ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಘಾಚರ್ ಘೋಚರ್
ಕಥಾಸಂಕಲನ
ಲೇಖಕ: ವಿವೇಕ ಶಾನಭಾಗ

ಏಕತ್ವ ಮನಸ್ಸಿನ ಗುಣ. ಆದರೆ, ಪ್ರತೀ ಉನ್ಮೇಷ, ನಿಮೇಷದಲ್ಲಿಯೂ ಮಗದೊಂದು ವಿಷಯ ಚಿಂತನೆಗೆ ಜಾರಬಲ್ಲ ಮನಸ್ಸು ಒಂದು ಕ್ರಮಬದ್ಧತೆಗೆ ಒಳಪಡಲು ಅಭ್ಯಾಸ ಬೇಕು. ಬದುಕು ಅದೇ ಮನೋಭ್ಯಾಸದ ಪಡಿಯಚ್ಚು‌. ಅದರ ಈ ಅಣಿಮ, ಗರಿಮಾದಿ ಗುಣಗಳ ಬಿಚ್ಚಿಡುವ ಈ ಕಥಾಸಂಕಲನ ಈ ವಿಶಿಷ್ಟ ನಿರೂಪಣೆಯಿಂದಾಗಿ ಹೃದಯವನ್ನು ಗೆಲ್ಲುತ್ತದೆ.

ಒಂದು ನೀಳ್ಗತೆ, ಐದು ಕಥೆಗಳ ಸಂಗ್ರಹವಿದು.

ಘಾಚರ್ ಘೋಚರ್ ನೀಳ್ಗತೆಯ ಮುಂದುವರೆದ ಭಾವವೇ ಉಳಿದ ಕಥೆಗಳು ಎಂಬ ಸುಳಿವು ಕೊನೆಯವರೆಗೂ ಓದುವಾಗ ಅನಿಸುತ್ತದೆ. ಅಬ್ಬಾ ವಿವೇಕರಿಗೊಂದು ಸಲಾಂ.

ಕಥೆಯ ನಿರೂಪಣೆ, ಘಟನೆಗಳ ಎಳೆಗಳ ವಿಶ್ಲೇಷಣೆಯಲ್ಲಿ ಗೆಲ್ಲುವ, ಈ ನೀಳ್ಗತೆಯಲ್ಲಿ, ತನ್ನ ಬದುಕಿನ ಸಿಕ್ಕುಗಳ ಬಿಡಿಸಿ ಹೇಳುತ್ತಾ, ಕೊನೆಗೊಂದು ಗಂಟು ಉಳಿಸಿಯೇ ಕಥೆ ಮುಗಿಯುವುದು ಒಂದು ವಿಲಕ್ಷಣ ಯೋಚನೆಗೆ ಹಚ್ಚುತ್ತದೆ. ಓದುಗನಿಗೆ ಮುಂದಿನ ಕಥೆಯ ಆವೇಶವಾಗುವದಕ್ಕೂ ಮೊದಲು ಈ ಕಗ್ಗಂಟು ಕರಗುವುದೇ ಇಲ್ಲ… ಹೇಗೆಂದರೆ ಕಂಡಲ್ಲೆಲ್ಲಾ ಬಡಪಾಯಿ ಇರುವೆಯನ್ನು ಸಾಯಿಸುವ ಒಂದು ವಿಕ್ಷಿಪ್ತ ಮನಸ್ಥಿತಿಯನ್ನೇ ಬೆಳೆಸುತ್ತಾ ‘ಘಾಚರ್ ಘೋಚರ್’ ಎಂಬ ಒಂದು ಜೋಡಿ ಪದಗಳ ಆವಿಷ್ಕಾರವನ್ನು ಹೆಣೆಯುತ್ತಾ ಅದೇ ಅಂತ್ಯ ಎಂಬಲ್ಲಿಗೆ ಕಥನ ಮುಗಿಯುತ್ತದೆ.

ಈ ಇಜ್ಜೋಡು ಪದಗಳನ್ನು ಅರಿತಿರುವ ಪ್ರಪಂಚದ ಕೆಲವೇ ಕೆಲವು ಜನರಲ್ಲಿ ನೀವೂ ಒಬ್ಬರಾಗುತ್ತೀರಿ… ಈ ಕಥೆಯ ಮೂಲಕ…

ನಿರ್ವಾಣ ಕಥೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ, ಅಪರಿಚಿತ ಸ್ಥಳದಲ್ಲಿ ಒಂದು ಅಸಂಗತ ರೀತಿಯಲ್ಲಿ ಮೂರ್ತನಾಗುವ ಘಟನೆಯಿದೆ… ಇದೊಂದು ವಿಶಿಷ್ಟಪ್ರಯೋಗ.

