ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಮೂರನೇ ಆಯಾಮ

ಶಬ್ಧಭಾರವಿಲ್ಲದ ಮನದ ಮಾತುಗಳು

ಅಂಕಣ ಬರಹ ಶಾಂತಿ ಬೀಜಗಳ ಜತನಲೇಖಕರು- ಪ್ರಕಾಶ ಖಾಡೆಯಾಜಿ ಪ್ರಕಾಶನಬೆಲೆ-೧೨೦ ಶಾಂತಿ ಬೀಜಗಳ ಜತನಲೇಖಕರು- ಪ್ರಕಾಶ ಖಾಡೆಯಾಜಿ ಪ್ರಕಾಶನಬೆಲೆ-೧೨೦ ಜಗತ್ತು ವಿಚಿತ್ರ ಸಂದಿಗ್ಧತೆಯಲ್ಲಿದೆ. ಯಾರನ್ನು ನಂಬುವುದೋ, ಯಾರನ್ನು ಮಿತ್ರರೆನ್ನುವುದೋ ಎನ್ನುವ ದ್ವಂದ್ವ ಎಲ್ಲರನ್ನೂ ಕಾಡುತ್ತಿರುವ ಈ ಹೊತ್ತಿನಲ್ಲಿ ಆತ್ಮೀಯ ಮಿತ್ರರೂ ಶತ್ರುಗಳಾಗಿಬಿಡುವ ವಿಕಲ್ಪತೆಯ ದಿನಗಳಿವು. ನಾವು ಮನುಷ್ಯರೋ ಅಥವಾ ಮನುಷ್ಯ ರೂಪದಲ್ಲಿರುವ ಆತ್ಮ ಸತ್ತ ದೇಹಗಳೋ ಎಂಬ ಅನುಮಾನ ನಮ್ಮನ್ನೇ ಕಾಡುತ್ತಿರುವ ಈ ವಿಚಿತ್ರ ಸನ್ನಿವೇಶದಲ್ಲಿ ಹಿರಿಯ ಕವಿ ಪ್ರಕಾಶ ಖಾಡೆಯವರು ಮಾನವಿಯತೆಯನ್ನು ಹುಡುಕುತ್ತ ಹೊರಡುತ್ತಾರೆ.ಏನೂ ಬೇಡವೆಂದುಮನುಷ್ಯ ನಾಗಬೇಕೆಂದಿದ್ದೇನೆ ಮನುಷ್ಯತ್ವ ಹುಡುಕಿ ನಿಮ್ಮೊಂದಿಗೆಮುಖಾಮುಖಿಯಾಗಿದ್ದೇನೆ ಎನ್ನುವ ಮೊದಲ ಕವಿತೆಯ ಸಾಲುಗಳನ್ನು ಓದುತ್ತಲೆ ಮನಸ್ಸು ಅಲ್ಲಿಯೇ ನಿಂತುಬಿಡುತ್ತದೆ.ಪ್ರಕಾಶ ಖಾಡೆಯವರ ಈ ಸಾಲುಗಳು ನಮ್ಮನ್ನು ಮತ್ತೆ ಮತ್ತೆ ಚಿಂತನೆಗೆ ಹಚ್ಚುವಂತೆ ಮಾಡುತ್ತದೆ. ಕೊರೋನಾ ಕಾಲಘಟ್ಟದಲ್ಲಿ  ಮಾನವೀಯತೆಯನ್ನು ಎಲ್ಲಿ ಹುಡುಕುತ್ತೀರಿ? ಒಂದು ಸಾವಿಗೆ ನ್ಯಾಯ ಕೊಡಿಸಲೂ ಕೂಡ ಈ ಕಾಲಘಟ್ಟ ಸಹಕರಿಸುತ್ತಿಲ್ಲ. ಯಾರೋ ಸತ್ತ ಸುದ್ದಿಗೆ ಸ್ಪಂದಿಸುವ ಮೊದಲು ಸತ್ತವನು ಹೇಗೆ ಸತ್ತ? ಕೊರೋನಾ ಬಂದಿತ್ತಾ? ಹಾಗೇನಾದರೂ ಇದ್ದರೆ ಅಂತ್ಯ ಸಂಸ್ಕಾರಕ್ಕೆ ಹೋಗುವುದೇ ಎನ್ನುವ ಪ್ರಶ್ನೆಯೇ ಮೊದಲು ಉತ್ಪನ್ನವಾಗುವುದು. ಕಾಲ ಹೀಗಿರುವಾಗ ಮಾನವೀಯತೆಯನ್ನು ಹುಡುಕಿ ಹೊರಡುವುದಾದರೂ ಎಲ್ಲಿಗೆ. ಇಂತಹ ದುರಿತ ಕಾಲದಲ್ಲೂ ಮಾನವೀಯತೆಯನ್ನು ಹುಡುಕುವ ಪ್ರಕಾಶ ಖಾಡೆಯವರ ಮಾನವೀಯ ಹುಡುಕಾಟ ಇಂದು ಎಲ್ಲರ ಹುಡುಕಾಟ ಆಗಬೇಕಾದ ಅವಶ್ಯಕತೆಯಾಗಿದೆ.  ನಮ್ಮ ಜೊತೆಗಿದ್ದವರನ್ನು ಮರೆತು ಬಿಡುತ್ತಿದ್ದೇವೆ. ಹೊಳೆ ದಾಟಿದ ನಂತರ ಅಂಬಿಗನ ಹಂಗಾದರೂ ಏಕೆ ಬೇಕು ಎಂಬಂತೆ ವರ್ತಿಸುವುದು ಎಲ್ಲರಿಗೂ ರೂಢಿಯಾಗುತ್ತಿದೆ. ಹೀಗಾಗಿ ನಮ್ಮ ಜೊತೆಗಿದ್ದವರನ್ನು ಎಷ್ಟು ಸುಲಭವಾಗಿ ಮರೆತುಬಿಡುತ್ತಿದ್ದೇವೆ ಎಂದರೆ ನಮ್ಮನ್ನು ಪ್ರೀತಿಸುವವರನ್ನು ಸುಲಭವಾಗಿ ದೂರ ಮಾಡಿಕೊಳ್ಳುತ್ತೇವೆ. ಮತ್ತೊಂದು ಮೈತ್ರಿಯನ್ನು ರಚಿಸಿಕೊಳ್ಳುತ್ತೇವೆ. ಅದು ವೈಯಕ್ತಿಕ ಪ್ರೀತಿಯೇ ಇರಬಹುದು. ರಾಜತಾಂತ್ರಿಕ ಕಾರಣಗಳೇ ಇರಬಹುದು. ಯಾವುದೂ ಸ್ಥಿರವಲ್ಲ. ಇಂದು ಸ್ನೇಹಿತನಂತೆ ವರ್ತಿಸುವ ದೇಶವೊಂದು ಕಣ್ಣು ಮುಚ್ಚಿ ತೆರೆಯುವುದರೊಳಗೆ ಶತ್ರು ದೇಶವಾಗಿಬಿಡಬಹುದು. ಅನಾದಿ ಕಾಲದಿಂದಲೂ ಭಾರತದ ನೆರಳಾಗಿದ್ದ ನೇಪಾಳ ಕೂಡ ನಮ್ಮ ದೇಶದ ಭಾಗಗಳನ್ನು ತನ್ನದೆಂದು ಒತ್ತುವರಿ ಮಾಡಿಕೊಂಡ ಹಾಗೆ.      