ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಮಹಿಳಾದಿನದ ವಿಶೇಷ

ಮತ್ತೊಂದು ಮಹಿಳಾ ದಿನ, ಮತ್ತದೇ ವಿಷಾದ ತ್ರಿವೇಣಿ ಜಿ.ಹೆಚ್ ಮತ್ತೊಂದು ಮಹಿಳಾ ದಿನ, ಮತ್ತದೇ ವಿಷಾದ ಮಹಿಳಾ ಸಂಘಗಳಲ್ಲಿ ಮಹಿಳೆಯರ ಹಕ್ಕು ಕುರಿತು ಭಾಷಣ, ಸದಸ್ಯರಿಗೆ ಹೂವು, ಸೀರೆ, ಒಡವೆ, ವಸ್ತ್ರ ವೇಷ ಭೂಷಣಗಳ ಸ್ಪರ್ಧೆ, “ನಿಮಗೆ ವರ್ಷದಲ್ಲಿ ಒಂದು ದಿನವಾದರೂ ಇದೆ. ನಮಗೆ ಇಲ್ಲವೇ ಇಲ್ಲ” ಎಂಬ ಪುರುಷ ಸಹೋದ್ಯೋಗಿಗಳ ಕೂರಂಬು, ಇಷ್ಟೇ ತಾನೆ ಇಷ್ಟೂ ವರ್ಷ ಮಹಿಳಾ ದಿನಾಚರಣೆ ನಡೆದ ಪರಿ? ಒಂದು ಮಹಿಳಾ ಸಂಘದಲ್ಲಿ ಕಾರ್ಯಕ್ರಮಕ್ಕೆ ವಿಶಿಷ್ಠ ಕೇಶಾಲಂಕಾರ ಮಾಡಿಕೊಂಡು ಬರಲು ಸದಸ್ಯರಿಗೆ ಹೇಳಿದರೆ ಇನ್ನೊಂದು ಕಡೆ ಯಾವ ಬಣ್ಣದ ಸೀರೆ ಉಟ್ಟು ಬರಬೇಕು ಎಂಬುದು ಕಾರ್ಯಕ್ರಮದ ಹೈಲೈಟ್ಸ್! ಸೆಲೆಬ್ರೇಷನ್ಸ್, ಸಾಧಕ ಮಹಿಳೆಯರಿಗೆ ಸನ್ಮಾನ, ಸೀರೆ, ಒಡವೆ, ಪರ್ಸು, ಅಂಗಡಿಗಳಲ್ಲಿ ಮಹಿಳೆಯರಿಗೆ ಡಿಸ್ಕೌಂಟ್..! ಮಹಿಳೆಯ ಸೇವೆ, ತ್ಯಾಗಗಳ ಕುರಿತು ಕವನ, ಲೇಖನ. ಎಲ್ಲಾ ಚಾನೆಲ್ಲುಗಳಲ್ಲಿ ಮಹಿಳೆಯರ ಕುರಿತು ಚರ್ಚೆ, ಮಾತು ಕಥೆ. ಅಲ್ಲಿಗೆ ಮತ್ತೊಂದು ವರ್ಷದವರೆಗೂ ಕಾಯಬೇಕು! ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹುಟ್ಟು ಹಾಗೂ ಅದು ನಡೆದು ಬಂದ ದಾರಿಯ ಬಗ್ಗೆ ತಿಳಿಯದೆಯೂ ಗಂಟೆಗಟ್ಟಲೆ ಕೊರೆಯುವರಿದ್ದಾರೆ. ಅದು ಶುರುವಾಗಿದ್ದು ಸಮಾನ ವೇತನದ ಬೇಡಿಕೆಯೊಂದಿಗೆ. ರಷ್ಯಾ ಹಾಗೂ ಡೆನ್ಮಾರ್ಕಿನ ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ. ‘ಇಂಟರ್ ನ್ಯಾಷನಲ್ ಗಾರ್ಮೆಂಟ್ ವುಮೆನ್ಸ್ ವರ್ಕರ್ಸ್ ಯುನಿಯನ್’ ಎಂಬ ಅಸೋಸಿಯೇಷನ್ ಅಡಿ. ಸಮಾನ ಅವಕಾಶ, ಸಮಾನ ವೇತನ.. ಶತಮಾನದ ಹಿಂದಿನ ಬೇಡಿಕೆಯೂ ಅದೇ.. ಇಂದಿನ ಬೇಡಿಕೆಯೂ ಅದೇ.. ಬೇಡಿಕೆ ಆಗಿರುವುದರಿಂದ ನೆರವೇರಿಯೇ ಇಲ್ಲವೇನೋ.. ಬೇಡಿಕೆ ಎಂದು ವರ್ಷವಿಡೀ ಕೆಲಸ ಮಾಡದೇ ಕೂರಲು ಆಗುವುದಿಲ್ಲ.. ವರ್ಷದಲ್ಲಿ ಒಂದು ದಿನ ಪ್ರಪಂಚದ ಗಮನ ತಮ್ಮೆಡೆಗೆ, ತಮಗಾಗಿರುವ ಅನ್ಯಾಯದೆಡೆಗೆ ಸೆಳೆಯಲು ಶುರುವಾಗಿದ್ದು ಮಹಿಳಾ ದಿನಾಚರಣೆ. ಗೆದ್ದದ್ದು ಕೆಲವು, ಹೋರಾಟ ಮುಂದುವರಿದಿರುವುದು ಹಲವು ವಿಚಾರಗಳಿಗೆ. ಗಮನ ಇತ್ತ ಹರಿದಿದೆ, ಪ್ರಪಂಚ ನಿಂತು, ತಿರುಗಿ ನೋಡಿದೆ, ಗಮನಿಸಿದೆ, ವಿಷಯ ಹರಡಿದೆ ಎಂಬುದೇ ಒಂದು ದೃಷ್ಠಿಯಲ್ಲಿ ಗೆಲುವು. ಹಲವು ರಂಗಗಳಲ್ಲಿ ಸಮಾನ ಅವಕಾಶ ಮಹಿಳೆಗೆ ಇನ್ನೂ ಕನಸು. ಕೆಲವು ಕಡೆ ಸಮಾನ ವೇತನ ಸಿಕ್ಕರೂ ಅದರಿಂದ ಬೇರೆ ಹಲವು ಸಮಸ್ಯೆಗಳು ಹುಟ್ಟಿಕೊಂಡಿವೆ . ಅತ್ಯಾಚಾರ ನಿಲ್ಲಬೇಕು, ಹೆಣ್ಣು ಭ್ರೂಣಹತ್ಯೆ ನಿಲ್ಲಬೇಕು, ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು, ಆರ್ಥಿಕ ಸ್ವಾತಂತ್ರ್ಯ ಸಿಗಬೇಕು, ರಾಜಕೀಯದಲ್ಲಿ ಪ್ರಾಶಸ್ತ್ಯ ಸಿಗಬೇಕು, ಅಧಿಕಾರ ಅವರಿಗೆ ಸಿಗಬೇಕು – ಇವೆಲ್ಲಾ, ರಸ್ತೆಗಿಳಿದು ಹೋರಾಟ ಮಾಡಿ ದಕ್ಕಿಸಿಕೊಳ್ಳುವುದಲ್ಲ. ರಸ್ತೆಗಿಳಿದು ವಿಚಾರವನ್ನು ಪ್ರಚಲಿತಗೊಳಿಸಬಹುದು. ಆದರೆ ದಕ್ಕಿಸಿಕೊಳ್ಳಲು ವಿದ್ಯಾಭ್ಯಾಸ ಕೊಡಬೇಕು. ತಿಳವಳಿಕೆ ಮೂಡಬೇಕು ಹಾಗೂ ಮನೋಭಾವದಲ್ಲಿ ಬದಲಾವಣೆ ಆಗಬೇಕು. ವಿದ್ಯಾಭ್ಯಾಸ, ಉದ್ಯೋಗ ಹಾಗೂ ಆರ್ಥಿಕ ಸ್ವಾತಂತ್ರ್ಯ ತಂದುಕೊಡಬಹುದು. ಕ್ಷಮಿಸಿ.. ಸ್ವಾತಂತ್ರ್ಯ ಅಲ್ಲ, ಆರ್ಥಿಕ ಸಬಲತೆ ಎನ್ನಬಹುದು. ಏಕೆಂದರೆ ತಾನು ದುಡಿದ ಹಣದ ಮೇಲೆ ಆ ಮಹಿಳೆಗೆ ಹಕ್ಕಿರುವುದಿಲ್ಲ. ವಿದ್ಯಾಭ್ಯಾಸ ದೊರಕಿಸಿಕೊಟ್ಟ ಉದ್ಯೋಗದಿಂದ ಬಂದ ಸಂಬಳವನ್ನು ತಂದು ಮನೆಯ ಗಂಡಸಿಗೆ (ಅಪ್ಪ ಅಥವಾ ಗಂಡ) ಕೊಟ್ಟು, ತನ್ನ ಖರ್ಚಿಗೆ ಹಣ ಕೇಳುವ ಉದ್ಯೋಗಸ್ಥ ಮಹಿಳೆಯರೇ ಹೆಚ್ಚು. ಮಹಿಳೆಗೆ ಮೀಸಲಿಟ್ಟ ಕ್ಷೇತ್ರದಲ್ಲಿ ಗಂಡ ಅಥವಾ ಅಪ್ಪ ನಿಲ್ಲಲು ಸಾಧ್ಯವಿಲ್ಲವಾದ್ದರಿಂದ ಚುನಾವಣೆಗೆ ನಿಂತು ಗೆಲ್ಲುವ ಮಹಿಳೆ ಅಧಿಕಾರ ನಡೆಸುವುದಿಲ್ಲ. ಆ ಅಧಿಕಾರ ಮತ್ತೆ ಗಂಡ ಅಥವಾ ತಂದೆಯ ಹಕ್ಕು. ತನ್ನ ಒಡಲಿನಲ್ಲಿ ಮೂಡುವ ಹೆಣ್ಣು ಭ್ರೂಣದ ಸಂರಕ್ಷಣೆಯನ್ನು ಮಾಡಲಾರಳು ಆಧುನಿಕ ಕಾಲದ ಹೆಣ್ಣು. ವಿದ್ಯಾಭ್ಯಾಸ, ಉದ್ಯೋಗ, ಆರ್ಥಿಕ ಸಬಲತೆಗಳ ಜೊತೆಗೆ ಮನೋಭಾವದ ಬದಲಾವಣೆ ಆಗಬೇಕಾಗಿರುವುದು ಇಂದಿನ ಪ್ರಧಾನ ಅವಶ್ಯಕತೆ. ಹೆಣ್ಣು ಮಕ್ಕಳ ಹಾಗೂ ಗಂಡು ಮಕ್ಕಳ ಇಬ್ಬರ ಮನೋಭಾವದಲ್ಲೂ ಬದಲಾವಣೆ ಆಗಬೇಕಾಗಿದೆ. ಸಮಾಜದ ಚಿಕ್ಕ unit ಆಗಿರುವ ಸಂಸಾರ ಅಂದರೆ ಫ್ಯಾಮಿಲಿಯ ಜವಾಬ್ದಾರಿ ಇಲ್ಲಿ ಅಖಂಡವಾಗಿದೆ. ಮಕ್ಕಳನ್ನು ಬೆಳೆಸುವ ತಂದೆತಾಯಂದಿರು ತುಂಬಾ ಜವಾಬ್ದಾರಿಯುತವಾಗಿ, ಸಮಾನವಾಗಿ ಮಕ್ಕಳನ್ನು ಬೆಳೆಸಬೇಕು. ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು, ಗಂಡು ಮಕ್ಕಳಲ್ಲಿ ಹೆಣ್ಣು ಮಕ್ಕಳನ್ನು ಸಮಾನವಾಗಿ ನೋಡುವ ಮನೋಭಾವ ಬೆಳೆಸಬೇಕು. ಬರೀ ಮಾತಲ್ಲಿ, ಕಥೆಯಲ್ಲಿ ಅಲ್ಲ.. ತಂದೆ ತನ್ನ ಹೆಂಡತಿಯನ್ನು ಗೌರವಿಸುವುದರ ಮೂಲಕ, ತಾಯಿ ಆತ್ಮವಿಶ್ವಾಸದಿಂದ ಇರುವ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ‘lead by example’ ಮಂತ್ರವಾಗಬೇಕು. ನಿರ್ಲಕ್ಷಿತವಾಗಿರುವ ಪ್ರೈಮರಿ ಶಾಲೆಯ ವಿದ್ಯಾಭ್ಯಾಸವನ್ನು ಸಬಲಗೊಳಿಸಬೇಕು. ಮೊಳಕೆಯಾಗಿ ಮನೆಯಲ್ಲಿ ಚಿಗುರೊಡೆದ ಪೈರಿಗೆ ನೀರೆರೆಯುವ ಕಾಯಕ ಆಗುವುದು ಪ್ರಾಥಮಿಕ ಶಾಲೆಯಲ್ಲಿ. ಸೂಕ್ತ ಪಾಠ, ದಕ್ಷ ಅಧ್ಯಾಪಕರು ವಿಜ್ಞಾನ, ಲೆಕ್ಕ, ಇತಿಹಾಸ, ಭಾಷೆಯ ಜೊತೆಗೆ ಸದೃಢ ಸಮಾಜಮುಖಿ, ಸಮಾನತೆಯ ಮನೋಭಾವ ಮಕ್ಕಳಲ್ಲಿ ಮೂಡುವಂತೆ, ಮೂಡಿದ್ದು ಬೆಳೆಯುವಂತೆ ಮಾಡಬೇಕು. ನಮಗೆ ಏನಿದ್ದರೂ celebrate ಮಾಡುವ ಹುಮ್ಮಸ್ಸು.. ಅದನ್ನೂ ಮಾಡುವ. Let us celebrate womanhood. ನಾವು ಹೆಣ್ಣು ಎಂದು ಹೆಮ್ಮೆಪಡುವ. ಸಮಾನತೆ ಬೇಕು ಅಂದರೆ ಗಂಡಿನಂತೆ ಆಗಬೇಕು ಎಂದಲ್ಲ.. ನಮಗೆ ಬೇಕಾದಂತೆ ಇರಬೇಕು.. ಯಾರಿಗೂ ಅಡಿಯಾಳಾಗಿ ಅಲ್ಲ. (ಯು.ಸುಮಾ ಅವರ ಲೇಖನದಿಂದ ಸ್ಪೂರ್ಥಿ) ****************

ಮಹಿಳಾದಿನದ ವಿಶೇಷ Read Post »

ಇತರೆ

ಮಹಿಳಾದಿನದ ವಿಶೇಷ

ನಿಲ್ಲದ ಅಮಾವಾಸ್ಯೆ ಚಂದ್ರಪ್ರಭ ನಿಲ್ಲದ ಅಮಾವಾಸ್ಯೆ…. ಈ ಸೃಷ್ಟಿ ನಿರಂತರ.. ಇಲ್ಲಿ ಯಾವ ಕಾರಣಕ್ಕೂ ಯಾವುದೂ ನಿಲ್ಲಲಾರದು ಅಂತ ಹೇಳೋಕೆ ನಮ್ಮಲ್ಲಿ ಪ್ರಚಲಿತ ಮಾತೊಂದಿದೆ.. ‘ಅಕ್ಕ ಸತ್ತರ ಅಮಾಸಿ ನಿಂದರೂದಿಲ್ಲ’ ಅಂತ. ಹೌದು, ಯಾವುದೂ ನಿಲ್ಲೂದಿಲ್ಲ. ಆದರೆ ಅದನ್ನು ನಡೆಯಿಸಿಕೊಂಡು ಹೋಗುವ ವ್ಯವಸ್ಥೆಯೊಂದು ಸದ್ದಿಲ್ಲದೆ ಕೆಲಸ ಮಾಡುತ್ತಲೇ ಇರ್ತದೆ ಅನ್ನೊ ಸತ್ಯ ಯಾರ ಗಮನಕ್ಕೂ ಬಾರದೆ ಹೋಗ್ತದೆ ಅನ್ನೋದೇ ವಿಸ್ಮಯ. ಗಾಳಿ, ನೀರು, ಮಳೆ, ಬಿಸಿಲು.. ನಲ್ಲಿ ನೀರು, ದಿನಪತ್ರಿಕೆ, ತರಕಾರಿ, ಅಕ್ಕಿ,ಬೇಳೆ..ಪೆಟ್ರೋಲು,ಸೀಮೆ ಎಣ್ಣೆ, ಗ್ಯಾಸ್ ಒಲೆ.. ಯಾವುದಾದರೂ ಅಷ್ಟೇ. ಅದರಲ್ಲಿ ವ್ಯತ್ಯಯ ಆಗುವ ವರೆಗೆ ನಮ್ಮ ಗಮನ ಅತ್ತ ಹರಿಯುವುದೇ ಇಲ್ಲ. ಆದರೆ ಕವಿ ಕಣ್ಣಿಗೆ ಈ ಸಂಗತಿ ಬಿದ್ದಾಗ ಮೂಡಿದ ಸಾಲುಗಳು ಅದೆಷ್ಟು ಆಪ್ತ, ಸುಂದರ!! “ರಾಜ್ಯಗಳಳಿಯಲಿ ರಾಜ್ಯಗಳುರುಳಲಿ| ಹಾರಲಿ ಗದ್ದುಗೆ ಮುಕುಟಗಳು| ಮುತ್ತಿಗೆ ಹಾಕಲಿ ಸೈನಿಕರೆಲ್ಲ| ಬಿತ್ತುಳುವುದನವ ಬಿಡುವುದೇ ಇಲ್ಲ||” ಅಬ್ಬಾ…! ಎಂಥ ಸೂಕ್ಷ್ಮ ಗ್ರಹಿಕೆ, ಸಂವೇದನೆ!! ಇದೆಲ್ಲ ಯಾಕೀಗ ಅಂತೀರಾ? ಹ್ಞೂಂ… ಅದೆಂಥದೊ ವೈರಸ್‌ ಬಂದು ದೇಶಕ್ಕೆ ದೇಶವನ್ನೇ ಅಲ್ಲಾಡಿಸ್ತಿದೆ.. ಜಗತ್ತಿನ ಜನಗಳಲ್ಲಿ ಭಯ ಹುಟ್ಟಿಸಿದೆ. ಯಾರಾರಿಗೊ ಇನ್ನೂ ಯಾರಾರೊ ಹಿಂಬಾಲಕರು ಮುಂಬಾಲಕರು ಆಗಿ ದೇವರು.. ಭಕ್ತರು ಅಂತೆಲ್ಲ ಸೃಷ್ಟಿ ಆಗವ್ರೆ.. ಇನ್ನು ಕೆಲವರೊ.. ಗೆದ್ದು ಬೀಗುವ ತನಕ ಒಂದು ಬಣ್ಣ..! ಗೆದ್ದ ಬಳಿಕ ಇವರು ಆಶ್ರಯಿಸುವ ಛತ್ರ ಚಾಮರಗಳ ಬಣ್ಣವೇ ಬೇರೆ..!! ಮನುಷ್ಯರನ್ನು ತಮಗೆ ಹೋಲಿಸುವವರನ್ನು ಕಂಡು ಊಸರವಳ್ಳಿಗಳೂ ಆಕ್ರೋಶಗೊಂಡಿವೆ. ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ.. ಎಲ್ಲದರಲ್ಲಿ ಏನೆಲ್ಲ ಸ್ಥಿತ್ಯಂತರ ಕ್ಷಣ ಕ್ಷಣಕ್ಕೂ ಘಟಿಸುತ್ತಿವೆ. ಯುದ್ಧವಂತೆ.. ಕೊರೊನಾ, ಕೋವಿಡ್ ಅಂತೆ.. ದೇಶವಂತೆ..