ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ

ಪ್ರಭುಲಿಂಗ ಲೀಲೆ ಚಾಮರಸ  ಚಾಮರಸನ ಮಹಾಕಾವ್ಯ ‘ಪ್ರಭುಲಂಗಲೀಲೆ’ಯೂ..! ಚಾಮರಸನು ಕನ್ನಡದ ಪ್ರಸಿದ್ಧ ಕವಿ. ಇವರು ‘ಪ್ರಭುಲಿಂಗ ಲೀಲೆ’ಯು ಭಾಮಿನಿ ಷಟ್ಪದಿಯಲ್ಲಿ ಬರೆಯಲಾದ ಈತನ ಪ್ರಸಿದ್ಧ ಕಾವ್ಯವಾಗಿದೆ. ಇವರು ಇಮ್ಮಡಿ ಪ್ರೌಢದೇವರಾಯನ ರಾಜಾಶ್ರಯದಲಿದ್ದವನು. ಅನ್ಯಮತ ಕೋಳಾಹಲ, ವೀರಶೈವಾಚಾರ ಮಾರ್ಗ ಸಾರೋದ್ಧಾರ ಇವನಿಗೆ ಸಂದಿದ ಬಿರುದುಗಳು… ನಡುಗನ್ನಡದ ಶ್ರೇಷ್ಠ ಕಾವ್ಯ ಎಂದು ಪ್ರಸಿದ್ಧವಾಗಿರುವ ‘ಪ್ರಭುಲಿಂಗಲೀಲೆ’ಯ ಕರ್ತೃ ಈತ. ವೀರಶೈವ ಕವಿ. ವಿಜಯನಗರದ ಪ್ರೌಢ ದೇವರಾಯನ ಕಾಲದ ನೂರೊಂದು ವಿರಕ್ತರಲ್ಲಿ ಗಣನೆಯಾಗಿದ್ದಾನೆ. ವೀರಶೈವಾಚಾರ ಮಾರ್ಗಸಾರೋದ್ಧಾರ, ಅನ್ಯಮತ ಕೋಳಾಹಳ ಎಂಬ ಬಿರುದುಗಳನ್ನು ಪಡೆದಿದ್ದ ಈತನ ಸ್ಥಳ ಗದಗ ಇಲ್ಲವೇ ನಾಗಣಾಪುರ ಎಂದು ಹೇಳಲಾಗಿದೆ…. ಹರಿಹರ, ರಾಘವಾಂಕರ ತರುವಾಯ ಐತಿಹಾಸಿಕ ವ್ಯಕ್ತಿಗಳನ್ನು ಕುರಿತು ಕಾವ್ಯ ಬರೆದವರಲ್ಲಿ ಚಾಮರಸ ಅಗ್ರಗಣ್ಯನಾಗಿದ್ದನು. 25 ಗತಿಗಳು ಮತ್ತು 1111 ಪದ್ಯಗಳನ್ನು ಒಳಗೊಂಡಿರುವ ‘ಪ್ರಭುಲಿಂಗಲೀಲೆ’ ಮಧ್ಯಮ ಗಾತ್ರದ ಕಾವ್ಯವಾಗಿದೆ. ‘ಪ್ರಭುಲಿಂಗಲೀಲೆ, ಎಂದರೆ ಪ್ರಭುವೇ ಲಿಂಗಲೀಲೆಯಲ್ಲಿ ಮೆರೆದುದು ಎಂಬ ಭಾವ ಬರುವಂತೆ ಹೆಸರಿಸಿ, ಕಾವ್ಯದ ಉದ್ದಕ್ಕೂ ಅದೇ ರೀತಿ ಅಲ್ಲಮನ ಚರಿತ್ರೆಯನ್ನು ಕವಿ ಉಜ್ಜ್ವಲವಾಗಿ ಚಿತ್ರಿಸಿದ್ದಾನೆ. ಕವಿಯ ವಿಷಯವಾಗಿ ಹೆಚ್ಚಿನ ಯಾವ ಮಾಹಿತಿ ಸಿಗದಿದ್ದರೂ ಆತ ಚಿತ್ರಿಸಿರುವ ಅಲ್ಲಮನ ಚರಿತ್ರೆಯನ್ನೇ ಆಧರಿಸಿ ಊಹಿಸುವುದಾದರೆ ಚಾಮರಸನೂ ತನ್ನ ಕಥಾನಾಯಕನಂತೆ ವಿರಕ್ತನೂ, ಸಂಯಮಿಯೂ ಸದಾಜಾರ ಸಂಪನ್ನನೂ ಆಗಿದ್ದನೆಂದು ಊಹಿಸಬಹುದಾಗಿದೆ… ಹನ್ನೆರಡನೆಯ ಶತಮಾನದಲ್ಲಿ ಮಾನವಕುಲದ ಉದ್ಧಾರಕ್ಕಾಗಿ ನಡೆದ ಶಿವಶರಣರ ಕ್ರಾಂತಿಯಲ್ಲಿ ಅಲ್ಲಮಪ್ರಭು ಜ್ಞಾನನಿಧಿಯಾಗಿ ವೈರಾಗ್ಯ ಮೂರ್ತಿಯಾಗಿ ಕಂಗೊಳಿಸಿದ್ದಾನೆ. ಅಂಧಾಭಿಮಾನಕ್ಕೆ ಒಳಗಾಗದೆ ಸಾಧಕರ ಲೋಪ ದೋಷಗಳ ಮೇಲೆ ಜ್ಞಾನದ ಬೆಳಕನ್ನು ಬೀರಿ ಅವರನ್ನು ಒರೆದು, ಕೆಡೆನುಡಿದು, ದಾರಿ ತೋರಿ ಸಮಸ್ತಜಾತಿಯ ಜಾಲವನ್ನು ಸರ್ವವನ್ನು ಕರುಣಿಸಿ, ಉದ್ಧರಿಸುತ್ತ ಸಾಗಿದ ಈ ಮಹಾತ್ಮನ ದಿವ್ಯ ವ್ಯಕ್ತಿತ್ವವನ್ನು ಈ ಕಾವ್ಯ ಅಪೂರ್ವವಾದ ರೀತಿಯಲ್ಲಿ ಚಿತ್ರಿಸುತ್ತದೆ. ಅಲ್ಲಮ ಪ್ರಭುವಿನ ಚರಿತ್ರೆಯನ್ನು ಮೊಟ್ಟಮೊದಲು ಬರೆದ ಹರಿಹರ ತನ್ನ ಪ್ರಭುದೇವರ ರಗಳೆಯಲ್ಲಿ ಅಲ್ಲಮ ಕಾಮಲತೆಗೆ ಮರುಳಾಗಿ ವಿರಹದಿಂದ ಬೆಂದು ವೈರಾಗ್ಯ ಪಡೆದಂತೆ ಚಿತ್ರಿಸಿದ್ದರೆ `ಲಲಿತನಿರ್ಮಲ ಚಂದ್ರಕಾಂತದ ಶಿಲೆಯ ಹತ್ತಿರ ಲತೆಯ ದಾವಾನಳನು ಕೊಳಲಾಜ್ವಾಲೆಯಾ ಶಿಲೆಯೊಳಗೆ ತೋರ್ಪಂತೆ ತಿಳಿಯದಯದ ಜನಕೆ ಮಾಯೆಯ ತಳಿತ ಕಾಮಜ್ವಾಲೆಯಲ್ಲಮನೊಳಗೆ ಪ್ರತಿಬಿಂಬಿಸಿದುದಾತನೆ ಕಾಮಿಯೆಂಬಂತೆ-ಎಂದು ಚಾಮರಸ ಅಲ್ಲಮನ ಗುರುಗುಹೇಶ್ವರ ಸ್ವರೂಪದ ದರ್ಶನ ಮಾಡಿಸಿದ್ದಾನೆ. ತನ್ನ ಕಾವ್ಯ `ಸತ್ತವರ ಕಥೆಯಲ್ಲ ಜನನದ ಕುತ್ತದಲ್ಲಿ ಕುದಿ ಕುದಿದು ಕರ್ಮದ ಕತ್ತಲೆಗೆ ಸಿಲುಕುವರ ಸೀಮೆಯ ಮಾತು ತಾನಲ್ಲ ಎಂದು ಘೋಷಿಸಿ `ಸತ್ಯಶರಣರು ತಿಳಿವುದೀ ಪ್ರಭುಲಿಂಗಲೀಲೆಯನು’ ಎಂದಿರುವುದು ಕವಿಯ ಉದ್ದೇಶಕ್ಕೆ ಸಾಕ್ಷಿ… ಮಲಯಜದ ಮರ ಗಾಳಿ ಸೋಂಕಿನಲುಳಿದ ಮರ ಪರಿಮಳಿಸುವಂತೆ ಅಲ್ಲಮನ ದಿವ್ಯ ಸಂಪರ್ಕದಿಂದ ಬಸವಣ್ಣ, ಸಿದ್ಧರಾಮ, ಗೊಗ್ಗಯ್ಯ, ಗೋರಕ್ಷ, ಮಾಯಾದೇವಿ, ಮಹಾದೇವಿಯಕ್ಕ, ಮುಕ್ತಾಯಕ್ಕಮೊದಲಾದವರು ಕಣ್ಗೆಸೆದರೂ ಆಯಾ ಪಾತ್ರವೃಕ್ಷಗಳು ತಮ್ಮ ಸತ್ತ್ವದಿಂದಲೇ ಬೆಳೆದು, ತಂತಮ್ಮ ನೆಲೆಯಲ್ಲಿ ನಿಂತು ಅಲ್ಲಮನ ಪಾದಕ್ಕೆ ಬಾಗಿ ಹೂ ಬಿಟ್ಟಿವೆ. ಒಂದು ದೃಷ್ಟಿಯಿಂದ ಪಾರ್ವತಿಯ ತಾಮಸಕಳೆಯಾಗಿ ಬಂದ ಮಾಯೆ ಅವಳಿಗೆ ತಿಳಿವನ್ನು ಕೊಟ್ಟ ವಿಮಳೆ, ಸಾತ್ತ್ವಿಕ ಕಳೆಯಾಗಿ ಬಂದ ಅಕ್ಕಮಹಾದೇವಿ, ಸುಜ್ಞಾನಿ ನಿರಹಂಕಾರರ ಮಗನಾಗಿ ಹುಟ್ಟಿದ ಅಲ್ಲಮ-ಈ ಮುಂತಾದ ಕಥಾರಚನೆಯಲ್ಲಿ ಆಧ್ಯಾತ್ಮಿಕವಾದ ಸಾಂಕೇತಿಕ ಧ್ವನಿಯ ಏಕತೆ ಕಾಣುತ್ತದೆ. `ಶಿವನ ನಟ ನಾಟಕದ ಮಹಿಮೆಯನ್ನು ತೆರೆದು ತೋರಿಸುವ ಈ ಕಾವ್ಯದಲ್ಲಿ ಎಲ್ಲ ಪಾತ್ರಗಳೂ ಜೀವಕಳೆಯಿಂದ ಕೂಡಿ ಶಿವಕಳೆಯನ್ನು ಬೆಳಗುತ್ತವೆ… ತಿಳಿಗನ್ನಡದ ತುಂಬಿದ ತೊರೆಯಂತೆ ನಿರರ್ಗಳವಾಗಿ ಹರಿಯುವ ಚಾಮರಸನ ಭಾಮಿನೀ ಷಟ್ಟದಿಯ ಶೈಲಿಯನ್ನು ಕುಮಾರವ್ಯಾಸನೊಡನೆ ಹೋಲಿಸಬಹುದಾದರೂ ಇವನ ಭಾಷೆ ನಯಗಾರಿಕೆಯಿಂದ ಕೂಡಿದೆ. ಆ ಕಾಲದ ಶಿವಶರಣರ ವಚನಗಳನ್ನು ಕವಿ ಚೆನ್ನಾಗಿ ಅಭ್ಯಾಸ ಮಾಡಿದ್ದ ಎಂಬುದಕ್ಕೆ ಇವನ ವಾಣಿ ಸಾಕ್ಷಿ ಹೇಳುತ್ತದೆ. ಭಾವ ಭಾಷೆಗಳಲ್ಲಿನ ಅಪೂರ್ವವಾದ ಹೊಂದಾಣಿಕೆಯಿಂದಲೂ ಉಜ್ಜ್ವಲವಾದ ಉಪಮೆ ರೂಪಕ ದೃಷ್ಟಾಂತಗಳಿಂದಲೂ ಸಮಯೋಚಿತವಾದ ವರ್ಣನೆ ಮತ್ತು ದೇಶೀಯ ಬೆಡಗಿನ ಪರಿಣಾಮದ ಉತ್ಕಟತೆಯಿಂದಲೂ ಇವನ ಶೈಲಿ ಇವನ ಸ್ವತಂತ್ರ ಕವಿತಾಮಾರ್ಗದ ಮುಖಬಿಂಬದಂತಿದೆ… ಚಾಮರಸನ ‘ಪ್ರಭುಲಿಂಗಲೀಲೆ’ ಸಂಸ್ಕೃತ, ತಮಿಳು, ತೆಲುಗು ಹಾಗೂ ಮರಾಠಿ ಭಾಷೆಗಳಿಗೆ ಪರಿವರ್ತನ ಹೊಂದಿದ ಕೀರ್ತಿ ಪಡೆದ ಏಕಮಾತ್ರ ಕನ್ನಡ ಕಾವ್ಯವಾಗಿದೆ..! ಹೀಗೆಯೇ ಚಾಮಾರಸನ ಕಾವ್ಯ ಸಾಗುತ್ತದೆ… ಲೇಖನ ಸಹಕಾರ– ಎಚ್. ವೃಷಬೇಂದ್ರಸ್ವಾಮಿಯವರ ಕೃತಿ. ******** ಕೆ.ಶಿವು.ಲಕ್ಕಣ್ಣವರ                  

