ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಮೌನ ಭಾಷೆ ಸರೋಜಾ ಶ್ರೀಕಾಂತ್ ಅದಾವುದೋ ದೂರದ ಭಾವಗಳೂರಿಗೆ ಬರಸೆಳೆದ ಗಳಿಗೆಯಲ್ಲೇ..! ಮತ್ತಾವುದೂ ನೆನಪಾಗದಂತೆ ಮರೆಸಿ ಕಾಡಿದವನು ಕ್ಷಣದಲ್ಲೇ..!! ತಣ್ಣನೆಯ ತಂಗಾಳಿಯಲ್ಲೂ ನುಸುಳಿ ನಸು ನಾಚಿಸಿದವನಿವನೆ..! ಹೊಂಬಿಸಿಲಿನ ಹೊನ್ನ ರಶ್ಮಿಯಲ್ಲೂ ತುಸು ಸಂಚರಿಸಿದವನಿವನೇ..!! ಹಸಿರಸಿರಿನ ತುಂತುರು ಹನಿ ಹನಿಯಲ್ಲೂ ನಿನ್ನಿರುವಿನ ರೋಮಾಂಚನ..! ಅರಳಿದ ಸುಮದೊಳಗಿನ ಘಮವೂ ನಿನ್ನರಿವಿನ ಅನಾವರಣ..!! ಸ್ಪರ್ಶದುಸಿರಿಗೆ ಸಂಪ್ರೀತಿಯ ಹೂಬಾಣ ಬಿಟ್ಟು ಪ್ರೇಮದ ಹೆಸರಿಟ್ಟವ ನೀನೆ..! ಮೊದಲೊಲವಿನ ಮೌನ ಭಾಷೆಗೆ ಮರುಧ್ವನಿಯ ಮಾತು ಶುರು ನಿನ್ನಿಂದಲೇ..!! *********

ಕಾವ್ಯಯಾನ Read Post »

ಅಂಕಣ ಸಂಗಾತಿ

ಗಾಳೇರ್ ಬಾತ್

ಗಾಳೇರ್ ಬಾತ್-05 ಬಿ.ಸಿ.ಎಮ್ hostelನಲ್ಲಿ ಅಡ್ಡ ಹೆಸರುಗಳು……. ಇವತ್ತು ನಾನೇನಾದರೂ ಒಂದೆರಡು ಅಕ್ಷರ ಬರೆದು ನಿಮಗೆ ಓದ್ಲಿಕ್ ಹಚ್ಚಿನಂದ್ರ ಆಯಪ್ಪನ ಋಣನ ನಾನ್ಯಾವತ್ತೂ ಮರೆಯೋ ಆಗಿಲ್ಲ. ನಾನಷ್ಟೇ ಅಲ್ಲ! ಎಷ್ಟೋ ಬಡ ವಿದ್ಯಾರ್ಥಿಗಳಿಗೆ ದೇವರಾಜ ಅರಸರು ನನ್ನಂತ ಆರಕ್ಕೇರದ ಮೂರಕ್ಕಿಳಿಯದ ಕುಟುಂಬದ ಮಕ್ಕಳಿಗೆ ತಂದೆತಾಯಿ ಎಲ್ಲವನ್ನೂ ಆಗಿಬಿಟ್ಟಿದ್ದ. ಇಂತಹ ದೇವರಾಜ ಅರಸುರವರ ಸ್ಥಾಪಿಸಿದ ಬಿಸಿಎಂ ಹಾಸ್ಟೆಲ್ನಲ್ಲಿ ನನ್ನ ಪ್ರೌಢಶಿಕ್ಷಣ ಮುಗಿಸಿದೆ.       ಆ ವಯಸ್ಸಿನಲ್ಲಿ  ಅಲವಾರು ಸ್ವಾರಸ್ಯಕರ ಘಟನೆಗಳು, ವಿಚಿತ್ರವಾದ ಸಂಗತಿಗಳು ನಡೆದಿದ್ದವು. ಅವು ನನಗಷ್ಟೇ ಅಲ್ಲ ಬಿಡ್ರಿ; ನೀವು ಅಂತ ಹಾಸ್ಟೆಲ್ ಅನುಭವ ಪಡೆದಿದ್ದರೆ ನಿಮಗೂ ಕೂಡ ನಡೆದಿರಬಹುದೆನೋ! ಇರ್ಲಿ ನನ್ನ ಅನುಭವ ಒಂಚೂರು ಕೇಳಿಬಿಡಿ. ನಾನೊಂತರ ಓದಿನಲ್ಲಿ weak or strong ಅಂತ ಇವತ್ತಿಗೂ ನಂಗೆ ಕಂಡುಹಿಡಿಲಿಕ್ಕೆ ಆಗಿಲ್ಲ. ನಾನು weak ಅಂದ್ರೆ ನೀವು ನಂಬಂಗಿಲ್ಲ, strong ಅಂದ್ರೆ ನನ್ ಮನಸ್ಸು ಒಪ್ಪಂಗಿಲ್ಲ! ಅದೇನೇ ಇರ್ಲಿ ಬಿಡಿ. ಇವಾಗ ನಿಮಗೆ ಏನು ಹೇಳಬೇಕು ಅನ್ನಕೊಂಡಿದ್ನೋ ಅದನ್ನ ಹೇಳ್ತೀನಿ ಕೇಳಿಬಿಡಿ.      ನಾನು ಆಗ ಸುಮಾರು ಎಂಟನೇ ತರಗತಿ ಓದುತ್ತಿದ್ದೆ. ಆಗ ನಾವು ಹಾಸ್ಟೆಲ್ನಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳು ಎಂಟು ಜನ ಇದ್ದೀವಿ. ಇನ್ನೋಬ್ಬ  ಇದ್ದ ಅವನ್ ಸೇರಿಸಿದ್ರೆ ಒಂಬತ್ತು ಆಗ್ತೀವಿ. ಆ ಇನ್ನೋಬ್ಬನ ಹೆಸರು ಜ್ಯೋತಿ ಅಂತ. ಅವನು ಹಾಸ್ಟೆಲ್ ಗೆ ಯಾವಾಗ ಬರ್ತಿದ್ನೋ ಯಾವಾಗ ಹೋಗುತಿದ್ನೋ ನಮ್ಮಪ್ಪನಾಣೆಗೂ ನನಗೆ ಸರಿಯಾಗಿ ಗೊತ್ತಿರಲಿಲ್ಲ. ಉಳಿದವರಲ್ಲಿ ಧರ್ಮ ಅಂತ ಇವನಿಗೆ ನಮ್ಮ ಹೊಟ್ಟಿ ಡುಮ್ಮ ಅಂತ ಹೆಸರಿಟ್ಟದ್ದ. ಆ ಹೊಟ್ಟಿ ಯಾರಪ್ಪ ಅಂತ ಅಂತೀರಾ ಇವತ್ತು ಅವನು C.A study ಮಾಡಕ್ಕೆ ಚೆನ್ನೈನಲ್ಲಿ ಇದಾನ ಇವನ ನಿಜ ಹೆಸರು ಗವಿ ಅಂತ ಕರಿಯದೆ ಇದ್ದರೆ ಈ ಲೇಖನ ಓದಿದ್ರೆ ಅವನ ಮನಸ್ಸೂ ಮತ್ತೆ ನನ್ನ ಮೇಲೆ ಮುನಿಸಿಕೊಳ್ಳದೆ ಇರಲಾರದು. ಧರ್ಮ ಇವನಿಗೆ ಹೊಟ್ಟಿ ಅಂತ ಹೆಸರಿಟ್ಟಕ ಇವನು ಧರ್ಮಗ ಡುಮ್ಮ ಅಂತ ಕರಿತಿದ್ದ. ಇನ್ನೂ ಪೀಪಿ ಇದೇನಪ್ಪಾ ಯಂತ ಹೆಸರು ಅಂತೀರಾ!  ಅವತ್ತೇನೋ ಹಾಸ್ಟೆಲ್ ನಲ್ಲಿ ಪಾಯಿಸ ಮಾಡಿದ್ರು ಗಣೇಶ ಹೊಟ್ಟೆತುಂಬಾ ಕುಡಿದಿದ್ದ ಅನಿಸುತ್ತೇ toilet ಗೆ ಹೋಗಿರಲಿಲ್ಲ ಅನಿಸುತ್ತೆ. ಎಲ್ಲರೂಗೂ ಕೇಳಿಸುವಂತೆ ಹೂಸು ಬಿಟ್ಟಾಗ; ಲೇ ಗಣೇಶ ಏನ್ಲೇ ಇದು ಅಂತ ಕೇಳಿದ್ರೆ, ದೇವರು ಕೊಟ್ಟ ಪಿಪಿ ಅಂದಬಿಟ್ಟ. ಅಷ್ಟೇ ಸಾಕಿತ್ತು ನಮಗೆ ಅಂದಿನಿಂದ ಗಣೇಶನ ಹೆಸರು ಪಿಪಿ ಆಗ್ಬಿಡ್ತು.  ಇನ್ನು ಡಾಬಾ ಮತ್ತೆ ಬಡಗಿ. ಇವರ ಅಡ್ಡ ಹೆಸರೇ ಸೂಚಿಸುವಂತೆ ಡಾಬಾ ರ ಅಪ್ಪ ಹಗರಿಬೊಮ್ಮನಹಳ್ಳಿಯಲ್ಲಿ ಸಣ್ಣದೊಂದು ಹೋಟಲ್ ಇಟ್ಕೊಂಡಿದ್ದ. ಇದಕ್ಕೆ ಬಡಗಿ ಚಿರಂಜೀವಿಗೆ ಡಾಬಾ ಅಂತ ಗಂಗ ಕರಿತಿದ್ದ. ಇದಕ್ಕೆ ಸಿಟ್ಟಿಗೆದ್ದ ಡಾಬಾ ಗಂಗನಿಗೆ ಬಡಿಗಿ ಎನ್ನಲಿಕ್ಕತಿದ. ಇನ್ನೂ  ಪಿಲ್ಲ ! ಇದೆಂತಹ ಹೆಸರು ಅಂತೀರಾ ಈ ಹೆಸರಿನ ಒಡೆಯ ಪ್ರಕಾಶ್ ಅವನದು ಮೂಲತಹ ಪಿಲಮನಹಳ್ಳಿ ಅನ್ನೋ ಊರಿನವನು ಶಾಟ್ ಕಟ್ ಲಿ ಪಿಲ್ ಅಂತ ಕರಿತಿದ್ವಿ. ಇನ್ನೂ ಉಳಿದಿದ್ದು ನಾನು ಮತ್ತು ಪ್ರಭು. ನಂಗೆ ಇವಾಗಲೂ ದೇವರು ಕೊಟ್ಟ ಬಳುವಳಿ ಎನ್ನಬಹುದು. ಅದೇನಪ್ಪಾ ಅಂತೀರಾ ನನ್ ತಲೆ ಸ್ವಲ್ಪ ಶೇಕ್ ಆಗ್ತಿತ್ತು ಇದನ್ನೇ investment ಮಾಡಿಕೊಂಡ ನನ್ನ ಸ್ನೇಹಿತರು ತೂಗ ಅಂತ ಹೆಸರಿಟ್ಟರು ಇಷ್ಟೇಲ್ಲಾ ಹೇಳಿದಮೇಲೆ ಪ್ರಭುಂದು ಒಂದು ಹೇಳಬೇಕು ಅದ್ರೆ ಏನು ಮಾಡೋದು ಅವನ್ ಹೆಸರು ಅವನ ಲವರ್ ಇಂದನೇ ಕರಿತಿದ್ವಿ ಈಗ ಆ ಹೆಸರು ಹೇಳೋದು ಸೂಕ್ತ ಅಲ್ಲ ಅನಿಸುತ್ತದೆ ಯಾಕಂದ್ರೆ ಈಗ ಅವಗಿಂತರ ಲವ್ ಇಲ್ಲ. ಅವಳೆಲ್ಲೋ ಅವನೆಲ್ಲೋ! ನಮಗ್ಯಾಕೆ ಬಿಡ್ರಿ. ನಮ್ಮ ಹೆಸರುಗಳು ನಿಮಗೆ Happy ತಂದಕೊಟ್ರೆ ನನ್ನ ಬರಹಕ್ಕೂ ಶಕ್ತಿ ಬಂದಂತೆ ಅಲ್ವಾ! ****** ಮೂಗಪ್ಪ ಗಾಳೇರ ,,

