ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಈ ಬೆಳಗು ಎಂದಿನಂತಿಲ್ಲ ಈ ಬದುಕು ಎಂದಿನಂತಿಲ್ಲ ಅಲೆಗಳೆಷ್ಟು ಕ್ಷುಬ್ಧವಾಗಿವೆ ಈ ಕಡಲು ಎಂದಿನಂತಿಲ್ಲ ಮಧುಶಾಲೆಗೇ ಗರ ಬಡಿದು ಈ ಗುಟುಕು ಎಂದಿನಂತಿಲ್ಲ ಎಂಥ ಮರುಳಿತ್ತು ಸಂಜೆಯಲ್ಲಿ ಈ ಇರುಳು ಎಂದಿನಂತಿಲ್ಲ ಮುಖ ತಿರುಗಿಸಿ ನಡೆದಳಲ್ಲ ಯಾಕವಳು ಎಂದಿನಂತಿಲ್ಲ ಎದೆಯೂಟೆ ಬತ್ತಿಹೋಯಿತೇ ಈ ಮಡಿಲು ಎಂದಿನಂತಿಲ್ಲ ಬಾಂದಳಕೆ ಬೆಂಕಿ ಬಿದ್ದಿದೆ ಈ ಮುಗಿಲು ಎಂದಿನಂತಿಲ್ಲ ಸಾಂತ್ವನವ ಅರಸಿದೆ ‘ಜಂಗಮ’ ಈ ಹೆಗಲು ಎಂದಿನಂತಿಲ್ಲ ********

