ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಉರಿಯುತ್ತಿದ್ದೇನೆ…. ಅಯ್ಯೋ!

ಕಾತ್ಯಾಯಿನಿ ಕುಂಜಿಬೆಟ್ಟು

Face, Soul, Head, Smoke, Light, Sad

ಸಾವಿನ ಕೆಂಡದ ಮೇಲೆ
ಓಡುತ್ತಲೇ ಇರುವ ಲಾಕ್ಷಾದೇಹ…
ಲೆಪ್ಪದ ಗೊಂಬೆ ನಾನು
ನಿಂತರೆ ಕರಗುತ್ತದೆ ಕೋಮಲ ಅರಗು ಮೈ…
ಆತ್ಮ ಹಾರಿ ಇನ್ನೊಂದು ಮೈಯನ್ನು
ಪಡೆದು ಹೊಸದಾಗಿ ಹುಟ್ಟುತ್ತೇನೆ
ಮರಳಿ ಮರಳಿ ನಾನು

ನನ್ನ ಆತ್ಮ ನನ್ನದೆಂದುಕೊಂಡಿದ್ದೆ
ಆದರೆ…
ಇದು ನನ್ನದಲ್ಲವೇ ಅಲ್ಲ!
ತಲೆ ತಲಾಂತರದಿಂದ ದೇಹದಿಂದ ದೇಹ ದೇಹದಿಂದ ದೇಹ
ದೇಹ ದೇಹ ದೇಹಗಳನ್ನು ದಾಟಿ
ಈಗ ಈ ದೇಹದೊಳಗೆ
ಸೇರಿಕೊಂಡಿದೆ
ಹಾಗಾದರೆ ನಾನು ಯಾರು?
ಈ ದೇಹವೇ? ಆ….. ಆತ್ಮವೇ?

ದೇಹದಿಂದ ದೇಹಕ್ಕೆ ಹಾರುವ ಅತೃಪ್ತ ಹೆಂಗಸಿನಂತೆ
ಅಥವಾ ಗಂಡಸಿನಂತೆ
ಹಾದರಗಿತ್ತಿ ಅಥವಾ ಹಾದರಗಿತ್ತವಲ್ಲವೇ ದೇವರೇ
ಈ ಆತ್ಮಗಳು?
ಹೊಸ ಅಂಗಿ ಹೊಸ ಹೊಸ ಅಳತೆಗಳ
ಡಿಸೈನ್ ಗಳ ಬಣ್ಣ ಬಣ್ಣಗಳ ನಿಲುವಂಗಿ!
ದೇವರ ಜವಳಿ ಅಂಗಡಿಯಲ್ಲಿ
ರಶ್ಶೋ ರಶ್ಶು!
ನಿರಾಕಾರ ಆತ್ಮಗಳಿಗೆ ಆಕಾರಗಳ
ಒಳಗೆ ತೂರುವ ಹುಚ್ಚು!
ಮನ್ಮಥನನ್ನು ಸುಟ್ಟು ಬೂದಿ ಅನಂಗ ಮಾಡಿದ
ನಿರಾಕಾರಿ ದೇವರಿಗೂ
ಆಕಾರ ಆಕಾರ ಹೊಲಿದಿಡುವ ದಜಿ೯ಯದೇ ಹುಚ್ಚು!
ನಿರಾಕಾರದ ಉದ್ದ ದೇಹ ಅರಿವೆಯನ್ನು ಕತ್ತರಿಸಿ ಅಂಗ ಅ೦ಗ ಅಂಗಾಂಗಗಳನ್ನೂ ಜೋಡಿಸಿ ಹೊಲಿದು ಆಕಾರ ಕೊಡುತ್ತ
ಹ್ಯಾಂಗರಲ್ಲಿ ನೇತು ಹಾಕುತ್ತಾನೆ
ಗಣಪತಿಯ ಮೂತಿ೯ಗೆ ಕೊನೆಗೆ
ಕಣ್ಣು ದೃಷ್ಟಿ ಇಡುವ ಹಾಗೆ
ಆತ್ಮಗಳು ಧರಿಸಿಕೊಂಡ ಗಳಿಗೆಯಲ್ಲೆ
ಆಕಾರಗಳಿಗೆ ಜೀವ!

ಈ ಷೋಕಿ ಆತ್ಮ ಒಂದು ಅಂಗಿಯನ್ನು ಕಳಚಿ ಇನ್ನೊಂದನ್ನು ಧರಿಸಿ
ಮತ್ತೊಂದರಲ್ಲಿ ಸಿಂಬಳ ಒರೆಸಿ
ತುಕ್ಕು ಹಿಡಿದ ತಗಡು ಬಟ್ಟೆಯOತೆ
ನಾಯಿ ಬಣ್ಣ ಮಾಡಿ ಎಸೆಯುತ್ತದೆ
ಮಸಣದ ಬೆಂಕಿಯ ಮುಂದೆಯೇ
ಮತ್ತೊಂದನ್ನು ಧರಿಸುತ್ತದೆ
ದರಿದ್ರದ್ದು!

ಇನ್ನೂ ಎಷ್ಟು ಅಂಗಿಗಳನ್ನು
ಧರಿಸಬೇಕೋ ದೇವರೇ ಈ ಆತ್ಮ?
ಹೊಲಿಯುವ ನಿನಗೂ ಬೇಜಾರಿಲ್ಲ
ತೊಡುವ ಅದಕ್ಕೂ ಬೇಜಾರಿಲ್ಲ

ಜನ್ಮ ಜನ್ಮಾಂತರಗಳ ಪಾಪ ಪುಣ್ಯಗಳ
ಲೆಕ್ಕಗಳನ್ನು ಹೊತ್ತು
ಸತ್ತ ದೇಹದಿಂದ ಹಾರಿ ಮತ್ತೊಂದು
ದೇಹದಲ್ಲಿ ಹುಟ್ಟಿ
ಮಗದೊಂದು ದೇಹವನ್ನು
ಅವು ಏಕೆ ಹುಡುಕಬೇಕು?

ದೇವರ ಜವಳಿ ಅಂಗಡಿಯನ್ನೇ
ಸುಡುವ ಬೆಂಕಿಗಾಗಿ ನಾನು
ಕಾಯುತ್ತಿದ್ದೇನೆ
ನಾನು ಅಂಗಿಯೇ ಆತ್ಮವೇ?
ಆತ್ಮಾಂಗಿಯೇ? ಅಂಗಾತ್ಮಿಯೇ?
ಉರಿಯುತ್ತಿದ್ದೇನೆ ಅಯ್ಯೋ!
ಆತ್ಮ – ಅಂಗಿಗಳ ನಡುವೆ.

*****************************

About The Author

8 thoughts on “ಉರಿಯುತ್ತಿದ್ದೇನೆ…. ಅಯ್ಯೋ!”

  1. Dr. Arkalgud Neelakanta Murthy

    ಡಾ. ಕಾತ್ಯಾಯಿನಿ ಕುಂಜಿಬೆಟ್ಟುಅವರೇ,
    “ಉರಿಯುತ್ತಿದ್ದೇನೆ ….. ಅಯ್ಯೋ” ಇತ್ತೀಚೆಗೆ ಓದಿದ ಒಂದು ಅತ್ಯುತ್ತಮ ಕವಿತೆ. ಹೀಗೇ ಸಾಗಲಿ ನಿಮ್ಮ ಕಾವ್ಯದ ಅಲೆಗಳೇರಿತದ ಉಯ್ಯಾಲೆ ನಿರಂತರ…ಧನ್ಯವಾದಗಳು.

  2. Smitha Amrithraj.

    ಕಾತ್ಯಾಯಿನಿ ಮೇಡಂ..ನಿಮ್ಮ ಕವಿತೆಗಳ ಅಭಿಮಾನಿ ನಾನು.olledide ಕವಿತೆ.

    1. ಕವಿತೆ ಚೆನ್ನಾಗಿದೆ.
      ಮೊದಲರ್ಧ ಭಾಗ ಪರಿಣಾಮಕಾರಿಯಾಗಿ ಬಂದಿದೆ. ಎರಡನೆಯ ಭಾಗ ಇನ್ನೂ ಬಿಗಿಯಾಗಬೇಕಿತ್ತು.
      ಅಭಿನಂದನೆಗಳು…… ಪುಷ್ಪಾ

  3. ಡಾ ಕಾತ್ಯಾಯಿನಿ ಕುಂಜಿಬೆಟ್ಟು ಅವರ ಕವನಗಳನ್ನು ಓದುತ್ತಾ ಬಂದಿದ್ದೇನೆ …..ಅವರ ಕವನಗಳಲ್ಲಿ ಬಳಕೆಯಾಗುತ್ತಿರುವ ಪ್ರತಿಮೆ ,ಸಂಕೇತ ,ರೂಪಕ,ನುಡಿಗಟ್ಟುಗಳು ಸಾವಯವ ಸಂಬಂಧವನ್ನು ಪಡೆದು ಸಾರ್ವತ್ರಿಕವಾದ ತಾತ್ವಿಕ ವಿಚಾರಗಳನ್ನು ಕಟ್ಟಿಕೊಡುತ್ತವೆ ….ಇದೇ ನಿಜವಾದ ಕಲಾತ್ಮಕತೆ , ಲವಲವಿಕೆಯಿಂದ ಕೂಡಿರುವ ಕಾತ್ಯಾಯಿನಿಯವರ ಈವಿತೆಯೂ ಸಹ ತನ್ನ ವಿನೂತನ ನಿರೂಪಣೆಯಿಂದಾಗಿ ಬಳಸಿರುವ ಭಾಷಾ ಬಳಕೆಯಿಂದಾಗಿ ಅವರ ಅನುಭವಗಳು‌ ಕಲಾತ್ಮಕವಾಗಿ ಅಭಿವ್ಯಕ್ತವಾಗಿವೆ …. ಅವರಿಗೆ ಅಭಿನಂದನೆಗಳು …..

Leave a Reply

You cannot copy content of this page

Scroll to Top