ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಮಕ್ಕಳ ಕಥೆ

ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ. ವಿಜಯಶ್ರೀ ಹಾಲಾಡಿ ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ……(ಮಕ್ಕಳ ಕತೆ) ಅವತ್ತು ಬೆಳಗ್ಗೆ ಚಳಿ. ಇಬ್ಬನಿ ಹನಿ ಕೂತ ನಾಚಿಕೆ ಮುಳ್ಳಿನ ಗಿಡ ಮತ್ತಷ್ಟು ನಾಚಿ ಮಣ್ಣ ಹೆಗಲಿಗೆ ತಲೆ ಇಟ್ಟಿತ್ತು. ಸುತ್ತ ಕಣ್ಣರಳಿಸಿ ನೋಡಿದ ಬೆಳ್ಳಿಬೆಕ್ಕು ಬಾಳೆಗಿಡದ ಬುಡದಲ್ಲಿ ಶ್ರದ್ಧೆಯಿಂದ ಗುಂಡಿ ತೋಡತೊಡಗಿತ್ತು. ನಿನ್ನೆ ಪುಟ್ಟ ಹೇಳುತ್ತಿದ್ದ ‘ಬೆಳ್ಳಿಯ ಬಾಲ ಟಿಶ್ಯೂ ಪೇಪರ್, ಸುಸ್ಸು ಮಾಡಿ ಅದರಲ್ಲೇ ಒರೆಸಿಕೊಳ್ಳೋದು.’ ಅಂತ! ಬೆಳ್ಳಿಗೆ ನಗು ಬಂತು. ಹಾಗೆ ಒಂದು ಹಾಡು ಗುನುಗತೊಡಗಿತು. ‘ಅದ್ಸರಿ ಪ್ರತಿ ದಿನ ನೋಡ್ತೀನಿ ಈ ಬಾಗಾಳು ಮರ ಬೆಳ್‌ಬೆಳಗ್ಗೆ ಒಂದಷ್ಟು ಹೂ ತಯಾರಿಸಿ ಎಸೆದಿರುತ್ತಲ್ಲ, ಏನು ಸೊಕ್ಕು ಅಂತೀನಿ’ !! ಬೆಳ್ಳಿಬೆಕ್ಕಿಗೆ ಒಬ್ಬೊಬ್ನೆ ಮಾತಾಡೋ ಚಟ! ‘ನಮ್ಮ ಪುಟ್ಟನ ಶಾಲೆಯಲ್ಲಿ ಸಿ.ಸಿ. ಕ್ಯಾಮರಾ ಅಂತೆ.. ಕಥೆ ಪಡ್ಚ ಆಯ್ತು. ಆ ಕ್ಯಾಮರಾದಡಿ ಓದುವುದು ಹೇಗಪ್ಪ, ಹರಟೆ ಹೊಡೆಯುವುದು ಹೇಗೆ, ಹುಣಸೇಬೀಜ ತಿನ್ನೋದು ಹೇಗೆ, ಕದ್ದು ಆಡೋವಾಗ ಕ್ಯಾಮರಾ ಆಫ್ ಮಾಡ್ತಾನಾ ಹೇಗೆ, ” ” “’ ನಗು ಬಂದು ಉರುಳಿ ಉರುಳಿ ನಕ್ಕು ಬಿಟ್ಟಿತ್ತು.‘ಹೂ ಗುಂಡಿ ಸರಿ ಹೋಗಿಲ್ಲ ಇನ್ನು’ ತನ್ನ ತಲೆಗೆ ತಾನೇ ಹೊಡೆದುಕೊಂಡು ಮಿದು ಪಂಜದಲ್ಲಿ ಮಣ್ಣು ಹೊರ ಹಾಕತೊಡಗಿತು. ‘ಹೂಂ ಬೆಳ್ಳಿ ಶಹಭಾಷ್ ಈಗ ಸರಿ ಹೋಯ್ತು’ ಪಟಪಟ ಬಾಲ ಬಡಿದು ಗುಂಡಿ ಮೇಲೆ ಕೂರಬೇಕೆನ್ನುವಾಗ..‘ಇದೆಂತದಪ್ಪ ಆ ಹಲಸಿನ ಮರದ ಮೇಲೆ?’ ಥಟ್ಟ ಎದ್ದು ಹಲಸಿನ ಮರದ ಕಡೆಗೆ ನೆಗೆಯಿತು. ನೋಡುವುದೆಂತ !! ಅಲ್ಲೂ ಒಂದು ಸಿ.ಸಿ. ಕ್ಯಾಮರಾ! ‘ಹಾಂ ಇದೆಂತ ಕಥೆಯಪ್ಪ ಪುಟ್ಟನ ಅಪ್ಪ ಹಾಕಿಸಿದ್ದ ಅಂತ’. ಬೆಳ್ಳಿ ಮೂಗಿನ ಮೇಲೆ ಬೆರಳಿಟ್ಟು ಬಾಲದ ಮಣ್ಣನ್ನು ಕೊಡವಿತು. ‘ಅಯ್ಯೋ ಕ್ಯಾಮರಾ ನಾನು ತೋಡಿದ ಗುಂಡಿಯನ್ನೇ ನೋಡುತ್ತಿದೆ ಥೂ. ಕಕ್ಕ ಮಾಡೋದು ಹೇಗೆ ಈಗ?’ ಯೋಚಿಸುತ್ತಾ ಬೆಳ್ಳಿಗೆ ಸಿಟ್ಟು ಬಂದು ಬಿಳಿಯ ಮುಖ ಕೆಂಪಾಯಿತು.ಧಪಧಪ ಕಾಲು ಬಡಿಯುತ್ತಾ ಮನೆಯೊಳಗೆ ಓಡಿ ಕಂಪ್ಯೂಟರ್ ಹತ್ತಿ ಹೊದಿಕೆಯೊಳಗೆ ತಲೆ ಹಾಕಿ ಮಲಗಿತು. ‘ಎಲ್ಲರೂ ಕೇಳಿಸಿಕೊಳ್ಳಿ ಇನ್ನು ನಾಲ್ಕು ದಿನ ಕಕ್ಕ ಮಾಡೋಲ್ಲ, ಐದನೇ ದಿನ ಆ ಸಿ.ಸಿ. ಕ್ಯಾಮರಾ ಅಲ್ಲಿಂದ ಹೋದರೆ ಸರಿ ಇಲ್ಲಾ ಅಂದ್ರೆ ಅಷ್ಟೆ! ಪುಟ್ಟ ನನ್ನನ್ನು ಕಳಕೋಬೇಕಾಗುತ್ತೆ, ನಂಗೇನೂ ಬೇರೆ ಮನೆ ಸಿಗಲ್ವ..’ !?ತಿರುತಿರುಗಿ ಗೊಣಗಿತು. ಹೆದರಿಕೆ ಏನೀಗ ಜೋರಾಗೇ ಅರಚಿತು. ಪುಟ್ಟನ ಅಮ್ಮ ಬಂದು ‘ಈ ಬೆಕ್ಕಿಗೆ ಏನಾಯ್ತಪ್ಪ ಪೋಕಾಲ’ ಎಂದು ತಲೆಗೆ ಮೊಟಕಿದರು. ಬೆಳ್ಳಿ ಸುಯ್ಯನೆ ಬಾಲ ಮಡಚಿ ಚಳಿ ಚಳಿ ಎನ್ನುತ್ತ ನಿದ್ದೆಯ ನಾಟಕ ಮಾಡಹತ್ತಿತು!*****************************