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಹಿಂದಿನ ಬೆಂಚಿನ ಹುಡುಗಿಯರು ಕೃತಿ: ಹಿಂದಿನ ಬೆಂಚಿನ ಹುಡುಗಿಯರು ಲೇಖಕಿ :- ಶೈಲಜಾ ಹಾಸನ  # ಸಾಬು :-             ತನಗೆಷ್ಟೇ ಕಷ್ಟಗಳಿದ್ದರೂ ಮಗ  ತನ್ನಂತೆ ಆಗಬಾರದೆಂದು ಹೊಟ್ಟೆ ಬಟ್ಟೆ ಕಟ್ಟಿ, ಬೀದಿ ಬೀದಿ ಅಲೆದು ಕಷ್ಟಪಟ್ಟು ಮಗನನ್ನು ದೊಡ್ಡ ವ್ಯಕ್ತಿ ಯಾಗಿಸುವ ತಂದೆ. ಇಳಿ ವಯಸ್ಸಿನಲ್ಲಿ ತನ್ನ ತಂದೆ ತಾಯಿಗೆ  ಮತ್ತೊಂದು ಮಗುವಾಗುವುದನ್ನು ಅರಿತು ಅವರನ್ನು ದೂರ ಮಾಡುವ ಮಗ. ಹುಟ್ಟಲಿರುವ ಮಗುವಿನ ಬದುಕನ್ನು ಕಟ್ಟಲು ಮತ್ತೆ ತನ್ನ ವೃದ್ಧಾಪ್ಯದಲ್ಲಿ ಪಾತ್ರೆ ಪಗಡೆ ಮಾರಾಟಕ್ಕೆ ಹೊರಡುವ ಅಪ್ಪ.          ಇಲ್ಲಿ ಯಾರದ್ದು  ಸರಿ ಯಾರದ್ದು  ತಪ್ಪು ಎಂದು ಏಳುವ ಪ್ರಶ್ನೆಗಳು. ಸುಂದರವಾಗಿ ಹೆಣೆಯಲ್ಪಟ್ಟ ಕಥೆ ಬಂದು ನಿಲ್ಲುವುದು ನೂರಾರು ಪ್ರಶ್ನೆಗಳನ್ನು ಓದುಗನ ಮನದಲ್ಲಿ ಹುಟ್ಟು ಹಾಕುತ್ತಾ.          ಸಾಬುವಿಗೆ ತನ್ನ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಇರುವವಳು ಗೌರಕ್ಕ. ಇಲ್ಲಿ ಜಾತಿ ಭೇದಗಳಿಂದ ಹೊರತಾಗಿ ಅರಳುವ ಮನಸ್ಸುಗಳು, ಸುಂದರ ಸ್ನೇಹ ಸಂಬಂಧಗಳನ್ನು ನಾವು ಕಾಣಬಹುದು.           ಹೌದು, ಮಾನವೀಯ ದೃಷ್ಟಿಯಿಂದ ಮಗನೇಕೆ ಅಪ್ಪನನ್ನು ತನ್ನೊಡನೆ ಇರಿಸಿಕೊಳ್ಳಬಾರದು?, ಅರಿವಿಲ್ಲದೆ ವೃದ್ಧಾಪ್ಯದಲ್ಲಿ ಕಾಲಿರಿಸುತ್ತಿರುವಾಗ ಮತ್ತೊಂದು ಮಗು ಹುಟ್ಟುವುದು ಅಕ್ಷಮ್ಯ ಅಪರಾಧವೇ?, ಸರಿ ಸಾಬುವಿನದು ಅವಿವೇಕವೇ ಅಂದುಕೊಳ್ಳೋಣ ,ಆಗಿ ಹೋದ ಕಾರ್ಯಕ್ಕೆ ಏನು ಮಾಡಲು ಸಾಧ್ಯ?, ಇವೆಲ್ಲದರ ನಡುವೆ ಜಗತ್ತಿಗೆ ಕಾಲಿರಿಸಿ ಹೊರಟ ಮುಗ್ಧ ಜೀವದ ತಪ್ಪೇನು? ಹೀಗೆ ಕತೆಯನ್ನು ಓದಿದ ನಂತರ ಹುಟ್ಟಿಕೊಳ್ಳುವ ಹತ್ತು ಹಲವಾರು ಪ್ರಶ್ನೆಗಳು. # .ಮೌನ ಮನದ ವೀಣೆ :-                ಪ್ರೀತಿಯಂತಹ ವಿಚಾರ ಬಂದಾಗ ಮನಸ್ಸುಗಳು ಒಡೆದು, ಹೆತ್ತವರು ಹಾಗೂ ಮಕ್ಕಳ ನಡುವೆ ಕಿತ್ತಾಟ ನಡೆದು, ಮಕ್ಕಳು ಹೆತ್ತವರನ್ನು ತೊರೆದು ಸಾಗುವ ದೃಶ್ಯವೇ ಎಲ್ಲೆಡೆ ಕಾಣ ಸಿಗುವುದು. ಆದರೆ ಇಲ್ಲಿ ಕಥೆಯಲ್ಲಿ ಮಗನೆನಿಸಿಕೊಂಡವ ಪ್ರೀತಿಸಿ ಮದುವೆಯಾದರೂ, ತಾಯಿ ಅವನ ಬಳಿ ಮಾತೇ ಆಡದೆ ಇದ್ದರೂ, ಅವನು ಮಾತ್ರ ತನ್ನೆಲ್ಲ ದಿನಚರಿ, ಹೆಂಡತಿ ಮಗುವಿನ ಜತೆಗಿನ ಒಡನಾಟ ಎಲ್ಲವನ್ನೂ ವರದಿ ಒಪ್ಪಿಸುತ್ತಿರುತ್ತಾನೆ. ಆದರೆ ಆ ಅಮ್ಮನೆಂಬ ದೇವತೆ ಮಾತ್ರ ಕಲ್ಲು ಆಗಿರುತ್ತಾಳೆ. ಇಲ್ಲಿ ಅವಳೇಕೆ ಅವಳ ಮನಸ್ಸಿನಲ್ಲಿರುವ ಬಿಗುಮಾನವನ್ನು  ಮರೆತು ಮಗನನ್ನು ಸ್ವೀಕರಿಸಬಾರದು ಅನ್ನುವ ಪ್ರಶ್ನೆ ಏಳುತ್ತದೆ. ಮಗನಾದರೂ ಅಷ್ಟೇ ತನ್ನ ಹೆಂಡತಿ ಮಗುವನ್ನು ಜೊತೆಗೆ ಕರೆದುಕೊಂಡು ಹೋಗಿ ಅಮ್ಮನನ್ನು ಓಲೈಸಿ ಸಂತೈಸ ಬಾರದೆ?. ಹಠವೆಂಬುದು ಹಾಗೇನೇ ಮನಗಳನ್ನು ಸೇರಿಕೊಂಡ ಬಳಿಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಸಾಗುತ್ತದೆ. ಒಮ್ಮೆ ಆವರಿಸಿ ದಲ್ಲಿ ಅದರ ಹಿಡಿತದಿಂದ ಹೊರಬರುವುದು ಕಷ್ಟ.           ಬಾಲ್ಯದಲ್ಲಿ ತಾನು ಇಷ್ಟಪಡದ ವಿಚಾರವನ್ನೇ ಅವನ ಮಗಳು ಬಹಳ ಇಷ್ಟಪಟ್ಟಾಗ ಕಥಾನಾಯಕನಿಗೆ ಅದು ಅಪ್ಯಾಯಮಾನವಾಗುತ್ತದೆ. ಆದರೆ ಚಿಕ್ಕವನಿರುವಾಗ ಆ ವಿಚಾರ ಅವನಮ್ಮ ಇಷ್ಟಪಟ್ಟಾಗ ಅವಳು ಅದರಿಂದ ವಿಮುಖಳಾಗುವಷ್ಟು ಹಠ ಹಿಡಿದು ಅವಳು ಅದರ ಪ್ರತಿ ಆಕರ್ಷಿತಳಾಗದಂತೆ  ಹಠ ಹೂಡಿರುತ್ತಾನೆ. ಇಲ್ಲಿ ಸ್ಪಷ್ಟವಾಗಿ ಕಾಣುತ್ತಿರುವುದು ಪ್ರತಿಯೊಬ್ಬನ ಸ್ವಾರ್ಥ. ” ಮೌನ ಮನದ ವೀಣೆಯ ಝೇಂಕಾರ, ಕೇಳದಷ್ಟು ಹೃನ್ಮನಗಳಿಲ್ಲಿ ದೂರ, ಬದುಕೋ…  ಸ್ವಾರ್ಥ,  ಹಠ,  ಛಲಗಳೇ ತುಂಬಿ ಭೋರ್ಗರೆಯೋ ಸಾಗರ, ಆಗಿರಲು ಹೇಗಾದೀತು ಪ್ರೀತಿ, ಪ್ರೇಮ,  ಮಮತೆಯ ತಂಗಾಳಿಯ ಸಂಚಾರ??? “. #. ಹಿಂದಿನ ಬೆಂಚಿನ ಹುಡುಗಿಯರು :-           ಹದಿ ಹರೆಯ ಕಾಲಿಡುವ ಹೊತ್ತಿನ ಬದುಕಿನ ಅನಾವರಣ. ಹೆಣ್ಣು ಹೂವಂತೆ, ಅರಳುವ ಪ್ರಾಯದ ತವಕ, ತಲ್ಲಣ, ಅರೆ ಬಲಿತ ಮನಸ್ಸುಗಳು ಹೇಗಿರುತ್ತವೆ ಅನ್ನುವುದರ ಕುರಿತಾದ ವಿವರ. ಮುಗ್ಧತೆಯ ಪರಮಾವಧಿಯ ವಯಸ್ಸು .ಒಳಿತು ಕೆಡುಕಿನ ನಡುವಿನ ವ್ಯತ್ಯಾಸ ಅರಿಯದ ಪ್ರಾಯ. ಶಾಲೆಯಂತಹ ದೇಗುಲದಲ್ಲಿ ಎಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇರುತ್ತಾರೆ ಹಾಗೂ ಗೋಮುಖ ವ್ಯಾಘ್ರ ದಂತಹ ಮುಖವಾಡಧಾರಿ ಅಧ್ಯಾಪಕರುಗಳು ಇರುತ್ತಾರೆ ಅನ್ನುವುದನ್ನು ಬಯಲಾಗಿಸುವ ಕಥೆ. ಗುರುವೆಂದರೆ ದೇವರ ಸಮಾನ. ಆದರೆ ಈ ಗೌರವವನ್ನು ಉಳಿಸಿಕೊಳ್ಳುವಂತಹ ಯೋಗ್ಯತೆ ಹಲವರಲ್ಲಿ ಇರುವುದಿಲ್ಲ. ಏನೂ ಅರಿಯದ ಮುಗ್ಧ ಹೂವುಗಳು ಅರಳುವ ಮುನ್ನವೇ ಕಮರುವಂತೆ ಮಾಡುವ ರಾಕ್ಷಸರು ಬಹಳ ಮಂದಿ ಇರುತ್ತಾರೆ ಗುರುವಿನ ರೂಪದಲ್ಲಿ. ಇವತ್ತಿನ ದಿನಗಳಲ್ಲಿ ಇಂತಹ ಸಮಸ್ಯೆ ಬಹಳ ಹೆಚ್ಚಾಗಿದೆ. “ಹಿಂದಿನ ಬೆಂಚಿನ ಹುಡುಗಿಯರು” ಕಥೆಯ ಮೂಲಕ ಇಲ್ಲಿ ಲೇಖಕಿ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಊರುಗಳ ಶಾಲೆಗಳಲ್ಲಿ ಕಾಣ ಸಿಗುವಂತಹ ಒಂದು ಸಾಮಾಜಿಕ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ್ದಾರೆ. ವಿದ್ಯೆ ಹೇಳಿಕೊಡುವ ಗುರುವೇ ಕಾಮ ಪಿಪಾಸುವಾದರೆ ಏನು ಮಾಡಬಹುದು….?         ಹದಿಹರೆಯದ ವಯಸ್ಸೇ ಹಾಗೆ ಎಲ್ಲದರಲ್ಲೂ ಕುತೂಹಲ, ಏನೂ ಅರಿಯದ ಪ್ರಾಯ ಈ ವಯಸ್ಸಲ್ಲಿ ಬದುಕು ಹಳಿ ತಪ್ಪಿದರೆ ಮುಂದೆ ಬಾಳು ನರಕ ದೃಶ್ಯವೇ ಸರಿ. #. ಎಲ್ಡು ಕೊಡ ನೀರು :-             ಕೆಲವು ಬಡವರ ಬೀದಿಗಳಲ್ಲಿ ಕುಡಿಯುವ ನೀರಿನ ಬವಣೆ ಎಷ್ಟಿದೆ ಎನ್ನುವ ಚಿತ್ರಣವನ್ನು ಓದುಗರ ಕಣ್ಣ ಮುಂದೆ ಬಿಚ್ಚಿಡುವ ಕಥೆ. ಎರಡು ಕೊಡ ನೀರು ಒಂದು ಜೀವವನ್ನು ಬಲಿ ಪಡೆದ ಘಟನೆ ಹೃದಯವಿದ್ರಾವಕ . ಇಲ್ಲಿ ಜನರ ಅನಾಗರಿಕ ವರ್ತನೆ ಅಷ್ಟೇ ಅಲ್ಲ, ಕೆಳವರ್ಗದವರ ಮೇಲೆ ಮೇಲ್ವರ್ಗದ ಜನ ನಡೆಸುವ ದೌರ್ಜನ್ಯ, ಶೋಷಣೆ, ದರ್ಪ ಎಷ್ಟೆಂಬುದು ಅನಾವರಣಗೊಳ್ಳುತ್ತ ಸಾಗುತ್ತದೆ. ಉಳ್ಳವರು ಇಲ್ಲದವರನ್ನು ಕಾಡುವ ಪರಿ ಕಣ್ಣಿಗೆ ಕಟ್ಟುತ್ತದೆ. ಎರಡು ಕೊಡ ನೀರು ಪಡೆದಿದ್ದನ್ನು ಮಹಾಪರಾಧ ಆಗಿಸಿ ಇಡೀ ಊರನ್ನು ಸ್ಮಶಾನ ವಾಗಿಸಿದ ಜನರ ಅವಿವೇಕ ಕಥೆಯಲ್ಲಿ ತೆರೆದುಕೊಳ್ಳುತ್ತ ಸಾಗುತ್ತದೆ.         