ಕೆಲವು ದಿನಗಳ ಹಿಂದೆ ಸ್ನೇಹಿತರೊಬ್ಬರು ತಮ್ಮ ಪ್ರೀತಿಯ ವಿಷಯವನ್ನು ಹೇಳಿಕೊಳ್ಳುತ್ತಿದ್ದರು. ನಾನು ತಮಾಷೆಗೆ ‘ಅವಳನ್ನು ಎಷ್ಟು ಪ್ರೀತಿಸುತ್ತೀರಿ?’ ಎಂದು ಕೇಳಿದ್ದೆ. ಗೊತ್ತು, ಹಾಗೆ ಪ್ರೇಮವನ್ನು ಪ್ರಮಾಣಿಸಲಾಗುವುದಿಲ್ಲ ಎಂಬುದು. ಆದರೆ ಅವರು ಹೇಳಿದ ಮಾತು ನಿಜಕ್ಕೂ ನನ್ನನ್ನು ತಲ್ಲಣಗೊಳಿಸಿತ್ತು. ‘ಇವೆಲ್ಲ ಇಂದಿದ್ದು ನಾಳೆ ಮರೆಯಾಗುವಂತಹುದ್ದು. ನಿಜ ಜೀವನದಲ್ಲಿ ಇಂತಹ ಪ್ರೇಮಗಳು ಕೊನೆಯವರೆಗೆ ಮುಂದುವರೆಯುವಂತಹುದ್ದಲ್ಲ’ ಎಂದಿದ್ದರು. ನಾನು ದಂಗಾಗಿದ್ದೆ. ಒಂದು ಪ್ರೀತಿಯನ್ನು ಉಸಿರಿರುವವರೆಗೆ ಕಾಪಿಡುವ ನಾವು ಅದೆಷ್ಟು ಬೇಗ ಪ್ರೀತಿಯನ್ನು ದಿನನಿತ್ಯ  ಬದಲಾಯಿಸುವ ಉಡುಪಿಗೆ ಸಮನಾಗಿಸಿಕೊಂಡು ಬಿಟ್ಟೆವು ಎಂಬುದು ಅರ್ಥವಾಗುತ್ತಿಲ್ಲ. ಹಾಗೆ ನೋಡಿದರೆ ಇಂದು ಧರಿಸಿದ ಮೇಲುಡುಪನ್ನು ನಾಳೆಯೂ ಧರಿಸುತ್ತೇವೆ. ಆದರೆ ಪ್ರೀತಿ ಎಂಬುದು ಒಳ ಉಡುಪಿನಂತಾಗಿದೆ. ಒಳ ಉಡುಪನ್ನು ಇಂದು ಧರಿಸಿದರೆ ಕಡ್ಡಾಯವಾಗಿ ಮರುದಿನ ಬದಲಾಯಿಸುತ್ತೇವೆ. ಹಾಗಿದ್ದರೆ ನಾವು ಜೊತೆಗಿರಬೇಕೆಂದರೆ ಜೊತೆಜೊತೆಯಾಗಿ ಇಟ್ಟ ಹೆಜ್ಜೆಗಳಿಗೆ ಕಡ್ಡಾಯವಾಗಿ ಒಂದು ಸಾಕ್ಷಿಯನ್ನು ಹುಡುಕಿಕೊಳ್ಳಬೇಕೆ?ಜೊತೆಗೆ ಬಂದವರ ನೆನಪುಗಳಿಗೆಸವೆದ ದಾರಿಯಷ್ಟೇ ಸಾಕ್ಷಿಎನ್ನುವ ಕವಿಗೆ ಅರಿವಿದೆ, ಸವೆದ ದಾರಿಗಳಾದರೂ ಅದೆಷ್ಟು ದಿನ ತನ್ನ ಸಾಕ್ಷಿಯನ್ನು ಉಳಿಸೀತು? ಧೂಳು ಹಾರಿ ನಡೆದ ಹೆಜ್ಜೆಯ ಗುರುತಿನ ಸಾಕ್ಷಿಯನ್ನು ಅಳಿಸಿಬಿಡಲು ಅದೆಷ್ಟು ಸಮಯ ಬೇಕು?ಪುಟ್ಟ ಹೃದಯದಲ್ಲಿಒಂದಿಷ್ಟು ಜಾಗ ಖಾತ್ರಿ ಮಾಡಿಕೊಳ್ಳಬೇಕುಬದುಕಿನ ಸಾಕ್ಷಿಗೆಕಡಲ ದಂಡೆಯಲ್ಲಿ ಬೆಳೆದವಳು ನಾನು. ನಡೆಯುವ ಹೆಜ್ಜೆ ಮೂಡುವ ಮುನ್ನವೇ ಅಲೆಯ ಮೃದು ಚುಂಬನಕ್ಕೂ ಹೆಜ್ಜೆ ಗುರುತು ಕರಗಿಬಿಡುವ ಮರ್ಮದ ಅರಿವಿದೆ. ಹೀಗಾಗಿ ಕವಿ ಹೇಳುವ ಜೊತೆಗಿದ್ದುದಕ್ಕೆ  ಸವೆದ ಹಾದಿಗಾಗಿ ಹೊಸ ಸಾಕ್ಷಿಯನ್ನು ಹುಡುಕಲೇ ಬೇಕಾದ ಅನಿವಾರ್‍ಯತೆಯಿದೆ.ದಾರಿಗೆ ಮುಳ್ಳನ್ನುಹೂವ ತಂದವರೇ ಹಚ್ಚಿದ್ದಾರೆನಮಗೆ ಹೂವು ನೀಡುವ ನಾಟಕವಾಡುತ್ತಲೇ ನಮ್ಮ ದಾರಿಗೆ ಮುಳ್ಳನ್ನಿಡುವ ಗೋಮುಖ ವ್ಯಾಘ್ರಗಳ ಸಂಖ್ಯೆ ಈಗ ಹೆಚ್ಚಿದೆ. ಜೊತೆಗಿರುತ್ತಲೇ ಮಗ್ಗುಲಿಗೆ ಚೂರಿ ಹಾಕುವ, ಬೆಣ್ಣೆಯಂತಹ ಮಾತನಾಡುತ್ತಲೇ ಊಟಕ್ಕೆ ವಿಷವಿಕ್ಕುವವರ ನಡುವೆ ನಾವೀಗ ಬದುಕಬೇಕಿದೆ.ಹಿಂದೆ ಮಾತನಾಡುವವರ ನಾಲಿಗೆಹರದಾರಿ ಚಾಚಲಿ ಬಿಡಿನಮ್ಮ ಶಾಂತ ಮನಸ್ಸು ವಿಚಲಿತವಾಗದಿರಲಿಎನ್ನುತ್ತಾರೆ ಕವಿ. ಯಾವ ಸ್ನೇಹವೂ ಅರ್ಥ ಉಳಿಸಿಕೊಳ್ಳದ ಈ ತುರ್ತು ಸ್ಥಿತಿಯಲ್ಲಿ ನಮ್ಮ ಬೆನ್ನ ಹಿಂದೆ ಆಡಿಕೊಳ್ಳುವವರ ದೊಡ್ಡ ದಂಡೆ ಇರುತ್ತದೆ.  