ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕವಿತೆ

ಕರೋನಾದ ಕತ್ತಲು ರೇಷ್ಮಾ ಕಂದಕೂರ ಕಳೆಗುಂದಿದೇಕೋ ಮೈಮನಸುಳಿಯದೆ, ನಿನ್ನ ಛಾಯೆ ಸೋಕದೆ ಭ್ರಾಂತಿಯ ಕೇಡು ತಾಗಿಮತಿ ಬಿರುಕಿನ ಕಂದಕದ ಮಾಯೆಗತಿ ಮೀರಿದೆ ಕನಸ ತೇಪೆ ನಿನ್ನಂತರಾಳವ ಹೊಕ್ಕಿರುವೆನೆಂದುಕಕ್ಕಾಬಿಕ್ಕಿಯಾಗಿರುವೆ ತಿಕ್ಕಲು ತನದಿ ಬಿಕ್ಕುತಲಿರುವೆ ಬದುಕಿನ ಚುಕ್ಕಾಣಿಯ ಹಿಡಿಯಲುದಕ್ಕಬಹುದೆ ಒಲುಮೆಅತೀ ಪ್ರೀತಿಯ ಪಾಪಶಂಕೆ ಬೆಂಗಾಡಿನ ವಶವಾಗಿರುವೆತಿದ್ದಿ ತೀಡಲುಪ್ರಗತಿಗೆ ಭಯ ಬುದ್ದಿ ಭ್ರಮಣೆಗೆಅನಂತ ಕನಸುಅದು ಹಾಗೆಯೇನಾಳೆಯಾದರೂ ಆಗಲಿಬದುಕಿನ ಅನಂತ ದಕ್ಕಲಿ **********************

ಕವಿತೆ Read Post »

ಕಾವ್ಯಯಾನ

ಕವಿತೆ

ಕಣ್ಣೀರಿಗೆ ದಂಡೆ ಸಾಕ್ಷಿ ನಾಗರಾಜ ಹರಪನಹಳ್ಳಿ -೧-ಬೀಜಕ್ಕೆ ನೆಲವಾದರೇನುಗೋಡೆಯ ಬಿರುಕಾದರೇನುಬೇಕಿರುವುದುಒಂದು ಹಿಡಿ ಮಣ್ಣು, ಹನಿಯಷ್ಟು ನೀರು -೨- ನದಿಯಾರಿಗೆ ತಾನೇ ಬೇಡ -೩-ನದಿ ಎಷ್ಟೇ ಕವಲಾಗಿ ಹರಿದರೂಕೊನೆಗೆ ಸೇರುವುದು ಕಡಲನ್ನೇ -೪-ಕೋಣೆನಿಟ್ಟುಸಿರಿಗೆ ಫ್ಯಾನ್ಗಾಳಿ ಹಾಕಿದೆ -೫-ಅವಳುನೆರಳಾಗಿದ್ದಳು ಕನ್ನಡಿಯಲ್ಲಿಈಗಅದಕ್ಕೂ ವಿರಹ -೬ಅಲೆಗಳ ಕಣ್ಣೀರಿಗೆದಂಡೆ ಸಾಕ್ಷಿ -೭-ಕಾಯುವುದು ಎಂದರೆಎದೆಯೊಳಗೆಕನಸುಗಳ ಬಿತ್ತುವುದು -೮-ಸಹನೆ ಇದೆಯಾಹಾಗಾದರೆ ;ನಾಳೆಯೂ ಇದೆ -೯-ಆಸೆಯ ಬೆನ್ನು ಹತ್ತುಸಂಚುಗಳಅರ್ಥಮಾಡಿಕೊದಾರಿ ಹೊಳೆದೀತು -೧೦-ಬದುಕಿನ ಅಂತಿಮ‌ ಸತ್ಯಏನುಏನುಏನುಏನು ಅಂದರೆಬಯಲಲ್ಲಿ ಬಯಲಾಗು************************************************–

ಕವಿತೆ Read Post »

ಕಾವ್ಯಯಾನ

ಕವಿತೆ

ಸಂಗಾತಿ ಅರುಣಾ ರಾವ್ ಎನ್ನ ಮನ ದೇಗುಲದಗಂಟೆಯನು ಬಾರಿಸಿಪ್ರೀತಿಯ ಬಡಿದೆಬ್ಬಿಸಿದಇನಿಯ ನೀ ಯಾರು? ಆ ನಾದವನು ಕೇಳಿತಲೆದೂಗುವ ಹಾವಂತೆಎನ್ನ ನಿನ್ನೆಡೆಗೆ ಸೆಳೆದಿಹಸಖ ನೀ ಯಾರು? ಬತ್ತಿದ್ದ ಎನ್ನ ಬಾಳಲ್ಲಿಪ್ರೀತಿ ಹನಿಗಳ ಚಿಮುಕಿಸಿಒಲವ ಹೊಳೆ ಹರಿಸಿದಗೆಳೆಯ ನೀ ಯಾರು? ಮುಚ್ಚಿದ್ದ ಎದೆ ಬಾಗಿಲಿನಚಿಲಕವನು ಅತ್ತ ಸರಿಸಿಒಳ ಹೊಕ್ಕು ನಿಂತಿಹಸಂಗಾತಿ ನೀ ಯಾರು? ನೀ ಯಾರಾದರೇನುಈಗಂತೂ ನನ್ನವ ನೀನುಎನ್ನ ಬಾಳ ದೇಗುಲಕೆಹೊನ್ನ ಕಳಶ| *******************************

ಕವಿತೆ Read Post »

ಕಾವ್ಯಯಾನ

ಕವಿತೆ

ಎಷ್ಟೊಂದು ಕಾಳಜಿ..!? ರುಕ್ಮಿಣಿ ನಾಗಣ್ಣವರ ಹರವಾದ ಎದೆಯನೀಳ ತೋಳುಗಳಬರಿ ಮೈಯ ಮಹಾಭುಜನೇಬಾಣ ಹೆದೆಗೇರಿಸಿಸಂಚು ಹೂಡಿದನಿನ್ನ ಕಣ್ಣೋಟದ ಮೊನಚಿಗೆನಾನೆಂದೂ ಒಲಿದವಳಲ್ಲ ರದ್ದಿ ಸಾಲದೆಕಿಂಗುಸೈಜು ಪುಸ್ತಕಗಳೆದೆ ತುಂಬಅದೆಷ್ಟು ಕೈಗಳುಎಷ್ಟೋ ನಮೂನೆಯನಿನ್ನ ಹೆಸರು ಬರೆದುಜೈಕಾರ ಗೈದುಉಸಿರ ಹಿಡಿದು ಜಪಿಸಿದರೂನೀನು ಒಲಿದವನಲ್ಲ ಕಾಡಿನಲಿ ಆಡಿಕೊಂಡಿದ್ದಮೊಲದ ಮರಿಗಳುನಿನ್ನವೇ ಬೀಜಗಳು ಎಂಬ-ಸಬೂಬು ದೊರೆತುಲೋಕವನುಗೆದ್ದೆನೆಂದು ಬೀಗಿದವ ನೀನು ಮರ್ಯಾದೆ ಪುರುಷೋತ್ತಮನೇನಿನ್ನ ಅಸಲಿತನದಖಾತರಿ ಮಾಡಿಕೊಂಡೇಮತ್ತೆಂದೂ ನಿನ್ನ ಬಯಸದೆಮೂಲ ನೆಲೆಗೆ ಮರಳಿದವಳಿಗೆತನ್ನತನದ ಹುಡುಕಾಟವಿತ್ತು ತನ್ನನ್ನು ಮಾತ್ರ ಭಜಿಸಿನನ್ನನ್ನು ನನ್ನಜ್ಜಿ, ಮುತ್ತಜ್ಜಿಯರನ್ನುಹೀನರೆಂದು ಬಗೆದತರತಮಗಳನು ತೂಗುವನಿನ್ನವರ ಕಣ್ಣೋಟಮೊದಲು ಸರಿಪಡಿಸು ನನಗೆ ನಂಬಿಕೆಸಮತೆಯನುಯೋಗವೆಂದು ಸಾಧಿಸುವರಕ್ತ ಮಾಂಸ ತುಂಬಿರುವದೇಹಗಳ ಮೇಲೆಯಾವೊಂದರಲೂಆದರ್ಶವಾಗದವರಆರಾಧಿಸುವ ಮೂಢತನನನ್ನಲ್ಲಿಲ್ಲ ಕ್ಷಮಿಸು ಇಲ್ಲೀಗಯಕಶ್ಚಿತ ಕ್ಷುದ್ರ ಜೀವಿಯೊಂದುಶ್ವಾಸಕೋಶಗಳಲಿ ಮನೆಮಾಡಿಅಟ್ಟಹಾಸ ಮೆರೆದಿದೆಸಂಬಂಧಿ ಇಲ್ಲದ ಶವಗಳ ಮೇಲೆಅನಾಥತೆ ಹೊದ್ದು ಮಲಗಿಮನುಷ್ಯತ್ವದ ಪರೀಕ್ಷೆ ನಡೆಸಿದೆ ದುಡಿಯುವ ಕೈಗಳ ಕಟ್ಟಿಹಸಿವುಗಳದೇ ರಣಕೇಕೆಮಾಮೂಲಿಯಾಗಿದೆ ಕೇಳಿಸಿಕೊಳ್ಳುವುದುಈ ನಡುವೆಬಂಡವಾಳ ಬಡಾವಣೆ ಜನರಿಗೆ ಹಬ್ಬವಂತೆ ಮನೆಮನೆಯಿಂದ ಹೊರಟುನಿಂತಿವೆಕೆಜಿಗಟ್ಟಲೇ ತೂಗುವಅರಿಷಿಣ, ಬಿಳಿ ಲೋಹಗಳುಹಸಿದೊಡಲಗಳ ಕೂಗು ಕೇಳದ ಇವರಿಗೆಉಣ್ಣದ ಲಿಂಗದ ಮೇಲೆಎಷ್ಟೊಂದು ಭಕುತಿಎಷ್ಟೊಂದು ಕಾಳಜಿ!? **********************************