ಗಾಳೇರ್ ಬಾತ್ Read Post »

ಕಾವ್ಯಯಾನ

ಕಾವ್ಯಯಾನ

ಇಂದಿನ ಕವಿತೆ ಡಾ.ವೈ.ಎಂ.ಯಾಕೊಳ್ಳಿ ಬೇಡ ಗೆಳೆಯ ನನ್ನ ಕವಿತೆಗಳಲ್ಲಿ ನನ್ನ ಹುಡುಕಬೇಡ ಬರೀ ನನ್ನ ಬಗ್ಗೆ ನಾನು ಬರೆದರೆ ಕವಿಯಾಗಲಾರೆ ಕೂಡ ಪಕ್ಕದ‌ಮನೆಯಲಿ ಹಸಿದವರ ಅರೆಹೊಟ್ಟೆಯ‌ ಬಗ್ಗೆ ಬರೆಯದಿರೆ ನನ್ನ ಕವಿತೆ ಆಗಬಹುದು ಬರೀ ಪದಗಳ ಸಂತೆ ಸುತ್ತಲಿನ ಜಗದಲಿ ನೋವಿಂದ ನಲುಗಿರಲು ನನ್ನ ಮಂದಿ ಚಂದ್ರ ತಾರೆಗಳ ಬಗ್ಗೆ ಹಾಡು ಕಟ್ಟಿದರೆ ನಾ ಎಂಥ ಕವಿಯು ಅಂದಿ ನನ್ನ ಹಾಡು ಜೊತೆಯಾಗಬೇಕು ಗೆಳೆಯ ನನ್ನೂರ ರೈತ ಗೆಳೆಯನ ನೇಗಿಲ ಕುಳಕೆ ರಾಟಿಯ ಎತ್ತುಗಳ ನೊಗದಿ ಬಾವಿಯಾಳವ ಇಳಿದು ನೀರನು ಹೊತ್ತು ತರಲಿ ಮೇಲಕೆ ಬೇಡವೆಂದಲ್ಲ ನನಗು ಚಲುವು ಸೌಂದರ್ಯದ ಮಾತು ಹಸಿವೆ ನೋವುಗಳು ಸುತ್ತ ತುಂಬಿರುವಾಗ ಹೇಗೆ ಬರೆಯಲಿ ಹೇಳು ಅವನು ಕುರಿತು *********** ಡಾ.ವೈ.ಎಂ.ಯಾಕೊಳ್ಳಿ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೆನಪ ತಿಜೋರಿ ಶಾಲಿನಿ ಆರ್. ನೆನಪಿಗೊಂದು ಮೊಳೆ ಹೊಡೆಯುತಿದ್ದೇನೆ, ಯಾರಿರದ ಇರುಳಲಿ ಚಂದಿರನ ಬೆಳಕಲಿ, ಮೆಲ್ಲನೆ ಅರಳಿದ ನೈದಿಲೆಗು ಸಂಕೋಚ, ಸದ್ದು ಕೇಳಿಸಿತೇ ಅವನಂಗಳಕು! ಸುದ್ದಿಯಾಗದಿರಲಿದು ಹೊಸ್ತಿಲಾಚೆ, ಮರಳಿ ಮನದ ಮೂಲೆಗೆ ನೆನಪುಗಳ ಜೇಡ ಬಲೆ ಸುಮ್ಮನೆ ಜಿನುಗಿದ ಕಣ್ಣಹನಿಗೂ ದಿಗಿಲು, ನಗುವ ಕತ್ತಲಿಗೂ ಬಿಕ್ಕು ಕೇಳಿಸಿತೇ? ಮತ್ತೆ ನೋಡುತ್ತೇನೆ ಗೋಡೆಯ ಕ್ಯಾಲೆಂಡರ್ ದಿನದ ಅಂಕ, ನಗೆಯ ಅನುರಣಿತ ಬೇಡದೆ ಉಳಿದ ಮಾವಿನ ಚೂರುಗಳು ಮರುಗುವಾಗ ಮನದಾಚೆಯ ಹೆದ್ದಾರಿಲಿ ಭಾರಿ ಮಳೆಯ ಸದ್ದು ತೊಯ್ದರು ತೋಯದ ನಿರ್ಲಿಪ್ತ ಮನ ತುಕ್ಕು ಹಿಡಿದಿದೆ ಬಾಗಿಲ ಚಿಲಕ ನಿಟ್ಟುಸಿರ ಹನಿಗೆ ನಿಲ್ಲುವ ಗಳಿಗೆಯಲಿ ಹರಿವ ಹುನ್ನಾರಿದು ನೀರಿನ ಸಲಿಗೆ ಹಿಡಿದ ಬಟ್ಟಲಲಿ ಪಡೆವ ಆಕಾರ ನೆನಪ ಕಡಲಿಗೆ ಓ! ನೆನಪ ತಿಜೋರಿಯ ಕೀಲಿ ಕೈ ಕಳೆದಿದೆ, ಹೆಕ್ಕಿ ಹೇಗೆ ಎತ್ತಿಡಲಿ ಹೇಳೆ, ಮರಳಿ ಪೆಟ್ಟಿಗೆಗೆ ಮತ್ತೆ ಮತ್ತೆ ಕಳೆದು ಹೋಗದಂತೆ ನಾಳೆಗೆ , ಮತ್ತೆ ಅವನಿಗೆ ತಿಳಿಯದಂತೆ ಕೊನೆವರೆಗೆ… ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಒಡೆದ ಕನ್ನಡಿ ವಿಭಾ ಪುರೋಹಿತ ಒಡೆದ ಕನ್ನಡಿ ಬಿಂಬದಲಿ ಬದುಕು ಹುಡುಕುವ ಹುಚ್ಚು ಎಂದೋ ಬಸವಳಿಯಬೇಕಿತ್ತು ನಿಂತನೀರಿಗೆ ಬಿದ್ದ ತುಂತುರು ಹನಿಗಳ ಪ್ರೇಮ ಮತ್ತೆ ನಗಿಸಿತ್ತು. ಎಷ್ಟು ತುಂಡಾದರೂ ಇಡಿಯಾಗಿ ಬೆಳೆವ ಮಣ್ಣು ಹುಳುವಿನ ಹಟವು ಬೆರಗು ಕಂಡಿತ್ತು ಕಣಕಣದ ಉಸಿರು ಜೀವಂತವಾಗಿ ಬೆಳೆದು ಪ್ರೀತಿ ಹಬ್ಬಿತ್ತು. ಬುಡಕಡಿದ ಮರಗಳಿಗೆ ಚಿಗುರುಣಿಸುವ ಪ್ರಕೃತಿ ವಾತ್ಸಲ್ಯ ವು ದಂಗುಬಡಿಸಿತ್ತು, ನರನಾಡಿಗಳ ನೆಲದ ಮೋಹ ಆಳಕ್ಕಿಳಿದ ಛಲವು ತುಂಬಾ ಕಾಡಿತ್ತು. ಕಡಲಲೆಗಳಾ ಸದ್ದಿನಲ್ಲಿ ವಾಸ್ತವದ ಕೊನೆಯಿರದ ಸಂಕೋಲೆಯಲಿ ಗೆದ್ದು ಬದುಕಿದೆ, ಸ್ವಾಭಿಮಾನದ ಜಿದ್ದಿನಲಿ ಮೈಮನಸು ಬುದ್ಧಿಯಲಿ ಆತ್ಮವಿಶ್ವಾಸದ ಹೊಸತೆನೆ ಅರಳಿತ್ತು *******

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಯಾರಿವಳು? ಕನ್ನಡ: ಶೀಲಾ ಭಂಡಾರ್ಕರ್ ಮಲಯಾಳಂ: ಚೇತನಾ ಕುಂಬ್ಳೆ ಅಡುಗೆಮನೆಯಲ್ಲಿ ಹಾಲು ಉಕ್ಕುವುದರೊಳಗೆ ಓಡಿ ಅದನ್ನು ತಪ್ಪಿಸುವವಳು. ಹೆಣೆದಿಟ್ಟ ಮಧುರ ಕ್ಷಣಗಳ ಕನಸುಗಳು ಹರಿದುಹೋದರೂ ಕಾಣದಂತೆ ಸುಮ್ಮನಿರುವಳು. ರೊಟ್ಟಿ ಕರಕಾಗದಂತೆ ಎಚ್ಚರಿಕೆಯಿಂದ ಬೇಯಿಸಿಕೊಡುವವಳು.. ಎಷ್ಟೋ ಆಸೆಗಳನ್ನು ಸುಟ್ಟು ಬೂದಿ ಮಾಡಿ ಎಸೆದು ಬಿಡುವಳು. ಪಾತ್ರೆಗಳು ಬಿದ್ದು ತಗ್ಗುನುಗ್ಗಾಗದಂತೆ ನೋಡಿಕೊಳ್ಳುವವಳು. ತನ್ನ ಹುಮ್ಮಸ್ಸು, ಉತ್ಸಾಹಗಳನ್ನು ತಾನೇ ಹೊಸಕಿ ಹಾಕುವಳು. ಬಟ್ಟೆಯ ಕಲೆಗಳನ್ನು ಜಾಣ್ಮೆಯಿಂದ ತೊಡೆಯುವವಳು.. ಅಶಕ್ತ ಶಬ್ಧಗಳನ್ನು ಬರೆದ ವಿಷಾದದ ಮಸಿಯನ್ನು ಎದೆಯ ಗೋಡೆಯ ಮೇಲಿಂದ ಅಳಿಸಿಹಾಕುವಳು. ಬಂಧಿಸಿಟ್ಟ ಆಕಾಂಕ್ಷೆಗಳ ಮರೆಯಲೋಸುಗ. ಅಡುಗೆ ಮನೆಯ ಗಟ್ಟಿ ಮುಚ್ವಳದ ಡಬ್ಬಿಯೊಳಗೆ ಮುಚ್ಚಿಟ್ಟು ಆನಂದ ಪಡುವಳು. ಎಲ್ಲರ ನೋವಿಗೆ ಸ್ಪಂದಿಸುತ್ತಾ ತನ್ನದೇನಿದೆಯೋ ಎಲ್ಲವನ್ನೂ ಪಾತ್ರೆ ತೊಳೆಯುವ ಸಿಂಕಿನಲ್ಲೇ ಹರಿಯಬಿಡುವವಳು. ಪ್ರೀತಿಯ ಹವ್ಯಾಸಗಳನೆಲ್ಲ ಬಟ್ಟೆಯ ಮಡಿಕೆಯೊಳಗೆ ಮಡಚಿಟ್ಟು ಬಾಗಿಲು ಮುಚ್ಚುವಳು. ആരാണവൾ? അടുക്കളയിൽ പാൽ തിളച്ചുമരിയുന്നിൻ മുംബ് ഓടിപ്പോയി തടയുന്നവൾ കോർത്തുവെച്ച മധുര ക്ഷണങ്ങളും സ്വപ്നങ്ങളും തകർനപ്പോഴും കാണാത്ത പോലിരികുന്നവൾ ഭക്ഷണം അടിപിടിക്കാതെ ശ്രദ്ധയോടെ വേവിച്ച് വിളംബുന്നവൾ എത്രയോ ആശകളെ ദഹിപ്പിച്ച് വെണ്ണീരാക്കി എരിയുന്നവൾ പാത്രങ്ങൾ താഴെവീൺ ഉടഞ്ഞുപോകാതെ നോക്കുന്നവൾ തൻ്റെ ഉൽസാഹങ്ങളെ താനേ കെടുത്തുന്നവൾ വസ്ത്രങ്ങളിൽ പട്ടിപിടിച്ച കരങ്ങളെ സമർഥമായി തുടച്ചു നീക്കുന്നവൾ വിഷാദം നിരഞ വാക്കുകളെ നെഞ്ജിനുള്ളിൽ നിന്നും മായ്ച്ച് കളയുന്നവൾ അടക്കിപ്പിടിച്ച ആകാങ്ക്ഷങ്ങളെ മരക്കാൻ വേണ്ടി അടുപ്പുള്ള പാത്രത്തിനുള്ളിൽ ഭദ്രമായി സൂക്ഷിച്ച് സന്ദോഷിക്കുന്നവൾ എല്ലാവരുടെ വേദനകളിൽ പങ്കുചേർൻ തണ്ടേതെല്ലാം പാത്രം കഴുുകുന്ന വെള്ളത്തിൽ ഒഴുക്കി വിടുന്നവൾ തൻ്റെ പ്രിയപെട്ട ശീലങളെ വസ്ത്രങൾകുള്ളിൽ മടക്കിവെച്ച് വാതിൽ അടയ്ക്കുന്നവൾ രചന: ശീല ഭണ്ഡാർക്കർ തർജ്ജമ: ചേതനാ കുംബ്ളെ

ಅನುವಾದ ಸಂಗಾತಿ Read Post »