ಪುಸ್ತಕ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ರೇಮಾಸಂ ಡಾ.ರೇಣುಕಾತಾಯಿ.ಎಂ.ಸಂತಬಾ ಸುಳ್ಳು ಶಬ್ದಗಳ ಪೋಣಿಸಿ ಸರಮಾಲೆ ಹಾಕದಿರು ಗೆಳೆಯ/ ಪೊಳ್ಳು ಮಾತಿನಲಿ ಸಿಲುಕಿಸಿ ಬಲೆಯ ಬೀಸದಿರು ಗೆಳೆಯ// ಚಂದಿರ ನಕ್ಕಾನು ನಕ್ಷತ್ರಗಳನು ಪಿಡಿದು ಮುಡಿಸುವ ಪರಿಗೆ/ ವಾಸ್ತವಕ್ಕೆ ಮರಳು ಹಗಲುಗನಸು ಕಾಣದಿರು ಗೆಳೆಯ// ಎದೆಯ ಹೊಲದಲಿ ಪ್ರೀತಿ ಬಿತ್ತಲು ಬೇಕೆನು ಕಾಣಿಕೆ/ ಧನವೇ ಮನವನು ಗೆಲ್ಲುವದೆಂದು ತಿಳಿಯದಿರು ಗೆಳೆಯ// ವಾಸ್ತವಿಕತೆ ಕನ್ನಡಿಯನು ಗಮನಿಸಿ ನೋಡಲಾರೆಯೇನು/ ಪ್ರೇಮದಲಿ ಮಿಂದ ಕಣ್ಣ ದೃಷ್ಟಿ ಬದಲಿಸಿದಿರು ಗೆಳೆಯ// ಉಷೆಯಿಂದ ನಿಶೆಯವರೆಗೆ ನಿನ್ನ ನೆನೆಯುವಳು ನೆನಪಿಲ್ಲವೇ/ ಪರರ ನಶೆಯಲಿ ರೇಮಾಸಂನು ಮರೆಯದಿರು ಗೆಳೆಯ// *****************************

ಕಾವ್ಯಯಾನ Read Post »