ಕವಿತೆ Read Post »

ಕಾವ್ಯಯಾನ

ಕವಿತೆ

ಆ – ಲಯ ಡಾ. ಅಜಿತ್ ಹರೀಶಿ ಆ ಕಲ್ಲುಗಳುಭೂಕಂಪಕ್ಕೆ ಸಿಲುಕಿನಡುಗಿ ಅಡಿಗಡಿಗೆಕುಸಿದು ಬಿದ್ದುದು ಅಲ್ಲ ಆಕಸ್ಮಿಕವಾಗಿಅದೇನೋ ತಾಗಿಅಲುಗಾಡಿನೆಲಕ್ಕುರುಳಿದ್ದೂ ಅಲ್ಲ..! ಏಕಶಿಲೆಯಂತೆಭದ್ರವಾಗಿದ್ದವುಗಳಬಡಿ-ಬಡಿದುಕೆಡವಿದ್ದು ನಾನೇ.. ಪಥ ಬದಲಿಸಿಸಮಯದಿಬಂಧಿಸುವ ಧನ್ಯನಾದಮೊಳಗಲೇ ಬೇಕಿದೆಕ್ರೀಯಾಶೀಲ ನಿನಾದ ಉರುಳಿ ಹೋದಕಲ್ಲುಗಳ ಆಯ್ದುಮತ್ತೆ ಕಟ್ಟಬೇಕಿದೆಅಡಿಯಿಂದಮುಡಿಯವರೆಗೂ..! * *

ಕವಿತೆ Read Post »

ಕಾವ್ಯಯಾನ

ಕವಿತೆ

ಖಾಲಿ ಬೆಂಚುಗಳ ಪ್ರಶ್ನೆ ದೇವು ಮಾಕೊಂಡ ನರೇಂದ್ರ, ನರೇಂದ್ರ!ಆಗ ಕೂಗಿನಲಿಏಕನಾದವಿತ್ತು ಹಾಳೆಗಳು ಮೆಲುಕು ಹಾಕುತ್ತಲೇ ಇದ್ದವುಕವಿತೆಯಾಗಿಹಾಡಾಗಿ ಈಗಆತಕಥೆಯಾಗಿದ್ದಾನೆಉಪಮೇಯಗಳ ನಡುವೆ ಸಿಲುಕಿಅಂತೆಕಂತೆಗಳ ಸಾಲು ಸೇರಿ ಅವನು ಕಟ್ಟಿ ಮೇಯಿಸಿದ ಧರ್ಮಹಗ್ಗ ಹರಿದುಕೊಂಡುಗೂಟ ಬದಲಿಸಿಕೊಂಡಿದೆಬಾಲಿಶ ಮೋಹ ಮಹಲುಗಳಿಗೆ ಅಂವ ನೆಟ್ಟ ಪಡಿ ಪದಾರ್ಥಗಳುಹಸಿಮಣ್ಣಿನ ಹುಸಿ ಬೀಜಗಳಾಗಿವೆ ನಾವೀಗ ಖಾಲಿ ಮೇಜುಗಳ ಹಿಂದೆ ನಿಂತುಕಪ್ಪು ಹಲಗೆಯ ಮೇಲೆ ಬರೆಯುವ ಹಾಗಿಲ್ಲಸಂತನೆಂದುಸನಾತನ ಪರಿಚಾರಕನೆಂದು ಈಗಖಾಲಿ ಬೆಂಚುಗಳೆ ಪ್ರಶ್ನೆ ಕೇಳುತ್ತಿವೆಅವನ ಮನೆಗೆ ಬಾಗಿಲುಗಳು ಎಷ್ಟೆಂದುಹಾಗಾಗಿನನ್ನ ತರಗತಿಯಲ್ಲಿ ನೀನೊಬ್ಬ ಪ್ರಶ್ನಾರ್ಥಕ ಚಿಹ್ನೆ ************************

ಕವಿತೆ Read Post »

ಕಾವ್ಯಯಾನ

ನಾನೂ ರಾಧೆ

ನಾನೂ ರಾಧೆ ಕವಿತೆ ಪೂರ್ಣಿಮಾ ಸುರೇಶ್ ನಮ್ಮೂರಿನ ತುಂಬೆಲ್ಲಾಅವರದೇ ಮಾತು- ಕತೆಕಾಡಿದೆ ಅವರ ಕಾಣುವತವಕದ ವ್ಯಥೆ ಆ ಹಾಲು ತುಳುಕುವ ಕೊಡಮೊಸರ ಮಡಕೆಅವಳ ಅರ್ಧ ಬಿಚ್ಚಿದ ಮುಡಿನವಿಲು ನಡಿಗೆಯ ಅಡಿಅವಳ ಮಿದುನುಡಿಯ ಚೆದುರುಆ ವಿಜನ ಬೀದಿದಟ್ಟನೆ ಬಿದಿರ ಮೆಳೆ ಯಮುನೆಯ ಕಚಗುಳಿ ಇಡುವಆ ಮೆಲ್ಲೆಲರುಅವನ ಗುನುಗಿನ ಬೆರಳುಅವಳ ಕಣ್ಣವೀಣೆಯ ಮೇಲೆಅವಳ ಅಕ್ಷತ ಬಿಂಬಅವನ ದಿಟ್ಟಿಯನು ತೊಳಗುವಬೆಳಕಿನ ಕಂಬ ಎಲ್ಲವನೂ ಇಣುಕಿಕಾಣುವ ಬಯಕೆಈ ಕಾತರ ದಗ್ಧ ಮನಕೆ,ಗೋಕುಲದ ಬಾಗಿಲಲ್ಲೆಒಲವ ಘಮಲುಪರಿಸರದ ತುಂಬರಾಸಲೀಲೆಯ ಅಮಲುಒಳಗೆ ಸುಳಿದಾಡಿದೆಅಲ್ಲಲ್ಲಿ ಎಡತಾಕಿದೆರಾಧಾಕೃಷ್ಣರ ಅರಸುತ ಸಿಕ್ಕಿದ ಕೃಷ್ಣ ಮುಗುಳ್ನಕ್ಕಹಾಡ ಜೇನಾಗಿಎದೆಯ ಒಳಹೊಕ್ಕಹಾಯೆನಿಸಿದೆ ಮನದೊಳಗೆಪ್ರೇಮ ಕೊಡೆ ಆಸರೆ ಮಳೆಯೊಳಗೆ ಈಗ ಕೃಷ್ಣನಪ್ರೇಮ ಕಾವ್ಯಕ್ಕೆನಾನೂ ರಾಧೆ. **************************

ನಾನೂ ರಾಧೆ Read Post »

