ಕಾವ್ಯಯಾನ
ಕಡಲ ದಂಡೆಯಲ್ಲಿ
ಕಂಗಳ ಕಟ್ಟೆ ಹೊಡೆದು
ಆಕಳಿಸುವ ನಟ್ಟಿರುಳು ಬಿದಲೋಟಿ ರಂಗನಾಥ್ ನಟ್ಟಿರುಳ ಕತ್ತಲೆಯಲಿ ಎಚ್ಚರವಾಗಿ ಕೂತೆ ಕರುಳು ಕಲೆತ ಭಾವ ಉಸಿರಾಡುತ್ತಿತ್ತು ಸಾವಿರ ಮೈಲಿಯ ನಡೆತ ಕಣ್ಣಲ್ಲೇ ಇತ್ತು ನಟ್ಟಿರುಳ ಕತ್ತಲೆಯಲಿ ಎಚ್ಚರವಾಗಿ ಕೂತೆ ಕರುಳು ಕಲೆತ ಭಾವ ಉಸಿರಾಡುತ್ತಿತ್ತು ಸಾವಿರ ಮೈಲಿಯ ನಡೆತ ಕಣ್ಣಲ್ಲೇ ಇತ್ತು ಬುಡ್ಡಿ ಹಿಡಿದ ಕೈಯಲ್ಲಿ ಆತ್ಮ ಚರಿತ್ರೆಯ ಮೊದಲ ಪುಟ ಮಬ್ಬು ಬೆಳಕಿನಲ್ಲಿ ನವಿಲೊಂದರ ನಾಟ್ಯ ಅತ್ತರೆ ಕಣ್ಣೀರಲ್ಲಿ ತೊಳೆದು ಹೋಗಬಹುದೆಂದು ಬಿಡುಗಣ್ಣನು ಮುಚ್ಚಿದೆ ಚಲ್ಲಿಸುತ್ತಲೇ ಇರುವ ಚಿತ್ರದ ಹೆಜ್ಜೆ ಸಪ್ಪಳ ಕಿವಿಗಳನ್ನು ತುಂಬುತ್ತಲೇ ಇತ್ತು. ತೆರೆದ ಕಣ್ಣಲ್ಲಿ ಅಳಿಸಿಹೋಗದ ನೂರಾರು ಚಿತ್ರಗಳು ನಡೆಯುತ್ತಿದ್ದವು ಶಶಿಕರನ ಎದೆಯ ಮೇಲೆ. ನೇರಳೇ ಮರವು ಕರೆಯುವ ಕೈ ಸನ್ನೆ ಸೋತ ಕಣ್ಣುಗಳು ಕೂತ ನಟ್ಟಿರುಳು ಯಾವ ಲೋಕದ ಮಾಯೆಯೋ ಬೆರಗು ಕಾಲುಚಾಚಿಕೊಂಡು ಮೈನೆರೆಯುತ್ತಿದೆ ನೋಡು ನೋಡುತ್ತಿದ್ದಂತೆ ಕೋಲುಕುಟ್ಟುತ್ತಾ ನಡೆದು ಬರುವ ವಿಸ್ಮಯ ಚಿತ್ರ ಹೇಗಲ ಮೇಲೊಂದು ಕೆಂಪುಗಿಣಿ ವಸ್ತ್ರ ಮೈ ತುಂಬಾ ರೋಮಗಳು ಹೋಗುತ್ತಲೇ ಇದ್ದ ಕಣ್ಣೊಳಗಿನ ಹೆದ್ದಾರಿಯ ಮೇಲೆ ಕಣ್ಣ ರೆಪ್ಪೆ ಮುಚ್ಚಿ ಧ್ಯಾನಿಸಿದೆ ಜಂಬೂವೃಕ್ಷದ ಮುಂದೆ ಅಜ್ಜನ ತುಟಿಬಿಚ್ಚದ ನಗು ಭೂಮಿಯಿಲ್ಲದ ಜಲಜಂಬೂದ್ವಿಪ ಎದೆ ಚಲ್ಲಿ ಮಲಗಿದೆ.. ನಾನೂ ಮಲಗಿದೆ ಕರುಳ ದ್ವಿಪದ ಎದೆಯ ಮೇಲೆ ಮಗುವಿನಂತೆ.! ಕಣ್ಣಲ್ಲಿ ಕಣ್ಣಾದವರನ್ನು ಬೆಸೆಯಲು. ********
“ನಾನು ದಣಿದಿದ್ದೇನೆ” ಮೂಲ: ಟಿನ್ಜಿನ್ ತ್ಸುನದು(ಟಿಬೇಟಿಯನ್ ಕವಿ) ಕನ್ನಡಕ್ಕೆ: ಕಮಲಾಕರ ಕಡವೆ “ನಾನು ದಣಿದಿದ್ದೇನೆ” ನಾನು ದಣಿದಿದ್ದೇನೆ,ನಾನು ದಣಿದಿದ್ದೇನೆ ಮಾರ್ಚ ಹತ್ತರ ಆಚರಣೆ ಮಾಡುತ್ತಧರ್ಮಶಾಲಾದ ಗುಡ್ಡಗಳಿಂದ ಚೀರುತ್ತ. ನಾನು ದಣಿದಿದ್ದೇನೆ,ನಾನು ದಣಿದಿದ್ದೇನೆ ಹಾದಿಬದಿ ಸ್ವೇಟರುಗಳನ್ನ ಮಾರಾಟ ಮಾಡುತ್ತನಲ್ವತ್ತು ವರ್ಷಗಳ ಕಾಲಧೂಳು, ಎಂಜಲುಗಳ ನಡುವೆ ಕುಳಿತುಕೊಳ್ಳುತ್ತ. ನಾನು ದಣಿದಿದ್ದೇನೆಅನ್ನ, ದಾಲ್ ತಿನ್ನುತ್ತಾಕರ್ನಾಟಕದ ಜಂಗಲ್ಲುಗಳಲ್ಲಿ ದನ ಕಾಯುತ್ತ. ನಾನು ದಣಿದಿದ್ದೇನೆಮಂಜು-ತಿಲಾದ ಕೊಳಚೆಯಲ್ಲಿನನ್ನ ಧೋತಿಯ ಎಳೆದಾಡುತ್ತ. ನಾನು ದಣಿದಿದ್ದೇನೆ, ನಾನು ನೋಡೇ ಇಲ್ಲದನನ್ನ ನಾಡಿಗಾಗಿ ಹೋರಾಡುತ್ತ.*************ಮಾರ್ಚ್ ಹತ್ತು: ಟಿಬೆಟಿಯನ್ ಕ್ರಾಂತಿ ದಿನ*ಧರ್ಮಶಾಲಾ: ವಲಸೆಯಲ್ಲಿರುವ ಟಿಬೆಟಿಯನ್ ಸರಕಾರದ ಕೇಂದ್ರ*ಮಂಜು-ತಿಲಾ : ದೆಹಲಿಯ ಟಿಬೆಟಿಯನ್ ಕಾಲನಿ. ======= “I am Tired” I am tired,I am tired doing that 10th March ritual,screaming from the hills of Dharamsala. I am tired,I am tired selling sweaters on the roadside,40 years of sittingin dust and