ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಸುನೀತ ಕುಶಾಲನಗರ

ಎಲ್ಲೆಡೆ ಗವ್ ಎನ್ನುವಾಗಲೂ
ಅದೇನೋ ಧ್ಯಾನ
ಮನೆಯೊಳಗಿದ್ದರೂ ನುಗ್ಗಿ
ಬರುವ ಕವಿತೆ

ಆಕಾಶದಂತೆ ಆವರಿಸಿ
ನಿತ್ಯ ಬೆಳದಿಂಗಳು
ಋತುಚಕ್ರ ಉರುಳಿದಂತೆ
ಋತುಸ್ರಾವ ವ್ಯತ್ಯಾಸ
ಬಣ್ಣದ ಕನಸುಗಳಿಗೆ
ಅದೆಷ್ಟು ಕೂಸುಗಳ ಕೇಕೆ
ಜತೆಯಾದ ಕ್ಷಣ ಕ್ಷಣವೂ
ಕಣ ಕಣಕೂ ಹಿತ
ಮತ್ತೊಮ್ಮೆ ಬದುಕಿಬಿಡೆಂದು
ಚಾಚುವ ಕೈ
ಕಣ್ಣ ಸುತ್ತಿದ ಬಳೆಯಾಕಾರದ
ಕಪ್ಪನೂ ನೇವರಿಸುವ
ಕೂದಲ ಬಣ್ಣದ ಲೇಪನಕೆ
ಹೊಸ ಹೊಳಪು
ಭೂತ ಭವಿಷ್ಯದ
ಹಂಗ ತೊರೆವ ವರ್ತಮಾನ
ತೀರಾ ಖಾಸಗಿ ಬದುಕೇ
ಆದರೂ ಸದ್ದಿಲ್ಲದೆ
ಮುಟ್ಟುಗೋಲಾಗುವ ಮುಟ್ಟಿಗೂ
ಹುಟ್ಟುತ್ತಿದೆ ಹೊಸಹುರುಪು
ದಿನ,ದಿನಾಂಕಗಳ
ಗಡಿದಾಟಿ ಬರುವ
ಲವಲವಿಕೆಯ ಮತ್ತು.

******************

About The Author

15 thoughts on “ಧ್ಯಾನ”

  1. ಚೆನ್ನಾಗಿದೆ.. ಋತುಚಕ್ರಗಳ ವ್ಯತ್ಯಾಸ ಹಿಡಿದಿಡುವ ಕವಿತೆ.

  2. Sampath kumar.

    ಕವನ ಚನ್ನಾಗಿದೆ. ದಿನ, ದಿನಾಂಕ ಗಳು ಗಡಿದಾಟಿ….. ಅಮೋಘ ಸಾಲುಗಳು..
    ವಂದನೆಗಳು.

