ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಜಾತ್ರೆ ಅಂಜನಾ ಹೆಗಡೆ ಬಯಲಿಗಿಳಿದ ದೇವರೆದುರು ತಲೆಬಾಗಿ ನಿಂತರೆ ಮೆದುಳಿಂದ ಮೃದುವಾಗಿ ಎದೆಗಿಳಿದ ಜಯಜಯ ಶಂಕರಿ ಜಯ ಜಗದೀಶ್ವರಿ…. ತಂಪಾದ ಹಾಡು ತಲೆಗೆ ಮೆತ್ತಿದ ಬಣ್ಣಕ್ಕೂ ಎದೆಗಿಳಿದ ಮೆದುಳಿಗೂ ಸಂಪರ್ಕವೇ ಇಲ್ಲದಂತೆ ದೇವರೇ ಮೈಮೇಲೆ ಬಂದಂತೆ ಮನಬಂದಂತೆ ಒದರುವ ಮೈಕಿನಲ್ಲಿ ಧೂಮ್ ಮಚಾಲೇ ಧೂಮ್… ತಲೆ ಕುಣಿಸುತ್ತ ನಿಂತ ತೊಟ್ಟಿಲ ಸಾಲು ತಿರುಗಿಸುವವನನ್ನು ಕಂಡವರಿಲ್ಲ ಹತ್ತಾರು ಸುತ್ತು ಸುತ್ತಿ ಒಮ್ಮೆ ಮೇಲಕ್ಕೆ ಇನ್ನೊಮ್ಮೆ ನೆಲಕ್ಕೆ…. ಪ್ರಪಂಚ ತೋರಿಸಿದ್ದೇ ಸುಳ್ಳೆನ್ನುವಂತೆ ನಿಂತುಹೋದ ತೊಟ್ಟಿಲಿಂದ ಇಳಿದ ಪೋರ ಹುಡುಕಿದ್ದು ಅಪ್ಪನ ಕಿರುಬೆರಳಿಗೆ ಹರಕೆ ತೀರಿಸಿ ಬೆವರೊರೆಸಿಕೊಳ್ಳುವವಳ ಕೈಗಂಟಿದ ಕುಂಕುಮದ ಚಿತ್ರ ಕುತ್ತಿಗೆ ಮೇಲೆ ಕುತ್ತಿಗೆಯಿಂದ ಬೆನ್ನಿಗಿಳಿದ ಕೆಂಪು ಬೆವರಿಗೆ ಬಣ್ಣದ ಘಮ ಸ್ಲೀವ್ ಲೆಸ್ ಟಿ ಶರ್ಟಿನ ಹುಡುಗನ ಕುತ್ತಿಗೆ ಮೇಲೊಂದು ತ್ರಿಶೂಲದ ಟ್ಯಾಟೂ ಘನಗಾಂಭೀರ್ಯದಿಂದ ಹಗ್ಗದ ಮೇಲೆ ನಡೆಯುತ್ತಿದ್ದಾಳೆ ಹುಡುಗಿ ಏಳುಬೀಳಿನ ಭಯವಿಲ್ಲದಂತೆ ಭವದ ಸದ್ದುಗಳಿಗೆ ಕಿವುಡಾದ ಬಾಲೆ ಹಗ್ಗದ ಮೇಲೆಯೇ ಭುವನೇಶ್ವರಿಯಾಗುತ್ತಾಳೆ ದೂರದಿಂದ ಘಂಟೆಯ ಸದ್ದು ಬೆಚ್ಚಗೆ ಎದೆಗಿಳಿಯುತ್ತಿದೆ *******

ಕಾವ್ಯಯಾನ Read Post »

ಇತರೆ

ಲಲಿತ ಪ್ರಬಂಧ

ನಮ್ಮೂರ ಜಾತ್ರೆಲಿ.. ಜ್ಯೋತಿ ಡಿ.ಬೊಮ್ಮಾ. ನಮ್ಮೂರ ಜಾತ್ರೆಲಿ.. ಬಹಳ ದಿನಗಳಿಂದ ನನ್ನೂರ ಜಾತ್ರೆಗೆ ಬರಲು ಅಪ್ಪ,ಅಮ್ಮ,ಗೆಳೆಯರೆಲ್ಲ ಒತ್ತಾಯಿಸುತ್ತಲೆ ಇದ್ದರು.ಸದಾ ಜನಜಂಗುಳಿಯಿಂದ ದೂರ ಇರಬಯಸುವ ನನಗೆ ಜಾತ್ರೆ ,ಸಮ್ಮೆಳನಗಳು ದಿಗುಲುಹುಟ್ಟಿಸುತ್ತವೆ.ಚಿಕ್ಕಂದಿನ ಜಾತ್ರೆಯ ನೆನಪು ಮುಸುಕಾಗಿತ್ತು.ಮತ್ತೆ ಎಲ್ಲರನ್ನೂ ಭೆಟಿಯಾಗುವ ಸೆಳೆತದಿಂದ ಜಾತ್ರೆಯ ನೆಪದಿಂದ ಊರಿಗೆ ಹೋದೆ.ಊರಿನಲ್ಲಿ ಎಲ್ಲರ ಮನೆಗಳಲ್ಲೂ ಸಂಬಂಧಿಕರು.