ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಸ್ತುತ

ಶಾಲೆಗಳ ಪುನರಾರಂಭ ಶಾಲೆಗಳನ್ನು ಪುನರಾರಂಭಿಸುವ ಕುರಿತು ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿ ಪಾಲಕರ, ಶಿಕ್ಷಕರ , ಆಡಳಿತ ಮಂಡಳಿಗಳ ಅಭಿಪ್ರಾಯ ಸಂಗ್ರಹಿಸುತ್ತಿದೆ.ಜುಲೈ 1 ರಿಂದ 4 ರಿಂದ 7 ನೇ ತರಗತಿ, ಜುಲೈ 15 ರಿಂದ 1 ರಿಂದ 3 ಮತ್ತು 8 ರಿಂದ 10 ನೇ ತರಗತಿ, ಜುಲೈ 20 ರಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಪುನರಾರಂಭಿಸುವ ಪ್ರಸ್ತಾವನೆಯನ್ನು ಸರ್ಕಾರ ಜನರ ಮುಂದಿಟ್ಟಿದೆ. ಮೊದಲನೇ ಮಾದರಿ ಮತ್ತು ತಾರೀಖುಗಳೆರಡೂ ಸಮಂಜಸವಾಗಿವೆಯೆಂಬುದು ನನ್ನ ಅಭಿಪ್ರಾಯ.ತರಗತಿಗಳನ್ನು ನಡೆಸಲು ಮೂರು ಮಾದರಿಗಳ ಪ್ರಸ್ತಾವನೆಯನ್ನು ಸರ್ಕಾರ ಮುಂದಿಟ್ಟಿದೆ. ಅಗತ್ಯವಾದ ಸುರಕ್ಷಿತ ಕ್ರಮಗಳೊಂದಿಗೆ ಎಂದಿನಂತೆ ತರಗÀತಿ ನಡೆಸುವುದು ಮೊದಲನೇ ಮಾದರಿ.ಇದು ವ್ಯವಹಾರಿಕ ಹಾಗೂ ಸೂಕ್ತ.ಪ್ರತಿದಿನ ಎರಡು ಪಾಳಿಗಳಲ್ಲಿ ಶಾಲೆಯನ್ನು ನಡೆಸುವುದು ಎರಡನೇ ಮಾದರಿ. ಅಂದರೆ ಕೆಲವು ತರಗತಿಗಳನ್ನು ಬೆಳಿಗ್ಗೆ 8 ರಿಂದ 12 ಮತ್ತು ಉಳಿದ ತರಗತಿಗಳನ್ನು ಮದ್ಯಾಹ್ನ 1 ರಿಂದ 5 ರವರೆಗೆ ನಡೆಸುವ ವಿಧಾನ. ಬಾಡಿಗೆ ವಾಹನಗಳು ವಿದ್ಯಾರ್ಥಿಗಳನ್ನು ತರಗತಿವಾರು ಕರೆದುಕೊಂಡು ಬರುವ ಪದ್ಧತಿ ಇಲ್ಲದಿರುವುದರಿಂದ ಹಾಗೂ ಒಂದೇ ವಾಹನದಲ್ಲಿ ಎಲ್ಲಾ ತರಗತಿಯ ಮಕ್ಕಳೂ ಪ್ರಯಾಣ ಸುವುದರಿಂದ ಮಕ್ಕಳ ಪ್ರಯಾಣ ವೆಚ್ಚ ಕಡಿಮೆ ಇರುತ್ತದೆ. ತರಗತಿವಾರು ವಿದ್ಯಾರ್ಥಿಗಳು ಪ್ರಯಾಣ ಸಬೇಕೆಂದರೆ , ನಿಗದಿತ ಸಂಖ್ಯೆಯ ಕೊರತೆಯಿಂದಾಗಿ ಪ್ರಯಾಣ ವೆಚ್ಚದಲ್ಲಿ ಏರಿಕೆ ಸಹಜ.