ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲಹರಿ

ವಸುಂಧರಾ ಕದಲೂರು

   ಆಗೆಲ್ಲಾ ಮೂರ್ನಾಲ್ಕು ವರ್ಷಗಳಿಗೊಮ್ಮೆ ಮನೆಯ ಸಾಮಾಗ್ರಿಗಳನ್ನು ಗಂಟುಮೂಟೆ ಕಟ್ಟಿಕೊಂಡು ನಮ್ಮ ಕುಟುಂಬ ಊರಿಂದೂರಿಗೆ ಪ್ರಯಾಣಿಸುತ್ತಿತ್ತು. ನಾನು ಸಣ್ಣವಳಿದ್ದಾಗಿನ ವಿಷಯವಿದು. ಈ ಸಂಚಾರದ ನಿರಂತರತೆಗೆ ನಮ್ಮಪ್ಪ ಸರಕಾರಿ ನೌಕರರಾಗಿದ್ದು ಹಾಗೂ ವರ್ಗಾವಣೆಯನ್ನು ಅವರು ಸಹಜವಾಗಿ ಸ್ವೀಕರಿಸುತ್ತಿದ್ದದ್ದು ಪ್ರಮುಖವಾಗಿತ್ತು ಎನ್ನುವುದು ನನಗೀಗ ಅರ್ಥವಾಗುತ್ತಿದೆ.

         ಹೀಗೆ ಪದೇ ಪದೇ ವರ್ಗವಾಗುತ್ತಿದ್ದರಿಂದ ನನ್ನ ಶಾಲಾ ಶಿಕ್ಷಣ ಮೈಸೂರು, ಹಾಸನ ಜಿಲ್ಲೆಗಳ ಹಲವು ಹಳ್ಳಿಗಳ ಸರಕಾರಿ ಶಾಲೆಗಳಲ್ಲಿ ನಡೆಯಿತು. ಮತ್ತೆ ಮತ್ತೆ  ಹೊಸ ಶಾಲೆ, ಹೊಸ ಗೆಳೆತನ, ಹೊಸ ಪರಿಸರ. ಈ ಎಲ್ಲವೂ ಆ ಬಾಲ್ಯದಲ್ಲಿ ಸಾಹಸಮಯವಾಗಿ ಕಾಣುತ್ತಿತ್ತು. ಅಂದಿನ ಸೊಗಸಿನ ದಿನಗಳ ಒಂದೆರಡು ಅನುಭವಗಳನ್ನು ಈಗ ಸುಮ್ಮನೆ ನೆನಪಿಸಿಕೊಂಡರೆ  ಸಾಕೂ ಮನಸ್ಸು ಜಿಗಿಯುವ ಹುಲ್ಲೆಮರಿಯಾಗುತ್ತದೆ.

  ಆ ದಿನಗಳಲ್ಲಿ ನಮ್ಮದು ತೀರಾ ಹಗುರವಾದ ಬಟ್ಟೆಯಿಂಜ ಮಾಡಿದ ಪಾಟೀಚೀಲ. ಸ್ಲೇಟು, ಬಳಪ, ಪಠ್ಯಪುಸ್ತಕಗಳಿಗಿಂತಲೂ ಹೆಚ್ಚಾಗಿ ವಿವಿಧ ನಮೂನೆಯ ಕಲ್ಲು, ಮಿರುಗುವ ಬಟ್ಟೆ ಚೂರು, ಹಕ್ಕಿ ಪುಕ್ಕ, ಯಾವುದೋ ಹಣ್ಣು- ಕಾಯಿ-ಕಡ್ಡಿ ಚೂರು ಹೀಗೆ ಏನೇನೂ ತುಂಬಿಕೊಂಡು ಅದು ನಮ್ಮ ಅತೀ ಜೋಪಾನ ಮಾಡುವ ಆಸ್ತಿಯಾಗಿ ನಮಗದೇ ಬ್ರಹ್ಮಾಂಡವಾಗುತ್ತಿತ್ತು.  ಯಾರಾದರೂ ಹಲವು ಕೋಟಿ ರೂಪಾಯಿ ಕೊಡುತ್ತೇವೆ ಆ ಚೀಲವನ್ನು ನಮಗೆ ಕೊಡಿ ಎಂದರೆ, ಸಾರಾಸಗಟಾಗಿ ಅಷ್ಟೂ ನಗದನ್ನು ನಿರಾಕರಿಸಲು ಕಾರಣವಾಗಬಹುದಾದ ಅತ್ಯಮೂಲ್ಯ ವಸ್ತುಗಳು ಅದರಲ್ಲಿರುತ್ತಿದ್ದವು. (ಕೋಟಿಗಿರುವ ಸೊನ್ನೆ ಎಷ್ಟೆಂದು, ಅದರ ಮೌಲ್ಯ ಎಷ್ಟೆಂದು ತಾನೇ ಆಗ ಗೊತ್ತಾಗುತ್ತಿತ್ತೇ!?)