ದೂರ ದೂರದ ಊರುಗಳಿಂದ ಜಾತ್ರೆಯ ನೆಪದಿಂದ ಬಂದವರು. ಜಾತ್ರೆಯಂತಹ ಊರ ಹಬ್ಬಗಳು ಮತ್ತೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವದರ ಹಿಂದಿನ ಕಾರಣಗಳು ಹುಡುಕಿದರೆ,ಮುಖ್ಯವಾಗಿ , ಪರಸ್ಪರರ ಭೇಟಿ.ಮತ್ತು ಊರಿನಲ್ಲಿನ ಸೌಹಾರ್ದಯುತ ವಾತಾವರಣ ಬಿಂಬಿಸುವದು. ಹೆಜ್ಜೆ ಹೆಜ್ಜೆಗೂ ಕಟೌಟಗಳು.ಸ್ವಾಗತ ಕೋರುವ ನೆಪದಿಂದ ತಮ್ಮ ತಮ್ಮ photo ಗಳನ್ನು ಬೀದಿ ಬೀದಿಗಳಲ್ಲಿ ನಿಲ್ಲಿಸಿ ಹೆಮ್ಮೆ ಪಡುವ ಊರಿನವರು, ರಸ್ತೆಗಳನ್ನು ಅಲಂಕರಿಸಿ ತಳಿರು ತೊರಣ,ಹೂಗಳಿಂದ ಮಾಡಿದ ಸ್ವಾಗತ ಕಮಾನುಗಳು,ಊರವರನ್ನೂ ರಂಜಿಸಲು ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು, ತಹರೆವಾರಿ ಅಂಗಡಿಗಳು,ಬಾಯಲ್ಲಿ ನೀರೂರಿಸುವ ತಿನಿಸಿನ ಬಂಡಿಗಳು, ಮತ್ತು ಎಲ್ಲೆಲ್ಲೂ ಜನ ಜನ ಜನ ಜಾತ್ರೆಯ ಪ್ರಮುಖ ಘಟ್ಟವೆ ರಥೋತ್ಸವ ,ಅದಕ್ಕೂ ಮುನ್ನಾದಿನ ಅಗ್ಗಿ ತುಳಿಯುವದು ಇರುತ್ತದೆ.ಈ ಶಬ್ದದ ಅರ್ಥ ಎನೇನು ಹೊಂದಿಕೆಯಾಗದು.ಅಗ್ನಿಗೆ ಪ್ರದಕ್ಷಿಣೆ ಹಾಕುವದನ್ನೆ ಅಗ್ನಿ ತುಳಿಯುವದು ಎನ್ನ್ನುತ್ತಾರೆ.ಕೆಲವೊಂದು ಕಡೆ ಕೆಂಡದ ಮೇಲೂ ನಡೆಯುತ್ತಾರಂತೆ. ಕಾಡು ಉಳಿಸಿ ಎಂದು ಸಾರುವರೆಲ್ಲರೂ ಕೈಯಲ್ಲಿ ಕಟ್ಟಿಗೆ ತುಂಡುಗಳನ್ನಿಡಿದು ಅಗ್ನಿ ಕುಂಡಕ್ಕೆ ಎಸೆದು ದಿಗಂತಕ್ಕೆ ಮುಖಮಾಡಿ ಉರಿಯುವ ಬೆಂಕಿಗೆ ಪ್ರದಕ್ಷಿಣೆ ಹಾಕುತ್ತ, ತೆಂಗಿನ ಕಾಯಿ ಒಡೆಯುತ್ತ ,ಮನೆಯಿಂದ ತಂದ ನೈವೇದ್ಯ ತೋರುತ್ತ (ಎಸೆಯುತ್ತ ) ಸಾಗುವರು.ನನ್ನ ಕೈಗೂ ಕೊಟ್ಟ ಕಟ್ಟಿಗೆ ಚೂರುಗಳು ಅಗ್ನಿಗೆ ಎಸೆಯಬೇಕೋ ಬೇಡವೋ ಎಂಬ ಸಂದಿಗ್ಧ ದಲ್ಲಿ ಯಾಕೋ ಎಸೆಯಲು ಮನಸ್ಸು ಒಪ್ಪದೆ ಹಾಗೆ ಕೈಯಲ್ಲಿ ಹಿಡಿದುಕೊಂಡು ಬಂದು ಅಮ್ಮನಿಂದ ಬೈಸಿಕೊಂಡಾಯಿತು.ರಸ್ತೆ ಮೇಲೆಲ್ಲ ಕಟ್ಟಿಗೆ ಮಾರುವವರದೆ ಜಾತ್ರೆ .ದುಡ್ಡು ಕೊಟ್ಟು ಕೊಂಡು ಬೆಂಕಿಗೆ ಎಸೆದು ಭಕ್ತಿಯಿಂದ ಪರವಶವಾಗುವವರ ದಂಡು ಹೆಚ್ಚುತ್ತ ಹೋಯಿತು. ಜಾತ್ರೆಗೆ ಹೋದಮೇಲೆ ದೇವಸ್ಥಾನ ಕ್ಕೆ ಹೋಗದೆ ಇ ರಕಾಗುತ್ತೆಯೆ .ಅಲ್ಲಿ ಜನರ ದಂಡು ,ಎಲ್ಲರಿಗೂ ದೇವರಿಗೆ ಬಟ್ಟೆ (ಹೊದಿಕೆ) ಮಾಡುವ ಸಂಭ್ರಮ.ಬಟ್ಟೆ ಕೊಳ್ಳಲು ಹೋದ ಅಮ್ಮನನ್ನು ಹಿಂಬಾಲಿಸಿದೆ.