ಕವಿತೆ
ಸಂತೆಯಲಿ

ವಿ.ಎಸ್.ಶಾನಬಾಗ್

ಸಂತೆಯಲಿ
ಕೆಲವರು ಕೊಳ್ಳಲು ಬರುತ್ತಾರೆ
ಕೆಲವರು ನೋಡಲು ಕೊಳ್ಳುತ್ತಾರೆ
ಸಂತೆಗೆ ಗೋಡೆಗಳು ಇಲ್ಲ ಆದ್ದರಿಂದ ಎಲ್ಲ
ಅಂಗಾಂಗಗಳ ಮಾತು ಖುಲ್ಲ
ಮಹಿಳೆಯರು ಹಳೆಯಮಾತಿನ
ಹೊಸ ಚರ್ಯೆ ಚರ್ಚೆ ಸ್ವಪಾಕ
ಸುಕ್ಕುಗಳ ಅಡಗಿಸಿ ಮನೆಯಲಿ ಸ್ವಪಾತ್ರ
ಗಂಡನ ಚಮತ್ಕಾರ ನೂಡಲ್ ನಂತಹ
ಪರಿಹಾರ
ಗರತಿಯರನ್ನು ತರಗತಿಗೆ ಕಳುಹಿಸಿ
ಪಿಸುಮಾತಿನಲ್ಲಿ ದ್ವಿಪಾತ್ರ
ಹೌಹಾರಿಸಿದ ಚಿತ್ರ
ಪುರುಷರು ಸಂತೆಯಲ್ಲಿ
ಹೆಂಡತಿ,ಬಡ್ತಿ,ಲೋನು
ಅನುಕಂಪಕ್ಕೆ ಕಾಯುವ
ಶೋಷಿತರು ಪೆಗ್ ನಲ್ಲಿ
ಮೀಟೂ ಕಥಾಸರಣಿ
ಯುವಕರು
ಸಂಜೆ ಸಂತೆಯಲಿ ಸಂದವರು, ಪ್ರೀತಿಯಲಿ ದುಶ್ಯಂತರು
ಮಾತು ಬೇಡದ ಬರೀ ಸೂಚನೆ
ವಿವರಣೆ, ಹಕ್ಕಿಯಂತೆ ಹಾರಿ ಮಾತು ಮತ್ತೇನೋ ಆದ ಬವಣೆ
ಕೇಳದ ಕಿವಿಗೆ ಹೇಳದ ಬಾಯಿ ನೋಡದ ಕಣ್ಣು
ಮಾರುವವರ ಎದೆಯಿಂದ ಕೊಳ್ಳುವವರ ಕಣ್ಣ ಹೊರಗೆ
ಯಾರದೋ ಹೊಂಡಕ್ಕೆ ಯಾರದೋ ಮಣ್ಣು
ಕೀ (ಎಲ್ಲಿದೆ ಹುಡುಕಿ)ಇಲ್ಲದೆ ಮರೆತ ಬಾವುಟ
ಹಾರುತ ಪಟಪಟ
ಕವಿಗಳು
ಸಂತೆಯಲಿ ಸಿಗುವುದು ಕವಿತೆಗೆ ಬದಲಾದ ರೂಪ,
ಅನುಭವ ಕಾಡದು ಬರೆ ಅಳಲಿನ ಸ್ವಗತ ರೂಪ?
ಅವೇ ಕವಿತೆಗಳು ಪುರವಣಿಗೆಗಳಲಿ ತದ್ರೂಪ
ಮಾತಿನಲ್ಲಿ ವಿಮರ್ಶೆ ಯಾಕೋ ಮೌನ ಕವಿಗೆ
ಕವಿಗೋಷ್ಟಿಯಲಿ ಕವಿಗಳು ಮಂಚದಲಿ
ಸಂತೆಯಲಿ ಓದಿದ ಕವಿತೆಗಳುಹಾರಿಹೋದವು
ಗಂಗೆಯ ಎಂಟನೇ ಮಗುವಿನಂತೆ
ವಾಟ್ಸಾಪ್ ಕವಿಗಳ ಗುಂಪನ್ನು ಅರಸಿ
ಸಂತೆ ಅಮೂರ್ತ ನಿಂತಂತೆ
ಸಂಜಯನ ಕಣ್ಣಂತೆ
************************



