ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುವಾದಿತ ಕಥೆ

ಬೆಳೆಸಲಾಗದ ಮಕ್ಕಳು

ತೆಲುಗು ಮೂಲ:

ಸಿ.ಹೆಚ್.ವಿ. ಬೃಂದಾವನ ರಾವು

ಕನ್ನಡಕ್ಕೆ:

ಚಂದಕಚರ್ಲ ರಮೇಶ ಬಾಬು

A Chaotic Week for Pregnant Women in New York City | The New Yorker

ಪಾರ್ವತಿ ಹೇಳಿದ ಮಾತು ಕೇಳಿ ಸೋಜಿಗ ಗೊಂಡ ಕ್ರಿಸ್ಟಫರ್. ಮುಖ ಕೆಂಪಾಯಿತು. ಒಂದೈದು ನಿಮಿಷ ಹಾಗೇ ಇದ್ದ. ಕ್ರಮೇಣ ಆವೇಶದಿಂದ ಆಲೋಚನೆಯೆಡೆಗೆ ಬಂದ. ಏನು ಹೇಳಬೇಕೋ ಅರ್ಥವಾಗಲಿಲ್ಲ ಅವನಿಗೆ.

ಗಂಡನ ಮುಖವನ್ನ ಹಾಗೇ ನೋಡ್ತಾ ಇದ್ದಳು ಪಾರ್ವತಿ. ಗಂಡ ಹಾಗೆ ಆಶ್ಚರ್ಯಗೊಳ್ಳುವುದು ಅವಳಿಗೇನೂ ವಿಚಿತ್ರವೆನಿಸಲಿಲ್ಲ. ಡಾಕ್ಟರರು ತನ್ನ ಹತ್ತಿರ ಈ ವಿಷಯದ ಪ್ರಸ್ತಾವಿಸಿದಾಗ ತನಗೂ ಇಂಥ ಆಶ್ಚರ್ಯವೇ ಆಗಿತ್ತು. ಹಾಗೇ ಯೋಚಿಸಿ ತಾನಂತೂ ಒಂದು ನಿರ್ಣಯಕ್ಕೆ ಬಂದಾಗಿತ್ತು. ತನ್ನ ಗಂಡನ ಒಪ್ಪಿಗೆ ಮತ್ತು  ಪ್ರೋತ್ಸಾಹ ಇಲ್ಲದೆ ಬರೀ ತನ್ನ ನಿರ್ಣಯ ದಿಂದ ಏನು ನಡೆಯುತ್ತೆ ?

ಈಗಿನ ತನ್ನ ಈ ಪರಿಸ್ಥಿತಿಗೆ ತಾನು ಹೇಗೆ ಬಂದೆ ಎಂಬುದು ಒಮ್ಮೆ ಪಾರ್ವತಿಯ ಮುಂದಕ್ಕೆ ಬಂದಿತು.