ಇತರೆ

ನೆನಪು

ಜ್ಯೋತಿಬಾ ಫುಲೆಯವರ ಜಯಂತಿ “ಜ್ಯೋತಿ ಬೆಳಗೋಣ ಬನ್ನಿ”          ಏಪ್ರೀಲ ತಿಂಗಳು ನಿಜಕ್ಕೂ ಭಾರತ ದೇಶಕ್ಕೆ ಎರಡು ತಾರೆ ನೀಡಿತು. ಒಬ್ಬರು ಮಹಾಮಾನವ ಬಾಬಾಸಾಹೇಬ ಅಂಬೇಡ್ಕರರು ಮತ್ತು ಇನ್ನೊಬ್ಬರು ಕ್ರಾಂತಿಜ್ಯೋತಿ ಮಹಾತ್ಮಾ ಜ್ಯೋತಿಭಾ ಫುಲೆ. ಜ್ಯೋತಿರಾವರು ಹುಟ್ಟಿದ್ದು ೧೧ ಏಪ್ರೀಲ ಮತ್ತು ಅಂಬೇಡ್ಕರರು ಹುಟ್ಟಿದ್ದು ೧೪ ಏಪ್ರೀಲ. ದಮನಿತ ಮತ್ತು ಶೋಷಿತ ಸಮಾಜದ ಏಳಿಗೆಗೆ ಶ್ರಮಿಸಿ, ಅಂಧಕಾರವನ್ನು ಹೋಗಲಾಡಿಸಿ, ದೇಶದ ಆಂತರಿಕ ಸ್ವಾತಂತ್ರö್ಯ ಮತ್ತು ಸಾತ್ವಿಕ ಸ್ವಾತಂತ್ರಕ್ಕೆ ಹೋರಾಡಿದ ಇರ್ವರೂ ತಾರೆಗೆ ಸಮಾನರು. ಅಂಬೇಡ್ಕರರಿಗೆ ಆದರ್ಶರಾದ ಜ್ಯೋತಿರಾವರು ಭಾರತದ ಆಧುನಿಕತೆಗೆ ಹಾಕಿದ ಬದ್ರ ಬುನಾದಿ ಇಂದು ದೇಶವನ್ನು ಜಗತ್ತಿನಲ್ಲಿ ಮಿನುಗುವಂತೆ ಮಾಡಿದೆ.                        ಫುಲೆಯವರು ೧೧ ಏಪ್ರೀಲ್ ೧೮೨೭ ರಂದು ಮಹಾರಾಷ್ಟದ ಸಾತಾರಾ ಜಿಲ್ಲೆಯ ‘ಕಟ್ಗುಣ’ ಹಳ್ಳಿಯಲ್ಲಿ ತರಕಾರಿ ಮಾರುವವನ ಮನೆಯಲ್ಲಿ ಜನಿಸಿದರು. ಸಮಾನತೆ ಬೋಧಿಸಿದ ಸಂತ ತುಕಾರಾಮ, ಸಮಾನತೆಯ ತತ್ವದಡಿಯಲ್ಲಿ ರಾಜ್ಯ ಸ್ಥಾಪಿಸಿದ ಶಿವಾಜಿ ಮಹಾರಾಜರು, ಅನ್ಯಾಯದ ವಿರುದ್ಧ ಹೋರಾಡಿದ ಮಾರ್ಟಿನ್-ಲೂಥರ್-ಕಿಂಗ್ ಮತ್ತು ಮಾನವ ಹಕ್ಕು ಹೋರಾಟಗಾರ ಲೇಖಕ ಥಾಮಸ್ ಪೇನ್‌ರ ಪ್ರಭಾವಕ್ಕೆ ಒಳಗಾಗಿ ಭಾರತ ದೇಶದಲ್ಲಿ ದಮನಿತ ಮತ್ತು ಶೋಷಿತ ವರ್ಗದ ದಂಡನಾಯಕನಾಗಿ ಒಂಟಿ ಸಲಗದಂತೆ ಕಾದಾಡಿದ ವೀರ. ಕುಟುಂಬದ ಮತ್ತು ಸಮಾಜದ ಎಷ್ಟೆ ಒತ್ತಡ ಇದ್ದರೂ ಅತ್ಯಂತ ಜಿದ್ದಿನಿಂದ ಶಿಕ್ಷಣ ಪಡೆದರು. ನೌಕರಿ ಮಾಡುತ್ತಾ ಆರಾಮಾಗಿ ಇರಬಹುದಿತ್ತು. ಆದರೆ ಹಾಗೆ ಮಾಡದೆ ಸಮಾಜ ಸೇವೆಗೆ ತಮ್ಮನ್ನು ತಾವು ಮುಡುಪಾಗಿಟ್ಟರು.                ೧೮೪೮ರಲ್ಲಿ ಜ್ಯೋತಿರಾವರು ತಮ್ಮ ಮೇಲ್ವವರ್ಗದ ಆತ್ಮೀಯ ಸ್ನೇಹಿತನ ಮದುವೆಗೆ ಹೋದಾಗ ಸಂಭವಿಸಿದ ಅವಮಾನವು ಅವರ ಕಣ್ಣು ತೆರೆಸಿತು. ಈ ಅನಿಷ್ಠ ರೂಢಿ-ಪರಂಪರೆ ಮತ್ತು ಜಾತಿವ್ಯವಸ್ಥೆ ಮಣ್ಣುಗೂಡದೆ ಸಮಾಜದ ಮತ್ತು ದೇಶದ ಏಳಿಗೆ ಸಾಧ್ಯವಿಲ್ಲ. ಇದಕೆಲ್ಲಾ ಕಾರಣ ಅಜ್ಞಾನ. ಅಜ್ಞಾನ ತೊಲಗಬೇಕಾದರೆ ವಿದ್ಯೆಯೆ ಬಹುದೊಡ್ಡ ಅಸ್ತç ಎಂದು ತಿಳಿದು ಸಮಾಜದ ಪ್ರತಿಯೊಂದು ವರ್ಗಕ್ಕೆ ಶಿಕ್ಷಣ ಸಿಗುವಂತೆ ಪಣ ತೋಡುತ್ತಾರೆ.   “ವಿದ್ಯೆಯಿಲ್ಲದೆ ಮತಿ ಹೋಯಿತು ಮತಿ ಇಲ್ಲದೆ ನೀತಿ ಹೋಯಿತು ನೀತಿ ಇಲ್ಲದೆ ಗತಿ ಹೋಯಿತು ಗತಿ ಇಲ್ಲದೆ ವಿತ್ತ ಹೋಯಿತು ವಿತ್ತವಿಲ್ಲದೆ ಶೂದ್ರನು ಕುಸಿದ.             ಇಷ್ಟೆಲ್ಲಾ ಒಂದು ಅವಿದ್ಯೆ ಮಾಡಿತೆಂದು ಅವರು ಆ ವರ್ಷವೆ ಅಗಸ್ಟ ೧೮೪೮ ರಲ್ಲಿ ಪುಣೆಯಲ್ಲಿ ಶಾಲೆಯನ್ನು ತೆರೆಯುತ್ತಾರೆ. ಶಾಲೆಯಲ್ಲಿ ಪಾಠಕ್ಕೆ ಪತ್ನಿ ಸಾವಿತ್ರಿಬಾಯಿ ಫುಲೆಯವರಿಗೆ ಸ್ವತಃ ವಿದ್ಯೆ ಕಲಿಸಿ ದೇಶದ ಪ್ರಥಮ ಶಿಕ್ಷಕಿಯನ್ನಾಗಿ ಮಾಡುತ್ತಾರೆ. ಶಾಲೆಯ ಮುಖ ನೋಡದ ಸಾವಿತ್ರಿ ಪತಿಯ ವಿಚಾರಗಳಿಗಾಗಿ ತನ್ನ ಜೀವನವನ್ನೆ ಮುಡುಪಾಗಿಟ್ಟ ಧೀಮಂತ ಮಹಿಳೆ. ಶಾಲೆ ಕಲಿಸಲು ಹೋರಟಾಗ ಮೇಲ್ವರ್ಗದ ಕಿಡಗೇಡಿತನಕ್ಕೆ ಭಯಪಡದೆ ತಮ್ಮ ಕಾಯಕ ಚಾಲ್ತಿಯಿಟ್ಟರು. ಈ ಕಾರಣಕ್ಕೆ ಅವರಿಗೆ ಕುಟುಂಬದಿಂದ ಬಹಿಷ್ಕಾರಕ್ಕೆ ಒಳಗಾಗಬೇಕಾಯಿತು. ಅದಕ್ಕೂ ಅಂಜದ ಅವರು ಮುಂದೆ ೧೮೫೧ ರಲ್ಲಿ ಹೆಣ್ಣು ಮಕ್ಕಳಿಗಾಗಿ ಮತ್ತೊಂದು ಶಾಲೆಯನ್ನು ಪ್ರಾರಂಭ ಮಾಡಿದರು. ಮೊದಲಿಗೆ ಸಮಾಜದ ಭಯದಿಂದ ಕೇವಲ ೮ ಹೆಣ್ಣು ಮಕ್ಕಳು ಮಾತ್ರ ಶಾಲೆಗೆ ಬರುತಿದ್ದರು. ಆದರೆ ಇಂದು ದೇಶದಲ್ಲಿ ಕೋಟ್ಯಾವಧಿ ಹೆಣ್ಣು ಮಕ್ಕಳು ವಿದ್ಯೆ ಪಡೆದುಕೊಳ್ಳುತಿದ್ದಾರೆ, ಇದರ ಶ್ರೇಯ ನಿಜಕ್ಕೂ ಈ ದಂಪತಿಗಳಿಗೆ ಸಲ್ಲಬೇಕು.                       ಜ್ಯೋತಿರಾವ ಇಷ್ಟಕ್ಕೆ ನಿಲ್ಲದೆ ೧೮೫೨ ರಲ್ಲಿ ಅಸ್ಪೃಶ್ಯ ಜಾತಿಗಳಾದ ಮಹಾರ ಮತ್ತು ಮಾಂಗ ಮಕ್ಕಳಿಗೆ ಶಾಲೆಯನ್ನು ತೆರೆದರು. ದಾರಿದ್ರ್ಯ, ಬಡತನ, ಮೇಲು-ಕೀಳು, ಮೂಡನಂಬಿಕೆ ನಿರ್ಮೂಲನೆ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಕೃಷಿಕ ಮತ್ತು ಕಾರ್ಮಿಕ ವರ್ಗದವರಿಗೂ ಜ್ಞಾನದ ಬಾಗಿಲನ್ನು ತೆರೆದರು. ಏಕೆಂದರೆ ಬ್ರಿಟೀಷ ಸರಕಾರವು ಕೃಷಿಕ ಮತ್ತು ಕಾರ್ಮಿಕರ ಅಜ್ಞಾನದ ಲಾಭ ಪಡೆದುಕೊಂಡು ವಿಪರಿತ ಕಂದಾಯ ವಸೂಲಿ ಮಾಡುತ್ತಿತ್ತು. ಕಷ್ಟ ಮಾಡುವದು ಇವರು ಆದರೆ ವಸೂಲಿ ಮಾಡುವ ಅಧಿಕಾರಿಗಳು ಮಾತ್ರ ಮೇಲ್ವರ್ಗದವರು. ಅದಕ್ಕಾಗಿ ಫುಲೆಯವರು ಪ್ರಥಮ ಬಾರಿಗೆ ಬ್ರಿಟಿಷರ ವಿರುದ್ಧ ಈ ಬಗ್ಗೆ ಧ್ವನಿ ಎತ್ತಿದರು. ಜಮೀನ್ದಾರ ಪದ್ಧತಿ, ಸಾಮಂತಶಾಹಿ, ಸಾಹುಕಾರ ಪದ್ಧತಿ ಹೋಗಲಾಡಿಸಬೇಕು ಮತ್ತು ಕೃಷಿಕರಿಗೆ ಅತ್ಯಾಧುನಿಕ ಸಲಕರಣೆ ಕೊಡಬೇಕು ಎಂದು ನೇರ ಶಬ್ದಗಳಲ್ಲಿ ಕೇಳಿಕೊಂಡರು.                    ಜ್ಞಾನ ಮುಚ್ಚಿಟ್ಟು ಉಳಿದ ಸಮಾಜದ ಕತ್ತು ಹಿಸುಕುವ ಮೇಲ್ವರ್ಗದ ಜೊತೆ ಬಹಿರಂಗ ಸಮರ ಸಾರಿದ್ದರು. ಪ್ರಥಮ ಬಾರಿಗೆ ಪುರೋಹಿತನಿಲ್ಲದ ಮದುವೆಯನ್ನು ಮಾಡಿಸಿ ತಮ್ಮ ಸಮಾಜದಿಂದ ಬಹಿಸ್ಕೃತಗೊಂಡರು. ಬಾಲ್ಯವಿವಾಹದ ನಿರ್ಭಂದನೆಗೆ ಹೋರಾಡಿದರು. ಬಾಲ್ಯವಿವಾಹ ಪರಿಣಾಮವೆಂದರೆ ಸಮಾಜದಲ್ಲಿ ವಿಧವೆಯರ ಸಂಖ್ಯೆ ಹೆಚ್ಚಾಗಿತ್ತು. ಅಂದಿನ ಸಮಾಜವು ಈ ವಿಧವೆಯರಿಗೆ ಅತ್ಯಂತ ಹೀನವಾಗಿ ನೋಡಿಕೊಳ್ಳುತಿತ್ತು. ಅವರನ್ನು ಕೇಶಮುಂಡನೆ ಮಾಡಿಸಿ ಕತ್ತಲೆ ಕೋಣೆಯಲ್ಲಿ ಇಡಲಾಗುತಿತ್ತು. ಯೌವನದಲ್ಲಿಯೆ ವಿಧವೆಯರಾಗಿ ಅನೈತಿಕ ಮಾರ್ಗದಿಂದ ಗರ್ಭೀಣಿಯಾದರೆ ನವಜಾತ ಮಕ್ಕಳನ್ನು ಬಿಸಾಕಬೇಕಾಗುತ್ತಿತ್ತು ಇಲ್ಲದಿದ್ದರೆ ಎಲ್ಲಾದರು ಬಿಡಬೇಕಾಗುತ್ತಿತ್ತು. ಫುಲೆಯವರು ಇವರಿಗಾಗಿ ಮುಂದೆ ಬಂದು ವಿಧವೆ ಮತ್ತು ಮಕ್ಕಳ ಸಲುವಾಗಿ ೧೮೬೩ರಲ್ಲಿ ಅನಾಥಾಲಯ ತೆರೆದರು. ೧೮೭೩ ರಲ್ಲಿ ಬ್ರಾಹ್ಮಣ ವಿಧವೆಗೆ ಅನೈತಿಕ ಮಾರ್ಗದಿಂದ ಜನಿಸಿದ ಮಗುವನ್ನು ದತ್ತು ತೆಗೆದುಕೊಂಡು ಸಮಮಾಜದಲ್ಲಿ ಹೊಸ ಆದರ್ಶ ನಿರ್ಮಾಣ ಮಾಡಿದರು.                     ಸಮಾಜಕ್ಕೆ ಸತ್ಯದ ಅರಿವಾಗಬೇಕೆಂದು ೧೮೭೩ ರಲ್ಲಿ ‘ಸತ್ಯಶೋಧಕ ಸಮಾಜ’ ದ ಸ್ಥಾಪನೆ ಮಾಡುತ್ತಾರೆ. ಈ ಮೂಲಕ ಸಮಾಜದಲ್ಲಿಯ ಅನಿಷ್ಠ ಪದ್ಧತಿಗಳನ್ನು ಮೊಟಕುಗೊಳಿಸಿ ಸುಧಾರಣೆ ಮಾಡುವಂತೆ ಬ್ರಿಟೀಷ ಸರಕಾರಕ್ಕೆ ಶಿಪಾರಸು ಮಾಡಿದಾಗ ಸರಕಾರವು ‘ಎಗ್ರಿಮೆಂಟ್ ಆಕ್ಟ’ ಪಾಸು ಮಾಡುತ್ತದೆ. ೧೮೮೮ ರಲ್ಲಿ ಇಂಗ್ಲೇಂಡ್ ರಾಣಿಯ ಪುತ್ರ ಭಾರತ ಭೇಟಿಗೆ ಬಂದಿದ್ದರು. ಅವರ ಕಾರ್ಯಕ್ರಮದಲ್ಲಿ ಫುಲೆಯವರು ಒಕ್ಕಲಿಗರ ಪಾರಂಪರಿಕ ವೇಷ-ಭೂಷದಲ್ಲಿ ಹೋಗಿ ದೇಶದ ಪರಿಸ್ಥಿತಿಯ ಬಗ್ಗೆ ರಾಣಿಯವರಿಗೆ ಮನವರಿಕೆ ಮಾಡಿಕೊಟ್ಟರು.                         ‘ರಾಷ್ಟಿçಯ ಕಾಂಗ್ರೇಸ್’ ಪಕ್ಷವು ೧೮೮೯ರ ತನ್ನ ಸಮಾವೇಶ ಮುಂಬಯಿಯಲ್ಲಿ ಇಟ್ಟಿಕೊಂಡಿತು. ಅಲ್ಲಿ ಕೂಡ ಫುಲೆಯವರು ರೈತನ ಭೆತ್ತ ಮತ್ತು ಹುಲ್ಲಿನ ಗಂಟಿನ ಜೊತೆ ಹೋಗಿ ವಿರೋಧ ವ್ಯಕ್ತ ಪಡಿಸಿದ್ದರು. ರಾಷ್ಟಿçಯ ಕಾಂಗ್ರೇಸ ಪಕ್ಷವನ್ನು ವಿರೋಧ ಮಾಡಿದವರು ಮೊದಲಿಗರೆಂದು ಹೇಳಬಹುದು. ಏಕೆಂದರೆ ಇದರಲ್ಲಿ ಇರುವವರೆಲ್ಲಾ ಮೇಲ್ವರ್ಗದದವರು, ಸಮಾಜದ ಆಂತರಿಕ ಸ್ವಾತಂತ್ರದ ವಿಷಯ ಇರಲಿಲ್ಲ. ಅದಕ್ಕಾಗಿ ಇವರು ಈ ಪಕ್ಷದ ದೇಶಕ್ಕೆ  ಯಾವ ಅವಶ್ಯಕತೆ ಇಲ್ಲವೆಂದು ಹೇಳಿದ್ದರು.                   ಈಶ್ವರ ಒಬ್ಬನೆ ಇದ್ದಾನೆ ಅವನಿಗಾಗಿ ದಲ್ಲಾಲಿಗಳ ಅವಶ್ಯಕತೆ ಇಲ್ಲ. ಅದಕ್ಕಾಗಿ ಸಮಯ ಮತ್ತು ದುಡ್ಡು ವ್ಯರ್ಥ ಮಾಡದೆ, ವಿದ್ಯೆಯ ಉನ್ನತಿಗಾಗಿ ಶ್ರಮಿಸಿರಿ ಅದುವೆ ಶಾಂತಿ ನೆಲೆಸಲು ಸಹಕಾರಿ ಆಗುತ್ತದೆ ಎಂದು ಹೇಳಿದ್ದರು. ಸಮಾಜದ ಉನ್ನತಿಯ ಜೊತೆಗೆ ಇವರ ಸಾಹಿತ್ಯ-ಕೃಷಿಯು ಅತ್ಯಂತ ಮಹತ್ವದ್ದಾಗಿದೆ. ಅವರು ಬರೆದ ಶಿವಾಜಿ ಪುವಾಡ, ಬ್ರಾಹ್ಮಣರ ಕುಯುಕ್ತಿ, ದಾಸ್ಯ, ರೈತನ ಚಾಟ, ಸಾರ್ವಜನಿಕ ಸತ್ಯ-ಧರ್ಮ ಇಂತಹ ಹಲವಾರು ಮಹತ್ವದ ಕೃತಿಗಳು ಇಂದಿಗೂ ಅದೆಷ್ಟೋ ಸಲ ವಿಮರ್ಶೆಗೆ ಬರುತ್ತಿವೆ. ಬದುಕಿನ ಕೊನೆಗೆ ಇವರು ಪಾರ್ಶ್ವವಾಯಿವಿನ ಆಘಾತದಿಂದ ತಮ್ಮ ಬಲಗೈ ಶಕ್ತಿ ಹೀನವಾದಾಗ ಎಡಗೈಯಿಂದ ಸಮಾಜ ಪ್ರಬೋಧನೆ ಕುರಿತು ಬರೆದ ಮಹಾನುಭಾವರು. ಇಂತಹ ಮಹಾನ್ ಚೇತನ  ೨೮ ನವ್ಹೆಂಬರ ೧೮೯೦ಕ್ಕೆ ನಮ್ಮನ್ನು ಅಗಲಿದರು.                  ಇವರ ಆದರ್ಶ ಮುಂದೆ ಮಹಾರಾಷ್ಟç ಸಾಮಾಜಿಕ ಚಳುವಳಿಯ ಮುಖ್ಯ ಕೇಂದ್ರಬಿಂದು ಆಗುತ್ತದೆ. ಮಹಾತ್ಮಾ ಗಾಂಧೀಜಿ, ಶಾಹೂ ಮಹಾರಾಜ, ಇಂದಿನ ಛಗನ್ ಭುಜಬಳದ ವರೆಗೆ ಅನೇಕ ನಾಯಕರು ಇವರ ಕಾರ್ಯದ ಪ್ರೇರಣೆ ಪಡೆದಿದ್ದಾರೆ. ಕೆಲವರ ಅಭಿಪ್ರಾಯದಂತೆ ಮಹಾತ್ಮಾ ಗಾಂಧೀಜಿಯವರೆ ಇವರಿಗೆ ಪ್ರಥಮಬಾರಿಗೆ ‘ಮಹಾತ್ಮಾ’ ಎಂದು ಕರೆದರು. ಆದರೆ ೧೮೮೦ರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನೋಡಿ ಮುಂಬಯಿ ಸರಕಾರ ಮತ್ತು ಜನರು ಇವರಿಗೆ ‘ಮಹಾತ್ಮಾ’ ಎಂದು ಕರೆಯುತ್ತಾರೆ.                     ಪ್ಲೇಟೋ ಹೇಳಿದಂತೆ ‘ಅಜ್ಞಾನವು ಎಲ್ಲ ಕೆಡಕುಗಳ ಮೂಲ ಮತ್ತು ಮಹಾಮಾರಿ.’ ಆ ಅಜ್ಞಾನವನ್ನೆ ಕಿತ್ತೊಗೆಯಲು ಪ್ರಯತ್ನಸಿದ ಫುಲೆಯವರ ವಿಚಾರಗಳು ಇಂದು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬಂದಿವೆ ನಾವು ಭಾರತಿಯರು ಕೇಳಿಕೊಳ್ಳುವದು ಅವಶ್ಯಕವಾಗಿದೆ. ಸುಮಾರು ೧೭೫ ವರ್ಷಗಳ ಹಿಂದೆ ದೇಶಕ್ಕೆ ಬೆಳಕಿನ ಮಾರ್ಗ ತೋರಿಸಿದ ಜ್ಯೋತಿರಾವರ ಜ್ಯೋತಿಯನ್ನು ಇಂದಿಗೂ ಅದೆಷ್ಟೋ ಹುಳಗಳು ಆರಿಸುವ ಪ್ರಯತ್ನ ಮಾಡುತ್ತಿವೆ. ಅದಕ್ಕಾಗಿ ನಾವು ಭಾರತಿಯರು ಸತ್ಯವನ್ನು ಅರಿತುಕೊಂಡು ಅವರ ಜ್ಯೋತಿಯನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಬೇಕಿದೆ. ಅವರು ಒಂದು ಮಾತನ್ನು ಸದಾ ಹೇಳುತ್ತಿದ್ದರು, “ಒಂದು ವೇಳೆ ಜನರು ನೀವು ಮಾಡುವ ಸಂಘರ್ಷದಲ್ಲಿ ಬಂದರೆ, ದಯವಿಟ್ಟು ಅವರ ಜಾತಿ ಕೇಳಬೇಡಿ.” ಆದರೆ ಇಂದು ನಾವು ಮುಂಜಾನೆ ‘ವಾಕಿಂಗ್’ ಹೋಗುವಾಗ ಸಹ ಜಾತಿ ನೋಡುತ್ತೇವೆ. ದೇಶದ ರಾಜಕಾರಣವಂತು ಹೇಳಲಿಕ್ಕೆ ಬಾರದಷ್ಷು ಹದಗೆಡುತ್ತಿದೆ. ಪ್ರತಿಯೊಂದನ್ನು ನಾವು ಜಾತಿ-ಧರ್ಮದ ಆಧಾರದ ಮೇಲೆ ನೋಡುತ್ತೇವೆ.              ಅಂದಶೃದ್ಧೆ ಎಷ್ಟರ ಮಟ್ಟಿಗೆ ನಮ್ಮಲ್ಲಿ ಹೂತಿದೆ ಅಂದರೆ ಮುಂಜಾನೆ ಎರಡು ಗಂಟೆಗಳ ಕಾಲ ಎಲ್ಲ ವಾಹಿನಿಗಳ ಭವಿಷ್ಯ ನೋಡದೆ ಹೊರಗೆ ಬರುವದಿಲ್ಲ. ಇಂದು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾದ ಯುವಕ ಬಂಧುಗಳು ಇಲ್ಲದ-ಸಲ್ಲದ ವಿಚಾರಗಳನ್ನು ಚರ್ಚೆ ಮಾಡುವದಕ್ಕಿಂತ, ನಾವು ನಿಜಕ್ಕೂ  ದಾಸ್ಯದಿಂದ ಮುಕ್ತರಾ..? ನಮಗೆ ಸ್ವತಂತ್ರ ಇದೆಯಾ..? ಸ್ತಿçಯರು ಮುಕ್ತರಾಗಿದ್ದಾರಾ..? ಬಾಲ್ಯವಿವಾಹ ಪದ್ಧತಿ ಕೊನೆ ಆಯಿತಾ..? ದೇಶ ಬಡತನ ಮುಕ್ತ ಆಗಿದೆಯೆ..? ದಾರಿದ್ರ್ಯ ಅಂದರೇನು..? ದೇಶದಲ್ಲಿ ಸಮಾನತೆಯೆ ಇದೆಯಾ..? ಯಾರಾದರೂ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರಾ? ನಿಜವಾದ ಧರ್ಮ ಮತ್ತು ದೇವರು ಯಾರು..? ಈ ಪ್ರಶ್ನೆಗಳನ್ನು ಕೇಳಿಕೊಂಡು ಅದಕ್ಕೆ ಉತ್ತರ ಕಂಡುಕೊಳ್ಳುವದು ಒಳ್ಳೆಯದೆಂದು ಅನಿಸುತ್ತದೆ. ಬಹುತೇಕ ಇಂದು ಕೊರೋನಾ ಮಹಾಮಾರಿ ಈ ಎಲ್ಲ ಪ್ರಶ್ನೆಗಳನ್ನು ಕೇಳುವಂತೆ ಮಾಡುತ್ತದೆ ಎಂಬುದು ನನ್ನ ಭಾವನೆ. ***************************************************   ಮಲಿಕಜಾನ ಶೇಖ                                                                                                                 