ಬಟ್ಟೆ ಮರುವವರು ಬಂಡಿಗಳ ಮೇಲೆ ಎರಡು ವಿಧದ ಬಟ್ಟೆಗಳನ್ನಿಟ್ಟಿದ್ದರು ಬೆಲೆ ಕೆಳಲಾಗಿ ಒಂದರ ಬೆಲೆ ನೂರೂ ರೂ.ಮತ್ತೊಂದರ ಬೆಲೆ ನೂರೈವತ್ತು ರೂಗಳು.ವ್ಯತ್ಯಾಸ ಕೇಳಿದಾಗ ನೂರೈವತ್ತು ಬೆಲೆಯ ವಸ್ತ್ರಗಳು ಹೊಚ್ಚಹೊಸದು.ನೂರು ರೂ ಬೆಲೆಯ ವಸ್ತ್ರಗಳು ದೇವರಿಗೆ ಉಡಿಸಿ ಮತ್ತೆ ತಂದವುಗಳು.ಅದೇ ಕೆರೆಯ ನೀರನ್ನು ಕೆರೆಗೆ ಚಲ್ಲಿ ಎಂಬಂತೆ.ಅಮ್ಮ ನೂರೈವತ್ತು ಕೊಟ್ಟು ಹೋಸ ವಸ್ತ್ರ ಗಳನ್ನೆ ಕೊಂಡಳು ಅವು ಮತ್ತೆ ಇಲ್ಲಿಗೆ ಬರುತ್ತೆ ಎಂದು ತಿಳಿಸಿ ಹೇಳುವ ನನ್ನ ಪ್ರಯತ್ನ ಗೊರ್ಕಲ್ಲ ಮೇಲೆ ನೀರು ಸುರಿದಂತೆ ,ವ್ಯರ್ಥ. ದೇವಸ್ಥಾನ ದಲ್ಲಿ ಒಂದು ಕಿ ಮಿ ವರೆಗೆ ದೇವರಿಗೆ ಬಟ್ಟೆ ಮಾಡುವವರ ಕ್ಯೂ , ನಾನು ಮೆಲ್ಲನೆ ಅಮ್ಮನಿಂದ ತಪ್ಪಿಸಿಕೊಂಡು ದೂರದಲ್ಲಿ ಪರಿಚಿತರೊಂದಿಗೆ ಮಾತಾಡುತ್ತ ಕುಳಿತೆ. ಸುಮಾರು ಸಮಯದ ನಂತರ ನನ್ನನ್ನೂ ಹುಡುಕುತ್ತ ಬಂದ ಅಮ್ಮನ ಕೈಯಲ್ಲಿ ವಸ್ತ್ರಗಳು ಹಾಗೆ ಇದ್ದವು. ದೇವರಿಗೆ ಬಟ್ಟೆ ಮಾಡಿಲ್ಲವೆ ಎಂದು ಕೇಳಿದಕ್ಕೆ ಬಂದ ಉತ್ತರದಿಂದ ಅವಕ್ಕಾದೆ. ” ಗುಡಿಯಲ್ಲಿ ದೇವರಿಲ್ಲವಂತೆ ” ಉತ್ಸವ ಮೂರ್ತಿಯನ್ನು ಊರಲ್ಲಿ ಮೆರವಣಿಗೆ ಮಾಡಲು ಒಯ್ದಿದ್ದರು.ದೇವರು ಬರುವವರೆಗೂ ದೇವರಿಲ್ಲದ ಗುಡಿಯಲ್ಲಿ ಕಾಯುತ್ತ ಕುಳಿತೆವು .ದೇವರು ಬಂದರು , ಎಲ್ಲರೂ ಕೈಯಲ್ಲಿರುವ ವಸ್ತ್ರಗಳನ್ನೂ ಲಗುಬಗೆಯಿಂದ ದೇವರ ಮುಂದೆ ಇಡತೊಡಗಿದರು ದೂರ ಇದ್ದವರು ದೇವರ ಸಮೀಪ ಇರುವವರಿಗೆ ಮಾಡಲು ಕೊಟ್ಟು ದೂರದಿಂದಲೆ ಹರಕ ತೀರಿಸಿ ನಡೆದರು. ದೇವರ ಮುಂದೆ ವಸ್ತ್ರ ಗಳ ರಾಶಿ ಹೆಚ್ಚಾದಂತೆ ಸ್ವಯಂ ಸೇವಕರು ಅವುಗಳನ್ನು ತೆರವುಗೊಳಿಸಿ ಹೊರಗೆ ಮಾರುವವರ ಬಂಡಿಗಳಿಗೆ ವರ್ಗಾಯಿಸುತಿದ್ದರು ಕೊಳ್ಳುವವರು ಮತ್ತೆವೆ ಕೊಂಡು ದೇವರಿಗೆ ಎರಿಸುತಿದ್ದರು.ಒಟ್ಟಿನಲ್ಲಿ ಈ ರೀತಿಯ ಆಚರಣೆ ಗಳಿಂದ ಅನೇಕರ ಬದುಕಿನ ಬಂಡಿ ಸಾಗುತ್ತದೆ. ಆಚರಿಸುವರಿಗೆ ಮನಶ್ಯಾಂತಿ ದೊರೆಯಬಹುದು. ಹರಕೆಯ ಬೇರೆ ಬೇರೆ ಬಗೆಗಳು ಪ್ರಕಟವಾದವು. ಸಕ್ಕರೆ ಹಂಚುವ ಹರಕೆಯವರು.