ಪ್ರೇಮವಂತೆ.. ಇದನ್ನೆಲ್ಲ ಬದಿಗೆ ತಳ್ಳಿ ಪರೀಕ್ಷಾ ತಿಂಗಳು ಬಂದೇ ಬಿಟ್ಟಿದೆ. ಪರೀಕ್ಷೆಗಳ ಹಬ್ಬ.. ಹಾವಳಿ. ಮೂಲಭೂತ ಸೌಕರ್ಯಗಳಿರುವ ಖಾಸಗಿ ಸಂಸ್ಥೆಗಳ ರೀತಿ ಒಂದು ಬಗೆಯದಾದರೆ ಎಲ್ಲ ಕೊರತೆಗಳನ್ನೂ ಕೊಡವಿ ಎದ್ದು ನಿಲ್ಲುವ ಸರಕಾರಿ ಸಂಸ್ಥೆಗಳದು ಮತ್ತೊಂದು ರೀತಿ. ಪರೀಕ್ಷೆ ನಡೆದಿದೆಯೆ ಇಲ್ಲಿ? ಎಂದು ಕೇಳುವಷ್ಟು ಸದ್ದಡಗಿದ ವಾತಾವರಣದಲ್ಲಿ ಪರೀಕ್ಷೆ ನಡೆದಿವೆ ಎಂದಿನಂತೆ. ಮೌಲ್ಯಮಾಪನ ನಡಪ್ರತಿಷ್ಠಾಪನೆಗಾಗಿ ಅವಸರ.. ಸಿಇಟಿ..ಇನ್ನೊಂದು ಮತ್ತೊಂದು ಬಂದೇ ಬಿಡ್ತವೆ. ಕವಲು ದಾರಿಯಲ್ಲಿ ನಿಂತ ಮಕ್ಕಳಿಗೆ ಆಯ್ಕೆಯ ಗೊಂದಲ. ದಿನಗಳು ಓಡುತ್ತಿವೆಯೆ..ಉರುಳುತ್ತಿವೆಯೆ.. ಒಂದೂ ಅರ್ಥವಾಗದ ಸನ್ನಿವೇಶದಲ್ಲಿ ಶಾಲೆಗಳು ಪುನಃ ಆರಂಭ ಆಗ್ತವೆ. ಸಮವಸ್ತ್ರ ತೊಡಿಸಿ ಮಗುವನ್ನು ಶಾಲೆಗೆ ಕಳಿಸಿ ಆಕೆ ತಾನೂ ಅಣಿಯಾಗುತ್ತಾಳೆ.. ಯಾವುದೊ ಸಂಕಿರಣದ ಆಶಯ ನುಡಿ.. ಇನ್ನಾವುದೊ ಚರ್ಚಾ ಕೂಟದ ಪ್ರಧಾನ ಭಾಷಣ.. ಅಮ್ಮನ ಮನೆಗೊಂದು ಭೇಟಿ.. ಮಿತ್ರರೊಂದಿಗೊಂದು ವಿಹಾರ.. ಎಲ್ಲವನ್ನೂ ತನ್ನೊಂದಿಗೆ ಕರೆದೊಯ್ಯುತ್ತಾಳೆ.. ಜೊತೆಗೆ ಬಸಿರು,ಬಾಣಂತನ,ಮುಟ್ಟು, ಸ್ರಾವಗಳೆಂಬ ಸಂಗಾತಿಗಳನ್ನೂ… ಓಟದ ನಡುವೆ ಪತ್ರಿಕೆ ಮೇಲೆ ಒಮ್ಮೆ ಕಣ್ಣಾಡಿಸುತ್ತಾಳೆ. ನೋಟು, ಜಿ ಎಸ್ ಟಿ, ರಾಜಕೀಯ, ಸಾಹಿತ್ಯ ಎಲ್ಲವನ್ನೂ ಒಮ್ಮೆ ನಿರುಕಿಸುತ್ತಾಳೆ.. ತನ್ನ ನಿಲುವನ್ನು ತಾ ಕಾಪಿಟ್ಟುಕೊಂಡು. ಕೂಸು,ಬಾಲೆ,ಯುವತಿ,ವೃದ್ಧೆ ಭೇದವಿಲ್ಲದೆ ನಡೆಯುವ ಅನಾಚಾರವನ್ನು ಮೆಟ್ಟುತ್ತ ಸಾಗುವ ಸಂಕಲ್ಪವನ್ನು ದೃಢಗೊಳಿಸಿಕೊಂಡು ಹೊಸ ದಾರಿಗಳನ್ನು ಅರಸುತ್ತಾಳೆ. ತನ್ನ ಅಸ್ಮಿತೆ, ಹಕ್ಕುಗಳ ಮರು ಪ್ರತಿಷ್ಠಾಪನೆಗಾಗಿ ದಿನವೊಂದರ ಆಚರಣೆ!! ಅಲ್ಲಿಯೂ ನಸು ನಕ್ಕು ಸಂಭ್ರಮಿಸುತ್ತಾಳೆ. ಎಲ್ಲ ಇಲ್ಲಗಳ ನಡುವೆಯೂ ಈ ಜಗತ್ತಿನ್ನೂ ಸುಂದರ ತಾಣವಾಗಿ ಉಳಿದಿರುವುದು ಹೇಗೆಂದು ಅಚ್ಚರಿ ಪಡುವವರಿಗೆ ಉತ್ತರ ಸಿಕ್ಕಿರಬಹುದು… *******