ಮಕ್ಕಳ ಕಥೆ Read Post »

ಅನುವಾದ

ಅನುವಾದ ಸಂಗಾತಿ

ಅಂಚು ಮೂಲ: ಸಿಲ್ವಿಯಾ ಪ್ಲಾತ್(ಅಮೇರಿಕಾ) ಕನ್ನಡಕ್ಕೆ: ಕಮಲಾಕರ ಕಡವೆ “ಅಂಚು” ಪರಿಪೂರ್ಣಗೊಂಡಿರುವ ಹೆಣ್ಣು.ಅವಳ ಸತ್ತ ದೇಹ ಧರಿಸಿದೆ ಸಾಧನೆಯ ನಸುನಗುವ,ಗ್ರೀಕರ ಭ್ರಮೆಯೊಂದು ಹರಿದಿದೆ ಅವಳ ಮೇಲುಡಿಪಿನ ಪದರುಗಳಲ್ಲಿ.ಅವಳ ನಗ್ನ ಪಾದಗಳು ಹೇಳುವಂತಿದೆನಾವು ಇಷ್ಟು ದೂರ ಬಂದಿದ್ದೇವೆ, ಇನ್ನು ಮುಗಿಯಿತು. ಸತ್ತ ಪ್ರತಿ ಮಗುವನ್ನೂ ಸುತ್ತಿಟ್ಟುಕೊಂಡು, ಬಿಳಿ ಸರ್ಪದಂತೆ,ಒಂದೊಂದೂ ಈಗ ಖಾಲಿಯಾದ ಚಿಕ್ಕ ಹಾಲಿನ ಕೊಡಕ್ಕೆ ತಾಗಿ,ಅವಳು ಮಡಿಚಿ ಕೊಂಡಿದ್ದಾಳೆ ಅವರನ್ನು ತನ್ನ ದೇಹದೊಳಕ್ಕೆ, ಮುಚ್ಚಿಕೊಂಡ ಗುಲಾಬಿಯಪಕಳೆಗಳಂತೆ, ಸೆಟೆದುಕೊಂಡ ಹೂದೋಟದಲ್ಲಿ, ರಾತ್ರಿ ಹೂವಿನಆಳ ಗಂಟಲಿನಿಂದ ಸಿಹಿ ಕಂಪು ಸ್ರಾವಿಸಿದೆ. ತನ್ನ ಎಲುಬಿನ ಹೆಡೆಯಡಿಯಿಂದ ಬಿರುನೋಟ ಬೀರುತ್ತಚಂದ್ರನಿಗೆ ಇದರಲ್ಲಿ ದುಃಖ ಪಡುವಂತದೇನೂ ಕಾಣುತ್ತಿಲ್ಲ ಅವನಿಗೆ ಇವುಗಳೆಲ್ಲ ಗೊತ್ತಿದ್ದದ್ದೇಅವನ ಕಲೆಗಳು ಕಟಕಟಿಸಿ ಸೆಳೆಯುತ್ತವೆ. “EDGE” The woman is perfected.Her deadBody wears the smile of accomplishment,The illusion of a Greek necessityFlows in the scrolls of her toga,Her bareFeet seem to be saying:We have come so far, it is over.Each dead child coiled, a white serpent,One at each littlePitcher of milk, now empty.She has foldedThem back into her body as petalsOf a rose close when the gardenStiffens and odors bleedFrom the sweet, deep throats of the night flower.The moon has nothing to be sad about,Staring from her hood of bone.She is used to this sort of thing.Her blacks crackle and drag. *********

ಅನುವಾದ ಸಂಗಾತಿ Read Post »

