ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಸ್ವಾತ್ಮಗತ

ಪಾಟೀಲ್ ಪುಟ್ಟಪ್ಪನವರಿಗೆ ನೂರರ ಸಂಭ್ರಮ ಕೆ.ಶಿವುಲಕ್ಕಣ್ಣವರ ಟಿಯೆಸ್ಸಾರ್ ಪ್ರಶಸ್ತಿ ಪುರಸ್ಕೃತ, ಪತ್ರಿಕೋದ್ಯಮ ಭೀಷ್ಮ ನಾಡೋಜ ಡಾ.ಪಾಟೀಲ ಪುಟ್ಟಪ್ಪರಿಗೆ ನೂರಾರ ಸಂಭ್ರಮ..! ಪಾಟೀಲ ಪುಟ್ಟಪ್ಪರು 1921ರಿಂದ ಪತ್ರಿಕೋದ್ಯಮವನ್ನು ಕನ್ನಡ ಪರ ಹೋರಾಟಕ್ಕೆ ದುಡಿಸಿಕೊಳ್ಳುತ್ತಿರುವ ಧೀಮಂತ. ಪಾಟೀಲ ಪುಟ್ಟಪ್ಪನವರು ಹುಟ್ಟಿದ್ದು 1921ರಲ್ಲಿ. ಈಗಿನ ಹಾವೇರಿ ಜಿಲ್ಲೆಯ ಕುರುಬಗೊಂಡದಲ್ಲಿ. ತಂದೆ ಸಿದ್ಧಲಿಂಗಪ್ಪ, ತಾಯಿ ಮಲ್ಲಮ್ಮ… ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದ ಅಪರೂಪದ ಪ್ರತಿಭಾವಂತ ಪಾಪು. ಸ್ವಾತಂತ್ರ್ಯ ಬರುವುದಕ್ಕೆ ಒಂದು ವರ್ಷ ಮೊದಲೇ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಪಾಪು, ಬರಹಗಳು ಅಂದೂ ಸಿಡಿಗುಂಡು, ಇಂದೂ ಸಿಡಿಗುಂಡು. 1946ರಲ್ಲಿ ವಿಶಾಲ ಕರ್ನಾಟಕ ಸಾಪ್ತಾಹಿಕಕ್ಕೆ ಸಂಪಾದಕರಾದ ಅವರು ಅದೇ ಪತ್ರಿಕೆಯನ್ನು 1947ರಲ್ಲಿ ಅಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ದಿನಪತ್ರಿಕೆಯನ್ನಾಗಿ ಮಾಡಿದರು. ಆದರೆ ಪುಟ್ಟಪ್ಪನವರ ಪ್ರತಿಭೆಯ ದರ್ಶನ ಸಾರ್ಥಕ ರೀತಿಯಲ್ಲಿ ಆಗಿದ್ದು 1954ರಲ್ಲಿ ಅವರು ಪ್ರಪಂಚ ಸಾಪ್ತಾಹಿಕವನ್ನು ಆರಂಭಿಸಿದ ಬಳಿಕವೇ. ಹಲವು ಅಂಕಣಗಳ ಮೂಲಕ ಅವರು ನೀಡುತ್ತಿದ್ದ ಜ್ಞಾನದಾಸೋಹ ಆ ಸಾಪ್ತಾಹಿಕವನ್ನು ಬೌದ್ಧಿಕ ವಲಯದಲ್ಲಿ ಜನಪ್ರಿಯವನ್ನಾಗಿಸಿತು. 1959ರಲ್ಲಿ ಅವರು ವಿಶ್ವವಾಣಿ ದೈನಿಕವನ್ನು ಆರಂಭಿಸಿದರು. ಬರಹ-ಭಾಷಣ ಪಾಪು ಅವರ ಎರಡು ಪ್ರಮುಖ ಅಸ್ತ್ರಗಳು. ಕನ್ನಡ ಭಾಷೆ, ಕರ್ನಾಟಕದ ಗಡಿ, ಕನ್ನಡಿಗರ ಹಿತ-ಈ ಮೂರಕ್ಕೆ ಧಕ್ಕೆ ಎದುರಾಗುತ್ತಿದೆ ಎನಿಸಿದಾಗಲೂ ಪಾಪು ಗುಡುಗಿದ್ದಾರೆ. ಅನ್ಯಾಯಕ್ಕೆ ಕಾರಣರಾದವರನ್ನು ಅವರು ಎಷ್ಟೇ ದೊಡ್ಡವರಿರಲಿ-ಪಾಪು ಗುಡಿಸಿಹಾಕಿದ್ದಾರೆ. ಹರಿತ ಬರಹ, ಚುರುಕು