ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕವಿತೆ ಕಾರ್ನರ್

ಕವಿತೆ ಕಾರ್ನರ್

ಒಮ್ಮೊಮ್ಮೆ ಹೀಗೂ ಆಗುತ್ತೆ! ಚಳಿಗಾಲದ ಸಂಜೆಯೊಳಗೆ ಗೋಡೆಗೊರಗಿ ಕೂತಿದ್ದವಳೆನ್ನ ಎದೆಗಾನಿಸಿಕೊಂಡು ಕವಿತೆ ಹಾಡುತ್ತಾ ಹೋದಳು ಕೇಳುತ್ತ ವಿರಮಿಸಿದವನ ಕನಸಲ್ಲಿ ದೇವತೆಗಳು ಬಂದು ನಿಂತರು ಅದು ಯಾವ ಕಾಲಕ್ಕೂ ಮುಗಿಯದ ಹಾಡೆಂಬ ನಂಬಿಕೆಯೊಳು ಮಲಗಿದವನಿಗೆ ಎಚ್ಚರವಾದಾಗ ಗೋಡೆಯಿರಲಿಲ್ಲ,ಅಸಲಿಗೆ ಅಲ್ಲೊಂದು ಮನೆಯೇ ಇರಲಿಲ್ಲ ಬಯಲ ಹೊರತು ಇನ್ನು ಅವಳಾಗಲಿ, ಅವಳ ಮಡಿಲಾಗಲಿ ಕಾಣಲಿಲ್ಲ ತೆರೆದು ಬಿದ್ದ ಬಯಲೊಳಗೆ ಕೇವಲ  ನಾನು ಮತ್ತು  ನಾನು ಮತ್ತು ನನ್ನ ಮೌನ ನನ್ನ ಹೆಗಲ ಮೇಲೆ ನನ್ನದೇ ಹೆಣ! ಕು.ಸ.ಮಧುಸೂದನ ರಂಗೇನಹಳ್ಳಿ

ಕವಿತೆ ಕಾರ್ನರ್ Read Post »

ಕಾವ್ಯಯಾನ

ಕಾವ್ಯಯಾನ

ಮದುವೆಯ ಪ್ರಸ್ತಾಪ ಹರ್ಷಿತಾ ಕೆ.ಟಿ. ನೋಡುನೋಡುತ್ತಿದ್ದಂತೆ ಆಕಾಶದಲ್ಲೊಂದು ಕದ ತೆರೆದುಕೊಂಡಿತು ಯಾವುದೋ ಕೈಯೊಂದೂ ಚಾಚಿ ಕರೆಯಿತು ನಿಂತಲ್ಲಿಂದಲೇ ಕತ್ತು ನೀಳ ಮಾಡಿ ಎಟುಗಿಸಿ ನೋಡಿದೆ ಕದದ ಆ ಬದಿಯ ಲೋಕ ಅಲ್ಲಿ ಎಲ್ಲವೂ ಕಲ್ಪಿಸಿಕೊಂಡಿದ್ದಕಿಂತ ಅಚ್ಚುಕಟ್ಟು ಜೋಡಿಸಿಟ್ಟ ಕನಸುಗಳಿಗೆ ಧೂಳು ತಾಕಿರಲಿಲ್ಲ ಅಲ್ಲಿ ಹಸಿವು ಬಾಯಾರಿಕೆಗಳೂ ಊಳಿಡುವುದಿಲ್ಲ ಬತ್ತಿ ಸಿಕ್ಕಿಸಿ ಎಣ್ಣೆ ತುಂಬಿಸಿಟ್ಟ ದೀಪಗಳು ಬೆಳಗುವುದೊಂದೇ ಬಾಕಿ ಆದರೂ ಎತ್ತಲೂ ಈಗಾಗಲೇ ಬೆಳಕು ಈ ಭೂಮಿಯಂತಲ್ಲ ಕಸದ ರಾಶಿ ಇಲ್ಲ ಅಂಗಳವೂ ಇಕ್ಕಟ್ಟಿಲ್ಲ ಒಲೆಯೇರಿ ಕುಳಿತ ಮಡಿಕೆಗೆ ತೂತುಗಳಿಲ್ಲ ಮಾಳಿಗೆ ಸೋರಿ ಆಸೆಗಳು ನೀರು ಕುಡಿಯುವುದಿಲ್ಲ ಇದೇ ತಾನೇ ನಾ ಕಲ್ಪಿಸಿ ಕನವರಿಸಿದ್ದು ಇದೇ ತಾನೇ ನನ್ನಮ್ಮ ದಿಬ್ಬದ ಗುಡಿಯಲ್ಲಿ ಹರಸಿಕೊಂಡಿದ್ದು ಆದರೂ ಏನೋ ಸರಿಯೆನಿಸುತ್ತಿಲ್ಲ ಬಯಕೆಗೂ ಮಿಗಿಲಾಗಿ ದಕ್ಕಿದರೂ ಉಪ್ಪು ಸಾಲದ ಭಾವನೆಗಳು ಹಿಗ್ಗಿದರೂ ಅರಳದ ಒಡಲು ಬೆಳಕಿನ ಲೋಕದಲ್ಲಿ ಪ್ರತಿ ಘಳಿಗೆಯೂ ಬೆಳಕಂತೆ ಕತ್ತಲೆಯೇ ಕಾಣದಷ್ಟು ಕಣ್ಣಿಗೇ ಕತ್ತಲು ಕವಿಯುವಷ್ಟು ಗಂಧವಿಲ್ಲದ ಬೆಳಕು ಕೈಗಂಟಿದ್ದ ಎಂದೋ ಬಾಚಿದ ಸಗಣಿಯ ಘಮಲು, ಎದೆಯೊಳಗಿನ ಕತ್ತಲು ಹೆಚ್ಚು ಜೀವಂತವೆನಿಸಿತು ಮುಂಜಾವಿನಲಿ ಹಿತವೆನಿಸಿದ ಒಪ್ಪ ಓರಣಗಳು ಸಂಜೆ ಹೊತ್ತಿಗೆ ಅಸುನೀಗಿದಷ್ಟು ಸ್ತಬ್ದವೆನಿಸಿದವು ಸಾವು ನೋವುಗಳ ಕೇಳರಿಯದ ಮಹಲಿನ ಗೋಡೆಗಳು ಹೀರುತ್ತಿದಂತಿತ್ತು ನಗುವಿನ ಸದ್ದನೂ ಪ್ರತಿಧ್ವನಿಸದಂತೆ ಆಸೆಗಳಿಗೆ ರೆಕ್ಕೆ ಕಟ್ಟದ ಭೂಮಿ ಆಯ ತಪ್ಪಿ ಬಿದ್ದರೆ ಭೂಮಿ ಸಿಗದ ಆಕಾಶ ಚಾಚಲೊಲ್ಲದ ಕೈ ಒಲ್ಲೆಯೆನ್ನದ ಬಾಯಿ ಸಗಣಿ ಮೆತ್ತಿದ ಕನಸುಗಳು ಹರಡಿಕೊಂಡು ಕುಳಿತಿರುವೆ ಮನದ ಎದುರು ಆಯ್ಕೆಗಾಗಿ