ಪೇಡೆ ಹಂಚುವ ಹರಕೆಯವರು ಎಲ್ಲರ ಕೈಗೂ ಸಕ್ಕರೆ ಪೇಡೆಗಳನ್ನು ತುಂಬ ತೊಡಗಿದರು ತಿನ್ನಲೂ ಆಗದೆ ಬಿಸಾಡಲೂ ಆಗದೆ ಪ್ರತಿಯೊಬ್ಬರು ತಮ್ಮ ಕೈಯಲ್ಲಿರುವದನ್ನೂ ಮತ್ತೊಬ್ಬರಿಗೆ ಹಂಚತೊಡಗಿದರು ಹಂಚುವ ಪ್ರಕ್ರಿಯೆ ಮುಂದುವರೆಯುತಿತ್ತು.ಮನೆಗೆ ಹೋಗಿ ಎಲ್ಲರೊಂದಿಗೆ ಕುಳಿತು ಹೋಳಿಗೆ ಊಟಮಾಡಿದ್ದು ಸಂತೋಷದಾಯಕವಾಗಿತ್ತು. ಮರದಿನ ಸಂಜೆ ಬಾಲ್ಯದ ಗೆಳತಿಯರೊಡನೆ ಜಾತ್ರೆಗೆ ಹೋದ ಸಂದರ್ಬ ಮನಸ್ಸನ್ನು ಉಲ್ಲಾಸ ಗೊಳಿಸಿತು. ಸಂಜೆಯ ತಂಪಿನಲ್ಲಿ ಜನರೆಲ್ಲ ಏಳುವ ಧೂಳನ್ನು ಲೆಕ್ಕಿಸದೆ ,ತಾಯಂದಿರು ಅಜ್ಜ ಅಜ್ಜಿಯರು ಚಿಕ್ಕ ಮಕ್ಕಳ ಕೈಹಿಡಿದು ಅವು ಕೇಳುವ ವಸ್ತುಗಳೆಲ್ಲ ಗದರುತ್ತಲೆ ಚೌಕಾಶಿ ಮಾಡಿ ಕೊಡಿಸುತ್ತ ,ಜಾತ್ರೆಯ ಸವಿಯನ್ನು ಮಕ್ಕಳಿಗಿಂತ ಹೆಚ್ಚು ಅನುಭವಿಸುತ್ತ ಒಡಾಡುವದನ್ನು ನೋಡುವದೆ ಚಂದ. ಏನು ಕೊಳ್ಳಬೇಕು ,ಎಲ್ಲಿ ಹೋಗಬೇಕೆಂಬ ನಿರ್ದಿಷ್ಟ ಗುರಿಇರದೆ ಗೆಳತಿಯರೆಲ್ಲ ಕಾಲು ಹೋದ ಕಡೆ ಹೋಗುತ್ತ ,ಹಳೆ ನೆನಪುಗಳು ಮೆಲುಕುಹಾಕುತ್ತ ,ಅಂಗಡಿಗಳಲ್ಲಿರುವ ವಸ್ತುಗಳನ್ನು ಸುಮ್ಮನೆ ನೋಡುತ್ತ , ಮನೆಯಲ್ಲಿ ಹೆಚ್ಚಾಗಿ ಬಿದ್ದಿರುವ ಬಳೆ ಪಿನ್ನು ಟಿಕಳಿಗಳನ್ನೆ ಮತ್ತೆ ಮತ್ತೆ ಕೊಳ್ಳುತ್ತ ಆಟದ ಯಂತ್ರಗಳಿರುವ ಮೈದಾನಕ್ಕೆ ಬಂದಾಯಿತು.ಅಲ್ಲಿರುವ ಜೋಕಾಲಿ ತಿರುಗುಣಿಗಳಲ್ಲಿ ಕುಳಿತು ತಲೆ ತಿರುಗಿದರು ಬಿಡದೆ ಮತ್ತೆ ಮತ್ತೆ ಗಿರಕಿ ಹೊಡೆಯುತ್ತ ಅಕ್ಷರಶ ಮಕ್ಕಳಾದೆವು ,ಎದೆಯುದ್ದ ಬೆಳೆದ ಮಕ್ಕಳಿದ್ದಾರೆಂಬುದು ಮರೆತು. ಹರೆಯದಲ್ಲಿ ಹಿಂದಿಂದೆ ಅಲೆದ ಹುಡುಗರೆಲ್ಲ ಈಗ ಪ್ರೌಢರಾಗಿ ಎದುರಿಗೆ ಸಿಕ್ಕರೂ ಎಕವಚನದಲ್ಲಿ ಮಾತಾಡಬೇಕೊ ಬಹುವಚನದಲ್ಲಿ ಮಾತಾಡಬೇಕೋ ತೋಚದೆ ತಡವರಿಸತೊಡಗಿದಾಗ ಅವರ ಪರಿಪಾಟಲು ಕಂಡು ನಗುತ್ತ ಮತ್ತದೆ ಹಳೆ ಆತ್ಮಿಯತೆಯಿಂದ ಮಾತಾಡಿದಾಗ ನಾವೆಲ್ಲ ಮತ್ತೆ ಇಪ್ಪತೈದು ವರ್ಷ ಹಿಂದೆ ಹಾರಿದ್ದಾಯಿತು. ಜಾತ್ರೆಯು ತುಂಬಾ ನಾವೆಲ್ಲ ಗೆಳೆಯ ಗೆಳತಿಯರು ಒಡಾಡಿದ್ದೆ ಒಡಾಡಿದ್ದು.ಜೀಲೆಬಿ ಮಿರ್ಚಿ ಭಜಿ ಚೂಡವಾಗಳನ್ನು ತಿನ್ನುತ್ತ ಈಗಿನ ಮತ್ತು ಹಳೆಯ ವಿಷಯಗಳು ಮಾತಾಡುತ್ತ ಜಾತ್ರೆ ಎಂಬ ಮಾಯಾಲೋಕದಲ್ಲಿ ಮುಳುಗಿದೋದೆವು. ಇಷ್ಟರಲ್ಲೆ ಅನೇಕ ವರ್ಷಗಳಿಂದ ಮರೆಯಾದವರ ಮುಖದರ್ಶನವಾಗಿ ,ಒಂದು ಆತ್ಮಿಯ ನಗುವಿನಿಂದ ,ಆರಾಮ ,ಆರಾಮ ,ಎಂಬ ಕುಶಲೋಪರಿಯಿಂದ ಮರೆಯಾದ ಎಷ್ಟೊ ಸಂಬಂಧಗಳು ಗೆಳೆತನಗಳು ಮತ್ತೆ ಚಿಗುರಿದವು.