ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

Image result for photos of village decorated bull

ಅಮ್ಮನೂರಿನನೆನಪುಗಳು

ಅಮೇರಿಕಾದಿಂದ ಅಶ್ವಥ್ ಬರೆಯುತ್ತಾರೆ

Image result for photos of village decorated bull

ಅಶ್ವಥ್

ಹೋರಿ ಕಣ್ಣು

Image result for photos of village decorated bull

ಮೊನ್ನೆ ರಾತ್ರಿ ಊಟ ಮುಗಿಸಿ ಮಲಗಿದ ನಿದ್ರೆ ಹತ್ತಿದ ಸ್ವಲ್ಪ ಹೊತ್ತಿನಲ್ಲೇ ಯಾಕೋ ಇದ್ದಕ್ಕಿದ್ದ ಹಾಗೆ ಕಲ್ಹಳ್ಳಿ ಎತ್ತು ಎದುರಲ್ಲಿ ಬಂದು ನಿಂತಂತೆ ಇತ್ತು!  ಸುತ್ತ ನೋಡಿದೆ, ಯಾರಿದಾರೆ ಜೊತೆಯಲ್ಲಿ,  ಬರೀ ಕಲ್ಹಳ್ಳಿ ಎತ್ತು… ಮನೆ ಎತ್ತು ಯಾವ್ ಕಡೆ ಹೋಯ್ತು? ಮತ್ತೆ ಇನ್ನೊಂದು ಸಲ ಪರಿಶೀಲಿಸಲೇ, ಎಲ್ಲಿದಿವಿ, ಕಲ್ಹಳ್ಳಿ ಎತ್ತು ಮತ್ತು ನಾನು ಇಬ್ಬರೇ. ಯಾರಿಗೆ ಹೇಳೋದು ಈಗ, ಗಾಬರಿಯಾಯ್ತು. ಆ ಗಾಬರಿಗೆ ಕಾರಣ,  ಮನೆ ಎತ್ತು ಜೊತೆಯಲ್ಲಿದ್ದರೆ ಮಾತ್ರ  ಕಲ್ಹಳ್ಳಿ ಎತ್ತಿನ  ಹತ್ತು ಇಪ್ಪತ್ತು ಅಡಿ ದೂರದಲ್ಲಿ ನಾನು ಸುಳಿಯಲು ಧೈರ್ಯಮಾಡುತ್ತಿದ್ದುದು.  ಆದರೆ ಇವತ್ತು  ಎದುರೇ ನಿಂತುಬಿಟ್ಟಿದಾನೆ, ದುರುಗುಟ್ಟು ನೋಡ್ತಾ ಇರುವ ಹಾಗಿದೆ ಬೇರೆ. ಮತ್ತೆ ಸ್ವತಃ ಧೈರ್ಯ ತಂದುಕೊಳ್ಳೋಕೆ ಮನೆಯ ಬೇರೆ ಯಾರೂ ಜೊತೆಯಲ್ಲಿ ಇಲ್ಲ.

