ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಸ್ತುತ

ಕೋರೋನದ ತಲ್ಲಣಗಳು ಎನ್ . ಶೈಲಜಾ ಹಾಸನ,   ಕೋರೋನದ ತಲ್ಲಣಗಳು ಸರಾಗವಾಗಿ ಹರಿಯುತ್ತಿದ್ದ ಬದುಕಿನ ಬಂಡಿ ಕನಸಿನಲ್ಲಿಯೂ ನೆನೆಸದಂತೆ ನಿಂತು ಬಿಟ್ಟಿತು.ಅದೇನಾಗಿ ಹೋಯಿತೋ,ಕಂಡರಿಯದ ವೈರಾಣವೊಂದು ಇಡಿ ಪ್ರಪಂಚವನ್ನೆ ತಲ್ಲಣಗೊಳಿಸಿಬಿಟ್ಟಿದೆ. ದೂರದ ಅದ್ಯಾವುದೋ ದೇಶದಲ್ಲಿ ಅದೆಷ್ಟೋ ಪ್ರಾಣಗಳನ್ನು ತೆಗೆಯುತ್ತಿದೆ , ಅದೆಷ್ಟೋ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ ಅಂತೆ ಅಂತ ದೃಶ್ಯ ಮಾಧ್ಯಮಗಳಲ್ಲಿ ನೋಡುತ್ತಾ ಅಯ್ಯೋ ಪಾಪ ಅಂತ ಕನಿಕರ ಪಡುತ್ತಿರುವಾಗಲೆ ದಿಢೀರನೆ ನಮ್ಮ ದೇಶಕ್ಕೂ ಆ ಕ್ಷುದ್ರ ವೈರಸ್ ಬಂದು ಅಪ್ಪಳಿಸಿದೆ ಅಂತ ಗೊತ್ತಾದಾಗ ದಿಗಿಲು ಹುಟ್ಟಿಸಿದ್ದು ನಿಜಾ.ದಿನದಿನಕ್ಕೂ ಅದರ ಹಾವಳಿ ಹೆಚ್ಚಾದಾಗ ಮನೆಯಿಂದ ಹೊರಬರಲು ಆತಂಕವಾದರೂ ಉದ್ಯೋಗದ ನಿಮಿತ್ತ ಹೊರ ಹೋಗಲೇ ಬೇಕಿತ್ತು. ಸ್ವಂತ ವಾಹನವಿದ್ದರೂ ಬಸ್ ನಿಲ್ದಾಣದಲ್ಲಿ ಬಿಟ್ಟು, ನೂರಾರು ಜನ ಪ್ರಯಾಣಿಸುವ ಬಸ್ ನಲ್ಲಿ ಹೋಗುವಾಗ ಜೀವ ಕೈಯಲ್ಲಿಟ್ಟು ಕೊಂಡು ಹೋಗಬೇಕಾಗಿತ್ತು. ಉದ್ಯೋಗ ನಿಮಿತ್ತ ಪಯಣಿಸುವ ಹಾದಿ ರಾಷ್ಟ್ರೀಯ ಹೆದ್ದಾರಿ ಆದ್ದರಿಂದ ಸ್ವಂತ ವಾಹನದಲ್ಲಿ ಹೋಗಲು ಒಬ್ಬಳೆ ಪತ್ನಿಯನ್ನು ಕಳಿಸಲು ಪತಿಗೆ ಹಾಗು ಒಬ್ಬಳೆ ಅಮ್ಮನಿರುವ ಮಗಳಿಗೆ ಆತಂಕ. ಹಾಗಾಗಿ ಬಸ್ ನಲ್ಲಿ ಪ್ರಯಾಣ ಅನಿವಾರ್ಯ. ಬಸ್ಸಿಳಿದು ಶಾಲೆ ತಲುಪಿದ ಕೂಡಲೆ ಸೋಪಿನಿಂದ ಕೈ ತೊಳೆದು ನಂತರವೆ ಮುಂದಿನ ಕೆಲಸ.ಯಾರಾದರೂ ಕೆಮ್ಮು ಶೀತ ಜ್ವರ ಅಂದರೆ ಎದೆಯಲಿ ಪುಕ ಪುಕ.ಕರ್ತವ್ಯ ಮುಗಿಸಿ ಮತ್ತೆ ಬಸ್ಸಿನಲ್ಲಿ ಪ್ರಯಾಣ.ಮನೆಗೆ ಬಂದ ಕೂಡಲೆ ಮತ್ತೆ ಸೋಪಿನಿಂದ ತಿಕ್ಕಿ ತಿಕ್ಕಿ ಕೈ ತೊಳೆದು ಕೊಂಡ ಮೇಲೆ ಅಡುಗೆ ಮನೆ ಪ್ರವೇಶ. ಆ ಆತಂಕದ ದಿನಗಳಲ್ಲಿ ಅಂತೂ ಇಡೀ ದೇಶವೇ ಲಾಕ್ ಡೌನ್ ಅಂತ ಸರ್ಕಾರ ಘೋಷಿಸಿ ಬಿಟ್ಟಾಗ ಆತಂಕದ ನಡುವೆಯೂ ನಿರಾಳ ಭಾವ. ಈಗ ಮನೆಯವರೆಲ್ಲ ಮನೆಯಲ್ಲಿಬಂದಿಗಳು.ಹೊರಹೋಗುವಂತಿಲ್ಲ,ಯಾರೂ ಮನೆಗೆ ಬರುವಂತೆ ಇಲ್ಲ.ದಿನಾ ಟಿ.ವಿ.ನೋಡುವುದು, ಅಡುಗೆ ಮಾಡಿ ತಿನ್ನುವುದು, ಮನೆಕೆಲಸ ಮಾಡುವುದು, ಓದುವುದು, ಬರೆಯುವುದು, ಈ ರೀತಿಯ ಬದುಕು ಹೊಸದು.ಹಿಂದೆಲ್ಲ ವರ್ಷಕ್ಕೆ ಎರಡು ಬಾರಿ ತಿಂಗಾಳುಗಟ್ಟಲೆ ನಮ್ಮ ಇಲಾಖೆಯಲ್ಲಿ ರಜೆ ಸಿಗುತ್ತಿದ್ದರೂ, ಪ್ರವಾಸ, ಬಂಧು ಬಳಗದವರ ಮನೆಗೆ ಭೇಟಿ, ಅವರು ನಮ್ಮ ಮನೆಗೆ ಭೇಟಿ, ಶಾಪಿಂಗ್, ಹೋಟೆಲ್, ಮದುವೆ , ಗೃಹ ಪ್ರವೇಶ ಮುಂತಾದ ಕಾರ್ಯಕ್ರಮಗಳು ಹೀಗೆ ಮನೆಯಲ್ಲಿ ಇರುವುದೇ ಅಪರೂಪವಾಗಿತ್ತು. ಆದರೆ ಈ ರಜೆ ಹಾಗಲ್ಲ. ಇಡೀ ದಿನ ಮನೆಯಲ್ಲಿ ಸೆರೆ. ನನಗಂತೂ ಇಂತಹ ರಜೆಯಲ್ಲಿ ಮನೆಯಲ್ಲಿಯೇ ಇರುವುದು ಮೊದಲ ಬಾರಿ. ಮನದಲ್ಲಿ ಆತಂಕ, ತಳಮಳ, ಈ ವೈರಸ್ ನಿಂದಾಗಿ ಇಡೀ ಜೀವನದಲ್ಲಿ ಒಮ್ಮೆಯಾದರೂ ಕಾಣ ಸಿಗದ ಅನಿಶ್ಚಿತತೆಯ, ಉದ್ವೇಗದ ಅನುಭವ ಇದು.