ನೆನಪು Read Post »

ಕಾವ್ಯಯಾನ

ಶಿಶುಗೀತೆ

ಕಾಡಿನಿಂದ ನಾಡ ಪ್ರವಾಸ. ಸುಜಾತಾ ಗುಪ್ತ ಜಿಂಕೆ ಮರಿ ಜಿಂಕೆ ಮರಿ ನೀ ನನ್ನ ಮುದ್ದು ಮರಿ ನಾಡಿಗೋಗೋಣ ಬರ್ತೀಯಾ ನಾವ್ ನಾಡಿಗೋಗೋಣ ಬರ್ತೀಯಾ ಆನೆ ಮರಿ ಆನೆ ಮರಿ ನೀ ನಾಡಿಗೇಕ್ ಹೋಗ್ತೀಯ ನಾಡಿಗೋಗಿ ಏನ್ಮಾಡೋದು ನಾವ್ ಏನ್ಮಾಡೋದು.. ಶಸ್ತ್ರಧಾರಿಯಾಗಿ ಬರಲು ಮನುಜನಂದು ಹೆದರಿ ಬೆದರಿ ಪೊದೆಗಳಲ್ಲಿ ಅಡಗಿದೆವು ಸ್ವಚ್ಛಂದದೆ ಇಂದು ನಾಡು ಸುತ್ತೋಣ ನಾವ್ ನಾಡು ಸುತ್ತೋಣ.. ನಾ ಬರಲ್ಲಪ್ಪ, ಅಮ್ಮ ಕಳಿಸಲ್ಲ ಬಾಣಧಾರಿ ಬೇಟೆಗಾರ ಇಹನಲ್ಲಿ ನಂಗ್ ಭಯ ನಾ ಬರಲ್ಲ ನಾಡಿಗೆ ನಾನೆಂದೂ ಬರಲ್ಲ.. ಹೆದರಿ ಬೇಡ ಜಿಂಕೆ ಮರಿ ಕರೋನ ರಕ್ಕಸಕೆದರಿ ಮನುಜ ಮನೆಯ ಬಂಧಿ ಆಗಿಹ ಬೇಡ ನಿಂಗೆ ಭಯ ನಾಡ ಸುತ್ತಿ ಅಂದ ಚಂದ ನೋಡುವ.. ಬೇಗ ರೆಡಿಯಾಗು ಜಿಂಕೆ ಮರಿ ಮೊಬೈಲು, ಕ್ಯಾಮೆರಾ ಹಿಡಿದು ಹೊರಡುವ ಸ್ವಾರ್ಥಿ ಮನುಜರ ಭಾವಚಿತ್ರ ತೆಗೆದು ನಕ್ಕು ನಲಿಯುವ.. ಮತ್ತೆ ಮತ್ತೆ ಬಾರದಿಂತ ಒಂದು ಸುದಿನ ಭಯವ ಮರೆತು ನೀ ಬರಲು ನಾಡ ಸುತ್ತಿ ಬರುವ ನಾವ್ ಧೀಮಂತರೆನಿಸೋಣ ನಾವ್.. ಜಿರಾಫೆ,ಒಂಟೆ ,ಮೊಲ ಬಂದರು ಕುಟುಂಬದೊಂದಿಗೆ ಪ್ರವಾಸಕೆಂದು ನಾಡಿಗೆ, ಊರು ಖಾಲಿ, ನಾಡು ಖಾಲಿಯೆಂದು ರಸ್ತೆ ಸುತ್ತಿ, ಗೃಹ ಖೈದಿಗಳ ನೋಡಿ ಕಿಲಕಿಲನೆ ನಗಲೆಂದು ಬಂದರು.. *********

ಶಿಶುಗೀತೆ Read Post »

ಕಾವ್ಯಯಾನ

ಕಾವ್ಯಯಾನ

ಚರಿತ್ರೆ ಚಿರನಿದ್ರೆ ದೇವು ಮಾಕೊಂಡ ಜಗದ ಬಲೆ ಬಲೆಯೊಳಗಿನ ಮುಸುಕು ಸಿಕ್ಕಿಸಿಕೊಂಡ ಬದುಕ ಕೊಂಡಿ ಕಳಚಲು ಯತ್ನಿಸುವ ವೈರಾಗಿ ರಾತ್ರಿ ಹೆದರುತ್ತದೆ ಹೊರಬರಲು ಹಗಲ ಬಯಲು ನರ್ತನಕ್ಕೆ ಅನುಗಮನ ನಿಗಮನದರಿವು ಏಕಮುಖಗೊಂಡಿದೆ ಗೊಂದಲ ಜಗದಿ ದಿನ ದಿನ ನಂಬಿಕೆಗಳೆ ಬೋಣಿಗೆ ಮಾಡುವಾಗ ಬೋದಿಗೆ ಶಾಸನ ಮೌನ ಮಾತಾಗಿದೆ ಮಹಾಸತಿ ಕಲ್ಲುಗಳು ಮನಸು ತೇವ ಮಾಡಿ ನಕ್ಕು ಮತ್ತೆ ಮತ್ತೆ ಶರಣಾಗುತ್ತಿವೆ ಅಂಧಗೋಪುರಕ್ಕೆದರಿ ನೀರವರಾತ್ರಿ ದಮನಿತ ದೀಪಗಳುರಿಸುವಾಗ ವಿಲೋಮಗಾಳಿ ಜನಜನಿತ ಅವಮಾನಿತ ! ತನ್ನೊಳಗಿನ ತನ್ನದರಿವು ಹುಡುಕುವ ಆಗುಂತಕನೊಬ್ಬ ನಿನ್ನೆ ಸತ್ತ ಹೆಣದ ಮುಂದೆ ನಿಂತ ಬೈರಾಗಿ ಕಣ್ಣೀರು ಹಾಕಲು ಹೇಸುತ್ತಿದ್ದ ನಾಳೆಯ ನಗಾರಿಗಳ ದನಿ ನಂಬಿ ಜಡಜಗದ ಬಲೆಗೆ ಬಿದ್ದ ಜೀನಗಂಬ ಮೂಕಗೊಂಡಿದೆ ಕಾವ್ಯಶಾಸನ ಲ್ಯಾವಿಕಟ್ಟಿ ಕೆರೆ ಕಟ್ಟಿಸಿ ಬಾವಿ ತೋಡಿಸಿ ಹಂಸರೆಕ್ಕೆ ಮುರಿದು ಒಳಗೆ ಒಗೆದು ಮೇಲೊಂದು ಶಾಸನ ಕೆತ್ತಿ ಫಲಕವಿಟ್ಟು ಅಕ್ಷರಗಳು ನೇತಾಡುತ್ತಿವೆ ತೇವಗೋಡೆಯಲಿ ‘ಸತ್ಯಂ ಶಿವಂ ಸುಂದರಂ’ ‘ಅಹಿಂಸಾ ಪರಮೋ ಧರ್ಮಂ’ ಶಾಂತಿ ಅಗೋಚರ ಚರಿತ್ರೆ ಚಿರನಿದ್ರೆ **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆಗಬಹುದು. ಎಂ.ಆರ್.ಅನಸೂಯ ಆಗಬಹುದು ಧುಮ್ಮಿಕ್ಕುವ ಕಣ್ಣೀರು ಕೇವಲ ಕಣ್ಣಂಚಿನ ಕಂಬನಿ ಮಲಗಬಹುದು ಕೆರಳಿ ನಿಲ್ಲುವ ದ್ವೇಷ ಮೊಂಡಾದ ಮಚ್ಚಾಗಿ ಮರಗಟ್ಟಬಹುದು ಬೆಂಕಿಯುಗುಳುವ ಕೋಪವೂ ಕೊರೆವ ಹಿಮಗಡ್ಡೆಯಾಗಿ ಇಳಿಯಬಹುದು ಉಕ್ಕಿ ಹರಿವ ಉನ್ಮಾದವೂ ನೆರೆಯಿಳಿದ ನದಿಯಾಗಿ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಎ ಎಸ್ ಮಕಾನದಾರ. ಗಲ್ ಗಲ್ ಗಜ್ಜೆಯ ನಾದ ಹೊಮ್ಮಿಸುತ ಮನದ ಅಂಗಳದಲಿ ಒಮ್ಮೆ ಓಡಾಡಿ ಬಿಡು ಕತ್ತಲು ತುಂಬಿದ ಮನೆಯ ಮೂಲೆ ಮೂಲೆಯಲೂ ನಗುವ ತೂರಾಡಿ ಬಿಡು ಸೂರ್ಯ ಚಂದ್ರ ನಕ್ಷತ್ರಗಳ ಬೆಳಕೇಕೆ ನಿನ್ನ ಕಣ್ಣ ಬೆಳದಿಂಗಳು ಸಾಕು ಬೆಳಕ ಹಬ್ಬಕೆ ಬಾಗಿಲು ಕಿಟಕಿಗಳಾಚೆ ಇರಲಿ ಆ ಮುಗಿಲ ತಾರೆಯರು ಬಾಚಿಕೊಳ್ಳುತ್ತೇನೆ ಒಲವನ್ನೊಮ್ಮೆ ತೂರಾಡಿ ಬಿಡು ಬಾಳನಂದನಕ್ಕಿಗ ಚೈತ್ರ ಬಂದಾಗಿದೆ ಹಸಿರು ಬಳ್ಳಿಯ ತುಂಬ ಆಸೆಗಳ ಒಸಗೆ ಮೊಗ್ಗು ಹೂವಾಗಿ ಅರಳಿ ನಲಿಯುವ ಕಾಲ ತೋಳ ತೆಕ್ಕೆಯಲಿ ಒಲಾಡಿ ಬಿಡು ಹೃದಯ ಸಿಂಹಾಸನದಲಿ ನೀನೇ ಮಹಾರಾಣಿ ಯಾವ ದಾಳಿಗೂ ನಾನು ಹೆದರಲಾರೆನು ಎದೆ ಹಿಗ್ಗಿ ಹಾಡುವ ಹಾಡು ಕಿವಿಗೊಟ್ಟು ಕೇಳುತ್ತಾ ಪ್ರೀತಿಯ ಮತ್ತಲಿ ತೇಲಾಡಿ ಬಿಡು ಕನವರಿಕೆಯ ಕದ ತೆರೆದು ಕರಿ ನೆರಳ ಪರದೆ ಸರಿಸಿ ನೋಡು ಜಗವನೊಮ್ಮೆ ಎಷ್ಟು ಸುಂದರ ನೀ ಹೆಜ್ಜೆ ಇಟ್ಟಲ್ಲೆಲ್ಲಾ ಹೊನ್ನ ಸಾಲಿನ ಬೆಳೆಯು ಮಕಾನ ಎದೆ ಹೊಲದ ತುಂಬ ನಲಿದಾಡಿ ಬಿಡು ******