ಈ ಮನೆ ಎತ್ತು ಮತ್ತು ಕಲ್ಹಳ್ಳಿ ಎತ್ತುಗಳೆರಡೂ ತಾವು ಬದುಕಿದ ಬಹುತೇಕ ದಿನಗಳಲ್ಲಿ ಜೊತೆಯಲ್ಲೇ ಇದ್ದವು. ಬಹುಶಃ ಅವೆರಡಕ್ಕೂ ವಯಸ್ಸಲ್ಲಿ ಎರಡು ಅಥವಾ ಮೂರು ವರ್ಷಗಳ ಅಂತರವಿದ್ದಿರಬಹುದು. ಎಳೆಗರುವಿನಿಂದ ಮುದಿಯಾಗುವವರೆಗೂ ಜೊತೆಯಾಗಿಯೇ ಬೆಳೆದವು, ಜೊತೆಯಾಗಿಯೇ ದುಡಿದವು. ಮನೆಯಲ್ಲೇ ಹುಟ್ಟಿದ ಕರುವಿಗೆ ಜೋಡಿಮಾಡಲು ಕಲ್ಹಳ್ಳಿಯಿಂದ ಖರೀದಿಸಿ ತಂದಿದ್ದ ಕರು ಕಲ್ಹಳ್ಳಿ ಎತ್ತಾಗಿ ಬೆಳೆಯಿತು. ನಾನು ಆರೇಳು ವರ್ಷದವನಿದ್ದಾಗ ಇವೆರಡೂ ಆಗತಾನೇ ತಮ್ಮ ಇಳಿವಯಸ್ಸಿನ ಕಡೆ ಮುಖಮಾಡಿದ್ದರಿಂದ ಅವುಗಳ ಹೆಸರು ಹೋರಿ ಎನ್ನುವುದರಿಂದ ಎತ್ತು ಎನ್ನುವುದಕ್ಕೆ ಬದಲಾಗುತ್ತಿತ್ತು. ಕೆಲವೊಮ್ಮೆ ಹೋರಿ ಎಂದೂ ಮತ್ತೆ ಕೆಲವೊಮ್ಮೆ ಎತ್ತು ಎನ್ನುತ್ತಲೂ, ಬರುಬರುತ್ತಾ ಎತ್ತು, ಮುದಿಎತ್ತು ಹೀಗೆ ಅವುಗಳ ಹೆಸರಿನ ಬಡ್ತಿಯ ನೆನಪು. ಮನೆ ಹೋರಿ ಕರುವಾಗಿದ್ದಾಗಿನಿಂದಲೂ ಮನೆಯವರ ಮತ್ತು ಊರವರ ನೆನಪಿನಲ್ಲೆಲ್ಲಾ ಶಾಂತ ಸ್ವಭಾವದ್ದಾಗಿದ್ದು, ಗೋವು ಅಂತ ನಿರ್ವಿವಾದವಾಗಿ ಕರೆಯಬಹುದಾಗಿತ್ತು. ಅದೇ ಕಾರಣಕ್ಕೋ ಏನೋ, ನನ್ನ ಬಾಲ್ಯದ ಬುದ್ಧಿಗೆ ಮನೆಹೋರಿಯ ಹೆಸರು ‘ರಂಗ’ ಅಂತ ಹೊಳೆದಿತ್ತು. ಕಲ್ಹಳ್ಳಿ ಹೋರಿಯದು ಬೇರೆಯೇ ಕತೆ. ಮನೆ ಹೋರಿಗೆ ಹೋಲಿಕೆಯಲ್ಲಿ ಬಹುತೇಕ ಹೊಂದುತ್ತಿತ್ತಾದರೂ, ಸ್ವಭಾವ ಅದರ ತದ್ವಿರುದ್ಧ. ಮನೆ ಹೋರಿಯ ಜೊತೆಯಲ್ಲೇ ಇದ್ದಿದ್ದರಿಂದಲೋ ಏನೋ, ಶಾಂತವಾಗೇನೋ ಇರುತ್ತಿತ್ತು. ಆದರೆ ಅದರ ಕೋಪ ಪೊಲೀಸನ ಸೊಂಟದಲ್ಲಿರುವ ಪಿಸ್ತೂಲಿನಂತೆ ಸದಾ ಬದಿಯಲ್ಲಿಯೇ ತೂಗುತ್ತಿರುತ್ತಿತ್ತು. ಹಾಗಾಗಿ ಅದರ ಹೆಸರು ನರಸಿಂಹ, ಎಂದು ಕಲ್ಪಿಸಿಕೊಂಡು ನಂತರ ಆ ಹೆಸರನ್ನು ಕುದಿಸಿ ಭಟ್ಟಿ ಇಳಿಸಿ ಸರಳವಾಗಿ ‘ತಿಮ್ಮ’ ಎಂದು ಕಲ್ಪಿಸಿಕೊಂಡಿದ್ದೆ. 