ಇತರೆ

ವಿದ್ಯಾರ್ಥಿ ಪ್ರತಿಭೆ

ಭರವಸೆಯ ವಿದ್ಯಾರ್ಥಿ ಕವಿ ಪೂಜಾ ನಾಯಕ್ ಪೂಜಾ ನಾಯಕ್ ಮೂಲತ:  ಕುಮಟಾ ತಾಲ್ಲೂಕಿನ ನಾಡುಮಾಸ್ಕೇರಿಯವರಾಗಿದ್ದು ಸದ್ಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿಹೊಂದಿರುವ ಇವರು ತಮ್ಮ ಆರಂಭದ ಕೆಲ ಕವಿತೆಗಳಿಂದಲೇ ಭರವಸೆ ಮೂಡಿಸಿದ್ದಾರೆ.  ‘ಸದಾಶಯದೊಡನೆ ಮೂಡಿಬಂದ ಕವಿತೆಗಳು’               ಸಾಹಿತ್ಯ ರಚನೆಗೂ ಓದಿಗೂ ಏನಾದರೂ ಸಂಬಂಧವಿದೆಯೇ? ಸಾಹಿತ್ಯದ ವಿದ್ಯಾರ್ಥಿಗಳಿಗೆ ಮಾತ್ರವೇ ಕಾವ್ಯ ರಚನೆ ಸಿದ್ಧಿಸಿರುತ್ತದೆಯೇ? ಈ ಪ್ರಶ್ನೆಯಲ್ಲೇ ಹುರುಳಿಲ್ಲ. ಏಕೆಂದರೆ ಸಾಹಿತ್ಯೇತರ ಅಭ್ಯಾಸಗಳಲ್ಲಿ ತೊಡಗಿರುವವರಿಂದಲೂ ಹಲವಾರು ಶ್ರೇಷ್ಠ ಕೃತಿಗಳು ರಚನೆಯಾಗಿವೆ.        ಪೂಜಾ ನಾಯಕ್ ಕಾವ್ಯ ಕೃಷಿಯಲ್ಲಿ ತೊಡಗಿರುವ ವಿಜ್ಞಾನದ ವಿದ್ಯಾರ್ಥಿನಿ. ಅವರ ನಾಲ್ಕು ಕವನಗಳನ್ನು ನಾನು ಇತ್ತೀಚೆಗೆ ಓದಿದೆ. ಕಾವ್ಯದ ನಾಡಿಮಿಡಿತ  ಇವರಿಗೆ ಚೆನ್ನಾಗಿ ತಿಳಿದಿದೆ.     ಕರುಣಾಮಯಿ, ಮೂಡಿಬರಲಿ, ಜಂಜಾಟದ ಬದುಕು, ಕಾವ್ಯವಾಗಿ ಕರಗುತ್ತೇನೆ. ಇವೇ ಆ ನಾಲ್ಕು ಕವಿತೆಗಳು. ಕೇವಲ ನಾಲ್ಕು ಕವಿತೆಗಳಿಂದ ಒಬ್ಬ ಕವಿಯ ಸಮಗ್ರ ಸಾಹಿತ್ಯದ ಕುಸುರಿಯನ್ನು ಕುರಿತು ಮಾತನಾಡಲಾಗದು. ಹಾಗೆ ಮಾತನಾಡಲೂ ಬಾರದು.    ಹಾಗೆಂದು ಪೂಜಾ ಅವರ ನಾಲ್ಕು ಕವನಗಳು ನಿರ್ಲಕ್ಷಿಸಿ ಬಿಡುವಂತಹ ಕವನಗಳಲ್ಲ. ಕವಿಯ ಪ್ರಬುದ್ಧ ಮನಸ್ಸು ಹಾಗೂ ಕಾವ್ಯ ರಚನೆಯ ಹುಮ್ಮಸ್ಸನ್ನು ಈ ಕವನಗಳ ಮೂಲಕವೇ ಗುರುತಿಸಬಹುದು.  ‘ಕರುಣಾಮಯಿ’ ಕವನದ ‘ಹರಿದಿರುವ ಹರಕು ಅಂಗಿಯ ತುಂಡಿಗೂ ಮೊಂಡಾದ ಸೂಜಿಗೂ ಮಧುರವಾದ ಬಾಂಧವ್ಯ ಬೆಸೆದವಳು…’ ಎನ್ನುವ ಸಾಲುಗಳು ಲಂಕೇಶರ ‘ಅವ್ವ’ನನ್ನು ನೆನಪಿಗೆ ತಟ್ಟನೆ ತರಿಸುವಂತಿವೆ! ಆದರೆ ತಾಯೊಲುಮೆಯ ಹಿರಿಮೆ ಸಾರುವ ಈ ಕವಿತೆ ಆರಂಭಿಕ ಸಾಲುಗಳನ್ನು ಹೊರತುಪಡಿಸಿ ಉಳಿದಂತೆ ತೀರಾ ವಾಚ್ಯವಾಗಿ ಗದ್ಯದಲ್ಲಿ ನಿಂತುಬಿಡುತ್ತವೆ. ಕವಿ ಮತ್ತೊಮ್ಮೆ  ಸಾವಕಾಶ ಈ ಕವಿತೆಯನ್ನು ತಿದ್ದಿದರೆ ಉತ್ತಮ ಕವಿತೆ ಓದುಗರಿಗೆ ದಕ್ಕುತ್ತದೆ.      ‘ಕಾವ್ಯವಾಗಿ ಕರಗುತ್ತೇನೆ’ ಇದೊಂದು ಪ್ರಬುದ್ಧ ಕವಿತೆ.  ಕವಿ ಧ್ಯಾನಸ್ಥ ಮನಸ್ಥಿತಿಯಲ್ಲಿ ಈ ಕಾವ್ಯ ರಚಿಸಿದಂತಿದೆ. ನೋವು- ನಿರಾಸಗಳನ್ನು ಕಾಣುತ್ತಿರುವಾಗಲೇ ಬದುಕಿನ ಕುರಿತಂತೆ ಚಿಂತಿಸುತ್ತಾ, ತಾನು ಅದಮ್ಯ ಚೇತನವಾಗಿ ಉಳಿಯಬೇಕೆನ್ನುವ ತುಡಿತವನ್ನು ಈ  ಕಾವ್ಯದಲ್ಲಿ ಕಾಣಬಹುದು. ಎಷ್ಟೇ ವೈಫಲ್ಯ ಎದುರಾದರೂ ತನ್ನೊಳಗೆ ಗಟ್ಟಿಗೊಳ್ಳುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆನ್ನುವ ಛಲ ಕವಿಯದ್ದು.      ‘ಮತ್ತೆ ಮತ್ತೆ ಪ್ರವಾಹ ಬಂದೆರಗಿದಾಗ       ನನಗನಿಸುತ್ತದೆ ನಾನು ಹೀಗೆಯೇ        ಕಾವ್ಯನಾಗಿ ಮಂಜುಗಡ್ಡೆಯಂತೆ        ಕರಗಿಬಿಡಬೇಕು!’     ಇಡೀ ಕವಿತೆ ಜ್ವಾಲಾಮುಖಿ, ಅಗ್ನಿಪರ್ವತ, ಶಿವಮ ರುದ್ರ ಮೂರ್ತಿ, ಮಂಜುಗಡ್ಡೆಗಳ ರೂಪಕಗಳಲ್ಲಿ ಕುದಿಯುವ ಕವಿಮನಸ್ಸನ್ನು ಕಟ್ಟಿಕೊಡುತ್ತದೆ.      ‘ಜಂಜಾಟದ ಬದುಕು’ ಇದೂ ಸಹ ಹದಿಹರಯದ ಮಹಾತ್ವಾಕಾಂಕ್ಷೆಯುಳ್ಳ ಮನಸ್ಸಿನ ಪ್ರತಿಫಲನದಂತಹ ಕವಿತೆ. ಆಸೆಗಳು ಹಕ್ಕುಗಳಾಗಿ, ಹಕ್ಕುಗಳನ್ನು ಈಡೇರಿಸಿಕೊಳ್ಳಲು ಬಯಸುವ ಕವಿಯ ಚಿತ್ತವೃತ್ತಿ ಇಡೀ ಕವಿತೆಯಲ್ಲಿ ಎದ್ದು ಕಾಣುವ ಮುಖ್ಯಾಂಶ.        ‘ ನಿಬಿಡ ಹಗಲುಗನಸುಗಳು       ದಿಬ್ಬಣದಂತೆ ಸಾಗುತ್ತಿವೆ…’            ‘ ಕಂಡ ಕನಸುಗಳು               ದೀಪ ನಂದಿದಂತೆ              ನಂದಿಹೋಗುತಿವೆ…’         ‘ ನಿತ್ಯವೂ ದಿನಪೂರ್ತಿ ಜಂಜಾಡುತ್ತಾ                      ಮತ್ತದೇ ವಿಫಲ ಯತ್ನದತ್ತ            ಚಿತ್ತ ಹರಿಸುತ್ತ…’       ಕವಿತೆ ಹೋರಾಟ- ನಿರಾಸೆಗಳನ್ನು ಹೇಳುವುದಾದರೂ ‘ಮರಳಿ ಯತ್ನವ ಮಾಡು’ ಎಂಬ ನಾಣ್ಣುಡಿಯನ್ನು ಅಂತರಾಳದಲ್ಲಿ ಪ್ರತಿಪಾದಿಸುತ್ತದೆ.       ಕವಿತೆಯೊಳಗೆ ಕೆಲವು ಭಾವಗಳು ಹಾಗೂ ಸಾಲುಗಳು ಪುನರಪಿ ಎನಿಸುವುದರಿಂದ ಕವಿ ಮತ್ತೊಮ್ಮೆ ಕಾವ್ಯವನ್ನು ಸಮಗ್ರವಾಗಿ ಪುನರಚಿಸುವುದು ಸೂಕ್ತವಾಗಬಹುದು ಎನ್ನುವುದು ನನಿನ ಅಭಿಪ್ರಾಯ.      ‘ಮೂಡಿ ಬರಲಿ’ ಎಂಬ ಮೂರು ಮೂರು ಸಾಲುಗಳಲ್ಲಿ ರಚಿತವಾಗಿರುವ ಈ ತ್ರಿಪದಿ ಪದ್ಯ ಕವಿಯ ಕವಿತ್ವಕ್ಕೆ ಸಾಕ್ಷಿ. ಇದೊಂದು ಸದಾಶಯದ ಕವಿತೆ. ಒಳಿತನ್ನು ಕಾಣುವ, ಒಳಿತನ್ನೇ ಬಯಸುವ ಪರಿಶುದ್ಧ ಕವಿ ಮನಸ್ಸನ್ನು ನಾವಿಲ್ಲಿ ಕಾಣಬಹುದು.    ‘ಒಳ್ಳೆ ಬುದ್ಧಿಯಿಂದ      ಕಾಂತಿ ಹೊಂದಿ     ಕತ್ತಲೋಡಿ ಹೋಗಲಿ’   ‘ದವಸ-ಧಾನ್ಯ ಬೆಳೆದ ರೈತ  ನಾಡಲೆಲ್ಲಾ ಮೆರೆಯಲಿ’ ‘ ಮೇಲು – ಕೀಳು  ಕೊಳಕು ಕೊಚ್ಚಿ ಮನವು ಸ್ವಚ್ಛವಾಗಲಿ’     ಹೀಗೆ ಪುಟ್ಟ ಪುಟ್ಟ ಸಾಲುಗಳಲ್ಲಿಯೇ ಉದಾತ್ತ ಭಾವವನ್ನು ಸಾರುವ ಈ ಕವಿತೆಯನ್ನು ಓದುಯಾದ ಮೇಲೆ ಮನಸ್ಸು ಹರ್ಷಗೊಳ್ಳದೇ ಇರಲಾರದು.         ವಿಸ್ತಾರ ಓದಿನೊಡನೆ ಬುದ್ಧಿ- ಭಾವಗಳ ಸಮನ್ವಯದೊಂದಿಗೆ ಈ ಕವಿ ಮತ್ತಷ್ಟು ಉತ್ತಮ ಕವನಗಳನ್ನು ರಚಿಸಲಿ ಎನ್ನುವ ಸದಾಶಯ ಪ್ರೀತಿಯೊಡನೆ  ಶುಭಹಾರೈಸುವೆನು.  ಪೂಜಾ ನಾಯಕ್ ಕವಿತೆಗಳು ಕರುಣಾಮಯಿ ಆಸುಪಾಸಲ್ಲಿ ಬಿದ್ದಿದ್ದ ಕಟ್ಟಿಗೆಯ ತುಂಡಾಯ್ದು ಕಲಬೆರಕೆ ಅಕ್ಕಿಯಲಿ ಬೆರೆತಿದ್ದ ಕಲ್ಲಾಯ್ದು ಹೊಲದಲ್ಲಿ ಬೆಳೆದಿದ್ದ ಕಾಯಿಪಲ್ಲೆಯ ಕೊಯ್ದು ಹೊತ್ತಿಗೆ ಸರಿಯಾಗಿ ಕೈತುತ್ತು ಉಣಿಸಿದವಳು ಕರುಣಾಮಯಿ ನನ್ನಮ್ಮ… ಕಡು ಬಡತನದ ಸಂಕಟದಲ್ಲೂ ಆಶಾ-ಭರವಸೆಯ ನುಡಿಯಾಡಿ ಸಾವಿರ ಕಷ್ಟ – ಕಾರ್ಪಣ್ಯಗಳ ನಡುವೆ ತಾನೊಬ್ಬಳೇ ಹೋರಾಡಿ ಹರಿದಿರುವ ಹರುಕು ಅಂಗಿಯ ತುಂಡಿಗೂ ಮೊಂಡಾದ ಸೂಜಿಗೂ ಮಧುರವಾದ ಬಾಂಧವ್ಯ ಬೆಸೆದವಳು ಕರುಣಾಮಯಿ ನನ್ನಮ್ಮ.. ನಾ ಸೋತು ಕೂತಾಗ ಕರುಳಬಳ್ಳಿಯ ಅಳಲು ತಾ ಮನದಲ್ಲೇ ಅರಿತು ನನ್ನಲ್ಲಿ ಕೂಡ ಛಲದ ಬೀಜವನು ಬಿತ್ತಿ ನನ್ನ ಸಾವಿರ ಕನಸುಗಳನು ನನಸು ಮಾಡಲು ಹೊರಟು ನಿಂತವಳು ಕರುಣಾಮಯಿ ನನ್ನಮ್ಮ.. ಕೂಡಿಟ್ಟ ಕಾಸಿನಲಿ ಶಾಲೆಗೆ ಪೀಜು ತುಂಬಿ ತನ್ನ ಹರುಕು ಸೀರೆಯ ಲೆಕ್ಕಿಸದೆ ನನಗೊಂದು ಹೊಸ ಅಂಗಿಯ ಕೊಡಿಸಿ ದೊಡ್ಡ ಅಧಿಕಾರಿಯ ಸ್ಥಾನದಲಿ ತಾ ಕೂಸ ನೋಡಬೇಕೆಂದು ಆಸೆಯಿಂದ ಕಾಯುತ್ತ ಕುಳಿತವಳು ಕರುಣಾಮಯಿ ನನ್ನಮ್ಮ…. ತನ್ನ ಜೀವದ ಕೊನೆಯ ಉಸಿರಿನ ತನಕ ತನ್ನ ಮಗುವಿನ ಸುಖಕ್ಕಾಗಿ, ಉದ್ಧಾರಕ್ಕಾಗಿ ದುಡಿಯುವ ಆ ತಾಯಿಯ ಪ್ರೀತಿಗೆ ಎಣೆ ಎಂಬುದಿಹುದೇನು?…. ಅವಳ ಋಣ ತೀರಿಸಲು ಸಾಧ್ಯವಿಹುದೇನು?… ಅವಳ ಸ್ಥಾನವನ್ನು ಬೇರೆಯವರು ತುಂಬಲು ಅರ್ಹರೇನು?