ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಚೇತನಾ ಕುಂಬ್ಳೆ

ಬೆಳಕು ಹರಿದೊಡನೆ ಹೊಸ್ತಿಲ ದಾಟುವನು
ಕತ್ತಲಾವರಿಸಿದೊಡನೆ ಮನೆಯ ಕದವ ತಟ್ಟುವನು
ಉರಿವ ಬಿಸಿಲು, ಕೊರೆವ ಚಳಿ, ಸುರಿವ ಮಳೆಯನ್ನದೆ
ಹಗಲಿರುಳೂ ದುಡಿಯುವನು
ಯಾಕೆಂದರೆ, ಅವನು ಗಂಡು…
ಜವಾಬ್ದಾರಿಗಳ ಭಾರವನ್ನು ಹೆಗಲಲ್ಲಿ ಹೊತ್ತವನು

ಮಡದಿಯ ಪ್ರೀತಿಯಲ್ಲಿ ಅಮ್ಮನ ವಾತ್ಸಲ್ಯವನ್ನರಸುವನು
ಮಕ್ಕಳ ತುಂಟಾಟಗಳಲ್ಲಿ ಕಳೆದ ಬಾಲ್ಯವನ್ನು ಕಂಡು ಸಂಭ್ರಮಿಸುವನು
ಮುಗಿಯದ ಹಾದಿಯುದ್ಧಕ್ಕೂ ಕನಸ ಬಿತ್ತುತ್ತಾ ನಡೆಯುವನು
ಹರಿದ ಚಪ್ಪಲಿಗೆ ಹೊಲಿಗೆ ಹಾಕುತ್ತಾ
ಯಾಕೆಂದರೆ,ಅವನು ಗಂಡು
ಬೆವರ ಹನಿಯ ಬೆಲೆ ಎಷ್ಟೆಂದುಅರಿತವನು

ಸ್ವಭಾವ ಸ್ವಲ್ಪ ಒರಟು,ಆದರೂ ಮೃದು ಹೃದಯ
ಮಾತು ಬಲ್ಲವನೇ ಆದರೂ ಮಿತಭಾಷಿ
ಎದೆಯೊಳಗೆ ಹರಿವ ಒಲವ ಝರಿ
ಕೋಪದೊಳಗೆ ಪ್ರೀತಿಯ ಬಚ್ಚಿಟ್ಟವನು
ಮನದೊಳಗೆ ಮಧುರ ಭಾವನೆಗಳಿದ್ದರೂ
ಮೌನದಲ್ಲಿಯೇ ಎಲ್ಲವನ್ನೂ ಅರ್ಥಮಾಡಿಸುವನು
ಯಾಕೆಂದರೆ , ಅವನು ಗಂಡು
ಮನದ ತುಡಿತಗಳೆಲ್ಲವನ್ನು ಅಕ್ಷರಗಳಲ್ಲಿ ಹಿಡಿದಿಡಲರಿಯದವನು

ಅನುಭವದ ಬೆಳಕಿನಲ್ಲಿ
ಸರಿತಪ್ಪುಗಳನ್ನು ಹೇಳಿಕೊಟ್ಟು
ಬಾಳಿನುದ್ಧಕ್ಕೂ ದಾರಿದೀಪವಾದವನು
ಕಷ್ಟ ಸುಖಗಳಲ್ಲಿ ಹೆಗಲಾದವನು
ಎದೆ ಹೊತ್ತಿ ಉರಿಯುತ್ತಿದ್ದರೂ
ತುಟಿಗಳಿಗೆ ನಗುವ ಲೇಪಿಸಿಕೊಂಡವನು
ನೋವಿನಲ್ಲೂ ಅಳಲು ಮರೆತವನು
ಯಾಕೆಂದರೆ, ಅವನು ಗಂಡು
ಭಾವನೆಗಳನ್ನು ತೋರ್ಪಡಿಸಲರಿಯದೆ ಎಲ್ಲವನ್ನೂ ಒಳಗೊಳಗೇ ಅದುಮಿಟ್ಟುಕೊಂಡವನು.

********

About The Author

Leave a Reply

You cannot copy content of this page

Scroll to Top