ಒಂದು ಸಣ್ಣ ವಿಷಯ ಹೇಗೆ ಇಡೀ ಊರಿಗೆ  ಊರನ್ನೇ ಭಸ್ಮವಾಗಿಸಬಲ್ಲದು ಅನ್ನುವ ವಾಸ್ತವವನ್ನು ಶೈಲಜಾ ಅವರು ತಮ್ಮ ಕಥೆಯ ಮೂಲಕ ಓದುಗರಿಗೆ ಮನದಟ್ಟಾಗುವ ಪ್ರಯತ್ನವನ್ನು ಮಾಡಿದ್ದಾರೆ. ಇದು ಈ ಜಗತ್ತಿನ ಇವತ್ತಿನ ಸತ್ಯ ಕೂಡ. #. ತುಮುಲ :-             “ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ”- ಅನ್ನುವ ದಾಸರ ಪದವನ್ನು ಜ್ಞಾಪಿಸುವ ಕಥೆ. ಈ ಜಗದಲ್ಲಿ ಪ್ರತಿಯೊಬ್ಬನೂ ಸ್ವಾರ್ಥಿಯೆ. ಎಲ್ಲರೂ ಅವರವರದೇ ಆದ ಮನೆ ಸಂಸಾರವನ್ನು ಕಟ್ಟಿಕೊಂಡಿರುತ್ತಾರೆ. ಇಲ್ಲಿ ಯಾರೂ ಯಾರ ಜವಾಬ್ದಾರಿಯನ್ನು ಹೊರಲು ತಯಾರಿರುವುದಿಲ್ಲ. ತನ್ನ ಕೆಲಸವಾಗ ಬೇಕಾದಲ್ಲಿ ಮಾತ್ರ ಇನ್ನೊಬ್ಬರ ನೆನಪಾಗುವುದು ಇಲ್ಲಿ. ಅದಾದ ಮೇಲೆ ನೀನ್ಯಾರೋ ನಾನ್ಯಾರೋ. ಬದುಕೆಂಬ ಸಂತೆಯಲ್ಲಿ ಪ್ರೀತಿ, ವಿಶ್ವಾಸ, ಅಂತಃ ಕರಣಗಳೆಲ್ಲ ಸೀಮಿತ ಪರಿಧಿಯೊಳಗಷ್ಟೇ ಇದೆ. ಆ ರೇಖೆಯನ್ನು ದಾಟಿ ಇವೆಲ್ಲೂ ಕಾಣಸಿಗವು. ಅತಿಯಾದ ನಿರೀಕ್ಷೆಯನ್ನು ಇಲ್ಲಿ ಯಾರ ಮೇಲೂ ಇಡುವಂತಿಲ್ಲ. ಈ ಎಲ್ಲಾ ಸಂದೇಶಗಳನ್ನು ತನ್ನೊಳಗೆ ಅಡಗಿಸಿಕೊಂಡಿರುವ ಕಥೆ “ತುಮುಲ “. #. ಅಮ್ಮ :-          ಅತ್ತೆಯೂ ಅಮ್ಮನಾಗಿ ಸೊಸೆಯನ್ನು ಮಗಳಂತೆ ಕಾಣಬಲ್ಲಳು ಅನ್ನುವುದನ್ನು ಪರಿಚಯಿಸುವ ಮನ ಮಿಡಿಯುವಂತೆ ಕಥೆ. ಅತ್ತೆ ಸೊಸೆಯ ಸಂಬಂಧವೆಂದರೆ ಎಣ್ಣೆ ಸಿಗೇಕಾಯಿ ಅನ್ನುವ ಭಾವ ಎಲ್ಲರಲ್ಲೂ. ಹೊಂದಿಕೊಂಡು ಹೋಗುವುದಿಲ್ಲ ಇಬ್ಬರು ಅನ್ನುವ ಅಭಿಪ್ರಾಯ. ಆದರೆ ಇದು ಸುಳ್ಳು. ಹೊಂದಾಣಿಕೆಯ ಸೂತ್ರ ಯಾವ ಮನಗಳಲ್ಲಿ ಗಟ್ಟಿಯಾಗಿ ನೆಲೆಯೂರುತ್ತದೊ ಅಂತಹವರು ಎಲ್ಲ ಕಡೆ ಅನುಸರಿಸಿಕೊಂಡು ಸಂಬಂಧಗಳನ್ನು ಬೆಸೆಯುತ್ತಾ ಸಾಗುತ್ತಾರೆ. ಅತ್ತೆಯಾಗುವ ಮೊದಲು ಅವಳು ಒಬ್ಬ ಸೊಸೆಯಾಗಿರುತ್ತಾಳೆ. ಸಾಕಷ್ಟು ಆಗು ಹೋಗುಗಳನ್ನು ಕಂಡಿರುತ್ತಾಳೆ. ಹಾಗಾಗಿ ತನಗೆ ಸೊಸೆಯಾಗಿ ಬಂದವಳನ್ನು ಅವಳು ಹೇಗೆ ಮಗಳಂತೆ ಕಾಣದೇ ಇರಲು ಸಾಧ್ಯ ?. ಎಲ್ಲ ಘಟನೆಗಳಿಗೂ ಆಯಾಯ ಸಂದರ್ಭವೇ ಕಾರಣ ಹೊರತು ಮನುಷ್ಯರಲ್ಲ. ಸೊಸೆಯಾದವಳು ಅತ್ತೆಯನ್ನು ಅಮ್ಮನಂತೆ ಪ್ರೀತಿಸಿದಾಗ ಅತ್ತೆ ಅವಳನ್ನು ಮಗಳಂತೆ ಕಾಣುತ್ತಾಳೆ. ಭಿನ್ನಾಭಿಪ್ರಾಯಗಳು ಮೂಡದ ಮನಗಳಿಲ್ಲ, ಮನೆಗಳಿಲ್ಲ. ಆದರೆ ಈ ಭಿನ್ನಾಭಿಪ್ರಾಯವನ್ನು ಪರಿಹರಿಸುವಲ್ಲಿ ಹೊಂದಾಣಿಕೆಯೇ ಮೂಲ ಸೂತ್ರ. ಪ್ರೀತಿ ವಾತ್ಸಲ್ಯ ಎಂತಹ ಮನಸ್ಸುಗಳನ್ನು ಬದಲಾಯಿಸಬಲ್ಲುದು ಅನ್ನುವುದೇ ಸತ್ಯ. #. ವಿಪರ್ಯಾಸ :-           ಸ್ವಾರ್ಥ ಮನುಷ್ಯನನ್ನು ಅವನ ಮನುಷ್ಯತ್ವವನ್ನು ಯಾವ ಮಟ್ಟಿಗೆ ಬದಲಾಯಿಸುತ್ತದೆ ಅನ್ನುವ ಪ್ರಶ್ನೆಯನ್ನು ಮನಸ್ಸಲ್ಲಿ ಎಬ್ಬಿಸಿದ ಒಂದು ಕಥೆ ಇದು. ತನ್ನ  ಬಳಿ ಇಲ್ಲದೇ ಇದ್ದಾಗ ಯಾವ ವಿಚಾರವೇ ಇರಲಿ ಅದು ಬೇರೆಡೆಯಿಂದ ದೊರೆತಾಗ ದೊಡ್ಡ ನಿಧಿ ದೊರೆತ ಅನುಭವ. ಆದರೆ ಅದುವೇ ವಸ್ತು, ವ್ಯಕ್ತಿ ಅಥವಾ ಯಾವುದೇ ವಿಚಾರ ಇರಬಹುದು ತನ್ನ ಸ್ವಂತದ್ದು ದೊರೆತಾಗ ಈ ಸಿಕ್ಕಿದ್ದಕ್ಕೆ ಯಾವ ಬೆಲೆಯೂ ಇಲ್ಲ. ಮಾನವ ಯಾಕೆ ಹೀಗೆ ಸಂಕುಚಿತ ಗುಣ ಸ್ವಾರ್ಥಪರ ನಾಗುತ್ತಾನೆ ಎಂದು ಕಾಡುವ ಪ್ರಶ್ನೆ …. #. ದಾರಿ ಯಾವುದಯ್ಯ :-            ಕಣ್ಣಿಗಂಟಿದ ಭ್ರಮೆಯ ಪರದೆ ಸರಿದಾಗ ವಾಸ್ತವದ ದರ್ಶನ. ಈ ವಿಶಾಲ ಜಗತ್ತಲ್ಲಿ ಯಾರೂ ಒಬ್ಬಂಟಿಯಲ್ಲ. ಎಲ್ಲರಿಗೂ ಒಂದಲ್ಲ ಒಂದು ಆಸರೆ ದೊರೆತೇ ದೊರೆಯುತ್ತದೆ. ಎಲ್ಲವೂ ಕಾಲದ ಮೇಲೆ ಅವಲಂಬಿತ. ಇಲ್ಲಿ ಎಲ್ಲವೂ ನಾನೇ ಎಲ್ಲವೂ ನನ್ನಿಂದಲೇ ಅನ್ನುವುದು ಸುಳ್ಳು. #. ಚಂದೂ ಮಾಮ:-            ಎಲ್ಲರನ್ನು ಅತಿಯಾಗಿ ಪ್ರೀತಿಸಿ ನಂಬುವ ವ್ಯಕ್ತಿ. ಅಷ್ಟೇ ಪ್ರೀತಿ ಮರಳಿ ಸಿಗಬೇಕೆಂಬ ನಿರೀಕ್ಷೆ. ಈ ನಿರೀಕ್ಷೆಯೇ ಅವನನ್ನು ಸಾವಿನ ಮನೆಯ ಬಾಗಿಲನ್ನು ತಟ್ಟುವಂತೆ ಮಾಡಿದ್ದು ದುರಂತ. ಇವತ್ತಿದ್ದ ವ್ಯಕ್ತಿ ನಾಳೆಯೂ ಇರುತ್ತಾನೆ ಎಂಬ ನಂಬಿಕೆ ಇಲ್ಲ, ನಾಳೆ ಅಲ್ಲ ಮತ್ತೊಂದು ಕ್ಷಣವೇ ಏನು ಬೇಕಾದರೂ ಆಗಬಹುದು. ಹಾಗಾಗಿ ಮಾಡಬೇಕು ಮಾತಾಡಬೇಕು ಅನ್ನಿಸಿದ್ದನ್ನು ಕೂಡಲೇ ನಮ್ಮ ಹಮ್ಮನ್ನು ತೊರೆದು ತಮ್ಮ ಆಪ್ತರೊಡನೆ ಆಡಿ ಮುಗಿಸಬೇಕು. ಇನ್ನೊಂದು ಕ್ಷಣ ಇಲ್ಲಿ ಏನಾಗುವುದೆಂದು ಯಾರಿಗೂ ಗೊತ್ತಿಲ್ಲ. ಕೊನೆಯಲ್ಲಿ ಉಳಿಯುವುದು ಪಶ್ಚಾತ್ತಾಪ ಮಾತ್ರ. #. ಆಳ :-            ಕಥಾ ಸಂಕಲನದ ಕೊನೆಯ ಕಥೆ. ಬಹಳ ಹಿಂದಿನಿಂದಲೂ ತನ್ನನ್ನು ತಾನು ಕಾಪಾಡಿಕೊಳ್ಳುವಲ್ಲಿ ಹೆಣ್ಣಾದವಳ ಹೋರಾಟ ಬಹಳ ದೊಡ್ಡದು. ಅವಳು ಈ ನಿಟ್ಟಿನಲ್ಲಿ ಅನುಭವಿಸುವ ಯಾತನೆ, ನೋವು, ಕಷ್ಟ, ಅವಮಾನಗಳು, ಹಿಂಸೆ ಲೆಕ್ಕವಿಲ್ಲದಷ್ಟು. ಹಿಂದಿನಿಂದಲೂ ಹೆಣ್ಣು ಒಂದಲ್ಲ ಒಂದು ವಿಧದಲ್ಲಿ ಶೋಷಣೆಗೆ ಒಳಗಾಗುತ್ತಾ ಬಂದಿದ್ದಾಳೆ. ಗಂಡಿನ ದೃಷ್ಟಿಯಲ್ಲಿ ಹೆಣ್ಣೆಂದರೆ ಭೋಗದ ವಸ್ತು. ಹೂವಿನಂತಹ ಅವಳನ್ನು ಹೆಜ್ಜೆ ಹೆಜ್ಜೆಗೂ ಕ್ರೂರಿಯಾಗಿ ಹೊಸಕಿ ಹಾಕುವ ಪ್ರಯತ್ನಗಳೇ ಹಲವು ಕಡೆ. ಇದರಿಂದ ತಪ್ಪಿಸಿಕೊಳ್ಳಲು ಅವಳು ನಡೆಸುವ ಹೋರಾಟ ಹೆಣಗಾಟಗಳು ಅವೆಷ್ಟೋ . ಅಪ್ಪ, ಅಣ್ಣ ತಮ್ಮ ಅನ್ನಿಸಿಕೊಂಡವರು ಕೂಡ ತಮ್ಮ ಮಗಳು, ತಂಗಿ, ಅಕ್ಕನನ್ನು ಕಾಮದ  ತೃಷೆಗೆ ಬಲಿ ಕೊಡುವಂತಹ  ಅವೆಷ್ಟೋ ಜೀವಂತ ಉದಾಹರಣೆಗಳು ಕಣ್ಣ ಮುಂದೆ ಬರುತ್ತವೆ. ಇಂತಹುದೇ ಕ್ರೂರ ಮೃಗಗಳ ಕೈಯಿಂದ ತಪ್ಪಿಸಿಕೊಂಡು ಬದುಕಲು ಹಾತೊರೆಯುವ ಒಂದು ಹೆಣ್ಣಿನ ಕಥೆ “ಆಳ “.                 ಶೈಲಜಾ ಅವರು ಎಲ್ಲಿಯೂ ತಮ್ಮ ಕಥೆಗಳಲ್ಲಿ ಆ ಘಟನೆಗಳಿಗೆ ಸಂಬಂಧಿಸಿದಂತೆ ತಮ್ಮ ಅನಿಸಿಕೆ, ತೀರ್ಪನ್ನು ನೀಡಿಲ್ಲ. ಎಲ್ಲವನ್ನೂ ಓದುಗರ ಅರಿವಿಗೆ ಬಿಟ್ಟಿದ್ದಾರೆ. ಆದರೆ ವಾಸ್ತವಗಳನ್ನು ಬಹಳ ಚೆನ್ನಾಗಿ ತೆರೆದಿಟ್ಟಿದ್ದಾರೆ. ನಮ್ಮ ಸುತ್ತಮುತ್ತಲಿನ ಆಗು ಹೋಗುಗಳನ್ನು ಒಳಗೊಂಡಿರುವಂತಹ ಸುಂದರ ಕಥಾಸಂಕಲನ- “ಹಿಂದಿನ ಬೆಂಚಿನ ಹುಡುಗಿಯರು”.  ಇಲ್ಲಿನ ಪ್ರತಿಯೊಂದು ಬರಹವೂ, ಕಥೆಯೂ ಬಹಳ ಸರಳವಾಗಿದೆ ಹಾಗೂ ಓದುಗರ ಮನಸ್ಸನ್ನು ತಟ್ಟುವಂತಿದೆ. ********** ನಯನ ಬಜಕೂಡ್ಲು        