ಇತರೆ

ಪ್ರಸ್ತುತ

ಮಾತಾಡುವ ಮರಗಳು ಮೋಹನ್ ಗೌಡ ಹೆಗ್ರೆ ಬೆಳವಣಿಗೆ ಮತ್ತು ಬದಲಾವಣೆ ಪ್ರಕೃತಿ ನಿಯಮಗಳಲ್ಲೊಂದು. ಈ ಬೆಳವಣಿಗೆ ಮತ್ತು ಬದಲಾವಣೆಯನ್ನು ದೈಹಿಕವಾಗಿಯೂ, ಮಾನಸಿಕವಾಗಿಯೂ ಕಂಡುಕೊಳ್ಳಬಹುದಾಗಿದೆ. ಈ ಪ್ರಕ್ರಿಯೆ ಕೇವಲ ಮನುಷ್ಯನಿಗೆ ಮಾತ್ರ ಸಂಬಂಧಿಸಿದ್ದಲ್ಲ. ಮನುಷ್ಯನೊಡಗೂಡಿ ಬದುಕುವ ಚರಾಚರ ಜೀವರಾಶಿಗಳು ಬೆಳವಣಿಗೆ ಮತ್ತು ಬದಲಾವಣೆಯ ಪ್ರಕ್ರಿಯೆಯಲ್ಲಿ ಒಳಗೊಳ್ಳಲೇಬೇಕು. ಪಿಳಿಪಿಳಿ ಕಣ್ಣುಬಿಟ್ಟು ತಾಯಿಯ ತೊಡೆ ಮೇಲೆ ಮಲಗಿದ ಮಗು ಬೆಳವಣಿಗೆಯಾಗಿ, ಮಗುವಿನ ತೊದಲು ಮಾತಿಗೆ ಕೈತಟ್ಟಿ ಕುಣಿದ ಮುದಿ ಜೀವಗಳು ಮಗು ಬೆಳವಣಿಗೆಯಾದ ನಂತರದಲ್ಲಿ ಅಂತಹದೇ ಮಗ್ದ ಪ್ರೇಮದ ನುಡಿಗಳ ಕೇಳಿರಬಹುದು ಅಥವಾ ಕೇಳಲಾಗದ ಮಾತು ವರ್ತನೆಗಳ ನಡುವೆ ಅನಿವಾರ್ಯವಾಗುವಷ್ಟು ಹೊಂದಾಣಿಕೆಯನ್ನು ಅನುಸರಿಸಿಕೊಳ್ಳಲೂಬಹುದು. ಹಕ್ಕಿಯ ಕೊಕ್ಕಿನಲಿ ಹೆಕ್ಕಿ ತಂದ ಹಣ್ಣೊಂದು ಜಾರಿಬಿದ್ದೊ, ಅದು ತಿಂದುಬಿಟ್ಟದ್ದೋ, ಹಿಕ್ಕೆಯಿಂದಲೋ ಇಲ್ಲವೇ ಬೇಕೆಂದೇ ತಂದು ಹಿತ್ತಲಿನಲ್ಲಿ ನೆಟ್ಟ ಗಿಡಗಳು ಬೆಳೆಯುತ್ತಾ ಮನುಷ್ಯನೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾ ಮನುಷ್ಯ ಸಂಬಂಧದಂತೆ ಭಾಸವಾಗಬಹುದಾದ ಸಂದರ್ಭಗಳು ನನ್ನ ಪಾಲಿನ ಅವಿನಾಭಾವಿ ಅನುಭವವಾಗಿ ನನ್ನ ಆವರಿಸಿಕೊಂಡ ಕ್ಷಣವೇ ರೋಮಾಂಚನಕಾರಿಯಾದಂತದ್ದು. ಅಂದು ಮನೆ ಹಿತ್ತಲಿನಲ್ಲಿ ಚಿನ್ನಿದಾಂಡು ( ಹಾಣೆ – ಗೆಂಡೆ ) ಪ್ಲಾಸ್ಟಿಕ್ ಬಾಲ್, ಕ್ರಿಕೆಟ್, ಒಡ್ಲಮುಂಡೆ, ಗೇರುಬೀಜದ ಆಟ, ಗೋಲಿ, ಕಣ್ಣಮುಚ್ಚಾಲೆ, ಶಾಲೆ ಆಟ, ಅಡುಗೆಮನೆ ಆಟ ಮುಂತಾದವುಗಳೆಲ್ಲ ಸಲೀಸಾಗಿ ಆಡುವಷ್ಟು ಅವಕಾಶಗಳಿದ್ದವು. ಸಾವಕಾಶವಾಗಿ ಆ ಅವಕಾಶದ ಸ್ಥಳಗಳಲ್ಲಿ ಅಕ್ಕ ನೆಟ್ಟ ತೆಂಗು, ಅಡಿಕೆ ಸಸಿಗಳು ಬೆಳೆದು ಈಗ ಎತ್ತರವಾಗಿ ಆಡಿದ ಬಾಲ್ಯದ ಆಟಗಳಿಗೆ ಏಣಿಹಾಕಿದಂತೆ ಖುಷಿಗೊಳಿಸುತಿವೆ. ಮುಂದೆ ಆ ಜಾಗ ಖಾಲಿಯೇ ಇದ್ದರೂ ಅಲ್ಲಿ ಟಿ.ವಿ, ಮೊಬೈಲ್‌ ಗಳ ದಾಸರಾದ ಮಕ್ಕಳು ಆ ಜಾಗವ ಕಿಂಚಿತ್ತೂ ತುಂಬಲಾರರೆಂಬ ಮುನ್ಸೂಚನೆಯಲ್ಲೋ ಅಥವಾ ಶ್ರಮೀಕ ಬದುಕಿನ ಅಲ್ಪ ಗಳಿಕೆಗೋ, ಆತ್ಮಸಂತೃಪ್ತಿಗೋ ಅಕ್ಕ ಹಿತ್ತಲ ತುಂಬಾ ಅಡಿಕೆ, ಬಾಳೆ, ತೆಂಗಿನ ಸಸಿಗಳ ನೆಟ್ಟಿದ್ದಿರಬೇಕು. ಇವುಗಳ ಹೊರತಾಗಿ ನನ್ನ ವಂಶದವರ ಕಂಡ ಆ ಹಿತ್ತಲಲ್ಲಿ ಅಂದು ಇದ್ದ ಮೂರು ಮರಗಳೊಂದಿಗೆ ಮಾತಾಡುವ ಅವಕಾಶ ನನ್ನದೀಗ… ಬುಡದಿಂದ ಮರವನ್ನು ಏರುವುದು ವಾಡಿಕೆ. ಆದರೆ ತನ್ನ ಕೊಂಬೆಯನ್ನು ತಲೆಕೆಳಗೆ ಇಳಿಬಿಟ್ಟ ಹಿತ್ತಲಿನ ಗೇರು ಮರವನ್ನು ಏರಿ ಅದರಲ್ಲಿರುವ ಉದ್ದುದ್ದದ ಗೇರು ಹಣ್ಣು ಕೊಯ್ದು ಅದನ್ನು ಸರಿಯಾಗಿ ಕತ್ತರಿಸಿ ಉಪ್ಪು ಹಾಕಿ ತಿನ್ನುವ ಮಜವೇ ಬೇರೆ. ದಿನಕ್ಕೆ ಏನಿಲ್ಲವೆಂದರೂ ಮೂರು ನಾಲ್ಕು ಬಾರಿಯಾದರೂ ಏರುವುದು ದಿನಚರಿಯಂತೆ. ಕೆಳಗಡೆ ನಿಂತಾಗ ಕಾಣುವ ಹಣ್ಣುಗಳು ಮರವೇರಿದ ನಂತರ ಅಡಗಿಕೊಂಡಂತೆ ಅನಿಸುತ್ತಿತ್ತು. ಕೂಲಿಗೆ ಹೋದ ನನ್ನವ್ವ ಮನೆಗೆ ಬಂದಾಗ ನನ್ನನ್ನು ಕರೆಯಬೇಕೆಂದರೆ ಮೊದಲು ಮರದಲ್ಲಿ ನಾನು ಇರುವೆನೇ ಎಂಬುದನ್ನು ಖಾತ್ರಿಪಡಿಸಿಕೊಂಡೇ, ನಮ್ಮೂರ ಬಯಲ ಕಡೆ ಮುಖಮಾಡಿ ಕರೆಯುತ್ತಿದ್ದರೆ, ನಮ್ಮೂರ ಹಳ್ಳದಲ್ಲಿ ಸಟ್ಲೆಯೋ, ಕಂಯ್ ಜಬ್ಬೋ, ಏಡಿಯೋ ಹಿಡಿಯುತ್ತಿರುವ ನಾವುಗಳು ಒಂದೇ ಕೂಗಿಗೆ ಉದ್ದುದ್ದದ ದಾಪು ಹಾಕಿ ಮನೆ ಸೇರುತ್ತಿದ್ದದ್ದು ಮಜದ ಸಂಗತಿ. ಈ ಮರ ಅಕ್ಷಯಪಾತ್ರೆಯಂತೆ ಎಂದರೆ ತಪ್ಪಾಗದೇನೋ, ಏಕೆಂದರೆ ದಿನಕ್ಕೆ ಮೂರ್ನಾಲ್ಕು ಸಲ ಮರವೇರಿ ಹಣ್ಣು ಕೊಯ್ಯುವುದು, ಕಲ್ಲಿನಿಂದ ಹೊಡೆದು ಹಣ್ಣು ಬೀಳಿಸುವುದು, ಕೊಕ್ಕೆಯಿಂದ ಕೊಯ್ದರೂ ಮತ್ತೆ ಗೇರುಬೀಜಕ್ಕಾಗಿ ಬೆಳ್ಳಂಬೆಳಗ್ಗೆ ಮರದ ಹತ್ತಿರ ಹುಡುಕಾಟ ನಡೆಯುವುದು ಕೂಡಾ ಸ್ಪರ್ದೆಯಂತೆ ನಡೆಯುತಲೇ ಇತ್ತು‌. ಕನ್ನಡ ( ಪ್ರಾಥಮಿಕ) ಶಾಲೆ ಮತ್ತು ಹೈಸ್ಕೂಲ್ ಗಳಲ್ಲಿ ಒಂದಕ್ಕೆ ಮತ್ತು