ಕಾವ್ಯಯಾನ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಅಡ್ಡಾಡಬೇಡ ಒಬ್ಬಳೇ! ಅಡ್ಡಾಡಬೇಡ ಒಬ್ಬಳೇ! ಅದರಲ್ಲೂ ಮಳೆಗಾಲ! ಇರುಳಿಡೀ ಸುರಿದ ಜಡಿಮಳೆಗೆ ತೊಯ್ದು ತೊಪ್ಪೆಯಾದವಳು ಜಗುಲಿಯೊಳಗೆ ಕಾದು ಕೂತಳು ಹಗಲ ಸೂರ್ಯನ! ನೆಂದದ್ದೆಲ್ಲ ಒಣಗಬೇಕು ಇಲ್ಲ ಫಲವತ್ತಾದ ನೆಲದೊಳಗೆ ಮೊಳಕೆಯೊಡೆಯಲು ಬೇಕು ಒಂದಿಷ್ಟು ಶಾಖ ಬೆಳಕು ಎಷ್ಟು ಹೊತ್ತಾದರು ಬಾರದ ಸೂರ್ಯನೊ ಬಿದ್ದ ಮಳೆಗೆ ಕಾರಣ ತಾನಲ್ಲ ಮೊಳಕೆಯೊಡೆವ ಬೀಜವೂ ತನ್ನದಲ್ಲವೆಂಬಂತೆ ಬರಲೇ ಇಲ್ಲ ಕಾದು ಕುಂತವಳ ಕಾಲುಗಳು ಬೇರುಬಿಟ್ಟು ಮನುಜರ ಕಾಡಿನಲಿ ತನ್ನದೇ ಗೂಡು ಕಟ್ಟಿದಳು ಒಂಟಿಯಾಗಿ ಈಗವಳು ಮಗಳ ಕೂರಿಸಿಕೊಂಡು ಕತೆ ಹೇಳುತ್ತಾಳೆ ಜೊತೆಗಷ್ಟು ಬುದ್ದಿ ಮಾತನು ಇರುಳಲ್ಲಿ ಅಡ್ಡಾಡಬೇಡ ಒಬ್ಬಳೇ! ಕು.ಸ.ಮಧುಸೂದನ ರಂಗೇನಹಳ್ಳಿ

ಕವಿತೆ ಕಾರ್ನರ್ Read Post »