ನಾಲಗೆಯ ಚಾಟಿ ಏಟಿನ ಮೂಲಕ ಪಾಪು, ಕರ್ನಾಟಕದ ಎಷ್ಟೋ ರಾಜಕಾರಣಿಗಳ ನಿದ್ದೆಯನ್ನೂ ನೆಮ್ಮದಿಯನ್ನೂ ಕೆಡಿಸಿದ್ದಾರೆ… ಪಾಪು ಅವರನ್ನು ಪತ್ರಿಕೋದ್ಯಮಿ ಎಂದು ಕರೆದರೆ ಅವರನ್ನು ಪೂರ್ಣವಾಗಿ ಅರ್ಥಮಾಡಿಕೊಂಡಂತೆ ಆಗುವುದಿಲ್ಲ. ಅವರು ಮೂಲತಃ ಅವಿರತ ಹೋರಾಟಗಾರ. ಪಾಪು ಅವರಿಗೆ ಬರಹ ಎನ್ನುವುದು ಪಾದರಸ ಚಟುವಟಿಕೆ. ತಮ್ಮದೇ ಪತ್ರಿಕೆಗಳಿಗೆ ಪ್ರತಿನಿತ್ಯ. ಪ್ರತಿವಾರ ಬರೆಯುವುದು ಒಂದು.ಇತರ ನಿಯತಕಾಲಿಕಗಳಿಗೆ, ದೈನಿಕಗಳಿಗೆ ಅಂಕಣ ಬರೆಯುವುದು ಇನ್ನೊಂದು. ಆದರೆ ಬರಹದ ತಂತು ಒಂದೇ ಅದು ಕನ್ನಡಪರ ಕಾಳಜಿ. ಕರ್ನಾಟಕ ಏಕೀಕರಣ, ಆಂದೋಳನ, ಗೋಕಾಕ ಚಳವಳಿ, ಕರ್ನಾಟಕ-ಮಹಾರಾಷ್ಟ್ರ ಗಡಿ ತಂಟೆ-ಹೀಗೆ ಹತ್ತು-ಹಲವು ಯಾವುದೇ ವಿಚಾರವಿರಲಿ ಅಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗದಂತೆ ಕತ್ತಿ ಝಳಪಿಸಿದವರು ಪಾಪು. ರಾಜ್ಯಸಭೆ (1962ರಿಂದ 75ರವರೆಗೆ) ಸದಸ್ಯರಾಗಿದ್ದಾಗಲೂ ಅವರು ಅದೇ ಪಾಪು; ಅದೇ ಛಾಪು… ಕರ್ನಾಟಕಕ್ಕೆ ಆಗಿರುವ, ಆಗುತ್ತಿರುವ ಅನ್ಯಾಯಗಳತ್ತ ಕೇಂದ್ರ ಸರ್ಕಾರದ ಗಮನವನ್ನು ಸೆಳೆಯುವ ನಿರ್ಣಾಯಕ ಪಾತ್ರವನ್ನು ಅವರು ಆಗ ನಿರ್ವಹಿಸಿದರು. ಮತ್ತು ಈ 100ರ ಹೊಸ್ತಲಲ್ಲಿದರೂ ಹಾಗೇ ಕನ್ನಡ ಪರವಾಗಿ ಕನ್ನಡ ಪರ ಮತ್ತು ಕರ್ನಾಟಕ ಪರ ಅದೇ ಜವಾಬ್ದಾರಿ ಹೊತ್ತವರು… ವಿಶ್ವದ ಹತ್ತಾರು ದೇಶಗಳಿಗೆ ಭೇಟಿ ನೀಡಿ ಉಪನ್ಯಾಸ, ಭಾಷಣಗಳ ಮೂಲಕ ಭಾರತವನ್ನು ಆ ಮೂಲಕ ಕರ್ನಾಟಕವನ್ನು ದರ್ಶನ ಮಾಡಿಸಿದ ಹಿರಿಮೆ ಅವರದು. ಬೆಳಗಾವಿಯಲ್ಲಿ ನಡೆದ 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವರು ಮಾಡಿದ ಭಾಷಣ ಮುಂದಿನ ಪೀಳಿಗೆಗೆ ಕನ್ನಡ, ಕರ್ನಾಟಕ ಕುರಿತಂತೆ ಅಧ್ಯಯನ ವಸ್ತು, ಆಕರ ಸಾಮಗ್ರಿ. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ ಸೆನೆಟ್‍ಗೂ ಸದಸ್ಯರಾಗಿದ್ದ ಪಾಪು, ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಮೂರ್ನಾಲ್ಕು ದಶಕಗಳಿಗೂ ಹೆಚ್ಚು ಅವಧಿಗೆ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ ಪಾಪು. ನನ್ನದು ಈ ನಾಡು, ನಮ್ಮದು ಈ ಭರತಭೂಮಿ, ಸೋವಿಯತ್ ದೇಶ ಕಂಡೆ, ಸಾವಿನ ಮೇಜವಾನಿ ಮತ್ತಿತರ ಸಣ್ಣ ಕಥೆಗಳು, ಬದುಕುವ ಮಾತು (2 ಸಂಪುಟ) ಪಾಪು ಪ್ರಪಂಚ (4 ಸಂಪುಟ) ಪಾಪು (ಪ್ರಕಟಿಸಿರುವ ಕೃತಿಗಳು) ಇನ್ನಿತರ ಕೃತಿಗಳನ್ನು ರಚಿಸಿದ್ದಾರೆ ಪಾಪು… ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಪ್ರಮುಖರನೇಕರಲ್ಲಿ ಪಾಪು ಸಹ ಒಬ್ಬರು. ಕನ್ನಡದ ಪಾರಮ್ಯಕ್ಕಾಗಿ ನಡೆದ ಗೋಕಾಕ್ ಚಳವಳಿಯಲ್ಲಿ ಅವರದು ಮುಂಚೂಣಿಯ ಪಾತ್ರ. ಗೊಂದಲ, ಗೋಜಲು ಇಲ್ಲದ ಸರಳ, ನೇರ ವಾಕ್ಯ ರಚನೆ ಅವರ ಅಗ್ಗಳಿಕೆಗಳಲ್ಲಿ ಒಂದು. ಈ ಮಾತಿಗೆ ಜ್ವಲಂತ ನಿದರ್ಶನ ಪ್ರಪಂಚ ಸಾಪ್ತಾಹಿಕದಲ್ಲಿ ಅವರು ಪ್ರತಿವಾರವೂ ಬರೆಯುತ್ತಿದ್ದ ವ್ಯಕ್ತಿ ಪರಿಚಯ ಅಂಕಣ. ಒಂದು ಅವಧಿಗೆ ರಾಜ್ಯ ಸಭೆ ಸದಸ್ಯರಾಗಿ, ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಅವರು ನೀಡಿದ ಕೊಡುಗೆ ನಿಸ್ಸಂಶಯದಾಗಿ ಅನನ್ಯ. ರಾಜ್ಯೋತ್ಸವ ಪ್ರಶಸ್ತಿ (1976) ಕರ್ನಾಟಕ ವಿಶ್ವವಿದ್ಯಾನಿಲಯ ಡಿಲಿಟ್ ಪತ್ರಿಕಾ ಅಕಾಡೆಮಿ ಪ್ರಶಸ್ತಿ (1993), ಹಂಪಿ ಕನ್ನಡ ವಿಶ್ವವಿದ್ಯಾನಿಲಯ ನಾಡೋಜ ಪ್ರಶಸ್ತಿ (1996) ಪಡೆದಿರುವ ಪಾಪು ಅವರನ್ನು ನಾಡಿನ ಹೊರನಾಡಿನ ಬಹುತೇಕ ಎಲ್ಲೂ ಕನ್ನಡ ಹಾಗೂ ಕನ್ನಡಪರ ಸಂಘಟನೆಗಳೂ ಗೌರವಿಸಿವೆ. ಕನ್ನಡ ಪತ್ರಿಕೋದ್ಯಮದಲ್ಲಿ ಅಪರಿಮಿತ ಸಾಧನೆ ಮಾಡಿದ ಪರ್ತಕರ್ತರನ್ನು ಗೌರವಿಸುವ ದೃಷ್ಟಿಯಿಂದ ಆರಂಭವಾದ ಟಿಯೆಸ್ಸಾರ್ ಪ್ರಶಸ್ತಿಗೆ (1994) ಆಯ್ಕೆಯಾದವರಲ್ಲಿ ಪಾಪು ಮೊದಲಿಗರು… ಹೀಗೆಯೇ ಕನ್ನಡ, ಕರ್ನಾಟಕ ಕಂಡ ಧೀಮಂತ ಪತ್ರಕರ್ತ, ಪತ್ರಿಕೋದ್ಯಮಿ, ಬರಹಗಾರ, ಕನ್ನಡ-ಕರ್ನಾಟಕದ ಧ್ವನಿ ಡಾ.ಪಾಟೀಲ ಪುಟ್ಟಪ್ಪನವರಿಗೆ ಈಗ ನೂರರ ಸಂಭ್ರಮ… ಇದೋ ಅವರಿಗೆ ಅನಂತಾನಂತ ಹಾರೈಕೆಗಳು… ****************

ಸ್ವಾತ್ಮಗತ Read Post »

ಕಾವ್ಯಯಾನ

ಕಾವ್ಯಯಾನ

ಧನಿಕನ ರಿಮೋಟ್ ಕಂಟ್ರೋಲ್ .. ಕೆ.ಜಿ.ಸರೋಜಾ ನಾಗರಾಜ್ ಹಸಿವಿನಿಂದ ಸತ್ತೋರಿಗೆ ಹಬ್ಬ ಸಡಗರಗಳೆಂತು ಹೊಟ್ಟೆ ಬಟ್ಟೆ ಕಟ್ಟಿದೋರು ಬಡವರು ಅನ್ನವೆಂದು ನರಳುತ್ತಾ ಬದುಕುವರು..! ಕೋಟಿ ಕೋಟಿ ಕನಸುಗಳೊಂದಿಗೆ ಉರಿಯುವ ಮನಸ್ಸುಗಳ ಭೂಕಂಪ ಹೆಣವಾಗಿಸುವ ಸೂಚನೆಗೆ ಹೊರಗೆ ಬಿದ್ದವರು ಬಡವರೇ..! ಹಸಿವಿನ ಕಣ್ಣುಗಳ ಮೇಲೆ ಹೊಂದಿದವರು ದೌಲತ್ತು ಗೋಳಿನ ಕಡಲನು ಬತ್ತಿಸಲು ಬಡವನ ಗುಡಿಸಿಲಿಗೆ ಬರಲೇ ಇಲ್ಲ..! ಕಳಂಕ ರಹಿತ ಧರಣಿಗೆ ಬಡವನ ಹಸಿವೇ ಚರಿತ್ರೆಯಾಗಿರುವಂತೆ ಶತಮಾನದ ಬಡತನಕ್ಕೆ ನೂರಾರು ಸಾಕ್ಷಿಗಳು ಗುಡಿಸಿಲಿನಲ್ಲಿ..! ಬಡವನ ತಲೆಗೆ ಧನಿಕರ ರಿಮೋಟ್ ಕಂಟ್ರೋಲ್ ಹೆಬ್ಬೆರಳೊತ್ತುವನೆಂದು ಕನಸು ಉಪವಾಸ ಮುರಿದು ಧನಿಕನ ಮನೆಯ ಮಗುವಿನ ಹೆಸರಿಟ್ಟ ಮೇಲೆ ಚೆಲ್ಲಾಡಿ ಬಿಟ್ಟ ಆಗುಳ ತಿನ್ನುವವರು… ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಜಗತ್ತೇ ತನ್ನ ಸುತ್ತ ಸುತ್ತುತಿದೆ ಎಂದಾಗ ಹೊರಟು ಬಿಡಬೇಕು ಎಲ್ಲೆಲ್ಲೂ ಪ್ರೀತಿ ನೋಟವಿದೆ ಎಂದಾಗ ಹೊರಟು ಬಿಡಬೇಕು ಇಂದ್ರಚಾಪ ಮೂಡಿಸುವ ಹಗಲಿರುಳುಗಳೇನು ನಿರಂತರವೇ ಇಂದಿಗಿಂದಿನ ಬದುಕು ರಂಗೇರಿದೆ ಎಂದಾಗ ಹೊರಟು ಬಿಡಬೇಕು ಸುಖ ಸಂತಸಗಳು ಪ್ರತಿ ವರುಷ ಬರುವ ವಸಂತನ ತರವೇನು ಹರುಷ ನಲಿ ನಲಿದು ಉಕ್ಕುತಿದೆ ಎಂದಾಗ ಹೊರಟು ಬಿಡಬೇಕು ಎದೆಗೂಡ ಭಿತ್ತಿಯಲಿ ಒಲುಮೆ ಉಲಿವಾಗ ಸ್ವರ್ಗವೂ ನಾಚದೇನು ಸಮುಲ್ಲಾಸದಿ ಜೀವ ಗಂಧ ತೀಡುತಿದೆ ಎಂದಾಗ ಹೊರಟು ಬಿಡಬೇಕು ಇನಿಯನ ಉಸುರುಸಿರ ಬಿಸುಪು ಬೀಗಿ ಮೈ ಮನ ಮರೆಸದಿರದೇ ಕನಸು ಕಚಗುಳಿಯಿಟ್ಟು ಮಾಗುತಿದೆ ಎಂದಾಗ ಹೊರಟು ಬಿಡಬೇಕು ಹೊಸತನವ ತುಂಬುವ ಸೂರ್ಯನ ಪ್ರತಿ ಹುಟ್ಟೂ ವಿಸ್ಮಯಾತೀತ  ಬೆಳಕು ತರುವ ಬೆಳಗಲ್ಲಿ ಬೆಡಗಿದೆ ಎಂದಾಗ ಹೊರಟು ಬಿಡಬೇಕು ಲೋಕದ ಲೇಸರ್ ಕಣ್ಣುಗಳಲ್ಲಿ ಸದಾ ಮುಂಚೂಣಿಯಲ್ಲಿರಲು ಹೇಗೆ ಸಾಧ್ಯ ತನ್ನಿರುವೇ ಸುತ್ತಲೂ ಖುಷಿ ತರುತಿದೆ ಎಂದಾಗ ಹೊರಟು ಬಿಡಬೇಕು  ಮನ ಮನಗಳಲ್ಲಿ ಮನೆ ಮಾಡಿ ಮುದವನ್ನೇ ಸೂಸಬೇಕು ಸಹೃದಯದಿ ಸೌಖ್ಯ, ಸ್ವಾಸ್ಥ್ಯ, ಭಾಗ್ಯ ಬಾಚಿ ತಬ್ಬುತಿದೆ ಎಂದಾಗ ಹೊರಟು ಬಿಡಬೇಕು “ಸುಜೂ” ಳ ಬಾಳು ಸೊಗದಿ ಭವ ಭಾವದೊಳು ಬೆರೆತು ಜಿಗಿಯುತಿದೆ ಇನ್ನೇನು ಸಕಲವೂ ಇಲ್ಲಿಲ್ಲೇ ಒದಗಿದೆ ಎಂದಾಗ ಹೊರಟು ಬಿಡಬೇಕು. ************ ಸುಜಾತಾ ಲಕ್ಮನೆ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಪ್ಪ ಅಪ್ಪ ಎಂದರೆ ನನ್ನಾಸರೆಯ ಹೆಗಲು ಕಡುಗಪ್ಪಿನಂತಹ ಮುಗಿಲು ಬಯ್ಬಿರಿದ ಭೂಮಿಗೆ ಸುರಿವ ಮಳೆಯ ಹನಿಯ ಮುತ್ತಿನ ಸಾಲು ಅಪ್ಪ ಎಂದರೆ ಪ್ರೀತಿಯ ಹೊನಲು ಸವಿಜೇನಿಗೆ ಬೆರೆತ ಹಾಲು ಮಗಳ ಕಾಯುವ ಒಡಲು ಜೊತೆಗಿದ್ದರೆ ಜಗದಲಿ ನನ್ನ ಕೈಯೇ ಮೇಲು ಅಪ್ಪ ಎಂದರೆ ನಗುವ ದ್ವನಿಯ ಕೊರಳು ಸದಾ ಜೊತೆಗಿರುವ ನೆರಳು ಹಿಡಿದು ಹೊರಟರೆ ಅಪ್ಪನ ಕಿರುಬೆರಳು ಖುಷಿಯ ಬುಗ್ಗೆಯಲಿ ಮೆರವಣಿಗೆ ಹಗಲಿರುಳು ಅಪ್ಪನಿಲ್ಲದಾ ಈ ಕ್ಷಣವು ಹೃದಯದಲವಿತಿದೆ ನಿರಾಸೆಯು ಯಾರಲ್ಲಿ ಹುಡುಕಲಿ ಅಪ್ಪನೊಲವು ಅಪ್ಪನ ಕಳೆದುಕೊಂಡ ಈ ಬದುಕು ಕಣ್ಣೀರ ಮಡುವು. ******** ನಿರ್ಮಲಾ ಆರ್.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಸಂಕ್ರಾಂತಿ