… ಅವಳಿಲ್ಲದ ಒಂದು ಕ್ಷಣ ಈ ಭೂವಿಯು ಬರೀ ಶೂನ್ಯವಲ್ಲವೇನು?. ಕಾವ್ಯವಾಗಿ ಕರಗುತ್ತೇನೆ ನಾನರಿಯಲಾಗದ  ಶೂಲೆಗಳೇ ಆಪ್ತವಾಗಿ ನನ್ನನ್ನು ಬಿಗಿದಪ್ಪಿಕೊಂಡಾಗ ಬದುಕು ಬರಡಾಗಿ ಬೆಂಬಿಡದೆ ಕಾಡಿದಾಗ ನನಗನಿಸುತ್ತದೆ, ನಾನೊಮ್ಮೆ ಜ್ವಾಲಾಮುಖಿಯಂತೆ ಭುಗಿಲೇಳಬೇಕು! ಕಳೆದುಕೊಂಡ ಮಧುರವಾದ ಪ್ರೇಮ ನೆನಪಿನಾಳದಲಿ ಪುಟಿದೆದ್ದು ಕೂತಾಗ ನನ್ನ ನಿಟ್ಟುಸಿರಿನಲೂ ಮಿಣುಕು ಹುಳುವಂತೆ ಮಿನುಗ ತೊಡಗಿದಾಗ ನನಗನಿಸುತ್ತದೆ, ನಾನೊಮ್ಮೆ ಅಗ್ನಿ ಪರ್ವತದಂತೆ ಧಗಧಗಿಸಿ ಉರಿಯಬೇಕು! ಕಗ್ಗತ್ತಲ ವೇಳೆಯಲಿ ನಿಶ್ಯಬ್ದ ನೂರಾರು ಬಯಕೆಗಳ ಹೊತ್ತ ದೂರ ದೂರ ನೇರ ಹಾದಿಗಳಲಿ ನೀರವತೆಯೇ ಮುಗುಳ್ನಕ್ಕಾಗ ನನಗನಿಸುತ್ತದೆ, ನಾನೊಮ್ಮೆ ಶಿವನಂತೆ ರುದ್ರವಾಗಿ ನರ್ತಿಸಬೇಕು! ಏಕಾಂತದಲಿ ಮರೀಚಿಕೆಯಂತ ಕನಸುಗಳು ಎಡಬಿಡದೆ ತಿವಿದಾಗ ಹಿಂದಿನ ಕಹಿ ನೆನಪೇ ತುಡಿದಾಗ ಕಂಬನಿಯೇ ಬೇರೂರಿದಾಗ ನನ್ನೆದೆಯ ಶರಧಿಯಲಿ ಮತ್ತೆ ಮತ್ತೆ ಪ್ರವಾಹ ಬಂದೆರಗಿದಾಗ ನನಗನಿಸುತ್ತದೆ, ನಾನು ಹೀಗೆಯೆ ಕಾವ್ಯವಾಗಿ   ಮಂಜುಗಡ್ಡೆಯಂತೆ ಕರಗಿಬಿಡಬೇಕು!. ಜಂಜಾಟದ ಬದುಕು ಬೆಳಗೆದ್ದು ಎತ್ತೆತ್ತ ನೋಡಿದರೂ ಕಾಣದಾ ದಿಕ್ಕು ಕಂಡರೇನಂತೆ, ಅತ್ತ ಹೋದರೆ ಸಿಗದಿರುವ ಹಕ್ಕು ಕಡಿವಾಣವಿಲ್ಲದೇ ಕಡಲಂತೆ ಬೋರ್ಗರೆವ ಆಸೆಗಳ ಈಡೇರಿಕೆಗೋಸುಗ ನಿತ್ಯವೂ ದಿನಪೂರ್ತಿ ಜಂಜಾಟ ಮತ್ತದೇ ವಿಫಲ ಯತ್ನ. ತಲೆಪೂರ್ತಿ ತುಂಬಿದಾ ನಿಬಿಡ ಹಗಲುಗನಸುಗಳು ದಿಬ್ಬಣದಂತೆ ಸಾಗುತಿವೆ ಕಂಡೆಲ್ಲ ಕನಸುಗಳು ದೀಪ ನಂದಿದಂತೆ ನಂದಿಹೋಗುತಿವೆ ಸಹಿಸಲಾಗದ ಸಂಕಟ ಎತ್ತೆತ್ತಲಿಂದಲೋ ಕುಠಾರದ ಮೊನಚಂತೆ, ಕುಹಕ ಮಾತುಗಳೇಳುತಿವೆ ಸುಡುತಿಹುದು ನನ್ನೆದೆಯ ವಾರಿಧಿಯು ಬೆಂಕಿಯಾಜ್ವಾಲೆಯಂತೆ. ತಪ್ತ ಹೃದಯಕೆ ತಿರಸ್ಕಾರ ಎಲ್ಲೆಲ್ಲೂ, ಮತ್ತೆಲ್ಲ ಯತ್ನ ನೆಲಕಚ್ಚಿಹೋದಾಗ ಕೊನೆಗೇಗೋ ಹೋಗುವುದು ಮುಂದಕ್ಕೆ ಬದುಕು ಹುರುಪು-ಗಿರುಪುಗಳಿಲ್ಲ ಬದುಕಲ್ಲಿ ನಶ್ವರವೇ ಕೊನೆಗೂ ಎಂಬ ಸಾರಕ್ಕೆ ಶಿರಬಾಗಿ ದಿಕ್ಕು-ಹಕ್ಕುಗಳಿಲ್ಲದೇ ಕಡಿವಾಣ-ಗಿಡಿವಾಣಗಳಿಲ್ಲದೇ ಬೋರ್ಗರೆವ ಆಸೆಗಳ ಈಡೇರಿಕೆಗೆ ನಿತ್ಯವೂ ದಿನಪೂರ್ತಿ ಜಂಜಾಡುತ್ತಾ ಮತ್ತದೇ ವಿಫಲ ಯತ್ನದತ್ತ ಚಿತ್ತ ಹರಿಸುತ್ತ. ಮೂಡಿ ಬರಲಿ ( ಕವನ) ಮೂಡಿ ಬರಲಿ ಮೂಡಿ ಬರಲಿ ದೇಶಪ್ರೇಮ ನಮ್ಮಲಿ..       ಕೂಡಿ ಬರುವ                    ಭಾವವೆಲ್ಲ       ಜಗದಲಿಂದು ಚಿಮ್ಮಲಿ. ಮೇಲು-ಕೀಳು ಕೊಳಕು ಕೊಚ್ಚಿ  ಮನವು ಸ್ವಚ್ಛವಾಗಲಿ.     ಒಳ್ಳೆ ಬೀಜ     ಪುಷ್ಟಿ ಗೊಬ್ಬರದಿಂದ     ಬೆಳೆಯು ಬೆಳೆದು ನಿಲ್ಲಲಿ. ದಾನ-ಧರ್ಮವ ಜಗಕೆ ಸಾರಿ ಒಳ್ಳೆ ಭಾವವು ತುಂಬಲಿ.       ಒಳ್ಳೆ ಬುದ್ಧಿಯಿಂದ       ಕಾಂತಿ ಹೊಂದಿ       ಕತ್ತಲೋಡಿ ಹೋಗಲಿ. ಊರಲೆಲ್ಲ ಮಳೆಯು ಬಿದ್ದು ಹಳ್ಳ-ಕೊಳ್ಳ ತುಂಬಿ ಹರಿಯಲಿ.       ಒಳ್ಳೆ ಬೆಳೆಯು       ಬೆಳೆದು ನಿಂತು       ಎಲ್ಲ ಜನರು ಹಾಡಲಿ. ದವಸ-ಧಾನ್ಯ ಬೆಳೆದ ರೈತ ನಾಡಲೆಲ್ಲ ಮೆರೆಯಲಿ.     ರಾಮರಾಜ್ಯ     ಪಡೆವ ಭಾಗ್ಯ     ಇಂದು ನಮ್ಮ ದಾಗಲಿ. ********************************************************* ಪರಿಚಯಬರಹ: ವಸುಂಧರಾ ಕದಲೂರು