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಇಲ್ಲಿ ಕೇಳಿ… ದಾಕ್ಷಾಯಿಣಿ ವಿ ಹುಡೇದ. ಅದಾಗಲೇ ಒಂದು ದೋಣಿಯನೇರಿ ಹರಿವ ನದಿಯ ಮುಕ್ಕಾಲು ದೂರ ದಾಟಿ ದಡ ಮುಟ್ಟಲಿರುವವನನ್ನು ಹಚ್ಚಿಕೊಳ್ಳುವುದೂ ನೆಚ್ಚಿಕೊಳ್ಳುವುದೂ ಸಣ್ಣ ಮಾತೇ? ಇಲ್ಲಿ ಹೇಳುವೆ ಕೇಳಿ ; ಹಾಗೆ ಹೊರಟವನ ಮೊಗ ನೋಡಿ ಮುಗುಳ್ನಗೆ ಬೀರಿ ನನಗೆ ನಾನೇ ಭರವಸೆಯ ಚಿಮಣಿ ದೀಪ ಕಡ ತಂದುಕೊಳ್ಳುವುದು ಸಣ್ಣ ಮಾತೇ? ವಾರದಲ್ಲೆರಡು ಸಲ ಒಮ್ಮೊಮ್ಮೆ ತಿಂಗಳಿಗೊಂದು ಸಲ ಹುಡುಕಿಕೊಂಡು ಬಂದು ಮೊಳ ಮಲ್ಲಿಗೆ ತುಂಡು ಬ್ರೆಡ್ಡು ತಂದು “ನಾ ನಿನ್ನವನೇ” ಎಂದುಲಿವವನ ನಂಬುವುದು ಸಣ್ಣ ಮಾತೇ? ಇಲ್ಲಿ ಹೇಳುವೆ ಕೇಳಿ ; ನೀತಿ ಅನೀತಿಯ ಖಾತೆ ಕಿರ್ದಿಯಲ್ಲಿ ಗುಣಾಕಾರ ಭಾಗಾಕಾರ ಮಾಡಿ ಎದುರಿನವರೆದೆಗೆ ಬಾಣ ಹೂಡುವವರ ಮಾತುಗಳಿಗೆ ಉತ್ತರ ನನ್ನಲ್ಲೂ ಇವೆ. ಆದರೆ.. ಆದರೆ… ಇದ್ದುದನ್ನು ಇದ್ದಂತೆ ಹೇಳಿ ನಿಮ್ಮ ಮನಸು ಮುರಿವ ಇರಾದೆ ನನ್ನೆದೆಯಲ್ಲಿ ಹುಟ್ಟಲಿಲ್ಲ, ಪ್ರೀತಿ ಬಯಸಿ ಬಂದವನ ಎದೆಗೆ ಮಳೆ ಸುರಿಸಿದ ಒಂಟಿ ಹೆಣ್ಣು ನಾನು, ನೀವಾಡಿದ ಮಾತುಗಳು ನನ್ನ ಸೆರಗ ಚುಂಗಿನಲ್ಲಿ ಹಾಕಿಕೊಂಡಿರುವೆ ಗಂಟು, ಬಿಡುವಾದಾಗ ಬಿಚ್ಚಿ ನೋಡಿ ನಿಮಗೂ ಅಲ್ಲಿ ಪ್ರೀತಿ ಉಂಟು. ಒಡೆದ ಮನೆಯ ಬಿದ್ದ ಗೋಡೆಯ ಮುಗಿದ ಯುದ್ಧದ ಸೂತಕ ಏನೆಂದು ಬಲ್ಲವಳು ನಾನು, ನನ್ನೊಲವ ಪ್ರಶ್ನಿಸುವ ಮೊದಲೊಮ್ಮೆ ನಿಮ್ಮನ್ನು ನೀವು ಓದಿ, ಉತ್ತರ ಸಿಕ್ಕ ದಿನ ಪಂಚಾಯ್ತಿಗೆ ಚಂದ್ರನನ್ನು ಕರೆಯೋಣ. **********

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ನಿಜರೂಪದ ಶಕ್ತಿಯರು ಪಾರ್ವತಿ ಸಪ್ನ ಬೀದಿ ಬೀದಿಗಳಲ್ಲಿ ಪಾಳು ಬಿದ್ದ ಮನೆಮಠಗಳಲ್ಲಿ…. ಹಾದಿ ಬದಿಯ ಪೊದೆಗಳಲ್ಲಿ ಬಂಜರು ನೆಲದ ಬಿರುಕುಗಳಲ್ಲಿ ಹಸಿರುಮರದ ನೆರಳುಗಳಲ್ಲಿ ಶಾಲೆಯ ಪವಿತ್ರ ಕೊಠಡಿಗಳಲ್ಲಿ ಕೇಕೆಗಳ ಸದ್ದು ಮುಗಿಲು ಮುಟ್ಟುವ ಉದ್ಯಾನವನಗಳಲ್ಲಿ ಕಗ್ಗತ್ತಲ ಭೀಕರ ರಾತ್ರಿಗಳಲ್ಲಿ ತಂಪೆರೆದ ಮುಸ್ಸಂಜೆಯ ಇರುಳಲ್ಲಿ ನೇಸರನ ಎದುರಲ್ಲಿ….. ಬೆಳದಿಂಗಳ ಬೆಳಕಲ್ಲಿ…. ಇಂದಿಗೂ ಹುಟ್ಟುತ್ತಿಹರು…. ಅದೆಷ್ಟೋ ನರರಾಕ್ಷಸರು…. ರಾವಣ, ದುರ್ಯೋಧನ, ದುಶ್ಯಾಸನರ ವಂಶಾವಳಿಗಳು ನೂರ ಎಂಟು ತಲೆಗಳಲ್ಲಿ…. ಹುಟ್ಟಿಗೂ ಹೆಸರಿಲ್ಲದೇ…. ಸಾವಿಗೂ ಬಿಡುವಿಲ್ಲದೇ…. ಕರುಳಬಳ್ಳಿಯ ಹೂವ ಅರಳುವ ಮುನ್ನ ಹಿಚುಕುವ ಕ್ರೂರ ಮನದ ಪಾತಕಿಗಳು ಹುಟ್ಟುತ್ತಲೇ….ಇದೆ… ರಾಕ್ಷಸ ಸಂತತಿಗಳು…. ಹುಟ್ಟುತ್ತಲೇ…..ಇದೆ ವಿಷಜಂತುಗಳು…… ಎಂದಾದರೂ ಹುಟ್ಟುವರೇ..? ರಾಕ್ಷಸನ ಮುಂಡವ ಚೆಂಡಾಡುವ ದುರ್ಗೆಯರು?? ವಿಷ ಜಂತುಗಳ ಎದೆ ಬಗೆಯುವ…ಕಾಳಿಯರು?? ಇನ್ನಾದರೂ ಹುಟ್ಟಲೀ ನಿಜರೂಪದ ಶಕ್ತಿಯರು…!! ********

