ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕಾದಂಬರಿ ಕುರಿತು ಚೋಮನ ದುಡಿ ಡಾ.ಶಿವರಾಮ ಕಾರಂತ ತಿಲಕ ನಾಗರಾಜ್ ಹಿರಿಯಡಕ ಚೋಮನ ದುಡಿಯ ಮೋಡಿಗೆ ಮನಸೋತಿರುವೆ…  ಯಾವುದೇ ಕೃತಿ ಓದಿದರೂ ನನ್ನನ್ನು ಮತ್ತೆ ಮತ್ತೆ ಕಾಡುವುದು ನೆಚ್ಚಿನ ಸಾಹಿತಿ ಕಾರಂತಜ್ಜರ ‘ಚೋಮನ ದುಡಿ’ ಅಂದಿನ ಕಾಲದ ಕಾರ್ಗತ್ತಲ ಸ್ವರೂಪ, ಆ ಕತ್ತಲನ್ನು ಲೆಕ್ಕಿಸದೆ ಜನರು ಊರ ಜಾತ್ರೆಯನ್ನು ಸಂಭ್ರಮಿಸುತ್ತಿದ್ದ ಪರಿ, ಇಂದು ಹಗಲಿನಂತೆ ಬೆಳಗುವ ರಾತ್ರಿಯ ಕಾಣುವ ನಮನ್ನು ಬೇರಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ. ಚೋಮನ ದುಡಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಮನಸ್ಸಿಗಿಳಿಯುತ್ತವೆ. ನಮಗಿವತ್ತು ಕೇವಲವೆನಿಸುವ  ಇಪ್ಪತ್ತು ರೂಪಾಯಿ ಈ ಕಾದಂಬರಿಯಲ್ಲಿ ಒಗ್ಗಟ್ಟಾಗಿದ್ದ ಚೋಮನ ಸಂಸಾರವನ್ನು ಛಿದ್ರಗೊಳಿಸಿಬಿಡುತ್ತದೆ. ಹೇಗೋ ಗಂಜಿ,ಉಪ್ಪು, ಕಾಳುಕಡಿ ತಿಂದುಂಡಿದ್ದ ಸಂಸಾರ ಚೋಮ ಮಾಡಿದ್ದ ಸಾಲದ ಸುಳಿಯೊಳಗೆ ಸಿಲುಕಿ ನಲುಗುತ್ತದೆ. ಅಪ್ಪನ ಸಾಲ ತೀರಿಸ ಹೊರಟ ಗುರುವ, ಚನಿಯರಲ್ಲಿ ಗುರುವ ತನ್ನ ವಯೋ ಸಹಜ ಬಯಕೆಯಿಂದ ಅವಳಾರನ್ನೋ ಕಟ್ಟಿಕೊಳ್ಳುತ್ತಾನೆ. ಚನಿಯ ಜ್ವರಕ್ಕೆ ಬಲಿಯಾಗುತ್ತಾನೆ. ಇಷ್ಟಾಗಿದ್ದರೆ ಸಾಕಿತ್ತೇನೋ ಇಪ್ಪತ್ತು ರೂಪಾಯಿ ಯಿಂದ ಇಪ್ಪತ್ತೈದಕ್ಕೇರಿದ ಅಪ್ಪನ ಸಾಲದ ಹೊರೆಯನ್ನು ಬೆಳ್ಳಿ ಹೊರುತ್ತಾಳೆ , ಕೊನೆಗೆ ತೀರಿಸುತ್ತಾಳೆ ಕೂಡ. ಆದರೆ ಅಲ್ಲೊಂದಷ್ಟು ನಡೆಯುವ ಘಟನಾವಳಿಗಳು ಮನ ಕಲಕುತ್ತವೆ‌. ಎಷ್ಟಂದರೂ ಹೆಣ್ಣುಮಗಳಲ್ಲವೇ? ನೀಲನ ಘೋರ ಅಂತ್ಯಕ್ಕೆ ಛೆ! ಎಂಬ ಉದ್ಗಾರ ನಮಗರಿವಿಲ್ಲದೆ ಹೊರಬರುತ್ತದೆ. ಇಲ್ಲಿ ಬೆಳ್ಳಿ ಮತ್ತು ಚೋಮನ ಪಾತ್ರಗಳು ಬಹುವಾಗಿ ಕಾಡುತ್ತವೆ. ತಂದೆಯನ್ನು, ಅಣ್ಣತಮ್ಮಂದಿರನ್ನು ಬಹುವಾಗಿ ಪ್ರೀತಿಸುವ, ತಾಯಿ, ತಂಗಿ,ಅಕ್ಕ , ಜವಾಬ್ದಾರಿಯುತ ಹೆಣ್ಣುಮಗಳು ಹೀಗೆ ವಿವಿಧ ಪಾತ್ರಗಳನ್ನು ನಿಭಾಯಿಸುವ ಬೆಳ್ಳಿ ಹಾದಿ ತಪ್ಪಿದಳೆ? ಎಂದುಕೊಳ್ಳುವಾಗ ಇಲ್ಲ ವಯೋ ಸಹಜ ಬಯಕೆಗೆ ಬಲಿಯಾದಳೆ? ಎಂಬ ಪ್ರಶ್ನೆ ಹುಟ್ಟುತ್ತದೆ. ಆದರೂ ಬೆಳ್ಳಿಯ ಬಗ್ಗೆ ಮನಸ್ಸಿನ ಮೂಲೆಯಲ್ಲಿ ಮರುಕವೊಂದು ಹುಟ್ಟಿಕೊಳ್ಳುತ್ತದೆ. ಇನ್ನು ಚೋಮನೇನಾದರೂ ಸಿಕ್ಕಿದರೆ ” ಅಯ್ಯೋ ಚೋಮ ಹೆಂಡದಂಗಡಿಗೆ ಹಾಕೊ ದುಡ್ಡಿಂದ ಸಾಲಾನಾದ್ರು ತೀರಿಸ್ಬಾರ್ದಾ? ” ಅಂತ ಕೇಳಿಬಿಡಬೇಕು ಎನ್ನುವಷ್ಟು ನೈಜವಾಗಿ ಮೂಡಿಬಂದಿರುವ ಪಾತ್ರ ಚೋಮನದು. ಮೊದಲಿನಿಂದ ಕೊನೆಯವರೆಗೂ ಚೋಮನ ಜೊತೆಗಾರನಾಗಿ ಕಾದಂಬರಿಯುದ್ದಕ್ಕೂ ಸದ್ದು ಮಾಡೋ  ದುಡಿ ಕೊನೆಯಲ್ಲಿ  ತನ್ನ ಸದ್ದಿನೊಂದಿಗೆ ಚೋಮನ ಉಸಿರನ್ನೂ ಜೊತೆಗೆ ಚೋಮನ ಬೇಸಾಯದ ಕನಸನ್ನೂ ಕರೆದೊಯ್ದು ಕಣ್ಣಂಚನ್ನು ತೇವಗೊಳಿಸುತ್ತದೆ. ಬದುಕಿನುದ್ದಕ್ಕೂ ಚೋಮನ ದುಡಿಯ “ಡಮ ಡಮ್ಮ ಢಕ ಢಕ್ಕ” ಸದ್ದು ಸದಾ ಕರ್ಣಗಳಲ್ಲಿ  ಅನುರಣಿಸುತ್ತಲೇ ಇರುತ್ತದೆ. ******************************* ತಿಲಕ ನಾಗರಾಜ್ ಹಿರಿಯಡಕ

Read Post »

ಇತರೆ

ಕಾದಂಬರಿ ಕುರಿತು ಮಲೆಗಳಲ್ಲಿ ಮದುಮಗಳು ಕುವೆಂಪು ಚಂದ್ರಿಕಾ ನಾಗರಾಜ್ ಹಿರಿಯಡಕ ಮಲೆಯ ಝೇಂಕಾರಗಳಿಗೆ ಕಿವಿಯಾಗುತ್ತಾ… ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅನೇಕ ಕಾದಂಬರಿಗಳು ಜೀವಂತಿಕೆ ಪಡಕೊಂಡಿವೆ. ಅನೇಕ ಸಾಹಿತಿಗಳು ತಮ್ಮ ಕೃತಿಗಳ ಮೂಲಕಾನೇ ಉಸಿರಾಡುತ್ತಿದ್ದಾರೆ. ಅಂತಹ ಮೇರು ಸಾಹಿತಿಗಳಲ್ಲಿ ಪ್ರಮುಖರು ಕುವೆಂಪು. ಪ್ರಕೃತಿಯೊಂದಿಗಿನ ನಂಟಿನಲ್ಲೇ ಸಂಬಂಧಗಳನ್ನು ಅರಳಿಸುತ್ತಾ ಸಾಗಿಸುವ ಶ್ರೇಷ್ಠ ಕವಿ ಕುವೆಂಪು. ಅವರ ಕೃತಿಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ್ದು “ಮಲೆಗಳಲ್ಲಿ ಮದುಮಗಳು”. ಕಣ್ಣಿಗೆ ದಣಿವೇ ನೀಡದೆ ಓದಿಸಿಕೊಂಡು ಹೋಗುವ ಕಾದಂಬರಿ. ಮಲೆಗಳಲ್ಲಿ ಕಾಡುವ ಮದುಮಗಳ ಬರಹ ಕಾವ್ಯವಿದು.ಕಾದಂಬರಿಯ ಪ್ರತೀ ಪಾತ್ರವೂ ಮುಖ್ಯವೇ…ಒಂದೊಂದೂ ಕವಿತೆಯಂತೆ ಇಳಿಯುತ್ತವೆ. ಗುತ್ತಿ – ತಿಮ್ಮಿಯ ಪ್ರೇಮ, ಐತ – ಪೀಂಚಲುವಿನ ಮೋಹ, ಮುಕುಂದಯ್ಯ – ಚಿನ್ನಮ್ಮರ ಒಲವ ಚೆಲುವು ಎಲ್ಲವೂ ಇಲ್ಲಿ ದೊಡ್ಡ ಸೊಬಗು…ಈ ಸೊಬಗ ಹಿಂದೆ ಹಿಂದೆ ಹೋದಷ್ಟು ಎಲ್ಲಿಯೂ ನಿಲ್ಲಲಾಗುವುದಿಲ್ಲ…ದಾರಿ ಸಾಗಿದಂತೆ ಸಾಗುತ್ತಿರಬೇಕಷ್ಟೇ…ಪ್ರೇಮಕ್ಕೆ ಕೊನೆ ಎಂಬುವುದಿಲ್ಲ…ಅದು ಯಾರನ್ನೂ ಸೆಳೆಯಬಲ್ಲ ಸೂಜಿಗಲ್ಲು…ಪ್ರಕೃತಿಯಂತೆ….ಇಲ್ಲಿ ಪ್ರೇಮ ಹಾಗೂ ಪ್ರಕೃತಿ ಒಂದಾಗಿ ಮೇಳೈಸಿದೆ..ಹಾಗಂದ ಮೇಲೆ ಬೇರೆ ದಿಗ್ಭ್ರಮೆಗಳು ಬೇಕೇ…! ಪ್ರೀತಿಯೊಂದಿಗೆ ಬೆಸೆದ ಬಂಧಗಳ ನಡುವೆ ಜಾತಿಯ ನರಳಾಟ ಕಿವಿಗೆ ಕರ್ಕಶವಾಗುತ್ತದೆ.ಜಾತಿ ಭೇದದ ವಾಸನೆ ಮೂಗಿಗೆ ಬಡಿಯುತ್ತದೆ. ದೈಹಿಕ ವಾಂಛೆಗಳಿಗೆ ಬಲಿಯಾದ ಮುಗ್ಧ ಪ್ರೇಮದ ಕಿರುಚಾಟ ಕಿವಿಗೆ ಅಡರುತ್ತದೆ. ಇಲ್ಲಿ ಕಾಡುವ ದುರಂತಗಳಿವೆ..ಒಂದು, ಎಳಸು ಪ್ರೇಮವೊಂದರ ದುರ್ಮರಣ, ಮತ್ತೊಂದು ಮೂಕ ಪ್ರೇಮದ ಸಾವು…ಸಿರಿವಂತನಾದ ದೇವಯ್ಯನಿಗೆ ಇಟ್ಟುಕೊಂಡವಳಾಗಿಯಾದರೂ ಜೊತೆಯಾಗ ಬೇಕೆಂಬೋ ಕಾವೇರಿಯ ಉತ್ಕಟ ಪ್ರೇಮವಿಲ್ಲಿ ಭಯಂಕರ ಅಂತ್ಯ ಕಾಣುತ್ತದೆ ನೋಡಿ…ಅದು ಹೆಣ್ಣು ಬಾಕತನವನ್ನು ತೋರಿಸಿದೆ. ಆಕೆಗೆ ಬೇಕಾಗಿದ್ದು ದೇವಯ್ಯ…ಪ್ರೇಮ…ಅದಕ್ಕಾಗಿ ಚೀಂಕ್ರನೆಂಬೋ ನಂಬಿಕೆಯ ಹಿಂದೆ ಹೊರಡುತ್ತಾಳೆ. ಹೆಣ್ಣೆಂಬ ಕಾರಣಕ್ಕೆ ಭಕ್ಷಣೆಗೊಳ ಪಡುತ್ತಾಳೆ…ತನ್ನನ್ನು ತಾನು ಕೊಂದು ಕೊಳ್ಳುತ್ತಾಳೆ…ಕಾದಂಬರಿಯ ಆರಂಭ ಭಾಗದಲ್ಲಿ ಬರೋ ‘ಹುಲಿಯಾ’ ನಾಯಿಗುತ್ತಿಯ ಬದುಕಿನ ಪ್ರತೀ ಹೆಜ್ಜೆಗಳನ್ನು ಮೂಸುತ್ತಾ ಹಿಂಬಾಲಿಸುವ ನಿಯತ್ತಿನ ಜೀವಿ…ಒಂದರ್ಥದಲ್ಲಿ ಈ ಕಾದಂಬರಿಯಲ್ಲಿ ಅದರ ಪಾತ್ರವೂ ಖುಷಿ ಕೊಡುತ್ತದೆ…ಕೊನೆಗೆ ನೋಯಿಸುತ್ತದೆ…ನಿಯತ್ತು…ಪ್ರೀತಿ ಎಲ್ಲದಕ್ಕೂ ಹುಲಿಯಾ ಸಾಕ್ಷಿ…ಮಲೆ ಪ್ರೇಮದ ಗಂಧ ಹುಲಿಯಾನ ಏದುಸಿರಿನೊಂದಿಗೆ ಬೆರೆತಂತೆ ಭಾಸವಾಗುತ್ತದೆ. ಅದೊಂದು ಪ್ರೇಮಭರಿತ ಒಡನಾಟವಲ್ಲದೇ ಮತ್ತೇನು…ಅಕ್ಕಣಿಯ ಮೇಲೆ ಅಕ್ಕರೆ ಹೊಂದಿದ್ದ ಚೀಂಕ್ರ ಪಿಜಿಣನ ಸಾವನ್ನು ಬಯಸಿ ಸ್ವಾರ್ಥಿಯಾದ…ಆದರೆ….ಮೂಕ ಪ್ರಾಣಿ ಹುಲಿಯಾದು ಯಾವ ಸ್ವಾರ್ಥವಿರದ, ನಿಷ್ಕಲ್ಮಶ ನಿಷ್ಠೆಯ ಪ್ರೇಮದ ಕುರುಹಾಗಿ ಉಳಿಯುತ್ತದೆ. ಕೊನೆಗೊಂದು ಪ್ರೇಮಮಯ ಅಂತ್ಯ…ಕ್ಷಮಿಸಿ, ಅಂತ್ಯವೆಲ್ಲಿಂದ ಬಂತು..! ಒಂದಷ್ಟು ವಿಚಾರಗಳನ್ನ, ಪಾತ್ರಗಳನ್ನು ಒಳಗೆ ಕಾಡಲು ಬಿಟ್ಟ ಮೇಲೆ ಅಲ್ಲಿ ಅಂತ್ಯವೆಂಬುದು ಇರುತ್ತದೆಯೇ…ಕೊನೆ ಎಲ್ಲಿಂದ ಅಲ್ಲವೇ…ಒಂದರ ಅಂತ್ಯವೆಂಬಂತೆಯೇ ಮತ್ತೊಂದರ ಆರಂಭ…ಇಲ್ಲೂ ಕಾದಂಬರಿ ಕೊನೆಯ ಪುಟ ತಲುಪಿದೆಯಷ್ಟೇ ಮಳೆಯಲ್ಲಿ ಮಿಂದು ಎದ್ದ ಮಲೆಯ ಹಸಿರೊಂದಿಗೆ ಬೆರೆತ ಝೀರುಂಡೆಗಳ ಸದ್ದಿನಂತೆ ಸದಾ ಅನುರಣಿಸುತ್ತದೆ…ನಮ್ಮನ್ನೂ ಮಲೆಯ ದೃಶ್ಯ ಕಾವ್ಯದೊಳಗೆ ಬಂಧಿಸುತ್ತದೆ. ********************************* ಚಂದ್ರಿಕಾ ನಾಗರಾಜ್ ಹಿರಿಯಡಕ

Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಪುಟ್ಟ ಗೌರಿ ಪುಟ್ಟ ಗೌರಿ : ಕುರಿತು ಕೆಲವು ಮಾತುಗಳು ಹೊಟ್ಟೆಯೊಳಗಡೆ ಗೋರಿ ಕಟ್ಟಿಕೊಂಡಿರುವವರೆ, ಹೊಡೆಯಲೆತ್ತಿರುವ ಕೈ ಹೊತ್ತಿ ಹೊಗೆಯುವೆದೆ, ವಿಷವುಗುಳಿ ನಗುವ ನಾಲಿಗೆ, ಎಲೆಲೇ, ತಡೆಯಿರಿ, ತಡೆಹಿಡಿಯಿರಿ: ಮಗು ನಗುತ್ತಿದೆ, ಮಗು ಆಡುತ್ತಿದೆ.               ( ಒಳ್ಳೆತನ ಸಹಜವೇನಲ್ಲ – ಎಂ ಗೋಪಾಲಕೃಷ್ಣ ಅಡಿಗ ) ಮೇಲಿನ ಸಾಲುಗಳು ಪ್ರತೀಕ್ಷಣವೂ ಎಚ್ಚರಿಸುವ, ಒಂದಷ್ಟು ಅಸಹಜ ಕಾರ್ಯಗಳನ್ನು ಒಳಗಿಂದ ತಡೆವಂತೆ ಮಾಡುವ ಕಾರ್ಯವನ್ನು ಮಾಡುತ್ತಾ ಜಾಗೃತವಾಗಿಟ್ಟಿದೆ. ದುಷ್ಟ ಮನಸ್ಥಿತಿ ಅಡಿಗರು ಬರೆದು ಹಾದಿ ಕಾಣಿಸಿಕೊಟ್ಟ ನಂತರೂ ಬದಲಾಗದಿರುವುದು ನಮ್ಮ ದುರಂತ, ಮಗುತ್ವದ ಆಸೆಯ ಮುಂಗಾಣ್ಕೆ ಅವರ ದೊಡ್ಡತನ. ‘ಮಗು ಆಡುತ್ತಿದೆ’ ‘ಮಗು ನಗುತ್ತಿದೆ’ ಎನ್ನುವುದು ಇಂದಿಗೆ ಇದೆಯೇ? ಬಹುದೊಡ್ಡ ಪ್ರಶ್ನೆಯಾಗಿ ಕಾಡುತ್ತದೆ. ಇಂದು ಮಗು ನಗಲು, ಆಡಲು ಒಂದಷ್ಟು ಅವಕಾಶ ಕೊಡಬೇಕಾಗಿದೆ. ಸಮಾಜವೊಂದು ನಿರಂತರವಾಗಿ ವಿಜ್ಞಾನ, ತಂತ್ರಜ್ಞಾನ, ಭಾಷೆ, ಸಂವಹನಗಳಿಂದ ಬೆಳೆಯುತ್ತಿರುವಾಗ, ಅದನ್ನನುಸರಿಸುವ ಮನುಷ್ಯನ ಅಭಿವ್ಯಕ್ತಿಯಲ್ಲಿ ಬದಲಾಗುತ್ತಾ ಬಹುದೊಡ್ಡ ಅವಕಾಶಗಳನ್ನು ಆಯಾ ಕಾಲದಲ್ಲಿ ಬದುಕುತ್ತಿರುವವರಿಗೆ ಮೇಲಿನ ಅಂಶಗಳು ಹಾದಿ ತೆರೆದು ಕೊಡುತ್ತದೆ. ಅವುಗಳ ಬಳಕೆ ನಮ್ಮ ಯೋಗ್ಯತೆಯ ಪ್ರತೀಕದಂತೆಯೆ; ನಮ್ಮ ಸಮಾಜದ ನಡೆ, ಇತಿ-ಮಿತಿಯನ್ನು ತಿಳಿಸುತ್ತದೆ. ನಮ್ಮೊಳಗಿನ “ಮಗು” ತನವನ್ನು ಆದಷ್ಟು ಕಾಪಿಟ್ಟುಕೊಂಡು ಬದುಕಬೇಕಾದ ಅಗತ್ಯ ತುರ್ತು ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ. ವಿಜ್ಞಾನ, ತಂತ್ರಜ್ಞಾನಗಳಲ್ಲಿನ ಆವಿಷ್ಕಾರಗಳು ಆರಂಬ ಮಾಡಿ, ಮಾಡಲು ಹೊರಟಿರುವ ದೊಡ್ಡ ಕೆಲಸವನ್ನು, ಅದು ಉಂಟುಮಾಡುವ ಪರಿಣಾಮವನ್ನು  ಬಿತ್ತನೆಮಾಡಿ ಪ್ರಯೋಗಿಸಿಯೇ ನೋಡಬೇಕಾದ ಅಗತ್ಯವಿಲ್ಲ. ಊಹಿಸುವ ಒಂದಷ್ಟು ಪ್ರಜ್ಞೆಯಿದ್ದರೆ, ಮುಂಗಾಣ್ಕೆ ಕೈ ಹಿಡಿದಿದ್ದರೆ, ಅಪಾಯಕಾರಿ ಪ್ರಯೋಗಗಳಿಂದ ದೂರ ಉಳಿವಂತೆ ಮಾಡುವಲ್ಲಿ ಬುದ್ದಿ ಭಾವಗಳು ಯಶಸ್ವಿಯಾಗಿ ಕೆಲಸ ಮಾಡುತ್ತವೆ. ಈ ಮುಂಗಾಣ್ಕೆಯ ಆಗಮನಕ್ಕೆ ಬದುಕನ್ನು ಸಹಜವಾಗಿ ಗಮನಿಸುತ್ತಲೇ, ಅದರ ಉಪೋತ್ಪನ್ನವಾದ ಬರಹಗಳ ರಾಶಿಯೂ ಕೈ ಹಿಡಿಯುತ್ತವೆ. ಜೊತೆಗೆ ಎಲ್ಲಾ ಲಲಿತಕಲಾ ಪ್ರಕಾರಗಳೂ ಬದುಕ ಹಸನಾಗಿಸುವ, ಸಹ್ಯಗೊಳಿಸುವ ಕಾರ್ಯಗಳನ್ನು ಮಾಡುತ್ತವೆ. ಅವುಗಳ ಗ್ರಹಿಕೆ ಮತ್ತು ಅಯ್ಕೆಗಳಲ್ಲಿ ಬಿದ್ದಿರುವ ಕಂದಕವೇ ಇಂದಿನ ತಲೆಮಾರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಮನುಷ್ಯ ಕೇವಲ ಹೊರ ಆಕಾರಗಳಿಂದ ಮನುಷ್ಯನಾಗಿದ್ದಾನೆ, ಒಳಗೆ ‘ಆ’ ಮನುಷ್ಯತ್ವ ಇದೆಯೇ? ಈ ಪ್ರಶ್ನೆ ಕಾಡುತ್ತಿರುವಾಗ ಕಣ್ಣ ಮುಂದಿನ ಎಳೆಯ ಮಕ್ಕಳಿಗೆ ನಾವು ಕೊಟ್ಟು-ಬಿಟ್ಟುಹೋಗುವುದಾದರೆ ಏನನ್ನು? ಮತ್ತು ಏಕೆ? ಈ ಪ್ರಶ್ನೆಗಳು ಬಹಳವಾಗಿ ಕಾಡುತ್ತದೆ. ಪುಟ್ಟಗೌರಿ ಸಂಕಲನ ‘ಆ’ ಬಿಟ್ಟು ಕೊಟ್ಟುಹೋಗಬೇಕಾದ ಅಂಶಗಳ ಕಡೆಗೆ ಗಮನ ಸೆಳೆಯುವುದರಿಂದಲೇ ಸದ್ಯದ ಒತ್ತಡದಲ್ಲಿ ಮುಖ್ಯ ಎನಿಸುತ್ತದೆ. ಬಾಲ್ಯದಲ್ಲಿ ಮಕ್ಕಳ ಶಿಕ್ಷಣ ಕುಟುಂಬದಿಂದ ಪ್ರಾರಂಭವಾಗಿ, ಶಾಲೆಯೆಂಬ ವ್ಯವಸ್ಥೆಯಲ್ಲಿ ಒಂದು ವ್ಯವಸ್ಥಿತ ಆಕಾರ ಪಡೆಯುತ್ತಿತ್ತು. ಇಂದಿನ ಶಿಕ್ಷಣ ರಜೆಯ ಮಜೆಯಾಗಿಯಷ್ಟೇ ಉಳಿದಿದೆ ಎನ್ನುವುದು ಮೊದಲ ಸಮಸ್ಯೆ. ಹಿಂದಿನ ತಲೆಮಾರು ತನ್ನ ಬಾಲ್ಯದ ಹೆಚ್ಚು ಸಮಯ ಕಳೆಯುತ್ತಿದ್ದುದು ಶಾಲೆಯ ವಾತಾವರಣದಲ್ಲಿ. ಇಂದು ಮನೆಯ ವಾತಾವರಣ ಬೇಸರವೆನಿಸಿದರೆ ಶಾಲೆಯ ಕಡೆ ಮುಖಮಾಡುವ, ಅದೂ ರಜೆಯಿಲ್ಲದಿದ್ದರೆ ಎನ್ನುವಷ್ಟು ಸಮಾಜ ಮತ್ತು ಶಿಕ್ಷಣ ವ್ಯವಸ್ಥೆ ಬದಲಾಗಿವೆ. ಒಂದೆಡೆ ಕೂರಲಾರದ, ನಿಂತಲ್ಲಿ ನಿಲ್ಲಲಾರದ, ಒಬ್ಬರನ್ನೊಬ್ಬರು ಸಹಿಸಲಾರದ, ಸದಾ ಅನುಮಾನಿಸುವ ಮಟ್ಟದ ಮನಸ್ಥಿತಿಗಳಲ್ಲಿರುವವರಲ್ಲಿ “ಸ್ವತಂತ್ರ”ವನ್ನು ಕುರಿತು ಅಪಾರ ಕಾಳಜಿಯಿದೆ, ಆದರೆ ತಮ್ಮದು “ಸ್ವೇಚ್ಛಾಚಾರ”ವೆಂಬ ಸಣ್ಣ ಗಮನವೂ ಇಲ್ಲ. ಇವುಗಳನ್ನು ಆಲೋಚಿಸವಷ್ಟೂ ನಮಲ್ಲಿ ವ್ಯವಧಾನವಿಲ್ಲ. ಅಂತರಾಷ್ಟ್ರೀಯ ಸಂಬಂಧಗಳ ಕುರಿತು ಮಾತಾಡುವ ಕಣ್ಣಿಗೆ, ಕಣ್ಣೆದುರಿನ ಎಳೆಯ ಮಕ್ಕಳ ಬುದ್ದಿ ಭಾವಗಳ ಸಂಬಂಧದಲ್ಲಿ ಆಗಿರುವ ‘ವಿಘಟನೆ’ ಕಾಣುತ್ತಿದ್ದರೂ ಅದಕ್ಕೆ ಕಾರಣ, ಪರಿಹಾರ ಮಾರ್ಗೋಪಾಯಗಳ ಆಲೋಚನೆ ನಮ್ಮೊಳಗೆ ಬಂದೇ ಇಲ್ಲ. ಅಥವಾ ಎಲ್ಲವನ್ನು ಕಂಡೂಕಾಣದ ಜಾಣಕುರುಡರಂತೆ ವರ್ತಿಸುತ್ತಿದ್ದೇವೆ. ಈ ಜಾಣಕುರುಡುತನ ಕಳೆಯದೆ ಉಳಿದ ಹಾದಿ ಕ್ರಮಿಸಲಾರೆವು ಎಂಬುದು ಇನ್ನಾದರೂ ನಮಗೆ ಅರ್ಥವಾಗಬೇಕಿದೆ. “ಉತ್ತರೋತ್ತರ ವಾದ”ಗಳಲ್ಲಿ ಮಿಂದು ಬಂದಿರುವವರಿಗೆ, “ವಿಶ್ವಗುರು” ಪಟ್ಟದ ಕುರ್ಚಿಗೆ “ಟವಲ್” ಹಾಕುವ ಕಾರ್ಯದಲ್ಲಿ ಸದಾನಿರತರಾಗಿರುವ ನಮಗೆ ಮೇಲಿನ ಅಲೋಚನೆ ಮತ್ತು ಕಾಳಜಿಗಳು ಬಾಲಿಷವಾಗಿ ಕಂಡರೆ ಅಶ್ಚರ್ಯವಿಲ್ಲ. ಅದರೆ ಒಂದಂತೂ ಸತ್ಯ – ಆಂತರಿಕವಾಗಿ ಸದೃಢರಾಗದ ಹೊರತು, ಹೊರಗಿನ ಬಲಿಷ್ಟತೆ ಮಾತ್ರ ಜೀವಂತವಾಗಿ ಉಳಿಯುವ ಹಾದಿ ಎಂದು ನಂಬುವುದು, ‘ಕಲ್ಪನೆ’ಯಲ್ಲಿ ನಿಂತು ‘ಸದ್ಯ’ದ ಒತ್ತಡಕ್ಕೆ ಮಾಡುವ ಅಪಾರ ಪ್ರಮಾಣದ ಹಾನಿಗೆ ಹಾದಿ ಮಾಡಿಕೊಡುತ್ತಿದೆ. ಢಾಳಾಗಿ ಕಾಣಿಸುವಷ್ಟು ಸಮಸ್ಯೆ ಇರುವಾಗ, ಒಂದು ಭೂಭಾಗದ ಪರಿಸರ, ನಂಬಿಕೆ, ಆಚರಣೆ, ಅವುಗಳು ಕಟ್ಟಿಕೊಳ್ಳುವ ಕಲ್ಪನೆ ಮತ್ತು ಸೃಷ್ಟಿಸಿಕೊಂಡ ಭಾಷೆ, ಅವುಗಳ ಒಟ್ಟೂ ಮೊತ್ತವಾದ “ಸಂಸ್ಕೃತಿ”ಯ ಆಕಾರ ಇಂದು ಹೇಗಿದೆ? ಇದ್ದರೆ ಅದರ ಕೊಡುಗೆ ಎನು? ಪಲ್ಲಟವಾಗಿದ್ದರೆ ಏಕೆ? ಈ ಪ್ರಶ್ನೆಗಳು ಹೊಕ್ಕದ ಹೊರತು ಮುಂದಿನ ಎಳೆಯ ತಲೆಮಾರಿನ ಕುರಿತು ಸ್ವಲ್ಪವೂ ಯೋಚಿಸಲಾರೆವು. ಈ ಪ್ರಶ್ನೆಗಳು ಕಾಡಲ್ಪಟ್ಟಿರುವ ಕೆಲವರಾದರೂ ಒಂದಷ್ಟು ಆ ಕಡೆಗೆ ಗಮನ ಹರಿಸಿದ್ದಾರೆ. ಅಂತಹವರಲ್ಲಿ ಜಯಲಕ್ಷ್ಮೀ ಎನ್. ಎಸ್. ಕೋಳಗುಂದರೂ ಒಬ್ಬರು, ಅಂತಹಾ ಸಂಕಲನಗಳಲ್ಲಿ “ಪುಟ್ಟಗೌರಿ” ಯೂ ಒಂದು. ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಕವಿತೆಗಳು ಹೇರಳವಾಗಿ ಬಂದಿದೆ. ರಾಜರತ್ನಂ ರಿಂದ ಹಿಡಿದು ಇತ್ತೀಚೆಗೆ ಮಕ್ಕಳ ಕವಿತೆಗಳ ಸಮಗ್ರದವರೆಗಿನ ಕವಿತೆಗಳು ವ್ಯಾಪ್ತಿ, ವಿಸ್ತಾರ ಮತ್ತೊಂದಷ್ಟು ಸಮಸ್ಯೆಗಳ ಕುರಿತು ಮಾತಾಡುತ್ತದೆ. ಮಕ್ಕಳಿಗಾಗಿ ಬರೆಯುವಾಗ ವಯಸ್ಸಿನ ಮಿತಿ ಇರುತ್ತದೆಯೇ? ಇದ್ದರೆ ಏಕೆ? ಈ ಪ್ರಶ್ನೆಗಳು ಬಹುಮುಖ್ಯವಾದದ್ದು. ಮಕ್ಕಳ ಕವಿತೆಗಳು ಕೇವಲ ಮಕ್ಕಳಿಗಲ್ಲ, “ಮಗು ಮನಸ್ಥಿತಿ” ಯನ್ನು ಕಾಪಿಟ್ಟುಕೊಳ್ಳುವ ಅಗತ್ಯವಿರುವ ಎಲ್ಲರಿಗೂ ಎನ್ನುವುದು ಸ್ಪಷ್ಟ ಉತ್ತರವಾದರೂ, ಆ ಕಾರ್ಯ ಎಷ್ಟು ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎನ್ನುವುದು ಬಹಳ ಮುಖ್ಯ. ಭಾಷೆ, ವಸ್ತು, ರೂಪಗಳು ಮೊದಲ ತಲೆಮಾರಿನಂತೆಯೇ ಇರುವ ‘ಪುಟ್ಟಗೌರಿ’ಯಲ್ಲಿ ಗಮನ ಸೆಳೆಯುವುದು ಕವಿತೆಗಳಲ್ಲಿನ “ಲಯ”. “ಲಯ” ಕಳೆದುಕೊಂಡು ಬದುಕುತ್ತಿರುವವರಿಗೆ “ಲಯ”ವಾಗದಂತೆ “ಲಯ”ದಲ್ಲಿಯೇ “ಬದುಕ ಲಯ”ದ ಕಡೆಗೆ ಗಮನಸೆಳೆಯುವಂತೆ ಈ ಸಂಕಲನವಿದೆ. ಮೇಲಿನ ವಾಕ್ಯದಲ್ಲಿ ಬಳಸಿರುವ “ಲಯ” ಪದವು ಕೇವಲ ವಾಕ್ಯರಚನೆಯ ಆಟಕ್ಕಾಗಿ ಆಲ್ಲ. ಒಮ್ಮೆ ಸಂಕಲನದ ಕವಿತೆಗಳನ್ನು ಗಟ್ಟಿಯಾಗಿ ಓದಿನೋಡಿ “ಲಯ” ಅನುಭವಕ್ಕೆ ಬರುತ್ತದೆ. ಮೇಲಿನ ಅಷ್ಟೆಲ್ಲಾ ‘ಲಯ ಕಾರಣ’ಗಳನ್ನು ಒಳಗಿಟ್ಟುಕೊಂಡು ಬದುಕುತ್ತಿರುವ ನಮಗೆ ಕಾವ್ಯದ ಲಯ ಕಾಣಿಸುವ ಸತ್ಯ ಏನನ್ನು? ಕವಿ ಏಕೆ ಲಯವಿಲ್ಲದ ಬದುಕಿನ ನಡುವೆ, ಮತ್ತೆ ಲಯದ ಕಡೆ ಮುಖಾಮುಖಿಯಾಗಿ ಕಲಾತ್ಮಕ ಅಭಿವ್ಯಕ್ತಿ ಮಾಡುತ್ತಾನೆ/ಳೆ? ಕವಿಯ ಈ ಮನಸ್ಥಿತಿ ಎಂತದ್ದು? ಮತ್ತು ಇದರ ಹಿಂದಿರುವ ಉದ್ದೇಶ ಏನು? ಮೇಲಿನ ಪ್ರಶ್ನೆಗಳನ್ನು ಕೇಳಿಕೊಳ್ಳುವುದರ ಮೂಲಕ ಈ ಸಂಕಲನ ತನ್ನ ಕಡೆಗೆ ಸೆಳೆದು ಬೆರಗಾಗಿಸಿ ಮುಖಮಾಡುವಂತೆ ಮಾಡುತ್ತದೆ. ‘ಪುಟ್ಟಗೌರಿ’ ಸಂಕಲನವು ನಲವತ್ತಮೂರು ಕವನಗಳ ಗುಚ್ಛ. ಹೆಸರಿನಲ್ಲಿ ಪುಟ್ಟ ಇದೆಯಷ್ಟೇ, ಸತ್ವದಲ್ಲಿ ಹಿರಿದಾಗಿಯೇ ಇದೆ. ಶಿಕ್ಷಕಿಯಾಗಿರುವ ಕಾರಣದಿಂದ ಕವಯತ್ರಿಗೆ ಮಕ್ಕಳೊಂದಿಗಿನ ಒಡನಾಟ ಮತ್ತು ಅವರ ಭಾಷೆಯ ಜಾಡನ್ನು ಹಿಡಿದು ಭಾವವನ್ನು ಅರ್ಥೈಸುವ ಮತ್ತು ಅಭಿವ್ಯಕ್ತಿಸುವ ಕಲೆ ಸಹಜವಾಗಿಯೇ ಸಿದ್ದಿಸಿದೆ. ಶಿಕ್ಷಕ ವೃತ್ತಿಯಲ್ಲಿ ಇರುವವರಿಗೆ ಇರಲೇಬೇಕಾದ ಜಾಗೃತಾವಸ್ಥೆ. ಸಂಕಲನದ ಪ್ರತಿಯೊಂದು ಕವನವು ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ. ವಿಶಿಷ್ಟತೆಯನ್ನು ಸಹಜವಾಗಿ ಪಡೆದಿರುವ ರಚನೆಯು, ಕವನಗಳ ಒಳ ಹೊರಗುಗಳ ಬಲ್ಲವರಾದ ಕವಯತ್ರಿಗೆ ಈ ರಚನೆಗಳು ಸವಾಲಿನ ಕೆಲಸ ಆಗಿರಲಾರದು. ಇಲ್ಲಿನ ಕವನಗಳು ಕಲಾತ್ಮಕ ಹೊದಿಕೆ ಹೊದ್ದಿರುವುದು ವಸ್ತು ಮತ್ತು ಭಾಷೆಯ ಮೇಲ್ನೋಟಕ್ಕೆ ತಿಳಿಯುತ್ತದೆ. ಕವನವೊಂದು ಹೀಗೆ ಅಖಂಡರೂಪ ಪಡೆಯಲು ಕವಿ ತನ್ನೆಲ್ಲಗಬಹುದಾದ ಕವನಗಳ ಆವಿರ್ಭಾವಕ್ಕೆ ನನ್ನ ಜೀವಮಾನದ ಕೊನೆಯ ಕವನವೇ ಇದೆಂದು ಭಾವಿಸಿದಾಗ ಮಾತ್ರ ಕುಸುರಿ ಕೆಲಸಗಳು ಸಾಧ್ಯವಾಗುತ್ತದೆ. ಅಂತಹಾ ರಚನೆಗಳು ಇಲ್ಲಿ ಕಣ್ಣಿಗೆ ಕಂಡಿವೆ. ಸಹಜವಾಗಿಯೇ ಮಕ್ಕಳ ಕವನಗಳು ಹಾಡುವ ಮಟ್ಟನ್ನು ಹೊಂದಿದ್ದಾಗ ಕಂಠಸ್ಥವಾಗುತ್ತವೆ. ನೆನಪಿನಲ್ಲಿ ಉಳಿವುದಕ್ಕೆ ಮುಖ್ಯ ಕಾರಣವೇ ಕವಿ ಬಳಸುವ ಭಾಷೆ. ಭಾಷೆಯೊಂದರಲ್ಲಿನ ವಾಕ್ಯ ರಚನೆಯ ನಿಯಮಗಳನ್ನು ಮುರಿಯುವಿಕೆ ಮತ್ತು ಬೇರೆಯದೇ ಆದ ಕ್ರಮದಲ್ಲಿ ಪದಗಳನ್ನು ಕೂಡಿಸುವಿಕೆ/ಜೋಡಿಸುವಿಕೆಯ ಮೂಲಕ  ಕವನವೊಂದು ವ್ಯಾಪ್ತಿಯನ್ನು ವಿಸ್ತಾರಗೊಳಿಸಿಕೊಳ್ಳುತ್ತಾ ಸಾಗುತ್ತದೆ. ಈ ಮುರಿಯುವಿಕೆಯು ಆಂತರಿಕವಾಗಿ ಕವನವೊಂದರಲ್ಲಿ ಲಯದ ಆವಿರ್ಭಾವಕ್ಕೆ ಕಾರಣವಾಗುತ್ತದೆ. ‘ಲಯ’ ಒಮ್ಮೆ ಸಿದ್ದಿಸಿತೆಂದರೆ ಮಕ್ಕಳ ಮನಸ್ಸನ್ನು ಹೊಕ್ಕು ಕವನವೊಂದು ಸಾರ್ಥಕ್ಯ ಪಡೆದಂತೆ. ಸದ್ಯದಲ್ಲಿ ರಚನೆಯಾಗುತ್ತಿರುವ ಮಕ್ಕಳ ಕವನಗಳನ್ನು ಗಮನಿಸಿದ್ದೇನೆ ಅವು ವಿಸ್ತಾರವಾದ ಬೌದ್ಧಿಕಕ್ರಿಯೆಯ ಅಭಿವ್ಯಕ್ತಿ ಎಂದು ಕೆಲವು ರಚನೆಗಳು ಆಕಾಗ ಪತ್ರಿಕೆಗಳಲ್ಲಿ ಓದಿದಾಗ ಎನಿಸಿದ್ದಿದೆ. ಇದಕ್ಕೆ ಬಹುಮುಖ್ಯ ಕಾರಣವೇ ಮಕ್ಕಳ ಭಾಷಾ ರಚನೆಯನ್ನು ಗಮನಿಸದ ಮತ್ತು ಅವರ ಭಾವಕೋಶವನ್ನು ಪ್ರವೇಶಿದೆ ಇರುವುದೇ ಕಾರಣಗಳಾಗಿದೆ. ಇಲ್ಲಿನ ರಚನೆಗಳು ಆ ಸಮಸ್ಯೆಯಿಂದ ಹೊರಗೆ ಉಳಿದಿರುವುದೇ ವೃತ್ತಿ ಮತ್ತು ತಾಯೊಡಲ ತಲ್ಲಣಗಳು ಇರುವುದರಿಂದ. ಪುಕ್ಕವ ತಿರುವುತ ರೆಕ್ಕೆಯ ಬೀಸುತ ಎಲ್ಲಿಗೆ ಹೊರಟೆ ಎಲೆ ನವಿಲೆ ಗರಿಗಳ ಬಿಚ್ಚಿ ಕುಣಿಯಲು ನೀನು ಸ್ವರ್ಗವ ಕಾಣುವೆ ನಾನಿಲ್ಲೆ                                         ( ನವಿಲೇ ನವಿಲೆ ) ನಮ್ಮ ಮನೆಯ ನಾಯಿಮರಿ ಕದ್ದು ತಿಂತು ಕಾಯಿತುರಿ                                          ( ಕಳ್ಳ ನಾಯಿ ) ಕವನಗಳಿಂದ ಅಯ್ದ ಸಾಲುಗಳನ್ನೊಮ್ಮೆ ಗಮನಿಸಿ. ಮೊದಲ ಸಾಲಿನಲ್ಲಿ ಬರುವ ಪುಕ್ಕ, ರೆಕ್ಕೆ, ಎಲ್ಲಿಗೆ, ಎಲೆ ಪದಗಳು ಸೃಷ್ಟಿಸುವ ಪ್ರಾಸ ಬಹುಮುಖ್ಯವಾಗುತ್ತದೆ. ಎರಡನೆಯ ಸಾಲನ್ನು ಗಟ್ಟಿಯಾಗಿ ಓದಿದಾಗ ಪಡೆವ ನಿಲುಗಡೆಯು (ಯತಿ) ಸಹಾ ಇಲ್ಲಿ ಮುಖ್ಯವಾಗುತ್ತದೆ. ‘ಎಲ್ಲಿಗೆ ಹೊರಟೆ, ಎಲೆ ನವಿಲೆ’ ಎಂದು ಓದುವಾಗಲೆ ಪ್ರಶ್ನೆಯೊಂದು ಆರಂಭವಾಗಿ ಕಾವ್ಯ ತನ್ನ ಮುಂದಿನ ದಿಕ್ಕನು ಪಡೆಯುತ್ತದೆ. ಮೊದಲಿಗೆ ಈ ಪ್ರಶ್ನೆಯ ಮೂಲಕ ಉಂಟಾದ ಕುತೂಹಲ ಕವನವನ್ನು ಪೂರ್ಣವಾಗಿ ಓದುವಂತೆ ಪ್ರೇರೇಪಿಸಿಬಿಡುತ್ತದೆ. ಎರಡನೆಯ ಉದಾಹರಣೆಯಲ್ಲಿನ ನಾಯಿಮರಿ, ಕಾಯಿತುರಿ ಪದಗಳು ಪಡೆವ ವೇಗವಾದ ಓಟವನ್ನು ಗಮನಿಸಿ. ನಿಲುಗಡೆಯನ್ನು ಬಯಸದ ಸರಾಗ ಓಟ. ನಿಲ್ಲಿಸುವ ಮತ್ತು ವೇಗಪಡೆದುಕೊಳ್ಳುವ ಗುಣಗಳು ಮಕ್ಕಳನ್ನು ಬೇಗ ಗಮನಸೆಳೆದುಬಿಡುತ್ತದೆ. ‘ಕಳ್ಳ ನಾಯಿ’ ಕವನವನ್ನು ಕವಿ ಇನ್ನೊಂದಷ್ಟು ಬೆಳೆಸಬಹುದಾದ ಸಾಧ್ಯತೆಯಿದ್ದರು ಏಕೆ ಬೆಳೆಸಲಿಲ್ಲವೆನ್ನುವುದೇ ಕುತೂಹಲದ ವಿಷಯ. ಇಲ್ಲಿ ಬೆಳವಣಿಗೆ ಪಡೆದಿದ್ದರೆ ಯಶಸ್ವಿ ಕವನಗಳ ಪಟ್ಟಿಯಲ್ಲಿ ಇದೂ ಒಂದು ಸೇರುತ್ತಿತ್ತು. ಅಮ್ಮ ಅಮ್ಮ ಅಲ್ಲಿ ನೋಡು ಹಾರುತಿರುವ ಚಿಟ್ಟೆ ಅದರ ಹಾಗೆ ನನಗು ಕೂಡ ರೆಕ್ಕೆ ಎರಡು ಕಟ್ಟೆ                               ( ಅಲ್ಲಿ ನೋಡು ಚಿಟ್ಟೆ ) ಕವನದಲ್ಲಿನ ರಾಚನಿಕ ವಿನ್ಯಾಸವನ್ನು ಗಮನಿಸಿ. ನಾಲ್ಕು ಪಾದಗಳನ್ನು ಹೊಂದಿದ್ದು ಮೊದಲು, ಮೂರನೆಯ ಪಾದಗಳು ಸಮಾನ ಹನ್ನೆರಡು ಮಾತ್ರೆಗಳಿಂದ ಕೂಡಿದ್ದು, ಎರಡು, ನಾಲ್ಕನೆಯ ಸಾಲು ಒಂಭತ್ತು ಮಾತ್ರೆಗಳಿಂದ ಕೂಡಿದೆ. ಈ ರಚನೆಯಲ್ಲಿನ ಭಾಷೆ ಮತ್ತು ತೀವ್ರತಮ ಓಟಗಳು ಚಿಟ್ಟೆಯ ರೆಕ್ಕೆ ಬಡೆವಂತೆಯೇ ಭಾಸವಾಗುತ್ತದೆ. ಅನಂತರ ಈ ಲಯ ನಿಧಾನಗತಿ ಪಡೆದು ಕಥನಕ್ರಮದ ಕಡೆಗೆ ನಡೆದುಬಿಡುತ್ತದೆ. ಮಕ್ಕಳನ್ನು ಹತ್ತಿರದಿಂದ ಬಲ್ಲವರು ಮಾತ್ರ ಇಂತ ರಚನೆಗಳನ್ನು ಮಾಡಬಲ್ಲರು ಎನಿಸಿದೆ. ಮೊದಲು ಕುತೂಹಲ ಅಅನಂತರ ಬೋಧನೆ. ಈ ನಿಯಮದಲ್ಲಿ ಕವನ ಸಾಗುತ್ತದೆ. ಕಥನಕ್ರಮ ಮಕ್ಕಳ ಕವಿತೆಗಳ ಸಾಮಾನ್ಯ ರಚನಾಕ್ರಮ. ಮಕ್ಕಳ ಕವನಗಳ ಪರಂಪರೆಯಲ್ಲಿ ರಚನೆಯಾಗಿರುವ ಹಲವಾರು ಉದಾಹರಣೆಗಳನ್ನು ಇದಕ್ಕೆ ಸಾಕ್ಷಿಯಾಗಿ ಹೆಕ್ಕಿ ಕೊಡಬಹುದು. ‘ಆ’ ಕವನಗಳಲ್ಲಿ ಒಂದು ಸಾಯುಜ್ಯಸಂಬAಧ ಇರುವುದಕ್ಕೆ ‘ಆ’ ಸಮಾಜದಲ್ಲಿನ ಕುಟುಂಬಗಳಲ್ಲಿದ್ದ ಅವಿಭಜತ ವ್ಯವಸ್ಥೆ ಬಹುಮುಖ್ಯ ಕಾರಣ. ಬದಲಾದ ಕಾಲಮಾನದಲ್ಲಿ ಬದುಕುತ್ತಿರುವ, ಕಾವ್ಯರಚನೆ ಮಾಡುತ್ತಿರುವವರಲ್ಲಿ ಕಥನಕ್ರಮ ಸಹಜವಾಗಿ ಉಂಟಾಗದಿರಲು ವಿಭಜನೆಯಾಗಿರುವುದು ಮುಖ್ಯ ಕಾರಣ. ಇದಕ್ಕೆ ವಿವರಣೆಗಳನ್ನು ಕೊಡುವ ಅಗತ್ಯವಿಲ್ಲ. ಪ್ರತಿಯೊಂದು ವಿಭಜಿತ ಕುಟುಂಬಕ್ಕೆ ಅದರದೇ ಆದ ಕಾರಣಗಳಿವೆ. ಆದರೆ ಕವಿಯೊಬ್ಬನ ಗಮನ ಮತ್ತು ಎಳೆಯ ತಲೆಮಾರಿಗೆ ತಾನು ದಾಟಿಸಬೇಕಾದ ಮೌಲ್ಯ ಎಂತದ್ದೆನ್ನುವ ಪರಿವೆ ಇರಬೇಕಾದುದು ಬಹುಮುಖ್ಯವಾದದ್ದು. ಸಂಕಲನದಲ್ಲಿರುವ ಎರಡು ಕವನಗಳಾದ ‘ನನ್ನ ದಿನಚರಿ’ ಮತ್ತು ‘ಚಂದಾ ಮಾಮ ಬಾರೋ’ ಗಳಲ್ಲಿರುವ

