ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗೆಳತಿ ನಕ್ಕುಬಿಡು ಮೂಗಪ್ಪ ಗಾಳೇರ ನಾನು ನೋಡಿದ ಹುಡುಗಿಯರೆಲ್ಲಾ….. ಪ್ರೇಯಸಿಯರಾಗಿದ್ದರೆ ನಾನು ಗೀಚಿದ ಸಾಲುಗಳೆಲ್ಲಾ ಕವಿತೆಗಳಾಗಬೇಕಿತ್ತಲ್ಲ! ದಡ್ಡಿ….. ನಿನಗಿನ್ನೂ ಹಗಲು ಮತ್ತು ರಾತ್ರಿಯ ವ್ಯತ್ಯಾಸ ಗೊತ್ತಿದ್ದಂತೆ ಕಾಣುತ್ತಿಲ್ಲ! ಕತ್ತಲನ್ನು ನುಂಗಿ ಬೆಳಕಾಯಿತೋ…! ಬೆಳಕನ್ನು ನುಂಗಿ ಕತ್ತಲಾಯಿತೋ…! ನೀನು ನನ್ನ ಜೊತೆ ಇಟ್ಟ ಒಂದೊಂದು ಹೆಜ್ಜೆಯೂ ಹಳೆ ಸಿನಿಮಾದ ಹಾಡುಗಳಂತೆ ನನ್ನೆದೆಯಲ್ಲಿ ಯಾವಾಗಲೂ ಗುನುಗುತ್ತಿರುತ್ತವೆ ಒಮ್ಮೊಮ್ಮೆ ಎದೆಭಾರ ಆದಾಗ ಕವಿತೆಯ ಸಾಲು ಬೇರೆಯಾಗಬಹುದು ಕವಿತೆ ಮಾತ್ರ ಎಂದೆಂದೂ ನೀನೆ ಒಂದೊಮ್ಮೆ ನನ್ನ ಕವಿತೆಯ ಸಾಲುಗಳನ್ನು ಯಾರೋ ಓದುತ್ತಿದ್ದಾರೆಂದರೆ ಅದು ನಮ್ಮಿಬ್ಬರ ನಡುವಿನ ಪ್ರೀತಿಯ ಪಲ್ಲವಟವೆಂದೆ ಕರೆಯಬಹುದು ಹಾಗೆ ಪಲ್ಲಟ ವಾದ ಈ ಪ್ರೀತಿಗೆ ಯಾವ ಪ್ರೇಮಿಗಳು ಸಾಟಿ ಹೇಳು ಗೆಳತಿ ಒಮ್ಮೆ ನಕ್ಕು ಬಿಡು ಮಲ್ಲಿಗೆಯ ದಳದಲ್ಲಿಯೂ ನಿನ್ನ ಮನಸ್ಸಿನ ಯವ್ವನವ ಗೀಚಿರುವೆ ಕಡಲ ಮುತ್ತಿನಲ್ಲಿಯೂ ಪ್ರೀತಿಯ ಒಡಲ ಕಟ್ಟಿರುವೆ| ************************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ದೇವರ ದೇವ ಅಂಜನಾ ಹೆಗಡೆ ಕಾಲ ಎಲ್ಲವನ್ನೂ ಮರೆಸುತ್ತದೆ ಎಂದವ ಕಾಲಕ್ಕೆ ಕಿವುಡಾಗಿ ಕಣ್ಣುಮುಚ್ಚಿ ಉಟ್ಟಬಟ್ಟೆಯಲ್ಲೇ ಧ್ಯಾನಕ್ಕೆ ಕುಳಿತಿದ್ದಾನೆ ತಂಬೂರಿ ಹಿಡಿದು ತಂತಿಗಳ ಮೇಲೆ ಬೆರಳಾಡಿಸುತ್ತ ಶ್ರುತಿ ಹಿಡಿಯುತ್ತಾನೆ ಬೆರಳಲ್ಲಿ ಹುಟ್ಟಿದ ಬೆಳಕಿನ ಕಿರಣವೊಂದು ನರಗಳಗುಂಟ ಹರಿದು ಬೆಂಕಿಯಾಗಿ ಮೈಗೇರಿದೆ ಉಸಿರೆಳೆದುಕೊಳ್ಳುತ್ತಾನೆ ದೇವರ ಗೆಟಪ್ಪಿನಲ್ಲಿ ಕಾಲಮೇಲೆ ಕೈಯೂರಿದ್ದಾನೆ ಕಪ್ಪು ಫ್ರೆಮಿನ ದಪ್ಪಗಾಜಿನ ಕನ್ನಡಕ ರೂಪಕವಾಗಿ ಮುಚ್ಚಿದ ಕಿವಿಯ ಮೇಲೆ ಬೆಚ್ಚಗೆ ಕೂತಿದೆ ಕೈಗೆ ಸಿಗದ ಕಣ್ಣಿಗೆ ಕಾಣಿಸದ ಶಬ್ದ ಹಿಡಿಯಲು ಕುಳಿತವನ ಮೈಯೆಲ್ಲ ಕಣ್ಣು…. ಮುಚ್ಚಿದ ಕಣ್ಣೊಳಗೊಂದು ರಾಗ ತೆರೆದರೆ ಇನ್ಯಾವುದೋ ತಾಳ ಮೈಮರೆಯುತ್ತಾನೆ ರೆಪ್ಪೆಗೊತ್ತಿದ ತುಟಿಗಳನ್ನು ಧಿಕ್ಕರಿಸಿದವನ ಹಣೆಮೇಲಿಂದ ಬೆವರಹನಿಯೊಂದು ಲಯತಪ್ಪದಂತೆ ಮುತ್ತಾಗಿ ತುಟಿಗಿಳಿದಿದೆ ಕಾಲವನ್ನೇ ಮರೆಯುತ್ತಾನೆ ಕಾಲವನ್ನು ಮರೆಸುವವ ಕಳಚಿಕೊಂಡ ಕಣ್ಣರೆಪ್ಪೆಯೊಂದು ಧ್ಯಾನ ಮರೆತಿದೆ ********************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಷರಾ ಬರೆಯದ ಕವಿತೆ ಡಾ.ಗೋವಿಂದ ಹೆಗಡೆ ಇಂದು ಅವ ತೀರಿದನಂತೆ ತುಂಬ ದಿನಗಳಿಂದ ಅವ ಬದುಕಿದ್ದೇ ಗೊತ್ತಿರಲಿಲ್ಲ ಒಂದು ಕಾಲದಲ್ಲಿ ನೆಲ ನಡುಗಿಸುವ ಹೆಜ್ಜೆಯ ಭಾರಿ ಮೀಸೆಯ ಹುಲಿ ಕಣ್ಣುಗಳ ಅವ ನಡೆಯುತ್ತಿದ್ದರೆ ನನಗೆ ಮಂಚದ ಕೆಳಗೆ ಅವಿತು ಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ ಆಗ ಕವಿತೆ ಕನಸಲ್ಲೂ ಸುಳಿಯುತ್ತಿರಲಿಲ್ಲ ಮತ್ತೆ ಯಾವಾಗಲೋ “ಅವನಾ? ತುಂಬಾ ಕುಡೀತಾನೆ ರೈಲಿನ ಎಂಜಿನ್ ಹಾಗೆ ಸದಾ ಹೊಗೆ ಬಿಡ್ತಾನೆ” ಹೊಟ್ಟೆ ಊದಿ ಕಣ್ಣು ಹಳದಿಗೆ ತಿರುಗಿ ಲಿವರ್ ಫೇಲ್ಯೂರ್ ನ ದಯನೀಯ ಪ್ರತಿಮೆ ಆಗಲೂ ಹೆಂಡತಿಗೆ ಹೊಡೆಯುತ್ತಿದ್ದ ಭೂಪ ಅವನ ಸೇವೆಗೆಂದೇ ಹುಟ್ಟಿದಂತಿದ್ದ ಅವಳ ಕಣ್ಣುಗಳಲ್ಲಿ ಸದಾ ಉರಿಯುತ್ತಿದ್ದ ಶೂನ್ಯ ಅವು ನಗುತ್ತಲೇ ಇರಲಿಲ್ಲ ಮನುಷ್ಯ ಯಾವಾಗ ಸಾಯಲು ಆರಂಭಿಸ್ತಾನೆ ಕವಿತೆ ಹೇಳುವುದಿಲ್ಲ ಇಂದು ಬರೆಯಹೊರಟರೆ ಬರೀ ಅಡ್ಡ ಉದ್ದ ಗೀಟು ಗೋಜಲು ಷರಾ ಬರೆದರೆ ಬದುಕಿಗೆ ಕವಿತೆಯಾಗುವುದಿಲ್ಲ ಸಾವು ಉಳಿಸುವ ಖಾಲಿತನ ಯಾವ ಷರಾಕ್ಕೂ ದಕ್ಕುವುದಿಲ್ಲ *****************