ಊಟಕ್ಕೆ ಬಿಟ್ಟಾಗ ಶಾಲೆಯ ಹತ್ತಿರವಿರುವ ಇಬ್ಬರ ಬೇಣದಲ್ಲಿ ಗೇರು ಬೀಜವನ್ನು ಕಳ್ಳತನ ಮಾಡಿ ಶಾಲೆ ಗಂಟೆ ಬಾರಿಸಿದರೆ ಅರೆಬರೆ ಸುಲಿದ ಬೀವವನ್ನೂ ಚಡ್ಡಿಕಿಸೆಗೆ ಹಾಕಿಕೊಂಡು ಗೇರುಬೀಜದ ಸೋನೆಯಿಂದ ಸದಾ ತೊಡೆಮೇಲೆ ಸುಟ್ಟಗಾಯಗಳು ಇರುತ್ತಿದ್ದದ್ದೂ ನೆನಪು ಮಾತ್ರ. ಈ ಗೇರು ಮರದ ನಂಟು ನನ್ನೊಬ್ಬನದಲ್ಲ. ಓಣಿಯ, ಶಾಲೆಯ ಎಲ್ಲಾ ವಾನರ ಸೇನೆಯ ಸ್ನೇಹಿತರ ಖುಷಿಯೂ ಕೂಡಾ. ಇಂದಿಗೂ ಎಂದಿಗೂ ದಾರಿ ಮದ್ಯ ಆದರೂ ಗೇರು ಗಿಡಗಳು ಹಣ್ಣು ತುಂಬಿಕೊಂಡರೆ ಹಾಗೇ ನೆನಪುಗಳ ಹಸಿಗೊಳಿಸಿ ನಗಿಸಿ ಕಳಿಸುತ್ತವೆ. ರಸ್ತೆಯಂಚಿನ ಪಾಗರದ ಮಧ್ಯದಿಂದ ಹುಟ್ಟಿ ಬೆಳೆದು ನಿಂತ ಹಿರಿಯ ಹಲಸಿನ ಮರಕ್ಕೆ ಮೈತುಂಬಾ ಅಂಬಲಿಯ ಹಣ್ಣುಗಳು. ಸುಮಾರು ೨ ಮೀಟರ್ ಗಿಂತ ಹೆಚ್ಚಿನ ಘೇರಿ ಇರುವ ಈ ಮರವನ್ನು ಏರಲು ಕಷ್ಟ. ಕಷ್ಟಪಟ್ಟು ಏರಿದರೂ ಸುಲಭವಾಗಿ ಹಣ್ಣುಗಳನ್ನು ಕೊಯ್ಯಲಾಗದು. ಜೊತೆಗೆ ವಿದ್ಯೂತ್ ತಂತಿಗಳ ಭಯ. ಈ ಕಾರಣಕ್ಕಾಗಿಯೇ ಹಲಸಿನ ಮರವನ್ನು ಯಾರೂ ಗುತ್ತಿಗೆಯನ್ನೇ ಪಡೆಯುತ್ತಿರಲಿಲ್ಲ. ಹಲಸಿನ ಮರದಲ್ಲಿ ಹಣ್ಣು ಆಯಿತೆಂದರೆ ಓಣಿ ತುಂಬಾ ಪರಿಮಳ. ಅಷ್ಟೇ ಅಲ್ಲ ಮರದಲ್ಲೇ ಹಣ್ಣಾಗಿ ಬೀಳುತ್ತಿದ್ದುದರಿಂದ ಓಣಿಯ ಬಹುತೇಕರ ದನಕರುಗಳು ರಾತ್ರಿ ಅಲ್ಲಿಯೇ ಠಿಕಾಣಿ ಹೂಡುತ್ತಿದ್ದವು. ಮನೆಯಲ್ಲಿ ನಾವಿರುವಾಗ ಹಣ್ಣು ಬಿದ್ದರೆ ಗೋಣಿಚೀಲವನ್ನು ತೆಗೆದುಕೊಂಡು ಹೋಗಿ, ಕೆಮ್ಮಣ್ಣಿನ ರಸ್ತೆಯಲ್ಲಿ ಹಾಸಿ, ಬಿರಿದು ಬಿದ್ದ ಹಣ್ಣನ್ನ ತುಂಬಿ ಅಕ್ಕ ನಾನು ಅವ್ವೆ ಅಂಗಳದಲ್ಲಿ ಕುಳಿತು ಹಲಸಿನ ಹಣ್ಣು ತಿನ್ನುವಾಗ ಓಣಿಯಲ್ಲಿ ಯಾರಿಗಾದರೂ ತಿರುಗಾಡಿದರೂ ಅವರನ್ನೂ ಕರೆದು ಎಲ್ಲಾ ಸೇರಿ ಹಣ್ಣು ತಿಂದು ಸಣ್ಣ ಪಾರ್ಟಿಯೇ ಆದಂತಾಗುತ್ತಿತ್ತು. ಅಷ್ಟೇ ಅಲ್ಲ ಹಣ್ಣು ತಿಂದು ಅದರ ಬೀಜವನ್ನು ಚೆನ್ನಾಗಿ ತೊಳೆದು ಒಣಗಿಸಿ, ಶಾಲಾ ವಾರ್ಷಿಕೋತ್ಸವಕ್ಕೆ, ಪಕ್ಕದೂರಿನ ನಾಟಕ, ಯಕ್ಷಗಾನಕ್ಕೂ ಮತ್ತು ಊರ ಒಂದೆರಡು ಮನೆಗಳಲ್ಲಿ ಮಾತ್ರ ಟಿವಿ ಇರುವ ಆ ದಿನಗಳಲ್ಲಿ ಊರಲ್ಲಿ ಕೇಲವು ಧಾರ್ಮಿಕ ಕಾರ್ಯ ಹಬ್ಬದ ದಿನಗಳಲ್ಲಿ ಯಕ್ಷಗಾನ ಗಳಂತೆ ಟಿವಿ ತೋರಿಸುವುದು ಕೂಡ ನಡೆಯುತ್ತಿತ್ತು. ಚಂದದ ಸಿನಿಮಾದ ಕ್ಯಾಸೆಟ್ಟುಗಳನ್ನು ಹಾಕುತ್ತಿದ್ದರು ಅದನ್ನು ನೋಡಲು ಹೋಗುವಾಗ ಬಿಸಿ ಕೆಂಡ ಬೂದಿಯಲಿ ಸುಟ್ಟ ಹಲಸಿನ ಬ್ಯಾಳೆ ( ಬೀಜ ) ಯನ್ನೇ ಸ್ನ್ಯಾಕ್ಸ್ ಗಳಂತೆ ತಿನ್ನುವ ರುಚಿಯೇ ಬೇರೆ. ಮಳೆಗಾಲದಲ್ಲಂತೂ ಇದರ ರುಚಿಯೇ ಇಮ್ಮಡಿ. ಇಂದು ಆ ಮರವಿಲ್ಲ ಆದರೆ ಹಲಸಿನ ಮರದ ಬುಡದ ಚಕ್ಕೆಯನ್ನು ಪೂಜಾಕಾರ್ಯಕ್ಕೆ ಯಾರಾದರೂ ಒಡೆದು ಒಯ್ಯಲು ಬರುತ್ತಿದ್ದು ಅವರು ಮರದ ಹಣ್ಣಿನ ಗುಣಗಾನ ಮಾಡಿದ ನಂತರ ಅದರೊಂದಿಗಿನ ಅವಿನಾಭಾವತೆ ಕಣ್ತೆರೆದುಕೊಳ್ಳುತ್ತದೆ. ಈ ಎರಡು ಮರಗಳ ಆಚೆ ನಿಂತ ಹಿತ್ತಲಿನ ಶೀರ್ಷಿಕೆಯಂತಿರುವ ಮರ ಮುರುಗಲ ಮರ. ಕೇಲವು ಕಡೆ ಕೋಕಂ ಮರ ಎನ್ನುವ ಇದರ ಸಸ್ಯ ವೈಜ್ಞಾನಿಕ ಹೆಸರು ಗಾರ್ಸಿನಿಯಾ ಇಂಡಿಕಾ. ಅತ್ಯಂತ ಪ್ರೀತಿ ಮತ್ತು ವಿಶ್ವಾಶದಾಯಕವಾಗಿದೆ. ಹಿತ್ತಲಿನ ಎಲ್ಲಾ ಮರಗಳಿಗಿಂತ ಅತಿ ಎತ್ತರಕ್ಕೆ ತಲೆಯೆತ್ತಿ ನಿಂತ ಈ ಮರದ ವಿಶೇಷವೆಂದರೆ ಎಲ್ಲಾ ಮುರುಗಲ ಮರದಂತೆ ಇದು ಕಡಿಮೆ ಎತ್ತರ ಇದ್ದು, ಕೊಂಬೆಗಳನ್ನು ಅಗಲವಾಗಿ ಹರಡಿಕೊಳ್ಳದೇ ತೀರಾ ಎತ್ತರಕ್ಕೆ ಏರಿ ನಿಂತಿತ್ತು. ಮುರುಗಲು ಹಣ್ಣು ಕಾಯಿಗಳನ್ನು ಸೂಕ್ತ ಸಮಯದಲ್ಲಿ ಕೊಕ್ಕೆಯಿಂದ ಬಡಿದು ಅದರ ಕಾಯಿ ಹಣ್ಣುಗಳಿಂದ ಹುಳಿಸೊಪ್ಪು ( ಹುಳಿ ) ತಯಾರಿಸಿ ಅದನ್ನು ಮೀನು ಸಾರಿಗೆ ಬಳಸುವುದು ವಾಡಿಕೆ. ಆದರೆ ಆಯುಷ್ಯದಲ್ಲಿಯೇ ತನ್ನ ಮೈಗೆ ಕೊಕ್ಕೆಯನ್ನು ತಾಗಿಸಿಕೊಳ್ಳದ ಈ ಮರ ನನಗಂತೂ ಹೆಚ್ಚು ವಿಶೇಷವೇ ಸರಿ. ಆಟ ಆಡಿದ ನಂತರ ಎತ್ತರದಲ್ಲಿ ಹಣ್ಣು ಬಿಟ್ಟಿರುವ ಮರಕ್ಕೆ ನಾವೆಲ್ಲ ಕಲ್ಲು ಹೊಡೆದು ಹಣ್ಣು ಬಿಳಿಸಿ ಅದರ ಪಾನಕ ಮಾಡಿ ಕುಡಿಯುತ್ತಿದ್ದದ್ದು ಇವತ್ತಿನ ಯಾವ ನಿರುಪಯುಕ್ತ ಕೋಲ್ಡ್ ಡ್ರಿಂಕ್ಸ್ ಗೂ ಸಾಟಿಯಾಗಲಾರದು. ಇನ್ನೊಂದು ವಿಶೇಷವೇನೆಂದರೆ ಶಾಲಾ ಸಹಪಠ್ಯ ಚಟುವಟಿಕೆ,ಪ್ರತಿಭಾಕಾರಂಜಿ ಕಾರ್ಯಕ್ರಮಗಳಿಗೆ ಹೋಗುವ ಮುನ್ನಾದಿನಗಳಲ್ಲಿ ಆ ಸಮಯದಲ್ಲಿ ಮುರುಗಲ ಹಣ್ಣು ಬಿಡುವ ಸೀಜನ್ ಆಗಿದ್ದರೆ ಪ್ರತಿ ಸ್ಪರ್ಧೆಯ ಹೆಸರು ಹೇಳಿ ಮೂರು ಕಲ್ಲುಗಳನ್ನು ಆಯ್ದು ಯಾವ ಕಲ್ಲಿಗೆ ಹಣ್ಣು ಬೀಳುತ್ತದೆಯೋ ಆ ಕಲ್ಲಿನ ಸ್ಥಾನ ಅಂದರೆ ಮೊದಲನೇ ಕಲ್ಲಿಗೆ ಹಣ್ಣು ಬಿದ್ದರೆ ಪ್ರಥಮ, ಎರಡನೇ ಕಲ್ಲಿಗಾದರೆ ದ್ವಿತಿಯ, ಮೂರನೆಯದಕ್ಕೆ ಆದರೆ ತೃತೀಯ, ಹಾಗೇ ಈ ಮೂರು ಕಲ್ಲಿಗೂ ಹಣ್ಣು ಬೀಳದಿದ್ದರೂ ನಿರಾಶೆಯಾಗುತಿರಲಿಲ್ಲ ಯಾಕೆಂದರೆ ಈ ಆಟ ಮೂರು ಕಲ್ಲುಗಳಿಂದ ಹಣ್ಣು ಕಾಯಿ ಬೀಳೋವರೆಗೂ ಪುನರಾವರ್ತನೆ ಆಗುತ್ತಲೇ ಇತ್ತು‌. ಇದು ಬಹುಪಾಲು ಸತ್ಯವೇ ಆಗುತ್ತಿತ್ತು. ಎಸೆಸೆಲ್ಸಿ ಫಲಿತಾಂಶದ ದಿನ ಶಾಲೆಗೆ ಪ್ರಥಮ ಸ್ಥಾನ ಪಡೆದು ಆ ಮರದ ಫಲಿತಾಂಶದ ಕುರಿತಾದ ಭವಿಷ್ಯ ಸತ್ಯವಾದಾಗ ಮರವನ್ನು ಅಪ್ಪಿ ಮುತ್ತಿಟ್ಟು ಅದರ ಬುಡದಲ್ಲಿ ಮೈಸೂರುಪಾಕು ಇಟ್ಟು “ನಿನಗೆ ಮೊದಲು ಕೊಟ್ಟಿದ್ದು ಹಾ ” ಅಂತ ಹೇಳಿ ಬಂದದ್ದು ನೆನಪಾಗುವಾಗ ಈಗ ಕೆನ್ನೆಗಳು ಅರಳುತ್ತವೆ. ಆದರೆ ನಿಷ್ಕಪಟ ಈ ಜ್ಯೋತಿಷಿ ಮರ ವಯಸ್ಸಾಗಿ ನಿಂತಾಗ ಜೋರಾದ ಮಳೆಗೆ ಗಾಳಿಗೆ ತನ್ನ ಎತ್ತರಕ್ಕೆ ತೂರಾಡುವುದು ಭಯಾನಕವಾಗುತ್ತಿತ್ತು. ಮರ ಬಿದ್ದರೆ ವಿದ್ಯುತ್ ತಂತಿ , ಕಂಬಗಳಿಗೆ , ಪಕ್ಕದ ಮನೆಯ ಕೊಟ್ಟಿಗೆಗೆ, ಹಾನಿಯಾಗುವ ಸಂಭವವು ಹೆಚ್ಚಾಗಿರುವ ಕಾರಣಕ್ಕೆ ಅದನ್ನು ಕಡಿಯುವಂತೆ ಹೆಚ್ವಿನ ಒತ್ತಡಗಳು ಬಹುದಿನದಿಂದ ಇದ್ದರೂ ಆ ಮರದೊಂದಿಗಿನ ಆಪ್ತತೆಯಿಂದ ಅದನ್ನು ಮುಂದೂಡುತ್ತಲೇ ಬರಲಾಗುತ್ತಿತ್ತು. ನನ್ನೆಲ್ಲಾ ಶಾಲಾ-ಕಾಲೇಜಿನ ಸ್ಪರ್ಧೆ, ಫಲಿತಾಂಶಗಳು, ಸ್ನೇಹ ಆತ್ಮೀಯತೆಗಳು ಕುರಿತಾದ ನಂಬಿಕೆಗಳು, ನೋವು-ನಲಿವುಗಳು, ಕೊನೆಗೆ ನೌಕರಿಯಂತಹ ವಿಷಯಗಳಲ್ಲಿ ಕೂಡಾ ಸತ್ಯ ಭವಿಷ್ಯವನ್ನೇ ನುಡಿದ ಈ ಮರ ನನ್ನೆದುರೇ ಕೊಡಲಿ ಪೆಟ್ಟು ತಿನ್ನುವುದನ್ನು ನೆನಪಿಸಿಕೊಂಡು ರಾತ್ರಿ ಅಪ್ಪಿ ಮುತ್ತಿಟ್ಟು ಮಾತಾಡಿ ಕ್ಷಮೆ ಕೇಳಿ ಬಂದೆ. ಬೆಳ್ಳಂಬೆಳಿಗ್ಗೆ ಮರ ಕಡಿಯುವವರು ಬಂದರು. ಯಾವುದೋ ಭಾವುಕತೆ. ಆಂತರ್ಯದಲ್ಲಿ ಈಜಲಾಗದೆ ಮುಳುಗುತ್ತಿರುವಂತೆ ಹಾದು ಹೋದಂತಾಯಿತು. ಕೇಲವೇ ತಾಸುಗಳಲ್ಲಿ ಹಲವಾರು ದಶಕಗಳನ್ನು ಕಂಡ ನನ್ನ ಪ್ರೀತಿಯ ಮುರುಗಲ ಮರ ನೆಲಕ್ಕುರುಳಿತು. ಇರುವಾಗ ಯಾರ ಶಾಪಕ್ಕೂ ಗುರಿಯಾಗದೇ, ನಾನು ನಿನ್ನೆದುರೇ ಈಗಲೂ ಯಾರಿಗೂ ತೊಂದರೆ ಕೊಡಲಾರೆನೆಂದು ಹೇಳುವಂತೆ ತನ್ನ ಬುಡದ ಕೆಳಗಿರುವ ಚಿಕ್ಕ ತೆಂಗಿನ ಸಸಿಗಳಿಗೂ ನೋವು ಕೊಡದೆ ನೆಲಕ್ಕುರುಳಿದ ಮರವನ್ನು ಕಿಟಕಿಯಲ್ಲಿ ಕಣ್ಣೀರಿಡುತ್ತಾ ನೋಡುತ್ತಿದ್ದ ನನಗೆ ಅದೇ ಅಚ್ಚಳಿಯದ ಮೊದಲ ಕಳೆದುಕೊಂಡ ನೋವಾಗಿ ಉಳಿಯಿತು. ಕತ್ತರಿಸಿದ ಮರದಿಂದ ಉದುರಿದ ಕಾಯಿ ಹಣ್ಣುಗಳನ್ನು ಆಯ್ದು ಅಕ್ಕಪಕ್ಕದ ಮನೆಯವರಿಗೆ ಪಾನಕ ಮಾಡಲು ನೀಡಿ ನಾವು ಪಾನಕ ಮಾಡಿ ಕುಡಿದೆವು. ವಿಷಾದದ ಅಲೆಯೊಂದು ಹಾಗೆ ಸುಳಿದಾಡುತ್ತಲೇ ಸಂಜೆಯವರೆಗೆ ಅದರ ಸ್ವಚ್ಛತೆ ಕಾರ್ಯ ಮುಂದುವರಿಯಿತು. ಆದರೂ ಇಂದಿಗೂ ತುಂಬಾ ನೋವಾದಾಗ ಅದು ನಿಂತ ಜಾಗದಲ್ಲೇ ನಿಂತು ಇಂದಿಗೂ ಕಣ್ಣೀರಿಡುವ ರೂಢಿ ಇದೆ. ಅಕ್ಕನ ಮದುವೆ ಮಾಡಿ ಕೊಟ್ಟು ಗಂಡನ ಮನೆತನಕ ಕಳಿಸಿಕೊಟ್ಟು ಬಂದ ನಂತರ ಒಮ್ಮೇಲೆ ಉಕ್ಕಿ ಬಂದ ಕಣ್ಣೀರಿಗೆ ಅವ್ಯಕ್ತವಾಗಿ ಆಪ್ತವಾಗಿ ಮರ ತಲೆನೇವರಿಸಿದಂತ ಅನಾಮಿಕ ಅನುಭವ ಆದದ್ದೂ ಇದೆ. ನಾವು ಎಷ್ಟೇ ಎತ್ತರಕ್ಕೆ ಇರುತ್ತೇವೆ ಎಂಬುದು ಮುಖ್ಯವಲ್ಲ ಎತ್ತರ ಏರಿದಾಗಲೂ ನಮ್ಮೊಡನೆ ನಾವು ನಮ್ಮವರೊಡನೆ ಹೇಗಿರಬೇಕು ಎಂದು ಪ್ರತ್ಯಕ್ಷ ಪರೋಕ್ಷವಾಗಿ ಪಾಠ ಬೋಧಿಸಿದ ಈ ಮರಗಳು ನೆನಪಿನ ಬದುಕಿನ ಸಂಚಾರದಲ್ಲಿ ಸಹಪಾಠಿಗಳಂತೆ ನಡೆದ ದಾರಿಯೇ ಒಳ್ಳೆಯದು ಅಂತ ಅಂದುಕೊಳ್ಳುವುದೊಂದೇ ಅಂತಿಮ ನಿರ್ಧಾರ.