ಪುಸ್ತಕ ವಿಮರ್ಶೆ Read Post »

ಇತರೆ

ಕಾದಂಬರಿ ಕುರಿತು ಕರ್ವಾಲೊ ಪೂರ್ಣಚಂದ್ರ ತೇಜಸ್ವಿ ಅರುಣಾ ರಾವ್ [10:21 AM, 11/7/2020] ARUNA RAO: ಪೂರ್ಣ ಚಂದ್ರ ತೇಜಸ್ವಿ ನನ್ನ ಯಾವತ್ತಿನ ಫೇವರೇಟ್ ರೈಟರ್. ಅವರ ಎಲ್ಲ ಕಾದಂಬರಿಗಳೂ ನನ್ನ ಬಳಿ ಇವೆ ಎಂದು ಹೇಳಿಕೊಳ್ಳಲು ನನಗೆ ಖುಷಿ. ಪ್ಯಾಪಿಲಾನ್, ಚಿದಂಬರ ರಹಸ್ಯ, ಅಬಚೂರಿನ ಫೋಸ್ಟ ಆಫೀಸ್, ತಬರನ ಕತೆ, ಅಡ್ವೆಂಚರ್ ಸೀರೀಸ್, ಅಲೆಮಾರಿ ಅಂಡಮಾನ್ ಎಲ್ಲವೂ ನನ್ನ ಪುಸ್ತಕ ಖಜಾನೆಯನ್ನು ಶ್ರೀಮಂತಗೊಳಿಸಿವೆ.ತೇಜಸ್ವಿಯವರ ಕಾದಂಬರಿಗಳು ಕೇವಲ ಮನರಂಜನಾ ಸಾಧನವಾಗಿರದೆ ಬುದ್ದಿಗೆ, ಮಂಥನಕ್ಕೆ ಆಹಾರವನ್ನು ಒದಗಿಸುತ್ತದೆ.ತೀರ ಇತ್ತೀಚೆಗಷ್ಟೇ ಅಂದರಡ ಲಾಕ್ ಡೌನ್ ನ ಅವಧಿಯಲ್ಲಿ ಮೂರನೇ ಬಾರಿಗೆ ಓದಿ ಮುಗಿಸಿದ ‘ಕರ್ವಾಲೋ’ ಕಾದಂಬರಿಯ ಬಗ್ಗೆ ಒಂದಷ್ಟು ಅನಿಸಿಕೆ. ಕರ್ವಾಲೋ ಹೆಸರೇ ಬಹಳ ವಿಚಿತ್ರ. ಕಾದಂಬರಿ ಓದಲು ಕೈಗೆತ್ರುಕೊಳ್ಳುವ ಮೊದಲು ಅದು ಒಂದು ಊರೇ? ಪ್ರಾಣಿಯೇ? ಸಸ್ಯವೇ? ಇವೆಲ್ಲ ಕುತೂಹಲವನ್ನು ಮೂಡಿಸುತ್ತದೆ. ಕಾದಂಬರಿ ಕಾಲು ಭಾಗ ಮುಗಿದ ನಂತರವೇ ನಮಗೆ ಕರ್ವಾಲೋರವರನ್ನು ಪರಿಚಯಿಸುತ್ತಾರೆ ಲೇಖಕರಾದ ತೇಜಸ್ವಿ. ಕಾದಂಬರಿಯ ಆರಂಭದಲ್ಲಿ ಮೂಡುಗೆರೆಯ ಮಲೆ,ಮಳೆ, ಜೇನು ಸಾಕಾಣಿಕೆ, ಆಗಾಗ ಕೆಟ್ಟು ನಿಲ್ಲುವ ಜೀಪು, ಯಾವಾಗಲೂ ಜೊತೆಗಿರುವ ಕಿವಿ( ನಾಯಿ) ಇವೆಲ್ಲದರ ಮಧ್ಯೆ ತಮ್ಮ ಜಮೀನನ್ನು ಮಾರಿಬಿಡಬೇಕೆಂಬ ಲೇಖಕರ ಪ್ರಯತ್ನ ಸಾಗುತ್ತಿರುವಾಗಲೇ ‘ಮಂದಣ್ಣ ಎಂಬ ಪಾತ್ರದ ಪರಿಚಯವಾಗುತ್ತದೆ. ಈತ ಕಾದಂವರಿಯುದ್ದಕ್ಕೂ ಒಬ್ಬ ರಹಸ್ಯ ವ್ಯಕ್ಕಿಯಾಗಿ ಉಳಿದು ಕುತೂಹಲ ಮೂಡಿಸತೊಡಗುತ್ತಾನೆ. ಸಾಮಾನ್ಯ ಜೀನು ಸಾಕಾಣಿಕಾ ಕೆಲಸಗಾರನಾಗಿ, ಸರ್ಕಾರಿ ಪ್ನ್ಯೂನ್ ಕೆಲಸಕ್ಕಾಗಿ ಗೋಗರೆಯುವ ಈತನ ಬಗ್ಗೆ ಸ್ವತ: ತೇಜಸ್ವಿಯವರಿಗೇ ಜಿಗುಪ್ಸೆ. “ಮದುವೆಯಾಗದ ಹೊರತು ಹುಚ್ಚು ಬಿಡದು, ಹುಚ್ಚು ಹೋಗದ ಹೊರತು ಮದುವರಯಾಗದು” ಎಂಬ ಗಾದೆಯಂತೆ ಕೆಲಸ ಸಿಗದ ಹೊರೆತು ರಾಮಣ್ಣನ ಮಗಳು ರಾಮಿಯನ್ನು ಮದುವೆಯಾಗಲಾರದ ಪರಿಸ್ಥಿತಿ ನಿರ್ಮಾಣವಾಗಿ,ಮಂದಣ್ಣ ಯಾವ ಕೆಲಸದಲ್ಲೂ ಆಸಕ್ತಿ ತೋರದೆ ಹೋದುದರಿಂದ ಕರ್ವಾಲೋರಂತಹ ವಿಜ್ಞಾನಿಯೇ ಮುಂದೆ ನಿಂತು ಮಂದಣ್ಣನ ಮದುವೆ ಮಾಡಿಸಬೇಕಾಗುತ್ತದೆ. ಮಂದಣ್ಣನ ಜೊತೆ ಊರು, ಕಾಡುಗಳನ್ನು ಅಲೆಯುವ ತಮ್ಮ ಬಗ್ಗೆ ಜನರು ತಪ್ಪು ತಿಳಿಯುತ್ತಿದ್ದಾರೆಂದು ಗೊತ್ತಿದ್ದರೂ ತಲೆ ಕೆಡಸಿಕೊಳ್ಳದೆ ತಮ್ಮ ಕೆಲಸದ ಕಡೆ ಗಮನ ಹರಿಸುವ ಕರ್ವಾಲೋರ ನಡತೆ ಅನುಕರಣೀಯ.ಮದುವೆಯಾದ ಮಂದಣ್ಣ ಬಟ್ಟಿ ಸಾರಾಯಿ ಕೇಸಿನಲ್ಲಿ ಜೈಲು ಪಾಲಾದಾಗಲೂ ಅವನ ನೆರವಿಗೆ ನಿಲ್ಲುತ್ತಾರೆ ಕರ್ವಾಲೋ. ಇದು ಕಾದಂಬರಿಕಾರರಿಗೆ ಮತ್ತು ಕರ್ವಾಲೋರ ಖಾಸಾ ಫೋಟೋಗ್ರಾಫರ್ .ಪ್ರಭಾಕರನಿಗೂ ಬಹಳ ಸೋಜಿಗವನ್ನುಂಟು ಮಾಡುತ್ತದೆ. ಸ್ವತಃ ಲಾಯರ್ ಗೊನ್ಸಸಾಲ್ ವೆನ್ಸ್, ಕರ್ವಾಲೋರಂತಹ ಗೌರವಾನ್ವಿತ ವ್ಯಕ್ತಿಯನ್ನು ಇಂತಹ ಕೇಸಿನಲ್ಲಿ ಇನ್ವಾಲ್ವ್ ಮಾಡೋದು ಹೇಗೆ? ಎಂದು ಮುಜುಗತ ಪಡುತ್ತಾರೆ. ಆದರೆ ಕರ್ವಾಲೋ ಈ ಬಾರಿಯೂ ಸ್ವಲ್ಪವೂ ಹಿಂಜರಿಯದೆ ಕೋರ್ಟಿಗೆ ಬಂದು ಮಂದಣ್ಣನ ಪರವಾಗಿ ಸಾಕ್ಷಿ ಹೇಳಿ ಅವನನ್ನು ಬಿಡಿಸುತ್ತಾರೆ.ಮಂದಣ್ಣನಿಗೂ ಕರ್ವಾಲೋರಿಗೂ ಇರುವ ಈ ಗಾಢ ಸಂಬಂಧ “ಎತ್ತಣ ಮಾಮರ ಎತ್ತಣ ಕೋಗಿಲೆ” ಎಂದು ಎಲ್ಲರೂ ಹುಬ್ಬೇರಿಸುವಂತಾಗುತ್ತದೆ. ಹಳ್ಳಿ ಗಮಾರನಾದ ಮಂದಣ್ಣನಿಗಾಗಿ ವಿಜ್ಞಾನಿಯಾದ ಕರ್ವಾಲೋ ಎಂತಹ ಸಹಾಯಕ್ಕೂ ಸಿದ್ಧರಾಗಿರುವ ಸಂಗತಿ ಸ್ವತಃ ತೇಜಸ್ವಿಯವರಲ್ಲಿ ಕೂಡ ಆಶ್ಚರ್ಯದ ಜೊತೆಜೊತೆಗೆ ಅನುಮಾನವನ್ನೂ ಹುಟ್ಟಿಸುತ್ತದೆ. ಆದರೆ ಕರ್ವಾಲೋ ನಂತರ ಹೇಳುವ ವಿಷಯವನ್ನು ಕೇಳಿದ ಮೇಲೆ ಅವರು ಮಂದಣ್ಣನ ಬಗ್ಗೆ ಹೊಂದಿರುವ ಆಸಕ್ತಿಗೆ ಕಾರಣ ಸಿಗುತ್ತದೆ. ಅದೇನೆಂದರೆ ಈಗ್ಗೆ ಸಾವಿರದ ಎಂಟುನೂರ ಹದಿನೇಳರಲ್ಲಿ ಒಬ್ಬ ಪಾದ್ರಿ ಆಫ್ರಿಕಾದ ಅರಣ್ಯದಲ್ಲಿ ಕಂಡಿದ್ದ ‘ಫ್ಲೇಯಿಂಗ್ ಲಿಸರ್ಡ’ ನ್ನು ಇತ್ತೀಚೆಗಷ್ಟೇ ನಾರ್ವೆ ಕಾಡುಗಳಲ್ಲಿ ಕಂಡಿದ್ದ ಮಂಜಣ್ಣ. ಈ ವಿಷಯವನ್ನು ಕರ್ವಾಲೋರಿಗೆ ತಿಳಿಸಿದಾಗ ಅವರು ರುಮೇನಿಯಾದ ಫ್ರೊಫೆಸರ್ ರೂವಸ್ಕಿ ಹಾಗೂ ಅಮೇರಿಕೆಯ ಸಂಶೋಧನಾ ಸಂಸ್ಶೆಗಳ ಜೊತೆ ಪತ್ರ ವ್ಯವಹಾರ ನಡೆಸಿದ್ದರು. ಕೂಡಲೇ ಹಲವಾರು ಜಾಗತಿಕ ಸಂಸ್ಥೆಗಳು ಈ ಸಂಶೋಧನೆಗೆ ಧನ ಸಹಾಯ ಮಂಜೂರು ಮಾಡಲು ಮುಂದಾಗಿರುವ ವಿಷಯವನ್ನು ತಿಳಿಸಿದರು. ಆಗ ಲೇಖಕರೂ ಸೇರಿ, ಎಲ್ಲರ ಬಾಯಿಂದ ಮಾತೇ ಹೊರಡುವುದಿಲ್ಲ. ನಂತರ ಅರಣ್ಯದಲ್ಲಿ ಆ ‘ಹಾರುವ ಓತಿ’ ಯ ಅನ್ವೇಷಣೆಗೆ ಬೇಕಾಗುವ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಕರ್ವಾಲೋ, ಮಂಜಣ್ಣ, ಲೇಖಕರು, ಶೀನಪ್ಪ, ಪ್ರಭಾಕರ ಜೊತೆಗೆ ಕಿವಿ, ನಾರ್ವೆಯ ಕಾಡಿಗೆ ಹೊರಡುತ್ತಾರೆ. ಅತ್ಯಂತ ಸುದೀರ್ಘವಾದ ಈಚಲು ಕಾಡನ್ನು‌ ಪ್ರಯಾಸದಿಂದ ದಾಟಿ ,ಓತಿಯ ಹುಡುಕಾಟ ಆರಂಭವಾಗುತ್ತದೆ. ಈ ಮಧ್ಯೆ ಕಾಡಿನಲ್ಲಿ ಹಾವಾಡಿಗರ ಎಂಗ್ಟ ಸಹ ಇವರ ತಂಡವನ್ನು ಸೇರಿಕೊಳ್ಲುತ್ತಾನೆ.ಹಲವಾರು ದಿನಗಳ ನಂತರ ಒಮ್ಮೆ ಲೇಖಕರೊಬ್ಬರೇ ಕುಳಿತಿರುವಾಗ ಅಚಾನಕ್ ‘ಹಾರುವ ಓತಿ’ ಇವರ ಕಣ್ಣಿಗೆ ಬೀಳುತ್ತದೆ. ಇದನ್ನು ಇತರರಿಗೆ ತೋರಿಸಲು ಲೇಖಕರು ಬಹಳ ಪ್ರಯಾಸ ಪಡಬೇಕಾಗುತ್ತದೆ‌. ಏಕೆಂದರೆ ಅದು ಮರದ ಮೇಲೆ ಕುಳಿತಿದ್ದಾಗ ಮರದ ತೊಗಟೆಯ ಬಣ್ಣವನ್ನು ಹೊಂದಿ, ಮರಕ್ಕೂ ಮತ್ತು ಅದಕ್ಕೂ ಕಿಂಚಿತ್ ಕೂಡ ವ್ಯತ್ಯಾಸವೇ ಇರುತ್ತಿರಲಿಲ್ಲ. ಕೊನೆಗೆ ಮಂದಣ್ಣ, ಶೀನಪ್ಪ, ಎಂಗ್ಟನ ಹರಸಾಹಸದ ನಡುವೆಯೂ ಆ ಹಾರುವ ಓತಿ ಅವರ ಕೈಗೆ ಸಿಗದೆ, ತಪ್ಪಿಸಿಕೊಂಡು ಕಾಡಿನ ಅನಂತದಲ್ಲಿ ಲೀನವಾಗಿಬಿಡುತ್ತದೆ. ಪ್ರಭಾಕರ ತನ್ನ ಕ್ಯಾಮರಾನಲ್ಲಿ ಒಂದಷ್ಟು ಫೋಟೋಗಳನ್ನು ತೆಗೆದದಷ್ಟೇ ಲಾಭವಾಗುತ್ತದೆ. ಒಟ್ಟಾರೆಯಾಗಿ ಇಡೀ ಕಾದಂಬರಿಯ ಉದ್ದಕ್ಕೂ ಕುತೂಹಲವನ್ನು ಕಾಯ್ದುಕೊಂಡು ಓದುಗರನ್ನು ತುದಿಗಾಲಲ್ಲಿ ನಿಲ್ಲಿಸುವ ಕುತೂಹಲಕಾರಿ ಕಾದಂಬರಿಯಲ್ಲಿ ಮಂದಣ್ಣನ ಮದುವೆಯ ಹಾಸ್ಯವೂ ಸೇರಿ ಓದುಗರನ್ನು ರಂಜಿಸುತ್ತದೆ. ********************** ಅರುಣ ರಾವ್

Read Post »