ಕೆಟ್ಟ ಕೆಲಸ ಮಾಡಿದರೆ ಅದು ಸಹಜವೇ. ಆದರೆ ಒಳ್ಳೆಯ ಕೆಲಸಕ್ಕೂ ಕುರುಬುವವರಿಗೇನೂ ಕಡಿಮೆಯಿಲ್ಲ. ಪ್ರತಿಯೊಂದು ಯಶಸ್ವಿ ಹೆಜ್ಜೆಗೂ ಬೆನ್ನ ಹಿಂದೊಂದು ಹಿತಶತ್ರುಗಳ ಗುಂಪೇ ತಯಾರಾಗುತ್ತದೆ. ಇಡುವ ಪ್ರತಿ ಹೆಜ್ಜೆಗೂ ಒಂದು ಕುಹಕ ಸಿದ್ಧವಾಗಿರುತ್ತದೆ. ಹೀಗಾಗಿ ಕವಿ ಬೆನ್ನಿರಿಯುವವರ ಕುರಿತೂ ನಮ್ಮ ಮನಸ್ಸು ಶಾಂತವಾಗಿರಬೇಕೆಂದು ಬಯಸುತ್ತಾರೆ. ಹಾಗೊಂದುವೇಳೆ ನಮ್ಮ ಮನದ ಹತೋಟಿಯನ್ನು ನಾವೇ ಕಳೆದುಕೊಂಡು ಬಿಟ್ಟರೆ ಬುದುಕು ಮೂರಾಬಟ್ಟೆಯಾಗುವುದು ನಮ್ಮದೇ. ಏಕೆಂದರೆ,ಎಲೆ ಉದುರಿಸಿಕೊಂಡುಬೋಳಾಗುವ ಮರಗಳಿಗೂಬರಡಾಗುವ ನೋವುಇದ್ದೇ ಇರುತ್ತದೆ. ಅಂದರೆ ಕಳೆದುಕೊಂಡ ಎಲೆಗಳ ಜಾಗದಲ್ಲೊಂದು ಕಲೆ ಮರದಲ್ಲಿ ಸಾಶ್ವತವಾಗಿ ಉಳಿದುಬಿಡುವಂತೆ ಸಂಬಂಧದ ಕುರುಹುಗಳೂ ಶಾಶ್ವತವಾಗಿ ಉಳಿಯಲೇ ಬೇಕಿದೆ. ತೆಂಗಿನ ಮರದ ಗರಿ/ ಹೆಡೆ ಬಿದ್ದಾಗ ಮರದ ಕಾಂಡದಲ್ಲಿ ಅದರದ್ದೊಂದು ಗುರುತು ಹಾಗೆಯೇ ಉಳಿದು ಮರದ ಬೆಳವಣಿಗೆಯ ಸಾಕ್ಷಿ ಹೇಳುತ್ತದೆ. ಹೀಗಿರುವಾಗ ಜೀವನದಲ್ಲಿ ಹಿಂದೆ ಬಿಟ್ಟು ಹೋದ ಪ್ರೀತಿಗೊಂದು ಸಾಕ್ಷಿ ಬೇಡವೇ? ಹಾಗೆಂದು ಸಾಕ್ಷಿ ಕೇಳಿದರೆ ಮಾತುಗಳು ಹಾಗೇ ಉಳಿಯಬಹುದೇ? ಈಗ ಆಡಿದ ಮಾತನ್ನು ಇನ್ನೊಂದು ಕ್ಷಣದಲ್ಲೇ ತಿರುಗಿಸಿ ಹಾಗೆ ಹೇಳಿದ್ದು ನಾನಲ್ಲ ಎಂದು ಬಿಡುವಾಗ ಆಡುವ ಮಾತುಗಳಿಗೆ ಬೆಲೆಯೆಲ್ಲಿದೆ. ಹಾಗೆಂದೇ ಕವಿ ಎಷ್ಟೊಂದು ಮಾತುಗಳುತೂಕ ಕಳೆದುಕೊಂಡಿವೆ ಇಲ್ಲಿಎನ್ನುತ್ತಾರೆ. ಜೀವನದಲ್ಲಿ ಮಾತಿಗೆ ಬೆಲೆಯಿಲ್ಲ ಎಂದಾದರೆ ಮುಂದೆ ಅವರ ಮಾತಿಗೆ ಬೆಲೆ ಕೊಡುವವರಾದರೂ ಯಾರು? ಇಲ್ಲ. ಜೀವನದಲ್ಲಿ ಒಮ್ಮೆ ಕೊಟ್ಟ ಮಾತಿಗೆ ತಪ್ಪಿದರೆ ಮುಂದೆ ಯಾರೂ ಕೂಡ ನಂಬದಂತಹ ಸ್ಥಿತಿ ತಲುಪಿಬಿಡುತ್ತೇವೆ. ಆದರೆ ಕವಿ ಆಶಾವಾದಿ. ಹೀಗಾಗಿ ಬದುಕಿನ ತುಂಬ ಕನಸುಗಳನ್ನು ಉತ್ತು ಬೆಳೆಯುವ ಮಹದಾಸೆ ಇಟ್ಟುಕೊಂಡಿರುವವರು. ಕನಸುಗಳಿಲ್ಲದ ಜಾಗದಲ್ಲಿ ಒಂದು ಕ್ಷಣವೂ ಇರಲಾಗದು. ಕನಸುಗಳಿದ್ದರೆ ಆಕಾಶ ಕೂಡ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತದೆ. ಸೂರ್‍ಯ ಕೂಡ ಇನ್ನಷ್ಟು ಪ್ರಕಾಶಮಾನವಾಗುತ್ತಾನೆ. ಕನಸಿನ ಶಕ್ತಿಯೇ ಅಂತಹದ್ದು. ಕಿತ್ತಷ್ಟು ಬೆಳೆವ ಕಸಕ್ಕೆಹೇಳದೆ ಬರುವ ಕನಸಿಗೆತೆರೆದಷ್ಟು ಆಕಾಶ, ಉಳಿದಷ್ಟು ಪ್ರಕಾಶಎನ್ನುವ ಕವಿಸಾಲುಗಳಲ್ಲಿ ನಿಜ ಜೀವನದ ಅನುಭವವೇ ಮೇಳೈಸಿದೆ. ಇಷ್ಟಾದರೂ ಕವಿಗೆ ಅರಿವಿದೆ. ಯಾರ ಮನಸ್ಸಿನಲ್ಲಿ ಅಪಾರವಾದ ನೋವಿರುತ್ತದೆಯೋ ಅವರು ತಮ್ಮ ನೋವನ್ನು ಮರೆಮಾಚಲು ಸದಾ ನಗುತ್ತ, ಇತರರನ್ನೂ ನಗಿಸುತ್ತಿರುತ್ತಾರಂತೆ. ನಗೆ ಮಾಂತ್ರಿಕ ಚಾರ್ಲಿ ಚಾಪ್ಲಿನ್‌ನ ಬದುಕು ನೋವಿನಿಂದ ಕೂಡಿದ್ದು. ಬಡತನದ ಬೇಗೆಯಲ್ಲೂ ಆತ ತಾನೂ ನಗುತ್ತ, ಉಳಿದವರನ್ನೂ ನಗಿಸುತ್ತಿದ್ದ. ‘ನಾನು ಸದಾ ಮಳೆಯಲ್ಲಿ ನೆನಯಲು ಇಷ್ಟಪಡುತ್ತೇನೆ. ಏಕೆಂದರೆ ನನ್ನ ಕಣ್ಣೀರು ಆಗ ಜಗದ ಕಣ್ಣಿಗೆ ನನ್ನ ಕಣ್ಣೀರು ಕಾಣಿಸುವುದಿಲ್ಲ ಎಂದ ಆತನ ಮಾತು ಸದಾ ನನ್ನನ್ನು ಕಾಡುತ್ತಿರುತ್ತದೆ. ಕವಿ ಕೂಡ ಇದೇ ಮಾತನ್ನು ಹೇಳುತ್ತಾರೆ. ನನಗೆ ಕೋಪಿಸಿಕೊಂಡವರ ನೋಡಬೇಕಿತ್ತುಮುಗುಳ್ನಗುವವರ ಬಳಿಹೋದೆಕೋಪಗೊಂಡವರ ಮುಖದಲ್ಲಿ ಮುಗುಳ್ನಗುವಿದೆ. ಹಾಗೆ ನೋಡಿದರೆ ನಮ್ಮ ಮೇಲೆ ಕೋಪಿಸಿಕೊಂಡವರೂ ಅದನ್ನು ಮರೆಮಾಚಲು ಮುಗುಳ್ನಗುತ್ತಿರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.  