ಮಹಿಳಾದಿನದ ವಿಶೇಷ
ಮುಖಾಮುಖಿ ಟಿ.ಎಸ್.ಶ್ರವಣಕುಮಾರಿ ಮುಖಾಮುಖಿ ಸುಜಾತ ಊರಿಗೆ ಬಂದು ನಾಲ್ಕು ದಿನವಾಗಿತ್ತಷ್ಟೆ. ಅವಳ ಗಂಡನಿಗೆ ಕಲ್ಕತ್ತೆಗೆ ವರ್ಗವಾಗಿ ಹೋದಮೇಲೆ ಇದೇ ಮೊದಲಸಲ ತವರಮನೆಗೆ ಬಂದಿರುವುದು. ಬೆಂಗಳೂರಿನಲ್ಲಿದ್ದಾಗ ವರ್ಷದಲ್ಲಿ ಮೂರ್ನಾಲ್ಕು ಸಲವಾದರೂ ಬಂದು ಹೋಗುತ್ತಿದ್ದವಳಿಗೆ ಈಗೆರಡು ವರ್ಷದಿಂದ ಬರಲು ಆಗಿರಲಿಲ್ಲ. ಮಕ್ಕಳೂ ಅಮ್ಮ ವಾಪಸ್ಸು ಹೋಗುವುದಕ್ಕೆ ವಾರದ ಮುಂಚೆ ಬಂದು ಸೇರಿಕೊಳ್ಳುತ್ತೇವೆ, ಅಲ್ಲಿಯವರೆಗೆ ಏನೇನೋ ಕ್ಲಾಸುಗಳಿವೆ ಎಂದು ಹೇಳಿ ಇವಳೊಂದಿಗೆ ಬರುವುದನ್ನು ತಪ್ಪಿಸಿಕೊಂಡಿದ್ದರು. ದೊಡ್ಡ ಹುಡುಗರಾದ್ದರಿಂದ ಇವಳೂ ಒತ್ತಾಯಿಸಲು ಹೋಗಿರಲಿಲ್ಲ. ಎಷ್ಟೇ ಫೋನಲ್ಲಿ ಅಮ್ಮನ ಹತ್ತಿರ ಮಾತಾಡುತ್ತಿದ್ದರೂ ಎದುರೆದುರು ಕೂತು ಸಮಯದ ಪರಿವೆಯಿಲ್ಲದೆ, ಯಾವುದೇ ನಿರ್ದಿಷ್ಟ ವಿಷಯವಿಲ್ಲದೆ, ನಿರಾತಂಕವಾಗಿ ಹರಟುತ್ತಾ ಕುಳಿತುಕೊಳ್ಳುವ ಸೊಬಗೇ ಬೇರೆ. ಜೊತೆಯಲ್ಲಿ ಮಧ್ಯೆ ಮಧ್ಯೆ ಕುರುಕುಲು ತಿಂಡಿಯೋ, ಕಾಫಿಯೋ, ಮಜ್ಜಿಗೆಯೋ, ಪಾನಕವೋ ಏನೋ ಒಂದನ್ನು ಸ್ವಾಹಾಮಾಡುತ್ತಾ ಮಾತನಾಡುವ ಮಜಾನೇ ಬೇರೆ. ಎರಡು ವರ್ಷದಲ್ಲಿ ಊರಲ್ಲಿ ಎಲ್ಲೆಲ್ಲಿ ಏನಾಯಿತು; ಗುರುತು ಪರಿಚಯದವರ ಯಾರ ಯಾರ ಮನೆಯಲ್ಲಿ ಏನೇನು ನಡೆಯಿತು ಅದಕ್ಕೆ ಅಮ್ಮನ ಟಿಪ್ಪಣಿಗಳೇನು.. ಎಲ್ಲವೂ ಪುರಸೊತ್ತು ಇಲ್ಲದಂತೆ ಬರಬೇಕು. ಹೀಗೇ ಮಾತಾಡುತ್ತಿರುವಾಗ ಇವರು ಮೊದಲು ಇದ್ದವಠಾರದ ಮನೆಯ ಪಕ್ಕದಮನೆಯ ಮೇಷ್ಟ್ರು ರಾಮಾಜೋಯಿಸರ ವಿಷಯವೂ ಬಂತು. “ಆತಂಗೆ 90.. 