spit. I am tired,eating rice ‘n daland grazing cows in the jungles of Karnataka. I am tired dragging my dhotiin the dirt of Manju Tila. I am tired fighting for the countryI have never seen. Dhoti – sarong-like garment worn by men in IndiaManju Tila – Tibetan colony in Delhi called Majnu-ka-Tilla **********
ಗಜಾನನ ಹೆಗಡೆ ಅಸ್ತಂಗತ.. ಕೆ.ಶಿವು ಲಕ್ಕಣ್ಣವರ ಖ್ಯಾತ ಸುದ್ದಿ ನಿರೂಪಕ, ಹಿರಿಯ ಪತ್ರಕರ್ತ ಗಜಾನನ ಹೆಗಡೆ ಅಸ್ತಂಗತ..! ಖ್ಯಾತ ಸುದ್ದಿ ನಿರೂಪಕ, ಹಿರಿಯ ಪತ್ರಕರ್ತ ಗಜಾನನ ಹೆಗಡೆ ಇಂದು ವಿಧಿವಶರಾಗಿದ್ದಾರೆ. ಇತ್ತೀಚಿಗೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಅವರನ್ನು ಬೆಂಗಳೂರಿನ ಜೆ.ಪಿ.ನಗರದ ಪಿ ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ ೨೬-೨-೨೦೨೦ರಂದು ಮಧ್ಯಾಹ್ನ ಕೊನೆಯುಸಿರೆಳೆದರು. ಮೃತರಿಗೆ ಪತ್ನಿ, ಒಬ್ಬ ಪುತ್ರ (ಮಯೂರ) ಹಾಗೂ ಒಬ್ಬ ಪುತ್ರಿ ಇದ್ದಾರೆ. ಉತ್ತರ ಕನ್ನಡ ಮೂಲದವರಾದ ಗಜಾನನ ಹೆಗಡೆಯವರು ಹೊನ್ನಾವರ – ಗೇರುಸೊಪ್ಪ ಮಧ್ಯೆದಲ್ಲಿರೋ ಕವಲಕ್ಕಿ ಗ್ರಾಮದವರು. ಮಾಧ್ಯಮ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂದು ಇಪ್ಪತ್ತು ವರ್ಷಗಳ ಹಿಂದೆ ಮನೆ ಬಿಟ್ಟು ಹೊರ ಬಂದಿದ್ದರು. 2001ರಲ್ಲಿ ‘ಈ ಟಿವಿ’ ಕನ್ನಡ ಸುದ್ದಿ ವಾಹಿನಿ ಮೂಲಕ ನ್ಯೂಸ್ ಆಂಕರ್ ಆಗಿದ್ದವರು. ಬಳಿಕ ಕನ್ನಡ ವಾಹಿನಿ ‘ಕಸ್ತೂರಿ 24’ನಲ್ಲಿ ಆಂಕರ್ ಚೀಫ್ ಆಗಿ ಕಾರ್ಯ ನಿರ್ವಹಿಸಿದರು. ಅಲ್ಲಿಂದ ಮತ್ತೊಂದು ಖಾಸಗಿ ಸುದ್ದಿ ವಾಹಿನಿಯಾದ ‘ಪ್ರಜಾ ಟಿವಿ’ಯಲ್ಲಿ ಮುಖ್ಯ ಸುದ್ದಿ ನಿರೂಪಕರಾಗಿ ಮನೆ ಮಾತಾಗಿದ್ದರು. ಪ್ರಚಲಿತ ವಿದ್ಯಮಾನಗಳ ಕುರಿತು ಗಂಟೆಗಟ್ಟಲೇ ಚರ್ಚೆ ನಡೆಸಿ ತೆಗೆದುಕೊಂಡ ವಿಷಯದ ಮೇಲೆ ಬೆಳಕು ಚೆಲ್ಲುತ್ತಿದ್ದರು. ಮಾಧ್ಯಮ ರಂಗದಲ್ಲಿ ಅನೇಕ ಮಿತ್ರರನ್ನು ಸಂಪಾದಿಸಿದ್ದರು ಅವರು. ಜೊತೆಗೆ ಅನೇಕ ಶಿಷ್ಯರಿಗೂ ಅವರು ಮಾರ್ಗದರ್ಶಕರಾಗಿದ್ದರು. ಇಂತಹ ಗಜಾನನ ಹೆಗಡೆ ಧಾರವಾಡದಲ್ಲಿ ಡಿಗ್ರಿ ಓದುತ್ತಿರುವಾಗಲೇ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಸಲುಗೆ ಬೆಳೆಸಿದ್ದರು. ಮುಂದೆ ಅದೇ ಸಲುಗೆ ಪ್ರೇಮಕ್ಕೆ ತಿರುಗಿ ಇಬ್ಬರೂ ಪಾಲಕರನ್ನು ಒಪ್ಪಿಸಿ ಮದ್ವೆಯಾಗಿದ್ದರು. ಗಜಾನನ ಹೆಗಡೆಯವರು ಪ್ರೀತಿಸಿದ ಹುಡುಗಿ ಲಿಂಗಾಯತರೆಂಬ ಕಾರಣಕ್ಕೆ ಬ್ರಾಹ್ಮಣರಾದ ಹೆಗಡೆಯವರ ಮನೆಯವರು ಮೊದ ಮೊದಲು ಒಪ್ಪಿರಲಿಲ್ಲವಂತೆ. ನಂತರ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದರು. ಪ್ರೀತಿಸಿ ಮದುವೆಯಾದ ಗಜಾನನ ಅವರಿಗೆ ಹಾಡು, ನಾಟಕವನ್ನು ಬಿಟ್ಟು ಬೇರೇನೂ ಗೊತ್ತಿರಲಿಲ್ಲ. ಹೀಗಾಗಿ ಪ್ರೀತಿಸಿದವಳನ್ನು