ಕಾವ್ಯಯಾನ Read Post »

ಇತರೆ

ಲಂಕೇಶರನ್ನು ಏಕೆ ಓದಬೇಕು?

ನಾನೇಕೆ ಲಂಕೇಶರನ್ನು ಓದುತ್ತೇನೆ ಬ ಬಸವರಾಜ ಕಹಳೆ ನೀಲವ್ವ ಓದಿದಷ್ಟು ವಿಸ್ತಾರ ಜನಸಾಮಾನ್ಯನ ಮೂಕ ಅಳಲಿನಲ್ಲಿ ಸಾಮ್ರಾಜ್ಯಗಳ ಬೀಳಿಸುವ ತಪಃಶಕ್ತಿ ಇದೆ ತಿಣುಕಾಡಿ ಬರೆದ ಕಗ್ಗಾವ್ಯಗಳ ಮಧ್ಯೆ ಮುದ್ದೆ ಮುರಿದಷ್ಟು ಸಲೀಸಾಗಿ ಓದಿಸಿಕೊಂಡು, ಕೆಲ ಕ್ಷಣಗಳಲ್ಲೇ ಮಿಂಚುವ ಮಿಂಚು ಹುಳುವಿನಂತಹ ಜೀವನದ ಹೊಳವುಗಳಿಗಾಗಿ ರಾವಣ ಪ್ರತಿಭೆಯನ್ನು ಓದಬೇಕು. ಈ ನೀಲಿ ಒಮ್ಮೊಮ್ಮೆ ಹುಳಿಮಾವಿನಮರದಂತೆಯೇ ಬಯಕೆ ಹುಟ್ಟಿಸುವ ಪ್ರೇಯಸಿ. ಆಲದಮರದಂತೆಯೇ ದಾರಿ ತೋರುವ ಗೆಳತಿ. ಥಟ್ಟನೆ ಇಷ್ಟವಾಗಿಬಿಡಬಲ್ಲ ಪಕ್ಕದ ಮನೆ ಹುಡುಗಿ. ಬದುಕುವ ಆಸೆಯಿಲ್ಲದವನಿಗೆ ಜೀವನೋತ್ಸಾಹವನ್ನು ತುಂಬುವಂತವಳು. ಆಗಸದ ಕೆನ್ನೆಯನ್ನು ರಮ್ಯತೆಯಿಂದ ಚಿವುಟಿದ ಸಿಹಿ ಗುರುತಿನಂತೆ ಕಾಣುವ ನೀಲಿ ಸಾಲು. ಆದಿ ಅನಂತವನ್ನೂ ಹೇಳುವ ನೀಲು ಕಾಳಿ ಮಾರಿ ಮಸಣಿಯಂತೆಯೂ ಕಾಣುತ್ತಾಳೆ. ಈ ಬನದ ಕರಡಿ ಭಗವದ್ಗೀತೆಯನ್ನೂ ಹೇಳುತ್ತಾಳೆ. ಅವುಡುಗಚ್ಚಿದ ಸಾವಿತ್ರಿ, ಜಾನಕಿ, ಊರ್ಮಿಳೆ ಮಂಡೋದರಿ, ಪಂಚಾಲಿಯ ಅರೆಗನಸ್ಸನ್ನೂ ಗಟ್ಟಿಯಾಗಿ ಹೇಳುತ್ತಾಳೆ. ಇವಳ ಆತ್ಮವಿಶ್ವಾಸ ಸೃಷ್ಟಿಸಿದ ಬ್ರಹ್ಮನಿಗೂ ಇತ್ತೋ ಇಲ್ಲವೋ? ಅವ್ವ ಕವನದ  ಸುಟ್ಟಷ್ಟು ಕಸುವು ಅನ್ನೋ ಸಾಲಿನ ಹಾಗೆ ನೀಲು ಪದ್ಯ ಓದಿದಷ್ಟು ವಿಸ್ತಾರವಾಗಿ ಕಾಣುತ್ತದೆ. ನನ್ನ ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ ಈ ಸಾಲಿನಲ್ಲಿ ಬಹುಪಾಲು ಹಳ್ಳಿಗ ಮಕ್ಕಳು ತಮ್ಮ ತಾಯಂದಿರನ್ನು ಕಾಣುತ್ತಾರೆ. ನನ್ನವ್ವ ಫಲವತ್ತಾದ ಕಪ್ಪು ನೆಲ ಅನ್ನೋ ಸಾಲು, ನನ್ನ ಪಾಲಿಗೆ ಲಂಕೇಶರೇ ಜಗದ್ಗುರುವನ್ನಾಗಿ ಮಾಡಿದೆ. ಕಲಿಸಿದ ಗುರುವನ್ನೂ ಝಾಡಿಸೋ ಮನುಷ್ಯ ನಿಂತ ನೀರಲ್ಲ ಅನ್ನೋದು ರುಜುವಾತು ನೀಡುತ್ತದೆ. ಕವಿ ಅಡಿಗರ ಅರ್ಥ ಭೂತದಲ್ಲಿ ಅಡಗಿ ತಿಳಿಯದೆ ತೊಡೆಯ ನಡುವೆ ನಗುತ್ತಿದ್ದಳು ಹುಡುಗಿ ಒಂದು ವೈಜ್ಞಾನಿಕ ಸತ್ಯದಷ್ಟೇ ಖಚಿತವಾಗಿ ನಿಜವನ್ನು ಹೇಳದಿದ್ದರೆ ಕವಿ ಬರೆಯುವುದನ್ನು ನಿಲ್ಲಿಸಬೇಕು ಅನ್ನುವಂತಹ ವಾದ ಕವಿಯಾಗಿ ಗುರು ಲಂಕೇಶರಲ್ಲಿತ್ತು. ಒಬ್ಬ ಓದುಗನನ್ನು ಬೆಚ್ಚಿ ಬೀಳಿಸದ ಬರಹ ಬರಹವೇ ಅಲ್ಲ ಅಂತ್ಲೂ ನಂಬಿದ್ದರು ಮೇಷ್ಟ್ರು. ಹಾಗಾಗಿಯೇ ಮೇಷ್ಟ್ರು ಇಷ್ಟವಾಗುತ್ತಾರೆ. ಹೊಗಳಿಕೆಯ ಹೊನ್ನಶೂಲಕ್ಕೇರುತ್ತಿದ್ದ ಮಲ್ಲಿಗೆ ಜುಟ್ಟಿಡಿದು ಎಳೆದಿದ್ದು ನನಗೆ ರಾವಣ ತೃಪ್ತಿಯಷ್ಟೇ ಖುಷಿಯನ್ನು ಈ ಕ್ಷಣಕ್ಕೂ ನನಗೆ ನೀಡುತ್ತದೆ. ನನ್ನ ಹಸಿದ ಹಲ್ಲಿಗೆ ಇವಳ ಮೈಸೂರು ಮಲ್ಲಿಗೆ ಇದು ನನಗೆ ಅಣಕದಂತೆ ಕಾಣೋದಿಲ್ಲ. ಇದೂ ಸಹ ಪಂಪನೊಣಗಿಸದಷ್ಟೇ.. ಹಾಳೆ ಪವಿತ್ರವಲ್ಲ.. ಅಕ್ಷರ ಪವಿತ್ರ ಕೃಷ್ಣ, ಕೃಷ್ಣೆಯರಂತೆ ಕರಿಯ, ಕಾಳಿಯರತ್ತ ನಮ್ಮ ಗಮನ, ನಮ್ಮ ಶ್ರದ್ಧೆ ಹರಿಯಬೇಕಾಗಿದೆ. ಇದನ್ನು ಹಟದಿಂದ ಮತ್ತು ಪ್ರೀತಿಯಿಂದ, ಧೈರ್ಯದಿಂದ ಮತ್ತು ವಿನಯದಿಂದ ಸಾಧಿಸಬೇಕಾಗಿದೆ. ಈ ಸಂಕೇತ ಮತ್ತು ವಾಸ್ತವತೆಯ ಸಂದರ್ಭದಲ್ಲೇ ನಮ್ಮ `ಪಾಂಚಾಲಿ ಮತ್ತು `ಒಕ್ಕೂಟದ ಅಸ್ತಿತ್ವ ಇದೆ. 