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಮೈಕ್ರೋವೈಟಾ ಸಿದ್ಧಾಂತ ಮತ್ತು ವೈರಸ್ ನಿಯಂತ್ರಣ ಗಣೇಶ್ ಭಟ್,ಶಿರಸಿ ಮೈಕ್ರೋವೈಟಾ ಸಿದ್ಧಾಂತ ಮತ್ತು ವೈರಸ್ ನಿಯಂತ್ರಣ ಒಂದು ಚಿಕ್ಕ ವೈರಾಣು ಜಗತ್ತನ್ನು ನಡುಗಿಸುತ್ತಿದೆ. ಪ್ರಕೃತಿಯನ್ನು ಜಯಿಸಿದ್ದೇನೆಂಬ ಮಾನವನ ಅಹಂಕಾರದ ಗುಳ್ಳೆಯನ್ನು ಒಡೆದಿದೆ. ಬಡವ, ಶ್ರೀಮಂತ, ಜಾತಿ, ಮತಗಳೆಂಬ ಮಾನವ ನಿರ್ಮಿತ ಕೃತಕ ಗೋಡೆಗಳು ವೈರಾಣುವಿನ ಅಬ್ಬರಕ್ಕೆ ನೆಲಕಚ್ಚಿವೆ. ಒಂದು ಶತಮಾನದ ಹಿಂದೆ ಮಾನವ ಕುಲವನ್ನು ಇನ್ಫ್ಲುಯೆಂಝಾ ರೋಗದ ಮೂಲಕ ಮಣಿಸಿದ್ದ ವೈರಾಣು ಕಲಿಸಿದ ಪಾಠವನ್ನು ಮರೆತಿದ್ದರಿಂದ ಬಹುಶಃ ಕಳೆದ ಎರಡು ದಶಕಗಳಿಂದೀಚೆಗೆ ಹೊಸ ಹೊಸ ರೂಪ ತಾಳಿ ವೈರಾಣು ದಾಳಿ ಇಡುತ್ತಿದೆ. ಸಾರ್ಸ್, ಎಬೋಲಾ, ಹಕ್ಕಿಜ್ವರ, ಹಂದಿಜ್ವರ, ಡೆಂಗ್ಯೂ, ಚಿಕನ್ಗುನ್ಯಾ ಇತ್ಯಾದಿ ರೋಗಗಳ ನಂತರ ಈಗ ಕೊರೊನಾ. ವೈರಸ್ನ ಒಂದು ರೂಪವನ್ನು ನಿಯಂತ್ರಿಸಿದ್ದೇವೆಂದು ಹೆಮ್ಮೆಪಡುವಷ್ಟರಲ್ಲಿ ಮತ್ತೊಂದು ಪ್ರಭೇದ ಕಾಣಿಸಿಕೊಳ್ಳುತ್ತಿದೆ. ರಾಜ್ಯಗಳ ನಡುವಿನ ಗಡಿ, ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿರೇಖೆಗಳು ಮಾನವರ ಓಡಾಟವನ್ನು ನಿಯಂತ್ರಿಸಬಹುದೇ ಹೊರತು ವೈರಾಣುಗಳ ಚಲನೆಯನ್ನಲ್ಲ. ಕೊರೊನಾ ವೈರಸ್ ಚೀನಾದಿಂದ ಹಬ್ಬಿತು ಎಂದು ಹೇಳಲಾಗುತ್ತದೆ. ಅಲ್ಲಿಯ ಬಾವಲಿಗಳಲ್ಲಿ ಈ ವೈರಸ್ ಇತ್ತು, ಮಾನವನ ದೇಹದಲ್ಲಿ ಸೇರಿಕೊಂಡ ನಂತರ ಅದರ ಪ್ರಕೋಪ ಹೆಚ್ಚಾಯಿತೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಬಾವಲಿಯಲ್ಲಿ ಎಂದಿನಿಂದ ಈ ವೈರಸ್ ಇತ್ತು? ಎಲ್ಲಿಂದ ಬಂತು? ಯಾಕೆ ಬಂತು ಇತ್ಯಾದಿಗಳಿಗೆ ಉತ್ತರ ಸಿಗುತ್ತಿಲ್ಲ. ಇಷ್ಟಾಗಿಯೂ ಈ ವೈರಸ್ಗಳಿಗೆ ಜೀವ ಇದೆಯೇ? ಪೃಥ್ವಿಯ ಮೇಲೆ ವಿಕಾಸಹೊಂದಿರುವ ಜೀವಜಾಲದಲ್ಲಿ ವೈರಸ್ನ ಸ್ಥಾನ ಎಲ್ಲಿ ಎಂಬುದಕ್ಕೆ ಇನ್ನೂ ಉತ್ತರ ಕಂಡುಕೊಳ್ಳಬೇಕಿದೆ. ಬರಿಗಣ್ಣಿಗೆ ಕಾಣಿಸದ ವೈರಸ್ಗಳು ಏಕಕೋಶ ಜೀವಿಗಳೇ ಅಥವಾ ಬರೀ ಪ್ರೋಟೀನ್ ಕಣಗಳೇ ಎಂಬ ಕುರಿತು ಚರ್ಚೆ ನಡೆದೇ ಇದೆ. ಇಂತಹ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಮೈಕ್ರೋವೈಟಾ ಸಿದ್ಧಾಂತ ನೀಡುತ್ತದೆ. ದಾರ್ಶನಿಕ ಶ್ರೀ ಪ್ರಭಾತರಂಜನ್ ಸರ್ಕಾರರು ೧೯೮೬ರ ಡಿಸೆಂಬರ್ ೩೧ರಂದು ತಮ್ಮ ಪ್ರವಚನದಲ್ಲಿ ‘ಮೈಕ್ರೋವೈಟಮ್-ದಿ ಮಿಸ್ಟೀರಿಯಸ್ ಎಮನೇಶನ್ ಆಫ್ ಕೋಸ್ಮಿಕ್ ಫ್ಯಾಕ್ಟರ್’ (microvitum- The mysterious emanation of cosmic factor) ಅಂದರೆ ವಿಶ್ವಶಕ್ತಿಯ ನಿಗೂಢ ಉದ್ಭವ-ಮೈಕ್ರೋವೈಟಮ್ ಎಂಬ ವೈಜ್ಞಾನಿಕ ವಿಷಯವನ್ನು ಪ್ರಥಮ ಬಾರಿಗೆ ಪ್ರಸ್ತುತಪಡಿಸಿ, ನಂತರದ ಹಲವಾರು ಪ್ರವಚನಗಳಲ್ಲಿ ಇನ್ನಷ್ಟು ವಿವರ ನೀಡಿದರು. ಅಣು, ಪರಮಾಣುಗಳೇ ಅತೀ ಚಿಕ್ಕ ಅಸ್ತಿತ್ವವೆಂದು ಮೊದಲು ನಂಬಲಾಗಿತ್ತು. ಪ್ರೋಟಾನ್, ಇಲೆಕ್ಟ್ರಾನ್, ನ್ಯೂಟ್ರಾನ್ಗಳು ಅಣುವಿಗಿಂತ ಸೂಕ್ಷ್ಮವೆಂದು ಈಗ ಹೇಳಲಾಗುತ್ತದೆ. ಇವುಗಳಿಗಿಂತ ಸೂಕ್ಷ್ಮವಾದ ಅಸ್ತಿತ್ವ, ಭೌತಿಕ ಮತ್ತು ಮಾನಸಿಕ ಸ್ತರಗಳಲ್ಲಿ ಇರುವ ಅಸ್ತಿತ್ವವನ್ನು ‘ಮೈಕ್ರೋವೈಟಮ್’ ಎಂದು ಹೆಸರಿಸಿದ ಶ್ರೀ ಸರ್ಕಾರರು, ಅದರ ಬಹುವಚನ ಶಬ್ದವಾಗಿ ಮೈಕ್ರೊವೈಟಾ ಎಂಬ ಪದವನ್ನು ಬಳಸಿದರು. ಮೈಕ್ರೊವೈಟಾವು ಭೌತಿಕ ಸ್ತರದ ಎಲೆಕ್ಟ್ರಾನ್ ಅಲ್ಲ, ಜೀವಕೋಶದ ಬಾಹ್ಯದ್ರವವೂ (ectoplasm) ಅಲ್ಲ. ಇವೆರಡರ ನಡುವಿನ ಸ್ಥಾನ ಅವುಗಳದ್ದು. ಅವಕ್ಕೆ ಜೀವ ಇದ್ದರೂ ಕೂಡ ಅವು ಏಕಕೋಶ ಜೀವಿಗಳೂ (protozoic) ಅಲ್ಲ. ಅಥವಾ ಜೀವಕೋಶಗಳು ಅಂಗಗಳಾಗಿ ವಿಂಗಡಣೆಗೊಳ್ಳುವಂಥವೂ (metazoic) ಅಲ್ಲ. ಜೀವೋದ್ಭವವಾಗಲು ಇಂಗಾಲದ ಕಣ ಇರಲೇಬೇಕೆನ್ನುವ ನಿಯಮ ಅವುಗಳಿಗೆ ಅನ್ವಯವಾಗದು. ಬದಲಿಗೆ ಲಕ್ಷಾಂತರ ಮೈಕ್ರೋವೈಟಾಗಳು ಸೇರಿ ಇಂಗಾಲದ ಅಣುವಿನ ಸೃಷ್ಟಿಯಾಗುತ್ತದೆ. ಮೈಕ್ರೋವೈಟಾಗಳ ಅಸ್ತಿತ್ವವನ್ನು ಅರಿಯಲು ಮಾನವನಿಗೆ ಸಾಧ್ಯವಿದೆ. ಆದರೆ ಅವುಗಳ ಉತ್ಪತ್ತಿಯ ಮೂಲ ಕಾರಣವನ್ನು ಕಂಡುಕೊಳ್ಳುವುದು, ಅವುಗಳನ್ನು ಸೃಷ್ಟಿಸುವುದು ಮಾನವನಿಗೆ ಸಾಧ್ಯವಾಗದು. ಆ ಕಾರಣಕ್ಕಾಗಿಯೇ ಮೈಕ್ರೋವೈಟಾವನ್ನು ವಿಶ್ವಶಕ್ತಿಯ ನಿಗೂಢ ಉದ್ಬವವೆಂದು ಶ್ರೀ ಸರ್ಕಾರರು ಹೇಳುತ್ತಾರೆ. ಮೈಕ್ರೋವೈಟಾಗಳ ಸೂಕ್ಷ್ಮತೆಯನ್ನು ಮೂರು ಹಂತಗಳಲ್ಲಿ ಗುರುತಿಸಲಾಗಿದೆ. ಮೊದಲನೆಯ ಹಂತವೆಂದರೆ ಬರಿಗಣ್ಣಿಗೆ ಕಾಣದ ಆದರೆ ಶಕ್ತಿಯುತ ಸೂಕ್ಷ್ಮದರ್ಶಕಗಳ (ಮೈಕ್ರೊಸ್ಕೋಪ್) ಮೂಲಕ ನೋಡಬಹುದಾದವು. ಇವುಗಳನ್ನು ವೈರಸ್ಗಳೆಂದು ಹೇಳಲಾಗುತ್ತದೆ. ವೈರಸ್ ಎಂಬ ಪದವು ಸ್ಪಷ್ಟತೆಯನ್ನು ಹೊಂದಿಲ್ಲದ ಕಾರಣಕ್ಕಾಗಿ ಮೈಕ್ರೋವೈಟಾ ಎಂಬ ಪದವನ್ನು ಬಳಸುವುದು ಸೂಕ್ತವೆಂಬುದು ಶ್ರೀ ಸರ್ಕಾರರ ಅಭಿಪ್ರಾಯ. ಎರಡನೆಯ ಹಂತದ ಮೈಕ್ರೋವೈಟಾಗಳು ಕಾರ್ಯವೈಖರಿ ಅಥವಾ ಅವು ಉಂಟುಮಾಡುವ ಪರಿಣಾಮದಿಂದಾಗಿ ಮಾನವನ ಗ್ರಹಿಕೆಗೆ ಬರುವಂಥವು ಅಂದರೆ ಅನುಭವ ವೇದ್ಯವಾಗುವಂಥವು. ಮೂರನೆಯ ಹಂತದ ಅತಿ ಸೂಕ್ಷ್ಮ ಮೈಕ್ರೋವೈಟಾಗಳು ಕೂಡ ಮಾನವನ ಗ್ರಹಿಕೆಯ ವ್ಯಾಪ್ತಿಯಲ್ಲೇ ಇರುತ್ತವಾದರೂ ಅದಕ್ಕಾಗಿ ವಿಶೇಷ ಅರಿವಿನ ಅಗತ್ಯವಿರುತ್ತದೆ. ಆಧ್ಯಾತ್ಮ ಸಾಧನೆಯಿಂದ ಮನಸ್ಸನ್ನು ವಿಕಾಸಗೊಳಿಕೊಂಡವರ ಕಲ್ಪನಾ ಶಕ್ತಿಯ ಅರಿವಿಗೆ ಈ ಅತಿ ಸೂಕ್ಷ್ಮ ಮೈಕ್ರೋವೈಟಾಗಳು ಬರುತ್ತವೆ. ಸೃಷ್ಟಿಗೆ ಪಂಚಭೂತಗಳು ಕಾರಣವೆಂದು ಹೇಳುತ್ತಾರೆ.ಅವುಗಳಲ್ಲಿ ಅತಿ ಸೂಕ್ಷ್ಮವಾದುದು ಆಕಾಶತತ್ವ. ಅದಕ್ಕಿಂತ ಸೂಕ್ಷ್ಮವಾದುದು ವಿಶ್ವಮನ. ಮೈಕ್ರೋವೈಟಾಗಳ ಸ್ಥಾನ ಇವೆರಡರ ನಡುವೆ ಇರುವುದರಿಂದ ಅವು ವಿಶ್ವದೆಲ್ಲೆಡೆ ಸಂಚರಿಸಬಲ್ಲವು. ಅವುಗಳ ಚಲನೆ ಬರೀ ಪೃಥ್ವಿಗೆ ಮಾತ್ರ ಸೀಮಿತವಾಗಿಲ್ಲ, ವಿವಿಧ ಗ್ರಹ, ಆಕಾಶ ಕಾಯಗಳು, ನಕ್ಷತ್ರ ಮಂಡಲ, ನಿಹಾರಿಕೆ ಮುಂತಾಗಿ ಇಡೀ ಬ್ರಹ್ಮಾಂಡವೇ ಮೈಕ್ರೋವೈಟಾಗಳ ತಾಣಗಳಾಗಿವೆ. ಮೈಕ್ರೋವೈಟಾಗಳು ಜೀವಿಗಳೇ ಆಗಿರುವುದರಿಂದ ಅವುಗಳಿಗೂ ಅಸ್ತಿತ್ವ, ಸಂಖ್ಯಾವೃದ್ಧಿ ಹಾಗೂ ಮರಣವಿದೆ.ಅವುಗಳ ಚಲನೆಗೆ ವಾಹಕದ ಅವಶ್ಯಕತೆ ಇದ್ದೇ ಇದೆ.