ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಣ್ಣ ಕತೆ.

ಸುಳಿಗಾಣ

ಶೋಭಾ ನಾಯ್ಕ .ಹಿರೇಕೈ

ಮೊದಮೊದಲ ತೊದಲುಗಳು

ರಾತ್ರಿಯಿಡಿ ನಿದ್ದೆಯಿಲ್ಲದೆ ಕೆಂಡದುಂಡೆಯಾದ ಕಣ್ಣುಗಳನ್ನುಜ್ಜಿಕೊಂಡು ಹಾಸಿಗೆಯಿಂದೆದ್ದ ಮಾದೇವ ರೂಢಿಯಂತೆ ಕೊಟ್ಟಿಗೆಯ  ಕಡೆ ಕಣ್ಣು ಹಾಯಿಸಿದ.  ಉಕ್ಕಿ ಬಂದ ಸಿಟ್ಟು, ಅಳು ಎಲ್ಲವನ್ನೂ ನುಂಗಿಕೊಂಡು ” ಛೇ.. ”  ಎಂದು ಬಲಗಾಲನ್ನೆತ್ತಿ ದೊಪ್ಪೆಂದು  ನೆಲಕ್ಕೆ ಬಡಿದವನೆ, ಏನೋ ತೀರ್ಮಾನ ಮಾಡಿದವನಂತೆ ತಂಗಿಯನ್ನಾದರೂ  ‘ವಿದ್ಯಾಗಿರಿ’ ಹೈಸ್ಕೂಲ್ ಮೆಟ್ಟಿಲ ಹತ್ತಿಸಿಯೇ ತೀರಬೇಕೆಂದು, ತನಗೆ ಕಲಿಸಿದ ಮಾಸ್ತರರ ಮನೆಯತ್ತ ಹೋಗುತ್ತಿದ್ದಾಗ, ” ಈ ಮಾಸ್ತರರ ಮನೆಯಲ್ಲಿ ಎಲ್ಲರನ್ನೂ ಒಳ ಸೇರಿಸಿ ಬಿಡ್ತಾರಪ್ಪ. ನಮಗೆ ಕೊಡೋ ಲೋಟದಲ್ಲೇ .. ಅವರಿಗೂ ಚಾ ಕೊಡ್ತಾರೆ.  ಶೀ… ಹೇಸಿಗೆ.”ಎಂದು ಕಬ್ಬಿನ ಗದ್ದೆಯ  ರವದಿಯ ಸಂದಿಯಿಂದ ಕೇಳಿ ಬಂದ ಮಾತು ಗಾಯದ ಮೇಲೆಯೇ ಬರೆ ಎಳೆದಂತಾದರೂ  ಎದೆಗುಂದದ ಅವನ ಹೆಜ್ಜೆಗಳು ಮತ್ತೂ ಬಿರುಸಾದವು.