    ಅದು ಒತ್ತಟ್ಟಿಗಿರಲಿ, ಸದಾ ಆರೇಳು ಮಕ್ಕಳ ಜೊತೆ ಸೇರಿ ಶಾಲಾಪಠ್ಯದೊಡನೆ ಹಲವು ಪರಿಕರಗಳನ್ನು ಹೊತ್ತು ಶಾಲೆಗೆ ಹೋಗುತ್ತಿದ್ದ ನಮ್ಮ ತಂಡವು ಯಾವ ‘ಸಾರ್ಥ’ಕ್ಕೂ (ವ್ಯಾಪಾರೀ ತಂಡ) ಕಡಿಮೆ ಇರುತ್ತಿರಲಿಲ್ಲ. ದಾರಿ ತುಂಬೆಲ್ಲಾ ಗಿಜಿಬಿಜಿ.. ಅದೇನು ಮಾತಾಡಿಕೊಳ್ಳುತ್ತಿದ್ದೆವೋ…!

  ಬಟ್ಟೆಯಿಂದ ಮಾಡಿದ ಪಾಟೀಚೀಲದ ಹಿಡಿಕೆಯನ್ನು ತಲೆಯ ಮೇಲೆ ಹಾಕಿಕೊಂಡು, ಬೆನ್ನ ಹಿಂದೆ ಇಳಿಬೀಳಿಸಿ ನಡಿಗೆಯ ಲಯಕ್ಕೆ ಚೀಲವನ್ನು ಬಡಿದುಕೊಳ್ಳುತ್ತಾ, ಕೆಲವೊಮ್ಮೆ ಜೋಳಿಗೆಯಂತೆ ಹೆಗಲಿನಿಂದ ಇಳಿಸಿಕೊಂಡು, ಮತ್ತೆ ಕೆಲವೊಮ್ಮೆ ನೆತ್ತಿಯ ಮೇಲೇರಿಸಿಕೊಂಡು, ಮುಂದಿನ ಬಾರಿ ಎದೆಯ ಮುಂದಿನಿಂದ ಕುತ್ತಿಗೆಗೆ ನೇತು ಬೀಳಿಸಿಕೊಂಡು, ಸೊಂಟ ಕೈಗಳಿಗೆ ಸುತ್ತಿಕೊಂಡು, ಮೊಣಕಾಲುಗಳಿಂದ  ಚೀಲದೊಳಗೆ ಇದ್ದ ಸ್ಲೇಟನ್ನು ಬಡಿಯುತ್ತಾ ಸಾಗುತ್ತಿದ್ದಾಗ ಅದರೊಳಗಿರುವುದು ‘ಸಾಕ್ಷಾತ್ ಸರಸ್ವತಿ ಸ್ವರೂಪ’ ಎನ್ನುವುದು ಸಾಸುವೆಯ ಕಾಳಷ್ಟೂ ನೆನಪಾಗುತ್ತಿರಲಿಲ್ಲವಲ್ಲಾ ! ಅಂಥಾ ಅತಿ ಮುಗ್ಧ ಸೊಗಸುಗಾರಿಕೆಯ ಅನುಭವ ಆರೇಳು ಕೇಜಿ ಭಾರ ತೂಗುವ ಶಾಲಾ ಬ್ಯಾಗ್  ಹಾಗೂ ಮನೆಯ ಮುಂದೆಯೇ ಶಾಲಾ ವಾಹನಗಳನ್ನು ಏರಿಳಿಯುವ ನಮ್ಮೀ ಮಕ್ಕಳಿಗೆಲ್ಲಿ ಸಿಗಬೇಕು ಹೇಳಿ? 

     ನಾಲ್ಕನೇ ತರಗತಿಯ ವಿದ್ಯಾಭ್ಯಾಸವು ಹಾಸನ ಜಿಲ್ಲೆಯ ಅರಕಲಗೂಡು ಎಂಬ ತಾಲೂಕಿನಲ್ಲಾಯ್ತು. ಅದು ಆ ಕಾಲಕ್ಕಿನ್ನೂ ದೊಡ್ಡ ಹಳ್ಳಿಯಂತೆ ಇತ್ತೇ ಹೊರತು ಪಟ್ಟಣದ ಕುರುಹು ಅಷ್ಟಾಗಿ ಕಾಣುತ್ತಿರಲಿಲ್ಲ. ಮಧ್ಯಾಹ್ನದ ಬಿಸಿ ಊಟ ಸವಿದದ್ದು ಅಲ್ಲಿನ ಶಾಲೆಯಲ್ಲಿಯೇ ಮೊದಲು. ಜೊತೆಗೆ, ಚೈತ್ರ, ವೈಶಾಖ, ಜೇಷ್ಠ.. ಎಂಬ 12 ಮಾಸಗಳೂ, ವಸಂತ , ಗ್ರೀಷ್ಮ, ವರ್ಷ.. ಎಂಬ 6 ಋತುಗಳೂ, ಅಶ್ವಿನಿ, ಭರಣಿ, ಕೃತಿಕಾ, ರೋಹಿಣೀ.. ಎಂಬಿತ್ಯಾದಿ 27 ನಕ್ಷತ್ರಗಳ ಹೆಸರುಗಳನ್ನು ಉರುಹೊಡೆದದ್ದೂ ಸಹ ಆ ಶಾಲೆಯಲ್ಲಿಯೇ. ಆಗ ಅಭ್ಯಾಸ ಮಾಡಿದ್ದು ಈಗ ಪೂರ್ಣ ನೆನಪಿರದಿದ್ದರೂ, ಆ ಊರಿನ ಬಸ್ ನಿಲ್ದಾಣದ ಬಳಿಯಿದ್ದ ಎತ್ತರದ ಮರದ ಮೇಲೆ ತಲೆಕೆಳಗಾಗಿ ನೇತಾಡುತ್ತಿದ್ದ ನೂರಾರು ಕಪ್ಪು ಬಾವಲಿಗಳು ಮಾತ್ರ ನೆನಪಿನಾಳದಲ್ಲಿ ಹಾಗೇ ಕಪ್ಪುಬಣ್ಣದಲಿ ಹೆಪ್ಪುಗಟ್ಟಿವೆ. ಆದರೆ ಅತ್ಯಂತ ಕಡಿಮೆ ಅವಧಿಯ ಆ ಶಾಲೆಯಲ್ಲಿ ದೊರೆತ ಗೆಳೆತನದ ಹೆಸರುಗಳು ಮನದ  ನೇಪಥ್ಯಕ್ಕೆ ಸರಿದು ಮಸುಕಾಗಿರುವುದು ನನ್ನ ದುರಾದೃಷ್ಟ.