           *     *     *      *     *     *

ತಾನು ಕ್ರಿಸ್ಟಫರ್ ಮದುವೆ ಮಾಡಿಕೊಳ್ಳಬೇಕೆಂದು ನಿಶ್ಚಯಿಸಿದ್ದರು. ಆದರೇ ತಮ್ಮ ತಂದೆ ತಾಯಿಯರನ್ನು ಹೇಗೆ ಒಪ್ಪಿಸುವುದೋ ಗೊತ್ತಾಗಲಿಲ್ಲ. ಪಾರ್ವತಿ ಅವರದು ಒಂದು ಸಾಧಾರಣ ಕೆಳಮಟ್ಟದ ಕುಟುಂಬ. ತಂದೆ ಟೈಲರು. ತಾಯಿ ಒಂದು ಹಾಸ್ಟೆಲಿನಲ್ಲಿ ಆಯಾ ಆಗಿದ್ದಳು. ಅವರಿಬ್ಬರ ಸಂಪಾದನೆ ಸೇರಿಸಿದರೂ ಸಂಸಾರ ನಡೆಸಲು ಅಲ್ಲಿಂದಲ್ಲಿಗೆ ಸರಿ ಹೋಗುತ್ತಿತ್ತು. ಪಾರ್ವತಿ ಮನೆಗೆ ದೊಡ್ಡ ಮಗಳು. ಅವಳ ನಂತರ ಒಬ್ಬ ತಂಗಿ, ತಮ್ಮ. ಪಾರ್ವತಿ ಎಸ್ಸೆಸ್ಸಿ ಓದುವಾಗ ಕ್ರಿಸ್ಟಫರ್ ನ ಪರಿಚಯ ವಾಯಿತು. ಪಿಯುಸಿ ಮೊದಲನೆ ವರ್ಷ ಆ ಪರಿಚಯ ಹಾಗೇ ಮುಂದುವರೆದು ಪ್ರೀತಿಯಾಯಿತು. ಎರಡನೇ ವರ್ಷಕ್ಕೆ ಬಂದ ಮೇಲೆ ಮದುವೆಯಾಗ ಬೇಕೆಂಬ ಅಭಿಪ್ರಾಯ ಬೇರೂರಿ ಒಂದು ನಿರ್ಣಯಕ್ಕೆ ಬಂದರು ಇಬ್ಬರೂ. ಕ್ರಿಸ್ಟಫರ್ ಒಬ್ಬ ಮೆಕಾನಿಕ್. ಕರೆಂಟಿನ ಕೆಲಸ ದಿಂದ ಹಿಡಿದು, ಮೋಟಾರ್ ಗಳು, ಮೊಬೈಲ್ ಗಳು ಹೀಗೆ ಅವನು ಮಾಡದ ರಿಪೇರಿ ಕೆಲಸವೇ ಇರಲಿಲ್ಲ. ಕೈಯಲ್ಲಿ ಯಾವಾಗಲೂ ಕೆಲಸ ಇರುತ್ತಿತ್ತು. ಆತನ ವರಮಾನದಿಂದ ಮನೆ ನಡೆಯುವುದಕ್ಕೆ ಏನೂ ತೊಂದರೆಯಿರಲಿಲ್ಲ. ಹಾಗೇ ತಾನು ಸಹ ತಂದೆ ಹತ್ತಿರ ಟೈಲರ್ ಕೆಲಸ ಕಲೆತಿದ್ದಳು. ಒಂದು ಹೊಲಿಗೆ ಮಶೀನ ತಂದು ಮನೆಯಲ್ಲಿಟ್ಟುಕೊಂಡರೇ ತಾನು ಸುತ್ತ ಮುತ್ತ ಹೆಂಗಸರ ಮತ್ತು ಮಕ್ಕಳ ಬಟ್ಟೆ ಹೊಲೆಯಬಹುದು. ತನಗೇನೂ ಅಂಥಾ ದೊಡ್ಡ ಆಶೆಗಳಿರಲಿಲ್ಲ. ತನ್ನ ಮೆಚ್ಚಿದ ಕ್ರಿಸ್ಟೊಫರ್ ಜೊತೆ ಜೀವನ ಸಜಾವಾಗಿ ನಡೆದು ಹೋದರೇ ಸಾಕು ಎಂದುಕೊಂಡಿದ್ದಳು. ಆ ತರ ನಂಬಿಕೇನೂ ಪಾರ್ವತಿಗಿತ್ತು. ಆದರೇ ಇಬ್ಬರ ಕಡೆಯ ತಂದೆ ತಾಯಿ ಒಪ್ಪಲಿಲ್ಲ. ಆದರೂ ಇವರಿಬ್ಬರು ಮುಂದುವರೆದು ಮದುವೆ ಮಾಡಿಕೊಂಡು ಸಂಸಾರ ಹೂಡಿದರು. ಕ್ರಮೇಣ ದೊಡ್ಡವರು ಹಾದಿಗೆ ಬರುತ್ತಾರೆಂದು ಅವರ ನಂಬಿಕೆ ಯಾಗಿತ್ತು. ಅದೃಷ್ಟ ವಶಾತ್ ಅವರಿಗೆ ದೊಡ್ಡವರಿಂದ ಕಿರುಕುಳವಾಗಲೀ, ಬೆದರಿಕೆಯಾಗಲೀ ಏನೂ ಬರಲಿಲ್ಲ.

ಬೇರೇ ಬೇರೇ ಧರ್ಮಕ್ಕೆ ಸೇರಿದವರಾದರೂ ಅವರ ಪ್ರೀತಿಯ ಮುಂದೆ ಅವು ಯಾವುದೂ ಅಡ್ಡಿ ಬರಲಿಲ್ಲ. ಹಾಗೆ ಅವರ ಸಂಸಾರಕ್ಕೆ ಆರು ವರ್ಷ ವಾಗಿತ್ತು.

ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಹುಟ್ಟಿದರು. ಆದರೇ ಅವತ್ತು ನಡೆದ ಘಟನೆ ಅವರ ಜೀವನ ವನ್ನೇ ಬುಡಮೇಲು ಮಾಡಿತ್ತು.

ಮಗ ಸ್ಕೂಲಿಗೆ ಹೋಗಿದ್ದ. ಮೂರು ವರ್ಷದ ಮಗಳೊಂದಿಗೆ ಪಾರ್ವತಿ ಮುಂದಿನ ಕೋಣೆಯಲ್ಲಿ ಕೂತಿದ್ದಳು. ಒಳಗೆ ಕ್ರಿಸ್ಟಫರ್ ಗ್ಯಾಸ್ ಒಲೆಗೆ ಏನೋ ರಿಪೇರಿ ಮಾಡ್ತಿದ್ದ. ಇದ್ದಕ್ಕಿದ್ದಹಾಗೇ ಗ್ಯಾಸ್ ಸಿಲಿಂಡರ್ ಸಿಡಿದು, ಕ್ರಿಸ್ಟಫರ್ ಗೆ ಮೈಯೆಲ್ಲಾ ಸುಟ್ಟು ಅವನು ಚೀರಿದ ಶಬ್ದಕ್ಕೆ ತಾನು ಒಳಗೆ ಹೋದಳು. ತಕ್ಷಣ ಕ್ರಿಸ್ಟಫರನ್ನು ಆಸ್ಪತ್ರೆ ಗೆ ಸೇರಿಸಿದರು. ಪ್ರಾಣಾಪಾಯ ವಿಲ್ಲದಿದ್ದರೂ ಅವನ ಮುಖ, ಎದೆ, ಕೈ ಎಲ್ಲಾ ಸುಟ್ಟಿದ್ದು ಅವುಗಳೆಲ್ಲಾ ಮಾಯಲು ಕೆಲ ಸಮಯವೇ ಹಿಡಿಯಿತು. ಆ ಆರೆಂಟು ತಿಂಗಳು ಪಾರ್ವತಿ ನರಕ ಬಾಧೆ ಅನುಭವಿಸಿದಳು. ಮಕ್ಕಳನ್ನು ನೋಡಿಕೊಳ್ಳುವುದು, ಆಸ್ಪತ್ರೆಗೆ ಹೋಗುವುದು, ಗಂಡನ ಆರೈಕೆ, ಮನೆ ಖರ್ಚು, ಆಸ್ಪತ್ರಿಯ ಖರ್ಚು- ಇವೆಲ್ಲವುಗಳಿಂದ  ಪಾರ್ವತಿ ಭಯಂಕರವಾದ ನೋವು ಅನುಭವಿಸಿದಳು.

ಹೇಗೋ ಪ್ರಾಣದೊಂದಿಗೆ ಹೊರಬಿದ್ದ ಕ್ರಿಸ್ಟೊಫರ್. ಕೆಲಸ ಮುಂದುವರೆಸಲು ಕೈಗಳು ಸಹಕರಿಸುತ್ತಿರಲಿಲ್ಲ. ತುಂಬಾ ಸಾಲ ಮಾಡಿಯಾಗಿತ್ತು. ಅವಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಒಬ್ಬ ಲೇಡೀ ಡಾಕ್ಟರ್ ತನ್ನ ನರ್ಸಿಂಗ್ ಹೋಮಿನಲ್ಲಿ ಆಯಾ ಕೆಲಸ ಕೊಟ್ಟರು. ದಿನ ಕಳೆಯುತ್ತಿದ್ದವು.

ಇಪ್ಪತ್ತೈದು ವರ್ಷ ತುಂಬುವ ಮುನ್ನವೇ ಪಾರ್ವತಿ ಕಹಿ ಅನುಭವಗಳ ಮೂಟೆ ಹೊತ್ತಿದ್ದಳು. ಎದೆಗಾರಿಕೆಯಿಂದ ಪರಿಸ್ಥಿತಿಗಳನ್ನು ಎದುರಿಸಿದಳು. ಕ್ರಿಸ್ಟೊಫರ್ ಗೆ ಕೂಡ ಅವಳಮೇಲೇ ಅತೀವ ಪ್ರೀತಿ, ಗೌರವ ಉಂಟಾಗಿತ್ತು. ಮನೆ ನಡೆಸಲು, ಮಕ್ಕಳನ್ನು ಓದಿಸಲು, ಕ್ರಿಸ್ಟೋಫರ್ ಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಲು ಎಲ್ಲದಕ್ಕೂ ಹಣ ಬೇಕು. ಹಣ!  ಹಣ! ಹಣ! ಅದು ತಮ್ಮ ಶಕ್ತಿಗೆ ಮೀರಿತ್ತೆಂದು ಅವರಿಬ್ಬರಿಗೂ ಗೊತ್ತಿತ್ತು.

ಅಂಥಾ ಸಮಯದಲ್ಲಿ ಪಾರ್ವತಿ ಕೆಲಸ ಮಾಡುವ ಆಸ್ಪತ್ರಿಯ ಡಾಕ್ಟರ್ ಅವಳ ಮುಂದೆ ಒಂದು ಪ್ರಸ್ತಾವ ವಿಟ್ಟಳು. ಅದು ಕೇಳಿದ ಪಾರ್ವತಿ ಬೆರಗಾದಳು.

“ನಿನ್ನ ಊಹೆಗೂ ನಿಲುಕದಷ್ಟು ಹಣ ಬರುತ್ತದೆ. ಯೋಚಿಸು! ನಿನಗೆ ಈಗ ತುಂಬಾ ಹಣದ ಆವಶ್ಯಕತೆ ಇದೆ” ಅಂದಳು ಡಾಕ್ಟರ್.

“ಇದು ತಪ್ಪಲ್ವಾ ಡಾಕ್ಟ್ರೇ? ಎಷ್ಟು ಹಣದ ಅಡಚಣೆ ಇದ್ರೂ …. ಇಂಥಾ ಕೆಲಸ ಮಾಡೋದು ನ್ಯಾಯವೇನಾ?” ಅಂದಳು ಪಾರ್ವತಿ.

” ಇದರಲ್ಲಿ ತಪ್ಪಾಗಲೀ, ನೀತಿಬಾಹಿರತನವೇನೂ ಇಲ್ಲ ಪಾರ್ವತೀ ! ಹೆಂಗಸರಿಗೆ ಮುವ್ವತ್ತೈದು ವರ್ಷದ ವರೆಗೂ ಗರ್ಭ ಧರಿಸುವ ಶಕ್ತಿ ಇರುತ್ತದೆ. ನಿನಗಿನ್ನೂ ಇಪ್ಪತ್ತೇಳು. ಕಷ್ಟ ಜೀವಿಯಾದ ಕಾರಣ ಮೈಕೈ ಗಟ್ಟಿಯಾಗಿದೆ. ಯಾವ ತರದ ಪ್ರಮಾದವೂ ಇರುವುದಿಲ್ಲ. ಎರಡು ಲಕ್ಷ ಕೊಡ್ತೇವೆ ಅಂತಿದಾರೆ. ನಿನ್ನ ಕಷ್ಟ ಎಲ್ಲಾ ಕಳೆದುಹೋಗತ್ತೆ. ಒಪ್ಪಿಕೋ ” ಅಂದರು ಡಾಕ್ಟರ್.

