ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ನಾನು ಕಂಡ ಹಿರಿಯರು

ನಂಜುಂಡು ನಗು ಹಂಚಿದ ಪರಮೇಶ್ವರ: ಎಸ್. ವಿ. ಪಿ. ಡಾ.ಗೋವಿಂದ ಹೆಗಡೆ ಇಂದು ಫೆಬ್ರವರಿ ೮, ಹಲವು ರೀತಿಗಳಲ್ಲಿ ಕನ್ನಡದ ತೇರನ್ನು ಕಟ್ಟಿದ ಪ್ರೊ ಎಸ್ ವಿ ಪರಮೇಶ್ವರ ಭಟ್ಟರ ಜನ್ಮದಿನ. ಆ ಪ್ರಯುಕ್ತ ಕನ್ನಡದ ಕಟ್ಟಾಳುವಿಗೆ ನಮನಗಳನ್ನು ಸಲ್ಲಿಸುತ್ತ ಅವರ ನೆನಪಿನ ಈ ಬರಹ. ನಂಜುಂಡು ನಗು ಹಂಚಿದ ಪರಮೇಶ್ವರ: ಎಸ್. ವಿ. ಪಿ. (೧೯೧೪-೨೦೦೦) ೧೯೮೫-೮೯ರವರೆಗೆ , ಮೈಸೂರಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದಾಗ ಅಲ್ಲಿನ ತಾತಯ್ಯನವರ ವಿದ್ಯಾರ್ಥಿನಿಲಯ ‘ಅನಾಥಾಲಯ’ದಲ್ಲಿ ವಾಸವಾಗಿದ್ದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಊಟ-ವಸತಿಯ ಸೌಲಭ್ಯ ಕೊಡುವ ವಿದ್ಯಾರ್ಥಿ ನಿಲಯ ಅದು. ೧೯೮೮ರಲ್ಲಿ ಇರಬೇಕು, ಆಲಯದ ವಿದ್ಯಾರ್ಥಿ ಸಂಘದ-ಇದಕ್ಕೆ ಸಾಹಿತ್ಯ ಸಂಘ ಎಂದು ಹೆಸರು- ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳ ಕೊನೆಯಲ್ಲಿ ವಾರ್ಷಿಕೋತ್ಸವಕ್ಕೆ ಅತಿಥಿಗಳನ್ನು ಹುಡುಕುವ ಕೆಲಸದಲ್ಲಿ ನಿರತನಾಗಿದ್ದೆ. ಎಸ್ ವಿ ಪರಮೇಶ್ವರ ಭಟ್ಟರನ್ನು ಕರೆಯಬಹುದು ಎಂದು ಯಾರೋ ಸೂಚಿಸಿದರು. ಒಂದು ಸಂಜೆ ಸ್ನೇಹಿತ ಸುದರ್ಶನ್ ಜೊತೆಗೆ ಕೃಷ್ಣಮೂರ್ತಿಪುರಂ ನ ಗಣೇಶ ಟಾಕೀಸ್ ನ ಪಕ್ಕದ ರಾಮಯ್ಯರ್ ರಸ್ತೆಯಲ್ಲಿದ್ದ ಭಟ್ಟರ ಮನೆಗೆ ಹೋದೆ. ಕುಳ್ಳನೆಯ ಆಳು, ಮುಖದ ತುಂಬ ತುಂಬಿದ ನಗು, ಬಿಳಿಯ ಪಂಚೆ ಜುಬ್ಬ.. ಬಂದ ಕೆಲಸವನ್ನು ವಿಚಾರಿಸಿದ ಭಟ್ಟರು ತಮ್ಮ ಅನಾರೋಗ್ಯದ ದೆಸೆಯಿಂದಾಗಿ ಅತಿಥಿಯಾಗಿ ಬರಲು ಒಪ್ಪಲಿಲ್ಲ. ಆದರೆ ಅವರ ಪುಸ್ತಕಗಳತ್ತ ನಾವು ಕಣ್ಣು ಹಾಯಿಸಿದ್ದೇ ತಡ, ಭಟ್ಟರಿಗೆ ಹರಯ ಹಿಂದಿರುಗಿ ಬಂತು! ಅವರು ಅನುವಾದಿಸಿದ ಕಾಳಿದಾಸ ಮಹಾಸಂಪುಟ,ಹರ್ಷ ಮಹಾಸಂಪುಟ, ಭಾಸ ಮಹಾಸಂಪುಟಗಳು ಸೇರಿದಂತೆ,ಅವರು ರಚಿಸಿದ ಹೆಚ್ಚಿನ ಪುಸ್ತಕಗಳ ಬಹಳಷ್ಟು ಪ್ರತಿಗಳು ಅಲ್ಲಿದ್ದವು.. ಪುಸ್ತಕದಂಗಡಿಯಲ್ಲಿ ನಾವು ನಿಂತ ಹಾಗಿತ್ತು. ಒಂದೊಂದು ಗ್ರಂಥವನ್ನೂ ಕೈಗೆತ್ತಿಕೊಂಡು ಆ ಬಗ್ಗೆ ಕೆಲವು ವಿವರಗಳನ್ನು ನೀಡಿದರು. ಕೊನೆಯಲ್ಲಿ ಅವರು ಹೇಳಿದ ಒಂದು ಮಾತು ಈಗಲೂ ನೆನಪಿದೆ- “ಒಂದು ಶಾಕುಂತಲವನ್ನು ಅನುವಾದಿಸಿದ್ದಕ್ಕೆ ಬಸಪ್ಪ ಶಾಸ್ತ್ರಿಗಳು ‘ಅಭಿನವ ಕಾಳಿದಾಸ’ ಎನ್ನಿಸಿಕೊಂಡರು. ಕಾಳಿದಾಸನ ಎಲ್ಲ ಕೃತಿಗಳನ್ನು ಹಾಗೆಯೇ ಹರ್ಷ, ಭಾಸನ ಎಲ್ಲ ಕೃತಿಗಳ ಸಂಪುಟಗಳನ್ನು ನಾನು ಅನುವಾದಿಸಿ ಪ್ರಕಟಿಸಿದ್ದೇನೆ. ಹಾಗಾದರೆ ನಾನು?” ಕೇವಲ ಅನುವಾದ ಎಸ್ ವಿ ಪಿ ಅವರ ಕೊಡುಗೆಯಲ್ಲ. ಕಾವ್ಯದಲ್ಲಿ ಭಟ್ಟರ ಕೊಡುಗೆ ಅಮೂಲ್ಯ. ಒಂದು ಸಾಲಿನ ಕಾವ್ಯದ ರಚನೆಯಿಂದ ಹಿಡಿದು ಎರಡು ಸಾಲಿನ ಏಳೆ , ಮೂರು ಸಾಲುಗಳ ತ್ರಿಪದಿ, ನಾಲ್ಕರ ಸಾಂಗತ್ಯ ಹೀಗೆ ವಿವಿಧ ಛಂದಸ್ಸುಗಳಲ್ಲಿ ಪ್ರಯೋಗ ಮಾಡಿದವರು ಭಟ್ಟರು. ಭಾವಗೀತೆ ವಚನಗಳಲ್ಲಿಯೂ ಅವರ ಕೊಡುಗೆ ಮೌಲಿಕವಾದದ್ದು. ಸೀಳುನೋಟ, ಮುದ್ದಣ ಕವಿಯ ಶ್ರೀರಾಮಪಟ್ಟಾಭಿಷೇಕ, ಅಕ್ಕಮಹಾದೇವಿ, ಇಂದ್ರಚಾಪ, ಗಗನಚುಕ್ಕಿ, ಉಪ್ಪುಕಡಲು,ಕಂಬಾರ, ರಾಗಿಣಿ, ಗಾಥಾಶಪ್ತಶತಿ, ಅಮರಶತಕ, ಸುರಗಿ, ಭಾವಗೀತೆ, ಅದ್ಭುತ ರಾಮಾಯಣ ಕತೆ, ಕಣ್ಣಾಮುಚ್ಚಾಲೆ, ಗೀತಗೋವಿಂದ ಮೊದಲಾದ ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ಅವರು ನೀಡಿದ್ದಾರೆ. ಅವರೊಬ್ಬ ಮಾದರಿ ಅಧ್ಯಾಪಕ. ಸ್ನಾತಕೋತ್ತರ ಕೇಂದ್ರದ ಪ್ರಥಮ ನಿರ್ದೇಶಕರಾಗಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಅಸ್ತಿಭಾರ ಹಾಕಿದವರು ಅವರು. ಅವರ ಸಾಂಸಾರಿಕ ಜೀವನ (ಪತ್ನಿಯ ಮಾನಸಿಕ ತೊಂದರೆಯಿಂದಾಗಿ) ಸಂಕಷ್ಟಮಯವಾಗಿತ್ತು ಎಂದು ಕೇಳಿದ್ದೇನೆ. ಎಲ್ಲ ನೋವು ನುಂಗಿ ಕಾವ್ಯದ ಅಮೃತವನ್ನು ಹಂಚಿದ ನಂಜುಂಡ ಅವರು. ‘ಶಾರದೆಯ ನೆಲದಲ್ಲಿ ನನ್ನದೂ ಸಣ್ಣ ಹೊಲವಿದೆ. ನನ್ನ ಕೈಲಾದಷ್ಟು ಮಟ್ಟಿಗೆ ಕೃಷಿ ಮಾಡಿದ್ದೇನೆ’ ಎಂದ, ನಿಜ ಅರ್ಥದ ಈ ನುಡಿ ಸೇವಕನನ್ನು ಕಂಡ ಭಾಗ್ಯ ನನ್ನದು. ‘ಸದಾಶಿವ ಗುರು’ವಿಗೆ ನಮನಗಳು. (ಸದಾಶಿವ ಗುರು-ಎಸ್.ವಿ.ಪಿ. ಅವರು ತಮ್ಮ ವಚನಗಳಲ್ಲಿ ಬಳಸಿದ ಅಂಕಿತ) *********************************

ನಾನು ಕಂಡ ಹಿರಿಯರು Read Post »

ಇತರೆ

ಲಹರಿ

ಗುಬ್ಬಿಯ ಅಳಲು ತಾರಾ ಸತ್ಯನಾರಾಯಣ “ಗುಬ್ಬಿಯ ಅಳಲು”                ನನ್ನ ಸಂಸಾರದ ಹೊಟ್ಟೆ ತುಂಬಿಸಲು ನಾನು ದೂರ ಬಹುದೂರ ಬಂದರೂ ……ಎಲ್ಲಿಯೂ ನನಗೆ ಹಣ್ಣುಗಳಿರುವ ಮರಗಳೇ ಕಾಣುತ್ತಿಲ್ಲ.ಎಲ್ಲಿ ನೋಡಿದರೂ ಬರೀ ಕಟ್ಟಡ ಕೆಲವಂತೂ ಗಗನಚುಂಬಿ ಕಟ್ಟಡಗಳು ಕೆಳಗಡೆ ನೋಡಿದರೆ ಟಾರಿನ ರಸ್ತೆಗಳು ಹೋಗಲಿ ಮನೆಗಳಿರುವ ಕಡೆಯೇ ಹೋಗೋಣವೆಂದರೆ ಅಲ್ಲೂ ಕೂಡ ಮನೆಯ ಸುತ್ತ ಮುತ್ತ ಸಿಮೆಂಟಿನಿಂದ ಕೂಡಿದ ನೆಲ. ಮನೆಯ ಮುಂಭಾಗದಲ್ಲಿ ಮನೆಯ ಹಿಂಭಾಗದಲ್ಲಿ ಗಿಡಮರಗಳಿಲ್ಲ. ಎರಡು  ಮೂರು ಅಂತಸ್ತಿನ ಮನೆಗಳು. ಮರ,ಗಿಡ,ಮಣ್ಣಿನ ನೆಲ-ಜಲ ಎಲ್ಲಾ ಮಂಗಮಾಯ               ಹಿಂದೆ ನನ್ನಮುತ್ತಾತ ಮುತ್ತಜ್ಜಿ ಅವರೊಡನೆ ನಿಧಾನಕ್ಕೆ ಹಾರುತ್ತ( ಆಗ ನಾನು ತುಂಬಾ ತುಂಬಾ ಚಿಕ್ಕ ಮರಿ )ನಾನು ಅವರ ಜೊತೆ ಬರ್ತಾಇದೆ. ಆಗ ನಮ್ಮ ಗೂಡು ಬಿಟ್ಟು ತುಂಬಾ ದೂರ ಬರ್ತಿರ್ಲಿಲ್ಲ ನಮ್ಮ ಗೂಡಿನ ಆಜು-ಬಾಜಿನಲ್ಲಿ ಅನೇಕ ತರದ ಹಣ್ಣುಗಳಿಂದ ಕೂಡಿದ ಗಿಡಮರಗಳು ಇರುತ್ತಿದ್ದವು ಗಿಡ-ಮರಗಳಲ್ಲಿ ತರಹೇವಾರಿ ಹುಳ ಹುಪ್ಪಟೆಗಳು ಸಿಕ್ಕರೆ, ಹಣ್ಣು ಕಾಯಿಗಳು ಬೇಕಾದಷ್ಟು ಸಿಗುತ್ತಿತ್ತು. ಅಲ್ಲದೆ ಅಕ್ಕ -ಪಕ್ಕದ ಮನೆಗಳ  ಮುಂದೆ ಹೋದರೆ, ಅಕ್ಕಿ ಆಯ್ದ ಭತ್ತಗಳು, ಹುಳ-ಹುಪ್ಪಟೆಗಳು ಸಿಕ್ಕರೆ,ಧವಸ-ಧಾನ್ಯವನ್ನು ಮೊರದಲ್ಲಿ ಮಾಡುತ್ತಿದ್ದರಿಂದ,ಅದರಲ್ಲಿದ್ದ ಕಸ-ಕಡ್ಡಿಗಳ ಜತೆ ಬರುತ್ತಿದ್ದ ಧಾನ್ಯವನ್ನು ಎಸೆಯುತ್ತಿದ್ದರು.   ಅದೇ ನಮಗೆ ಬೇಕಾದಷ್ಟು ಸಿಗುತ್ತಿತ್ತು. ಮನೆ ಹಿಂದೆ,ಹಿತ್ತಲಿಗೆ ಹೋದರೆ ಮುಸುರೆ ಯಲ್ಲಿರುತ್ತಿದ್ದ ಅನ್ನ, ಬೆಂದ ಬೇಳೆಕಾಳುಗಳು ನೀರು,ಯಥೇಚ್ಛವಾಗಿ ಸಿಗುತ್ತಿತ್ತು. ನಾವು ಮನೆ ಒಳಗೆ ಹೋಗಿ ಅಕ್ಕಿ ಕಾಳು ಬೇಳೆಗಳನ್ನು ತಿಂದರೂ….ನಮ್ಮನ್ನು ಯಾರು ಓಡಿಸುತ್ತಿರಲಿಲ್ಲ. ಅವರ ಮನೆಯಲ್ಲಿದ್ದ ಕನ್ನಡಿಯಲ್ಲಿ ನಮ್ಮನ್ನೆ ನೋಡಿಕೊಂಡು ಕುಕ್ಕಿ, ಚಿಲಿಪಿಲಿ ಗುಟ್ಟಿದಾಗ ಅವರಿಗೆಲ್ಲ ಅದೇನೋ ಸಂಭ್ರಮ. ಮನೆಯಲ್ಲಿ ಎಲ್ಲರೂ ನಮ್ಮನ್ನ ಇಷ್ಟಪಡುತ್ತಿದ್ದರು. ಅಲ್ಲದೆ ನಮ್ಮನ್ನು ನೋಡುತ್ತಾ ನಮ್ಮ ಮೇಲೆ ಹಾಡು ಹೇಳುತ್ತಿದ್ದರು. ಹಾ! ಯಾವ ಹಾಡು! ಗೊತ್ತಾಯ್ತು; ಬಾಬಾ ಗುಬ್ಬಿ ಮರಿ ತಂದಿರುವೆ ಕಡ್ಲೆಪುರಿ ನಾವೆಲ್ಲ ತಿನ್ನೋಣ ಬಾ ಬಾ ಬಾ :ಅಂತ ಹೇಳ್ತಿದ್ದರು ಎಷ್ಟು ಚೆನ್ನಾಗಿತ್ತು.           