ಕಟ್ಟಿಕೊಂಡ ಸಂತೋಷ ಒಂದು ಕಡೆಯಾದರೆ, ಯಾರ ಸಹಾಯವಿಲ್ಲದೇ ಬದುಕನ್ನು ಕಟ್ಟಿಕೊಳ್ಳೋದು ಹೇಗೆ? ಎಂಬ ಚಿಂತೆಯಾಗಿತ್ತು. ಆಗ ನೆರವಿಗೆ ಬಂದದ್ದೇ ‘ಈ ನಾಡು’ ಕನ್ನಡ ವಾಹಿನಿ! ಆಗ ತಾನೆ ಮೂಡಿ ಬಂದಿದ್ದ ‘ಈ ಟಿವಿ’ಯಲ್ಲಿ ಗೆಳೆಯರ ನೆರವಿನಿಂದ ಗಜಾನನ ಹೆಗಡೆ ಮೊದಲಿಗೆ ಎಂಟರ್ ಟೈನ್ಮೆಂಟ್ ವಿಭಾಗದಲ್ಲಿ ನಿರೂಪಕರಾಗಿ ಕೆಲಸ ಆರಂಭಿಸುತ್ತಾರೆ. ಈ ವೇಳೆ, ಅದಾಗಲೇ ಹೈದರಾಬಾದ್ ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಅದೇ ಟಿವಿಯಲ್ಲಿ ನ್ಯೂಸ್ ಆಂಕರ್ ಆಗಿದ್ದ ಗೌರೀಶ್ ಅಕ್ಕಿ ಮತ್ತು ಚೆನ್ನವೀರ ಸಗರನಾಳ್ ಅವರ ಪರಿಚಯವಾಗುತ್ತೆ. ಮದುವೆ ಮಾಡಿಕೊಂಡು ಪತ್ನಿಯನ್ನು ಊರಿನಲ್ಲಿಯೇ ಬಿಟ್ಟು ಬಂದಿದ್ದ ಗಜಾನನ ಅವರಿಗೆ ಇಬ್ಬರು ಸ್ನೇಹಿತರು ತಮ್ಮಲ್ಲೇ ಆಶ್ರಯವೊದಗಿಸುತ್ತಾರೆ. ಮುಂದೆ ಕೆಲ ದಿನಗಳಲ್ಲಿಯೇ ಗಜಾನನ ಹೆಗಡೆಯವರು ತಮ್ಮ ಪತ್ನಿಯನ್ನು ಹೈದರಾಬಾದ್ ಗೆ ಕರೆದುಕೊಂಡು ಬಂದು ಸಂಸಾರದ ನೊಗ ಎಳೆಯುತ್ತಾರೆ. ಹೈದರಾಬಾದ್ ನಲ್ಲಿಯೇ ಸುಮಾರು ಹತ್ತು ವರ್ಷಗಳನ್ನು ಕಳೆದ ಗಜಾನನ ಹೆಗಡೆ ತಿರುಗಿ ನೋಡಿದ್ದಿಲ್ಲ. ಗಜಾನನ ಹೆಗಡೆ ಕನ್ನಡ ಸುದ್ದಿ ನಿರೂಪಕರಲ್ಲಿ ಎದ್ದು ಕಾಣುವಂಥ ವ್ಯಕ್ತಿತ್ವವುಳ್ಳವರು. ಅವರದು ಕಂಚಿನ ಕಂಠ. ಕನ್ನಡವನ್ನು ಬಹುವಾಗಿ ಪ್ರೀತಿಸುತ್ತಿದ್ದ ಗಜಾನನ ಹೆಗಡೆ ಕನ್ನಡವನ್ನು ಅಷ್ಟೇ ಸೊಗಸಾಗಿ ಮತ್ತು ಸ್ಪಷ್ಟವಾಗಿ ಮಾತನಾಡುತ್ತಿದ್ದರು. ಟಿವಿಯಲ್ಲೂ ಅಷ್ಟೇ ಸುಂದರವಾಗಿ ಕಾಣುತ್ತಿದ್ದರು. ಗಜಾನನ ಹೆಗಡೆಯವರು ಓರ್ವ ರಂಗಕರ್ಮಿ ಕೂಡ ಆಗಿದ್ದರು ಅನ್ನೋದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಮಾಧ್ಯಮ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಗಜಾನನ ಅವರು ನೀನಾಸಂ ನಲ್ಲಿದ್ದರು. ಬಣ್ಣ ಹಚ್ಚಿ ನಾಟಕ ಮಾಡಿದ್ದುಂಟು. ಒಳ್ಳೆಯ ಗಾಯಕರೂ ಆಗಿದ್ದ ಗಜಾನನ ಹೆಗಡೆ, ಬೇಂದ್ರೆಯವರ ಶ್ರಾವಣ ಬಂತು ನಾಡಿಗೆ ಹಾಡನ್ನು ತಮ್ಮದೇಯಾದ ವಿಶಿಷ್ಟ ರೀತಿಯಲ್ಲಿ ಹಾಡುತ್ತಿದ್ದರು. ಮಾತ್ರವಲ್ಲ, ಅವರು ಅಲ್ಲಲ್ಲಿ ಸಂಗೀತ ಕಚೇರಿ ನಡೆಸಿದ್ದೂ ಉಂಟು. ಯೂ ಟ್ಯೂಬ್ ಚಾನೆಲ್ ಗೂ ಅಲ್ಬಮ್ ಮಾಡಿದ್ದರು. ಇಂತಹ ಗಜಾನನ ಹೆಗಡೆ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ಮಾಧ್ಯಮ ಸ್ನೇಹಿತರಿಗೆ ಶಾಕ್ ಉಂಟಾಗಿದೆ. ಮೊದಲಿಗೆ ಯಾರೂ ನಂಬದಾಗಿದ್ದರು. ಆಂಕರ್ಸ್ ಗ್ರೂಪ್ ನಲ್ಲಿ ಆ ಬಗ್ಗೆ ಚರ್ಚೆ ನಡೆದಿತ್ತು. ಆಸ್ಪತ್ರೆಯಲ್ಲಿ ಶವವಾಗಿ ಮಲಗಿದ್ದ ಗಜಾನನ ಹೆಗಡೆಯವರ ಭಾವಚಿತ್ರವನ್ನು ನೋಡಿ ಎಲ್ಲರೂ ದಿಗ್ಬ್ರಮೆಗೊಳಗಾದರು. ಈ ವೇಳೆ ಬಹುತೇಕ ಎಲ್ಲ ಸುದ್ದಿ ನಿರೂಪಕರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಇಂಥ ಗಜಾನನ ಹೆಗಡೆಯವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಗಜಾನನ ಹೆಗಡೆಯವರ ಸ್ವಂತ ಊರಿಗೆ ತೆಗೆದುಕೊಂಡು ಹೋಗಲಾಗುತ್ತೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಸದ್ಯ ಬೆಂಗಳೂರಿನ ಜೆಪಿ ನಗರದಲ್ಲಿರೋ ಹೆಗಡೆ ನಿವಾಸದಲ್ಲಿ ಯಾರೂ ಇಲ್ಲದೇ ನೀರವ ಮೌನ ಆವರಿಸಿದೆ. ಏನೇ ಆಗಲಿ ಗಜಾನನ ಹೆಗಡೆಯವರಿಗೆ ಶಾಂತಿ ದೊರಕಲಿ ಎಂದು ಹಾರೈಸೋಣ. *********