ಅಸಾಧ್ಯ ಎನಿಸಿದ ಎಲ್ಲವನ್ನೂ ಸಾಧ್ಯವಾಗಿಸಿದ ಸಂದರ್ಭದಲ್ಲಿ ಬದುಕು ಜನಗಳಿಗೆ ಏನೇನೋ ಕಲಿಸಿದೆ.ಏನಿಲ್ಲದಿದ್ದರೂ ಬದುಕುವ ಛಲ ,ಸಾವಿರಾರು ಮೈಲು ದೂರ ನಡೆದು ಬದುಕು ಉಳಿಸಿಕೊಳ್ಳುವ ಶಕ್ತಿ, ತಾಳ್ಮೆ, ನೂರಾರು ಸಂಕಷ್ಟಗಳಿಗೆ ಮಿಡಿಯುವ ಮನಸ್ಸುಗಳು,ಜಾತಿ,ಕುಲ,ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಅನ್ನೋ ವಾಸ್ತವ ,ಶುಭ್ರ ಆಕಾಶ,ಮಲೀನತೆಯಿಂದ ಹೊರಬಂದ ಪರಿಸರ, ಮನುಷ್ಯರಿಲ್ಲದ ರಸ್ತೆಗಳಲ್ಲಿ ನಿರಾಂತಕವಾಗಿ ಕುಣಿದಾಡುತ್ತಿರುವ ಪ್ರಾಣಿ ಪಕ್ಷಿಗಳು ಇವೆಲ್ಲವೂ ಆಶಾದಾಯಕವೆ ಆಗಿದೆ. ಪ್ರಾಣವನ್ನು ಒತ್ತೆ ಇಟ್ಟು ರೋಗಿಗಳನ್ನು ಬದುಕಿಸಲು ತಮ್ಮವರೆಲ್ಲರಿಂದಲೂ ದೂರವಿದ್ದೂ ಕಷ್ಟಪಡುತ್ತಿರುವ ವೈದ್ಯ ದೇವರುಗಳು, ನರ್ಸ್ಗಳು,ದಾದಿಗಳು, ಆರೋಗ್ಯ ಇಲಾಖೆ ಯವರು,ಕಾನೂನು ಕಾಪಾಡುತ್ತಿರುವ ಪೋಲೀಸರು, ಕಷ್ಟಗಳಿಗೆ ಮರುಗಿ ಸಹಾಯ ಹಸ್ತ ನೀಡುತ್ತಿರುವ ಕರುಣಾಮಯಿಗಳು, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ಪಂದಿಸುತ್ತಿರುವ ಮಾನವೀಯತೆಯ ಸಕಾರಮೂರ್ತಿಗಳು.ಈ ಸಂಕಷ್ಟದಿಂದ ಪಾರಾಗಲು ದುಡಿಯುವ ಮಂತ್ರಿ ಮಹೋದಯರು, ರಾಜಕಾರಣಿ ಗಳು ಇವರೆಲ್ಲರ ಪರಿಶ್ರಮ ಸಂಕಷ್ಟ ದಿನಗಳಲ್ಲಿ ವ್ಯರ್ಥ ವಾಗದ ಸಾರ್ಥಕ ವಾಗಲಿ. ಆದರೆ, ಕೆಲವು ಮೂರ್ಖರಿಂದ ಅಸಹಕಾರ, ವಾಪಾಸು ಕಳ್ಳಿಯಂತೆ ಕೊರೋನ ವೈರಸ್ಸಿಗಿಂತ ವೇಗವಾಗಿ ಹಬ್ಬಿ ಸಮಾಜದ ಸ್ವಾಸ್ಥ್ಯ ಕದಡುತ್ತಿರುವ ಕೋಮುವಾದ, ಒಳಗೊಳಗೆ ಸ್ಫೋಟಗೊಳ್ಳಲು ಸಿದ್ದವಾಗಿರುವ ಕುದಿಯುತ್ತಿರುವ ಮನಸ್ಸುಗಳು , ಕೆಲಸವಿಲ್ಲದೆ ,ತಿನ್ನಲು ಅನ್ನವಿಲ್ಲದೆ ಅತಂತ್ರಗೊಂಡಿರುವ , ನಿರ್ಗತಿಕ ಕೆಲಸಗಾರರು, ಕನಿಷ್ಠ ಸವಲತ್ತುಗಳನ್ನು ಪಡೆಯಲು ಹೆಣಗಾಡುತ್ತಿರುವ ಕಾರ್ಮಿಕರು, ತಮ್ಮದಲ್ಲದ ತಪ್ಪಿಗೆ ರೋಗ ಅಂಟಿಸಿಕೊಂಡು ಸಾವಿನ ಕೂಪಕ್ಕೆ ಬೀಳುತ್ತಿರುವ ಕೆಲ ದುರಾದೃಷ್ಟ ವಂತರು, ನಿರ್ಲಕ್ಷ್ಯದಿಂದ ,ದುರಾಂಕಾರದಿಂದ , ಧರ್ಮಾಂಧ ತೆಯಿಂದ ರೋಗ ಅಂಟಿಸುತ್ತಿರುವ ನೀಚರು ಇವೆಲ್ಲವನ್ನೂ ಈ ಸಂದರ್ಭದಲ್ಲಿ ನೋಡುತ್ತಾ, ನೋಡುತ್ತಾ ಮನಸ್ಸಿನಲ್ಲೇ ತಳಮಳಿಸುವಂತಾಗಿದೆ. ಎಲ್ಲವನ್ನೂ ನೋಡುತ್ತಾ ಕಲಿಯಬೇಕಾದ ಸಮಯ.ಎಲ್ಲವು ಇದ್ದು ಏನೂ ಇಲ್ಲದ ಭಾವ. ಕಷ್ಟದ ದಿನಗಳಲ್ಲಿ ಎಲ್ಲರಿಗೂ ಒದಗಿ ಬರಲಾರದ ಅಸಹಾಯಕತೆ ಕಾಡುತ್ತಿರುವುದು ನಿಜವೇ ಆಗಿದೆ. ಮುಂದೇನು ಅನ್ನುವ ಅನಿಶ್ಚಿತತೆ, ಈ ಮಹಾ ಖಾಯಿಲೆಯಿಂದ ಇಷ್ಟೇಲ್ಲಾ ಎಚ್ಚರಿಕೆ ವಹಿಸಿಯೂ ಬದುಕುತ್ತೇವೆಯೋ, ಬದುಕಿದರೂ ಮುಂದೇನು ಸಂಕಷ್ಟಗಳು ಕಾಡುತ್ತವೆಯೊ, ಮತ್ತೆ ಹಿಂದಿನಂತೆ ಇರಲು ಸಾಧ್ಯವೇ.