ಆದರೂ ಯಾವ ಮುಗುಳ್ನಗುವೂ ನಮ್ಮ ನಡುವಿನ ಬೇಲಿಯನ್ನು ಕಿತ್ತೆಸೆಯಲಾಗುತ್ತಿಲ್ಲ. ಮನುಷ್ಯ, ಮನುಷ್ಯನ ನಡುವೆ ಕಟ್ಟಿಕೊಂಡಿರುವ ಮನದ ಬೇಲಿಯನ್ನು ಕಿತ್ತೆಸೆಯದೇ ಐಕ್ಯತೆ ಸಾಧಿಸುವುದಾದರೂ ಹೇಗೆ? ಯಾವ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಒಬ್ಬರ ಮೇಲೊಬ್ಬರು ಕೋಪಿಸಿಕೊಂಡು ಮನಸ್ಸನ್ನು ಕಲ್ಲಾಗಿಸಿಕೊಳ್ಳುತ್ತಿದ್ದೇವೆ. ಅದೇ ಕಲ್ಲುಗಳನ್ನು ಒಂದರ ಮೇಲೊಂದನ್ನು ಪೇರಿಸಿ ಭದ್ರವಾದ ಗೋಡೆ ಕಟ್ಟುತ್ತೇವೆ. ಪ್ರೀತಿ, ಅಂತಃಕರಣದ ಬೆಳಕಿನ ಕಿರಣ ನಮ್ಮ ಹೃದಯವನ್ನು ತಾಗದಂತೆ ಬಂದೋಬಸ್ತು ಮಾಡಿಕೊಂಡಿದ್ದೇವೆ. ಎಷ್ಟೊಂದು ಬೇಲಿಗಳುತಲೆ ಎತ್ತಿವೆ ಇಲ್ಲಿ ಎನ್ನುವ ಕವಿ ನಮ್ಮ ಗುರಿ ತಲುಪುವ ಪೈಪೋಟಿಯಲ್ಲಿ ಏಟು ತಿಮದವರ ಆರ್ತನಾದವನ್ನು ಕೇಳಿ ಮರುಗುವ ಸೂಕ್ಷ್ಮತೆಯನ್ನು ಮರೆಯುತ್ತಿರುವುದರ ಕುರಿತು ಹೇಳಿದ್ದಾರೆ. ಚಿಕ್ಕ ಮಕ್ಕಳು ರಸ್ತೆಯಲ್ಲಿ ಹೋಗುತ್ತಿರುವ ನಾಯಿಗೆ ಕಲ್ಲೆಸೆಯುತ್ತಾರೆ. ಕಲ್ಲೇನಾದರೂ ಕಾಲಿಗೆ ತಾಗಿದರೆ ಕುಯ್ಯೋ ಮರ್ರೋ ಎನ್ನುವ ಅದರ ರೋಧನೆ ಕೇಳಿಬಿಟ್ಟರೆ ಮಕ್ಕಳಿಗೆ ಮತ್ತೂ ಕಲ್ಲು ಹೊಡೆಯುವ ಉಮ್ಮೇದಿ ಹೆಚ್ಚುತ್ತದೆ. ಒಬ್ಬನಿದ್ದವನು ನಾಲ್ಕಾಗುತ್ತಾರೆ, ಹತ್ತಾಗುತ್ತಾರೆ. ನಾಯಿಯ ನೋವಿನ ಆಕ್ರಂದನ ಹೆಚ್ಚಿದಷ್ಟೂ ಪೈಶಾಚಿಕ ಸಂತೋಷ ಸಿಕ್ಕಂತೆ ಬಲ ಬರುತ್ತದೆ. ಚಿಕ್ಕ ಮಕ್ಕಳಲ್ಲಿಯೇ ಈ ಮನೋಭಾವವನ್ನು ಕಾಣುವಾಗ ಕಲ್ಲು ಹೊಡೆದು ನಮ್ಮವರನ್ನೇ ಗಾಯಗೊಳಿಸಿ ಅಳಿಸಲು ದೊಡ್ಡವರಾದವರು ಹಿಂದೆಮುಂದೆ ನೋಡಿಯಾರೆ? ಎಸೆದ ಕಲ್ಲಿಗೆಗುರಿಯಷ್ಟೇ ಗೊತ್ತುಪೆಟ್ಟು ತಿಂದವರ ಆರ್ತನಾದ ಕೇಳದು ಆದರೆ ಕವಿ ಇಡೀ ಸಂಕಲನದಲ್ಲಿ ಎಲ್ಲಿಯೂ ದ್ವೇಷ ತಿರಿಸಿಕೊಳ್ಳುವ ಮಾತನಾಡುವುದಿಲ್ಲ. ಎಲ್ಲಿಯೂ ಹೊಡಿ ಬಡಿಯ ಶಬ್ಧಗಳಿಲ್ಲ. ತೀರಾ ಸರಳವಾದ ಮಾತುಗಳಲ್ಲಿ, ನಯವಾಗಿಯೇ ಹೇಳಬೇಕಾದುದನ್ನು ಹೇಳಿ ತಣ್ಣಗೆ ಕುಳಿತುಬಿಡುತ್ತಾರೆ. ಉದ್ವೇಗದ ಹೇಲಿಕೆಗಳಿಲ್ಲ, ಆದ ಅಪಮಾನಕ್ಕೆ ಸೇಡು ತಿರಿಸಿಕೊಳ್ಳಬೇಕೆಂಬ ವಾಂಛೆಯಿಲ್ಲ. ಎಲ್ಲವರೂ ತನ್ನವರು ಎನ್ನುವ ಸಹಜ ಪ್ರೀತಿಯ ಕವನಗಳಿವು. ಅಪಮಾನಗಳನ್ನು ನುಂಗಿ ಪ್ರೀತಿಯನ್ನೇ ಹಂಚುವ ಶುದ್ಧ ಹೃದಯದ ಭಾವಗಳಿವು.