ಕೆಲವು ಮೈಕ್ರೋವೈಟಾಗಳು ಏಕಕಾಲಕ್ಕೆ ವಿವಿಧ ವಾಹಕಗಳ ಮೂಲಕ ಚಲಿಸಬಲ್ಲವು. ರೂಪ, ಗಂಧ (ವಾಸನೆ/ಪರಿಮಳ), ಸ್ಪರ್ಶ, ಶಬ್ದಗಳು ಅವುಗಳ ಸಾಮಾನ್ಯ ವಾಹಕಗಳು. ಅತೀ ಸೂಕ್ಷ್ಮವಾದ ಮೈಕ್ರೊವೈಟಾಗಳು ವಿಚಾರಗಳ ಮೂಲಕ ಕೂಡ ಹರಡಬಲ್ಲವು. ಅಂದರೆ ಪ್ರಬಲವಾದ ಮಾನಸಿಕ ಶಕ್ತಿಯನ್ನು ಹೊಂದಿರುವ ವ್ಯಕ್ತಿಯ ವಿಚಾರಗಳ ಮೂಲಕ ವಿಶ್ವದ ವಿವಿಧೆಡೆಗೆ ಮೈಕ್ರೋವೈಟಾ ಪಸರಿಸಬಲ್ಲದು. ವಿಶ್ವದಲ್ಲಿ ಜೀವೋದ್ಭವಕ್ಕೆ ಇಂಗಾಲದ ಕಣಗಳೇ ಕಾರಣ ಎಂದು ವಿಜ್ಞಾನ ಹೇಳುತ್ತದೆ. ಆದರೆ ಮೈಕ್ರೋವೈಟಾಗಳೇ ಪ್ರಾಣಶಕ್ತಿ ಹಾಗೂ ಜೀವವಿಕಾಸದ ಮೂಲ ಕಾರಣವೆನ್ನುತ್ತಾರೆ ಶ್ರೀ ಸರ್ಕಾರ್. ದೇಹ ಮತ್ತು ಮನಸ್ಸಿನ ಸೃಷ್ಟಿಗೂ ಅವೇ ಕಾರಣವಾಗಿರುವುದರಿಂದ ವಿಶ್ವದ ಯಾವುದೇ ಭಾಗದಲ್ಲಿಯಾದರೂ ದೇಹ ಮತ್ತು ಮನಸ್ಸನ್ನು ನಾಶಪಡಿಸುವ ಶಕ್ತಿ ಅವಕ್ಕಿದೆ. ಮೈಕ್ರೋವೈಟಾಗಳು ಉಂಟುಮಾಡುವ ಪರಿಣಾಮಗಳನ್ನಾಧರಿಸಿ ಮೂರು ವಿಧಗಳು- ಋಣಾತ್ಮಕ, ಧನಾತ್ಮಕ ಹಾಗೂ ತಟಸ್ಥ. ಇವು ಮಾನವರ ಮೇಲೆ ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಪರಿಣಾಮ ಬೀರಬಲ್ಲವು. ಸ್ಥೂಲ ಮೈಕ್ರೋವೈಟಾಗಳು ಭೌತಿಕ ಸ್ತರದಲ್ಲಿ ವಾಸಿಸುತ್ತವೆ. ಸೂಕ್ಷ್ಮವಾಗಿರುವವು ಮಾನಸಿಕ ಸ್ತರದಲ್ಲಿ ವಾಸಿಸಿದರೆ, ಸೂಕ್ಷ್ಮಾತಿಸೂಕ್ಷ್ಮವಾಗಿರುವವು ಮನಸ್ಸಿನ ಸೂಕ್ಷ್ಮ ಸ್ತರಗಳಲ್ಲಿ ವಾಸಿಸಬಲ್ಲವು. ಆದರೆ ಆಧ್ಯಾತ್ಮಿಕ ಸ್ತರದಲ್ಲಿ ಮೈಕ್ರೋವೈಟಾಗಳು ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಋಣಾತ್ಮಕ ಸ್ವಭಾವದ ಮೈಕ್ರೊವೈಟಾಗಳು ಮಾನವದೇಹವನ್ನು ಪ್ರವೇಶಿಸಿ ರೋಗಗ್ರಸ್ಥನನ್ನಾಗಿಸಬಲ್ಲವು. ಧನಾತ್ಮಕ ಸ್ವಭಾವದವುಗಳಿಂದ ಮಾನವನ ದೈಹಿಕ ಹಾಗೂ ಮಾನಸಿಕ ಉನ್ನತಿ ಸಾಧ್ಯವಾಗುತ್ತದೆ. ತಂತ್ರಶಾಸ್ತ್ರದನ್ವಯ ಮಾನವನ ದೇಹದಲ್ಲಿ ಇಡಾ, ಪಿಂಗಳ ಮತ್ತು ಸುಷುಮ್ನ ಎಂಬ ಮೂರು ನಾಡಿಗಳಿರುತ್ತವೆ. ಇವು ಪರಸ್ಪರವಾಗಿ ಸಂಧಿಸುವ ಸ್ಥಳವನ್ನು ಚಕ್ರ ಎನ್ನುತ್ತಾರೆ. ಹುಬ್ಬುಗಳ ನಡುವೆ ಇರುವ ಆಜ್ಞಾಚಕ್ರದ ಹೊರತಾಗಿ ಉಳಿದ ಚಕ್ರಗಳು ಕಶೇರುಕದಲ್ಲಿ ಇರುತ್ತವೆ. ತಂತ್ರಶಾಸ್ತ್ರದ ಈ ವಿಚಾರವನ್ನು ಆಧುನಿಕ ವೈದ್ಯಶಾಸ್ತ್ರ ಒಪ್ಪುವುದಿಲ್ಲ. ದೇಹಗಳನ್ನು ಕುಯ್ದು ವಿವಿಧ ಭಾಗಗಳನ್ನು ಪರೀಕ್ಷಿಸುವ ವೈದ್ಯರಿಗೆ ಅಂತಹ ಯಾವುದೇ ನಾಡಿಗಳು ಅಥವಾ ಚಕ್ರಗಳು ಕಂಡಿಲ್ಲ. ಅದರೆ ತಂತ್ರಸಾಧನೆಯ ಕುರಿತು ಅಭ್ಯಾಸ ಮಾಡುವವರು ಸೂಕ್ಷ್ಮರೂಪದಲ್ಲಿರುವ ಈ ಚಕ್ರ ಹಾಗೂ ನಾಡಿಗಳ ಅಸ್ತಿತ್ವ ತಮ್ಮ ದೇಹದಲ್ಲಿರುವುದನ್ನು ಅನುಭವಿಸಬಲ್ಲರು. ಮಾನವರಲ್ಲಿ ಪ್ರಮುಖವಾಗಿ ೫೦ ಪ್ರವೃತ್ತಿಗಳನ್ನು ಗುರುತಿಸಲಾಗಿದೆ. ಪ್ರತಿಚಕ್ರವೂ ನಿರ್ದಿಷ್ಟ ಪ್ರವೃತ್ತಿಯನ್ನು (ಉದಾ: ಧರ್ಮ, ಅರ್ಥ, ಕಾಮ, ಲಜ್ಜಾ, ಭಯ, ಈರ್ಷೆ, ಕ್ರೌರ್ಯ, ಆಸೆ, ಮಮತೆ, ಇತ್ಯಾದಿ) ನಿಯಂತ್ರಿಸುತ್ತದೆ. ನಕಾರಾತ್ಮಕ ಮೈಕ್ರೋವೈಟಾಗಳು ಆಜ್ಞಾಚಕ್ರಕ್ಕಿಂತ ಉನ್ನತ ಚಕ್ರಗಳ ಮೇಲೆ ಪರಿಣಾಮ ಬೀರಲಾರವು. ಅವುಗಳ ಪರಿಣಾಮವೇನಿದ್ದರೂ ಮೂಲಾಧಾರದಿಂದ ವಿಶುದ್ಧ ಚಕ್ರದವರೆಗಿನ ಐದು ಚಕ್ರಗಳ ಮೇಲೆ ಮಾತ್ರ. ಈ ಐದು ಚಕ್ರಗಳು ಪಂಚಭೂತ ತತ್ವಗಳನ್ನು ಪ್ರತಿನಿಧಿಸುವುದರಿಂದ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಇದರ ಪರಿಣಾಮದಿಂದಾಗಿ ಮನಸ್ಸಿಗೆ ಸಂಬಂಧಿಸಿದ ಆಜ್ಞಾ ಚಕ್ರವು ಅಪ್ರತ್ಯಕ್ಷವಾಗಿ ಪೀಡಿತವಾಗುವುದರಿಂದ ವ್ಯಕ್ತಿಯು ಹಲವು ವಿಧದ ಮಾನಸಿಕ ಖಾಯಿಲೆಗಳಿಗೆ ತುತ್ತಾಗುತ್ತಾನೆ. ಸಕಾರಾತ್ಮಕ ಮೈಕ್ರೋವೈಟಾಗಳು ಆಜ್ಞಾಚಕ್ರದ ಮೇಲೆ ಪರಿಣಾಮ ಬೀರುವುದರಿಂದಾಗಿ ಮಾನವರಲ್ಲಿ ಉನ್ನತ ವಿಚಾರಗಳು, ವಿಶಾಲ ಭಾವ, ಆಧ್ಯಾತ್ಮದಲ್ಲಿ ಆಸಕ್ತಿ ಮುಂತಾದವು ಮೂಡುತ್ತವೆ. ಈ ಧನಾತ್ಮಕತೆಯ ಪರಿಣಾಮದಿಂದಾಗಿ ದೇಹ ಕೂಡ ಆರೋಗ್ಯಪೂರ್ಣವಾಗಿರುತ್ತದೆ. ಮನುಷ್ಯನ ಭಾವನೆಗಳಿಗೆ ತಕ್ಕುದಾದ ಮೈಕ್ರೋವೈಟಾಗಳು ಆಕರ್ಷಿಸಲ್ಪಡುತ್ತವೆ. ಸ್ವಾರ್ಥ, ಸಂಕುಚಿತತೆ, ಅಸೂಯೆ, ನೀಚತನ, ಕ್ರೌರ್ಯ ಮುಂತಾದ ಹೀನ ಮನಸ್ಸಿನ ವ್ಯಕ್ತಿಯೆಡೆಗೆ ನಕಾರಾತ್ಮಕ ಮೈಕ್ರೋವೈಟಾ ಆಕರ್ಷಿಸಲ್ಪಡುತ್ತದೆ. ಇದೇ ತತ್ವ ಸಮುದಾಯಕ್ಕೆ ಕೂಡ ಅನ್ವಯವಾಗುತ್ತದೆ. ಇದರಿಂದಾಗಿ ಪರಸ್ಪರರಲ್ಲಿ ದ್ವೇಷ, ಅಪನಂಬಿಕೆ, ಶೋಷಣೆಗಳಿಗೆ ಕಾರಣವಾಗುತ್ತದೆ. ಧನಾತ್ಮಕ ಚಿಂತನೆಗಳು ಸಕಾರಾತ್ಮಕ ಮೈಕ್ರೋವೈಟಾಗಳನ್ನು ಆಕರ್ಷಿಸುತ್ತವೆ. ಇವು ವ್ಯಕ್ತಿ ಹಾಗೂ ಸಮಾಜವನ್ನು ಉನ್ನತಿಯತ್ತ ಕೊಂಡೊಯ್ಯುತ್ತವೆ. ಈ ಹಿನ್ನೆಲೆಯಲ್ಲಿ ಇಂದಿನ ಕರೊನಾ ಸಮಸ್ಯೆಗೆ ಪರಿಹಾರವನ್ನು ಕಾಣಲು ಸಾಧ್ಯ. ಮೈಕ್ರೋವೈಟಾದ ಅತ್ಯಂತ ಸ್ಥೂಲ ರೂಪವಾಗಿರುವ ವೈರಸ್ಸನ್ನು ಔಷಧಗಳಿಂದ ಕೊಲ್ಲಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. ಔಷಧವು ದೇಹದ ನೋವನ್ನು ಕಡಿಮೆ ಮಾಡಬಲ್ಲದು ಅಷ್ಟೆ. ನಕಾರಾತ್ಮಕ ಮೈಕ್ರೋವೈಟಾಗಳ ನಿಯಂತ್ರಣದ ಒಂದು ವಿಧವೆಂದರೆ ಅವು ತಾನಾಗಿಯೇ ಸಾಯುವುದಕ್ಕಾಗಿ ಕಾಯುವುದು, ಇನ್ನೊಂದು ವಿಧವೆಂದರೆ ಸಕಾರಾತ್ಮಕ ಮೈಕ್ರೋವೈಟಾಗಳನ್ನು ಬಳಸುವುದು. ಮಾನವರಿಗೆ ಮೈಕ್ರೋವೈಟಾಗಳನ್ನು ಸೃಷ್ಟಿಸುವ ಶಕ್ತಿಯಿಲ್ಲ. ಆದರೆ ಅವುಗಳನ್ನು ಆಕರ್ಷಿಸುವ ಶಕ್ತಿಯಿದೆ. ಸಕಾರಾತ್ಮಕ ಹಾಗೂ ಆಧ್ಯಾತ್ಮಿಕ ಚಿಂತನೆಯಿಂದ ಮಾತ್ರ ಇದು ಸಾಧ್ಯ. ಸಾವಿನ ಭಯ ಬಿತ್ತುವ ಮಾಧ್ಯಮ ವರದಿಗಳು, ಜನರನ್ನು ಬಲವಂತವಾಗಿ ಪ್ರತ್ಯೇಕತೆಗೆ ತಳ್ಳುವ ಲಾಕ್ಡೌನ್ನಂತಹ ಕ್ರಮಗಳು, ಉದ್ಯೋಗವಿಲ್ಲದೇ; ಆಹಾರವೂ ಇಲ್ಲದೇ ನಾಳಿನ ಚಿಂತೆಯಿಂದ ಬಳಲುವಂತೆ ಮಾಡಿರುವುದರಿಂದ ಜನರಲ್ಲಿ ನಕಾರಾತ್ಮಕ ಭಾವನೆಯೇ ಹೆಚ್ಚಾಗುತ್ತದೆ. ಈಗಾಗಲೇ ಬೇರು ಬಿಟ್ಟಿರುವ ಸ್ವಾರ್ಥ ಅಸೂಯೆಗಳ ಜೊತೆಗೆ ಪರಿಸ್ಥಿತಿಯ ಪ್ರಭಾವವೂ ಸೇರಿ ಋಣಾತ್ಮಕ ಮೈಕ್ರೋವೈಟಾಗಳನ್ನು ಆಕರ್ಷಿಸುವುದು ಸಹಜ. ಇದರಿಂದಗಿ ವೈರಸ್ ಪ್ರಭಾವ ಇನ್ನಷ್ಟು ತೀವ್ರವಾಗಿ ಕಾಡಲಿದೆ. ಸ್ಪರ್ಶದಿಂದಲೇ ಪಸರಿಸುತ್ತದೆಂದು ನಂಬಲಾಗಿರುವ ಕೊರೊನಾ ವೈರಸ್, ಸೋಂಕಿತ ವ್ಯಕ್ತಿಗಳ ಸಂಪರ್ಕವೇ ಇಲ್ಲದವರಿಗೂ ತಗಲುತ್ತಿರುವುದು ಅವು ಹಲವು ಮಾಧ್ಯಮಗಳನ್ನು ಬಳಸಿ ಚಲಿಸಬಲ್ಲವು ಎಂಬ ವಿಚಾರಕ್ಕೆ ಪುಷ್ಠಿ ನೀಡುತ್ತದೆ. ಇಷ್ಟಕ್ಕೇ ತತ್ತರಿಸಿರುವ ಮಾನವ ಸಮಾಜ ಗಂಧ, ಶಬ್ಧ, ವಿಚಾರಗಳ ಮೂಲಕ ಪಸರಿಸಬಲ್ಲ ಮೈಕ್ರೋವೈಟಾಗಳಿಂದ ಪ್ರಭಾವಿತರಾಗುವ ಸಂದರ್ಭದ ಪರಿಣಾಮದ ಭೀಕರತೆ ಊಹೆಗೂ ನಿಲುಕದು. ಇದಕ್ಕೆಲ್ಲಾ ಪರಿಹಾರವೆಂದರೆ ಸಕಾರಾತ್ಮಕ ಚಿಂತನೆ. ನಾಳಿನ ಬದುಕಿನ ಭದ್ರತೆ ಹಾಗೂ ಭರವಸೆಯನ್ನು ಪ್ರತಿಯೋರ್ವ ವ್ಯಕ್ತಿಯಲ್ಲೂ ಮೂಡಿಸುವ ಸರ್ಕಾರದ ನಡೆ-ನುಡಿ- ಕಾರ್ಯಕ್ರಮಗಳು, ಭಯದ ವಾತಾವರಣವನ್ನು ದೂರ ಮಾಡುವುದು, ಸಕಾರಾತ್ಮಕ ಚಿಂತನೆಯ ಪ್ರೇರೇಪಣೆ ಆದ್ಯತೆ ಪಡೆಯಬೇಕು. ನಕಾರಾತ್ಮಕತೆ ಬೆಳೆಸುತ್ತಿರುವ ಹೊಣೆಗೇಡಿ ಮಾಧ್ಯಮಗಳ ಕಿವಿ ಹಿಂಡುವ ಕೆಲಸದ ಜೊತೆಗೆ, ಜನರಲ್ಲಿ ಅಂಧ ವಿಶ್ವಾಸ, ಮೂಢನಂಬಿಕೆ ಬೆಳೆಸುವ ಕಾರ್ಯಕ್ರಮಗಳಿಗೆ ತಡೆ ಹಾಕಿ; ಆತ್ಮವಿಶ್ವಾಸ ಬೆಳೆಸುವ, ಸಕಾರಾತ್ಮಕ ಚಿಂತನೆಗಳನ್ನು ಪ್ರೇರೇಪಿಸುವ ಕಾರ್ಯಕ್ರಮ ಬಿತ್ತರಿಸುವುದನ್ನು ಕಡ್ಡಾಯ ಮಾಡಬೇಕು. ಭಜನೆ, ಕೀರ್ತನೆ, ಜಪ, ಧ್ಯಾನಗಳಿಂದ ಸಕಾರಾತ್ಮಕ ಮೈಕ್ರೊವೈಟಾಗಳು ಆಕರ್ಷಿಸಲ್ಪಡುತ್ತವೆ. ಪಂಚವಟಿ (ಬೇವು, ಬಿಲ್ವ, ಶಾಲ್ಮಲಿ, ಆಲ, ಅಶ್ವಥ್ಥ, ಕೆಲವೊಮ್ಮೆ ನೆಲ್ಲಿ ಗಿಡಗಳ ಸಮೂಹ) ಯಲ್ಲಿ ಕೆಲ ಸಮಯ ಕಾಲ ಕಳೆಯುವುದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು; ಯಾಕೆಂದರೆ ಇವು ಸಕಾರಾತ್ಮಕ ಮೈಕ್ರೋವೈಟಾವನ್ನು ಆಕರ್ಷಿಸುತ್ತವೆ. ವಿಜ್ಞಾನದ ಮೂಲ ನಂಬಿಕೆಗಳಿಗೇ ಸವಾಲು ಎಸೆದಿರುವ, ವಿಜ್ಞಾನದ ಕ್ಷಿತಿಜವನ್ನು ವಿಸ್ತರಿಸುವ ಮೈಕ್ರೊವೈಟಾ ಕುರಿತಾದ ಸಂಶೋಧನೆಗಳಿಂದಾಗಿ ಇಂದಿನ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಮುಂತಾದವುಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಅರ್ಥಶಾಸ್ತ್ರದ ಸಂಪನ್ಮೂಲಗಳ ಕಲ್ಪನೆಯ ವಿಸ್ತಾರವು ಇಂದಿನ ತಜ್ಞರು ಊಹಿಸಲಾರದಷ್ಟು ಹಿಗ್ಗಲಿದೆ. ಇಡೀ ಮಾನವ ಸಮಾಜ ನೈಜ ಪ್ರಗತಿಯ ದಾರಿಯಲ್ಲಿ ಮುನ್ನಡೆಯಲಿದೆ. *********