ಹಕ್ಕಿಯಾ ದ ನಮಗೆ ಹಾರಲು ವಿಶೇಷ ಗುಣಗಳಿರಬೇಕು ಅವು ಯಾವುವೆಂದರೆ,ದೇಹಕ್ಕೆ ಬಳುಕುವ ಬಲ ಇರಬೇಕು. ಅಧಿಕ ಪ್ರಮಾಣದಲ್ಲಿ ಗಾಳಿ ಒದಗಬೇಕು ಅತಿವೇಗದಲ್ಲಿ ರಕ್ತ ಪರಿಚಲನೆ ನಡೆಯಬೇಕು. ಹಗುರ ಶರೀರ, ಬಲಿಷ್ಟ ಹೃದಯ, ತೀಕ್ಷ್ಣ ದೃಷ್ಟಿ ವಿಶಿಷ್ಟ ಉಸಿರಾಟ ಕ್ರಮ ಹೆಚ್ಚಿನ ಆಹಾರ ಪೂರೈಕೆ ಆಗಬೇಕು. ಈ ಎಲ್ಲದರ ಜೊತೆಗೆ ಬಲಿಷ್ಟ ರೆಕ್ಕೆಗಳಿರಬೇಕು. ಈ ಎಲ್ಲಾ ಗುಣಗಳಿಂದ ನಾವು ಮೇಲೆ ಹಾರಾಡಬಹುದು. ಮೇಲೆ ಹಾರಲು ಸಾಕಷ್ಟು ಶಕ್ತಿ ಬೇಕು ಶಕ್ತಿ ಪಡೆಯಲು ನಮ್ಮ ದೇಹದ ತೂಕದ ಅರ್ಧದಷ್ಟಾದರೂ ಶಕ್ತಿಯುತವಾದ ಆಹಾರ ತಿನ್ನಬೇಕು ನಾವು ಬೇಳೆಕಾಳುಗಳು, ಹುಳ ಹುಪ್ಪಟೆಗಳು ನೆರೆ-ತೊರೆಯಲ್ಲಿರುವ ಮೀನುಗಳು, ಅಲ್ಲದೆ ಬೆಳೆಯುತ್ತಿದ್ದ ಪೈರಿಗೆ ಹತ್ತುತ್ತಿದ್ದ ಹುಳ ಹುಪ್ಪಟೆಗಳನ್ನು ತಿನ್ನುತ್ತಿದ್ದೆವು.ಆಗ ನಮ್ಮನ್ನು ರೈತನ ಮಿತ್ರ ಎಂದೇ ಹೇಳುತ್ತಿದ್ದರು.             ಚಲನೆಯ ವಿಧದಲ್ಲಿ ಹಾರಾಟ ತುಂಬಾ ಶ್ರಮ ವಾದದ್ದು ಆದ್ದರಿಂದ ನಮ್ಮ ಹೃದಯದ ಬಡಿತ ಮನುಷ್ಯರಿಗಿಂತ ಜಾಸ್ತಿ ನಮ್ಮ (ಹಕ್ಕಿಗಳ)ಉಷ್ಣತೆ 107 ‘ಡಿಗ್ರಿ ಮೀರುತ್ತದೆ ಈ ಎಲ್ಲ ಜೈವಿಕ ಕ್ರಿಯೆಗಳು ಸುಸೂತ್ರವಾಗಿ ನಡೆಯಬೇಕಾದರೆ ನಾವು ತಿನ್ನುತ್ತಲೇ ಇರಬೇಕು ತಿನ್ನುವುದರಿಂದ ಇಂಜಿನ್ ನಂತೆ ಇರುವ ನಮ್ಮ ರೆಕ್ಕೆಗಳಿಗೆ ಶಕ್ತಿ ಬರುವುದು !ಆಗ ನಾವು ಎಲ್ಲೆಂದರಲ್ಲಿ ಹಾರಬಹುದು. ಈಗ ನಂಗೆ ಮುತ್ತಜ್ಜಿ, ಮುತ್ತಾತ,ಅಜ್ಜಿ-ತಾತನೂ ಇಲ್ಲ.ಅದು ಹೋಗಲಿ ಅಪ್ಪ ಅಮ್ಮನೂ ಇಲ್ಲ. ನನಗೆ ಹೆಂಡತಿ, ಇನ್ನೂ ಗುಟುಕುಣಿಸುವ ಮಕ್ಕಳಿದ್ದಾರೆ. ಅವರನ್ನ ಸಾಕುವ ಹೊಣೆ ನನ್ನದು.