ನಾವು ಆದ ಅಪಮಾನಉಂಡ ನೋವು ಮರೆತುಪ್ರೀತಿ ಹಂಚಿಕೊಳ್ಳುತ್ತೇವೆಅವರೋ ಉರಿವ ಬೆಂಕಿಗೆ ಎಣ್ಣಿ ಸುರಿಯುತ್ತಾರೆಹೀಗೆ ಅವಮಾನವನ್ನು ಮರೆತು ಪ್ರೀತಿಯನ್ನೇ ಬೊಗಸೆಯಲ್ಲಿಟ್ಟುಕೊಂಡು ನೀಡಿದರೂ ಅದನ್ನು ಸ್ವೀಕರಿಸಲೂ ಒಂದು ಅರ್ಹತೆ ಬೇಕಲ್ಲ.? ಪ್ರೀತಿಯ ಮೇಲೆ ಸುಡು ಸುಡು ಎಣ್ಣೆ ಸುರಿದು ತಮಾಷೆ ನೋಡುವ ಮನಸ್ಥಿತಿ ಇಲ್ಲಿದೆ. ಹೊತ್ತುರಿಯುವ ದ್ವೇಷಕ್ಕೆ ಎಣ್ಣೆ ಸುರಿದು ಪ್ರಜ್ವಲಿಸುವಂತೆ ಮಾಡಬಲ್ಲರೇ ಹೊರತೂ ಶತ್ರುತ್ವವನ್ನು ಅಳಿಸಿ ಪ್ರೀತಿಯ ಹೂವನ್ನು ಅರಳಿಸುವ ಪ್ರಯತ್ನ ಮಾಡುವವರು ಸಿಕ್ಕಾರಾದರೂ ಎಲ್ಲಿ?ನಾನು ಸುಳ್ಳುಗಳ ಸೂಡು Pಟ್ಟಿಟ್ಟುಸತ್ಯದ ಬೆನ್ನು ಹತ್ತಿದೆಆದರೂ ದ್ವಂದ್ವಗಳುವಿಜೃಂಭಿಸಿ ಹೋದವುಬದುಕು ನಮ್ಮನ್ನು ಹೈರಾಣಾಗಿಸುತ್ತಿದೆ. ಸುಳ್ಳಿನ ಸುಡನ್ನು Pಟ್ಟಿಟ್ಟು ಸತ್ಯದ ಬೆನ್ನು ಹತ್ತುತ್ತಿದ್ದರೂ ವಿಜೃಂಭಿಸುವ ಕಟು ವಾಸ್ತವವೂ ಕೆಲವೊಮ್ಮೆ ಸತ್ಯದ ಮುಖವಾಡದಲ್ಲಿ ಅಡಗಿದ ಸುಳ್ಳುಗಳಾಗಿರುತ್ತವೆ ಎಂಬುದನ್ನು ಮರೆಯುವಂತಿಲ್ಲ. ನಾವೇನಾಗಬೇಕೆಂದು ಬಯಸಿದ್ದೆವೋ ಅದನ್ನು ಸಾಧಿಸುವುದಕ್ಕಾಗಿ ಸತ್ಯ ಸುಳ್ಳುಗಳನ್ನು ಒಂದಾಗಿಸುತ್ತಿದ್ದೇವೆ. ಮತಮತದಲ್ಲಿ, ಜಾತಿಜಾತಿಯಲ್ಲಿ ದ್ವೇಶದ ಬೀಜಗಳನ್ನು ಬಿತ್ತಾಗಿದ್ದು ಅದೀಗ ಮೊಳಕೆಯೊಡೆಯುತ್ತಿದೆ. ನಿಮ್ಮ ಮನಸಲಷ್ಟು ಜಾಗ ಕೊಡಿಶಾಂತಿ ಬೀಜಗಳ ಊರಿ ಸಂಭ್ರಮಿಸುವೆಎನ್ನುವ ಕವಿಯ ಮಾತುಗಳಲ್ಲಿರುವ ನಿಜಾಯತಿಯನ್ನು ಗುರುತಿಸಬೇಕು. ಶಾಂತಿ ಬೀಜಗಳು ಚಿಗುರೊಡೆಸಲು ಕವಿ ಕಾತರರರಾಗಿದ್ದಾರೆ. ಇಂದಿನ ತುರ್ತು ಅಗತ್ಯವೂ ಅದೇ ಆಗಿದೆ. ತೂರಿಬಿಟ್ಟಿ ಕನಸುಗಳ ಕಟ್ಟಲಾದರೂಹರಿದ ಸೂತ್ರಗಳಿಗೆಜಗದ ಬಂಧುತ್ವವೇ ಬೆಸುಗೆಯಾಗಲಿಜಗವು ಪ್ರೀತಿ ಎನ್ನುವ ಬಂಧನದಲ್ಲಿ ಬಂಧಿಯಾಗಲಿ ಹರಿದು ಹೋದ ಸೂತ್ರ ಒಗ್ಗೂಡಲಿ, ದೇಶ, ಮನಸ್ಸುಗಳಲ್ಲವೂ ಸುಭದ್ರವಾಗಲಿ.ವಿಶ್ವಭ್ರಾತ್ರತ್ವದ ನೆಲೆಯಲ್ಲಿ ಪ್ರಕಾಶ ಖಾಡೆಯವರ ಕವನಗಳನ್ನಿಟ್ಟು ನೋಡಬೇಕು. ಇಲ್ಲಿ ಮುಖ್ಯವಾಗಿ ಗಮನ ಸೆಳೆಯುವುದು ಕವಿತೆಗಳ ಸರಳತೆ ಮತ್ತು ಅದನ್ನು ವ್ಯಕ್ತಪಡಿಸಿರುವ ರೀತಿ. ಎಲ್ಲಿಯೂ ಶಬ್ಧಭಾರದಿಂದ ಕವಿತೆ ಕುಗ್ಗಿ ಹೋಗಿಲ್ಲ. ದೊಡ್ಡದೊಡ್ಡ ರೂಪಕಗಳಿಂದ ನುಲುಗಿಲ್ಲ. ಪಂಡಿತರನ್ನು ಮೆಚ್ಚಿಸಲೇಬೇಕೆಂಬ ಘನಂಧಾರಿ ಉದ್ದೇಶವೂ ಅವರಿಗಿಲ್ಲ. ಆನು ಒಲಿದಂತೆ ಹಾಡುವೆ ಎಂಬ ಭಾವವಿದೆ. ಆದರೆ ಇಡೀ ಸಂಕಲನವಾಗಿ ಓದಿದಾಗ ಭಾವಗಳು ಮತ್ತೆ ಮತ್ತೆ ಪುನರಾವರ್ತನೆಯಾದಮತೆ ತೋರುವ ಅಪಾಯವನ್ನು ಇಲ್ಲಿ ಅಲ್ಲಗಳೆಯುವಂತಿಲ್ಲ. ಮೊದಲ ಕವನದ ಭಾವವೇ ಮುಂದುವರೆಯುತ್ತ ಹೋದಂತೆ ಕೆಲವೊಮ್ಮೆ ಭಾಸವಾಗಿ ಖಂಡಕಾವ್ಯವನ್ನು ಓದುತ್ತಿರುವ ಏಕತಾನತೆಯನ್ನು ನೀಡಿಬಿಡುವ ಅಪಾಯವೂ ಇದೆ. ಆದರೂ ಸರಳ ಹಾಗೂ ಸುಮದರ ಅನುಭವವನ್ನು ನೀಡುವುದರಲ್ಲಿ ಸಂಶಯವಿಲ್ಲ. ********************* ಲೇಖಕರ ಬಗ್ಗೆ ಎರಡು ಮಾತು:ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು

