ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

ಶ್ರೀದೇವಿ ಕೆರೆಮನೆ

ನೀನು ಮತ್ತೆ ಬರುವುದಿಲ್ಲವೆಂದು ಬುದ್ಧಿಗೆ ಅರ್ಥವಾಗಿದೆ
ಹಾಳಾದ ಮನಸ್ಸು ಇನ್ನೂ ನಿನಗಾಗಿ ಕಾತರಿಸುತ್ತಿದೆ

ಹೀಗೆ ಬಂದು ಹಾಗೆ ಹೋಗಲು ನಾನೇಕೆ ಬೇಕಿತ್ತು ಹೇಳು
ನನ್ನ ಮನೆಯಂಗಳದ ಮಲ್ಲಿಗೆ ನಿನಗೀಗ ಮರೆತು ಹೋಗಿದೆ

ಅಗಲುವ ಮಾತಾಡಿದ್ದು ಇಂದು, ನಿರ್ಧಾರ ಎಂದಾಗಿತ್ತು?
ಮಾಮರದ ಕೋಗಿಲೆಯೇಕೆ ಹೀಗೆ ಕರ್ಕಶವಾಗಿ ಅಳುತಿದೆ

ಕೊನೆಯ ಕ್ಷಣದವರೆಗೂ ಗುಟ್ಟು ಬಿಡದ ಮಹಾ ಚತುರ ನೀನು
ನೆತ್ತರಿಲ್ಲದೇ ಇರಿಯುವುದನು ನಿನ್ನಿಂದ ಕಲಿಯಬೇಕಿದೆ

ನಾಟಕದ ಮಂದಿರದಲ್ಲೀಗ ಕಣ್ಣು ಕುಕ್ಕುವ ಬೆಳಕಿಲ್ಲ
ಮನಸನು ಬಲಿ‌ಪಡೆದ ಪ್ರಹಸನವು ಜಗಜ್ಜಾಹೀರಾಗಿದೆ

ನಿನ್ನವಳೆಂಬ ಹೆಮ್ಮೆ ಎದೆಯೊಳಗೆ ಮೊರೆದು ನೆತ್ತಿಗೇರಿತ್ತು
ಸುರೆಗೂ ಮಿಗಿಲಾಗಿ ಆವರಿಸಿದ ಯೌವನದ ನಶೆ ಇಳಿದಿದೆ

ಸದಾ ಜೊತೆಗಿದ್ದ ಗೆಲುವಿಗು ನಾನೆಂದರೀಗ ತಿರಸ್ಕಾರ
ಎಂದು ಬತ್ತದ ಉಕ್ಕುವ ಸೆಲೆಯಂತಹ ತುಟಿಯ ನಗು ಮಾಸಿದೆ

ಶ್ರೀ, ಎರಡು ದಿನ ನಿನ್ನ ಹೆಸರಿನ ಸೆರಗಿನಲ್ಲಿ ಮೆರೆದಾಡಿದೆ
ಮೇಲಕ್ಕೇರಿ ಕೆಳಗಿಳಿದ ಮೇಲೀಗ ಬದುಕು ಸಾಕೆನಿಸಿದೆ

***************************************************************

About The Author

13 thoughts on “ಗಝಲ್”

  1. ಧನಪಾಲ‌ ನಾಗರಾಜಪ್ಪ

    ಓದಿದೆ ಮೇಡಂ. ತುಂಬಾ ಚೆನ್ನಾಗಿದೆ. ಬಹಳ ಇಷ್ಟವಾಯಿತು.

  2. ನೆತ್ತರಿಲ್ಲದೆ ಇರಿಯುವುದು ನಿನ್ನಿಂದ ಕಲಿಯಬೇಕಿದೆ
    – ಇಡೀ ಗಝಲ್ನ ಜೀವಾಳ

  3. ಸುಜಾತ ಲಕ್ಷ್ಮೀಪುರ.

    ಚನ್ನಾಗಿದೆ ಗಜಲ್…ಬುದ್ದಿಗೆ ಅರ್ಥವಾಗಿದ್ದು ಮನಸ್ಸಿಗೆ ತಿಳಿಯಲ್ಲಾ….ವಿಷಾದ ದಟ್ಟವಾಗಿ ಸೆಳೆಯುತ್ತದೆ.

  4. ಗಝಲ್ ಚೆನ್ನಾಗಿದೆ. ಆದರೆ ಕೊನೆಯಲ್ಲಿ “ಬದುಕು ಸಾಕೆನಿಸಿದೆ” ಎನ್ನುವುದು ಸಮರ್ಪಕವಿದ್ದರೂ ನಿರಾಶಾವಾದ ಎನ್ನಿಸಿತು. ಅದಕ್ಕೇ “ಹೊಸ ಬದುಕ ಬದುಕಬೇಕಿದೆ” ಎಂದು ಓದಿಕೊಂಡೆ.

Leave a Reply

You cannot copy content of this page

Scroll to Top