ಪ್ರಸ್ತುತ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಬಾ ಮಗುವೆ! ಬಾ ಮಗುವೆ ಬಾ ನನ್ನ ಹತ್ತಿರಕೆ! ನಾನೇನೂ ಅಲ್ಲ ಮೊನ್ನೆ ಮೂರುವರ್ಷದ ಮಗುವೊಂದು ನೀನ್ಯಾರೆಂದು ಕೇಳಿದಾಗ ಹೇಳಲಾಗದೆ ಏನನ್ನೂ ತಡವರಿಸಿದಾಗ ಮೊದಲಬಾರಿ ಯೋಚಿಸಿದೆ ನಾನ್ಯಾರು ಮತ್ತು ನಾನೇನು? ಯಾವ ದಾರಿಯೂ ನನ್ನದಾಗಲಿಲ್ಲ ಅಥವಾ ನನ್ನದಾಗಿ ಮಾಡಿಕೊಳ್ಳಲಾಗಲಿಲ್ಲ. ಸೋತಿದ್ದೇನೊ ಗೊತ್ತಾಯಿತಾದರು ಆಟ ಆಡಿದ್ದೆನಾ ಇಲ್ಲ ಆಡಿದಂತೆ ನಟಿಸಿದ್ದೆನಾ ಗೊತ್ತಿಲ್ಲ. ಎಲ್ಲರೂ ಇತಿಹಾಸದ ಭಾಗವಾಗಲು ಸಾದ್ಯವಿಲ್ಲವಾದರು ಅದರದೊಂದು ಅದ್ಯಾಯದ ಅಂಚಿನಲ್ಲಿಯಾದರು ಏನಾದರು ಆಗಿರುತ್ತಾರೆ. ಕನಸುಗಳು ನನಗೂ ಇದ್ದವು ಸಾಕಾರಗೊಳಿಸಿಕೊಳ್ಳುವ ಅನೇಕ ಅಡ್ಡ ದಾರಿಗಳೂ ನನಗೆ ಗೊತ್ತಿದ್ದವು ಆದರಾ ಎಲ್ಲ ದಾರಿಗಳು ನನ್ನ ಆತ್ಮಸಾಕ್ಷಿಯ ವಿರುದ್ದವಾಗಿದ್ದವು. ಆತ್ಮದ ಮಾತಿಗಿಂತ ಸುಖವೇ ಮುಖ್ಯ ಎಂದು ನಾನಂದುಕೊಂಡಿದ್ದರೆ ಇವತ್ತು ಮದ್ಯದಂಗಡಿಯ ಹೊಸಿಲಲಿ ಇಳಿಸಂಜೆಗಳ ನೀಳ ರಾತ್ರಿಗಳ ಕಳೆಯಬೇಕಿರಲಿಲ್ಲ. ದೇವರೆಂದೂ ನನಗೆ ಸಹಾಯ ಮಾಡುವನೆಂದು ನಾನೆಂದೂ ನಂಬಲಿಲ್ಲ ನಂಬಿದ್ದರೂ ಪಾಪ ಅವನಿಗೆಷ್ಟು ಜನ ಗ್ರಾಹಕರೋ ಸಮಯವಾದರೂ ಹೇಗೆ ಸಿಕ್ಕೀತು ನನ್ನಂತ ಪಾಪಿಯ ಬಗ್ಗೆ ಯೋಚಿಸಲು. ನನ್ನ ಸುತ್ತ ತೀರಾ ದೇವರಂತ ಮನುಷ್ಯರಾರು ಇರಲಿಲ್ಲ. ನನ್ನ ಸರಿದಾರಿಯಲ್ಲಿ ನಡೆಸಲು. ನಾನು ಶಾಲೆಗೆ ಹೋಗಿದ್ದು ಒಂದಷ್ಟು ಅಕ್ಷರಗಳನ್ನು ಕಲಿಯಲು ಮಾತ್ರ ಅವರು ನೀತಿಪಾಠ ಹೇಳಲು ಶುರು ಮಾಡಿದೊಡನೆ ನಾನು ನಿದ್ದೆಗೆ ಜಾರುತ್ತಿದ್ದೆ. ಅನೀತಿಯಲ್ಲೇ ಮುಳುಗಿದವರು ನೀತಿಯ ಬಗ್ಗೆ ಮಾತಾಡುವುದು ತಪ್ಪೆಂದು ಅವರಿಗೂ ಗೊತ್ತಿತ್ತು. ಹಾಗಂತ ನಾನು ಕಡುಪಾಪಿಯೇನು ಆಗಿರಲಿಲ್ಲ ಹಸಿದು ಬಂದವರಿಗೆ ನನ್ನ ತಟ್ಟೆಯಲಿದ್ದ ಅನ್ನದಲ್ಲೆ ಒಂದಿಷ್ಟು ತೆಗೆದು ನೀಡಿದ್ದೇನೆ. ಬಾರವಾದ ಮೂಟೆ ಹೊತ್ತು ಹೋಗುತ್ತಿದ್ದ ವಯಸ್ಸಾದ ಹಮಾಲಿಯೊಬ್ಬನಿಗೆ ಅವನ ಬಾರ ಹೊತ್ತು ಸಹಾಯ ಮಾಡಿದ್ದೇನೆ ಹಾಗೆಯೇ ಅಕ್ಕಪಕ್ಕದವರಿಗೆ ಕಿರಿಕಿರಿಯಾಗದಂತೆ ರಾತ್ರಿಗಳಲ್ಲಿ ಕಂಠಮಟ್ಟ ಕುಡಿದರೂ ಗದ್ದಲಮಾಡದೆ ತೆಪ್ಪಗೆ ಮಲಗಿ ಉಪಕಾರವನ್ನೂ ಮಾಡಿದ್ದೇನೆ! ಇವತ್ತಿಗೂ ನನಗೆ ಆಶ್ಚರ್ಯ ಅನಿಸುವುದು ಕಾನ್ವೆಂಟಿಗೆ ಹೋಗುವ ಆ ಎಳೆಯ ಕಂದಮ್ಮಗಳನ್ನು ಕಂಡಾಗ ತಮ್ಮ ಪೂರ್ವೀಕರೆಲ್ಲ ಸೇರಿ ಮಾಡಿದಷ್ಟೂ ಪಾಪಗಳ ಮೂಟೆಯನ್ನು ಬೆನ್ನಿನ ಚೀಲಕ್ಕೇರಿಸಿಕೊಂಡು ನಡುಬಾಗಿಸಿ ನಡೆಯುವ ಮಕ್ಕಳನ್ನು ನೋಡಿದಾಗೆಲ್ಲ ಗಾಣದ ಎತ್ತುಗಳು ನೆನಪಾಗಿ ಕಣ್ಣಲ್ಲಿ ನೀರು ಸುರಿಸುತ್ತೇನೆ. ತಮಗೆ ವಯಸ್ಸಾದ ಮೇಲೆ ಅನ್ನ ಹಾಕಲೆಂದು ಅವರ ಬಾಲ್ಯವನ್ನು ಕಿತ್ತುಕೊಂಡು ಶಾಲೆಯೆಂಬ ನರಕಕ್ಕೆ ಕಳಿಸುವ ಅಪ್ಪಅಮ್ಮಂದಿರನ್ನು ಹಿಡಿದು ಒದೆಯಬೇಕೆಂದು ಸಾವಿರ ಸಾರಿ ಅನಿಸಿದರೂ ಸುಮ್ಮನಾಗಿದ್ದೇನೆ! ಬಾ ಮಗುವೆ ಇಲ್ಲಿ ಬಾ ನಿನ್ನ ಹೆಗಲ ಮೇಲಿನ ಬ್ಯಾಗನ್ನು ಇಲ್ಲಿ ಇಳಿಸಿ ಇಡು ಬಾ ನನ್ನ ಜೊತೆ ಊರಂಚಿನ ಕಾಡಿಗೆ ಹೋಗೋಣ. ಅಲ್ಲಿ ನಿನ್ನಂತೆಯೇ ಮುದ್ದಾಗಿರುವ ಚಿಟ್ಟೆಗಳಿವೆ ಹೂ ಹುಡುಕಿ ಹಾರುವ ಅವನ್ನು ಹಿಡಿಯೋಣ ಪಕ್ಕದಲ್ಲಿ ಹರಿಯುವ ನದಿಯ ದಂಡೆಯಲ್ಲಿ ಕೂತು ಮರಿಮೀನುಗಳಿಗೆ ಗಾಳ ಹಾಕಿ ಕಾಯೋಣ. ಮದ್ಯಾಹ್ನ ಹೊಟ್ಟೆ ಹಸಿದಾಗ ಅಲ್ಲೇ ಸಿಗುವ ಕಾಡಿನ ಹಣ್ಣುಗಳ ಕಚ್ಚಿ ತಿನ್ನೋಣ ಒಂದು ಹೇಳುತ್ತೇನೆ ಕೇಳು ಮಗು ನಿಸರ್ಗ ಕಲಿಸುವುದಕ್ಕಿಂತ ಹೆಚ್ಚಾದ ಪಾಠವನ್ನು ಯಾವ ಶಾಲೆಗಳು ಯಾವ ಶಿಕ್ಷಕರುಗಳೂ ಕಲಿಸಲಾರರು. ನಾಗರೀಕತೆಯ ಮುಖವಾಡ ಹೊತ್ತ ಜಗತ್ತಿನಲ್ಲಿ ಯಾರೂಕಲಿಸದೆ ಕಲಿಯಬಹುದಾದದ್ದು ವಂಚನೆ ದ್ರೋಹಗಳು ಮಾತ್ರ ಬಾ ಮಗುವೆ ಬಂದುಬಿಡು ನಾನು ಸಾಯುವುದರೊಳಗಾಗಿ ನಿನಗೆ ಮೀನು ಹಿಡಿಯುವುದ ನದಿಯೊಳಗ ಈಜುವುದ ಬೆಣಚುಕಲ್ಲು ಗೀಚಿ ಬೆಂಕಿ ಹೊತ್ತಿಸಿ ಮೀನು ಬೇಯಿಸುವುದ ಕಲಿಸುವೆ. ಬಾ ಮಗುವೆ ನಾನು ನಿನ್ನ ಅಪ್ಪನಾಗಲಾರದ ಅಪ್ಪ! ******* ಕು.ಸ.ಮದುಸೂದನ