ಬಾಡಿಗೆ ವಾಹನಗಳ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಪಾಲಕರಿಗೆ ಹೆಚ್ಚಿನ ವೆಚ್ಚ ತಗಲಲಿದೆ. ಶಾಲಾ ವಾಹನಗಳೇ ಇದ್ದರೆ, ತಗಲುವ ಹೆಚ್ಚುವರಿ ವೆಚ್ಚವನ್ನು ಪಾಲಕರಿಗೆ ವರ್ಗಾಯಿಸಲಾಗುತ್ತದೆ.ಈ ವಿಧಾನದ ಅಳವಡಿಕೆಯಿಂದ ಶಾಲೆಯ ಶಿಕ್ಷಕೇತರ ಸಿಬ್ಬಂದಿ ಹಾಗೂ ಕೆಲವು ಶಿಕ್ಷಕರು ಹೆಚ್ಚುವರಿ ಸಮಯ ದುಡಿಯುವುದು ಅನಿವಾರ್ಯವಾಗಲಿದೆ; ಅದು ಅಪೇಕ್ಷಣೀಯವಲ್ಲ.ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ರಜೆ ಇದ್ದರೂ, ಮನೆಯಲ್ಲೇ ಕುಳಿತರೂ ಸಂಬಳ ಬರುತ್ತದೆ.ಆದರೆ, ಖಾಸಗಿ ಶಾಲಾ ಶಿಕ್ಷಕರಿಗೆ ಹೆಚ್ಚಿನ ದುಡಿಮೆಗೆ, ಕೆಲವರಿಗೆ ರಜಾ ಅವಧಿಗೆ ಸಂಬಳ ಇರುವದಿಲ್ಲ.ಮೂರನೇ ಮಾದರಿಯಂತೆ ತರಗತಿಗಳನ್ನೇ ದಿನಬಿಟ್ಟು ದಿನ ಪಾಳಿಯಲ್ಲಿ ನಡೆಸುವುದು. ಮಕ್ಕಳ ಕಲಿಯುವಿಕೆ,ದಿನಚರಿಯಲ್ಲಿ ನಿಯಮಿತತೆ ಕಾಪಾಡುವಿಕೆ ಹಾಗೂ ವ್ಯವಹಾರಿಕ ಸಾಧ್ಯತೆಯ ದೃಷ್ಟಿಯಿಂದ ಸಮಂಜಸವಲ್ಲ.ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತಿ ಅವಶ್ಯವಾದ ಆಟ, ಓಟ, ಸ್ನೇಹಿತರ ಒಡನಾಟದಿಂದ ಕಳೆದ 3 ತಿಂಗಳಿನಿಂದಲೂ ಲಾಕ್ ಡೌನ್ ನಿಂದಾಗಿ ಬೆಳೆಯುವ ಮಕ್ಕಳು ವಂಚಿತರಾಗಿದ್ದಾರೆ. ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರುವ ಮಕ್ಕಳಿಗೆ ಶುದ್ಧ ಗಾಳಿಯನ್ನು ಸೇವಿಸುವ, ಆಟ, ಪಾಠಗಳಲ್ಲಿ ತೊಡಗಿಕೊಳ್ಳುವ ಅವಕಾಶವನ್ನೂ ಇನ್ನೂ ತಡೆಗಟ್ಟುವುದು ಸಮಂಜಸವಲ್ಲ.ರಾಜಕೀಯ ಸಭೆ ಸಮಾರಂಭಗಳಿಗೆ ಹೋದರೆ, ಮಾಲ್ ಗೆ ಹೋದ್ರೆ, ಹೋಟೆಲುಗಳಿಗೆ ಹೋದ್ರೆ. ಕಛೇರಿಗಳಿಗೆ …ಮದುವೆ-ಎಂಗೇಜ್ಮೆಂಟ್ ಗಳಿಗೆ ಹೋದ್ರೆ.., ಧಾರ್ಮಿಕ ಸ್ಥಳಗಳಿಗೆ ಹೋದರೆ ಕೊರೊನಾ ಸೋಂಕು ತಗಲುವದಿಲ್ಲವೆ?