ಆರ್ಥಿಕವಾಗಿ ಅದೆಷ್ಟೋ ವರ್ಷಗಳ ಹಿಂದಕ್ಕೆ ಹೋಗಬೇಕಾಗಿದೆಯೋ.ಎಲ್ಲವನ್ನು ಸರಿಪಡಿಸಲು ಇನ್ನೂ ಅದೆಷ್ಟು ವರ್ಷಗಳು ಬೇಕಾಗುತ್ತವೆಯೋ.ಊಹಿಸಿಕೊಳ್ಳಲೇ ದಿಗಿಲಾಗುತ್ತದೆ. ಕೆಳವರ್ಗದ, ಮೇಲುವರ್ಗದ, ಸರ್ಕಾರಿ, ಖಾಸಗಿ ವರ್ಗದ ನೌಕರರು,ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ಉದ್ಯೋಗಿ ಗಳು, ಸಣ್ಣ ಪುಟ್ಟ ಕೈಗಾರಿಕೆಗಳ ಮಾಲೀಕರು, ಪತ್ರಿಕೆಗಳ ಮಾಲಿಕರು,ಅಲ್ಲಿ ಕೆಲಸಗಾರರು, ಕಟ್ಟಡ ನಿರ್ಮಾಣ ಕೆಲಸ ಮಾಡುವ ಪತ್ರಕರ್ತರು , ಕೆಲಸದವರು,ರೈತರು, ಹೋಟೆಲ್ ಉದ್ಯಮ ಒಂದೇ ಎರಡೇ ಇವರೆಲ್ಲರ ಪರಿಸ್ಥಿತಿ ಮುಂದೆ ಏನಾಗಬಹುದು, ಯಾವ ರೀತಿಯ ಆರ್ಥಿಕ ಸಂಕಷ್ಟದ ಬಿರುಗಾಳಿ ಬೀಸ ಬಹುದು ಎಂಬುದನ್ನು ಊಹಿಸಿದರೆ ಎದೆ ನಡುಗುತ್ತದೆ.ಪ್ರಾಯಶ ಕೊರೋನ ವೈರಸ್ ಧಾಳಿಯ ಸಾವಿಗಿಂತಲೂ ನಂತರದ ದಿನಗಳಲ್ಲಿ ಬದುಕುವ ದಾರಿ ಮುಚ್ಚಿ ಹೋಗಿ ಸಾವು ಬಯಸುವ ಸಂಖ್ಯೆ ಹೆಚ್ಚಾಗುವ ಭಯ ಕಾಡದೆ ಇರದು.ಈ ಎಲ್ಲಾ ಭಯಗಳು ನಡುವೆಯೂ ಭರವಸೆಯ ಬೆಳಕನ್ನು ಹಿಡಿದು ಬದುಕಲೇ ಬೇಕಾಗಿದೆ.ಒಳ್ಳೆಯದಾಗಬಹುದು ಅನ್ನೂ ನಿರೀಕ್ಷೆಯಲಿ ಇವತ್ತಿನ ಆತಂಕದ ದಿನಗಳನ್ನು ತಳ್ಳಬೇಕಾಗಿದೆ. *****************************

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಮಣ್ಣಲಿ ಅವಿತ ಜೀವ ಟಿ.ಪಿ. ಉಮೇಶ್ ಬದುಕ ಸಂಪಾದನೆಗೆ ಹೋದ ಜೀವ ಬರಲಿಲ್ಲ ಮರಳಿ ಬೀದಿಯಲಿ ಅಲೆದು ತಿರುವಿನಲಿ ಕಳೆದು ಕಛೇರಿ ಕರ್ಮಗಳ ಫೈಲುಗಳಲಿ ಹೊರಳಿ ದಿನಸಿ ತರಕಾರಿ ಹಣ್ಣಿನಂಗಡಿಯಲಿ ಉರುಳಿ ಲೈಬ್ರರಿ ಸಿನೆಮಾ ಪಾರ್ಕು ಪಾರ್ಟಿಗಳ ಸಂಧಿಸಿ ನೋವಿನ ಮನೆಗೆ ಪ್ರೀತಿಯ ತರಲೋದ ಜೀವ ಮತ್ತೆ ಮರಳಿ ಬರಲಿಲ್ಲ ಜೀವ ಬರುವಾಗ ವಿಷದ ಮಳೆ ಬಂತಂತೆ ದಾರಿ ಅಲ್ಲಲ್ಲೆ ಹುಗಿದು ಹೋಯ್ತಂತೆ ಗಿಡ ಮರ ಪಶು ಪಕ್ಷಿ ಎಲ್ಲ ಉದುರಿ ಕರಗಿದುವಂತೆ ಜೀವವೂ ನೀರು ಆಹಾರವಿರದೆ ಹೊದ್ದಾಡಿ ಸದ್ದಡಗಿತಂತೆ ಕುಸಿಯುತಿಹ ಭೂಮಿ ಮಣ್ಣಲಿ ಮರೆಯಾಯಿತಂತೆ ಮತ್ತೆ ಮರಳಿ ಬಾರದು ಜೀವ ಕನಸಾದ ಸೊಗಸಾದ ಬದುಕಾಗಿದ್ದ ಜೀವ ಜಂತಿಗಳು ಮುರಿದ ಮನೆಗೆ ತೊಲೆಯಾಗಿದ್ದ ಜೀವ ಉರಿವ ಧಗೆಯನೆ ಕುಡಿದು ಹೂ ನಗುವ ಹಂಚುತ್ತಿದ್ದ ಜೀವ ನೋವಿನಲೆ ದುಡಿದು ಪ್ರೀತಿಯನೆ ಗಳಿಸಿ ಉಣಿಸುತ್ತಿದ್ದ ಜೀವ ಏನು ಹೇಳಿದರೇನು ಮತ್ತೆ ಬರುವುದೇನು ಭರವಸೆಯ ಜೀವ ಮರಳಿ ಬಾರದು ಪ್ರೀತಿಯ ಜೀವ ಮಳೆ ಬಾರದೆ ಯಾವ ಬದುಕಿಲ್ಲ ವಿಷದ ಮಳೆಗೆ ಇನ್ನು ಉಳಿವಿಲ್ಲ ಮಳೆ ಇರಲಿ ಪ್ರೀತಿಯ ಮನೆಗೆ ವಿಷವೇಕೆ ಸಲಹುವಾ ಧರಣಿಗೆ ಯಾರಿಟ್ಟರೊ ನಂಜು ಸಿಗದಾ ಮುಗಿಲಿಗೆ ಬದುಕು ಬಹಳಿತ್ತು ಮಣ್ಣಲಿ ಅವಿತ ಜೀವಕೆ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ತೇಜಾವತಿ ಹೆಚ್. ಡಿ ಭಾರತಾಂಬೆಯ ಮಡಿಲಲ್ಲಿ ತ್ರಿವರ್ಣಗುಡಿಯು ರಾರಾಜಿಸುತ್ತಿದೆ ವೀರ ತ್ರಿರಂಗವೂ ತನ್ನದೇ ವಿಶೇಷತೆಯ ತಿಳಿಸಿ ಹೇಳುತ್ತಿದೆ ವೀರ ಮಹಾಸಾಗರ ಅರಬ್ಬೀ ಕೊಲ್ಲಿ ಹಿಮಾಲಯದವರೆಗೆ ಗಡಿ ಚಾಚಿ ಹರಡಿದೆ ಅಡಿಯಿಂದ ಮುಡಿಯವರೆಗು ವಿವಿಧತೆಯಲಿ ಏಕತೆಯ ತೋರುತ್ತಿದೆ ವೀರ ದೀಪಾವಳಿ ಕ್ರಿಸ್ಮಸ್ ಮೊಹರಂ ರಂಜಾನ್ ಹಬ್ಬಗಳೆಲ್ಲವ ಆಚರಿಸುತ್ತಿದೆ ಜಾತಿ – ಮತ ಬೇಧವಿರದೆ ಸರ್ವಧರ್ಮ ಸಹಿಷ್ಣುತೆ ಭ್ರಾತೃತ್ವ ಸಾರುತ್ತಿದೆ ವೀರ ಶಿಲಾಶಾಸನ ವೀರಗಲ್ಲು ಮಾಸ್ತಿಗಲ್ಲುಗಳು ಎಲ್ಲೆಂದರಲ್ಲಿ ಕಾಣಿಸುತ್ತವೆ ಪ್ರತಿಯೊಂದರಲ್ಲೂ ಹರಿದ ಪ್ರೇಮ, ತ್ಯಾಗ ನೆತ್ತರಿನ ಕತೆಯನ್ನು ನೆನಪಿಸುತ್ತಿದೆ ವೀರ ತನುಮನದ ನರನಾಡಿಯಲ್ಲು ದೇಶಭಕ್ತಿಯ ಮಿಂಚು ಪ್ರವಹಿಸುತ್ತಿದೆ ತೇಜಾಳ ಎದೆಯಗೂಡಲ್ಲಿ ಭಾರತೀಯಳೆಂಬ ದೀಪ ಬೆಳಗುತ್ತಿದೆ ವೀರ *******

ಕಾವ್ಯಯಾನ Read Post »

ಇತರೆ

ನೆನಪು

ದಾವಣಗೆರೆಯ ಕಪ್ಪು ಗುಲಾಬಿ ಮಲ್ಲಿಕಾರ್ಜುನ ಕಡಕೋಳ ಕಣ್ಮರೆಯಾದ ದಾವಣಗೆರೆಯ ಕಪ್ಪು ಗುಲಾಬಿ ಆ ಪುಟ್ಟ ಕಂದನಿಗೆ ಎರಡು ವರ್ಷವೂ ತುಂಬಿರಲಿಲ್ಲ. ಮೊಲೆಹಾಲು ಕುಡಿಯುವ ಆ ಹಸುಳೆಯ ತಂದೆ ಜೈಲು ಸೇರಬೇಕಾದ ದುಃಸ್ಥಿತಿ. ಅವರೇನು ಕಳ್ತನ, ದರೋಡೆ ಮಾಡಿ ಜೈಲು ಸೇರಿದ್ದಲ್ಲ. ಮಿಲ್ಲುಗಳಲ್ಲಿ ದುಡಿಯುವ ಕೂಲಿ ಕಾರ್ಮಿಕರ ಪರವಾಗಿ ಹೋರಾಟ ಮಾಡಿ ಕಾರಾಗೃಹ ಸೇರಬೇಕಾಯ್ತು. ದಿಟ್ಟ ಹೋರಾಟಕ್ಕೆ ಸಿಕ್ಕ ಕೆಟ್ಟ ಪ್ರತಿಫಲ ಎಂಬಂತೆ ಒಂದಲ್ಲ ಎರಡು ಬಾರಿ, ಒಟ್ಟು ಹದಿನಾಲ್ಕು ವರುಷ ಈ ತಂದೆ ಜೈಲು ಪಾಲಾದರು. ತಂದೆಯ ಅನುಪಸ್ಥಿತಿಯಲ್ಲೇ ಈ ಪುಟ್ಟ ಬಾಲಕ ಧೃತಿಗೆಡದೇ ಸಂಕಟದ ಬಾಲ್ಯ ಕಳೆಯುತ್ತಾನೆ. ಅವನ ತಾಯಿ ನಾಗರತ್ನಮ್ಮ ಪಕೋಡ ಮಾರಿ ಮಗನನ್ನು ಸಲಹುತ್ತಾಳೆ. ಅರವತ್ತರ ದಶಕದಲ್ಲಿ ಅಂದು ಸೆರೆಮನೆವಾಸಿಯಾಗಿದ್ದ ತಂದೆಯ ಹೆಸರು ಕಾಮ್ರೇಡ್ ಎಂ. ಜಿ. ತಿಪ್ಪೇಸ್ವಾಮಿ. ಕಂದನ ಹೆಸರು ಎಂ. ಟಿ. ಸುಭಾಷ್. ವರ್ತಮಾನದ ಕಾಂಗ್ರೆಸ್ ಪಕ್ಷದ ಯುವ ಮುಖಂಡನೇ ನಮ್ಮ ಸುಭಾಷ್, ಅವರ ತಂದೆ ಕಾಂ. ಎಂ.ಜಿ. ತಿಪ್ಪೇಸ್ವಾಮಿ ಮೊನ್ನೆಯಷ್ಟೇ (೦೪.೦೩.೨೦೨೦) ತೀರಿಕೊಂಡರು. ಎಂ.ಜಿ.