ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಯಾರೊಬ್ಬರಾದರೂ…

ಅನುರಾಧಾ ಪಿ. ಎಸ್

ಒಂದಷ್ಟು ಸಾಲು ಹುಟ್ಟುತ್ತವೆ ಅವರ ಹೆಸರಲ್ಲಿ,
ಗಾಳಿಗೊಪ್ಪಿಸುತ್ತೇನೆ.
ವಿಳಾಸ ಹುಡುಕಿ ತಲುಪಿಸುತ್ತದೆ ಗಾಳಿಯೂ ಅಷ್ಟೇ ನಿಷ್ಠೆಯಲ್ಲಿ.

ಅವರ ಕಣ್ಣು ಬೆಳಗುತ್ತವೆ,
ಆ ಕ್ಷಣ ನಾನು ಹೊಳಪುಂಡ ತಾರೆಯೆನಿಸುತ್ತೇನೆ
ಹೊರನಿಂತು ಮೂಲಸ್ರೋತವನಕ್ಕರೆಯಲಿ ಮೆಲ್ಲ ತಡವುತ್ತೇನೆ
ಕಣ್ಮುಚ್ಚಿ ಮೃದುವೊಂದು ಮಗುವಂತೆ
ಅದು ಮಗ್ಗುಲು ಹೊರಳುತ್ತದೆ

ನನಗೋ ಸುಖದ ಅಮಲು
ಒಳಗೂ ಆ ಅಮಲಡರಿದ ಘಮಲು
ಅವರುದ್ಗರಿಸುತ್ತಾರೆ,
“ಎಂಥ ಭಾಷೆ, ಎಂಥ ಜೀವಭಾವ, ಎಷ್ಟು ಕಾವ್ಯ ನಿನ್ನ ಬರಹದಲ್ಲಿ!”

ತಟ್ಟನೆ
ಕಾಲಡಿಯ ನೆಲ ತುಸು ಚುಚ್ಚಿ ಎಚ್ಚರಿಸುತದೆ-
‘ನೀನಿನ್ನೂ ತಾಕುವುದಾಗಿಲ್ಲ’
ನಾನೆಚ್ಚೆತ್ತುಕೊಳುತೇನೆ,
ಒಳಗೆ ಅರಳಿ ನಿಂತಿದ್ದ ಮೌನ ನರಳುತ್ತದೆ-

‘ಸ್ರೋತವವರಿಗೆ ಕಾಣುವುದಿಲ್ಲ
ಮೂಲವನಾರೂ ತಲುಪುವುದಿಲ್ಲ
‘ಎಷ್ಟು ಚಂದ ನಿನ್ನ ಪ್ರೀತಿ’ ಎಂದೊಬ್ಬರೂ ಹೇಳುವುದಿಲ್ಲ

**********************************

About The Author

4 thoughts on “ಯಾರೊಬ್ಬರಾದರೂ…”

Leave a Reply

You cannot copy content of this page

Scroll to Top