46 ವರ್ಷಗಳ ಹಿಂದೆ ಪಾಂಚಾಲಿ ವಿಶೇಷಾಂಕ ಸಂಚಿಕೆಯ ಮುನ್ನಡಿಯಲ್ಲಿ ಬರೆದ ಸಾಲುಗಳಿವು. 46 ವರ್ಷಗಳ ಹಿಂದಿನ ಸಾಲಿನಲ್ಲೂ ದೇಶದ ಸದ್ಯದ ಸ್ಥಿತಿಯ ಭ್ರೂಣವೊಂದು ಇನ್ನೂ ಅಲುಗಾಡುತ್ತಿದೆಯೇನೋ ಅನಿಸುತ್ತದೆ. ಈ ಕ್ಷಣಕ್ಕೂ ಅವರ ಅಕ್ಷರಗಳು ಪಾವಿತ್ರ್ಯತೆಯಿಂದ ಉಳಿದಿವೆ ಅಂದ್ರೆ ಅದಕ್ಕೆ ಕಾರಣ ಲಂಕೇಶ್ ಅನ್ನೋ ನೈತಿಕ ಎಚ್ಚರ ಹಾಗೂ ಸಾಕ್ಷಿ ಪ್ರಜ್ಞೆ.  ಇನ್ನೂ ಇನ್ನೂ ಹಲವು ತಲೆಮಾರುಗಳನ್ನ ನಿರಂತರ ಕಾಡುವ ತಳಮಳ. ಕನ್ನಡದ ಎಲ್ಲ ಆಯಾಮಗಳಿಗೆ ಹೊಸತನದ ಹಿಗ್ಗು ತಂದ ಸಂಕ್ರಾಂತಿ. ಸಾಹಿತ್ಯದಿಂದ ರಾಜಕೀಯದವರೆಗೆ ಎಲ್ಲವುಗಳಲ್ಲೂ ವಿಜೃಂಭಿಸಿದ ರಾವಣ ಪ್ರತಿಭೆ. ಹುಳಿಮಾವಿನ ಮರವಲ್ಲ.. ಆಲದಮರ ವಿಶಿಷ್ಟ ಬರಹಗಾರ ಭ್ರಷ್ಟನಲ್ಲದ ರಾಜಕಾರಣಿ ಅತಿಸಹಜ ನಟ ನೆನಪಿನಲ್ಲುಳಿವ ನಾಟಕಕಾರ ಹರಿತ ಮಾತಿನ ವಿಮರ್ಶಕ ವಿಭಿನ್ನ ನಿರ್ದೇಶಕ ಮುಲಾಜಿಗೆ ಒಳಗಾಗದ ಪತ್ರಕರ್ತ ಧರ್ಮದ ಸೋಂಕಿಲ್ಲದ ದಾರ್ಶನಿಕ ಇಷ್ಟು ವಿಭಿನ್ನ ಆಯಾಮಗಳನ್ನ ಹೊಂದಿರುವ ದೊಡ್ಡ ಆಲದ ಮರ ಪಿ. ಲಂಕೇಶ್. ಆದ್ರೆ ತಮ್ಮನ್ನವ್ರು ಕರೆದುಕೊಂಡಿದ್ದು ಹುಳಿಮಾವಿನ ಮರ ಅಂತ. ಯಾಕಂದ್ರೆ ಅವ್ರೊಂಥರಾ ಹುಳಿ, ಸಿಹಿ, ಒಗರಿನ ಮಿಶ್ರಣ. ಅದು ನಿಜಕ್ಕೂ ಇಷ್ಟವಾಗುತ್ತದೆ. ಯಾಕಂದ್ರೆ ಅವರ ಕಾವ್ಯ, ಕಥೆ, ಕಾದಂಬರಿ, ನಾಟಕ, ವಿಮರ್ಶೆ ಯಾವುದೇ ಆಗಿರಲಿ ಅಲ್ಲಿ ಕಾಣಿಸೋದು ತುಂಬು ಜೀವನಪ್ರೀತಿ ಮತ್ತು ಮನುಷ್ಯ ಸಹಜ ಭಾವಗಳು. ಸೃಜನಶೀಲನೊಬ್ಬನ ಬರೆಯಲೇಬೇಕಾದ ಒತ್ತಡದಲ್ಲಿ ಹುಟ್ಟಿದ ಕನಸಿನ (ಅಸಲಿ) ಕೂಸು ಇವತ್ತಿಗೂ ಖುಷಿಯಿಂದ ಓದಿಸಿಕೊಳ್ಳುತ್ತದೆ. ಲಂಕೇಶ್ ಪತ್ರಿಕೆ ಅನ್ನೋ ಆಲದ ಮರದ ಕೆಳಗೆ ಓದಿದ ಜಾಣೆಯರ ಸಾಲಿನಲ್ಲಿ ನಾನು ಇದ್ದೀನಿ ಅನ್ನೋದು ಸಂತಸದ ಸಂಗತಿ. ಇದೇ ಪತ್ರಿಕೆಯ ಆಲದ ಮರಲ್ಲಿ ಅದೆಷ್ಟೋ ಹಕ್ಕಿಗಳು ಗೂಡು ಕಟ್ಟಿವೆ. ಅದೆಷ್ಟೋ ಮಂದಿ ತಮ್ಮ ವ್ಯಕ್ತಿತ್ವಗಳನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಅದೆಷ್ಟೋ ಆಶಯಗಳಿಗೆ, ಬರಹಗಾರರಿಗೆ ವೇದಿಕೆಯಾಗಿದೆ. ಹೋರಾಟಗಳ ಪ್ರಣಾಳಿಕೆಯಾಗಿದೆ. ಈ ಪೈಕಿ ನನ್ನಲ್ಲೂ ಓದುವ ತುಡಿತವನ್ನು ಮೇಷ್ಟ್ರ ಬರಹ ತಾಯಿ ಎದೆಹಾಲಿನಂತೆಯೇ ಆಕರ್ಷಿಸುತ್ತದೆ. ಲಂಕೇಶ್ ಮೇಷ್ಟ್ರು ಯಾಕಿಷ್ಟವಾಗುತ್ತಾರೆ ಅಂತ ಹೇಳುತ್ತಾ ಹೋದ್ರೆ ಇದೊಂದು ಎಂದಿಗೂ ಮುಗಿಯದ ಕವಿತೆಯಂತದ್ದು. ಅವರು ಅವರ ಬರಹ ಸಮಸ್ತರನ್ನೂ ಸರ್ವಕಾಲಕ್ಕೂ ನಿರಂತರ ಕಾಡುವ ನೆನಪು. ನನಗೆ ಮೇಷ್ಟ್ರು ಎಷ್ಟು ಇಷ್ಟ ಅಂದ್ರೆ ನನ್ನ ಬ್ಲಾಗ್ ಹೆಸರೇ ಗುರು ಲಂಕೇಶ್. ********

