ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ (ಭಾಗ-1) ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಕಾಣಿಸದೇ ಕಾಡುತಿದೆ ವೈರಾಣು ಕರೋನಾ… ಕಳವಳದಿ ಕಂಗಾಲು ಮನುಜಕುಲ ಸಂಪೂರ್ಣ.. ‍ ಮಾರ್ಚ ತಿಂಗಳಿಂದ ಕರೋನಾ ಎನ್ನುವ ಪದವೇ ಎಲ್ಲರ ಸ್ಥಾಯಿ ಭಾವವಾಗಿದೆ. ಎಲ್ಲಾ ಮುಗಿತು. ಕಲಿತಾಯ್ತು ಮದುವೆಯಾಯ್ತು ಮಕ್ಕಳನ್ನು ಓದಿಸಿ, ಉದ್ಯೋಗಕ್ಕೆ ಸೇರಿಸಿ, ಮದುವೆ ಮಾಡಿ ಸೆಟಲ್ ಮಾಡಿದ್ದಾಯ್ತು ಇನ್ಯಾವಾಗ ದೇವರು ಕರೆಸಿಕೊಂಡರು ಹೋಗಲು ಸಿದ್ಧ ಎಂದು ದಿನಾ ಡೈಲಾಗ್ ಹೇಳುತ್ತಿದ್ದ ಸುತ್ತಮುತ್ತಲ ಮನೆಗಳ ಅಂಕಲ್ ಆಂಟಿಗಳೆಲ್ಲ ನಗು ಮಾತು ಮರೆತು ಜೀವಭಯದಲ್ಲಿ ಮಾಸ್ಕ ಧರಿಸಿ ಅಂಗಳಕ್ಕಿಳಿಯಲು ಭಯಪಡುವುದನ್ನು ನೋಡುವಾಗ ಸಾವು ಯಾರಿಗೂ ಸ್ವೀಕಾರಾರ್ಹ ಸಂಗತಿಯೇ ಅಲ್ಲ ಎನ್ನುವ ಸರ್ವಕಾಲಿಕ ಸತ್ಯ ಸುತ್ತೆಲ್ಲ ಗೋಚರವಾಗುತ್ತಿದೆ. ಬಂದ ಕಷ್ಟವನ್ನು ಎದುರಿಸಲಾರದೇ ಕಂಗಾಲಾದವರು, ಬಂದಿದ್ದನ್ನು ಸ್ವೀಕರಿಸಿದವರು, ಅದನ್ನು ಧೈರ್ಯದಿಂದ ಎದುರಿಸಿದವರು, ತಮ್ಮ ಕಷ್ಟವನ್ನು ಕಟ್ಟಿಟ್ಟು ಇತರರಿಗಾಗಿ ತುಡಿಯುವವರು…ಹೀಗೆ ಹಲವು ಬದುಕುಗಳು,ಕೆಲವು ಘಟನೆಗಳು ಕಾಡುತ್ತವೆ.. ಕೆಲವಷ್ಟನ್ನು ನಿಮ್ಮೆದುರಿಗಿಡುವ ಯತ್ನ ನನ್ನದು. ಇದೇ ಸಮಾಜದ ಭಾಗವೇ ಆದ ನನಗೂ ಮೊದಲೆರಡು ದಿನ ಕರೋನಾ ಲಾಕ್ ಡೌನ್ ಶಿಕ್ಷೆ ಎನಿಸಿತು. ಶಿಕ್ಷೆ ಎಂದುಕೊಂಡಾಗ ಬಾಲ್ಯದ ಒಂದು ಘಟನೆಯೂ ನೆನಪಾಯ್ತು. ಮಲೆನಾಡಿನ ಪುಟ್ಟ ಹಳ್ಳಿಯೊಂದರಲ್ಲಿ ನಾಲ್ಕನೆಯ ತರಗತಿ ಓದುತ್ತಿದ್ದೆ. ಏಕೋಪಾಧ್ಯಾಯ ಶಾಲೆಯಾಗಿತ್ತು ಅದು. ಒಂದೊಂದು ತರಗತಿಯವರಿಗೆ ಒಂದೊಂದು ವಿಷಯವನ್ನು ಕಲಿಸುತ್ತ, ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿದ್ದ ನಾಯ್ಕ ಮಾಸ್ತರರ ತಾಳ್ಮೆ ದೊಡ್ಡದಿತ್ತು. ಒಂದು ದಿನ ನಾಲ್ಕು ಗಂಟೆಯ ಹೊತ್ತಿಗೆ ಉಳಿದ ಕ್ಲಾಸಿನವರಿಗೆ ಕಲಿಸಿ ನಮಗೆ ಅವರಿಗೆ ವಿವಿಧ ಚಟುವಟಿಕೆ ಕೊಟ್ಟು ಅವರ ಮೇಜಿನ ಸುತ್ತ ನಿಲ್ಲಿಸಿ ನಮಗೆ ಪಾಠ ಮಾಡುತ್ತಿದ್ದರು. ಅಷ್ಟರಲ್ಲಿ ಬಂದ ಶಾಲಾ ಕಮೀಟಿಯ ಅಧ್ಯಕ್ಷರು ‘ಮಾಸ್ತರೇ ಐದು ನಿಮಿಷ ಬನ್ನಿ ಮಾತನಾಡೋದಿದೆ’ ಎಂದರು. ಇವತ್ತಿಗೆ ಪಾಠ ಸಾಕು. ನೀವು ಇಪ್ಪತ್ತರವರೆಗೆ ಮಗ್ಗಿ ಬರೆಯಿರಿ. ಯಾರೂ ಗಲಾಟೆ ಮಾಡಬೇಡಿ ಅಧ್ಯಕ್ಷರು ಬಂದಿದ್ದಾರೆ. ಎಂದು ಮಕ್ಕಳಿಗೆ ಹೇಳಿ ಶಾಲೆಯ ಕದ ಎಳೆದುಕೊಂಡು ಹೋದರು. ಇಪ್ಪತ್ತಾರು ಜನರಿದ್ದ ಶಾಲೆಯಲ್ಲಿ ಮೂರು ಜನ ಮಾಸ್ತರರು ಹೇಳಿದಂತೆ ಬರೆಯುತ್ತ ಕುಳಿತರು. ಉಳಿದಂತೆ ಕೆಲವರು ಗುಸು ಕುಸು ಮಾತು, ಪಿಸು ಪಿಸು ನಗು ಶುರು ಮಾಡಿದರು, ಕ್ರಮೇಣ ಕೆಲವರು ಕುಳಿತ ಬೇಂಚ ಬಡಿದರು. ಯಾವ್ಯಾವಾಗಿನದೋ ಸಿಟ್ಟನ್ನು ನೆನಪಿಸಿಕೊಂಡು ಕೆಲವರು ಜಗಳ ಆಡಲಾರಂಭಿಸಿದರು. ಕೆಲವರು ಸಣ್ಣ ಹೊಡೆದಾಟ ಶುರು ಮಾಡಿದರು, ಅನೇಕರು ಪ್ರೇಕ್ಷಕರಾದರು. ಕೂಗಾಟ, ಕಿರುಚಾಟ ಎಲ್ಲವೂ ಜೋರಾಯ್ತು. ಮಾನಿಟರ್ ಸುಮಂಗಲಾ ರೂಲ್ ಕಟ್ಟಿಗೆ ಹಿಡಿದು ಕೀರಲು ದ್ವನಿಯಲ್ಲಿ ಎಲ್ಲರನ್ನೂ ಸುಮ್ಮನಿರಿಸಲು ಯತ್ನಿಸಿ ಸೋತು ಒಂದೆಡೆ ಕುಕ್ಕರಿಸಿದಳು. ಅಷ್ಟರಲ್ಲಿ ಒಬ್ಬ ಹುಡುಗ ‘ಇದು ಆಟದ ಸಮಯ’ ಎಂದು ಕಟ್ಟಿಗೆಯಿಂದ ಬೆಲ್ ಮೇಲೊಂದು ಬಾರಿಸಿದರು. ನಾವೆಲ್ಲ ಪಾಟಿ ಪುಸ್ತಕಗಳನ್ನು ಪಾಟೀಚೀಲದೊಳಗೆ ತುರುಕಿ ಮಾಸ್ತರರ ಎಚ್ಚರಿಕೆಯ ಮಾತು ಮರೆತು ಆಟದ ಮೈದಾನಕ್ಕೆ ಧಾವಿಸಬೇಕೆಂದು ಮುಚ್ಚಿದ ಬಾಗಿಲಿನತ್ತ ನಡೆದೆವು *******. ಮುಂದುವರೆಯುವುದು..

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಕಾನ್ಮನೆಯ ಕಾಲುದಾರಿ ಪಶ್ಚಿಮ ಘಟ್ಟದೊಳೆಗೇ ಹುದುಗಿರುವ ದಿನೇಶ ಹಲಿಮನೆಯವರ ಸುತ್ತಲಿನ ಪ್ರದೇಶಗಳಲ್ಲೇ ಹರಿದಾಡುವ ‘ಕಾನ್ಮನೆಯ ಕಾಲುದಾರಿ’ ಎಂಬ ಕಾದಂಬರಿಯೂ..! ದಿನೇಶ ಹಲಿಮನೆಯವರು ನನಗೆ ‘ಸಿರ್ವಂತೆ ಕ್ರಾಸ್‌’‌ ಕಥಾಸಂಕಲನ ಮತ್ತು ‘ಕಾನ್ಮನೆಯ ಕಾಲುದಾರಿ’‌ ಕಾದಂಬರಿ ಕಳುಹಿಸಿ ಎರಡು-ಮೂರು ತಿಂಗಳಾಗಿತ್ತು. ಇವುಗಳಲ್ಲಿ ‘ಸಿರ್ವಂತೆ ಕ್ರಾಸ್’ ಕಥಾಸಂಕಲನದ‌ ಬಗೆಗೆ ನನ್ನ ಅನಿಸಿಕೆ ಬರೆದು ಬಹಳ ದಿನವಾಯಿತು.‌ ಆದರೆ ಈ ‘ಕಾನ್ಮನೆಯ ಕಾಲುದಾರಿ’ ಕಾದಂಬರಿ ಬಗೆಗೆ ಇಷ್ಟು ದಿವಸ ನನ್ನ ಅನಿಸಿಕೆ ಬರೆಯಲಾಗಿರಲಿಲ್ಲ. ಈ ಕಾದಂಬರಿ ಓದಿದ್ದೆನಾದರೂ ಈ‌‌‍ ಕುರಿತು ಬರೆಯಲಾಗಿರಲಿಲ್ಲ. ಹಾಗಾಗಿ ಇಂದು ಅವಡುಗಚ್ಚಿ ಕುಳಿತು ಬರೆದೆನು. ಇದು ನನ್ನ ವ್ಯಯಕ್ತಿಕ ಅನಿಸಿಕೆ ಈ ಕಾದಂಬರಿ ಕುರಿತು ಎಂದು ಹೇಳುತ್ತಾ ನೋಡೋಣ ಬರ್ರಿ ಈ ‘ಕಾನ್ಮನೆಯ ಕಾಲುದಾರಿ’ ಕಾದಂಬರಿ ಬಗೆಗೆ… ಅದು ಹೀಗಿದೆ… ಶಿವರಾಮ ಕಾರಂತರಂತೆ‌ ಪಶ್ಚಿಮ ಘಟ್ಟದೊಳಗೆ ಹುದುಗಿರುವ ದಿನೇಶ ಹಲಿಮನೆಯವರ ಸುತ್ತಮುತ್ತಲಿನ ಪ್ರದೇಶಗಳಲ್ಲೇ ಹರಿದಾಡುತ್ತದೆ ಈ ಕಾದಂಬರಿಯ ಕಥಾಹಂದರ. ಅದೇ ಕಾರಣಕ್ಕೇ ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ಕಾಂಬರಿಕಾರರಾದ ದಿನೇಶ ಹುಲಿಮನೆ ಅವರು ಮೂಲತಃ ಅವರ ಹತ್ತಿರದವರೇ ಎಂಬುದು ಕಾದಂಬರಿಯ ಆಪ್ತತೆಯನ್ನು ಹೆಚ್ಚಿಸುತ್ತದೆ. ಕಾದಂಬರಿಕಾರರು ಪ್ರಾರಂಭದಲ್ಲೇ ಹೇಳುವ ಸಮಾಜದಲ್ಲಿ ಕೆಲವರು ಜೀವನದ ರಥವೇರಿ ಸಾಗಿದರೆ ಮತ್ತೆ ಕೆಲವರು ಬದುಕಿನ ಬಂಡಿಯನ್ನು ಎಳೆಯುತ್ತಾರೆ. ಎಳೆಯುವುದೂ ಕಷ್ಟವಾದಾಗ ತಳ್ಳುವುದು ಸಹಜ. ಆಧುನೀಕರಣ, ಸಂಪ್ರದಾಯ, ಸಂಬಂಧ, ಇತ್ಯಾದಿಗಳ ನಡುವೆ ಸಂಸಾರ ನಡೆಸುವ, ಎಳೆಯುವ ಅಥವಾ ತಳ್ಳುವ ಸಮಾಜದಲ್ಲಿ, ಸಾಂದರ್ಭಿಕವಾಗಿ ನಡೆಯುವ ಎಷ್ಟೋ ಘಟನೆಗಳನ್ನು ನೇರವಾಗಿ ಸರಿ ಅಥವಾ ತಪ್ಪು ಎಂದು ತೀರ್ಮಾನಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗೆಂಬ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಈ ಕಾದಂಬರಿಯನ್ನು ಓದಲೇಬೇಕು… ಈ ಕಾದಂಬರಿ ದಿನೇಶ ಹಲಿಮನೆಯವರ ಮೊದಲ ಕಾದಂಬರಿ ಎಂದರೆ ಒಂದು ಕ್ಷಣ ಬೆರಗಾಗಬೇಕು ನಾವು ಅಷ್ಟು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ..! ಬರವಣಿಗೆ ಎಲ್ಲರಿಗೂ ಒಲಿಯುವುದಲ್ಲ. ಅದೂ ಕಾದಂಬರಿಯನ್ನು ಬರೆಯಲು ಬಹಳ ತಾಳ್ಮೆ ಬೇಕು. ತಮ್ಮ ಮೊದಲ ಪ್ರಯತ್ನದಲ್ಲಿಯೇ ದಿನೇಶ‌ ಹಲಿಮನೆಯವರು ಗೆದ್ದಿದ್ದಾರೆ. ಹೌದು, ಈ ಕಾದಂಬರಿಯಲ್ಲಿ ತೇಜಸ್ವಿಯವರ ಬರವಣಿಗೆಯ ಛಾಯೆ ದಟ್ಟವಾಗಿದೆ ಎಂಬುದೂ ನಿಜ. ಓದುತ್ತಿರುವಾಗ ಹಲವೆಡೆ ಚಿದಂಬರ ರಹಸ್ಯದ ಮುಂದುವರಿದ ಭಾಗವೇ ಇದು ಎಂದು ಎನ್ನಿಸಿದ್ದು ನಿಜವೂ ಹೌದು. ಆದರೆ ಕಾದಂಬರಿಯ ಉತ್ತರಾರ್ಧದಲ್ಲಿ ಆ ನೆರಳಿನಿಂದ ಹೊರಬಂದು ನಾಗಾಲೋಟದಲ್ಲಿ ಮುಂದೆ ಸಾಗಿದ್ದಾರೆ ದಿನೇಶ ಹಲಿಮನೆಯವರು. ನಡುನಡುವೆ ಬರುವ ನಾಗಜ್ಜಿಯ ಪಾತ್ರ ನನಗೆ ಕಾರಂತರ ಮೂಕಜ್ಜಿಯನ್ನೊಮ್ಮೆ ನೆನಪಿಸಿತು ಎಂದರೆ ಅತಿಶಯೋಕ್ತಿಯೇನಲ್ಲ ಎಂಬುದು ನನ್ನ ಭಾವನೆ..! ಎತ್ತು ಕಾಣೆಯಾದಾಗ ಬೈರ ಕಾಡಿನ ನಡುವಿನಲ್ಲಿರುವ ಹುಲಿದೇವರ ಬನಕ್ಕೆ ಬಂದು ಹುಲಿದೇವರ ಕಲ್ಲಿಗೆ ದೂರದಿಂದಲೇ ಕೈಮುಗಿಯುವ ಸನ್ನಿವೇಶ, ಜನರ ನಂಬಿಕೆ, ಹಾಗೂ ಭಯ ಎರಡರ ಪ್ರತಿರೂಪವೂ ಹೌದು. ಹಿಂದೆಲ್ಲ ಹುಲಿಗಳ ಸಂಖ್ಯೆ ಜಾಸ್ತಿ ಇದ್ದಾಗ, ಅಲ್ಲಲ್ಲಿ ಹುಲಿಗಳ ತಾಣವನ್ನು ಗುರುತಿಸುವುದಕ್ಕಾಗಿಯೇ ಹುಲಿದೇವರ ಕಟ್ಟೆ, ಹುಲಿಮನೆ, ಹುಲಿಗುಡಿ, ಹುಲೇಕಲ್ ಅಥವಾ ಹುಲಿಕಲ್ಲು, ಹುಲಿಕಟ್ಟೆ, ಹುಲಿಯೂರು, ಇತ್ಯಾದಿ ಹೆಸರುಗಳು ಜನಿಸಿದ್ದು. ಅಂತಹ ಹೆಸರುಗಳು ಅಸಂಖ್ಯ. ಇಲ್ಲಿ ಬೈರ ಹುಲಿಯಪ್ಪ ದೇವರ ಬಳಿ ಬಂದು ಕೆಂಪನಿಗೆ ಏನೂ ಆಗದೆ ಇರಲಿ, ದೊಡ್ಡ ಹಬ್ಬಕ್ಕೆ ಒಂದು ಬಾಳೆಕೊನೆ ಒಪ್ಪಿಸಿಕೊಡ್ತೀನಿ ಎಂದು ಹರಕೆ ಹೊರುತ್ತಾನೆ. ಅದೂ, ಹುಲಿದೇವರ ಕಲ್ಲಿನ ಬಳಿಗೆ ಹೋಗದೇ..! ಕೆಂಪ ಎಂಬ ಎತ್ತನ್ನು ಒಂದು ಪ್ರಾಣಿ ಎಂದು ನೋಡದೇ ತನ್ನ ಮನೆಯ ಸದಸ್ಯನೇನೋ ಎಂದು ಭಾವಿಸುವ ಬೈರ, ಹುಲಿದೇವರ ಕಲ್ಲಿನ ಬಳಿ ಹೋದರೆ ಮೈಲಿಗೆ ಆಗುತ್ತದೆ ಎಂದೂ ಯೋಚಿಸುತ್ತಾನೆ..! ಹುಲಿಯನ್ನೂ ಒಂದು ಪ್ರಾಣಿ ಎಂದು ಭಾವಿಸದೇ ಒಂದು ದೇವರಾಗಿ ಕಾಣುತ್ತಾನೆ. ಕೊಲ್ಲುವ ಹುಲಿಯೂ ದೇವರೇ… ಸಾಯುವ ಎತ್ತೂ ದೇವರೇ ಎಂಬುದು ಭಾರತೀಯ ಜೀವನ ದರ್ಶನ. ಇಂತಹ ಹಲವು ಘಟನೆಗಳು ಈ ಕಾದಂಬರಿಯಲ್ಲಿ ಸುಂದರವಾಗಿ ವೈಬವಿಕರಿಸಲ್ಪಟ್ಟಿದೆ… ದೊಡ್ದಬ್ಬ ಅಥವಾ ದೀಪಾವಳಿ ಹಬ್ಬದ ಸಡಗರ, ಸೊಬಗು, ಆಚರಣೆಗಳು, ಹಸುಗಳಿಗೆ ಬೇಕಾದ ದಂಡೆ ಹುರಿ ಹೊಸೆಯುವಂತಹ ಪದ್ದತಿಗಳು ಕಾದಂಬರಿಯ ಮೊದಲಲ್ಲಿ ಸೊಗಸಾಗಿ ಚಿತ್ರಿತವಾಗಿವೆ. ಇದೇ ಆಚರಣೆಗಳನ್ನು ಕಾದಂಬರಿಯ ಅಂತ್ಯದಲ್ಲಿ, ನಿರುತ್ಸಾಹದಿಂದ, ಯಾಂತ್ರಿಕವಾಗಿ ಚಿತ್ರಿಸುವ ಮೂಲಕ ಕಾದಂಬರಿಕಾರ ಕಾದಂಬರಿ ಸಾಗಿ ಬಂದ ಕಾಲಘಟ್ಟವನ್ನು ಹಾಗೂ ನಮ್ಮ ಇಂದಿನ ಬದುಕು ಸಾಗಿಬಂದ ಕಾಲಘಟ್ಟವನ್ನೂ ಚಿತ್ರಿಸಿದ್ದಾರೆ. ಬೂರೆ ಹಬ್ಬ, ಬೂರ್ಗಳು, ಬಿಂಗಿಪದ, ಕಹಿ ಸವತೆಯನ್ನು ತಂದು ಹಂಡೆಗೆ ಕಟ್ಟಿದ್ದು, ಹಬ್ಬದ ದಿನ ಒಬ್ಬರ ಮನೆಯಲ್ಲಿ ಜಾಗಟೆ ಸದ್ದು ಮುಗಿಯುತ್ತಿದ್ದಂತೆ ಮೊತ್ತೊಂದು ಮನೆಯಿಂದ ಕೇಳಿಬರುವುದು, ದನ-ಕಾರುಗಳನ್ನು ಬೆಚ್ಚುವುದು ಇತ್ಯಾದಿ ವಿವರಗಳನ್ನು ಓದುತ್ತಿರುವಾಗ, ಹಬ್ಬದ ಸೊಗಸು ಮೊತ್ತೊಮ್ಮೆ ನಮ್ಮ ಕಣ್ಣು-ಮನಸುಗಳಲ್ಲಿ ತುಂಬಿಕೊಳ್ಳುತ್ತದೆ. ವಿಳ್ಯದ ಎಲೆಯಿಂದ ದೃಷ್ಟಿ ತೆಗೆಯುವ ನಂಬಿಕೆ, ಕೊಟ್ಟೆ ಕಡುಬು ಮಾಡುವ ಬಗೆ, ಬಿಂಗಿ ಪದ ಹಾಡಲು ಬರುವವರಿಗೆ ಹೋಳಿಗೆ-ಕಡುಬು ಕೊಡುವ ಸಂಪ್ರದಾಯ ಇತ್ಯಾದಿಗಳನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಕಾದಂಬರಿಕಾರ… ಕುರಿ ಕಡಿದು ಬಾಡೂಟ ಮಾಡುವುದೇ ಆಗಿದ್ದರೂ ಅಲ್ಲಿ ಹಿಂಸೆ ಆಗಬಾರದು ಎಂಬ ಒಂದು ನಂಬಿಕೆ ಹಳ್ಳಿಗಳಲ್ಲಿ ಈಗಲೂ ಇದೆ. ಅದನ್ನೇ ಮಾದಿ ಈರನಿಗೆ “ಥೂ! ಹುಚ್ಚು ಮುಂಡೇಗಂಡಾ, ನಾಲ್ಕೈದು ಕೊಚ್ಚು ಹಾಕಿ ಕಡದ್ಯಂತಲ್ಲೋ, ಎರಡು ಕೊಚ್ಚಿಗೂ ತುಂಡಾಗ್ದೆ ಕುರಿ ಬಿದ್ದು ಒದ್ದಾಡ್ತಂತೆ, ಹಂಗೆಲ್ಲಾ ಮಾಡಿದ್ರೆ ಪಾಪ ಬತೈತೆ, ಕುರಿನಾ ಒಂದೇ ಕೊಚ್ಚಿಗೆ ಕಡಿದ್ರೆ ಸರಿ, ಅದಿಲ್ಲಾ ಅಂದ್ರೆ ನನ್ನ ಕೈಯಾಗೆ ಆಗಲ್ಲಾ ಅಂತ ಸುಮ್ನೇ ಇರಬೇಕಪ್ಪ. ಅದು ಬಿಟ್ಟು ಪರ ಊರೋರ ಮುಂದೆ ಹಿರೇತನ ಎಂತಾಕೆ ಮಾಡೋದು“ ಎಂದು ತಾರಾಮಾರಾ ಬೈದು ಹೇಳುತ್ತಾಳೆ. ಕಾದಂಬರಿಕಾರರು ಈ ತರಹದ ಸಣ್ಣಸಣ್ಣ ವಿವರಗಳನ್ನೂ, ಸೂಕ್ಷ್ಮ ವಿಚಾರಗಳನ್ನೂ ಕಟ್ಟಿಕೊಡುವ ಮೂಲಕ ಭವಿಷ್ಯದಲ್ಲಿ ಇನ್ನೂ ಸೊಗಸಾದ ಕೃತಿಗಳನ್ನು ಬರೆಯಬಲ್ಲರು ಎಂಬ ನಂಬಿಕೆ ಮೂಡಿಸಿದ್ದಾರೆ… ಬೈರ ನಿಧನನಾಗಿದ್ದಾನೆ ಎಂಬುದನ್ನು ತಿಳಿದ ನಾಯಿ, ಕೊಟ್ಟಿಗೆಯಲ್ಲಿದ್ದ ಎತ್ತುಗಳೂ ನೀರು, ಆಹಾರ ಮುಟ್ಟದೇ ಇದ್ದವು ಎಂದು ಚಿತ್ರಿಸುವ ಕಾದಂಬರಿಕಾರರು ಮಾನವನಿಗಿಂತ ಮೂಕ ಪ್ರಾಣಿಗಳೇ ಮೇಲು ಎಂಬ ಒಂದು ಝಲಕ್ ನೀಡುತ್ತಾರೆ. ಹಳ್ಳಿಗಳಲ್ಲಿ ಜಾತಿ ಜಾತಿಗಳು ಅಸ್ತಿತ್ವದಲ್ಲಿದ್ದರೂ ಅವರ ನಡುವೆ ಇರುವ ಸಾಮರಸ್ಯ ಹೇಗೆ ಕೆಲವರ ಕುತಂತ್ರ, ಸ್ವಾರ್ಥ, ದುರಾಸೆ, ನೀಚತನಗಳಿಂದ ಹಾಳಾಗುತ್ತದೆ, ಹಾಳಾಗುತ್ತಿತ್ತು ಎಂಬ ವಿಷಯ ಪ್ರಸ್ತಾಪಿಸುತ್ತಾ ಕಾದಂಬರಿ ಬೆಳೆಸುತ್ತಾ ಹೋಗಿದ್ದಾರೆ. ಪ್ರೀತಿ, ಪ್ರೇಮ, ಬದುಕು ಕಟ್ಟಿಕೊಳ್ಳಲು ಪಟ್ಟಣಕ್ಕೆ ವಲಸೆ ಹೋಗುವುದು, ಮುಂದುವರಿದು ವಿದೇಶಕ್ಕೂ ಹೋಗುವುದು, ಅವುಗಳಿಂದ ಕುಟುಂಬ ಮಟ್ಟದಲ್ಲಿ ಆಗುತ್ತಿರುವ ಸಂಕಷ್ಟಗಳು, ತಂದೆ, ಅಣ್ಣ ತೀರಿದರೂ ವಿಷಯ ತಿಳಿಸಲಾಗದ ಪರಿಸ್ಥಿತಿ ಇಂತಹ ಹಲವಾರು ವಿಷಯಗಳು, ನಮ್ಮ ಇಂದಿನ ಬದುಕಿನ ಪ್ರತಿಫಲನವೇ ಸರಿ, ಮತ್ತು ಕಾದಂಬರಿರಕಾರು ಅವುಗಳನ್ನು ಎಲ್ಲೂ ಕೃತಕವೆನ್ನಿಸುವಂತೆ ಬರೆದಿಲ್ಲ. ಬಲಿಷ್ಟರಾದವರು ತಮ್ಮ ಸ್ವಾರ್ಥಕ್ಕೆ ಈ ಕುಟುಂಬಕ್ಕೆ ಕಟ್ಟಿ ಕೊಡಲು ಹೊರಟಾಗ ಬರುವ ಒಂದು ವಾಕ್ಯ “ಕಾನ್ಮನೆಯ ಕಾಲುದಾರಿಯಲ್ಲಿ ಹುಲ್ಲು ಬೆಳೆಯದಿರಲಿ“ ಎಂಬುದು ಇಷ್ಟವಾಯಿತು. ನಮ್ಮ ಮನದ ದಾರಿಯಲ್ಲೂ ಹುಲ್ಲು ಬೆಳೆಯದಿರಲಿ, ಅಂದರೆ ನಮ್ಮ ಮನದಲ್ಲೂ ಉತ್ತಮ ವಿಚಾರಗಳು ಪದೇಪದೇ ಓಡಾಡುತ್ತಾ ಇರಲಿ… ಹೇಗೆ ಹಿಂದುಳಿದವರನ್ನು ಕೆಲವು ಸ್ವಾರ್ಥಿಗಳು ಬಳಸಿಕೊಳ್ಳುತ್ತಾರೆ, ಹೇಗೆ ಕೆಲವು ತತ್ವಗಳು ಜನರನ್ನು ಹಾಳುಮಾಡುತ್ತವೆ. ಅನ್ಯಧರ್ಮದ ಸಂಘಟನೆಗಳ ಮುಖವಾಡ ಹೇಗೆ ನಿಧಾನವಾಗಿ ಬಯಲಾಗುತ್ತದೆ, ಹೇಗೆ ಅನ್ಯಾಯವಾಗಿ ಪಾಪದ ಜನರು ತಮ್ಮದಲ್ಲದ ತಪ್ಪಿಗೆ ನಷ್ಟ, ಸಂಕಟ ಅನುಭವಿಸುತ್ತಾರೆ ಎಂಬ ವಿವರಗಳನ್ನೂ ಕಾದಂಬರಿಕಾರರು ಸೊಗಸಾಗಿ ಸೇರಿಸಿದ್ದಾರೆ… ಕಾದಂಬರಿ ಮೊದಮೊದಲು ತೇಜಸ್ವಿಯವರ ಬರಹಗಳಂತೆ ಆಪ್ತವಾದರೆ, ನಂತರ ನಮ್ಮನ್ನು ಗಂಭೀರ ಚಿಂತನೆಗೆ ಹಚ್ಚುತ್ತದೆ ಕೂಡಾ..! ವಿವಾಹದ ಬಗ್ಗೆ “ಮೇದಿನಿ ಮಠ“ ದ ಸ್ವಾಮಿಗಳ ನಿಲುವು, ಅವರನ್ನು ತಮ್ಮೆಡೆಗೆ ಸೆಳೆಯಲು ಹೋಗಿ ತಾವೇ ಕಕ್ಕಾಬಿಕ್ಕಿಯಾಗುವ ದೊಡ್ಡೇಗೌಡ ಮತ್ತು ಮಹಾಬಲ, ಅಲ್ಲಿನ ಚರ್ಚೆಗಳು ನಮ್ಮನ್ನು ವಿಚಾರ ಮಾಡಲು ಪ್ರಚೋದಿಸುವುದೂ ನಿಜ… ಆದರೆ ಅಂತ್ಯ ನನಗೆ ತೃಪ್ತಿ ತರಲಿಲ್ಲ. ಅಂತ್ಯವನ್ನು ಓದುಗರ ಕಲ್ಪನಾಶಕ್ತಿಗೇ ಬಿಡುವುದು ಒಂದು ಕಥನ ತಂತ್ರ ಹೌದಾದರೂ, ಇನ್ನಷ್ಟು ಮುಂದುವರಿಸಬಹುದಿತ್ತೇನೋ ಎನ್ನಿಸಿದ್ದಂತೂ ನಿಜ… *********** ಕೆ.ಶಿವು.ಲಕ್ಕಣ್ಣವರ