ಪಾರ್ವತಿ ಇನ್ನೂ ಸಂಶಯ ಪಡ್ತಾನೇ ಇದ್ರೆ ” ನಿನಗೇನಾದ್ರೂ ಮಾಡಬಾರದ ಕೆಲಸ ಮಾಡು ಅಂತ ಹೇಳ್ತಾ ಇದೀನಾ ಪಾರ್ವತೀ ? ಗಂಡನಿಗೆ ಗೊತ್ತಿಲ್ಲದ ಹಾಗೆ ಹಾದರ ಮಾಡ್ಲಿಕ್ಕೆ ಹೇಳ್ತಿದೀನಿ ಅಂತ ತಿಳಿದಿದ್ದೀ ಏನೋ ? ಇದಕ್ಕೆ ನಿನ್ನ ಗಂಡನ ಒಪ್ಪಿಗೆ ಬೇಕೇ ಬೇಕು. ಆತನ್ನ ಕರ್ಕೊಂಡು ಬಾ. ನಾನು ಮಾತಾಡ್ತೀನಿ. ” ಅಂದರು ಡಾಕ್ಟರ್.

“ನನ್ನ ಗಂಡನ ಜೊತೆ ಮಾತಾಡ್ತೀನಿ ” ಅಂದಳು ಪಾರ್ವತಿ.

ಈಗ ಅದೇ ವಿಷಯ ಗಂಡನ ಹತ್ತಿರ ಹೇಳಿ ಆತನ ಮುಖ ನೋಡಸಾಗಿದಳು ಪಾರ್ವತಿ. ಅವನಿಗೆ ಹೇಳುವ ಮುಂಚೆ ಎರಡು ದಿನ ತನ್ನಲ್ಲೇ ತೀವ್ರ ವಾಗಿ ಆಲೋಚನೆ ಮಾಡಿದ್ದಳು ಪಾರ್ವತಿ. ಮೊದಲಿನ ಅಚ್ಚರಿಯ ಕ್ಷಣಗಳ ನಂತರ ಕ್ರಿಸ್ಟಫರ್ ಸಹ ಯೋಚಿಸಿ “ಡಾಕ್ಟರಮ್ಮ ಏನೂ ನಮ್ಮನ್ನು ಮಾಡಬಾರದ ಕೆಲಸ ಮಾಡಲು ಹೇಳುವುದಿಲ್ಲ ಅಲ್ಲಾ ? ಯಾವುದಕ್ಕೂ ಅವರ ಜೊತೆ ಮಾತಾಡೋಣ… ಅವರು ಏನು ಹೇಳ್ತಾರೋ ಕೇಳೋಣ. ಇವತ್ತು ಸಂಜೆ ಹೋಗೋಣ. ” ಅಂದ.

ಡಾಕ್ಟರರ್ ಎದುರಿನಲ್ಲಿ ಪಾರ್ವತಿ ಮತ್ತು ಕ್ರಿಸ್ಟಫರ್ ಕೂತಿದ್ದಾರೆ. ಮುಖ ವೆಲ್ಲಾ ಸುಟ್ಟುಹೋಗಿ, ವಿಕಾರವಾಗಿದ್ದ ಕ್ರಿಸ್ಟಫರ್ ತಲೆ ಅಡಿ ಹಾಕಿ ತುಂಬಾ ಆತ್ಮ ನ್ಯೂನತಾ ಭಾವದಿಂದ ಕೂತಿದ್ದಾನೆ.