ಸಂಕ್ರಮಣ ಅದ್ಭುತವ ತಂದರೆ ತರಲಿ ಈ ಸಂಕ್ರಮಣ ಬೇಡವೆನ್ನಲು ಯಾರು ನಾನು ಬದುಕು ತಂದ ಅಷ್ಟಿಷ್ಟು ನೆಮ್ಮದಿ ಜೊತೆಗೆ ಸಿಕ್ಕರೆ ಸಿಗಲಿ ಜೇನು ಸುಳಿಯಲ್ಲೋ ಮಕರದ ಬಾಯಲ್ಲೋ ಸಿಗದೆ ಸಾಗುತಿರಲಿ ಪಯಣ ಮಮಕಾರ ಕರ ಪಿಡಿದು ಸಂತಸದ ಸೆಲೆ ಹರಿದು ಆಗುತಿರಲಿ ಗಮನ …ಉದ್ದಕ್ಕೂ ಇರಲಿ ಅವನ ಕರುಣ ********** ಡಾ.ಗೋವಿಂದ ಹೆಗಡೆ

ಕಾವ್ಯಸಂಕ್ರಾಂತಿ Read Post »

ಕಾವ್ಯಯಾನ

ಕಾವ್ಯಸಂಕ್ರಾಂತಿ

ಸಾಕೊಂದಿಷ್ಟು ಕವಿತಾ ಸಾರಂಗಮಠ ಉತ್ತರಾಯಣನ ಪುಣ್ಯ ಕಾಲಕೆ ಗದ್ದಲದ ಅಂಧರ ಮಂಡಿಪೇಟೆಯಲ್ಲಿ ಸಂಕ್ರಮಣ ಕಾಲಕೆ ಕಣ್ಣಾವೆಗಳಾದರೂ ಸಂಧಿಸಿವೆ ಸಾಕೊಂದಿಷ್ಟು ಈ ಕಾಲಕೆ..! ಹ್ಯಾಪಿ ಪೊಂಗಲ್ ಡೇ ಎಂಬ ಜಾಹೀರಾತಿಗೆ ಸಂತೋಷ ಉಕ್ಕಿ ಮೋಬೈಲ್ ಮಾತಲಿ ತೊಡಗಿದವರ ನಡುವೆಯೂ ಕುಂಟರಿಬ್ಬರ ತೆವಳುವಿಕೆಗೆ ಗಾಳಿಯಾದರೂ ಬೀಸಿದೆಯಲ್ಲ ಸಾಕೊಂದಿಷ್ಟು ಈ ಕಾಲಕೆ..! ಭವಿಷ್ಯ ಕೇಳಿ ಮದುವೆಯಾಗಬಾರದು ಎಂಬ ನುಡಿಗೆ,ಕಣ್ಣುಗಳ ಒದ್ದೆಮಾಡಿಕೊಂಡಿದ್ದೇನಿಲ್ಲಿ ಬಿಕ್ಕಿಸಿ ಅತ್ತಾಗ ಬೀದಿ ನಾಯಿಯಾದರೂ ನಲುಗಿತಲ್ಲ ಸಾಕೊಂದಿಷ್ಟು ಈ ಕಾಲಕೆ..! ಹಬ್ಬವೆಂದರೆ ಕಿಬ್ಬದಿಯ ಕೀಲು ಮುರಿಸಿಕೊಂಡು,ಗೇಣು ಭೂಮಿಗೆ ಕಾದಾಡಿ ನ್ಯಾಯ ಕೋರ್ಟಿನಲ್ಲಿ ಹೊಟ್ಟೆಗೆ ಅಂಬಲಿಯಾದರೂ ಸಿಕ್ಕಿತಲ್ಲ ಸಾಕೊಂದಿಷ್ಟು ಈ ಕಾಲಕೆ..! ಬೇಡಿದ್ದಿಲ್ಲಿ ದೊರಕದೆ ಹಿಡಿಚೆಲ್ಲಿ ಬೊಗಸೆ ಬಾಚಿಕೊಂಡವನ ನಡುವೆ,ಮಣ್ಣು ಸಿಗದವನಿಗೂ ಹೊನ್ನು ಸಿಕ್ಕಿದೆಯಲ್ಲ ಸಾಕೊಂದಿಷ್ಟು ಈ ಕಾಲಕೆ..! ಎಳ್ಳು-ಬೆಲ್ಲ, ಕುಸುರೆಳ್ಳು-ಅರಷಿಣ ತಿರುವಿ,ಮಂಡಿಪೇಟೆಯೆಂದರೆ ಭಿಕ್ಷೆಯೆಂದಲ್ಲ,ದೇವರಿಗೆ ಹೂವಾದರು ಸಿಕ್ಕಿತಲ್ಲ ಹಿತ್ತಲಿನ ಗಿಡದಲ್ಲಿ.. ಸಾಕೊಂದಿಷ್ಟು ಈ ಕಾಲಕೆ..! *********

ಕಾವ್ಯಸಂಕ್ರಾಂತಿ Read Post »

ಅನುವಾದ

ಅನುವಾದ ಸಂಗಾತಿ

ಸುನೀತ ಸಹಮನಸ್ಕರ ಮದುವೆಗೆ ತಡೆಯ ತರಲಾರೆನಾನು. ಪ್ರೀತಿಯದು ಪ್ರೀತಿಯಲ್ಲ ಕಂಡಂತೆಬದಲಾದ ಪರಿಸರವ ತಾನೂ ಬದಲುತ್ತಲಿರೆ,ಅಥವಾ ಪ್ರೇಮಿ ನಿಲುವಲ್ಲಿ ಪಲ್ಟಿಯಾದಂತೆ:ಇಲ್ಲವೇ ಇಲ್ಲ! ಅದೊಂದು ಸದಾಸ್ಥಿರ ಚಿನ್ಹೆಬಿರುಗಾಳಿಯೆದುರಿಗೂ ಕಂಪಿಸದೆ ನಿಲುವದು.ಅಲೆವ ಹಡಗುಗಳಿಗೆಲ್ಲ ಅದುವೆ ಸ್ಥಾಯಿ ಚುಕ್ಕೆದೂರ ತಿಳಿದರೂ ಅದರ ಬೆಲೆ ಅರಿವ ಮೀರಿದ್ದುಪ್ರೀತಿಯಲ್ಲ ಕಾಲನ ಗುಲಾಮ, ಸುಂದರಾಂಗಗಳುಇವೆ ಅವನ ಡೊಂಕು ಕುಡುಗೋಲಿನ ಅಂಕೆಯಲಿಪ್ರೀತಿಯ ಬದಲಿಸದು ಅವನ ಕ್ಷಣಿಕ ತಾಸು ವಾರಗಳುನಾಶದಂಚಿನವರೆಗೂ ತಾಳುವುದು ಕೆಚ್ಚಿನಲಿ.ರುಜುಮಾಡಿ ತೋರಿದರೆ ನನ್ನೀ ಮಾತು ತರವಲ್ಲನಾನು ಕವಿಯೇ ಅಲ್ಲ, ಪ್ರೇಮಿಯೂ ಎಲ್ಲಿಲ್ಲ. ***** Let me not to the marriage of true mindsAdmit impediments. Love is not loveWhich alters when it alteration finds,Or bends with the remover to remove.O no! it is an ever-fixed markThat looks on tempests and is never shaken;It is the star to every wand’ring bark,Whose worth’s unknown, although his height be taken.Love’s not Time’s fool, though rosy lips and cheeksWithin his bending sickle’s compass come;Love alters not with his brief hours and weeks,But bears it out even to the edge of doom.If this be error and upon me prov’d,I never writ, nor no man ever lov’d. ******** ಮೂಲ: ವಿಲಿಯಂ ಶೇಕ್ಸ್ ಪಿಯರ್ ಕನ್ನಡಕ್ಕೆ: ಕಮಲಾಕರ ಕಡವೆ

ಅನುವಾದ ಸಂಗಾತಿ Read Post »