ಲಂಕೇಶರನ್ನು ಏಕೆ ಓದಬೇಕು? Read Post »

ಅನುವಾದ

ಅನುವಾದ ಸಂಗಾತಿ

ಎರಡನೆಯ ಅವತಾರ ಮೂಲ:ವಿಲಿಯಂ ಬಟ್ಲರ್ ಯೇಟ್ಸ್(ಇಗ್ಲೀಷ್) ಕನ್ನಡಕ್ಕೆ: ಕಮಲಾಕರ ಕಡವೆ ಎರಡನೆಯ ಅವತಾರ ತಿರುತಿರು ತಿರುಗುತ್ತ ವೃದ್ಧಿಸುವ ವರ್ತುಲಗಳಲ್ಲಿ ಭ್ರಮಿಸುತ್ತಡೇಗೆಗಾರನ ಕರೆಯ ಕೇಳಲಾರದು ಡೇಗೆಎಲ್ಲವೂ ಕುಸಿಯುತಿರಲು, ಕೇಂದ್ರಕಿಲ್ಲವೊ ಅಂಕೆಬರಿಯೆ ಅರಾಜಕತೆ ಆವರಿಸಿದೆ ಜಗದಗಲಮಸುಕುರಕ್ತದ ಉಬ್ಬರದಬ್ಬರ ಹಬ್ಬಲು, ಎಲ್ಲೆಡೆಮುಗ್ಧ ವೃತಾಚರಣೆ ಮುಳುಗಿ ಮರೆಯಾಗಿದೆ;ದಕ್ಷರೊಳಗಿಲ್ಲ ಒಂದಿನಿತೂ ನಂಬಿಕೆ, ಅದಕ್ಷರಲೋಉತ್ಕಟ ಉದ್ರೇಕವೇ ತುಂಬಿಕೊಂಡಿದೆ ದಿವ್ಯದರ್ಶನವೊಂದೇನೋ ಖಂಡಿತ ಬಳಿಸಾರಿದೆಎರಡನೆಯ ಅವತಾರ ಖಂಡಿತ ಬಳಿಸಾರಿದೆಎರಡನೆಯ ಅವತಾರವೆಂದೊಡನೆಯೇವಿಶ್ವಚೇತನವೊಂದರ ವಿಶಾಲ ಆಕಾರಕಾಡುವುದು ನನ್ನ ದೃಷ್ಟಿಯನ್ನು: ಬೀಳು ಬೆಂಗಾಡು;ಸುಡುಸೂರ್ಯನ ನಿಷ್ಕರುಣ ಮತ್ತು ಬೋಳು ನೋಟಹೊತ್ತ ನರಸಿಂಹ ರೂಪವೊಂದುಹಗುರ ಹೆಜ್ಜೆ ಹಾಕಿದೆ, ಅದರ ಸುತ್ತಲೂ ನೆರೆದಿವೆಮರುಭೂಮಿಯ ಕುಪಿತ ಪಕ್ಷಿಗಳ ನೆರಳುಗಳು. ಕತ್ತಲು ಕವಿಯುತ್ತಿದೆ ಮತ್ತೆ, ಆದರೂ ನಾ ಬಲ್ಲೆಇಪ್ಪತ್ತು ಶತಮಾನಗಳ ಕಲ್ಲಿನಂತ ನಿದ್ದೆಕದಲಿದೆ ದುಃಸ್ವಪ್ನವಾಗಿ ತೊಟ್ಟಿಲು ತೂಗಿದಂತೆ,ಯಾವ ಒರಟು ಪಶು ತನ್ನ ಕಾಲ ಸನ್ನಿಹಿತವಾದಂತೆಬೆಥ್ಲೆಹೆಮ್ಮಿನೆಡೆ ಮರುಹುಟ್ಟಿಗಾಗಿ ಹೆಜ್ಜೆ ಹಾಕಿದೆ? ********

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಹೀಗೊಂದುಕವಿತೆ ವಿಜಯಶ್ರೀ ಹಾಲಾಡಿ ನರಳುತ್ತಿರುವ ಬೀದಿನಾಯಿಯಮುಗ್ಧ ಆತ್ಮಕ್ಕೂಅದ ಕಂಡೂ ಕಾಣದಂತಿರುವನನ್ನ ದರಿದ್ರ ಆತ್ಮಕ್ಕೂಅಗಾಧ ವ್ಯತ್ಯಾಸವಿದೆ ! ಮಗುವಿಗೆ ಉಣಿಸು ಕೊಡುವನನ್ನ ಕೈಗಳೇಬೀದಿ ನಾಯಿಮರಿನಿಮ್ಮ ಮಗುವಲ್ಲವೇ? ? ತಿನಿಸು ಉಡುಪು ದುಡ್ಡುಖುಷಿ ನಗು ಗಿಗುಎಲ್ಲ ನಿನಗೇ ಎಂದುಭಾವಿಸುವ ಮೂರ್ಖ ವಿಜೀಅನ್ನವಿಲ್ಲದ ನೆಲೆಯಿಲ್ಲದಆ ಮೂಕಪ್ರಾಣಿಗಳಿಗೇನುಉತ್ತರಿಸುವೆ? ಯಾರೋ ಹೊಡೆದರುಮರಿನಾಯಿ ಅತ್ತಿತುತಾಯಿ ಜೀವಅದೆಷ್ಟನೆ ಸಲವೋಸತ್ತಿತು! !*****************************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಶಶಿಕಾಂತೆ ನೀನು ಮುಗ್ದೆ,ಅಮಾಯಕಿ,ಮೋಸ ಮಾಡಲಾರೆ ನಿನಗೆ ಎಂದನವಳಿಗವನು ಸಾಕಿ.. ಮೋಸ ಮಾಡಿದರೆ ದೇವರೊಳಿತು ಮಾಡೋಲ್ಲ ಎಂದು ನಂಬಿಸಿದನು ಸಾಕಿ.. ನನ್ನ ಸ್ವಂತ ನೀನು,ನಿನ್ನ ಸ್ವಂತ ನಾನು ಎಂದು ಪ್ರೀತಿಮಳೆಗರೆದಾಗ ಸೋತಳು. ಪ್ರೀತಿಯನ್ನೇ ಕಾಣದ ಹೆಣ್ಣೊಂದು ನಂಬದಿರಲು ಸಾಧ್ಯವೇ ಅಂತಹವನನು ಸಾಕಿ.. ದೇವತೆ ಅವಳು ಕೇಳಿದ ವರ ಕೊಡುವಳು ತನ್ನನ್ನು ಪ್ರೀತಿಸುವವರಿಗೆ. ಉಪಯೋಗ ಪಡೆದು ಮರೆಯಾದ ಕಣ್ಣಿಂದ ಬಹಳದೂರ ಮನೆಹಾಳನವನು ಸಾಕಿ. ಫಕೀರ,ಸಂತನೆಂದರೆ ತಾನೇ ಎಂಬ ಮಾತಿಗೆ ಜನ ಮರುಳಾದರು ತಿಳುವಳಿಕೆಯಿಲ್ಲದವರು ಅವಳಂತೆ.. ಅವನ ಆಟ ನೋಡುತಾ,ಅವನಿಗೇ ಕಿರೀಟ ತೊಡಿಸುತಾ ಇದ್ದಾರೆ ಜನ, ದೇವರಿದ್ದಾನೇನು ಸಾಕಿ.. ಆ ಶಶಿಯೊಬ್ಬನೇ ಅವಳ ಗೆಳೆಯ ಅವಳ ನಗಿಸಲು ಸದಾ ನಗುಮೊಗ ತೋರುತಿರುವ. ಅಲ್ಲಾನೋ,ಏಸುವೋ,ರಾಮನೋ ದೇವರಿಗೆ ಅವಳ ಕೊರಗು,ಕಣ್ಣೀರು ಕಾಣದಾಯ್ತೇನು ಸಾಕಿ.. ******

ಕಾವ್ಯಯಾನ Read Post »

ಇತರೆ

ಲಂಕೇಶರನ್ನು ಏಕೆ ಓದಬೇಕು?

ನಾನೇಕೆ ಲಂಕೇಶರನ್ನು ಓದುತ್ತೇನೆ ಧನಂಜಯ್ ಎನ್ ಲಂಕೇಶರೇ ನಾನೇಕೆ ನಿಮ್ಮನ್ನು ಓದುತ್ತೇನೆ..? ಈ ರೀತಿಯ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡರೂ ಅಂತಹ ಆಶ್ಚರ್ಯವೇನೂ ಇಲ್ಲ. ತೇಜಸ್ವಿಯಿಂದ ಶುರುವಾದ ನನ್ನ ಮೊದಲ ಓದು ಕುವೆಂಪು , ಕಾರಂತರನ್ನು ಬಳಸಿ, ಭೈರಪ್ಪನವರ ತನಕವೂ ಬಂದು ನಿಂತಿತ್ತು. ಇವರೆಲ್ಲರ ಮಧ್ಯೆ ನಿಮ್ಮ ಹೆಸರು ಹಾಗೊಮ್ಮೆ ಹೀಗೊಮ್ಮೆ ಬಂದು ಹೋಗಿತ್ತಾದರೂ, ಹಲವು ಟೀಕೆ ಟಿಪ್ಪಣಿಗಳ ನಡುವೆ ‘ ನೋಡಿಕೊಂಡರಾಯಿತು ಎಂದು ಸುಮ್ಮನಿದ್ದುಬಿಡುತ್ತಿದ್ದೆ. ಭೈರಪ್ಪನವರ ” ಕವಲು ” ಕಾದಂಬರಿ ಓದಿದ ತರುವಾಯ, ಕನಿಷ್ಠ 20 ರಿಂದ 30 ದಿನಗಳ ವರೆಗಾದರೂ ಯಾವ ಹೆಂಗಸರನ್ನು ಕಂಡರೂ ಹೆದರುತ್ತಿದ್ದೆ, ಹೆಂಗಸರಿಗಿರುವ ಅವಕಾಶಗಳೆಲ್ಲಾ ಗಂಡಸರನ್ನು ತುಳಿಯಲೆಂದೇ ಇರುವ ಅಸ್ತ್ರಗಳು ಎಂದು ನಂಬಿಕೊಂಡು ಬೇರೆ ದಾರಿ ಇಲ್ಲದೆ, ಗಂಡೆಂಬ ದರ್ಪವನ್ನು ಹೇಗಾದರೂ ಪ್ರದರ್ಶನ ಮಾಡಬೇಕು ಎಂದು ಹಠ ತೊಟ್ಟಿದ್ದೆ. ನಮ್ಮ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಅನ್ನಭಾಗ್ಯ ಯೋಜನೆ ತಂದಾಗ , ” ಬಡವರಿಗೆ ಅನ್ನ ಕೊಟ್ಟು ಸೋಂಬೇರಿಗಳನ್ನಾಗಿ ಮಾಡುತ್ತಿದ್ದೀರಿ ” ಎಂದು ಹೇಳಿಕೆ ಕೊಟ್ಟ ಭೈರಪ್ಪನವರ ಮಾತನ್ನ ಕೇಳಿ, ಇದೇ ಸತ್ಯ ಎಂದು ನಂಬಿ ಮಾನವೀಯತೆಯನ್ನು ಮರೆತು  ವಾದಕ್ಕೆ ಇಳಿಯುವ ಅರೆಬುದ್ಧಿವಂತರನ್ನು ಎದುರುಗೊಳ್ಳುವವರೆಗೂ…. ನನಗೆ ಈ ಸಾಹಿತಿಗಳ ಮಹತ್ವ ಏನು , ಅವರ ಆಲೋಚನೆಗಳು ಸಮಾಜದ ಮೇಲೆ  ಎಂತಹಾ ಪರಿಣಾಮವನ್ನು ಬೀರುತ್ತಿದೆ ಎನ್ನುವ ಸಂಪೂರ್ಣ ಚಿತ್ರಣ ತಲೆಗೆ ಬಂದಿರಲಿಲ್ಲ. ಇಂಥಹಾ ಅಸಹ್ಯ ಸಾಹಿತಿಗಳು ಮತ್ತು ಅವರು ಮಾಡುವ ರಾಜಕೀಯಗಳ ಮತ್ತದರ ಸಾಧ್ಯತೆಗಳ ಮುಂದೆ ನಿಮ್ಮ ಗಟ್ಟಿ ಸಾಹಿತ್ಯ ವಿಭಿನ್ನವಾಗಿ ನಿಂತಿದೆ. ಕವಿತೆಗಳಲ್ಲಿ  ಬರಿಯ ಕಾಮ, ಮೋಹ, ಮಂಚದ ಸುತ್ತ ಸುತ್ತುತ್ತಾ ಹೆಣ್ಣನ್ನು/ಗಂಡನ್ನು, ರಂಜಿಸುವುದೇ ಕವಿತೆಯ ಉದ್ದೇಶ ಎಂದು ತಿಳಿದ ಸೋ ಕಾಲ್ಡ್ ಕವಿಗಳ ಕವಿತಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ, ನಿಮ್ಮ ನೀಲು ಕಾವ್ಯದ ನಾಲ್ಕೆ ನಾಲ್ಕು ಸಾಲುಗಳನ್ನ ಯಾರದೋ ಮೊಬೈಲಿನಲ್ಲಿ ಕಂಡಾಗ, ಇದೇನು ಹೀಗೆ ಎಂದು ಉಬ್ಬೇರಿಸಿ ಅಮಾಯಕನಂತೆ ಕಣ್ಣು ಬಿಟ್ಟ ನೆನಪು ನನಗೀಗಲೂ ಇದೆ. ಅಲ್ಲಿಂದಲೇ ನನ್ನ ನೋಟ ನಿಮ್ಮ ವಿಭಿನ್ನ ಬರಹಗಳೆಡೆಗೆ ತಿರುಗಿದ್ದು ಎಂದು ಹೇಳಬಹುದು. ಸ್ಟೆಲ್ಲಾ ಎಂಬ ಹುಡುಗಿಯ ರಂಗರೂಪವನ್ನ ಬೆಂಗಳೂರಿನ ಕಲಾಗ್ರಾಮದಲ್ಲಿ ನೋಡುತ್ತಿದ್ದಾಗ , ಪಕ್ಕದಲ್ಲಿ ಕೂತಿದ್ದ ಮತ್ತೊಬ್ಬ ಪ್ರೇಕ್ಷಕ, ಇದೇನು ನಾಟಕವೋ ಅಥವಾ ದೊಂಬರಾಟವೋ,,, ಅದೇನು ಪಾತ್ರಗಳು ತಂದಿದಾರಪ್ಪ ಇವ್ರು ?? ಅರೆ ಥತ್ ಎಂದು ಉಗುಳು ನುಂಗಿಕೊಂಡು ಬೈಗುಳ ಪೂರ್ಣವಾಗುವ ಮುನ್ನವೇ ,,, ಯಾರು ಬರೆದದ್ದು ಈ ನಾಟಕ ? ಎಂದು ಕೇಳಿದ್ದ. ಲಂಕೇಶ್, ಪಿ ಲಂಕೇಶ್ ಬರೆದದ್ದು ಎಂದು ನನ್ನ ಉತ್ತರ ಕೇಳಿದ ತಕ್ಷಣ , ಓಹ್ ಆ ಮಹಾನುಭಾವನೋ,,, ಅವನಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ !!! ಎಂದು ಗೊಣಗುತ್ತಲೇ ಅರ್ಧ ನಾಟಕ ಬಿಟ್ಟು ಹೋದ. ಆ ವ್ಯಕ್ತಿಯನ್ನು ನೋಡಿ, ನಿಮ್ಮ ಬರಹದ ಪರಿಣಾಮ ಎಂಥಾದ್ದು ಎನ್ನುವ ಅಂದಾಜು ಸಿಕ್ಕಿದ್ದು. ಅಲ್ಲಿ ನಾಟಕದಲ್ಲಿ, ಅಸಹಾಯಕ ಹೆಣ್ಣು ಮಗಳನ್ನ ನಾವೇ ಕಟ್ಟಿಕೊಂಡ  ಸಮಾಜ ಹೇಗೆಲ್ಲಾ ತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತಾ, ವಿವರಣೆಗಾಗಿ ಅಲ್ಲಿಯತನಕ ಕಾಮದಿಂದಲೂ ಮೋಹದಿಂದಲೂ ಕಾಣುತ್ತಿದ್ದ ಪ್ರೇಯಸಿಯನ್ನ ಸಮಾಜದ ಮುಂದೆ ತನ್ನ ಸಂಗಾತಿ ಎಂದು ಹೇಳಿಕೊಳ್ಳಲು ಹಿಂಜರಿಯುವ ಯುವಕ ಆ ಕ್ಷಣದ ಪಾಲಾಯನಕ್ಕೆ ಈಕೆ ನನ್ನ ಸೋದರಿ ಇದ್ದಂತೆ ಎಂದು ಹೇಳಿಬಿಡುವ ಗಂಡಸಿನ ಲಜ್ಜೆಗೆಟ್ಟ ಬುದ್ಧಿಯನ್ನು ನೀವು ತೋರಿಸಿದ್ದಕ್ಕೊ ಏನೋ, ಬಹುಶಃ ಆ ಸಹ ಪ್ರೇಕ್ಷಕಕನ ಗಂಡು ಬುದ್ದಿ  ಕುಪಿತಗೊಂಡಿರಬೇಕು. ಇದಕ್ಕೂ ಮುಂಚೆ ಮಲೆಗಳಲ್ಲಿ ಮದುಮಗಳು ನಾಟಕ ನೋಡುವಾಗ ಈ ಥರದ ಪ್ರತಿಕ್ರಿಯೆಗಳನ್ನ ಕಂಡಿದ್ದೆ, ಕೇಳಿದ್ದೆ. ಪ್ರತಿಕ್ರಿಯೆಗಳು ಧನಾತ್ಮಕವೋ ಋಣಾತ್ಮಕವೋ, ಒಟ್ಟಿನಲ್ಲಿ ಕೃತಿ ಎದುರುಗೊಂಡಾಗ ಒಂದು ಧ್ವನಿ ಹುಟ್ಟುತ್ತದೆ ಎಂದರೆ, ಆ ಕೃತಿಯ ನಿರೂಪಕ ಗೆದ್ದಿದ್ದಾನೆ ಎಂದು ಅರ್ಥವಲ್ಲವೇ. ಈಗಿನ ಅಸಹ್ಯ ರಾಜಕೀಯ ಸನ್ನಿವೇಶಗಳನ್ನು ಗಮನಿಸಿದರೆ ಭಯವಾಗುತ್ತಿದೆ. ಮೊನ್ನೆ ಮೊನ್ನೆ, ಪ್ರಭುತ್ವವನ್ನು ಪ್ರಶ್ನಿಸಿ ರೂಪಕವಾಗಿ ಕಟ್ಟಿದ್ದ ಪದ್ಯವನ್ನು ಬರೆದು ವಾಚಿಸಿದ್ದಕ್ಕೆ ಸಿರಾಜ್ ಬಿಸರಳ್ಳಿ ಎಂಬ ಕವಿಯನ್ನು ಅರೆಸ್ಟ್ ಮಾಡಿದ್ದರಂತೆ. ಈ ಅಭಿವ್ಯಕ್ತಿ ಸ್ವತಂತ್ರ ಕಿತ್ತುಕೊಂಡ ಪ್ರಕ್ರಿಯೆಯನ್ನ ನಮ್ಮ ಮೀಡಿಯಾ ಬಾಂಧವರಿಂದ ಹಿಡಿದು, ಟ್ರೋಲ್ ಮಾಡುವ ಸಣ್ಣ ಪುಟ್ಟ ಚಿಲ್ಲರೆಗಳೂ ಸಹ ಸಂಭ್ರಮಿಸಿದ್ದರು. ಇಂಥಹ ಸಿರಾಜ್ ಬಿಸರಳ್ಳಿ ಯವರು ನಿಮ್ಮ್ ಲಂಕೇಶ್ ಪತ್ರಿಕೆಯಲ್ಲಿ ಪ್ರತಿ ದಿನ ಹುಟ್ಟುತ್ತಿದ್ದರು ಎಂದು ಕೇಳಿದಾಗ, ರೋಮಾಂಚನವಾಗುವುದಿಲ್ಲವೇ…!!! ಕನ್ನಡ ಹೋರಾಟಗಳು ಅಂಧಕಾರದ ರೂಪ ಪಡೆದ ಸಮಯದಲ್ಲಿ, ನಿಮ್ಮ ಲಂಕೇಶ್ ಪತ್ರಿಕೆಯಲ್ಲಿ ಬಂದ ವರದಿಯನ್ನು ಗಮನಿಸಿದ ಕನ್ನಡ ಪರ ಹೋರಾಟಗಾರರು ನಿಮ್ಮನ್ನು ಹಿಡಿದು ಥಳಿಸಿದ್ದರಂತೆ. ಆದರೆ ಅದಾವಕ್ಕೂ ಎದೆಗುಂದದೆ ಮುಂದಿನ ದಿನವೂ ನಿಮ್ಮ ಬರಹದ ಹೋರಾಟ ಕಮ್ಮಿಯಾಗದೇ ಉಳಿದದ್ದನ್ನು ಕಂಡು ಅವರೇ ಸುಮ್ಮನಾದರಂತೆ. ಪ್ರಶಸ್ತಿಗಳಿಗೆ ಹಾತೊರೆದು ಸಮಯಸಾಧನೆಯಲ್ಲಿ ಮುಳುಗಿರುವ ನಮ್ಮ ಈ ಕಾಲದ ಹೊಸ ಸಾಹಿತಿಗಳನ್ನ ಕಂಡಾಗ , ನಿಮ್ಮ ನೇರ ನಿಷ್ಟುರವಾದ ಆ ಮಾತುಗಳೆಲ್ಲಾ ನೆನಪಿನಲ್ಲಿ ಉಳಿಯುತ್ತಿವೆ. ಮನೆ ಬಾಗಿಲಿಗೆ ಬಂದ ಪ್ರಶಸ್ತಿಯನ್ನು ಹಿಂದೆ ಕಳುಸಿದ ತೇಜಸ್ವಿಯಂಥವರು ನಿಮ್ಮೊಡನೆ ಉತ್ತಮ ಸ್ನೇಹವನ್ನು ಹೊಂದಿದ್ದರು, ಎಂದಾಗಲಂತೂ…. ನಿಮ್ಮಗಳ ಆ ಒಗ್ಗಟ್ಟಿನ ಕಾಲದ ಮುಂದೆ ನಮ್ಮ ಕಾಲ ತೀರಾ ಸಪ್ಪೆ ಎನಿಸುತ್ತಿದೆ. ಅಧಿಕಾರವಿಲ್ಲದೆ ಏನೂ ಮಾಡಲಾಗುವುದಿಲ್ಲ, ಎಂದು ನಿಮ್ಮ ಕಾಲದ ಸಾಹಿತಿಗಳು ಆಗಲೇ ತಿಳಿದಿದ್ದರು ಅಲ್ಲವೇ.. ??? ವಿರುದ್ಧ ಅಭಿಪ್ರಾಯ ಹೊಂದಿದ ಸಂಘ ಪರಿವಾರದ ಪರವಾಗಿ ನಿಂತು ಸೋತು ಸುಣ್ಣವಾಗಿದ್ದ ಅಡಿಗರನ್ನ ಸಂತೈಸುತ್ತಲೇ , ಲೋಹಿಯಾ ತತ್ವಗಳನ್ನು ಒಪ್ಪಿಕೊಂಡು ಒಂದು ಸ್ವಂತ ಕರ್ನಾಟಕದ ಬಲಕ್ಕಾಗಿ ಸಾಹಿತ್ಯ ಲೋಕದಿಂದ ರಾಜಕೀಯ ಕ್ಷೇತ್ರದ ಕಡೆ ಅಲೋಚಿಸಿದ್ದ ನಿಮ್ಮ ಕರ್ನಾಟಕ ಪರ್ಯಟನೆ, ರಾಜಕೀಯವಾಗಿ ಸಾಹಿತಿಗಳು ಎಷ್ಟು ಮುಖ್ಯ ಎಂಬುದಾಗಿ ನಮಗೆಲ್ಲಾ ಮಾದರಿಯಾಗಿದೆ. ದೃಶ್ಯ ಮಾಧ್ಯಮ ಬೀರುವ ಪ್ರಭಾವವನ್ನು ಸೂಕ್ಷ್ಮವಾಗಿ ಅರಿತಿದ್ದ ನೀವು, ಸಿನೆಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಅಲ್ಲದೇ, ಯಶಸ್ಸನ್ನು ಪಡೆದ ಬಗೆಗೆ ಏನು ತಾನೇ ಹೇಳಲಿ… ??? ಟೀಕಿಸಿದರೆ ಸಾಲದು ಮಾಡಿ ತೋರಿಸಿ ಎಂದು ಫಟಾಪತ್ ಕಾಲೆಳೆಯುವ ಜನರ ಬಾಯನ್ನ ನಿಮ್ಮ ಪ್ರಯತ್ನಗಳು ಉತ್ತರ ನೀಡಿ ಮುಚ್ಚಿಸಿದ ಗೆಲುವಿಗೆ ನಾನೆಂದಿಗೂ ಅಭಿಮಾನಿಯಾಗಿಯೇ ಉಳಿಯುತ್ತೇನೆ. ಲಂಕೇಶರೇ …. ನಿಮ್ಮನ್ನು ನಾನೇಕೆ ಓದುತ್ತೇನೆ ಎಂಬುದು, ಇಂಥಹ ಮತ್ತಷ್ಟು ಕಾರಣಗಳಿಗೆ ಮುಂದುವರಿಯುತ್ತಲೇ ಇದೆ. **************************

ಲಂಕೇಶರನ್ನು ಏಕೆ ಓದಬೇಕು? Read Post »

ನಮ್ಮ ಕವಿ

ನಮ್ಮ ಕವಿ

ವಿಜಯಕಾಂತ ಪಾಟೀಲ ವಿಜಯಕಾಂತ ಪಾಟೀಲರ ಸಾಹಿತ್ಯ ಕೃಷಿಯೂ..! ಅವರು ಪಡೆದ ಹಲವಾರು ಗೌರವಗಳೂ.!! ವಿಜಯಕಾಂತ ಪಾಟೀಲರು ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದವರು… ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಕ್ಯಾಸನೂರು, ಶಕುನವಳ್ಳಿ (ಸೊರಬ)ದಲ್ಲಿ ಓದಿದರು… ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್‌ಎಲ್‌ಬಿಯನ್ನು ಧಾರವಾಡದಲ್ಲಿ ಮುಗಿಸಿದರು. ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ ಮಾಡಿದರು… ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿಯಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾಗಿದ್ದವರು. ವಿಜಯಕಾಂತ ಪಾಟೀಲರ ಪ್ರಕಟಿತ ಕೃತಿಗಳೆಂದರೆ ೧) ಮಾಸದ ಕಲೆಗಳು (1994), ೨) ಸಲಸಲದ ಪಾಡು (2003), ೩) ನೂರು ಬಣ್ಣದ ಕಣ್ಣು (2012), ೪) ಹೌದು ನಾನು ಕೌದಿ (2013), ೫) ಇಂತಿ ನದಿ (20050) ಕವನ ಸಂಕಲನ… ಅವರ ಪ್ರಬಂಧಗಳು ವಜನುಕಟ್ಟು (2005). ಮಕ್ಕಳ ಸಾಹಿತ್ಯವು ಅಮ್ಮ ಅಂದ್ರೆ ಅಷ್ಟಿಷ್ಟಲ್ಲ-ಕವಿತೆಗಳು (2014). ಹಕ್ಕಿಗಳ ಸ್ವಾತಂತ್ರ್ಯೋತ್ಸವ (2016). ಅವರ ಇತರೆ ಕೃತಿಗಳೆಂದರೆ ಕನಸಿನ ಹೊಸ ಅಧ್ಯಾಯ (ಸಂಪಾದಿತ ಕತೆಗಳು-2005 ), ಒಂದು ಹಿಡಿ ಮುತ್ತು (ಸಂದರ್ಶನ ಲೇಖನಗಳು- 2008), ಸದಾ ಹರಿವು ಕನ್ನಡ (ಭಾವಗೀತೆಗಳ ಧ್ವನಿಮುದ್ರಿಕೆ-2015). ಅವರಿಗೆ ಹಲವಾರು ಪ್ರಶಸ್ತಿ ಬಹುಮಾನ ಹಾಗೂ ಗೌರವ ಪಡೆದರು ವಿಜಯಕಾಂತ ಪಾಟೀಲರು. ಅವುಗಳು ಹೀಗಿವೆ– ಬೇಂದ್ರೆ-ಅಡಿಗೆ ಕಾವ್ಯ ಪ್ರಶಸ್ತಿ, ಕಯ್ಯಾರ ಕಿಞ್ಞಣ್ಣ ರೈ ಕಾವ್ಯ ಪ್ರಶಸ್ತಿ, ಸಂಕ್ರಮಣ, ಸಂಚಯ, ಪ್ರಜಾವಾಣಿ, ಜಿಲ್ಲಾ ಕಸಾಪ ಮೊದಲಾದವುಗಳು ಏರ್ಪಡಿಸಿದ ಕಾವ್ಯ ಸ್ಪರ್ಧೆಯ ಬಹುಮಾನಗಳೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ… ಹಾನಗಲ್ ತಾಲ್ಲೂಕು ಮೊದಲ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷತೆ(2011)ಯನ್ನೂ ವಹಿಸಿದ್ದರು… ಈಗವರ ಕೃತಿಗಳ ಬಗೆಗೆ ನೋಡೋಣ– ಈ ವರೆಗಿನ ವಿಜಯಕಾಂತ ಪಾಟೀಲರ ಕೃತಿಗಳ ಕಿರು ಪರಿಚಯ… ೧.