ಪುಸ್ತಕ ಸಂಗಾತಿ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಗಝಲ್

ಗಝಲ್ ತೇಜಾವತಿ ಹೆಚ್.ಡಿ. ಗಝಲ್ ಕನಿಷ್ಠ ಕೂಲಿಗಾಗಿ ಮೈಯೊಳು ಬೆವರ ಹರಿಸುವೆವು ಕಾರ್ಮಿಕರು ನಾವು ಒಂದ್ಹೊತ್ತಿನ ಗಂಜಿಗಾಗಿ ಶ್ರಮದ ಬದುಕ ಸಾಗಿಸುವೆವು ಕಾರ್ಮಿಕರು ನಾವು ಕರ್ತವ್ಯ ನಿಷ್ಠೆಯಲಿ ಹಗಲಿರುಳೆನ್ನದೆ ಸ್ವಾರ್ಥವ ತೊರೆದು ಹೋರಾಡುವೆವು ಬಿಸಿಲು ಮಳೆ ಗಾಳಿಗೆ ಜಗ್ಗದೆ ತನುವ ಒಡ್ದುವೆವು ಕಾರ್ಮಿಕರು ನಾವು ಮಲಗಲು ಸೂರಿಲ್ಲದೆ ಮೈಗೆ ಹೊದಿಕೆಯಿಲ್ಲದೆ ಚಳಿಗೆ ನಲುಗಿದರೂ ಒಡೆಯನಿಗೆ ಸುಸಜ್ಜಿತ ಅರಮನೆ ನಿರ್ಮಿಸುವೆವು ಕಾರ್ಮಿಕರು ನಾವು ಕೃಷಿಯನ್ನೇ ನಂಬಿ ಮುಗಿಲನ್ನು ನೋಡುತ ಮಳೆಯ ಕಾಯುವೆವು ದೇಶಕ್ಕಾಗಿ ಹೊಲವ ಉತ್ತು ಅನ್ನವ ಬೆಳೆಯುವೆವು ಕಾರ್ಮಿಕರು ನಾವು ಪೌರರಾಗಿ ಸಮಯ ಪಾಲಿಸಿ ಕಾಯಕವೇ ಕೈಲಾಸ ತತ್ವದೊಳು ಸ್ವಚ್ಛತೆಯ ಮಹತ್ವ ಸಾರುತ ಬದುಕುವೆವು ಕಾರ್ಮಿಕರು ನಾವು ಅಪಾಯವೇ ಇರಲಿ ಪ್ರಾಣವೇ ಹೋಗಲಿ ಹಂಗು ತೊರೆದು ಬಾಳುವೆವು ಅದರಲ್ಲೇ ಸಾರ್ಥಕ ದಿನಗಳ ದೂಡುವೆವು ಕಾರ್ಮಿಕರು ನಾವು ಜನ ನಾಯಕ ಸರ್ಕಾರ ಸಮಸ್ಯೆಯ ಆಲಿಸಿ ಸ್ಪಂದಿಸದಿದ್ದರೂ ಸರಿಯೇ ಮಾನವೀಯ ತೇಜಸ್ಸಿನೊಂದಿಗೆ ನಮ್ಮಯ ಗುಣವ ಮೆರೆಯುವೆವು ಕಾರ್ಮಿಕರು ನಾವು *********