        ರಾವಂದೂರು ಎಂಬ ಊರಿದೆ. ಹಾಸನ ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ. ಅಲ್ಲಿ ನಾನು ಐದು ಮತ್ತು ಆರನೆಯ ಇಯತ್ತೆ ಓದುವಾಗಿನ ನೆನಪುಗಳು ಮಾತ್ರ ಇನ್ನೂ ಹಸುರಾಗಿ ಸೊಗಸಾಗಿವೆ! ಅಲ್ಲಿನ  ಶಾಲಾ ಕಾರ್ಯಕ್ರಮಕ್ಕೆ ಮೋಟು ಜಡೆಗೆ ಚೌಲಿ ಹಾಕಿಸಿಕೊಂಡದ್ದು, ಡಾನ್ಸ್ ಮಾಡುವಾಗ ಸೀರೆ ಸಡಿಲವಾಗಿ ಜಾರಿಕೊಂಡದ್ದು, ಕೋಗಿಲೆ ಕಂಠವಿಲ್ಲದ ನಾನೂ ಸಹ “ಚೆಲುವಿ ಚೆಲುವಿ ಎಂದು ಅತಿಯಾಸೆ ಪಡಬೇಡ….” ಎಂದು ಜನಪದ ಗೀತೆ ಹಾಡಲು ಹೋಗಿ ಅರ್ಧಕ್ಕೇ ಬಾಯೊಣಗಿ ನನ್ನ ಸ್ವರ ನನಗೇ ಕೇಳಿಸದಂತಾಗಿ ಮುಂದೆ ಹಾಡದೇ ಬಿಟ್ಟದ್ದು, ಒಂದು ದಪ್ಪದಾಗಿರುವ ಜೀವಂತ ಮೀನನ್ನು  ಬಕೇಟಿನ ಒಳಗಿಟ್ಟುಕೊಂಡು ತಂದ ವಿಜ್ಞಾನದ ಮಾಸ್ಟರರು ಮೀನಿನ ರಚನೆ ಬಗ್ಗೆ ಪಾಠ ಮಾಡಿದ್ದು… ಎಲ್ಲವೂ ನನ್ನ ನೆನಪಿನ ಪರದೆಯ ಮೇಲೆ ಇನ್ನೂ ಚಲಿಸುತ್ತಿರುವ ಚಿತ್ರಗಳು.

      ರಾವಂದೂರಿನಲ್ಲಿ ನಮಗೊಂದು ರಮಣೀಯ ಸ್ಥಳವಿತ್ತು. ಅದು ನನ್ನಣ್ಣ ಓದುತ್ತಿದ್ದ ಹೈಸ್ಕೂಲು. ಅದೇ ಊರಿನಲ್ಲಿಯೇ ತುಂಬಾ ದೂರದಲ್ಲಿತ್ತು. ಅಲ್ಲಿಗೆ ಒಂದು ಭಾನುವಾರ ನಾನು, ನನ್ನ ಗೆಳತಿಯರಾದ ಪ್ರಿಯಾ, ಬಬಿತಾ, ರೂಪ, ಶ್ವೇತಾ ಮೊದಲಾದವರು ಪಿಕ್ನಿಕ್ ಹೋಗಿದ್ದೆವು. ಬಹುಶಃ ಮನೆಯಲ್ಲಿ ಹೇಳರಲಿಲ್ಲ. ಹೇಳಿದ್ದರೆ ಅಷ್ಟು ದೂರ ಸಣ್ಣ ಮಕ್ಕಳಾದ ನಮ್ಮನ್ನು ಅವರು ಕಳಿಸುತ್ತಲೂ ಇರಲಿಲ್ಲ. ನಮಗೋ ಅದು ಮೋಸ್ಟ್ ಅಡ್ವೆಂಚರಸ್ ಪಿಕ್ನಿಕ್..! ನಾವೆಲ್ಲಾ ಆ ಹೈಸ್ಕೂಲಿನ ವಿಶಾಲ ಜಾಗ, ದೊಡ್ಡ ಕಟ್ಟಡ, ಆ ಶಾಲಾ ಆವರಣದ ಕಾರಂಜಿ ಕೊಳ, ಮರಗಳ ಸಾಲು, ವಿಶಾಲ ಮೈದಾನ ನೋಡಿ ಕಣ್ಣರಳಿಸಿಕೊಂಡು ಸಂಭ್ರಮಿಸಿದ್ದೆವು. 

   ಹುಣಸೇಹಣ್ಣು, ಉಪ್ಪು , ಸಕ್ಕರೆ, ಖಾರದಪುಡಿ ಬೆರೆಸಿ ಜಜ್ಜಿ ಮಾಡಿಕೊಂಡ ಅದ್ಭುತ ರುಚಿಯ ಉಂಡೆಯೇ ನಮ್ಮ ಪಿಕ್ನಿಕ್ಕಿನ ಊಟ, ಅಲ್ಲಿ ಆಡಿದ ಮರಕೋತಿ ಆಟ.. ಎಷ್ಟು ಸೊಗಸಿತ್ತು! ಮಕ್ಕಳಿನ್ನೂ ಮನೆ ಸೇರಿಲ್ಲವೆಂದು ದೊಡ್ಡವರ ಆತಂಕವು ಅಮೋಘ ಸಾಹಸದಲ್ಲಿ ಮೈ ಮರೆತಿದ್ದ ನಮಗೆ ಹೇಗೆ ಗೊತ್ತಾಗಬೇಕು?