“ನೀನ್ಯಾಕೆ ತಲೆ ತಗ್ಗಿಸಿ ಕೂತಿದ್ದೀಯಾ ಕ್ರಿಸ್ಟಫರ್ ? ನೀನೊಬ್ಬ ಶ್ರಮಜೀವಿ. ಅಕಸ್ಮಾತ್ತಾಗಿ ಅಪಘಾತವಾಗಿದೆ. ಅಪಘಾತ ಯಾರ ಜೀವನದಲ್ಲಾದ್ರೂ ಆಗಬಹುದು. ಹಾಗಂತ ನೀವಿಬ್ಬರೂ ಕುಂದದೇ ಪರಿಸ್ಥಿತಿಗಳನ್ನ ಎದುರಿಸಿದ್ದೀರಿ. ಇಬ್ಬರಿಗೂ ಮತ್ತೊಬ್ಬರ ಮೇಲೆ  ಅನುರಾಗ, ಆಪೇಕ್ಷೆ ಇದೆ. ನಿಮ್ಮ ಸಂಸಾರ ನೋಡಿದರೇ ನನಗೇ ಮೆಚ್ಚುಗೆಯಾಗತ್ತೆ. ನಿಮಗೆ ಹೇಗಾದರು ಸಹಾಯ ಮಾಡಬೇಕು ಅಂತ ಅಂದುಕೊಂಡು ಈ ವಿಷಯ ಪಾರ್ವತಿಗೆ ಹೇಳಿದೆ. ನಿಮಗೂ ಹೇಳ್ತೀನಿ ಕೇಳಿ. ಐರ್ಲಂಡಿನ ಇಬ್ಬರು ದಂಪತಿಗಳು ನನ್ನ ಹತ್ತಿರ ಬಂದಿದ್ದಾರೆ. ಅವರಿಗೆ ಮದುವೆಯಾಗಿ ಒಂಬತ್ತು ವರ್ಷವಾದ್ರೂ ಮಕ್ಕಳಾಗಿಲ್ಲ. ಶಾಸ್ತ್ರೀಯವಾದ ಕೃತ್ರಿಮ ಪದ್ಧತಿಯ ಮೂಲಕ ಸಂತಾನ ಪಡೆಯಲು ನನ್ನ ಹತ್ತಿರ  ಬಂದಿದ್ದಾರೆ. ತುಂಬಾ ಶ್ರೀಮಂತರು. ಆ ಹೆಂಗಸಿಗೆ ಗರ್ಭಧಾರಣವಾಗುವ ಅವಕಾಶವಿಲ್ಲ. ಆದಕಾರಣ ಇತರೆ ಹೆಂಗಸಿನ ಗರ್ಭದಿಂದ ಸಂತಾನ ಹೊಂದಲು ನಿಶ್ಚಯಿಸಿದ್ದಾರೆ. ಈ ಪದ್ಧತಿಯಲ್ಲಿ ಗರ್ಭ ಧರಿಸುವ ಹೆಣ್ಣಾಗಲೀ, ಗಂಡಾಗಲೀ ಒಬ್ಬರನ್ನೊಬ್ಬರು ಹತ್ತಿರವಾಗುವ ಆವಶ್ಯಕತೆ ಇರುವುದಿಲ್ಲ.  ಆತನ ಜನ್ಯು ಕಣಗಳನ್ನ ಟೆಸ್ಟ್ ಟ್ಯೂಬಿನಲ್ಲಿ ಶೇಕರಣೆ ಮಾಡಿ ಪಾರ್ವತಿಯ ಗರ್ಭದಲ್ಲಿ ಫಲದೀಕರಣದ ಸಲುವಾಗಿ ಇಡಲಾಗುತ್ತೆ. ನಂತರ ಪಾರ್ವತಿ ಒಂಬತ್ತು ತಿಂಗಳು ಆ ಮಗುವನ್ನ ಹೊತ್ತು, ಹೆತ್ತು ಅವರಿಗೆ ಕೊಡಬೇಕಾಗುತ್ತೆ. ಈ ಕೆಲಸಕ್ಕೆ ನಾನು ಹೇಳಿದ್ರೇ ತುಂಬಾ ಜನ ಮುಂದೆ ಬರ್ತಾರೆ. ನೀವು ಬಡತನದಲ್ಲಿದೀರಿ ಮತ್ತು ಪಾರ್ವತಿ ಗಟ್ಟಿ ಮುಟ್ಟು ಹೆಂಗಸು ಮತ್ತೆ ಇದರಲ್ಲಿ ಯಾವ ತರದ ಅಪಾಯ ಏನೂ ಇಲ್ಲಾದ್ದರಿಂದ ನಾನು ನಿಮಗೆ ಹೇಳಿದೀನಿ. ಇನ್ನು ನಿಮ್ಮಿಷ್ಟ. ಇದರಲ್ಲಿ ಸೆಂಟಿಮೆಂಟಾಗಲೀ, ನೀತಿ ಬಾಹಿರತನವಾಗಲೀ, ಗುಟ್ಟಾಗಲೀ ಏನೂ ಇಲ್ಲ. ಆಲೋಚನೆ ಮಾಡಿ.” ಎಂದರು ಡಾಕ್ಟರ್ ಉಮ.

“ನಾವು ಸಹ ಆಲೊಚನೆ ಮಾಡಿಯೇ ಬಂದಿದ್ದೇವೆ. ನಮಗೆ ಒಪ್ಪಿಗೆ ಇದೆ ” ಎಂದರು ಪಾರ್ವತಿ ಕ್ರಿಸ್ಟಫರ್.

“ಗುಡ್. ಅವರು ನಿಮಗೆ ಇಪ್ಪತ್ತೈದು ಸಾವಿರ ಮುಂಗಡವಾಗಿ ಕೊಡುತ್ತಾರೆ. ಗರ್ಭ ಕಟ್ಟಿದೆ ಅಂತಾದ ಮೇಲೆ ಐವತ್ತು ಸಾವಿರ ಕೊಡ್ತಾರೆ. ಮಗುವನ್ನು ಅವರಿಗೆ ಒಪ್ಪಿಸಿದ ಮೇಲೆ ಉಳಿದದ್ದು ಕೊಡ್ತಾರೆ. ಇದರ ಮಧ್ಯದಲ್ಲಿ ಪಾರ್ವತಿಯ ಆಹಾರ ಮತ್ತು ವೈದ್ಯಕೀಯ ಖರ್ಚೆಲ್ಲಾ ಅವರೇ ನೋಡಿಕೊಳ್ತಾರೆ. ನೀವಿನ್ನು ನಿಶ್ಚಿಂತಾರಾಗಿರಿ.” ಎಂದರು ಡಾಕ್ಟರ್ ಉಮ.