ಕೆಲವು ನಿಮಿಷದ ಮಾತಿನಿಂದ ಮರೆಯಾದ ಬಾಂಧವ್ಯ ಮತ್ತೆ ಬೆಸೆಯಿತು.ಮನದಿಂದ ಮರೆಯಾದವರು ಮತ್ತೆ ಮನದಲ್ಲಿ ನಿಂದರು. ನನ್ನೂರಿನ ಜಾತ್ರೆ ನನ್ನೂರಿನ ಜನರೊಡನೆ ಬಾಂಧವ್ಯ ಬೆಸೆದಿಡುವ ಹಂದರವಾಯಿತು. ******

ಲಲಿತ ಪ್ರಬಂಧ Read Post »

ಕಾವ್ಯಯಾನ

ಕಾವ್ಯಯಾನ

ಪದಗಳೇ ಹೀಗೆ ಜಿ.ಲೋಕೇಶ್ ಪದಗಳೇ ಹೀಗೆ ಪದಗಳೇ ಹೀಗೆ ಅಲೆಸುತ್ತವೆ ಇಂದು ಬಾ ನಾಳೆ ಬಾ ಎಂದು ಕವಿತೆಗಳನ್ನು ಕಟ್ಟಲು ಎರವಲು ಪಡೆಯಲು ಹೋಗಬೇಕಾಗಿದೆ ನಮ್ಮೂರ ಶೆಟ್ಟಿ ಬಳಿಗೆ ನನ್ನವ್ವ ಸಾಲ ಪಡೆಯಲು ಹೋಗುವಂತೆ ಬಡ್ಡಿ ಬೇಕಾದಷ್ಟು ನೀಡುತ್ತೇನೆಂದರೂ ಏನೋ ಅನುಮಾನ ಪದಗಳಿಲ್ಲಿ ಸಿಗಲೊಲ್ಲವು ಸರಿ ಕಾಯುತ್ತಿದ್ದೇನೆ ಬಾಗಿಲು ತೆರೆಯುವ ಮುನ್ನವೇ ಸರದಿಯಲ್ಲಿ ನಿಂತು ಇವತ್ತು ನಾನೇ ಮೊದಲು!! ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬೆಳಕಿನ ಬೀಜಗಳು.. ಚಂದ್ರಪ್ರಭ ಬೆಳಕಿನ ಬೀಜಗಳು.. ಪುರುಷನೆಂದರು ಪ್ರಕೃತಿಯೆಂದರು ನಾವು ತಲೆದೂಗಿದೆವು ಗಂಡೆಂದರು ಹೆಣ್ಣೆಂದರು ನಾವು ತಲೆದೂಗಿದೆವು ಅವನೆಂದರು ಅವಳೆಂದರು ನಾವು ತಲೆದೂಗಿದೆವು ತುದಿಯೆಂದರು ಮೊದಲೆಂದರು ನಾವು ತಲೆದೂಗಿದೆವು ಅಖಿಲವೆಂದರು ಅಣುವೆಂದರು ನಾವು ತಲೆದೂಗಿದೆವು ಅನಾದಿಯಿಂದ ಇದು ನಡೆದೇ ಇದೆಯಲ್ಲ ಹೊಸತೇನಿದೆ ಇದರಲ್ಲಿ!! ನಾವು ಒಡಲು ತುಂಬಿ ಹೆತ್ತು ಹೊರುತ್ತ ಬಂದಿದ್ದೇವೆ ಅಟ್ಟು ಬೇಯಿಸಿ ಹಸಿವ ನೀಗುತ್ತೇವೆ ಚಳಿ ಗಾಳಿ ಮಳೆ ಬಿಸಿಲಿಗೆ ತತ್ತರಿಸುವಾಗ ಜೀವವನು ವಾತ್ಸಲ್ಯದ ಸೆರಗಲ್ಲಿ ಕಾಪಿಡುತ್ತೇವೆ ಸೂರುಗಳಿಗೆ ಜೀವ ತುಂಬಿ ಲವಲವಿಕೆಯ ಮನೆಯಾಗಿಸುತ್ತೇವೆ ಗೋಡೆಗಳನು ಕೆಡವಿ ಸೇತುವೆ ಕಟ್ಟುತ್ತೇವೆ ಮನೆ ಅಂಗಳ ರಸ್ತೆಗಳನೆಲ್ಲ ಗುಡಿಸಿ ಅಂದದ ರಂಗೋಲಿ ಬಿಡಿಸುತ್ತೇವೆ ಬಟ್ಟೆ ಪಾತ್ರೆ ನೆಲ ಗೋಡೆ ಎಲ್ಲ ತಿಕ್ಕಿ ತೊಳೆದು ಹಸನುಗೊಳಿಸುತ್ತೇವೆ ಮನಮನದೊಳು ದೀಪ ಉರಿಸಿ ಅಲ್ಲೊಂದಿಷ್ಟು ಬೆಳಕು ಇಣುಕುವಂತೆ ಮಾಡುತ್ತೇವೆ ಮುಟ್ಟು ಬಸಿರು ಬಾಣಂತನ ಎಂಬೆಲ್ಲವುಗಳನು ಜೀವ ಕಾರುಣ್ಯದ ಕಣ್ಣಿಂದಲೇ ನಿರುಕಿಸುತ್ತೇವೆ ಅದನೆಲ್ಲ ಅಕ್ಕರೆಯಿಂದ ಒಪ್ಪಿ ಅಪ್ಪಿಕೊಳ್ಳುತ್ತೇವೆ ಕೂಸು ಕುನ್ನಿ ಮುದಿ ಜೀವಗಳು ಆರೋಗ್ಯ ಬಾಧೆಯಿಂದ ಪೀಡಿತರು ಮನೋವ್ಯಾಕುಲತೆಗೆ ಒಳಗಾದವರೆಲ್ಲ ನಮಗೆ ನೊಂದ ಜೀವಗಳಾಗಿ ಕಂಡಿವೆ ಅವರ ಸಾಂತ್ವನ ಸೇವೆಗೆ ನಮ್ಮೊಳಗಿನ ತಾಯಿ ದಾದಿ ಸದಾ ತುದಿಗಾಲಲ್ಲಿ ನಿಂತು ತುಡಿಯುತ್ತಾಳೆ ಪ್ರಕೃತಿ ಎನಿಸಿದ ಕ್ಷಣದಿಂದ ನಮ್ಮನ್ನು ಎರಡನೇ ಸಾಲಿಗೆ ದೂಡಲಾಗಿದೆ ಸಹಸ್ರಮಾನಗಳಿಂದ ನಮ್ಮನ್ನು ಹಿಡದೆಳೆದು ತೊಟ್ಟ ಬಟ್ಟೆ ಸೆಳೆದು ಅಂಗ ಅಂಗವನು ಛಿದ್ರಗೊಳಿಸಿ ಹೃದಯವನ್ನು ಬಟಾ ಬಯಲಿನಲ್ಲಿ ಬಿಕರಿಗಿಡಲಾಗಿದೆ ಆದರೂ ಮಿಡಿಯುವುದ ತೊರೆದಿಲ್ಲ ನಾವು ಹೃದಯ ತನ್ನ ಮಿಡಿತ ಮರೆತರೆ ಜಗ ನಿಶ್ಚಲವಾಗುವುದೆಂಬ ಎಚ್ಚರ ಸದಾ ನಮ್ಮನ್ನು ಪೊರೆದಿದೆ ಮನೆ ಮಕ್ಕಳು ಪಾತ್ರೆ ಪಗಡದೊಂದಿಗೆ ನಮ್ಮನ್ನು ಹಿಂಸೆ ಅತ್ಯಾಚಾರಗಳ ಭೀಬತ್ಸಕ್ಕೆ ನಿರಂತರ ಗುರಿ ಮಾಡಲಾಗಿದೆ ಸೆರಗಿನ ಮರೆಯಲ್ಲಿ ನಾವು ನಮ್ಮ ಕರುಳ ಕುಡಿಗಳನು ಪೊರೆದಿದ್ದೇವೆ ಗುಂಡು ಗೋಲಿ ಬಡಿಗೆ ಕತ್ತಿ ಖಡ್ಗಳಿಗೆ ವಿನಾಕಾರಣ ಜೀವ ತೆತ್ತ ಜತೆಗಾರ ಇಂದು ಬರುವ ನಾಳೆ ಬರುವನೆಂಬ ಹುಸಿ ಭರವಸೆಯನೆ ತುಂಬುತ್ತ ಎಳೆಯ ಜೀವಗಳ ಸಲಹಿದ್ದೇವೆ ಬೆಂಕಿ ಬಯಲು ಕಂಬಿ ಜೈಲುಗಳು ನಮ್ಮ ಕಾರುಣ್ಯದೆದುರು ಮಂಡಿಯೂರಿವೆ ಗಾಢ ಅಗಾಧ ಎಂಬ ಬಣ್ಣನೆಗೆ ಪಾತ್ರವಾಗುವ ಅಂಧಕಾರ ನಮ್ಮೊಂದು ಸೆಳಕಿನೆದುರು ನಿಲ್ಲದೆ ಸೋತು ಕಾಲ್ಕಿತ್ತಿದೆ ಈ ಊರು ಆ ಊರು ಈ ದೇಶ ಆ ದೇಶ ಎನುವ ಭೇದವೇ ಇರದೆ ಬುವಿ ಎಲ್ಲೆಡೆ ಮೆಲ್ಲಗೆ ಕುಡಿಯೊಡೆದು ಬೆಳಕು ಸೂಸಿ ನಿಧಾನವಾಗಿ ಬಿಸಿಲು ಚೆಲ್ಲುತ್ತೇವೆ ಹರಿತ್ತುವಿನಲ್ಲಿ ಜೀವ ಸಂಚಾರವಾಗುತ್ತದೆ ನೋಯಿಸುವ ನೊಂದ ಪೊರೆದ ಈರ್ಷೆಗೆ ನಿಂತ ಜೀವಗಳೆಲ್ಲ ಕೈ ಮುಂದೆ ಮಾಡುವಾಗ ನಾವು ಕೈ ತುತ್ತು ನೀಡುತ್ತೇವೆ.. ಆಗ ಎಲ್ಲ ಇಲ್ಲಗಳ ನಡುವೆ ಜಗತ್ತು ಸುಂದರವಾಗಿ ಕಾಣತೊಡಗುತ್ತದೆ ರೊಟ್ಟಿಯೆದುರು ಬಣ್ಣ ಬಣ್ಣದ ಪತಾಕೆಗಳು ಗುಡಿ ಗುಂಡಾರ ದೈವಗಳೆಲ್ಲ ಸೋತು ನೆಲ ಕಚ್ಚುತ್ತವೆ ಸಂದಿಗೊಂದಿಗಳಲ್ಲಿ ಬೆಳಕಿನ ಎಳೆ ಎಳೆ ಸೂಸಿ ಒಂದಿಷ್ಟು ಕರುಳ ಬಳ್ಳಿಯ ಬೇರಿಗೂ ತಾಕುವಾಗ ಬುದ್ಧ ಬಸವ ಬಾಬಾ.. ಕನಕ ಕಬೀರ ಏಸು ಅಕ್ಕ ಮೀರಾ ಲಲ್ಲಾ.. ಕಪ್ಪು ಕೆಂಪು ಹಸಿರು ಎಲ್ಲ ಒಂದರೋಳು ಇನ್ನೊಂದು ಬೆರೆತು ಬೆಳ್ಳನೊಂದು ಬೆಳಕು ಹೊಮ್ಮುತ್ತದೆ…. ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಗಜ಼ಲ್ ನಿನ್ನ ಕಣ್ಣಲ್ಲಿ ಕಂಡ ನೆರಳುಗಳ ಬರೆಯಲಾರೆ ಕೆನ್ನೆಯಲಿ ಮಡುವಾದ ಬಣ್ಣಗಳ ಬರೆಯಲಾರೆ ಕಡಲೇಕೆ ಕುದಿಕುದಿದು ಮರಳಿದೆ ಹೀಗೆ ಎದೆಯಾಳದ ಉಮ್ಮಳಗಳ ಬರೆಯಲಾರೆ ನಿನ್ನನ್ನು ಒಮ್ಮೆ ಸೋಕಲು ಎಂಥ ತಪನೆಯಿತ್ತು ಚಾಚಿ ಚಾಚಿ ಮರಗಟ್ಟಿದ ಬೆರಳುಗಳ ಬರೆಯಲಾರೆ ತೋಳಲ್ಲಿ ತಲೆಯಿಟ್ಟಾಗ ಎದ್ದ ಕಂಪನವೆಷ್ಟು ಬದುಕಿನ ಬದುಕಾದ ಚಣಗಳ ಬರೆಯಲಾರೆ ಬರಿಯ ಮಾತುಗಳಿಗೆ ದಕ್ಕಿದ್ದು ಏನು ‘ಜಂಗಮ’ ನುಡಿಯುಂಬರದಲ್ಲೆ ನಿಂತ ಭಾವಗಳ ಬರೆಯಲಾರೆ **********

ಕಾವ್ಯಯಾನ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಕೋಟ ಶಿವರಾಮ ಕಾರಂತರು..! ಕೆ.ಶಿವು ಲಕ್ಕಣ್ಣವರ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಷ ಕಾರಂತ-ಲಕ್ಷ್ಮಮ್ಮ ದಂಪತಿಗಳಿಗೆ ೧೦-೧೦-೧೯0೨ರಲ್ಲಿ ಜನಿಸಿದರು. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೇ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿ ಓದಿಗೆ ಮಂಗಳ ಹಾಡಿದರು… ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದರು. ಚಲನಚಿತ್ರ ಮಾಡಿದರು, ಯಕ್ಷಗಾನ ಪ್ರಯೋಗಗಳನ್ನು ನಡೆಸಿದರು, ಹೀಗೆ ನಾನಾ ಕ್ಷೇತ್ರಗಳಲ್ಲಿ ದುಡಿದರು… ಹರಿಜನೋದ್ಧಾರಕ, ಅಸಹಕಾರ ಚಳವಳಿಯಲ್ಲಿ ಪಾಲ್ಗೊಳ್ಳುವಿಕೆ, ಸ್ವಾತಂತ್ರ್ಯ ಚಳವಳಿಗಳಲ್ಲಿ, ನೃತ್ಯ ಸಂಗೀತ ರಂಗಗಳಲ್ಲಿ ನಾನಾ ರೀತಿ ಸೇವೆ ಮಾಡಿದ ಇವರು ಬಾಲವನವನ್ನು ಮಕ್ಕಳಿಗಾಗಿ ನಡೆಸಿದರು. ಬಿಎಂಶ್ರೀ ಸ್ಮಾರಕ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು ಮೊದಲಾದ ಸಂಸ್ಥೆಗಳನ್ನು ಪ್ರೋತ್ಸಾಹಿಸಿದರು, ಅನೇಕ ಸಂಸ್ಥೆಗಳಲ್ಲಿ ಸದಸ್ಯರಾಗಿ ಸಕ್ರಿಯವಾಗಿ ಸೇವೆ ಸಲ್ಲಿಸಿದರು… ೧೯೫೮ರಲ್ಲಿ ಇವರ ಯಕ್ಷಗಾನ ಬಯಲಾಟಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಸ್ವೀಡನ್ ಪ್ರಶಸ್ತಿ ಬಂದಿತು. ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು. ಕರ್ನಾಟಕ ವಿಶ್ವವಿದ್ಯಾನಿಲಯ ೧೯೬೩ರಲ್ಲಿ ಇವರಿಗೆ ಗೌರವ ಡಾಕ್ಟರೇಟ್ ನೀಡಿದರೆ, ೧೯೬೮ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಬಿರುದಿತ್ತು ಗೌರವಿಸಿತು. ೧೯೫೧ರಲ್ಲಿ ಮೈಸೂರಿನಲ್ಲಿ ನಡೆದ ೩೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಪರಿಷತ್ತು ಸನ್ಮಾನಿಸಿತು. ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿತು… ಕಾರಂತರ ಹಾಗೆ ವೈವಿಧ್ಯಮಯ ಕೃತಿಗಳನ್ನು ರಚಿಸಿದವರು ಕನ್ನಡದಲ್ಲಿ ವಿರಳ. ೪೪ ಕಾದಂಬರಿ, ೧೪ ನಾಟಕ, ೩ ಕಥಾಸಂಕಲನ, ೬ ಪ್ರಬಂಧಗಳು, ೯ ಕಲಾ ಗ್ರಂಥಗಳು, ೫ ಆತ್ಮಕಥೆ-ಜೀವನ ಚರಿತ್ರೆಗಳು, ಮಕ್ಕಳ ಸಾಹಿತ್ಯ-೨೫, ಇತ್ಯಾದಿ ೧೫೦ಕ್ಕೂ ಮಿಗಿಲಾದ ಕೃತಿಗಳನ್ನು ರಚಿಸಿರುವ ಕಾರಂತರು ಕನ್ನಡದ ಹಿರಿಮೆ ಸಾರುವ ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ವಿಜ್ಞಾನ ಪ್ರಪಂಚ, ಬಾಲ ಪ್ರಪಂಚ, ಚಿತ್ರಮಯಿ ದಕ್ಷಿಣ ಕನ್ನಡ, ಯಕ್ಷಗಾನ ಬಯಲಾಟ, ಸಿರಿಗನ್ನಡ ಅರ್ಥಕೋಶ, ಕಿಸಾಗೌತಮಿ, ಹುಚ್ಚುಮನಸ್ಸಿನ ಹತ್ತು ಮುಖಗಳು, ಮೂಕಜ್ಜಿ ಕನಸುಗಳು ಮೊದಲಾದ ಕೃತಿಗಳು ಕನ್ನಡ ಸಾಹಿತ್ಯದ ಪ್ರಪಂಚದಲ್ಲೇ ಮೈಲಿಗಲ್ಲಿನ ಕೃತಿಗಳಾಗಿವೆ… ತಮ್ಮ ಪ್ರತಿಭೆ ಪ್ರದರ್ಶನ, ಸಾಹಿತ್ಯದ ಕೊಡುಗೆ, ಆದರ್ಶ ವ್ಯಕ್ತಿತ್ವಗಳಿಂದ ಕನ್ನಡದ ಅಪೂರ್ವ ಸಾಹಿತಿಯಾಗಿದ್ದ ಶಿವರಾಮ ಕಾರಂತರು ೯-೧೨-೧೯೯೭ರಲ್ಲಿ ಮಂಗಳೂರಿನಲ್ಲಿ ನಿಧನರಾದರು..! ***********

ಸ್ವಾತ್ಮಗತ Read Post »

You cannot copy content of this page

Scroll to Top