ಇತರೆ

ಬದುಕು

ಬದುಕು ತಂತಿಯ ಆಟ ಡಾ.ಗೋವಿಂದ ಹೆಗಡೆ ಮೊನ್ನೆ ೧೧ರಂದು ಅಪರಾತ್ರಿಯಲ್ಲಿ ಬೇಲೂರು ತಲುಪಿದ್ದು. ನಿನ್ನೆ ಬೆಳಿಗ್ಗೆ (೧೨/೧/೨೦) ಚೆನ್ನಕೇಶವನ ದರ್ಶನ ಮುಗಿಸಿ ಚಪ್ಪಲಿ ಸ್ಟ್ಯಾಂಡ್ ಗೆ ತೆರಳಿದೆ. ನಾಲ್ಕು ಹೆಜ್ಜೆ ಗಳ ದೂರದಲ್ಲಿ ಆ ವೃದ್ಧರು ಕೂತಿದ್ದರು. ಕೈಯಲ್ಲಿ ಮೇಲೆ ತೋರಿಸಿದ ಚಿತ್ರದ ತಂತಿಗಳ ಗೊಂಚಲು ‌‌. “ಯಜಮಾನರೇ ಏನಿದು” ಅಂದೆ. ಇವು ಪಜಲ್ಸ್ ಅಂದರು. ತಮ್ಮ ಕೈಯಲ್ಲಿ ಬಿಡಿಯಾಗಿ ಇರಿಸಿಕೊಂಡಿದ್ದ ತಂತಿಯ ಆಟಿಕೆಯನ್ನು ತೋರಿಸಿ “ನೋಡಿ ಈ ರಿಂಗ್ ಇದೆಯಲ್ಲ, ಇದನ್ನು ಹೊರತೆಗೆಯಬೇಕು” ಅಂತ ತೋರಿಸಿದರು. ಕುತೂಹಲದಿಂದ ಕೈಯಲ್ಲಿ ತೆಗೆದುಕೊಂಡು ನೋಡಿದೆ. ನಮ್ಮ ಬುದ್ಧಿಶಕ್ತಿಯನ್ನು ಕೆಣಕುವ ಸಾಧನಗಳು ಅವು. “ಅಜ್ಜಾ, ನೀವು ತಂದು ಮಾರತೀರಾ ಅಥವಾ ನೀವೇ ತಯಾರು ಮಾಡ್ತೀರಾ?” ಕೇಳಿದೆ.”ನಾನೇ ತಯಾರು ಮಾಡೋದು, ನಾನು ಫಜಲ್ ಮೇಕರ್” ಎಂದು ಉತ್ತರಿಸಿದರು. ಈಗ ಅವರನ್ನು ಮತ್ತಷ್ಟು ಗಮನಿಸಿದೆ. ಹಳೆಯದಾದರೂ ಶುಭ್ರವಾಗಿದ್ದ ಬಟ್ಟೆಗಳ, ಮಿಂಚು ಕಣ್ಣುಗಳ, ಎಪ್ಪತ್ತರ ಆಸುಪಾಸಿನ ವಯಸ್ಸಿನ ಈ ವೃದ್ಧರು ಜೀವನೋಪಾಯಕ್ಕಾಗಿ ಈ ಪಜಲ್ ಗಳನ್ನು ತಯಾರಿಸಿ ಹೀಗೆ ದೇಗುಲದ ಎದುರು ಬಿಸಿಲಿನಲ್ಲಿ ಕೂತು ಮಾರುವ ದೃಶ್ಯ… ಕರುಳು ಹಿಂಡಿತು. ಪ್ರಾಯಶಃ ಹೆಚ್ಚೇನೂ ಓದಿರದ ಅವರ ಬುದ್ಧಿಶಕ್ತಿ,ಕೌಶಲಗಳ ಬಗ್ಗೆ ಮೆಚ್ಚುಗೆ ಕೂಡ. “ಅಜ್ಜಾ, ಹೇಗೆ ಇವು” ಅಂದೆ. “ಒಂದಕ್ಕೆ ಇಪ್ಪತ್ತು ರೂಪಾಯಿ. ಹತ್ತರ ಗೊಂಚಲಿಗೆ ನೂರೈವತ್ತು” ಎಂದರು. ಆ ಗೊಂಚಲಿನ ಚಿತ್ರ ಇದು. ಬೇಲೂರಿಗೆ ಹೋದರೆ ನೀವು, ದೇಗುಲದ ಚಪ್ಪಲಿ ಸ್ಟ್ಯಾಂಡ್ ಬಳಿ ಅವರು ಸಿಕ್ಕರೂ ಸಿಗಬಹುದು. ಇಲ್ಲವೇ ಸ್ಟ್ಯಾಂಡ್ ನಲ್ಲಿನ ಅಶೋಕ್ ಅವರನ್ನು ಕೇಳಿ. ಅವರು ಕೃಷ್ಣಪ್ಪ,ಫಜಲ್ ಮೇಕರ್. ಅವರ ಬಳಿ ಫಜಲ್ ಕೊಂಡು ತನ್ನಿ. ನಿಮ್ಮ ಬುದ್ಧಿಶಕ್ತಿಯನ್ನು ಪರೀಕ್ಷಿಸಿಕೊಳ್ಳಿ. ಜೊತೆಗೆ ಈ ವಯಸ್ಸಿನಲ್ಲೂ ಸಕ್ರಿಯರಾಗಿರುವ ಅವರ ಕಾಯಕ ನಿಷ್ಠೆಗೆ,ಕೌಶಲಕ್ಕೆ, ನಿಮ್ಮದೂ ಒಂದು ಸೆಲ್ಯೂಟ್ ಇರಲಿ. ******* ಚಿತ್ರ-ಬರಹ : ಗೋವಿಂದ ಹೆಗಡೆ