ಶಬ್ಧಭಾರವಿಲ್ಲದ ಮನದ ಮಾತುಗಳು Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಬೆಳಗಾಗ ನಾನೆದ್ದು ಯಾರ್‍ಯಾರ ನೆನೆಯಲಿ ಅಂಕಣ ಬರಹ ಬೆಳಗು ಎನ್ನುವುದೊಂದು ಸುಂದರ ಅನುಭೂತಿ. ಮನೆಯ ಮಾಳಿಗೆಯ ಗಾಜಿನ ಹಂಚಿನಿಂದಲೋ, ಅಪಾರ್ಟ್ಮೆಂಟಿನ ಬಾಲ್ಕನಿಯ ಬಾಗಿಲಿನಿಂದಲೋ, ರಾತ್ರಿಪಾಳಿ ಮುಗಿಸಿ ಮರಳುತ್ತಿರುವ ಕ್ಯಾಬ್ ನ ಕಿಟಕಿಯಿಂದಲೋ ಸಿಕ್ಕಿದ ಅವಕಾಶಗಳನ್ನೆಲ್ಲ ಬಳಸಿಕೊಂಡು ಹುಟ್ಟುವ ಬೆಳಗು ಹೊಸದಿನವೆನ್ನುವ ಹೊಸ ಚೈತನ್ಯವನ್ನು ದೊರಕಿಸಿಕೊಡುತ್ತದೆ. ತುಳಸಿಕಟ್ಟೆಯ ಹೊಸಮಣ್ಣಿನಲ್ಲಿ ಉರಿಯುತ್ತಿರುವ ಅಗರಬತ್ತಿಯ ಪರಿಮಳ ರಸ್ತೆ ದಾಟಿದರೆ, ರಸ್ತೆಯ ತುದಿಯಲ್ಲಿರುವ ಟೀ ಅಂಗಡಿಯ ಘಮ ಮೇನ್ ರೋಡನ್ನು ತಲುಪುತ್ತದೆ; ಬಸ್ ಸ್ಟ್ಯಾಂಡ್ ನಿಂದ ಹೊರಡಲು ರೆಡಿಯಾದ ಬಸ್ಸಿನೊಳಗೆ ಮಲ್ಲಿಗೆಮಾಲೆ ಬಳುಕುವಾಗ, ತಳ್ಳುಗಾಡಿಯ ಮೇಲೆ ಕೆಂಪು-ಹಳದಿ ಸೇವಂತಿಗೆಗಳು ತೂಕಕ್ಕೆ ದೊರಕುತ್ತವೆ; ಪುಟ್ಟ ಮಗುವೊಂದು ಶೂಲೇಸ್ ಕಟ್ಟಿಕೊಳ್ಳಲು ಕಲಿಯುವ ಹೊತ್ತು, ಜಿಮ್ ನಲ್ಲೊಬ್ಬ ಹುಡುಗ ಮ್ಯೂಸಿಕ್ ಗೆ ತಕ್ಕಂತೆ ಹೆಜ್ಜೆ ಹಾಕುತ್ತಾನೆ; ರಾತ್ರಿ ಟ್ರೇನ್ ನಲ್ಲಿ ಅರೆಬರೆ ನಿದ್ರೆಯಲ್ಲಿಯೇ ಊರು ತಲುಪಿದ ಜೀನ್ಸ್ ತೊಟ್ಟ ಹುಡುಗಿ ತಾಮ್ರದ ಹಂಡೆಯ ಹದವಾದ ಬಿಸಿನೀರಿನಲ್ಲಿ ಫೇಷಿಯಲ್ ಮಾಡಿದ ಮುಖವನ್ನು ತೊಳೆದು, ಅಮ್ಮ ಹೊಲಿದ ಕೌದಿಯ ಮೇಲೆ ಮಲಗಿ ಸುಖವಾಗಿ ನಿದ್ರಿಸುತ್ತಾಳೆ; ಅಂಗಳದಲ್ಲೊಂದು ದಾಸವಾಳ ಸದ್ದಿಲ್ಲದೆ ಅರಳಿ, ಹುಟ್ಟಿದ ಪ್ರತಿ ಬೆಳಗಿಗೂ ಇನ್ನಷ್ಟು ಸೌಂದರ್ಯವನ್ನು ಒದಗಿಸುತ್ತದೆ.           ಈ ಸೌಂದರ್ಯದ ಪರಿಕಲ್ಪನೆಯೇ ವಿಶಿಷ್ಟವಾದದ್ದು. ಕಥೆ-ಕಾದಂಬರಿಗಳ ನಾಯಕಿಯ ಹೆರಳು, ಕವಿಯ ಕಲ್ಪನೆಯಲ್ಲಿ ತೂಗುವ ಮರ-ಗಿಡಗಳು, ಸಿನೆಮಾವೊಂದರ ಸುಖಾಂತ್ಯವಾಗುವ ಪ್ರೇಮ, ಪಾತ್ರೆ ತೊಳೆಯುತ್ತ ಅಮ್ಮ ಹಾಡುವ ಮಂಗಳಗೌರಿ ವ್ರತದ ಹಾಡು, ತೋಟದ ಅಂಚಿನಲ್ಲಿ ಹೂವರಳಿಸಿ ನಿಲ್ಲುವ ಸಂಪಿಗೆಮರ, ಶಾಪಿಂಗ್ ಮಾಲ್ ನ ಮೂಲೆಯ ಪುಟ್ಟ ಅಂಗಡಿಯ ಬಣ್ಣಬಣ್ಣದ ಐಸ್ ಕ್ರೀಮು ಎಲ್ಲವೂ ಸೇರಿ ಸೃಷ್ಟಿಯಾಗುವ ಸೌಂದರ್ಯದ ಪರಿಕಲ್ಪನೆ ಕಾಲಕ್ಕೆ ತಕ್ಕಂತೆ ಪೋಷಾಕು ಧರಿಸುತ್ತದೆ. ಕಪ್ಪು-ಬಿಳುಪು ಭಾವಚಿತ್ರದ ಉದ್ದ ಜಡೆಯೊಂದು ಸೆಲ್ಫಿಯ ಫ್ರೆಂಚ್ ಪ್ಲೇಟ್ ಆಗಿ ಬದಲಾದರೆ, ಹೆರಳಿನ ಸೌಂದರ್ಯವನ್ನು ಪರಿಪೂರ್ಣಗೊಳಿಸುತ್ತಿದ್ದ ಕೆಂಪುಗುಲಾಬಿಯ ಜಾಗವನ್ನು ರೆಡ್ ಸ್ಟ್ರೀಕ್ಸ್ ತನ್ನದಾಗಿಸಿಕೊಳ್ಳುತ್ತದೆ; ಜೋಕಾಲಿಯಾಗಿ ತೂಗುತ್ತಿದ್ದ ಮರ-ಗಿಡಗಳನ್ನು ಅಮ್ಯೂಸ್ಮೆಂಟ್ ಪಾರ್ಕಿನ ರೋಲರ್ ಕೋಸ್ಟರ್ ಗಳು ರಿಪ್ಲೇಸ್ ಮಾಡುತ್ತವೆ; ಪ್ರೇಮಕ್ಕೊಂದು ಹೊಸ ವ್ಯಾಖ್ಯಾನ ಬರೆಯುವಂತೆ ಲಿವಿನ್ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಆದರೂ ಪಾತ್ರೆಯೊಂದಿಗೆ ಸದ್ದುಮಾಡುವ ಹಸಿರು ಚಿಕ್ಕಿಬಳೆಯ ಅಂದವಾಗಲೀ, ಗಾಳಿಯೊಂದಿಗೆ ಮನೆಯಂಗಳವನ್ನು ತಲುಪುವ ಸಂಪಿಗೆಯ ಪರಿಮಳವಾಗಲೀ, ಎರಡೂ ಕೈಗಳಿಂದ ಕೋನ್ ಐಸ್ ಕ್ರೀಮ್ ಹಿಡಿದು ಪುಟ್ಟ ಅಂಗಡಿಯಿಂದ ಹೊರಬರುವ ಪುಟ್ಟ ಮಗುವಿನ ಮುಗ್ಧತೆಯಾಗಲೀ ಎಂದಿಗೂ ಮಾಸುವುದಿಲ್ಲ.           