ಕಾರ್ಮಿಕ ದಿನದ ವಿಶೇಷ-ಗಝಲ್ Read Post »

ಇತರೆ

ಕಾರ್ಮಿಕ ದಿನದ ವಿಶೇಷ-ಬರಹ

ಮೇ 1 ಚಿಂತನೆ- ಚಿಂತೆಗಳು ಪೂರ್ಣಿಮಾ ಸುರೇಶ್ ಮೇ 1 ಚಿಂತನೆ- ಚಿಂತೆಗಳು ಮೇ ದಿನ ಅಂದರೆ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ, (ಅಂತರರಾಷ್ಟ್ರೀಯ ಶೃಮಿಕ ದಿನಾಚರಣೆಯೂ ಹೌದು )ವರ್ಗ ಹೋರಾಟಗಳ ವಾರ್ಷಿಕ ದಿನಾಚರಣೆಯಾಗಿ ಕಾರ್ಮಿಕ ವರ್ಗ ಆಚರಿಸುತ್ತಿದ್ದಾರೆ. ಕಾರ್ಮಿಕರ ಸಭೆ, ವಿಚಾರಗೋಷ್ಠಿ,ಪ್ರದರ್ಶನ, ಹಕ್ಕುಗಳನ್ನು ಸಾಧಿಸಲು ಮೆರವಣಿಗೆ ಮುಂತಾದವುಗಳನ್ನು ಹಮ್ಮಿಕೊಳ್ಳುವ ಕಾರ್ಮಿಕರ ಉತ್ಸವದ ದಿನ . ಸಾರ್ವಜನಿಕ ರಜಾ ದಿನವಾಗಿಯೂ ಘೋಷಿತವಾಗಿದೆ .ದೇಶವೊಂದರ ಜೀವನಾಡಿಯಂತಿರುವ ಕಾರ್ಮಿಕರ ಬದುಕಿನ ಸಮಾನತೆಗಾಗಿ ಅವರ ಹೋರಾಟದ ಬದುಕನ್ನು ನೆನಪಿಸುವ ದಿನದ ಆಚರಣೆಯ ಹಿಂದೆ ಒಂದು ಇತಿಹಾಸವಿದೆ.         1886ರ ಮೇ 4 ರಂದು ಚಿಕಾಗೋದ ಇಲಿನಾಯ್ಸ ಪ್ರದೇಶದ ‘ಹೇ ಮಾರ್ಕಟ್’ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯು ಕಾರ್ಮಿಕ ಪ್ರಭುತ್ವ ಉದಯದ ಶುಭಗಳಿಗೆಯ ಕುರುಹಾಗಿ ಮೇ1 ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಾಗಿ ಆಚರಣೆ ಆರಂಭಗೊಂಡಿತು. ಬಂಡವಾಳಶಾಹಿ ಪ್ರಭುತ್ವದ ಶೋಷಣೆ ಹಾಗೂ ದಬ್ಬಾಳಿಕೆಯನ್ನು ಕೊನೆಗಾಣಿಸಿ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಕಾರ್ಮಿಕರೆಲ್ಲರೂ ಒಂದಾಗಿ ಈ ದಿನವನ್ನು ಆಚರಣೆ ಮಾಡಬೇಕೆಂಬುದು ಈ ದಿನದ ಕರೆ .  ಕಾರ್ಮಿಕರ ಶ್ರೇಯಾಭಿವೃದ್ದಿಗಾಗಿ    ಕಾರ್ಮಿಕ ಸಂಘಟನೆಗಳೂ ರೂಪುಗೊಂಡವು. ಮೇ ದಿನ ಉತ್ಸವವಾಗಿಸಿತು..        ತಮ್ಮದೇ ಆದ ಸಂಘಟನೆಗಳನ್ನು  ಕಾರ್ಮಿಕರು ಕಟ್ಟಿಕೊಂಡಿರುವುದರಿಂದ ಸಂಘಟನೆಗಳು ಅವರ ಹೋರಾಟಕ್ಕೆ ಶಕ್ತಿ ನೀಡಿವೆ. ಇದರಿಂದಾಗಿ ಕಾರ್ಮಿಕ ವಲಯ ಇಂದು ಸಮಾಜದಲ್ಲಿ ಪ್ರಭಾವಶಾಲಿಯಾಗಿದೆ. ತಮ್ಮನ್ನು ತಾವು ನಾಯಕತ್ವದ ಹಾದಿಯಲ್ಲಿ ಗುರುತಿಸಿ ಕೊಂಡಿದ್ದಾರೆ. ಇವರು ಸಂಘಟಿತ ವಲಯದ ಕಾರ್ಮಿಕರು. ಇವರಲ್ಲಿ ಹಲವಾರು ಮಂದಿ ಕಾರ್ಮಿಕ ನಾಯಕರು ಸಮಾಜದ ನಾಯಕರಾಗಿ ಹಲವಾರು ಕ್ಷೇತ್ರಗಳಲ್ಲಿ ಮೂಡಿ ಬಂದಿದ್ದಾರೆ ಜಗತ್ತಿನಾದ್ಯಂತ ಇವರು ಮಹತ್ತರ ಹುದ್ದೆಗಳನ್ನು ಅಲಂಕರಿಸಿದ ಉದಾಹರಣೆಗಳೂ ಸಾಕಷ್ಟಿವೆ.  ಉದಾ:  ಮುಂಬೈಯ ಅತೀ ದೊಡ್ಡ ಕಾರ್ಮಿಕ ನಾಯರೆನಿಕೊಂಡಿದ್ದ ದಿವಂಗತ ಜಾರ್ಜ್ ಫರ್ನಾಂಡೀಸ್ ಕೂಡ ಒಬ್ಬರು        ಕಾರ್ಮಿಕ ದಿನಾಚರಣೆಯೆಂದರೆ ಸಮಾನ ಬದುಕಿನ ಹಕ್ಕೊತ್ತಾಯ, ಬಂಡವಾಳ ಶಾಹಿ ವ್ಯವಸ್ಥೆ, ಮೇಲ್ವರ್ಗದ ದಬ್ಬಾಳಿಕೆಯ ವಿರುದ್ದ ಶ್ರಮಿಕ ವರ್ಗದ ಹೋರಾಟದ ದಿನವೆಂದೇ ಪರಿಗಣಿಸಲ್ಪಟ್ಟಿದೆ. ಆದರೆ ಇಂದಿನ ಕಾರ್ಮಿಕ ದಿನಾಚರಣೆ ಹೊಸ ದೃಷ್ಟಿಯಿಂದ ನೋಡಿ ಅರ್ಥಯಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಇನ್ನು ಮುಂದೆ ಕಾರ್ಮಿಕರ ಹಕ್ಕುಗಳ ಜೊತೆಜೊತೆಗೆ ಕಾರ್ಮಿಕರ ಬದುಕಿನ ಬಗ್ಗೆಯೂ ಯೋಚಿಸಬೇಕಾದ ಅತ್ಯಂತ ಸಂಕೀರ್ಣ ಸ್ಥಿತಿಯಲ್ಲಿ ಜಗತ್ತಿದೆ. ಕರೋನ ಎಂಬ ಮಾಹಾಮಾರಿ ಜಗತ್ತನ್ನೇ ಕಬಳಿಸಲು ಹೊರಟಂತೆ ವ್ಯಾಪಿಸಿ ಕೊಂಡಿದೆ. ಈ ಸಮರ ಯಾವುದೇ ಜಾಗತಿಕ ಸಮರಕ್ಕಿಂತ ಕಡಿಮೆಯಲ್ಲ. ಲಾಕ್ ಡೌನ್ ಎಂಬ  ಸೂತಕದ ಛಾಯೆಯಲ್ಲಿ ಜನರು ಮನೆಯೊಳಗೆ ಬಂಧಿಗಳಾಗಿದ್ದಾರೆ. ಇದರ ಪರಿಣಾಮ  ಶ್ರೀಮಂತ ವರ್ಗದಿಂದ ಕಟ್ಟಕಡೆಯ ಶ್ರಮಿಕನ ಮೇಲೂ ಅತ್ಯಂತ ಗಾಢ ಫಲಿತಾಂಶ ತಂದಿದೆ . ಅಂದರೆ ಕಾರ್ಮಿಕ ವರ್ಗದ ಮೇಲೆ ನಡೆದಿರುವ , ಮುಂದಿನ ದಿನಗಳಲ್ಲಿ ನಡೆಯಬಹುದಾದ ಪರಿಣಾಮಗಳು ಬಲು ಘೋರ ಹಾಗೂ ಭೀಕರ . ಈ ಹಿನ್ನಲೆಯಲ್ಲಿ ನಾವಿಂದು ಕಾರ್ಮಿಕ ದಿನಾಚರಣೆಯ  ಅಗತ್ಯ ಅನುಸರಿಸಬೇಕಾದ , ಕ್ರಮಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು.   ಕಾರ್ಮಿಕರೆಂದರೆ ಸಂಘಟಿತ ವಲಯದ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಕಾರ್ಮಿಕರು.     ಸಂಘಟಿತ ವಲಯದ ಕಾರ್ಮಿಕರು  ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿ ದಕ್ಕಿಸಿಕೊಳ್ಳುವ ಶಕ್ತಿ ಹೊಂದಿರುವರು. ಇವರಿಗೆ ತಮ್ಮದೇ ಆದ ಸಂಘಟನೆಗಳು ಇರುವುದರಿಂದ ಈ ಸಂಘಟನೆಗಳು ಅವರ ಹೋರಾಟಕ್ಕೆ ನೈತಿಕ ಶಕ್ತಿ ನೀಡಿವೆ. ಇದರಿಂದ  ಈ ಕಾರ್ಮಿಕ ವಲಯ ಪ್ರಭಾವಶಾಲಿ ವಲಯವಾಗಿದೆ.  ಅಸಂಘಟಿತ ವಲಯದ ಕಾರ್ಮಿಕರು. ಇವರು ನಮಗೆ ಸಮಾಜದ ಮದ್ಯೆ ಎದ್ದು ತೋರುವುದಿಲ್ಲ. ಇವರಿಗೆ ತಮ್ಮ ಹಕ್ಕೊತ್ತಾಯ ನಡೆಸುವ ಸಂಘಟನಾ ಶಕ್ತಿಯೂ ಇರುವುದಿಲ್ಲ. ಯಾವೊಬ್ಬ ನಾಯಕರು ಇವರ ಪರವಾಗಿ ಧ್ವನಿ ಎತ್ತುವುದಿಲ್ಲ. ಅಂದಿನ ದುಡಿಮೆಯನ್ನು ಅಂದಿಗೆ ಖರ್ಚು ಮಾಡಿ ಬದುಕು ನಡೆಸುವ ದುರ್ಬಲ ವರ್ಗದವರೇ ಇವರಲ್ಲಿ ದೊಡ್ಡ ಪ್ರಮಾಣದಲ್ಲಿ ಇರುವುದು.ಹೋರಾಟದ ಮನೋಭಾವವೂ ಇವರಲ್ಲಿ ಬಹಳ ಕಡಿಮೆ. ಈ ಅಸಂಘಟಿತ ವಲಯದ ಕಾರ್ಮಿಕರಲ್ಲೂ ಒಂದೇ ಕಡೆ ನೆಲೆನಿಂತ ಕಾರ್ಮಿಕರು ಒಂದು ಕಡೆಯಾದರೆ ವಲಸೆ ಬಂದ ಕಾರ್ಮಿಕರದ್ದು ಮತ್ತೊಂದು ಬಗೆಯ ಭವಣೆಯ  ಬದುಕು . ಹೆಚ್ಚಾಗಿ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ವಲಸೆಹೋಗುವ ಈ  ಅಸಂಘಟಿತ ಕಾರ್ಮಿಕ ವರ್ಗ ನಗರಪ್ರದೇಶಗಳಲ್ಲಿ ಕೊಳೆಗೇರಿ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.        ಭಾರತದ ಇತಿಹಾಸವನ್ನೇ ತೆಗೆದರೆ ಮುಂಬಾಯಿಯ ಧಾರಾವಿಯ ಬ್ರಹತ್ ಕೊಳೆಗೇರಿ,ನವದೆಹಲಿ, ಕೊಲ್ಕತ್ತಾ, ಚೆನ್ನೈ ಯಂತಹ ಮಹಾನಗರಗಳ ಕೊಳೆಗೇರಿಗಳಲ್ಲಿ ಲಕ್ಷಾಂತರ ಕಾರ್ಮಿಕರು ವಾಸವಾಗಿದ್ದಾರೆ. ಇವರ ದುಡಿಮೆಯ ಹೆಚ್ಚಿನ ಪಾಲು ದುಶ್ಚಟಗಳಿಗೆ ಹೋಗುವುದೂ ಸತ್ಯ. ಇವರಲ್ಲಿ ದೊಡ್ಡ ಪ್ರಮಾಣದ ಹೋರಾಟದ ಮನೋಭಾವವೂ ಇಲ್ಲ. ಈ ಕಾರ್ಮಿಕರ ಸಾಮಾಜಿಕ ಹಾಗೂ ಸಾಂಸಾರಿಕ ಜೀವನ ಅತ್ಯಂತ ಬರ್ಬರ .ಇವರು ಅಂದಂದಿನ ದುಡಿಮೆ ಅಂದಿಗೆ ಉಣ್ಣುವುದರಿಂದ ಇವರಲ್ಲಿ ಉಳಿತಾಯವೂ ಬಹಳ ಕಡಿಮೆ. ಯಾವುದೇ ಕಾನೂನು ಹಾಗೂ ನಿಯಮಾವಳಿಯ ಹಿಡಿತದಿಂದ ಇವರನ್ನು ಹಿಡಿದಿಡುವುದೂ ಸಾಧ್ಯವಿಲ್ಲ. ಕಾನೂನಿನ ದೊಡ್ಡ ಸಹಕಾರವೂ ಇವರಿಗಿಲ್ಲ. ಇಂತಹ ಕಾರ್ಮಿಕರು ಬಲು ದೊಡ್ಡ ಸಂಖ್ಯೆಯಲ್ಲಿ ನಮ್ಮಲ್ಲಿ ಮಾತ್ರವಲ್ಲ ಹೆಚ್ಚಿನ ದೇಶಗಳಲ್ಲಿ ಇದ್ದಾರೆ ಕೃಷಿ,ಕೂಲಿ,ಕೈಗಾರಿಕೆ,ಮೀನುಗಾರಿಕಾ ಉದ್ಯಮಗಳಲ್ಲು ತೊಡಗಿಸಿಕೊಂಡ ದಿನಗೂಲಿ ನೌಕರಿವರು .ಸಾಂಪ್ರದಾಯಿಕ ವೃತ್ತಿ ಮಾಡುವ ಶೃಮಿಕರಿವರು.     ಕೋವಿಡ್-19 ದಾಳಿಯ ನಂತರ ಇಂತಹ ಕಾರ್ಮಿಕ ವರ್ಗ ಬಲುದೊಡ್ಡ ಘಾತಕ್ಕೆ ಒಳಗಾಗಿದೆ .  ಇವರು ಆರ್ಥಿಕವಾಗಿ ನೆಲಕಚ್ಚಿರುವ ಶೃಮಿಕ ವರ್ಗ. ಅದರಲ್ಲೂ ಅಸಂಘಟಿತ  ಕಾರ್ಮಿಕರಲ್ಲಿ  ಯಾವುದೇ ನಿರ್ಧಿಷ್ಟ ಹೆಸರಲ್ಲಿ ಗುರುತಿಸಲ್ಪಡದ ಕಾರ್ಮಿಕರ ಗೋಳು ಅತೀ ದುಸ್ತರ ಎನ್ನಬಹುದು.     ‌‌‌ ಲಾಕ್ ಡೌನ್ ನಿಂದಾಗಿ ಸದ್ಯ  ಈ ಕಾರ್ಮಿಕರು ದುಡಿಮೆಗೆ ಹೊರಹೋಗುವಂತಿಲ್ಲ. ಒಳಗಡೆ ಕೊಳೆಗೇರಿಗಳಲ್ಲಿ, ಬೆಂಕಿಪೊಟ್ಟಣದಂತಹ ಜಾಗದಲ್ಲಿ  10 ಕ್ಕಿಂತಲೂ ಹೆಚ್ಚು ಜನರು ಇರಬೇಕಾದ ಅನಿವಾರ್ಯತೆ. ಇಲ್ಲಿ ರೋಗ ಒಬ್ಬರಿಗೆ ತಗುಲಿದರೆ ಉಳಿದವರೂ ಇದರ ಪರಿಣಾಮ ಎದುರಿಸಲೇಬೇಕು . ಆದ್ದರಿಂದ ಈ ಸಮಯದಲ್ಲಿ ಇಂತಹ ಜನರ ಬಗ್ಗೆ ಹೆಚ್ಚು ಯೋಚಿಸಬೇಕಾದ ಅನಿವಾರ್ಯತೆ  ನಮ್ಮ ಮುಂದಿದೆ      ಇವರಲ್ಲದೆ ಬೆಲೂನ್ ನಂತಹ ಪುಟ್ಟ ಸರಕುಗಳನ್ನು ಮಾರುವಂತವರು, ಭಿಕ್ಷಾಟಣೆ ಮಾಡಿ ಹೊಟ್ಟೆ ಹೊರೆಯುವ ಮಂದಿ,ದೇವದಾಸಿಯರು,ಯಕ್ಷಗಾನ ಕಲಾವಿದರು, ವೃತ್ತಿ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು, ವಲಸೆ ಬಂದು ಟೆಂಟ್ ಕಟ್ಟಿ ವಾಸ ಮಾಡುವ, ಊರೂರು ತಿರುಗಿ  ಮಣ್ಣಿನ ಗೊಂಬೆ, ಅಲಂಕಾರಿಕ ವಸ್ತುಗಳಂತಹ ಸರಕುಗಳನ್ನು  ಮಾರಿ ಬದುಕು ಕಟ್ಟಿಕೊಂಡ ಜನರನ್ನು ಕಾರ್ಮಿಕರ ಯಾದಿಯಲ್ಲಿ ಸೇರ್ಪಡೆಗೊಳಿಸದಿರಲು ಸಾಧ್ಯವೇ? ಸದ್ಯ ಇಂತಹ ಕಾರ್ಮಿಕರ ಆರೋಗ್ಯ, ಖರ್ಚುವೆಚ್ಚಗಳ ಪಾಡೇನು? ಇವುಗಳ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿದ್ದಾರೆ?  ಕಾರ್ಮಿಕರ ಬಗ್ಗೆ ಇದುವರೆಗೂ ಇರುವ  ಸಿದ್ದ ಆಲೋಚನೆಯ ಮಾದರಿಯನ್ನು ಬದಲಿಸಲೇಬೇಕಾದ  ಅನಿವಾರ್ಯತೆ ಯನ್ನು ಕರೋನ ಎಂಬ ವೈರಸ್ ತಂದಿಟ್ಟಿದೆ ಕಾರ್ಮಿಕರು ತಮ್ಮ ಸ್ಥಳವನ್ನು ಬಿಟ್ಟು ವಲಸೆ ಹೋದಾಗ ಒಳಗಾಗುವ ಸಂಕಷ್ಟ ಅದರ ಪರಿಹಾರ ಹೇಗೆ ಎಂಬುದನ್ನು ಸರಕಾರ ಹಾಗೂ ಸಮಾಜ ಗಂಭೀರವಾಗಿ ಚಿಂತಿಸಿ ಪರಿಹಾರ ಕಂಡುಕೊಳ್ಳಬೇಕಾದ ಕಾಲವಿದು . ಯಾವ ಪ್ರದೇಶಗಳು ದೊಡ್ಡ ಕೈಗಾರಿಕಾ ಪ್ರದೇಶವಾಗಿರುವುದೋ ಅಲ್ಲಿ ಕೋವಿಡ್ ಹೆಚ್ಚು ಪ್ರಸಾರವಾಗಿದೆ. ಇಲ್ಲಿ ಅಸಂಘಟಿತ ಕಾರ್ಮಿಕರು ಹೆಚ್ಚಾಗಿರುತ್ತಾರೆ ಅವರಿಗೆ ನಿರ್ಧಿಷ್ಟ ಉತ್ತಮ ವಾಸ್ತವ್ಯ ಇರುವುದೂ ಕಷ್ಟ . ಭವಿಷ್ಯದ ದಿನಗಳಲ್ಲಿ ಕಾರ್ಮಿಕರ ಮೂಲಭೂತ ಸೌಕರ್ಯದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು.  ಕಾರ್ಮಿಕರು ಬಲು ದೂರ ವಲಸೆ ಹೋಗದಂತೆ ವ್ಯವಸ್ಥೆ ಕಲ್ಪಿಸುವ, ಕ್ರಮ ತೆಗೆದುಕೊಳ್ಳಬೇಕಾದ ಗಂಭೀರ ಚಿಂತನೆಯನ್ನೂ ಮಾಡಬೇಕಾಗಿದೆ. ಇವರ ಸಂಬಳ ಮಾತ್ರವಲ್ಲ ಬದುಕು ಯಾವ ಬಗೆಯಲ್ಲಿ ಹಸಿರಾಗಿಡಬಹುದು ಎಂಬ ಬಗ್ಗೆಯೂ ಯೋಚಿಸಬೇಕು.    ಬದುಕು ಇದ್ದಾಗಷ್ಟೆ ದುಡಿಮೆ. ದುಡಿದಾಗ ತಕ್ಕ ಪ್ರತಿಫಲ ಸಿಗಬೇಕು ನಿಜ.  ಈ ನಿಟ್ಟಿನಲ್ಲಿ ಕಾರ್ಮಿಕರ ಹೋರಾಟ. ಆದರೆ ಈಗ ಬದುಕು ಉಳಿಸಿಕೊಳ್ಳುವುದೇ ದುಸ್ತರ ಎಂಬಂತಾಗಿದೆ. ಬದುಕುವ ಅವಕಾಶವೇ ಮಸುಕಾದರೆ..? ಜೀವ ಉಳಿಸಿಕೊಳ್ಖುವ ಪೇಚಾಟದಲ್ಲಿ ಅದೆಷ್ಟೋ ಶ್ರಮಿಕ ವರ್ಗ ಹೋರಾಟ ನಡೆಸುತ್ತಿದೆ. ಇವರಿಗೆ ಸಾವು ಹಾಗೂ ಬದುಕಿನ ನಡುವಿನ ಗೆರೆ ಮಾಯವಾದಂತಿದೆ. ಇವರ ನೋವು, ಸಂಕಟ ಅರ್ಥಮಾಡಿಕೊಳ್ಳುವವರು ಯಾರು? ಇವರ ಅಸ್ತಿತ್ವವೇ ಪ್ರಶ್ನಾರ್ಥಕವಲ್ಲವೇ ?ಇವರಿಗೆ ಉಂಟಾಗಿರುವ ಮಾನಸಿಕ ಅಘಾತ,ಮತ್ತೆ ಇವರು ಮೊದಲಿನಂತೆ ಕೆಲಸಕ್ಕೆ ಹೋಗಲು ಸಾಧ್ಯವೇ? ಈ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ಈ ಕಾರ್ಮಿಕ ದಿನದಂದು ಹೆಚ್ಚು ಪ್ರಜ್ಞಾಪೂರ್ವಕ ಹೃದಯದಿಂದ ಚಿಂತಿಸಬೇಕಾದ ಅಗತ್ಯದಲ್ಲಿ ನಾವಿದ್ದೇವೆ . *************************