ವಿದ್ಯಾರ್ಥಿ ಪ್ರತಿಭೆ Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಗೆಳೆಯನ ಮಕ್ಕಳು

ಗೆಳೆಯನ ಮಕ್ಕಳು ಅಂಕಣ ಬರಹ ಎಷ್ಟೊ ವರ್ಷಗಳ ಬಳಿಕ ಗೆಳೆಯನ ಮನೆಗೆ ಹೋಗಬೇಕಾಯಿತು. ಅವನೂ ಅವನ ಹೆಂಡತಿಯೂ ಪ್ರೀತಿಯಿಂದ ಬರಮಾಡಿಕೊಂಡರು. ನಾನು ಅವರ ಮನೆ ಹೊಕ್ಕಾಗ ಎಂಟು ವರ್ಷದ ಮಗಳು ಬೊಂಬೆಗೆ ಸೀರೆಯುಡಿಸುತ್ತಿದ್ದಳು. ಹನ್ನೆರಡು ವರುಷದ ಮಗ ಸೋಫಾದಲ್ಲಿ ಮೈಚೆಲ್ಲಿ ಕಾಲನ್ನು ಆಗಸಕ್ಕೆ ಚಾಚಿ ಲ್ಯಾಪ್‍ಟಾಪಿನಲ್ಲಿ ವಿಡಿಯೊ ಗೇಂ ಆಡುತ್ತಿದ್ದ. ಮನೆಗೆ ಬಂದು ಹೋದವರ ಬಗ್ಗೆ ಖಬರಿಲ್ಲದಷ್ಟು ತನ್ಮಯನಾಗಿದ್ದ. ನನ್ನ ಗೆಳೆಯ `ಅಪ್ಪಿ ನೋಡೊ. ನನ್ನ ಕ್ಲಾಸ್‍ಮೇಟ್ ಬಂದಾನ. ಅಂಕಲ್‍ಗೆ ನಮಸ್ಕಾರ ಮಾಡು’ ಎಂದರೂ ಕಣ್ಣೆತ್ತಿ ನೋಡಲಿಲ್ಲ. ನಾನೊಯ್ದ ತಿಂಡಿಯನ್ನು ಹದ್ದುಗಣ್ಣಿನಿಂದ ಗಮನಿಸಿದ್ದನೆಂದು ಕಾಣುತ್ತದೆ, ಲಕ್ಕನೆ ಎತ್ತಿಕೊಂಡು ಪ್ಯಾಕು ಹರಿದು ಮುಕ್ಕತೊಡಗಿದ. ಲ್ಯಾಪ್‍ಟಾಪ್ ಆಟ ಮುಗಿದ ಬಳಿಕ ಕಾರ್ಟೂನು ಸಿನಿಮಾ ಟಿವಿಯಲ್ಲಿ ಹಾಕಿಕೊಂಡು ಕುಳಿತ. ನನಗೆ ಅವನ ಜತೆಗೆ ಮಾತಾಡಲೇಬೇಕೆಂದು ಹಠ ಹುಟ್ಟಿತು. ಆತ ನನ್ನ ಪ್ರಶ್ನೆಗಳಿಗೆ ನನ್ನತ್ತ ನೋಡದೆ ಜವಾಬುಕೊಡುತ್ತಿದ್ದ. ಗಮನಿಸಿದೆ: ಅವನ ಕನ್ನಡದಲ್ಲಿ ಬಣ್ಣಕ್ಕೆ ಮತ್ತು ಅಂಕಿಗಳಿಗೆ ಮನೆಮಾತಿನಲ್ಲಿ ಗುರುತಿಸುವ ಶಬ್ದಗಳಿರಲಿಲ್ಲ. ಮಕ್ಕಳನ್ನು ನಮ್ಮಿಚ್ಛೆಯಂತೆ ರೂಪಿಸಬೇಕಾಗಿಲ್ಲ. ಅವು ತಮ್ಮಿಚ್ಛೆಯಂತೆಯೇ ರೂಪುಗೊಳ್ಳಲಿ. ಸಾಧ್ಯವಾದರೆ ನಾವು ಅವುಗಳಿಂದ ಕಲಿಯೋಣ ಎಂದ ಚಿಂತಕ ಖಲೀಲ್ ಗಿಬ್ರಾನನ ಹಿತನುಡಿ ಚರ್ಚಾಸ್ಪದ ಅನಿಸಿತು. ನನ್ನ ಮುಖವನ್ನೇ ಗಮನಿಸುತ್ತಿದ್ದ ಗೆಳೆಯ ತುಸುನಗುತ್ತ ಹೇಳಿದ: `ದೋಸ್ತಾ, ನೋಡಿದೆಯಾ ಕಾಲ ಹೆಂಗ ಚೇಂಜಾಗದ? ನಾವು ಸಣ್ಣೋರಿದ್ದಾಗ ಗೋಲಿ ಚೆಂಡು ಚಿನ್ನಿದಾಂಡು ಆಡ್ತಿದ್ದೆವು. ಈಗಿನವಕ್ಕೆ ಆಡೋಕೆ ಲ್ಯಾಪ್‍ಟಾಪೇ ಬೇಕು’.ಅವನ ದನಿಯಲ್ಲಿ ಹೊಸ ತಲೆಮಾರಿನ ಮಕ್ಕಳ ಅಭಿರುಚಿ ಬದಲಾದ ಬಗ್ಗೆ ಸಣ್ಣಗಿನ ವಿಷಾದವಿತ್ತು. ಅದರೊಳಗೆ `ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ಬೆಳೆಸಿದ್ದೇನೆ’ ಎಂಬ ಹಮ್ಮೂ ಕೂಡಿದಂತಿತ್ತು. ಭಾರತದ ಬಹುತೇಕ ಪ್ರಜೆಗಳ ಕೈಗೀಗ ಮೊಬೈಲು ಬಂದಿವೆ. ಹಲವರಿಗೆ ಕಂಪ್ಯೂಟರ್ ಲ್ಯಾಪ್‍ಟಾಪು ಟ್ಯಾಬುಗಳೂ ಸಿಕ್ಕಿವೆ. ಈ ತಂತ್ರಜ್ಞಾನ ಚಾಲಿತ ಸರಕುಗಳ ಆಗಮನದಿಂದ ಬಾಳಿನ ಗತಿಯಲ್ಲಿ ವಿಚಿತ್ರ ವೇಗ ಬಂದಿದೆ. ಮನೆಗೆಲಸ ಮಾಡುವ ಮಹಿಳೆಯಿಂದ ಹಿಡಿದು ದಿನಗೂಲಿ ಹುಡುಕುವವರ ತನಕ, ವ್ಯಾಪಾರಿಯಿಂದ ರೈತರ ತನಕ ಅನೇಕರ ಕಸುಬಿನಲ್ಲಿ ಸಂಚಲನ ಮೂಡಿದೆ; ಬರೆಹಗಾರರ, ಅಧ್ಯಾಪಕರ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯವವರ ಹಾಗೂ ಪತ್ರಕರ್ತರ ಬದುಕಿನಲ್ಲಿ ಹೊಸ ನೆಗೆತ ಸಿಕ್ಕಿದೆ. ಇದೊಂದು ಕ್ರಾಂತಿಕಾರಿ ಪಲ್ಲಟವೇ ಸೈ. ಆದರೆ ಈ ಸಂಚಲನೆ-ಪಲ್ಲಟಗಳ ಜತೆಗೆ ಈ ಸರಕು-ಸಲಕರಣೆಗಳಿಂದ, ಮಕ್ಕಳ ಮತ್ತು ತರುಣರ ವರ್ತನೆಯಲ್ಲಿ ಒಂದು ಬದಲಾವಣೆಯಾಗಿದೆ. ಅವರು ಮನುಷ್ಯ ಸಂಪರ್ಕವೇ ಇಲ್ಲದೆ ಅತಿದೀರ್ಘವಾದ ಕಾಲವನ್ನೂ ಏಕಾಂಗಿಯಾಗಿ ಕಳೆಯಬಲ್ಲವರಾಗಿದ್ದಾರೆ. ಪಕ್ಕದಲ್ಲಿ ಎದುರುಗಡೆ ಯಾರಿದ್ದಾರೆ ಎಂಬ ಖಬರಿಲ್ಲದೆ, ಮೈಕ್ರೊಫೋನ್ ಬೆಂಡೋಲೆಯನ್ನು ಕಿವಿಗೆ ತುರುಕಿಕೊಂಡು ಹಾಡುಕೇಳುತ್ತ ಧ್ಯಾನಸ್ಥರಾಗಿ ತಮ್ಮ ಜಗತ್ತನ್ನು ಸೃಷ್ಟಿಸಿಕೊಂಡು ಮುಳುಗಬಲ್ಲವರಾಗಿದ್ದಾರೆ; ಮೊಬೈಲ್ ಪರದೆಯ ಮೇಲೆ ಬೆರಳಾಡಲು ಬಿಟ್ಟು ಕಣ್ಣನ್ನು ಅಂಟಿಸಿ ಕಾಲಕಳೆವವರಾಗಿದ್ದಾರೆ; ಹೊರಗಿಂದ ಕರೆ ಬರಲಿ ಬಾರದಿರಲಿ, ಅಲ್ಲಾವುದ್ದೀನನು ಮಾಯಾದೀಪವನ್ನು ಕೈಸೆರೆ ಮಾಡಿಕೊಂಡಿರುವಂತೆ ಅವರ ಅಂಗೈಗಳು ಮೊಬೈಲುಧಾರಿಯಾಗಿವೆ. ಕೆಲವರ ಮನೆಯಲ್ಲಿ ಚಿಕ್ಕಮಕ್ಕಳು ಅತಿಥಿಗಳ ಮೇಲುಬಿದ್ದು ಸ್ನೇಹ ಮಾಡಿಕೊಂಡು, ಉಪಾಯವಾಗಿ ಮೊಬೈಲನ್ನೆಗರಿಸಿ ಗೇಮನ್ನಾಡಲು ಆರಂಭಿಸುವುದುಂಟು. ಆನೆ ಕೋತಿಯ ಬೊಂಬೆಗಳ ಜಾಗದಲ್ಲಿ ಗನ್ನುಹಿಡಿದ ಸೈನಿಕರು ಟ್ಯಾಂಕುಗಳು ಬಂದಿದ್ದವು-ಅಮೆರಿಕದ ಕೆಟ್ಟ ಯುದ್ಧಸಂಸ್ಕತಿಯ ಅನುಕರಣೆಯಾಗಿ. ಈಗ ಮೊಬೈಲಾಟಿಕೆ ಬಂದಿವೆ. ಎಳೆಕೂಸಿಗೂ ನಿಜವಾದ ಮತ್ತು ಆಟಿಕೆಯ ಮೊಬಲುಗಳ ವ್ಯತ್ಯಾಸ ಗೊತ್ತಿದೆ. ಇನ್ನೊಬ್ಬ ಮಿತ್ರ ಹೇಳುತ್ತಿದ್ದ: `ನನ್ನ ಮಗ ಎಷ್ಟೇ ಅಳುವಿನಲ್ಲಿರಲಿ, ಮೊಬೈಲು ಕೊಟ್ಟರೆ ಗಪ್‍ಆಗ್ತಾನ.’ ರೈಲಿನಲ್ಲೊ ಬಸ್ಸಿನಲ್ಲೊ ಅಕ್ಕಪಕ್ಕ ಕೂತವರು, ಹತ್ತು ನಿಮಿಷದಲ್ಲಿ ಮುಗುಳುನಗು ವಿನಿಮಯ ಮಾಡಿಕೊಂಡು ಎಲ್ಲಿಗೆ ಹೊರಟಿದ್ದೀರಿ ಯಾಕೆ ಎಂದು ಸುರುಮಾಡಿ, ತಮ್ಮ ಸ್ಟೇಶನ್ ಬರುವ ಹೊತ್ತಿಗೆ ಎಷ್ಟೆಲ್ಲ ಹಂಚಿಕೊಳ್ಳುವ ಪದ್ಧತಿ ಹಿಂದಿನಿಂದಿತ್ತು. ಇದು ಅನಗತ್ಯವಾಗಿ ಗುದ್ದಲಿ ಹಿಡಿದು ವೈಯಕ್ತಿಕ ವಿಷಯದ ಹೊಲವನ್ನು ಅಗೆಯುವ ಕುತೂಹಲಿಗಳ ಕಾಟಕ್ಕೂ ಕಾರಣವಾಗಿತ್ತು. ಆದರೆ ಮೊಬೈಲುಗಳಲ್ಲಿ ಮುಳುಗಿದ ಸಹಪಯಣಿಗರಿಂದ ಈಗ ಮಾತುಕತೆಯೇ ನಿಂತಿದೆ. ದೂರದಲ್ಲಿದ್ದ ಜನರನ್ನು ಪರಸ್ಪರ ಸಂಪರ್ಕಿಸಲು ಹುಟ್ಟಿದ ತಂತ್ರಜ್ಞಾನ, ಪರಸ್ಪರ ಜನರ ಸಂಪರ್ಕವನ್ನೇ ಕಡಿದುಹಾಕಿದೆ.ಕೇಳುವ ಓದುವ ಕ್ರಿಯೆಗಿಂತ ನೋಡುವ ಮಾಧ್ಯಮದ ಶಕ್ತಿ ಪ್ರಚಂಡ. ಅದಕ್ಕೆ ತಂತ್ರಜ್ಞಾನ ಸೇರಿಕೊಂಡು ಮತ್ತಷ್ಟು ವಶೀಕರಣ ಮಾಡಿದೆ. ಹೊಸ ತಲೆಮಾರು ತಂತ್ರಜ್ಞಾನವನ್ನು ಬೇಗ ತನ್ನದಾಗಿಸಿಕೊಳ್ಳುತ್ತದೆ. ಪ್ರಶ್ನೆಯೆಂದರೆ, ಕೇಡು ಸಂಭವಿಸಿದರೆ ಕಾರಣ ತಂತ್ರಜ್ಞಾನವೊ, ತಂತ್ರಜ್ಞಾನ ಬಳಸುತ್ತಿರುವ ಮನೋಧರ್ಮವೊ? ತಂತ್ರಜ್ಞಾನ ಸಾಮಾನ್ಯವಾಗಿ ಮೌಲ್ಯನಿರ್ಲಿಪ್ತ. ಯಾರು ಯಾತಕ್ಕಾಗಿ ಬಳಸುತ್ತಿದ್ದಾರೆ ಎನ್ನುವುದರ ಮೇಲೆ ದೋಷಪೂರ್ಣವೊ ಉಪಯುಕ್ತವೊ ಅನಾಹುತಕಾರಿಯೊ ಆಗುತ್ತದೆ. ಅದೊಂದು ಇಬ್ಬಾಯ ಕತ್ತಿ. ಬುಲ್ಡೋಜರನ್ನು ದಿಬ್ಬಕಡಿದು ರಸ್ತೆ ಮಾಡಲು, ಕಬ್ಬಿಣದ ಅದಿರನ್ನು ಅಕ್ರಮವಾಗಿ ಅಗಿಯಲು, ಹೆಣಗಳ ಸಾಮೂಹಿಕ ಸಂಸ್ಕಾರ ಮಾಡಲು ಅಥವಾ ತಮ್ಮ ಭೂಮಿ ಬಿಟ್ಟುಕೊಡದ ರೈತರ ಮನೆಕೆಡವಿ ಒಕ್ಕಲೆಬ್ಬಿಸಲು ಬಳಸಬಹುದು. ಭಾಷೆ ವಿಷಯದಲ್ಲೂ ಅಷ್ಟೆ. ತನಗೆ ತಾನೇ ಇಂಗ್ಲೀಶು ಕೆಡುಕೂ ಅಲ್ಲ ಒಳಿತೂ ಅಲ್ಲ. ಸಮಾಜ ಬಳಸುವ ವಿಧಾನದಿಂದ ಅದರ ಪರಿಣಾಮ ನಿಶ್ಚಿತವಾಗುತ್ತದೆ. ಹೀಗಾಗಿ ಸಮಸ್ಯೆ ಇರುವುದು ತಂತ್ರಜ್ಞಾನದಲ್ಲಲ್ಲ. ಅದನ್ನೊಂದು ಬದುಕಿನ ಭಾಗ್ಯವೆಂದು ಭಾವಿಸಿ ಸಂಭ್ರಮಿಸುತ್ತಿರುವ, ಅದರಿಂದ ಫರಿಣಾಮ ಏನಾಗುತ್ತಿದೆ ಎಂದು ಪರೀಕ್ಷಿಸಿಕೊಳ್ಳದ ಸಾಮಾಜಿಕ ಮನೋಭಾವದಲ್ಲಿ. ನಮ್ಮ ಮಕ್ಕಳು ಕಂಪ್ಯೂಟರ್‍ನಲ್ಲಿ ಆಟವಾಡುತ್ತವೆ, ಇಂಗ್ಲೀಶ್ ಮೀಡಿಯಂನಲ್ಲಿ ಓದುತ್ತಿವೆ, ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಹಿಡಿದಿವೆ, ವಿದೇಶದಲ್ಲಿವೆ, ನಾವು ನಿವೃತ್ತಿಯಾಗುವಾಗ ಪಡೆದ ಸಂಬಳವನ್ನು ಈಗಲೇ ಗಳಿಸುತ್ತಿವೆ-ಮುಂತಾದ ಗರಿಗಳನ್ನು ತಲೆಗೆ ಸಿಕ್ಕಿಸಿಕೊಂಡು ತಿರುಗಾಡುವ ಮಧ್ಯಮವರ್ಗದ ತಂದೆತಾಯಿಗಳಿದ್ದಾರೆ. ಈ ಸಾಧನೆಗಳ ಫಲವಾಗಿ ಏನೆಲ್ಲ ಕಳೆದುಹೋಗಿದೆ ಎಂಬುದರ ಲೆಕ್ಕವನ್ನೇ ಅವರು ಮಾಡಿದಂತಿಲ್ಲ ಅಥವಾ ಈಗ ಮಾಡಲಾರಂಭಿಸಿದ್ದಾರೆ. ಅವರು ಕಂಡ ಕನಸು ನಿಜವಾಗಿರಬಹುದು. ಅದಕ್ಕಾಗಿ ದೊಡ್ಡಮನೆಗಳಲ್ಲಿ ಒಂಟಿ ಬದುಕನ್ನು ದೂಡುವ ಬೆಲೆಯನ್ನೂ ಅವರು ತೆರಬೇಕಾಗಿದೆ. ಈ ಅನಾಥಪ್ರಜ್ಞೆಗೆ ಅವರು ಮಾತ್ರವಲ್ಲ, ಅವರನ್ನು ಸೆಳೆದಿರುವ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯೂ ಕಾರಣ. ಯಾರೋ ಹೇಳಿದ ಮಾತು ನೆನಪಾಗುತ್ತಿದೆ: `ಎಸೆಲ್ಸಿ ಫೇಲಾದ ದಡ್ಡಮಗ ಇದ್ದಿದ್ದರೆ ನಾವು ಬಹುಶಃ ಕೊನೆಗಾಲದಲ್ಲಿ ಒಂಟಿಯಾಗಿರುತ್ತಿರಲಿಲ್ಲ’. ದಡ್ಡಮಕ್ಕಳ ತಂದೆತಾಯಂದಿರೂ ಬೇರೆ ಕಾರಣದಿಂದ ಒಂಟಿಯಾಗಿರುವ ನಿದರ್ಶನಗಳಿವೆ. ಆದರೆ ಬೇಕೆಂದಾಗ ನೋಡಲು ಆಗದಷ್ಟು ಮಕ್ಕಳನ್ನು ಮತ್ತು ತಾಯ್ತಂದೆಯರನ್ನು ದೂರ ಮಾಡಿರುವ ಒಂಟಿತನದ ಸ್ವರೂಪವೇ ಬೇರೆ. ದೇಶಗಳ ದೂರವೀಗ ದೊಡ್ಡ ಸಮಸ್ಯೆಯಲ್ಲ. ಆದರೆ ಭೌತಿಕವಾದ ಅದು ಮಾನಸಿಕ ದೂರವೂ ಸಾಂಸ್ಕøತಿಕ ವಿಚ್ಛೇದನವೂ ಆಗುತ್ತಿರುವುದು ಸಮಸ್ಯೆಯಾಗಿದೆ.