ಕಾವ್ಯಯಾನ

ಕಾವ್ಯ ಯಾನ

ಆ ಕರಾಳ ಇರುಳು ಮಧು ವಸ್ತ್ರದ್ ನಾವು ಮುಂಬಯಿ ಮಾಯಾ ನಗರದ ದಿಟ್ಟನಿವಾಸಿಗಳು.. ಮರೆಯೆವು ಎಂದೂ 26-11ರ ಆ ಕರಾಳ ಇರುಳು.. ಉತ್ಸಾಹದ ಕೆಲಸದೊತ್ತಡದ ಗಜಿಬಿಜಿಯ ದಿನಗಳು.. ಅರಿವಿಲ್ಲದೆ ಬಲಿಯಾದರು ತಪ್ಪನೆಸಗದ ಮುಗ್ಧಜನಗಳು.. ಶತ್ರುಗಳು ನುಗ್ಗಿದರು ಮೋಸದಿ ಸಮುದ್ರಮಾರ್ಗದೊಳು.. ಯಾರಿಗೂ ಕಾಣಲಿಲ್ಲ ಆ ನೀಚ ಕಪಟಿಗಳ ನೆರಳು.. ಅಕಸ್ಮಾತ್ತಾಗಿಎರಗಿದ ಭೀಕರ ಗುಂಡು ಸಿಡಿಮದ್ದುಗಳು.. ಜೀವತೆತ್ತರನೇಕ ಕಾರ್ಯನಿರತ ಪೋಲಿಸ್ ಕರ್ಮಚಾರಿಗಳು.. ಸೋತುಬಳಲಿದವುಮುಂಬೈನ ಎತ್ತರದ ಕಟ್ಟಡಗಳು.. ಮೌನವಾದವು ಫುಟ್ ಪಾತ್ ಗಳು..ಖಾವುಗಲ್ಲಿಗಳು.. ಹೋಟೆಲ್ ತಾಜ್ಒಳಾಂಗಣದಿ ಪೋಲಿಸರ ಕಸರತ್ತು ಗಳು ಮೂರುದಿನಗಳವರೆಗೆ ಪಿಸ್ತೂಲ್ ಟ್ರಿಗರ್ ನಲ್ಲೆ ಬೆರಳು.. ಪ್ರವಾಸಿಗರನು ಸುರಕ್ಷಿತವಾಗಿ ಹೊರಗೆ ಕಳಿಸುವಗೀಳು.. ಗುಂಡಿನ ಚಕಮಕಿಯಲ್ಲಿ ಬಿದ್ದವು ನೂರಾರು ಶವಗಳು.. ಬೆಳ್ಳಗಾಗ ತೊಡಗಿದವು ತುಕಾರಾಂರ ಕಣ್ಣುಗಳು.. ಆದರೂ ಸೋಲದೆಹಿಡಿದರು ಕಸಾಬನ ಕೊರಳು.. ಮುಂಬಯಿ ಜನರಿಗೆ ತಮ್ಮ ಪೋಲೀಸರೆ ಹೀರೊಗಳು.. ನೀಡುವೆನು ಈ ಪೋಲಿಸರಿಗೆ ನನ್ನ ಶತಃಶತ ನಮನಗಳು ಕಿರುಪರಿಚಯ: ಗೃಹಿಣಿ..ಪತಿ-ಅಸಿಸ್ಟೆಂಟ್ ಪೋಲೀಸ್ ಕಮಿಷನರ್. ಕಳೆದ ೩೨ ವರ್ಷಗಳಿಂದ ಮುಂಬಯಿನಲ್ಲಿ ವಾಸ ಸಂಗೀತ.. ಸಾಹಿತ್ಯ.. ಅಡುಗೆ..ಗಳಲ್ಲಿ ತುಂಬಾ ಆಸಕ್ತಿ ಇದೆ..ಸಮಾಜ ಸೇವೆ ಮಾಡೋದರಲ್ಲೂ ಆಸಕ್ತಿ ಇದೆ.. ಓದುವುದು ಬರೆಯುವುದು ಹವ್ಯಾಸ,

ಕಾವ್ಯ ಯಾನ Read Post »

ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ಅವ್ಯಕ್ತ ಉಡುಗೊರೆ ಉಡುಗೊರೆ ಅವನ್ಯಾರೋ ನಂಗೆ ಗೊತ್ತಿಲ್ಲ, ಮುಗ್ಧ ನಗುವ ಹೊನಲು ಮುಖದಲ್ಲಿ ಹಾರಾಡ್ತಿರ್ತಿತ್ತು , 100 ಮಕ್ಳ ಕ್ಲಾಸಲ್ಲಿ ವಿಭಿನ್ನ ಇವ್ನು. ಹೊಳೆವ ಕಣ್ಣುಗಳು, ಮುಖದಲ್ಲಿ ಕಾಂತಿ, ಬಾಡಿ ಲ್ಯಾಂಗ್ವೇಜಲ್ಲಿ ಗೌರವ…ನಾನು ನಿತ್ಯ ನನ್ನ ಕೆಲಸ ಮಾಡೋದು- ಪ್ರಶ್ನೆ ಕೇಳೋದು, ಉತ್ತರ ಹೇಳೋದು, ಕೊನೇ ಘಳಿಗೇಲಿ ಸ್ವಲ್ಪ ಹೊತ್ತು ಜೀವನದ ಬೆಲೆ  ಬಗ್ಗೆ ವಿಶ್ಲೇಷಣೆ….        ಹೀಗೆ ದಿನ ಕಳೆದ್ವು, ಎದ್ರು ಬಂದಾಗ್ಲು ಎದುರು ನಿಲ್ಲಲು ಹಿಂಜರಿತಿದ್ದ. ಫಸ್ಟ್ ಪಿಯುಸಿ ಅಲ್ವಾ ಭಯ ಇರ್ಬಹ್ದು ಅಂತ ಸುಮ್ನಾದೆ. ನಂಗೆ ಒಂದು ಹುಚ್ಚು ಕುತೂಹಲ, ಮಕ್ಳನ್ನ ಅವರ ಗುಣಗಳ್ನ ಅನ್ವೇಷಿಸೋದು ಸೈಲೆಂಟಾಗಿ ವೀಕ್ಷಿಸುತ್ತಾ ಹೋದ್ರೆ ಅವರ ಮನಸನ್ನ ಕೂಡ ಶೋಧಿಸ್ಬಹ್ದು ಅಂತ ಗೊತ್ತಿತ್ತು, ಕಲ್ತಿದ್ದೆ. ಸಮಯ ಸಿಕ್ಕಾಗ್ಲೆಲ್ಲಾ ಹುಡುಗನ ಚಟುವಟಿಕೆಗಳನ್ನು ದೂರದಿಂದಲೇ ವೀಕ್ಷಿಸುತ್ತಿದ್ದೆ ಸೋಜಿಗ ಎಂದರೆ ಎಲ್ಲಿದ್ದರೂ ಅಲ್ಲಿ ನಗೆಯ ಹೊನಲಿತ್ತು, ಅನ್ಯೋನ್ಯತೆ ಕಾಣುತ್ತಿತ್ತು. ಆದರೆ ನಾನು ಎದುರಿಗೆ ಹೋಗುವಾಗ ಮೌನ ಮುಗುಳ್ನಗು, ಗೌರವದ ಒಂದು ಸೂಚನೆ, ವಾಹ್! ಅಪರೂಪದ ರತ್ನ, 21ನೇ ಶತಮಾನದಲ್ಲೂ ಇಂಥ ಮಕ್ಕಳು..ಎಂದು ಮನಸ್ಸಲ್ಲೆ ಯೋಚಿಸಿ ಒಳ್ಳೇದಾಗಲಿ ಎಂದು ಆಶೀರ್ವಾದ ಮಾಡಿ ಬಿಡುತ್ತಿದ್ದೆ. ಕಾಲೇಜಿನ ವಾರ್ಷಿಕೋತ್ಸವ ಹೊಸತನದ ಹುಚ್ಚು.. ನನ್ನಲ್ಲಿ, ಮಕ್ಳಲ್ಲಿರುವ ಎಲ್ಲಾ ಗುಣಗಳ್ನ ಹೊರತೆಗಿಬೇಕಂತ ಆಸೆ. ಆ ಕಲೆಗಳ್ಗೆ ಗುರುತು ಕೊಡೋದೇ ನನ್ನ ಹುಚ್ಚು ಹಠ.. ಈ ನಿಟ್ನಲ್ಲಿ ಈ ಬಾರಿ ಕಾವ್ಯ ಕುಂಚ ಗಾನ ಎಂಬ 3 ಕಲೆಗಳ ಸಂಯೋಜನೆ ಮಾಡ್ದೆ-ಒಂದೇ ಸ್ಟೇಜಲ್ಲಿ. ಹಾಡುವವರು, ಹಾಡಿಗೆ ಚಿತ್ರ ಬರೆಯುವವರು, ಅದೇ ಹಾಡಿಗೆ ಮ್ಯೂಸಿಕಲ್ ಇನ್ಸ್ಟ್ರುಮೆಂಟ್ಸ್ ನುಡ್ಸೋರು…. ಗೊತ್ತಿರ್ಲಿಲ್ಲ ಇವನು ಮ್ಯಾಂಡೊಲಿನ್ ನುಡಿಸ್ತಾನೆ ಅಂತ….. ಅಭ್ಯಾಸ ಶುರುವಾಯ್ತು, ಅಭ್ಯಾಸದೊಂದಿಗೆ ಸರಿ-ತಪ್ಗಳ ವಿಶ್ಲೇಷಣೆ, ರಾಗತಾಳಗಳ ಬಗ್ಗೆ ಸಂಯೋಜನೆ, ಹೆಚ್ ತಿಳ್ದೋರು-ಸ್ವಲ್ಪ ತಿಳ್ದೋರ ಮಧ್ಯದಲ್ಲಿ ಒಂದು ಬ್ಯಾಲೆನ್ಸ್ ತರೋ ಪ್ರಯತ್ನ…. ಸ್ವಲ್ಪ ಹೆಣ್ಣುಮಕ್ಕಳು, ಸ್ವಲ್ಪ ಗಂಡುಮಕ್ಕಳು, ತಬಲ, ಹಾರ್ಮೋನಿಯಂ, ಕೀಬೋರ್ಡ್, ಚಿತ್ರಗಾರರು, ರಾಗತಾಳಗಳು,ಹಿಮ್ಮೇಳಗಳು,ಅವಶ್ಯಕತೆಗಳು, ಕಲ್ಪನೆಗಳು, ಆಲೋಚನೆಗಳು, ಧೋರಣೆಗಳು, ಒಂದರಮೇಲೊಂದು ಸಮಾಗಮಗಳು… ಆ ದಿನ ಕೆಲಸದ ಒತ್ತಡ ಹೆಚ್ಚಾಗಿ, ಬೇರೆ ಸಮಸ್ಯೆಗಳೂ ಸೇರಿ, ಒಂತರಾ ಅಸಹನೆ ಕೂಡಿತ್ತು ನನ್ನಲ್ಲಿ. ರೋಸಿಹೋದ ದೇಹವನ್ನು ಹೊತ್ತು,ಮನಸಲ್ಲಿ ಸಾವಿರ ಪ್ರಶ್ನೆಗಳ ಉತ್ರಾ ಹುಡುಕ್ತಾ ಲ್ಯಾಬ್ನ ಕಡೆ ನಡ್ದೆ.. ಯಾವುದೋ ಸಿಟ್ನಲ್ಲಿ, ವ್ಯವಧಾನ ಕಳ್ಕೊಂಡು ಹೇಳಿದೆ  “ಪ್ರಾಕ್ಟೀಸ್ ಮಾಡಕ್ಕೆ ಏನ್ರೋಗ ನಿಮ್ಗೆ? ದಿನಾ ನಾನೇ ಬಂದು ಹೇಳ್ಬೇಕು! ಇಷ್ಟು ದೊಡ್ಡೋರಾಗಿದೀರ! ಜವಾಬ್ದಾರಿ ಬೇಡ್ವಾ. ಎಲ್ಲಾದುಕ್ಕೂ ನಾನೇ ತಲೆ ಚಚ್ಕೋಬೇಕಾ?” ಆ ಕಡೆಯಿಂದ ಮ್ಯಾಂಡೋಲಿನ್ ನಲ್ಲಿ “ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು” ನುಡಿಯಲಾರಂಭವಾಯಿತು. ನನ್ನ ಅತಿಪ್ರಿಯ ಹಾಡುಗಳಲ್ಲಿ ಒಂದು ಅದು. ನನ್ನ ಮುಖದಲ್ಲಿ ಮುಗುಳ್ನಗೆ ಅರಳಿದ್ದು ನಂಗೇ ಗೊತ್ತಾಗಲಿಲ್ಲ.. ನಕ್ಬಿಟ್ಟೆ..ಆಶ್ಚರ್ಯದಿಂದ ಅವನನ್ನ ಹತ್ರ ಕರ್ದು ಕೇಳ್ದೆ “ಹೇಗೆ ಗೊತ್ತು ಈ ಹಾಡು ನಿಂಗೆ, ಇದನ್ನೇ ಯಾಕ್ ನುಡುಸ್ದೆ ನೀನು?”        ಅದಕ್ಕೆ ಅವನು ಆಡಿದ ಮಾತು ಕೇಳಿ ದಂಗಾದೆ,” ಮಿಸ್,ಅವತ್ತು ಲ್ಯಾಬ್ ರೆಕಾರ್ಡ್ ಇಡಲಿಕ್ಕೆ ಬಂದಾಗ ನೀವು ಕಿಟಕಿಯ ಕಡೆ ನೋಡ್ಕೊಂಡು ಇದೇ ಹಾಡನ್ನು  ಗುನುಗ್ತಾ ಇದ್ರಿ, ಬಹಳ ಹಾಡುಗಳನ್ನು ನೀವುಗುಣ ಗಿದ್ದೀರಿ ಆದರೆ ಈ ಹಾಡಲ್ಲಿ ನಿಮ್ಮ ಮುಗುಳ್ನಗೆ ನಿಜವಾಗಿರುತ್ತೆ ಮಿಸ್”  “ನಿಮಗೆ ಸಂತೋಷವಾಗಲಿ ಎಂದೇ ಇದನ್ನು ನುಡಿಸಿದೆ”……ಇದಾದ್ನಂತ್ರ ದಿನಾ ಲ್ಯಾಬ್ಗೆ ನಾನು ಬಂದು ಕೂರ್ತಿದ್ಹಂಗೆ, ಒಂದು ನಿಮಿಷ ಈ ಹಾಡು.. ನನ್ನ ಮುಗುಳ್ನಗೆ.. ನಂತರ ರೆಗ್ಯುಲರ್ ಪ್ರಾಕ್ಟೀಸ್. ವಾರ್ಷಿಕೋತ್ಸವ ಆಯ್ತು, ಇಷ್ಟ್ರಲ್ಲೇ ನಾನು ಇವ್ನಲ್ಲಿ ಬಹಳ ವಿಶೇಷ ಗುಣಗಳ್ನ ಗುರುತಿಸಿದ್ದೆ..      ಆಟ ಆಡ್ತಾ ನಗ್ ನಗ್ತಾ ಇನ್ನೊಬ್ರ ಬೇಸ್ರಾನ ಗುರ್ತಿಸ್ತಿದ್ದ, ಅದ್ನ ಕಡ್ಮೆ ಮಾಡಕ್ಕೆ ತನಗಾದ ಪ್ರಯತ್ನ ಮಾಡ್ತಿದ್ದ.. ಎಲ್ಲಾ ಸಂಬಂಧಗಳಿಗೂ ಒಂದು ಬೆಲೆ ಇದೆ ಎಂಬ ಔಚಿತ್ಯ ಅರಿತುಕೊಂಡಿದ್ದ. ಬೇರೆಯವರು ಅವರವರ ಸಂಬಂಧಗಳನ್ನು ಹೇಗೆ ಬೆಳೆಸಬೇಕು ಎಂಬ ಸೂಕ್ಷ್ಮವನ್ನು ಹೇಳಿಕೊಡುತ್ತಿದ್ದ…ಸಂಬಂಧಗಳಿಗೆ ಗೌರವ ಪ್ರೀತಿ ವಿಶ್ವಾಸ ತುಂಬಿ ಸಂತೋಷದ ಹೊನಲು ಹಂಚುವ ಗುಣ ಬಹಳ ವಿರಳ… ಇಷ್ಟು ಸಣ್ಣ ವಯಸ್ಸಿಗೆ ಇಷ್ಟೊಂದು ನಿಸ್ವಾರ್ಥ ನಿಷ್ಕಾಮ ಪ್ರಬುದ್ಧ ತೆ ಇದೇ ಮೊದಲ ಬಾರಿ ನೋಡಿದ್ದು..ವಿಪರ್ಯಾಸ ಅಂದ್ರೆ, ಈ ವಿದ್ಯೆ ಯಾವ ಪುಸ್ತಕದಲ್ಲೂ ಹೇಳ್ಕೊಡೊದಿಲ್ಲ, ಅಂಕಪಟ್ಟಿಯ ಸಾಲಿನಲ್ಲಿ ಸೇರೊದಿಲ್ಲ, ಮೆಡಲ್ ಗಳು ಖಂಡಿತಾ ಇಲ್ಲ, ಇದಕ್ಕೆ ಯಾವ Rank ಕೂಡ ಕೊಡೋದಿಲ್ಲ…           ಈ ಸ್ವಾರ್ಥ ಲೋಕದಲ್ಲಿ ನಿಸ್ವಾರ್ಥ ಹಕ್ಕಿಯಾಗಿದ್ದು ಇವನು ಹಾರುವ ಮುನ್ನವೆ ಮುದುಡಿ ಹೋಗಿದ್ದು ತುಂಬಲಾರದ ನಷ್ಟವೇ ಸರಿ…ಸ್ವಾರ್ಥಿಗಳ ಸ್ವಾರ್ಥವೋ? ನಿಸ್ವಾರ್ಥದ ವರ ಶಾಪವೋ? ನಾನರಿಯೆ! ನನ್ನ ಮನಸ್ಸಲ್ಲಿ ಎಂದೂ ಆರದ ದೀಪವಾಗಿ ಆ ಗುಣಗಳನ್ನು ಅಳವಡಿಸಿಕೊಂಡು ಅವನನ್ನು ನನ್ನಲ್ಲಿ ಉಳಿಸಿಕೊಂಡೆ…..ಇರೋದ್ ಮೂರು ದಿನದಲ್ಲಿ ಹಂಚು ಪ್ರೀತಿಯ, ಈ ಉಡುಗೊರೆಗೆ ಸರಿಸಮ ಇನ್ನೇನಿಲ್ಲ