ಕಾರ್ಮಿಕ ದಿನದ ವಿಶೇಷ-ಬರಹ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಬೆವರ ಹನಿಗಳು ಚೈತ್ರಾ ಶಿವಯೋಗಿಮಠ ಬೆವರ ಹನಿಗಳು ದುಡಿಯುವ ಕೈಗಳು, ದೇವರ ಕೈಗಳು ಹೊಲದಲಿ ಕೃಷಿಕ ಗಡಿಯಲಿ ಸೈನಿಕ ದುಡಿಯಲು ಕಾರ್ಮಿಕ ಕಾಯಕ ಯೋಗದ ಹರಿಕಾರರು ಬಸವಾದಿ ಪ್ರಮಥರು ದುಡಿಮೆ, ಶ್ರಮದ ಮಹತ್ವ ಸಾರಿದ ಜಗದ ಶ್ರೇಷ್ಠ ಕಾರ್ಮಿಕರು ದುಡಿಯುವ ಜೀವಗಳಿಗೆ ಸದಾ ಸಮೃದ್ಧಿಯಿರಲಿ ದುಡಿಸುವವರಿಗೆ, ಶ್ರಮಿಕರಿಗೆ ಪ್ರೀತಿ-ಗೌರವ ನೀಡುವ ಬುದ್ಧಿ ಸರ್ವದಾ ಇರಲಿ ಕಠಿಣ ಪರಿಶ್ರಮ ದುಡಿಮೆಯೇ ರಾಮನಾಮ. ಕಾರ್ಮಿಕನಿಗಿಲ್ಲ ವಿರಾಮ! ಇವರಿಗೆ, ದುಡಿಮೆಯೆ ದೈವ ಸ್ವಾಭಿಮಾನವೆ ಭವ-ಭಾವ ಪರಿಶ್ರಮವೆ ವಿಭವ! ಬೇಕು, ಚಿಪ್ಪಿಗೆ ಸ್ವಾತಿ ಮುತ್ತಾಗಲು ದೇಶಕೆ ಕಾರ್ಮಿಕ ಅಭಿವೃದ್ಧಿಯಾಗಲು ಮನೆಯ ಗೃಹಿಣಿ ರಜೆಯೇ ಇರದ ಕಾರ್ಮಿಕ ಗುಡಿಸಿ, ಸಾರಿಸಿ, ಬೇಯಿಸಿ ಎಲ್ಲರ ಹೊಟ್ಟೆ ಹೊರೆಯುವ ಶ್ರಮಿಕ ಅರೆಬರೆ ತುಂಬಿದರೂ ಹೊಟ್ಟೆ ದುಡಿಯಲು ಸದಾ ಸಿದ್ಧ ರಟ್ಟೆ ಬಲ ಒಂದೆಯಲ್ಲ, ಮತಿಯೂ ಅಸ್ತ್ರ ಮಾತು, ಬುದ್ಧಿಮತೆಯೆ ದುಡಿಯುವ ಸಾಫ್ಟ್ ಕಾರ್ಮಿಕರ ಶಸ್ತ್ರ ********