ವಿರಹಿಣಿ ವಿಜಯಶ್ರೀ ಹಾಲಾಡಿ (ಸುಮ್ನೇ ಹೀಗೊಂದು ಝಲಕ್) ಯಾರೋ ಕವಿ ಬರೆದವಿರಹಿಣಿಯ ಚಿತ್ರಣಕಾದು ಕಾದು ಕಾಲುಬೆರಳುಸಪೂರ ಆಗಿ ಕಾಲುಂಗುರಕಳೆದುಹೋದ ಕತೆ .. ಅಬ್ಬಎಷ್ಟೂಂತ ಕಾಯುವುದುಮೊನ್ನೆಯಿಂದ ಇದ್ದೇನೆಇಲ್ಲೇ ಆನ್ ಲೈನಲ್ಲೇ….ಮಧ್ಯರಾತ್ರಿಯ ಕೊನೆಗೆಐದು ನಿಮಿಷತೂಕಡಿಸಿದಾಗಲೂ ಸುಪ್ತಮನಸ್ಸಿನ ಎಚ್ಚರಹೃದಯ ಹಿಂಡಿದಂತೆನರನರಗಳೆಲ್ಲ ಹೊಸೆದಂತೆರಿಂಗ್ ಟೋನೇ ಕರೆದಂತೆ … ಎಲ್ಲಿ ಹೋದ ಇವನುಮರೆತನೇ ಮೊಬೈಲ್-ಕಳಕೊಂಡನೇ -ನೆಟ್ವರ್ಕ್ಇಲ್ಲದ ಕಾಡುಗಳಲ್ಲಿಅಲೆಯುತ್ತಿರುವನೇಈ ನನ್ನವನು …ಅಥವ ಇನ್ನವಳ್ಯಾರೋಶ್! ಹುಚ್ಚಿ ಹಾಗೇನಿರಲ್ಲ. ! ‘ಇವಳೇನು ಇಲ್ಲೇಬೀಡುಬಿಟ್ಟಿದ್ದಾಳೆಂದು’ಗೆಳೆಯ ಗೆಳತಿಯರೆಲ್ಲHii. ಎಂದರುಅಣಕಿಸಿ ನಕ್ಕರುಕಣ್ಣುಹೊಡೆದರುಛೆನನ್ನ ವಿರಹವನದಿಯಂತೆ ಬೆಳೆಸುತ್ತಲೇಆಫ್ ಲೈನಾದರು …. ಸಿಟ್ಟಿಗೆ ಮೊಬೈಲ್ ಕುಕ್ಕಿಜೋಡಿಸಿಟ್ಟ ಪುಸ್ತಕಬಟ್ಟೆಗಳನೆಲ್ಲ ನೆಲಕ್ಕೆಅಪ್ಪಳಿಸಿದ್ದಾಯಿತುಸಂದೇಶಗಳ ಶಬ್ದಕ್ಕೆಓಡೋಡಿ ಬಂದುಹೊಸ್ತಿಲಿಗೆ ಕಾಲೆಡವಿಮಂಡಿ ತರಚಿದ್ದಾಯಿತು ಹೋಗೆಲೋ ಹುಚ್ಚಕತ್ತೆ ಕೋತಿ ಕರಡಿಎಂದೆಲ್ಲ ಅವನಿಗೂಟೈಪಿಸಿ ಬಯ್ದದ್ದಾಯಿತುಪ್ರೀತಿಮಾತೂ ಹೇಳಿದ್ದಾಯಿತುಭಯದಿಂದಲೇ ಕಾಲ್ ಮಾಡಿಸ್ವಿಚ್ ಆಫ್ ನಾಟ್ ರೀಚೇಬಲ್ಉಲಿಗಳಿಗೆದನಿತೆಗೆದು ಅತ್ತದ್ದಾಯಿತು … ನಾಳೆಯಾದರೂ ಸಿಗುವನೆಂದುಓಹ್ನೆಟ್ ಪ್ಯಾಕ್ ಮುಗಿಯುವುದೆಂದುಪೇಟೆಗೆ ಹೋಗಿಬರುವೆತಡೆಯಿರೆಂದು …ಥೋ ! ಈಗಿನ್ನೂಹಾಲುಬೆಳದಿಂಗಳುಬೆಳಗಿನ ಜಾವದ ೩ ! **********
ಮನದಿಂ ನಗು ರೇಖಾ ವಿ.ಕಂಪ್ಲಿ ನಗುವ ನಗು ಮನದಿಂ ಮಗುವ ನಗುವ ನಗು ನಗುವ, ನಗಲೆಂದು ನಗದಿರು ನಗುವ ನಕ್ಕರೆ ಸಕ್ಕರೆ ಗಿಂತ ಸಿಹಿಯಾದ ನಗುವ ನಗು ಮೊಗದ ಕಳೆಗಾಗಿ ನಗುವ ನಗದಿರು ಮನದ ಕೊಳೆಯನು ತೊರೆದು ನಗು ಬುದ್ಧಿ ಶುದ್ಧಿಯೊಳು ನಗುವ ನಗು ಕಿರು ನಗೆಯು ನೊರೆ ಹಾಲಿನ ನಗುವ ನಗು ಝರಿ ದಾರೆಯ ಜಳಪಿಸುವ ನಗುವ ನಗು ನಗುವ ನಗು ಮನದಿಂ ನಿನ್ನ ಮನದ ನಗೆಯ ನಗು ಎದಿರಿರುವವನ ಎದೆ ನಗುವಂತೆ ನಗು ಅಪಹಾಸ್ಯ ಮಾಡದೇ ಬರಿ ವಿನೋದಕಾಗಿ ನಗುವ ನಗು ಪರ ಮನ ಅರಿತು ನಗುವ ನಗು ನಗುವ ನಗು ಮನದಿಂ ***********