ಅವ್ಯಕ್ತಳ ಅಂಗಳದಿಂದ Read Post »

ಕಾವ್ಯಯಾನ

ಮಕ್ಕಳ ಪದ್ಯ

ಪಟ್ ಪಟೆಕಾಯಿ ಚಟ್ ಪಟ ಎಂದು! ವಿಜಯಶ್ರೀ ಹಾಲಾಡಿ ಪಟ್ ಪಟೆಕಾಯಿ ಚಟ್ ಪಟ ಎಂದು ಹಾಡು ಕಟ್ತಿತ್ತು ಮೆತ್ತನೆ ಹೆಜ್ಜೆಯ ಬೆಳ್ಳಿ ಬೆಕ್ಕು ಕದ್ದು ಕೇಳ್ತಿತ್ತು ಪಟ್ ಪಟೆಕಾಯಿ ಚಟ್ ಪಟ ಎಂದು ನಕ್ಕು ಉರುಳಿತ್ತು ಮುಳ್ಳಿನ ಮರೆಯ ಓತಿಕ್ಯಾತವು ಫೋಟೋ ಹಿಡಿದಿತ್ತು ಪಟ್ ಪಟೆಕಾಯಿ ಚಟ್ ಪಟ ಎಂದು ಅಳುತಾ ಕೂತಿತ್ತು ಓಡುತ ಬಂದ ಇರುವೆಯಣ್ಣ ಗಲ್ಲ ಸವರಿತ್ತು ಪಟ್ ಪಟೆಕಾಯಿ ಚಟ್ ಪಟ ಎಂದು ಗೊರಕೆ ಹೊಡೆದಿತ್ತು ನಿದ್ದೆ ಬಾರದೆ ಬಾಲವ ಸುತ್ತಿ ನರಿಯು ಊಳಿತ್ತು ನರಿಯು ಊಳಿತ್ತು..!

ಮಕ್ಕಳ ಪದ್ಯ Read Post »

ಇತರೆ

ಸ್ಮರಣೆ

ಅರು #ಪ್ರಕಾಶನ ಸಹಯೋಗದಲ್ಲಿ ಶರೀಫರನ್ನು ಅವರ ೨೦೦ ನೇ ಜಯಂತಿ ಸಂದರ್ಭದಲ್ಲಿ ನೆನಪಿಸಿಕೊಳ್ಳುವ ಒಂದು ಪ್ರಯತ್ನ ನಿನ್ನೆ ನೆರವೇರಿತು. ಕನ್ನಡದ ಅಪರೂಪದ ಆಶು ಕವಿ ಶರೀಫರ ವ್ಯಕ್ತಿತ್ವ.. ಜೀವನಗಳ ಕುರಿತು ಒಂದಷ್ಟು ಮಾತು. ಜನಮಾನಸದಲ್ಲಿ ನೆಲೆಗೊಂಡಿರುವ ಅವರ ಆಯ್ದ ೧೦ ತತ್ವ ಪದಗಳನ್ನು ಗಾಯನ ತಂಡದವರಿಂದ ಸುಶ್ರಾವ್ಯವಾಗಿ ಪ್ರಸ್ತುತಪಡಿಸುವಿಕೆ.. ಜೊತೆಗೆ ಆ ಪದಗಳ ತಾತ್ವಿಕ ವಿಶ್ಲೇಷಣೆ.. ಕೊನೆಯಲ್ಲಿ ಪುಟ್ಟದೊಂದು ಉಪಹಾರದ ರೀತಿಯ ಪ್ರಸಾದ ಸೇವನೆ.. ಇಷ್ಟು ಕಾರ್ಯಕ್ರಮದ ಒಟ್ಟು ರೂಪುರೇಷೆ.