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಸ್ವರ್ಗಸ್ತ ಅಜ್ಜಿಯ ಬಯಕೆ ಸಿ.ಎಚ್.ಮಧುಕುಮಾರ ನಾನೂ ಸ್ವರ್ಗಕ್ಕೆ ಹೋಗಿದ್ದೆ. ಅಲ್ಲಿ ನನ್ನಜ್ಜಿ ಮಾತಿಗೆ ಸಿಕ್ಕರು. ಮೊದಲಿನಂತೆ ದುಂಡನೆಯ ದೇಹವಿಲ್ಲ, ಸೊರಗಿ ಸಣಕಲಾಗಿದ್ದರು. ಅದೂ ಸ್ವರ್ಗದ ನಿವಾಸಿಯಾಗಿ! ಆತುರದಿಂದಲೇ ಪ್ರಶ್ನಿಸಿದೆ: ಯಾಕಜ್ಜಿ? ಒಂದು ಕಡೆ ಕುಂತ್ರು ಕೂರದ ಜೀವ ನಿನ್ನದು ಯಾರು ಎಷ್ಟೇ ಗೊಣಗಿದರೂ ನಿನ್ನಿಷ್ಟದಂತೆಯೇ ಬದುಕಿದವಳು ನೀನು ಇಲ್ಲಾದರೂ ನೆಮ್ಮದಿ ಕಾಣಬಾರದೆ? ಅಜ್ಜಿ ಹೇಳಿತು: ನನಗಿಲ್ಲಿ ಏನೂ ಕೊರತೆಯಿಲ್ಲ. ಮಕ್ಕಳು ಮೊಮ್ಮಕ್ಕಳ ಗಿಜಿಗಿಜಿ ಸದ್ದು ವಾರಗೆಯವರೊಂದಿಗಿನ ಒಡನಾಟ ಮನೆಮಂದಿ, ನೆಂಟರಿಷ್ಟರಿಗೆ ಊಟಕ್ಕಿಕ್ಕಿ ಉಂಡವರು ತೃಪ್ತಿಯಾಗಿ ತೇಗಿದ ಸದ್ದು ನನಗಿಲ್ಲಿ ಕೇಳುತ್ತಿಲ್ಲ! ಮತ್ತೆ ನನ್ನನ್ನು ನಿನ್ನೊಡನೆ ದಿನದ ಮಟ್ಟಿಗಾದರೂ ಕರೆದೊಯ್ಯುವೆಯ? *************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಿಗಲಾರದ ಅಳತೆ ವಸುಂದರಾ ಕದಲೂರು ನೀನು, ನಿನ್ನ ಕಣ್ಣು ಕೈ ಮನಸ್ಸು ನಾಲಗೆಗಳಲ್ಲಿ ಅಂದಾಜು ಪಟ್ಟಿ ಹಿಡಿದು ಅಳೆದೆ ಅಳೆದೆ ಅಳೆದೆ ಅಳೆಯುತ್ತಲೇ ಇದ್ದೀಯೆ.. ಸರಿ, ಅಳೆದುಕೋ ಹಾಗೆ ಅಳತೆಗೆ ದಕ್ಕುವುದಾದರೆ ನೀ ಅಳೆಯುವುದಾದರೂ ಏನನ್ನು! ಒಂದಷ್ಟು ಅಂದಾಜು ಸಿಗುವ ಗಾತ್ರ- ಗೋತ್ರ; ಉಬ್ಬುತಗ್ಗು ಅವಯವ- ಅವ್ವವ್ವಾ !! ಅಷ್ಟೇ. ಅಷ್ಟಕ್ಕೇ ನಿನಗೆ ದಕ್ಕಿಬಿಟ್ಟರೆ, ರೇ… ಅರೇ ಹೋಗು, ಅಳೆದುಕೋ ನಿನ್ನಾ ಅಳತೆಗೋಲು ಅಂದಾಜು ಶತಮಾನ ಹಳತು ಅದರ ಗೋಲು. ಮಾಡಿಕೊಂಡು ಬಂದದ್ದು ಬರೀ ರೋಲುಕಾಲು. ಅಳೆದೂ ಸುರಿದೂ; ಸುರಿದೂ ಅಳೆದೂ ಸರಕು ಎಂದೋ ಬರಿದಾದ ಒಂದು ಗುಜರಿ ಮಾಲು. ಅಕೋ.., ಅಳೆದು ಕೋ ನೀನು ಅಳೆದು ಕೋ.. ಖೋ.. ಖೋ.. ಹೋಗು ನೀ ಅತ್ತ, ನೀ ಸದಾ ಅತ್ತತ್ತ. ನಿನಗೆ ಈ ಅಳತೆ ಎಂಬುದು ಒಂದು ನಿಮಿತ್ತ. ಅಳತೆಯಿಂದ ಅವಳನು ಯಾರೂ ಗಿಟ್ಟಿಸಿಕೊಳಲಾಗದ್ದು ಎಂದೆಂದಿಗೂ ನಿಶ್ಚಿತ. ತಿಳಿ ಅಳತೆಗೆ ನಿಲುಕದ್ದು ಅಪಾರ ಅನೂಹ್ಯ ಅದೋ ಅವಳ ಚಿತ್ತ. ******

