ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಸುಂಧರಾ ಕದಲೂರು

ಕಾವ್ಯಗುಚ್ಛ

Scary Red Monster Animal Eyes in Darkness. Evil red colored eyes in darkness stock illustration

ಮುಖ್ಯ- ಅಮುಖ್ಯ

photos of men legs binded in chains के लिए इमेज परिणाम

ಮೇಲುಕೀಳಾಟದ ಯಾವತ್ತೂ
ಯುದ್ಧ ಬೇಕಿಲ್ಲ. ಈ ಹೊತ್ತಿನ ತುತ್ತು;
ಎಂದಿಗೆ ಒಲೆ ಹೊತ್ತಿ ಅನ್ನವೋ
ಗಂಜಿಯೋ ಬೆಂದರಾಗುತ್ತಿತ್ತು, ಈ
ಸತ್ಯದ ಬಾಬತ್ತೇ ನಮಗೆ ಮುಖ್ಯ.

ಚದುರಂಗದಾಟ ಎಂದೆಣಿಸಿ, ದಾಳ
ಉದುರಿಸಿ, ಗಾಳ ಹಾಕಿ -ದಾಳಿ
ಮಾಡಿ, ಕೋಟೆಗೋಡೆಗಳನು ಕಟ್ಟುತ್ತಾ
ಕೆಡವುತ್ತಾ, ಸಿಂಹಾಸನಾರೋಹಣ,
ಪದಾಘಾತ- ಅಧಃಪತನ ಯಾರಿಗಾದರೇನು?
ನಮಗೆ ಅಮುಖ್ಯ.

ಯುದ್ಧವೆಂದರೆ ಕಂದನ ತೊಟ್ಟಿಲ
ಮೇಲೆ ತೂಗುಬಿದ್ದ ಘಟಸರ್ಪ; ಕಕ್ಕಿದರೂ
ಕುಕ್ಕಿದರೂ ಆಪತ್ತೇ. ಬದುಕು ಕಸಿದಂತೆ,
ಆಸೆ ಕುಸಿದಂತೆ ಮಾಡುವೀ ಅಜೀವನ್ಮುಖಿ
ಯುದ್ಧ ನಮಗೆ ಅಮುಖ್ಯ.

ಹೂವಿನೊಡಲ ಮಕರಂದಕೆ ಎರವಾಗುವ
ದುಂಬಿಯಾಡುವ ಯುದ್ಧ; ಮಳೆಮೋಡದ
ತಡೆಗೆ ಬೆಟ್ಟ ಸಾಲು ಹೂಡುವ ಹುಸಿ ಯುದ್ಧ,
ಹಸಿದ ಒಡಲ ತಣಿಸಲು ಅವ್ವನಂತವರ
ಒಡಲ ಬೇಗುದಿಯ ಯುದ್ಧ ; ದುಡಿಮೆಗಾರರ
ನಿರಂತರ ರಟ್ಟೆ ಯುದ್ಧ ನಮಗೆ ಬಲು ಮುಖ್ಯ.


‘ಅರಿವೇ ಗುರು’

Woman in darkness. Young woman in in darkness reaching to sun light stock photo

ದೀಪವಾರಿಸಿಬಿಟ್ಟೆ; ಸೂರ್ಯನೂ
ಮುಳುಗಿದ. ಕತ್ತಲೆಂದರೆ-
ಕತ್ತಲು, ಒಳಹೊರಗೂ..

ಮೌನಕ್ಕೆ ಶರಣಾಗಿ ಕಿವುಡುಗಿವಿ
ತೆರೆದಿದ್ದೆ, ಶಾಂತಿಯೆಂದರೆ
ಶಾಂತಿ ಒಳಹೊರಗೂ..

ಇತಿಮಿತಿಯ ಅರಿವಾಯ್ತು ಈಗ,
ನನ್ನದು ಮತ್ತೂ ಹೆಚ್ಚಾಗಿ ಅವರದು.
ಜಾಗರೆಂದರೆ ಜಾಗರೂಕಳೀಗ..