ಇತರೆ, ಲಹರಿ

ಲಹರಿ ಅಕ್ಕ , ನೀನು ಯಾರಿಗೆ ಮಗಳಾಗಿದ್ದೆ ? ವೀಣಾ ದೇವರಾಜ್   ಮಗಳೇ ನೀನು ಯಾರಿಗೆ ಮಗಳಾಗಿದ್ದೆ. ಮಗಳ ಪ್ರೀತಿ ನಿನಗೆ ಗೊತ್ತೇ. ಅದನ್ನು ಎಂದಾದರೂ ಅನುಭವಿಸಿದ್ದೀಯಾ. ಹೇಗಿರಬಹುದೆಂದು ಯೋಚಿಸಿದ್ದೀಯ ಅಥವಾ ಬಯಸಿದ್ದೆಯ? ಒಮ್ಮೆ ಯೋಚಿಸಿ ನೋಡೋಣ… ಹಾಂ,ಸಿನೆಮಾದಲ್ಲಿ,, ಪುಟಾಣಿ ಪಾಪು , ಅದೇನು ಚೆಂದ,ಅಪ್ಪ ಅಮ್ಮನ ಮುದ್ದು ಮಗು ತಮ್ಮಿಷ್ಟದಂತೆ  ಅದನ್ನು ಸಿಂಗರಿಸಿದ್ದಾರೆ ನೋಡಿದವರೆಲ್ಲಿ ಕಣ್ಣುಬಿಟ್ಟು ದೃಷ್ಟಿ ತಾಗುವುದೋ ಎಂದು ದೃಷ್ಟಿಬೊಟ್ಟನ್ನೂ  ಇಟ್ಟಿದ್ದಾರೆ. ಒಂದು ನಿಮಿಷವೂ ಒಂಟಿಯಾಗಿ ಬಿಟ್ಟಿಲ್ಲ. ಇನ್ನೇನು ಶಾಲೆಗೆ ಸೇರಿಸುವ ವಯಸ್ಸು ಬಂತು, ಪೋಷಕರು ಗಟ್ಟಿ ಧೈರ್ಯಮಾಡಿ ಶಾಲೆಗೆ ಕಳಿಸುತ್ತಾರೆ. ಅವಳ ಒಂದೊಂದೇ ಹೊಸಹೊಸ ಕಲಿಕೆಗಳನ್ನು ನೋಡಿ ಬೀಗುತ್ತಾರೆ. ಅಪ್ಪ, ಇವಳು ಎಲ್ಲಾ ನನ್ನಂತೆ ಅಂತಾನೆ , ಅಮ್ಮ ಇಲ್ಲ ಅವ್ಳು ನನ್ನಂತೆ ಅನ್ನುತ್ತಾಳೆ. ಮನೆಗೆ ಬಂಡ ಕೂಡಲೇ ಅಪ್ಪ, ಅಮ್ಮ ತುತ್ತು ಮಾಡಿ ಉಣಿಸುತ್ತಾರೆ ಆಟವಾಡಿಸುತ್ತಾರೆ , ಅವಳಾಡುವ ಆಟದಲ್ಲಿ ತಾವೂ ಭಾಗಿಯಾಗಿ ಖುಷಿಪಡುತ್ತಾರೆ. ಅವಳು ಆಟವಾಡುತಿದ್ದರೆ, ಮನೆ ಪಾಠ ಮಾಡುತಿದ್ದರೆ, ಬರೆಯುತ್ತಿದ್ದರೆ  ಅವಳಿಗೆ ತೊಂದರೆಯಾಗಬಾರದೆಂದು ತಾವೇ ಉಣಿಸುತ್ತಾರೆ. ನಸುಕಿನಲ್ಲೇ ಎದ್ದು ಮಗಳಿಗಿಷ್ಟವಾದ ತಿಂಡಿ ತಿನಿಸುಗಳನ್ನು ಅಮ್ಮ ಮಾಡಿದರೆ , ಅಪ್ಪ ಬೇಗಬೇಗನೆ ತನ್ನೆಲ್ಲ ಕೆಲಸಗಳನ್ನು ಮುಗಿಸಿ ಶಾಲೆಗೆ ತಾನೇ ಹೋಗಿ ಬಿಟ್ಟುಬರುತ್ತಾನೆ. ಮಗಳಿಗಾಗಿ ತಮ್ಮೆಲ್ಲವನ್ನೂ    ವ್ಯಯಿಸುತ್ತಾರೆ. ಅವ್ಳು ಕೇಳಿದ್ದನ್ನೆಲ್ಲ ತಂದು  ಕೊಡುತ್ತಾರೆ , ಪ್ರೀತಿಯ ಸುರಿಮಳೆಗರೆಯುತ್ತಾರೆ. ನೋಡಲು ಎಷ್ಟು ಚೆಂದ. ಮಗಳು ಮದುವೆಗೆ ಬಂದಾಗ ವಿಜೃಂಭಣೆಯಿಂದ ಮದುವೆ ಮಾಡುತ್ತಾರೆ ಕರುಳಕುಡಿಯನ್ನು ಬೇರೆಯವರ ಮನೆಗೆ ಕಳಿಸುವಾಗ ಅವಳ ಅತ್ತೆ ಮಾವ ಗಂಡನನ್ನು ತನ್ನ ಕೂಸನ್ನು ಚೆನ್ನಾಗಿ ನೋಡಿಕೊಳ್ಳಿರೆಂದು ಬೇಡಿಕೊಳ್ಳುತ್ತಾರೆ , ಬಿಕ್ಕಿಬಿಕ್ಕಿ ಅಳುತ್ತಾರೆ. ಅಂದಿಗೆ ಆ ಮನೆಯ ಋಣ ಮುಗಿಯಿತೇ ಗೊತ್ತಿಲ್ಲ.     ಎಂದೋ ಒಮ್ಮೆ ತವರಿಗೆ ಬರುವ ಮಗಳು ಅತಿಥಿಯಾಗಿಬಿಟ್ಟಿರುತ್ತಾಳೆ. ಮೊದಲಿನಂತೆ ಸಲೀಸಾಗಿ ಏನೊಂದನ್ನೂ ಮಾಡಲು ಹಿಂಜರಿಯುತ್ತಾಳೆ, ಅದು ತಾ ಹುಟ್ಟಿ ಬೆಳೆದ ಮನೆ, ಅಪ್ಪಅಮ್ಮನ ಕೈ ತುತ್ತು ತಿಂದು ಬೆಳೆದ ಮನೆ ಎನ್ನುವುದನ್ನು  ಮೆಲುಕುಹಾಕಿಕೊಂಡು ಸಂಕಟಪಡುತ್ತಾಳೆ. ತನ್ನ ಗೆಳತಿಯರ ಮನೆಗೆ ಹೋದರೆ ಅಲ್ಲಿ ಅವರೂ ಇಲ್ಲ ಎಲ್ಲ ತಮ್ಮ ಗಂಡನ ಮನೆಯಲ್ಲಿದ್ದಾರೆ. ಎಲ್ಲಾ ಹೆಣ್ಣು ಮಕ್ಕಳದೂ ಹೀಗೆಯೇ ಮನಸ್ಥಿತಿಯೇ ಎಂದು ಕೊರಗುತ್ತಾಳೆ. ಅಪ್ಪಅಮ್ಮನ ಹೇಳಿಕೊಳ್ಳಲಾರದೆ ಮನಸ್ಸಿನಲ್ಲೇ ಕೊರಗುತ್ತಾಳೆ. ಅಮ್ಮ ಮಾತುಮಾತಿಗೂ ಅತ್ತಿಗೆಯ ಹೆಸರನ್ನೇ ಕರೆಯುತ್ತಾರೆ ,ಅಪ್ಪ ನಾನು ಬಂದ್ದಿದ್ದೇನೆಂದು ಮನೆಗೆ ಬೇಗನೆ ಬರುವುದು ಹೋಗಲಿ, ಬಂದವರೇ ತನ್ನ ಗೆಳೆಯರನ್ನು ನೋಡಲು ಹೋಗುತ್ತಾರೆ. ಅಣ್ಣನೂ  ಮೊದಲಿನಂತೆ ಚೇಷ್ಟೆಯ ಮಾತುಗಳಿಲ್ಲ ,ಕೆಣಕುವುದೂ ಇಲ್ಲ.ಅಮ್ಮನ ಬಳಿ ಏನಾದರು ಏಕಾಂತದಲ್ಲಿ ಹೇಳಿಕೊಳ್ಳಬೇಕೆಂದರೆ ಯಾವಾಗಲೂ ಅತ್ತಿಗೆಯೋ ಅಣ್ಣನೋ ಇರುತ್ತಾರೆ.  ಯಾಕೆ ಹೀಗಾಯಿತು, ತವರಿನ ಪ್ರೀತಿ ಕಡಿಮೆಯಾಯಿತೇ, ತನ್ನ ಮೇಲಿನ ಹೆತ್ತವರ ಜವಾಬ್ದಾರಿ ಮುಗಿಯಿತೇ? ಈಗ ಅಪ್ಪಅಮ್ಮನಿಗೆ ನಾನು ಮಗಳಲ್ಲವೇ ಏಕೆ ಹೀಗೆ? ತನ್ನಿಂದಾದ ತಪ್ಪೇನು, ಇದನ್ನು ಹೇಗೆ ಸರಿ ಮಾಡುವುದು, ತಾನೇನು ಮಾಡಿದರೆ ತನ್ನ ತವರು ಮೊದಲಿನಂತಾಗುತ್ತದೆ , ದೇವರೇ ಏನು ಮಾಡಲಿ. ಇನ್ನು ಅಲ್ಲಿರುವುದು ಬೇಡವೆನಿಸಿ ತನ್ನಿನಿಯನ ಆಸರೆ ಬಯಸಿ  ಹೊರಡುತ್ತಾಳೆ. ತನ್ನಿನಿಯನ ತೋಳ್ತೆಕ್ಕೆಯಲ್ಲೇ ಅಪ್ಪಅಮ್ಮನ,ಅಣ್ಣನ ಪ್ರೀತಿ,ವಾತ್ಸಲ್ಯವನ್ನೂ , ತನ್ನ ಸಖಿಯರ ಸಂಗವನ್ನೂ ಕಾಣುತ್ತಾಳೆ. ಜಗವನ್ನೇ ಮರೆಯುತ್ತಾಳೆ. ಅವನೇ ತನ್ನ ಜಗತ್ತು, ಅವನಿಲ್ಲದೆ ತಾನಿಲ್ಲ. ಅವನುಸಿರೇ ತನ್ನುಸಿರು ಎಂದುಕೊಳ್ಳುತ್ತಾಳೆ. ಆದರೆ ಆ ಒಂದು ಕರಾಳ  ದಿನ ವಿಧಿಯ ದೃಷ್ಟಿತಾಗಿ ,ಅವಳ ಉಸಿರೇ ಅವಳ ಜೊತೆಗಿಲ್ಲ , ಅವಳ ಜಗತ್ತೇ ಇಲ್ಲವಾದಾಗ ,,,,,,,,  ಎಲೆ, ಹಾರುವ ಹಕ್ಕಿಗಳೇ ನೀವು “ನನ್ನುಸಿರ”ನ್ನು ಕಂಡಿರಾ? ಎಲೆ ಸಂಪಿಗೆಮರವೇ, ಎಲೆ ಹೊಂಗೆ ಮರವೇ ನೀವು ಬೀಸುವ ತಂಗಾಳಿಯಲ್ಲಿ  ದೇವನ ಬಿಸಿಯುಸಿರಿನ ಅನುಭವವಾಯಿತೇ? ಎಲೈ ಭೂಮಿ ತಾಯಿಯೇ ನೀನೆ ಬ್ರಹ್ಮಾಂಡವೆನ್ನುತ್ತಾರೆ. ನಿನ್ನ  ಮಡಿಲಲ್ಲೇನಾದರೂ ಬಚ್ಚಿಟ್ಟುಕೊಂಡು ನನ್ನೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವನೋ ಒಮ್ಮೆ ನೋಡುವಿಯ ತಾಯೆ? ತಾನಿಲ್ಲದ ಜಗತ್ತು ಅವಳಿಗೆ ದುಸ್ತರವೆಂದು ತಿಳಿದೂ ದೇವನೇಕೆ ನನ್ನ ಕಣ್ಣಿಗೆ ಕಾಣುತಿಲ್ಲ. ಅವಳೆಲ್ಲಿಗೆ ಹೋಗುವುದು,ಯಾರ ಬಳಿಗೆ ತನ್ನ  ನೋವನಿವೇದಿಸಿಕೊಳ್ಳುವುದು,,,,,?,,,,,? ನೀವೂ ಹೇಳಲಾರಿರೆ,,,,,,,,,?,,,,,     ಅವಳು ಯಾರ ಮಗಳು? ,,,,,,,,,,? “ಇಂದು ನಾನು ಒಂಟಿ ! ನೀನು ಅದ್ಹೇಗೆ ಬಿಟ್ಟು ಹೋದೆ ಎಂದಿಗೂ ಒಬ್ಬಳನ್ನು ಬಿಡಲಾರದ ನಿನಗೆ ಹೇಗೆ ಮನಸ್ಸು ಬಂತೋ ನಾ ಕಾಣೆ ,ನಾನೀಗ ಇನ್ನೊಬ್ಬರಿಗೆ ಭಾರವಾದೆ. ನಾನೊಂದು ಚೆಂಡಿನಂತಾದೆ. ನಾನು ನಿನ್ನದೇ ವಸ್ತುವೆಂದು ನನ್ನ ಪೋಷಕರು ನಿನ್ನ ಸುಪರ್ದಿಗೆ ವಹಿಸಿದ್ದರು. ನಿನಗೂ ನಾನು ಬೇಡವಾಗಿಬಿಟ್ಟೆ. ಈಗ ಚೆಂಡು ಯಾರ ಬಳಿ ಇದೆಯೋ ಗೊತ್ತಿಲ್ಲ. ನನಗೊಂದು ಸ್ಥಿರವಾದ ಜಾಗವಿಲ್ಲವೇ ದೇವರೇ? ಎಲ್ಲೆಲ್ಲಿಗೆ ಅಂತ ಓಡಾಡಬೇಕು ತಿಳಿಯುತ್ತಿಲ್ಲ ಈ ಯಕ್ಷ ಪ್ರಶ್ನೆಗೆ ಉತ್ತರವಿಲ್ಲವೇ? *************************

Read Post »

ಇತರೆ

ಕಾದಂಬರಿ ಕುರಿತು` ಬೆಟ್ಟದ ಜೀವ ಡಾ.ಶಿವರಾಮ ಕಾರಂತ ಶಾಂತಲಾ ಮಧು ನನ್ನ ನೆಚ್ಚಿನ “ಬೆಟ್ಟದ ಜೀವ”ಕಾದಂಬರಿಯ ಒಂದು ನೋಟ” “”ಬಾನಿನಲ್ಲಿ ಸೂರ‍್ಯನು ತುಸುವಾಗಿ ಮೇಲಕ್ಕೇರುತ್ತಾನೆ- ಎಂದಂತೆ ಒಮ್ಮೆಗೇ ಅವನ ರಶ್ಮಿಗಳು ಬೆಟ್ಟದ ತೆಂಕು ಮಗ್ಗುಲಿನ ಹಸುರನ್ನೆಲ್ಲ ಬೆಳಕಿಂದ ತೊಯ್ಯಿಸಿಬಿಟ್ಟವು! ಆ ಅಪೂರ್ವದ ನೋಟವು ಎಂದೂ ಮರೆಯುವಂಥದಲ್ಲ. ಆ ತನಕ- ಕಠಿಣವೂ ನಿರ‍್ದಾಕ್ಷಿಣ್ಯವೂ ಆಗಿ ನಿಂತ ಬೆಟ್ಟಕ್ಕೆ ಒಂದು ಬದಿಯಲ್ಲಿ ಮೃದುವಾದ ಹೃದಯವಿದ್ದಂತೆ ಕಂಡಿತು. ನೋಡುತ್ತಾ ನಿಂತಂತೆ, ಕೆಂಪಡರಿದ ಬಾನಿನ ಕಣ್ಣು ಕ್ರೂರವಾಗುತ್ತ ಬೆಂದ ಕಬ್ಬಿಣವನ್ನು ಕರಗಿಸಲು ಬಂದಂತೆ ಕಾಣಿಸಿತು. ಆ ಬಾನಿನ ಮುಂದೆ, ಬೆಟ್ಟವು ಗಂಡುಗಲಿಯಂತೆ ಈ ತನಕ ಕಂಡುದು, ನಮ್ರತೆಯ ಮುದ್ದೆಯಾದ ಹೆಣ್ಣಾಯಿತು. ಹಸುರು ಕವಚದ ಮೇಲೆ ನೀರ ಸೀರೆ ತೊಟ್ಟು ಬೇಟಕ್ಕೆ ನಿಂತ ಅಂಗನೆಯಾಯಿತು, ಆದರೆ ದಿಗಂಗನೆಯ ಧಿಮಾಕಿನ ಮುಂದೆ ಬೆಟ್ಟದಂಗನೆ, ಅತ್ತೆಯ ಮುಂದೆ ನಾಚಿಕೊಂಡು ನಿಂತ ಸೊಸೆಯಾದಳು. “ “ಹಿಂದಿನ ದಿನ ಅದೇ ಬೆಟ್ಟ ನನಗೆ ಮೊಸರು ಗದ್ದೆಯಲ್ಲಿ ನಿಂತ ನೀಲ ಕಡೆಗೋಲಿನಂತೆ ಕಾಣಿಸಿತ್ತು. ಇಂದು ಹಿಮದ ಮೊಸರಿರಲಿಲ್ಲ. ನನ್ನೆದುರಿನ ಬೆಟ್ಟ ತನ್ನ ದಿಟ್ಟತನದಿಂದ, ಔನ್ನತ್ಯದಿಂದ ನನ್ನಂಥ ಎಷ್ಟೆಲ್ಲಾ ವ್ಯಕ್ತಿಗಳ ಎದೆಯನ್ನು ಭೀತಿಗೊಳಿಸಿ ತಲ್ಲಣಿಸಿರಬೇಕೋ ತಿಳಿಯೆ.” ಪ್ರಸಿದ್ಧ ಕಾದಂಬರಿಕಾರರೆಂದೇ ಹೆಸರಾದ ಕೋಟ ಡಾ|| ಶಿವರಾಮ ಕಾರಂತರ (೧೯೦೨-೧೯೯೭) ‘ಬೆಟ್ಟದ ಜೀವ’ ಕಾದಂಬರಿಯ ಅವಿಸ್ಮರಣೀಯ ಸಾಲುಗಳು ಇವು. ಶಿವರಾಮಕಾರಂತರ ಬೆಟ್ಟದ ಜೀವ ಕಾದಂಬರಿಯಲ್ಲಿ ಬರುವ ಪ್ರಕೃತಿಯ ವರ್ಣನೆ ಬಣ್ಣಿಸಲಸದಳ, ಅದೆಷ್ಟು ಬಾರಿ ಓದಿದರೂ ಕಾದಂಬರಿಯ ಆ ಅಪೂರ್ವ ಚೆಲುವು ಚಿರನೂತನವೆ. ಬೆಟ್ಟದಲ್ಲಿ ಜೀವಿಸುತ್ತಿರುವ, ಜೀವಿಗಳ ಉಸಿರಿಗೆ ಉಸಿರಾದ ಪ್ರಕೃತಿಯನ್ನು ಭಾವನೆಗೆ ಭಾವಚಿತ್ರವಾಗಿಯೂ ಪ್ರತಿಬಿಂಬಿಸಿರುವುದು ನಮ್ಮ ಮಲೆನಾಡಿನ ಹೆಮ್ಮೆಯ ಕಾದಂಬರಿಕಾರರಾದ ಕಾರಂತರ ವಿಶೇಷ. ಇವರು ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರ ನಿರ್ದೇಶಕರು ಹಾಗೂ ಚಿಂತಕರು ಎಂದು ಹೆಸರಾಗಿದ್ದಾರೆ. ಸಾಹಿತ್ಯದ ಹಲವು ಪ್ರಕಾರದಲ್ಲಿ ಕೆಲಸ ಮಾಡಿದ ಇವರ, ವಿಜ್ಞಾನ ಸಾಹಿತ್ಯ ಮಕ್ಕಳ ಸಾಹಿತ್ಯಗಳು ವಿಶೇಷ ಮನ್ನಣೆ ಪಡೆದಿವೆ. ತಮ್ಮ ‘ಮೂಕಜ್ಜಿಯ ಕನಸುಗಳು’ ಕಾದಂಬರಿಗೆ ‘ಜ್ಞಾನಪೀಠ ಪ್ರಶಸ್ತಿ’ ಪಡೆದು ಕನ್ನಡ ಹಿರಿಮೆಯನ್ನು ಹೆಚ್ಚಿಸಿದ ಮಹನೀಯ ಈತ, ಇತಿಹಾಸಕಾರ ‘ರಾಮಚಂದ್ರ ಗುಹ’ ಅವರು ಕಾರಂತರನ್ನು ಸ್ವಾತಂತ್ರ್ಯೋತ್ತರ ಭಾರತದ ‘ರವೀಂದ್ರನಾಥ ಠಾಕೂರ್’ ಎಂದು ಕರೆದಿರುವುದರಲ್ಲಿ ಅತಿಶಯೋಕ್ತಿಯಿಲ್ಲ. ಅವರ ಎಲ್ಲಾ ಕೃತಿಯನ್ನು ಓದಿ ಆನಂದಿಸಿದ ನನಗೆ ‘ಮರಳಿ ಮಣ್ಣಿಗೆ’ ಮತ್ತು  ‘ಬೆಟ್ಟದ ಜೀವ’ ಹೆಚ್ಚು ಅಪ್ಯಾಯಮಾನವಾಯಿತು. ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾದ ಅವರ, ‘ಚೋಮನ ದುಡಿ’ ‘ಅಳಿದ ಮೇಲೆ’ ಬಹು ಚರ್ಚಿತ ಕಾದಂಬರಿಗಳು. ಮಲೆನಾಡಿನ ಅಂಗಳದಲ್ಲಿ ಬೆಳೆದ ನನಗೆ ಅವರ ಯಕ್ಷಗಾನ ಕುಣಿತ, ನೋಡುವ ಹಾಗೂ ಅವರ ಒಡನಾಟ, ಮಾತುಗಳನ್ನು ಕೇಳುವ ಅವಕಾಶ ದೊರೆಕಿದ್ದು ನನ್ನ ಪುಣ್ಯ ಎನ್ನಬೇಕು. ‘ಬೆಟ್ಟದ ಜೀವ’ ಕಾದಂಬರಿಯಲ್ಲಿ ಬರುವ ಪಾತ್ರಗಳ ಮಾತು, ನಡೆ-ನುಡಿಗಳು, ಕಥೆಯ ಹರಿವು ನನಗೆ ನನ್ನ ಅಕ್ಕಪಕ್ಕದ ಮನೆಯ ದಿನನಿತ್ಯ ಜೀವನದ ಚಿತ್ರಣ ಎನ್ನುವಂತೆ ಭಾಸವಾಗುತ್ತದೆ. ಓದುತ್ತ ಓದುತ್ತಾ. ನಾನೂ ಅದರಲ್ಲಿ     ಒಬ್ಬಳಾಗಿ ಬಿಡುತ್ತೇನೆ. ಬೆಟ್ಟದ ಜೀವ ಒಂದು ಸಣ್ಣ ಹವ್ಯಕ ಸಂಸಾರದ ಬಗ್ಗೆ ಡಾ! ಶಿವರಾಮ ಕಾರಂತರು ಬರೆದ ಅಪರೂಪದ ಕೃತಿ. ಈ ಕುಟುಂಬ ಒಂದು ಬೆಟ್ಟದ ಮೇಲೆ ವಾಸವಾಗಿರುತ್ತದೆ. ಪೂರ‍್ತಿ ಕಾದಂಬರಿ, ಈ ಕುಟುಂಬದ ಅತಿಥಿ ಸತ್ಕಾರ, ಅವರ ಕಷ್ಟಗಳು, ಜೀವನ ಕ್ರಮ, ಅವಿರತ ಶ್ರಮದ ಮೇಲೆ ಮೂಡಿಬಂದಿದೆ. ಸುಬ್ರಹ್ಮಣ್ಯದ ಕಾಡಿನಲ್ಲಿ ನಡೆಯುವಾಗ ದಾರಿತಪ್ಪಿ ಹೋದ ಲೇಖಕರು ಅದೇ ಕಾಡಿನ ಮೂಲೆಯಲ್ಲಿ ವಾಸವಿದ್ದ ಗೋಪಾಲಯ್ಯ ಹಾಗೂ ಶಂಕರಮ್ಮ ಎನ್ನುವ ಹವ್ಯಕ ದಂಪತಿಗಳ ಆದರ ಆತಿಥ್ಯಗಳಿಗೆ ಕಟ್ಟುಬಿದ್ದು, ನಾಲ್ಕುದಿನ ತಂಗಿ, ಅವರ ಮಾತುಗಳಿಂದ ಆ ಕುಟುಂಬದ ಕಥೆಯನ್ನು ತಿಳಿದುಕೊಳ್ಳುತ್ತಾರೆ. ಆ ಕುಟುಂಬದಲ್ಲಿ ಇರುವುದು ಇಬ್ಬರೇ. ಮಗ ಇಂಗ್ಲೀಷ್ ವಿದ್ಯಾಭ್ಯಾಸ ಮುಗಿಸಿ ಪೇಟೆಗೆ ಹೋಗಿ ಮರಳಿ ಎಂದೂ ಬಾರದೆ ಹೋಗುತ್ತಾನೆ. ಅವನ ದಾರಿಯನ್ನು ಕಾಣುವ ಈ ವೃದ್ಧ ದಂಪತಿಗಳ ಮುಗ್ಧತೆ ಹಾಗು ಶುದ್ಧ ಜೀವನ ಪ್ರಕೃತಿ ದತ್ತವಾಗಿ ಬಂದದನ್ನು ಎದುರಿಸುವ ದಿಟ್ಟತನ ಕಾದಂಬರಿಯಲ್ಲಿ  ಅತ್ಯಂತ ಸಹಜವಾಗಿ ಮೂಡಿಬಂದಿದೆ. ಎಲ್ಲಿಂದಲೋ ಬಂದ ಅಪರಿಚಿತ ವ್ಯಕ್ತಿಯನ್ನು ಆಧರಿಸಿ ಯಾವುದೇ ಅನುಮಾನಗಳಿಗೆಡೆಗೊಡದೆ ಗೋಪಾಲಯ್ಯ ದಂಪತಿಗಳು ತಮ್ಮ ಸಕಲ ಕಷ್ಟ ಕಾರ‍್ಪಣ್ಯಗಳನ್ನು, ಜೀವನದ ಸುಖದ ರಸಘಳಿಗೆಗಳನ್ನು ಲೇಖಕನ ಜೊತೆಗೆ ಹಂಚಿಕೊಳ್ಳುತ್ತಾರೆ. ವೃದ್ಧಾಪ್ಯದಲ್ಲಿ ಅವರನ್ನು ಅತಿಯಾಗಿ ಕಾಡುವ ಮಗನ ಅಗಲಿಕೆ, ಗೋಪಾಲಯ್ಯ – ದಂಪತಿಗಳ ಮಗನ ಅಗಲಿಕೆಯ ನೋವು ಇಡೀ ಕಾದಂಬರಿಯ ವಸ್ತು. ‘ಎಲ್ಲಾ ಇದ್ದೂ ಏನೂ ಇಲ್ಲ’ ವಿಧಿಯ ಈ ಆಟಕ್ಕೆ ಆತಂಕ, ದುಃಖ ಇದ್ದರೂ ಅದನ್ನು ಎದುರಿಸುವ ದಿಟ್ಟತನ, ‘ಪಾಲಿಗೆ ಬಂದದ್ದು ಪಂಚಾಮೃತ’ ಎಂದು ಸ್ವೀಕರಿಸುವ ಅವರ ಮನಸ್ಥಿತಿಯಲ್ಲಿ ಎದ್ದು ಕಾಣುತ್ತದೆ. “ನಿಜ, ನನಗೆ ಈ ನೆನಪು ಬಂತೆಂದರೆ – ಗಳಿಗೆಯಲ್ಲ, ದಿನವೇ ಕಣ್ಮರೆಯಾಗುತ್ತದೆ. ಗಂಡುಸಾದ ನನಗೇ ಹೀಗಾದ ಮೇಲೆ, ಅವಳ ಹೃದಯ ಏನಾಗಬೇಡ! ಆದರೆ ಫಲವೇನು? ಅವನು ತಿರುಗಿ ನಮ್ಮ ಮನೆಗೆ ಬಂದಾನು ಎಂದು ಅನಿಸುವುದಿಲ್ಲ”. “ಆದರೆ ದೇವರ ಇಚ್ಛೆಯೇ ಹಾಗಿದ್ದರೆ ಯಾರೇನು ಮಾಡಿಯಾರು?” ಅವರ ಈ ಮಾತುಗಳು ಅವರ ಪೂರ್ತಿ ಜೀವನದ ದರ್ಶನ ಮೂಡಿಸುತ್ತದೆ. ಇಳಿ ವಯಸ್ಸಿನಲ್ಲೂ ಬತ್ತದ ಜೀವನೋತ್ಸಾಹ, ಅತಿಥಿಯನ್ನು ಆದರಿಸುವ ಪರಿ, ಮಲೆನಾಡಿನ ಕೌಟುಂಬಿಕ ವ್ಯವಸ್ಥೆ, ಜನರಿಗೆ ಹಿಡಿದ ಇಂಗ್ಲಿಷ್ ವಿದ್ಯಾಭ್ಯಾಸದ ಹುಚ್ಚು, ಮಲೆನಾಡಿನ ಕೃಷಿವ್ಯವಸ್ಥೆ, ಬೇಟೆ ಪದ್ಧತಿ ಎಲ್ಲವೂ ಕಾದಂಬರಿಯಲ್ಲಿ ಅತೀ ಸುಂದರವಾಗಿ ಹಾಗು ಸಾದೃಶ್ಯವಾಗಿ ಚಿತ್ರಿತವಾಗಿದೆ. ಗೋಪಾಲಯ್ಯ, ಶಂಕರಮ್ಮ, ಶಿವರಾಮ, ದೇರಣ್ಣ, ಬಟ್ಯ, ಕಾಟು ಮೂಲೆ ನಾರಾಯಣ ಮೊದಲಾಗಿ ನಾಮಾಂಕಿತರಾದ ಕಾಡುವ ಪ್ರಾದೇಶಿಕ ವ್ಯಕ್ತಿ ಚಿತ್ರಗಳು; ಹುಲಿ ಬೇಟೆ, ಪಂಜ, ಗಿಡ್ಡಿನ ಕಾಫಿ, ಮಜ್ಜಿಗೆ ಹುಳಿ, ಎಣ್ಣೆ ಸ್ನಾನ, ಕುಮಾರಪರ‍್ವತವೇ ಮೊದಲಾದ ಬೆಟ್ಟಗಳ ದೃಶ್ಯ ಚಿತ್ತಾರ; ಆ ಬೆಟ್ಟಗಳಿಂದ ಹಳ್ಳಿಗಳ ಹೊಲಗದ್ದೆಗಳಿಗೆ ನುಗ್ಗುವ ಆನೆ, ಕಾಟಿ, ಕ್ರೂರ ಹುಲಿ, ಕಾಡುಹಂದಿಗಳ ದಾಂಧಲೆ; ಇವೇ ಮೊದಲಾಗಿ ಸುತ್ತಲಿನ ಹಳ್ಳಿಗಳಿಗೆ ಜೀವನಾಡಿಯಾಗಿರುವ ನದಿ ಕೆರೆಗಳ ಪರಿಚಯ; ಹಳೆಯ ಕಾಲದ ಕಾಡಿನ ಜೀವನವನ್ನು ಕಣ್ಣಮುಂದೆ ಬಿತ್ತರಿಸುತ್ತದೆ. ಕಾದಂಬರಿ ಓದುತ್ತಾ ಹೋದಂತೆ ಅದರಲ್ಲಿನ ಶಿವರಾಮನ ಪಾತ್ರದಾರಿಯೇ ನಾವಾಗುತ್ತೇವೆ. ಅದುವೇ ಈ ಕಾದಂಬರಿಯ ಶಕ್ತಿ. ಕಾರಂತರ ಯಾವುದೇ ಕಾದಂಬರಿಗಳಿರಲಿ ಅದರಲ್ಲಿ ಸರ‍್ವಕಾಲಕ್ಕೂ ಸಲ್ಲುವ ಕತೆಯ ಓಘಕ್ಕೆ ತಡೆ ಒಡ್ಡದೆ ಸಹಜವಾಗಿ ಹರಿದು ಬರುವ ನುಡಿ ಮುತ್ತುಗಳಿರುತ್ತವೆ. ಆಗಿನ ಸಮಾಜದ ಸ್ಥಿತ್ಯಂತರಗಳನ್ನು, ತವಕ-ತಲ್ಲಣಗಳನ್ನು, ನೈತಿಕ ಮೌಲ್ಯ, ಪ್ರಜ್ಞೆಗಳನ್ನು ಕಟ್ಟಿಕೊಡುವ ಸಾಲುಗಳಿರುತ್ತವೆ. ಬೆಟ್ಟದ ಜೀವವು ಇದಕ್ಕೆ ಹೊರತಲ್ಲ. ಕಾದಂಬರಿಯಲ್ಲಿ ಬರುವ ನನ್ನ ನೆಚ್ಚಿನ ಸಾಲುಗಳಿವು “ನಿಮ್ಮ ಊರಲ್ಲಿ ಹೆಣ ಸುಡುವುದಾದರೂ ಕಷ್ಟವೇ! ನಮ್ಮಲ್ಲಿ ಸಾಯುವುದಂತೂ ತೀರ ಸುಲಭ; ಹೆಣ ಸುಡುವುದು ಮತ್ತೂ ಸುಲಭ. ಇಲ್ಲಿ ಬದುಕುವುದೇ ಕಷ್ಟ ನೋಡಿ” “ಮನುಷ್ಯನಿಗೆ ತಾನು ಬದುಕಿದ ಮೇಲಲ್ಲವೇ ವೇದಾಂತದ ಪಾಠ, ಬದುಕುವುದಕ್ಕೇನೆ ಮೊದಲು ವೇದಾಂತವನ್ನು ಹೇಳಿ ಫಲವಿಲ್ಲ…” “ಯಾರು ಸಾವಿಗೆ ಅಂಜುವುದಿಲ್ಲವೋ ಅಂಥವರು ಬದುಕಿಗೆ ಹೆದರಬೇಕಿಲ್ಲ, ಅಂಥವನು ಬದುಕಬಲ್ಲ” ***************************** ಶಾಂತಲಾ ಮಧು