ಮಕ್ಕಳು ಮನೆಲಿದ್ರೂ ಹೊರಗೆಹೋದ ಪಾಲಕರು ಮತ್ತೆ ಮನೆಗೆ ಹೋಗಲ್ವಾ? ಆ ಮೂಲಕ ಮನೆಯವರಿಗೆಲ್ಲಾ ಕರೋನ ಬರಲ್ವಾ? ಮದ್ಯವನ್ನು ಹೊರಗಿನಿಂದ ತಂದು ಮನೆಲಿ ಪಾರ್ಟಿ ಮಾಡೋದ್ರಿಂದ ಕೋರೊನ ಬರಲ್ವಾ?ಅಪ್ಪ ಅಮ್ಮ ಇಬ್ಬರೂ ಕೆಲಸಗಳಿಗೆ ಹೋಗುವ ಪರಿಸ್ಥಿತಿಯಲ್ಲಿ ಮನೆಯಲ್ಲೇ ಮಕ್ಕಳ ಶಿಕ್ಷಣ ಹೇಗೆ?ಆನ್ ಲೈನ್ ಸೌಲಭ್ಯ ಇಲ್ಲದ ಮಕ್ಕಳು ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೆಷ್ಟು ಮಕ್ಕಳು ಫೇಸ್ ಬುಕ್, ವಾಟ್ಸ ಏಪ್, ಬೇಡದ ಹಾಗೂ ಸುರಕ್ಷಿತವಲ್ಲದ ಜಾಲತಾಣಗಳಿಗಳಿಗೆ ಭೇಟಿ ನೀಡಿ ಮಾನಸಿಕವಾಗಿ ಕುಗ್ಗುತ್ತಿದ್ದಾರೆ ಎಂದು ಗಮನಿಸಿಲಾಗಿದೆಯೇ? ಇನ್ನೀಗ ಶಾಲೆಯೆ ಇಲ್ಲ ಅಂದ್ರೆ ಮಕ್ಕಳು ಮೊಬೈಲ್ ..ಟಿವಿ ಗಳ ನಡುವೆ ಸಿಲುಕಿ ಇನ್ನೇನೆಲ್ಲಾ ಆಗಬಹುದು?ಶಿಕ್ಷಣದಿಂದ ಮಾನವರು ರೂಪುಗೊಳ್ಳಬೇಕೇ ಹೊರತು ರೊಬೋಟ್ ಗಳಲ್ಲ. ಅಂತರ್ಜಾಲದಲ್ಲಿ ಭರಪೂರ ಮಾಹಿತಿ ಲಭ್ಯ. ಆದರೆ ಆನ್ ಲೈನ್ ಶಿಕ್ಷಣ ಶಾಲಾ ಶಿಕ್ಷಣಕ್ಕೆ ಪರ್ಯಾಯವಲ್ಲ.ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿ ಸದಸ್ಯರು(ಸರ್ಕಾರಿ ಮತ್ತು ಖಾಸಗಿ ರಂಗ) ಕೂಡಾ ಪಾಲಕರು,ಅವರಿಗೆ ವೈಯಕ್ತಿಕ ಮತ್ತು ಸಾಮಾಜಿಕ ಹೊಣೆಗಾರಿಕೆ ಇದೆಯೆಂಬುದನ್ನು ಮರೆಯಲಾಗದು.ಕೊರೊನಾವನ್ನು ಹೊಡೆದೋಡಿಸುತ್ತೇವೆ, ಮೂಲೋತ್ಪಾಟನೆ ಮಾಡುತ್ತೇವೆ, ನಾಶ ಮಾಡಿಬಿಡುತ್ತೇವೆ, ಮುಂತಾದ ಘೋಷಣೆಗಳು ರಾಜಕಾರಣಿಗಳ ವೇದಿಕೆಗೆ ಮಾತ್ರ ಸೀಮಿತ. ಕೊರೊನಾ ಭೂಮಿಯ ಮೇಲೆ ವಾಸಿಸಲು ಬಂದಿರುವ ಇನ್ನೊಂದು ವೈರಾಣು. ನೆಗಡಿ, ಫ್ಲೂ ಮುಂತಾದ ವೈರಸ್ ಗುಂಪಿಗೆ ಸೇರಿರುವ ಕೊರೊನಾ, ಮಾಧ್ಯಮಗಳು ಮತ್ತು ರಾಜಕಾರಣಿಗಳು ಬಿಂಬಿಸುತ್ತಿರುವಷ್ಟು ಅಪಾಯಕಾರಿಯಲ್ಲ. ಅದರೊಂದಿಗೆ ಬದುಕಲೇಬೇಕಾದ ಅನಿವಾರ್ಯತೆ ಉದ್ಭವಿಸಿರುವುದು ವಾಸ್ತವ.ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತಿರುವ , ಹುಲಿಯ ಹೆಸರನ್ನು ಕೇಳಿಯೇ ಭಯದಿಂದ ಬೆವರುವವರ ಅರಚಾಟವನ್ನೇ ನಿಜವೆಂದು ನಂಬುವ ಅಗತ್ಯವಿಲ್ಲ. ಆರತಿ ತೆಗೆದುಕೊಂಡರೆ ಉಷ್ಣ, ತೀರ್ಥ ಕುಡಿದರೆ ಶೀತವಾಗುವ ಸೂಕ್ಷ್ಮ ಪ್ರಕೃತಿಯ ಮಕ್ಕಳನ್ನು ಶಾಲೆಗೆ ಕಳುಹಿಸುವ ಆಯ್ಕೆಯನ್ನು ಅವರ ಪಾಲಕರೇ ನಿರ್ಧರಿಸಲಿ.ಕಂಫರ್ಟ ವಲಯದಲ್ಲಿ ಕುಳಿತಿರುವವರ ಅತಾರ್ಕಿಕ ಭಯವನ್ನು ಪುರಸ್ಕರಿಸಿ,ಶಾಲೆಗಳ ಪುನರಾರಂಭವನ್ನು ಮುಂದೂಡಿ ಲಕ್ಷಾಂತರ ಮಕ್ಕಳ ಬೆಳವಣಿಗೆ ಕುಂಠಿತಗೊಳಿಸುವದು ಸರಿಯಲ್ಲ;ಅದು ಅವರಿಗೆ ಮಾಡುವ ದ್ರೋಹ.ಈ ಹಂತದಲ್ಲಿ, ಜುಲೈ ಒಂದನೇ ತಾರೀಖಿನಿಂದ ಶಾಲೆಗಳನ್ನು ಪ್ರಾರಂಭಿಸುವದೇ ಸೂಕ್ತ. ******* ಗಣೇಶ ಭಟ್ ಶಿರಸಿ

ಪ್ರಸ್ತುತ Read Post »

ಇತರೆ

ಲಹರಿ

ಮಾವಿನ ಪುರಾಣ ಮಾವಿನ ಪುರಾಣ ಹಣ್ಣುಗಳಲ್ಲಿ ಮಾವು ಕೊಡುವ ಖುಷಿ, ಯಾವ ಹಣ್ಣು ಕೂಡ ಕೊಡದು ಎಂದರೆ ತಪ್ಪಾಗಲಾರದು.ಹಣ್ಣುಗಳಲ್ಲಿ ಮಾವಿಗೆ ವಿಶೇಷ ಸ್ಥಾನಮಾನ,ರಾಜಮರ್ಯಾದೆ.ಮಾವಿನ ಹಣ್ಣು, ಹಣ್ಣುಗಳ ರಾಜ. ಬೇಸಿಗೆ ಶುರುವಾದೊಡನೆ ಮಾವು ಶುರುವಾಗುತ್ತದೆ.ನಮ್ಮಲ್ಲಿ ಮೊದಲು ಗಿಣಿಮೂತಿ ಮಾವಿನಕಾಯಿ ಜೊತೆ ಈ ಸೀಸನ್ ಶುರುವಾಗುತ್ತದೆ.ಎರೆಡು ಮಳೆ ಆಗುವ ತನಕ ಮಾವು ತಿನ್ನುವುದಿಲ್ಲ.ಒಂದು ದೃಷ್ಟಿ , ಬಂದ ಈ ಗಿಣಿಮೂತಿ ಕಾಯಿಯ ಮೇಲೆ ಇಟ್ಟುಕೊಂಡು ನೋಡದ ಹಾಗೆ ಮಾರುಕಟ್ಟೆಯಲ್ಲಿ ಓಡಾಡುತ್ತೇವೆ.ಮಳೆ ಸ್ವಲ್ಪ ಲೇಟಾದರೆ ಚಡಪಡಿಕೆ ಶುರು.ನಾಲ್ಕೋ,ಐದೋ ಗಿಣಿ ಮಾವಿನಕಾಯಿ ಖರೀದಿಸಿ ಉಪ್ಪು,ಖಾರ ಹಚ್ಚಿಕೊಂಡು ಸವಿಯುವುದೇ ಚೆಂದ.