ಈಗ ನಮಗೆ ಬೇಕಾದಂತಹ ಗಿಡಮರಗಳು ಕಡಿಮೆ. ಯಾರ ಮನೆ ಮುಂದೆಯೂ ಭತ್ತವಾಗಲಿ,ಕಾಳಾಗಲೀ…. ಹುಳಹುಪ್ಪಟೆ ಗಳಾಗಲಿ ಸಿಗುತ್ತಿಲ್ಲ. ಅಲ್ಲದೆ ಹಿತ್ತಲಲ್ಲಿ ಪಾತ್ರೆ ತೊಳೆಯುವುದು ತುಂಬಾ ಕಡಿಮೆ. ಕೆಲವರ ಮನೆಯಲ್ಲಿ ಹಿತ್ತಲೇ ಇರುವುದಿಲ್ಲ ಈಗ ಎಲ್ಲರೂ ಅಂಗಡಿಯಿಂದ ಕ್ಲೀನಾಗಿರೋ ಆಹಾರ ಪದಾರ್ಥವನ್ನೇ ತರುತ್ತಾರೆ.ಇನ್ನು ಹೇಳಬೇಕೆಂದರೆ ಕೆಲವರು ready-to-eat ಪ್ಯಾಕೆಟ್ ತಂದು ಅದನ್ನು ಬಿಸಿ ಮಾಡಿ ತಿನ್ನುತ್ತಾರೆ. ಆದರೂ ಕೆಲವರು ಮನೆಗಳಲ್ಲಿ ಏನಾದರೂ ಸಿಕ್ಕೇ ಸಿಗುತ್ತದೆ ಎಂದು ಅಲ್ಲಿಗೆ ಹೋಗೋಣವೆಂದರೆ ಈಗ ಮೊಬೈಲ್ ಎಂಬ ಸಲಕರಣೆ ಬಂದು, ಬಹುತೇಕ ಎಲ್ಲರ ಮನೆಯಲ್ಲೂ ಇರುವುದರಿಂದ ಅದರಿಂದ ಬರುವ ಕ್ಷ- ಕಿರಣಗಳು ನಮ್ಮ ಉಸಿರಾಟಕ್ಕೆ(ಭಯವಾಗಿ) ತೊಂದರೆಯನ್ನುಂಟು ಮಾಡುತ್ತದೆ. ಹಾಗಾಗಿ ನಾವು ಮನೆಗಳ, ಅಂಗಡಿಗಳ ಮುಂದೆ ಹೆದರಿ  ಬರುವುದೇ ಇಲ್ಲ.              ನಗರದ ಸಹವಾಸ ಬೇಡ ಹಳ್ಳಿಗೆ ಹೋಗೋಣವೆಂದರೆ ಅಲ್ಲಿಯೂ ಸುಖವಿಲ್ಲ.ರೈತ ಬೆಳೆಯುವ ಆಹಾರ ಧಾನ್ಯಗಳಿಗೆ, ಹುಳುಗಳು ಹತ್ತಬಾರದೆಂದು  ಕ್ರಿಮಿನಾಶಕ ಸಿಂಪಡಿಸುತ್ತಾರೆ. ಅವುಗಳನ್ನು ತಿಂದು,ನನ್ನ ಬಳಗದ ಅನೇಕರಿಗೆ ಆರೋಗ್ಯವೇ ಹಾಳಾಗಿದೆ. ಗಿಡ,ಮರ ಬಳ್ಳಿಗಳಲ್ಲಿ ಬಿಡುವ ಹಣ್ಣನ್ನಾ ದರೂ ತಿನ್ನೋಣ ವೆಂದರೆ,ಹಣ್ಣುಗಳು ಚೆನ್ನಾಗಿ ಬರಲೆಂದು ಬಣ್ಣವಾಗಿಕಾಣಲೆಂದು ಇಂಜಕ್ಷನ್ ಹಾಕುತ್ತಾರಂತೆ.ಅವುಗಳನ್ನು ತಿನ್ನ ಬಾರದೆಂದು ನಮಗೆ ತಿಳಿಯುವುದಿಲ್ಲ.ಮನುಷ್ಯರು ಗಳಾದರೆ ಅವುಗಳನ್ನು ಚೆನ್ನಾಗಿ ತೊಳೆದು ತಿನ್ನುತ್ತಾರೆ ನಮಗೆ ಆ ಭಾಗ್ಯ ಇಲ್ಲವಲ್ಲ !