                                   *   *   *   *   *

ಎಲ್ಲಾ ಅಂದುಕೊಂಡ ಹಾಗೇ ಆಯಿತು. ಒಂಬತ್ತು ತಿಂಗಳೂ ಒಳ್ಳೆ ಆಹಾರ, ವೈದ್ಯಕೀಯ ನೆರವು ಮನಸಾರೆ ಕೊಡಿಸಿದರು ಆ ಐರಿಷ್ ದಂಪತಿಗಳು. ಡಾಕ್ಟರ್ ಉಮ ಸಹ ತುಂಬಾ ಮುತುವರ್ಜಿಯಿಂದ ಪ್ರಸವವನ್ನು ಮಾಡಿಸಿದರು. ಮಗುವನ್ನು ಪಾರ್ವತಿ ಕೈಯಿಂದಲೇ ಆ ದಂಪತಿಗಳಿಗೆ ಕೊಡಿಸಿದರು. ಅವರು ಮಾತು ಕೊಟ್ಟ ಹಾಗೇ ಅವರಿಂದ ಹಣ ಕೊಡಿಸಿದರು. ಪಾರ್ವತಿ ಮಾತ್ರ ಹಣವನ್ನು ಕ್ರಿಸ್ಟಫರ್ ಗೆ ಕೊಟ್ಟು, ಒಂಬತ್ತು ತಿಂಗಳು ತನ್ನ ಶರೀರದ ಭಾಗವಾಗಿದ್ದು, ತನ್ನ ರಕ್ತದಲ್ಲಿ ರಕ್ತವಾಗಿದ್ದು, ತನ್ನ ಕರುಳಿನ ಬಳ್ಳಿಯಗಿ ಹೊರಗೆ ಬಂದ ಆ ಮಗುವನ್ನ ತದೇಕವಾಗಿ ನೋಡುತ್ತಾ, ಕಣ್ಣೀರಿನೊಂದಿಗೆ ಆ ದಂಪತಿಗಳಿಗೆ ಒಪ್ಪಿಸುತ್ತಾ ಅವರ ಕಡೆಗೆ ನೋಡಿದಳು. ಅವರಿಬ್ಬರೂ ಮಗುವನ್ನ ಪಡೆದ ಆನಂದದಲ್ಲಿ, ಅತ್ತ ಡಾಕ್ಟರರನ್ನಾಗಲೀ, ಇತ್ತ ತನ್ನನ್ನಾಗಲೀ ನೋಡದೇ, ಮಗುವಿನ ಕಡೆಗೇ ನೋಡ್ತಾ ಮಗುವನ್ನ ತೆಗೆದುಕೊಂಡರು. ಕಥೆ ಸುಖಾಂತವಾಯಿತು.

                         * * * * * * * * * * * * * * *

ಒಂದು ವರ್ಷ ಕಳೆದ ನಂತರ ಡಾಕ್ಟರ್ ಉಮ ಪಾರ್ವತಿ ಯನ್ನ ಕೇಳಿದರು. “ಮತ್ತೊಂದು ಇಂಥ ಕೇಸು ಬಂದಿದೆ. ಒಪ್ಕೊತಿಯಾ ಪಾರ್ವತಿ ” ಅಂತ. ಪಾರ್ವತಿ ಚಿಕ್ಕ ಮುಖ ಮಾಡಿಕೊಂಡು ” ನಮ್ಮವರನ್ನು ಕೇಳಿ ಹೇಳ್ತೀನಿ ” ಅಂದಳು.

ಈಗ ಪಾರ್ವತಿಗೆ ಹಣದ ಅಡಚಣೆ ಇಲ್ಲ. ಬಂದ ಹಣದಲ್ಲಿ ಸಾಲವೆಲ್ಲಾ ತೀರಿಸಿದರು. ಕ್ರಿಸ್ಟಫರ್ ಗೆ ಪ್ಲಾಸ್ಟಿಕ್ ಸರ್ಜರಿ ಆಗಿದ್ದು, ಅವನು ತನ್ನ ಮಾಮೂಲಿನ ಕೆಲಸ ಮಾಡಿಕೊಳ್ಳುತ್ತಾ ಚೆನ್ನಾಗೇ ಹಣ ಗಳಿಸ್ತಿದ್ದ. ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಪಾರ್ವತಿ ಆಸ್ಪತ್ರಿಯಲ್ಲಿ ತನ್ನ ಕೆಲಸ ಮುಂದುವರೆಸಿದ್ದಳು.

“ಯಾಕೆ ? ನಿನ್ನ ಆರೋಗ್ಯ ಚೆನ್ನಾಗಿದೆ. ಇನ್ನೊಂದು ಹೆರಿಗೆ ತಡೆದುಕೊಳ್ಳುವ ಶಕ್ತೀನೂ ಇದೆ. ಒಪ್ಪಿಕೋ” ಅಂದರು ಡಾಕ್ಟರ್.

“ನಮ್ಮವರನ್ನ ಕೇಳ್ಬೇಕು” ಪಾರ್ವತಿ ಇನ್ನೂ ಅನುಮಾನಿಸುತ್ತಲೇ ಇದ್ದಳು.

“ಚೆನ್ನಾಗಿ ಹಣ ಬರುತ್ತೆ. ಒಳ್ಳೆ ಲಾಭಾನೇ ನಿನಗೆ. ಬಂಡವಾಳವಿಲ್ಲ. ನಿನ್ನ ಅದೃಷ್ಟ ಅಂದ್ಕೋ” ಅಂದರು ಡಾಕ್ಟರ್ ಉಮ.

ಪಾರ್ವತಿ ಮನಸು ಕೆಡುಕೆನಿಸಿತು. ಪೆಟ್ಟು ತಿಂದವಳ ತರ ತಲೆ ಎತ್ತಿ ಡಾಕ್ಟರರ ಕಡೆಗೆ ನೋಡಿದಳು.

“ಸಾರೀ ಪಾರ್ವತೀ! ಬಾಯಿ ಜಾರಿಬಿಟ್ಟೆ. ಯಾವುದೋ ಜೋವಿಯಲ್ ಮೂಡ್ ನಲ್ಲಿ ಅಂದುಬಿಟ್ಟೆ. ತಪ್ಪು ತಿಳೀಬೇಡ.” ಎಂದರು ಡಾಕ್ಟರ್ ಉಮ.

“ಎಷ್ಟಾದ್ರೂ ಹಣ ತೊಗೊಂಡೇ ಮಾಡಿದ್ದು ಅಂದಮೇಲೆ ಹಾಗೇ ಅನ್ಸತ್ತೆ ಮೇಡಮ್. ನೀವೇ ಹೀಗಂತೀರಾ ಅಂತ ಎಣ್ಸಿರ್ಲಿಲ್ಲ. ಒಂಬತ್ತು ತಿಂಗಳು ಹೊತ್ತು, ಹೊಟ್ಟೆ ಕೊಯ್ಸಿಕೊಂಡು ಹೆತ್ತು, ಹಸುಗೂಸಿನ್ನ ಇನ್ನೊಬ್ಬರಿಗೆ ಕೊಡೋದು ಅನ್ನೋದು ಎಂಥಾ ಹಿಂಸೆ ಅನ್ನೋದು ಹಡೆದೋರಿಗೆ ಮಾತ್ರ ಗೊತ್ತಾಗುತ್ತೆ ಮೇಡಮ್. ಒಂದು ಸಾರಿಯಾದ್ರೂ ಎದೆಗೆ ಅಪ್ಪಿಕೊಳ್ಳದೇ, ಒಂದು ಹನಿ ಹಾಲಾದ್ರೂ ಕೂಸಿಗೆ ಚಪ್ಪರಿಸಲು ಬಿಡದೇ, ಹೆತ್ತ ಕರುಳ ಬಂಧಾನ್ನ ಕಡ್ಕೊಳ್ಳೋದು ಅನ್ನೋದು- ನನ್ನಂಥ ಪಿಶಾಚಿಗಳೇ ಮಾಡ್ತಾರೆ ಅಂತ ಅನ್ಸ್ತದೆ. ಹಣ ತೆಗೊಂಡಿದೀನಿ ಅಂತ ಮಾತಿಗೆ ಕಟ್ಟುಬಿದ್ದು ಮಗೂನ್ನ ಅವರಿಗೆ ಕೊಟ್ಟೆ ಅಷ್ಟೇ. ಇಲ್ಲಾಂದ್ರೆ ಕೊಡ್ತಾನೇ ಇರ್ಲಿಲ್ಲ. ಆದರೇ ಆ ಕೂಸಿನ್ನ ಕೈಯಲ್ಲಿ ತೊಗೊಂಡು ಆ ದಂಪತಿಗಳು ಪಟ್ಟ ಸಂತೋಷವನ್ನ ನೋಡಿದ ಮೇಲೆ ನಾನು ಮಾಡಿದ್ದು ಒಳ್ಳೆ ಕೆಲಸ ಅಂತ ನನಗೆ ನಂಬಿಕೆಯಾಯಿತು.” ಅಂದಳು ಪಾರ್ವತಿ ಕಣ್ಣೀರಿನೊಂದಿಗೆ.

“ಮತ್ತೊಮ್ಮೆ ಸಾರಿ ಹೇಳ್ತಾ ಇದೀನಿ ಪಾರ್ವತೀ ! ನಿನ್ನ ಮನಸು  ನೋಯಿಸಿದ್ದಕ್ಕೆ ಕ್ಷಮಿಸು. ಆದ್ರೇ ಇಂಥಾ ಆನಂದ ಮತ್ತೊಂದು ಜೋಡಿಗೆ ಕೊಡೊ ಅವಕಾಶ ಬಂದಿದೆ. ಮಾಡ್ತೀಯಾ ” ಕೇಳಿದರು ಡಾಕ್ಟರ್ ಉಮ.

“ನಮ್ಮವರು ಒಪ್ಪಿದರೇ ಖಂಡಿತಾ ಮಾಡ್ತೀನಿ ಮೇಡಮ್. ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಕೊಟ್ಟಿದೇನೆ ಅನ್ನೋ ತೃಪ್ತಿಗೋಸ್ಕರ ಮಾಡ್ತೀನಿ-  ಈ ಸಲ ಹಣಕ್ಕಾಗಿ ಅಲ್ಲ ” ಅಂದಳು ಪಾರ್ವತಿ ಸ್ಥಿರವಾಗಿ.

                        *****************************************************

About The Author

4 thoughts on “ಬೆಳೆಸಲಾಗದ ಮಕ್ಕಳು”

  1. ತುಂಬಾ ಮನಕಲಕಿ ವಿಚಾರಕ್ಕೆ ಹಚ್ಚುವ ಕಥೆ.ಯಾವುದೇ ಅನ್ಯಾಯ ,ವ್ಯಭಿಚಾರವಿಲ್ಲದಿದ್ದರೂ ಪ್ರಸಂಗ ಬೇರೆ ದಾರಿಯಿಲ್ಲದೇ ಮಾಡಲು ಹಚ್ಚಿದ ವ್ಯಾಪಾರ.ಬೇರೆಯವರದೇ ಜೀವಾಣುವಾಗಿದ್ದರೂ ಪಾರ್ವತಿಯ ಹೊಕ್ಕಳು ಬಳ್ಳಿಗೆ ಅಂಟಿಕೊಂಡು ಬೆಳೆದ ಮಗುವು ಅವಳದ್ದೇ ಅಲ್ಲವೇ?ಎರಡನೆಯ ಬಾರಿ ಹಣಕ್ಕಾಗಿ ಅಲ್ಲದೇ ಪಯ ಸಂತೋಷಕ್ಕಾಗಿ ತನ್ನ ಗರ್ಭವನ್ನು ಕೊಡಲು ಸಿದ್ಧಳಾದ ಪಾರ್ವತಿ ಸಾಮಾನ್ಯ ವ್ಯಕ್ತಿತ್ವಕ್ಕಿಂತ ಭಿನ್ನವಾಗಿ ಎತ್ತರದಲ್ಲಿ ನಿಲ್ಲುತ್ತಾಳೆ.ಲಕ್ಷಾನು ಲಕ್ಷದ ದಾನಕ್ಕಿಂತಲೂ ಮಿಗಿಲಾದ ದಾನವಿದು.ರಮೇಶಬಾಬುರವರ ಭಾಷಾಂತರದ ನೈಪುಣ್ಯತೆ ಮೂಲ ಕಥೆಯ ಭಾವನೆ ಮೌಲ್ಯಗಳನ್ನು ಎಲ್ಲಿಯೂ ಶಿಥಿಲವಾಗದಂತೆ ಓದುಗರಿಗೆ ಮುಟ್ಟಿಸುವಲ್ಲಿ ಸಫಲವಾಗಿದೆ
    .