ಸ್ಪಟಿಕವಾಗಬೇಕಿದೆ ಮೂಗಪ್ಪ ಗಾಳೇರ ಹಕ್ಕಿಗಳಿಗೆ ಗೂಡ ಕಟ್ಟಲು ಯಾವ ಮರದ ಅನುಮತಿ ಬೇಕಿಲ್ಲ ಇರುವೆಗಳು ಸಾಲಾಗಿ ನಡೆಯಲು ಯಾವ ಅಭಿಯಂತರರ ನೀಲಿನಕ್ಷೆ ಬೇಕಿಲ್ಲ ಹಾಗಂತ ಈ ಹೃದಯವೇನು ಬಿಟ್ಟಿ ಬಿದ್ದಿಲ್ಲ ನಿನ್ನಿಷ್ಟ ಬಂದಾಗೆ ಬಂದು ಹೋದಾಗೆ ಹೋಗಲು………. ಶಾಂತ ಸಾಗರದಲ್ಲಿ ತೇಲುವ ನಾವೆಯಂತೆ ಈ ಹೃದಯ ಮೊದಲು ದಡ ಸೇರಬೇಕೋ ಇಲ್ಲೇ ಇದ್ದು ಸಾಗರದ ಸವಿ ಸವಿಯಬೇಕೋ……. ಎದೆಯೊಳಗೆ ನೂರೆಂಟು ತಳಮಳ ಏಕಾಂತದಲ್ಲಿ ಇದ್ದರು ನಿನ್ನದೇ ಪ್ರೀತಿಯ ಪರಿಮಳ ಮತ್ತೆ ಮತ್ತೆ ಹೃದಯದ ಕೋಣೆಯಲ್ಲಿ ನಿನ್ನದೇ ಸಡಗರ…….. ಹೆತ್ತುಹೊತ್ತ ಜೀವಗಳಿಗೆಲ್ಲಾ ನನ್ನ ಏಕಾಂತದ ಅರಿವಾಗಿದೆ ಹಣತೆ ಹಚ್ಚಬೇಕಿದೆ ನನ್ನಲ್ಲಿ ನೀನು ಹಾಗೆ ಹಚ್ಚಿದ ಹಣತೆ ಪಸರಬೇಕಿದೆ; ಗಡಿ ಇಲ್ಲದ ವಿಶ್ವದ ಬೀದಿಯಂಗಳದಲ್ಲಿ………. ಒಳ ಕೋಣೆಗಳನ್ನೆಲ್ಲಾ ಚದುರಿ ಸ್ಪಟಿಕ ವಾಗಬೇಕಿದೆ; ಜಾತಿ ಧರ್ಮ ಮೀರಿದ ಹೆದ್ದಾರಿ ಪಯಣದಲ್ಲಿ………. *********
ಹೋರಾಟ ಪ್ಯಾರಿ ಸುತ ದೈತ್ಯಶಹರ ರಾಜಬೀದಿಯೊಳಗೆ ಹೋರಾಟ ಮುಚ್ಚುಮರೆಯಲಿ ಜಮಾಯಿಸಿ ಇಟ್ಟ ಕಲ್ಲುಗಳತೂರಾಟ ಎತ್ತರದಲ್ಲಿ ಜೋತುಬಿದ್ದ ಮೈಕಿನಲ್ಲಿ ರಕ್ತಕುದಿಸುವ ಘೋಷಣೆಗಳ ಕೂಗಾಟ ಕಪ್ಪುನೀಲಿಶಾಯಿ,ರಕ್ತದಿಂದ ಬರೆಯಲ್ಪಟ್ಟ ರಟ್ಟು,ತಗಡು,ಬಿಳಿಬಟ್ಟೆಗಳ ಹಾರಾಟ ಗುಂಪುಗಳ ಮಧ್ಯಸಿಕ್ಕು ಕಾರು,ಬೈಕು,ಬಸ್ಸು ಲಾರಿ, ರೀಕ್ಷಾಗಳ ಚೀರಾಟ ಹಳ್ಳಿಕೇರಿಗಳಿಂದ ಸಂತೆಬಜಾರಿಗೆ ಬಂದವರ, ಊರಿಂದ ಊರಿಗೆ ಹೋಗುವವರ ಶಾಲಾಕಾಲೇಜು ಮಕ್ಕಳ,ಓಪ್ಪತ್ತು ಊಟದ ವ್ಯಾಪಾರಸ್ಥರ,ಕೂಲಿ ನಂಬಿದ ಸ್ಟೇಷನ್ ಕೂಲಿಕಾರ್ಮಿಕರ, ಊರುಕೇರಿಯ ಸಾರ್ವಜನಿಕರ ಪರದಾಟ ಅವರದೇ ಜೀವನದಲ್ಲೊಂದಿಷ್ಟು ಗೋಳಾಟ ಅರೆಸೇನೆ,ಪೊಲೀಸಪಡೆಗಳಿಂದ ಮದ್ದುಗುಂಡು, ಅಶ್ರುವಾಯುಗಳ ಎರಚಾಟ ಕಟ್ಟಾಳು ಕರೆ ತಂದವರಿಗೆ ಬಿರಿಯಾನಿ ಬಾಡೂಟ ಬೀರುಬ್ರಾಂಡಿ,ವಿಸ್ಕಿ ಕುಡಿದವರ ನಡುವೆ ಏರ್ಪಟ್ಟ ಮಂಗನಾಟ ಎಡಬಲ ನೀತಿ ನಿಯಮಗಳ ನಡುವೆ ತಿಕ್ಕಾಟ ಸಾವಿರ ಸಾವಿನ ಪ್ರತಿಫಲಕ್ಕೆ ನಡುರಾತ್ರಿ ದಕ್ಕಿದ ಸ್ವಾತಂತ್ರ್ಯಕ್ಕೆ ಶನಿಕಾಟ *******
ಮೌಲ್ಯಯುತ ಜೀವನಕ್ಕೆ ಶಿಸ್ತು ರಮೇಶ ಇಟಗೋಣಿ ಮೌಲ್ಯಯುತ ಜೀವನಕ್ಕೆ ಶಿಸ್ತು : ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಮುಂದೆ ಗುರಿ ಹಿಂದೆ ಗುರು ಇರಬೇಕು. ವಿದ್ಯೆಯನ್ನು ಅರ್ಥೈಸಿಕೊಂಡು ಕಲಿಯುವ, ಗ್ರಹಿಸುವ ಸಾಮರ್ಥ್ಯ ಸಂಪಾದಿಸುವವನೇ ವಿದ್ಯಾರ್ಥಿ. ಕಲಿಕಾರ್ಥಿಗೆ ಏಕಲವ್ಯನಂತಹ ಉತ್ಕಟವಾದ ಕಲಿಕೆಯ ಹಸಿವು ಇದ್ದಲ್ಲಿ ವಿದ್ಯೆಯನ್ನು ಒಲಿಸಿಕೊಳ್ಳುವುದು ಕಷ್ಟ ಆಗಲಾರದು. ಮಕ್ಕಳಾಗಿ ಕಲಿಯುವುದು ಎಷ್ಟು ಚಂದವೋ ಅಷ್ಟೇ ಗುರುವಾಗಿ ಕಲಿಸೋದು ಅಷ್ಟೇ ಅಂದವಾಗಿದೆ. ಸಾವಿರಾರೂ ಕಲ್ಲುಗಳನ್ನು ಸುಂದರವಾದ ಮೂರ್ತಿ ಮಾಡುವ ಬ್ರಹ್ಮ ಶಿಕ್ಷಕ. ಸ್ಟುಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ಆದರೆ ಟೀಚರ್ ಲೈಫ್ ಇಸ್ ಡೈಮಂಡ್ ಲೈಫ್. ಮಕ್ಕಳಲ್ಲಿ ಶಿಸ್ತನ್ನು ರೂಢಿಸುವ ಕಾರ್ಯ ಮನೆಯಿಂದಲೇ ಆರಂಭವಾಗಬೇಕು “ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು” ಎಂಬಂತೆ ಶಿಸ್ತಿನ ಪಾಲನೆ ಕೆವಲ ವಿದ್ಯಾರ್ಥಿ ಜೀವನದ ಭಾಗವಲ್ಲ ಈಡೀ ಜೀವನದುದ್ದಕ್ಕೂ ಶಿಸ್ತು ಒಂದು ಅವಿಭಾಜ್ಯ ಅಂಗ. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಮಕ್ಕಳಿಗೆ ಶಿಸ್ತನ್ನು ಕಾದುಕೊಳ್ಳಲು ತಿಳಿ ಹೇಳುವುದು ಪಾಲಕರ ಕರ್ತವ್ಯವಾಗಿದೆ. ಶಿಕ್ಷಣದಿಂದ ಒಳ್ಳೆಯ ನಡತೆಯನ್ನು ಅಳವಡಿಸಿಕೊಳ್ಳುವುದೇ ಶಿಸ್ತು, ಶಿಕ್ಷೆಯೇ ಶಿಸ್ತಲ್ಲ ಶಿಕ್ಷೆಯಿಂದ ಮಾತ್ರ ಶಿಸ್ತು ರೂಢಿಸಿಕೊಳ್ಳಲು ಸಾಧ್ಯವಿಲ್ಲ. ಜೀವನದಲ್ಲಿ ಯಾವ ವಿದ್ಯಾರ್ಥಿ ಶಿಸ್ತು ಅಳವಡಿಸಿಕೊಳ್ಳುತ್ತಾನೆಯೋ, ಯಾರು ಶಿಸ್ತಿನ ಶಿಪಾಯಿಗಳಾಗಿ ಓದುತ್ತಾರೆಯೋ ಅಂತಹ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚುತ್ತದೆ ಅಂತವರು ಮಾತ್ರ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ. ಶಿಕ್ಷಣ ಎಂದರೆ ಓದಿ ಉದ್ಯೋಗ ಗಿಟ್ಟಿಸಿಕೊಳ್ಳುವುದಲ್ಲ ನಿಮ್ಮಲ್ಲಿ ವ್ಯಕ್ತಿತ್ವವನ್ನು, ಮನುಷ್ಯತ್ವವನ್ನು, ಸಂಸ್ಕಾರವನ್ನು, ಉತ್ತಮ ಗುಣಗಳನ್ನು ಪಡೆಯುವುದೇ ಶಿಕ್ಷಣವಾಗಿದೆ. ವಿದ್ಯಾರ್ಥಿ ತನ್ನ ಜೀವನದಲ್ಲಿ ಗುರಿ ಸಾಧಿಸಬೇಕಾದರೆ ಕೆಲವೊಂದು ನಿಯಮ ಪಾಲಿಸಬೇಕಾಗುತ್ತದೆ. ಅದರಲ್ಲೂ ಶಿಸ್ತು ಮತ್ತು ಸಮಯಪ್ರಜ್ಞೆ, ಹಿರಿಯರನ್ನು ಗೌರವಿಸುವ ಗುಣ, ಸಂಯಮದ ನಡವಳಿಕೆಗಳು ಹೆಚ್ಚಾಗಬೇಕು ಇವುಗಳನ್ನು ಯಾರು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾರೋ ಅಂತವರು ಜೀವನದಲ್ಲಿ ಏನಾದರೂ ಸಾಧನೆ ಮಾಡುತ್ತಾರೆ ಇಲ್ಲವಾದರೆ “ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಎಂಬಂತೆ ಜೀವನದುದ್ದಕ್ಕೂ ಗೊಂದಲದಲ್ಲಿ ಉಳಿಯುತ್ತಾರೆ. “ಒಡೆದ ಮುತ್ತು ಕಳೆದ ಹೊತ್ತು” ಯಾವತ್ತೂ ತಿರುಗಿ ಬಾರದು ಎಂಬ ಮಾತಿನಂತೆ ಸಿಕ್ಕಂತ ಸಮಯವನ್ನು ಬಳಸಿಕೊಂಡು ಅವಕಾಶಗಳನ್ನು ಸೃಷ್ಟಿಸುತ್ತಾ ಹೋಗಬೇಕು. ಸಮಯ ಎಲ್ಲರಿಗೂ ಒಂದೇ ಅದನ್ನು ಅರಿತು ಹೆಜ್ಜೆ ಇಡುವುದು ಸಮಂಜಸ. ವಿದ್ಯಾರ್ಥಿಗಳಿಗೆ ಒಂದು ವರ್ಷದ ಮಹತ್ವ ತಿಳಿಯುವುದು ಪರೀಕ್ಷೆಯಲ್ಲಿ ಉತ್ತಿರ್ಣರಾದಾಗ ಮಾತ್ರ, ಸಿಕ್ಕ ಅವಕಾಶವನ್ನು ಆಯಾ ಸಮಯದಲ್ಲಿ ಸರಿಯಾಗಿ ಬೆಳೆಸಿಕೊಳ್ಳುತ್ತಾ ಶಿಸ್ತಿನ ಜೊತೆಗೆ ಸಾಧನೆಯು ನಿಮ್ಮನ್ನು ಬೆನ್ನಟ್ಟಿ ಬರುತ್ತದೆ. ಶಿಸ್ತು ಎಂದರೆ ಕೆಲವರ ಮನಸ್ಸಿಗೆ ನಿಯಂತ್ರಣ ಹಾಕಿಕೊಳ್ಳುತ್ತಾರೆ ಬದುಕಿನ ಇತಿಮಿತಿಗಳನ್ನು, ಎಲ್ಲೆಯನ್ನು ಹಾಕಿಕೊಳ್ಳುತ್ತಾರೆ ಸಂತೋಷದ ಎಲ್ಲ ವಿಚಾರಗಳಿಂದ ದೂರ ಇರುತ್ತಾರೆ ಇದು ಶಿಸ್ತು ಅಲ್ಲ. ಬದುಕಿನೊಂದಿಗೆ ಶಿಸ್ತು ರೂಢಿಸಿಕೊಳ್ಳುವುದೆಂದರೆ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಏಕಾಗ್ರತೆಯಿಂದ ತಮ್ಮೊಳಗಿನ ಶಕ್ತಿಯನ್ನು ಹರಿಬಿಡುವುದರ ಜೊತೆಗೆ ಇತರರ ಮಾತುಗಳಿಗೆ ಒಳಗಾಗದೇ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗದೆ ಸರಿಯಾದ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದೇ ಶಿಸ್ತು. ಎಲ್ಲ ವಿದ್ಯಾರ್ಥಿಗಳ ಜೀವನದಲ್ಲಿ ಗುರುವಿನ ಪಾತ್ರ ಅಮೂಲ್ಯವಾದದ್ದು ಶಿಕ್ಷಕರು ಕೂಡಾ ಒಬ್ಬ ನಿರಂತರ ವಿದ್ಯಾರ್ಥಿಯಾಗಿ ಬಹಳ ವಿಚಾರಗಳನ್ನು ವಿದ್ಯಾರ್ಥಿಗಳಿಂದ ಕಲಿತುಕೊಳ್ಳುತ್ತಾರೆ. ತಮ್ಮಲ್ಲಿರುವ ಎಲ್ಲ ಒಳ್ಳೆಯ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಬಿತ್ತರಿಸಿ ಮೌಲ್ಯಯುತ ಮೂರ್ತಿಯನ್ನಾಗಿ ರೂಪಿಸುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಪ್ರೀತಿಸಿ, ಬೋಧಿಸಿ ಒಳ್ಳೆಯ ಮೌಲ್ಯ ತುಂಬಿ ನಿಸ್ವಾರ್ಥ ಸೇವೆ ಸಲ್ಲಿಸುವಲ್ಲಿ ಶಿಕ್ಷಕರದು ಒಂದು ಕೈ ಮೇಲೆ ಇರುತ್ತದೆ. “ಹರ ಮುನಿದರೂ ಗುರು ಮುನಿಯಲಾರ” ಎಂಬ ಮಾತಿನಂತೆ ಅಂತಹ ಪ್ರತಿಯೊಬ್ಬ ಗುರುವಿಗೂ ನನ್ನ ಅನಂತಕೋಟಿ ನಮನಗಳು. *****************************
ದೌರ್ಬಲ್ಯ-ಸಾಮರ್ಥ್ಯ -2 ಅವ್ಯಕ್ತ ನನ್ನ ಹಿಂದಿನ ಕಥೆಯಲ್ಲಿ ಹೇಳಿದ ರೀತಿ ನಮ್ಮ ದೃಷ್ಟಿಕೋನ ದಲ್ಲಿ ಬದಲಾವಣೆಯಾದಂತೆ ನಮ್ಮ ದೌರ್ಬಲ್ಯಗಳು ನಮ್ಮ ಸಾಮರ್ಥ್ಯಗಳಾಗಿ ಬದಲಾಗುತ್ತವೆ….. ಇದಕ್ಕೆ ಅಂಟಿಕೊಂಡಂತೆ ಇನ್ನೊಂದು ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿ ತಿಳಿದುಕೊಳ್ಳಲು ಪ್ರಯತ್ನಿಸೋಣ… ಸಾಮಾನ್ಯವಾಗಿ ಮಕ್ಕಳು ಅಥವಾ ಕೆಲವು ದೊಡ್ಡವರು ತಮಗೆಲ್ಲ ತಿಳಿದಿದೆ ಎಂದು ಪ್ರತಿಯೊಂದು ಘಟನೆಯನ್ನು ಪ್ರತಿಯೊಬ್ಬರನ್ನು ಸರಿ-ತಪ್ಪುಗಳಲ್ಲಿ, ಒಳ್ಳೆಯದು-ಕೆಟ್ಟದ್ದು ಗಳಲ್ಲಿ ತೂಗಿ ತಮ್ಮ ಹಳೆಯ ಅನುಭವಗಳ ಮೇರೆಗೆ ಅವರದೇ ಆದ ಒಂದು ದೃಷ್ಟಿಕೋನವನ್ನು ಮಾಡಿಕೊಂಡು ಬಿಡುತ್ತಾರೆ.. ಅವರಿಗೆ ಅದೇ ಸರಿ…ಈ ನಿಟ್ಟಿನಲ್ಲಿ ನನ್ನ ಮಕ್ಕಳಲ್ಲಿಯೂ ಕೂಡ ಇದು ಕಂಡುಬಂತು… ಆ ದಿನ ನಾನು ಹೇಳಿ ಕೊಟ್ಟಿದ್ದೇನೋ ಹೌದು ನಮ್ಮ ಗುಣಗಳನ್ನು ನಾವು ತಿಳಿದುಕೊಂಡರೆ, ಅದು ನಮ್ಮ ಸಾಮರ್ಥ್ಯವಾಗಿ ಬಿಡುತ್ತವೆ…. ಆದರೆ ಎಲ್ಲೋ ಇದು ಅರ್ಧ ಸತ್ಯವಾಗಿತ್ತು. ಅದನ್ನು ಸಮಾಜದ ದೃಷ್ಟಿಯಿಂದಲೂ ಹೇಳಿಕೊಡಬೇಕಾದ ಅಗತ್ಯತೆ ಇತ್ತು… ಇದಕ್ಕೆ ಪೂರಕವಾಗಿ ಒಂದು ಹುಡುಗಿ ನನ್ನ ಬಳಿಗೆ ಬಂತು ‘ಮಿಸ್ ಮಿಸ್ಆವತ್ ಹೇಳಿದ್ದೇನೋ ನಿಜ! ನಾವು ಹೇಗಿದ್ದೇವೆ ಅದನ್ನು ಒಪ್ಪಿಕೊಂಡರೆ ನಮಗೆ ನೋವಾಗುವುದಿಲ್ಲ. ಆದರೂ ಏಕೆ ಸಮಾಜದಲ್ಲಿ ಕೆಲವೊಂದನ್ನು ಎತ್ತಿಹಿಡಿಯುತ್ತಾರೆ ?…’ ಅವಳ ಮಾತು ಕೇಳಿ ನನಗೆ ಅಯ್ಯೋ ಎನಿಸಿತು, ಹೌದಲ್ವಾ ಇದರಲ್ಲಿ ಸಮಾಜದ ಜವಾಬ್ದಾರಿಯನ್ನು ತಿಳಿಸಿ ಹೇಳೋಣ.. ಇವತ್ತಿನ ಕ್ರಿಯೆ ನನ್ನದು ಸ್ವಲ್ಪ ವಿಚಿತ್ರವಾಗಿತ್ತು, ಪ್ರತಿಯೊಂದು ಮಗುವಿನ ದೌರ್ಬಲ್ಯವು ನನಗೆ ಗೊತ್ತಿತ್ತು.. ಬೇಕಂತಲೇ ಅದನ್ನು ಎತ್ತಿ ಹಿಡಿದು ಹೀಯಾಳಿಸಿ ಬಿಟ್ಟೆ.. “ಏನೇ ಡುಮ್ಮಿ ಕೊಟ್ಟ ಕೆಲಸ ಮಾಡಿದ್ಯಾ, ಇಲ್ಲ ಬರೀ ತಿಳ್ಕೊಂಡೆ ಕೂತಿದ್ಯಾ”……“ಕೋಳಿ ಅಳುಬುರುಕಿ ಕೆಲಸ ಮುಗಿಸು ಆಮೇಲೆ ಕಾವೇರಿಯ ಹೊಳೆ ತುಂಬಿಸುವಂತೆ”…. “ಏ ಕುಳ್ಳ , ನೋಡಲಿಕ್ಕೆ ಮಾತ್ರ ಕುಳ್ಳ ಬರೀ ಕುಚೇಷ್ಟೆ ಪ್ರತಿಷ್ಠೆ ನಿನ್ನದು ಸುಮ್ಮನೆ ಕೂತು ನಿನ್ನ ಕೆಲಸ ಮಾಡು ಹುಂಬ”…. ಐದೇ ನಿಮಿಷದಲ್ಲಿ ಮಕ್ಕಳ ಮುಖಗಳೆಲ್ಲ ಚಪ್ಪೆಯಾಗಿ ಹೋದವು… ನಾನು ಮನಸ್ಸಿನಲ್ಲಿ ನಗಾಡಿ ಕೊಳ್ಳುತ್ತಾ….