ಪುಸ್ತಕ ಪರಿಚಯ Read Post »

ಕಾವ್ಯಯಾನ

ಕಾವ್ಯಯಾನ

ಮೌನಗೀತೆ ವಿಶಾಲಾ ಆರಾಧ್ಯ ನೀನಂದು ಬಳಿ ಸರಿದು ಒಲವಿಂದ ನಗು ತಂದು ಬೀಸುವ ಗಾಳಿಯೊಲು ಹಿತವೆನಿಸಿದೇ ನಾನದನು ಹೇಳದಲೆ ಗುಟ್ಟಾಗಿ ಬದಿಗಿಟ್ಟು ಎದೆಯ ಗೂಡಲಿ ಒಂದು ಗುಡಿ ಮಾಡಿದೆ ಗುಡಿಯ ಗರ್ಭದಿ ಅಲ್ಲಿ ಮೂರುತಿಯು ನೀನಾದೆ ಕಣ್ಣ ಭಕುತಿಗೆ ತಾನೇ ಪ್ರತಿಧ್ವನಿಸಿದೆ ವನವೆಲ್ಲಾ ಓಡಾಡಿ ಪತ್ರೆಯದು ಸಿಗದಾಗಿ ಮನದೊಲವ ಪತ್ರೆ ಯನೇ ನಿನಗಿರಿಸಿ ನೀನಾರೋ ನಾನಾರೋ ಒಂದು ನೋಟದಿ ಒಲಿದು ಹೃದಯದಂಗಳವೆಲ್ಲ ಬೆಳಕಾಗಿದೆ ಮತ್ತೊಮ್ಮೆ ನೀ ಸುಳಿದು ಮನದ ಭಾವವ ಉಲಿದು ಚಿತ್ತದಲಿ ದಿಟವನ್ನು ಅನುಗೊಳಿಸಿಡು || ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಹೇಮಗಂಗಾ ಸಮ ಸಮಾಜದ ಭವ್ಯ ಮಂಟಪಕೆ ಬುನಾದಿಯಾದವರು ನೀವು ತಮ ತೊಡೆದು ಅಜ್ಞಾನಿಗಳ ಮನ ಬೆಳಗಿಸಿದವರು ನೀವು ಸೃಷ್ಟಿಯಲ್ಲಿರದ ಮೇಲು ಕೀಳೆಂಬ ದೃಷ್ಟಿ ಬೇಕೇಕೆ ಈ ಜಗದಿ? ಅಸ್ಪೃಶ್ಯತೆಯ ಪಿಡುಗ ಹೊಸಕಲು ದಾರಿ ತೋರಿದವರು ನೀವು ಸಮಾನತೆ ಎಂಬುದು ಉಳಿಯಬಾರದು ಬರಿಯ ನಿಘಂಟಿನಲ್ಲಿ ಶೋಷಿತರ ಅಡಗಿಹೋದ ದನಿಗೆ ಕೊರಳಾದವರು ನೀವು ನೆನೆವೆವು ನಿಮ್ಮ ನವರೂಪ ತಳೆದ ಸಂವಿಧಾನದ ಶಿಲ್ಪಿಯೆಂದು ಭವಿಷ್ಯದ ಪುಟಪುಟದಿ ಹೊಸ ಭಾಷ್ಯ ಬರೆದವರು ನೀವು ಭೇದಭಾವವಿಲ್ಲ ಸಾವಿಗೆ ಎಲ್ಲರೊಂದೇ ಮರಳಿ ಮಣ್ಣ ಸೇರಿರೆ ಅರಿವು ಮೂಡಿಸಿ ಅಜರಾಮರರಾಗಿ ಉಳಿದವರು ನೀವು ***********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿಜ ಜಗಕೆ ಧಾವಂತವಿಲ್ಲ… ದೇವಯಾನಿ ಧಾವಂತವಿರಲಿಲ್ಲ ಬೆಳಗಿಗೆ ಈ ಮೊದಲಿನಿಂದಲೂ ತನ್ನಷ್ಟಕ್ಕೆ ತಾನೇ ಮೂಡುವ ಸೂರ್ಯ ಚೆಂಬೆಳಕ ಚೆಲ್ಲುವುದಕ್ಕೆ ಚುರುಗುಟ್ಟಿಸುವ ಬಿಸಿಲಹೊಗೆ ಚಿಮ್ಮಿಸಲು ಗಡಿಯಾರ ಬೇಕಿರಲೇ ಇಲ್ಲ ಹಕ್ಕಿ ಚಿಲಿಪಿಲಿಯೂ ಹೂ ಹಣ್ಣುಗಳೂ ಎಲ್ಲವೂ ಕಾಯುತ್ತಿದ್ದುದು ಸೂರ್ಯ ತೇಜದ ಗಡಿಯಾರ ತಾನೆ? ಋತುವುರುಳಿ ಋತುವಾಗಮಿಸಿ ನಗುವ ವಸುಂಧರೆಗೆ ಆಗಾಗ ಹೊನ್ನ ಹೊದಿಕೆ , ಶ್ವೇತ ಚಾದರ ಮಳೆಹನಿಯ ತೋರಣ ಎಲ್ಲಕೂ ರವಿಕಿರಣವೇ ಕಾರಣ ಈಗಲೀಗೀಗ ಗಡಿಯಾರದ ಮುಳ್ಳುಗಳನೂ ಮೀರಿಸಿದ್ದಾಯ್ತು ಹುಲುಮಾನವ ಹಾರಾಟ ,ಧಾವಂತ ನಡೆಯದೆಲೆ ಗುರಿ ಸೇರುವ ಗಮ್ಯಕೆ ಸೂರ್ಯ ನಕ್ಕಿರಬೇಕು ನಿದ್ರಿಸುವ ರಾತ್ರಿಗಳ ಕೊಂದುದಕೆ ಚಂದ್ರ ತಾರೆ ಶಪಿಸಿರಬೇಕು ಈಗೀಗ ಸಾಗರ ಕುಡಿದಿಂಗಿಸಲು ಅಗಸ್ತ್ಯನೇ ಬರಬೇಕಿಲ್ಲ ಬೆಟ್ಟ ಸರಿಸಲು ಹನುಂತನೇ ಆಗಬೇಕಿಲ್ಲ… ಎಲ್ಲಾ ನನದೇ ಎಲ್ಲವೂ ನನಗಾಗೇ ಎಂದವನೀಗ ನಾಲ್ಕು ಗೋಡೆಯ ಬಂಧಿ ಗಡಿಯಾರ ನಗುತ್ತಿದೆ ಹಣದ ಕೇಕೆ ದನಿಗಳೆದುಕೊಂಡಿದೆ ಜಗ ಸ್ಥಬ್ಧವಾಗಿಲ್ಲ ಮರುಳೇ ಕೇಳಬಲ್ಲೆಯಾದರೆ ಕೇಳೊಮ್ಮೆ ರವಿರಥದ ಗಾಲಿಯುರುಳುವ ಸದ್ದು ವಸುಂಧರೆಯ ನಿಡಿಯುಸಿರಿನ ಸದ್ದು ಜಗದ ನಿಜ ಗಡಿಯಾರ ಹಗುರಾಗಿ ಓಡುತಿದೆ ನನ್ನ‌ ನಿಮ್ಮ ಬದುಕ ಗಡಿಯಾರಗಳು ಮಾತ್ರಾ ಓಡಲಾರದೇ ಕುಂಟುತ್ತಿವೆಯೀಗ

ಕಾವ್ಯಯಾನ Read Post »

ಅಂಕಣ ಸಂಗಾತಿ

ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಮೂರನೆ ಅದ್ಯಾಯ ಗಜಲ್ ಎನ್ನುವ ನಶೆ ಗಜಲ್ ಎನ್ನುವ ನಶೆ ಯಾವುದೇ ಒಂದು ಸಾಹಿತ್ಯ ಪ್ರಕಾರ ಜನಪ್ರಿಯ ಆಗುತ್ತಿದೆ ಅಂದರೆ ಅದು ಜನ ಜೀವನವನ್ನು ಸರಳವಾಗಿ ತನ್ನತ್ತ ಸೆಳೆದುಕೊಂಡು ಒಂದು ಅವಿನಾಭಾವ ಬಂಧ ಬೆಸೆಯುತ್ತಿದೆ ಎಂದೇ ಅರ್ಥ. ಹೌದು ಅರಮನೆಗಳಿಂದ ಕೊಳಚೇರಿಗಳ ಗಲ್ಲಿ ಗಲ್ಲಿ ತಲುಪಿದ ಗಜಲ್ ಬದುಕಿನ ಹೊಸದೊಂದು ಅಭಿವ್ಯಕ್ತಿಯ ತೀವ್ರತೆಯನ್ನು ಸೃಜಿಸಿತು. ಗಜಲ್ ಇಷ್ಟೊಂದು ಯಶಸ್ಸು ಸಾಧಿಸುತ್ತಿದಂತೆ ಆಕರ್ಷಿತರಾದ ಸಾಕಷ್ಟು ಜನ ಅದರ ಪಟ್ಟು, ಚೌಕಟ್ಟು ಮೊದಲಾದವುಗಳನ್ನು ಅರಿತು ತಮ್ಮದೇ ಆದ ವಿಭಿನ್ನ ರೀತಿಯ ಬದುಕಿನ ಒಳ ಹೊರ ಸಂಗತಿಗಳನ್ನು ಹೊರ ಹಾಕತೊಡಗಿದರು. ಪರಿಣಾಮವಾಗಿ ಗಜಲ್ ಇನ್ನಷ್ಟು ದಾಪುಗಾಲು ಇಟ್ಟು ತನ್ನೊಳಗೆ ದೊಡ್ಡ ದೊಡ್ಡ ಗಜಲ್ ರಚನಕಾರರನ್ನು ತುಂಬಿಕೊಳ್ಳತೊಡಗಿತು. ಸೂಫಿ ಸಂತರಿಂದ ಹೆಚ್ಚೆಚ್ಚು ಪಸರಿಸಿದ ಗಜಲನ ವಿಷಯ ಯಾವಾಗಲೂ ಪ್ರಧಾನವಾಗಿ ಮೋಹ, ಪ್ರೇಮ, ವಿರಹವೇ ಆಗಿರುತ್ತಿತ್ತು. ಇದೇ ಸಂದರ್ಭದಲ್ಲಿ ಪರ್ಷಿಯನ್ ಭಾಷೆಯಿಂದ ಉರ್ದು ಕಡೆಗೆ ಹೊರಳಿದ ಮೊಘಲರು ಈ ಪ್ರೇಮಕಾವ್ಯಕ್ಕೆ ಆಸರೆಯಾಗಿ ನಿಂತ ಕಾರಣ ಲೌಕಿಕ ಅಲೌಕಿಕ ಅನುರಾಗಗಳ ಸಂಬಂಧ ಅಧ್ಯಾತ್ಮಿಕದೆಡೆಗೆ ತುಡಿಯುವಂತೆ ಮೂಡಿ ಬಂದಿದ್ದು ಮಹತ್ವ ಪಡೆದಿತ್ತು. ತನ್ನನ್ನು ತಾನು ಮರೆತು ಉನ್ಮಾದದಲ್ಲಿ ಒಂದಾಗುವ ಸೂಫಿ ಸಂತರ ಗಜಲಗಳು ಭಾರತೀಯ ಗಜಲ್ ಇತಿಹಾಸದ ಮೊದಲ ಮೈಲುಗಲ್ಲುಗಳಾಗಿವೆ. ಗಜಲ್ ಎನ್ನುವುದೇ ಒಂದು ನಶೆ, ಅದರ ಒಳ ಹೋದವನು ನಶೆಯ ಗುಂಗಿನ ಸವಿಯನ್ನು ಸವಿಯದೇ ಹೊರ ಬರಲಾರ. ಆದ್ದರಿಂದ ಗಜಲ್ ಮಾಡಿದ ಮೋಡಿಯು ದೊಡ್ಡ ಯಶಸ್ಸು ಕಾಣಲು ಮತ್ತೊಂದು ಮಗ್ಗುಲಿನತ್ತ ಹೊರಳಿತು. ಗಜಲದಿಂದ ಅವರು ಬೆಳೆದರಾದರೂ ಗಜಲ್ ಎಂದೊಡನೆ ಅವರೇ ನೆನಪಾಗುವಷ್ಟು ಕೆಲವರು ಗಜಲ್ ಹೆಸರಿಗೆ ಪರ್ಯಾಯವಾದರು. ಗಜಲ್ ಲೋಕ ಕಂಡ ಅಂತಹ ಮಹಾನ್ ಗಜಲ್ ಮಾಂತ್ರಿಕರ ಬಗ್ಗೆ ಚಿಕ್ಕ ಚೊಕ್ಕ ವಿವರಣೆ ನಿಮಗಾಗಿ.. ಅಮೀರ್ ಖುಸ್ರೋ ಭಾರತದ ಗಿಳಿ ಎಂದೇ ಖ್ಯಾತರಾದ ಇವರನ್ನು ಖವಾಲಿಯ ಜನಕ ಎಂದೇ ಪರಿಗಣಿಸಿಲಾಗಿದೆ. ಉತ್ತಮ ಸಂಗೀತಗಾರರೂ ಆದ ಇವರು ಖಾಯಲ್ ಮತ್ತು ತಾರಾನಾ ಎಂಬ ಶೈಲಿಯ ಸಂಗೀತಕ್ಕೂ ಜನಕರಾಗಿದ್ದಾರೆ. ಸೂಫಿ ಪಂಥಕ್ಕೆ ಸೇರಿದ ಇವರು ಅರಬ್ ರಾಷ್ಟ್ರಗಳ ಮುಖ್ಯ ಅಂಶಗಳನ್ನು ಭಾರತೀಯ ಸಂಸ್ಕೃತಿಯಲ್ಲಿ ಅಳವಡಿಸುವ ಮೂಲಕ ಹೆಸರು ಮಾಡಿದ್ದಾರೆ. ಗಜಲನ್ನು ತಮ್ಮ ವಿಶಿಷ್ಟ ಸಂಗೀತದಲ್ಲಿ ಅಳವಡಿಸಿಕೊಂಡ ಇವರು ಗಜಲಗೆ ಒಂದು ಹೊಸ ಮೆರುಗು ನೀಡಿ ದೇಶಭಿಮಾನದ ಮೂಲಕ ಮತ್ತೊಂದು ಮಜಲಿನೆಡೆಗೆ ಒಯ್ದರು. ಮೀರ್ ತಖೀ ಮೀರ್ ಗಜಲ್ ಲೋಕದ ರಾಜನಾಗಿ ಮೆರೆದ ಮೀರ್ ತಖೀ ಮೀರ್ ಸೂಫಿ ಸಂತನಾಗಿ ಗಜಲ್ ಪ್ರಕಾರವನ್ನು ಅತ್ಯಂತ ಪ್ರಖರವಾಗಿ ಬೆಳಗಿದವರು. ಪಾರ್ಸಿ, ಟರ್ಕಿಶ್, ಅರಬ್ ಭಾಷೆಯನ್ನು ಸಹ ಬಲ್ಲ ಈತನ ಅಂತರಾಳದ ಸೂಕ್ಷ್ಮ ತುಡಿತಗಳೇ ಆತನ ಗಜಲ್ ವಸ್ತುಗಳಾಗಿದ್ದವು. ಆದ್ದರಿಂದಲೇ ಆತನ ಗಜಲಗಳು ಹೆಚ್ಚು ಆಪ್ತವಾಗಿ ಜನ ಸಾಮಾನ್ಯರು ಗುನುಗುನಿಗಿಸುವಂತಾದವು. ಮಹಮ್ಮದ್ ಇಕ್ಬಾಲ್ ಪಾಕಿಸ್ತಾನದ ರಾಷ್ಟ್ರಕವಿ ಆದ ಮಹಮ್ಮದ್ ಇಕ್ಬಾಲ್ ಅವರನ್ನು ಭಾರತೀಯರು ನೆನಪಿಸಿಕೊಳ್ಳಲು ಇರುವ ಒಂದೇ ಒಂದು ಮುಖ್ಯ ಕಾರಣ ಎಂದರೆ ಅದು “ಸಾಂರೇ ಜಹಾಂಸೇ ಅಚ್ಚಾ, ಹಿಂದುಸ್ತಾನ ಹಮಾರಾ ಹಮಾರಾ” ಎಂಬ ಭಾರತದಾದ್ಯಂತ ಜನರ ನಾಲಿಗೆಯ ತುದಿಯಲ್ಲಿ ನಲಿದಾಡುವ ಗೀತೆ. ಈ ಗೀತೆಯನ್ನು ರಚಿಸಿದ ಕವಿಯಾದ ಇವರ ಮಹತ್ವವನ್ನು ಸಾರಲು ಆ ಗೀತೆಯ ಉದಾಹರಣೆವೊಂದೇ ಸಾಕು. ಇನ್ನೂ ವಿಶೇಷ ಎಂದರೆ ಆ ಗೀತೆ ಒಂದು ಗಜಲ್ ಆಗಿದೆ. ಮಹಮ್ಮದ್ ಇಕ್ಬಾಲ್ ಅವರ ಧೋರಣೆಗಳು, ಪ್ರತಿಪಾದನೆಗಳು ಏನೇ ಇರಬಹುದಾದರೂ ಗಜಲಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಅವರನ್ನು ಗಜಲ್ ಲೋಕ ಸದಾ ನೆನೆಯುತ್ತದೆ. ಮಿರ್ಜಾ ಗಾಲಿಬ್ ತನ್ನ ಬದುಕಿನಲ್ಲಿ ಸಾಕಷ್ಟು ಕಷ್ಟ ನೋವುಗಳನ್ನು ಕಂಡು ಸೆರೆವಾಸವನ್ನು ಸಹ ಅನುಭವಿಸಿದ ಮಿರ್ಜಾ ಅಸಾದುಲ್ಲಾ ಬೇಗ್ ಖಾನ್ ಎನ್ನುವುದು ಮಿರ್ಜಾ ಗಾಲಿಬನ ನಿಜವಾದ ಹೆಸರು ಮತ್ತು ಗಾಲಿಬ್ ಎನ್ನುವುದು ಈತನ ಕಾವ್ಯನಾಮವಾಗಿದೆ. ಮೊಘಲರು ಭಾರತಕ್ಕೆ ನೀಡಿದ ಪ್ರಮುಖ ಕೊಡುಗೆ ಎಂದರೆ ಮೂರು ಒಂದು ಉರ್ದು ಭಾಷೆ, ಇನ್ನೊಂದು ತಾಜ ಮಹಲ್ ಆದರೆ ಮತ್ತೊಂದು ಮಿರ್ಜಾ ಗಾಲಿಬ್ ಆಗಿದ್ದಾನೆ. ಉರ್ದು ಕಾವ್ಯ ಮತ್ತು ಗಜಲ್ ಸಾಹಿತ್ಯದಲ್ಲಿ ಸಾಕಷ್ಟು ಪ್ರಭಾವಿಸಿದ ಪ್ರಮುಖರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಈತ ಒಂದು ಯುಗದ ಮತ್ತೊಂದು ಜಗತ್ತೇ ಆಗಿ ಹೋಗಿದ್ದ. ಗಜಲ್ ಅಮೀರ್ ಖುಸ್ರೋನ ಗುಟ್ಟು, ಮೀರ್ ತಖೀ ಮೀರನ ಒಗ್ಗಟ್ಟು, ಇಕ್ಬಾಲನ ಒಗಟು ಮತ್ತು ಗಾಲಿಬ್ ಮನದಾಳದ ಕಟ್ಟುಗಳಿಂದ ಹೊಸ ಹೊಳಪು ಪಡೆದು ಜಗವನ್ನು ಆವರಿಸಿದೆ. ಇವರಷ್ಟೇ ಅಲ್ಲದೇ ಗಜಲ್ ಲೋಕ ಕಂಡ ಅನೇಕ ದಿಗ್ಗಜರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದು ಗಜಲ್ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ******* ಬಸವರಾಜ ಕಾಸೆ

