ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ.

Radio, Steel Wool, Swirl, District

ದೀಪಾ ಗೋನಾಳ

ಏಷ್ಟವಸರ
ಅದೆಷ್ಟು ಗಡಿಬಿಡಿ
ಎಷ್ಟೇ ಬೇಗ ಎದ್ದರೂ
ತಿಂಡಿತಿನ್ನಲೂ ಆಗುವುದೆ ಇಲ್ಲ
ಅನುಗಾಲ

ಒಳ ಹೊರಗೆ ಗುಡಿಸಿ
ಹಸನ ಮಾಡುವುದರಲ್ಲೆ
ಅರ್ಧಾಯುಷ್ಯ ,,,
ತಿಂದರೊ ಇಲ್ಲವೊ..!?
ಕಟ್ಟಿಕೊಟ್ಟ ಡಬ್ಬಿ ಇಟ್ಟುಕೊಂಡರೊ ಇಲ್ಲವೊ..!?
ತೊಳೆದ ಬಾಟಲಿಗೆ ನೀರು ತುಂಬಿದ್ದೆ ಒಯ್ದರೊ ಇಲ್ಲವೊ..!?
ಹಾಲಿನ ಪಾತ್ರೆಗೆ ಮುಚ್ಚಿದೆನೊ ಇಲ್ಲವೊ..!?
ಮೊಸರು ಫ್ರಿಜ್ಜಿಗೆ ದಬ್ಬಿದೆನೊ ಇಲ್ಲವೊ..!?
ಬದುಕೆಲ್ಲ ಉದ್ಘರಾದ ಹಾರ..
ದಾರಿಯ ತುಂಬ ಹೋಯ್ದಾಟ
ಮನಸ್ಸಿನ ಮಾತು ಕಿವಿಗೆ ಕೇಳುವಷ್ಟು ದೀರ್ಘ ಆಲೋಚನೆ ಒಳಗೊಳಗೆ..
ಜೋಲಿ ಹೊಡಿಯುವ ಬಸ್ಸಿನಲ್ಲಿ ಎದುರಿಗೆ ನನ್ನಂತೆ ಅವಸರಕ್ಕೆ
ಎದ್ದೋಡಿ ಬಂದವಳು ಹೇಳುತ್ತಾಳೆ,
ಕುಂಕುಮ ಹಚ್ಚೆ ಇಲ್ಲ!!
ಓಹ್! ಹೌದು ಕನ್ನಡಿ ಮುಂದೆ ನಿಲ್ಲಲೇ ಇಲ್ಲ, ನನ್ನ ನಾನು ನೋಡಿಕೊಂಡು
ಆಗುವುದಾದರೂ ಏನಿದೆ
ಸೀಟು ಸಿಕ್ಕಮೇಲೆ ಬ್ಯಾಗಿನ ತುಂಬ ತಡಕಾಡಿ ಒಂದು ಬಿಂದಿ
ಹಣೆಗೇರಿಸಬೇಕು
ಕಿಟಕಿ ಗಾಜಿನಲ್ಲೊಮ್ಮೆ ಮಸುಕುಮೊಗ ನೋಡಿಕೊಳ್ಳಬೇಕು
ಮತ್ತಿಳಿದು ಓಡಬೇಕು
ಮೊಳೆಹೊಡೆದ ಚಪ್ಪಲಿಗೆ ನೋವಾಗದಂತೆ ಪೂರ್ತಿ ಪಾದ ನೆಲಕ್ಕೂರದೆ ಹಕ್ಕಿಯಂತೆ ಹಾರಿಹಾರಿ
ಕಛೇರಿ ಮೆಟ್ಟಿಲೇರಬೇಕು

ಬಂದ ಕೂಡಲೆ ಮತ್ತೊಮ್ಮೆ ಸೊಂಟದ ಮೇಲಿನ ಸೀರೆ ಸರಿ ಮಾಡಿಕೊಂಡೆ ಕೂಡಬೇಕು
ಒಂದಿನಿತು ಮಗ್ಗಲು ಕುಳಿತವರ
ಮತಿಭಂಗವಾಗದಂತೆ

ಹೊಟ್ಟೆ ಚುರ್ ಎಂದದ್ದು
ನನಗೆ ಕೇಳಿಸಿಯೆ ಇಲ್ಲವೆಂಬಷ್ಟು
ಗಂಭೀರವಾಗಿ ಕುಳಿತಾಗಲೆ
ಅವಳು ಎದ್ದು ಬಂದು
ನಾನು ಇಂದು ತಿಂಡಿ ತಿನ್ನಲಿಲ್ಲ
ಡಬ್ಬಿಗೆ ಹಾಕಿಕೊಂಡು ಬಂದಿದ್ದೇನೆ
ಬಾ ಎಂದು ಕೈ ಹಿಡಿದು ಜಗ್ಗಿ ಜಭರ್ದಸ್ತಿಲೆ ಹೊಟ್ಟೆಗೆ ಹಾಕುತ್ತಾಳೆ ಎರಡು ಹಿಡಿ

ಎರಡು ಜಡೆ ಎಂದೂ ಕೂಡುವುದಿಲ್ಲ !
ಹೆಣ್ಣಿಗೆ ಹೆಣ್ಣೆ ಶತ್ರು.. ಎಂಬುವರ
ಮಾತು ಇಲ್ಲಿ ಶುದ್ಧ ಸುಳ್ಳು
ದುಡಿಮೆಗೆ ಟೊಂಕ ಕಟ್ಟುವ ಹೆಂಗಳೆಯರ ಹಸಿವು
ಹೆಂಗರುಳಿಗಿಲ್ಲಿ ಚೆಂದ ಅರ್ಥವಾಗುತ್ತದೆ..
ನಮ್ಮ ಟೊಂಕದ ಮೇಲಿನ ಸೀರೆ
ಜಾರಿದ್ದನ್ನಷ್ಟೆ ನೋಡುವ
ಮೀಸೆಗಳಿಗೆ ಇದು ಅರ್ಥವಾಗದು..

***********

About The Author

2 thoughts on “ಕಾವ್ಯಯಾನ”

  1. ವಾವ್ ದುಡಿಯುವ ಹೆಂಗೆಳೆಯರ ದಿನನಿತ್ಯದ ವಾಸ್ತವ ಚಿತ್ರಣ ತುಂಬಾ ಚೆನ್ನಾಗಿ ಚಿತ್ರಿತ.

  2. ಹೆಣ್ಣಿನ ಸಂಕಟಗಳನ್ನು ಹೆಣ್ಣೇ ಅರ್ಥ ಮಾಡಿಕೊಳ್ಳುವುದು ಅನಿವಾರ್ಯ

Leave a Reply

You cannot copy content of this page

Scroll to Top