  2. ಗೋನವಾರ ಕಿಶನ್ ರಾವ

    ಇತ್ತೀಚಿನ ದಿನಗಳಲ್ಲಿ ಇದು ಸಹಜವಾದ ಸಂಗತಿ.ಆದರೆ ಒಂಬತ್ತು ತಿಂಗಳು ಹೊತ್ತು-ಹೆತ್ತು ತಟಕ್ಕನೆ ಬಂದನ ಕಳೆದುಕೊಳ್ಳುವ ಕ್ರಿಯೆ ಹೆತ್ತ ತಾಯಿಯೇ ಅನುಭವಿಸಬಲ್ಲಳು.ಶಬ್ದಗಳಿಗೂ ನಿಲುಕದ ಸಂವೇದನೆ.ಆದರೂ ಒಬ್ಬ ತಾಯಿ ಇನ್ನೊಬ್ಬ ತಾಯಿ ಯ ಕಣ್ಣು ಗಳಲ್ಲಿ ಕಾಣುವ ಆನಂದ ಎಲ್ಲವನ್ನೂ ಏಕೆ ಹಣವನ್ನೂ ಮೀರಿನಿಂತಾಗ ಕತೆ ಸಾರ್ಥಕತೆ ಪಡೆಯುತ್ತದೆ.ಉತ್ತಮ ಅನುವಾದ.

  3. ಜಗತ್ತಿನ ಸಹಜ ರೀತಿನೀತಿಗಳಿಗೆ ಭಿನ್ನವಾಗಿ ನಡೆದುಕೊಳ್ಳಬೇಕಾದ ಸಂದರ್ಭಗಳಲ್ಲಿ ಮೂಡುವ ಮಾನಸಿಕ ಆಘಾತ, ಚಿಂತನೆ, ತೊಳಲಾಟ, ಧರ್ಮಾಧರ್ಮಗಳ ದ್ವಂದ್ವ, ಸಮಾಜ ಅದನ್ನು ಸ್ವೀಕರಿಸುವ ಪರಿ ಕುರಿತು ಆಂದೋಲನ ಈ ಎಲ್ಲಾ ಸ್ಥಿತಿಗತಿಗಳನ್ನು ದಾಟಿದ ನಂತರವೇ ‘ವಿಚಾರಧಾರೆ’ವಿಷಯವನ್ನು ಒರೆಗೆ ಹಚ್ಚುವುದು – ಅರ್ಥಾತ್ ಮೊದಲಿಗೆ ಭಾವನೆಗಳಪೂರ (Emotional Intelligence) ಒಂದು ನಿಶ್ಚಯಕ್ಕೆ ತಲುಪಿದೆ ನಂತರವೇ ವಿಚಾರಧಾರೆ (Logical Intelligence) ಕೆಲಸ ಆರಂಭವಾಗುತ್ತದೆ. ಆದರೆ, IQಗೆ ಸಿಕ್ಕ ಪ್ರಾಮುಖ್ಯತೆ ದುರಾದೃಷ್ಟವಶಾತ್ EQಗೆ ಸಿಗುವುದಿಲ್ಲ, ಸಾಮಾಜಿಕವಾಗಿ.
    ಇದನ್ನು ಕ್ಲುಪ್ತವಾಗಿ ಅರ್ಥಮಾಡಿಕೊಂಡು, ಇತರರಿಗೂ ಅರ್ಥವಾಗುವ ಹಾಗೆ ವಿವರಿಸುವ ಕಾರ್ಯ IQವಿನದು. ಒಂದರ್ಥದಲ್ಲಿ EQ ಬುನಾದಿಯಾಗಿದೆ, IQ ಕಟ್ಟಡದಂತೆ. ಕಟ್ಟಡ ನಮ್ಮ ಕಣ್ಣಿಗೆ ಕಾಣುವುದು, ಅಡಿಪಾಯವಲ್ಲ, ನಿಜ, ಆದರೆ ಬುನಾದಿಯಿಲ್ಲದ ಕಟ್ಟಡದಲ್ಲಿ ವಾಸಮಾಡಲಾದೀತೇ? ಊಹಿಸಲೂ ಭಯಂಕರವಾಗಿ ಕಾಣುವುದಿಲ್ಲವೇ? ಎಂದಮೇಲೆ, ಈ ಭಾವನೆಗಳು ಕುರಿತು ತಾತ್ಸಾರದ ದೃಷ್ಟಿಕೋನ ಸರಿಯೇ? ನಿಮ್ಮ ವಿವೇಚನೆಗೇ ಈ ಕುರಿತು ನಿರ್ಧಾರಕ್ಕೆ ಬಿಟ್ಟುಬಿಡುತ್ತೇನೆ.

Leave a Reply

You cannot copy content of this page

Scroll to Top