನಿಕ ರಂಗಭೂಮಿಯಲ್ಲೂ ತಮ್ಮನ್ನು ತಾವು ತೊಡಗಿಕೊಂಡವರು. ಇವರ ರಚನೆಯ ಪರಿಷ್ಕೃತ ರಂಗರೂಪ ‘ಶ್ರೀ ಕೃಷ್ಣ ಪಾರಿಜಾತ’ ಸಾವಿರ ಪ್ರಯೋಗದತ್ತ ದಾಪುಗಾಲು ಹಾಕುತ್ತಿದೆ… ಇವರು ನಟರಾಗಿ, ಹಾಡುಗಾರರಾಗಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಇವರು ಸುಮಾರು ನೂರಕ್ಕೂ ಹೆಚ್ಚು ನಾಟಕಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ಬಿ.ವಿ.ಕಾರಂತರ ಆಸೆಯದಂತೆ ‘ರಂಗ ಸಂಗೀತ’ ಎನ್ನುವುದು ಭಾಷೆಯಾಗಬೇಕು ಎಂಬುದನ್ನು ಮನಗಂಡು ಇವರು ಆ ತೆರದಲ್ಲಿ ಸಂಗೀತ ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದಾರೆ. ಜಾನಪದ ಬಯಲಾಟಗಳು, ಹಾಡುಗಳು ಅದರ ವಾದ್ಯಗಳ ಅಬ್ಬರದಲ್ಲಿ ಸ್ಪಷ್ಟತೆ ಕಳೆದುಕೊಂಡ ಈ ಸಂದರ್ಭದಲ್ಲಿ ಅಲ್ಲಿಯ ಮಟ್ಟಗಳ ಕುರಿತು ಅಧ್ಯಯನ ಮಾಡಿ ಪುಸ್ತಕಗಳನ್ನು ಹೊರತಂದಿದ್ದಾರೆ ಬೈಲೂರು ಬಸವಲಿಂಗಯ್ಯ ಹಿರೇಮಠ ಅವರು. ಹಿಂದೂಸ್ತಾನಿ ಸಂಗೀತದಲ್ಲೂ ಪದವಿ ಪಡೆದ ಇವರು ರಂಗ ಸಂಗೀತ, ದಾಸವಾಣಿ, ಶರಣವಾಣಿ, ತತ್ವಪದ ಹಾಗೂ ಬಯಲಾಟ ಪದಗಳ‌ ಕುರಿತಂತೆ ಕರ್ನಾಟಕವಲ್ಲದೇ ಹೊರ ರಾಜ್ಯ ಹಾಗೂ ಹೊರದೇಶಗಳಾದ ಅಮೆರಿಕಾ, ‌ಲಂಡನ್, ಬೆಹರಿನ್, ಸಿಂಗಪುರ ಮುಂತಾದೆಡೆ ಕಾರ್ಯಕ್ರಮ ನಡೆಸಿದ್ದಾರೆ. ನೂರಾರು ರಂಗಪದಗಳು ಒಳಗೊಂಡಂತೆ ೨೦ ಕ್ಕೂ ಹೆಚ್ಚು ಧ್ವನಿ ಸುರುಳಿಗಳನ್ನು ಹೊರ ತಂದಿದ್ದಾರೆ. ಈಗ ಮೂಲ ಪತ್ತಾರ ಮಾಸ್ತರರ ಪದ್ಯರೂಪದ‌ ‘ಸಂಗ್ಯಾ ಬಾಳ್ಯಾ’ನಿಗೊಂದು ‘ರಂಗ ರೂಪ’ ನೀಡಿ ಸಂಗೀತದ ಹೊಸ ಸಾಧ್ಯತೆಗಳತ್ತ ನೋಟಬೀರಿದ್ದಾರೆ. ಇವರ ಈ ಜಾನಪದ ಹೊಸ ಸಾಧ್ಯತೆಗಾಗಿ ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಅಭಿನವ‌ ಶರೀಫ ಹಾಗೂ ಜಾನಪದ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ… ಇವಿಷ್ಟು ಬೈಲೂರ ಬಸವಲಿಂಗಯ್ಯ ಹಿರೇಮಠ ಅವರ ಬಗೆಗೆ ಹೇಳಿ ಮಾತು ಮುಗಿಸುತ್ತೇನೆ..!