ಮೀನು ಹಿಡಿದು ತಿನ್ನೋಣವೆಂದರೆ, ನೀರು ಕಲುಷಿತಗೊಂಡಿದೆ. ಕಲುಷಿತಗೊಂಡ ನೀರಿಗೆ ಸೊಳ್ಳೆಗಳು ಬರುತ್ತದೆಂದು ನೀರಿಗೆ ಕ್ರಿಮಿನಾಶಕ ಸಿಂಪಡಿಸುತ್ತಾರೆ. ಹಾಗಾಗಿ ನಮಗೆ ಹಳ್ಳಿಯಲ್ಲೂ ಸುಖವಿಲ್ಲ. ನಗರದಲ್ಲಿ ಕಾರ್ಖಾನೆ ಅಲ್ಲದೆ ಸಣ್ಣ ಕೈಗಾರಿಕೋದ್ಯಮದ ವರು ಕೂಡ ಅದರಲ್ಲಿ ಬರುವ ಕಲುಷಿತ ನೀರನ್ನು ನದಿಗೆ ಬಿಟ್ಟು ನೀರನ್ನು ಹಾಳು ಮಾಡುವುದರಿಂದ ಅದರಲ್ಲಿರುವ ಮೀನುಗಳು ಸಾವನ್ನಪ್ಪಿವೆ.ಹಾಗಾಗಿ ನಾವು ಸಣ್ಣ ಪುಟ್ಟ ಮೀನುಗಳನ್ನು ಅರಸಿ ಹೋಗುವುದು ಕಷ್ಟದ ಕೆಲಸವಾಗಿದೆ. ಈ ಎಲ್ಲಾ ಕಾರಣದಿಂದ ನಮ್ಮ ಸಂತತಿ ಅಳಿವಿನ ಅಂಚಿನಲ್ಲಿದೆ.ಏನೋ ನನ್ನ ಅದೃಷ್ಟಕ್ಕೆ ನನಗೆ ಗೂಡು ಕಟ್ಟಿಕೊಳ್ಳಲು ಒಂದು ದೊಡ್ಡ ಮರ ಸಿಕ್ಕಿದೆ. ಆ ಮರದ ಮೇಲೆ ಗೂಡು ಕಟ್ಟಿದ್ದೇನೆ. ನನ್ನ ಹೆಂಡತಿ ಮಕ್ಕಳು ಅಲ್ಲೇ ಇದ್ದಾರೆ ಈಗ ಮೆಟ್ರೋ ಬಂದು ಅರ್ಧದಷ್ಟು ಮರಗಳನ್ನು ಕಳೆದು ಹಾಕಿದ್ದಾರೆ ಆಗಾಗ ಉಕ್ಕಿನ ಸೇತುವೆ ಪ್ರಸ್ತಾಪವಿದೆ ಮತ್ತೆ ಪರಿಸರ !!?ಪರಿಸರ ನಾಶವಾಗುತ್ತಿದೆ.ನಾವು ಎಲ್ಲಿ ಹೋಗುವುದು? ಏನು ಮಾಡುವುದು ?ಅಯ್ಯೋನಾನು ದೂರ ಬಂದುಬಿಟ್ಟೆ. ಹೊಟ್ಟೆಗೆ ಏನು ಸಿಕ್ಕಿಲ್ಲ ನನಗೆ ತುಂಬಾ ಸುಸ್ತಾಗಿದೆ. ಈಗ ನಾನು ಹೇಗೆ ಹೋಗಲಿ?ಗೂಡು ಬಿಟ್ಟು ತುಂಬಾ ದೂರ ಬಂದು ಬಿಟ್ಟಿದ್ದೇನೆ. ನಾನು ನನ್ನ ಗೂಡಿಗೆ ಹೇಗೆ ಹೋಗಲಿ? ಕಾಗೆಯಿಂದ ಹೇಗೆ ತಪ್ಪಿಸಿಕೊಳ್ಳಲಿ? ನಾನು ಹೇಗಾದರು ತಪ್ಪಿಸಿಕೊಂಡು ನಿಧಾನವಾಗಿ ಹೋಗಲೇಬೇಕು ಹೋಗುತ್ತೇನೆ. ಆದರೆ ನಾನು ಹೋಗುವವರೆಗೂ ನಾವಿದ್ದ ಮರ ಕಡಿಯದೇ ಇರಲಿ. ಬೀಳದೆ ಇರಲಿ.ನಮ್ಮ ಸಂತತಿ ಅಳಿಯಬಾರದು! ಉಳಿಯಬೇಕು. ಓ !ದೇವರೇ; ಓ ದೇವರೇ ನಮ್ಮನ್ನು ರಕ್ಷಿಸು!!. *********