ಹೊಸತಲೆಮಾರು ಅಪ್ಪಅಜ್ಜಂದಿರ ಹಾಗೆ ಬದುಕಬೇಕು ಎಂದು ಯಾರೂ ನಿರೀಕ್ಷಿಸಬಾರದು. ಹಾಗೆ ಬದುಕುವುದು ಯಾವ ತಲೆಮಾರಿಗೂ ಸಾಧ್ಯವಿಲ್ಲ. ಪ್ರತಿ ತಲೆಮಾರು ತನ್ನದೇ ಲೋಕದೃಷ್ಟಿಯನ್ನು ಜೀವನ ನಡೆಸುವ ಕ್ರಮವನ್ನೂ ವೈಯಕ್ತಿಕ ಅಭಿರುಚಿಯಿಂದಲೊ ಪರಿಸರದ ಒತ್ತಡದಿಂದಲೊ ಪಡೆದುಕೊಳ್ಳುತ್ತದೆ. ಅದು ಅದರ ಹಕ್ಕು ಕೂಡ. ಹಳೆಯ ಮತ್ತು ಹೊಸ ತಲೆಮಾರುಗಳ ನಡುವೆ ಮೌಲ್ಯಗಳ ತಿಕ್ಕಾಟವನ್ನೇ ಕನ್ನಡದ ಕತೆ ಕಾದಂಬರಿಗಳು ಚಿತ್ರಿಸುತ್ತ ಬಂದಿವೆ- `ಇಂದಿರಾಬಾಯಿ’ಯಿಂದ ಹಿಡಿದು `ತೇರು’ `ಗಾಂಧಿಬಂದ’ `ಹಳ್ಳಬಂತು ಹಳ್ಳ’ತನಕ. ಸಮಸ್ಯೆಯೆಂದರೆ, ಹೊಸ ತಲೆಮಾರು ತನ್ನ ಬದುಕನ್ನು ಸ್ವಂತ ವಿವೇಚನೆ ಮತ್ತು ನಿರ್ಧಾರದಿಂದ ರೂಪಿಸಿಕೊಳ್ಳುತ್ತಿದೆಯೇ? ಬೇರೆ ಯಾವ್ಯಾವೊ ಬಲಾಢ್ಯ ಶಕ್ತಿಗಳು ಅದನ್ನು ರೂಪಿಸುತ್ತಿಲ್ಲವೇ? ಮಾರುಕಟ್ಟೆ ನಮ್ಮ ಶಿಕ್ಷಣವನ್ನು, ಅದರಿಬೇಕಾದ ಮಾಧ್ಯಮವನ್ನು, ನಾವಾಡುವ ಭಾಷೆಯನ್ನು, ಮಾಡುವ ಉದ್ಯೋಗವನ್ನು ಅಷ್ಟೇಕೆ ನಮ್ಮ ಆಲೋಚನೆ ವರ್ತನೆಗಳನ್ನು ಸಹ ಪ್ರಭಾವಿಸುತ್ತಿದೆ. ಇಲ್ಲಿ ಸ್ಪರ್ಧೆ, ಗೆಲುವು, ಯಶಸ್ಸು, ವ್ಯಕ್ತಿವಾದಗಳು ಹೊಸ ಮೌಲ್ಯಗಳಾಗುತ್ತಿವೆ; ಬೇರಿಲ್ಲದ ಹೊಸತಲೆಮಾರು ಮತ್ತು ಅನಾಥಪ್ರಜ್ಞೆಯ ಹಳೆಯ ತಲೆಮಾರು ನಿರ್ಮಾಣವಾಗುತ್ತಿವೆಯೇ? ವಿಚಾರ ಮಾಡಬೇಕು. ವಿಜ್ಞಾನ ತಂತ್ರಜ್ಞಾನ ಪ್ರಧಾನವಾದ ಶಿಕ್ಷಣ ಪಡೆದು ದೇಶಾಂತರ ಚಲನೆ ಪಡೆದಿರುವ ಮಕ್ಕಳ ಸೀಮೋಲ್ಲಂಘನೆಯ ಬಗ್ಗೆ, ಸರೀಕರ ಎದುರು ಬಡಾಯಿ ಕೊಚ್ಚಿಕೊಳ್ಳುವ ತಂದೆತಾಯಿಗಳು, ಏಕಾಂತದಲ್ಲಿ ಚಡಪಡಿಸುತ್ತಿರುತ್ತಾರೆ. ಮಕ್ಕಳಿಗೆ ಲ್ಯಾಪ್‍ಟಾಪು ಕೊಡಿಸುವಾಗ, ಶಾಲೆಗೆ ಹೋಗಲು ಅಂಗಿಯಿಲ್ಲದ ಚಪ್ಪಲಿಯಿಲ್ಲದ ಮಕ್ಕಳು ಬೀದಿಯ ತುದಿಗಿವೆ ಎಂಬುದನ್ನು ಅವರು ಯೋಚಿಸಲಿಲ್ಲ; ನೀಲಿ ಯೂನಿಫಾರ್ಮ್ ಹಾಕಿಕೊಂಡು ಬರಿಗಾಲಲ್ಲಿ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳು ಹಾಗಿರಲು ವ್ಯವಸ್ಥೆ ಮಾತ್ರವಲ್ಲ, ಮಧ್ಯಮವರ್ಗದವರ ಸ್ವಕೇಂದ್ರಿತ ಆಲೋಚನ ಕ್ರಮವೂ ಕಾರಣವೆಂದು ಅವರಿಗೆ ಹೊಳೆಯಲಿಲ್ಲ; ಸುತ್ತಲಿನ ಪರಿಸರದ ಬಗ್ಗೆ ಮಕ್ಕಳನ್ನು ಸೆನ್ಸಿಟೈಜ್ ಮಾಡಲು ಯತ್ನಿಸಲಿಲ್ಲ. ಮಕ್ಕಳನ್ನು ಹೆರುವ ಜೈವಿಕ ಕ್ರಿಯೆ ಸುಲಭ. ಅವನ್ನು ಪರಿಸರದ ಬಗ್ಗೆ ಪ್ರೀತಿ ಕಾಳಜಿ ಕಲಿಸಿ ಸೂಕ್ಷ್ಮಸಂವೇದಿ ಮನುಷ್ಯರನ್ನಾಗಿ ಮಾಡುವುದು ಕಷ್ಟದ ಕೆಲಸ. ಸಮಸ್ಯೆ ಆಧುನಿಕತೆ ವಿಜ್ಞಾನ ತಂತ್ರಜ್ಞಾನಗಳಲ್ಲಿಲ್ಲ. ಅದರಲ್ಲಿ ಅಳವಟ್ಟಿರುವ ವ್ಯಕ್ತಿವಾದಿ ಲಾಭಕೋರ ಮೌಲ್ಯಪ್ರಜ್ಞೆಗಳಲ್ಲಿದೆ. ಬದಲಾಗಿರುವ ಯುಗಧರ್ಮವನ್ನು ಅರ್ಥಮಾಡಿಕೊಳ್ಳುವಲ್ಲಿ ಅಥವಾ ಅದಕ್ಕೆ ಹೊಂದಿಕೊಳ್ಳುವಲ್ಲಿ ಸೋತಿರುವುದರಿಂದ ನನ್ನೊಳಗೆ ಈ ಭಾವುಕ ಗೊಣಗಾಟಗಳು ಹುಟ್ಟುತ್ತಿವೆಯೆ? ನನ್ನ ಗೆಳೆಯ ಮಗನನ್ನು ಇನ್ಸೆನ್ಸಿಟಿವ್ ಮಾಡುತ್ತ ಕೊನೆಗಾಲದಲ್ಲಿ ಅನಾಥನಾಗುವ ಹಾದಿಯಲ್ಲಿ ಹೊರಟಿರಬಹುದೇ? ನಿರ್ಣಯಕ್ಕೆ ಬರದೆ ಮನಸ್ಸು ಹೊಯ್ದಾಡಿತು.ಬೀಳ್ಕೊಡುವಾಗ ಮಂಕು ಕವಿದಂತಿದ್ದ ಗೆಳೆಯನ ಮುಖವನ್ನು ಮರುಕದಿಂದ ನಿಟ್ಟಿಸಿದೆ. ಅದು ನನ್ನ ಮುಖದಂತೆಯೇ ಕಂಡಿತು. ಅವನ ಕೈಯನ್ನು ಹಿಸುಕಿ ನನ್ನ ಅನುಭೂತಿಯನ್ನು ಬಿಸುಪಿನಲ್ಲಿ ದಾಟಿಸಲು ಯತ್ನಿಸಿದೆ. ನಾನೊಬ್ಬನೇ ಅಲ್ಲ ಪಯಣಿಗ ಎಂಬಂತೆ ಅವನ ತುಟಿಯ ಬಿರುಕಿನಲ್ಲಿ ನಗೆ ತುಳುಕಿತು. ************************ ಲೇಖಕರ ಬಗ್ಗೆ: ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

ಗೆಳೆಯನ ಮಕ್ಕಳು Read Post »

You cannot copy content of this page

Scroll to Top