92.. ವರ್ಷವಾಗಿತ್ತೇನೋ ಕಣೆ, ಈ ದಸರಾ ಹಬ್ಬದ ಮಹರ್ನಮಮಿಯ ದಿನ ಹೋಗಿ ಬಿಟ್ಟರಂತೆ.” ಅಂದರು. “ಅವರ ಹೆಂಡತಿ ಅಹಲ್ಯಾಬಾಯಿ ಇನ್ನೂ ಚಿಕ್ಕವರಲ್ವಾ” ಸುಜಾತ ಕೇಳಿದಳು. “ಹ್ಞೂಂ.. ನನಗಿಂತ ಎಂಟು ಹತ್ತು ವರ್ಷವೇ ಚಿಕ್ಕವರು. ನನಗೀಗ 60 ದಾಟಿತು. ಆಕೆಗಿನ್ನೂ 50ರ ಸುಮಾರೇನೋ” ಅಮ್ಮ ಅಂದರು. “ಆಕೆ ಇನ್ನೂ ಅಲ್ಲೇ ಇದಾರಾ?” “ಇಲ್ಲ; ಆತ ಹೋದ್ಮೇಲೆ ಅಷ್ಟು ಬಾಡಿಗೆ ಕೊಡಕ್ಕೆ ಆಗ್ದೆ ಅವರ ಸೋದರಮಾವನ ಮನೆ ಒಂದು ದೊಡ್ಡ ಬ್ರಾಹ್ಮಣರ ಬೀದಿಯಲ್ಲಿ ಇದೆಯಂತೆ. ಹಳೇಮನೆ. ಎಷ್ಟೋ ವರ್ಷದಿಂದ ಯಾರೂ ಆ ಮನೇನಲ್ಲಿ ವಾಸವಾಗಿರ್ಲಿಲ್ಲವಂತೆ; ಯಾರೋ ಅದನ್ನ ಸ್ವಲ್ಪ ಕ್ಲೀನ್ ಮಾಡಿಸಿ ಕೊಟ್ಟಿದಾರಂತೆ. `ಇರೋಷ್ಟು ಕಾಲ ಇದ್ಗೊಂಡು ಹೋಗು’ ಅಂತ. ಅಲ್ಲೇ ಇದಾರೇಂತ ಕೇಳ್ದೆ. ಪಾಪ ಏನು ಜೀವನವೋ ಆಕೇದು. ಸುಖಾ ಅನ್ನೋದನ್ನ ಕೇಳಿಕೊಂಡೇ ಬರ್ಲಿಲ್ಲ” ನಿಟ್ಟುಸಿರಿಟ್ಟರು ಅಮ್ಮ. “ಯಾಕಮ್ಮಾ, ಅದೇನು ಜೋರಿದ್ರಲ್ವಾ ಆಕೆ. ಮೇಷ್ಟ್ರನ್ನ ಹುರಿದು ಮುಕ್ಕಿ ತಿಂತಾ ಇದ್ರು. ದಿನ ಬೆಳಗಾದ್ರೆ ಓನರ್ ಕಿಟ್ಟಣ್ಣ ಇಲ್ಲಾ ಅವ್ರ ಹೆಂಡ್ತಿ ಪದ್ದಕ್ಕನ ಜೊತೆ ಅವ್ರ ರಗಳೆ ತಪ್ಪಿದ್ದೇ ಇಲ್ಲ ಎಷ್ಟೋ ಸಲ ಕೊಡ ಕೊಡಾನೇ ಹಿಡ್ಕೊಂಡು ಹೊಡದಾಡ್ಕೋತಾ ಇದ್ರಲ್ಲ. ಅವ್ರಿಗೆ ಅಯ್ಯೋ ಅಂತಿದೀಯಲ್ಲ” ಅಚ್ಚರಿಯಿಂದ ಕೇಳಿದಳು ಸುಜಾತ. “ಅಲ್ಲಾ ತನ್ಗಿಂತ ಸುಮಾರು ಹತ್ರ ಹತ್ರ ನಲವತ್ತು ವರ್ಷ ದೊಡ್ಡ ಗಂಡನ್ನ ಕಟ್ಟಿಕೊಂಡು ಆಕೆ ಏನು ಕಮ್ಮಿ ಅನುಭವಿಸಿದ್ರಾ. ಏನೇನು ಸಂಕಟಾ ಇತ್ತೋ ಆಕೆ ಮನಸ್ನಲ್ಲಿ. ಜಗಳದಲ್ಲಿ ತೀರಿಸ್ಕೋತಾ ಇದ್ರು” ಅಮ್ಮ ಕಳಕಳಿಯಿಂದ ಅಂದರು. “ಅದೂ ಸರಿಯೇ ಆದ್ರೆ ನಮ್ಮೇಲೆಲ್ಲಾ ಸುಮ್ಸುಮ್ನೆ ರೇಕ್ಕೊತಿದ್ರು. ಪಾಠ ಹೇಳಿಸ್ಕೊಳ್ಳೋಕೆ ಅವ್ರ ಮನೇಗೆ ಹೋಗ್ತಿದ್ವಲ್ಲ; ಒಂದೊಂದ್ಸಲ ಅದ್ಹೇಗೆ ಬೈಯೋರು ಗೊತ್ತಾ. `ಬಂದ್ಬುಟ್ವು ಪಿಶಾಚಿಗಳು; ಹೊತ್ತಿಲ್ಲ-ಗೊತ್ತಿಲ್ಲ; ಎದ್ದ್ಹೋಗ್ರೆ’ ಅಂತ ಕೋಲು ತೆಗೆದುಕೊಂಡೇ ಬಂದು ಬಿಡೋರಲ್ಲ. ಮೇಷ್ಟ್ರು ಅವ್ರನ್ನ ಗದರಿಸಿಕೊಂಡು ನಮಗೆ ಸಮಾಧಾನ ಹೇಳ್ತಿದ್ರು. ದೇವ್ರಂತ ಮೇಷ್ಟ್ರು ನಿಜವಾಗ್ಲೂ. ರಾತ್ರಿ ಮನೇ ಹೊರಗೆ ಹಾಸಿಕೊಂಡು ನಮ್ಮನ್ನೆಲ್ಲಾ ಪಕ್ಕಕ್ಕೆ ಕೂರಿಸ್ಕೊಂಡು ನಕ್ಷತ್ರ ತೋರಿಸ್ತಾ ಎಷ್ಟು ಚೆನ್ನಾಗಿ ಕತೆ ಹೇಳ್ತಿದ್ರು. ಆಗ ಆಕೇಗೆ ಎಷ್ಟು ರೇಗೋದು. ವಟವಟಾಂತ ಅಂತಿರೋವ್ರು.” ಸುಜಾತ ಮಾತು ಮುಗಿಸುವಷ್ಟರಲ್ಲಿ ಅಪ್ಪ ಬಂದಿದ್ದರಿಂದ ಊಟಕ್ಕೆ ತಟ್ಟೆ ಹಾಕಲು ಅಮ್ಮ ಎದ್ದರು. ಆ ಮಾತು ಅಲ್ಲಿಗೇ ನಿಂತಿತು…. ಮನೆಯಲ್ಲಿ ಆಡಬಹುದಾದ ಮಾತಿನ ಒಂದು ಹಂತದ ಸರಕೆಲ್ಲಾ ಮುಗಿದ ಮೇಲೆ ಅಂದು ತನ್ನ ಬಾಲ್ಯದ ಗೆಳತಿ, ರಾಮದೇವರ ಗುಡಿಯ ಹತ್ತಿರದಲ್ಲಿರೋ ಗಾಯಿತ್ರಿಯನ್ನು ಮಾತನಾಡಿಸಿಕೊಂಡು ಬರೋಣವೆಂದು ಸುಜಾತ ಊಟಕ್ಕೆ ಮುಂಚೆಯೇ ಹೊರಟಳು. ಅವರ ಮನೆಗೆ ಯಾವಾಗ ಹೋದರೂ ಹಾಗೆ. ಊಟಕ್ಕೆ ಮುಂಚೆ ಒಂದಷ್ಟು ಹರಟಿ, ಗಂಟೆಗಟ್ಟಲೇ ಮಾತಾಡುತ್ತಲೇ ಊಟ ಮಾಡಿ, ಅದಾದ ನಂತರ ಹಾಲ್ನಲ್ಲಿ ಚಾಪೆಯ ಮೇಲೆ ಉರುಳಿಕೊಂಡು ಆ ಮಾತಿನ ವರಸೆಯನ್ನು ಮುಂದುವರೆಸುತ್ತಾ ಪ್ರೈಮರಿ ಸ್ಕೂಲಿನಿಂದ ಹಿಡಿದು ಡಿಗ್ರಿವರೆಗಿನ ಎಲ್ಲ ದಿನಗಳನ್ನು, ಜನಗಳನ್ನು, ಸ್ನೇಹಿತರನ್ನೂ, ಮೇಷ್ಟ್ರು, ಲೆಕ್ಚರರ್ಸ್ ಎಲ್ಲರೂ ಒಂದು ಮೆರವಣಿಗೆ ಬಂದು ಹೋಗಬೇಕು. ನಂತರ ಕಾಫಿ ಜೊತೆಗೊಂದಷ್ಟು ಕುರುಕುಲು ಮೆಲ್ಲುತ್ತಾ ಇಂದು ಏನೂ ಮಾತಾಡಿದ ಹಾಗೆ ಆಗಲಿಲ್ಲ ಎನ್ನುತ್ತಾ ಇನ್ನೊಂದು ದಿನ ತನ್ನ ಮನೆಗೆ ಬಂದು ಮಾತು ಮುಂದುವರೆಸಲು ಆಹ್ವಾನವಿತ್ತು ಬರುತ್ತಿದ್ದಳು ಸುಜಾತ. ಹೀಗೆ ಅವಳು ವಾಪಸ್ಸು ಹೋಗುವಷ್ಟರಲ್ಲಿ ಕನಿಷ್ಟ ಪಕ್ಷ ಇವಳೆರಡು ಸಲ, ಅವಳೆರಡು ಸಲ ಒಬ್ಬರೊಬ್ಬರ ಮನೆಗೆ ಬಂದು ಹೋಗುವುದು ಸಾಮಾನ್ಯ ನಡಾವಳಿಯಾಗಿತ್ತು. ಹೀಗೇ ದೀಪ ಹಚ್ಚುವ ಹೊತ್ತಾದಾಗ “ಅಯ್ಯಯ್ಯೋ ಅಮ್ಮ ಹೇಳಿದ್ರು, ದೀಪ ಹಚ್ಚೋ ಹೊತ್ತೊಳಗೆ ಬಂದ್ಬಿಡು ಅಂತ. ಹೊರಡ್ತೀನಿ ಕಣೆ” ಎನ್ನುತ್ತಾ ಗಡಬಡಿಸಿಕೊಂಡು ಎದ್ದಳು. *** ಅದೆಲ್ಲಿದ್ದವೋ ಅಷ್ಟೊಂದು ಮೋಡಗಳು.. ಒಮ್ಮೆಲೇ ಕವಿಯತೊಡಗಿ ಮಳೆ ಬರುವುದರೊಳಗೆ ಆಟೋ ಹಿಡಿಯಬೇಕು ಎಂದು ದಾಪುಗಾಲು ಹಾಕುತ್ತಾ ನಡೆದಳು. ಆ ಸರ್ಕಲ್ಲಿನಲ್ಲಿ ಒಂದೂ ಆಟೋ ನಿಂತಿರಲಿಲ್ಲ. ಹೋಗುವಷ್ಟು ದೂರ ಹೋಗುತ್ತಿರೋಣ, ಆಟೋ ಸಿಕ್ಕ ತಕ್ಷಣ ಹತ್ತಿಕೊಂಡರಾಯಿತು ಎಂದುಕೊಂಡು ಗಾಂಧೀಬಜಾರಿನಲ್ಲಿ ನಡೆಯಲೂ ಕಷ್ಟ ಎಂದುಕೊಂಡು ದೊಡ್ಡ ಬ್ರಾಹ್ಮಣರ ಕೇರಿಯ ಕಡೆ ತಿರುಗಿದಳು. ಅಲ್ಲಿ ಲಕ್ಷ್ಮೀನಾರಾಯಣ ದೇವಸ್ಥಾನದ ಹತ್ರ ಯಾವುದಾದರೂ ಸಿಗಬಹುದು ಎನ್ನುವ ಆಸೆಯಿಂದ ಇನ್ನೂ ಒಂದು ಅರ್ಧ ಫರ್ಲಾಂಗ್ ಕೂಡಾ ನಡೆದಿದ್ದಳೋ ಇಲ್ಲವೋ ಧಡಧಡನೆಂದು ಮಳೆ ಶುರುವಾಗೇ ಹೋಯಿತು. ಮಳೆಯಿಂದಾಗಿ ಕತ್ತಲೂ ಕವಿಯತೊಡಗಿತು. ಎಲ್ಲಾದರೂ ನಿಲ್ಲಲು ಜಾಗ ಸಿಗುವುದೇನೋ ಎಂದು ಅಕ್ಕ ಪಕ್ಕ ನೋಡಿ ಒಂದು ಜಗಲಿಯ ಮನೆಯ ಮುಂದೆ ಅವಳು ನಿಲ್ಲುವ ಹೊತ್ತಿಗೆ ಕರೆಂಟೂ ಹೋಗಿ ಪೂರ್ಣವಾಗಿ ಕತ್ತಲಾಯಿತು. ಇನ್ನೇನು ಮಾಡಲೂ ತೋಚದೆ ಜಗಲಿಯ ಒಪ್ಪಾರದ ಒಳಗೆ ಹೋಗಿ ನಿಂತಳು. ಮಳೆ ಧಾರಾಕಾರವಾಗಿ ಸುರಿಯತೊಡಗಿ ಭಯವೂ ಶುರುವಾಯಿತು. ಅಮ್ಮ ಹೇಳಿದ ಹಾಗೆ ಹೊತ್ತಿಗೆ ಮುಂಚೆಯೇ ಮನೆ ಸೇರಿಕೊಳ್ಳಬೇಕಿತ್ತು ಎಂದು ಸಲಸಲವೂ ಹೇಳಿಕೊಂಡಳು. ಕಡಿಮೆಯಾಗುವ ಲಕ್ಷಣವೇ ಕಾಣುತ್ತಿಲ್ಲ. ಜೋರಾಗಿ ಮಿಂಚು, ಗುಡುಗು ಅಬ್ಬರಿಸಿತು. ಆ ಬೆಳಕಲ್ಲಿ ಅವಳಿಗೆ ಆ ಮನೆಯ ಬಾಗಿಲು ತೆಗೆದೇ ಇದೆ ಎಂದು ತಿಳಿಯಿತು. ಇದ್ಯಾರು ಪುಣ್ಯಾತ್ಮರು ಈ ಮಳೆಯಲ್ಲಿ ಹೀಗೆ ಮನೆಬಾಗಿಲು ಹಾರುಹೊಡೆದುಕೊಂಡು ಕೂತಿದಾರಲ್ಲ; ಒಂದು ಸಪ್ಪಳವೂ ಒಳಗಿಂದ ಕೇಳುತ್ತಿಲ್ಲ. ಯಾರಾದರೂ ಇದ್ದಾರೋ ಇಲ್ಲಾ ಪಾಳು ಬಿದ್ದ ಮನೆಯೋ ಎಂದು ಅವಳಿನ್ನೂ ಅಂದುಕೊಳ್ಳುತ್ತಿರುವಾಗಲೇ ಒಳಗಿಂದ ಒಂದು ಗೊಗ್ಗರು ದನಿ ಕೇಳಿಸಿತು… “ಯಾರಲ್ನಿಂತಿರೋದು?..” ಹೆದರಿಕೆಯಿಂದಲೂ, ಮಳೆಯಿಂದಲೂ ಮುದ್ದೆಯಾಗಿ ಹೋಗಿದ್ದ ಸುಜಾತ ನಡುಗುತ್ತಾ “ತುಂಬಾ ಮಳೆ ಬರ್ತಿದೆಯಲ್ಲಾ.. ಅದಕ್ಕೆ ನಿಂತಿದೀನಿ. ನಿಮಗೇನೂ ತೊಂದರೆ ಮಾಡಲ್ಲ. ಮಳೆ ನಿಂತ ತಕ್ಷಣ ಹೊರಟು ಹೋಗ್ತೀನಿ” ತಡವರಿಸಿದಳು. “ಅದ್ಸರೀ.. ಅಲ್ಲೇ ನಿಂತಿದ್ರೆ ಎರಚಲು ಬಡಿದು ಇನ್ನು ಒದ್ದೆಯಾಗ್ತೀಯಮ್ಮ. ಒಳಗೆ ಬಂದು ಕೂತ್ಕೋ ಬಾ” ಕರೆಯಿತು ಒಳಗಿನ ಕಂಠ. ಇನ್ನೂ ಸುಜಾತ ಅನುಮಾನಿಸುತ್ತಿರುವುದನ್ನು ನೋಡಿದ ಆಕೆ “ಪರವಾಗಿಲ್ಲ ಬಾಮ್ಮ. ನಾನು ಒಬ್ಳೇ ಇರೋದು.” ಭಂಡ ಧೈರ್ಯ ಮಾಡಿಕೊಂಡು `ಬಾಗಿಲ ಬಳಿಯೇ ಕೂತರಾಯಿತು. ಏನಾದರೂ ಹೆಚ್ಚು ಕಡಿಮೆಯಾದರೆ ಓಡಿಬಿಡಬಹುದು’ ಎಂದುಕೊಳ್ಳುತ್ತಾ ಮನೆಯೊಳಗೆ ಹೆಜ್ಜೆಯಿಟ್ಟಳು. “ಅಲ್ಲೇ ಒಂದು ಪೆಟ್ಟಿಗೆ ಇದೆ. ಕೂತ್ಕೋ. ಸ್ವಲ್ಪ ಕೈಚಾಚಿದ್ರೆ ಪಕ್ಕದಲ್ಲಿರೋ ಬುಟ್ಟೀನಲ್ಲಿ ಒಂದು ಒಣ ಸೀರೆ ತುಂಡಿದೆ. ತೊಗೊಂಡು ತಲೆ ಒರಸ್ಕೋ” ಎಂದಿತು ಮುದುಕಿ. ಇಷ್ಟು ಹೊತ್ತಿಗೆ ಸ್ವಲ್ಪ ಧೈರ್ಯ ಬಂದಿದ್ದರಿಂದ ಅಲ್ಲಿ ಕೂತುಕೊಂಡು ಒಣಬಟ್ಟೆಯ ತುಂಡಿನಿಂದ ತಲೆಯನ್ನೂ ಕೈಯನ್ನೂ ಒರಸಿಕೊಂಡಳು. “ನೀನ್ಯಾರು? ಎಲ್ಲಿ ನಿಮ್ಮನೆ?” ಕೇಳಿತು ಮುದುಕಿ. ಈ ಊರಿನಲ್ಲಿ ಹೆಚ್ಚುಕಡಿಮೆ ಹಳಬರೆಲ್ಲರಿಗೂ ಒಬ್ಬರಿಗೊಬ್ಬರು ತಿಳಿದೇ ಇರ್ತಾರೆ ಎಂದುಕೊಂಡ ಸುಜಾತ ಹೇಳಿದಳು “ಆಯಿಲ್ ಮಿಲ್ ಶಿವರಾಮಯ್ಯನವರ ಮಗಳು…” “ಓ.. ನೀನೇ.. ಪಂಕಜಮ್ಮನ ಮಗಳು ಸುಜಾತ ಅಲ್ವೇ. ಅಥವಾ ಸುನೀತಾನೋ… ನಿಮ್ಮಣ್ಣ ಸುರೇಶ ಅಲ್ವಾ” ಸಂಭ್ರಮದಿಂದ ಕೇಳಿತು ಆ ಕಂಠ. `ಇಷ್ಟು ಚೆನ್ನಾಗಿ ನಮ್ಮ ಇಡೀ ಕುಟುಂಬವನ್ನೇ ಜ್ಞಾಪಕ ಇಟ್ಟುಕೊಂಡಿರೋವ್ರು ಈ ಬೀದೀನಲ್ಲಿ ಯಾರಿದಾರೆ?’ ಅವಾಕ್ಕಾಗಿ ಹೋದಳು ಸುಜಾತ. “ಹಾ! ನಾನು ಸುಜಾತಾನೇ… ನೀವು ಯಾರೂಂತ ಗೊತ್ತಾಗಲಿಲ್ಲ..” ಸಧ್ಯ ಯಾರೋ ಗೊತ್ತಿರೋರ ಮನೆಯಲ್ಲೇ ಕೂತಿದೀನಿ ಎಂದು ಸ್ವಲ್ಪ ಧೈರ್ಯ ತಂದುಕೊಳ್ಳುತ್ತಾ ನುಡಿದಳು. “ನಾನು ಯಾರೂಂತ ಗೊತ್ತಾಗ್ಲಿಲ್ವೇನೇ ಪುಟ್ಟಿ; ನಿಮ್ಮನೇ ಪಕ್ಕದಲ್ಲಿದ್ವಲ್ಲ.. ಮೇಷ್ಟ್ರ ಹೆಂಡ್ತಿ ಅಹಲ್ಯಾಬಾಯಿ” ಎಂದಾಗ ಸುಜಾತ `ಹಾ!