ಸ್ಮರಣೆ Read Post »

ಇತರೆ

ಅನುಭವ

ಬೆಳಗಿನ ಚಹಾ ಹೀರುತ್ತಾ…. ಎನ್.ಶಂಕರ್ ಗೌಡ ಶರತ್ಕಾಲದ ಕಾತೀ೯ಮಾಸವಿದು. ಆರಂಭಿಕ ಚಳಿಗಾಲವಾದರೂ ನಿಧಾನವಾಗಿ ತಣ್ಣನೆಯ ಸುಳಿಗಾಳಿಯನ್ನು ಕೂಡ ತರುತ್ತದೆ.ಸಾದಾರಣ ಆಹ್ಲಾದಕರ ಹವಾಮಾನ ಹೊಂದಿದ ದಿನಗಳಿವು. ದೈಹಿಕವಾಗಿ ಹಿಮ್ಮೆಟ್ಟಿಸುವ ಸಮಯವಿದು.ರಾತ್ರಿ ದೀರ್ಘ, ಹಗಲು ಕಡಿಮೆ.ಕೆಲವರಿಗೆ ಸೋಮಾರಿತನವನ್ನು ಹೆಚ್ಚಿಸುವ ಈ ಚಳಿಗಾಲ ,ಬೆಚ್ಚಗಿನ ನೆನಪುಗಳನ್ನು ಹೊಂದಿದವರವನ್ನು ತಂಪಾಗಿರಿಸುತ್ತದೆ. ವೃದ್ಧಾಪ್ಯರಿಗೆ ಪಾಪ ಚಳಿ ಹೊರೆಯಾದರೆ,ನವ ವಧು-ವರರಿಗೆ ವರವಿದು. ಹಿಮ ಭರಿತ ಪ್ರದೇಶಗಳು ಕವಿಗಳನ್ನು ಆಕಷಿ೯ಸುತ್ತವೆ.ಜಿ.ಪಿ.ರಾಜರತ್ನಂ ರವರ ಭೂಮಿ ತಬ್ಬಿದ್ ಮೋಡ್ ಇದ್ದಂಗೆ, ಬೆಳ್ಳಿ ಬಳಸಿದ್ ರೋಡ್ ಇದ್ದಂಗೆ…..”ಮಡಿಕೇರೀಲಿ ಮಂಜು”ಗ್ರಾಮ್ಯ ಸೊಗಡಿನ ಮನಸೆಳೆವ ಪದ್ಯ ನಾವು ಕೇಳಿದ್ದೀವಲ್ಲವೆ. ಚಳಿಗಾಲದ ಹಿಮ ಸೂಯೋ೯ದಯವನ್ನು ಕೊಂಚ ಹೊತ್ತು ಕಾಡಿದರೂ ನಂತರ ರವಿಯ ಕಿರಣಗಳು ಎಷ್ಟೊಂದು ಬೆಚ್ಚಗಿನ ಅನುಭವ ಕೊಡುತ್ತವೆ.ನಮ್ಮ ಮನೆಯ ಮುಖ್ಯ ದ್ವಾರದಿಂದ ಬರುವ ಸೂಯೋ೯ದಯದ ಕಿರಣಗಳಿಗೆ ಮೈಯೊಡ್ಡಿ, ಕನ್ನಡ ಪತ್ರಿಕೆಯನ್ನು ಓದುತ್ತಾ..ಅಧಾ೯ಂಗಿ ಕೊಟ್ಟ ಚಹಾವನ್ನು ಹೀರುವ ಕ್ಷಣವನ್ನು ವಣಿ೯ಸಲಸಾಧ್ಯವಾದುದು.ಗೈರುಹಾಜ ರಾಗದಂತೆ ಪ್ರತಿನಿತ್ಯ ಸವಿಯಬೇಕೆನಿಸಿತು.ಕವಿ ಬೇಂದ್ರೆಯವರು “ಬೆಳಗು ಜಾವ”ಕವನದಲ್ಲಿ “ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯ ಕಣ್ಣ….. ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿ ನಿದ್ದೆಗಿದ್ದೆ ಸಾಕು, ಈ ತುಂಬಿ ಬಾಳು ತುಂಬಿರುವ ತನಕ, ತುಂತುಂಬಿ ಕುಡಿಯಬೇಕು.. ಹೀಗೆ ಬೆಳಗಿನ ಸೌಂದರ್ಯವನ್ನು ವಣಿ೯ಸುತ್ತಾ ಸೂಯೋ೯ದಯ ಸುಂದರ ಸೊಬಗನ್ನು ಸವಿದು ಬದುಕನ್ನು ಸಾಥ೯ಕ ಪಡಿಸಿಕೊಳ್ಳಿ ಎಂದು ಕರೆ ಕೊಡುವರು. ಈ ಸೊಬಗಿನ ಸೌಂದರ್ಯಕ್ಕೆ ಮನಸೋಲದವರಿಲ್ಲ. ಈ ಸೌಂದರ್ಯವನ್ನು ಕೊಂಚ ಹೊತ್ತು ಬದಿಗಿಟ್ಟು ಚಳಿಗಾಲದ ಬಾಲ್ಯದ ನೆನಪುಗಳ ಹಿಂತಿರುಗಿದರೆ ಸರಿಯಾದ ಬೆಚ್ಚಗಿನ ಹೊದಿಕೆಗಳಿಲ್ಲದೆ ನಿದ್ರೆ ಬರದೆ ಅಬ್ಬಬ್ಬಾ…ಚಳಿ ಎಂದು ನಡುಗಿ “ನಿ”ಆಕಾರದಲ್ಲಿ ಮೈ ಮುದುರಿಕೊಂಡು ಮಲಗಿದ್ದು ಇನ್ನೂ ಅಚ್ಚ ಹಸಿರು.ತೀವ್ರ ಚಳಿಗೆ ಅಪ್ಪ ತಾಳಲಾರದೆ ಬೀಡಿಯನ್ನು ಚೂರು ಬಿಡದಂತೆ ಅಂಚಿನವರೆಗೂ ಸೇದಿ ಸೇದಿ ಬಿಸಾಡಿದ್ದು, ಅಮ್ಮ ಹಚ್ಚಿದ ಒಲೆ ಮುಂದೆ ಕೈಗಳನ್ನು ಬಿಸಿ ಮಾಡಿ ಕೆನ್ನೆಗಳನ್ನು ಬೆಚ್ಚಗೆ ಸವರಿಕೊಂಡಿದ್ದ ನೆನಪುಗಳು ಈಗಲೂ ಬೆಚ್ಚಗೆ ಕಾಡುತ್ತಲೇ ಇವೆ. ಕೆ, ಎಸ್, ನ ರವರ “ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು, ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು….. ಹೀಗೆ ಜೀವನಪೂತಿ೯ ನಮ್ಮ ಗೊಣಗಾಟ ವಿದ್ದದ್ದೆ ಅಲ್ಲವೇ! ಏನೇ ಇರಲಿ ಪ್ರಕೃತಿಯ ಎಲ್ಲಾ ಕಾಲಮಾನಗಳ ಜತೆ ಹೊಂದಿಕೊಂಡು ಅದರ ಅನುಭವವನ್ನು ಸವಿದು ಬದುಕಿದಾಗಲೇ ಜೀವನಕ್ಕೆ ಒಂದು ಅಥ೯ವಿರುವುದು. (ಭಾನುವಾರ ನಮಗೆ ಬಿಡುವಾದರೂ “ಭಾನು”ರಜೆ ಪಡೆಯುವಂತಿಲ್ಲ.ಪೂತಿ೯ ರಜೆ ಹಾಕಿದರೆ ಅದರ ಪರಿಣಾಮವೇ ಬೇರೆ) ರಜೆ ಇದ್ದುದರಿಂದ ಬೆಳಗಿನ ಸೂಯೋ೯ದಯವನ್ನು ಸವಿಯುತ್ತಾ ಚಹಾ ಹೀರುತ್ತಾ ಒಂದಷ್ಟು ನೆನಪಿನ ಸಾಲುಗಳು.