ಟಿ. ಅವರು ಎಂಬತ್ತೊಂದು ವರ್ಷಗಳ ತುಂಬು ಜೀವನ ಬಾಳಿ ಬದುಕಿದವರು. ಅವರು ಅಕ್ಷರಶಃ ಹೋರಾಟದ ಕಿಚ್ಚಿನ ಹಿರಿಯ ಚೇತನ. ಜೈಲಿಗೆ ಹೋಗಿ ಬಂದವರಿಗು, ಮತ್ತು ಅವರನ್ನು ನೋಡುವ ಸಮಾಜಕ್ಕು ಒಂದು ಬಗೆಯ ಮುಜುಗರ, ಕಳಂಕದ ಕನವರಿಕೆಗಳು. ಆದರೆ ತಿಪ್ಪೇಸ್ವಾಮಿ ಅಳುಕಲಿಲ್ಲ, ಅಂಜಲಿಲ್ಲ. ಫೀನಿಕ್ಸ್ ಪಕ್ಷಿಯಂತೆ ಬೂದಿ ತುಂಬಿದ ಕೆಂಡ ಕೊಡವಿಕೊಂಡು, ರೆಕ್ಕೆ ಜಾಡಿಸಿಕೊಂಡೆದ್ದು ನಿಂತರು. ದಾವಣಗೆರೆಯಲ್ಲಿ ಭಾರತ ಕಮ್ಯುನಿಸ್ಟ್ ಪಾರ್ಟಿಯನ್ನು ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಕಟ್ಟುವಲ್ಲಿ ಪಂಪಾಪತಿ ಅವರಿಗೆ ಹೊಯ್ ಕೈಯಾಗಿ ಶ್ರಮಿಸಿದರು. ಅದರ ಫಲವಾಗಿ ನಗರಸಭೆ ಆಡಳಿತದ ಚುಕ್ಕಾಣಿಯನ್ನು ಹಿಡಿದು ಪಂಪಾಪತಿ ನಗರಸಭಾಧ್ಯಕ್ಷರಾದರು. ದಾವಣಗೆರೆ ನಗರಕ್ಕೆ ಹಸಿರು ಮತ್ತು ಉಸಿರನ್ನು ತಂದುಕೊಟ್ಟ ಪಂಪಾಪತಿ ಮತ್ತು ಕಮ್ಯುನಿಸ್ಟ್ ಪಾರ್ಟಿಯನ್ನು ಈ ಊರು ಇನ್ನೂ ನೂರು ವರ್ಷ ಕಳೆದರೂ ಮರೆಯುವಂತಿಲ್ಲ. ಅಂತಹ ಮರೆಯಲಾಗದ ಹತ್ತು ಹಲವು ಕೆಲಸಗಳಲ್ಲಿ ಎಂ.ಜಿ.ಟಿ. ಅವರಿಗೂ ಸಿಂಹಪಾಲಿದೆ. ಅಷ್ಟು ಮಾತ್ರವಲ್ಲದೆ ಕಾಂ. ಪಂಪಾಪತಿ ಅವರು ನಿರಂತರವಾಗಿ ಮೂರು ಅವಧಿಗೆ ದಾವಣಗೆರೆ ಶಾಸಕರಾಗಿ ಆಯ್ಕೆಯಾದರು. ಅದರ ಹಿಂದಿನ ದಿವಿನಾದ ಶಕ್ತಿಗಳಲ್ಲಿ ಎಂ.ಜಿ.ಟಿ. ಡೆಮಾಕ್ರಸಿಯು ದೈತ್ಯ ಶಕ್ತಿಯಂತೆ ಕೆಲಸ ಮಾಡಿದ್ದನ್ನು ಯಾರೂ ಮರೆಯಲಾಗದು. ಅವು ಅರವತ್ತರ ದಶಕದ ದಿನಮಾನಗಳು. ಡಾವಣಗೇರಿಯೆಂಬ ಗಿರಣಿಗಳ ನಗರಿಯಲ್ಲಿ ಶ್ರಮಸಂಸ್ಕೃತಿಯ ಕೆಂಬಾವುಟ ಮುಗಿಲೆತ್ತರಕ್ಕೆ ಹಾರಾಡಲು ಶುರುವಿಟ್ಟುಕೊಂಡ ಕಾಲಮಾನ. ಕಾಂ. ಮಾಣಿಕ್ಕಂ ಪಂಪಾಪತಿ ೧೯೫೫ ರ ಸುಮಾರಿಗೆ ದಾವಣಗೇರಿಗೆ ಬರುವ ಪೂರ್ವದಲ್ಲೇ ದಾವಣಗೆರೆಯಲ್ಲಿ ಕಮ್ಯುನಿಸ್ಟ್‌ ಪಾರ್ಟಿ ಇತ್ತು. ಕಾಂ. ಬಿ. ವಿ. ಕಕ್ಕಿಲಾಯ ಅವರ ಮಾರ್ಗದರ್ಶನದಲ್ಲಿ ಕಮ್ಯುನಿಷ್ಟ್ ಪಕ್ಷದ ಕಾರ್ಯಚಟುವಟಿಕೆಗಳ ಕೆಂಬಾವುಟವನ್ನು ಪತ್ರಕರ್ತ “ಪುಢಾರಿ” ಮುರಿಗಯ್ಯ, ಮಲಕಪ್ಪ, ವಕೀಲರಾದ ಎಚ್. ಎಸ್. ರಾಮಚಂದ್ರರಾಯರು ಹಾಳತವಾಗಿ ಹಾರಿಸಿದ್ದುಂಟು. ಹೊಸಪೇಟೆಯಿಂದ ಬಂದ ಅಗಮುಡಿ ಮೊದಲಿಯಾರ ಜನಾಂಗದ ಪಂಪಾಪತಿ, ದಾವಣಗೆರೆ ಕಾಟನ್ ಮಿಲ್ ಕಾರ್ಮಿಕನಾಗಿ ಕಸ ಹೊಡೆಯುವ ಕೆಲಸಕ್ಕೆ ಸೇರಿದ ಮೇಲೆ ಕೂಲಿ ಕಾರ್ಮಿಕರನ್ನು ಸಂಘಟಿಸುತ್ತಾರೆ. ಆಗ ಪಂಪಾಪತಿ‌ ಹೇಳುತ್ತಿದ್ದುದು : ಚಂದ್ರೋದಯ ಮಿಲ್ಲಿನ ಎಚ್. ಕೆ. ರಾಮಚಂದ್ರಪ್ಪ, ಗಣೇಶರ ಮಿಲ್ಲಿನ ಎಂ.ಜಿ. ತಿಪ್ಪೇಸ್ವಾಮಿ ಈ ಇಬ್ಬರೂ ನನಗೆ ಎಡಗೈ ಬಲಗೈಗಳಿದ್ದಂತೆ. ಆಗ ಕಾಂ. ಆನಂದತೀರ್ಥ ಅವರು ದಾವಣಗೆರೆ ಕಮ್ಯುನಿಸ್ಟ್ ಪಾರ್ಟಿಯ ಬ್ರೇನ್ ಆಗಿದ್ದರು. ಮುಖ್ಯವಾಗಿ ಕಾರ್ಮಿಕರ ಪರ ಹೋರಾಟದಲ್ಲಿ ಮಡಿದ ಹಿರಿಯರಾದ ಕಾಂ.