ಲಹರಿ Read Post »

ಕಾವ್ಯಯಾನ

ಕಾವ್ಯಯಾನ

ಏಕೆ ಕಾಡುವೆ ಶಾಂತಾ ಜೆ ಅಳದಂಗಡಿ ಏಕೆ ಕಾಡುವೆ ಮಾರುದ್ದ ಒಲವಿನೋಲೆ ಬರೆದು ಹೃದಯದೊಳಗೆ ನನ್ನ ಸೆಳೆದು ತಡವಿಲ್ಲದೆ ತಾಳಿಯ ಬಿಗಿದು ದೂರವಾದೆ ಬಾಳಿಗಂತ್ಯ ಬರೆದು ಮುಗ್ಗರಿಸಿ ಸಾಗಿದೆ ನನ್ನ ಬದುಕಿಂದು ಗಾಲಿಕಳಚಿದ ಗಾಡಿ ಈ ಬಾಳು ಕಣ್ಣೆವೆಯಲೆ ಕುಳಿತು ಕಾಡುವೆ ನನ್ನ ಅಳಿಸಲಾಗದ ಪ್ರೇಮಬರಹ ಬರೆದು ಹೂ ದುಂಬಿಗಳ ಒಲವಿನಾಟದಿ ಕಾಣುವೆ ನನ್ನ ನಿನ್ನ ಅನುಬಂಧ ಏಕೆ ಸರಿದೆ ನೇಪಥ್ಯಕೆ ಅವಸರದೆ ಮನೋಮಂದಿರಕೆ ಒಡೆಯನಾಗಿದ್ದೆ ದಿಗಂತದಾಚೆಗಿರುವೆ ನನ್ನ ನಿರೀಕ್ಷೆಯಲ್ಲಿ ಬಂದೇ ಬರುವೆ ಅತಿಶೀಘ್ರದಲ್ಲಿ ರಕ್ತಧಮನಿಗಳೆ ಬಿರಿವಂಥ ಓಲೆಬರೆದೆ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೂಕವಾಯಿತು ರೇಖಾ ವಿ.ಕಂಪ್ಲಿ ಮೂಕವಾಯಿತು ಮೂಕವಾಯಿತು ಕೋಗಿಲೆ ವಸಂತನಾಗಮನವಿರದೆ ತನ್ನ ಗಾನವ ಮರೆತು ನಿನ್ನದೇ ಚಿಂತೆ ಯೊಳಗೆ…….. ಮೂಕವಾಯಿತು ವೀಣೆ ಮೀಟದ ಬೆರಳುಗಳಿರದೆ ತನ್ನ ರಾಗವ ಮರೆತು ನಿನ್ನ ಬೆರೆಯಲರಿಯದೆ…….. ಮೂಕವಾಯಿತು ಓಲೆಯೊಂದು ರವಾನಿಸುವ ಹಂಸವಿರದೆ ತನ್ನ ಪದವ ಮರೆತು ನಿನ್ನ ಅರಿಯಲಾರದೆ……. ಮೂಕವಾಯಿತು ಕನಸೊಂದು ನನಸಾಗದ ಮನಸ್ಸಿರದೆ ತನ್ನ ಊಹೆ ಮರೆತು ನಿನ್ನ ಮರೆಯಲಾರದೆ…. ಮೂಕವಾಯಿತು ಕವಿತೆ ಬರೆಯುವ ಕವಿಯೊರ್ವನಿರದೆ ತನ್ನ ಯಾನವ ಮರೆತು ನಿನ್ನ ಮನವರಿಯದೆ….. ********

ಕಾವ್ಯಯಾನ Read Post »

You cannot copy content of this page

Scroll to Top