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಪ್ರಭಾವಿತ ಮಹಿಳೆ ಸಿಂಧು ಭಾರ್ಗವ್ ಕಷ್ಟಗಳ ಎದುರಿಸುತ ನಿಷ್ಠೆಯಲಿ ಜೀವನವ ಕಳೆಯುವ ಹೆತ್ತವ್ವ ನನಗೆ ಪ್ರಭಾವ ಬೀರಿದಳು ಹಿಡಿದ ಗುರಿಯ ಸಾಧಿಸಲು ಹಟದಿಂದ ಸಾಧನೆ ಮಾಡಿದ ಹಿರಿಯಕ್ಕ ನನಗೆ ಪ್ರಭಾವ ಬೀರಿದಳು ಗುರುಗಳ ಮಾರ್ಗದರ್ಶನದಲ್ಲಿ ವಿನಯದಿಂದ ವಿದ್ಯೆ ಕಲಿತು ಹಿರಿಯರ ಮೆಚ್ಚುಗೆ ಪಡೆದ ತಂಗಿ ನನಗೆ ಪ್ರಭಾವ ಬೀರಿದಳು ಇನ್ಫೋಸಿಸ್ ಸಂಸ್ಥೆಯ ಹುಟ್ಟುಹಾಕಿ ಸರಳ ಸಜ್ಜನಿಕೆಯಿಂದ ಸಂಸ್ಕೃತಿ, ಸೇವೆಯಲೇ ಬಾಳುವ ಸುಧಾ ಅಮ್ಮ ನನಗೆ ಪ್ರಭಾವ ಬೀರಿದರು ಹೆಣ್ಣು ಜಗಕೆ ಕಣ್ಣಾಗುವಳು ಒಳ ಕಂಗಳಿಂದ ನೋಡಿರಣ್ಣ ಅಹಂ ಇರುವ ಹೆಣ್ಣು ಎಂದಿಗೂ ಬೆಳಕಾಗಳಣ್ಣ, ಬಾಳು ಹೈರಾಣಾಗಿಸಲು ಹೆಣ್ಣೇ ಕಾರಣ ಬದುಕು ಬೆಳಗಿಸಲು ಅವಳೇ ಭೂಷಣ ತ್ಯಾಗ ಸಹನೆ ಹೊಳೆಯೋ ಎರಡು ಮುತ್ತುಗಳು ಅವಳ ಮನದ ಮುಕುಟದಲ್ಲಿ ಅರಳಿ ನಿಲ್ಲುತಿರುವುವು ಹೆಣ್ಣು ಮಗುವ ಹೊನ್ನಿನಂತೆ ಜೋಪಾನ ಮಾಡಿರಿ ತನ್ನತನವ ಮೆರೆದು ಬದುಕೋ ಅವಳಿಗೆ ಕೈಯ ಮುಗಿಯಿರಿ!! *****

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ನಾನೆಂದೂ ಓಡುವುದಿಲ್ಲ. ಚೈತ್ರ ಶಿವಯೋಗಿಮಠ ಒಂದ್ಹತ್ತು ಚಪಾತಿಯನು ತೀಡಿ ಕಾದ ಎಣ್ಣೆಯಲಿ ಸಾಸಿವೆ ಜೀರಿಗೆ ಚಟ ಪಟ ಎನಿಸಿ ಕರಿಬೇವು ಚೊರ್ ಎನಿಸಿ ಒಂದು ಪಲ್ಯ ಮಾಡಿ, ದೌಡಾಯಿಸಬೇಕಿದೆ ನನ್ನ ಕನಸುಗಳ ಬೆಂಬತ್ತಲು! ನಿಮ್ಮ ಉದರಕಾಗಿಯೇ ಮಾಡುವೀ ಮಹತ್ಕಾರ್ಯದಲಿ ಕೊಂಚ ಕೈ ಜೋಡಿಸಿ ತಪ್ಪೇನಿಲ್ಲ! ವಯಸ್ಸು ದೇಹಕ್ಕೆ ಹೊರತು ಮನಸ್ಸಿಗಲ್ಲ! ಒಂದೆರಡು ಸವಿಮಾತು ಒಂದು ಮುಗುಳುನಗೆ ಇವಿಷ್ಟೇ! ಬೀಳ್ಕೊಡಿ ನನ್ನನ್ನೂ ಒಂದು ದೊಡ್ಡ ದಿನ ನನ್ನ ಮುಂದಿದೆ! ಆಗೊಮ್ಮೆ ಈಗೊಮ್ಮೆ ಜೀನ್ಸ್ ಧರಿಸುವೆ! ತುಸು ತುಟಿಗೆ ಬಣ್ಣ ಹಚ್ಚಿ ಮುಂಗುರುಳ ತೀಡುವೆ ಅದಕ್ಕೂ ಗೊಣಗಬೇಡಿ “ಮಾರ್ಡರ್ನ್ ಮಾರಿ”ಎಂದು ಯಾಕೆಂದರೆ ನನಗೆ ಸೀರೆಯೇ ಇನ್ನೂ ಅಚ್ಚು ಮೆಚ್ಚು ನನಗೆ ಮಕ್ಕಳ ನೋಡಿಕೊಳ್ಳಲು ಕಿಂಚಿತ್ ಬೇಸರವಿಲ್ಲ! ಒಮ್ಮೊಮ್ಮೆ ನನಗಾಗಿ ಒಂದು ತಾಸು, ಒಂದೇ ಒಂದು ತಾಸು ಸಂಭಾಳಿಸಿ ಅವುಗಳನ್ನ ನನ್ನ ನೆಚ್ಚಿನ ಪುಸ್ತಕ ಹಿಡಿದು ಕಾಫೀ ಹೀರುವೆ! ಆಗೊಮ್ಮೆ ಈಗೊಮ್ಮೆ ಗೋಷ್ಠಿಗಳಿಗೆ ಹೋಗುವೆ, ಹೊಸ ವಿಚಾರಧಾರೆ ನನಗೂ ಹಿಡಿಸುವುದು. ಅನಾಯಾಸ ಮಹಿಳಾವಾದಿ, ಆ ವಾದಿ ಈ ವಾದಿಯೆಂದು ಮೂಲವ್ಯಾಧಿ ತರಿಸಿಕೊಳ್ಳಬೇಡಿ! ನನ್ನ ಬೇರುಗಳು ಗಟ್ಟಿಯಾಗೇ ಇವೆ! ಎಲ್ಲವನೂ ಸಂಭಾಳಿಸುವ ಶಕ್ತಿಯಿರುವ ನನ್ನ ಒಂದೇ ಕಡೆ ಸೀಮಿತಗೊಳಿಸಿ ಅಲ್ಲಿಗೆ ಅಂಟಿಸಲು ಪ್ರಯತ್ನಿಸದಿರಿ!! ಹಾಗಂತ ನನ್ನ ಜವಾಬ್ದಾರಿಗಳಿಂದ ನಾನೆಂದೂ ಓಡುವುದಿಲ್ಲ!! *********