ಸುರೇಶ್ ಮತ್ತು ಕಾಂ. ಶೇಖರಪ್ಪ ಅವರು ಕಾರ್ಮಿಕ ಹೋರಾಟದ ಮುಂಚೂಣಿ ನಾಯಕರೆಂಬುದು ಯಾರೂ ಮರೆಯಲಾಗದು. ಡಾವಣಗೇರಿ, ದುಡಿಯುವ ವರ್ಗಗಳ ಪ್ರೀತಿ ಸೌಹಾರ್ದತೆಗಳ ಊರು. ಈ ಊರಿನ ಇತಿಹಾಸಕ್ಕೆ ಕಾರ್ಮಿಕ ಪ್ರಜ್ಞೆಯ ಜೀವ ಸಂವೇದನೆಗಳಿವೆ. ಅಜಮಾಸು ಅರ್ಧಶತಮಾನಕ್ಕು ಅಧಿಕವೆನ್ನಬಹುದಾದ ಆರೇಳು ದಶಕಗಳ ಹಿಂದಿನ ಗಟ್ಟಿ ಹೋರಾಟದ ಐತಿಹಾಸಿಕ ನೆಲೆಗಟ್ಟಿನ ದಿನಮಾನಗಳವು. ಹತ್ತಾರು ಹತ್ತಿಗಿರಣಿಗಳು, ಸಣ್ಣಪುಟ್ಟ ಇತರೆ ಹತ್ತಾರು ಕಾರ್ಖಾನೆಗಳ ಊರು. ಹಳೇ ಡಾವಣಗೇರಿಯ ಮನೆ ಮನೆಗಳಲ್ಲೂ ಹತ್ತಿಗಿರಣಿಗಳಿಗೆ ಬೇಕಾಗುವ ನೂಲುಲಡಿ ತಯಾರಿಕೆಯ ಹೋಮ್ ಇಂಡಸ್ಟ್ರೀಸ್. ಹತ್ತಿಬಟ್ಟೆ ಗಿರಣಿ ಸಮುಚ್ಛಯಗಳಿಂದಾಗಿಯೇ ಈ ಊರು ಕರ್ನಾಟಕದ ಮ್ಯಾಂಚೆಸ್ಟರ್‌ ಎಂಬ ಹೆಸರಿನ ಕೀರ್ತಿಗೆ ಭಾಜನವಾದ ಊರು. ಹತ್ತಾರು ಸಾವಿರ ಕೂಲಿ ಕಾರ್ಮಿಕರ ಊರು. ದುಡಿಯುವ ವರ್ಗದ ಬೆವರಿನ ಶ್ರಮದಿಂದಾಗಿಯೇ ಅಂತಾರಾಷ್ಟ್ರೀಯ ಮಟ್ಟದವರೆಗೂ ಡಿಸಿಎಂ, ಕಾಟನ್ ಮಿಲ್ ಬಟ್ಟೆಯ ಖ್ಯಾತಿ ಹಬ್ಬಿತ್ತು. ಅದಕ್ಕೆಲ್ಲ ಲಿಂಗ ತಾರತಮ್ಯ ಇಲ್ಲದೇ, ಹಗಲು ರಾತ್ರಿ ಎನ್ನದೇ ಹೆಣ್ಣು ಗಂಡುಗಳು ಈ ಗಿರಣಿಗಳಲ್ಲಿ ಅಡ್ಡ ದುಡ್ಡಿಗೆ ಯಂತ್ರಗಳಂತೆ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಅವರ ದುಡಿತದ ಫಾಯದೆಯನ್ನು ಖಾಸಗಿ ಮಾಲೀಕರು ಯಥೇಚ್ಛವಾಗಿ ಪಡೆಯುತ್ತಿದ್ದರು. ಕೂಲಿ ಕಾರ್ಮಿಕರನ್ನು ಹತ್ತಾರು ತಾಸುಗಳ ಕಾಲ ಕಡಿಮೆ ಕೂಲಿಗೆ ದುಡಿಸಿಕೊಳ್ಳುತ್ತಿದ್ದ ಊಳಿಗಮಾನ್ಯದ ಕಾಲಮಾನಗಳವು. ವಿಶೇಷವಾಗಿ ಹೆಣ್ಣುಮಕ್ಕಳು, ಬಸುರಿ – ಬಾಣಂತಿಯರು ರಾತ್ರಿ ಪಾಳಿಯಲ್ಲಿ ಹಬ್ಬ ಹರಿದಿನಗಳೆನ್ನದೇ ದುಡಿಯಲೇಬೇಕಿದ್ದ ಕಠೋರದ ದುರ್ದಿನಗಳವು. ಕೂಲಿ ಕಾರ್ಮಿಕರ ನೋವು, ಸಂಕಟ ಮುಗಿಲು ಮುಟ್ಟಿದ ಬರ್ಬರ ಸಂದರ್ಭಗಳು. ಹೀಗೆ ದುಡಿದುಣ್ಣುವ ಕಾಯಕ ಜೀವಗಳು ಕೆಂಬಾವುಟದಡಿ ಒಗ್ಗೂಡಿದರು. ಪಂಪಾಪತಿ ಮುಂದಾಳತ್ವದಲ್ಲಿ ಸೆಕೆಂಡ್ ಲೈನ್ ಕೆಡರ್ಸ್ ತಯಾರಾದರು. ಅದರಲ್ಲಿ ಎಂ. ಜಿ. ಟಿ. ಅಗ್ರಪಂಕ್ತಿ ನಾಯಕರು. ನಗುಮೊಗದ ಅವರ ಸ್ನೇಹಶೀಲ ತಿತೀಕ್ಷೆಯೆದುರು ಎಲ್ಲ ಅಹಮಿಕೆಗಳು ಕುಬ್ಜಗೊಳ್ಳುತ್ತಿದ್ದವು. ಮುತ್ತಾತನ ಕಾಲದಲ್ಲೇ ಅಂದಿನ ಬಿಜಾಪುರ ಜಿಲ್ಲೆಯಿಂದ ಡಾವಣಗೇರಿಯೆಂಬ ವಾಣಿಜ್ಯ ನಗರಿಗೆ ಗುಳೇ ಬಂದ ಮಮದಾಪುರ ಗುರುಸಿದ್ದಪ್ಪ ತಿಪ್ಪೇಸ್ವಾಮಿ, ಎಂ. ಜಿ. ಟಿ. ಎಂತಲೇ ಖ್ಯಾತನಾಮರಾದವರು. ಡಾವಣಗೇರಿ ನಗರ ಕಟ್ಟುವಲ್ಲಿ ಎಂ. ಜಿ. ಟಿ. ಸೇರಿದಂತೆ ಉತ್ತರ ಕರ್ನಾಟಕದ ಎರೆಸೀಮೆ ಜನರ ಶ್ರಮದ ಬೃಹತ್ ಪಾಲಿದೆ. ದಾವಣಗೆರೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಗಟ್ಟಿಗೊಳ್ಳಲು ಇವರ ಪಾತ್ರ ಉಲ್ಲೇಖನೀಯ. ಎಂ. ಜಿ. ಟಿ., ದಾವಣಗೆರೆ ನಗರಸಭಾಧ್ಯಕ್ಷರಾಗಿ ಪಂಪಾಪತಿಯವರು ಹಾಕಿಕೊಟ್ಟ ಜನಪರ ಮತ್ತು ಆದರ್ಶ ಕೆಲಸಗಳನ್ನು ಮುಂದುವರೆಸಿದರು. ಜಗಳೂರು ರಸ್ತೆಯಲ್ಲಿ ನಿರ್ಮಾಣಗೊಂಡ ಬಸ್ ನಿಲ್ದಾಣ ಇವರ ಕನಸಿನ ಕೂಸು. ಬದಲಾದ ರಾಜಕೀಯದ ವಿಪ್ಲವಗಳಲ್ಲಿ ಎಂ. ಜಿ. ಟಿ. ಪಕ್ಷದಿಂದ ದೂರ ಸರಿದು ಜೆ.