ತಮ್ಮೂರ ಶಾಲೆಯಲ್ಲೇ ಏಳನೇ ತರಗತಿ ಮುಗಿಸಿ ಇನ್ನೇನು ಹೈಸ್ಕೂಲ್  ಹತ್ತಬೇಕಾದ ಅವನಿಗೆ , ಕುಡಿತದಿಂದ   ಸಾಲ ಮಾಡಿ ಮಾಡಿ ಸತ್ತ ಅಪ್ಪನ ಸಾವಿನಿಂದ ಆಘಾತವಾಯಿತು. ಇದ್ದ ತುಂಡು ಹೊಲ ಪಂಚಾಯ್ತಿ ಕಟ್ಟೆಯಲ್ಲಿ ಸಾಲ ಕೊಟ್ಟವರ ಪಾಲಾಯಿತು ಎರಡು ವರುಷಗಳವರೆಗೆ. ಓದುವ ಆಸೆ ಕೈಬಿಟ್ಟ ಹುಡುಗ  ಹತ್ತಾರು ಮನೆಯ ದನಗಾವಲಿಗೆ ನಿಂತು,  ಮನೆಯ ಚಿಕ್ಕ ಪುಟ್ಟ ಖರ್ಚು ನಿಭಾಯಿಸಿ  ಮನೆಯ ಪುಟ್ಟ ಯಜಮಾನನಾದಾಗ, ಅವ್ವಳ ದಿನ ನಿತ್ಯದ ಅಳು ನಿಂತದ್ದು ಗಮನಿಸಿದ ಹುಡುಗ ಹೇಗಾದರೂ ಮಾಡಿ ತನ್ನ ಹೊಲವನ್ನು ತಮ್ಮದಾಗಿಸಿಕೊಳ್ಳಬೇಕೆಂದುಕೊಂಡ. ಇದೇ ವೇಳೆಗೆ  ಇವನ ಸಾಲದೊಡೆಯ  ತನ್ನದೆರಡು ಹೋರಿ ಕರುಗಳನ್ನು  ಸಾಕಿಕೊಳ್ಳಲು ಅನುಮತಿ ಕೊಟ್ಟು ಬಿಟ್ಟಾಗ ಹುಡುಗನಿಗೆ ಸ್ವರ್ಗಕ್ಕಿನ್ನು ಒಂದು ಗೇಣೂ ಅಂತರವಿಲ್ಲ ಅನ್ನಿಸಿಬಿಟ್ಟಿತು. ದಿನವೂ ತಾನೇ ಮೇಯಿಸಿಕೊಂಡು ಬರುವ ಹೋರಿ ಕರುಗಳೀಗ ತನ್ನವೇ ಆಗುತ್ತಿವೆ.   ಸಂತೋಷಕ್ಕೆ ಪಾರವಿಲ್ಲದೆ ಹುಲ್ಲು,  ಸೊಪ್ಪು, ಸದೆ, ಅಕ್ಕಚ್ಚು, ನೀರು ಎಂದು ಮಕ್ಕಳಂತೆ ಪಾಲನೆ ಮಾಡಿದ. ರಾಮ , ಲಕ್ಷ್ಮಣರೆಂದೂ ಹೆಸರೂ ಇಟ್ಟು ಬಿಟ್ಟ. ಬಿಸಿನೀರಿನಿಂದ ಮೈ ತೊಳೆದು  ಕಿವಿ ಚಟ್ಟೆ, ಮೂಗ ಹೊಳ್ಳೆಯೊಳಗೆಲ್ಲ ಸೇರಿ ಬಿಡುವ  ಉಣುಗನ್ನೂ ಬಿಡದೆ ತೆಗೆದು ಆರೈಕೆ ಮಾಡಿದ.ಎರಡು ವರುಷದೊಳಗೆ   ನೋಡಿದವರ ಕಣ್ಣು ಬೀಳುವಂತೆ  ಬೆಳೆದು ನಿಂತ ಹೋರಿಗಳೀಗ ಎತ್ತುಗಳಾಗೋ ಕಾಲ.  ಸುಳಿಗಾಣ ಕಟ್ಟಿ, ತಿದ್ದಿ ಗದ್ದೆ ಹೂಳಲು ರಾಮ , ಲಕ್ಷ್ಮಣರು ಸಿದ್ಧವಾಗುತ್ತಿರುವ ಸುದ್ದಿ   ಸಾಲ ದೊಡೆಯನಿಗೆ ( ಹೋರಿಗಳೊಡೆಯನೂ )   ತಲುಪಿಯೇ ಬಿಟ್ಟಿತ್ತು. ಮರು ದಿನವೇ ಹೊಸದೆರಡು ಜೊತೆ ದಾಬದ ಕಣ್ಣಿಯೊಂದಿಗೆ ಬಂದ ಆತ  ರಾಮ ಲಕ್ಷ್ಮಣರ ಕತ್ತಿಗೆ ಬಿಗಿದು, ” ಮಾದ,  ನಮ್ಮನೆ ಕೊಟ್ಟಿಗೆ ಬೇರೆ ಮಾಡಾಯ್ತೋ.. ಜಾಗಕ್ಕೇನೂ ಬರ ಇಲ್ಲ ಈಗ.  ನಿನ್ ಲೆಕ್ಕಾಚಾರ ಮುಂದೆ ಮುಗಿಸಿದರಾತು, ಹ್ಯಾಗಾದರೂ ಸಗಣಿಗಿಗಣಿ ಬಳಸ್ಕಂಡಿಯಲ್ಲ ಇಷ್ಟು ದಿನ . ಹೈ.. ಹೈ.. ” ಎನ್ನುತ್ತಾ ಹೋರಿಗಳೆರಡನ್ನೂ ಎಳೆದುಕೊಂಡು ಹೊರಟೇ ಬಿಟ್ಟಾಗ , ಇತ್ತ ಮಾದೇವ ಎಚ್ಚರ ತಪ್ಪಿ ಬಿದ್ದ ಸುದ್ದಿ ಊರಲ್ಲೆಲ್ಲ ಹಬ್ಬಿ   ಎಲ್ಲರೂ  ‘ ಅಯ್ಯೋ’ ಅಂದಿದ್ದು ಬಿಟ್ಟರೆ  ಮತ್ತೇನೂ ಆಗಲೇ ಇಲ್ಲ . ಮನೆಯತ್ತ ಬರುತಿದ್ದ ಮಾದೇವನ ಕಂಡಾಗ  ಅವನ ಕತೆ ನೆನಪಿಸಿ ಕಣ್ಣಂಚು ಒದ್ದೆ ಮಾಡಿಕೊಂಡ ಮಾಸ್ತರರ

ಹೆಂಡತಿ  ಚಹಕ್ಕಿಡಲು ಒಳಗೆ ಹೋದಳು.

***************************************************

About The Author

1 thought on “ಸುಳಿಗಾಣ”

Leave a Reply

You cannot copy content of this page

Scroll to Top