ಈ ರಂಗ ಮತ್ತು ತಿಮ್ಮ, ಇವರ ಹೆಸರು ನಾನು ಕಲ್ಪಿಸಿಕೊಳ್ಳುವುದಕ್ಕೆ ಇನ್ನೊಂದು ಕಾರಣವಿತ್ತು. ಈ ಜೋಡಿ ಎತ್ತುಗಳು ಅಜ್ಜಿಮನೆಯ(ಅಮ್ಮನ ತವರು) ದೊಡ್ಡ ಸಂಸಾರದ ಖಾಯಂ ಸದಸ್ಯರಾಗಿ ಇದ್ದಂತಹವು.  ಹಾಗಾಗಿ ಆಕಾರದಲ್ಲಿ ಮನುಷ್ಯರಂತಿಲ್ಲದೆ, ಮಾತು ಬಾರದಿದ್ದರೂ ಅವರಿಬ್ಬರ ಸುತ್ತಮುತ್ತ ಇರುವಾಗ ನಮ್ಮಂತೆಯೇ ಅವುಗಳೂ ಮಾತನಾಡುತ್ತವೆ ಎಂದೇ ಅನಿಸುತ್ತಿತ್ತು… ಸದ್ದು ಬಾರದಿದ್ದರೂ ಅವುಗಳ ಮಾತು ಕಣ್ಣುಗಳಲ್ಲಿ, ಕಾಲ್ಗಳಲ್ಲಿ, ಬಾಲದಲ್ಲಿ ವ್ಯಕ್ತವಾಗುತ್ತಿತ್ತು. ಆ ಜೋಡಿ, ಮನೆಯಲ್ಲಿರುವ ಎರಡು ದುಡಿಯುವ ಮೂಕ ಸದಸ್ಯರು, ಆದರೆ ತಮ್ಮ ನಡೆಯೇ ಅವರ ಭಾಷೆಯಾಗಿ ನಮ್ಮೊಟ್ಟಿಗೆ ಮಾತನಾಡುತ್ತಾರೆ ಎಂಬುದೇ ನನ್ನ ಕಲ್ಪನೆಯಾಗಿತ್ತು.  ರಂಗನ ಬಗ್ಗೆ ನಮಗೆ ಎಳ್ಳಷ್ಟೂ ಆತಂಕವಿರಲಿಲ್ಲ. ಮೈತೊಳೆಯುವುದು, ಹುಲ್ಲುಹಾಕುವುದು, ಹಣೆ ಸವರುವುದು ಏನು ಮಾಡಿದರೂ ರಂಗ ಅಪ್ಪಟ ಸಾಧು.  ತಿಮ್ಮನ ಹತ್ತಿರ ಸುಳಿಯುವುದಿರಲಿ, ನಾನೊಬ್ಬನೇ ಇದ್ದರೆ  ತಿಮ್ಮನ ಕಣ್ಣು ತಪ್ಪಿಸಿಕೊಂಡು ಓಡಾಡುತ್ತಿದ್ದೆ. ಎಲ್ಲೋ ಅಪರೂಪಕ್ಕೊಮ್ಮೆ ಹತ್ತಿರ ಸುಳಿಯುವುದಿದ್ದರೂ, ಅದು ತಾತನ ಅಥವಾ ಮಾವಂದಿರ ಜೊತೆ ಸುರಕ್ಷಿತವಾಗಿದ್ದಾಗ ಮಾತ್ರ. ನಾನು ಹುಟ್ಟುವುದಕ್ಕೂ ಮೊದಲೇ ನಮ್ಮ ಮನೆಯಲ್ಲಿ ಹೋರಿಗಳಾಗಿದ್ದ ಈ ನಮ್ಮ ಕುಟುಂಬದ ಸದಸ್ಯರ ಬಗ್ಗೆ ತರಹೇವಾರಿ ಕತೆಗಳನ್ನು ನಾನು ಕೇಳಿದ್ದೇನೆ. 

ಬೇಸಿಗೆಯ ಒಂದು ದಿನ ಕಟ್ಟೆಅರಸಮ್ಮನ ಹರಕೆಯ ಬಗ್ಗೆ ಮಾತಾಡಿ, ಯಾವತ್ತು ಹೋಗೋದು ಅಂತ ಚರ್ಚಿಸಿ ಒಂದು ದಿನ ಗೊತ್ತುಮಾಡಿದರು. ಕಟ್ಟೆಅರಸಮ್ಮನಿಗೆ ಮುತ್ತಜ್ಜಿಯ ಯಾವುದೋ ಒಂದು ಹಳೆಯ ಹರಕೆಯಿತ್ತಂತೆ. ನಮ್ಮ ಊರಿನಿಂದ ಕಟ್ಟೆಅರಸಮ್ಮನ ಗುಡಿ ನಲವತ್ತು ಕಿಲೋಮೀಟರು ದೂರ. ಗುಡಿ ಅನ್ನೋದಕ್ಕಿಂತ ಅದು ಆಗ ಒಂದು ಸಣ್ಣ ಗೂಡು.  ಈಗ ಒಂದು ಕಟ್ಟಡ ಆಗಿ ಅದು ಗುಡಿ ಆಗಿದೆ.  ಕಟ್ಟೆಅರಸಮ್ಮನ ಹರಕೆ ಅಂದರೆ ಅದು ಕುರಿ, ಕೋಳಿ, ಹಂದಿಯನ್ನು ದೇವಸ್ಥಾನದ ಬಳಿ ಬಲಿಕೊಡುವುದು.ಅದರಲ್ಲಿ ಕಟ್ಟೆ ಅರಸಮ್ಮನ ಪಾಲು ತುಂಬಾ ಕಡಿಮೆಯೇ. ಮಾಂಸವೂ ಸೇರಿದಂತೆ, ಬೇಯಿಸಿದ ಎಲ್ಲಾ ಅಡುಗೆಯನ್ನೂ, ಒಂದು ಆಳಿಗೆ ಬಡಿಸುವಷ್ಟನ್ನು ಬಾಳೆಯೆಲೆಯಲ್ಲಿ ಬಡಿಸುವುದು, ಅದನ್ನು ಇನ್ನೊಂದು ಬಾಳೆಯೆಲೆಯಲ್ಲಿ ಮುಚ್ಚುವುದು. ಅಲ್ಲಿಗೆ ಬಂದಿರುವ ಮನೆಯ ಸದಸ್ಯರೆಲ್ಲರೂ ಹಣ್ಣು ಕಾಯಿ ಇಟ್ಟು ಅಗರಬತ್ತಿ, ಕರ್ಪೂರ ಹಚ್ಚಿ  ಪೂಜೆ ಮುಗಿಸಿದರೆ ಅಲ್ಲಿಗೆ ಹರಕೆ ತೀರಿದಂತೆ. ಆಮೇಲೆ ದೇವರಿಗಿಟ್ಟ ಪಾಲೂ ಸೇರಿದಂತೆ ಮಾಡಿದ ಅಡುಗೆಯೆಲ್ಲ ಪ್ರಸಾದ. ಇದೊಂಥರಾ ಪಕ್ಕಾ ಫ್ಯಾಮಿಲಿ ಪಿಕ್ನಿಕ್ಕು. ಅಂತಹ ಒಂದು ಪಿಕ್ನಿಕ್ಕು ಮುತ್ತಜ್ಜಿಯ ಹರಕೆಯ ಪೂರೈಕೆಗಾಗಿ ಸಿದ್ಧವಾಗಿತ್ತು.