Read Post »

ಇತರೆ

ಕಾದಂಬರಿ ಕುರಿತು ಕರ್ವಾಲೊ ಪೂರ್ಣಚಂದ್ರ ತೇಜಸ್ವಿ ಚೈತ್ರಾ ಶಿವಯೋಗಿಮಠ “ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ!” ಬರವಣಿಗೆ ಕೊಡುವ ಆನಂದಕ್ಕಿಂತ ಓದು ಕೊಡುವ ಸುಖವೇ ಆಪ್ಯಾಯಮಾನ. ಅಗಾಧವಾದ ಪ್ರಕಾರಗಳನ್ನು ಹೊಂದಿರುವಂತಹ ಸಾಹಿತ್ಯ, ಕನ್ನಡ ಸಾಹಿತ್ಯ. ಜನರಿಂದ ಹೆಚ್ಚು ಓದಲ್ಪಡುವ ಪ್ರಕಾರವೆಂದರೆ ಅದು ಕಾದಂಬರಿಗಳು. ಸಮಯ ಸವೆಸುವುದಕ್ಕೊ, ಜ್ಞಾನಾರ್ಜನೆಗೊ, ಮನೊರಂಜನೆಗೋ ಹೀಗೇ ವಿವಿಧ ಕಾರಣಕ್ಕಾಗಿ ಜನ ಕಾದಂಬರಿಗಳನ್ನು ಓದುತ್ತಾರೆ. ತೇಜಸ್ವಿಯವರ ಕಾದಂಬರಿಗಳ ವೈಶಿಷ್ಟ್ಯವೆಂದರೆ ಮನೋರಂಜನೆಯ ಜೊತೆಗೆ ವಿಜ್ಞಾನವನ್ನು, ಪ್ರಪಂಚ ಜ್ಞಾನವನ್ನು ವಿಫುಲವಾಗಿ ನೀಡುತ್ತವೆ. ತೇಜಸ್ವಿಯವರ ಕಾದಂಬರಿಗಳಲ್ಲಿ ಎಲ್ಲರೂ ಸಾಮಾನ್ಯವಾಗಿ ಮೊದಲು ಓದುವುದು ಅವರ ‘ಕರ್ವಾಲೊ’ ಕಾದಂಬರಿಯನ್ನೆ. ಧ್ಯಾನ, ತಪಸ್ಯೆಗಳಂತೆ ವಿಜ್ಞಾನವೂ ಆತ್ಮಸಾಕ್ಷಾತ್ಕಾರದ ದಾರಿ ಎಂದು ಪ್ರತಿಪಾದಿಸುವ ಕೃತಿ ಕರ್ವಾಲೊ. ಹೆಸರೇ ಸೂಚಿಸುವಂತೆ ಇದು ‘ಕರ್ವಾಲೊ’ ಎಂಬ ವಿಜ್ಞಾನಿ, ಅವನ ಅನ್ವೇಷಣೆಗಳು ಮತ್ತು ಇವೆಲ್ಲದರೊಟ್ಟಿಗೆ ತೇಜಸ್ವಿಯವರ ಅನುಭವಗಳ ಕುರಿತಾದ ಕೃತಿ. ಜೇನು ಸಾಕಾಣಿಕೆಯಿಂದ ಪ್ರಾರಂಭವಾಗುವ ಕಾದಂಬರಿ ಜೇನುಗಳ ಬಗ್ಗೆ,ಅವುಗಳ ಸಾಕಾಣಿಕೆಯ ಬಗೆಗೆ ಸಾಕಷ್ಟು ಬೆಳಕು ಚೆಲ್ಲುತ್ತದೆ. ಜೇನು ನೊಣಗಳು ಗೂಡನ್ನು ಕಟ್ಟಿ ಮಕರಂದ ಸಂಗ್ರಹಿಸೋಕೆ ಹೋದಾಗ ಗೂಡಿನ ಸ್ಥಳ ಪಲ್ಲಟ ಮಾಡಿದಾಗ ಅವಕೆ ಆಗುವ ಗೊಂದಲಗಳು, ನಾಗರಹಾವಿನಂತೆ ಬುಸುಗುಡುವ ಕರಿತುಡುವೆ ಜೇನುಗಳು ಹೀಗೇ ಹಲವಾರು ವಿಷಯಗಳನ್ನು ಬಹಳ ಸ್ವಾರಸ್ಯಕರವಾಗಿ ಹೆಣೆಯುತ್ತಾ ಹೋಗುತ್ತಾರೆ. ಕಾದಂಬರಿಯಲ್ಲಿ ಬರುವ ಪ್ಯಾರ, ಮಂದಣ, ಪ್ರಭಾಕರ, ಕರ್ವಾಲೋ, ಲೇಖಕರು ಹೀಗೇ ಎಲ್ಲಾ ಪಾತ್ರಗಳು. ಬಹಳಷ್ಟು ಆಪ್ತವೆನಿಸುತ್ತವೆ. ಕಿವಿ ಮತ್ತು ಪ್ಯಾರನ ಸನ್ನಿವೇಶಗಳು, ಮಂದಣನ ಮದುವೆಯ ಸನ್ನಿವೇಶಗಳು ಹಾಸ್ಯಭರಿತವಾಗಿದ್ದು ಓದುಗರಲ್ಲಿ ನಗೆ ಉಕ್ಕಿಸಿ ಹಗುರಾಗಿಸುತ್ತವೆ. ತನಗೇ ಅರಿವಿಲ್ಲದೆಯೇ ಮಂದಣ ಒಬ್ಬ ಒಳ್ಳೆಯ ಪರಿಸರ ವಿಜ್ಞಾನಿ ಎಂದು ಕರ್ವಾಲೋರವರು ಹೇಳಿದಾಗ ನಂಬದ ತೇಜಸ್ವಿಯವರು, ನಂತರ ಹಾಗೆ ಹೇಳುವ ಹಿಂದಿನ ಕಾರಣಗಳನ್ನು ತಿಳಿದು ನಂಬುತ್ತಾರೆ. ಹೀಗಿರುವಾಗ ಕಳ್ಳಭಟ್ಟಿಯ ವಿಚಾರದಲ್ಲಿ ಜೈಲಿಗೆ ಸೇರಿದ ಮಂದಣನನ್ನು ಬಿಡಿಸಲು ಪಡುವ ಪ್ರಯತ್ನಗಳು ಸ್ವಾರಸ್ಯಕರವಾಗಿದ್ದು ಜೊತೆಗೆ ಅಲ್ಲಲ್ಲಿ ಮಂದಣನ ನಡುವಳಿಕೆಗಳು ನಗು ತರಿಸುತ್ತವೆ. ಇಡೀ ಕಾದಂಬರಿಯ ಕೇಂದ್ರ ಬಿಂದು, ಮೂರರ ಮುಂದೆ ಏಳು ಸೊನ್ನೆ ಹಾಕಿದಾಗ ಎಷ್ಟು ವರ್ಷಗಳಾಗುತ್ತೊ ಅಷ್ಟು ವರುಷಗಳ ಹಿಂದೆ ಇದ್ದ ಹಾರುವ ಓತಿಯನ್ನ ಅನ್ವೇಷಣೆ ಮಾಡಲು ಕರ್ವಾಲೋರ ನೇತೃತ್ವದಲ್ಲಿ ಪ್ಯಾರ, ಮಂದಣ, ಪ್ರಭಾಕರ, ಕಿವಿ (ತೇಜಸ್ವಿಯವರ ಸಾಕು ನಾಯಿ) ಮತ್ತು ತೇಜಸ್ವಿಯವರು ಹೊರಡುವುದು. ಸುಮಾರು ೩೦ ಪುಟಗಳಷ್ಟು ಅನ್ವೇಷಣೆಯ ಕಥೆ ಬಹಳಷ್ಟು ರೋಚಕವಾಗಿದ್ದು ಕೊನೆಗೆ ಬೆಟ್ಟದ ತುದಿಯಲ್ಲಿ ಕೋಡುಗಲ್ಲ ಮೇಲಿಂದ ಹಾರಿ ಕೈತಪ್ಪಿಸಿಕೊಳ್ಳುವ ಹಾರುವ ಓತಿಯ ಇಡೀ ಕಥಾನಕ ಕಣ್ಣೆವೆಯಿಕ್ಕದೆ ಓದಿಸಿಕೊಳ್ಳುತ್ತದೆ. “ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ!” ಎನ್ನುವ ಕರ್ವಾಲೊರ ನುಡಿಗಳೊಂದಿಗೆ ಕಾದಂಬರಿ ಮುಗಿಯುತ್ತದೆ. ಜೇನುನೊಣಗಳು, ಗ್ಲೋ ವರ್ಮ್, ಮಂಗಟೆ ಹಕ್ಕಿ, ಹಾರುವ ಓತಿ ಹೀಗೇ ಪರಿಸರದ ಬಗೆಗಿನ ಕೌತುಕಗಳೊಂದಿಗೆ, ಓದುಗನನ್ನು ಹಿಡಿದಿಡುವ ಕೌಶಲ್ಯ ಈ ಕಾದಂಬರಿಯ ವೈಶಿಷ್ಟ್ಯ ಮತ್ತು ಹಿರಿಮೆ. ಚಿದಂಬರ ರಹಸ್ಯ, ತಬರನ ಕಥೆ, ಸುಶ್ಮಿತಾ ಮತ್ತು ಹಕ್ಕಿ ಮರಿ, ಕುಬಿ ಮತ್ತು ಇಯಾಲ, ಮಿಲೇನಿಯಂ ಸಿರೀಸ್ (೧೬ ಪುಸ್ತಕಗಳು) ಹೀಗೆ ಇನ್ನೂ ಅನೇಕ ಅಮೂಲ್ಯ ಕೃತಿಗಳನ್ನು ನೀಡಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರಿಗೆ ನಮನಗಳು ************************************ ಚೈತ್ರಾ ಶಿವಯೋಗಿಮಠ

Read Post »

You cannot copy content of this page

Scroll to Top