‘ಎನ್ನುತ್ತಾ ಧ್ವನಿ ಬಂದ ಮೂಲೆಯನ್ನೇ ನೋಡಿದಳು. ಏನೂ ಕಾಣಲಿಲ್ಲ. ಅವರೊಂದಿಗಿನ ಮುಖಾಮುಖಿಗೆ ತಯಾರಿದ್ದಿಲ್ಲದ ಸುಜಾತ ಈಗ ಮಾತನ್ನು ಮುಂದುವರೆಸಲೇ ಬೇಕಿತ್ತು. “ನೀವೊಬ್ರೇ ಇದೀರೀಂತ ಹೇಳಿದ್ಳು ಅಮ್ಮ, ಮತ್ತೆ ಮನೆ ಬಾಗಿಲು ಇಷ್ಟು ಹೊತ್ತಿನಲ್ಲಿ ತೆಕ್ಕೊಂಡು ಕೂತಿದೀರಲ್ಲ. ಯಾರಾದ್ರೂ ನುಗ್ಗಿದ್ರೆ?” “ನುಗ್ಗಿ ಏನ್ಮಾಡ್ತಾರೆ? ಏನು ನಗವಾ, ನಾಣ್ಯವಾ? ಏನಿದೆ ಕೊಳ್ಳೇ ಹೊಡೆದು ತೊಗೊಂಡು ಹೋಗೋಕೆ ಈ ಮುದಿಗೂಬೆ ಪ್ರಾಣ ಒಂದು ಬಿಟ್ಟು. ಅದ್ಯಾರಿಗೂ ಬೇಕಾಗಿಲ್ಲ.. ಯಮನಿಗೂ..” ಕಹಿಯಾಗಿ ಹೇಳಿದಳು ಅಹಲ್ಯಾಬಾಯಿ. “ಅಟ್ಟದ ಮೇಲೆ ಯಾವ ಕಾಲದಿಂದಲೋ ಒಟ್ಟಿರೋ ಕಟ್ಟಿಗೇಗಾದ್ರೂ ಒಂದಿಷ್ಟು ಬೆಲೆಯಿದೆಯೇನೋ.. ಈ ಮುದಿಕೊರಡಿಗೆ ಏನೂ ಇಲ್ಲ.. ನನ್ನ ಪ್ರಾಣ ತೊಗೊಂಡು ಯಾವನು ಏನು ಮಾಡ್ತಾನೆ ಹೇಳು”. “ಛೇ, ಹಾಗನ್ಬೇಡಿ. ನೋವಾಗತ್ತೆ.” ನೋವಿನಿಂದ ನುಡಿದಳು ಸುಜಾತ “ಮೇಷ್ಟ್ರು ದಸರಾ ಹಬ್ಬದ ದಿನಗಳಲ್ಲಿ ಹೋಗಿಬಿಟ್ಟರೂಂತ ಅಮ್ಮ ಹೇಳಿದ್ಳು. ಜೀವನಕ್ಕೆ ಏನು ಮಾಡ್ತಿದೀರಿ?” “ಅವರಿದ್ದಾಗ ಏನು ಮಾಡ್ತಿದ್ವೋ ಅದೇ, ಪಿಂಚಣೀ ಅಂತ ಆಗ ಸಾವಿರ ರೂಪಾಯಿ ಬರ್ತಿತ್ತು; ಈಗ ಮುನ್ನೂರು ರೂಪಾಯಿ ಬರತ್ತೆ. ಆಗ ಇವ್ರನ್ನ ಹುಡುಕ್ಕೊಂಡು ಯಾರೋ ಶಿಷ್ಯರು ಆಗ-ಈಗ ಬಂದು ಏನಾದ್ರೂ ಸ್ವಲ್ಪ ಕೈಯಲ್ಲಿ ಹಾಕಿ ಹೋಗ್ತಿದ್ರು. ಈಗ ಯಾರೂ ಈ ಕಡೆ ತಿರಗಲ್ಲ. ಏನೋ ಇರೋಕೆ ಈ ಮನೆ ಕೊಟ್ಟಿರೋದೆ ದೊಡ್ಡ ಪುಣ್ಯ” ನಿಟ್ಟುಸಿರಿಟ್ಟಳು ಆಕೆ. ಮಳೆ ಜೋರಾಗುತ್ತಲೇ ಇತ್ತು.. ಮೌನ ಮಾತಾಗಿತ್ತು.. ಇದ್ದಕ್ಕಿದ್ದಂತೇ “ನಿಮ್ಮಮ್ಮ ಬಹಳ ಒಳ್ಳೆಯ ಹೆಂಗಸು. ವಠಾರದವ್ರೆಲ್ಲಾ ನನ್ನ ವಿರುದ್ಧವಾಗಿದ್ದಾಗ ಒಂದಿನಾನೂ ಆಕೆ ಒಂದು ಕೆಟ್ಟ ಮಾತು ಅಂದವರಲ್ಲ. ಏನೋ.. ಅವರೊಬ್ರಿಗೇ ನನ್ನ ನೋವು, ಕಷ್ಟ ಅರ್ಥವಾಗಿತ್ತೇನೋ… “ ಅಂದಳು. ಆಕೆ ಅಳುತ್ತಿದ್ದಳೇ.. ಕತ್ತಲಲ್ಲಿ ಗೊತ್ತಾಗಲಿಲ್ಲ.. ಸ್ವಲ್ಪಹೊತ್ತು ತಡೆದು ಕೇಳಿದಳು “ನಾನೇನಾದ್ರೂ ಮಾತಾಡಿದ್ರೆ ನಿಂಗೆ ಬೇಜಾರಾಗತ್ತಾ. ಯಾಕೋ ಈ ಮಳೆ ಬಂತೂಂದ್ರೆ ನಂಗೆ ಹಳೆಯದೆಲ್ಲಾ ನೆನಪಿಗೆ ಬರತ್ತೆ. ಹೇಳ್ಕೊಳಕ್ಕೂ ಯಾರೂ ಇಲ್ಲ; ಈಗ ನಿನ್ಮುಂದೆ ಹೇಳ್ಳಾ..” “ಖಂಡಿತಾ ನಂಗೆ ಬೇಜಾರಾಗಲ್ಲ; ನಿಮಗೆ ನೋವಾಗತ್ತೇನೋ ಅಂತ ನಾನೇನೂ ಕೇಳಲಿಲ್ಲ ಅಷ್ಟೆ. ನಾವು ಚಿಕ್ಕವ್ರಿದ್ದಾಗ ನಿಮ್ಮನ್ನ ಕಂಡ್ರೆ ಭಯ ಪಡ್ತಾ ಇದ್ವಿ. ಆದ್ರೆ ನೀವು ಯಾಕೆ ಹಾಗಿದ್ರೀ ಅಂತ ಯೋಚ್ನೆ ಮಾಡೋ ವಯಸ್ಸು ನಮ್ಮದಲ್ವಲ್ಲಾ. ಈಗ ನೀವು ಏನು ಹೇಳಿದ್ರೂ ನಂಗರ್ಥವಾಗತ್ತೆ. ನಿಮ್ಮ ಮನಸ್ಸು ಹಗುರಾಗೋ ಹಾಗಿದ್ರೆ ಹೇಳಿ.” ಕಕ್ಕುಲತೆಯಿಂದ ನುಡಿದಳು ಸುಜಾತ. ಏನನ್ನೋ ನೆನಪಿಸಿಕೊಳ್ಳುತ್ತಿರುವಂತೆ ಸ್ವಲ್ಪ ಹೊತ್ತು ಮೌನವಾಗಿದ್ದ ಆಕೆ ಕನಸಿನಲ್ಲಿರುವಂತೆ ಎಂದೋ ನಡೆದದ್ದನ್ನು ಹೇಳತೊಡಗಿದಳು… “ನಮ್ಮಮ್ಮಂಗೆ ನಮ್ಮಣ್ಣ, ಮತ್ತೆ ನಾವಿಬ್ರು ಹೆಣ್ಣು ಮಕ್ಕಳು. ನಾನೇ ಕಡೆಯವಳು. ನನಗೂ, ನಮ್ಮಕ್ಕನಿಗೂ ಹದಿನೈದು ವರ್ಷಗಳ ಅಂತರ. ಆ ಕಾಲಕ್ಕೆ ಹೆಣ್ಣು ಮಕ್ಕಳಿಗೆ 13, 14 ವರ್ಷಕ್ಕೆಲ್ಲಾ ಮದುವೆ ಮಾಡಿ ಬಿಡ್ತಿದ್ರು. ನಾನು ಹುಟ್ಟಕ್ಮುಂಚೇನೆ ಅಕ್ಕನ್ನ ಕೇಳಿಕೊಂಡು ಬಂದು ಮದುವೆ ಮಾಡಿಕೊಂಡು ಹೋಗಿದ್ರಂತೆ. ಹಾಗಾಗಿ ಅವಳು ಯಾವತ್ತೂ ನಂಗೆ ಹತ್ತಿರ ಆಗ್ಲೇ