ಮುತ್ತಜ್ಜಿ ನನ್ನ ತಾತನಿಗೆ ಚಿಕ್ಕಮ್ಮ, ತಾತನನ್ನು ತಮ್ಮಯ ಅಂತ ಕರೆಯುತ್ತಿತ್ತು.  “ತಮ್ಮಯ್ಯ, ಗಾಡಿಗೆ ದಬ್ಬೆ ಬಿಗಿಬೇಕು, ಯಾರ್ನಾದರೂ ಕರ್ಕೊಂಡ್ ಬಂದು ಬಿರ್ರನೆ  ಶುರು ಮಾಡದಲ್ವಾ” ಅಂದರು ಮುತ್ತಜ್ಜಿ. 

“ಗಾಡಿ ತಡಿಕೆ ಐತಲ್ಲ ಮಳೆ ಏನ್ ಬರಾಂಗಿಲ್ಲ, ಸುಮ್ನೆ ಯಾಕೆ ಈ ಕಮಾನು ದಬ್ಬೆ ಚಿಕ್ಕವ್ವ” ಅಂದರು ತಾತ….  “ರಾತ್ರಿಯೆಲ್ಲಾ ಗಾಳಿ ಥಂಡಿಯಿರ್ತದೆ, ದಮ್ಮು ಜಾಸ್ತಿಯಾದ್ರೆ ಆಸ್ಪತ್ರೆಗೆ ಸೇರಿಸಿ ಬತ್ತೀಯಾ, ಸುಮ್ನೆ ಹೇಳಿದ್ದ್ ಕೇಳು, ದಬ್ಬೆ ಕಟ್ಟಿ ಟಾರ್ಪಲ್ ಹಾಕು”  ಎಂದು ಹೇಳುವುದರಿಂದ ಶುರುವಾದ ಪ್ರಯಾಣದ ಕೆಲಸ, ಮುಸ್ಸಂಜೆಯಾಗುವವರೆಗೂ ಎಲ್ಲರೂ ಒಂದಿಲ್ಲೊಂದು ಕಡೆ ಗದ್ದಲದಿಂದ ಕೆಲಸ ಮಾಡುತ್ತಾ ಮುಂದುವರಿದಿತ್ತು.