ಇತರೆ

ಲಹರಿ

ಪ್ರೀತಿಯ ಆಸುಪಾಸು… ಚಂದ್ರಪ್ರಭ ಪ್ರೀತಿಯ ಆಸುಪಾಸು… ಒಮ್ಮೊಮ್ಮೆ ಹೇಳುತ್ತೇವೆ, ” ನಿನ್ನ ನಾ ಪ್ರೀತಿಸುತ್ತೇನೆ, ಆದರೆ..” ಈ ‘ಆದರೆ’ ಪ್ರೀತಿಸುತ್ತೇನೆ ಎನ್ನುವ ಸತ್ಯವನ್ನೇ ಹೊಡೆದುರುಳಿಸುತ್ತದೆ. ಪ್ರೀತಿಯಲ್ಲಿ ಹಾಗಿದ್ದಲ್ಲಿ, ಹೀಗಿದ್ದಲ್ಲಿ,ಆದರೆ ಗಳಿಗೆ ಜಾಗವಿಲ್ಲ. ಅಲ್ಲಿ ಆರಂಭ ಅಂತ್ಯವೂ ಇಲ್ಲ. ಅಲ್ಲಿ ಪ್ರೀತಿ ಇದೆ ಅಷ್ಟೇ.. ಎಂದೆಂದಿಗೂ. ಭಾವನೆಗಳ ಕಲಸುಮೇಲೋಗರದಲ್ಲಿ ಹೀಗೆ ಬಂದು ಹಾಗೆ ಹೋಗುವ ಕ್ಷಣದ ಚಂಚಲತೆ, ಉತ್ಕಟತೆ ಅದಲ್ಲ. ಆರಂಭ ಅಂತ್ಯಗಳಿಲ್ಲದ ಷರತ್ತುಗಳಿಲ್ಲದ ಎದೆಯ ತುಡಿತ ಪ್ರೀತಿ. ಎದೆಯೆ ಅದರ ಮನೆ.. ದೇವರ ಗುಡಿ ಅದಕ್ಕೆ. ಎದೆಯ ಒಂದು ಭಾಗವೇ ಅದು. ಕಾಲ ಕಾಲಕ್ಕೆ ತನ್ನಷ್ಟಕ್ಕೆ ತಾನೇ ಜೀವಕೋಶಗಳಿಗೆ ರೂಪು ಕೊಡುತ್ತ.. ಅವಯವಗಳನ್ನು ಕಸಿ ಮಾಡುತ್ತ ಅದು ಚಿಗುರುತ್ತಲೇ ಇರುತ್ತದೆ ಅನುಗಾಲ. ನಮ್ಮ ಬುದ್ಧಿಯನ್ನು, ಭಾವವನ್ನು ಪರಿವರ್ತಿಸುವ, ನಾವು ಸಾಗಬೇಕಾದ ದಾರಿಯನ್ನು ನಿರ್ದೇಶಿಸುವ ತಾಕತ್ತು ಪ್ರೀತಿಗಿದೆ. ನಮ್ಮ ಆತ್ಮ ಚೈತನ್ಯದಲ್ಲಿ ನೆಲೆ ನಿಂತು ಬದುಕಿನುದ್ದಕ್ಕೂ ಅನುಕ್ಷಣವೂ ನಮ್ಮನ್ನು ಮುನ್ನಡೆಸುವ ದೀಪ್ತಿ ಪ್ರೀತಿ. “ನಾ ನಿನ್ನ ಪ್ರೀತಿಸುವೆ, ಆದರೆ…” ಎಂದರೆ ‘ಪ್ರೀತಿಸುವುದೇ ಇಲ್ಲ’ ಎಂತಲೇ ಅರ್ಥ. ಆದ್ದರಿಂದ ನಾ ನಿನಗೆ ಹೇಳುವುದಿಷ್ಟೇ : ನಾ ನಿನ್ನ ಪ್ರೀತಿಸುತ್ತೇನೆ ಕೊನೆ ಮೊದಲುಗಳೇ ಇಲ್ಲದೆ. ನಿನ್ನ ಪ್ರೀತಿಸ ತೊಡಗಿದ ಕ್ಷಣದಿಂದ ನೀ ನನ್ನ ದೇಹದ ಬೇರ್ಪಡಿಸಲಾಗದ ಅಂಗವಾಗಿರುವೆ. ಹುಡುಗಿಯೊಬ್ಬಳು ಓರ್ವ ಹುಡುಗನನ್ನು ಹೇಗೆ ಪ್ರೀತಿಸಬಹುದೊ ಹಾಗೇ ನಾ ನಿನ್ನ ಪ್ರೀತಿಸುವೆ..ನಿರ್ಭಯವಾಗಿ.. ಯಾವ ನಿರೀಕ್ಷೆಗಳೂ ಇಲ್ಲದೆ. ಪ್ರತಿಯಾಗಿ ಏನನ್ನೂ ಬಯಸೆನು.. ಅನಂತ ಕಾಲವೂ ನೀ ನನ್ನೆದೆಯಲ್ಲಿಯೇ ನೆಲೆಯಾಗಿರಬೇಕು ಎಂಬುದರ ಹೊರತು. ನಿನ್ನ ಬಲ, ನಿನ್ನ ಆತ್ಮ ಪ್ರತ್ಯಯ, ನಿನ್ನ ಕಣ್ಣಬೆಳಕು ನನಗೆ ನೀಡುವ ಸ್ವಾತಂತ್ರ್ಯವೊಂದೇ ಸಾಕು.. ನಾನು ಮೇಲೆ ಮೇಲಕ್ಕೆ ಹಾರುವೆ. ಇಂಗ್ಲಿಷ್ ಮೂಲ : ಕೊಕೊ ಜೆ ಜಿಂಜರ್ Sometimes you want to say, “I love you, but…” Yet the “but” takes away the ‘I love you’. In love their are no ‘buts’ or ‘if’s’ or ‘when’. It’s just there, and always. No beginning, no end. It’s the condition-less state of the heart. Not a feeling that comes and goes at the whim of the emotions. It is there in our heart, a part of our heart…eventually grafting itself into each limb and cell of our bodies. Love changes our brain, the way we move and talk. Love lives in our spirit and graces us with its presence each day, until death. To say “I love you, but….” is to say, “I did not love you at all”. I say this to you now: I love you, with no beginning, no end. I love you as you have become an extra necessary organ in my body. I love you as only a girl could love a boy. Without fear. Without expectations. Wanting nothing in return, except that you allow me to keep you here in my heart, that I may always know your strength, your eyes, and your spirit that gave me freedom and let me fly.” ― Coco J. Ginger ************

ಲಹರಿ Read Post »