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಹಣತೆ ಹಚ್ಚುತ್ತಾಳೆ ಸುಮಂಗಳ ಮೂರ್ತಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿದಿನವೂ,ತಿಂಗಳನಂತೆ ಮಬ್ಬುಗಟ್ಟಿದ ಕತ್ತಲನ್ನು ನಂದಿಸುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿ ಕ್ಷಣವೂ,ಗೋವರ್ಧನ ಗಿರಿಯಂತೆ ಭರವಸೆಯ ಭತ್ತ ಅಂಕುರವಾಗುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿ ಬೆಳಗೂ,ನೇಸರನ ನಗುವಂತೆ ಹೆಪ್ಪುಗಟ್ಟಿದ ನೋವನು ಕರಗಿಸುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿ ಇರುಳೂ,ತಂಗಾಳಿಯಂತೆ ದಣಿದ ಮನಸ್ಸಿಗೆ ಮುಲಾಮಾಗುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿ ಹೆಜ್ಜೆಗೂ,ಮಣ್ಣಿನ ಘಮದಂತೆ ಚಿತೆಗೆ ನೂಕಿದ ಚಿಂತನೆಯ ಹಾದಿಗೆ ದೀವಿಗೆಯಾಗುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿ ಅಕ್ಷರದಲ್ಲೂ,ಜೀವಜಲದಂತೆ ಅರಿವಿನ ಹಸಿವಿಗೆ ಅನ್ನವಾಗುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿ ಕನವರಿಕೆಯಲೂ,ತಾಯಿಯಂತೆ ಕುಟುಂಬದ ಘನತೆಯನ್ನು ಜೋಪಾನ ಮಾಡುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಮಳೆ ಹನಿಗಳ ಚುಂಬನದಂತೆ ವಿಜ್ಞಾನದ ಬೆಳಕನು ಹರಡಿ ಮೌಢ್ಯದ ಕೊಳೆಯನು ತೊಳೆಯುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ನೆಲದವ್ವನ ಒಲವಂತೆ ಸಮಾನತೆಯ ಹರಿಸುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರೀತಿಯಿಂದ …… ಕರುಣೆಯಿಂದ…….. ಶಾಂತಿಯಿಂದ…….. ತಾನೇ ಸುಟ್ಟು ಕರಕಲಾದರೂ ಅರಿವಾಗದ ಅನಂತತೆಯಲಿ ಹಣತೆ ಹಚ್ಚುತ್ತಾಳೆ ಅವಳು! ಇಲ್ಲಿ ಎಲ್ಲವೂ ಬರಿದಾದರೂ ಹಣತೆಯ ಬೆಳಗು ಬೆರಗಾಗದೆ ಮೆರಗಾಗಲಿ ಎಂಬ ಧ್ಯೇಯದಿಂದ…. ಹಣತೆ ಹಚ್ಚುತ್ತಾಳೆ ಅವಳು! *******

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನ ವಿಶೇಷ

ಅವಳೆಂದರೆ.. ವಿನುತಾ ಹಂಚಿನಮನಿ ಬಿತ್ತಿರುವದ ಬೆಳೆಯುವ ಭೂಮಿ ಧರಣಿ ಕಸವಿರಲಿ ವಿಷವಿರಲಿ ಬೀಜದ ಭ್ರೂಣ ಅಂಕುರಿಸಲು ಒಡಲ ಕೊಡುವ ರಮಣಿ ಜೀವಜಲ ಎರೆಯುವ ಅಮೃತ ವರ್ಷಿಣಿ ಮೇಲು ಕೀಳೆನಿಸದೆ ಪಾಪ ತೊಳೆಯುವ ಜಾಹ್ನವಿ ತಪ್ಪುಗಳ ಒಪ್ಪಿ ಒಪ್ಪಿಕೊಳ್ಳುವ ಮಹಾಮಾಯಿ ಎಲ್ಲವನೂ ತನ್ನದಾಗಿಸಿಕೊಳ್ಳುವ ನೀಲಮಯಿ ಸೂರ್ಯ ಚಂದ್ರ ತಾರೆಯರಿಗೆ ಅಂಗಳವಾಗಿರುವ ಅನಂನ ಆಗಸದಂತ ವಿಶಾಲಮನದ ಪ್ರೇಮಮಯಿ ಕೆಡುಕ ಧಿಕ್ಕರಿಸಿ ಸುಡುವ ಮೋಹಿನಿ ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ಕರುಣಾಮಯಿ ಅಸುರ ಮರ್ಧಿನಿ ಅಗ್ನಿ ಸ್ವರೂಪಿಣಿ ಜಗದ ಎಲ್ಲ ತೇಜಸ್ಸಿಗೆ ಕಾರಣೀಭೂತಳು ಚುಂಬಕ ಗುರುತ್ವ ಶಕ್ತಿಯ ಶಕ್ಕಿರೂಪಿಣಿ ಅವಳೆಂದರೆ ಸಾಕ್ಷಾತ್ ಪಂಚಭೂತಾಯಿ ರಕ್ತವ ಹಾಲಾಗಿಸಿ ಉಣಿಸುವಾಕಿ ಶಕ್ತಿಯ ಬೆವರಾಗಿಸಿ ಸೇವೆಗೈಯುವಾಕಿ ಮುಕ್ತ ಇಹ ಪರಕೆ ಬೇಕಿರುವಾಕಿ ಸೃಷ್ಟಿ ಕಾರ್ಯದಲಿ ಚತುರ್ಮುಖ ಬ್ರಹ್ಮನಂತೆ ಪೋಷಿಸುವಲ್ಲಿ ಕರುಣಾಳು ವಿಷ್ಣುವಿನಂತೆ ಕ್ಷಮಿಸುವಲ್ಲಿ ಸಹನಶೀಲೆ ಧರಿತ್ರಿಯಂತೆ ರವಿಚಂದ್ರರಿಂದ ಬೆಳಕ ಪಡೆದ ತಾರೆಗಳಂತಲ್ಲ ಅವಳ ವ್ಯಕ್ತಿತ್ವ ತನ್ನನು ತಾನು ಉರಿಸಿ ಬೆಳಗುವ ದೀಪ್ತಿ ********