ರಂಗ ಮತ್ತು ತಿಮ್ಮ ಎರಡೂ ರಾಗಿಹುಲ್ಲು ಮೆಲುಕುತ್ತಾ ಎಲ್ಲರನ್ನೂ ಗಮನಿಸುತ್ತಿದ್ದವು. ಮಧ್ಯಾಹ್ನದ ಹೊತ್ತಿಗಾಗಲೇ ಹೊಟ್ಟೆ ತುಂಬಿಸಿಕೊಂಡವರೇ, ಮನೆಮಂದಿಯೆಲ್ಲಾ ಓಡಾಡುವುದನ್ನು ಗಮನಿಸಿ, ಇವತ್ತು ಸಂಜೆ ಗಾಡಿ ಕಟ್ತಾರೆ…  ರಾತ್ರಿಯಿಡೀ ನಾವು ನಡಿತಾನೇ ಇರಬೇಕು ಅಂತ ಗೊತ್ತಾಗಿ ಮಲಗಿದ್ದಲ್ಲೇ ಕೊರಳು ಅತ್ತಿತ್ತ ಆಡಿಸುತ್ತ ಸುಲಭವಾಗಿ ಬಾಯಿಗೆ ಸಿಗುತ್ತಿದ್ದ ಹುಲ್ಲನ್ನು ಬೇಕೋ ಬೇಡವೋ ಎಂಬಂತೆ  ನಿಧಾನವಾಗಿ ಮೆಲ್ಲುತ್ತಿದ್ದವು.  ನಲವತ್ತು ಕಿಲೋಮೀಟರ್ ಅಂದರೆ ಆರೇಳು ಗಂಟೆಯ ಎತ್ತಿನಗಾಡಿಯ ಪ್ರಯಾಣ. ರಂಗ ಮತ್ತು ತಿಮ್ಮರ ದಾಪುಗಾಲಿಂದ ಬೇಗನೆ ತಲುಪಲು ಸಾಧ್ಯವಿದ್ದರೂ, ಮರದ ಗಾಡಿಯಲ್ಲಿ ಪಾತ್ರೆ, ಅಡುಗೆ ಸಾಮಾನು ಜೊತೆಗೆ ಮನೆಯವರು ಗಾಡಿಯಲ್ಲಿ ಕೂತಿರುವುದರಿಂದ ಆತುರದಿಂದ ಓಡಿ ತಲುಪುವುದು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿಯೇ, ರಾತ್ರಿ ಊಟ ಮುಗಿಸಿ ಹತ್ತು ಹನ್ನೊಂದರ ಸುಮಾರಿಗೆ ಗಾಡಿ ಕಟ್ಟಿದರು…  ಹಂದಿಯ ಕಾಲು ಬಿಗಿದು ಗಾಡಿಯ ತಳಬದಿಗೆ ಕಟ್ಟಿದ್ದರು. ಒಂದರ್ಧ ಗಂಟೆಯಷ್ಟು ಅದರ ಅರಚಾಟ, ನಂತರ ನಿಧಾನವಾಗಿ ರಾಗಾಲಾಪ ಮಾಡಿ ತನ್ನ ವೇದನಾಗಾಯನಕ್ಕೆ ಮಂಗಳ ಹಾಡಿತು. ಗಾಡಿಯ ಮುಂದೆ ದಾರಿ ಕಾಣುವಂತೆ ಒಂದು ಲಾಟೀನು ಕಟ್ಟಿದರು. ಮುತ್ತಜ್ಜಿಯ ಜೊತೆಯಲ್ಲಿ ನಾನೂ ಸೇರಿದಂತೆ ಇನ್ನು ನಾಲ್ಕು ಜನ ತಯಾರಾಗಿ ಗಾಡಿ ಏರಿ ಕುಳಿತೆವು. ಮುತ್ತಜ್ಜಿಗೆ ಹೊದಿಯಲು ಒಂದು ದಟ್ಟಿ, ಕುದಿಸಿ ಆರಿಸಿದ ನೀರು ಇಟ್ಟುಕೊಂಡು,  ‘ಹುಂ ಹೊರಡಿ’ ಅಂತ ಹೇಳಿದರು.

