ನನ್ನ ಇಷ್ಟದ ಕವಿತೆ
ಮುಂಬೈ ಜಾತಕ ರಚನೆ —– ಜಿ.ಎಸ್.ಶಿವರುದ್ರಪ್ಪ ಹುಟ್ಟಿದ್ದು: ಆಸ್ಪತ್ರೆಯಲ್ಲಿ ಬೆಳೆದದ್ದು: ಬಸ್ಸು ಟ್ರಾಂ ಕಾರು ಟ್ಯಾಕ್ಸಿ ಎಲೆಕ್ಟ್ರಿಕ್ ಟ್ರೇನುಗಳಲ್ಲಿ ಕುಡಿದದ್ದು: ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿ ಹಾಲು, ಗ್ರೈಪ್ ಸಿರಪ್ ಹಾರ್ಲಿಕ್ಸ್ ಇತ್ಯಾದಿ ಕಂಡಿದ್ದು :ಬೆಳಗಿನಿಂದ ಸಂಜೆಯ ತನಕ ಲಕ್ಷ ಚಕ್ರದ ಉರುಳು ಅವಸರದ ಹೆಜ್ಜೆ ಯ ಮೇಲೆ ಸರಿವ ನೂರಾರು ಕೊರಳು ಕಲಿತದ್ದು: ಕ್ಯೂ ನಿಲ್ಲು:ಪುಟ್ಪಾತಿನಲ್ಲೇ ಸಂಚರಿಸು; ರಸ್ತೆವದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು; ಎಲ್ಲಾದರೂ ಸರಿಯೆ, ಬೇರೂರು,ಹೀರು. ತಾಯಿ: ಸಾವಿರ ಗಾಲಿ ಉರುಳಿ ಹೊರಳುವ ರಸ್ತೆ ಯಂಚಿನಲ್ಲೇ ಕೈಹಿಡಿದು ನಡೆಸಿದವಳು. ಇರುವ ಒಂದಿಂಚು ಕೋಣೆಯಲ್ಲೇ ಹೊರಲೋಕವನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು. ತಂದೆ: ಬೆಳಗಿನಿಂದ ಸಂಜೆಯ ತನಕ ಕಣ್ಮರೆಯಾಗಿ ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತು ಕೆಮ್ಮುವ ಪ್ರಾಣಿ. ವಿದ್ಯೆ: ಶಾಲೆ ಕಾಲೇಜುಗಳುವಕಲಿಸಿದ್ದು; ದಾರಿ ಬದಿ ನೂರಾರು ಜಾಹೀರಾತು ತಲೆಗೆ ತುರುಕಿದ್ದು, ರೇಡಿಯೋ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸ್ಸು ಮಾಡಿದ್ದು. ನೀನಾಗಿ ಕಲಿತದ್ದು ಬಲು ಕಡಿಮೆ, ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದೊಂದನ್ನು ಹೊರತು. ಜೀವನ: ಈ ಲಕ್ಷ ದಾರಿಗಳ ಚದುರಂಗದಾಟದಲಿ, ನೂರು ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ ಮುಂದುವರಿಯುವುದು. ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು; ರೈಲನ್ನೊ ಬಸ್ಸನೋ ಹಿಡಿಯುವುದು, ಸಾಯಂಕಾಲ ಸೋತು ಸುಸ್ತಾಗಿ ರೆಪ್ಪೆಯ ಮೇಲೆ ಹತ್ತು ಮಣ ಆಯಾಸವನ್ನು ಹೊತ್ತು ಹನ್ನೊಂದು ಘಂಟೆ ಹೊಡೆವಾಗ ಮನೆಯಲ್ಲಿ ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು ಎಚ್ಚರಿಸುವುದು. ತಣ್ಣಗೆ ಕೊರೆವ ಕೂಳುಂಡು ಬಾಡಿಗೆ ಮನೆಯ ನೆರಳಿನ ಕೆಳಗೆ, ಮತ್ತೆ ಸಾವಿರ ಗಾಲಿಗಳ್ಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು. _________ ನಾನು ನನ್ನ ಕನ್ನಡ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಆಗಾಗ ಓದಿಹೇಳುವ ಮತ್ತುನನಗಿಷ್ಟವಾದ ಕೆಲವೊಂದು ಕವಿತೆಗಳ ಸಾಲಿನಲ್ಲಿ ನವೋದಯ ಸಾಹಿತ್ಯದ, ರಾಷ್ಟ್ರ ಕವಿ ಜಿ. ಎಸ್. ಶಿವರುದ್ರಪ್ಪನವರು ಬರೆದಿರುವ ‘ಮುಂಬೈ ಜಾತಕ’ವೂ ಸೇರಿಕೊಳ್ಳುತ್ತದೆ. ಇದಕ್ಕೆ ಕಾರಣವೇನೆಂದು ಯೋಚಿಸಿದರೆ ನನಗೆ ಹೊಳೆದದ್ದು, ಇದೊಂದು ವಿಚಿತ್ರ ಶೈಲಿಯ, ಎಲ್ಲಾಾ ಕಾಲಕ್ಕೂ ಸರಿಹೊಂದುವ ಕವನ. ಏಕೆಂದರೆ ಕವನಗಳ ಪ್ರಮುಖ ಲಕ್ಷಣವಾದ ಗೇಯತೆ ಮತ್ತು ಪ್ರಾಸಗಳೆರಡನ್ನೂ ಗಾಳಿಗೆ ತೂರಿ ರಚಿಸಲಾದ ಈ ಕವಿತೆ ಸರ್ವಕಾಲಿಕ ಸತ್ಯವನ್ನು ಸಾರುತ್ತದೆ. ಆದ್ದರಿಂದಲೇ ಅಂದು, ಇಂದು ಮತ್ತು ಎಂದೆಂದಿಗೂ ಜೀವಂತವಾಗಿ ಉಳಿಯಬಲ್ಲ ಶಕ್ತಿ ಈ ಕವನಕ್ಕಿದೆ. ಏಕೆಂದರೆ ಆಗಿನ ಕಾಲದಲ್ಲಿ ಮುಂಬೈಗಷ್ಟೇ ಸೀಮಿತವಾಗಿದ್ದ ಬಿಡುವುಲ್ಲದ, ಯಾಂತ್ರಿಕ ಜೀವನ ಶೈಲಿ, ಈಗ ಭಾರತದ ಎಲ್ಲಾ ಪ್ರಮುಖ ನಗರ ವಾಸಿಗಳ ಜೀವನದಲ್ಲಿ ಹಾಸುಹೊಕ್ಕಾಗಿದೆ. ಕವಿ ಜಿ. ಎಸ್. ಎಸ್ ಬಯೋಡ್ಯಾಟದಲ್ಲಿ ಕವನವನ್ನು ಹೇಳಿದ್ದಾರೋ ಅಥವಾ ಕವನದಲ್ಲಿ ಬಯೋಡ್ಯಾಟವನ್ನು ಹೇಳಿದ್ದಾರೋ ಎನ್ನುವಷ್ಷರ ಮಟ್ಟಿಗೆ ತಮ್ಮ ಕವಿತೆಯಲ್ಲಿ ನೈಜತೆ ಹಾಗೂ ಸರಳತೆಯನ್ನು ಪ್ರತಿಬಿಂಬಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಬೆಳೆಯುವ, ಬದುಕನ್ನು ಕಟ್ಟಿಕೊಳ್ಳುವ ಲಕ್ಷಾಂತರ ಮಧ್ಯಮ ವರ್ಗದ ಮಕ್ಕಳ ಬದುಕಿನ ಚಿತ್ರಣವನ್ನು ಕಣ್ಣಮುಂದೆ ಕಟ್ಟಿದ ಹಾಗೆ ಇಲ್ಲಿ ಬಿಚ್ಚಿಡಲಾಗಿದೆ. “ಹುಟ್ಟಿದ್ದು ಬೆಳೆದದ್ದು, ಕುಡಿದದ್ದು, ಕಂಡದ್ದು, ಕಲಿತದ್ದು …………” ಹೀಗೆ ಕವಿತೆ ನೀಡುವ ಆಮೂಲಾಗ್ರ ವಿವರಣೆಗಳ ಹಿಂದಿರುವ ವ್ಯಂಗ್ಯ ಓದುಗರ ಮುಂದೆ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ತಂದೆ, ತಾಯಿಯರ ಬಗೆಗಿರುವ ವಿವರಣೆಯಂತೂ ನಮ್ಮ ಮನಸ್ಸಿನ ಮೇಲೆ ಗಾಢವಾದ ಪ್ರಭಾವವನ್ನು ಬೀರುವಂತದ್ದು.. “ಇರುವ ಒಂದಿಂಚು ಕೋಣೆಯಲ್ಲೇ” ಹೊರಲೋಕವನ್ನು ಪತಿಚಯಿಸುವ ತಾಯಿಯೊಂದು ಕಡೆಯಾದರೆ, ಬೆಳಗಿನಿಂದ ರಾತ್ರಿಯವರೆಗೆ ಸಂಸಾರಕ್ಕಾಗಿ ದುಡಿಯುವುದರಲ್ಲೇ ಜೀವ ಸವೆಸುತ್ತಿರುವ ತಂದೆ, ಮಕ್ಕಳ ಆಟ ಪಾಟಗಳಿಂದ ಸ್ವತಃ ವಂಚಿತ. “ಜೀವನಕ್ಕಾಗಿ ದುಡಿಮೆಯೇ ಹೊರತು, ದುಡಿಮೆಗಾಗಿ ಜೀವನವಲ್ಲ! ಅಲ್ಲವೇ?”. ದುಡಿಮೆ ನಿಜವಾದ ಅರ್ಥ ಕಳೆದುಕೊಳ್ಳುವುದು ಇಲ್ಲೇ. ಕವಿತೆ ಮುಂದುವರೆದು ವಿದ್ಯೆಯ ಬಗ್ಗೆ ಹೇಳುತ್ತಾ, “ನೀನಾಗಿ ಕಲಿತದ್ದು ಬಲು ಕಡಿಮೆ….”. ಎಂಬಲ್ಲಿ “ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆ ಕಣ್ಣಾಡಿಸುವುದೊಂದನ್ನು ಹೊರತು” ಎಂದು ಹೇಳುವ ಮೂಲಕ ಕವಿ ತಮ್ಮ ಕವನಕ್ಕೆ ಹಾಸ್ಯ ಲೇಪನವನ್ನೂ ಸಹ ಮಾಡಿದ್ದಾರೆ. ಬಣ್ಣಗಳ ಕಡೆಗೆ ಕಣ್ಣಾಡಿಸುವುದನ್ನು ಕಲಿಸಲು ಯಾವ ಶಾಲೆ, ಕಾಲೇಜುಗಳೂ ಬೇಕಿಲ್ಲವಷ್ಟೆ! ಇಷ್ಟೆಲ್ಲಾ ಆದ ಮೇಲೆ, ಆ ಮಗುವೂ ಬೆಳೆದು ದೊಡ್ಡವನಾದಂತೆ ತಾನೂ ಸಹ ತನ್ನ ತಂದೆಯಂತೆಯೇ “ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು……”‘ ಇಂತಹದ್ದೇ ಜೀವನ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ವಿಪರ್ಯಾಸ. ಈಗ ತಾನೂ ತನ್ನ ತಂದೆಯಂತೆ “ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತು ಕೆಮ್ಮುವ ಪ್ರಾಣಿ!” ಇದಂತೂ ಜೀವನದ ಕಟು ಸತ್ಯವನ್ನು ಓದುಗರಿಗೆ ಬಿಚ್ಚಿ ತೋರಿಸುತ್ತದೆ. ತನಗಾಗಿ ಒಂದಿಷ್ಟೂ ಸಮಯವಿಲ್ಲದೆ ಜೀವನವೆಲ್ಲಾ ದುಡಿದು ದುಡಿದೂ ಸೊರಗಿ, ಕೊನೆಗೊಮ್ಮೆ ಕಣ್ಮುಚ್ಚುವ ಪಟ್ಟಣಿಗರ ಬದುಕಿನಲ್ಲಿ ನಿಜವಾದ ಬದುಕೆಲ್ಲಿದೆ? ಯಾವ ಪಟ್ಟಣಿಗನು ಈ ಕವನವನ್ನು ಓದಿದರೂ ಇದು ತನ್ನದೇ ಬಯೋಡಾಟಾ ಎಂದು ಭಾವಿಸದಿರನೇ? ಇಂದಿನ ಜೀವನ ಶೈಲಿಯನ್ನು , ಪಟ್ಟಣಿಗರ ಪಾಡನ್ನು ಸರಳವಾಗಿ, ಸುಂದರವಾಗಿ ಅನಾವರಣಗೊಳಿಸಿರುವ ಜಿ ಎಸ್ ಎಸ್ ರವರ ಈ ಕವಿತೆ ನನ್ನ ಫೇವರೇಟ್. **************************** ಅರುಣಾ ರಾವ್