ಕಾವ್ಯಯಾನ Read Post »

ಇತರೆ

ಸಂತಾಪ

ಕನ್ನಡದ ಪ್ರಮುಖ ಕಥೆಗಾರ್ತಿ ಶಾಂತಾದೇವಿ ಕಣವಿಯವರು ಕನ್ನಡ ನಾಡಿನ ಪ್ರಮುಖ ಕಥೆಗಾರ್ತಿ,ಶುದ್ಧ ಕನ್ನಡ ಜನಪದ ಹೃದಯ ಶ್ರೀಮಂತಿಕೆಯ ಸಹಕಾರ ಮೂರ್ತಿ, ಲೇಖಕಿ,⁣ಹಿರಿಯ ಕವಿ, ವಾತ್ಸಲ್ಯಮಯಿ, ಸಮರಸವೇ ಜೀವನ ಎಂದು ಬಾಳು ಬದುಕಿದ ಕವಯಿತ್ರಿ. ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆ ವೈಶಿಷ್ಟ್ಯ ಸಾಕ್ಷಿಕರಿಸಿದ್ದ ಸಾಹಿತಿ ಶಾಂತಾದೇವಿ ಕಣವಿಯವರು.ಹಾಗಾಗಿ ಕನ್ನಡ ಸಾಹಿತ್ಯ ಲೋಕದ ಅನುಪಮ ದಂಪತಿಗಳಲ್ಲಿ ಪ್ರಮುಖವಾಗಿ ಬಂದು ನಿಲ್ಲುವ ಹೆಸರು ಶಾಂತಾದೇವಿ ಕಣವಿ ಮತ್ತು ಚನ್ನವೀರ ಕಣವಿಯವರು ಬಂಧುಗಳೆ. ಜನನ/ಜೀವನ : ವಿಜಾಪುರದಲ್ಲಿ 12-01-1933 ರಂದು ಸಿದ್ಧಬಸಪ್ಪ ಮತ್ತು ಭಾಗೀರಥಿದೇವಿ ದಂಪತಿಗಳ ಮಗಳಾಗಿ ಶಾಂತಾದೇವಿಯರು ಜನಿಸಿದರು. ಇವರ ಶಿಕ್ಷಣ ಪ್ರಾಥಮಿಕ ವಿದ್ಯಾಭ್ಯಾಸ ವಿಜಾಪುರದಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸ ರೋಣ ಹಾಗೂ ರಾಣಿ ಬೆನ್ನೂರು, ಬೈಲಹೊಂಗಲಗಳಲ್ಲಿ ಆಗಿರುತ್ತಿದೆ. ಶಾಂತಾದೇವಿಯವರಿಗೆ ಮನೆಯಲ್ಲಿದ್ದ ಸಾಂಸ್ಕೃತಿಕ ವಾತಾವರಣದಿಂದ ಸಹಜವಾಗೆಂಬಂತೆ ಸಾಹಿತ್ಯದ ಹುಚ್ಚು ಹೆಚ್ಚತೊಡಗಿತ್ತು. ಹಾಗಾಗಿ ಸಾಹಿತ್ಯದ ಹೆಚ್ಚಿನ ಒಲವು ಇದ್ದ ಕಾರಣದಿಂದ. ಮನೆಯಲ್ಲಿ ಇಂಗ್ಲಿಷ್, ಕನ್ನಡ ಪುಸ್ತಕಗಳ ದೊಡ್ಡ ಭಂಡಾರವನ್ನೇ ಹೊಂದಿದ್ದರು ಮತ್ತು ಶಾಂತಾದೇವಿ ಅವರಿಗೆ ತಂದೆಯಿಂದಲೇ ‘ಜೇನ್ ಆಸ್ಟಿನ್’ಳ ಕಾದಂಬರಿ ಕುರಿತು ಓದು – ಬರವಣಿಗೆಯ ಪರಿಚಯ ಬಹಳ ಆಗಿತ್ತು ಹಾಗೂ ಸಾಹಿತ್ಯ ಮತ್ತು ಅಧ್ಯಾತ್ಮ ಕೃತಿಗಳಿಗೆ ಮೊದಲ ಪ್ರಾಶಸ್ತ್ಯ ನೀಡುವ ಜೊತೆಗೆ ಹಿರಿಯ ಸಾಹಿತಿಗಳ ಮಾರ್ಗದರ್ಶನ ಸಹ ಇವರಿಗೆ ಲಭಿಸಿತು. ಹೀಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನಾ ಸೇವೆ ಮಾಡಲು ಉತ್ತೇಜನ ಪಡೆದರು ಎನ್ನಬಹುದು. ಇದಲ್ಲದೆ ಚಿಕ್ಕವರಿದ್ದಾಗ ತಂದೆ ತಾಯಿಯರಂತೆ ಭಾವಗೀತೆಗಳನ್ನು ಹಾಡುತ್ತಿದ್ದರು. ಧಾರವಾಡಕ್ಕೆ ಬಂದ ಮೇಲೆ ಆಕಾಶವಾಣಿಯಲ್ಲಿಯೂ ಹಾಡಿದರು. “ಭಾವಗೀತೆಯನ್ನು ಹಾಡಿದರೂ ಭಾವಜೀವಿಯಲ್ಲ ನಾನು ಎನ್ನುತ್ತಿದ್ದರು. ಹೀಗಾಗಿ ಕಥೆ ಬರೆಯುವುದನ್ನು ರೂಢಿಸಿಕೊಂಡೆ” ಎಂಬುದು ಅವರ ಸ್ವಯಂ ನುಡಿಯಾಗಿತ್ತು.ಇದೆ ಸಮಯದಲ್ಲಿ ಚನ್ನವೀರ ಕಣವಿಯವರೊಡನೆ ಮದುವೆ ನಿಶ್ಚಯ. ಓದಿಗೆ ವಿರಾಮ ನೀಡಿದರು.1952ರಲ್ಲಿ ಮದುವೆಯಾದ ನಂತರ ಪ್ರೇರಣೆ-ಬರವಣಿಗೆ. ಶಾಂತಾದೇವಿಯವರು ಬರೆದ ಹಲವಾರು ಕಥೆಗಳು ಪ್ರಕಟಿತ. ಓದುಗರಿಂದ ಪ್ರಶಂಸೆ, ಕಥೆಗಾರ್ತಿಯ ಉದಯ. ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಯಲ್ಲಿ ವೈಶಿಷ್ಟ್ಯಕಾಣುತ್ತೇವೆ. ಹಾಗೆ ಜಿ.ಬಿ. ಜೋಶಿಯವರ ಮನೋಹರ ಗ್ರಂಥಮಾಲೆಯ ‘ನಡೆದು ಬಂದ ದಾರಿ’ ಸಂಪುಟಕ್ಕಾಗಿ ಕೀರ್ತಿನಾಥ ಕುರ್ತಕೋಟಿಯವರು ಶಾಂತಾದೇವಿ ಅವರನ್ನು ಕಥೆ ಕೇಳಿದರು. ‘ಮಂಜು ಕರಗಿತು’ ಎಂದು ಕಥೆ ಕಳಿಸಿದರು. ದೊಡ್ಡ ದೊಡ್ಡ ಲೇಖಕರ ಜೊತೆಗೆ ತಮ್ಮ ಫೋಟೊ ಸಮೇತ ಕಥೆ ಪ್ರಕಟಗೊಂಡಾಗ ಶಾಂತಾದೇವಿ ಅವರಿಗೆ ಆದ ಆನಂದಕ್ಕೆ ಲಕ್ಕವಿಲ್ಲ. ಇದು ಅವರ ಪ್ರಥಮ ಹೆಜ್ಜೆ. ಅದೇ ಕಥೆಯನ್ನು ಮೈಸೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಡಾ.ಎನ್. ನಾಗಪ್ಪ ಅವರು ಹಿಂದಿಯಲ್ಲಿ ‘ಹಿಮ್ ಚಲ್ ಗಯಾ’ ಎಂದು ಅನುವಾದಿಸಿದ್ದು ಕೊಲ್ಕತ್ತದ ‘ಅಣಿಮಾ’ ಪತ್ರಿಕೆಯ ಪ್ರೇಮಾಂಕ ಎಂಬ ವಿಶೇಷ ಸಂಚಿಕೆಯಲ್ಲಿ ಫೋಟೊ ಸಹಿತ ಪ್ರಕಟಗೊಂಡಿತ್ತು. ಹೀಗೆ ಪ್ರಥಮ ಹೆಜ್ಜೆಯಲ್ಲೇ ಅವರ ಸಾಹಿತ್ಯ ಸೇವೆ ವಿಶಾಲವ್ಯಾಪ್ತಿ ಹರಡಿತ್ತು ಎಂದರೆ ತಪ್ಪಾಗಲಾರದು. ಸಾಹಿತ್ಯ ಸೇವೆ : ಸಾಮಾನ್ಯ ಮಹಿಳೆಯರ ಬದುಕನ್ನು ಕಥೆಗಳಲ್ಲಿ ಅನಾವರಣಗೊಳಿಸುತ್ತ, ಉತ್ತರ ಕರ್ನಾಟಕದ ಆಡುಭಾಷೆಯನ್ನು ಹಿಡಿದಿಟ್ಟವರು ಶಾಂತಾದೇವಿ ಕಣವಿರವರು.ಹಿಂದೆ ಮಹಿಳಾ ಸಾಹಿತ್ಯ ಎಂದು ಪ್ರತ್ಯೇಕಿಸುತ್ತಿದ್ದರು. ಈಗ ಪುರುಷರ ಸಮಾನವಾಗಿ ಲೇಖಕಿಯರು ಬರೆಯುತ್ತಿದ್ದಾರೆ. ಹೀಗಾಗಿ ಮಹಿಳಾ ಸಾಹಿತ್ಯ ಎನ್ನಬೇಕಿಲ್ಲ. ಜೊತೆಗೆ ಪ್ರತ್ಯೇಕವಾಗಿ ನೋಡಬೇಕಾದ ಅಗತ್ಯವಿಲ್ಲ ಎಂಬುದು ಶಾಂತಾದೇವಿ ಅವರ ಖಚಿತ ದೃಡ ನಿಲುವಾಗಿತ್ತು.ಸಾಹಿತ್ಯ ಕ್ಷೇತ್ರದಲ್ಲಿ ಶಾಂತಾದೇವಿ ಅವರ ಮೊದಲ ಕಥಾ ಸಂಕಲನ ‘ಸಂಜೆಮಲ್ಲಿಗೆ’ 1967ರಲ್ಲಿ ಪ್ರಕಟವಾಯಿತು. ಆಮೇಲೆ ‘ಬಯಲು ಆಲಯ’, ‘ಮರುವಿಚಾರ’, ‘ಜಾತ್ರೆ ಮುಗಿದಿತ್ತು’, ‘ಕಳಚಿ ಬಿದ್ದ ಪೈಜಣ’, ‘ನೀಲಿಮಾ ತೀರ’, ‘ಗಾಂಧಿ ಮಗಳು’ ಹಾಗೂ ‘ಈಚಿನ ಕಥೆಗಳು’ ಸಂಕಲನ ಪ್ರಕಟಗೊಂಡವು. ಸಮಗ್ರ ಕಥೆಗಳು ‘ಕಥಾಮಂಜರಿ’ (2002) ಹಾಗೂ ‘ಇನ್ನೊಂದು ಸಂಪುಟ’ (2005) ಎರಡು ಸಂಪುಟಗಳಲ್ಲಿ ಪ್ರಕಟಗೊಂಡವು. ಧಾರವಾಡ ಆಕಾಶವಾಣಿಯಲ್ಲಿ ಅವರ ಕಥೆ, ರೂಪಕ, ಕಿರುನಾಟಕ, ಹಾಸ್ಯ, ಕಥೆಗಳು ಪ್ರಸಾರಗೊಂಡವು. ಜೊತೆಗೆ ಹರಟೆಗಳ ಸಂಕಲನ ‘ಅಜಗಜಾಂತರ’ ಪ್ರಕಟಗೊಂಡಿತು. ನಿಜಗುಣ ಶಿವಯೋಗಿ ಮಕ್ಕಳ ಪುಸ್ತಕವಾಗಿ ಪ್ರಕಟಿತಗೊಂಡಿತು. ಹಾಗಾಗಿ ಅವರ ಕಥೆಗಳಲ್ಲಿ ತುಂಬ ಇಷ್ಟವಾದ ಕಥೆಗಳು, ಅವರು ಬರಹದಲ್ಲೂ ಕೂಡ ಕಾಣಬಹುದಾಗಿದೆ, ಪ್ರತಿ ಪಾತ್ರ, ಹಳ್ಳಿಯ ಹೆಣ್ಣು ಮಕ್ಕಳ ನೈಜ ಮುಗ್ಧತೆ, ಕಷ್ಟ, ಸಂಕಷ್ಟ, ಹೆಚ್ಚು ಕನಸಿರದ ಇದ್ದೊಂದು ಕನಸೂ ಕೈಗೂಡದ, ಈಗಲೂ ಜೀವಂತ ಪ್ರಸ್ತುತ ಅನ್ನುವ ಕಥೆಗಳಾಗಿವೆ ಜೊತೆಗೆ ಹಲವಾರು ಕಥೆಗಳು ಹಿಂದಿ, ಇಂಗ್ಲಿಷ್, ಮಲೆಯಾಳಂಗಳಿಗೆ ಭಾಷಾಂತರಗೊಂಡಿವೆ. ಪ್ರಮುಖ ಕೃತಿಗಳು ಹೀಗಿವೆ : ಕಥಾಸಂಕಲನ – ಸಂಜೆಮಲ್ಲಿಗೆ,ಬಯಲು—ಆಲಯ, ಮರುವಿಚಾರ,ಜಾತ್ರೆ ಮುಗಿದಿತ್ತು,ಕಳಚಿ ಬಿದ್ದ ಪೈಜಣ, ನೀಲಿ ಮಾ ತೀರ,ಗಾಂಧೀ ಮಗಳು. ಲಲಿತ ಪ್ರಬಂಧ – ಅಜಗಜಾಂತರ,ಮಕ್ಕಳ ಸಾಹಿತ್ಯ ನಿಜಗುಣಿ ಶಿವಯೋಗಿ. ಸಂಪಾದನೆ – ಪ್ರಶಾಂತ ಎನ್ನುವ ಕೃತಿಗಳು ನಾಡಿಗೆ ಅರ್ಪಣೆ ಮಾಡಿದ್ದಾರೆ. ಸಂಧ ಪ್ರಶಸ್ತಿ /ಗೌರವಗಳು : ಶಾಂತಾದೇವಿ ಕಣವಿ ಅವರ ‘ಬಯಲು-ಆಲಯ’ ಕಥಾಸಂಕಲನಕ್ಕೆ 1974ರ ಸಾಹಿತ್ಯ ಅಕಾಡಮಿ ಬಹುಮಾನ. 1987ರಲ್ಲಿ ಅಕಾಡಮಿ ಪ್ರಶಸ್ತಿ ಪುರಸ್ಕಾರ, ದಾನಚಿಂತಾಮಣಿ ಅತ್ತಿಮಬ್ಬೆ ಪುರಸ್ಕಾರವೂ ಸೇರಿದಂತೆ ಇನ್ನೂ ಇವರ ಸಾಹಿತ್ಯ ಸೇವೆಗೆ ಅನೇಕ ಗೌರವ ಸನ್ಮಾನಗಳು ದೊರಕಿವೆ. ಕೊನೆಯದಾಗಿ : ಶಾಂತದೇವಿಯವರ ಸಾಹಿತ್ಯದಲ್ಲಿ ಪ್ರಖರವಾಗಿ ಗುರುತಿಸಿಕೊಳ್ಳಬಹುದಾದ ಮೌಲ್ಯಾಧಾರಿತ ವೈಜ್ಞಾನಿಕ ವೈಚಾರಿಕ ಚಿಂತನೆಗಳ ವಿಚಾರಗಳು ಅವರ ಕೃತಿಗಳಲ್ಲಿ ನಾವೆಲ್ಲರೂ ಕಾಣಬಹುದಾಗಿದೆ.ಹೀಗಾಗಿ ಅವರ ಕೃತಿಗಳು ಇಂದಿನ ಸಮಾಜಕ್ಕೆ ಅತಿ ಅವಶ್ಯ ಹಾಗೂ ಮಾರ್ಗದರ್ಶನವಾಗಿವೆ. ಭಕ್ತಿಯ ನಮನ : ಕನ್ನಡ ಸಾಹಿತ್ಯ ಲೋಕಕ್ಕೆ ಶಾಂತಾದೇವಿ ಕಣವಿಯವರು ಬಹು ದೊಡ್ಡ ಶಕ್ತಿಯಾಗಿದ್ದರು.ಶಾಂತಾದೇವಿ ಕಣವಿಯವರ ಅಗಲಿಕೆ ದುಃಖ ತಂದಿದೆ. ಈ ದುಃಖವನ್ನು ತಾಳಿಕೊಳ್ಳುವ ಶಕ್ತಿ ಹಿರಿಯ ಸಾಹಿತಿ ಚೇತನರಾದ ಚನ್ನವೀರ ಕಣವಿಯವರಿಗೂ ಮತ್ತು ಕುಟುಂಬಕ್ಕೆ ಬರಲಿ. ಅಗಲಿದ ಮಹಾನ್ ಚೇತನಕ್ಕೆ ಅಂತರಾಳದ ಭಕ್ತಿಯ ನಮನಗಳು ಸಲ್ಲಿಸುತ್ತೇವೆ. ******** ಸಂಗಮೇಶ ಎನ್ ಜವಾದಿ

ಸಂತಾಪ Read Post »

You cannot copy content of this page

Scroll to Top