ಡಿ.ಯು. ಸೇರಿಕೊಂಡರು. ಸಾವಿನ ಕೊನೆಯ ದಿನಗಳಲ್ಲಿ ಅವರು ಯಾವುದೇ ರಾಜಕೀಯ ಪಕ್ಷದ ಸಕ್ರಿಯ ರಾಜಕಾರಣ ಬದುಕಿರಲಿಲ್ಲ. ಆದರೊಂದು ಮಾತು ಮಾತ್ರ ಖರೇವಂದ್ರ., ಅವರೊಳಗೊಬ್ಬ ಕ್ರಿಯಾಶೀಲ ಕಮ್ಯುನಿಸ್ಟ್ ಮೂಲದ ಎಕ್ಟಿವಿಸ್ಟ್ ಸದಾ ಜೀವಂತವಾಗಿರುತ್ತಿದ್ದನೆಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿರಲಿಲ್ಲ. ಕೃಷ್ಣವರ್ಣದ ತಿಪ್ಪೇಸ್ವಾಮಿಯವರದು ಸರಳ ಉಡುಗೆ. ದೊಗಳೆ ಪ್ಯಾಂಟ್, ಅರ್ಧ ತೋಳಿನ ಅಂಗಿ. ಸದಾ ಲವಲವಿಕೆಯಿಂದ ಗಟ್ಟಿ ಮತ್ತು ಸ್ಪಷ್ಟ ದನಿಯಲ್ಲೆ ಮಾತಾಡುತ್ತಿದ್ದ ಅವರು ಭಾಷಣ ಮಾಡುತ್ತಿದ್ದರೆ ಸಿರಿವಂತ ಫ್ಯೂಡಲ್ ಗಳ ವಿರುದ್ದ ಸೆಡ್ಡು ಹೊಡೆದಂತೆ ಗುಡುಗುತ್ತಿದ್ದರು. ದಾವಣಗೆರೆಯಲ್ಲಿ ಕೆಂಪಂಗಿ, ಕೆಂಬಾವುಟಗಳ ಕ್ರಾಂತಿಯಹವಾ ಕಮರಿ ಹೋಗಿ ಒಂದೆರಡು ದಶಕಗಳೇ ಉರುಳುತ್ತಿರುವಾಗ ಎಂ. ಜಿ. ಟಿ. ಯಂತಹ ಕಪ್ಪುಗುಲಾಬಿಯ ಸಾವಿನೊಂದಿಗೆ ಸಮತಾವಾದದ ಪ್ರಬಲ ಶಕ್ತಿಯನ್ನು ಕಳಕೊಂಡ ಕೊರತೆ ಬಹುಪಾಲು ಪ್ರಗತಿಪರರನ್ನು ಕಾಡುತ್ತಲಿದೆ. ಹೋಗಿಬನ್ನಿ ಕಾಮ್ರೆಡ್ ನಮಸ್ಕಾರ. ಕಪ್ಪು ಗುಲಾಬಿಯ ಕೆಂಪು ನೆನಹುಗಳು. *******************************

ನೆನಪು Read Post »

ಅನುವಾದ

ಕಾವ್ಯಯಾನ

ನಿಝಾ಼ರ್ ಖಬ್ಬಾನಿ ಅವರ ಪ್ರೇಮ ಕವಿತೆಗಳು ೧) ನಾನು ನಿನ್ನ ಬಗ್ಗೆ ಅವರಿಗೆ ಹೇಳಿರಲಿಲ್ಲ ಅವರು ನನ್ನ ಕಣ್ಣುಗಳಲ್ಲಿ ಮೀಯುವ ನಿನ್ನ ಕಂಡರು ನಾನು ನಿನ್ನ ಬಗ್ಗೆ ಅವರಿಗೆ ಹೇಳಿರಲಿಲ್ಲ ಆದರೆ ನಾನು ಬರೆದ ಪದಗಳಲ್ಲಿ ನಿನ್ನನ್ನು ಕಂಡರು ಪ್ರೇಮದ ಪರಿಮಳವನ್ನು ಮುಚ್ಚಿಡಲಾಗದು ೨) ನಾನು ನನ್ನ ಪ್ರೇಮಿಯ ಹೆಸರನ್ನು ಗಾಳಿಯ ಮೇಲೆ ಬರೆದೆ ನಾನು ನನ್ನ ಪ್ರೇಮಿಯ ಹೆಸರನ್ನು ನೀರಿನ ಮೇಲೆ ಬರೆದೆ ಆದರೆ ಗಾಳಿ ಒಬ್ಬ ಕೆಟ್ಟ ಕೇಳುಗ ನೀರು ಹೆಸರನ್ನು ನೆನಪಿಡುವುದಿಲ್ಲ ೩) ನನ್ನ ಪ್ರೇಮಿ ಕೇಳುತ್ತಾಳೆ- “ನನ್ನ ಮತ್ತು ಆಗಸದ ನಡುವೆ ಅಂತರವೇನು?” “ಅಂತರವಿಷ್ಟೆ, ಪ್ರಿಯೆ, ನೀನು ನಗುವಾಗ ನಾನು ಆಗಸವನ್ನು ಮರೆತು ಬಿಡುವೆ” ******* ಡಾ.ಗೋವಿಂದ ಹೆಗಡೆ

ಕಾವ್ಯಯಾನ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-4 ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು ಎಂದಿಗೂ ತೆರೆಯದಿರಲಿ! ರಾತ್ರಿ ಮುಚ್ಚಿದ ಬಾಗಿಲನ್ನು ಬೆಳಂಬೆಳಿಗ್ಗೆ ತೆಗೆದು, ಕಸ ಗುಡಿಸಿ ಮನೆಯ ಮುಂದೆ ನೀರು ಚಿಮುಕಿಸಿ, ರಂಗೋಲಿ ಹಾಕುವುದೆಂದರೆ ನನಗೆ ಒಂದು ಬಗೆಯ ಸಂಭ್ರಮ. ಅಂಗಳದಲ್ಲಿ ಮೊಗ್ಗು ಬಿರಿದು ಹೂವಾಗುವ ಚೆಂದ, ಚಿಲಿಪಿಲಿ ಕೂಗುತ್ತ ಹಕ್ಕಿಗಳು ಹಾರಾಡುವ ಸಡಗರ, ಮೂಡಣ ರಂಗಾಗಿಸಿ ಬರುವ ನೇಸರನ ಅಂದ…ಎಲ್ಲವುಗಳ ಮೇಲೆ ಕಿರುನೋಟ ಬೀರುವ, ತಂಗಾಳಿಗೆ ಮೈಮನ ಪುಳಕಿತವಾಗುವ ಕಾಲ ಮುಂಜಾವು. ಈಗ ಅದಕ್ಕೂ ಬಂದಿದೆ ಸಂಚಕಾರ. ಬಿಡುಬೀಸಾಗಿ ಅಂಗಳದಲ್ಲಿ ಕೆಲಸ ಮಾಡಲೂ ಭಯ. ಹೊಟ್ಟೆ ಪಾಡಿಗೆ ತರಕಾರಿ ಮಾರಲು ಬರುವವರತ್ತಲೂ ಸಂಶಯ.. ಅಯ್ಯೋ ಬದುಕೇ.. ಮತ್ತದೇ ಮುಚ್ಚಿದ ಬಾಗಿಲ ಹಿಂದೆ ಸೇರಿಕೊಂಡೆ. ‘ಅಮ್ಮಾ ಇವತ್ತು ದೋಸೆಗೆ ಪುದಿನಾ ಚಟ್ನಿ ಮಾಡು, ಶೇಂಗಾ ಚಟ್ನಿಪುಡಿ ಮಾಡು’ ಎಂದು ಒಬ್ಬೊಬ್ಬ ಮಗ ಒಂದೊಂದು ಬೇಡಿಕೆ ಇಟ್ಟರು. ಕೆಲಸ ಮಾಡುವಾಗಲೂ ಆತಂಕ. ಈಗ ಅವರು ಇಟ್ಟ ಬೇಡಿಕೆ ಪೂರೈಸಲು ಬೇಕಾದದ್ದೆಲ್ಲ ಸಿಗುತ್ತದೆ ಮುಂದೇನು ಕತೆಯೋ..ಅಯ್ಯೋ ಮುಂದಿನ ದಿನಗಳ ಭಯದಲ್ಲಿ ನಾನು ಇಂದಿನ ಖುಷಿಯನ್ನೇಕೆ ಕಳೆದುಕೊಳ್ಳುತ್ತಿದ್ದೇನೆ? ಈ ಕ್ಷಣ, ಈ ದಿನವನ್ನು ಆನಂದವಾಗಿ ಕಳೆಯುವ ಅವಕಾಶ ಇದೆಯಲ್ಲ ಅದನ್ನುಉಪಯೋಗಿಸಿಕೊಳ್ಳೋಣ ಎಂದು ನೆನಪಾದ ಹಾಡು ಗುನುಗುತ್ತ ಆನಂದದಿಂದ ಮನೆಗೆಲಸದಲ್ಲಿ ತೊಡಗಿದೆ. ತಿಂಡಿ ತಿಂದು ಮುಗಿದೊಡನೆ ಪೇಪರ್ ಪುಟ ತಿರುಗಿಸಿದರೆ ಮದ್ಯಪಾನ ವ್ಯಸನಿಯೊಬ್ಬ ಕುಡಿಯಲು ಹೆಂಡ ಸಿಗದೇ ಇರುವುದರಿಂದ ನೇಣಿಗೆ ಶರಣಾದ ಎನ್ನುವ ಸುದ್ದಿ ಕಂಡಿತು. ಹಳ್ಳಿಯಲ್ಲಿ ವಾಸಿಸುವ ಅಕ್ಕನಿಗೆ ಪೋನ ಮಾಡಿದಾಗ ತಂಗಿ ಈಗ ನೋಡು ನಮ್ಮ ಮನೆಗೆ ಬರುವ ಕೆಲಸಕ್ಕೆ ಬರುವ ಹೆಂಗಸರ ಖುಷಿ ನೋಡಲೆರಡು ಕಣ್ಣು ಸಾಲದು.. ಹೆಂಡದಂಗಡಿ ಬಾಗಿಲಾ ಬಂದ ಮಾಡಿರಲ್ರಾ. ಓಣಿ ಒಳಗೆ ಜಗಳ ಇಲ್ಲಾ. ಗಂಡಸರು ದುಡಿದ ದುಡ್ಡು ಮನೆ ತಂಕಾ ಬರ್ತದೆ. ಕುಡಿದು ಮಯ್ಯಿ ನುಗ್ಗಾಗು ಹಾಂಗೆ ಬಡಿಸ್ಗಳದು ತಪ್ಪೇತೆ. . ಕೊರೋನಾ ಬಂದಿದ್ದು ಒಂದ ನಮೂನಿ ಚೊಲೋನೆ ಮಾಡ್ತಾ ಐತ್ರಾ’ ಎನ್ನುತ್ತಾ ಕಿಲಕಿಲನಗುವ ಅವರ ಮಾತು ಕೇಳಲು ಮೋಜು. ಮದ್ಯಪಾನ ಮೈಮುರಿದು ದುಡಿಯುವ ವರ್ಗಕ್ಕೆ ಅಲ್ಪ ನೆಮ್ಮದಿ ತರುತ್ತದೆ ಎನ್ನುವದು ಭ್ರಮೆಯಷ್ಟೇ. ಮತ್ತಷ್ಟು ಜನ ಪ್ರೆಸ್ಟಿಜಿಗಾಗಿ ಕುಡಿಯುವವರು. ಒಟ್ಟಾರೆ ಕುಡುಕರು ಎಬ್ಬಿಸುವ ಸಾಮಾಜಿಕ ತಲ್ಲಣಗಳನ್ನು ಲೆಕ್ಕ ಹಾಕಿದರೆ ಅದರಿಂದ ಬರುವ ಆದಾಯ ಸರಕಾರಕ್ಕೆ ಲಾಭ ಎನ್ನುವುದೂ ಸುಳ್ಳೆಂಬುದು ಸಾಬೀತಾಗುತ್ತದೆ. ಎಷ್ಟೋ ಜನರ ಬಾಳನ್ನು ಹೈರಾಣಾಗಿಸುವ ದುಶ್ಚಟಗಳಿಗೆ ಖಾಯಂ ಆಗಿ ಪೂರ್ಣ ವಿರಾಮ ಇಡುವತ್ತ ಸರಕಾರ ದಿಟ್ಟ ಹೆಜ್ಜೆ ಇಟ್ಟರೆ ಅದೆಷ್ಟು ಜೀವಗಳು ಸಂತಸ ಪಡಬಹುದು. ಅದೆಷ್ಟು ಕುಟುಂಬಗಳು ನೆಮ್ಮದಿಯಿಂದ ಬದುಕಬಹುದು ಅಲ್ಲವೇ? ****** ಮುಂದುವರಿಯುವುದು… ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

You cannot copy content of this page

Scroll to Top