      ಸಂಜೆ ಸೂರ್ಯನನ್ನು ಅವನ ಮನೆಗೆ ಕಳಿಸಿಯೇ ನಾವು ನಮ್ಮ ನಮ್ಮ ಮನೆಗೆ  ಬಂದದ್ದು. ಈ ಬೇಜವಾಬ್ದಾರಿತನದ ಸಾಹಸಕ್ಕೆ ನನಗೆ ಮನೆಯಲ್ಲಿ ಬಹುದೊಡ್ಡ ಸನ್ಮಾನ ಕಾಯುತ್ತಿತ್ತು. ಬಾಗಿಲ ಸಂದಿಗೆ ಸೇರಿಸಿ ಕಣ್ಣು ಅಗಲಿಸಿಕೊಂಡು  ರೊಟ್ಟಿ ಮಗುಚುವ ಕೋಲಿನಿಂದ ಅಮ್ಮ ಬಿಸಿಯಾಗಿ ಕೊಟ್ಟ ಏಟಿನ ರುಚಿಯು ಇವತ್ತಿಗೆ ನಗು ಬರಿಸುವುದು ನಿಜವಾದರೂ ಆ ಹೊತ್ತಿನಲ್ಲಿ ಇನ್ಮುಂದೆ ಗೆಳೆಯರೂ ಬೇಡ, ಅವರೊಡನೆ ಮಾಡಬೇಕೆಂದಿರುವ ಪಿಕ್ನಿಕ್ಕೂ ಬೇಡವೆನಿಸುವಂತೆ ಮಾಡಿತ್ತು. ಇಷ್ಟಾದ ಮೇಲೂ ಆ ಶಾಲೆಯ ರಮ್ಯತೆಗೆ, ಅದರ ಸೊಗಸುಗಾರಿಕೆಗೆ ಸೋತ ಮನಸ್ಸು ಹೈಸ್ಕೂಲ್ ಅನ್ನು ಆ ಶಾಲೆಯಲ್ಲಿಯೇ ಓದಬೇಕೆಂದು ಸಂಕಲ್ಪಿಸಿಕೊಂಡಿತ್ತು. ಅದನ್ನು ಮಾತ್ರ ಇನ್ನೂ ಮರೆಯಲಾಗಿಲ್ಲ. ಆದರೆ ನನಗೆ ಅದೊಂದು ಈಡೇರಲಾಗದ ಕನಸಾಗಿಯೇ ಉಳಿದು ಬಿಟ್ಟದ್ದು ಮಾತ್ರ ನನ್ನ ಜೀವನದ ಪರಮ ನಿರಾಸೆಯ ವಿಷಯವಾಗಿದೆ..

     ಅಷ್ಟರಲ್ಲಿ ನನ್ನ ಅಪ್ಪನಿಗೆ ಮಂಡ್ಯ ಜಿಲ್ಲೆಯತ್ತ ವರ್ಗವಾಗಿ ಹಳ್ಳಿಗಳ ಗಮ್ಮತ್ತು ನಿಧಾನವಾಗಿ ದೂರವಾಗುತ್ತಾ ಪಟ್ಟಣವೆಂಬ ಬೆರಗಿನ ಬೆಳಕು ಕಣ್ಣೊಳಗೆ ಹಾಯಲು ಶುರುವಾಯಿತು.

***********************

About The Author

1 thought on “‘ಎಳೆ ಹಸಿರು ನೆನಪು ..’”

  1. Smitha Amrithraj.

    ನೆನಪುಗಳ ಮಾತು ಮಧುರ.ಕೊನೆಯ ಸಾಲು ಕವಿತೆಯಂತೆ ಧ್ವನಿಸುತ್ತದೆ.

Leave a Reply

You cannot copy content of this page

Scroll to Top