ಬದುಕು Read Post »

ಕಾವ್ಯಯಾನ

ಕಾವ್ಯಯಾನ

ರಥ ಸಪ್ತಮಿ ಹೊಸ ಪಥದಿ ಮೂಡಿ ಬಂದ ಮಂಜಿನ ತೆರೆ ಸರಿಸಿ ನಕ್ಕಳಿವಳು ಎಳ್ಳು ಬೆಲ್ಲವ ನೀಡಿ ‘ಒಳ್ಳೆಯ ಮಾತಾಡು’ಅಂದಳು ಸೂರ್ಯ ನಕ್ಕಿದ್ದುಂಟೇ! ಸಿಡಿ ಮಿಡಿ ಅನ್ನುತ್ತಲೇ ಬಿಸಿ ತೋಳುಗಳ ಬಳಸಿ ಅಪ್ಪಿಕೊಂಡ. ******** ಪ್ರೇಮಲೀಲಾ ಕಲ್ಕೆರೆ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಸಂಕ್ರಾಂತಿ

ಪರಿವರ್ತನೆಯ ಪರ್ವಕಾಲ  ಅವ್ಯಕ್ತ ಅನಂತ ಆಗಸದಿ ಸ್ವಚ್ಛಂದ ಕ್ರಮಿಸುವನು, ಆದಿತ್ಯ ಸ್ನೇಹರಾಶಿಗಳ ಮನೆಯಿಂದ ಮನೆಗೆ, ಧನುವಿಗೆ ಕೈಬೀಸಿ ಮಕರನಿಗೆ ಕೈಚಾಚುತಲಿ, ಕಾಯದ ನಾಡಿಗಳಿಗೆ ಉತ್ತರಾಯಣಾಗಮನದ ಸಂಭ್ರಮ… ಜೀವಲೋಕದ ದಿನಕರನ ಕಣಕಣದ ಆಟದ ಪರಿಯೋ ! ರಾತ್ರಿ ಮಾಗಿ ಹಗಲು ಹಿಗ್ಗಿ, ವಿರಸ ಕಳೆದು ಸರಸ ಬೆಳೆದು, ಶೀತ ಕರಗಿ ಶಾಖವರಳಿ, ಬಂಜೆ ಬಾಡಿ ಭೂ ರಮೆಯಾಗಿರಲು, ರವಿತೇಜನ ತಂಪಿಗೆ ಹಬ್ಬಿತೆಲ್ಲೆಡೆ ಸಂಕ್ರಮಣದ ಸಡಗರ… ಸ್ವಾಗತಿಸುವ ಸಂಭ್ರಮದಿ ಸಂತಸವ ಹಂಚುತಲಿ, ಎಳ್ಳು ಬೆಲ್ಲ ಕಡಲೆ ಕೊಬ್ಬರಿ ಕಬ್ಬು ಬಾಳೆ ಅಚ್ಚು ಮೆಚ್ಚು, ವೃದ್ಧಿಸಲು ನಾಲಿಗೆಗೆ ಸವಿರುಚಿ ಆರೋಗ್ಯದ ಅಭಿರುಚಿ, ಮುತ್ತಿನ ಮಾತುಗಳು ಮಾಗಿಸುತಲಿ ಮನದ ದುಗುಡವ… ಪಂಜಾಬಲಿ ಲೋರಿ, ಆಂದ್ರದ ಭೋಗಿ, ತಮಿಳರ ಪೊಂಗಲ್, ಅಸ್ಸಾಮಿನ ಮಾಗಬಿಹು, ಝಾರ್ಖಂಡಲಿ ಸಂಕ್ರಾತ್, ಉತ್ತರಪ್ರದೇಶದ ಕಿಚರಿ, ಗುಜರಾತಿಯರ ಉತ್ತರಾಯಣ್, ರಾಜಸ್ಥಾನಿಯರಿಗೆ ಪಟದ ಹಬ್ಬ, ಕನ್ನಡಿಗರಿಗೆ ಸಂಕ್ರಮಣದ ಹಬ್ಬ. ಬನ್ನಿ ಎಲ್ಲರೂ ಒಂದುಗೂಡಿ ಎಳ್ಳು ಬೆಲ್ಲ ಹುಗ್ಗಿಯ ಹಂಚಿ, ಸದ್ಭಾವನೆಯ ಅಮೃತವ ಲೋಕದೆಲ್ಲೆಡೆ ಹರಡುವ, ಒಳಿತಿನ ಪಥದಲಿ ಶುಭವ ಅರಸುತ ಹಾರೈಸುವ, ಸಾಧನೆ ಸಹನೆ ಸರಸ ಸಾಮರಸ್ಯದ ಬಾಂಧವ್ಯ ಮೆರೆಯುವ… ********

ಕಾವ್ಯಸಂಕ್ರಾಂತಿ Read Post »

You cannot copy content of this page

Scroll to Top