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಇತರೆ

ಕಾರ್ಮಿಕ ದಿನದ ವಿಶೇಷ-ಬರಹ

ಕಾರ್ಮಿಕ ದಿನಾಚರಣೆಯೂ ವರ್ತಮಾನದ ಆತಂಕವೂ ರಾಮಸ್ವಾಮಿ ಡಿ.ಎಸ್. ಕಾರ್ಮಿಕ ದಿನಾಚರಣೆಯೂ ವರ್ತಮಾನದ ಆತಂಕವೂ ಮೇ ಒಂದನೇ ತಾರೀಖು ಬರುವ ವಾರ ಮೊದಲೇ ಬಂಟಿಂಗ್ಸ್, ಬ್ಯಾನರ್, ಪ್ಲಕಾರ್ಡುಗಳನ್ನು ಸಿದ್ಧಪಡಿಸಿ ಎಲ್ಲ ಕಛೇರಿಗಳ ಕಾರ್ಮಿಕ ಸಂಘಟನೆಗಳಿಗೆ ಮನವಿ ಪತ್ರ ಕಳಿಸಿ ಒಂದನೇ ತಾರೀಖಿನ ಬಹಿರಂಗ ಸಭೆ ಮತ್ತು ಮತಪ್ರದರ್ಶನಕ್ಕೆ ಬರಲು ಒತ್ತಾಯಿಸುತ್ತಿದ್ದ ದಿನಗಳು ನೆನಪಿಗೆ ಬಂದವು. ನಾನಿರುವ ಊರಿನಲ್ಲಿ ದೊಡ್ಡ ಕಾರ್ಖಾನೆಗಳೇನೂ ಇಲ್ಲ. ಹಾಗಾಗಿ ನಮ್ಮ ಮೇ ದಿನದ ಸಭೆಗೆ ಬ್ಯಾಂಕ್, ಎಲ್ಲೈಸಿ, ಟೆಲಿಫೋನ್, ಅಂಚೆ ಕಛೇರಿಗಳ ನೌಕರರನ್ನು ಸೇರಿಸುತ್ತಿದ್ದೆವಾದರೂ ಉಳಿದ ಸರ್ಕಾರಿ ಕಛೇರಿಗಳ ಯಾವ ವರ್ಗವೂ ನಮ್ಮೊಂದಿಗೆ ಬರುತ್ತಿರಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನ ನೌಕರರು ಯಾವತ್ತೂ ನಮ್ಮ ಚಳವಳಿಗಳಲ್ಲಿ ಭಾಗವಹಿಸಿದ್ದೂ ಇಲ್ಲ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಕ್ಷರ ದಾಸೋಹದ ನೌಕರರು ನಮ್ಮ ಜೊತೆ ಇರುತ್ತಾರೆ ಮತ್ತು ಅವರ ಸಂಖ್ಯೆಯೇ ನಮ್ಮ ಸಾರ್ವಜನಿಕ ಸಭೆಗಳಿಗೆ, ಮೆರವಣಿಗೆಗೆ ಶೋಭೆ ತರುವುದು. ಸಂಘಟಿತ ಮತ್ತು ಅಸಂಘಟಿತ ವಲಯದ ನೌಕರರ ಶ್ರಮ ಸಂಸ್ಥೆಯ ಲಾಭಕ್ಕೆ ಕಾರಣವಾದುದರಿಂದ ದುಡಿಯುವ ವರ್ಗಕ್ಕೆ ಸವಲತ್ತುಗಳಿಗಾಗಿ ಹಕ್ಕೊತ್ತಾಯ ಮಾಡುವುದು ವಿಹಿತ. ಸರ್ಕಾರಿ, ನಿಗಮ, ಮಂಡಲಿಗಳ ನೌಕರರಿಗೆ ಸಿಬ್ಬಂದಿ ಕಾಯ್ದೆ ಅನ್ವಯ ವಿವಿಧ ಸವಲತ್ತು ಇದ್ದರೂ ಅವರೆಲ್ಲ ತಮ್ಮ ಸಂಬಳ ಮತ್ತು ಇತರೆ ಸೌಲಭ್ಯಗಳಿಗಾಗಿ ಕಾಲಾನುಕಾಲದ ದ್ವಿಪಕ್ಷೀಯ ಸಂಧಾನದ ಮೂಲಕ ಸಾಧಿಸಿಕೊಳ್ಳುತ್ತಾರೆ. ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರ ವೇತನ ಪರಿಷ್ಕರಣೆ ಆಯೋಗಗಳ ವರದಿಗೆ ತಕ್ಕಂತೆ ಕಾಲಕ್ಕೆ ತಕ್ಕನಾಗಿ ಆಗುತ್ತಲೇ ಇರುತ್ತವೆ. ಆದರೆ ಯಾವತ್ತೂ ಅಸಂಘಟಿತ ವಲಯದ ನೌಕರರು ಮಾತ್ರ ಕನಿಷ್ಠ ಸೌಲಭ್ಯಗಳೂ ಇಲ್ಲದೆ ಮತ್ತು ಉದ್ಯೋಗ ಖಾತ್ರಿಯೂ ಇಲ್ಲದೆ ಪರಿತಪಿಸುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು, ಅಕ್ಷರ ದಾಸೋಹದ ನೌಕರರು ಮತ್ತು ಬೀಡಿ ಕಾರ್ಮಿಕರು ಬೆಂಗಳೂರಲ್ಲಿ ಆಗಾಗ ಧರಣಿ ಸತ್ಯಾಗ್ರಹಗಳ ಮೂಲಕ ಸುದ್ದಿಗೆ ಬರುತ್ತಾರಾದರೂ ಅವರ ಬೇಡಿಕೆ ಈಡೇರಿತೆ ಅಂದರೆ ಅದು ಯಾವತ್ತೂ ಮರೀಚಿಕೆಯಾಗಿಯೇ ಉಳಿದಿರುತ್ತೆ. ಇನ್ನು ಈ ವರ್ಗಕ್ಕೆ ಅಸಂಖ್ಯಾತ ಗಾರ್ಮೆಂಟ್ ಕೆಲಸಗಾರರು ಮತ್ತು ರಾಜ್ಯ ಸರ್ಕಾರದ ಅಧೀನದ ರಸ್ತೆ ಸಾರಿಗೆ ಸಂಸ್ಥೆಯ ನೌಕರರೂ ಸೇರುತ್ತಿದ್ದಾರೆ. ಈ ಎಲ್ಲ ನೌಕರರಿಗೆ ಕಾಲಾನುಕಾಲಕ್ಕೆ ವೇತನ ಪರಿಷ್ಕರಣೆ ಇತರೆ ಸೌಲಭ್ಯಗಳ ವಿಸ್ತರಣೆ ಆಗುವುದಿರಲಿ, ಕನಿಷ್ಠ ವಾರದ ರಜೆ, ಆರೋಗ್ಯ ಯೋಜನೆ ಇಲ್ಲದೇ ಅವರೆಲ್ಲ ತುಂಬ ಪರಿತಪಿಸುತ್ತಿದ್ದಾರೆ. ಸಂಘಟಿತ ನೌಕರ ವರ್ಗಕ್ಕೆ ಕಾಲಾನುಕಾಲದ ವೇತನ ಮತ್ತು ಇತರೆ ಸೌಲಭ್ಯಗಳು ಅಲ್ಪ ಸ್ವಲ್ಪ ತಗಾದೆ ಮತ್ತು ಹೋರಾಟಗಳಿಂದ ಸಿಕ್ಕುತ್ತವೆಯಾದರೆ ಈ ಅಸಂಘಟಿತ ವಲಯದ ನೌಕರರಿಗೆ ಯಾವ ಅನುಕೂಲಗಳೂ ಇಲ್ಲ. ಇನ್ನು ಅನುಮೋದಿತ ಸಂಸ್ಥೆಗಳ ನೌಕರರಂತೂ ಯಾವ ಹೋರಾಟ ಹಾರಾಟಗಳೂ ಇಲ್ಲದೆ ಸರ್ಕಾರಿ ನೌಕರರ ಎಲ್ಲ ಸೌಲಭ್ಯ ಪಡೆಯುತ್ತಾರೆ. ಹಾಗಾದರೆ ಇವತ್ತಿನ ಮೇ ದಿನದ ಸಂದೇಶ ಮತ್ತು ಈ ದಿನದ ಅಗತ್ಯ ಯಾರಿಗಿದೆ? ನೌಕರರಿಗೆ ಕನಿಷ್ಠ ವೇತನ, ವಾರದ ರಜೆ ಮತ್ತು ಎಂಟು ಗಂಟೆಗೂ ಮೀರದ ದುಡಿಮೆಯ ಅವಧಿ ಮೇ ಚಳವಳಿಯ ಮೂಲ ಧ್ಯೇಯ. ಅದೀಗ ಸಂಘಟಿತ ವಲಯಕ್ಕೆ ಸುಲಭದಲ್ಲಿ ಸಿಗುತ್ತಿದೆ. ಆದರೆ ಅಸಂಘಟಿತ ವಲಯದ ಜೊತೆಗೇ ಈ ನಡುವೆ ಔಟ್ ಸೋರ್ಸ್ಡ್ ಎಂಬ ಕಂಟ್ರಾಕ್ಟ್ ನೌಕರರ ಮೇಲಣ ದಬ್ಬಾಳಿಕೆ ಮಿತಿ ಮೀರಿದೆ. ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲದ ಯಾವ ಖಾತರಿಯೂ ಇಲ್ಲದ ಮತ್ತು ಕಂಟ್ರಾಕ್ಟರನ ಮೂಗಿನ ನೇರದ ಕಾನೂನಿನಡಿ ಇವರೆಲ್ಲ ನರಳುತ್ತಿದ್ದಾರೆ. ನಮ್ಮ ಬಹುತೇಕ ಕಾರ್ಮಿಕ ಸಂಘಟನೆಗಳು ಒಂದಲ್ಲ ಒಂದು ರಾಜಕೀಯ ಪಕ್ಷಗಳ ಕೂಸುಗಳೇ ಆಗಿರುವುದು ಸುಳ್ಳೇನಲ್ಲ. ಶಾಸನ ಸಭೆಯಲ್ಲಿ ಅನುಮೋದನೆ ಆಗದೆ ಯಾವುದೂ ಕಾನೂನಾಗಿ ಪರಿವರ್ತನೆ ಆಗುವುದಿಲ್ಲ. ಈ ಎಲ್ಲ ರಾಜಕೀಯ ಪಕ್ಷಗಳು ಮತ್ತದರ ಆಶ್ರಿತ ಸಂಘಟನೆಗಳು ಯಾಕಾಗಿ ಈ ಔಟ್ ಸೋರ್ಸಿಂಗ್ ಎನ್ನುವುದನ್ನು ಅನುಮೋದಿಸಿದವು ಎಂದು ಆಲೋಚಿಸಲು ಈ ಮೇ ದಿನದಲ್ಲಾದರೂ ನಾವು ಪ್ರಯತ್ನ ಪಡಬೇಕು. ಔಟ್ ಸೋರ್ಸಿಂಗ್ ಅಥವ ಹೊರ ಗುತ್ತಿಗೆ ಅನ್ನುವುದು ಕೆಳಹಂತದ ನೌಕರಿಗೆ ಮಾತ್ರ ಸೀಮಿತವಾದದ್ದು. ಅಂದರೆ ಕಸಗುಡಿಸುವುದು, ಪ್ಲಂಬಿಂಗ್, ಕ್ಲೀನಿಂಗ್, ಸ್ಯಾನಿಟೈಸಿಂಗ್, ಸೆಕ್ಯೂರಿಟಿ, ಲಿಫ್ಟ್ ಆಪರೇಷನ್ ತರದ ಕೆಲಸಗಳೆಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ಈ ಹೊರ ಗುತ್ತಿಗೆಯಿಂದಲೇ ನಡೆಯುತ್ತಿದೆ. ಈ ನೌಕರರು ಆಯಾ ಕಛೇರಿಗಳಲ್ಲಿ ಕೆಲಸ ಮಾಡುತ್ತಾರಾದರೂ ಅವರ ಕಂಟ್ರಾಕ್ಟರ್ ಕೊಟ್ಟಷ್ಟಕ್ಕೆ ದುಡಿಯುತ್ತಾರೆ. ಆದರೆ ಈ ಕಂಟ್ರಾಕ್ಟರುಗಳು ಕನಿಷ್ಠ ಕೂಲಿಯ ಆಧಾರದಲ್ಲಿ ಬಿಲ್ಲು ಸಲ್ಲಿಸಿ ಸಂಬಂಧಿಸಿದ ಅಧಿಕಾರಿಯನ್ನು ಹಿಡಿದು ತಮ್ಮ ಹಣ ಪಡೆಯುತ್ತವಾದರೂ ನೌಕರರಿಗೆ ಮಾತ್ರ ಸಿಕ್ಕುವುದು ಎಳ್ಳು ಕಾಳು. ಹೊರಗುತ್ತಿಗೆ ಆಧಾರದ ನೌಕರಿಯನ್ನು, ಕಂಟ್ರಾಕ್ಟ್ ಆಧಾರದ ನೌಕರಿಯನ್ನು ಕನಿಷ್ಠ ಕೂಲಿ ಕೊಡದ ಉದ್ಯೋಗದಾತರನ್ನು ನಿವಾರಿಸದ ಹೊರತು ಮೇ ದಿನದ ಚಳವಳಿಗೆ ಯಾವ ಅರ್ಥವೂ ಇರುವುದಿಲ್ಲ. *****

ಕಾರ್ಮಿಕ ದಿನದ ವಿಶೇಷ-ಬರಹ Read Post »

ಇತರೆ

ಕಾವ್ಯಯಾನ

ಮೇ – ಒಂದು ಕಪ್ಪು ಹಾಡು ನೂರುಲ್ಲಾ ತ್ಯಾಮಗೊಂಡ್ಲು ಮೇ – ಒಂದು ಕಪ್ಪು ಹಾಡು ಕಾರ್ಲ್ ಮಾರ್ಕ್ಸ್ ನ ಹೆಣ ಹೊತ್ತ ಕೈಗಳಿನ್ನು  ಬೀದಿ ಬೀದಿ ತರಗೆಲೆಯಂತೆ ತೆವಳುತ್ತಲೇ ಇವೆ  ಸಂಜೆಯ ಸೂರ್ಯ ಸದ್ದಿಲ್ಲದೆ ನೋಡುತ್ತಾನೆ  ಕೈಗಳಿಗಂಟಿದ ಕತ್ತಲನ್ನು  ಶತಮಾನಗಳಿಂದಲೂ ಹೀಗೆ ಬದುಕು  ಸಂಕೇತಗಳಲ್ಲಿ ಹರಿದು ಹೋಗಿದೆ   ಸಂಜೆ ಮಲ್ಲಿಗೆಯ ಕನಸಿನಲ್ಲಿ  ಕಂಪಿನ ಹಿತವಿಲ್ಲ  ಖಾಲಿ ಜೋಬುಗಳ ತುಂಬ  ಸ್ವೇದದ ಕಮಟು   ಹೆಂಡತಿ ಮಕ್ಕಳು ಕೈ ನೀಡಿದಾಗ  ತಬ್ಬಿಕೊಳ್ಳುವ ಕೈಗಳಲ್ಲಿ ನಿತ್ರಾಣವಿಲ್ಲ  ಒಂದು ಹಗಲು ಅಥವಾ  ಒಂದು ಇರುಳು ಸವೆದ ಬದುಕಿನ  ಹಿಸಾಬು ಹಾಕಲು ಕೈಗೆರೆಗಳೇ ಅಳಿಸಿ ಹೋಗಿವೆ  ಬಂಡವಾಳ ಶಾಹಿಗಳ ಬೂಟುಗಳಲಿ  ಬತ್ತಿ ಹೋದ ನಸಿಬು  ಯೌವ್ವನದ ಜೋಲು ಗೆರೆಗಳಲಿ  ತಪ್ತ ನಗೆ-  ಸೌಧಗಳಲಿ ನೇತಾಡುವ ರಕ್ತ ನಾಳಗಳು ;  ಹೆಪ್ಪುಗಟ್ಟಿದ ಮೇದುಳ ತಾರುಗಳಲಿ  ತೊಟ್ಟಿಕ್ಕುವ ಕೀವ್…  ಕರುನಾಳು ಸೂರ್ಯ ತನ್ನ ರೆಕ್ಕೆಗಳನ್ನು ಅವುಚಿಕೊಳ್ಳುವಾಗ, ಮಾನವತೆಯ ಉಸಿರು  ದುಡಿದ ಕೈಗಳ ಹಾಡಾಗುತ್ತದೆ…   ಹ್ಞಾ , ಕರಿ ನೆರಳ ಕಪ್ಪು ಹಾಡಾಗುತ್ತದೆ.  ********                                                        