ಮಹಿಳಾದಿನ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ನಾವು ನಿಮ್ಮ ಹಾಗಲ್ಲ ಸೌಜನ್ಯ ದತ್ತರಾಜ ಹೌದು ಖಂಡಿತಾ ನಾವು ನಿಮ್ಮ ಹಾಗಲ್ಲ ಪ್ರೀತಿಯಲ್ಲಿ ಸೋಲುವವರೂ ಸಂಸಾರವನ್ನು ಲೆಕ್ಕಾಚಾರದಲಿ ನಡೆಸುವವರು ನಾವು ಮನೆ ಒಳಗೆ ಮಹಾಭಾರತವೇ ನಡೆಯುತ್ತಿದ್ದರೂ ಮಂದಿ ಎದುರು ಮುಗುಳ್ನಗುವವರು ನಾವು ದೇಶ ದೇಶಾಂತರದ ರಾಜಕಾರಣಕ್ಕೂ ಮೊದಲು ಮನೆಮಂದಿಗಾಗಿ ಹೋರಾಡುವವರು ಬಡಿದಾಡುವವರು ನಾವು ದುಃಖವೆಷ್ಟೇ ಇದ್ದರೂ ತುಟಿಯ ರಂಗು ಕಣ್ಣಿನ ಕಾಡಿಗೆ ಕಡಿಮೆ ಆಗದಂತೆ ನೋಡಿಕೊಳ್ಳುವವರು ನಾವು ನಾವೇ ಶ್ರೇಷ್ಠವೆಂಬ ಹೆಮ್ಮೆ ನಮಗೆಂದಿಗೂ ಇಲ್ಲ ಆದರೂ ಹೆಣ್ತನದ ಸಂಭ್ರಮ ಅಷ್ಟು ಸುಲಭಕ್ಕೆ ದಕ್ಕುವಂತಹದ್ದಲ್ಲ ಹೌದು ಖಂಡಿತಾ ನಾವು ನಿಮ್ಮ ಹಾಗಲ್ಲ ********

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಬೆಳಕಿನ ರಂಗೋಲಿ ಅಂಜನಾ ಹೆಗಡೆ ಏಳಯ್ಯ ಹನುಮಂತ ಎಷ್ಟು ನಿದ್ರೆ…. ಬಚ್ಚಲೊಲೆಯ ಮಸಿಬೂದಿ ಟೂತ್ ಪೌಡರ್ ಆಗಿ ಹೊಳೆವ ಹಲ್ಲು ಕೊರಳಗುಂಟ ಸುತ್ತಿಕೊಂಡ ಲಕ್ಷ್ಮಿತಾಳಿ ಸೆರಗೊಳಗೆ ಸೇರಿಸುತ್ತಾ ದೇವರನ್ನೆಬ್ಬಿಸುತ್ತಾಳೆ ಅಜ್ಜಿ ಅವಳ ಗಂಟಲು ನಡುಗುವುದಿಲ್ಲ ಹೂ ಬಿಡಿಸುತ್ತಿದ್ದಾಳೆ ಅಮ್ಮ ಒಲೆಯ ಮೇಲೆ ಕುದಿವ ನೀರಿನ ಶಾಖ ಅವಳ ಎದೆಗೆ ಇಳಿಯುವುದಿಲ್ಲ ಜೀನ್ಸ್ ಪ್ಯಾಂಟ್ ಸರಿಪಡಿಸುತ್ತ ಮೊಮ್ಮಗಳು ಬಣ್ಣದ ರಂಗೋಲಿ ಬಿಡಿಸುತ್ತಿದ್ದಾಳೆ ಅವಳ ನಗು ಮಾಸುವುದಿಲ್ಲ ಮಾರುತಿ ಮಂದಿರದ ಎದುರು ಕೈ ಮುಗಿದು ನಿಂತವಳ ಕೆಂಪು ನೈಲ್ ಪೋಲಿಶ್ ಹೊಳೆಯುತ್ತಿದೆ ಕಣ್ಣುಮುಚ್ಚಿ ಪ್ರಸಾದಕ್ಕೆ ಕೈಚಾಚಿದ್ದಾಳೆ ನವಗ್ರಹಗಳ ಸುತ್ತುವ ನುಣುಪಾದ ಪಾದಗಳು ಹೈ ಹೀಲ್ಸ್ ಮರೆತಿವೆ “ಚಪ್ಪಲಿಗಳನ್ನು ಸ್ಟ್ಯಾಂಡ್ನಲ್ಲಿಯೇ ಬಿಡಿ” ಚಪ್ಪಲಿರಾಶಿಯ ಮಧ್ಯದಲ್ಲಿ ಚಿಲ್ಲರೆ ಎಣಿಸುವವ ತಣ್ಣಗೆ ಕುಳಿತಿದ್ದಾನೆ…. ಜಗವ ಕಾಯುವ ಗತ್ತಿನಲ್ಲಿ ರಾತ್ರಿಪಾಳಿಯ ಕೆಲಸ ಮುಗಿಸಿ ಮೇಕಪ್ ಅಳಿಸುತ್ತ ಅವಳು ಮೆಲ್ಲಗೆ ಗುನುಗುತ್ತಾಳೆ…. ಮೆರೋ ಮನ ರಾಮ ಹೀ ರಾಮ ರಟೆ ಪಕ್ಕ ಕೂತು ಕೀಬೋರ್ಡ್ ಮೇಲೆ ಕೈಯಾಡಿಸುವವ ನೆನಪಾಗಿ ಬಂದು ತಲೆ ಸವರಿದ್ದಾನೆ ಕನಸಿನ ರಂಗೋಲಿ…. ಕೆನ್ನೆಮೇಲೊಂದು ಕರುಳಿನೊಳಗೊಂದು ಬಣ್ಣಬಣ್ಣದ ಎಳೆ ಏಳು ರಾಮನ ಬಂಟ ಬೆಳಗಾಯಿತು…. *****

ಮಹಿಳಾದಿನದ ವಿಶೇಷ Read Post »

You cannot copy content of this page

Scroll to Top