ಕಾವ್ಯಯಾನ

ಕಾವ್ಯಯಾನ

ಶಾಪ ಡಾ.ಗೋವಿಂದ ಹೆಗಡೆ ಶಾಪ ಸಣ್ಣ ಪುಟ್ಟವು ಸಾಲುವುದಿಲ್ಲ ಅಂತ ದೊಡ್ಡ ಹಂಡೆ, ಬಾನಿ, ಕೊಪ್ಪರಿಗೆ ಗಳನ್ನೇ ಆಳಕ್ಕಿಳಿಸಿದೆ ಕವಿತೆಗಳ ತುಂಬಿ- ಕೊಂಡು ಬರಲೆಂದು ಒಡಲ ತುಂಬ ಖಾಲಿ ಖಾಲಿ ಹೊರಳಿ ಬಂದಿವೆ ಬಾವಿಲಿ ಜಲ ಬತ್ತಿ ಹೋಯ್ತೆ ಈಗ ನಡೆದಿದೆ ಕವಿತೆಯ ಸುಳಿವೇ ಇರದ ಪೊಳ್ಳು ಪದಗಳ ಸಂತೆ ( ಇದೂ ಅವುಗಳಲ್ಲಿ ಒಂದಂತೆ?!) ** ಭಾರೀ ಜರಿ ಪೋಷಾಕು ಆಳೆತ್ತರದ ಹೂ ಹಾರ ಮಸ್ತು ಗುಲಾಲು ಬಾಜಾ ಬಜಂತ್ರಿ ಗಳಲ್ಲಿ ನಡೆದಿದೆ ಶವದ ಮೆರವಣಿಗೆ ಮೆರೆಸೋದು ಅಂದರೆ ಹಾಗೇ! ಪಾಪ,ಕವಿತೆ ಉಡಲು ಸ್ವರಗಳ ಪತ್ತೆಯೇ ಇರದೆ ( ಉಣಲು ವ್ಯಂಜನ ಸಿಗದೆ- ಹಸಿದೇ) ಬತ್ತಲಾಗಿಯೇ ಉಳಿದು ಮರೆಯಾಗಿದೆ ಮೆರವಣಿಗೆಯತ್ತ ಇಣುಕಲೂ ಹೋಗದೇ… **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಯಾಕಿಷ್ಟು ಬೇಸರ? ದೀಪಿಕಾ ಬಾಬು ಯಾಕಿಷ್ಟು ಬೇಸರ ಈ ಮನಸಿಗೆ ನೀ ಬಾರದೆ ಹೋದರೆ ನನ್ನ ಕನಸಿಗೆ..! ಉಳಿಗಾಲ ವಿಲ್ಲ ಈಗ ಆ ನಿದೆರೆಗೆ ನೀ ಬೇಗ ಬರುವೆಯಾ ನನ್ನ ಮನಸಿಗೆ…!! ದೂರದ ‌ಪರಿಚಯ ನಮ್ಮದು ಆದೇವೂ ಆತ್ಮೀಯರಿಂದು, ಕಾರಣವೇ ಬೇಕೆಯೆಂದು ಬಯಸದು ಮನಸಿದು ಇಂದು..!! ನಮ್ಮಯ ಸಲ್ಲಾಪದ ಪ್ರೀತಿಗೆ ಸಿಕ್ಕಿದೆ ಮನೆಯಲ್ಲಿ ಒಪ್ಪಿಗೆ ಮದುವೆ ದಿಬ್ಬಣದ ಹೊತ್ತಿಗೆ ಆಗುವೆವು ಆದರ್ಶದ ಜೋಡಿಗೆ..!! ಮೋಡಿ ಯದು ಮಾಡಿದೆ ನೋಡು ನಿ‌ನ್ನೆದೆಯ ಉಸಿರಿನ ಹಾಡು..! ಹಿಡಿದಿರುವ ಪ್ರೀತಿಯ ಜಾಡು ಆಗಿಹುದು ನನ್ನಯ ಪಾಡು..! ಬದುಕಿನ ಜೀವಾಳ ನೀನು ಮೀಸಲಿಡುವೆ ಪ್ರತಿ ಜನುಮವ ನಾನು ಕಾದಿರಿಸು ನನ್ನಗಾಗಿ ಇನ್ನು ಪ್ರತಿ ಜೀವನ… ನಮ್ಮ ಪ್ರೀತಿ ಸವಿ ಜೇನು..!! *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಾಲಿನ ಜಾಡು ಹಿಡಿದು ಡಾ.ಗೋವಿಂದ ಹೆಗಡೆ “ಕತ್ತಲಿನ ಮುಖ ಮೀಸೆ…” ಮತ್ತು “ರೆಪ್ಪೆಗಳ ತಂತಿಯ ಮೇಲೆ…” ಸುಮಾರು ೧೯೮೭- ೮೮ ಇರಬೇಕು. ಮೈಸೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದೆ .ತಿಂಗಳ ತುಷಾರ ಮಾಸ ಪತ್ರಿಕೆಯ ಚಿತ್ರ ಕವನ ಸ್ಪರ್ಧೆಯ ಬಹುಮಾನಿತ ಕವನ ಮನಸೆಳೆಯಿತು. ಮೊದಲಿಗೆ ಚಿತ್ರದ ಬಗ್ಗೆ ಹೇಳಬೇಕು. ಕತ್ತಲಿನಲ್ಲಿ ದೀಪದ ಕಂಬ, ಉರಿಯುತ್ತಿರುವ ದೀಪದ ಕುಡಿ, ಸೊಡರು. ಅದನ್ನು ತಿದ್ದಲು ಮುಂದೆ ಬಂದಿರುವ ಹೆಣ್ಣಿನ, ತುಂಬು ಬಳೆಗಳಿರುವ ಅಂದದ ಕೈ.ಚಿತ್ರ ‘ಯಜ್ಞ’ ಮಂಗಳೂರು ಅವರದು ಇರಬೇಕು, ಖಾತ್ರಿಯಾಗಿ ನೆನಪಿಲ್ಲ. ಬಹುಮಾನಿತ ಕವಿತೆ ಆಗಲೇ ಕಥೆಗಾರ್ತಿಯಾಗಿ ಹೆಸರು ಮಾಡಿದ್ದ ಶ್ರೀಮತಿ ಭಾಗೀರಥಿ ಹೆಗಡೆಯವರದು. ಕವಿತೆಯ ಒಂದು ಸಾಲು, ಹೀಗೆ- ‘ಕತ್ತಲಿನ ಮುಖ ಮೀಸೆ ತಿದ್ದಿ ನೋಡುವ ತವಕ..’ ಓದಿ ರೋಮಾಂಚನಗೊಂಡಿದ್ದೆ. ಆ ಸನ್ನಿವೇಶವನ್ನು ಎಷ್ಟೊಂದು ವಿನೂತನವಾಗಿ ವಿಶೇಷವಾಗಿ ಹೇಳುತ್ತದೆ ಈ ಸಾಲು! ೧೯೯೩ರಲ್ಲಿ ಶಿರಸಿಯಲ್ಲಿ ಭಾಗೀರಥಿ ಹೆಗಡೆಯವರ ಮೊದಲ ಭೇಟಿ, ಅವರ ಮನೆಯಲ್ಲಿ. ಮಾತಿನ ನಡುವೆ ಈ ಚಿತ್ರ ಕವನ ಸ್ಪರ್ಧೆಯಲ್ಲಿ ಬಹುಮಾನಿತವಾದ ಅವರ ಕವನವನ್ನು ನೆನಪಿಸಿ ಈ ಸಾಲನ್ನು ಉದ್ಧರಿಸಿ ‘ತುಂಬಾ ತುಂಬಾ ಇಷ್ಟವಾಯಿತು’ ಎಂದೆ. ಭಾಗೀರಥಿಯವರ ಸಂತಸ, ಅದರಿಂದಾಗಿ ಹನಿದ ಕಣ್ಣೀರು ಇಂದಿಗೂ ಕಣ್ಣಿಗೆ ಕಟ್ಟಿದೆ. ಅವರು ‘ಹೀಗೆ ನಾಲ್ಕಾರು ವರ್ಷಗಳ ನಂತರವೂ ಅಪರಿಚಿತ ಓದುಗನ ಮನದಲ್ಲಿ ಒಂದು ಸಾಲು ಉಳಿದಿದೆ ಎಂದರೆ ಬರೆದದ್ದು ಸಾರ್ಥಕವಾಯಿತು’ ಎಂದರು. ಅದರ ಶ್ರೇಯ ಅವರಿಗೆ, ಅವರ ಕವಿತೆಗೆ ಸಲ್ಲಬೇಕು. ನನಗಲ್ಲ. ಈಗೇಕೆ ಇದನ್ನು ನೆನಪಿಸಿಕೊಂಡೆ ಎಂದರೆ ಮೊನ್ನೆ ಇನ್ನೊಂದು ವಿಶಿಷ್ಟ ಚಿತ್ರ( ಸಾಲು) ಮನಸ್ಸನ್ನು ಸೆಳೆಯಿತು. ಶ್ರೀಮತಿ ಶೀಲಾ ಭಂಡಾರ್ಕರ್ ನನ್ನೊಂದಿಗೆ ಒಂದು ವಾಟ್ಸಾಪ್ ಗುಂಪಿನಲ್ಲಿ ಇದ್ದಾರೆ. ಅವರ ಇತ್ತೀಚಿನ ಒಂದು ಕವನದಲ್ಲಿ ಸಂಜೆಯನ್ನು ಅವರು ವರ್ಣಿಸುವುದು ಹೀಗೆ- ‘ರೆಪ್ಪೆಗಳ ತಂತಿಯ ಮೇಲೆ ಒಣಹಾಕಿದ್ದ ಸಾಯಂಕಾಲ…’ ಈ ಸಾಲಿನ ವಿವರಣೆಗೆ ನಾನು ಹೋಗುವುದಿಲ್ಲ. ಮೌನದೊಳೊಲಿವುದೇ ಸಮ್ಮಾನ ! ಬೇಂದ್ರೆ ಕವನವನ್ನು ‘ಭುವನದ ಭಾಗ್ಯ’ ಎಂದರು ಹಿರಿಯ ವಿಮರ್ಶಕ ಡಾ. ಜಿಎಸ್ ಅಮೂರ ಅವರು. ನಾವು-ನೀವು ಬೇಂದ್ರೆ ಅಲ್ಲದಿರಬಹುದು. ಆದರೆ ವಿಶಿಷ್ಟ ಹೊಳಹುಗಳನ್ನು ಪಡಿಮೂಡಿಸುವ ಪ್ರತಿಯೊಂದು ಸಾಲು ಬರೆದವರ ಭಾಗ್ಯ, ಓದಿದವರ ಭಾಗ್ಯವೂ ಹೌದು! ಇಂದು ಬರೆಯುತ್ತಿರುವ ಹಿರಿಯ-ಕಿರಿಯ ಬರಹಗಾರರು ಇಂಥ ಸವಿಗಾಳುಗಳನ್ನು ಕನ್ನಡದ ಕಣಜಕ್ಕೆ ಸದಾ ತುಂಬುತ್ತಿರಲಿ. ***********