ಮಮತೆ ಕಣ್ತೆರೆದು, ಒಲವಿನಲೆ
ಶುಭನುಡಿಯ ಉಲಿದಾಗ
ಹರುಷವೆಂದರೆ ಹರುಷವೀಗ..

ಮತ್ತೆ ಕಣ್ತೆರೆದುಕೊಂಡೆ, ಒಳಹೊರಗು
ಅರಿಯುವ ಹಂಬಲದಲಿ ಇರುಳಿನಿಂದೆದ್ದು
ಬರುವ ತಾಜಾಸೂರ್ಯ ಕಂಡ.
ಬೆಳಕೆಂದರೆ ಬೆಳಕೀಗ!!


ಪದ- ಪದಕ

Bright White Melbourne Star in pitch darkness. Picture taken during summer at docklands stock photography

ಪದಗಳ ಗೀಳು ಹಿಡಿಸಿಕೊಂಡು
ಪದಗಡಲೊಳಗೆ ಮುಳುಗುಹಾಕಿ
ಗಿರಕಿಹೊಡೆದದ್ದು ಸಾಕೆನಿಸಿ ಮೇಲೆದ್ದು
ಬಂದರೆ, ಪುನಃ ಪದಗಳೇ ರಾಶಿರಾಶಿ
ದಂಡೆಯಲಿ ಬಿದ್ದಿದ್ದವು ಮರುಳಾಗಿ…

ಸದ್ದುಗದ್ದಲದ ಗೂಡ ಹೊರಗೆ ಹಾರಿ,
ನಡುಗುಡ್ಡೆ ಕಾನನದೆಡೆ ನೀರವ ಹುಡುಕಿ,
ಹಾಗೇ ತಪಸಿಗೆ ಕುಳಿತರೆ ಪದಗಳೇ
ವಿಸ್ತರಿಸಿದವು. ಧ್ಯಾನ ನಿಮೀಲಿತ
ನೇತ್ರದೊಳು ಪದಪತ್ರ ಬಿಂದು!
ಕರ್ಣದುಂಬಿತು ಪದೋಚ್ಚಾರ
ಮಂತ್ರಪಠಣ!!

ಪದನರಿದು ವಿಸ್ತರಿಸಲು ತೊಡಗಿ,
ಅಪೂರ್ಣ ಪದವಾಗಿ, ಪೂರ್ಣಲಯ
ಮೈದಳೆಯದ ಮರೀಚಿಕೆಯಾಗಿ,
ಪದಗಳ ಹಳುವ ಸರಿಸಿ, ಕಾನನದಂಚಿನ ಮರುಭೂಮಿ ಎಡೆಗೆ ಓಡೋಡಿ ಬಂದರೂ,
ಬೆನ್ನಹತ್ತಿತು ಪದ ಮಾಯಾಮೃಗವಾಗಿ…

ಪದವೆಂದರೆ ಮಾಯೆ. ಬಿಟ್ಟ ಮಾಯೆಯಲ್ಲ ಬಿಡಿಸಿಕೊಳುವ ಹುಂಬತನವೂ ನನದಲ್ಲ.
ಪದ-ಪದಕವಾಗಿ ಕೊರಳಿಗೆ ಬಿದ್ದು, ಬೆನ್ನ
ಹತ್ತಿ ಬಂದರೆ, ಹೊರೆ ಎನದೆ ನಾ ಹೇಗೆ
ಧರಿಸದಿರಲಿ..?

***************************************

About The Author

2 thoughts on “ವಸುಂಧರಾ ಕಾವ್ಯಗುಚ್ಛ”

  1. Smitha Amrithraj.

    ವಸುಂಧರಾ,ಮರು ಓದು ಕೇಳುವ ನಿಮ್ಮ ಕವಿತೆಗಳು ಗಹನ ಆಳ.ಒಳ್ಳೆಯ ಕವಿತೆಗಳು

Leave a Reply

You cannot copy content of this page

Scroll to Top