ಮಾಸದ ಕಲೆಗಳ ಈ ಮೊದಲ ಸಂಕಲನದ ಮೂಲಕ ಭವಿತವ್ಯದಲ್ಲಿ ಕಾವ್ಯ ಹೊರಳಿಕೊಳ್ಳಬಹುದಾದ ಮಾನವೀಯ,ಸಾಮಾಜಿಕ ನಡೆಯನ್ನು ಕವಿ ಸ್ಪಷ್ಟಪಡಿಸಿಕೊಂಡಿದ್ದಾರೆ. ಬಂಡಾಯ ಮನೋಧರ್ಮಕ್ಕನುಗುಣವಾಗಿ ಅರಳಿಕೊಂಡ ಇಲ್ಲಿನ ಹಿರಿಗವನಗಳು ಮತ್ತು ಕಿರುಗವಿತೆಗಳು ಬದುಕು ಬವಣೆಗಳ ಒಡನೆಯೇ ಪ್ರೀತಿಯೆಡೆಗೂ ತನ್ನ ಚಿತ್ತವನ್ನು ಹರಿಸಿವೆ. ಇಲ್ಲಿ ಕಾವ್ಯಬಂಧದ ಕಡೆಗೂ ಕವಿ ಗಮನ ಹರಿಸಿರುವುದು ಸ್ತುತ್ಯಾರ್ಹ ಸಂಗತಿ ೨. ಸಲಸಲದ ಪಾಡು ಈ ಕೃತಿಯು ಪ್ರಕೃತಿಯ ಪಲ್ಲವಿಸುವಿಕೆ, ಬರದ ಬಸವಳಿಕೆ, ಹಿರಿಯ ತಲೆಮಾರಿನ ಹಳಹಳಿಕೆ, ಹೊಸ ಹರೆಯದ ಹುರುಪು ಹೊಳೆದ ಕೆರಳಿಕೆಗಳ ಸಾಹಿತ್ಯರೂಪ; ಸಾಲು ಸಾಲುಗಳ ನಡುವೆ ಮಿಂಚಿದ ಭಾವ ಗೊಂಚಲು; ಪ್ರಕೃತಿಯಂತೆ ಕವಿಯ ಚಿತ್ತ ಹರಿದಿರುವುದು ಈ ಕಾವ್ಯಗುಚ್ಛದ ಹೆಗ್ಗಳಿಕೆ. ನೆನಪು ಮತ್ತು ಗಾಯದ ಚೆಂದವೂ ಇಲ್ಲಿ ಅನುರಣನಗೊಂಡಿದೆ ೩. ನೂರು ಬಣ್ಣದ ಕಣ್ಣು:ಈ ಸಂಕಲನವು ಮಳೆ ಬಿದ್ದ ನೆಲದಿಂದ ಎದ್ದ ಹುಡಿಯ ಘಮಲು; ಸ್ವಲ್ಪ ಸ್ವಲ್ಪವೇ ಮೂಗಿಗಡರುವ ಅಲ್ಲೆಲ್ಲೋ ಅರಳಿದ ಹೂವಿನ ಪರಿಮಳ; ಅಷ್ಟೂ ನೋವಸಂಕಟವನ್ನು ಒಟ್ಟು ಮಾಡಿ ಹೊರಹಾಕಿ ನಿಡುಸುಯ್ಯುವ ಉಸಿರ್ಗರೆತ; ಎಲ್ಲ ಹೇಳಿಯೂ ಹೇಳದಂತಿರುವ ಒಂದು ಮೌನದ ಜೊತೆಗಿನ ಸಂವಾದವಾಗಿ ಕಾಣುತ್ತದೆ. ನಿಜದ ಬದುಕಿನಿಂದ ವಿಮುಖವಾಗದ ಕವಿತೆಗಳ ಅಪರೂಪದ ಸಂಗ್ರಹ ಈ ನೂರು ಬಣ್ಣದ ಕಣ್ಣು…. ೪. ಹೌದು ನಾನು ಕೌದಿ: ಇಲ್ಲಿ ಕವಿಯು ‘ಸ್ವಕಾವ್ಯ ಹಾದಿ’ಯ ತಿರುವಿನಲ್ಲಿದ್ದಾರೆ. ಪದಗುಣಿತಾರ್ಥ,ಹೊಸ ಅರ್ಥಗಳ ನೆಗೆತ ಹಾಗೂ ಸಂಯೋಜನೆಯ ಒಳದನಿಗಳು ಇಲ್ಲಿ ಓದಿನ ಪುಳಕಕ್ಕೆ ಒಳಮಾಡುತ್ತವೆ. ತಮ್ಮ ಸಹಜಭಾಷಾಸಾಮರ್ಥ್ಯದ ಮೂಲಕ,ಸಮಕಾಲೀನ ಕಾವ್ಯದಬೀಸನ್ನು ಆವಿಷ್ಕರಿಸಿಕೊಂಡು ಬರೆಯುತ್ತಿರುವ ಕವಿಯ ಕಾವ್ಯ ಓದಿನ ಖುಷಿಯ ಜೊತೆಗೆ ಕಾವ್ಯ ನಿಜಾನುಭವದ ಸಂವೇದನೆಗಳನ್ನು ಚಾರ್ಜ್ ಮಾಡುವ ಶಕ್ತಿಯವು. ಸಾಮಾಜಿಕ ಮತ್ತು ಸೌಂದರ್ಯ ಪ್ರಜ್ಞೆಗಳೆರಡನ್ನೂ ಏಕೀಭವಿಸಿ ನೋಡುವ ಪದ್ಯಗಳು ಇಲ್ಲಿವೆ… ೫. ಇಂತಿ ನದಿ ಇಲ್ಲಿ ಕವಿಯದು ಲೋಕವನ್ನು ಒಳಬಿಟ್ಟುಕೊಳ್ಳುವಲ್ಲಿ, ಅದಕ್ಕೆ ಸ್ಪಂದಿಸುವ ಕ್ರಮದಲ್ಲಿ ಮುಕ್ತ ಹಾಗೂ ಘರ್ಷಣಾತ್ಮಕ ಹಾದಿ. ಹಾಗೆಯೇ ಮಾನವೀಯ ಅಂತಃಕರಣದಿಂದ ಸುತ್ತಣ ಸಂಗತಿಗಳನ್ನು ಪರಿಭಾವಿಸುವ ಮತ್ತು ಪಡಿಮಿಡಿವ ಪ್ರಗತಿಪರ ಮನಸ್ಸು ಈ ಕವಿಯದು.ನವ ಬಂಡಾಯದ ಅಸ್ಪಷ್ಟ ಚಹರೆಗಳು ಇಲ್ಲಿನ ಕವಿತೆಗಳಲ್ಲಿ ಗೋಚರಿಸುತ್ತವೆ… ೬. ಬೆವರ ಬಣ್ಣ: ಜೀವಪರ ಧೋರಣೆಯ ಪ್ರತೀಕವಾಗಿ ಬೆವರಿನ ಬಣ್ಣದ ಹುಡುಕಾಟ ಇಲ್ಲಿ ನಡೆದಿದೆ. ಚುರುಕು ಭಾಷೆ, ನಡೆಯ ಜೊತೆ ಹದವರಿತ ಅಭಿವ್ಯಕ್ತಿಯ ಮೂಲಕ ಕಾವ್ಯದೊಟ್ಟಿಗೆ ಕವಿ ಈ ಸಂಕಲನದಲ್ಲೂ ಸಾಗಿದ್ದಾರೆ.ನೆಲಮೂಲ ಸಂಬಂಧವನ್ನು ಗಾಢವಾಗಿ ಉಳಿಸಿಕೊಂಡ ಕವಿಯ ಕಾವ್ಯದ ಧೋರಣೆ ಜೀವಪರ,ನಿಸರ್ಗಪರವಾಗಿ ಇದ್ದಷ್ಟೇ ಆಳದಲ್ಲಿ ಅದು ಜನಪರ ನಿಲುವಿನಲ್ಲಿ ಅರಳಿದೆ… ಹೀಗೆ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ ವಿಜಯಕಾಂತ ಪಾಟೀಲರು… ** –ಕೆ.ಶಿವು.ಲಕ್ಕಣ್ಣವರ

ನಮ್ಮ ಕವಿ Read Post »

You cannot copy content of this page

Scroll to Top