ಅನುಭವ Read Post »

ಕಾವ್ಯಯಾನ

ಕಾವ್ಯಯಾನ

ಮನದಾಳದ ಬಯಕೆ ರತ್ನಾ ಬಡವನಹಳ್ಳಿ ಸದ್ದಿಲ್ಲದೆ ಸರಿದ ಸುಂದರ ದಿನಗಳು ಸುದ್ದಿ ಮಾಡಿದ್ದರಿಯದಿಹ ವಾರಗಳು ತಂಗಳೆನಿಸದ ತಿಳಿನೀರಂತಹ ತಿಂಗಳುಗಳು ಹರುಷದ ಸವಿ ಸಿಂಚನಗೈದ ವರುಷಗಳು ಮೆಲುಕು ಹಾಕಲು ಕಾಯಬಹುದು ನಾ ಮುಂದೊಂದು ದಿನ ಬುದ್ದಿಯಗರ್ಭದಲಿ ಮೊಳಕೆಯೊಡೆದು ಮನಸು ಅಂಬೆಗಾಲಿಟ್ಟ ಅಕ್ಷರಗಳಲಿರದೆ ಮುನಿಸು ಪದಗಳಾಗಿ ಹೆಣೆದ ಬಾಡದಿಹ ಹಾರ ಸೊಗಸು ಕನ್ನಡಾಂಬೆಯ ಕೊರಳಲಂಕರಿಸಿ ಮೆರೆವ ಕನಸು ನಂಬಿಕೆಯ ನೆರಳಲಿ ನನಸಾಗಬಹುದು ಮುಂದೊಂದು ದಿನ ಕಿಚ್ಚಾವರಿಸದ ಹಚ್ಚ ಹಸಿರು ಕಾನನ ಸ್ವಚ್ಛ ಮನಗಳ ನಡುವೆ ಹೂವಾದ ಜೀವನ ಧಾವಂತಗಳಲಿ ನಲುಗದೆ ನಲಿದ ಮೌನ ಧ್ಯಾನ ನವನೀತದಲಿ ಜಾರುವ ಕೇಶದಂತಹ ಯಾನ ಕಲ್ಪನೆಯ ಬದುಕು ಸಾಕಾರವಾಗಬಹುದೇ ಮುಂದೊಂದು ದಿನ ಬರಡು ಬಯಲೊಳಗೆ ಭರವಸೆಯ ಬೆಳಕು ತೊರೆದು ತೆರಳಿರೆ ಜಗದಿ ತುಂಬಿಹ ಕೊಳಕು ಹಳಿಯದೆ ಹರಸುತ ಹುಡುಕದೆ ಹುಳುಕು ಒಳಿತನೇ ಬಯಸುತ ಎಲ್ಲರಲಿ ಸರ್ವಕಾಲಕು ಉರುಳಿತಿರೆ ಕಾಲಚಕ್ರ ಕಾಣದೇನು ಸತ್ಯಯುಗ ಮುಂದೊಂದು ದಿನ ಕಿರುಪರಿಚಯ: ಕವನ,ಕವಿತೆ,ಗಜ಼ಲ್,ಚುಟುಕು ಲೇಖನ ಬರೆಯುವ ಹವ್ಯಾಸ.ಪ್ರಜಾಪ್ರಗತಿ,ಮಾನಸಾ,ಕಸ್ತೂರಿ ಇನ್ನಿತರ ಪತ್ರಿಕೆಗಳಲಿ ಪ್ರಕಟಗೊಂಡಿವೆ.ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿಹೆಕನ್ನಡ ಸಾಹಿತ್ಯಪರಿಷತ್ ನಿಂದ ಪ್ರಶಸ್ತಿ ಬಂದಿದೆ

ಕಾವ್ಯಯಾನ Read Post »

You cannot copy content of this page

Scroll to Top