ಕೋಳಿ ಕೇಳಿ ಮಸಾಲೆ? ಕಥೆಯಲ್ಲಿ ನವಿರಾದ ವ್ಯಂಗ್ಯವು ಹಾಸ್ಯ ಎನಿಸುತ್ತಲೇ, ಒಂದು ವ್ಯವಸ್ಥೆಯ ಸೂಕ್ಷ್ಮ ಅವಲೋಕನವಿದೆ.

ರಿಸ್ಕ್ ತಗೊಂಡು ಎಂಬ ಪುಟ್ಟ ಕಥೆಯಲ್ಲಿ ಸಹಜವಾದ ಕಥನದ ಹಾದಿಯ ಬದಿಗೊತ್ತಿ, ಗಂಡು- ಹೆಣ್ಣಿನ ಸಂಬಂಧ, ಮನಸ್ಥಿತಿಯ ಅನಾವರಣ ಅನನ್ಯವಾಗಿ ಮೂಡಿದೆ. ಇದೊಂದು ಸೂಜಿ ಮೊನೆಯ ಚುಚ್ಚುಮದ್ದು.

ಸುಧೀರನ ತಾಯಿ ಕಥೆಯು ಭಾವನಾತ್ಮಕವಾಗಿ ಕಾಡುವ, ಕದಡುವ ಕಥೆ. ಆದರೆ, ಮನಸ್ಸಿನ ಖೇದಗಳ ಶಬ್ಧ ಕಥೆಯಲ್ಲಿ ವಾಚ್ಯವಾಗಿಲ್ಲ. ಓದುಗನಲ್ಲಿ ಧ್ವನಿಸುತ್ತದೆ. ಈ ಕಥೆಯ ಸಮಯದಲ್ಲಿ ಮನಸ್ಸು ಹದವಾಗಿ, ಕೊನೆಗೆ ಬಂದಾಗ ಒಂದು ಸುಖವಾದ ಉಸಿರು ಆಚೆ ಬರುವುದು ಅನುಭವ!

ವಿಚಿತ್ರ ಕಥೆಯು ಒಂದು ವರದಿಯಂತೆ ಕಾಣುವ ಕಥನ. ಆದರೆ, ಈಗಿನ ಜಾಯಮಾನದ ವೈದ್ಯಕೀಯ ವ್ಯವಸ್ಥೆಯ ಅತಿರೇಕ ಮಾಹಿತಿಗಳ ಲೋಕದಲ್ಲಿ, ಕೇವಲ ಮನುಷ್ಯನ ತಪ್ಪು ಕೂಡ ಸಂಬಂಧಗಳ ನಡುವಿನ ರೋಗವನ್ನು ತೆರೆದಿಡುವುದು, ಒಂದು ಸಿನಿಮೀಯ ತಿರುವುಗಳನ್ನು ತರುತ್ತಾ ಸಾಗುವ ಕಥೆ.. ಇದು ಥಟ್ಟನೆ ಮುಗಿದು ಹೋಗುವುದಿಂದ ಒಮ್ಮೆ ಓದುಗ ಮನಸ್ಸಿನ ಓಟಕ್ಕೆ ಬ್ರೇಕ್ ಹಾಕಿಕೊಳ್ಳಬೇಕಾಗುತ್ತದೆ‌.

ಕನ್ನಡದ ಕಥಾ ಪ್ರಪಂಚದಲ್ಲಿ ತಮ್ಮದೇ ಗುರುತು ಛಾಪಿಸಿದವರಲ್ಲಿ ವಿವೇಕ ಶಾನಭಾಗರೂ ಪ್ರಮುಖರು.

ಬೇರೆ ಭಾಷೆಗಳಲ್ಲೂ ಅನುವಾದವಾಗಿರುವ ಈ ಕಥೆಯು ನಿರೂಪಣೆ, ವಿನ್ಯಾಸದಿಂದಾಗಿ ಏಕಾಏಕಿ ಮನಸ್ಸಿಗೊಂದು ಸಂಸ್ಕಾರ ತರುವುದು ಖಚಿತ. ಕಥೆ ಕಟ್ಟುವಿಕೆಯ ಅಧ್ಯಯನದ ಪಾಠ ಉಚಿತ.

ಒಂದು ಉತ್ತಮ ಓದಿಗೆ ಈ ಕೃತಿ.

********************************

  • ಡಾ. ಅಜಿತ್ ಹರೀಶಿ
  • ಡಾ. ಅಜಿತ್ ಹರೀಶಿ

About The Author

1 thought on “ಘಾಚರ್ ಘೋಚರ್”

  1. ಜಯಶ್ರೀ. ಅಬ್ಬಿಗೇರಿ

    ಕೃತಿ
    ಓದಬೇಕನಿಸುತ್ತಿದೆ
    ಪರಿಚಯ
    ಪರಿಣಾಮಕಾರಿ‌ಯಾಗಿ ಮೂಡಿ ಬಂದಿದೆ

Leave a Reply

You cannot copy content of this page

Scroll to Top