ಹೀಗೆ ಸೌಂದರ್ಯ ಎನ್ನುವುದು ಮುಗ್ಧತೆಯಾಗಿ, ಹೆಣ್ಣಾಗಿ, ಪ್ರೇಮವಾಗಿ, ಭಕ್ತಿಯಾಗಿ, ಪ್ರಕೃತಿಯಾಗಿ ಬೆಳಗು ಎನ್ನುವ ಬೆರಗಿನೊಂದಿಗೆ ನಮ್ಮೆದುರು ತೆರೆದುಕೊಳ್ಳುತ್ತದೆ. ಸಾಮಾನ್ಯವಾಗಿ ಮುಂಜಾವಿನ ಕ್ರಿಯೆ-ಪ್ರಕ್ರಿಯೆಗಳೆಲ್ಲ ಒಂದು ಅವಸರದ ದಿನಚರಿಯೊಂದಿಗೆ ಹಾಜರಾಗುತ್ತವೆ. ಶಾಲೆಗೆ ಹೋಗುವ ದಿನಗಳಲ್ಲಿ ತಿಂಡಿ ಮಾಡುವ ತರಾತುರಿಯಲ್ಲಿರುತ್ತಿದ್ದ ಅಮ್ಮ ಅಡುಗೆಮನೆಯಿಂದಲೇ ಶಾಲೆಯನ್ನು ನೆನಪಿಸಿದರೆ, ಬೆಚ್ಚಗೆ ಕಂಬಳಿ ಹೊದ್ದು ಮಲಗಿರುತ್ತಿದ್ದ ನಾನು ಶಾಲೆಯನ್ನೂ ಬೆಳಗನ್ನೂ ಬೈದುಕೊಳ್ಳುತ್ತಲೇ ಎದ್ದೇಳುತ್ತಿದ್ದೆ. ವರ್ಷದ ಏಳೆಂಟು ತಿಂಗಳುಗಳು ಚಳಿಯ ವಾತಾವರಣವಿರುತ್ತಿದ್ದ ಮಲೆನಾಡಿನ ಮುಂಜಾವಿಗೆ ಬಚ್ಚಲೊಲೆಯ ಬೆಂಕಿ ಒಂದು ಸಂಭ್ರಮದ ಸಂಗತಿಯಾಗಿತ್ತು. ಒಣಗಿದ ಅಡಕೆಯ ಹಾಳೆ, ತೆಂಗಿನಕಾಯಿಯ ಸಿಪ್ಪೆ, ಕರಟಗಳೆಲ್ಲ ಬೇಸರವಿಲ್ಲದೆ ಉರಿಯುತ್ತ ಬೆಳಗುಗಳನ್ನು ಬೆಚ್ಚಗಿಡುತ್ತಿದ್ದವು. ಜಗಲಿಯ ಮಂಚ, ಕಪಾಟು, ಆರಾಮಕುರ್ಚಿಗಳ ನಡುವೆ ಅಡಗಿರುತ್ತಿದ್ದ ಧೂಳನ್ನು ಗುಡಿಸಿ ತೆಗೆದು, ಬಕೆಟಿನ ಬಿಸಿನೀರಿನಲ್ಲಿ ಅದ್ದಿತೆಗೆದ ಬಟ್ಟೆಯಿಂದ ಅಳಿದುಳಿದ ಧೂಳನ್ನೂ ಒರೆಸಿದ ಮೇಲೆ ಬೆಳಗನ್ನು ಸ್ವಾಗತಿಸಲಿಕ್ಕೆ ಜಗಲಿ ರೆಡಿಯಾಗುತ್ತಿತ್ತು. ಸುಂದರವಾದ ಕೆತ್ತನೆಯ ಮರದ ಬಾಗಿಲು-ಕಂಬಗಳ ಸುತ್ತ ಪುಟ್ಟಪುಟ್ಟ ಹೂಗಳ ರಂಗೋಲಿಯನ್ನು ಬಿಡಿಸಿ, ಅದಕ್ಕೊಪ್ಪುವ ಕೆಂಪು ಹಳದಿ ಗುಲಾಬಿ ಬಣ್ಣಗಳನ್ನು ತುಂಬಿ, ನಡುನಡುವೆ ಆಗತಾನೇ ಅರಳಿದ ಮೋತಿಮಲ್ಲಿಗೆ ಶಂಖಪುಷ್ಪ ದಾಸವಾಳಗಳನ್ನಿಟ್ಟರೆ ಜಗಲಿಗೊಂದು ತನ್ನದೇ ಆದ ಸೌಂದರ್ಯ ಪ್ರಾಪ್ತಿಯಾಗುತ್ತಿತ್ತು. ಪಕ್ಕದಮನೆಯ ಮಗುವೊಂದು ಅಂಬೆಗಾಲಿಡುತ್ತ ಬಂದು ಹೂವಿನ ಎಸಳುಗಳನ್ನೆಲ್ಲ ಕೀಳುತ್ತ, ತನ್ನ ಪುಟ್ಟಪುಟ್ಟ ಬೆರಳುಗಳಿಂದ ರಂಗೋಲಿಯ ಹೂವುಗಳ ಆಕಾರಗಳನ್ನು ಬದಲಾಯಿಸುವ ಸುಂದರ ನೋಟಕ್ಕೆ ಬೆಳಗು ಸಾಕ್ಷಿಯಾಗುತ್ತಿತ್ತು.           ಹೀಗೆ ಬಚ್ಚಲೊಲೆಯ ಹದವಾದ ಬಿಸಿಯಂತೆ ಹರಡಿಕೊಳ್ಳುವ ಬೆಳಗು ಬಾಳೆಎಲೆಯ ಹಸಿರಾಗಿ, ತುಪ್ಪದ ತಿಳಿಹಳದಿಯಾಗಿ, ಜೋನಿಬೆಲ್ಲ-ಮಿಡಿಉಪ್ಪಿನಕಾಯಿಗಳ ಕೆಂಪು ಬಣ್ಣವಾಗಿ ಮುದ ನೀಡುತ್ತ ಯುನಿಫಾರ್ಮಿನ ನೀಲಿಯಾಗಿ ಶಾಲೆಯನ್ನು ತಲುಪುತ್ತಿತ್ತು. ಕಾಲ್ನಡಿಗೆಯ ಕಷ್ಟವನ್ನು ದೂರಗೊಳಿಸಲೆಂದೇ ಹುಟ್ಟಿದಂತೆ ಗೋಚರಿಸುತ್ತಿದ್ದ ಮಾವಿನಮರಗಳು ದಾರಿಯುದ್ದಕ್ಕೂ ಹಣ್ಣುಗಳನ್ನು ಉದುರಿಸುತ್ತಿದ್ದವು; ಬೆಟ್ಟದ ಮೇಲೊಂದಿಷ್ಟು ನೆಲ್ಲಿಕಾಯಿಗಳು ನಮಗಾಗಿಯೇ ಕಾದಿರುತ್ತಿದ್ದವು; ಕಾಸು