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕಾಮಿ೯ಕರ ದಿನ ಎನ್. ಆರ್ .ರೂಪಶ್ರೀ ಕಾಮಿ೯ಕರ ದಿನ ತುತ್ತು ಅನ್ನಕ್ಕಾಗಿ ಬಾಳನ್ನು ತೆತ್ತು ತೆತ್ತು ಹಗಲಿರುಳು ದುಡಿತದ ನೆರಳಿನಲಿ ಸಾಗುತಿದೆ ಕಾಮಿ೯ಕನ ಹೊತ್ತು. ದಿನ ದಿನವೂ ಅನುದಿನವೂ ನೋವು ನರಳಾಟ ಅರಳುವುದು ಕಣ್ಣಿನಲ್ಲಿ ಕುಡಿಮಿಂಚು ನಗೆಯಾಟ ಬಲ್ಲಿದರ ಬಂಧನದಿ ಸದಾ ಶೋಷಣೆಯ ಸೆರಗು ಇದೇ ಏನೋ ಕಾಮಿ೯ಕನ ಜೀವನಕೆ ಸಂತಸದ ಮೆರಗು. ತಾನು ತನ್ನದೆನ್ನುವ ಹಕ್ಕಿನ ಹಂದರ ಹಸಿದು ಬಸವಳಿದಿದೆ ಆಸೆ ಆಮಿಷಗಳ ದೂರದ ಬಯಕೆಗಳ ಗೋಪುರದ ಗುಮ್ಮಟ ತಲೆಯೆತ್ತಿ ನಿಂತಿದೆ. ದು:ಕ ದುಗುಡ ದುಮ್ಮಾನಗಳಿಗೆ ತಂಪೆರೆಯುವ ಸಿಂಚನದ ಮಿಂಚಾಗಿ ಬಂದಿರುವುದು ಕಾಮಿ೯ಕರ ದಿನವೆಂಬ ಶುಭ ಶಕುನದ ಒಸಗೆ *******

ಕಾವ್ಯಯಾನ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ಕಾವಲಿಯಿಂದ_ಕೆಂಡಕ್ಕೆ ಲಕ್ಷ್ಮಿಕಾಂತಮಿರಜಕರ ಕಾವಲಿಯಿಂದ_ಕೆಂಡಕ್ಕೆ ಚರಂಡಿ ಬದಿಯ ಮುರುಕಲು ಶೆಡ್ ಗಳಲ್ಲಿ ಸಹಿಸುತ್ತ ಕಚ್ಚುವ ಸೊಳ್ಳೆಗಳ ನೋವು ನಾಳೆಯೂ ಕೆಲಸಕ್ಕೆ ಹೋಗದಿದ್ದರೆ ಹೊಟ್ಟೆಗೇನೂ ಸಬೂಬು ಹೇಳುವುದೆಂದು ಚಿಂತಾಮಗ್ನದಲ್ಲಿ ನಾವಿರುವಾಗ ನೀವಾಗಲೇ ಚಪ್ಪಾಳೆ ತಟ್ಟುವ ಸಂತೋಷದಲ್ಲಿ ಮೈಮರೆತು ಮೀಯುತ್ತಿದ್ದಿರಿ ನಿಮ್ಮ ನಿಮ್ಮ ಅರಮನೆಗಳ ಬಾಲ್ಕನಿಗಳಲ್ಲಿ ನಿಂತು ನಿಮ್ಮ ಚಪ್ಪಾಳೆಯ ಲಯಬದ್ಧ ಸದ್ದಿಗೆ ಸಮವಲ್ಲ ಬಿಡಿ ನಮ್ಮ ಹಸಿದ ಹೊಟ್ಟೆಗಳ ತಾಳ ತಿಂಗಳಪೂರ್ತಿ ಸಾಕಾಗುವಷ್ಟು ದಿನಸಿಗೋದಾಮು ಪೇರಿಸಿಡಲು ನೀವು ನಗುತ್ತಲೇ ಹೆಣಗಾಡುತ್ತಿದ್ದ ಸಮಯದಲ್ಲಿ ನಮ್ಮ ಬದುಕು ಪೇರಿಕಿತ್ತಿತ್ತು ಬಿಸಿಲಿಗೆ ಕಾದು ಬೆಂಕಿಯಾಗಿದ್ದ ರಸ್ತೆ ಮೇಲೆ ಹೊತ್ತು ತಲೆಮೇಲೊಂದು ಕೈಯಲ್ಲೊಂದು ಗಂಟುಮೂಟೆ ಸೋತಕಾಲುಗಳಿಗೆ ಸಾಂತ್ವನ ಹೇಳುತ್ತ ಭಾರವಾದ ಹೆಜ್ಜೆಗಳನ್ನು ಕಿತ್ತಿಡುತ್ತ ಹಲ್ಲಿಯ ಬಾಯಿಯ ಸಿಕ್ಕಿ ಬಿದ್ದಿದ್ದ ಕೀಟದಂತೆ ತಲೆಮೇಲಿಂದ ಆಗಷ್ಟೇ ಹಾರಿಹೋಗಿತ್ತು ದೂರದೇಶಗಳಿಂದ ರಾಜರಾಣಿಯರನ್ನು ಹೊತ್ತು ತಂದಿದ್ದ ವಿಶೇಷ ವಿಮಾನ ನಮ್ಮ ಬರಿಗಾಲುಗಳ ಮೆರವಣಿಗೆಯನ್ನು ಅಣುಕಿಸುತ್ತ ಇಡಿ ದೇಶಕ್ಕೆ ದೇಶವೇ ಮನೆ ಮುಂದೆ ದೀಪ ಬೆಳಗಿಸಿ ಸೆಲ್ಫಿ ತೆಗೆಸಿಕೊಳ್ಳುವ ಸಂಭ್ರಮದ ಮುಂದೆ ಹಸಿವಿನಿಂದ ರಸ್ತೆಬದಿಯಲ್ಲಿ ನಂದಿಹೋದ ಎಷ್ಟೋ ಬಡಜ್ಯೋತಿಗಳ ಪ್ರಾಣ ಯಾರಿಗೂ ಮಹತ್ವವೆನಿಸಲೇ ಇಲ್ಲ ಬೆನ್ನಿಗಂಟಿದ ಬಡತನದ ಶಾಪಕ್ಕೆ ಉಳ್ಳವರ ದೌರ್ಜನ್ಯ, ಅತ್ಯಾಚಾರದ ಕಾಟಕ್ಕೆ ಜಾತಿ ಶೋಷಣೆಯ ಅವಮಾನಕ್ಕೆ ಬೇಸತ್ತು ನಗರಕ್ಕೆ ಗುಳೆ ಬಂದಿದ್ದು ನಮ್ಮದೇ ತಪ್ಪು ಪುರಾತನ ಕಾಲದಿಂದಲೇ ನಮ್ಮಿಂದ ಅಂತರ ಕಾಪಾಡಿಕೊಂಡೇ ಬದುಕಿದ್ದ ದೇವಾನುದೇವತೆಗಳ ಮಕ್ಕಳು ನೀವು ಅಗೋಚರ ವೈರಾಣು ಕೃಪೆಯಿಂದ ನಮ್ಮ ನಡುವಿನ ಅಂತರಕ್ಕೆ ಈಗಂತೂ ಅಜಗಜಾಂತರ ವ್ಯತ್ಯಾಸ ನಿಮಗಷ್ಟೇ ಸಿಗಲಿ ಚಂದಿರನೂರಿನ ದಾರಿ ಜೊತೆಗೆ ಹರುಷ,ಸಂತೃಪ್ತಿ ಖುಷಿ,ಸುಗ್ಗಿ,ಸುಖದ ಸಂತೆಯೂ ನಮ್ಮೂರಿನ ಬತ್ತಿದ ಹೊಳೆಬದಿಯ ಮುಳ್ಳು ಕಂಟಿಗಳ ಜಾಗವೇ ನಮಗಿರಲಿ ಇದ್ದೇಇರುತ್ತವೆ ಜೊತೆಗೆ ಬೇಡವೆಂದರೂ ಕಷ್ಟ,ದುಃಖ, ನಿರಾಸೆ ನಿಲ್ಲದ ನಿಟ್ಟುಸಿರು,ಬಿಕ್ಕಳಿಕೆಯೂ ನಮಗೀಗ ಖಾತರಿಯಾಗಿದೆ ಬಡವರ ಬದುಕು ಕಾವಲಿಯಿಂದ ಕೆಂಡಕ್ಕೆ ಬಿದ್ದಿರುವುದು ********

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಕಾವ್ಯಯಾನ

ಕಾರ್ಮಿಕ ದಿನದ ವಿಶೇಷ-ಕವಿತೆ

ಕೂಲಿಯವನ ಮಗ ನಾನು ವಾಯ್.ಜೆ.ಮಹಿಬೂಬ ಕೂಲಿಯವನ ಮಗ ನಾನು ಬಡವನಾದರೇನಂತ ಇಲ್ಲೆನಗ ಬ್ಯಾಸರ ಕಣ್ಣತುಂಬ ನಿದ್ದೀಗಿ ಗುಡಿಸಲೆಮಗೆ ಆಸರ !!ಪ!! ಕೂಲಿಯವನ ಮಗನಾನು ಬಿಸಿಲೆಮಗೆ ಸಹೋದರ ನಮ್ಮಪ್ಪ ಅಂತಾನ ಮುಗಿಲೆ ನಮಗೆ ಹಂದರ !!೧!! ಅವ್ವನ ಸೀರಿ ಶೆರಗೇ ಒರಿಸೇತಿ ಬೆವರ ಹಾಸಿಗೆ ಆಗತೈತಿ ಅಪ್ಪನ ಹರಕ ಧೋತರ!!೨!! ಹಬ್ಬಕವರು ಕಾಣಲಿಲ್ಲ ಹೊಸ ಸೀರಿ-ದೋತರ ಸತ್ತಾಗ ಕಟ್ಟತೀರಿ ಅರವಿ ಐದು ಮೀಟರ್ !!೩! ******

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

You cannot copy content of this page

Scroll to Top