ಮನೆಯಲ್ಲಿ ಹಿರಿಯರ ಕೂಗಾಟ….ಮಳೆ ಬರಲಿ ಎಂದು. ಅಷ್ಟರಲ್ಲೇ ಉಪ್ಪಿನಕಾಯಿ ಹಾಕುವ ಮಾವಿನ ಕಾಯಿ,ಅದರಲ್ಲೂ ಆಮ್ಲೇಟ್ ಕಾಯಿ ಬಂದಿರುತ್ತೆ.ಸ್ವಲ್ಪ ದಿನ ಮನೆಗಳಲ್ಲಿ ಅದರದ್ದೇ ಸಂಭ್ರಮ. ಮಕ್ಕಳು ಕದ್ದುಮುಚ್ಚಿ ಅದನ್ನೇ ತಿಂದು ಬೈಗುಳ ತಿನ್ನುತ್ತಾರೆ.ಉಪ್ಪಿನಕಾಯಿ ಜಾಡಿ ಸೇರಿ ಅಟ್ಟಕ್ಕೆ ಸೇರುತ್ತದೆ.ನಂತರದ್ದೇ ದಿಢೀರ್ ಗಿಣಿಮಾವಿನಕಾಯಿಯ ಉಪ್ಪಿನಕಾಯಿ.ಮಕ್ಕಳಿಗೆ ಈಗ ಸ್ವಾತಂತ್ರ ತಿನ್ನಲು.ಚಿತ್ರಾನ್ನದ ಜೊತೆ ಪರಮಾನ್ನ ಇದು. ಎರೆಡು ಮಳೆ ಆದ ತಕ್ಷಣ ಮಾರುಕಟ್ಟೆಯಲ್ಲಿ ಮಾವಿನ ಸುಗ್ಗಿ. ಎಲ್ಲಕ್ಕಿಂತ ಮೊದಲು ಬಾದಾಮಿ ಹಣ್ಢಿನ ದರ್ಬಾರು.ಮೊದಲಿಗೆ ಕೆ.ಜಿ.ಗೆ 120 ರೂಪಾಯಿಗಿಂತ ಕಮ್ಮಿ ಸಿಗದು.ಕೊಳ್ಳುವ ಜನ ಹಿಂದಕ್ಕೆ ಹೋಗಬಾರದೆಂದು ಇದರ ಜೊತೆಯ ಬುಟ್ಟಿಯಲ್ಲಿ ಸ್ಥಳೀಯ ನಾರಿನ ಹಣ್ಣು ಕೆ.ಜಿ.ಗೆ 50 ರೂಪಾಯಿ. ತಿಂದವರು ಸ್ವಲ್ಪ ಶಾಪ ಹಾಕಿ ಚಪ್ಪರಿಸುತ್ತಾರೆ. ನಂತರದ್ದೇ ಮಾವುಗಳ ರಾಜ ರಸ್ಪುರಿ ಮಾವು ಲಗ್ಗೆ ಇಡುತ್ತದೆ. ತೆಂಡುಲ್ಕರ್ ಬ್ಯಾಟಿಂಗ್ ಗೆ ಬಂದ ಹಾಗೆ ರಸ್ಪುರಿ ಮಾವು ಬರುತ್ತದೆ.ಇದಕ್ಕೆ ನಮ್ಮಲ್ಲಿ ಕಸಿಹಣ್ಣು ಎಂದೇ ಬಿರುದಾಂಕಿತ.ಮೊದಲು ಕೆ.ಜಿ.ಗೆ 70 ರಿಂದ ಶುರು.ನಂತರ ನಂತರ 60.50 ,40. ರಸ್ಫುರಿ ಬಂದ ತಕ್ಷಣ ಬಾದಾಮಿ ಮಾವಿನಹಣ್ಣು ನೆಲ ಕಚ್ಚುತ್ತದೆ.ಬಾದಾಮಿ ಕೂಡ 60 ರೂಪಾಯಿಗೆ ಸಿಗುತ್ತದೆ.ರಾಜ ಬಂದ ಮೇಲೆ ಉಳಿದವರಿಗೆ ಬೆಲೆ ಇಲ್ಲ.ನಾರಿನ ಮಾವಿನಹಣ್ಣು ಓಟ ಕಿತ್ತಿರುತ್ತದೆ. ಈ ಕಸಿ ಮಾವು ರಸ್ಪುರಿ ಬಂದ ಮೇಲೆ ಮನೆಮನೆಗಳಲ್ಲಿ ಹೋಳಿಗೆ ಶುರು.