ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ?

ಡಾ. ಅಜಿತ್ ಹರೀಶಿ

ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ?

ಕಸಾಪಕ್ಕೆ ಮಹಿಳೆಯೋರ್ವರು ಅಧ್ಯಕ್ಷರಾಗಲಿ ಎಂಬುದು ಸೂಕ್ತವೇ ಆಗಿದೆ. ಆದರೆ ಕೆಲವು ಅಂಶಗಳನ್ನು ನಾನು ಇಲ್ಲಿ ಈ ಸಂದರ್ಭದಲ್ಲಿ ಚರ್ಚಿಸಲು ಬಯಸುತ್ತೇನೆ.

ತುರ್ತುಪರಿಸ್ಥಿತಿಯೇ ಕೊನೆ. ಆನಂತರ ದೊಡ್ಡ ಹೋರಾಟವೇ ಇಲ್ಲದ ಜಿಡ್ಡುಗಟ್ಟಿದ ವಾತಾವರಣ ರಾಜಕೀಯ ವಲಯದಲ್ಲಿ ಸೃಷ್ಟಿಯಾಯಿತು. ಸಾಹಿತ್ಯದಲ್ಲೂ ಬಂಡಾಯ, ದಲಿತ ಹೋರಾಟಗಳ ನಂತರದ ಸ್ಥಿತಿ ನಿಂತ ನೀರೀಗ!

ಯಾವುದೇ ಆಗ್ರಹವನ್ನು ಅನುಮಾನದಿಂದ ನೋಡುವ ಪ್ರವೃತ್ತಿ ಇಂದಿನ ದಿನಮಾನಗಳಲ್ಲಿದೆ. ಅದು ಇವತ್ತಿನ ಕಾಲಘಟ್ಟದಲ್ಲಿ ಸಹಜ ಕೂಡ. ಒಂದು ಕ್ಷಣ ಮೈಮರೆತರೂ ಮೋಸ ನಿಶ್ಚಿತ. ಕೆಲವರು ಹಿಡನ್ ಅಜೆಂಡಾ ಹಿಡಿದು ಬಂದು ತಮ್ಮದನ್ನು ಸಾಧಿಸಿಕೊಂಡು ಮರೆಯಾಗುವವರು.

ಇದೆಲ್ಲವನ್ನು ಗಮನಿಸಿದರೆ, ಮಹಿಳಾ ಅಧ್ಯಕ್ಷೆ ಅಂತ ಹೊರಟು, ಅದು ಬಲವಾಗುತ್ತಿದ್ದಂತೆ – ಜಾತಿ, ಧರ್ಮಗಳ ಮೇಲೆ ಒಡಕನ್ನು ತೋರಲೂಬಹುದು. ಇದೊಂದು ಪ್ರಜಾಪ್ರಭುತ್ವ ವ್ಯವಸ್ಥೆ, ಇಲ್ಲಿ ಚುನಾವಣೆ ಬೇಡ ಎಂದು ಹೇಳುವುದು ತಪ್ಪಾದೀತು. ಯೋಗ್ಯರು ಎಂಬ ಪ್ರಶ್ನೆ ಬಂದಾಗ ತಕ್ಕಡಿ ಅವರವರದೇ ಆದೀತು. ಹಾಗಾಗಿ ಈಗಿನ ವ್ಯವಸ್ಥೆಯಲ್ಲಿ ಇರುವ ಲೇಖಕಿಯರ ಸಂಘ ಇತ್ಯಾದಿ ಸಂಸ್ಥೆಗಳು, ಸಂಘಟನೆಗಳು ಒಂದೆಡೆ ಕುಳಿತು ಒಂದು ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಒಳಿತು. ಅದನ್ನು ಒಪ್ಪದವರಿಗೆ ಚುನಾವಣೆಯಂತೂ ಇದ್ದೇ ಇದೆ. ನಾನು ಈ ಮಾತನ್ನು ಏಕೆ ಹೇಳುತ್ತಿದ್ದೇನೆ ಎಂದರೆ ಇತ್ತೀಚೆಗೆ ಬಹಳ ಹೋರಾಟಗಳು ಹೈಜಾಕ್ ಆಗಿವೆ. ಅದು ಇಲ್ಲಿ ಆಗದಿರಲಿ. ಇಲ್ಲಿ ಮತದಾರರು ಮುಖ್ಯರಾಗುವುದರಿಂದ ಸಂಘಟನೆಯ ಶಕ್ತಿಯಿರುವ ಮಹಿಳಾ ಸಾಹಿತಿಯೋರ್ವರನ್ನು ಸರ್ವಾನುಮತದಿಂದ ಕಸಾಪದ ಬಹುತೇಕ ಮುಂಚೂಣಿಯಲ್ಲಿರುವ ಮಹಿಳೆಯರು, ಹಿರಿಯರು ಅಭ್ಯರ್ಥಿ ಎಂದು ನಿರ್ಧರಿಸಲಿ. ಒಮ್ಮೆ ಒಮ್ಮತ ಮೂಡಿದರೆ ಮುಂದಿನ ಕೆಲಸ ಸುಲಭ. ಇದು ಕೇವಲ ರಾಜಕೀಯ ಉದ್ದೇಶವನ್ನು ಹೊಂದಿದ್ದರೆ, ಕೆಲವೇ ಜನರ ಪಾಲ್ಗೊಳ್ಳುವಿಕೆ ಇದ್ರೆ ಅಭ್ಯರ್ಥಿತನಕ್ಕೆ ಮೊದಲೇ ಮಕಾಡೆ ಮಲಗುತ್ತದೆ ಎಂಬುದು ನೆನಪಿರಲಿ.

ಇನ್ನು ಹಿಂದೆ ಮಹಿಳಾ ಅಧ್ಯಕ್ಷರು ಇರಲಿಲ್ಲ ಎಂಬುದರ ಕುರಿತು ಹೇಳಬೇಕಾದರೆ – ಮೊದಲು ಸ್ಪಷ್ಟ ತಯಾರಿಯೊಂದಿಗೆ ಕಣಕ್ಕಿಳಿಯುವುದು ಮುಖ್ಯವಾಗುತ್ತದೆ. ಕಸಾಪದ ಮತದಾರರು ಪ್ರಬುದ್ಧರಿದ್ದಾರೆ. ಯೋಗ್ಯ ವ್ಯಕ್ತಿ ಅವಿರೋಧವಾಗಿ ಆಯ್ಕೆಯಾದರೆ ಎಲ್ಲರಿಗೂ ಖುಷಿ. ವಿವಾದಿತರು ಅಭ್ಯರ್ಥಿಯಾದರೆ ಕೆಸರೆರಚಾಟ ಮತ್ತು ಚುನಾವಣೆ ನಿಶ್ಚಿತ. ಅಂತಹ ವಾತಾವರಣ ನಿರ್ಮಾಣವಾಗದೇ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಉತ್ತಮ ಮಹಿಳಾ ಸಾಹಿತಿ ಕಸಾಪದ ಅಧ್ಯಕ್ಷ ಪಟ್ಟವನ್ನು ಅಲಂಕರಿಸಲಿ ಮತ್ತು ಅದಕ್ಕೆ ಶೋಭೆ ತರಲಿ ಎನ್ನುವುದು ಈ ಹೊತ್ತಿನ ಆಶಯ.


  • ಡಾ. ಅಜಿತ್ ಹರೀಶಿ

About The Author

Leave a Reply

You cannot copy content of this page

Scroll to Top