ಸ್ವಾತ್ಮಗತ Read Post »

ಕಾವ್ಯಯಾನ

ಕಾವ್ಯಯಾನ

ಪ್ರೀತಿಯ ಸಾಲಗಾರನಾಗಿ ಬಿಟ್ಟಿದೆ ಮೂಗಪ್ಪ ಗಾಳೇರ ನೀನು ಬಿಟ್ಟು ಹೋದ ಮೇಲೆ ಬಿಕ್ಕಿಬಿಕ್ಕಿ ಅಳಬೇಕೆನಿಸಿದಾಗ…….. ನಾನು ಅಳದೆ ಮುಗುಳುನಕ್ಕು ಸುಮ್ಮನಾಗಿ ಬಿಡುತ್ತಿದ್ದೆ; ಯಾಕೆ ಗೊತ್ತಾ ……? ನೀನು ಬಿಟ್ಟು ಹೋದ ನೆನಪುಗಳು ನನ್ನ ಹೃದಯದ ಅಂಗಳದಲ್ಲಿ ಅರಳಿದ ಹೂಗಳಾಗಿಯೇ ಉಳಿದಿವೆ ಹಾಗಾಗಿ ನಾನು ಅತ್ತರೆ…… ಆ ಕಣ್ಣೀರಿನ ಬಿಸಿ ತಾಕಿದಡೆ ಹೂವುಗಳು ಬಾಡಬಹುದೆಂಬ ಭಯ ವಷ್ಟೇ ನನ್ನ ನಸುನಗೆ ಕಾರಣ…….! ನೀನು ಹೋದ ಮೇಲೆ ಒಂಟಿ ಜೀವನ ಗತಿಯೆಂದು ಖಾಲಿಯಾದ ಬಾಟಲಿ ಹಿಡಿದು ಯಾರು ಇಲ್ಲದ ಬೀದಿಯಲ್ಲಿ ಸುತ್ತುತ್ತೇನೆ ಎಂದುಕೊಂಡಿದ್ದೆ……! ಊ.. ಊಂ… ಹಾಗಾಗಲಿಲ್ಲ ಇಲ್ಲಿ ಒಂಟಿಯಾಗಿ ನೀಲಿ ನಭದಲ್ಲಿ ತೇಲುತ್ತಿದ್ದ ಚಂದಿರ ನನ್ನ ಜೊತೆಯಾದ ಆಗೊಮ್ಮೆ-ಈಗೊಮ್ಮೆ ಪಳಪಳನೆ ಹೊಳೆದು ಮರೆಯಾಗುವ ನಕ್ಷತ್ರಗಳು ನಿನ್ನ ನೆನಪುಗಳು ಬಂದಾಗಲೆಲ್ಲ ಮೋಹಿಸಿ ಮರೆಯಾಗುವ ಔಷಧಿಯಾಗಿ ಬಿಟ್ಟಿವೆ………! ಜೊತೆಯಲ್ಲಿ ಇಟ್ಟ ನಮ್ಮಿಬ್ಬರ ಹೆಜ್ಜೆಗಳು ನನ್ನ ಹೃದಯದ ಕೋಣೆಯನ್ನು ಚಿದ್ರ ಚಿದ್ರ ಮಾಡಬಹುದೆಂದು ಕೊಂಡಿದ್ದೆ ಅದು ಸಾಧ್ಯವಾಗಲಿಲ್ಲ ಯಾಕೆಂದರೆ……? ಆ ಹೆಜ್ಜೆಗಳ ಹುಡುಕಾಟದಲ್ಲಿದ್ದ ನಾನು ಕಡಲ ದಂಡೆಯ ಮರಳಿನ ಮೇಲೆ ಬರೆದ ಕವಿತೆಯ ಸಾಲುಗಳು ನಿನ್ನ ಹೆಜ್ಜೆಗಳ ಸಾಲ ಮರುಪಾವತಿಸುತಿವೆ…… ಇನ್ನೆಲ್ಲಿ ಹೆಜ್ಜೆಗಳ ಚಿದ್ರ ಚಿದ್ರ ನಾದ….‌‌.. ನೀನು ಅಂದುಕೊಂಡಂತೆ ಇಲ್ಲಿ ಯಾವ ಬದಲಾವಣೆಗಳು ಆಗಿಲ್ಲ ಆಗಿರುವುದು ಒಂದೇ ಅದು ನನ್ನ ಕವಿತೆಯ ಸಾಲು ಪ್ರೀತಿಯ ಸಾಲಗಾರನಾಗಿ ಬಿಟ್ಟಿದೆ……….! ***********

ಕಾವ್ಯಯಾನ Read Post »

You cannot copy content of this page

Scroll to Top