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಕೇಂದ್ರದ ಬಜೆಟ್ ಗಣೇಶ್ ಭಟ್ ಶಿರಸಿ ಕೇಂದ್ರ ಬಜೆಟ್ 2020 ಬಜೆಟ್ ಒಂದರಿಂದಲೇ ಇಡೀ ಅರ್ಥವ್ಯವಸ್ಥೆ ಬದಲಾಗಿ ಬಿಡುತ್ತದೆ ಎಂದು ಭಾವಿಸುವದು ಮೂರ್ಖತನ. ಆದರೆ, ಬಜೆಟ್‍ನಲ್ಲಿ ಮಂಡಿಸುವ ವಿಚಾರಗಳು, ಆದಾಯದ ಮೂಲಗಳು ಮತ್ತು ಖರ್ಚುವೆಚ್ಚಗಳನ್ನು ನಿಭಾಯಿಸುವ ವಿವರಗಳಿಂದ ಅರ್ಥವ್ಯವಸ್ಥೆ ಸಾಗುತ್ತಿರುವ ದಿಸೆಯನ್ನು ಸುಲಭದಲ್ಲಿ ಗುರ್ತಿಸಲು ಸಾಧ್ಯ. ಹಲವು ಕ್ಷೇತ್ರಗಳಿಗೆ ಬಜೆಟ್‍ನಲ್ಲಿ ಮೀಸಲಾಗಿಟ್ಟಿರುವ ಮೊತ್ತವನ್ನು ಗಮನಿಸಿದಾಗ ಸರ್ಕಾರದ ನಿಲುವುಗಳನ್ನು ಗ್ರಹಿಸುವುದು ಸುಲಭ ಸಾಧ್ಯ. ವರ್ಷ ವರ್ಷವೂ ಹಿಗ್ಗುತ್ತಿರುವ ಬಜೆಟ್ ಗಾತ್ರದ ಜೊತೆಗೆ ಏರುತ್ತಿರುವ ಬೆಲೆಗಳು, ಹೆಚ್ಚುತ್ತಿರುವ ಖರ್ಚುಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿದಾಗ ಮಾತ್ರ ದೇಶದ ಆರ್ಥಿಕತೆಯ ಆರೋಗ್ಯದ ಕಲ್ಪನೆ ಬರುತ್ತದೆ. ಉದಾಹರಣೆಗಾಗಿ ಈ ಬಾರಿಯ ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮೊತ್ತ ಮೀಸಲಾಗಿಡಲಾಗಿದೆಯೆಂದು ಹೊಗಳುವವರಿದ್ದಾರೆ. ಆದರೆ ಈ ಮೊತ್ತದಲ್ಲಿ ಶಿಕ್ಷಕರು, ಉಪನ್ಯಾಸಕರುಗಳಿಗೆ ನೀಡುವ ಸಂಬಳ ಪಿಂಚಣಿ, ಸವಲತ್ತುಗಳೇ ಹೆಚ್ಚಿನ ಭಾಗವನ್ನು ನುಂಗುತ್ತವೆಂಬುದು ವಿಷಾದನೀಯ ಅಂಶ. ಯು.ಜಿ.ಸಿ ಯೋಜನೆಯಡಿ ಸಂಬಳ ಪಡೆಯುವವರು ಮಾಸಿಕ ಒಂದುವರೆ ಲಕ್ಷಕ್ಕೂ ಹೆಚ್ಚಿಗೆ ವೇತನ ಪಡೆಯುತ್ತಾರೆ. ಅಂಥವರ ಪಿಂಚಣಿ ಐವತ್ತರಿಂದ ಅರವತ್ತು ಸಾವಿರ ರೂಪಾಯಿಗಳಿಗೂ ಮಿಕ್ಕಿರುತ್ತದೆ. ಸರ್ಕಾರದ ಖರ್ಚಿನ ದೊಡ್ಡ ಪಾಲನ್ನು ಪಡೆಯುವ ನೌಕರರ ಸಂಬಳ , ಸವಲತ್ತುಗಳು ಹಾಗೂ ಪಡೆದ ಸಾಲದ ಮೇಲೆ ನೀಡಬೇಕಾದ ಬಡ್ಡಿ. ಯಾವುದೋ ಸಮಯ, ಸಂದರ್ಭದಲ್ಲಿ ನಿಗದಿಯಾದ ನೌಕರರ ಸಂಬಳ ಸದಾ ಏರುತ್ತಲೇ ಇರಬೇಕೆಂದು ಬಯಸುತ್ತಾರೆ. ಸರ್ಕಾರವೂ ಇದನ್ನು ಅನುಮೋದಿಸುತ್ತದೆ. ಶೇಕಡಾ 4 ಕ್ಕಿಂತ ಕಡಿಮೆ ಇರುವ ಈ ವರ್ಗಕ್ಕೆ ನೀಡುವ ವೇತನ, ಸವಲತ್ತುಗಳು ಏರುತ್ತಿರುವಾಗ ಬಹುಸಂಖ್ಯಾತರಾದ, ಕೃಷಿಕರು, ಕಾರ್ಮಿಕರ ಆದಾಯವೂ ಹೆಚ್ಚುತ್ತಲೇ ಇರಬೇಕೆಂಬ ಕುರಿತು ಪ್ರಾಮಾಣಿಕ ಚಿಂತನೆ , ಪ್ರಯತ್ನಗಳು ನಡೆಯುತ್ತಿಲ್ಲ. ಬಜೆಟ್‍ನಲ್ಲಿ ಘೋಷಣೆಯಾಗುವ ರಿಯಾಯಿತಿ, ಅನುದಾನಗಳ ಪ್ರಮಾಣವನ್ನು ಗಮನಿಸಿ, ಆ ಕ್ಷೇತ್ರ ಉದ್ಧಾರವಾಯಿತೆಂದು ಚಪ್ಪಾಳೆ ಬಾರಿಸುವವರು ಇಡೀ ಅರ್ಥವ್ಯವಸ್ಥೆಯ ಸಮಗ್ರತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಉದಾಹರಣೆಗಾಗಿ ಕೃಷಿ ಕ್ಷೇತ್ರಕ್ಕೆ ನೀಡಬೇಕಾದ ಸಾಲ, ಸಬ್ಸಿಡಿಗಳ ಮೊತ್ತವನ್ನು ಹೆಚ್ಚಿಸಿದಾಕ್ಷಣ, ಕೃಷಿಗೆ ಭಾರೀ ಬೆಂಬಲ ಎನ್ನುವ ಮಾತು ಕೇಳಿ ಬರುತ್ತದೆ. ಕೃಷಿ ರಗದ ಸಮಸ್ಯೆಗಳ ಉಳಿದ ಆಯಾಮಗಳನ್ನು , ಮೂಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಏನಾದರೂ ಕಾರ್ಯಕ್ರಮಗಳಿವೆಯೇ ಎಂದು ಗಮನಿಸುವುದೇ ಇಲ್ಲ. ಕೃಷಿಕರ ಆದಾಯವನ್ನು ದುಪ್ಪಟ್ಟು ಮಾಡುವುದು ಬರೀ ಘೋಷಣೆಗಳಿಂದ ಸಾಧ್ಯವಿಲ್ಲ. ಸಮಗ್ರ ಭೂ ಬಳಕೆ ನೀತಿ, ಅದಕ್ಕೆ ಪೂರಕವಾಗಿ ಬೇಡಿಕೆ ಆಧಾರಿತ ಬೆಳೆ ಸಂಯೋಜನೆ ಮಾರುಕಟ್ಟೆ ವ್ಯವಸ್ಥೆ ಮುಂತಾದ ಹಲವು ಸಂಗತಿಗಳನ್ನು ಒಳಗೊಂಡಾಗ ಮಾತ್ರ ಕೃಷಿ ಕ್ಷೇತ್ರ ಲಾಭದಾಯಕವಾಗಬಲ್ಲದು. ಪ್ರಸ್ತುತ ಬಜೆಟ್ ಈ ದಿಸೆಯಲ್ಲಿ ಆಶಾದಾಯಕ ಹೆಜ್ಜೆಯನ್ನೇ ಹಾಕಿಲ್ಲ. ಒಂದು ಜಿಲ್ಲೆ- ಒಂದು ಬೆಳೆ ಮುಂತಾದ ಅತಾರ್ಕಿಕ, ಅವೈಜ್ಞಾನಿಕ ಘೋಷಣೆಗಳು ಅಂಧಾಭಿಮಾನಿಗಳ ಕರತಾಡನ ಗಿಟ್ಟಿಸಲಷ್ಟೇ ಯೋಗ್ಯ. ಪ್ರಸಕ್ತ ಬಜೆಟ್ ಬಿಜೆಪಿ ಸರ್ಕಾರದ ಚಿಂತನೆಗಳ ಮುಂದುವರಿಕೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ತೊಂಬತ್ತರ ದಶಕದ ಪ್ರಾರಂಭದಲ್ಲಿ ಕಾಂಗ್ರೆಸ್ ಪ್ರಾರಂಭಿಸಿದ ಖಾಸಗೀಕರಣ, ಉದಾರೀಕರಣ, ಜಾಗತೀಕರಣ ನೀತಿಯನ್ನು ಆ ಪಕ್ಷವು ಸಣ್ಣ ಸಣ್ಣ ದೋಸ್‍ಗಳ ಮೂಲಕ ಅನುಷ್ಠಾನಗೊಳಿಸಲು ಪ್ರಯತ್ನಿಸಿತ್ತು. ಆದರೆ ಬಿಜೆಪಿ, ಕಳೆದ ಆರು ವರ್ಷಗಳಿಂದಲೂ ಇವೇ ನೀತಿಗಳನ್ನು ರಾಜಾರೋಷಾಗಿ ವೈಭವೋಪೇತವಾಗಿ ಕಾಂಗ್ರೆಸ್ ನಾಚಿಕೊಳ್ಳುವ ರೀತಿಯಲ್ಲಿ ಅನುಷ್ಟಾನಗೊಳಿಸುತ್ತಿದೆ. ಆರ್ಥಿಕವಾಗಿ ಲಾಭದಾಯಕವಾಗಿದ್ದ ಜೀವ ವಿಮಾ ನಿಗಮದ ಶೇರುಗಳ ಮಾರಾಟ ಮಾಡಲು ಮುಂದಾಗಿರುವುದು, ಬಿಜೆಪಿಯ ಖಾಸಗೀಕರಣದ ಪ್ರೇಮಕ್ಕೆ ಉದಾಹರಣೆ. ದೇಶದ ಜನರಿಗಾಗಿ ಜೀವವಿಮಾ ನಿಗಮದ ಶೇರುಗಳನ್ನು ಬಿಡುಗಡೆ ಮಾಡಲಾಗುತ್ತದೆಯೆಂಬುದು ಘೋಷಣೆ. ಆದರೆ ಈ ಶೇರುಗಳು ಸೇರುವುದು ಬೆರಳೆಣಿಕೆಯ ಶ್ರೀಮಂತರ ಕೈಗೆ. ಐವತ್ತು ಸಾವಿರ ಕೋಟಿಗೂ ಹೆಚ್ಚು ಆದಾಯ ಸಂಗ್ರಹಿಸುವ ಉದ್ದೇಶ ಹೊಂದಿರುವ ಈ ಪ್ರಸ್ತಾಪ, ಸಾಲ ತೀರುವಳಿಗಾಗಿ ತನ್ನ ಉತ್ಪನ್ನ ಬರುತ್ತಿರುವ ತೋಟದ ಒಂದೊಂದೇ ಭಾಗವನ್ನು ಮಾರಾಟ ಮಾಡುವ ರೀತಿಯಂತಿದೆ. ಎಲ್‍ಐಸಿಯ ನೌಕರರು, ಏಜೆಂಟರು ನೀಡುತ್ತಿರುವ ಸೇವೆಯಲ್ಲಿ ಸಾಕಷ್ಟು ಕುಂದುಗಳಿವೆ. ಆದರೂ ಎಲ್‍ಐಸಿಯೆಂಬ ಸಾರ್ವಜನಿಕ ವಲಯದ ಸಂಸ್ಥೆಯಿಂದಾಗಿಯೇ ಖಾಸಗಿ ವಿಮಾ ಸಂಸ್ಥೆಗಳು ಬಾಲ ಮುದುರಿಕೊಂಡು ವ್ಯವಹರಿಸುತ್ತಿವೆ. ಎಲ್‍ಐಸಿ ದುರ್ಬಲಗೊಳ್ಳತೊಡಗಿದಂತೆ ಖಾಸಗಿ ರಂಗದ ವಿಮಾ ಸಂಸ್ಥೆಗಳ ಶೋಷಣೆಯೂ ಹೆಚ್ಚಲಿದೆ. ಕಳೆದೆರಡು ವರ್ಷಗಳಿಂದಲೂ ಎಲ್‍ಐಸಿಯನ್ನು ದುರ್ಬಲಗೊಳಿಸುವ ಪ್ರಕ್ರಿಯೆ ನಡೆಯುತ್ತಲೇ ಇದೆ. ನಷ್ಟದಲ್ಲಿರುವ ಬ್ಯಾಂಕ್‍ಗಳ ಶರನ್ನು ಎಲ್‍ಐಸಿ ಖರೀದಿಸುವಂತೆ ಮಾಡಿರುವುದು ಒಂದು ಉದಾಹರಣೆ ಮಾತ್ರ. ಖಾಸಗಿ ರಂಗದ ಕೃಷಿ ವಿಮಾ ಸಂಸ್ಥೆಗಳು ರೈತರಿಗೆ ಮಾಡುತ್ತಿರುವ ವಂಚನೆಗಳನ್ನು ಗಮನಿಸಿದಾಗ ವಿಮಾ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀರಂಗಕ್ಕೆ ನೀಡಿದರೆ ಆಗುವ ಅಪಾಯಗಳನ್ನು ಊಹಿಸುವುದು ಸುಲಭ. ವಿದೇಶೀ ಬಂಡವಾಳದ ನೇರ ಹೂಡಿಕೆಗೆ ಅವಕಾಶಗಳನ್ನು ಹೆಚ್ಚಿಸಿರುವುದು ಕೂಡಾ ಅಪಾಯಕಾರಿ ಕ್ರಮ. ಭಾರತದ ಅರ್ಥವ್ಯವಸ್ಥೆ ಬಂಡವಾಳದ ಕೊರತೆಯಿಂದ ಬಳಲುತ್ತಿಲ್ಲ ಎಂಬುದು ಜನಸಾಮಾನ್ಯರಿಗೂ ಅರ್ಥವಾಗುವ ಸಂಗತಿ. ದೇಶದ ಆರ್ಥಿಕ ಸ್ವಾಯತ್ತತೆಗೆ ಅಪಾಯವೊಡ್ಡುವ ಕ್ರಮಗಳ ಕುರಿತು ಕುರುಡು ನಂಬಿಕೆ ಹೊಂದಿರುವ ಬಂಡವಾಳವಾದಿ ಆರ್ಥಿಕ ತಜ್ಞರ ಸಲಹೆಗಳನ್ನು ಮಾನ್ಯ ಮಾಡುವ ಆಡಳಿತ ನಡೆಸುವವರು. ಜಾಗತಿಕ ಆರ್ಥಿಕ ವಿದ್ಯಮಾನಗಳನ್ನು ಸ್ವಾರ್ಥಕ್ಕಾಗಿ, ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆನ್ನುವುದು ಸ್ಪಷ್ಟ. ತನ್ನ ಆರ್ಥಿಕ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಯುರೋಪಿಯನ್ ಆರ್ಥಿಕ ಒಕ್ಕೂಟದಿಂದ ಬ್ರಿಟನ್ ಹೊರ ಬಂದಿರುವುದು ನಮಗೆ ಪಾಠವಾಗಬೇಕಿತ್ತು. ಹೂಡಿಕೆದಾರರು ದೇಶೋದ್ಧಾರಕರು ಎಂದು ನಂಬುವವರು, ನಂಬಿಸುವವರನ್ನು ಸ್ವಾರ್ಥಿಗಳು ಮತ್ತು ಕಪಟಿಗಳು ಎನ್ನಲೇಬೇಕಾಗುತ್ತದೆ. ಯಾಕೆಂದರೆ ಹೂಡಿಕೆದಾರರಿಗೆ ತಮ್ಮ ಲಾಭ ಗಳಿಕೆಯೇ ಪ್ರಮುಖ ಗುರಿಯಾಗುತ್ತದೆಯೇ ಹೊರತು ಸಮುದಾಯದ ಉದ್ಧಾರವಲ್ಲ. ಶಿಕ್ಷಣ ಕ್ಷೇತ್ರದಲ್ಲಿಯೂ ವಿದೇಶಿ ನೇರ ಹೂಡಿಕೆಗೆ ಅವಕಾಶ ಕಲ್ಪಿಸುವ ಪ್ರಸ್ತಾಪ ಅತ್ಯಂತ ಅಪಾಯಕಾರಿ. ಭಾರತೀಯ ಚಿಂತನೆ ಆಧಾರಿತ ವ್ಯಕ್ತಿತ್ವ ನಿರ್ಮಾಣದ ಶಿಕ್ಷಣ ನೀತಿಗೆ ತಿಲಾಂಜಲಿ ನೀಡಿ ಶತಮಾನಗಳೇ ಕಳೆದವು. ಬಂಡವಾಳಶಾಹಿಗಳ ಅಗತ್ಯಕ್ಕನುಗುಣವಾಗಿ ಗುಲಾಮರನ್ನು ಸೃಷ್ಟಿಸುವ ಶಿಕ್ಷಣ ನೀತಿಯನ್ನು ಹಲವು ದಶಕಗಳಿಂದ ಅನುಷ್ಟಾನಗೊಳಿಸುತ್ತಾ, ಯಾವ ಜನತೆಯಲ್ಲಿ ಆತ್ಮವಿಶ್ವಾಸ ಬೆಳೆಯದಂತೆ ಮಾಡಿರುವ ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಹಣವಂತರ ಕೈಗೆ ನೀಡುವುದರಿಂದ ಆಗುವ ಸಾಂಸ್ಕøತಿಕ ಆಘಾತಗಳು, ಕುಂಠಿತಗೊಳ್ಳುವ ವ್ಯಕ್ತಿತ್ವ ನಿರ್ಮಾಣದ ಕುರಿತು ಸರ್ಕಾರ ಅಸಡ್ಡೆ ತೋರಿರುವುದು ಸ್ಪಷ್ಟ. ದೇಶಾಭಿಮಾನ, ಭಾರತೀಯತೆ ರಾಷ್ಟ್ರೀಯತೆ ಮುಂತಾದ ಇವರ ಘೋಷಣೆಗಳ ಟೊಳ್ಳುತನ ಇದರಿಂದಲೇ ಸ್ಪಷ್ಟವಾಗುತ್ತದೆ. ಸಂಪತ್ತು ಸೃಷ್ಟಿಸುವವರನ್ನು ಗೌರವಿಸುವದಾಗಿ ಹೇಳಲಾಗಿದೆ. ಸಂಪತ್ತು ಸೃಷ್ಟಿಸುವವರು ಯಾರಿಗಾಗಿ ಆ ಕಾರ್ಯ ಮಾಡುತ್ತಾರೆಂಬುದನ್ನೂ ಸರ್ಕಾರದ ಅಂಕಿಅಂಶಗಳಿಂದಲೂ ಕಾಣಬಹುದು. ಬೆರಳೆಣಿಕೆಯ ಶ್ರೀಮಂತರ ಹಾಗೂ ಅವರ ಕಂಪನಿಗಳ ವಹಿವಾಟು ದೇಶದ ಬಜೆಟ್‍ನ್ನೂ ಮೀರಿದೆ ಎಂಬ ವಿಷಯವೇ, ದೇಶದ ಆಡಳಿತವನ್ನು ನಿಯಂತ್ರಿಸುತ್ತಿರುವವರು ಶ್ರೀಮಂತರೇ ಹೊರತು ರಾಜಕೀಯ ನೇತಾರರಲ್ಲ ಎಂಬುದನ್ನು ಎತ್ತಿ ಹೇಳುತ್ತದೆ. ಭಾರತದ 63 ಅತಿ ಶ್ರೀಮಂತರ ಸಂಪತ್ತು, ದೇಶದ ಮುಕ್ಕಾಲು ಪಾಲು ಜನರ ಸಂಪತ್ತಿಗೂ ಹೆಚ್ಚು ಎನ್ನುವ ವಿಷಯ ಅಧಿಕಾರಸ್ಥರ ಗಮನ ಸೆಳೆದಿಲ್ಲವೆಂಬುದು ಆಶ್ಚರ್ಯದ ಸಂಗತಿ. ಭಾರತದ ಜನಸಂಖ್ಯೆಯ ಶೇಕಡಾ ಒಂದರಷ್ಟಿರುವ ಅತಿ ಶ್ರೀಮಂತರ ಸಂಪತ್ತು ಪ್ರತಿವರ್ಷವೂ ಹೆಚ್ಚುತ್ತಲೇ ಇದ್ದು, ದೇಶದ ಸಂಪತ್ತಿನ 58% ನಷ್ಟು ಇವರ ಹತೋಟಿಯಲ್ಲೇ ಇದೆ. ಈ ಅಪಾಯಕಾರಿ ಪ್ರವೃತ್ತಿಯನ್ನು ತಡೆಗಟ್ಟುವ ಅಥವಾ ನಿಯಂತ್ರಿಸುವ ಯಾವ ಪ್ರಸ್ತಾಪವೂ ಬಜೆಟ್‍ನಲ್ಲಿ ಇಲ್ಲ. ಬದಲಿಗೆ ಸಂಪತ್ತಿನ ಕೇಂದ್ರೀಕರಣಕ್ಕೆ ಇನ್ನಷ್ಟು ಒಲವು ತೋರಿಸುವ ಬಜೆಟ್ ಮಂಡಿಸಿರುವ ಸರ್ಕಾರ , ಸಾಮಾಜಿಕ ನ್ಯಾಯದ ಕುರಿತು ಮಾತನಾಡುವ ನೈತಿಕ ಹಕ್ಕನ್ನೇ ಕಳೆದುಕೊಂಡಿದೆ. ನಗರಗಳ ಅಭಿವೃದ್ಧಿ, ವಿಮಾನ ನಿಲ್ದಾಣಗಳ ಹೆಚ್ಚಳ, ಹೈಸ್ಪೀಡ್ ರೈಲುಗಳನ್ನು ಹೆಚ್ಚಿಸಿ ಉದ್ಯೋಗ ಸೃಷ್ಟಿಸುತ್ತೇವೆಂಬ ಭ್ರಮೆಯನ್ನು ಸೃಷ್ಟಿಸಲಾಗುತ್ತಿದೆ. ರಾಜ್ಯದ ಯಾವುದೋ ಒಂದು ನಗರದಲ್ಲಿ ಫುಡ್‍ಪಾರ್ಕ್ ಅಥವಾ ಇನ್ಯಾವುದೋ ಉದ್ಯಮ ಪ್ರಾರಂಭಿಸುವ ಬದಲಿಗೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಆಧಾರಿತ ಮತ್ತು ಕೃಷಿ ಪೂರಕ ಉದ್ಯಮಗಳ ಸ್ಥಾಪನೆಗೆ ಒತ್ತು ನೀಡುವ ಕ್ರಮಗಳಿಂದ ಉದ್ಯೋಗ ಸೃಷ್ಟಿ, ನಗರಾಭಿಮುಖ ವಲಸೆಯನ್ನು ತಡೆಗಟ್ಟಲು ಸಾಧ್ಯವಿದೆ. ಹಳ್ಳಿಗಳನ್ನು ಉದ್ಯೋಗ ಸೃಷ್ಟಿಯ ಕೇಂದ್ರಗಳನ್ನಾಗಿಸುವುದರಿಂದ ಕ್ಷಿಪ್ರ ಆರ್ಥಿಕ ಪ್ರಗತಿ ಸಾಧ್ಯ. ಜನರ ಕೈಗೆ ಖರೀದಿ ಶಕ್ತಿ ನೀಡುವ ಕುರಿತು ಘೋಷಣೆ ಮಾತ್ರ ಇದೆಯೇ ಹೊರತು, ಅನುಷ್ಠಾನ ಯೋಗ್ಯ ಕ್ರಮಗಳ ಪ್ರಸ್ತಾಪವೇ ಇಲ್ಲ. ಆರ್ಥಿಕ ಪುನಶ್ಚೇತನಕ್ಕೆ ಬೇಕಾದ ಸೂಕ್ತ ಪ್ರಸ್ತಾಪಗಳಲ್ಲದೇ ಬಳಲಿರುವ ಈ ವರ್ಷದ ಬಜೆಟ್‍ನಿಂದ ಧನಾತ್ಮಕ ಬದಲಾವಣೆಯ ನಿರೀಕ್ಷೆ ಮಾಡಲಾಗದು. ದೇಶದ ಆರ್ಥಿಕ ಸ್ವಾಯತ್ತತೆಯನ್ನು ಹಾಳುಗೆಡವಿ, ಜನಸಾಮಾನ್ಯರಿಂದ ಆರ್ಥಿಕ ಸ್ವಾವಲಂಬನೆಯನ್ನು ಕಸಿಯುವ ನಿಟ್ಟಿನಲ್ಲಿ ಕೇಂದ್ರ ಬಜೆಟ್ ಯಶಸ್ವಿಯಾಗುವುದು ನಿಶ್ಚಿತ. ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸುವ ಪ್ರಕ್ರಿಯೆಯ ಮುಂದುವರಿಕೆಯ ಪರಿಣಾಮ ಬಹುಬೇಗ ಪ್ರಕಟಗೊಳ್ಳಲಿದೆ. ಅರ್ಥವ್ಯವಸ್ಥೆಯ ಪುನಶ್ಚೇತನವಾಗಬೇಕೆಂದರೆ ಜನಸಾಮಾನ್ಯರಿಗೆ ಸರ್ಕಾರದ ರೀತಿ- ನೀತಿಗಳಲ್ಲಿ ನಂಬಿಕೆ, ವಿಶ್ವಾಸ ಮೂಡಬೇಕು. ಈ ದಿಸೆಯಲ್ಲಿ ಭರವಸೆ ಮೂಡಿಸಲು ಪ್ರಸ್ತುತ ಬಜೆಟ್ ವಿಫಲವಾಗಿದೆ.

