ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಜೋಳದ ಹೂವು

ಪೂಜಾ ನಾರಾಯಣ ನಾಯಕ್

ಬಿಕ್ಕಳಿಸಿ ಬಿಕ್ಕಳಿಸಿ ಅಳುತಿದೆ
ಜೋಳದ ಹೂವೊಂದು ಮಗುವಂತೆ
ಮನದಿಂಗಿತವ ಕೇಳುವವರಾರೆಂದು
ನರಳುತಿದೆ ತನ್ನೆದೆಯ ಗೂಡಲ್ಲಿ
ರಾತ್ರಿ-ಹಗಲೆನ್ನದೆ.

ಯಾರಬಳಿ ನನ್ನ ಮನದಿಂಗಿತವನರುಹಲಿ?
ಯಾರ ಬಳಿ ತೋಡಿಕೊಳ್ಳಲಿ ನನ್ನಳಲ?
ಗೆಳೆತನದ ಸಲುವಾಗಿ ಯಾರ್ಯಾರ ಬೇಡಲಿ?
ನನ್ನೆಡಗೆ ಸುಳಿಯರಾರೂ
ಅಯ್ಯೋ, ಇದು ನನ್ನ ವಿಧಿಯೆ?

ಪಾತರಗಿತ್ತಿಗೆ ಹೇಳಲೆ?
ಛೇ, ತಗುಲಿದೆ ಮಲ್ಲಿಗೆಯ ಹುಚ್ಚು!
ಭ್ರಮರಕ್ಕೆ ತಟ್ಟಿದೆ
ಸೂರ್ಯಕಾಂತಿಯ ಮೋಹ!
ಕಣಜವನು ಕೈಬೀಸಿ ಕರೆವೆನೆಂದರೆ
ಛೇ, ಅದಕೂ ಸೋಕಿದೆ ತಾವರೆಯ ಪ್ರೇಮ!
ಯಾರ ಬಳಿ ಹೇಳಲಿ ಅಡಗಿದ
ಗುಹೆಯೊಳಗಿನ ಮರ್ಮ ಕಣ್ಣೀರಿನದ್ದೆಂದು,
ಗೋಗರೆಯುತಿಹೆ ಸುಯ್ಲು ಸೋರದ ಹಾಗೆ
ನುಂಗುತಿಹೆ ಒಳಗೊಳಗೆ…

ಎತ್ತಲಿಂದಲೂ ಬರರ್ಯಾಕೆ ಇತ್ತ?
ಕುಸುಮ-ವಾಸನೆಯ ಕಂಪಿಲ್ಲವೆಂದೆ?
ಇದ್ದರೂ ಇರಬಹುದೆ ನನ್ನೊಳಗಿನ
ಮಧುವಿಗೆ ರುಚಿಯಿಲ್ಲವೆಂದು?
ಮರುಗುತಿಹ ಹೂವು ಸೇರುವುದು
ಹೇಗೋ ಕೊನೆಗೆ ಮೌನದಾ ಒಡಲ
ಸಮಾಧಾನಿಸಿಕೊಂಡು ತನ್ನೆದೆಯ ಕಡಲ…

ಹೋದರೇನಂತೆ, ಹೋಗಲಿ ಬಿಡಿ
ವಯ್ಯಾರದ ಹೂವಿನೆಡೆಗೆ ಮಧು-ಕಂಪನರಸಿ
ನಾನರಿಯದಿಹೆನೆ, ಈ ಗೆಳೆತನದ ಗುಟ್ಟ?
ಹೂವು-ದುಂಬಿಯ ಆಟವಾ
ಮಕರಂದ ಇರುವನಕ
ಪಾತರಗಿತ್ತಿಯ ಹುಚ್ಚು,
ವಯ್ಯಾರವಿರುವನಕ
ಭ್ರಮರದಾ ಪ್ರೇಮ,
ಘಮ ಘಮಿಸುತಿರುವನಕ
ಕಣಜದಾ ಸ್ನೇಹ!
ಎಲ್ಲ ತೀರಿದ ಮೇಲೆ ಉಳಿಯುವುದೆ ಮೋಹ?
ಬೇರೆ ದಾರಿಯ ಹುಡುಕಲೆಲ್ಲಸನ್ನಾಹ!!
        ************************************

About The Author

Leave a Reply

You cannot copy content of this page

Scroll to Top