ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ವಸುಂಧರಾ ಕದಲೂರು

ನಡುರಾತ್ರಿಗಳಲಿ ಒಮ್ಮೊಮ್ಮೆ ನಿದ್ದೆ
ಸುಳಿಯದೇ ನರಳಿ,ನರಳಾಡಿ
ಹೊರಳಾಡುವಾಗ ಮನಕೆ ಜಗದ
ಚಿಂತೆಯೂ ಹಿಡಿದು ಚಿಂತನೆಗೆ
ಶುರುವಾಗುತ್ತದೆ.

ಇಂತಿಪ್ಪ ಅಶಾಂತಿಗೆ ಶಾಂತಿಯ
ಹುಡುಕುವ ಮನಸ್ಸಾಗುತ್ತದೆ.

ಜ್ಞಾನೋದಯಕ್ಕೆ ಮನೆಬಿಟ್ಟು
ಹೋದವ ನೆನಪಾಗಿ, ನಾನೂ ಎದ್ದು
ಹೊರಡಿಬಿಡಬೇಕೆಂಬ ತುಡಿತ ಹೆಚ್ಚಾಗಿ
ಪರಿತ್ಯಾಗದ ವೇದಿಕೆ ಹತ್ತಲು ಮನ
ಇನ್ನಿಲ್ಲದಂತೆ ಸಿದ್ಧವಾಗುತ್ತದೆ.

ಏಳಬೇಕೆಂದವಳ ನಡು ಬಳಸಿ,
ಕೊರಳ ಸುತ್ತಿ ಅಪ್ಪಿರುವ ‘ನಾಲ್ಕು
ಕೈಗಳ ಬಂಧನ ಬಿಡಿಸಿಕೊಳ್ಳುವುದು
ಹೇಗೆ?’ ಪ್ರಶ್ನೆ ಧುತ್ತೆಂದು ಕಾಡುತ್ತದೆ.

ಲೋಕೋದ್ಧಾರಕ್ಕೆ ಹೊರಡಲಾಗದೆ
ಭವಬಂಧನಕೆ ಸಿಲುಕಿರುವ ನಾನು,
ಬದ್ಧತೆಯೇ ಇಲ್ಲದ ಬುದ್ಧಿಗೇಡಿಯೇ?!
ಭಯವೂ ಸುಳಿದಾಡುತ್ತದೆ.

‘ಛೇ, ಬಿಡು ಇದನ್ನೆಲ್ಲಾ ಎದ್ದು ನಡೆ’
……ಕಳ್ಳ ಮನಸ್ಸಿನ ಚಿತಾವಣೆ.

ನಾನೇನೋ ಹೋಗಿಬಿಡುವೆ. ನಾಳೆ
ಇವರೆಲ್ಲಾ ಹುಡುಕಾಡಿದರೆ, ಸ್ನಾನದಲಿ
ಬಿಸಿನೀರಿಗೆ, ಹಸಿವಿನಲಿ ಅನ್ನಕೆ…

ನನ್ನ ಸಮಸ್ತ ಗೆಳೆಯರ ಪಟ್ಟಿ
ಹಿಡಿದು ‘ಯಾರೊಡನೆ ಹೋದಳು
ಇವಳೆಂದು?!’ ಉಳಿದ ಮಿತ್ರಜನ
ಪರಿವಾರ ಕುಹಕವಾಡಿ ನಕ್ಕರೆ…

ಲೋಕೋದ್ಧಾರಕ್ಕೆ ತೊಡಗಲೂ ನನಗೆ ಭಯವಾಗುತ್ತದೆ; ಇದನ್ನೆಲ್ಲಾ ನೆನೆದರೆ..

ಚಿಂತೆಗಳ ಸುಳಿವಲ್ಲಿ ನಡುರಾತ್ರಿಯಲಿ
ಎದ್ದವಳು ಮತ್ತೆ ಹಾಗೆಯೇ ಬಿದ್ದುಕೊಳ್ಳುವೆ.
ಅಪ್ಪಿಕೊಂಡವರೊಡನೆ ಮಲಗಿದರೆ ನನಗೆ
ಜಗದೋದ್ಧಾರದ ಚಿಂತೆ ಮರೆತ ಗಾಢ ನಿದ್ದೆ

*********************

About The Author

6 thoughts on “ಜ್ಞಾನೋದಯದ ನಿದ್ದೆ”

  1. Mahadeva Kanathila

    ಚಿಂತನೆಗೆ ಹಚ್ಚುವ ಒಳ್ಳೆಯ ಕವಿತೆ, ವಸುಂಧರಾ ಅವರೇ.

  2. Allabaksha bijapur

    ಜ್ಞಾನೋದಯ ಮತ್ತೆ ನೆನಪುಸುತ್ತಿದೆ ಬಸವಣ್ಣನ – ಲೋಕದ ಡೊಂಕವ ನೀವೇಕೇ ತಿದ್ದುವಿರೆಂದು, ನಮ್ಮಪ್ಪಿದವರ ಸಂತೈಸಿ ಎಂದು.

Leave a Reply

You cannot copy content of this page

Scroll to Top