ರಂಗ ಮತ್ತು ತಿಮ್ಮರಿಗೆ ಅನುಭವ ಎಷ್ಟರಮಟ್ಟಿಗಿತ್ತೆಂದರೆ, ಅವುಗಳಿಗೆ ಮಾಮೂಲು ಎತ್ತುಗಳಿಗೆ ಸೂಚಿಸುವ ಹಾಗೆ ಅರ್ರ, ಅನ್ನುವುದು ಮಪ್ಪುರಿಯುವುದು, ಏಯ್, ಹೋಯ್ ಎಂದು ಚೀರುವಂತಹ ಯಾವ ಅಗತ್ಯವೂ ಇರಲಿಲ್ಲ.  ಇನ್ನು ಚಾವುಟಿಯ ಅಥವಾ ಬಾರುಕೋಲಿನ ಅಗತ್ಯವಂತೂ ಇಲ್ಲವೇ ಇಲ್ಲ. ಅವು ಕೆಲಸದಲ್ಲಿ ತಲ್ಲೀನರಾಗಿದ್ದಾಗ ಬೆನ್ನ ಮೇಲೆ ಸಣ್ಣಗೆ ಕೈ ತಾಗಿಸಿದರೂ ಚುರುಕಾಗಿಬಿಡುತ್ತಿದ್ದವು. ಅದರಲ್ಲೂ ತಿಮ್ಮನಂತೂ ಚಂಗನೆ ಜಿಗಿಯುತ್ತಿದ್ದ. ಅಪರೂಪಕ್ಕೆಂಬಂತೆ  ಎಲ್ಲಾದರೂ ನಿಧಾನವಾದರೆ, ಒಂದು ಹುಯ್ಗುಟ್ಟರೆ ತಂತಾನೇ ಜಾಗರೂಕರಾಗಿಬಿಡುತ್ತಿದ್ದವು. ಅಪರೂಪದ ದಾರಿಗಳ ಹೊರತಾಗಿ, ಊರಿನ ಒಳಗಿನ ದಾರಿಗಳು, ನೆಂಟರ ಮನೆಗಳು, ಪೇಟೆಯ ಸಂತೆ ದಾರಿ, ಆ ಸಂತೆಯೊಳಗಿನ ಬೀದಿಗಳು, ಊರಿನ ಎಲ್ಲಾ ಹೊಲಗದ್ದೆಗಳ ದಾರಿ, ದೇವಸ್ಥಾನ ಇವೆಲ್ಲ ಹೆಸರಿನ ಸಮೇತ ರಂಗ ತಿಮ್ಮರಿಗೆ ತಿಳಿದಿತ್ತು.  ಅವುಗಳಿಗೆ ಕೊರಳ ಹುರಿ, ಮೂಗುದಾರ ಮತ್ತು ಹಗ್ಗಗಳು ನೆಪಮಾತ್ರಕ್ಕೆ. ಕುಣಿಕೆ ಬಿಗಿಯದೆಯೂ ಕೊಟ್ಟಿಗೆಯಲ್ಲಿ ಅಥವಾ ಮನೆಗೆ ಚಾಚಿಕೊಂಡಂತೆ ಇದ್ದ ಗಾಡಿ ನಿಲ್ಲಿಸುವ ಮಾಡಿನಲ್ಲಿ  ಹಾಗೆಯೇ ಬಿಟ್ಟಿದ್ದರೂ ತಾವು ಇದ್ದಲ್ಲಿಯೇ ಇರುತ್ತಿದ್ದವು.  ಸೈನ್ಯದಲ್ಲಿ ತರಬೇತಿ ಕೊಟ್ಟ ಸೈನಿಕರಷ್ಟೇ ಶಿಸ್ತಾಗಿರುತ್ತಿತ್ತು ಅವುಗಳ ಚಲನವಲನಗಳು. ಭಾರವಾದ ಹೊರೆ ತುಂಬಿದ ಗಾಡಿ ಎಳೆಯುವಾಗ ಇರಬೇಕಾದ ಬಲಾಢ್ಯತೆಯನ್ನಾಗಲೀ,  ಬಿತ್ತನೆಯಾದ ಒಂದೆರಡು ವಾರವಿರುವ ಪೈರಿನ ನಡುವೆ ಕುಂಟೆ ಹೊಡೆಯುವಾಗ ಇರಬೇಕಾಗಿದ್ದ ಸೂಕ್ಷ್ಮತೆಯಾಗಲೀ ಅವೆರಡಕ್ಕೂ ಹೇಳಿ ತಿಳಿಸಬೇಕಾದ  ಅಗತ್ಯವೇ ಇರುತ್ತಿರಲಿಲ್ಲ. ಬಹುಶಃ ತಿಮ್ಮ ಯಾರಿಗಾದರೂ ತಿವಿದು ಎಡವಟ್ಟು ಮಾಡಿಯಾನು ಎನ್ನುವ ಜಾಗರೂಕತೆಯಿಂದ ತಿಮ್ಮನಿಗೆ ಹಗ್ಗ ಮೂಗುದಾರ ಬೇಕಾಗಿತ್ತೇನೋ. ಆದರೆ ರಂಗನಿಗೆ ಖಂಡಿತಾ ಬೇಕಿರಲಿಲ್ಲ.

————-

About The Author

Leave a Reply

You cannot copy content of this page

Scroll to Top