ಗಝಲ್ ಲೋಕ Read Post »

ಕಾವ್ಯಯಾನ

ಕಾವ್ಯಯಾನ

ಸಂವಿಧಾನ ಶಿಲ್ಪಿ ತೇಜಾವತಿ ಹೆಚ್. ಡಿ ರಾಮಜಿ ಭೀಮಾಬಾಯಿಯ ಹದಿನಾಲ್ಕನೆಯ ಪುತ್ರರತ್ನವಾಗಿ ಬೆಳಗುಬೈಗು ಧೋಹೆ ರಾಮಾಯಣ ಮಹಾಭಾರತ ಸಂಸ್ಕಾರವಾಗಿ ಹೋದಲ್ಲೆಲ್ಲಾ ಅಸ್ಪೃಶ್ಯತೆಯ ಬಿಸಿಯನ್ನೇ ನೀನುಂಡೆ ಸಹಪಾಠಿಗಳೆದುರು ದಲಿತನೆಂದು ಅವಮಾನಕ್ಕೀಡಾದೆ! ಫೆಂಡೆಸೆ ಅಂಬೇಡ್ಕರರ ಪ್ರೀತಿಯ ತುತ್ತಿಗೆ ಪಾತ್ರರಾಗಿ ಗುರುಗಳ ಕೈಯಲಿ ಭೀಮರಾವ್ ಅಂಬೇಡ್ಕರ್ ಆಗಿ ಅಸ್ಪೃಶ್ಯರ ವರ್ಗದಲ್ಲೇ ಮೊದಲು ಸನ್ಮಾನಕ್ಕೆ ಪಾತ್ರನಾದೆ ಭಗವಾನ್ ಬುದ್ಧನ ಚರಿತ್ರೆಯ ಹೊತ್ತಗೆಗೆ ಆಕರ್ಷಿತನಾದೆ ! ಹೆಜ್ಜೆ ಹೆಜ್ಜೆಗೂ ತಿರಸ್ಕಾರದ ಉರಿಯಲ್ಲಿ ಹೊಗೆಯಾಗಿ ಪಣತೊಟ್ಟೆ ದಲಿತವರ್ಗದವರ ಪಾಲಿಗೆ ಜಾಗೃತಿಯಾಗಿ ಬಹಿಷ್ಕೃತ ಭಾರತ ಪತ್ರಿಕೆಗೆ ಸಾಮಾಜಿಕ ಹೋರಾಟಗಾರನಾದೆ ಮಹಾಡದ ಚೌಡರ ಕೆರೆಯ ನೀರ ಮುಟ್ಟಲು ಚಳುವಳಿಯಾದೆ ! ಅನಿಶ್ಚಿತ ಹುಟ್ಟಿನ ಹಿಂದು ಧರ್ಮವ ತೊರೆಯುವ ಪ್ರತಿಜ್ಞೆಯಾಗಿ ನೆಹರೂರವರ ಪಂಚವಾರ್ಷಿಕ ಯೋಜನೆಗಳಿಗೆ ಮಾರ್ಗದರ್ಶಕರಾಗಿ ವಿದೇಶಿ ಗಣ್ಯರೆದುರು ಮಂತ್ರಿಮಂಡಲದ ವಜ್ರವಾದೆ ಭಾರತ ಸಂವಿಧಾನ ರಚಿಸಿ ಸಂವಿಧಾನ ಶಿಲ್ಪಿಯಾದೆ ! ಆಧುನಿಕ ಭಾರತದ ನಿರ್ಮಾಪಕ ಸಮಾಜ ಪ್ರವರ್ತಕನಾಗಿ ಹಲವು ಗೌರವ ಪದವಿ ಪುರಸ್ಕಾರಗಳಿಗೆ ಭಾಜನರಾಗಿ ಬೌದ್ಧ ಧರ್ಮ ಪ್ರಚಾರ ಆಚಾರಕ್ಕಾಗಿ ಜೀವನ ಅರ್ಪಿಸಿಕೊಂಡೆ ಹಿಂದುವಾಗಿ ಹುಟ್ಟಿ ಬೌದ್ಧ ಧರ್ಮ ಸ್ವೀಕರಿಸಿ ಕೊನೆಯುಸಿರೆಳೆದೆ ! ನೆಹರೂ ಮಂತ್ರಿಮಂಡಲದಲ್ಲಿ ಕಾನೂನು ಸಚಿವನಾಗಿ ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷನಾಗಿ ಹಸ್ತಪ್ರತಿಯ ಬೆಳ್ಳಿತಟ್ಟೆಯಲಿಟ್ಟು ಲೋಕಾರ್ಪಣೆಗೊಳಿಸಿದೆ ಬಾಬಾಸಾಹೇಬ ನೀ ಸಂವಿಧಾನದ ಶಿಲ್ಪಿಯಾದೆ ! ****************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಭೀಮ ದೀಪ ಎ ಎಸ್. ಮಕಾನದಾರ ಸಮ ಸಮಾಜದ ಕನಸುಗಾರ ಭಾರತ ಮಾತೆಯ ಕುವರ ಡಾ. ಬಿ ಆರ್. ಅಂಬೇಡ್ಕರ್ ! ಕಪ್ಪು ನೆಲದ ಕೆಂಪುಗಣ್ಣಿನ ಪಾರಿವಾಳ ಗುಣದ ಭೀಮ ! ಕೋಮುವಾದ ಬ್ರಾಮಣ್ಯ ಬಂಡವಾಳಶಾಹಿಗಳ ಬಣ್ಣ ಬಯಲು ಮಾಡಿದ ಸಮಾನತೆಯ ಮಂತ್ರ ಜಪಿಸಿ ಕಪ್ಪು ಜನರ ಸೂರ್ಯನಾದ ಬಿಳಿ ಕರಿಯರ ನಡುವಿನ ಅಡ್ಡಗೋಡೆಯ ಕೆಡವಿದ ಅಪ್ರತಿಮ ಚಿಂತಕ ದ್ವೀಪಗಳಾಗಿದ್ದ ಕೇರಿ ಮೊಹಲ್ಲಾ ಬಡಾವಣೆಗಳಲ್ಲಿ ಚೈತನ್ಯ ದೀಪ ಬೆಳಗಿಸಿದ ವರ್ಗ ವರ್ಣದ ವಿಷದ ಹಾವಿಗೆ ಹೆಡಮುರಿಗೆ ಕಟ್ಟಿದ ಲೋಕ ನಿಂದೆಗೆ ಬೆದರದ ಧರ್ಮ ದರ್ಪಕೆ ಹೆದರದ ಕೊಳೆತ ಹಣ್ಣಲ್ಲೂ ಬಿತ್ತಗಿ ಬೀಜ ತುಂಬಿದ ಬುದ್ಧ ಬಸವರನು ಪ್ರೀತಿಸಿದ ನೊಂದವರ ಕೊರಳಲಿ ಧ್ವನಿಸಿ ಕತ್ತಲ ಕೇಡು ಕಳೆದ ಭೀಮದೀಪ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಡಾ. ಬಿ.