ಹೋಳಿಗೆ ಶೀಕರಣೆ ತಿನ್ನದವನು ರಸಿಕನೇ ಅಲ್ಲ!. ಶೀಕರಣೆಗೆ ರಸ್ಪುರಿ ಮಾವು ಬಿಟ್ಟು ಬೇರಾವುದೇ ಹಣ್ಣಿನಲ್ಲಿ ಮಾಡಿದರೆ ರುಚಿ ಕಮ್ಮಿ. ಬೇರೆ ಬೇರೆ ಭಾಗದಲ್ಲಿ ಈ ತಳಿಗೆ ಬೇರೆ ಬೇರೆ ಹೆಸರುಗಳಿವೆ. ನಂತರ ಬೇರೆ ಬೇರೆ ಮಾವುಗಳ ರುಚಿ ನೋಡುವ ಭಾಗ್ಯ. ಅಡಕೆ ಪುಟ್ಟ ಮಾವಂತೂ ಬಲು ರುಚಿ.ಇದರ ರುಚಿ ಸಕ್ಕರೆ. ಮಕ್ಕಳಿಗೆ ಬಲು ಪ್ರಿಯವಾದ ತಳಿ.ಇದರ ಜೊತೆಗೆ ನಾಟಿ ಮಲಗೋಬ ಹಣ್ಣು, ನಾಟಿ ಹಣ್ಣುಗಳು ಶುರು.ಈ ನಾಟಿ ಹಣ್ಣುಗಳು ಸಿಹಿಹುಳಿ ಮಿಶ್ರಿತ. ನಂತರ ಮಲಗೋಬ ಹಣ್ಣು. ಕತ್ತರಿಸಿಕೊಂಡೇ ತಿನ್ನಬೇಕು ಇದನ್ನು. ಸರಿಯಾದ ಒಂದು ಹಣ್ಣನ್ನು ತಿಂದರೆ ಹೊಟ್ಟೆ ಭರ್ತಿಯಾಗುತ್ತದೆ..ಬಹಳ ಮಜವಾದ ಸಿಹಿ.ಗೊತ್ತಿಲ್ಲದವರಿಗೆ ಕೆಲ ವ್ಯಾಪಾರಿಗಳು ಮಲಗೋಬ ಬದಲು ನಾಟಿ ಮಲಗೋಬವನ್ನೇ ಮಲಗೋಬ ಎಂದು ಮಾರುತ್ತಾರೆ.ಕೊಳ್ಳುವವರು ಹುಷಾರಾಗಿರಬೇಕು. ನಂತರದ್ದು ಜೀರಿಗೆ ಮಾವಿನಹಣ್ಣು.ಸ್ವಲ್ಪ ಮಟ್ಟಿಗೆ ಆಕಾರದಲ್ಲಿ ರಸ್ಪುರಿಯನ್ನು ಹೋಲುತ್ತದೆ.ವಿಶೇಷ ಸುವಾಸನೆಯ ತಳಿ ಇದು.ಕೆಲವರಿಗೆ ಇದು ರುಚಿಸದು.ಇತ್ತೀಚೆಗೆ ಇದರ ತಳಿ ಕಡಿಮೆಯಾಗುತ್ತಿದೆ.ಕೆಲವರು ಇದನ್ನು ಮಾರುವ ಗೋಜಿಗೆ ಹೋಗದೆ ಗಿಡದಲ್ಲೇ ಬಿಡುತ್ತಾರೆ.ಮಾರುಕಟ್ಟೆಯಲ್ಲಿ ಬೆಲೆ ಕಮ್ಮಿ ಇದಕ್ಕೆ. ಇನ್ನೂ ಹಲವು ಹೆಸರಿನ ಸ್ಥಳೀಯ ಹಣ್ಣುಗಳು ಕಡಿಮೆ ಪ್ರಮಾಣದಲ್ಲಿ ಬರುತ್ತವೆ. ಕಸಿ ಮಾವಿನ ಹಣ್ಣಿಗೆ ಸ್ವಲ್ಪ ಮಟ್ಟಿಗೆ ಸ್ಪರ್ದೆ ಒಡ್ಡುವ ತಳಿ ಎಂದರೆ ಸೇಂಧೂರ ಹಣ್ಣು. ಹಸಿರಿದ್ದರೆ ಈ ತಳಿ ಹುಳಿ.ಸಂಪೂರ್ಣ ಹಣ್ಣಾದರೆ ಸ್ವರ್ಗದ ಸಿಹಿ ರುಚಿ.ಇದನ್ನು ಸಿಂಧೂರ ಎಂತಲೂ,ಬೇರೆ ಬೇರೆ ಹೆಸರುಗಳಿವೆ.40 ರೂಪಾಯಿಯಿಂದ 25 ರೂಪಾಯಿಯ ತನಕ ಕೆ.ಜಿ.ಗೆ ಮಾರಲ್ಪಡುತ್ತದೆ. ಕೊನೆಯದಾಗಿ,ಬೇಸಿಗೆ ಮುಗಿಯುವ ಹೊತ್ತಿಗೆ ನೀಲಂ ಶುರುವಾಗುತ್ತದೆ.ಅಷ್ಟರಲ್ಲಾಗಲೇ ಮಳೆ ಶುರುವಾಗಿರುತ್ತದೆ.