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಬೇಕಿತ್ತ..? ಮದುಸೂದನ ಮದ್ದೂರು ಬೇಕಿತ್ತ..? ತಂಗಾಳಿಗೆ ಮೈಯೊಡ್ಡಿದೆ ಬಿರು ಬಿಸಿಲಲಿ ಬಸವಳಿದೆ ತೆರೆದ ಮನದ ಕಿಟಕಿಗಳ ಮುಚ್ಚಿದೆ ಹಳೆಯ ನೆನಪುಗಳ ಕಸ ಗುಡಿಸಿದೆ ಉಸ್ಸೆನ್ನುತಾ ಹಾಸಿಗೆಗೆ ಅಡ್ಡಾದೆ ಕಂಬಳಿ ಕವುಚಿ ಕಣ್ಮುಚ್ಚಿದೆ ನಿದ್ದೆ ಬರುತ್ತಿಲ್ಲ….. ಹೃದಯದೀ ನಿನ್ನ ಪಿಸುದನಿ ಮಾರ್ದನಿ ನೆನಪುಗಳ ಮೆರವಣಿಗೆ ನಿನ್ನ ಮರೆವಣಿಕೆಗೆ ಇಷ್ಟೇಲ್ಲಾ ಬೇಕಿತ್ತ…. ಗೊತ್ತಾಗುತ್ತಿಲ್ಲ… ********

ಕಾವ್ಯಯಾನ Read Post »

You cannot copy content of this page

Scroll to Top