ಆ ದಿನದ ಕೊನೆ ಬರುವವರೆಗೂ ಅವರುಗಳನ್ನು ಗೊಂದಲದಲ್ಲಿಯೇ ಬಿಟ್ಟುಬಿಟ್ಟೆ…. ನನಗೆ ಗೊತ್ತು ಸುಲಭವಾಗಿ ಬಾಯಲ್ಲಿ ಹೇಳಿದ ನೀತಿ ಮಕ್ಕಳ ತಲೆಗೆ ಹತ್ತುವುದಿಲ್ಲ ಕ್ರಿಯೆಯಲ್ಲಿ ಮಾಡಿತೋರಿಸಿದರೆ ಮಾತ್ರ ಹತ್ತರಲ್ಲಿ ಐದು ಜನಕ್ಕಾದರೂ ಉಳಿದುಕೊಳ್ಳುತ್ತದೆ….ದಿನದ ಕೊನೆಯಲ್ಲಿ ಮಕ್ಕಳಲ್ಲಿ ಕೇಳಿದೆ, ಹೇಗಿತ್ತು ಇವತ್ತು ನನ್ನ ಮಾತಿನ ಶೈಲಿ ವೆರಿ ಸ್ಟ್ರಾಂಗ್ ಅಲ್ವಾ….. ಎಲ್ಲರೂ ಸಪ್ಪೆಯಾಗಿ ಸ್ವಲ್ಪ ಹೊತ್ತು ಕೂತರು ನಂತರ ಅದರಲ್ಲಿ ಒಬ್ಬಳು ‘ಮಿಸ್ ನೀವ್ ಇವತ್ತು ಹೀಗೆ ಮಾತನಾಡಬಾರದಿತ್ತು. ಯಾಕೆ ಅವಳನ್ನು ಹೀಯಾಳಿಸಿದಿರಿ, ಅವಳಿಗೆ ನೋವಾಗುವುದಿಲ್ಲ ವೇ?’ ಎಂದು ಕೇಳಿಯೇ ಬಿಟ್ಟಳು… ನನಗೂ ಬೇಕಿದ್ದದು ಅವೇ ತಾನೇ…. ನಾನು ಹೇಳಿದೆ ‘ಹೌದು ಬೇಕಂತಲೇ ಹೀಗೆ ಮಾಡಿದೆ.ಕೆಲವು ದಿನಗಳ ಕೆಳಗೆ ನಮ್ಮ ದೌರ್ಬಲ್ಯವನ್ನು ನಾವು ಸಾಮರ್ಥ್ಯ ವಾಗಿ ಹೇಗೆ ಉಳಿಯಬಹುದು ಎಂದು ತಿಳಿಸಿಕೊಟ್ಟಿದೆ, ಇವತ್ತು ಬೇರೆಯವರ ದೌರ್ಬಲ್ಯಗಳ ಕಡೆಗೆ ನಮ್ಮ ದೃಷ್ಟಿಕೋನ ಹೇಗಿರಬೇಕು ಹಾಗೂ ನಮ್ಮ ಜವಾಬ್ದಾರಿ ಏನು ಹೇಳಿ ನೋಡೋಣ??’ಎಲ್ಲರೂ ಯೋಚಿಸತೊಡಗಿದರು, ನನಗೆ ಗೊತ್ತಿತ್ತು ಅಷ್ಟು ಸುಲಭವಾಗಿ ಇವರು ಗ್ರಹಿಸಿರಲಿಕ್ಕಿಲ್ಲಾ… ಇನ್ನೊಬ್ಬರಿಗೆ ದೈಹಿಕವಾಗಿ ನಾವು ಹೊಡೆಯುವುದು ಜಿಗುಟುಗಳು ಎಷ್ಟು ಸರಿಯಲ್ಲವೋ ಹಾಗೆ ಇನ್ನೊಬ್ಬರ ಮನಸ್ಸಿಗೆ ನೋವಾಗುವಂತಹದನ್ನು ಮಾತನಾಡುವುದು ತಪ್ಪು, ಇದರಲ್ಲಿ ಅವರ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದಾದರೆ ಎಂದಿಗೂ ಹಾಗೆ ಮಾಡಬಾರದು…’ಆತ್ಮೀಯ ಸ್ನೇಹಿತರು ಹೀಗೆ ಅಡ್ಡ ಹೆಸರು ಇಟ್ಟು ಕರೆಯಬಹುದು ಅಲ್ಲವೇ’ ಎಂದು ಇನ್ನೊಬ್ಬ ಕೇಳಿದ.. ನಮಗೆ ಆತ್ಮೀಯ ವಾದವರು ನಮ್ಮ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಸಮಾಜದ ಎದುರು ವರ್ತಿಸುವುದಿಲ್ಲ, ಹಾಗಾದರೆ ಮಾತ್ರ ಅವರು ನಮ್ಮ ನಿಜವಾದ ಆತ್ಮೀಯರು, ನಾವು ನಾವು ಇರುವಾಗ ಎಷ್ಟು ಸಲಿಗೆಯ ಮಾತನಾಡಿದರು, ಮುಕ್ತವಾಗಿ ತರಲೆ ಹೊಡೆದರೂ ಹತ್ತಾರು ಜನಗಳ ಎದುರು ಅವರ ಗೌರವ ಪ್ರೀತಿ ಎಷ್ಟು ಮುಖ್ಯವೋ ಅಷ್ಟೇ ಆತ್ಮೀಯರ ಗೌರವ ಪ್ರೀತಿಯನ್ನು ಕಾಪಾಡುತ್ತಾರೆ…ಇಲ್ಲವಾದರೆ ಅವರು ನಿಮ್ಮ ಪರಮಾಪ್ತರು ಅಲ್ಲವೇ ಅಲ್ಲ… ಇದು ಮಾತ್ರ ನಿಜವಾದ ಸಂಬಂಧ ವಾಗಿರುತ್ತದೆ, ನೆನಪಿನಲ್ಲಿಡಿ ಮಕ್ಕಳೇ ಎಂದೆ. ಸಮಾಜದ ಒಳಿತಿಗೆ, ಅದರ ಆರೋಗ್ಯಕರ ಬೆಳವಣಿಗೆಗೆ ಪ್ರತಿಯೊಬ್ಬನಿಗೂ ಸಾಮಾಜಿಕ ಜವಾಬ್ದಾರಿ ಇರಬೇಕು. **********************************
You cannot copy content of this page