  3. ಜಗಧೀಶ ಸಾಗರ್

    ಮೇಲು ನೋಟಕ್ಕೆ ಯಾವುದೋ ಕ್ರಾಂತಿಕಾರಿ ಸ್ತ್ರೀ ಸಂವೇದನೆಯ ಕವಿತೆ ಎಂದೆನಿಸುವ ಈ ಕವಿತೆ ಒಂದು ವಿಭಿನ್ನವಾದ ಅಭಿವ್ಯಕ್ತಿಯಾಗಿದೆ. ಋತುಸ್ರಾವ ಒಂದು ಪ್ರಕೃತಿ ಸಹಜವಾದ ಪ್ರಕ್ರಿಯೆಯಾಗಿದ್ದರೂ, ಸಮಾಜದಲ್ಲಿ ಅದೊಂದು ಅವ್ಯಕ್ತ, ಅಮುಕ್ತ ಸಂಗತಿಯೆನಿಸಿಬಿಟ್ಟಿದೆ. ಅಂತಹ ವಸ್ತುವೊಂದನ್ನು ಕವಿ ನಿರ್ಭಿಡೆಯಿಂದ ಬಳಸಿಕೊಂಡಿರುವುದನ್ನು ಮುಕ್ತವಾಗಿ ಮೆಚ್ಚಲೇಬೇಕು. ಇದು ಒಂದು ಕ್ರಾಂತಿಕಾರಿ ಕವಿತೆಯೇನೋ ಎಂದು ಪೂರ್ವಾಗ್ರಹವಾಗಿ ಓದಲು ತೊಡಗಿದರೆ, ಕೊನೆಯಲ್ಲಿ, ಬದುಕಿನ ‘ಋತುಚಕ್ರ’ದ ತಿರುವನ್ನು ಹೊಸಹುರುಪಿನೊಂದಿಗೆ ಒಪ್ಪಿಕೊಂಡ, ಲವಲವಿಕೆಯ ಹೆಣ್ಣೊಬ್ಬಳ ಚಿತ್ರಣ ಮನದಲ್ಲಿ ಮೂಡಿಸಿ ಯಾಮಾರಿಸಿ ಕಚಗುಳಿ ಇಡುತ್ತದೆ ಈ ಕವಿತೆ. ಕವಿತೆ ಮನದಲ್ಲಿ ‘ಲವಲವಿಕೆಯ ಮತ್ತ’ನ್ನು ಮೂಡಿಸಿದರೆ ಅದು ಯಶಸ್ವಿಯಾದಂತೆಯೆ. ಇಲ್ಲಿನ ಹೆಣ್ಣಂತೂ ‘ಭೂತ ಭವಿಷ್ಯದ’ ಹಂಗು ತೊರೆದು, ‘ಮುಟ್ಟು ಮುಟ್ಟುಗೋಲಾದರೂ’ ಹೊಸ ‘ಹುರುಪಿನಿಂದ’ ‘ಮತ್ತೊಮ್ಮೆ ಬದುಕಿಬಿಡುವ,’ ‘ದಿನ,ದಿನಾಂಕಗಳ’ ಗಡಿದಾಟಿಹೋದರೂ ಬಣ್ಣದ ಕನಸುಗಳೊಡನೆ ‘ವರ್ತಮಾನ’ದಲ್ಲಿ ಬದುಕುವಾಕೆ. ಇದೇ ಧೋರಣೆ ಬೇಕಿರುವುದು ಇಂದಿನ ಹೆಂಗಳೆಯರಿಗೆ. ಋತುಸ್ರಾವದ ಕಿರಿಕಿರಿಯನ್ನು ಅದು ನೀಡುವ ಮನೋದೈಹಿಕ ವೇದನೆಯನ್ನು (ಅದರಲ್ಲೂ ಋತುಚಕ್ರ ನಿಲ್ಲುವ ಸಂದರ್ಭದಲ್ಲಿ) ಆ ಸಂಕಟವನ್ನು ಋಣಾತ್ಮಕವಾಗಿ ನೋಡದೆ ಧನಾತ್ಮಕವಾಗಿ ಪರಿಭಾವಿಸಿರುವುದು ಈ ಕವಿತೆಯ ವಿಶೇಷತೆ. ಇದೇ ಈ ಕವಿತೆಯ ಶಕ್ತಿ ಕೂಡ. ಇದರಿಂದಾಗಿಯೇ ಇದೊಂದು ಜೊಳ್ಳು ರಚನೆಯೆನಿಸದೆ ಮನಮುಟ್ಟುವ ಘನ ರಚನೆಯಾಗಿದೆ.

  4. ಋತುಚಕ್ರದ ನಂತರದ ಮಾನಸಿಕ ಒತ್ತಡದಲ್ಲೂ ಮುಂದಿರುವ ದಿನಗಳನ್ನ ಭರವಸೆಯ ಕಂಗಳಿಂದ ಕಾಣುವ ಕವನ.
    ಕವಿತೆ ಚೆನ್ನಾಗಿದೆ ಸುನಿತಾಕ್ಕ..

  5. ನನಗನ್ನಿಸತ್ತೆ ಸುನೀತಕ್ಕ, ಒಂದು ಎರಡು ಹೆಡೆದು ಆ ಮಕ್ಕಳು ದೊಡ್ಡವರಾಗ್ತಾ ಹೋದ ಹಾಗೆ ತೊಟ್ಟಿಲು ತೂಗಬೇಕೆನ್ನುವ ಹಂಬಲ ಮತ್ತೆ ಮತ್ತೆ ಕಾಡೋದು ಸುಳ್ಳ ಇರಲಾರದು….ಮತ್ತೆ ನಿಸರ್ಗಮಾತೇನೇ retirement ಕೊಡ್ತಾಳಲ್ಲ ಆಗ ಮತ್ತೊಮ್ಮೆ ಬದುಕಿಬಿಡೆಂದು ಚಾಚುವ ಕೈ…..ಕಾಡತ್ತೆ.ಚೆನ್ನಾಗಿದೆ ಕವಿತೆ

Leave a Reply

You cannot copy content of this page

Scroll to Top