ಕವಿತೆ ಕಾರ್ನರ್ Read Post »

ಕಾವ್ಯಯಾನ

ಕಾವ್ಯಯಾನ

ಬಚ್ಚಿಟ್ಟ ನೆನಪುಗಳು ವೀಣಾ ರಮೇಶ್ ನೀ ಬರುವೆಯೆಂದು ಕಾಯುತ್ತಿದ್ದೆ……. ಒಡಲಸೆರಗಲಿ ಅದುಮಿಟ್ಟ ಬಯಕೆಗಳು ತಬ್ಬಲಿಯಾದ ನಿನ್ನ ಕನಸುಗಳ ಜೊತೆ ನನ್ನ ಕನಸುಗಳು ಕಾಡುವುದು ಬಸಿರಾಗದ ಆಸೆಯ ಕುಡಿಗಳು, ,ಹಸಿಯಾಗಿ, ಹುಲ್ಲುಜಾಡಿನಲಿ ಕಳೆಗೂಡಾದ ಬದುಕು ಹೊಸಕಿ.. ನೀ ಬರುವೆಯೆಂದು ಕಾಯುತ್ತಿದ್ದೆ …… ಹಾಕಿದ ಏಳು ಹೆಜ್ಜೆಗಳು ಬಿಸಿಯ ಕೆಂಡದ ಮೇಲಿನ ಅವಳ ತಪ್ಪಿನ ನಡೆಗಳು ಹೊಸಿಲ ಮೇಲೆ ಜಾಡಿಸಿ ಒದ್ದ ಸೇರಿನ ಜೊತೆ ಕನಸುಗಳ ಒದ್ದೋಡಿಸಿದೆ ಸರಕಾಗಿದೆ ನಿನ್ನ ಮೌಲ್ಯಗಳು, ಬಿಕರಿಯಾಗುತ್ತಿದೆ ಕನಸುಗಳು,…. ಬೆತ್ತ ಲಾಗಬೇಡ ಬತ್ತಿದ ಕನಸುಗಳಿಗೆ, ಮನಸು ಹರಿದ ಪುಟಗಳ ಮತ್ತೆ ಸೇರಿಸಿ ಸಂಬಂಧಗಳ ದಾರದಿಂದ ಬಿಗಿದು,ನಿನ್ನ ಕನಸುಗಳ ಬಸಿರಿಗೆ ಮೆಲುವಂಗಿ ಹೊದಿಸು ,ನೀ ಕಟ್ಟುವ ಕನಸಿಗೆ ಪ್ರೀತಿಯ ದೇಣಿಗೆ ನಾ ನೀಡುವೆ, ಮಾತು ಮೌನದಲ್ಲೆ ಅಡಗಿಸಿ ಪದಗಳು ಸ್ಪರ್ಶ ವಿಲ್ಲದೆ ಎದೆಯಲಿ ಬಚ್ಚಿಟ್ಟು ನೆನಪುಗಳು ನೀ ಇಲ್ಲದೆ ಒದ್ದಾಡಿವೆ….. ಅಲ್ಲೊಂದು ಇಲ್ಲೊಂದು ಕರಗಿಬಿದ್ದ ನೀರಹನಿಯೊಂದು ಚಿಗುರೊಡೆದ ಹಸಿರೊಂದು ಬಸಿರಾಗುವ ಕನಸಿಗೆ, ನೀಳಗೆನ್ನೆಯ ಮೇಲೆ ತುಸು ಹರಿದು ಎದೆಯ ತಂಪಾಗಿಸಿದ ಕಣ್ಣೀರ ಹನಿ ತಂದು, ಹೊಸ ಮನ್ವಂತರದ ಪರ್ವದಲ್ಲೊಂದು ಬದಲಾಯಿಸಿದ ಬದುಕಿನ ಗತಿ ಹಚ್ಚಿದ ಕನಸಿನ ಹಣತೆಗೆ ಬಾಳ ಸಮತೆಯಲಿ ಉರಿವ ದೀಪವಾಗಿ, ನಿನ್ನೊಡಲ ಕಾಂತಿಗೆ ಬೆಳಕಾಗುವೆ ನಾ ಕಾಯುತ್ತಿರುವೆ. ನೀ …ಬಂದೆ ಬರುವೆಯೆಂದು….. ********

ಕಾವ್ಯಯಾನ Read Post »

You cannot copy content of this page

Scroll to Top