ಕೊಟ್ಟು ಕೊಂಡುಕೊಳ್ಳಲಾಗದ ಅದೆಷ್ಟೋ ಬಗೆಯ ಹಣ್ಣು-ಕಾಯಿಗಳೆಲ್ಲ ವರ್ಷದುದ್ದಕ್ಕೂ ಪಾಟಿಚೀಲ ಸೇರುತ್ತಿದ್ದವು; ಮಳೆಗಾಲದಲ್ಲಿ ಹುಟ್ಟಿದ ಒರತೆಯೊಂದು ಮಳೆ ನಿಂತಮೇಲೂ ಚಿಮ್ಮುತ್ತ ಬೆಳಗಿನ ಪಯಣವನ್ನು ಸುಂದರವಾಗಿಸುತ್ತಿತ್ತು. ಈ ಎಲ್ಲ ದಿವ್ಯತೆಯ ಅನುಭೂತಿಗಳಿಗೆ ಎದುರಾಗುತ್ತಿದ್ದ ದಿನಗಳಲ್ಲಿ ಮಳೆಯ ನೀರು ಸ್ಕರ್ಟನ್ನು ಒದ್ದೆಯಾಗಿಸುವ ಕಷ್ಟವಾಗಲೀ, ಚಳಿಗಾಲದಲ್ಲಿ ಕೈ-ಕಾಲುಗಳು ಬಿರುಕುಬಿಡುವ ನೋವಾಗಲೀ, ಬಿಸಿಲುಗಾಲದ ಬಾಯಾರಿಕೆ ಸನ್ ಬರ್ನ್ ಗಳಾಗಲೀ, ಪಾಟಿಚೀಲದ ಭಾರವಾಗಲೀ ಯಾವುದೂ ಬಾಧಿಸಲೇ ಇಲ್ಲ. ಸೂರ್ಯ ಹುಟ್ಟುತ್ತಿದ್ದಂತೆಯೇ ತನ್ನ ಬಳಗವನ್ನೆಲ್ಲ ಕರೆದು ಪಾತ್ರೆ ತೊಳೆಯುವ ಜಾಗದಲ್ಲಿ ಅನ್ನದ ಕಾಳನ್ನು ಹೆಕ್ಕುತ್ತಿದ್ದ ಕಾಗೆ ಸಹಬಾಳ್ವೆಯ ಸೊಗಸನ್ನು ತೋರಿಸಿಕೊಟ್ಟರೆ, ಪಾತ್ರೆ ತುಂಬುವಷ್ಟು ಹಾಲು ಕೊಡುತ್ತಿದ್ದ ಹಸು ಪರೋಪಕಾರದ ಪಾಠವನ್ನು ಕಲಿಸಿತು; ದಿನ ಬೆಳಗಾದರೆ ಒಲೆಯಲ್ಲಿ ಉರಿಯುತ್ತಿದ್ದ ಕರಟದಲ್ಲಿ ತ್ಯಾಗದ ಭಾವನೆ ಕಾಣಿಸಿದರೆ, ಅಂಗಳದ ಕಂಬಕ್ಕೆ ಹಬ್ಬಿ ಹೂವರಳಿಸುತ್ತಿದ್ದ ಶಂಖಪುಷ್ಪದ ಬಳ್ಳಿ ಎಲ್ಲ ತೊಡಕುಗಳನ್ನು ಮೀರಿ ಬೆಳಕಿನೆಡೆಗೆ ಸಾಗುವ ದಾರಿಯನ್ನು ತೋರಿಸಿತು.           ಹೀಗೆ ಬದುಕಿನ ತೊಡಕುಗಳೆಲ್ಲವನ್ನೂ ಎದುರಿಸುವ ಶಕ್ತಿಯೊಂದನ್ನು ಬೆಳಗು ತನ್ನೆಲ್ಲ ಚಟುವಟಿಕೆಗಳಿಂದಲೇ ಕಲಿಸಿಕೊಟ್ಟಿತು. ಅಮ್ಮ ಅಡುಗೆಮನೆಯಿಂದಲೇ ವಿಶಿಷ್ಟವಾಗಿ ಗುಡ್ ಮಾರ್ನಿಂಗ್ ಹೇಳುತ್ತಿದ್ದ ರೀತಿ ಮೊಬೈಲ್ ನಲ್ಲಿರುವ ಅಲಾರ್ಮ್ ಗೆ ಶಿಫ್ಟ್ ಆಯಿತು; ಹದವಾದ ಬಿಸಿನೀರಿನೊಂದಿಗೆ ಬೆಳಗನ್ನು ಸ್ವಾಗತಿಸುತ್ತಿದ್ದ ತಾಮ್ರದ ಹಂಡೆಯನ್ನು ಗೀಸರ್ ರಿಪ್ಲೇಸ್ ಮಾಡಿತು; ಕಂಬವನ್ನು ತಬ್ಬಿ ಬೆಳೆಯುತ್ತಿದ್ದ ಶಂಖಪುಷ್ಪದ ಬಳ್ಳಿ ಬಾಲ್ಕನಿಯ ಸರಳುಗಳನ್ನು ಆಶ್ರಯಿಸಿತು. ಬೆಳಗಾದರೆ ತುಂಬುತ್ತಿದ್ದ ಹಾಲಿನ ಚೊಂಬಿನ ಜಾಗವನ್ನು ವಿವಿಧ ಬಣ್ಣ-ಸೈಜುಗಳ ಪ್ಯಾಕೆಟ್ಟುಗಳು ಆಕ್ರಮಿಸಿಕೊಂಡವು. ದಾರಿಯಂಚಿನ ಒರತೆ, ಬಚ್ಚಲೊಲೆಯ ಬೆಂಕಿ, ಪಾಟಿಚೀಲದ ಸಾಂಗತ್ಯ ಎಲ್ಲವೂ ಸಲೀಸಾಗಿ ರೂಪಾಂತರಗೊಂಡು ನೆನಪಿನ ಅಂಗಳಕ್ಕೂ ಬೆಳಗಿನ ಸೌಂದರ್ಯವನ್ನು ಒದಗಿಸಿಕೊಟ್ಟವು. ಕಾಲಕಾಲಕ್ಕೆ ಅಗತ್ಯಕ್ಕೆ ಅನುಗುಣವಾಗಿ ಸ್ವರೂಪ ಬದಲಾಯಿಸಿಕೊಂಡ ಬೆಳಗು ನೆನಪಾಗಿ, ಜೀವನಪಾಠವಾಗಿ, ಜೀವಂತಿಕೆಯ ಚಲನೆಯಾಗಿ, ಸುಂದರ ಅನುಭೂತಿಯಾಗಿ ಬದುಕುಗಳನ್ನು ಸಲಹುತ್ತಲೇ ಇರುತ್ತದೆ. ಬೆಟ್ಟದಲ್ಲಿ ಹುಟ್ಟಿದ ಒರತೆಯೊಂದು ಬಾಲ್ಕನಿಯ ಶಂಖಪುಷ್ಪದ ಬಳ್ಳಿಯೆಡೆಗೆ ಹರಿದು ಸುಂದರವಾದ ಹೂವುಗಳನ್ನು ಅರಳಿಸುತ್ತದೆ. **************************** ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

You cannot copy content of this page

Scroll to Top