ಆರ್ ಅಂಬೇಡ್ಕರ್ ಸಿಂಧು ಭಾರ್ಗವ್ ಮಹಾರಾಷ್ಟ್ರದ ಅಂಬೇವಾಡದಲಿ ಅಂಬೆಗಾಲಿಡುತ ನೀ ಬಂದೆ ಭೀಮಬಾಯಿಯವರ ಕೊನೆಯ ‌ಮುದ್ದಿನ ಮಗನಾದೆ ಶೋಷಿತ ಜನರ ನೋವನು ಮರೆಸಲು ಮುಂದಾದೆ ಹಕ್ಕುಗಳಿಗಾಗಿ ಹೋರಾಟ‌ ನಡೆಸಿ ದನಿಯಾದೆ ಮುಗ್ಧ ಜನರಿಗೆ ದೀನದಯಾಳು ನೀನಾದೆ ಜ್ಞಾನದ ದೀಪವ ಮನದಲಿ ನೀ ಬೆಳಗಿಸಿದೆ ಸಂವಿಧಾನವ ರಚನೆಯ ಮಾಡಿ ಜನರಿಗೆ ನೀ ನೆಲೆ ನೀಡಿದೆ ಬುದ್ಧನ ಅನುಯಾಯಿಗಾಗಿ ಧೈರ್ಯದ ಗುಂಡಿಗೆಯ ಹೊಂದಿದೆ ಅಸ್ಪರ್ಶತೆಯ ಅಂಧಕಾರವ ನೀ ಹೊಡೆದೋಡಿಸಿದೆ ಸಮಾನತೆಯ ಸಾರುತ ಜನರ ಒಗ್ಗೂಡಿಸಿದೆ ಭಾರತಾಂಬೆಯ ಕುವರನಾಗಿ ದೇಶಕೆ ಹೆಮ್ಮೆಯ ನೀ ತಂದೆ ಇಂದಿಗೂ ಎಲ್ಲರ ಮನದಲಿ‌ ನೀವು ಅಮರರಾಗಿರುವಿರಿ *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಾವಿಲ್ಲದ ಸೂರ್ಯ ಸಾಯಬಣ್ಣ ಎಂ. ಮಾದರ ಸಾವಿಲ್ಲದ ಸೂರ್ಯ ಹುಟ್ಟಿ ಬಂದ ಕತ್ತಲು ಜಗದಲಿ ನಿಲ್ಲಲು ನೆಲವಿಲ್ಲ ಆಂತರಿಕ್ಷದಲ್ಲೂ ಜಾಗವಿಲ್ಲ ಅಂತದರಲ್ಲಿಯೇ ಹುಟ್ಟಿದ ಅಂಬೆವಾಡಿಯಲ್ಲಿ !! ಕಾಡಿಗೆ ತುಂಬಿರುವ ದೀಪಗಳ ನಾಡಲ್ಲಿ ಮುಟ್ಟಿದರೆ ಮೈಲಿಗೆ ಎನ್ನುವ ನೀರಿನ ನೆಲದಲ್ಲಿ ಹುಸಿ ನಾಮವ ಆಕ್ರಮಿಸಿದ ಮೂಲಿಗರ ನಾಡಲ್ಲಿ ಖಡ್ಗವಿಲ್ಲ ಕೈಯಲ್ಲಿ ಕಿರೀಟವಿಲ್ಲ ತಲೆಯಲಿ ರಥವೇರಿಯಂತೂ ಬರಲಿಲ್ಲ ಸಿರಿಯನ್ನೂ ಮೆಟ್ಟಲಿಲ್ಲ ಭಾರತಾಂಬೆಯನ್ನು ಹೊತ್ತು ಉದಯಿಸಿದನು ಕತ್ತಲೆ ಜಗದಲಿ !! ಮುಂಡುಕಗಳ ನಾಡಲ್ಲಿ ಗೋರಿಯ ಒಳಗೆ ಸೇರಿರುವ ಮಾನವೀಯತೆ ಮಸಣದಲಿ ಬಲಹೀನರ ಕಣ್ಣು ಕಿತ್ತಿ ನಾಲಿಗೆ ಸೀಳಿ ಬೆತ್ತಲೆ ಮಾಡಿ ಅಗ್ನಿ ಕುಂಡ ಹಾಕಿ ಸುರಪಾನದಲಿ ಸುರಿಯುವರನ್ನು ಕತ್ತು ಸೀಳಿದನಲ್ಲ ಸಂವಿಧಾನ ಅಸ್ತ್ರದಲಿ!! ಬುದ್ಧನ ಬಡಿದಟ್ಟಿದರು ಬಸವಗ ಕುತ್ತಿಗೆ ಕೊಡಲಿ ಹಾಕಿ ವಿವೇಕವಾಣಿ ಅಳಿಸಿ ಗಹಗಹಿಸಿ ನಗುತ್ತಿದ್ದರಲ್ಲ ಮೂಕ ದೇವರ ತಾಣದಲಿ ಹೊಟ್ಟೆ ಹೊರೆಯುವರ ಸಾಲಲಿ ನೆಲದ ಮಕ್ಕಳ ಕಣ್ಣೀರ ಹಸಿವಿನ ಆಸರೆಗಾಗಿ ಉದಯಿಸಿದರು ಕಾಮದೇನು ಕಲ್ಪವೃಕ್ಷವಾಗಿ!! ಮನುಸ್ಮೃತಿ ಸುಟ್ಟು ಸುಳ್ಳಿನ ಕಂತೆ ಪುರಾಣ ಮೆಟ್ಟಿಲಾಗಿ ಮೆಟ್ಟಿ ಸಕ್ಕರೆ ಮೇಯುವ ಸಾಲು ನಿಂತ ಕೆಂಪು ಕರಿ ಇರುವೆಗಳಿಗೂ ಅಭಯ ನೀಡಿ ಕಣ್ಣು ಕಾಣದ ಗಾವಿಲರಿಗೂ ದೀಪದಾರಿಯಾಗಿ ಅಖಂಡತೆಯ ಜೈಘೋಷ ಮೊಳಗಿಸಿ ಅಷ್ಟದಿಕ್ಕುಗಳಲ್ಲಿ ಉದಯಿಸಿದ ಭೀಮ ಜ್ಯೋತಿಯಾಗಿ !! ಸಾವಿಲ್ಲದ ಸೂರ್ಯನಾಗಿ.! ******

ಕಾವ್ಯಯಾನ Read Post »

You cannot copy content of this page

Scroll to Top