ಈ ನೀಲಂ ಕೂಡ ಸಿಹಿಯಾದ ತಳಿ.ಮಳೆ ಶುರುವಾದರೆ ಈ ಹಣ್ಣಿನಲ್ಲಿ ಹುಳುಗಳು ಶುರುವಾಗುತ್ತದೆ.ನೋಡಿಕೊಂಡು ತಿನ್ನಬೇಕು.ಸೀಸನ್ ಮುಗಿದರೂ ಮಾರುಕಟ್ಟೆಯಲ್ಲಿ ಸಿಗುವ ಏಕೈಕ ಹಣ್ಣು ಇದು.ಮಹಾರಾಷ್ಟ್ರದಿಂದ ಈ ಹಣ್ಣು ಬರುತ್ತದೆ.ಮಹಾರಾಷ್ಟ್ರದಲ್ಲಿ ಮಳೆ ಶುರುವಾದ ಮೇಲೆ ಮಾವಿನಹಣ್ಣನ್ನು ತಿನ್ನುವುದಿಲ್ಲವಂತೆ.ವ್ಯಾಪಾರಿಗಳು ಹೆಚ್ಚು ರಿಸ್ಕ್ ತೆಗೆದುಕೊಳ್ಳದೆ ನಮ್ಮ ರಾಜ್ಯಕ್ಕೆ ರಫ್ತು ಮಾಡುತ್ತಾರೆ. ಸೀಸನ್ ಇರುವಾಗ ಆಯಾ ಹಣ್ಣುಗಳನ್ನು ಚೆನ್ನಾಗಿ ತಿನ್ನಬೇಕು.ಆರೋಗ್ಯಕ್ಕೆ ಒಳ್ಳೆಯದು. ************ ಕೊಟ್ರೇಶ್ ಅರಸಿಕೆರೆ

ಲಹರಿ Read Post »

ಪುಸ್ತಕ ಸಂಗಾತಿ

ಪರಮೂ ಪ್ರಪಂಚ

ಪರಮೂ ಪ್ರಪಂಚಕಥಾಸಂಕಲನಲೇಖಕರು- ಇಂದ್ರಕುಮಾರ್ ಎಚ್.ಬಿಇಂಪನಾ ಪುಸ್ತಕ ವೃತ್ತಿಯಿಂದ ಶಿಕ್ಷಕರಾಗಿರುವ ಇಂದ್ರಕುಮಾರ್ ಅವರು ನಾಡಿನ ಪ್ರಮುಖ ಕಥೆಗಾರರಲ್ಲಿ ಒಬ್ಬರು. ಮೊನ್ನೆಯಷ್ಟೇ ಅವರ ಕಥೆಯೊಂದು ‘ ಸೂಜಿದಾರ ‘ ಎಂಬ ಹೆಸರಿನಲ್ಲಿ ಸಿನೆಮಾ ಆಗಿದೆ. ‘ಆ ಮುಖ’, ‘ನನ್ನ ನಿನ್ನ ನೆಂಟತನ’, ‘ಪರಮೂ ಪ್ರಪಂಚ’ ಮತ್ತು ‘ಕಾಣದ ಕಡಲು’ ಅವರ ಕಥಾಸಂಕಲನಗಳು.‘ಮೃದುಲಾ’,’ ಹುಲಿಕಾನು ‘ ಅವರ ಪ್ರಕಟಿತ ಕಾದಂಬರಿಗಳು. ಈ ಕಥಾಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ಗಿಫ್ಟ್ – ಇಪ್ಪತ್ತು ವರ್ಷಗಳ ನಂತರ ಸಂತೆಯಲ್ಲಿ ಸಿಕ್ಕ ಇಬ್ಬರು ಪ್ರೇಮಿಗಳ ಕಥಾನಕ. ಇಲ್ಲಿ ಅವರು ನಮ್ಮನ್ನೂ ಸಂತೆಯಲ್ಲಿ , ತುದಿಗಾಲಲ್ಲಿ ನಿಲ್ಲಿಸಿ ಅವರು ತೀವ್ರ ಭಾವದಿಂದ ಕಥೆ ಹೇಳುತ್ತಾರೆ. ಅವಳ ಸಂಗ- ಇದು ಕಾಟಲಿಂಗೇಶಪ್ಪ ಎಂಬ ವ್ಯಕ್ತಿ, ಅವಳು ಮತ್ತು ಅಲ್ಲಾಭಕ್ಷಿ ಎಂಬ ಟೇಲರರ ಕಥೆ. ಬಹಳ ವಿಭಿನ್ನವಾದ ಕಥಾನಕವಿದು. ಇದರ ಅಂತ್ಯವನ್ನು ಊಹಿಸುವುದು ಕಷ್ಟ. ಇಷ್ಟ ಗಂಧ- ತಡೆಯಲಾರದಷ್ಟು ದುರ್ಗಂಧ ಹೊತ್ತ ಹಾಲೇಶಪ್ಪನ ಕಥೆಯಿದು. ಸದಾ ನೆಗಡಿಯಿಂದ ಮೂಗು ಕಟ್ಟಿಕೊಂಡಿರುವ ಅಮೀರ್ ಜಾನ್ ನ ಸೈಕಲ್ ಶಾಪ್ ಮುಂದೆ ಇವನಿಗೆ ಆಶ್ರಯ ತಾಣವಾಗುತ್ತದೆ. ಇಂತಹ ಹೊತ್ತಿನಲ್ಲಿಯೇ ಅವನ ಬದುಕಿಗೆ ಆಗಮಿಸುವ ಹೆಣ್ಣಿನಿಂದ ಕಥೆ ಅನೂಹ್ಯ ತಿರುವು ಪಡೆಯುತ್ತದೆ. ಹೊರೆ – ರಘುವೀರ ಮತ್ತು ಲಲಿತಾಕ್ಷಿಯ ಪುಟ್ಟ ಕುಟುಂಬಕ್ಕೆ ಆಗಮಿಸುವ ದಿನಕರಜ್ಜ ; ಅವರ ಪುಟ್ಟ ಮಗು ಚಿಂಟೂ ಹಾಗೂ ಕೊನೆಗೆ ಇಡೀ ಮನೆಯನ್ನು ಆವರಿಸಿಕೊಳ್ಳುವ ಪರಿ ಅನನ್ಯ. ಪರಮೂ ಪ್ರಪಂಚ- ಪರಮು ಮತ್ತು ಮೃಣಾಲ ಗೆಳೆಯರು. ಆ ವಿಶ್ವಾಸದಿಂದಲೇ ಮೃಣಾಲನ ಮನೆಯನ್ನು ತನ್ನ ಮನೆ ಎಂದೇ ಭಾವಿಸಿ ಜೀವಿಸುವ ಮನುಷ್ಯ ಪರಮು.ಆದರೆ ಒಂದು ಪ್ರಸಂಗದಲ್ಲಿ ಮೃಣಾಲನ ತಾಯಿ ಇವನನ್ನು‘ ಪಾಪ ಅನಾಥ ಹುಡುಗ, ಮೃಣಾಲನ ಫ್ರೆಂಡ್ ‘ ಎಂದು ಪರಿಚಯಿಸಿ ಮತ್ತೆ ಅವನ ಅನಾಥ ಪ್ರಜ್ಞೆ ಕೆಣಕಿ ನಮ್ಮನ್ನೂ ಕಾಡುವ ಕಥೆಯಿದು. ವಿಸರ್ಜನೆ – ಹೆಣ್ಣೊಬ್ಬಳು ಗಂಡನನ್ನು ಶೋಷಿಸುವ ವಿಭಿನ್ನ ಕಥೆ. ಹೊಟ್ಟೆಯ ಮತ್ತು ಕಾಮದ ಹಸಿವನ್ನು ನಿಯಂತ್ರಿಸಲಾಗದ ಶಿವರಾಜನ ಕಥೆ. ಗ್ರಹಣ ಒಂದು ಥ್ರಿಲ್ಲರ್ ಕಥೆ. ಉತ್ತರದ ಹುಡುಕಾಟದಲ್ಲಿ – ಒಂದು ಸಣ್ಣ ಅವಘಡ ಮಾಡುವ ದೊಡ್ಡ ಹಾನಿಯ ಕಥೆ.ಅಣ್ಣನ ನೆನಪಲ್ಲಿ ಒಂದು ಒಳ್ಳೆಯ, ಸರಳ ಕಥೆ.ಬೇಬಿ ಸಿಟ್ಟಿಂಗ್ – ಒಂದು ಸಮಕಾಲೀನ ಆದರೆ ವಿಶಿಷ್ಟ ನಿರೂಪಣೆಯ ಚೆಂದದ ಕಥೆ.ಒಮ್ಮೆ ಓದಲೇಬೇಕಾದ ವಿಭಿನ್ನ ಕೃತಿ ‘ ಪರಮೂ ಪ್ರಪಂಚ ******** ಡಾ.ಅಜಿತ ಹರೀಶಿ

ಪರಮೂ ಪ್ರಪಂಚ Read Post »

You cannot copy content of this page

Scroll to Top